ಶುಕ್ರವಾರ, ನವೆಂಬರ್ 15, 2013

ಕರ್ನಾಟಕ ಗಡಿ ಪ್ರದೇಶಗಳ ಅಭಿವೃದ್ಧಿಯ ಸಾಧ್ಯತೆಗಳು-ಒಂದು


ಕರ್ನಾಟಕ ಭಾರತದ ಮುಂದುವರೆದ ರಾಜ್ಯಗಳಲ್ಲಿ ಒಂದಾಗಿದ್ದು ಅತಿ ದೊಡ್ಡ ರಾಜ್ಯಗಳ ಪೈಕಿ ಎಂಟನೇ ಸ್ಥಾನ ಪಡೆದಿದೆ. ಕೃಷಿ ಇಲ್ಲಿನ ಜನರ ಮೂಲ ಕಸುಬಾಗಿದ್ದು, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ಶಿಕ್ಷಣ ಆರೋಗ್ಯ, ವ್ಯಾಪಾರ, ಆಹಾರ ಸಂಸ್ಕರಣೆ ಮುಂತಾದ ವಲಯಗಳಲ್ಲಿ ಗಮನಾರ್ಹ ಅಭಿವೃದ್ಧಿ ಸಾಧಿಸಿ ಜಗತ್ತಿನ ಗಮನ ಸೆಳೆದಿದೆ.
2001 ಜನಗಣತಿಯ ಪ್ರಕಾರ ರಾಜ್ಯದ ಜನಸಂಖ್ಯೆ 5 ಕೋಟಿ 28 ಲಕ್ಷ 50 ಸಾವಿರದ 662 ಇದ್ದದ್ದು ಈಗ 6 ಕೋಟಿ ಗಡಿಯನ್ನು ದಾಟಿದೆ. ಸಾಕ್ಷರತೆಯಲ್ಲಿ ಶೇ.66.6ರಷ್ಟು ಪ್ರಗತಿ ಸಾಧಿಸಿರುವ ಕರ್ನಾಟಕ ರಾಜ್ಯ ಭೌಗೋಳಿಕವಾಗಿ 74 ಸಾವಿರದ 120 .ಕೀ.ಮೀ. ವಿಸ್ತರವಾಗಿದೆ. ಹೊಸದಾಗಿ ಅಸ್ತಿತ್ವಕ್ಕೆ ಬಂದ ಯಾದಗೀರ್ ಜಿಲ್ಲೆಯೂ ಸೇರಿದಂತೆ 30 ಜಿಲ್ಲೆಗಳನ್ನು ಹೊಂದಿರುವ ಕರ್ನಾಟಕ ಪಶ್ಚಿಮ ಮತ್ತು ವಾಯುವ್ಯದಲ್ಲಿ ಮಹಾರಾಷ್ಟ್ರ, ಪೂರ್ವ ಮತ್ತು ಈಶಾನ್ಯ ಭಾಗದಲ್ಲಿ ಆಂದ್ರ ಮತ್ತು ತಮಿಳುನಾಡು, ಉತ್ತರದಲ್ಲಿ ಮಹಾರಾಷ್ಟ್ರ, ದಕ್ಷಿಣದ ನೈರುತ್ಯದಲ್ಲಿ ಕೇರಳ ಹಾಗೂ ಆಗ್ನೇಯದಲ್ಲಿ ತಮಿಳುನಾಡು ಭಾಗಗಳನ್ನು ಹೊಂದಿದೆ.

ಕರ್ನಾಟಕದ ಸುಮಾರು 8 ಜಿಲ್ಲೆಗಳು ಸುತ್ತ ಮುತ್ತಲಿನ ಗಡಿ ಭಾಗಕ್ಕೆ ಹೊಂದಿಕೊಂಡಿದ್ದು ಅನೇಕ ತಾಲೂಕು ಕೇಂದ್ರಗಳು ಹಾಗೂ ಗ್ರಾಮಗಳ ಜನತೆ ಗಡಿ ರಾಜ್ಯಗಳ ಜೊತೆ ತಮ್ಮ ಭೂಮಿ, ಶಿಕ್ಷಣ, ಕೃಷಿ, ವ್ಯಾಪಾರವ್ಯವಹಾರ ಕುರಿತಂತೆ ಸಂಬಂಧ ಹೊಂದಿದ್ದಾರೆ. ಅಲ್ಲದೇ ನೆರೆ ರಾಜ್ಯಗಳ ಅನೇಕ ಪಟ್ಟಣಗಳಲ್ಲಿ ಬಹುಸಂಖ್ಯಾತ ಕನ್ನಡಿಗರಿರು ವುದೂ ವಿಶೇಷ. ಮಹಾರಾಷ್ಟ್ರದಲ್ಲಿ ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ಕೇರಳದಲ್ಲಿ ಕಾಸಗೋಡು, ಆಂದ್ರದ ಹಿಂದೂಪುರ, ಅಧೋನಿ, ತಮಿಳುನಾಡಿನ ಹೊಸೂರು, ಡೆಂಕಣಿಕೋಟೆ, ಗೋಪಿನಾಥಂ ಮುಂತಾದ ಊರುಗಳಲ್ಲಿ ಕನ್ನಡಿಗರಿದ್ದು, ಕನ್ನಡ ಭಾಷೆ ಮತ್ತು ಸಂಸ್ಕøತಿ ಇಂದಿಗೂ ಜೀವಂತವಾಗಿವೆ.

ರಾಜ್ಯದ ಸಾರ್ವಭೌಮ ಹಾಗೂ ಮಾತೃಭಾಷೆಯಾದ ಕನ್ನಡ ಶೇ.64.75ರಷ್ಟು ಜನತೆಯ ಭಾಷೆಯಾಗಿದ್ದು,(ಮಂಡ್ಯ ಜಿಲ್ಲೆಯಲ್ಲಿ ಶೇ.97ರಷ್ಟು ಮಂದಿಯ ಮಾತೃಭಾಷೆ ಕನ್ನಡವಾಗಿರುವುದು ವಿಶೇಷ). ನಂತರ ಶೇ.9.7ರಷ್ಟು ಮಂದಿ ಉರ್ದು ಭಾಷೆಯನ್ನು, ಶೇ.8.34ರಷ್ಟು ಮಂದಿ ತೆಲುಗು ಭಾಷೆಯನ್ನು, ಶೇ.5.46ರಷ್ಟು ಮಂದಿ ತಮಿಳು ಭಾಷೆಯನ್ನು ಮಾತೃಭಾಷೆಯಾಗಿ ಬಳಸುತ್ತಿದ್ದಾರೆ. ಶೇ.3.93ರಷ್ಟು ಮಂದಿ ಮರಾಠಿ, ಶೇ.3.38ರಷ್ಟು ಮಂದಿಗೆ ತುಳುಭಾಷೆ ಕರ್ನಾಟಕದಲ್ಲಿ ಮಾತೃಭಾಷೆಯಾಗಿದೆ.

ಕರ್ನಾಟಕ ರಾಜ್ಯ ಮೇಲುನೋಟಕ್ಕೆ ಮುಂದುವರೆದ ರಾಜ್ಯ ಎಂಬಂತೆ ಕಂಡುಬಂದರೂ ಆಂತರಿಕವಾಗಿ ಹಲವಾರು ವೈಪರೀತ್ಯ ಗುಣಗಳಿಂದ ಬಳಲುತ್ತಿದೆ. ಭೌಗೋಳಿಕ ಹವಾಮಾನ, ಜನತೆಯ ನಂಬಿಕೆ ಮತ್ತು ಸಂಸ್ಕøತಿ ಹೀಗೆ ಹಲವು ಕಾರಣಗಳಿದ್ದರೂ ಇಲ್ಲಿನ ಬಹುತೇಕ ಪ್ರದೇಶಗಳು ಪ್ರಾದೇಶಿಕ ಅಸಮಾನತೆಯಿಂದ ಬಳಲುತ್ತಿರುವುದು ನಿತ್ಯ ವಾಸ್ತವ ಸಂಗತಿ. ಸ್ವತಂತ್ರ ಪೂರ್ವದಿಂದಲೂ ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಭಾಗಗಳು ಅನೇಕ ದೊರೆಗಳ, ನವಾಬರ, ಜಹಗೀರುದಾರರ ಆದಿಪತ್ಯಕ್ಕೆ ಒಳಪಟ್ಟು ಅಭಿವೃದ್ಧಿಯಿಂದ ವಂಚಿತವಾಗಿ ಶೋಷಣೆಗೆ ಒಳಪಟ್ಟಿದ್ದು ಈಗ ಇತಿಹಾಸ. ಇಲ್ಲಿನ ಜನತೆ ಅನಕ್ಷರತೆ, ಮುಗ್ಧತೆ, ಅಜ್ಷಾನ, ಬಡತನ ಮತ್ತು ಶೋಷಣೆಗಳಿಗೆ ಒಳಪಟ್ಟಿದ್ದು ಒಂದು ಕಾರಣವಾದರೆ, ಪ್ರದೇಶಗಳಲ್ಲಿ ಪದೇ ಪದೇ ಬಂದೆರಗಿದ ಬರಗಾಲ, ಕ್ಷಾಮ, ಸಾಂಕ್ರಾಮಿಕ ರೋಗ ರುಜಿನಗಳು ಮತ್ತೊಂದು ರೀತಿಯಲ್ಲಿ ಕಾರಣವಾದವು.
ಸ್ವತಂತ್ರ ಪೂರ್ವದಿಂದಲೂ ದಕ್ಷಿಣ ಕರ್ನಾಟಕದ ಜನತೆ ಮೈಸೂರು ದೊರೆಗಳ ಆದಿಪತ್ಯಕ್ಕೆ ಒಳಪಟ್ಟು ಅನೇಕ ಅಭಿವೃದ್ಧಿಯ ಫಲಗಳನ್ನು ಅನುಭವಿಸುತ್ತಾ ಬಂದಿದ್ದಾರೆ. ಅದರಲ್ಲೂ ವಿಶೇಷವಾಗಿ ಪ್ರಗತಿ ಪರ ಆಲೋಚನೆಗಳ ನಿಧಿಯಂತಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ ಮುಂದಾಲೋಚನೆಯ ಫಲವಾಗಿ ಉತ್ತರ ಕರ್ನಾಟಕದ ಜನತೆಯ ಬದುಕಿಗೆ ಹೋಲಿಸಿದರೆ ದಕ್ಷಿಣ ಕರ್ನಾಟಕದ ಜನತೆ ನೆಮ್ಮದಿಯ ಬದುಕನ್ನು ಕಂಡುಕೊಂಡಿರುವುದು ಸತ್ಯ ಸಂಗತಿ. ಸ್ವತಂತ್ರ ಪೂರ್ವ ಹಾಗೂ ನಂತರದ ದಿನಗಳಲ್ಲೂ ದಕ್ಷಿಣ ಕರ್ನಾಟಕ ಭಾಗಕ್ಕೆ ಸಿಕ್ಕ ರೈಲು ಹಾಗೂ ರಸ್ತೆ ಸಾರಿಗೆ ಸುವ್ಯವಸ್ಥೆ, ನೀರಾವರಿ, ಶಿಕ್ಷಣ, ಆರೋಗ್ಯ ಇವೆಲ್ಲ ಅಂಶಗಳು ಕಾರಣವಾಗಿವೆ. ಆದರೆ ಇವುಗಳಿಂದ ಉತ್ತರ ಕರ್ನಾಟಕದ ಜನತೆ ವಂಚಿತರಾದದ್ದು ಕಟು ವಾಸ್ತವಿಕ ಸತ್ಯಗಳಲ್ಲಿ ಒಂದು.
        
                       

ಅಸಮಾನತೆ 1956ರಲ್ಲಿ ಏಕೀಕರಣಗೊಂಡು ಉದ್ಭವವಾದ ಕರ್ನಾಟಕ ರಾಜ್ಯ (ಮೈಸೂರು) ದಲ್ಲಿ ನಂತರವೂ ಮುಂದುವರೆದಿದ್ದು ದುರಂತವೇ ಸರಿ. ಆಡಳಿತವೆಲ್ಲವೂ ಉತ್ತರ ಕರ್ನಟಕದಿಂದ 500 ಕಿ.ಮೀ. ದೂರದ ರಾಜಧಾನಿ ದಕ್ಷಿಣದ ಬೆಂಗಳೂರಿನಲ್ಲಿ ಕೇಂದ್ರೀಕೃತಗೊಂಡದ್ದು ಅಸಮಾನತೆಯ ಮೂಲ ಕಾರಣವಾದರೆ, ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶಗಳನ್ನು ಪ್ರತಿನಿಧಿಸುತ್ತಾ ಬಂದ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯೂ ಸಹ ಮತ್ತೊಂದು ಪ್ರಭಲ ಕಾರಣವಾಗಿದೆ.
90 ದಶಕದಲ್ಲಿ ಕೊಪ್ಪಳ ಜಿಲ್ಲೆ ರಚನೆಯಾಗುವ ಮುನ್ನ ತಾಲ್ಲೂಕುಕೇಂದ್ರವಾಗಿ ರಾಯಚೂರು ಜಿಲ್ಲೆಯ ಭಾಗವಾಗಿತ್ತು. ಇಲ್ಲಿನ ರೈತನೊಬ್ಬ ತನ್ನ ಭೂಮಿಯ ದಾಖಲೆಗೆ ಅಥವಾ ನ್ಯಾಯಾಲಯದ ವ್ಯವಹಾರಕ್ಕೆ 175 ಕಿ.ಮೀ. ದೂರದ ಜಿಲ್ಲಾ ಕೇಂದ್ರವಾದ ರಾಯಚೂರಿಗೆ ಹೋಗಬೇಕಾದ ಪರಿಸ್ಥಿತಿ ಇತ್ತೆಂದರೆ, ಇಂತಹ ಸ್ಥಿತಿಯಲ್ಲಿ ಯಾವ ಅಭಿವೃದ್ಧಿ ತಾನೆ ಸಾಧ್ಯವಾಗಬಲ್ಲದು? ಸಧ್ಯದ ಸ್ಥಿತಿಯಲ್ಲಿ ಅನೇಕ ಜಿಲ್ಲೆಗಳು ಉದ್ಭವವಾಗಿ ಆಡಳಿತ ವಿಕೇಂದ್ರಿತಗೊಂಡು ಅಭಿವೃದ್ಧಿ ಕೆಲಸಗಳು ಸಾಗುತ್ತಿದ್ದರೂ ಕೂಡ ಶಿಕ್ಷಣ, ಆರೋಗ್ಯ, ವಸತಿ, ರಸ್ತೆ, ನೀರಾವರಿ, ಕೈಗಾರಿಕೆ, ಉದ್ಯೋಗ ಸೃಷ್ಟಿ ಇವುಗಳಲ್ಲಿ ತೃಪ್ತಿಕರವಾದ ವಾತಾವರಣ ಕಂಡುಬಂದಿಲ್ಲ. ಅಲ್ಲದೇ ಕರ್ನಾಟಕ ಸರಕಾರ ನೇಮಿಸಿದ್ದ ಆರ್ಥಿಕ ತಜ್ಞ ಡಾ.ಎಂ.ನಂಜುಂಡಪ್ಪ ನೇತೃತ್ವದÀ ಸಮಿತಿ ಕರ್ನಾಟಕದಲ್ಲಿ ತಾಂಡವವಾಡುತ್ತಿರುವ ಅಸಮತೋಲನ ನಿವಾರಣೆಗೆ ನೀಡಿದ ವರದಿಯನ್ನು ರಾಜ್ಯ ಸರಕಾರ ಇನ್ನೂ ಪೂರ್ಣ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತಂದಿಲ್ಲ.

ಡಾ.ನಂಜುಂಡಪ್ಪನವರ ವರದಿಯಲ್ಲಿ ರಾಜ್ಯದ 178 ತಾಲೂಕು ಕೇಂದ್ರಗಳ ವಸ್ತು ಸ್ಥಿತಿಯ ಬಗ್ಗೆ ಚರ್ಚಿಸಲಾಗಿದ್ದು 75 ಕ್ಕೂ ಹೆಚ್ಚು ತಾಲೂಕುಗಳನ್ನು ಅತಿ ಹಿಂದುಳಿದ ತಾಲೂಕುಗಳೆಂದು ಗುರುತಿಸಲಾಗಿದೆ. ಇವುಗಳೆಲ್ಲವೂ ರಾಜ್ಯದ ಗಡಿ ಜಿಲ್ಲೆಗಳಾದ ಬಿಜಾಪುರ, ಬೀದರ್, ಗುಲ್ಬರ್ಗ, ರಾಯಚೂರು ಜಿಲ್ಲೆಗಳಲ್ಲಿರುವುದು ವಿಶೇಷ. ಡಾ.ನಂಜುಂಡಪ್ಪನವರ ವರದಿ ಔಚಿತ್ಯ ಪೂರ್ಣವಾದ ಮಹಿತಿಗಳನ್ನು ಒಳಗೊಂಡಿದ್ದು, ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಸರಕಾರ ಕೈಗೊಳ್ಳ ಬೇಕಾದ ಅನೇಕ ಮಾರ್ಗದರ್ಶಿ ಸೂತ್ರಗಳಿವೆ. ಇವುಗಳನ್ನು ಸರಕಾರ ಕಟ್ಟು ನಿಟ್ಟಾಗಿ ಜಾರಿಗೆ ತರುವಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಹೊಣೆಗಾರಿಕೆ ಕೂಡ ಹೆಚ್ಚಿನದಾಗಿದೆ. ಏಕೆಂದರೆ ಪ್ರಾಧಿಕಾರದ ವ್ಯಾಪ್ತಿಗೆ ಬರುವ ರಾಜ್ಯದ 18 ಜಿಲ್ಲೆಗಳ 52 ತಾಲೂಕುಗಳಲ್ಲಿ ಡಾ.ನಂಜುಂಡಪ್ಪ ಗುರುತಿಸಿರುವ 42 ತಾಲೂಕುಗಳು ಸೇರಿರುವುದು ಗಮನಾರ್ಹ.
ಡಾ.ನಂಜುಂಡಪ್ಪನವರು ತಮ್ಮ ವರದಿಯಲ್ಲಿ ಪ್ರಾದೇಶಿಕ ಅಸಮತೋಲನೆಯ ನಿವಾರಣೆಗಾಗಿ ಸರಕಾರ ಹಿಂದುಳಿದ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಔದ್ಯೋಗಿಕ ತರಬೇತಿ ಸಂಸ್ಥೆಗಳ ಸ್ಥಾಪನೆ, ಆರೋಗ್ಯ, ವಸತಿ, ಕುಡಿಯುವ ನೀರು, ರಸ್ತೆ, ಒಳಚರಂಡಿ, ಕೃಷಿ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆಗಳ ವಿಸ್ತರಣೆ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇವುಗಳಿಗೆ ಆದ್ಯತೆ ನೀಡಬೇಕೆಂದು ಪ್ರಸ್ತಾಪಿಸಿದ್ದಾರೆ. ಅಸಮತೋಲನೆ ನಿವಾರಣೆಗಾಗಿ 31 ಸಾವಿರ ಕೋಟಿ ಬಂಡವಾಳ ತೊಡಗಿಸಬೇಕಾಗಿದ್ದು ಇದರಲ್ಲಿ ಒಂದೇ ಬಾರಿಗೆ 15 ಸಾವಿರ ಕೋಟಿ ವಿನಿಯೋಗಿಸಿ, ಉಳಿದ 16 ಸಾವಿರ ಕೋಟಿ ರೂಪಾಯಿಗಳನ್ನು ಪ್ರತಿ ವರ್ಷ 2 ಸಾವಿರ ಕೋಟಿಯಂತೆ ಪ್ರತಿ ಬಜೆಟ್ನಲ್ಲಿ ಮೀಸಲಾಗಿರಿಸ ಬೇಕೆಂದು ಸೂಚಿಸಲಾಗಿತ್ತು. ಇದೀಗ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನ ಮಾನ ದೊರೆತಿದ್ದು, ಅಭಿವೃದ್ಧಿಯ ಬಗ್ಗೆ ಕನಸುಗಳು ಚಿಗುರೊಡೆದಿವೆ.
ಪ್ರಸ್ತುತ ರಾಜ್ಯ ಸರಕಾರ ಬಗ್ಗೆ ಗಮನ ಹರಿಸಿರುವುದು ಸಮಾಧಾನಕರ ಸಂಗತಿಯಾದರೂ, ಡಾ.ನಂಜುಂಡಪ್ಪ ಸಮಿತಿ ಸೂಚಿಸಿದಷ್ಟು ರೀತಿಯಲ್ಲಿ ಬಂಡವಾಳ ವಿನಿಯೋಗ ಸಾಧ್ಯವಾಗಿಲ್ಲ. ಈಗಾಗಲೇ ಹಲವಾರು ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರೂ ಬೆಳೆಯುತ್ತಿರುವ ಜನಸಂಖ್ಯೆ, ಶಿಕ್ಷಣ ಮತ್ತು ಆರೋಗ್ಯ ವಲಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇವೆಲ್ಲವೂ ಅಸಮತೋಲನೆ ನಿವಾರಣೆಗೆ ಅಡ್ಡಿಯಾಗಿರುವುದು ಗಮನಿಸ ಬೇಕಾದ ಸಂಗತಿ. ಇವುಗಳ ಜೊತೆಗೆ ಅನಿರೀಕ್ಷಿತವಾಗಿ ಬಂದೆರಗುತ್ತಿರುವ ನೈಸರ್ಗಿಕ ವಿಕೋಪ ಹಾಗೂ ಆಳುವ ಸರಕಾರಗಳನ್ನು ಕಾಡುವ ಅಸ್ತಿರತೆ ಪರೋಕ್ಷವಾಗಿ ಅಭಿವೃದ್ಧಿಗೆ ಅಡ್ಡಿಯಾಗಿರುವುದನ್ನು ನಾವು ಮನಗಾಣಬೇಕಾಗಿದೆ.



ಇಪ್ಪತ್ತೊಂದನೇ ಶತಮಾನದ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ವಿಪರ್ಯಾಸವೆಂದರೆ ಪಕ್ಷ ಬೇಧ ಮರೆತು ನಮ್ಮನ್ನಾಳುತ್ತಿರುವ ಎಲ್ಲಾ ಸರಕಾರಗಳು ಅಭಿವೃದ್ಧಿ ಕುರಿತಂತೆ ತಪ್ಪಾಗಿ ವ್ಯಾಖ್ಯಾನಿಸುತ್ತಿರುವುದು. ಪ್ರಗತಿ ಸಾಧಿಸಿದ ಒಂದೆರಡು ವಲಯಗಳಿಂದ ಗಳಿಸಿದ ವರಮಾನವನ್ನು ಇಡೀ ಸಮಗ್ರ ಅಭಿವೃದ್ಧಿ ಬೆಳವಣಿಗೆಯ ದರಕ್ಕೆ ತಳಕು ಹಾಕಿ ಸಾಮಾನ್ಯ ಜನರನ್ನು ದಾರಿ ತಪ್ಪಿಸುವ ಕೆಲಸದಲ್ಲಿ ಸರಕಾರಗಳು ನಿರತವಾಗಿವೆ. ಕಾರಣಕ್ಕಾಗಿಯೇ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ಅಮಾತ್ರ್ಯಸೇನ್, “ಬಡತನವೆಂದರೆ ವ್ಯಕ್ತಿಯೊಬ್ಬನ ಭೌತಿಕ ಸ್ಥಿತಿ ಅಲ್ಲ. ಇದು ಬಡತನಕ್ಕೆ ಮಾನದಂಡವಾಗಲಾರದು. ನಾಗರಿಕನೊಬ್ಬನ ವರಮಾನ ಹೆಚ್ಚಿದ್ದರೂ ಕೂಡ ಆತ ಶಿಕ್ಷಣ, ವಸತಿ, ಆರೋಗ್ಯ ಮುಂತಾದ ಸೇವೆಗಳಿಂದ ವಂಚಿತನಾಗಿದ್ದರೆ, ಬಡತನದ ರೇಖೆಯಿಂದ ಮೇಲೆದ್ದು ಬಂದ ಬಡವಎಂದು ವ್ಯಾಖ್ಯಾನಿಸಿದ್ದಾರೆ

ವ್ಯಕ್ತಿಯೊಬ್ಬ ತನ್ನ ಧಾರಣ ಸಾಮಥ್ರ್ಯವನ್ನು ಕೇವಲ ವರಮಾನದಿಂದ ಅಥವಾ ಸರಕಾರ ಜನಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಿದ ಬಂಡವಾಳದಿಂದ ದಕ್ಕಿಸಿಕೊಳ್ಳುವುದಿಲ್ಲ. ಸಮಾಜದ ಕೆಳಸ್ತರದ ಮನುಷ್ಯ ಅಥವಾ ಮಹಿಳೆ ಸಮಾಜದಲ್ಲಿ ಲಭ್ಯವಾಗುವ ಎಲ್ಲಾ ಸೌಲಭ್ಯಗಳನ್ನು ಎಷ್ಟರ ಮಟ್ಟಿಗೆ ಸದುಪಯೋಗಪಡಿಸಿಕೊಂಡು ದಕ್ಕಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಅವರ ಧಾರಣಾ ಸಾಮಥ್ರ್ಯ ನಿರ್ಧಾರವಾಗುತ್ತದೆ. ಜಾತಿ, ಧರ್ಮ ಅಥವಾ ಪ್ರಾದೇಶಿಕ ಭಿನ್ನತೆ ಕಾರಣದಿಂದಾಗಿ ಅನೇಕ ಸಮುದಾಯಗಳು ಇಂತಹ ಅವಕಾಶದಿಂದ ವಂಚಿತವಾಗಿರಬಹುದು. ಇವುಗಳನ್ನು ಸೂಕ್ಷ್ಮವಾಗಿ ಗಮನಿಸುವ ಹಾಗೂ ಕುಂದು ಕೊರತೆಗಳನ್ನು ಅಧ್ಯಯನ ಮಾಡಿ ನಿವಾರಿಸುವ ನೈತಿಕ ಹೊಣೆ ಸರಕಾರಗಳ ಮೇಲಿರುತ್ತದೆ. ಅಮಾಥ್ರ್ಯಸೇನ್ ಕುರಿತಂತೆಜನತೆ ಅನೇಕ ಬಗೆಯ ಸ್ವಾತಂತ್ರ್ಯಗಳಿಂದ ಮತ್ತು ಅವಕಾಶಗಳಿಂದ ವಂಚಿತರಾಗಿ ತಾವು ಬದುಕುವ ಕತ್ತಲೆಯ ಕೂಪದಿಂದ ಪಡೆಯುವ ಬಿಡುಗಡೆಯಡೆಯೇ ಅಭಿವೃದ್ಧಿಎಂದು ನಿರ್ವಚಿಸಿದ್ದಾರೆ. ವಾಸ್ತವವಾಗಿ ರಾಜ್ಯದ ಅಭಿವೃದ್ಧಿ ಬೆಳವಣಿಗೆಯ ದರ ಶೋಚನೀಯವಲ್ಲ. ಮಾಹಿತಿ ತಂತ್ರಜ್ಞಾನದ ಬೆಳವಣಿಗೆ ರಾಜ್ಯದ ಸಮಗ್ರ ಅಭಿವೃದ್ಧಿಯ ಸಂಕೇತವೇನಲ್ಲ. ರಾಜ್ಯದ ಒಟ್ಟು ಬೆಳವಣಿಗೆಯಲ್ಲಿ ಮಾಹಿತಿ ತಂತ್ರಜ್ಷಾನದ ಕೊಡುಗೆ ಎರಡಂಕಿ ದಾಟುವುದಿಲ್ಲ. ಇದನ್ನು ಸರಕಾರ ಹಾಗೂ ಪ್ರತಿನಿಧಿಗಳು ಮನಗಾಣಬೇಕು.
                                     (ಮುಂದುವರಿಯುವುದು)

ಮಂಗಳವಾರ, ನವೆಂಬರ್ 12, 2013

ಕನ್ನಡದ ಕಷ್ಟದ ದಿನಗಳು














ಪ್ರತಿ ನವಂಬರ್ ತಿಂಗಳು ಬಂತೆಂದರೆ, ಎಲ್ಲರಲ್ಲೂ ಕನ್ನಡದ ಪ್ರಜ್ಙೆ ಆವರಿಸಿಕೊಳ್ಳತ್ತದೆ. ಇಡೀ ತಿಂಗಳು ಕನ್ನಡದ ಅಸ್ಮಿತೆ ಕುರಿತ ಚಿಂತನೆಗಳು ಆರಂಭಗೊಳ್ಳುತ್ತವೆ. ಇಂತಹ ಉತ್ಸಾಹ ಮತ್ತು ಸಂಭ್ರಮಗಳ ನಡುವೆ ಕನ್ನಡ ಭಾಷೆ ಮತ್ತು ಪ್ರಜ್ಙೆ ನಮ್ಮ ಅರಿವಿಗೆ ಬಾರದಂತೆ ಸೆವೆಯುತ್ತಿದೆ. ಅದರ ಬೇರುಗಳು ಒಳಗೊಳಗೆ ಒಣಗುತ್ತಿವೆ. ಇಂತಹ ವಾಸ್ತವ ಸಂಗತಿಗಳನ್ನು ನಾವು ಮರೆ ಮಾಚುತ್ತಾ, ಆವೇಶ ಮತ್ತು ಘೋಷಣೆಗಳ ಮೂಲಕ ಕನ್ನಡತನವನ್ನು ಕಾಪಾಡಿಕೊಳ್ಳಲು ಯತ್ನಿಸುತ್ತಿದ್ದೆವೆ.
ನನ್ನ ಆತ್ಮೀಯ ಗೆಳೆಯರಾದ ಹಾಗೂ ಕಥೆಗಾರರೂ, ಪ್ರಬಂಧಕಾರರಾದ ವೆಂಕಟೇಶ ಮಾಚಕನೂರು ಎಂಬುವರು ಹಿರಿಯ ಕೆ.ಎ.ಎಸ್ ಅಧಿಕಾರಿಯಾಗಿ, ಹಲವು ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ  ನಂತರ, ನಾಲ್ಕು ವರ್ಷಗಳ ಕಾಲ ಉತ್ತರ ಕರ್ನಾಟಕದ ಶಿಕ್ಷಣ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸಿ ಕಳೆದ ಮೇ ತಿಂಗಳಿನಲ್ಲಿ ನಿವೃತ್ತರಾದರು. ಓರ್ವ ಕನ್ನಡ ಪ್ರೇಮಿಯಾಗಿ, ನಿಷ್ಟಾವಂತ ಅಧಿಕಾರಿಯಾಗಿ ಅವರು ಉತ್ತರ ಕರ್ನಾಟಕದ ಹನ್ನೊಂದು ಜಿಲ್ಲೆಗಳನ್ನು ತಿರುಗುತ್ತಾ, ಸರ್ಕಾರಿ ಶಾಲೆಗಳಲ್ಲಿ ಕನ್ನಡವನ್ನು ಜೀವಂತವಾಗಿಡಲು ಶ್ರಮಿಸಿದ ರೀತಿ ನಿಜಕ್ಕೂ ಅಚ್ಚರಿಯಾಗುತ್ತದೆ. ಪ್ರತಿವಾರ ತಾಲ್ಲೂಕು ಮಟ್ಟದಲ್ಲಿ ಶಿಕ್ಷಕರ ಸಭೆ ಏರ್ಪಡಿಸಿ, ಧಾರವಾಡದಿಂದ ಲೇಖಕರನ್ನು ಕರೆದೊಯ್ದು ಅವರಿಂದ ಕನ್ನಡ ಸಾಹಿತ್ಯ ಚರಿತ್ರೆ ಕುರಿತು ಉಪನ್ಯಾಸ ಏರ್ಪಡಿಸಿದರು. ನಂತರ ಪ್ರತಿ ಬೇಸಿಗೆ ರಜೆಯಲ್ಲಿ ಪ್ರತಿ ಶಿಕ್ಷಕ ಕನಿಷ್ಟ ನಾಲ್ಕು ಕನ್ನಡದ ಪುಸ್ತಕಗಳನ್ನು ಓದಿಕೊಂಡು ಬಂದು ಅವುಗಳ ಕುರಿತು ಸಭೆಯಲ್ಲಿ ಮಾತನಾಡುವಂತೆ ನಿಯಮ ಜಾರಿಗೆ ತಂದರು. ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ಮರಾಠಿ ಶಾಲೆಗಳ ಎದುರು ಕನ್ನಡ ಸರ್ಕಾರಿ ಶಾಲೆಗಳು ಸೊರಗುತ್ತಿರುವುದಕ್ಕೆ, ಮತ್ತು ಕನ್ನಡದ ಮಕ್ಕಳು ಮೂಲ ಸೌಲಭ್ಯಗಳ ಕೊರತೆ( ಶಿಕ್ಷಕರು, ಕಟ್ಟಡ ಇತ್ಯಾದಿ) ಯಿಂದ ಮರಾಠಿ ಶಾಲೆಗೆ ದಾಖಲಾಗುತ್ತಿರುವುದನ್ನು ಕಂಡು ನೊಂದುಕೊಂಡರು.
ಕಳೆದ ಮೂರು ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ಪ್ರಾಥಮಿಕ ಶಿಕ್ಷಣ ಯಾವ ಭಾಷೆಯಲ್ಲಿ ಇರಬೇಕು ಎಂಬುದರ ಬಗ್ಗೆ ಕಾರಣ ಕೇಳಿ ಪ್ರತಿ ರಾಜ್ಯ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದಾಗ, ಸರ್ಕಾರ ನಿದ್ರೆಯಲ್ಲಿರುವಾಗ, ತಾವೇ ಸ್ವತಃ ಓಡಾಡಿ ಮಾನಸಿಕ ತಜ್ಙರು ಮತ್ತು ಮಕ್ಕಳ ತಜ್ಙರ ಸಲಹೆಗಳ ಆಧಾರದ ಮೇಲೆ ಮಾತೃಭಾಷೆಯಲ್ಲಿ ಶಿಕ್ಷಣ ಇರಬೇಕು ಎಂಬ ಪತ್ರವನ್ನು ಸಿದ್ಧ ಪಡಿಸಿ, ಅದನ್ನು ನಾಡಿನ ಎಲ್ಲಾ ಹಿರಿಯ ಚೇತನಗಳಿಗೆ ಕಳುಹಿಸಿ ಅವರ ಅಭಿಪ್ರಾಯ ಪಡೆಯುವಲ್ಲಿ ಯಶಸ್ವಿಯಾದರು. ನಂತರ ಕಳೆದ ತಿಂಗಳು ಚೆನ್ನೈ ನಗರದಲ್ಲಿ ನಡೆದ ಕೇಂದ್ರ ಸಾಹಿತ್ಯ ಅಕಾಡೆಮಿಯ ಸಭೆಯಲ್ಲಿ ಡಾ. ಕಲ್ಬುರ್ಗಿ ಮತ್ತು ಡಾ. ಕಂಬಾರ ಅವರ ಮೂಲಕ ಮಂಡಿಸಿ, ಭಾರತೀಯ ಇತರೆ ಭಾಷೆಯ ಲೇಖಕರಿಂದ ಗೊತ್ತುವಳಿ ಪಾಸು ಮಾಡುವಲ್ಲಿ ಯಶಸ್ವಿಯಾದರು.
ಒಬ್ಬ ನಿವೃತ್ತ ಅಧಿಕಾರಿ ಕನ್ನಡದ ಏಳಿಗೆ ಮತ್ತು ಅದರ ಭವಿಷ್ಯದ ಬಗ್ಗೆ ಏಕಾಂಗಿಯಾಗಿ ಹೋರಾಡುತ್ತಿರುವ ವೈಖರಿ ಹಾಗೂ  ಕಳೆದ ನಾಲ್ಕೈದು ಧಶಕದಿಂದ ಕನ್ನಡವನ್ನು ಗುತ್ತಿಗೆ ತೆಗೆದುಕೊಂಡು ಗಾಳಿಯಲ್ಲಿ ಕತ್ತಿ ಝಳಪಿಸುತ್ತಿರುವವರನ್ನು ಒಟ್ಟಿಗೆ ಇಟ್ಟು ತುಲನೆ ಮಾಡಿದಾಗ ಕನ್ನಡದ ಪರ ಹೋರಾಟ ಎಂಬುದು  ಹಲವರ ಪಾಲಿಗೆ ವ್ಯಸನ, ವೃತ್ತಿ ಅಥವಾ ದಂಧೆಯಾಗಿದೆ ಅನಿಸುತ್ತದೆ. ಕುವೆಂಪು ಅವರ ಕನ್ನಡ ನಾಡಗೀತೆಯಲ್ಲಿ ರಾಜ್ಯದ ಎಲ್ಲಾ ಅರಸ ಮನೆತನಗಳ ಹೆಸರಿಲ್ಲ ಆದ್ದರಿಂದ ಅದನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿ ನಿರಂತರ ಹೇಳಿಕೆ ನೀಡಿದರೆ ಕನ್ನಡ ಉದ್ಧಾರವಾಗುತ್ತದೆ ಪಾಟೀಲಪುಟ್ಟಪ್ಪ ನಂಬಿದ್ದಾರೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಕತ್ತೆ, ಕೋಣ, ಕುರಿ, ಮೇಕೆ ಇವುಗಳನ್ನು ಕರೆ ತಂದು ತಮಟೆ ಬಾರಿಸಿ, ತನ್ನ ತೋರು ಬೆರಳನ್ನು ಸುದ್ಧಿ ಛಾನಲ್ ಗಳ ಎದುರು  ಮಂತ್ರ ಹಾಕುವವನಂತೆ ಒದರಿ ಬಿಟ್ಟರೆ ಕನ್ನಡಕ್ಕೆ ಅಪಾಯವಿಲ್ಲ ಎಂದು ವಾಟಾಳ್ ನಾಗರಾಜ್ ನಂಬಿದ್ದಾರೆ. ಇನ್ನೂ ಹೆಗಲ ಮೇಲೆ ಕನ್ನಡದ ಒಂದು ಪಟ್ಟಿಯೊಂದನ್ನು ಹಾಕಿಕೊಂಡು ಪ್ರತಿಭಟನೆ ನಡೆಸಿದರೆ, ಕನ್ನಡ ಭಾಷೆ ಸಂಸ್ಕೃತಿ ನಮ್ಮ ಸುಪರ್ಧಿಯಲ್ಲಿ ಸುರಕ್ಷಿತವಾಗಿದೆ ಎಂದು ನಂಬಿಕೊಂಡಿರುವ ಅನೇಕ ಕನ್ನಡ ಪರ ಸಂಘಟನೆಗಳಿವೆ. ವಾಸ್ತವವಾಗಿ ಇದು ಬೇರು ಸತ್ತು ಹೋದ ಗಿಡದ ಕಾಂಡಕ್ಕೆ ಹಾರೈಕೆ ಮಾಡಿದಂತೆ. ಇದರಾಚೆಗೆ ನಾವು ಯೋಚಿಸಬೇಕಾದ ಸುಡುವ ಕೆಂಡದಂತಹ
ಕಟು ಸತ್ಯಗಳಿವೆ.
ಬೆಂಗಳೂರಿನ ನವಕರ್ನಾಟಕ ಪ್ರಕಾಶನದ ಶ್ರೀ ಉಡುಪ, ಮತ್ತು ಶಿವಮೊಗ್ಗದ ಅಹರ್ನಿಶಿ ಪ್ರಕಾಶನದ ಶ್ರೀಮತಿ ಅಕ್ಷತಾ ಹುಂಚದಕಟ್ಟೆ ಇವರಿಬ್ಬರೂ ಕನ್ನಡ ಪುಸ್ತಕಗಳ ಮಾರಾಟ ಕುರಿತಂತೆ ವ್ಯಕ್ತ ಪಡಿಸಿರುವ ಅನುಭವಗಳು ಕನ್ನಡದ ಭವಿಷ್ಯಕ್ಕೆ ಕನ್ನಡಿ ಹಿಡಿದಂತಿವೆ. ಕನ್ನಡ ಪುಸ್ತಕ ಕೊಂಡು ಓದುವವರು  ವಯಸ್ಸು ಸರಾ ಸರಿ 40 ಆಸು ಪಾಸಿನದು. ಎಂಬ ಇವರ ಅನಿಸಿಕೆಯನ್ನು ಇಟ್ಟುಕೊಂಡು ಯೋಚಿಸಿದಾಗ, ಇದು  ಕಳೆದ  ಎರಡು ಮೂರು ದಶಕಗಳಿಂದ ಹಳ್ಳಿಗಳಿಂದ ಹಿಡಿದು ನಗರದವರೆಗೆ ನಾಯಿಕೊಡೆಯಂತೆ ಹುಟ್ಟಿಕೊಂಡ ಇಂಗ್ಲೀಷ್ ಮಾಧ್ಯಮ ಶಾಲೆಗಳ ಪ್ರಭಾವ ಎಂದು ಖಚಿತವಾಗಿ ಹೇಳಬಹುದು.

ಇತ್ತೀಚೆಗೆ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಹುಟ್ಟು ಹಾಕುವುದನ್ನು ಉದ್ಯೋಗ ಮಾಡಿಕೊಂಡಿರುವ ಹಲವರು, ಕನ್ನಡಿಗರ ಎದೆಯಲ್ಲಿ ಬಣ್ಣ ಬಣ್ಣದ ಕನಸಿನ ಬೀಜಗಳನ್ನು ಬಿತ್ತಿ, ಹಣಸುಲಿಗೆ ಮಾಡುತ್ತಿದ್ದಾರೆ. ಕನ್ನಡದ ಮಾಧ್ಯಮದಲ್ಲಿ, ಅಥವಾ ಸರ್ಕಾರಿ ಶಾಲೆಯಲ್ಲಿ ನಮ್ಮ ಮಕ್ಕಳನ್ನು ಓದಿಸುವುದು ಅಪಮಾನಕರ ಎಂಬ ಭಾವನೆ ಈಗಾಗಲೆ ಎಲ್ಲೆಡೆ ಹರಡಿದೆ. ನಮ್ಮ ಅರಿವಿಗೆ ಭಾರದಂತೆ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡ ಭಾಷೆಗೆ ಇದ್ದ ಮಾನ್ಯತೆಗಳು ಪಲ್ಲಟಗೊಳ್ಳತ್ತಿವೆ.. ಹತ್ತನೇ ತರಗತಿಯಲ್ಲಿ ಕೇವಲ ಐವತ್ತು  ಅಂಕಗಳಿಗೆ ಸೀಮಿತವಾಗಿದ್ದ ಹಿಂದಿ ಭಾಷೆಯ ಅಂಕಗಳನ್ನು ನೂರಕ್ಕೆ ಏರಿಸಲಾಗಿದೆ. ಹಲವು ವಿಶ್ವ ವಿದ್ಯಾಲಯಗಳಲ್ಲಿ ಬಿ.ಕಾಂ. ಪದವಿಗೆ ಇದ್ದ ಕನ್ನಡ ಭಾಷೆಯ ಪತ್ರಿಕೆಯನ್ನು ತೆಗೆದು ಹಾಕಲಾಗಿದೆ. ಇಂತಹ ಸಂಗತಿಗಳು ಹೊರಜಗತ್ತಿನ ಅರಿವಿಗೆ ಬಾರದಂತೆ ನಡೆಯುತ್ತಿರುವ ಕ್ರಿಯೆಗಳು.
ಕನ್ನಡ ಪ್ರಭ ದಿನಪತ್ರಿಕೆ ಕಳೆದ ನವಂಬರ್ ಒಂದರಿಂದ ಕರ್ನಾಟಕ ರಾಜ್ಯದ ಜಿಲ್ಲೆಗಳ ಕನ್ನಡ ಶಾಲೆಗಳ ಸ್ಥಿತಿ ಗತಿ ಕುರಿತು ಪ್ರತಿ ನಿತ್ಯ ಸಮೀಕ್ಷಾ ವರದಿಯನ್ನು ಪ್ರಕಟಿಸುತ್ತಿದೆ. ಹಲವು ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಕನ್ನಡ ಶಾಲೆಗಳು ಮುಚ್ಚಿರುವುದು ಧೃಡಪಟ್ಟಿದೆ. ಇನ್ನಿತರೆ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದಾಗಿ ಪ್ರಾಥಮಿಕ ಶಾಲೆಗಳನ್ನು ಪಕ್ಕದೂರಿನ ಶಾಲೆಗಳ ಜೊತೆ ವಿಲೀನ ಗೊಳಿಸಲಾಗಿದೆ. ಉಳ್ಳವರಿಗಷ್ಟೇ ಶಿಕ್ಷಣ ಎಂಬಂತಿರುವ ಈ ದಿನಗಳಲ್ಲಿ ಬಡವರ ಮಕ್ಕಳ ಶಿಕ್ಷಣದ ಭವಿಷ್ಯವೇನು? ಇಂಗ್ಲೀಷ್ ಮಾಧ್ಯಮದ ಮೋಹದಲ್ಲಿ ನಮ್ಮ ಮಕ್ಕಳನ್ನು ಕನ್ನಡದ ಸಂಸ್ಕೃತಿಯಿಂದ ಹೊರದಬ್ಬುತ್ತಿರುವ ನಮ್ಮ ಫೋಷಕರಿಗೆ ಬುದ್ಧಿ ಹೇಳುವರು ಯಾರು?

ಹತ್ತನೇಯ ತರಗತಿಯವರೆಗೆ ವಿದ್ಯಾರ್ಥಿಯು ಯಾವುದೇ ಮಾಧ್ಯಮದಲ್ಲಿ ಓದಿದರೂ ಕೂಡ ಅವನಿಗೆ/ಳಿಗೆ ಕನಿಷ್ಟ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಓದಲೇಬೇಕೆಂಬ ನಿಯಾಮವನ್ನು ಸರ್ಕಾರ ಕಡ್ಡಾಯಗೊಳಿಸಬೇಕು.  ಆದರೆ, ಈ ನಿಯಮವನ್ನು ಜಾರಿಗೆ ತರುವ ಇಚ್ಛಾಶಕ್ತಿ ಯಾರಿಗೂ ಇದ್ದಂತಿಲ್ಲ. ನ್ಯಾಯಾಲಯದ ಮುಂದಿರುವ ಯಾವುದೇ ಕನ್ನಡದ ನೆಲ-ಜಲ- ಭಾಷೆಯ ಸಮಸ್ಯೆಗಳನ್ನು ಕರ್ನಾಟಕದ ಇತಿಹಾಸದಲ್ಲಿ ನಮ್ಮನ್ನಾಳಿದ ಯಾವ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿದ ಉದಾಹರಣೆಗಳೂ ಸಹ ಇಲ್ಲ. ಬಹುತೇಕ ರಾಜ್ಯದ ಪ್ರಭಾವಿ ಶಿಕ್ಷಣ ಸಂಸ್ಥೆಗಳು ಎಲ್ಲಾ ಪಕ್ಷಗಳ ರಾಜಕಾರಣಿಗಳ ಹಿಡಿತಲ್ಲಿರುವುದರಿಂದ ನಾವು ಇವರಿಂದ ಕನ್ನಡದ ಭವಿಷ್ಯದ ಬಗ್ಗೆ  ಏನನ್ನೂ ತಾನೆ ನಿರೀಕ್ಷಿಸಲು ಸಾಧ್ಯ? ಕನ್ನಡದ ಭಾಷೆ ಮತ್ತು ಸಂಸ್ಕೃತಿಯ ಅಳಿವು-ಉಳಿವಿನ ಪ್ರಶ್ನೆ ನಾವು ಊಹಿಸಿರುವುದಕ್ಕಿಂತ ಗಂಭೀರವಾಗಿವೆ ಎಂಬುದನ್ನು ನಾವು ಮನಗಾಣಬೇಕಾದ ಕಷ್ಟದ ದಿನಗಳಿವು.

ಶುಕ್ರವಾರ, ನವೆಂಬರ್ 8, 2013

ಮೂಡನಂಬಿಕೆಗಳ ಮಸೂದೆ ಮತ್ತು ಅಸಹನೀಯ ಕರ್ನಾಟಕ


ಕಳೆದ ಎರಡು ಮೂರು ದಿನಗಳಿಂದ ಪತ್ರಿಕೆ ಮತ್ತು ದೃಶ್ಯಮಾಧ್ಯಮಗಲಲ್ಲಿ  ಮೂಡನಂಬಿಕೆ ಆಚರಣೆಗಳ ಕುರಿತು ಕರ್ನಾಟಕ ಸರ್ಕಾರ ತರಲು ಉದ್ದೇಶಿಸುವ ಮಸೂದೆ ಕುರಿತು, ಚರ್ಚೆಯಾಗುತ್ತಿದೆ.ತಜ್ಙರ ತಂಡ ನೀಡಿರುವ ಶಿಫಾರಸ್ಸಿನ ವರದಿ ಕುರಿತು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ಬಗೆಯನ್ನು ಗಮನಿಸಿದರೆ, ನಾವು ಎತ್ತ ಸಾಗುತ್ತಿದ್ದೇವೆ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಬಿಕ್ಕಟ್ಟಿನ ದಿನಗಳು ಇವು ಎಂದು ನನಗೆ ಗೋಚರಿಸತೊಡಗಿದೆ.
ಕರಡು ಮಸೂದೆ ಮತ್ತು ಶಿಫಾರಸ್ಸುಗಳ ನಡುವಿನ ವೆತ್ಯಾಸ ತಿಳಿಯದೆ ಈಗಾಗಲೇ ಜಾರಿಗೆ ಬಂದ ಕಠಿಣ ಮಸೂದೆಯೇನೋ ಎಂಬಂತೆ ಕೆಲವರು ಪತ್ರಿಕೆಗಳಲ್ಲಿ ಅವ್ಯಾಚ್ಯ ಶಬ್ಧಗಳ ಕತ್ತಿ ಜಳಪಿಸುತ್ತಿದ್ದಾರೆ.
ಈ ದೇಶದಲ್ಲಿ ಧರ್ಮದ ಹೆಸರಿನಲ್ಲಿ, ಆಚರಣೆ, ನಂಬಿಕೆ, ಶ್ರದ್ಧೆ ಇವುಗಳನ್ನು ಬಂಡವಾಳ ಮಾಡಿಕೊಂಡು, ಜನರ ಭಾವನೆ ಕೆರಳಿಸುವುದು ಅತಿ ಸುಲಭ ಎಂಬುದು ಈಗಾಗಲೇ ಇತಿಹಾಸದಲ್ಲಿ ದಾಖಲಾಗಿದೆ. ರಾಮನ ಹೆಸರಿನಲ್ಲಿ, ಇಟ್ಟಿಗೆ ಹೆಸರಿನಲ್ಲಿ ಮಣ್ಣು ಹೊತ್ತವರ ಚರಿತ್ರೆ, ಮತ್ತು ಅವರಿಗೆ ಕೊಂಬು, ಕಹಳೆ, ತುತ್ತೂರಿಯಾಗಿ ಕಾರ್ಯ ನಿರ್ವಹಿಸಿದ ಪತ್ರಿಕೆ ಹಾಗೂ ಪತ್ರಕರ್ತರನ್ನು ಗುರುತಿಸಲಾರದಷ್ಟು ಸೂಕ್ಷ್ಮತೆಯನ್ನು ಕರ್ನಾಟಕದ ಜನಸಾಮಾನ್ಯ ಇನ್ನೂ ಕಳೆದುಕೊಂಡಿಲ್ಲ.
ಒಂದು ಕಾನೂನು ಮಸೂದೆಯಾಗಿ ರಾತ್ರೋ ರಾತ್ರಿ ಜನ್ಮ ತಾಳುವುದಿಲ್ಲ. ಅದರಂತೆ ಸರ್ಕಾರ ನೇಮಿಸಿದ ತಜ್ಙರ ತಂಡ ನೀಡಿದ ಶಿಫಾರಸ್ಸು ಸರ್ಕಾರಕ್ಕೆ ಅಂತಿಮವೇನಲ್ಲ. ಅದು ಶಾಸಕಾಂಗ ಸಭೆಯಲ್ಲಿ ಚರ್ಚೆಯಾಗಿ, ಸಾರ್ವಜನಿಕ ಚರ್ಚೆಯಾಗಿ, ಮಾನವ ಹಕ್ಕು ಮತ್ತು ನಾಗರೀಕ ಹಕ್ಕುಗಳಿಗೆ ಹಾಗೂ ಜನರ ಧಾರ್ಮಿಕ ಹಕ್ಕು ಮತ್ತು ಆಚರಣೆಗಳಿಗೆ ಧಕ್ಕೆಯಾಗದಂತೆ ಸಂವಿಧಾನ ತಜ್ಙರ ಸಲಹೆ ಸೂಚನೆಗಳೊಂದಿಗೆ ಮಸೂದೆಯ ರೂಪದಲ್ಲಿ  ಹಲವು ಹಂತಗಳನ್ನು ದಾಟಿ ಅಸ್ತಿತ್ವಕ್ಕೆ ಬರುತ್ತದೆ.
ಅಸಹನೆಯ ಕರ್ನಾಟಕದ ಪ್ರತೀಕವೆಂಬಂತೆ, ಶಿಫಾರಸ್ಸಿನ ಅಂಶಗಳನ್ನು ಕೂಲಂಕುಶವಾಗಿ ಗಮನಿಸಿದೆ, ತಜ್ಙರ ತಂಡವನ್ನು ಗುರಿಯಾಗಿಸಿಕೊಂಡು ಕೆಲವು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವುದನ್ನು ಗಮನಿಸಿದರೆ, ಇವರಿಗೆ ನಾಗರೀಕ ಸಮಾಜವೊಂದು ನಿರ್ಮಾಣವಾಗುವುದು ಬೇಕಿಲ್ಲ ಎಂಬುದು ಅವರು ಬಳಸಿರುವ ಭಾಷೆಯಲ್ಲಿ ಖಾತರಿಯಾಗುತ್ತದೆ. ಪತ್ರಕರ್ತ ಅಥವಾ ಮಾಧ್ಯಮದ ಕೆಲಸವೆಂದರೆ,ತಮ್ಮ ಮುಂದಿರುವ  ವಸ್ತು ಸ್ಥಿತಿಯನ್ನು ಜನತೆಯ ಮುಂದಿಟ್ಟು ಜನಾಭಿಪ್ರಾಯ ರೂಪಿಸುವುದೇ ಹೊರತು , ತಮ್ಮ ವ್ಯಯಕ್ತಿಕ ಅಭಿಪ್ರಾಯಗಳನ್ನು ಸಮಾಜದ ಮೇಲೆ ಹೇರಿ, ಸಮುದಾಯದ ದಿಕ್ಕು ತಪ್ಪಿಸುವುದಲ್ಲ.


ಒಬ್ಬ ಲೇಖಕ ಅಥವಾ ಒಬ್ಬ ಪತ್ರಕರ್ತನಿಗೆ ಪ್ರವಾದಿಯಂತೆ ಮಾತನಾಡುವುದು ಅಥವಾ ಉಪದೇಶ ನೀಡುವುದು ಅತಿ ಸುಲಭ. ಆದರೆ, ನಾವು ಆಡುವ ಮಾತಿಗೂ, ಬರೆಯುವ ಪ್ರತಿ ಅಕ್ಷರಕ್ಕೂ ಬದುಕಿನ  ನಡುವಳಿಕೆಗಳ ಬದ್ದತೆ ಅಥವಾ ನೈತಿಕತೆ ಇಲ್ಲದಿದ್ದರೆ, ಅದು ಆತ್ಮವಂಚನೆಯ ಕ್ರಿಯೆಯಾಗುತ್ತದೆ. ಸಮಾಜವನ್ನು ಮಾತಿನಿಂದ ಮತ್ತು ಬರೆವಣಿಗೆಯಿಂದ ನಂಬಿಸುವಷ್ಟು ಸುಲಭವಾಗಿ ನಮ್ಮೊಳಗಿನ ಆತ್ಮಸಾಕ್ಷಿಯನ್ನು ನಂಬಿಸಲು ಸಾದ್ಯವಿಲ್ಲ.
ಇಂದು ನಮ್ಮ ಕಣ್ಣೆದುರು ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಭವಿಷ್ಯ, ವಾಸ್ತು ಕುರಿತ ಜಾಹಿರಾತು, ಹನುಮಾನ್ ತಾಯುತ, ಬಣ್ಣದ ಹರಳಿನ ಉಂಗುರ ಇವುಗಳನ್ನು ಅನ್ನ ತಿನ್ನುವ ಯಾವ ಮನುಷ್ಯನೂ ಸಮರ್ಥಿಸಲಾರ. ಇಂತಹ ಸಂಧಿಗ್ಧ ಸ್ಥಿತಿಯಲ್ಲಿ ನಂಬಿಕೆ ಮತ್ತು ಆಚರಣೆಯ ನೆಪದಲ್ಲಿ ಮಡೆಸ್ನಾನ, ಅಡ್ಡಪಲ್ಲಕಿಯಂತಹ ಅಮಾನವೀಯ ನಡುವಳಿಕೆಗಳನ್ನು ಹೇಗೆ ತಾನೆ ಸಮರ್ಥಿಸಲು ಸಾಧ್ಯ?

ಕೇವಲ ಬೆರಳಿಕೆಯಷ್ಟು ಜನರ ತಂಡ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ದೂರುತ್ತಿರುವ ಮಂದಿ, ಈ ಶಿಫಾರಸ್ಸಿನ ಟಿಪ್ಪಣಿ ಸಿದ್ಧವಾಗುವ ಮುನ್ನ  ತಜ್ಙರ ಸಮಿತಿ ಎಷ್ಟು ಜನರ ವಿಶೇಷವಾಗಿ, ವಿವಿಧ ರಂಗದ ತಜ್ಙರ ಸಲಹೆ ಕೇಳಿದೆ ಎಂಬುದನ್ನು ಮನಗಂಡಿದ್ದಾರಾ? ಅಥವಾ ಸಮಿತಿ ಯಾರ ಬಳಿ ಸಲಹೆ ಕೇಳಿದ್ದಾರೆ ಎಂಬುದನ್ನು ಧೃಡಪಡಿಸಿಕೊಂಡಿದ್ದಾರಾ? ಅದೂ ಇಲ್ಲ.
ಜನರನ್ನು ಉದ್ರೇಕಿಸುವ ಹಾಗೆ ನಾವು ಮನೆಯಲ್ಲಿ ಪೂಜೆ ಮಾಡುವಂತಿಲ್ಲ, ಮನೆ ಮುಂದೆ ರಂಗೊಲಿ ಬಿಡುವಂತಿಲ್ಲ ಎಂಬಂತಹ  ಟಿಪ್ಪಣಿಯಲ್ಲಿ ಇಲ್ಲದ ಅಂಶಗಳನ್ನು ಎತ್ತಿಕೊಂಡು ಜನರ ದಿಕ್ಕು ತಪ್ಪಿಸುವುದನ್ನು ಮಾದ್ಯಮದ ವೃತ್ತಿ  ಎಂದು ಯಾವೊಬ್ಬ ನಾಗರೀಕ ಕರೆಯುವುದಿಲ್ಲ.

ಮಾಧ್ಯಮಗಳ ಭಾಷೆ ಬದಲಾಗದಿದ್ದರೆ, ಪತ್ರಕರ್ತರಿಗೂ ಮತ್ತು ರಾಜಕಾರಣಿಗಳ ಭಾಷೆಗಳ ನಡುವೆ  ಇರುವ ಗಡಿರೇಖೆ ಅಳಿಸಿಹೋಗುತ್ತದೆ. ಈ ಎಚ್ಚರದ ಪ್ರಜ್ಙೆ ಪತ್ರಕರ್ತನಿಗೆ ಕಾಡದಿದ್ದರೆ, ಅವನನ್ನು ಸಮಾಜ ಪತ್ರಕರ್ತ ಎಂದು ಗುರುತಿಸುವುದಿಲ್ಲ, ಬದಲಾಗಿ. ಒಂದು ರಾಜಕೀಯ ಪಕ್ಷದ ಅಥವಾ ಒಂದು ಧಾರ್ಮಿಕ ಸಮುದಾಯದ ಭಟ್ಟಂಗಿ ಎಂದು ಗುರುತಿಸುತ್ತದೆ. ಓರ್ವ ಪತ್ರಕರ್ತನಾಗಿ, ಲೇಖಕನಾಗಿ ನನ್ನ ಪಾಲಿಗೆ ಇಂತಹ ಅಪವಾದ ಹೊರುವ ಬದಲು, ಹುಟ್ಟಿದೂರಿಗೆ ಹೋಗಿ ನೇಗಿಲು, ಗುದ್ದಲಿ ಹಿಡಿಯುವುದು ವಾಸಿ ಎನಿಸಿದೆ.

ಈ ಕೆಳಗೆ ತಜ್ಙರ ತಂಡದ ಶೀಫಾರಸ್ಸಿನ ಅಂಶಗಳನ್ನು ನೀಡಲಾಗಿದೆ. ಈ ಮಾಹಿತಿ ನೀಡಿದ ಕಿರಿಯ ಮಿತ್ರ ಹರ್ಷಕುಮಾರ್ ಖುಗ್ವೆಗೆ ನಾನು ಅಭಾರಿಯಾಗಿದ್ದೇನೆ.
ಪತ್ರಕರ್ತ ಮಿತ್ರ ಹರ್ಷಕುಮಾರ್ ಕುಗ್ವೆ  ನೀಡಿರುವ ಕರಡು ವಿಧೇಯಕದ ಶಿಫಾರಸ್ಸುಗಳ ಟಿಪ್ಪಣಿಯನ್ನು ಇಲ್ಲಿ ನೀಡಲಾಗಿದೆ.

ಈ ವಿಧೆಯಕದಲ್ಲಿ ಕಾಯ್ದೆಯ ಕರಡು ಮತ್ತು ಪರಿಕಲ್ಪನಾ ಟಿಪ್ಪಣಿಗಳಿವೆ. ಕಾಯ್ದೆಯ ಕರಡನ್ನು ರಾಷ್ಟ್ರೀಯ ಕಾನೂನು ಶಾಲೆಯ ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರದ ಕಾನೂನು ತಜ್ಞರು ರಚಿಸಿದ್ದರೆ ಪರಿಕಲ್ಪನಾ ಟಿಪ್ಪಣಿಯನ್ನು ಈ ಸಂಸ್ಥೆಯ ಉಪಕ್ರಮದಲ್ಲಿ ರಚಿಸಲಾದ, ರಾಜ್ಯದ ಹಿರಿಯ ಚಿಂತಕರು, ಸಾಹಿತಿಗಳು, ನ್ಯಾಯವಾದಿಗಳು, ಜಾನಪದ ತಜ್ಞರು, ವಿಚಾರವಾದಿಗಳನ್ನೊಳಗೊಂಡ ಸಮಿತಿಯಿಂದ ರೂಪಿಸಲಾಗಿದೆ. ಅಲ್ಲದೆ ನಾಡಿನ ವಿವಿಧೆಡೆಗಳಿಂದ ಬಂದ ಸಲಹೆ, ಅಭಿಪ್ರಾಯಗಳನ್ನು ಒಳಗೊಂಡಿದೆ. 
·                                                                                                                                                                                                                                                                                                                     - ವಿಧೇಯಕದ ಪ್ರಕಾರ ಮೂಢನಂಬಿಕೆ ಆಚರಣೆ ಎಂದರೆ, ಇನ್ನೊಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಕಾಯಿಲೆಯನ್ನು ಅಥವಾ ಸಂಕಟವನ್ನು ಪರಿಹರಿಸುವ ಭರವಸೆ ನೀಡಿ ಅಥವಾ ಅವರಿಗೆ ಲಾಭ ಉಂಟಾಗುತ್ತದೆಂದು ತಿಳಿಸಿ ಅಥವಾ ಪ್ರತಿಕೂಲ ಪರಿಣಾಮ ಉಂಟಾಗುತ್ತದೆಂದು ಹೆದರಿಸಿ ಅತಿಮಾನುಷ ಶಕ್ತಿಯನ್ನು ಆಹ್ವಾನಿಸುವ ಮೂಲಕ ಅವರಿಗೆ- ತೀವ್ರತರವಾದ ದೈಹಿಕ ಅಥವಾ ಮಾನಸಿಕ ಹಾನಿಯುಂಟು ಮಾಡುವ ಅಥವಾ (ಬಿ) ಹಣಕಾಸಿನ ಅಥವಾ ಯಾವುದೇ ಲೈಂಗಿಕ ಶೋಷಣೆಯನ್ನುಂಟು ಮಾಡುವ ಅಥವಾ (ಸಿ) ಮನುಷ್ಯನ ಘನತೆಗೆ ಘಾಸಿಯುಂಟುಮಾಡುವ ಯಾವುದೇ ಕೃತ್ಯ;
-
ಮೂಢನಂಬಿಕೆ ಆಚರಣೆಯನ್ನು ಉತ್ತೇಜಿಸುವ, ಪ್ರಸಾರ ಮಾಡುವ ಅಥವಾ ನಡೆಸುವ ಯಾರೇ ವ್ಯಕ್ತಿಯು ಒಂದು ವರ್ಷಕ್ಕೆ ಕಡಿಮೆಯಲ್ಲದ ಅವಧಿಯ ಆದರೆ ೫ ವರ್ಷಗಳಿಗೆ ವಿಸ್ತರಿಸಬಹುದಾದ ಕಾರಾವಾಸದಿಂದ ಅಥವಾ ಹತ್ತು ಸಾವಿರ ರೂಪಾಯಿಗಳಿಗೆ ಕಡಿಮೆಯಿಲ್ಲದ ಆದರೆ ಐವತ್ತು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ಅಥವಾ
ಇವೆರಡರಿಂದಲೂ ದಂಡಿತನಾಗತಕ್ಕದ್ದು.
-
ಬಲಿಯಾದ ವ್ಯಕ್ತಿಯ ಸಮ್ಮತಿಯು ಈ ಪ್ರಕರಣದ ಅಡಿಯಲ್ಲಿ ಪ್ರತಿರಕ್ಷೆಯಾಗತಕ್ಕದ್ದಲ್ಲ.
-
ಬಲಿಯಾದ ವ್ಯಕ್ತಿ ಎಂದರೆ ಮೂಢನಂಬಿಕೆ ಆಚರಣೆಯನ್ನು ಮಾಡಿದುದರಿಂದಾಗಿ ಯಾವ ವ್ಯಕ್ತಿಗೆ ತೀವ್ರತರವಾದ ದೈಹಿಕ ಅಥವಾ ಮಾನಸಿಕ ಹಾನಿಯುಂಟಾಗಿದೆಯೋ, ಯಾರು ಆರ್ಥಿಕವಾಗಿ ಅಥವಾ ಲೈಂಗಿಕವಾಗಿ ಶೋಷಣೆಗೆ ಒಳಗಾಗಿರುವನೋ ಅಥವಾ ಯಾರ ಘನತೆಗೆ ಧಕ್ಕೆಯುಂಟಾಗಿದೆಯೋ ಅಂಥ ವ್ಯಕ್ತಿ;

ವಿಧೇಯಕವು ಕೆಳಕಂಡ ಕೃತ್ಯಗಳನ್ನು ಅಪರಾಧಗಳೆಂದು ಹೆಸರಿಸಿದೆ.
ಈ ಮುಂದಿನ ಅಪರಾಧಗಳು ಸಂಜ್ಞೇಯ ಅಪರಾಧಗಳಾಗಿರತಕ್ಕದ್ದು:
-
ಲಾಭಕ್ಕಾಗಿ ಅಥವಾ ದೈವವನ್ನು ಸಂಪ್ರೀತಗೊಳಿಸುವುದಕ್ಕಾಗಿ ನರಬಲಿ ಕೊಡುವುದು;
-
ನರಬಲಿಯಲ್ಲಿನ ನಂಬಿಕೆಯನ್ನು ಹರಡುವುದು ಅಥವಾ ನರಬಲಿ ಕೊಡುವಂತೆ
ಇತರರನ್ನು ಪ್ರೇರೇಪಿಸುವುದು.
-
ಕಾಯಿಲೆಯನ್ನು ಗುಣಪಡಿಸಲು ಪ್ರಯತ್ನಿಸುವುದು ಅಥವಾ ಹಿಂಸಾತ್ಮಕ ರೀತಿಯಿಂದ
ಭೂತೋಚ್ಚಾಟನೆಯನ್ನು ನಡೆಸುವುದು.
-
ಭಾರತ ದಂಡ ಸಂಹಿತೆ, ೧೮೬೦ರ ೨೯೭ನೇ ಪ್ರಕರಣದ ಉಲ್ಲಂಘನೆಯಲ್ಲಿ ಅಘೋರಿ,
ಸಿದ್ದುಭುಕ್ತಿ ಅಥವಾ ಸದೃಶ ಆಚರಣೆಯನ್ನು ನೆರವೇರಿಸುವುದು;
-
ಅಂಥ ಆಚರಣೆಗಳಲ್ಲಿ ತೊಡಗುವಂತೆ ಇತರರನ್ನು ಒತ್ತಾಯಿಸುವುದು; ಅಥವಾ
-
ಅಂಥ ಆಚರಣೆಗಳಿಂದ ಪಡೆಯಲಾಗಿದೆಯೆನ್ನಲಾದ ಶಕ್ತಿಯ ಭಯವನ್ನು ಉಪಯೋಗಿಸಿಕೊಂಡು
ಆರ್ಥಿಕವಾಗಿ ಮತ್ತು ಲೈಂಗಿಕವಾಗಿ ವ್ಯಕ್ತಿಗಳ ಶೋಷಣೆ ಮಾಡುವುದು;
-
ದೈವಿಕ ಅಥವಾ ಅಧ್ಯಾತ್ಮಿಕ ಶಕ್ತಿ ಸ್ವಾಧೀನವಾಗಿದೆಯೆಂದು ಘೋಷಿಸುವುದು ಮತ್ತು ಅಂಥ
ಘೋ?ಣೆಯನ್ನು ಬಳಸಿಕೊಂಡು,
-
ಹಣವನ್ನು ಪಡೆದು ಪರಿಹಾರಗಳ ಅಥವಾ ಲಾಭಗಳ ಭರವಸೆಯನ್ನು ಕೊಡುವುದು;
-
ಅಥವಾ ವೈಯಕ್ತಿಕ ಲಾಭಕ್ಕಾಗಿ ದೈವದ ಕೋಪದ ಅಥವಾ ಆತ್ಮದ ಖಂಡನೆಯ ಭಯವನ್ನು
ಹುಟ್ಟಿಸುವುದು;
-
ಹಣಕ್ಕಾಗಿ ಅಥವಾ ಇಲ್ಲವೇ ಉಚಿತವಾಗಿ ವಾಮಾಚಾರವನ್ನು (ಬ್ಲ್ಯಾಕ್ ಮ್ಯಾಜಿಕ್) ಅಥವಾ
ಮಾಟವನ್ನು ಇತರ ವ್ಯಕ್ತಿಗಳಿಗೆ ತೊಂದರೆಯುಂಟು ಮಾಡುವ ಉದ್ದೇಶದಿಂದ ಮತ್ತು ಅವರಿಗೆ
ತೀವ್ರವಾಗಿ ಭಯವುಂಟು ಮಾಡುವಂತೆ ಬಳಸುವುದು ಅಥವಾ ಮಾಡುವುದು;
-
ದೇಹದೊಳಗೆ ಚುಚ್ಚಿಕೊಳ್ಳುವ ಕೊಕ್ಕೆಯಿಂದ ನೇತಾಡುವಂತಹ (ಸಿಡಿ) ಅಥವಾ ದೇಹದೊಳಗೆ
ತೂರಿಸಿಕೊಂಡಿರುವ ಕೊಕ್ಕೆಯಿಂದ ರಥವನ್ನು ಎಳೆಯುವಂತಹ ಸ್ವ ದಂಡನೆಯಿಂದ
ಗಾಯಗೊಳ್ಳುವ ಮತಾಚರಣೆಗಳನ್ನು ಆಚರಿಸುವಂತೆ ಒತ್ತಾಯಿಸುವುದು, ಹರಡುವುದು
ಅಥವಾ ಅದಕ್ಕೆ ಅನುಕೂಲ ಕಲ್ಪಿಸುವುದು;
-
ಮಕ್ಕಳ ಕಾಯಿಲೆಯನ್ನು ವಾಸಿ ಮಾಡುವ ಹೆಸರಿನಲ್ಲಿ ಅವರನ್ನು ಮುಳ್ಳುಗಳ ಮೇಲೆ ಅಥವಾ
ಎತ್ತರದಿಂದ ಎಸೆಯುವ ಮೂಲಕ ಅವರನ್ನು ಹಾನಿಗೊಳಪಡಿಸುವಂತಹ ಆಚರಣೆಗಳನ್ನು
ಒತ್ತಾಯಿಸುವುದು, ಹರಡುವುದು ಮತ್ತು ಅಂತಹ ವಾತಾವರಣವನ್ನು ಕಲ್ಪಿಸುವುದು;
(-
ಮಹಿಳೆಯರ ವಿರುದ್ಧ ಮೂಢನಂಬಿಕೆ ಆಚರಣೆಗಳು;-
-
ಋತುಮತಿಯಾದ ಅಥವಾ ಗರ್ಭಿಣಿ ಮಹಿಳೆಯರನ್ನು ಒತ್ತಾಯಪೂರ್ವಕವಾಗಿ
ಒಂಟಿಯಾಗಿರಿಸುವುದು, ಗ್ರಾಮದೊಳಗೆ ಬಾರದಂತೆ ನಿ?ಧಿಸುವುದು ಅಥವಾ ಬೇರೆ ಇರಿಸಲು
ಅನುಕೂಲ ಕಲ್ಪಿಸುವುದು.
-
ಸಮಾಜದ ದುರ್ಬಲ ವರ್ಗಗಳ ಮಹಿಳೆಯರ ಮೇಲೆ ಬಣ್ಣದ ನೀರನ್ನು ಎರಚುವ, ಓಕುಳಿ,
ಮೂಲಕ ಅವರನ್ನು ಅವಮಾನಗೊಳಿಸುವುದು ಅಥವಾ ಅವರ ಘನತೆಗೆ ಧಕ್ಕೆಯುಂಟು
ಮಾಡುವುದು.
-
ಪೂಜೆ ಅಥವಾ ಇತರ ಯಾವುದೇ ಹೆಸರಿನಲ್ಲಿ ಅವರನ್ನು ಬೆತ್ತಲೆಯಾಗಿ ಪ್ರದರ್ಶಿಸುವುದು,
ಉದಾಹರಣೆಗೆ ಬೆತ್ತಲೆ ಸೇವೆ ಅಂಥ ಅಮಾನವೀಯ ಮತ್ತು ಅವಮಾನಗೊಳಿಸುವ
ಆಚರಣೆಗಳಿಗೆ ಮಹಿಳೆಯರನ್ನು ಒಳಪಡಿಸುವುದು.
-
ಗರ್ಭಿಣಿಯರನ್ನಾಗಿಸುವುದೂ ಸೇರಿದಂತೆ ಸಾಮಾಜಿಕ ಅಥವಾ ವೈಯಕ್ತಿಯ ಲಾಭವನ್ನು
ಉಂಟು ಮಾಡುವ ಭರವಸೆಯೊಂದಿಗೆ ಅತಿಮಾನುಷ ಶಕ್ತಿಯನ್ನು ಆಹ್ವಾನಿಸುವ ಮೂಲಕ
ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆಗೆ ಒಳಪಡಿಸುವುದು;
-
ಸಾರ್ವಜನಿಕ ಆರೋಗ್ಯಕ್ಕೆ ಹಾನಿಯುಂಟು ಮಾಡುವಂಥ, ಕತ್ತನ್ನು ಕಚ್ಚುವ ಮೂಲಕ
ಪ್ರಾಣಿಗಳನ್ನು ಕೊಲ್ಲುವ ಆಚರಣೆಗಳನ್ನು (ಗಾವು) ನೆರವೇರಿಸುವಂತೆ ಯಾರೇ ವ್ಯಕ್ತಿಯನ್ನು
ಒತ್ತಾಯಿಸುವುದು;
-
ಮಾನವ ಘನತೆಯನ್ನು ಉಲ್ಲಂಘಿಸುವಂತಹ ಮಡೆ ಸ್ನಾನ ಅಥವ ಸದೃಶ ಆಚರಣೆಗಳಿಗೆ
ಅನುಕೂಲ ಕಲ್ಪಸುವುದು;
-
ಮೂಢನಂಬಿಕೆಯ ಹೆಸರಿನಲ್ಲಿ ಜಾತಿ ಅಥವಾ ಲಿಂಗದ ಆಧಾರದ ಮೇಲೆ ತಾರತಮ್ಯ
ಕಲ್ಪಿಸುವುದು;
-
ಪಾದರಕ್ಷೆಗಳನ್ನು ಅವನ/ ಅವಳ ತಲೆಯ ಮೇಲೆ ಒಯ್ಯುವ ಅವಮಾನಕರ ಆಚರಣೆಗಳನ್ನು
ನೆರವೇರಿಸುವಂತೆ ಸಮಾಜದ ದುರ್ಬಲ ವರ್ಗಳಿಗೆ ಸೇರಿದ ಯಾರೇ ವ್ಯಕ್ತಿಯನ್ನು
ಒತ್ತಾಯಿಸುವುದು;
-
ಆಹಾರ ವಿತರಣೆ ಮಾಡುವಾಗ ಜಾತಿಯ ಆಧಾರದ ಮೇಲೆ ಪಂಕ್ತಿ ಬೇಧ ಮಾಡುವಂತಹ
ಆಚರಣೆಗಳನ್ನು ಮಾಡುವುದು;
೨. ಈ ಮುಂದಿನ ಅಪರಾಧಗಳು ಸಂಜ್ಷೇಯವಲ್ಲದ ಅಪರಾಧಗಳಾಗಿರತಕ್ಕದ್ದು,-
-
ಯಾರೇ ವ್ಯಕ್ತಿಯ ಜನನದ ಸಮಯ, ಸ್ಥಳದ ಆಧಾರದ ಮೇಲೆ ಅವನಿಗೆ ಕಳಂಕ
ಹಚ್ಚುವುದಕ್ಕೆ ಅಥವಾ ಅವನನ್ನು ತೆಗಳುವುದಕ್ಕೆ;
-
ಭವಿ?ವಾಣಿ ನಿಜವಾಗುತ್ತದೆಂದು ನಂಬಿಸಿ ಅವಮಾನಕರ ಆಚರಣೆಗಳನ್ನು ವ್ಯಕ್ತಿಗಳಿಂದ
ಮಾಡಿಸುವುದಕ್ಕೆ, ಅಥವಾ
-
ವ್ಯಕ್ತಿಗಳಿಗೆ ತೀವ್ರ ಹಣಕಾಸು ಷ್ಟ ಉಂಟಾಗುವುದಕ್ಕೆ
ಕಾರಣವಾಗುವ ಹಾನಿಕರ ಭವಿಷ್ಯ ನುಡಿಯುವುದು
-
ಜ್ವಾಲೆಯನ್ನು ಬರೀ ಕೈಗಳಿಂದ ಮುಟ್ಟುವಂತೆ ಒತ್ತಾಯಿಸುವ ರೀತಿಯ ದೈಹಿಕ ಅಥವಾ
ಮಾನಸಿಕ ಹಾನಿಗೆ ಒಳಪಡಿಸುವ ಮೂಲಕ ಮಾಡುವ ಯಾರೇ ವ್ಯಕ್ತಿಯ ಅಪರಾಧವನ್ನು
ಅಥವಾ ನಿರಪರಾಧಿತ್ವವನ್ನು ಘೋಷಿಸುವುದು;

ವಿಧೇಯಕವು ದೈವನಂಬಿಕೆ, ಆಚರಣೆ ಮತ್ತು ಮೂಢನಂಬಿಕೆಗಳನ್ನು ಕೆಳಕಂಡಂತೆ ಪ್ರತ್ಯೇಕಗೊಳಿಸುತ್ತದೆ.
ಮೂಢನಂಬಿಕೆಗಳನ್ನು ವಿರೋಧಿಸುವುದೆಂದರೆ, ಜನರ ಧಾರ್ಮಿಕ ನಂಬಿಕೆಗಳನ್ನು ಅಲ್ಲಗಳೆಯುವುದಲ್ಲ, ಹೀನಾಯಿಸುವುದಲ್ಲ. ಜನಸಾಮಾನ್ಯರು ತಮ್ಮ ಬದುಕಿನ ಅನುಭವಗಳಿಂದ, ಸುತ್ತಮುತ್ತಲ ಸಾಮಾಜಿಕ ಪ್ರೇರಣೆಗಳಿಂದ ಹಾಗೂ ಪ್ರಚೋದನೆಗಳಿಂದ ಹಲವಾರು ನಂಬಿಕೆಗಳನ್ನು ಬೆಳೆಸಿಕೊಂಡಿರುತ್ತಾರೆ. ನಂಬಿಕೆಗಳಿಂದ ಆಚರಣೆಗಳು ಹುಟ್ಟಿಕೊಳ್ಳುತ್ತವೆ. ನಂಬಿಕೆಗಳು ಮೂಲ ಅಸ್ತಿತ್ವ ಕಳೆದುಕೊಂಡಾಗ ಮೂಢನಂಬಿಕೆಗಳಾಗುವುದು ಇನ್ನೊಂದು ಹಂತ. ಸಾಮಾಜಿಕ ಅಸಮಾನತೆ, ವೈಚಾರಿಕ ಜ್ಞಾನದ ಅಲಭ್ಯತೆ, ಜ್ಞಾನ ಸಂವಹನದ ಕೊರತೆ ಮುಂತಾದ ಹಲವಾರು ಕಾರಣಗಳಿಂದ ಕೆಲವು ಮೂಢಾಚಾರಗಳು ಕಾರ್ಯಕಾರಣ ಸಂಬಂಧವಿಲ್ಲದೆಯೇ ನಂಬುವಂತೆ ಮಾಡುತ್ತವೆ. ಇಂಥ ನಂಬಿಕೆಗಳ ಮೇಲೆ ರೂಢಿಗೆ ಬಂದ ಆಚರಣೆಗಳು ಅರ್ಥಹೀನವಾಗಿರುತ್ತವೆ. ಇವು ಅಜ್ಞಾನವನ್ನು, ಅಂಧಶ್ರದ್ಧೆಯನ್ನು ಹೇರುವ ಮತ್ತು ಪೋಷಿಸುವ ಶಕ್ತಿಗಳ ಕೈಯಲ್ಲಿ ದುರ್ಬಳಕೆಯಾಗುತ್ತವೆ.
ಮೂಢನಂಬಿಕೆ ಮತ್ತು ಧಾರ್ಮಿಕ ಶ್ರದ್ಧೆ ನಡುವಿನ ಅಂತರ ತೀರಾ ತೆಳುವಾದದ್ದಾದರೂ ಇವೆರಡರ ನಡುವಿನ ವ್ಯತ್ಯಾಸವನ್ನು ಗುರುತಿಸುವ ಕೆಲಸ ಅತ್ಯಂತ ಜರೂರಾಗಿ ಆಗಬೇಕಿದೆ. ಹೀಗೆ ಗರುತಿಸಲು ನಮಗೆ ಸಂವಿಧಾನಬದ್ಧವಾದ ಮೂಲಭೂತ ಕರ್ತವ್ಯಗಳು ಮತ್ತು ಮಾನವ ಹಕ್ಕುಗಳ ಪರಿಕಲ್ಪನೆಗಳು ಹಾಗೂ ನಮ್ಮ ಬಹುಮುಖಿ ಸಂಸ್ಕೃತಿಯ ನೆಲೆಗಳು ಒಂದು ವಿಶಾಲ ಭಿತ್ತಿಯನ್ನು ಒದಗಿಸಬಹುದು. ಯಾವ ಮೂಢನಂಬಿಕೆಯ ಆಚರಣೆಗಳು ದೈಹಿಕ ಮತ್ತು ಮಾನಸಿಕ ಹಿಂಸೆಗೆ ಕಾರಣವಾಗುತ್ತವಯೋ, ಮಾನವನ ಸಾಮಾಜಿಕ ಘನತೆ-ಗೌರವಕ್ಕೆ ಧಕ್ಕೆಯನ್ನುಂಟುಮಾಡುತ್ತವೆಯೋ ಹಾಗೂ ಆರ್ಥಿಕವಾಗಿ ಸಹಮಾನವರನ್ನು ಶೋಷಿಸಲು ವಂಚಕ ಶಕ್ತಿಗಳಿಂದ ಬಳಕೆಯಾಗುತ್ತವೆಯೋ, ಅವುಗಳನ್ನು ಈ ವಿಧೇಯಕದ ವ್ಯಾಪ್ತಿಯೊಳಗೆ ತರಬಹುದು.

ಜ್ಯೋತಿಷಿಗಳು, ಮುಲ್ಲಾಗಳು, ಬಾಬಾಗಳು, ಪಾದ್ರಿಗಳು, ಪುರೋಹಿತರು ಹೀಗೆ ಪಂಚಾಂಗವನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿ ಭವಿಷ್ಯ ಹೇಳುತ್ತೇವೆಂದು ಜನರನ್ನು ಶೋಷಿಸುವ ಮತ್ತು ಮೌಢ್ಯದ ಬೀಜ ಬಿತ್ತುವ ಎಲ್ಲರನ್ನೂ ಈ ಕಾಯ್ದೆಯಡಿ ಅಪರಾಧಿಗಳೆಂದು ಘೋಷಿಸಬಹುದಾಗಿದೆ.