ಗುರುವಾರ, ನವೆಂಬರ್ 23, 2017

ಕನ್ನಡ ಪತ್ರಿಕೋದ್ಯಮಕ್ಕೆ ಘನತೆ ತಂದಿತ್ತ ರಾಜಶೇಖರ ಕೋಟಿಯವರ ನೆನಪುಗಳು

.
ಕನ್ನಡದ ರಾಜ್ಯ ಮಟ್ಟದ  ದಿನಪತ್ರಿಕೆಗಳಿಗೆ ಸಮಾನವಾಗಿ ಪ್ರಾದೇಶಿಕ ಮಟ್ಟದಲ್ಲಿ ಆಂದೋಲನ ದಿನಪತ್ರಿಕೆಯನ್ನು ಹುಟ್ಟು ಹಾಕಿ ನಾಲ್ಕು ದಶಕಗಳ ಪತ್ರಿಕೆಯನ್ನು ಮುನ್ನೆಡೆಸಿ, ಪತ್ರಿಕೆಗೆ ಮತ್ತು ಪತ್ರಿಕೋದ್ಯಮಕ್ಕೆ ಘನತೆಯನ್ನು ತಂದುಕೊಟ್ಟ ರಾಜಶೇಖರ ಕೋಟಿಯವರು ಕಳೆದ ಗುರುವಾರ ಬೆಳಗಿನ ಜಾವ ನಮ್ಮನ್ನಗಲಿದ್ದಾರೆ. ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಜನತೆಯ ಮತ್ತು ಅಲ್ಲಿನ ಸಾಮಾಜಿಕ ಆಂದೋಲನದ ಭಾಗವಾಗವಾಗಿದ್ದ ಆಂದೋಲನ ಪತ್ರಿಕೆ ಹಾಗೂ ಅದರ ಸಂಪಾದಕ ರಾಜಶೇಖರ ಕೋಟಿಯವರನ್ನು ನಾವ್ಯಾರೂ  ಮರೆಯುವಂತಿಲ್ಲ.
1970 ದಶಕದಲ್ಲಿ ಧಾರವಾಡವನ್ನು ತ್ಯೆಜಿಸಿ ಮೈಸೂರಿಗೆ ಆಗಮಿಸಿದ ಕೋಟಿಯವರು ಆಂದೋಲನ ಹೆಸರಿನಲ್ಲಿ ವಾರಪತ್ರಿಕೆಯನ್ನು ಆರಂಭಿಸಿದರು. ಇದಕ್ಕೂ ಮುನ್ನ ಅವರು ಹುಬ್ಬಳ್ಳಿ ನಗರದಲ್ಲಿ ಪ್ರಕಟವಾಗುತ್ತಿದ್ದ ಪಾಟೀಲ್ ಪುಟ್ಟಪ್ಪನವರ ಪ್ರಪಂಚ ವಾರಪತ್ರಿಕೆಯಲ್ಲಿ ಸ್ವಲ್ಪ ಕಾಲ ಉಪಸಂಪಾದಕರಾಗಿಯೂ ಸಹ  ಸೇವೆ ಸಲ್ಲಿಸಿದ್ದರು. ಮೈಸೂರಿಗೆ ಬರುವಾಗ ಒಂದಿಷ್ಟು ಕನಸುಗಳನ್ನು ಮತ್ತು ಬದ್ಧತೆಯನ್ನು ಜೊತೆಗೆ ವೈಚಾರಿಕತೆಯ ಮನಸ್ಸನ್ನು ಹೊತ್ತು ತಂದಿದ್ದ ಸಮಾಜವಾದಿ ಮನಸ್ಸಿನ ರಾಜಶೇಖರ ಕೋಟಿಯವರೊಂದಿಗೆ  ಡಾ.ಯು.ಆರ್.ಅನಂತಮೂರ್ತಿ, ತೇಜಸ್ವಿ, ಕಡಿದಾಳ್ ಶಾಮಣ್ಣ, ದೇವನೂರು ಮಹಾದೇವ, ಶ್ರೀಕೃಷ್ಣ ಆಲನಹಳ್ಳಿ ಹಾಗೂ ಕೆ.ಎನ್. ಶಿವತಿರ್ಥನ್, ಡಾ.ಬೆಸಗರಹಳ್ಳಿರಾಮಣ್ಣ, ಪ್ರೊ.ಹೆಚ್.ಎಲ್.ಕೇಶವಮೂರ್ತಿ, ಪ್ರೊ.ಕಾಳೇಗೌಡ ನಾಗವಾರ, ಪ್ರೊ.ಶಿವರಾಮ ಕಾಡನಕುಪ್ಪೆ, ಪ್ರೊ.ಹಿ.ಶಿ.ರಾಮಚಂದ್ರಗೌಡ, ಪ್ರೊ.ಕೆ.ರಾಮದಾಸ್ ಮತ್ತು ಪ್ರೊ.ಜಿ.ಹೆಚ್.ನಾಯಕ್ ಹೀಗೆ ಅನೇಕ ಪ್ರಗತಿಪರ ಲೇಖಕರು  ಕೈ ಜೋಡಿಸಿ ಬೆಂಬಲವಾಗಿ ನಿಂತರು. ಅದಕ್ಕೊಂದು ಪ್ರಬಲವಾದ ಕಾರಣವೂ ಇತ್ತು

1973 ವರ್ಷದ ಕೊನೆಯ ಭಾಗದಲ್ಲಿ ಅರಸು ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದ ಬಿ.ಬಸವಲಿಂಗಪ್ಪನವರು ಮೈಸೂರು ನಗರದಲ್ಲಿ ನಡೆದ ಸಮಾರಂಭವೊಂದರಲ್ಲಿಕನ್ನಡ ಸಾಹಿತ್ಯದಲ್ಲಿ ಬೂಸಾ ತುಂಬಿಕೊಂಡಿದೆಎಂಬ  ಹೇಳಿಕೆ ನೀಡುವುದರ ಮೂಲಕ ವಿವಾದಕ್ಕೆ ಒಳಗಾದರು. ಮೈಸೂರಿನಿಂದ ಪ್ರಕಟವಾಗುತ್ತಿದ್ದ ಬಹುತೇಕ ಸ್ಥಳಿಯ ವಾರಪತ್ರಿಕೆಗಳು ಮತ್ತು ದಿನಪತ್ರಿಕೆಗಳು ಪಟ್ಟಭದ್ರ ಹಿತಾಶಕ್ತಿಗಳ ಹಾಗೂ ಮೇಲ್ಜಾತಿಯವರ ಮುಖವಾಣಿಗಳಾಗಿದ್ದವು. ಇಂತಹ ಸಮಯದಲ್ಲಿ ಪತ್ರಿಕೆಯೊಂದನ್ನು ಆರಂಭ ಮಾಡುವ ಕನಸು ಹೊತ್ತು ಉತ್ತರ ಕರ್ನಾಟಕದ ಸಾಂಸ್ಕತಿಕ ನಗರ ಧಾರವಾಡದಿಂದ ದಕ್ಷಿಣ ಕರ್ನಾಟಕ ಸಾಂಸ್ಕತಿಕ ನಗರ ಮೈಸೂರಿಗೆ ಬಂದ ರಾಜಶೇಖರ ಕೋಟಿಯವರನ್ನು ಮೈಸೂರು ನಗರದ ಎಲ್ಲಾ ಪ್ರಗತಿಪರರು ಮತ್ತು ಬರಹಗಾರರು ತೆರೆದ ಹೃದಯದಿಂದ ಸ್ವಾಗತಿಸಿದರಲ್ಲದೆ; ಅವರಿಗೆ ನೈತಿಕವಾಗಿ ಬೆಂಗಾವಲಾಗಿ ನಿಂತರು. ಅಂದಿನಿಂದ ಅವರ ಕೊನೆಯ ಉಸಿರು ಇರುವ ತನಕ ಮೈಸೂರು ನಗರ ರಾಜಶೇಖರ ಕೋಟಿಯವರ ಕರ್ಮಭೂಮಿಯಾಯಿತು.
ಮೇಲ್ನೋಟಕ್ಕೆ ಉಡುಪಿಯ ಅಷ್ಟ ಮಠಗಳಿಂದ ತಪ್ಪಿಸಿಕೊಂಡು ಬಂದ ವಟುವಿನಂತೆ ಕಾಣುತ್ತಿದ್ದ  ರಾಜಶೇಖರ ಕೋಟಿಯವರು ತಣ್ಣನೆಯ ಸ್ವಭಾವದಂತೆ ಕಾಣುತ್ತಿದ್ದರೂ ಸಹ, ಒಳಗೆ ಕ್ರಾಂತಿಯ ಕಿಡಿಯನ್ನು ಹೊತ್ತಿಸಿಕೊಂಡು ಉರಿಯುತ್ತಿದ್ದರು. ಕಾಯಾ,ವಾಚಾ, ಮನಸ್ಸಾ ದಕ್ಷಿಣ ಕನಾಟಕದ ಜಿಲ್ಲೆಗಳ  ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕತಿಕ ವಲಯಗಳಲ್ಲಿ ಬದಲಾವಣೆಯ ಕನಸು ಹೊತ್ತು ದುಡಿದರು. ಪತ್ರಿಕೆಯನ್ನು ದಲಿತರು, ದಮನಿತರು, ಶೋಷಿತರು ಹಾಗೂ ನೊಂದ ಮಹಿಳೆಯರ ಧ್ವನಿಯಾಗುವಂತೆ ಮಾಡಿದರುಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳ ಪ್ರತಿ ಹಳ್ಳಿಗಳ ಬವಣೆಗಳನ್ನು ಮತ್ತು ಅಲ್ಲಿನ ಕುಂದು ಕೊರತೆಯನ್ನು ನಿರಂತರವಾಗಿ ಎತ್ತಿ ತೋರಿಸುವುದರ ಮೂಲಕ ಜನಪತ್ರತಿನಿಧಿಗಳು ಮತ್ತು ಸರ್ಕಾರಗಳ ಪಾಲಿಗೆ ಎಚ್ಚರಿಕೆ ಗಂಟೆಯಾಗಿ ಬದುಕಿದರು. ಇವೋತ್ತಿಗೂ ನಾಲ್ಕು ದಶಕಗಳ ಆಂದೋಲನ ದಿನಪತ್ರಿಕೆಯ ಪುಟಗಳನ್ನು ತೆರೆದು ನೋಡಿದರೆ, ದಲಿತ ಚಳುವಳಿ ಮತ್ತು ರೈತ ಚಳುವಳಿಯ ಸಂದರ್ಭದಲ್ಲಿ ಪತ್ರಿಕೆಯು ವಹಿಸಿರುವ ನಿರ್ಣಾಯಕ ಪಾತ್ರ ಹಾಗೂ ವರದಿಗಳಿಗೆ ನೀಡಿರುವ ಆದ್ಯತೆ ಇವೆಲ್ಲವೂ ಪತ್ರಿಕೆ ಮತ್ತು ಪತ್ರಿಕೆಯ ಸಂಪಾದಕನಿಗೆ ಇದ್ದ ಸಾಮಾಜಿಕ ಬದ್ಧತೆಯನ್ನು ನಮಗೆ ಎತ್ತಿ ತೋರಿಸುತ್ತವೆ.

ಬಂಡವಾಳಶಾಹಿ ಜಗತ್ತಿನ ಮುಖವಾಣಿಗಳಂತೆ ಅಥವಾ ಧ್ವನಿವರ್ಧಕಗಳಂತೆ ಕಾರ್ಯನಿರ್ವಹಿಸುತ್ತಿರುವ ಇಂದಿನ  ದಿನಪತ್ರಿಕೆಗಳಿಗೆ ಪರ್ಯಾಯವಾಗಿ ಕನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಸೂರಿನ ಆಂದೋಲನ, ಕಾರವಾರದ ಕರಾವಳಿ ಮುಂಜಾವು, ಹಾಸನದಿಂದ ಪ್ರಕಟವಾಗುವ ಜನತಾ ಮಾಧ್ಯಮ ಮತ್ತು ರಾಯಚೂರಿನ ಸುದ್ದಿಮೂಲ ದಿನಪತ್ರಿಕೆಗಳು ನಿಜಕ್ಕೂ ಕನ್ನಡಿಗರ ಹೆಮ್ಮೆಯ ಪ್ರತೀಕವಾಗಿವೆ. ಪತ್ರಿಕೆಗಳ ಸಂಪಾದಕರಾದ ರಾಜಶೇಖರ ಕೋಟಿಯವರಾಗಲಿ, ಕರಾವಳಿ ಮುಂಜಾವಿನ ಗಂಗಾಧರ ಹಿರೇಗುತ್ತಿಯಾಗಲಿ, ಜನತಾ ಮಾಧ್ಯವi ಮಂಜುನಾಥ ದತ್ತ ಮತ್ತು ವೆಂಕಟೇಶ್ ಮೂರ್ತಿ ಅಥವಾ ಸುದ್ದಿಮೂಲದ ಬಸವರಾಜಸ್ವಾಮಿ ಇವರೆಲ್ಲರೂ ಪತ್ರಿಕೆಯನ್ನು ಅಸಹಾಯಕ ಸಮುದಾಯದ ಧ್ವನಿಯಂತೆ ಬಳಸಿಕೊಂಡರೇ ಹೊರತು, ಉಳ್ಳವರ ಇಲ್ಲವೆ, ಪಟ್ಟ ಭದ್ರರ ಪದತಲದಲ್ಲಿಟ್ಟು ವರಿಗೆ ಶರಣಾಗಲಿಲ್ಲ. ಹಾಗಾಗಿ ಇಂತಹ ಪ್ರಾಮಾಣಿಕ ಪತ್ರಕರ್ತರ ಬದ್ಧತೆ ಮತ್ತು ಕಾಳಜಿಯಿಂದಾಗಿ ಕೆಟ್ಟು ಕೆರಹಿಡಿದು ಹೋಗಿರುವ ಕನ್ನಡ ಪತ್ರಿಕೋದ್ಯಮಕ್ಕೆ ಇನ್ನೂ ಒಂದಿಷ್ಟು ಘನತೆ ಇನ್ನೂ ಉಳಿದುಕೊಳ್ಳಲು ಸಾಧ್ಯವಾಗಿದೆ.

ಒಬ್ಬ ಶ್ರೀ ಸಾಮಾನ್ಯ ಕೂಡ ಪತ್ರಿಕೆಯನ್ನು ಸ್ಥಾಪಿಸಿ ಸಮಾಜದಲ್ಲಿ ಬದಲಾವಣೆ ತರಬಲ್ಲ ಎಂದು ತೋರಿಸಿಕೊಟ್ಟವರು ಕೆಲವೇ ಮಂದಿ ಮಾತ್ರ ಇದ್ದಾರೆ. ಆದರೆ, ಪತ್ರಿಕೆಯ ಯಶಸ್ಸಿನಿಂದ ಅನಿರೀಕ್ಷಿತವಾಗಿ ಸಿಕ್ಕ ಹಣ, ಆಸ್ತಿ ಮತ್ತು ಕೀರ್ತಿಯಿಂದ ತಲೆ ತಿರುಗಿ ಹೋಗಿ  ನೈತಿಕವಾಗಿ ದಿವಾಳಿಯೆದ್ದು ಎದ್ದು ಹೋಗಿರುವ ಸಂಪಾದಕರ ಪಟ್ಟಿ ಮಾತ್ರ ಉದ್ದವಿದೆ. ಇಂತಹವರ ನಡುವೆ ರಾಜಶೇಖರ ಕೋಟಿಯವರು ತಾನು ನಂಬಿದ ತತ್ವ ಸಿದ್ಧಾಂತಗಳನ್ನು ಬಲಿಕೊಡದೆ ಅಥವಾ ಎಲ್ಲಿಯೂ ಧ್ವನಿ ಏರಿಸಿ ಮಾತನಾಡದೆ, ಒಳಗೊಳಗೆ ಕುದಿಯುದ ತಣ್ಣನೆಯ ಭಾವದ ಅಶಾಂತ ಸಂತನಂತೆ ಬದುಕಿಬಿಟ್ಟರು. ಕೆಲವು ಮುಖ್ಯ ಸಮಾರಂಭಗಳಿಗೆ ಖುದ್ದು ಹಾಜರಾಗಿ ನಂತರ ತಾವೇ ಕುಳಿತು ವರದಿ ಬರೆಯುವ ಪ್ರವೃತ್ತಿಯನ್ನು ಅವರು ನಿಲ್ಲಿಸಿರಲಿಲ್ಲ. ಕಳೆದ ಐದು ತಿಂಗಳ ಮೈಸೂರು ರಂಗಾಯಣದ ಭೂಮಿಕಾ ಅಂಗಳದಲ್ಲಿ ನಡೆಯುತ್ತಿದ್ದ ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ ಒಳಕ್ಕೆ ಹೋಗದೆ ಬಾಗಲಿಲ್ಲಿ ಅತಿಥಿಗಳಿಗೆ ಕಾಣದಂತೆ ಮಾತು ಕೇಳುತ್ತಾ  ಮರೆಯಲ್ಲಿ ನಿಂತಿದ್ದ ಕೋಟಿಯವರನ್ನು ಕಂಡು ನನಗೆ ಅಚ್ಚರಿಯಾಯ್ತು. ಬನ್ನಿ ಸರ್ ಒಳಕ್ಕೆ ಹೋಗೋಣ ಎಂದಾಗ, “ಬೇಡ ಜಗದೀಶ್, ಸಮಾರಂಭದ  ಮಧ್ಯೆ ಎದ್ದು ಬರುವುದು ಮುಜಗರದ ಸಂಗತಿ, ಇಲ್ಲಿಯೇ ಮಾತು ಕೇಳಿ ಹೋಗುತ್ತೇನೆಎಂದು ನುಡಿದ ಅವರ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ಅನುರಣಿಸುತ್ತಿವೆ. ಅದು ನನ್ನ ಮತ್ತು ಅವರ ಕೊನೆಯ ಭೇಟಿಯಾಯಿತು.

ಮಹಿಳೆಯರು, ಅಸಹಾಯಕರ ನೋವು ಅಥವಾ ಬವಣೆಗಳೆಂದರೆ ಸಾಕು, ಪತ್ರಿಕೆಯಲ್ಲಿ ಅಂತಹವರ ಸುದ್ದಿಗೆ ವಿಶೇಷವಾದ ಮಾನ್ಯತೆ ನೀಡುತ್ತಿದ್ದರು. ಇದು 1997 ಅಥವಾ 98 ಘಟನೆ. ಕಾಳೇಗೌಡ ನಾಗವಾರರು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ನಾನು ಪತ್ರಿಕೋದ್ಯಮವನ್ನು ತ್ಯೆಜಿಸಿ ಕೆಲ ಕಾಲ ಊರಿನಲ್ಲಿದ್ದೆ. ಆದರೆ, ಆಂದೋಲನ ಪತ್ರಿಕೆಗೆ ನಿರಂತರವಾಗಿ ಬರೆಯುತ್ತಿದ್ದೆ. ಒಂದು ದಿನ ನನ್ನೂರಿಗೆ ಭಿಕ್ಷೆ ಬೇಡಲು ಬಂದ ತಂಬೂರಿ ಜವರಯ್ಯ ಮತ್ತು ಆತನನ ಪತ್ನಿಯ ತತ್ವ ಪದಗಳನ್ನು ಕೇಳಿ ರೋಮಾಂಚನಗೊಂಡು, ಅವರನ್ನು ಮನೆಗೆ ಕರೆದೊಯ್ದು ಊಟ ಹಾಕಿಸಿ ಮತ್ತಷ್ಟು ಹಾಡುಗಳನ್ನು ಅವರಿಂದ ಹಾಡಿಸಿ ಐವತ್ತು ರೂಪಾಯಿ ಕೊಟ್ಟು ಕಳುಹಿಸಿದ್ದೆ. ಅದಕ್ಕೂ ಮುನ್ನ  ನನ್ನ ಬಳಿ ಇದ್ದ ಕ್ಲಿಕ್-3 ಎಂಬ ಸಣ್ಣ ಕ್ಯಾವiರಕ್ಕೆ ಕಪ್ಪು ಬಿಳುಪಿನ ರೋಲ್ ಹಾಕಿ ಒಂದಿಷ್ಟು ಚಿತ್ರಗಳನ್ನು ತೆಗೆದಿದ್ದೆ. ಅಂದು ಭಾನವಾರ. ನನ್ನೂರು ಕೊಪ್ಪದಲ್ಲಿ ಸಂತೆಯ ದಿನವಾದ್ದರಿಂದ ಜವರಯ್ಯ ದಂಪತಿಗಳು ಭಿಕ್ಷೆಗೋಸ್ಕರ ನನ್ನೂರಿಗೆ ಆಗಮಿಸಿದ್ದರು. ಮುಂದಿನ ಗುರುವಾರ ಮಂಡ್ಯ ನಗರದಲ್ಲಿ ಜಾನಪದ ಅಕಾಡೆಮಿಯ ಸಮಾರಂಭವೊಂದು ಏರ್ಪಾಟಾಗಿತ್ತು. ಅಧ್ಯಕ್ಷರಾಗಿದ್ದ ಕಾಳೇಗೌಡ ನಾಗವಾರರು ಅಲ್ಲಿಗೆ ಬರುವವರಿದ್ದರು. ಅವರ ಗಮನ ಸೆಳೆಯುವ ಉದ್ದೇಶದಿಂದ ಬಡದಂಪತಿಗಳ ಕುರಿತು ಲೇಖನ ಬರೆದರೆ ಹೇಗೆ? ಎಂಬ ಆಲೋಚನೆ ಮನಸ್ಸಿನಲ್ಲಿ ಹೊಳೆಯಿತು. ಕೂಡಲೇ ಕೋಟಿಯವರಿಗೆ ದೂರವಾಣಿಯಲ್ಲಿ ಸಂಪರ್ಕಿಸಿದಾಗ, “ವಿವರವಾಗಿ ಬರೆಯಿರಿ ಜಗದೀಶ್. ಗುರುವಾರ ನಾಲ್ಕು ಜಿಲ್ಲೆಗಳ ಆವೃತ್ತಿಯಲ್ಲಿ ಲೇಖನವನ್ನು ಪ್ರಕಟಿಸೋಣಎಂದು ಭರವಸೆ ಇತ್ತರು. “ಹಾಡುವ ಹಕ್ಕಿಗಳಿಗೆ ಗೂಡಿಲ್ಲಎಂಬ ಶೀರ್ಷಿಕೆಯಡಿ ನಾನು ಬರೆದ ಲೇಖನವನ್ನು ಗುರುವಾರದಂದು ಆಂದೋಲನ ದಿನಪತ್ರಿಕೆಯ ಮುಖಪುಟದಲ್ಲಿ ಪ್ರಕಟಿಸಿ ಎಲ್ಲರ ಗಮನ ಸೆಳೆಯುವಂತೆ ಮಾಡಿದರು. ದಿನ ತಂಬೂರಿ ಜವರಯ್ಯ ಮತ್ತು ಪತ್ನಿ ಇಬ್ಬರೂ ಪ್ರವಾಸಿ ಮಂದಿರದಲ್ಲಿದ್ದ ಕಾಳೇಗೌಡ ನಾಗವಾರನ್ನು ಭೇಟಿ ಮಾಡಲು, ನಾನು ನೀಡಿದ್ದ ಪತ್ರ ಹಾಗೂ ಆಂದೋಲನ ಪತ್ರಿಕೆಯ ಜೊತೆ ಹೋಗುವ ವೇಳೆಗಾಗಲೇ ಪತ್ರಿಕೆಯನ್ನು ಓದಿದ್ದ ಗೌಡರು ದಂಪತಿಗಳಿಂದಶಿವನೆ ನಿನ್ನಾಟವ ಬಲ್ಲವರ್ಯಾರೋಎಂಬ ತತ್ವ ಪದವವನ್ನು ಹಾಡಿಸಿ ಅದನ್ನು ಕೇಳಿ ಅಚ್ಚರಿಗೊಂಡರು. ಅಷ್ಟೇ ಅಲ್ಲದೆ, ಸಮಾರಂಭಕ್ಕೆ ಕರೆದೊಯ್ದು ಅವರಿಂದ ಅದೇ ಪದವನ್ನು ಪ್ರಾರ್ಥನೆಯ ರೂಪದಲ್ಲಿ ಹಾಡಿಸಿ, ತಮ್ಮ ಜೇಬಿನಿಂದ ಒಂದು ಸಾವಿರ ಹಣವನ್ನು ನೀಡಿ ಕಳುಹಿಸಿದ್ದರು. ಘಟನೆ ನಡೆದ ಮೂರು ತಿಂಗಳ ನಂತರ ಅವರಿಗೆ ಜಾನಪದ ಅಕಾಡೆಮಿಯ ವತಿಯಿಂದ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದರು. ಅಲ್ಲಿಯವರೆಗೆ ಭಿಕ್ಷೆ ಬೇಡಿ ದಿನ ನೂಕುತ್ತಿದ್ದ ಜವರಯ್ಯ ದಂಪತಿಗಳಿಗೆ ನಂತರದ ದಿನಗಳಲ್ಲಿ ಆಕಾಶವಾಣಿ ಮತ್ತು ಸರ್ಕಾರದ ಕಾರ್ಯಕ್ರಮಗಳಲ್ಲಿ ಹಾಡಲು ಅವಕಾಶ ದೊರೆಯತೊಡಗಿತು. ವರ್ಷ ತಂಬೂರಿ ಜವರಯ್ಯನಿಗೆ ಕರ್ನಾಟಕ ಸರ್ಕಾರದಿಂದ 2017 ಸಾಲಿನ ರಾಜ್ಯೋತ್ವವ ಪ್ರಶಸ್ತಿ ಕೂಡ ಲಭಿಸಿತು. ಅಪರೂಪಕ್ಕೆ ದಂಪತಿಗಳಿಗೆ ಫೋನ್ ಮಾಡಿ, ಹೇಗಿದ್ದಿ ಜವರಯ್ಯಾ? ಎಂದು ಕೇಳಿದರೆ, ಅದೇ ವಿನಯದಿಂದ ಅಪ್ಪಟ ಮಂಡ್ಯದ ದೇಸಿ ಭಾಷೆಯಲ್ಲಿಚೆನ್ನಾಗಿದ್ದೀನಿ ಸೋಮೆ, ನಿಮ್ಮೆಸ್ರು ಹೇಳ್ಕಂಡು ಅನ್ನ ಉಂಡ್ತಾ ಇವ್ನಿ ಸೋಮೆಎನ್ನುವಾಗ ನನ್ನ ಕಣ್ಣುಗಳು ಒದ್ದೆಯಾಗುತ್ತವೆ. ದಿನ ರಾಜಶೇಖರ್ ಕೋಟಿಯವರು ತಮ್ಮ  ಮಾನವೀಯತೆ ಗುಣದಿಂದ ಜವರಯ್ಯನ ಕುರಿತ ಲೇಖನ ಪ್ರಕಟಿಸಿದ ಫಲವಾಗಿ ಒಬ್ಬ ಕಲಾವಿದನ ಬದುಕು ಹಸನಾಗಲು ಸಾಧ್ಯವಾಯಿತು. ಇಂತಹ ನೂರಾರು ಅಮಾಯಕರಿಗೆ ರಾಜಶೇಖರ ಕೋಟಿಯವರು ನೆರವಾಗಿದ್ದಾರೆ. ಕನ್ನಡದ ಪತ್ರಿಕೋದ್ಯಮಕ್ಕೆ ಮಾನವೀಯ ಮುಖದ ಸ್ಪರ್ಶ ನೀಡಿದವರಲ್ಲಿ ಕೋಟಿ ಅಗ್ರಗಣ್ಯರು ಎಂದರೆ ಅತಿಶಯದ ಮಾತಾಗಲಾರದು.

ಚಿತ್ರಗಳು ಸೌಜನ್ಯ- ರಾಜಶೇಖರ ಕೋಟಿಯವರ ಚಿತ್ರಗಳು- ಹಿಂದೂ ದಿನಪತ್ರಿಕೆ ಮತ್ತು ನಾಗಮಂಗಲ ಎಲ್.ಪ್ರಕಾಶ್, ತಂಬೂರಿ ಜವರಯ್ಯ ದಂಪತಿಗಳು- ಜಸ್ಟ್ ಕನ್ನಡ ಡಾಟ್.ಇನ್