ಶುಕ್ರವಾರ, ಸೆಪ್ಟೆಂಬರ್ 15, 2017

ಗಾಂಧಿವಾದಿ ಪ್ರಸನ್ನ ತೆರೆದಿಟ್ಟ ಸರಕು ಮತ್ತು ಸೇವಾ ತೆರಿಗೆಯ ನ್ಯೂನ್ಯತೆಗಳು

ಈ ದೇಶದ ಯಾವುದೇ ಒಬ್ಬ ಜನನಾಯಕ ಎನಿಸಿಕೊಂಡ ವ್ಯಕ್ತಿ;  ಅವನು ಪ್ರಧಾನಿಯಾಗಿರಲಿ ಅಥವಾ ಮುಖ್ಯ ಮಂತ್ರಿಯಾಗಿಲಿ, ಅವನು ರಾಜಕೀಯನೀತಿಯ ತಜ್ಞನಾಗಿರಬೇಕು ಇಲ್ಲವೆ, ಆರ್ಥಿಕ ತಜ್ಞನಾಗಿರಬೇಕು ಎಂದು ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಭಾರತದಂತಹ ದೇಶದಲ್ಲಿ ನಿರೀಕ್ಷಿಸುವುದು ಕಷ್ಟ. ಜೊತೆಗೆ ಅಂತಹ ನಿರೀಕ್ಷೆಗಳಿರಬಾರದು. ಆದರೆ, ಅಧಿಕಾರದ ಗದ್ದುಗೆಗೆ ಏರಿದ ಸಂದರ್ಭದಲ್ಲಿ ತನ್ನ ಬಳಿ ಕನಿಷ್ಟ ಒಂದಿಷ್ಟು ಒಳ್ಳೆಯ ಮಂದಿ ತಜ್ಞರನ್ನು ತನ್ನ ಇಟ್ಟುಕೊಳ್ಳಬೇಕಾಗಿರುವುದು ನೈತಿಕ ಕರ್ತವ್ಯ.
ಭಾರತದ ಸಂದರ್ಭದಲ್ಲಿ 2014 ರಿಂದ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ನಂತರ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಘೋಷಿಸಲಾದ ಬಹುತೇಕ ಯೋಜನೆಗಳುಅದು ನಮಾಮಿ ಗಂಗಾ ಯೋಜನೆ ಇರಬಹುದು, ಸ್ವಚ್ಛ ಭಾರತ್, ಜನಧನ್, ಸ್ಮಾರ್ಟ್ಸಿಟಿ ಹೀಗೆ ಹಲವು ಯೋಜನೆಗಳು ಮಕಾಡೆ ಮಲಗಿದ ಪರಿ ಇವುಗಳನ್ನು ಅವಲೋಕಿಸಿದರೆ, ದೇಶದ ಪ್ರಧಾನಿಗೆ ಯಾವ ರಂಗÀ ತಜ್ಞರೂ ಬೇಕಾಗಿಲ್ಲ ಎನಿಸುತ್ತಿದೆ. ವಿಶೇಷವಾಗಿ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ರಂಗಗಳ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಬಹುತೇಕ ವಿದ್ವಾಂಸರುಗಳು ದೇಶ,ಕಾಲ, ಜಾತಿ ಮತ್ತು ಧರ್ಮದ ಎಲ್ಲೆಯನ್ನು ಮೀರಿ ತಮ್ಮ ಅಧ್ಯಯನದ ಕ್ಷೇತ್ರದ ವಿಷಯಗಳಿಗೆ ಬದ್ಧರಾಗಿರುವುದನ್ನು ನಾವು ಜಗತ್ತಿನೆಲ್ಲೆಡೆ ಕಾಣುತ್ತಿದ್ದೇವೆ. ಇಂತಹ ವ್ಯಕ್ತಿಗಳನ್ನು ಅನೇಕ ರಾಜಕೀಯ ಪಕ್ಷಗಳು, ನಾಯಕರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸಲಹೆಗಾರರನ್ನಾಗಿ ಮಾಡಿಕೊಳ್ಳುವುದು ಸಂಪ್ರದಾಯ. ಆದರೆ, ಈಗನ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರಿಗೆ ಇಂತಹ ವಿದ್ವಾಂಸರ ಬದಲಾಗಿ ತಮ್ಮ ಮೂಗಿನ ನೇರಕ್ಕೆ ಸಲಹೆ ಪಡೆಯುವ ಭಟ್ಟಂಗಿ ಮಾತ್ರ ಬೇಕಾಗಿದ್ದಾರೆ. ಆದರೆ, ಅವರ ದುರಾದೃಷ್ಟಕ್ಕೆ ಯಾವೊಬ್ಬ ತಜ್ಞನೂ ಭಟ್ಟಂಗಿಯಾಗಿ ಕಾರ್ಯ ನಿರ್ವಹಿಸಲು ಅವರಿಗೆ ದೊರೆಯುತ್ತಿಲ್ಲ. ಹಾಗಾಗಿ ಇಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪಕ್ಷದ ಅಧ್ಯಕ್ಷನೊಬ್ಬ ದೇಶದ ಆರ್ಥಿಕ ಅಭಿವೃದ್ಧಿ ಬೆಳವಣಿಗೆ ದರದ ಮಾನದಂಡವಾದ ಜಿ.ಡಿ.ಪಿ. ಅರ್ಥಾತ್  ರಾಷ್ಟ್ರದ ಒಟ್ಟು ಆಂತರೀಕ ಉತ್ಪನ್ನದ ದರದ ಕುಸಿತವನ್ನು ಟೆಕ್ನಿಕಲ್ ಎರರ್ ಅಂದರೆ ತಾಂತ್ರಿಕ ದೋಷ ಎಂದು ಹೇಳುವುದರ ಮೂಲಕ ತನ್ನ ಮೂರ್ಖತನವನ್ನು ಪ್ರದರ್ಶಿಸಿ ಜಾಗತಿಕ ಮಟ್ಟದಲ್ಲಿ ನೆಗೆಪಾಟಲಿಗೆ ಈಡಾಗಿದ್ದಾನೆ. ಜಿ.ಡಿ.ಪಿ. ಅಭಿವೃದ್ಧಿಯ ದರವೆಂದರೆ, ಗುಜರಾತಿ ಮಾರ್ವಾಡಿ ಅಂಗಡಿಯ ಲೆಕ್ಕದ ಪುಸ್ತಕದೊಳಗಿನ  ಅಂಕಿ ಅಂಶ ಎಂದು ಅಮೀತ್ ಷಾ ಭಾವಿಸಿದಂತಿದೆ.
ಭಾರತದ ಆರ್ಥಿಕ ಬೆಳವಣಿಗೆ ದರವನ್ನು 1951 ರಿಂದ 2017 ರವರೆಗೆ ಗಮನಿಸಿದಾಗ, ಸರಾಸರಿ ಬೆಳವಣಿಗೆ ದರವು ಶೇಕಡ 6.12 ರಷ್ಟು ಇದೆ. 1979 ರಲ್ಲಿ ಮತ್ತು 2010 ರಲ್ಲಿ ಶೇಕಡ 5.20 ರಷ್ಟು ಇದ್ದುದನ್ನು ಹೊರತು ಪಡಿಸಿದರೆ, 2017 ಮೊದಲ ಅರ್ಧವಾರ್ಷಿಕದಲ್ಲಿ ಶೇಕಡ 6.6 ರಷ್ಟು ಇದ್ದ ಬೆಳವಣಿಗೆ ದರವು ಎರಡನೇ ಅರ್ಧವಾಷಿಕದಲ್ಲಿ ಅಂದರೆ ಜುಲೈ ತಿಂಗಳ ನಂತರ ಶೇಕಡ 5.70 ಕ್ಕೆ ಕುಸಿಯುವುದರ ಮೂಲಕ ಭಾರತದ ಆರ್ಥಿಕತೆಯ ಬುನಾದಿಯು ಭದ್ರವಾಗಿಲ್ಲ ಎಂಬುದನ್ನು ಸಾಬೀತು ಪಡಿಸಿದೆ. 2016 ರಲ್ಲಿ ಗೋಹತ್ಯೆ ನಿಷೇದ ಕಾಯ್ದೆಯನ್ನು ಜಾರಿಗೆ ತರಲು ಹೊರಟಾಗ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್ ಸುಬ್ರವ್ಮಣ್ಯಂ ಇದು ವಾಸ್ತವವಾಗಿ ದೇಶದ ಆರ್ಥಿಕತೆ ಪರೋಕ್ಷವಾಗಿ ಹೊಡೆತ ಬೀಳುವ ಕಾಯ್ದೆ ಎಂದು ಎಚ್ಚರಿಸಿದ್ದರು. ಅವರ ಮಾತನ್ನು ಮೀರಿ ಗೋಹತ್ಯೆ ನಿಷೇದ ಕಾಯ್ದೆಯನ್ನು ಜಾರಿಗೆ ತಂದ ಕೇಂದ್ರ ಸರ್ಕಾರಕೆ ಸುಪ್ರೀಂ ಕೋರ್ಟ್ ತಪರಾಕಿ ಬಿದ್ದ ಮೇಲೆ ಸುಮ್ಮನಾಗಬೇಕಾಯಿತು. ನೋಟು ನಿಷೇಧ ವಿಷಯದಲ್ಲಿ ಇದೊಂದು ಮೂರ್ಖತನದ ಕ್ರಮ ಎಂದು ಎಚ್ಚರಿಸಿದ್ದ ರಿಸರ್ವ್ ಬ್ಯಾಂಕ್ ಗೌರ್ನರ್ ರಘುರಾಂ ರಾಜನ್ ಅವರನ್ನು ಅಪಮಾನಿಸಿ ಹುದ್ದೆ ತೊರೆಯುವಂತೆ  ಮಾಡಲಾಯಿತು. ದೇಶದ ಆರ್ಥಿಕತೆಗೆ ಸರಿಸುಮಾರು ಎಂಟು ಕೋಟಿ ಲಕ್ಷ ನಷ್ಟವನ್ಮ್ನಂಟು ಮಾಡಿದ ಕ್ರಮವನ್ನು ಸಮರ್ಥಿಸಿಕೊಂಡಿದ್ದ ನರೇಂದ್ರ ಮೋದಿಯವರು ಇದರಲ್ಲಿ ತಪ್ಪಿದ್ದರೆ ನನ್ನ ಸುಟ್ಟು ಹಾಕಿ ಎಂದು ಘಂಟಾಘೋಷವಾಗಿ ಹೇಳಿಕೊಂಡಿದ್ದರು. ಇವತ್ತಿನ ಆರ್ಥಿಕತೆಯ ಹಿಂಜರಿತಕ್ಕೆ  ನೋಟು ನಿಷೇಧದ ಯೋಜನೆ ಪ್ರಮುಖ ಕಾರಣ ಎಂದು ಎಲ್ಲಾ ಆರ್ಥಿಕ ಅಧ್ಯಯನ ವರದಿಗಳು ಮತ್ತು ಸಮೀಕ್ಷೆಗಳು ಹೇಳುತ್ತಿವೆ. ಇಂತಹ ತೊಘಲಕ್ ದರ್ಬಾರಿಗೆ ಬೇಸತ್ತು ದೇಶದ ಪ್ರಥಮ ನೀತಿ ಆಯೋಗ ( ಹಿಂದಿನ ಯೋಜನಾ ಆಯೋಗದ ಹೆಸರು) ಅಧ್ಯಕ್ಷ ಹಾಗೂ ಹೆಸರಾಂತ ಆರ್ಥಿಕ ತಜ್ಞ ಅವರಿಂದ್ ಪನಾಗ್ರಿಯ ತಮ್ಮ ಹುದ್ದೆ ತೊರೆದು ವಾಪಸ್ ಅಮೇರಿಕಾಕ್ಕೆ ತೆರಳಿದರು. ಜಾಗತಿಕ ಮಟ್ಟದಲ್ಲಿ ಅತಿಶ್ರೇಷ್ಠ ಅರ್ಥ ಶಾಸ್ತ್ರಜ್ಞರು ಎನಿಸಿಕೊಂಡ, ಅಮಾರ್ಥ್ಯ ಸೇನ್ ರಿಂದ ಹಿಡಿದು, ರಘುರಾಂ ರಾಜನ್, ಅರವಿಂದ ಪನಾಗ್ರಿಯ ಇಂತಹ ಭಾರತೀಯರ ಸೇವೆಯನ್ನು ಪಡೆಯಲಾದ ಮೋದಿ ಸರ್ಕಾರ ಇಂದು ಊರ್ಜಿತ್ ಪಟೇಲ್ ಎಂಬ ಭಟ್ಟಂಗಿ ಒಬ್ಬನನ್ನು ರಿಸರ್ವ್ ಗೌರ್ನರ್ ಸ್ಥಾನಕ್ಕೆ ತಂದು ಕೂರಿಸಿದೆ. ಈತ ಎಂತಹ ಎಡವಟ್ಟು ಗಿರಾಕಿಯೆಂದರೆ, ನೋಟು ನಿಷೇಧ ಯೋಜನೆಯಿಂದ ಬ್ಯಾಂಕಿಗೆ ವಾಪಸ್ ಬಂದ ಸಾವಿರ ಮತ್ತು ಐನೂರು ರೂಪಾಯಿ ಮೌಲ್ಯದ ನೋಟುಗಳ ಎಣಿಕೆ ಕಾರ್ಯ ನಡೆಯುತ್ತಿದೆ ಎಂಬ ಹೇಳಿಕೆಯನ್ನು ನೀಡುವುದರ ಮೂಲಕ ತಾನೊಬ್ಬ ಅಸಮರ್ಥ ಮತ್ತು ಅಯೋಗ್ಯ ಎಂಬುದನ್ನು ತೋರಿಸಿಕೊಂಡಿದ್ದಾನೆ. ರಿಸರ್ವ್ ಬ್ಯಾಂಕ್ ತಿರುಪತಿ ತಿಮ್ಮಪ್ಪನ ಹುಂಡಿ ಎಂದು ಈತ ಭಾವಿಸಿದಂತಿದೆ. ಹಾಗಾದರೆ ದೇಶದ ಜನತೆ ಹಳೆಯ ನೋಟುಗಳ ಬದಲಾಗಿ ಹೊಸನೊಟುಗಳನ್ನು ವಿನಿಮಯ ಮಾಡಿಕೊಂಡ ಅಂಕಿ ಅಂಶ ರಿಸರ್ವ್ಬ್ಯಾಂಕಿನ ಬಳಿ ಇಲ್ಲ ಎಂದರ್ಥ. ಹಾಗಾದರೆ, ಬ್ಯಾಂಕ್ ಸಾರ್ವಜನಿರ್ಕರಿಗೆ ಬಿಡುಗಡೆ ಮಾಡಿದ ಎರಡು ಸಾವಿರ ಮತ್ತು ಐನೂರು ಹೊಸ ನೋಟುಗಳ ಒಟ್ಟು ಮೌಲ್ಯವೆಷ್ಟು? ಇಂತಹ  ಪ್ರಹಸನಗಳನ್ನು ನೋಡುತ್ತಿದ್ದರೆ, ಇವರೆಲ್ಲರೂ ದೇಶವನ್ನು ದಿವಾಳಿ ಎಬ್ಬಿಸಲು ಪಣತೊಟ್ಟವರಂತೆ ಕಾಣುತ್ತಾರೆ.
ಇತ್ತೀಚೆಗೆ ಜಾರಿಗೆ ಬಂದ ಏಕರೂಪದ ತೆರಿಗೆ ಪದ್ಧತಿಯಲ್ಲಿ ಅಂದರೆ ಜಿ.ಎಸ್.ಟಿ. ಪದ್ದತಿಯಲ್ಲಿ ಇರುವ ನ್ಯೂನ್ಯತೆಗಳನ್ನು ಗಮನಿಸಿದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದ ಗುಡಿ ಕೈಗಾರಿಕೆಗಳ ಮೇಲೆ ಮತ್ತು ಅಸಂಖ್ಯಾತ ಕುಶಲ ಕರ್ಮಿಗಳ ತಲೆಯ ಮೇಲೆ ಶಾಶ್ವತವಾಗಿ ಚಪ್ಪಡಿ ಕಲ್ಲು ಎಳೆಯಲು ನಿರ್ಧರಿಸಿದಂತೆ ಕಾಣುತ್ತಿದೆ. ವಾಸ್ತವವಾಗಿ ಸಮಾಜದಲ್ಲಿನ ಅಸಮಾನತೆಯನ್ನು  ಹೋಗಲಾಡಿಸುವ ನಿಟ್ಟಿನಲ್ಲಿ ಜಾರಿಗೆ ಬಂದ ತೆರಿಗೆ ನಿಯಮದ ಆಯುಧವು ಈಗ  ಸರಕು ಮತ್ತು ಸೇವಾ ತೆರಿಗೆ ಹೆಸರಿನಲ್ಲಿ ರೂಪಾಂತರಗೊಂಡು ಬಡವ ಮತ್ತು ಬಲ್ಲಿದ ಎಂಬ ಭೇದ ಭಾವವಿಲ್ಲದೆ ಇಬ್ಬರಿಗೂ ಸಮಾನವಾಗಿ ಬಳಕೆಯಾಗುತ್ತಿದೆ. ರಸ್ತೆಯ ಬದಿಯ ಮರದ ನೆರಳಿನಲ್ಲಿ ಕುಳಿತು ಚರ್ಮದ ಚಪ್ಪಲಿ ತಯಾರಿಸುವ ಚಮ್ಮಾರನಿಗೆ ವಿಧಿಸುವ ತೆರಿಗೆಯನ್ನುಅತ್ಯಾಧುನಿಕ ತಂತ್ರಜ್ಞಾನ ಬಳಸಿ ಚರ್ಮದ ಚಪ್ಪಲಿ ತಯಾರಿಸು ಬಾಟಾ ದಂತಹ ಬೃಹತ್ ಕಂಪನಿಗೂ ವಿಧಿಸಲಾಗುತ್ತಿದೆ. ಉತ್ಪಾದನಾ ವೆಚ್ಚದಲ್ಲಿ ಕಡಿಮೆಯಾಗುವ ಕಂಪನಿಯ ಜೊತೆ ಬಡ ಚಮ್ಮಾರನು ತನ್ನ ಉತ್ಪನ್ನಗಳ ಜೊತೆ ಸ್ಪರ್ಧಿಸುವ ಬಗೆ ಹೇಗೆ? ಕೈ ಉತ್ಪನ್ನಗಳಿಗೆ ಮತ್ತು ಗುಡಿ ಕೈಗಾರಿಕೆಗಳಿಗೂ ಹಾಗೂ ಬಹು ರಾಷ್ಟ್ರೀಯ ಕಂಪನಿಗಳ ಉತ್ಪಾದನೆಗಳಿಗೂ ಸಮಾನ ರೀತಿಯಲ್ಲಿ ತೆರಿಗೆ ವಿಧಿಸುವುದಾದರೆ, ಬಡವರು ಬದುಕು ಮಾರ್ಗ ಯಾವುದು?
ಕಳೆದ ಮಂಗಳ ವಾರ ಧಾರವಾಡಕ್ಕೆ ಆಗಮಿಸಿದ್ದ ಪ್ರಸನ್ನರವರು ನೂತನ ತೆರಿಗೆ ಪದ್ಧತಿಯಲ್ಲಿ ಬಡವರನ್ನು ಮತ್ತು ಕುಶಲ ಕರ್ಮಿಗಳನ್ನು ಹಾಗೂ ಅವರ ಕೈ ಉತ್ಪನ್ನಗಳನ್ನು ಕೇಂದ್ರ ಸರ್ಕಾರ ಹೇಗೆ ಜಾಣ್ಮೆಯಿಂದ ದೂರವಿಟ್ಟಿದೆ ಎಂಬುದನ್ನು ಸಮಾನ ಮನಸ್ಕ ಗೆಳೆಯರೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ಸಣ್ಣ ಮಟ್ಟದ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ 20 ಲಕ್ಷದ ರೂಪಾಯಿನ ವಹಿವಾಟಿನವರೆಗೆ ವಿನಾಯಿತಿ ಘೋಷಿಸಿದೆ. ಮೇಲ್ನೋಟಕ್ಕೆ ಇದೊಂದು ಒಳ್ಳೆಯ ಕ್ರಮ ಎನಿಸಿದರೂ, ಅದರೊಳಗೆ ಗುಡಿಕೈಗಾರಿಕೆಗಳನ್ನು ನಾಶಗೊಳಿಸುವ ಹುನ್ನಾರ ಅಡಗಿದೆ. ತಾನಿರುವ ಸ್ಥಳದಲ್ಲಿ ಚಪ್ಪಲಿ, ಅಗರಬತ್ತಿ, ಸಾಬೂನು, ಅಥವಾ ಕೃಷಿ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವ ಉತ್ಪಾದಕ 20 ಲಕ್ಷ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಅವನು ಅವುಗಳನ್ನು ನೆರೆಯ ಜಿಲ್ಲೆಗಳಿಗೆ ಅಥವಾ ರಾಜ್ಯಗಳಿಗೆ ತೆರಳಿ ಮಾರಾಟ ಮಾಡಬೇಕು. ಆದರೆ, ನೂತನ ತೆರಿಗೆ ನಿಯಮದ ಪ್ರಕಾರ ಜಿ.ಎಸ್.ಟಿ. ತೆರಿಗೆ ನೊಂದಣಿ ಸಂಖ್ಯೆಯಿಲ್ಲದೆ, ಯಾವುದೇ ರೀತಿಯ  ವಸ್ತುಗಳನ್ನು ರೈಲು ಅಥವಾ ಲಾರಿಗಳಲ್ಲಿ ಪಾರ್ಸಲ್ ಮೂಲಕ ಕಳಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಸರಕು ಸಾಗಾಣಿಕೆ ಸಂಸ್ಥೆಗಳು ಇಂತಹ ವಸ್ತುಗಳನ್ನು ಸ್ವೀಕರಿಸುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಸಣ್ಣ ಉತ್ಪಾದಕ ತನ್ನ ವಸ್ತುಗಳನ್ನು ಮಾರಾಟ ಮಾಡುವ ಬಗೆ ಹೇಗೆ?

ಮಹಾತ್ಮ ಗಾಂಧೀಜಿಯವರ ಆಶಯಕ್ಕೆ ತಕ್ಕಂತೆ ಭಾರತದ ಗುಡಿ ಕೈಗಾರಿಕೆಗಳ ಅಭಿವೃದ್ಧಿಗಾಗಿ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಸಂವಿಧಾನ ಬದ್ಧವಾಗಿ ದೇಶದ ವಿವಿಧೆಡೆ ಖಾದಿ ಗ್ರಾಮೋದ್ಯೋಗ ಕೇಂದ್ರಗಳನ್ನು ತೆರಲಾಯಿತು. ಇವುಗಳ ಮೂಲಕ ತರಭೇತಿ, ಆರ್ಥಿಕ ಸಹಾಯ ನೀಡುವುದರ ಮೂಲಕ ಕೋಟ್ಯಾಂತರ ಸಾಮಾನ್ಯ ಜನರಿಗೆ ಖಾದಿ ಹಾಗೂ ಇತರೆ ಸಣ್ಣ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲಾಯಿತು. ಇದೀಗ  ಜಿ.ಎಸ್.ಟಿ. ತೆರಿಗೆಯಲ್ಲಿ ಖಾದಿಯನ್ನು ಹೊರತು ಪಡಿಸಿ, ಇತರೆ ಉತ್ಪನ್ನಗಳಿಗೆ ಜೇನುತುಪ್ಪ, ಹಪ್ಪಳ, ಉಪ್ಪಿನಕಾಯಿ, ಅಗರಬತ್ತಿ, ಸೋಪು, ಚರ್ಮ ಮತ್ತು ಸೆಣಬು, ತೆಂಗಿನ ನಾರು ಇಂತಹ ವಸ್ತುಗಳಿಂದ ತಯಾರಿಸಿದ ಗೃಹ ಉತ್ಪನ್ನಗಳಿಗೆ ತೆರಿಗೆ ವಿಧಿಸಲಾಗಿದೆ. ಈವರೆಗೆ ಚರಕದ ಹಿಂದೆ ಕುಳಿತು ನೂಲು ನೇಯುವ ಗಾಂಧಿಯ ಚಿತ್ರವನ್ನು ನೋಡಿಕೊಂಡು ಬಂದಿದ್ದ ಭಾರತೀಯರಿಗೆ, ವರ್ಷ ಇದೇ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಕ್ಯಾಲೆಂಡರ್ ಮತ್ತು ದಿನಚರಿ ಪುಸ್ತಕಗಳಲ್ಲಿ ಚರಕದ ಜೊತೆ ಮೋದಿಯ ಚಿತ್ರವನ್ನು ನೋಡುವಂತಾಯಿತು. ದೇಶದ ಪ್ರಧಾನಿಗೆ  ಚರಕದ ಜೊತೆ ಕುಳಿತು ಚಿತ್ರ ತೆಗೆಸಿಕೊಳ್ಳುವಾಗ ಇರುವ ಕಾಳಜಿ, ಅದರ ಉತ್ನನ್ನಗಳ ಕುರಿತು ಏಕಿಲ್ಲ? ಚರಕ ಎನ್ನುವುದು  ಕೇವಲ ಒಂದು ಒಂದು ಕಟ್ಟಿಗೆಯ ಸಾಧನ ಮಾತ್ರವಲ್ಲ, ಅದು ದೇಶದ ಶ್ರಮಿಕರ ಮತ್ತು ಅವರ ಕಾಯಕ ಹಾಗೂ ಅವರ ಬೆವರ ಹನಿಗಳ ಪ್ರತಿಮೆ ಕೂಡ ಹೌದು ಜೊತೆಗೆ ಸ್ವಾಭಿಮನ ಮತ್ತು ಸ್ವತಂತ್ರದ ಸಂಕೇತವೂ ಕೂಡ ಹೌದು.
( ಕರಾವಳಿ ಮುಂಜಾವು ಪತ್ರಿಕೆಯ " ಜಗದಗಲ" ಅಂಕಣ ಬರಹ)

ಶುಕ್ರವಾರ, ಸೆಪ್ಟೆಂಬರ್ 8, 2017

ಇಟ್ಟಿಗೆ ಪವಿತ್ರವಲ್ಲ, ಜೀವ ಪವಿತ್ರ ಎಂದು ನುಡಿದ ಮಹಾನುಭಾವರ ಪುತ್ರಿಯನ್ನ ಹತ್ಯೆಗೈದರು.

ಮೊನ್ನೆ ಸೆಪ್ಟಂಬರ್ ಐದರಂದು ರಾತ್ರಿ ಎಂಟು ಗಂಟೆಗೆ ಸುಮಾರಿಗೆ ಕರ್ನಾಟಕದ ಧೀಮಂತ ಪತ್ರಕರ್ತೆ, ವಿಚಾರವಾದಿಯಾಗಿದ್ದ ಗೌರಿ ಲಂಕೇಶ್ ರವರನ್ನು ಹತ್ಯೆ ಮಾಡುವುದರ ಮೂಲಕ ಮೂಲಭೂತವಾದಿಗಳು ಮತ್ತೇ ತಮ್ಮ ಕ್ರೌರ್ಯವನ್ನು ಮೆರೆದಿದ್ದಾರೆ. ಎರಡು ವರ್ಷಗಳ ಅಂತರದಲ್ಲಿ ಅಂದರೆ, 2015 ಆಗಸ್ಟ್ 30 ರಂದು ನಾಡಿನ ಹಿರಿಯ ಸಂಶೋಧಕ, ವಿಚಾರವಾದಿ ಡಾ.ಎಂ.ಎಂ. ಕಲ್ಬುರ್ಗಿಯವರ ಹತ್ಯೆಯ ನಂತರ ಕರ್ನಾಟಕದಲ್ಲಿ ನಡೆಯುತ್ತಿರುವ ಎರಡನೆಯ ಹೇಯ ಕೃತ್ಯವಿದು. ನೆರೆಯ ಮಹರಾಷ್ಟ್ರದಲ್ಲಿ ನಡೆದ ದಾಬೋಲ್ಕರ್ ಮತ್ತು ಪಾನ್ಸರೆ ಹತ್ಯೆಗಳ ನಂತರ ನಡೆದ ನಾಲ್ಕನೆಯ ವಿಚಾರವಾದಿಗಳ ಹತ್ಯೆ ಇದಾಗಿದೆ. ದುರಂತವೆಂದರೆ, ಈವರೆಗೆ ನಡೆದಿದ್ದ ಮೂವರು ವಿಚಾರವಾದಿಗಳ ಕೊಲೆಗೆ ಸಂಬಂಧಿಸಿದ್ದಂತೆ ವಿಚಾರಣೆ ನಡೆಯುತ್ತಿದೆಯೇ ಹೊರತು ಈವರೆಗೆ ಅಪರಾಧಿಗಳು ಪತ್ತೆಯಾಗಿಲ್ಲ.
ಮೇಲಿಂದ ಮೇಲೆ ಸಂಭವಿಸುತ್ತಿರುವ ಇಂತಹ ಘಟನೆಗಳು ಅಭಿವ್ಯಕ್ತಿಯ ಸ್ವಾತಂತ್ರ್ಯದ ಕತ್ತು ಹಿಸುಕುವಿಕೆಯ ಪ್ರಾಯೋಜಿತ ಕಾರ್ಯಕ್ರಮಗಳಂತೆ ಜರುಗುತ್ತಿವೆ. ಯಾವುದೇ ನಿರ್ಧಿಷ್ಟ ವ್ಯಕ್ತಿ ಅಥವಾ ಸಂಘಟನೆಗಳತ್ತ ನೇರವಾಗಿ ಬೆರಳು ತೋರಿಸಲು ಸಾಧ್ಯವಾಗದಿದ್ದರೂ ಕಳೆದ ಮೂರು ನಾಲ್ಕು ವರ್ಷಗಳಿಂದ ದೇಶದ ಬಲಪಂಥಿಯ ಸಂಘಟನೆಗಳು ಎಲ್ಲಾ ವಿಚಾರವಂತರ ವಿರುದ್ಧ ಸಾರಿರುವ ನೇರ ಸಮರವನ್ನು ಗಮನಿಸಿದರೆ, ಇದು ಧಾರ್ಮಿಕ ಭಯೋತ್ಪಾದನೆಯ ಕೃತ್ಯವಲ್ಲದೆ ಬೇರೇನೂ ಅಲ್ಲ ಎನಿಸುತ್ತಿದೆ.
ಕರ್ನಾಟಕದಲ್ಲಿ ನಡೆದಿರುವ ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಇವರಿಬ್ಬರ ಹತ್ಯೆಯನ್ನು ಕೂಲಂಕುಶವಾಗಿ ಪರಾಮರ್ಶಿಸಿದರೆ, ಇಂತಹ ಹತ್ಯೆಗಳ ಹಿಂದೆ ಬಲು ದೊಡ್ಡದಾದ ಸಂಘಟನೆ ಒಂದು ವ್ಯವಸ್ಥಿತವಾಗಿ ಸಂಚು ರೂಪಿಸುತ್ತಿದ್ದು, ಬಾಡಿಗೆ ಹಂತಕರನ್ನು ನೇಮಕ ಮಾಡಿಕೊಂಡಿದೆ ಎನಿಸುತ್ತಿದೆ. ಇದಕ್ಕಿಂತ ಹೆಚ್ಚಾಗಿ ಹತ್ಯೆಗೆ ನಿರ್ಧಿಷ್ಟ ದಿನಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ರೀತಿಯಲ್ಲಿ ಸಂಘಟನೆ ಅತಿಯಾದ ಬುದ್ಧಿವಂತಿಕೆಯನ್ನು ತೋರುತ್ತಿದೆ. ಉದಾಹರಣೆಗೆ ಕಲ್ಬುರ್ಗಿಯವರ ಹತ್ಯೆಯಾದ ದಿನಾಂಕವನ್ನು ಗಮನಿಸಿ. ಆದಿನ ಅಂದರೆ, 30-8-2015 ರಂದು ಹುಬ್ಬಳ್ಳಿ-ಧಾರವಾಡ ಮಹಾನಗರಗಳ ಪೋಲಿಸ್ ಆಯುಕ್ತರಾಗಿದ್ದ ಶಿವಕುಮಾರ್ ಎಂಬುವರು ನಿವೃತ್ತರಾಗುತ್ತಿದ್ದರು. ದಿನ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಪಾಂಡುರಂಗ ರಾಣೆಯವರು ಬೆಳಿಗ್ಗೆ ಹತ್ತು ಗಂಟೆಗೆ ಅಧಿಕಾರ ಸ್ವೀಕರಿಸಬೇಕಿತ್ತು. ಬೆಳಿಗ್ಗೆ ಎಂಟು ಗಂಟೆಗೆ ಸಮಾರಿಗೆ ಕಲ್ಬುರ್ಗಿಯವರ ಹತ್ಯೆ ನಡೆಯಿತು. ಹೊಸ ಅಧಿಕಾರಿಗೆ ಮಹಾನಗರದ ಮಾಹಿತಿ ಇಲ್ಲದ ಸಂದರ್ಭದಲ್ಲಿ ಹತ್ಯೆ ನಡೆಯಿತು. ಹಿಂದೆ ಅವಳಿ ನಗರದಲ್ಲಿ ಪೊಲೀಸ್ ಉಪ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದ, ಕಥೆಗಾರ ಬೆಸಗರಹಳ್ಳಿ ರಾಮಣ್ಣನವರ ಪುತ್ರ ಹಾಗೂ ಬೆಳಗಾವಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಬಿ.ಆರ್.ರವಿಕಾಂತೇಗೌಡ ಇವರು ಧಾರವಾಡಕ್ಕೆ ಆಗಮಿಸಿ, ಕಲ್ಬುರ್ಗಿಯವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾಯಿತು. ಈಗ ನಡೆದಿರುವ ಗೌರಿ ಲಂಕೇಶ್ ಅವರ ಹತ್ಯೆಗೆ ಆಯ್ಕೆ ಮಾಡಿಕೊಂಡಿರುವ ದಿನಾಂಕದಲ್ಲಿಯೂ ಸಹ ಇಂತಹದ್ದೇ ಹುನ್ನಾರ ಅಡಗಿರುವ ಹಾಗೆ ಕಾಣುತ್ತಿದೆ. ಬಿ.ಜೆ.ಪಿ. ಪಕ್ಷ ಮಂಗಳೂರಿನಲ್ಲಿ ಸೆಂಪ್ಟಂಬರ್ 7 ರಂದು ಆಯೋಜಿಸಿದ್ದ ಬೈಕ್ ರ್ಯಾಲಿಯ ಮೇಲೆ ನಿಷೇದ ಹೇರಿ ರಾಜ್ಯದ ಪೊಲೀಸರು ಸೆಪ್ಟಂಬರ್ 5 ರಿಂದ ರಾಜ್ಯಾದ್ಯಂತ ಬಂದೂಬಸ್ತ್ ಕಾರ್ಯಕ್ರಮದಲ್ಲಿ ತೊಡಗಿರುವಾಗ ಗೌರಿಯವರ ಹತ್ಯೆಯಾಗಿದೆ. ಎರಡೂ ಹತ್ಯೆಗಳಲ್ಲಿ ಅನೇಕ ರೀತಿಯ ಸಾಮ್ಯತೆಗಳು ಕಂಡು ಬರುತ್ತಿವೆ. ಕಲ್ಬುರ್ಗಿ ಹಂತಕರು ಮನೆಯ ಬಾಗಿಲನ್ನು ತಟ್ಟಿ, ಅವರ ಶ್ರೀಮತಿಯವರ ಜೊತೆಸರ್ ಅವರನ್ನು ನೋಡಬೇಕಿತ್ತುಎಂದು ಕನ್ನಡದಲ್ಲಿ ಮಾತನಾಡಿದ್ದಾರೆ. ಮೊನ್ನೆಯ ಗೌರಿಯವರ ಹತ್ಯೆ ಸಂದರ್ಭದಲ್ಲಿ ಮನೆಯ ಗೇಟ್ ತೆರೆಯಲು ಹೊರಟ ಅವರನ್ನು ಮೇಡಂ ಎಂದು ಸಂಬೋಧಿಸುವುದರ ಮೂಲಕ ಅವರು ಹಿಂತಿರುಗಿ ನೋಡುವಂತೆ ಮಾಡಿ, ಅವರ ಎದೆಗೆ ಮತ್ತು ಹಣೆಗೆ ಹತ್ತಿರದಿಂದ ಗುಂಡಿಟ್ಟಿದ್ದಾರೆ. ತೀರಾ ಹತ್ತಿರದಿಂದ ಕಲ್ಬುರ್ಗಿಯವರ ಹಣೆಗೆ ಗುಂಡಿಟ್ಟ ರೀತಿಯಲ್ಲಿ ಗೌರಿಯವರಿಗೂ ಹಣೆಗೆ ಗುಂಡಿಟ್ಟು ಕೊಲ್ಲಲಾಗಿದೆ. ಎರಡೂ ಹತ್ಯೆಗಳು ಒಂದು ಪ್ರಬಲವಾದ ಸಂಘಟನೆಯೊಂದರಿಂದ ವ್ಯವಸ್ಥಿತವಾಗಿ ನಡೆದಿದೆ ಎಂಬುದಕ್ಕೆ ಮೇಲಿನ ಘಟನೆಗಳು ನಮಗೆ ಸಾಕ್ಷ್ಯವನ್ನು ಒದಗಿಸುತ್ತವೆ .ಆದರೆ, ಕೈಯಲ್ಲಿ ಹಿಡಿದು ಓದುವುದು ಇರಲಿ, ಮಕ್ಕಳ ಮುಕುಳಿ ಒರೆಸಲು ನಾಲಾಯಕ್ಕಾದ ಕನ್ನಡದ ಕೆಲವು ದಿನಪತ್ರಿಕೆಗಳು ಇದು ನಕ್ಸಲಿಯರ ಕೃತ್ಯ ಎಂದು ಬಿಂಬಿಸುತ್ತಾ, ತನಿಖೆಯ ಜಾಡು ತಪ್ಪಿಸುವುದರ ಜೊತೆಗೆ ಕೆಲವು ಸಂಘಟನೆಗಳ  ಪರ ವಕಾಲತ್ತು ವಹಿಸಲು ಮುಂದಾಗಿವೆ.
ಗೌರಿ ಲಂಕೇಶ್ ಲಂಕೇಶ್ ಜೊತೆ ನನಗೆ  ಆಪ್ತವಾದ ಯಾವುದೇ ರೀತಿಯ ಒಡನಾಟವಿರಲಿಲ್ಲ. ಅವರು ಲಂಕೇಶ್ ನಿಧಾನಾನಂತರ ಪತ್ರಿಕೆಯನ್ನು ಆರಂಭಿಸಿದ ನಂತರ ಅಪರೂಪಕ್ಕೆ ದೂರವಾಣಿಯಲ್ಲಿ ಮಾತ್ರ ಮಾತನಾಡುತ್ತಿದ್ದೆ. ಮಂಡ್ಯದ ಪ್ರೊ.ಹೆಚ್. ಎಲ್. ಕೇಶವಮೂರ್ತಿಯವರ ಮೂಲಕ ಪರಿಚಯವಾದ ನಂತರ  ಧಾರವಾಡ ಸಂಸದ ಪ್ರಹ್ಲಾದ್ ಜೋಷಿ ಹಾಗೂ ಸಹಚರರು ಗೌರಿ ವಿರುದ್ಧ ಹಾಕಿದ್ದ ಮಾನನಷ್ಟ ಮೊಕೊದ್ದಮೆಯ ವಿಚಾರಣೆಗಾಗಿ ಬರುವ ಮುನ್ನ ಫೋನ್ ಮಾಡುತ್ತಿದ್ದರು. ಹುಬ್ಬಳ್ಳಿಯಲ್ಲಿ ನಮ್ಮ ಉದಯ ಟಿ.ವಿ. ಪ್ರಾದೇಶಿಕ ಕಛೇರಿ ಇರುವ ಕಟ್ಟಡದಲ್ಲಿರುವ ಹೊಟೇಲ್ ಮೆಟ್ರೊಪಾಲಿಸ್ ನಲ್ಲಿ ಉಳಿದುಕೊಳ್ಳುತ್ತಿದ್ದರು. ನಾನು ಎಷ್ಟೋ ಬಾರಿ ಪ್ರವಾಸಿ ಮಂದಿರದಲ್ಲಿ ಕೊಠಡಿ ಬುಕ್ ಮಾಡಿದರೆ, ಅಲ್ಲಿಗೆ ಹೋಗಲು ನಿರಾಕರಿಸಿ ಹೊಟೇಲ್ ನಲ್ಲಿ ಉಳಿದುಕೊಳ್ಳುತ್ತಿದ್ದರು. ತೀರಾ ಸ್ವಾಭಿಮಾನಿ ಹೆಣ್ಣು ಮಗಳಾದ ಅವರು ವ್ಯಯಕ್ತಿಕವಾಗಿ ಯಾರೊಬ್ಬರಿಗೂ ಅನಾವಶ್ಯಕವಾಗಿ ತೊಂದರೆ ಕೊಡಲು ಇಷ್ಟಪಡುತ್ತಿರಲಿಲ್ಲ. ಜೊತೆಗೆ ಯಾವುದೇ ರೀತಿಯ ನೆರವನ್ನು ಪಡೆಯಲು ಇಷ್ಟ ಪಡುತ್ತಿರಲಿಲ್ಲ. “ನೀವು ನನಗೆ ಪತ್ರಕರ್ತೆ ಗೌರಿ ಲಂಕೇಶ್ ಅಲ್ಲ, ನಮ್ಮ ಮೇಷ್ಟ್ರು ಮಗಳು ಮಾತ್ರ, ಅವರ ಋಣ ನನ್ನ ತಲೆಮಾರಿನ ಮೇಲೆ ಅಗಾಧವಾಗಿದೆ, ಯಾವುದೇ ಸಂಕೋಚವಿಲ್ಲದೆ ನೆರವು ಕೇಳಿಎಂದಾಗ ಮಾತ್ರ ಸ್ವಲ್ಪ ಹಗುರವಾಗುತ್ತಿದ್ದರು. ಭಾರತದ ನಕ್ಸಲ್ ಇತಿಹಾಸ ಕುರಿತು ನಾನು ಬರೆದಎಂದೂ ಮುಗಿಯದ ಯುದ್ಧಕೃತಿಗಾಗಿ ಕರ್ನಾಟಕದ ಸಾಕೇತ್ ರಾಜನ್ ಕುರಿತು ಅನೇಕ ಮಾಹಿತಿಗಳನ್ನು ಅವರು ನನ್ನೊಂದಿಗೆ ಹಂಚಿಕೊಂಡಿದ್ದರು. ಗೌರಿ ಮತ್ತು ಸಾಕೇತ್ ರಾಜನ್ ದೆಹಲಿಯಲ್ಲಿ ಮಾಸ್ ಕಮ್ಯೂನಿಕೇಶನ್  ಕುರಿತು ಒಟ್ಟಿಗೆ ಅಧ್ಯಯನ ಮಾಡಿದ್ದರುಸಾಕೇತ್ ಒಂದು ವರ್ಷ ಸೀನಿಯರ್ ಆಗಿದ್ದರು.
ಗೌರಿಯವರ ಬದುಕಿನಲ್ಲಿ ಅನೇಕ ಅನಿರೀಕ್ಷಿತ ಬದಲಾವಣೆಗಳಾಗಿ ಅವರೊಳಗೆ ಪಕ್ವತೆಯ ಮಾತೃ ಹೃದಯವೊಂದು ಸೃಷ್ಟಿಯಾಗಿತ್ತು. ಅಮೇರಿಕಾದ ವಾಷಿಂಗ್ಟನ್ ನಗರದಲ್ಲಿ ಇಂಡಿಯನ್ ಎಕ್ಸ್ಪ್ರಸ್ ಪತ್ರಿಕೆಯ ವಿಶೇಷ ವರದಿಗಾರರಾಗಿದ್ದ ಚಿದಾನಂದ ರಾಜಘಟ್ಟ ಇವರೊಂದಿಗಿನ ವೈವಾಹಿಕ ಬದುಕಿನ ಸಂಬಂಧ ಮುರಿದು ಬಿದ್ದ ನಂತರ, ವಾಪಸ್ ಭಾರತಕ್ಕೆ ಬಂದು ಇಂಗ್ಲೀಷ್ ದಿನಪತ್ರಿಕೆಗಳಲ್ಲಿ ವರದಿಗಾರ್ತಿಯಾಗಿ ಹೆಸರು ಮಾಡಿದ್ದರು. ತಂದೆ ಲಂಕೇಶ್ ನಿಧನಾನಂತರ ಪತ್ರಿಕೆಯ ಜವಾಬ್ದಾರಿ ವಹಿಸಿಕೊಂಡು, ಕನ್ನಡದಲ್ಲಿ ಬರೆಯುವದನ್ನು, ಚಿಂತಿಸುವುದನ್ನು ರೂಢಿಸಿಕೊಂಡರು. ಪತ್ರಿಕೆಯ ಜವಬ್ದಾರಿ ವಹಿಸಿಕೊಂಡ ಅಲ್ಪ ಕಾಲದಲ್ಲಿ ಸಹೋದರನೊಂದಿಗೆ ಕಲಹ ಉಂಟಾದ ಪರಿಣಾಮ,  ಗೌರಿ ಲಂಕೇಶ್ ಪತ್ರಿಕೆ ಹೆಸರಿನಲ್ಲಿ  ಹೊಸ ಪತ್ರಿಕೆಯನ್ನು ಆರಂಭಿಸಿ, ಅಪ್ಪನ ಆದರ್ಶವನ್ನು, ಚಿಂತನೆಗಳನ್ನು ತಮ್ಮ ಪತ್ರಿಕೆಯಲ್ಲಿ ಮುಂದುವರಿಸುವುದರ ಮೂಲಕ ಕರ್ನಾಟಕದ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಬಹಳ ಪ್ರಮುಖ ಪಾತ್ರವಹಿಸಿದರು. ನಮ್ಮ ನಾಡಿನ ದುರಂತವೆಂದರೆ, “ಇಟ್ಟಿಗೆ ಪವಿತ್ರವಲ್ಲ, ಜೀವ ಪವಿತ್ರ’ ಎಂದು ನುಡಿದ ಲಂಕೇಶ್ ರವರ ಪುತ್ರಿ ಗೌರಿ ಹಂತಕರ ಗುಂಡಿಗೆ ಬಲಿಯಾದದ್ದು ನೋವಿನ ಸಂಗತಿ.
ಗೌರಿ ಲಂಕೇಶ್ ಅವರನ್ನು ನಕ್ಸಲಿಯರ ಬೆಂಬಲಿಗರು ಎಂದು ಬಲಪಂಥಿಯರು ಬೊಬ್ಬೆ ಹೊಡೆಯುತ್ತಿದ್ದಾರೆಆದರೆ, ಗೌರಿಯವರು ಎಂದೂ ಹಿಂಸೆಯನ್ನು ಬೆಂಬಲಿಸಿದವರಲ್ಲ. ನಕ್ಸಲಿಯರ ಗುರಿಗಳ ಬಗ್ಗೆ ಅನುಕಂಪವಿದ್ದ ಗೌರಿಯವರು ಹೋರಾಟವನ್ನು ಹಿಂಸೆಯ ಮೂಲಕ ಮುಂದುವರಿಸುವುದರ ಬದಲು ಅರಣ್ಯದಿಂದ ಹೊರಬಂದು, ಬಂದೂಕ ತ್ಯೆಜಿಸಿ, ಸಮಾಜದ ಮುಖ್ಯವಾಹಿನಿಯಲ್ಲಿದ್ದುಕೊಂಡು ಮುಂದುವರಿಸಬೇಕು ಎಂಬುದು ಅವರ ನಿಲುವಾಗಿತ್ತು. ಕಾರಣಕ್ಕಾಗಿ ಅನೇಕ ನಕ್ಸಲ್ ಹೋರಾಟಗಾರರನ್ನು ಮನವೊಲಿಸಿ ಸಮಾಜದ ಮುಖ್ಯವಾಹಿನಿಗೆ ಕರೆತಂದರು. ಕರ್ನಾಟಕದಲ್ಲಿ ಮತೀಯವಾದ ವಿಕೃತ ರೂಪ ತಾಳುತ್ತಾ ಬೆಳೆಯುತ್ತಿದ್ದ ಸಂದರ್ಭದಲ್ಲಿ ಹದಿನೈದು ವರ್ಷಗಳ ಹಿಂದೆ ಕೋಮು ಸೌಹಾರ್ಧ ವೇದಿಕೆಯನ್ನು ಹುಟ್ಟು ಹಾಕಿ ಹಗಲು ರಾತ್ರಿ ಶ್ರಮಿಸಿದರು. ಇತ್ತೀಚೆಗಿನ ವರ್ಷಗಳಲ್ಲಿ ಪದೇ ಪದೇ ಆರೋಗ್ಯ ಅವರಿಗೆ ಕೈ ಕೊಡುತ್ತಿತ್ತು. ಆದರೆ, ಯಾವುದೇ ಕಾರಣಕ್ಕೂ ಒಪ್ಪಿಕೊಂಡ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಕಳೆದ ಪೆಬ್ರವರಿ ತಿಂಗಳಿನಲ್ಲಿ ಹಂಪಿಯ ಕನ್ನಡ ವಿಶ್ವ ವಿದ್ಯಾನಿಲಯದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ನಡೆದ ನನ್ನ ಮತ್ತು ಅವರ ಭೇಟಿಯು ಕೊನೆಯ ಭೇಟಿಯಾಯಿತು. ಕವಿಯಿತ್ರಿಯರಾದ ಹೆಚ್,ಎಲ್, ಪುಷ್ಪಾ ಮತ್ತು ಡಾ.ಕೆ. ಷರೀಫಾ ಜೊತೆ ಬಂದಿದ್ದ ಗೌರಿಯವರು ಅನಾರೋಗ್ಯದಿಂದ ತೀರಾ ಸೊರಗಿದ್ದರು.
ಇಂತಹ ಅನಾರೋಗ್ಯದ ನಡೆವೆಯೂ ಸಹ ಅವರು ಇತ್ತೀಚೆಗೆ ದೆಹಲಿಗೆ ಹೋಗಿ ಅಲ್ಲಿನ ಜವಹರಲಾಲ್ ನೆಹರೂ ವಿ.ವಿ.. ವಿದ್ಯಾರ್ಥಿಗಳಾದ ಮೇವೇಶ್ ಜಿಗ್ನಾನಿ, ಶೈಹ್ಲಾ ರಷೀದ್, ಕನಯ್ಯಾ ಇವರನ್ನು ಭೇಟಿ ಮಾಡಿ, ಇವರು ನನ್ನ ದತ್ತು ಮಕ್ಕಳು ಎಂದು ಘೋಷಿಸುವುದರ ಮೂಲಕ  ಅವರಿಗೆ ನೈತಿಕ ಬೆಂಬಲ ಸೂಚಿಸಿ ಬಂದಿದ್ದರು. ಗೌರಿ ಲಂಕೇಶ್ ಅವರ ದೆಹಲಿ ಭೇಟಿ ಮತ್ತು ವಿದ್ಯಾರ್ಥಿ ಸಂಘಟನೆಗೆ ಅವರು ನೀಡಿದ ಬೆಂಬಲ  ಹತ್ಯೆಗೆ ಕಾರಣವಾಗಿರಬಹುದೆ? ಅನುಮಾನ ನನ್ನನ್ನು ಸದಾ ಕಾಡುತ್ತಿದೆ. ಆದರೆ, ಬಂದೂಕಿನ ಮೂಲಕ ಧ್ವನಿ ಅಡಗಿಸಲು ಹೊರಟ ಮತಾಂಧರರು ಒಂದು ಸತ್ಯವನ್ನು ಅರ್ಥಮಾಡಿಕೊಳ್ಳಬೇಕಿದೆ. ವ್ಯಕಿಯನ್ನು ಮಾತ್ರ ಅವರು ಕೊಲ್ಲಬಲ್ಲರು ಆದರೆಅವರು ನಂಬಿದ್ದ ತತ್ವ ಸಿದ್ಧಾಂತಗಳನ್ನು ಕೊಲ್ಲಲಾಗದು. ಗಾಂಧಿಯನ್ನು ಹತ್ಯೆ ಮಾಡಲಾಯಿತೇ ವಿನಃ ಅವರ ನಂಬಿಕೆ, ಸಿದ್ಧಾಂತಗಳನ್ನು ಹತ್ಯೆ ಮಾಡಲಾಗಲಿಲ್ಲ. ಅವುಗಳು ಹಲವು ರೂಪದಲ್ಲಿ ಜನಮಾನಸದಲ್ಲಿ ಬೆಳೆಯುತ್ತಾ ಹೋಗುತ್ತವೆ.