ಶುಕ್ರವಾರ, ಅಕ್ಟೋಬರ್ 4, 2013

ಗಾಂಧೀಜಿ ಮತ್ತು ಭಗತ್ ಸಿಂಗ್


ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಭಗತ್ ಸಿಂಗ್ ಹೆಸರು ಅಜರಾಮರವಾದುದು. ಕೇವಲ ತನ್ನ ಇಪ್ಪತ್ಮೂರನೇ ವಯಸ್ಸಿಗೆ ಬ್ರಿಟೀಷರ ವಿರುದ್ದ ದಂಗೆಯೆದ್ದು ಸಾವಿಗೂ ಅಂಜದೆ, ಸಂಗಾತಿಗಳ ಜೊತೆ ನೇಣುಗಂಬವನ್ನೇರುವುದರ ಮೂಲಕ ತನ್ನ ಜೀವವನ್ನು ಬಲಿದಾನ ಮಾಡಿದ ಅಪ್ರತಿಮ ದೇಶ ಭಕ್ತ.
ಭಗತ್ ಸಿಂಗ್ ನ ಜೀವನ ಚರಿತ್ರೆ ಮತ್ತು ಆತನ ವಿಚಾರಧಾರೆಗಳು ಕನ್ನಡಿಗರಿಗೆ ಈಗಾಗಲೇ ಕನ್ನಡ ಭಾಷೆಯಲ್ಲಿ ಪ್ರಕಟವಾಗಿರುವ ಕೃತಿಗಳ ಮೂಲಕ ತಲುಪಿವೆ. ಅವುಗಳಲ್ಲಿ ನಾನೇಕೆ ನಾಸ್ತಿಕಎಂಬ ಕೃತಿ ಮುಖ್ಯವಾದುದು.
ಜೊತೆಗೆ ಭಗತ್ ಸಿಂಗ್ ಬರಹ ಮತ್ತು ಭಾಷಣಗಳುಕೃತಿಯ ವಿಶೇಷವೆಂದರೆ, ಭಗತ್ ಸಿಂಗ್ ನ ಭಾಷಣಗಳು ಮತ್ತು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಗಳು, ತನ್ನ ತಂದೆ, ಹಾಗೂ ಗೆಳೆಯರು ಮತ್ತು ಸರ್ಕಾರಕ್ಕೆ ಬರೆದ ಪತ್ರಗಳು ಇವುಗಳ ಜೊತೆ ಜೊತೆಗೆ ಬ್ರಿಟೀಷ್ ಸರ್ಕಾರ, ಗಾಂಧಿ ಮತ್ತು ಅವರ ಚಿಂತನೆಗಳು, ದೇವರು, ಧರ್ಮ, ಕುರಿತಂತೆ ಭಗತ್ ಸಿಂಗ್ ನ ಮನೋಧರ್ಮ ಈ ಕೃತಿಯಲ್ಲಿ ಅಡಕವಾಗಿದೆ.
ದೇಶ ಭಕ್ತಿಯೆನ್ನುವುದು ಅನುಮಾನ ಮತ್ತು ಅಪಹಾಸ್ಯಕ್ಕೆ ಈಡಾಗಿರುವ ಈ ದಿನಗಳಲ್ಲಿ ಭಗತ್ ಸಿಂಗ್ ನಂತಹ ದೇಶ ಭಕ್ತರ ಬದುಕನ್ನು ಯಾವ ನೆಲೆಯಲ್ಲಿ ಗ್ರಹಿಸಬೇಕು ಎಂಬ ಪ್ರಶ್ನೆಗಳು ಕೂಡ ನಮ್ಮನ್ನು ಕಾಡುತ್ತಿವೆ. ಎಂದೋ ಬರೆದಿಟ್ಟ ಇತಿಹಾಸಗಳನ್ನು ಈಗ  ಪ್ರತಿಯೊಂದನ್ನು ಪ್ರಶ್ನಿಸಿ ಒಪ್ಪಿಕೊಳ್ಳುವ ಆಧುನಿಕ ಜಗತ್ತಿಗೆ ಬೈಬಲ್  ಅಥವಾ ಭಗವದ್ಗೀತೆ ಅಲ್ಲ. ಹಾಗಾಗಿ ಚರಿತ್ರೆಯನ್ನು ಮುರಿದು ಕಟ್ಟಬೇಕಾದ ಇಂದಿನ ಸಂದರ್ಭದಲ್ಲಿ ಯಾವುದೇ  ಘಟನೆಗಳ ಬಗ್ಗೆಯಾಗಲಿ, ವ್ಯಕ್ತಿಯ ಬಗ್ಗೆಯಾಗಲಿ ರಾಗ ದ್ವೇಷಗಳಿಲ್ಲದ, ನಿರ್ಲಿಪ್ತ, ಹಾಗೂ ನಿಷ್ಕಲ್ಮಷ ಮನೋಭಾವದಿಂದ ಪರಿಶೀಲಿಸುವ ಅಗತ್ಯವಿದೆ.ಆದ್ದರಿಂದ ಇತಿಹಾಸವನ್ನು ಮುರಿದ ಕಟ್ಟುವ ಸಂದರ್ಭದಲ್ಲಿ, ಸಂಭ್ರಮಕ್ಕಾಗಲಿ, ಸಂಕಟಗಳಿಗಾಗಲಿ ಎಡೆ ಇರಬಾರದು.
ಭಗತ್ ಸಿಂಗನ ನ ಬದುಕಿನಲ್ಲಿ ಬ್ರಿಟೀಷ್ ಸರ್ಕಾರದಿಂದ ಹಿಡಿದು, ಗಾಂಧಿ ಮತ್ತು ಕಮ್ಯೂನಿಷ್ಟರು ಹಾಗೂ ದೇಶ ಭಕ್ತರ ನಡೆದುಕೊಂಡ ಕೆಲವು ನಡೆಗಳನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಲು ಬಯಸುತ್ತೇನೆ.
ಭಗತ್ ಸಿಂಗ್ ನ ವಿಚಾರಧಾರೆಗಳನ್ನು ಗಮನಿಸಿದಾಗ ಕೇವಲ ತನ್ನ ಇಪ್ಪತ್ಮೂರನೇ ವಯಸ್ಸಿಗೆ ಆತ ಇಂತಹ ಪ್ರಖರ ವೈಚಾರಿಕತೆಯ ಮನೋಭಾವವನ್ನು ಹೊಂದಲು ಸಾದ್ಯವಾಗಿತ್ತಾ? ಎಂದು ಆಶ್ಚರ್ಯವಾಗುತ್ತೆ. ಭಗತ್‍ಸಿಂಗ್‍ನ ಬಹುತೇಕ ಚಿಂತನೆಗಳು ಸೆರಮನೆಯ ವಾಸಬದುಕಿನಲ್ಲಿ ರೂಪುಗೊಂಡಿರುವುದು ವಿಶೇಷ.

ಭಗತ್ ಸಿಂಗ್‍ನಲ್ಲಿದ್ದ ಆತ್ಮ ಗೌರವ ಮತ್ತು ದೇಶ ಭಕ್ತಿ ವಿಚಾರಗಳ ಹಿಂದೆ ಆತನ ಕುಟುಂಬದ ಪ್ರಭಾವ ದಟ್ಟವಾಗಿದೆ. ಲಾಹೋರಿನ ಖಾಲ್ಸ ಹೈಸ್ಕೂಲಿಗೆ ಭಗತ್ ಸಿಂಗ್ ದಾಖಲಾಗುವ ಸಂದರ್ಭದಲ್ಲಿ  ಬ್ರಿಟೀಷ್ ಸರ್ಕಾರವನ್ನು ಓಲೈಸುತ್ತಿರುವ ಆ ಶಾಲೆಗೆ ಮೊಮ್ಮಗ ನನ್ನು ಸೇರಿಸಲು ಆತನ ತಾತ ವಿರೋಧಿಸಿದ್ದರು.  ಆರ್ಯ ಸಮಾಜವ ವತಿಯಿಂದ ನಡೆಯುತಿದ್ದ ದಯಾನಂದ ಆಂಗ್ಲೊ ನೇಟಿವ್ ಶಾಲೆಗೆ  ಭಗತ್ ನನ್ನು ಸೇರಿಸಿದ್ದರು. ನಂತರ ಭಗತ್ ಸಿಂಗ್ ಲಾಹೋರಿನ ನ್ಯಾಷನಲ್ ಕಾಲೇಜ್ ಸೇರುವ ವೇಳೆಗೆ ಅಪ್ರತಿಮ ಚರ್ಚಾಪಟುವಾಗಿ,  ದೇಶಪ್ರೇಮಿಯಾಗಿ, ಹಾಗೂ ನಾಟಕಕಾರನಾಗಿ ರೂಪುಗೊಂಡಿದ್ದ. 
ಕುತೂಹಲದ ಸಂಗತಿಯೆಂದರೇ ಆತ ಗಾಂಧೀಜಿ ವಿಚಾರಧಾರೆಗಳಿಗೆ ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ಮನಸೋತು ಬ್ರಿಟೀಷ್ ಸರ್ಕಾರದ ಪಠ್ಯ ಪುಸ್ತಕಗಳು ಮತ್ತು ವಿದೇಶಿ ವಸ್ತ್ರಗಳನ್ನು ಬಹಿರಂಗವಾಗಿ ಸುಟ್ಟುಹಾಕಿದ್ದ. ಅವರ ಅಸಹಕಾರ ಚಳುವಳಿಗೆ 1920ರ  ಕಾಲೇಜು ದಿನಗಳಲ್ಲಿ ಕೈ ಜೋಡಿಸಿದ್ದ. 1921ರಲ್ಲಿ ಈಗಿನ ಪಾಕಿಸ್ಥಾನದಲ್ಲಿರುವ ನಾಂತನಾ ಸಾಹಿಬ್ ಗುರುದ್ವಾರದಲ್ಲಿ ಪ್ರತಿಭಟಿಸುತಿದ್ದ ಸಿಖ್ ಭಕ್ತರ ಮೇಲೆ ಗುಂಡು ಹಾರಿಸಿ ಕೊಂದು ಹಾಕಿದ ಪೊಲೀಸರ ವಿರುದ್ಧ ಗಾಂಧೀಜಿ ಪ್ರತಿಭಟಿಸಿದೆ ಮೌನ ತಾಳಿದಾಗ ಸಿಡಿದೆದ್ದ ಭಗತ್‍ಸಿಂಗ್  ಗಾಂಧಿಯ ವಿಚಾರ ಧಾರೆ ಮತ್ತು ಅಹಿಂಸೆ ಕುರಿತಾದ ನಂಬಿಕೆಗಳಿಗೆ ವಿದಾಯ ಹೇಳಿದ್ದ.
ಸ್ವಾತಂತ್ರ್ಯ ಪೂರ್ವದ ಕಾಂಗ್ರೇಸ್ ಪಕ್ಷದ ಬಗ್ಗೆ ಭ್ರಮ ನಿರಶನಗೊಂಡಿದ್ದ ಭಗತ್ ಸಿಂಗ್ ತನ್ನ ಮನೋಭಾವಕ್ಕೆ ತಕ್ಕಂತೆ ಅಂತಿಮವಾಗಿ  ಚಂದ್ರಶೇಖರ್ ಅಜಾದ್ ಮತ್ತು ಇತರರು ಸ್ಥಾಪಿಸಿದ್ದ ಹಿಂದೂಸ್ಥಾನ್ ರಿಪಬ್ಲಿಕ್ ಅಸೋಸಿಯೇಷನ್ಎಂಬ ಸಂಸ್ಥೆಯ ಜೊತೆ ಗುರುತಿಸಿಕೊಂಡಿದ್ದ.  ಈ ಸಂಘಟನೆಯ ಜೊತೆಗೂಡಿ ಅವನ ಸಂಗಾತಿಗಳು ಮತ್ತು ಅವನು ನಡೆಸಿದ ಎಲ್ಲಾ ಸಾಹಸಗಳು, ಕೃತ್ಯಗಳು ಈಗಾಗಲೇ ಭಗತ್ ಸಿಂಗ್ ಭಾಷಣಗಳು ಮತ್ತು ಬರಹಗಳು ಕೃತಿಯಲ್ಲಿ ದಾಖಲಾಗಿವೆ.
ಲಾಲಾಲಜಪತ್ ರಾಯ್ ಹತ್ಯೆಗೆ ಪ್ರತಿಯಾಗಿ ಬ್ರಿಟೀಷ್ ಸರ್ಕಾರದ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಪೊಲೀಸ್ ಅಧಿಕಾರಿಯ ಹತ್ಯೆ ಮತ್ತು ಕೇಂದ್ರ ಅಸೆಂಬ್ಲಿ ಸಭಾಂಗಣದಲ್ಲಿ ಬಾಂಬ್ ಸ್ಪೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಯಾದ ನಂತರ ಭಗತ್‍ಸಿಂಗ್ ನ ನಿಜವಾದ ವೈಚಾರಿಕತೆ ಮತ್ತು ಆತನ ದೇಶಪ್ರೇಮ  ಬೆಳಕಿಗೆ ಬಂತು.
ಲಾಹೋರ್ ಸೆರೆಮನೆಯಲ್ಲಿ ಬಂಧಿತರಾದ ಭಾರತೀಯರನ್ನು ಪ್ರಾಣಿಗಳಂತೆ ಉಪಚರಿಸುತಿದ್ದ ಬ್ರಿಟೀಷರ ಧೋರಣೆಯ ವಿರುದ್ಧ  ಸಿಡಿದೆದ್ದ ಭಗತ್ ಸಿಂಗ್ 116 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿ  ಬ್ರಿಟೀಷ್ ಸರ್ಕಾರವನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದ. ಖೈದಿಗಳಿಗೆ ಉತ್ತಮ ದರ್ಜೆಯ ಆಹಾರ, ವಸತಿ ಮತ್ತು ಆರೋಗ್ಯ ಸೇವೆ ದೊರೆಯಲು  ಕಾರಣಕರ್ತನಾಗಿದ್ದ. ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭದಲ್ಲಿ ಭಗತ್ ಸಿಂಗ್ ಮಂಡಿಸಿದ ವಾದಗಳು, ನೀಡಿದ ಹೇಳಿಕೆಗಳು, ನಂತರ ವಿವಿಧ ಸಂದರ್ಭದಲ್ಲಿ ಆತ ಬರೆದ ಅನೇಕ ಪತ್ರಗಳು, ವಿವಿಧ ವಿಷಯಗಳ ಮೇಲೆ ಪತ್ರಿಕೆಗಳಿಗೆ ಸೆರೆಮನೆಯಿಂದಲೇ ಬರೆದ ಲೇಖನಗಳು ಪರೋಕ್ಷವಾಗಿ ಬ್ರಿಟೀಷ್ ಸರ್ಕಾರಕ್ಕೆ ನಡುಕವನ್ನುಂಟು ಮಾಡಿದ್ದವು.
ಈ ಕಾರಣಕ್ಕಾಗಿ ನಿಧನವಾಗಿ ನಡೆಯುತಿದ್ದ ವಿಚಾರಣೆಯನ್ನು ತ್ವರಿತಗೊಳಿಸಿದ ಸರ್ಕಾರ ಕೆಲವೇ ತಿಂಗಳ ಅವಧಿಯಲ್ಲಿ ಭಗತ್ ಸಿಂಗ್ ಮತ್ತು ಆತನ ಸಂಗಡಿಗರನ್ನು ನೇಣುಗಂಬಕ್ಕೇರಿಸಿತು.  ಅಂದಿನ ವೈಸ್ ರಾಯ್ ಲಾರ್ಡ್ ಇರ್ವಿನ್ 1930ರ ಮೇ 1ರಂದು ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು  ಘೋಷಿಸಿ, ಮೇ 5ರಿಂದ ತ್ವರಿತ ವಿಚಾರಣೆಗೆ ಆದೇಶ ನೀಡಿದ್ದನು. ಅದರಂತೆ ಲಾಹೋರ್ ನಗರದ ಪೂಂಚ್ ಹೌಸ್ ನಲ್ಲಿ ವಿಚಾರಣೆ ಆರಂಭವಾಯಿತು. ಜುಲೈ 2ರಂದು ನ್ಯಾಯಮಂಡಳಿಯಲ್ಲಿದ್ದ ನ್ಯಾಯಾಧೀಶರನ್ನು ಬದಲಿಸಿ, ಮೂವರು ಬ್ರಿಟೀಷ್ ನ್ಯಾಯಧೀಶರರು ಇರುವಂತೆ ನೋಡಿಕೊಂಡಿದ್ದ ವೈಸ್‍ರಾಯ್ ಇರ್ವಿನ್ ಬ್ರಿಟೀಷ್ ಸರ್ಕಾರಕ್ಕೆ  ಇದ್ದ ಸೇಡಿನ ಮನೋಭಾವವನ್ನು ಬಹಿರಂಗಗೊಳಿಸಿದ್ದ.
ಭಗತ್ ಸಿಂಗ್ ಮತ್ತು ಅವನ ಸಂಗಾತಿಗ ವಿಚಾರಣೆಯ ನಂತರ 1930ರ ಅಕ್ಟೋಬರ್ 31 ರಂದು ಈ ಮೂವರು ಬ್ರಿಟೀಷ್ ನ್ಯಾಯಧೀಶರನ್ನು ಒಳಗೊಂಡಿದ್ದ ಪೀಠ 300 ಪುಟಗಳ ತೀರ್ಪನ್ನು  ಪ್ರಕಟಿಸಿತು. ಬಾಂಬ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಇವರಿಗೆ ಮರಣದಂಡನೆಯನ್ನು ವಿಧಿಸಿ, ಉಳಿದ ಹನ್ನೆರೆಡು ಮಂದಿಗೆ ಕಠಿಣ ಜೀವಾವಧಿ ಶಿಕ್ಷೆಯನ್ನು  ನೀಡಲಾಗಿತ್ತು. ಶಿಕ್ಷೆ ಪ್ರಕಟವಾದ ಸಂದರ್ಭದಲ್ಲಿ ಗಲ್ಲುಶಿಕ್ಷೆಗೆ ಎದೆಗುಂದ ಭಗತ್ ಸಿಂಗ್ ನನ್ನ ಬಾಯಿಗೆ ಬಂದೂಕ ಇಟ್ಟು ಗುಂಡು ಹಾರಿಸಿದರೂ ನಾನು ಚಿಂತಿಸುವುದಿಲ್ಲ ಏಕೆಂದರೆ, ನಾನು ಸಾವಿನ ಭಯದಿಂದ ದೂರವಾಗಿದ್ದೇನೆಎಂದಿದ್ದ.
ಅಂತಿಮವಾಗಿ 1931 ಮಾರ್ಚ್ 24ರಂದು ಮ್ಯಾಜಿಸ್ಟ್ರೇಟ್ ಅನುಪಸ್ಥಿತಿಯಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ ಬ್ರಿಟೀಷ್ ಸರ್ಕಾರ ಸಂಜೆ 7.30ರ ಸಮಯದಲ್ಲಿ ಮೂವರನ್ನು ಗಲ್ಲಿಗೇರಿಸಿತು. ನಂತರ ಮಧ್ಯರಾತ್ರಿ ಸಟ್ಲೇಜ್ ನದಿಯ ದಡದ ಹುಸೇನಿವಾಲ ಎಂಬ ಸ್ಥಳದಲ್ಲಿ ಗುಪ್ತವಾಗಿ ಭಗತ್ ಸಿಂಗ್ ಮತ್ತು ಸಹಚರರಅಂತ್ಯಸಂಸ್ಕಾರವನ್ನು ನೆರೆವೇರಿಸಲಾಯಿತು.
 ಭಗತ್ ಸಿಂಗ್ ನನ್ನು ನೇಣಿಗೆ ಹಾಕುವ ಕೆಲವೇ ಗಂಟೆಗಳ ಹಿಂದೆ ಆತನಿಗೆ ಮಾಹಿತಿ ನೀಡಲಾಗಿತ್ತು. ಆ ದಿನ ಅವನು ಸೆರೆಮನೆಯಲ್ಲಿ ರಷ್ಯಾದ ಕ್ರಾಂತಿ ಕಾರಿ ನಾಯಕ ಲೆನಿನ್ರವರ ಆತ್ಮ ಚರಿತ್ರೆ ಓದುತಿದ್ದ.
ಘಟನೆಗೆ ಸಂಬಂಧಿಸಿದಂತೆ ಬ್ರಿಟೀಷ್ ಸರ್ಕಾರದ ಕ್ಷಮೆ ಕೇಳಲು ನಿರಾಕರಿಸಿದ್ದ ಭಗತ್ ಕೊನೆಯ ದಿನಗಳಲ್ಲಿ ತನ್ನ ಗೆಳೆಯ ಕಾಮ್ರೇಡ್ ಬ್ರಿಜೋನ್ ಕುಮಾರ್ ಸಿನ್ಹಾ ಇವರ ಒತ್ತಾಯ ಮಣಿದು, ತೀರ್ಪು ಕುರಿತಂತೆ ಮರುಪರಿಶೀಲನೆಗಾಗಿ ಬ್ರಿಟೀಷ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದ.
ಇಂದಿಗೂಗೂ ಭಗತ್‍ಸಿಂಗ್ ನ ಸಾವು ಮತ್ತು ಕಾಂಗ್ರೇಸ್ ಪಕ್ಷ ಹಾಗೂ ಮಹಾತ್ಮ ಗಾಂಧಿಯವರ ನಡುವಳಿಕೆ  ಕುರಿತಂತೆ ಅಸಮಾಧಾನ ಮತ್ತು ವಿವಿಧ ಬಗೆಯ ಹೇಳಿಕೆಗಳು ಇತಿಹಾಸದಲ್ಲಿ ದಾಖಲಾಗಿವೆ. ಇವೆಲ್ಲವನ್ನು  ಕೂಲಂಕುಶವಾಗಿ ಪರಿಶೀಲಿಸಿದಾಗ ಭಗತ್ ಸಿಂಗ್ ನ ಜೀವ ಉಳಿಸಲು ಗಾಂಧಿ ಮತ್ತು ಕಾಂಗ್ರೇಸ್ ಪಕ್ಷದ ಪದಾಧಿಕಾರಿಗಳು ಎಲ್ಲರೂ ಶ್ರಮಿಸಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.. 1931 ರ ಪೆಬ್ರವರಿ 14 ರಂದು ಕಾಂಗ್ರೇಸ್ ಪಕ್ಷದ  ಅಧ್ಕಕ್ಷ್ಷರಾಗಿದ್ದ ಮದನ್ ಮೋಹನ್ ಮಾಳವೀಯ ವೈಸ್ ರಾಯ್ ಇರ್ವಿನ್ ನನ್ನು ಬೇಟಿ ಮಾಡಿ,ಭಗತ್ ಸಿಂಗ್ ಗೆ  ಜೀವಧಾನ ನೀಡುವಂತೆ ಮನವಿ ಸಲ್ಲಿಸಿದ್ದರು.
ಗಲ್ಲು ಶಿಕ್ಷೆ ಜಾರಿಗೆ ತರುವ ಉದ್ದೇಶದಿಂದ ಸಿಮ್ಲಾ ಪ್ರವಾಸವನ್ನು ಮೊಟಕುಗೊಳಿಸಿ ದೆಹಲಿಗೆ ವಾಪಸ್ಸಾಗಿದ್ದ ಲಾರ್ಡ್‍ಇರ್ವಿನ್ ನನ್ನು ಮಾರ್ಚ್ 19 ರಂದು ಗಾಂಧೀಜಿ ಸಹ ಬೇಟಿಯಾಗಿ ಮನವಿ ಮಾಡಿರುವುದನ್ನು ವೈಸ್ ರಾಯ್ ತನ್ನ ದಿನಚರಿಯಲ್ಲಿ ದಾಖಲಿಸಿಕೊಂಡಿದ್ದಾನೆ. ಗಾಂಧಿಯವರ ಬೇಟಿಯಿಂದ ನನಗೆ ಇರಿಸು ಮುರುಸು ಉಂಟಾಯಿತು. ಅವರ ಬೇಡಿಕೆಗೆ ಯಾವ ಭರವಸೆಯನ್ನೂ ನೀಡಲಿಲ್ಲ. ಕಾನೂನಿನ  ಪ್ರಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದೆ ಎಂದು ಇರ್ವಿನ್ ತನ್ನ ದಿನಚರಿಯಲ್ಲಿ ದಾಖಲಿಸಿದ್ದಾನೆ. ಅದರೂ ಕೂಡ ಭಗತ್ ಸಿಂಗ್ ಮರಣಾ ನಂತರ ಗಾಂಧೀಜಿ ಮತ್ತು ಕಾಂಗ್ರೇಸ್ ಪಕ್ಷ ದೇಶ್ಯಾದಂತ ತೀವ್ರ ಟೀಕೆ ಮತ್ತು ಪ್ರತಿಭಟನೆಗಳನ್ನು ಎದುರಿಸಬೇಕಾಯಿತು. ಮಾರ್ಚ್ ಕೊನೆಯ ವಾರ ಕರಾಚಿ   ನಗರದಲ್ಲಿ ನಡೆದ ಕಾಂಗ್ರೇಸ್ ಸಮಾವೇಶದಲ್ಲಿ ಗಾಂಧೀಜಿ ಕಪ್ಪು ಬಾವುಟದ ಪ್ರದರ್ಶನ ಎದುರಿಸಬೇಕಾಯಿತು. ಓರ್ವ ಯುವಕ ಗಾಂಧಿ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದ.
1931ರ ಮಾರ್ಚ್ ತಿಂಗಳ 29ಯಂಗ್ ಇಂಡಿಯ ಪತ್ರಿಕೆಯಲ್ಲಿ ಭಗತ್‍ಸಿಂಗ್ ಮತ್ತು ಸಂಗಾತಿಗಳ ಮರಣ ದಂಡನೆಯನ್ನು ಪ್ರಸ್ತಾಪಿಸಿರುವ ಗಾಂಧೀಜಿ, ಭಗತ್ ಅಸಹಾಯಕತೆಯಿಂದಾಗಿ ಅನಿವಾರ್ಯವಾಗಿ ಹಿಂಸೆಯ ಹಾದಿಯನ್ನು ತುಳಿಯಬೇಕಾಯಿತೇ ಹೊರತು ಆತ ಎಂದೂ ಹಿಂಸೆಯ ಪ್ರತಿಪಾದಕನಾಗಿರಲಿಲ್ಲ ಎಂದಿದ್ದಾರೆ. ಆತನ ಧೈರ್ಯವನ್ನು, ದೇಶ ಭಕ್ತಿಯನ್ನು ಶ್ಲಾಘನೆ ಮಾಡಿರುವ ಅವರು ಯಾರೂ ಆತನ ಹಾಗೆ ಹಿಂಸೆಯ ಹಾದಿ ತುಳಿಯಬಾರದು ಎಂದಿದ್ದಾರೆ, ಅನಕ್ಷರಸ್ತರು, ಅಂಗವಿಕಲರು ಅಪಾರ ಸಂಖ್ಯೆಯಲ್ಲಿ ಇರುವ ಈ ದೇಶದ ಸ್ವಾತಂತ್ರ್ಯದ ಹೋರಾಟಕ್ಕೆ ಹಿಂಸೆಯಿಂದ ಯಾವುದೇ ಪ್ರತಿಫಲ ಸಿಗಲಾರದು ಎಂದಿದ್ದಾರೆ. ಗಾಂಧೀಜಿಯವರ ಈ ನಿಷ್ಟುರ ಅಭಿಪ್ರಾಯದಮಾತುಗಳಿಗೆ ನಮ್ಮ ಸಹಮತ ಇದೆಯಾದರೂ ಅವರು ಬ್ರಿಟೀಷರ ಮೇಲೆ ಒತ್ತಡ ಹೇರುವುದರ ಮೂಲಕ  ಮೂವರ ಪ್ರಾಣ ಉಳಿಸಬಹುದಿತ್ತು ಎಂಬ ಸಣ್ಣ ಅಸಮಾಧಾನದ ಭಾವವೊಂದು ಮನಸ್ಸಿನಲ್ಲಿ ಹಾಗೇಯೇ ಉಳಿದು ಬಿಡುತ್ತದೆ.
ಭಗತ್ ಸಿಂಗ್‍ನ ಈ ದುರಂತದ ಬದುಕು ಮತ್ತು ಬಲಿದಾನ ಅಂದಿನ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ  ಹೊಸ ಆಯಾಮವನ್ನು ತಂದುಕೊಟ್ಟಿತು. ಹೋರಾಟಗಾರರಿಗೆ ಸ್ಪೂರ್ತಿಯಾಯಿತು. ದುರಂತವೆಂದರ, ತನ್ನ ಪ್ರಖರ ವಿಚಾರಗಳಿಂದ ಪ್ರಸಿದ್ದಿ ಪಡೆದ ಹುತಾತ್ಮ ಭಗತ್ ಸಿಂಗ್ ವರ್ತಮಾನದ  ಈ ದಿನಗಳಲ್ಲಿ ಹಲವು ಸಂಘಪರಿವಾರದ ಸಂಘಟನೆಗಳ ಖಾಸಾಗಿ ಸ್ವತ್ತಾಗಿದ್ದಾನೆ.
ನಾನೇಕೆ ನಾಸ್ತಿಕ ಎಂಬ ಕೃತಿಯ ಮೂಲಕ ದೇವರು, ಧರ್ಮ ಇವುಗಳ ಕುರಿತು ಮಾತನಾಡಿರುವ ವೈಚಾರಿಕ ಪ್ರತಿಭೆ ಭಗತ್ ಸಿಂಗ್ ಈಗ ಹಿಂದೂ ದೇಶ ಭಕ್ತರು ಎಂಬ ಆರೋಪ ಹೊತ್ತಿರುವ ಕೋಮುವಾದಿ ಸಂಘಟನೆಗಳಿಗೆ ಮಾದರಿಯಾಗಿದ್ದಾನೆ. ಅದೇ ರೀತಿ ಖ್ಯಾತ ಇತಿಹಾಸಕಾರ ಕೆ.ಎನ್. ಪಣಿಕ್ಕರ್ ಹೇಳುವಂತೆ ಭಗತ್ ಸಿಂಗ್ ಭಾರತದ ಮೊಟ್ಟ ಮೊದಲ ಮಾರ್ಕ್ಸ್ ವಾದಿ ಎಂಬ ಮಾತನ್ನು  ಒಪ್ಪುವದಾದರೂ, ಆತ ಎಂದೂ ತನ್ನ ಜೀವಿತದಲ್ಲಿ ಕಮ್ಯೂನಿಷ್ಟ್ ಪಕ್ಷದ ಕಾರ್ಯಕರ್ತನಾಗಿರಲಿಲ್ಲ. ಆದರ ಎಡ ಪಂಥೀಯ ವಿಚಾರಧಾರೆ ಅದರಲ್ಲೂ ರೈತರು, ಕೂಲಿಕಾರ್ಮಿಕರು ಇವರ ಬಗ್ಗೆ ಕಮ್ಯೂನಿಷ್ಟರಂತೆ ಕಾಳಜಿ ಹೊಂದಿದ್ದ. ಜೊತೆಗೆ  ರಷ್ಯಾ ಕ್ರಾಂತಿಯಿಂದ ಸ್ಪೂತಿಗೊಂಡಿದ್ದ ಇದೇ ಕಾರಣಕ್ಕಾಗಿ ಇಂದು ಹಿಂಸೆ ಮತ್ತು ನೆತ್ತರಿನ ನದಿಯಲ್ಲಿ ಮಿಂದೇಳುತ್ತಿರುವ ಮಾವೋವಾದಿ ನಕ್ಸಲರಿಗೂ ಸಹ ಭಗತ್ ಸಿಂಗ್ ಸ್ಪೂರ್ತಿಯಾಗಿದ್ದಾನೆ.
ಈ ದೇಶದ ದುರಂತವೆಂದರೇ, ಮನುಕುಲಕ್ಕೆ ಬೆಳಕಾಗ ಬಲ್ಲ ಚಿಂತನೆಗಳನ್ನ ನೀಡಿದ ಎಲ್ಲಾ ಮಹಾತ್ಮರನ್ನ, ಮತ್ತು ದಾರ್ಶನೀಕರನ್ನ ನಾವು  ಮತ್ತೆ ಮತ್ತೇ ಅವರವರ ಕುಲ, ಜಾತಿಯ ನೆಲೆಗಳಿಗೆ   ಕೊಂಡೊಯ್ದು ಬಂಧಿಸಿ ಇಡುತ್ತಿದ್ದೇವೆ. ಇಂತಹ  ನಾಯಕರನ್ನು ಜಾತಿ ಮತ್ತು ಧರ್ಮದ ಹಾಗೂ ಸ್ವಾರ್ಥದ ಸಂಕೋಲೆಗಳಿಂದ ಬಿಡುಗಡೆಗೊಳಿಸಿ,  ಅವರ ವಿಚಾರಗಳನ್ನು ಈ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ನಾವು ಯೋಜನೆಗಳನ್ನು ಅನುಷ್ಟಾನಗೊಳಿಸಬೇಕಿದೆ. ಭಗತ್ ಸಿಂಗ್ ನ ಬದುಕು ಹೋರಾಟ ಒಂದು ರೀತಿಯಲ್ಲಿ ಮಾದರಿಯಾದರೇ, ಮತ್ತೊಂದು ರೀತಿಯಲ್ಲಿ ಅವನು ಹಿಡಿದ ಹಿಂಸೆಯ ಹಾದಿ ಎಚ್ಚರಿಕೆಯ ಸಂದೇಶವಾಗಬಲ್ಲದು. ಈ ಕಾರಣಕ್ಕಾಗಿಯೇ ಇದನ್ನು ನಾನು ಚರಿತ್ರೆಯನ್ನುಮುರಿದು ಕಟ್ಟುವ ಸಂಭ್ರಮ ಮತ್ತು ಸಂಕಟ ಎಂದು ಕರೆಯಲು ಇಚ್ಚಿಸುತ್ತೀನಿ.
ಭಗತ್ ಸಿಂಗ್ ನ ಎಲ್ಲಾ ವಿಚಾರಗಳು ಮತ್ತು ಆ ದಿನಗಳ ಗಾಂಧೀಜಿಯ ನಡುವಳಿಕೆಗಳು ವಿಶೇಷವಾಗಿ, ಪೂನಾ ಒಪ್ಪಂಧ, ಕಾಂಗ್ರೇಸ್ ಪಕ್ಷದ ಅದ್ಯಕ್ಷ ಸ್ಥಾನಕ್ಕೆಸುಭಾಷ್ ಚಂದ್ರಬೋಸ್ ರನ್ನು ಒಪ್ಪಿಕೊಳ್ಲಲು ನಿರಾಕರಿಸಿದ್ದು, ಹಾಗೂ ಭಗತ್ ಸಿಂಗ್ ಜೀವ ಉಳಿಸುವಲ್ಲಿ ತೀವ್ರವಾಗಿ ಪ್ರತಿಭಟಿಸುವ ಸಾದ್ಯತೆಗಳು ಇದ್ದರೂ ಕೂಡ ನಿಸ್ತೇಜರಾದ ಸಂಗತಿ ಹೀಗೆ ಇವೆಲ್ಲವೂ   ದಿನಗಳಿಗೆ ಪ್ರಸ್ತುತ ಎಂದು ಅನಿಸದಿದ್ದರೂ ಕೂಡ , ಗಾಂಧಿ ಮತ್ತು ಭಗತ್ ಸಿಂಗ್ ನನ್ನು ಅರಿಯಲು,, ಮತ್ತು ಇಂದಿನ ಯುವ ಜನಾಂಗ ತಮ್ಮ  ಹೋರಾಟದ ಹಾದಿ ಕುರಿತಂತೆ ಸ್ಪಷ್ಟತೆಯನ್ನು  ಕಂಡು ಕೊಳ್ಳಲು ಸಹಾಯವಾಗುತ್ತವೆ.

.

2 ಕಾಮೆಂಟ್‌ಗಳು: