ಮಂಗಳವಾರ, ಮಾರ್ಚ್ 20, 2018

ಪುಗಸಟ್ಟೆಯ ಪ್ರಣಯ ಪ್ರಸಂಗ



ಶಾನುಭೋಗರಹಳ್ಳಿ ಎಂಬ ಹೆಸರಿನ ಆ ಊರು ಈ ದೇಶದ ಎಲ್ಲಾ ಹಳ್ಳಿಗಳ ಹಾಗೆ ಒಂದು ಕಾಲದಲ್ಲಿ ಸದಾ ತಣ್ಣಗೆ ಮೌನವಾಗಿ ಇದ್ದೂ ಇಲ್ಲದಂತಿತ್ತು.  ಊರಿ£ಲ್ಲಿ ಸಕಲೆಂಟು ಜಾತಿಗಳು ತಮ್ಮ ತಮ್ಮ  ಕುಲ ಕಸುಬುಗಳ ಜೊತೆ ಅಂಟಿಕೊಂಡಿದ್ದರೂ ಸಹ ಊರಿನ ಜನರೆಲ್ಲಾ ಒಬ್ಬರಿಗೊಬ್ಬರು ಆಸರೆಯಾಗಿ ಬದುಕುವ ಗುಣವನ್ನು ಕಾಪಾಡಿಕೊಂಡು ಬಂದವರಾಗಿದ್ದರು. ಇದು ಅಲ್ಲಿಯ ಜನರನ್ನು  ಬಣ್ಣದ ಚಿಂದಿಗಳನ್ನು ಆಯ್ದು ನೇಯ್ದ ಕೌದಿಯಂತೆ ಆಕಾಶದಡಿ ಕೂಡಿ ಹಾಕಿತ್ತು.
ಬೆಂಗಳೂರೆಂಬ ಮಹಾನಗರಿಗೆ ಕೇವಲ  ಮುವತ್ತು ಕಿಲೋಮೀಟರ್ ದೂರದಲ್ಲಿದ್ದ ಶಾನುಭೋಗರ ಹಳ್ಳಿಗೆ ನಗರವನ್ನು ಸಂಪರ್ಕಿಸುವ ಯಾವುದೇ ಮಜಬೂತಾದ ರಸ್ತೆಗಳಿಲ್ಲದಿದ್ದ ಕಾರಣ ಊರಿನಲ್ಲಿ ನೆಮ್ಮದಿಯು ಮನೆ ಮಾಡಿತ್ತು. ಯಾವುದೇ ನಯನಾಜೂಕನ್ನು ಕಾಣದೆ, ಮಳೆಯಾಶ್ರಯದಲ್ಲಿ ಬೆಳೆದ ರಾಗಿ, ಶೆಂಗಾ, ಅವರೆ, ಅಲಸಂದೆ, ಹುರುಳಿ ಬೆಳೆಗಳ ಜೊತೆಗೆ  ಕೆರೆಯ ಕೆಳಗಡೆ ಇರುತ್ತಿದ್ದ ಅಂಗೈ ಅಗಲದ ಭೂಮಿಯಲ್ಲಿ ಬೆಳದ ಭತ್ತ ಇವುಗಳಲ್ಲಿ ಅಲ್ಲಿನ ಜನತೆ ನೆಮ್ಮದಿ ಕಂಡುಕೊಂಡಿದ್ದರು. 
ಬಡತನ ನಡುವೆಯೂ ನೆಮ್ಮದಿಯನ್ನು ಕಂಡುಕೊಂಡಿದ್ದ ಶ್ಯಾನುಭೋಗರಹಳ್ಳಿಗೂ ಮತ್ತು  ಬೆಂಗಳೂರೆಂಬ ನಾಯಕಸಾನಿಯ ನಡುವೆ ರಸ್ತೆ ಸಂಪರ್ಕ ಏರ್ಪಟ್ಟ ದಿನದಿಂದ ಇಡೀ ಊರಿನ ಚಹರೆ  ಬದಲಾಯಿತು. ನಗರದೊಳಗೆ ಹಾಯ್ದು ಹೋಗಬೇಕಿದ್ದ ಹೆದ್ದಾರಿಯ ದಿಕ್ಕನ್ನು ಬದಲಿಸಿದ ಸರ್ಕಾರವು  ಬೈ ಪಾಸ್ ರಸ್ತೆಯೊಂದನ್ನು  ನಿರ್ಮಿಸಿತು. ಈ ಹೊಸ ಹೆದ್ದಾರಿಯು ಶ್ಯಾನುಭೋಗಹಳ್ಳಿಯ ಮಧ್ಯಭಾಗದಲ್ಲಿ ಹಾಯ್ದು ಹೋದುದರ ಫಲವಾಗಿ  ಇಡೀ ಊರನ್ನು ಉದ್ದುದ್ದವಾಗಿ ಸೀಳಿತು. ನಮ್ಮೂರಿಗೆ ರಸ್ತೆ ಬೇಡ, ಜಮೀನಿಗೆ ಪರಿಹಾರಬೇಡ ಎಂದು ಪ್ರತಿಭಟಿಸಿದ ರೈತರ ಎದುರು, ಅದೇ ಊರಿನ ಯುವಕರನ್ನು ಎತ್ತಿಕಟ್ಟಿದ ರಾಜಕಾರಣಿಗಳು  ಸರ್ಕಾರದ ಪರ ಘೋಷಣೆ ಕೂಗಿಸಿ, ರಸ್ತೆ ಬೇಕು, ಅಭಿವೃದ್ಧಿ ಬೇಕು ಎಂಬ ಫಲಕ ಹಿಡಿಸಿ ಊರಿನಲ್ಲಿ ಅಣ್ಣ ತಮ್ಮಂದಿರಂತೆ ಬದುಕಿ ಬಾಳಿದವರನ್ನು ರಾತ್ರೋರಾತ್ರಿ ವ್ಶೆರಿಗಳನ್ನಾಗಿ ಪರವರ್ತಿಸಿದರು.
ಸದಾ ತಣ್ಣಗೆ ನಿದ್ರಿಸುತ್ತಿದ್ದ ಶ್ಯಾನುಭೋಗರಹಳ್ಳಿಯು ಹೆದ್ದಾರಿಯಾಗುತ್ತಿದ್ದಂತೆ ಇಪ್ಪತ್ತು ನಾಲ್ಕು ಗಂಟೆಯೂ ಕಾರ್ಯ ಚಟುವಟಿಕೆಯ ಕೇಂದ್ರವಾಯಿತು. ರಸ್ತೆಯ ಎಡ ಬಲಗಳಲ್ಲಿ ಸ್ಪರ್ಧೆಗಳಿದಂತೆ ಚಹಾ ಅಂಗಡಿ, ಬೇಕರಿ, ಗುಟ್ಕಾ, ಪಾನ್, ಸಿಗರೇಟ್ ಅಂಗಡಿಗಳು ತಲೆ ಎತ್ತಿದವು.  ಸಂಜೆ ವೇಳೆಗೆ ಬಿಸಿ ಬಿಸಿ ಬೋಡಾ, ವಡೆ, ಪಕೋಡ, ಪಾನಿಪೂರಿ, ಅಂಗಡಿಗಳು ಕಾಣಿಸಿಕೊಂಡು ಊರು ಜನರ ನಾಲಿಗೆ ಹೊಸ ರುಚಿಯ ಹುಚ್ಚು ಹತ್ತ ತೊಡಗಿದಂತೆ ಶ್ಯಾನಭೋಗರಹಳ್ಳಿಯ ಜನರೆದುರು ಹೊಸ ಲೋಕವೊಂದು ತೆರೆದುಕೊಂಡಿತು.
ಊರಿನ ಅರಳಿಕಟ್ಟೆಯ ಬಳಿ ಅಥವಾ ಮಾರಮ್ಮನ ಗುಡಿಯ ಹಜಾರದಲ್ಲಿ ಚೌಕಾಬಾರ ಆಡುತ್ತಾ, ಬೀಡಿ ಸೇದುತ್ತಾ ಕಾಲ ಕಳೆಯುತ್ತಿದ್ದ ಪಡ್ಡೆ ಹುಡುಗರು ಹೆದ್ದಾರಿಗೆ ಬಂದು ಕಾಲ ಕಳೆಯತೊಡಗಿದರು. ಈ ನಡುವೆ ಬೆಂಗಳೂರು ನಗರದ ಹೊರವಲಯದ ಅಂಚಿನಲ್ಲಿರುವ ಸಣ್ಣ ಪುಟ್ಟ ಕೈಗಾರಿಕೆಗಳಲ್ಲಿ  ಮತ್ತು ಗಾರ್ಮೆಂಟ್  ಕಂಪನಿಗಳಲ್ಲಿ ಕೆಲಸಕ್ಕೆ ಬೇಡಿಕೆ ಹೆಚ್ಚಾಗತೊಡಗಿದಂತೆ ಕಾರ್ಮಿಕರನ್ನು ಕರೆತರುವ ವಾಹನಗಳು ಹಳ್ಳಿಯತ್ತ ಬರತೊಡಗಿದವು. ಸೊಂಟಕ್ಕೊಂದು ಲುಂಗಿ ಸುತ್ತಿಕೊಂಡು; ಹೆಗಲ ಮೇಲೊಂದು ಟವಲ್ ಹಾಕಿಕೊಂಡು ಅಂಡಲೆಯುತ್ತಿದ್ದ ಶ್ಯಾನುಬೋಗರಹಳ್ಳಿಯ ಹುಡುಗರಿಗೆ ಅದೃಷ್ಟ ಅರಸಿಕೊಂಡು ಬಂದಂತಾಗಿ ಮನೆಯ ಮೂಲೆಯಲ್ಲಿದ್ದ ಹಳೆಯ ಪ್ಯಾಂಟ್ ಗಳನ್ನು ತೆಗೆದು ಸೊಂಟಕ್ಕೇರಿಸಿಕೊಂಡು ವ್ಯಾನ್ ಹತ್ತಿ ನಗರದತ್ತ ಹೊರಟರು. ಹಲವರು ಗಾರ್ಮೆಂಟ್ ಕಂಪನಿಗಳಲ್ಲಿ ಜಮಾವಣೆಯಾದರೆ, ಇನ್ನುಳಿದವರು, ಟೈಲ್ಸ್, ಗ್ರಾನೈಟ್, ಕೆಮಿಕಲ್ಸ್ ಹೀಗೆ ಸಣ್ಣ ಪುಟ್ಟ ಉದ್ದಿಮೆಗಳಲ್ಲಿ ದುಡಿಯತೊಡಗಿದರು. ಹುಡಗರಿಗಿಂತ ನಾವೇನು ಕಡಿಮೆ ಎನ್ನುವಂತೆ ಹಳ್ಳಿಯ ಮಹಿಳೆಯರು, ಯುವತಿಯರು ಸಹ ವ್ಯಾನ್‍ಗಳನ್ನು ಹತ್ತಿ ಗಾರ್ಮೆಂಟ್  ಕಂಪನಿಗಳಲ್ಲಿ ದುಡಿಯತೊಡಗಿದರು.
ಕೇವಲ ಒಂದು ವರ್ಷದ ಅವಧಿಯಲ್ಲಿ ಇಡೀ ಶ್ಯಾನಭೋಗರಹಳ್ಳಿಯ ವಾತಾವರಣವೇ ಬದಲಾಗಿ ಹೋಯಿತು. ಎಲ್ಲರ ಕೈಯಲ್ಲಿ ಮೊಬೈಲ್ ಮಾತನಾಡತೊಡಗಿದವು. ಯುವಕರಂತೂ ತಮ್ಮ ತಲೆಕೂದಲನ್ನು ದೋನಿ ಕಟಿಂಗ್, ಕೋಯ್ಲಿ ಕಟಿಂಗ್ ಎಂಬ ವಿನ್ಯಾಸಕ್ಕೆ ಬದಲಿಸಿಕೊಂಡು, ಅಗ್ಗದ ಜೀನ್ಸ್, ಮತ್ತು ಟಿ ಶರ್ಟ್ ಹಾಗೂ ಬರ್ಮುಡಾ ಚಡ್ಡಿಯನ್ನು ತೊಟ್ಟು ಊರು ತುಂಬಾ ಓಡಾಡತೊಡಗಿದರು. ಹುಟ್ಟಿದಾಗಿನಿಂದ ಈ ಹುಡುಗರಿಗೆ ಕಟಿಂಗ್ ಮಾಡುತ್ತಿದ್ದ ಮಲ್ಲಣ್ಣ ಮತ್ತು ಅಂಗಿ ಚಡ್ಡಿ ಹೊಲೆದು ಕೊಡುತ್ತಿದ್ದ ಟೈಲರ್ ನಜೀಬಣ್ಣ ಇವರನ್ನು ಕುತೂಹಲದಿಂದ ನೋಡುತ್ತಿದ್ದರು.
“ಯಾಕೆ ಅಂಗ್ ನೊಡ್ತೀರಾ? ಇನ್ನು ಮೇಲೆ ನೀವು ಮುದುಕರಿಗೆ ಕಟಿಂಗ್ ಮಾಡ್ಕಂಡ್ ಮುದುಕಿಯರಿಗೆ ರವಿಕೆ ಹೊಲ್ಕಂಡ್ ಇರದಷ್ಟೇ ನಿಮ್ಮ ಕೆಲಸ” ಎಂದು ಹುಡುಗರು ಚುಡಾಯಿಸತೊಡಗಿದರೆ
ಇದಕ್ಕೆ ಉತ್ತರವೆಂಬಂತೆ  “ಸರಿ ಬಿಡ್ರಪ್ಪ, ನಿಮ್ಮಪ್ಪ, ನಿಮ್ಮವ್ವಂದಿರು ನಮಗೆ ಇನ್ಮೇಲೆ ಪರ್ಮೆಂಟ್ ಗಿರಾಕಿಗಳು” ಎಂದು ಹೇಳುತ್ತಾ ಬೀಡಿ ಹಚ್ಚಿಕೊಂಡು ಇಬ್ಬರೂ ಪರಸ್ಪರ ಮುಖ ನೋಡಿಕೊಂಡು ನಗಾಡುತ್ತಿದ್ದರು.
ಊರಿಗೆ ಬಂದ ಹೆದ್ದಾರಿಯು  ಹೆಮ್ಮಾರಿಯಾಗಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಹುಡುಗ ಹುಡುಗಿಯರೆಂಬ ಭೇದ ಭಾವವಿಲ್ಲದೆ ಎಲ್ಲರ ಕೈಯಲ್ಲಿ ಹಣ ಓಡಾಡತೊಡಗಿದಂತೆ ಎಲ್ಲರ ಕೈಗೆ ಮೊಬೈಲ್ ಗಳು  ಬರತೊಡಗಿದವು. ಇಂಟರ್‍ನೆಟ್ ಸಂಪರ್ಕ ಅಗ್ಗವಾದ ನಂತರ ಸಿನಿಮಾಗಳು,  ಹಾಡುಗಳು, ಅಶ್ಲೀಲ ವೆಬ್ ತಾಣಗಳು ಹುಡುಗರ ಮೆಚ್ಚಿನ ಹವ್ಯಾಸಗಳಾದವು. ಮುಗ್ದತನ ಮತ್ತು ಬಡತನದಿಂದಾಗಿ ಎದೆಯೊಳಗೆ ಕಾಲು ಮುರಿದುಕೊಂಡು ಕುಳಿತಿದ್ದ ಹದಿ ಹರೆಯದ ಕಾಮವು ಎದ್ದು ಕುಣಿಯತೊಡಗಿದಂತೆ ಹುಡುಗ ಹುಡುಗಿಯರಲ್ಲಿ ನನಗೂ ಒಂದು ಹೊಸ ಜೀವ ಬೇಕೆಂಬ ಆಸೆ ಚಿಗುರೊಡೆಯತೊಡಗಿತು. ತಾವು ಕೆಲಸ ಮಾಡುವ ಸ್ಥಳದಲ್ಲಿ ಇವಳು/ನು ನನಗೆ ಜೋಡಿಯಾಗಬಲ್ಲಳೆ/ನೆ? ಎಂದೆಲ್ಲಾ ಕಣ್ಣುಗಳು ಅರಸತೊಗಿದವು. ಇದರ ಫಲವೇನೋ ಎಂಬಂತೆ  ಹುಡುಗ ಹುಡುಗಿಯರು ಜಾತಿ, ಕುಲ ನೋಡದೆ ಪ್ರೇಮಿಸತೊಡಗಿದರು. ಮನೆಯ ಹಿರಿಯರು ಒಪ್ಪದಿದ್ದಾಗ, ಓಡಿಹೊಗುವುದು ಇಲ್ಲವೇ ಯಾವುದಾದರೊಂದು ದೇವಸ್ಥಾನದಲ್ಲಿ ತಾಳಿಕಟ್ಟಿ ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಬದುಕಿನ ಬಂಡಿ ಹೂಡುವುದು ಸಾಮಾನ್ಯವಾಗತೊಡಗಿತು. ಇಂತಹ ಪ್ರೇಮ ಪ್ರಸಂಗಗಳು ಜರುಗಿದಾಗಲೆಲ್ಲಾ ಶ್ಯಾನುಭೋಗರಹಳ್ಳಿಯ ಹಿರೀಕರು “ ಬುಟ್ಟಾಕ್ಲಾ ಅತ್ಲಾಗೆ ಏನ್ ಮಾಡಕಾಯ್ತದೆ? ಹಾಳು ಬಸ್ತಿವು ಹುಟ್ಟುವಾಗ್ಲೇ ಹಿಂತಿರುಗಿ ಆ ಹಾಳಾದ್ ಬ್ರಹ್ಮ ರಂಧ್ರವ ನೋಡ್ಕಂಡು ಬತ್ತಾವೆ ಕಣಾ” ಎಂದು ಸಮಾಧಾನ ಹೇಳುವುದು ಸಾಮಾನ್ಯವಾಯಿತು.
ಇಂತಹದ್ದೇ ಒಂದು ಪ್ರಕರಣದಲ್ಲಿ ಶ್ಯಾನಭೋಗರಳ್ಳಿ ಪುಗಸಟ್ಟೆ ಪುಟ್ಟರಾಜನ ಪ್ರೇಮ ಪ್ರಸಂಗವು ಹಳ್ಳಿಯಲ್ಲಿ ವಿಶೇಷ ಪ್ರಚಾರ ಪಡೆದುಕೊಂಡಿತು. ಹಿಂದೆ ಬಂದರೆ ಒದೆಯದ, ಮುಂದೆ ಬಂದರೆ ಹಾಯದ ಹಸುವಿನಂತ ಗುಣದ ಪುಗಸಟ್ಟೆ ಪುಟ್ಟರಾಜನ ಬಗ್ಗೆ ಊರಿನ ಜನರಿಗೆಲ್ಲಾ ಅಪಾರ ಪ್ರೀತಿ. ಏನೇ ಕೆಲಸ ಹೇಳಿದರೂ ಸಹ ಇಲ್ಲವೆನ್ನದೆ ಮಾಡುತ್ತಿದ್ದ ಪುಟ್ಟರಾಜ, ನೆರೆ ಹೊರೆಯ ಹಳ್ಳಿಗಳಿಗೆ ಹೋಗಿ ತೆಂಗಿನ ಮರ ಹತ್ತಿ ಕಾಯಿ ಕೀಳುವುದು, ಸುಲಿಯುವುದು, ಕಳೆ ಕೀಳುವುದು ಹೀಗೆ ನೂರೆಂಟು ಕೆಲಸಗಳನ್ನು ಪ್ರೀತಿಯಿಂದ ಮಾಡಿ ಬರುತ್ತಿದ್ದ. ಅವರ ಉಣ್ಣಲು ಅಥವಾ ಕುಡಿಯಲು ಏನಾದರೂ ಕೊಟ್ಟರೆ ಅದೇ ಅವನ ಪಾಲಿಗೆ ಪ್ರಸಾದವಾಗಿತ್ತು. “ನಮ್ಮ್ ಪುಟ್ರಾಜ ಧರ್ಮರಾಯ” ಎಂದು ಸುತ್ತಮುತ್ತಲಿನ ಹಳ್ಳಿಯ ಜನರಿಂದ ಹೊಗಳಿಸಿಕೊಳ್ಳುತ್ತಿದ್ದ ಅವನಿಗೆ ಇದರಿಂದಾಗಿ ಪುಗ್ಸಟ್ಟೆ ಎಂಬ ಬಿರುದು ಪುಕ್ಕಟೆಯಾಗಿ ಬಂದಿತ್ತು.

ಊರಿನ ಗಟ್ಟಿಗಿತ್ತಿ ಮತ್ತು ಗಯ್ಯಾಳಿ ಹೆಂಗಸು ಎಂದು ಪ್ರಸಿದ್ಧಿಯಾಗಿದ್ದ ತಿಮ್ಮಕ್ಕನ ಏಕೈಕ ಮಗನಾಗಿದ್ದ ಪುಟ್ರಾಜ ಅವ್ವನ ಬೈಗುಳದ ಕಾಟ ತಾಳಲಾರದೆ ತನ್ನ ಓರಗೆಯವರ ಜೊತೆಗೂಡಿ ಬೆಂಗಳೂರಿನ ಗಾರ್ಮಂಟ್ ಕಂಪನಿಯೊಂದರಲ್ಲಿ ದಿನಗೂಲಿ ನೌಕರನಾಗಿ ಸೇರಿಕೊಂಡು ದುಡಿಯುವನ್ನು ಕಲಿತುಕೊಂಡನು. ಅದೃಷ್ಟವೆಂಬಂತೆ ಅವನ ಹಸುವಿನಂತಹ ಗುಣ ನೋಡಿ ಮೆಚ್ಚಿಕೊಂಡ ಅಲ್ಲಿನ ಗುಣಸಾಗರಿ ಎಂಬ ತಮಿಳು ಹೆಣ್ಣು ಮಗಳ ಕಣ್ಣ ನೋಟಕ್ಕೆ ತುತ್ತಾದ ಪುಗಸಟ್ಟೆಯ ಎದೆಯೊಳಗೆ  ಅವಲಕ್ಕಿ ಕುಟ್ಟಿದಂತಾಯಿತು. ಇದರಿಂದಾಗಿ ನಿದ್ದೆಯನ್ನು ಕಳೆದುಕೊಂಡು ಒದ್ದಾಡತೊಡಗಿದನು. ಕೆತ್ತಿದ ಕಪ್ಪು ಶಿಲೆಯಂತಿದ್ದ ಗುಣಸಾಗರಿಯ ಹೊಳಪುಗಣ್ಣುಗಳು ಸದಾ ಪುಗಸಟ್ಟೆಯ ಎದೆಯನ್ನು ಚೂರಿಯಂತೆ ತಿವಿಯತೊಡಗಿದಾಗ “ ದುಡಿದು ಬದುಕುವ ತಾಕತ್ತಿರುವ ಇವಳು ನನಗೆ ಹೆಂಡತಿಯಾಗಿ ಬಂದರೆ ನನ್ನ ಪುಣ್ಯ” ಎಂದು ಕೊಂಡನು
ತನ್ನ ಪ್ರೇಮ ವಿವಾಹಕ್ಕೆ ಸದಾ ಮೌನಿಯಾದ ಬುದ್ಧನಿಂತಿದ್ದ ತನ್ನಪ್ಪ ಸಪ್ಪೆ ನಿಂಗಣ್ಣನ ಅನುಮತಿ ಪಡೆಯುವುದು ಪುಗಸಟ್ಟೆಗೆ ಕಷ್ಟವಾಗಿರಲಿಲ್ಲ ಆದರೆ, ಅವ್ವನಿಗೆ ವಿಷಯ ತಿಳಿಸುವುದು ಹೇಗೆ ಎಂದು ಒದ್ದಾಡಿದ. ಅಂತಿಮವಾಗಿ  ಗಟ್ಟಿ ಮನಸ್ಸು ಮಾಡಿದ ಅವನು  ಅವ್ವನೆದುರು ಈ ವಿಷಯ ಪ್ರಸ್ತಾಪಿಸಿದನು. ಮಗನ ಮಾತಿಗೆ ಪಟಾರನೆ ಸಿಡಿದೆದ್ದ ತಿಮ್ಮಕ್ಕ “ ಯಾವ ಜಾತಿನೋ, ಯಾವ ಕುಲನೋ ಕಾಣೆ, ಅಂತಹವಳನ್ನು ಕಟ್ಟಿಕೊಂಡು ಮನೆಗೆ ಬಂದರೆ, ಕಿತ್ತೋಗಿರೊ ಕಡ್ಡಿ ಪೊರಕೆ ತಕಂಡ್ ಮಖ ಕೆರಿತೀನಿ ನನ್ ಮಗ್ನೇ” ಎಂದು ಪೂಜೆ ಮಾಡಿದಳು. ಆ ರಾತ್ರಿ ಸದ್ದು ಮಾಡದೆ ಮಲಗಿದ ಪುಗಸಟ್ಟೆ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋದವನು ಮತ್ತೇ  ಊರಿನತ್ತ ಮುಖ ಮಾಡಲಿಲ್ಲ. ಮಗ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತಿಮ್ಮಕ್ಕ ಊರಿನ ಹುಡುಗರನ್ನು ಕರೆದುಕೊಂಡು ಹೋಗಿ ವಿಚಾರಿಸಿದಾಗ ಗುಣಸಾಗರಿ ಮತ್ತು ಪುಗಸಟ್ಟೆ ಇಬ್ಬರೂ ಕೆಲಸ ಬಿಟ್ಟಿರುವುದಾಗಿ ತಿಳಿಯಿತು.  ಎದೆ ಬಡಿದುಕೊಂಡು ಊರಿಗೆ ಬಂದ ತಿಮ್ಮಕ್ಕ ಮನೆ ಬಾಗಿಲಲ್ಲಿ ಕುಳಿತು ಊರು ಕೇರಿಯನ್ನು ಒಂದು ಮಾಡಿಕೊಂಡು “ ಊರಿಗೆ ಹೆದ್ದಾರಿ ತಂದವರನ್ನು ಹಾಗೂ ಕಂಪನಿಗಳ ಕೆಲಸಕ್ಕೆ ವಾಹನ ಬಿಟ್ಟವರನ್ನು, ಮೊಬೈಲ್ ಕಂಪನಿಗಳನ್ನು ಹೀಗೆ ಎಲ್ಲರನ್ನೂ ಒಂದುಗೂಡಿಸಿ  ಕೇಳುಗರ ಕಿವಿಯಲ್ಲಿ ರಕ್ತ ಬರುವಂತೆ ಕೆಟ್ಟ ಬೈಗುಳಗಳಲ್ಲಿ ಜಾಲಾಡಿದಳು.  ತಿಮ್ಮಕ್ಕನ ಗಂಡ ಸಪ್ಪೆ ನಿಂಗಣ್ಣ ಮಾತ್ರ ಅವಳ ಬಾಯಿಗೆ ಹೆದರಿ ಮೌನ ವ್ರತ ಹಿಡಿದು ಏನೊಂದನ್ನು ಹೇಳಲಾರದೆ ಕಾಣೆಯಾದ ಮಗನನ್ನು ನೆನೆದು ಒಳಗೊಳಗೆ ಅತ್ತನು.
ಬೇಸಿಗೆ ಮತ್ತು ಮಳೆಗಾಲ ಕಳೆದು ಮಾಗಿಯ ಕಾಲ ಆರಂಭವಾಗುವ ಒಂದು ದಿನ ಬೆಳಗಿನ ಜಾವ ಹೆದ್ದಾರಿಯ ಪಕ್ಕದಲ್ಲಿ ಅರೆಬೆಂದಿದ್ದ ಹಾಗೂ ಮುಖದ ಗುರುತು ಸಿಗದಂತಹ ಯುವಕನ ಶವವೊಂದು ಬಿದ್ದಿತ್ತು. ನಗರದಿಂದ ಬಂದ ವಾಹನವೊಂದು ರಾತ್ರಿ ವೇಳೆ ಊರಂಚಿನಲ್ಲಿ ಅದನ್ನು ಎಸೆದು ಹೋಗಿತ್ತು. ಮಕಾಡೆಯಾಗಿ ಮಲಗಿದ್ದ ಆ ಶವದ ಮೇಲಿದ್ದ ಬಟ್ಟೆಗಳು  ಪುಗ್ಸಟ್ಟೆ ಪುಟ್ರಾಜನು ಯಾವಾಗಲೂ ತೊಡುತ್ತಿದ್ದ ಹಸಿರು ಬಣ್ಣದ ಟಿ ಶರ್ಟ್ ಹಾಗೂ ನೀಲಿ ಜೀನ್ಸ್ ಪ್ಯಾಂಟ್ ಇವುಗಳನ್ನು ಹೋಲುತ್ತಿದ್ದರಿಂದ ಕಾಣೆಯಾಗಿದ್ದ ಪುಟ್ರಾಜುವಿನ ಶವವಿರಬೇಕೆಂದು ಕೆಲವರು ಊಹಿಸಿದರು. ಇದು  ಬಾಯಿಂದ ಬಾಯಿಗೆ ಹರಡಿ ಕೊನೆಗೆ ತಿಮ್ಮಕ್ಕನ ಕಿವಿಗೂ ತಲುಪಿತು. ಮನೆಯಿಂದ ಓಡಿ ಬಂದ ತಿಮ್ಮಕ್ಕ  ತನ್ನ ಬಾಯಿ ಹಾಗೂ ಎದೆಯನ್ನು ಬಡಿದುಕೊಳುತ್ತಾ, ಶವದ ಮೇಲೆ ಒಮ್ಮೆ ಕಣ್ಣಾಡಿಸಿದಳು. ನಂತರ ಕಾಣೆಯಾಗಿದ್ದ  ತನ್ನ ಮಗನನ್ನು ಯಾರೋ ಹೊಡೆದು ಕೊಂದು ಹಾಕಿದ್ದಾರೆಂದು ಅಧಿಕೃತವಾಗಿ ಘೋಷಿಸುವುದರ ಮೂಲಕ ಗೋಳಾಡತೊಡಗಿದಳು.
ಅರಬೆಂದಿದ್ದ ಹೆಣದ ಮೇಲೆ ಬೆಡ್ ಶೀಟ್ ಒಂದನ್ನು ತಂದು  ಹೊದಿಸಿ ನಂತರ ಅದನ್ನು ಊರಿನೊಳಕ್ಕೆ ಸಾಗಿಸಿ ತಿಮ್ಮಕ್ಕನ ಮನೆಯ ಮುಂದೆ ಇರಿಸಲಾಯಿತು.  ಪುಗ್ಸಟ್ಟೆ ಪುಟ್ರಾಜುವಿನ ಸಾವಿನ ಸುದ್ದಿ ಕಾಳ್ಗಿಚ್ಚಿನಂತೆ ಸುತ್ತ ಮುತ್ತಲ ಊರುಗಳಿಗೆ ತಲುಪಿತು. ಮನೆಗೊಬ್ಬರಂತೆ ಎಲ್ಲರೂ ಬಂದು ಗುಣಗಾನ ಮಾಡುತ್ತಾ ಅವನ ಆಕಸ್ಮಿಕ ಸಾವಿಗಾಗಿ ಶೋಕಿಸಿದರು. ಊರಿನ ಪ್ಮಡಾರಿಯೊಬ್ಬ ತಕ್ಷಣವೇ ತಮ್ಮ ಮೊಬೈಲ್ ಕೈಗೆ ತೆಗೆದುಕೊಂಡು  ಕ್ರೇತ್ರದ ಶಾಸಕನ ಜೊತೆ ಮಾತನಾಡಿ “ ಕೊಲೆ ಆಗ್ಬುಟ್ಟದೆ ಕಣಣ್ಣಾ, ಚೀಫ್ ಮಿನಿಸ್ಟರ್ ಗೆ ಹೇಳ್ಸಿ ತಕ್ಷಣ ಪರಿಹಾರ ಕೊಡಿಸಬೇಕು ಎಲೆಕ್ಷನ್ ಬೇರೆ ಹತ್ರ ಬರ್ತಾ ಇದೆ. ಪುಗಸಟ್ಟೆ ಎಲ್ಲಾ ಊರಗಳಲ್ಲೂ ಫೇಮಸ್ ಆಗಿದ್ದ ಕಣಣ್ಣೊ, ಇಲ್ಲಾಂದ್ರೆ ಕಷ್ಟ ಆಗ್ ಬುಡ್ತದೆ” ಎಂಬ ಸಂದೇಶವನ್ನು  ರವಾನಿಸಿದನು. ಈ ವಿಷಯ ವಿರೋಧ ಪಕ್ಷದ ಹಿಂಬಾಲಕರಿಗೆ ಕಿವಿಗೆ ಬಿದ್ದಿದ್ದೆ ತಡ ತಮ್ಮ ನಾಯಕನಿಗೆ ಫೋನ್ ಮಾಡಿ “ ಎಲೆಕ್ಷನ್ ಗೆಲ್ಲಕೆ ಇದು ಒಳ್ಳೇ ಛಾನ್ಸು, ಒಂದು ಹಾರ ತಕ್ಕಂಡು, ಎಲ್ಡು ಲಕ್ಷ ರೂಪಾಯಿ ಕೈಲಿ ಹಿಡ್ಕಂಡು ಬೇಗ ಬಾರಣ್ಣ” ಎಂದು ಅವಲತ್ತುಕೊಂಡರು. ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋತಿದ್ದ ರಂಗೇಗೌಡ ಎಂಬ ಕಂಟ್ರಾಕ್ಟರ್ ತನ್ನ ಹಿಂಬಾಲಕರು ಹೇಳಿದ ತಕ್ಷಣ ಹಾರ ತುರಾಯಿ,  ಹಣ ಹಾಗೂ ಪತ್ರಿಕೆಗಳ ಛಾಯಾಚಿತ್ರಕಾರರೊಂದಿಗೆ ಶ್ಯಾನುಭೋಗರಹಳ್ಳಿಗೆ ಆಗಮಿಸಿ ಶವಕ್ಕೆ ಹೂವಿನ ಹಾರ ಹಾಕಿ, ಕಾಲು ಮುಟ್ಟಿ ನಮಸ್ಕರಿಸಿದನು. ನಂತರ ತಿಮ್ಮಕ್ಕನ ಕೈಗೆ ಎರಡು ಲಕ್ಷ ಹಣವನ್ನು ನೀಡುವುದರ  ಚಿತ್ರಗಳನ್ನು ತೆಗೆಸಿಕೊಂಡು, ಐನೂರು ಓಟು ಗ್ಯಾರಂಟಿ ಎಂದು ಲೆಕ್ಕ ಹಾಕುತ್ತಾ ಕಣ್ಣಿರು ಒರೆಸಿಕೊಂಡು ವಾಪಸ್ಸಾದನು.
ತನ್ನ ಎದುರಾಳಿ ಬಂದು ಹೋದ ತಿಳಿದಕೂಡಲೇ ಕಾರ್ಯಪ್ರವೃತ್ತನಾದ ಎಂ.ಎಲ್.ಎ. ಭೈರೇಗೌಡನು ಮುಖ್ಯಮಂತ್ರಿಗೆ ಫೋನಾಯಿಸಿ, ಜಿಲ್ಲಾಧಿಕಾರಿಯಿಂದ ಮೂರು ಲಕ್ಷ ರೂಪಾಯಿಯ ಚೆಕ್ ಬರೆಸಿಕೊಂಡು ತನ್ನ ಒಡ್ಡೋಲಗದ ಜೊತೆ ಹಾಜರಾದನು. ಪುಗ್ಸಟ್ಟೆಯ ಫೋಷಕರಿಗೆ ಪರಿಹಾರ ಧನ ವಿತರಿಸಿ, ಶವದ ಮುಂದೆ ನಿಂತು ಕಣ್ಣೀರು ಹಾಕಿ ಅದರ  ಫೋಟೊವೊಂದನ್ನು ತೆಗೆಸಿಕೊಂಡು ಸರ್ಕಾರದ ಎಲ್ಲಾ ಭಾಗ್ಯಗಳ ಯೋಜನೆಯನ್ನು ತಿಮ್ಮಕ್ಕನಿಗೆ ಕೊಡಿಸುವುದಾಗಿ ಆಶ್ವಾಸನೆ ಇತ್ತನು. ಮಗನ ಸಾವಿಗೆ ಹಾಜರಾಗಿ ಪರಿಹಾರದ ಮಳೆ ಸುರಿಸುತ್ತಿರುವ ರಾಜಕೀಯ ನಾಯಕರ ದಂಡನ್ನು ನೋಡಿ ಒಳಗೊಳಗೆ ಬೆರಗಾದ ತಿಮ್ಮಕ್ಕ ಯಾರೇ ಪುಡಾರಿಯು ಮನೆಯತ್ತ ಬರುತ್ತಿರುವುದನ್ನು ಕಂಡಕೂಡಲೇ ಧ್ವನಿ ಎತ್ತರಿಸಿ ರಾಗವಾಗಿ ಅಳತೊಡಗಿದಳು. ಹೆಚ್ಚೆಚ್ಚು ಅತ್ತಷ್ಟು ಲಾಭ ಎನ್ನುವುದು ಅವಳಿಗೆ ಅರಿವಾಗಿತ್ತು. ಸಂಜೆಯ ವೇಳೆಗೆ ಕೊಳೆತ ಶವದ ವಾಸನೆ ಸುತ್ತೆಲ್ಲಾ ಹರಡಲು ಆರಂಭಿಸಿದ್ದರಿಂದ, ಅದನ್ನು ಊರಿನ ಪ್ರಮುಖ ಬೀದಿಯಲ್ಲಿ ಉತ್ಸವ ಮೂರ್ತಿಯಂತೆ ಮೆರವಣಿಗೆ ಮಾಡಿ ತಿಮ್ಮಕ್ಕನ ಹೊಲದಲ್ಲಿ ಮಣ್ಣು ಮಾಡಲಾಯಿತು.
ರಾಜಕೀಯ ನಾಯಕರು ಊರಿಗೆ ಬಂದಿದ್ದ ವೇಳೆಯಲ್ಲಿ ತನ್ನ ಹಿಂಬಾಲಕರ ಕೈಗೆ ಸಾವಿರ, ಐನೂರರ ನೋಟುಗಳನ್ನು ತುರುಕಿ ಹೋಗಿದ್ದರು.  ಸಂಜೆ ಬಾರ್ ಗಳಿಗೆ ನುಗ್ಗಿದ ಅವರೆಲ್ಲರೂ  ಮನಸ್ಸೋ ಇಚ್ಚೇ  ಏಣ್ಣೆ ಏರಿಸಿಕೊಂಡು ಗತಿಸಿ ಹೋದ ಗೆಳೆಯನನ್ನು ನೆನೆದು  ಬಿಕ್ಕಿ ಬಿಕ್ಕಿ ಅತ್ತು ವಾಂತಿ ಮಾಡಿಕೊಂಡರು. ಮರು ದಿನ ಬೆಳಿಗ್ಗೆ ತಿಮ್ಮಕ್ಕನ ಮನೆಯಿಂದ ಪುಗ್ಸಟ್ಟೆಯ ಫೋಟೊ ಒಂದನ್ನು ಪಡೆದುಕೊಂಡು ಬೆಂಗಳೂರಿಗೆ ಹೋಗಿ  ಅವನ ಭಾವ ಚಿತ್ರವನ್ನು ಮುದ್ರಿಸಿ, ಅದರ ಕೆಳಗೆ “ಮತ್ತೊಮ್ಮೆ ಹುಟ್ಟಿ ಬಾ ಗೆಳೆಯ” ಎಂಬ ವಾಕ್ಯವೊಂದನ್ನು ಬರೆಸಿದರಲ್ಲದೆ, ಅದರ ಸುತ್ತ ತಮ್ಮ ಭಾವ ಚಿತ್ರಗಳನ್ನು ಎದ್ದುಕಾಣುವಂತೆ  ಹಾಕಿಸಿ ಪ್ಲೆಕ್ಸ್ ಬೋರ್ಡ್‍ಗಳನ್ನು ಸಿದ್ಧಪಡಿಸಿಕೊಂಡು ಬಂದು ಹೆದ್ದಾರಿ ಇಕ್ಕೆಲಗಳ ಲೈಟ್ ಕಂಬಗಳಿಗೆ ಕಟ್ಟಿದರು. ಪ್ಲೆಕ್ಸ್ ನೋಡಿದವರಿಗೆ ಇವರಲ್ಲಿ ಸತ್ತವನ್ಯಾರು? ಬದುಕಿರುವವರು ಯಾರು? ಎಂಬುದು ಗೊತ್ತಾಗದೆ ತಲೆ ಬಿಸಿಮಾಡಿಕೊಂಡು ಒಂದು ಪೆಗ್ ಏರಿಸಿಕೊಂಡು ಇದನ್ನು ಓದಬೇಕೆಂದು ತೀರ್ಮಾನಿಸಿಕೊಂಡರು. ಹನ್ನೊಂದನೆಯ ದಿನಕ್ಕೆ ರಾಜಕೀಯ ಪಕ್ಷಗಳ ಮೇಲಾಟದ ಸ್ಪರ್ದೆಯಿಂದಾಗಿ ಪುಗ್ಸಟ್ಟೆಯ ವೈಕುಂಠ ಸಮಾರಾಧನೆ ಕೂಡ ಭರ್ಜರಿಯಾಗಿ ನೆರವೇರಿತು. ಪುಗ್ಸಟ್ಟೆಯ ಸಾವು  ಊರಿನ ಜನರಿಂದ ಮರೆಯಾಯಿತು.  ಈ ಸಾವಿನಿಂದಾಗಿ ತಿಮ್ಮಕ್ಕನಿಗೆ.  ನಷ್ಟಕ್ಕಿಂತ ಹೆಚ್ಚು ಲಾಭವಾಯಿತು. ಒಂದು ಎಕರೆ ಹೊಲ, ಎರಡು ಎಮ್ಮೆಗಳ ಜೊತೆ ದಿನದೂಡುತ್ತಿದ್ದ ತಿಮ್ಮಕ್ಕ ಪರಿಹಾರದ ಹಣದಲ್ಲಿ ಮೈ ತುಂಬಾ ಚಿನ್ನದ ಒಡವೆಗಳು, ಕೈಗೆ ಬಳೆಗಳು ಹೀಗೆ ತರಾವರಿ ಆಭರಣಗಳನ್ನು ಮಾಡಿಸಿಕೊಂಡು ಕಂಡವರ ಕಣ್ಣು ಕುಕ್ಕತೊಡಗಿದಳು. ಊರಿನ ಕೆಲವು ಹೆಂಗಸರಂತೂ “ ನಮ್ಮನೆ ಮೂದೇವಿ ಸತ್ತಿದ್ದರೆ ಆಗಿತ್ತು, ನಾವೂ ತಿಮ್ಮಕ್ಕನಂತೆ ಮೆರಿಬಹುದಿತ್ತು” ಎಂದು ಹೊಟ್ಟೆ ಉರಿದುಕೊಂಡರು.

ಮರು ವರ್ಷದ ಸಂಕ್ರಾತಿಯ ದಿನದಂದು ಬೆಳ್ಳಂಬೆಳಿಗ್ಗೆ ಪುಗ್ಸಟ್ಟೆ ಪುಟ್ರಾಜು ತನ್ನ ಪತ್ನಿ ಗುಣಸಾಗರಿಯ ಜೊತೆ ತನ್ನ ಪುಟ್ಟ ಮಗುವನ್ನು ಎತ್ತಿಕೊಂಡು ಶ್ಯಾನುಭೋಗರ ಹಳ್ಳಿಯ ಮುಖ್ಯ ರಸ್ತೆಯಲ್ಲಿ ನಡೆದು ಬರುತ್ತಿದ್ದಂತೆ ಊರ ಜನರೆಲ್ಲಾ ಬೆಚ್ಚಿ ಬಿದ್ದರು. ತನ್ನ ಪ್ರೀತಿ ಪ್ರಣಯದ ವಿಷಯದಲ್ಲಿ ಅವ್ವನ ಮೇಲೆ ಮುನಿಸಿಕೊಂಡಿದ್ದ ಪುಗ್ಸಟ್ಟೆಯು ಗುಣಸಾಗರಿಯ ನೆರವಿನಿಂದ ಅವಳ ತಾಯಿಯ ಊರಾದ ತಮಿಳುನಾಡಿನ ತಿರುಪ್ರ್ಪರಿಗೆ ಹೋಗಿ ಆಕೆಯನ್ನು ಮದುವೆಯಾಗಿದ್ದನು. ಗಂಡ ಹೆಂಡತಿ ಇಬ್ಬರೂ ಅಲ್ಲಿನ ಸಿದ್ಧು ಉಡುಪುಗಳ ಕಾರ್ಖಾನೆಯಲ್ಲಿ ದುಡಿಯುತ್ತಾ ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿದ್ದರು. ಹುಟ್ಟಿದ ಊರಿನ ನೆನಪಾಗಿ ಪುಗ್ಸಟ್ಟೆಯು ಧೈರ್ಯ ಮಾಡಿ ತನ್ನ ಪತ್ನಿ ಹಾಗೂ ಪುಟ್ಟ ಮಗುವಿನೊಂದಿಗೆ ಊರಿಗೆ ಕಾಲಿರಿಸಿದ್ದನು. ಯಾವುದೋ ಅನಾಥ ಶವವನ್ನು ಊರಿಗೆ ತಂದು ಶವ ಸಂಸ್ಕಾರ ಮಾಡಿರುವ ವಿಷಯ ತಿಳಿಯದ ಅವನು “ ಊರಿನ ಜನರೇಕೆ ಏನನ್ನೂ ಮಾತನಾಡದೆ ಹೀಗೆ ನನ್ನನ್ನು  ನೋಡುತ್ತಿದ್ದಾರಲ್ಲಾ?” ಎಂದು ಯೋಚಿಸುತ್ತಾ ಮನೆಯತ್ತಾ ಹೆಜ್ಜೆ ಹಾಕಿದನು.
ಮನೆಯ ಜಗುಲಿಯ ಮೇಲೆ ಕುಳಿತಿದ್ದ ತನ್ನಪ್ಪ ಸಪ್ಪೆ ನಿಂಗಣ್ಣನನ್ನು ನೋಡಿದ ಪುಗ್ಸಟ್ಟೆಯು ಅಪ್ಪಾ ಎಂದು ಕರೆಯುತ್ತಿದ್ದಂತೆ  ತನ್ನ ಮಗ ಜೀವಂತವಾಗಿರುವುದನ್ನು ನೋಡಿ ಹೇಗೆ ಪ್ರತಿಕ್ರಿಯಿಸಬೇಕು ಎಂದು ನಿಂಗಣ್ಣ ಯೋಚಿಸುತ್ತಿದ್ದಂತೆ, ಮನೆಯೊಳಗಿಂದ ಬಾಗಿಲಿಗೆ ಬಂದ ತಿಮ್ಮಕ್ಕನಿಗೆ ತನ್ನ ಮಗ ಮತ್ತು ಸೊಸೆಯನ್ನು ನೋಡಿ ಎದೆ ಧಸಕ್ಕೆಂದಿತು. ಅವಳಿಗೆ ಮಗ ಜೀವಂತವಾಗಿರುವ ಸಂತೋಷಕ್ಕಿಂತ, ತನಗೆ ದಕ್ಕಿದ ಪರಿಹಾರ ಕೈ ತಪ್ಪಿತಲ್ಲಾ ಎಂಬ ನೋವಾಗಿ “ ಥೂ ನಿನ್ನ ಎಕ್ಕುಟ್ಟು ಹೋಗ, ಬರ ಬಾರದ್ ಬಂದು ಚಾಪೆ ಸುತ್ಕಂಡು ಹೋಗ, ಯಾಕ್ ಬರೋಕೆ ಹೋದೆ” ಎಂದು ಮಗನನ್ನು ಶಪಿಸತೊಡಗಿದಳು. ತನ್ನ ಹೆತ್ತ ಅಪ್ಪ ಮತ್ತು ಅವ್ವ ಹಾಗೂ ಊರಿನ ಜನರ ವಿಚಿತ್ರ ಪ್ರತಿಕ್ರೆಯೆನ್ನು ನೋಡುತ್ತಾ ನಡುಬೀದಿಯಲ್ಲಿ ನಿಂತ ಪುಗ್ಸಟ್ಟೆ ಮತ್ತು ಗುಣಸಾಗರಿ ಇಬ್ಬರೂ ದಿಕ್ಕು ತೋಚದಂತಾದರು.
( ವಿಜಯವಾಣಿ  ದಿನಪತ್ರಿಕೆಯ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾದ ಕಥೆ)
ಚಿತ್ರಗಳು ಸೌಜನ್ಯ- ಬಿ.ಮಾರುತಿ ಧಾರವಾಡ ಮತ್ತು ಹಮೀದ್, ಪಶ್ಚಿಮ ಬಂಗಾಳ

ಶುಕ್ರವಾರ, ಮಾರ್ಚ್ 9, 2018

ಕನ್ನಡ ಸಾಂಸ್ಕøತಿಕ ಲೋಕದ ದಿಗ್ಗಜ ಡಿ.ವಿ.ಗುಂಡಪ್ಪನವರ ನೆನಪುಗಳು




ಕನ್ನಡ ಸಾಹಿತ್ಯ, ಸಂಸ್ಕøತಿ ಅಥವಾ ಸಂಗೀತ ಇವುಗಳಲ್ಲದೆ ಸ್ವಾತಂತ್ರ್ಯ ಪೂರ್ವದ ಭಾರತ ಮತ್ತು ಕರ್ನಾಟಕದ ವಿದ್ಯಾಮಾನಗಳ ಕುರಿತಂತೆ ಅವಲೋಕಿಸಲು ಮಾಹಿತಿಗಾಗಿ  ಡಿ.ವಿ.ಜಿ. ಎಂದು ಪ್ರಸಿದ್ಧರಾದ ಡಿ.ವಿ.ಗುಂಡಪ್ಪನವರ ಸಾಹಿತ್ಯ ಕೃತಿಯ ಸಂಪುಟಗಳನ್ನು ಒಮ್ಮೆ ಗಮನಿಸಿದರೆ ಸಾಕುಎಲ್ಲಾ ರೀತಿಯ ವಿವರವಾದ ಮಾಹಿತಿಗಳು ಲಭ್ಯವಾಗುತ್ತವೆ. ಡಿ.ವಿ.ಜಿ. ಯವರ ನೆನಪಿಗಾಗಿ ಕರ್ನಾಟಕ ಸರ್ಕಾರವು 1999 ರಲ್ಲಿ ಡಾ.ಹಾ.ಮಾ.ನಾ. ಸಂಪಾದಕತ್ವದಲ್ಲಿ ಹೊರತಂದಿರುವ  ಡಿ.ವಿ.ಜಿ.ಕೃತಿ ಶ್ರೇಣಿ ಸಂಪುಟಗಳನ್ನು ಗಮನಿಸಿದಾಗಅವರ ಅಗಾಧವಾದ ಜ್ಞಾನದ ಸಂಪತ್ತು ನಮ್ಮಲ್ಲಿ ವಿಸ್ಮಯವನ್ನುಂಟು ಮಾಡುತ್ತದೆ
ಒಬ್ಬ ವ್ಯಕ್ತಿ ಕನ್ನಡದಲ್ಲಿ ಇಷ್ಟೊಂದು ಅಗಾಧ ಬರೆವಣಿಗೆ ಮಾಡಲು ಸಾಧ್ಯವೆ? ಎಂದು ಅಚ್ಚರಿಯಾಗುವಷ್ಟು ಶ್ರೇಷ್ಠ ಸಾಹಿತ್ಯವನ್ನು ಸೃಷ್ಟಿಸಿರುವ ಡಿ.ವಿ.ಜಿ.ಯವರು ಒಂದು ವಿಶ್ವ ವಿದ್ಯಾಲಯ ಮಾಡಬಹುದಾದ ಕೆಲಸವನ್ನು ಒಬ್ಬ ವ್ಯಕ್ತಿಯಾಗಿ, ಒಬ್ಬ ಪತ್ರಕರ್ತರಾಗಿ, ಸಂಸ್ಕø ಮತ್ತು ಇಂಗ್ಲೀಷ್ ಭಾಷೆಯ ವಿದ್ವಾಂಸರಾಗಿ ಮಾಡಿದ್ದಾರೆ. ಅವರ ಒಟ್ಟು ಬರೆವಣಿಗೆಯು ಹತ್ತು ಸಾವಿರ ಪುಟಗಳನ್ನು ಮೀರುತ್ತದೆ ಎಂದರೆ, ಅವರ ಕ್ರಿಯಾಶೀಲತೆ ಮತ್ತು ಸೃಜನಶೀಲತೆ ಎಂತಹದ್ದು ನಮಗೆ ಅರಿವಾಗುತ್ತದೆ.
ಕನ್ನಡದ ಸಾಹಿತ್ಯ ಮತ್ತು ಸಾಂಸ್ಕತಿಕ ಜಗತ್ತು ನಾಲ್ವರು ಮಹನೀಯರಿಗೆ ಚಿರಕಾಲ ಖುಣಿಯಾಗಿರಬೇಕಾಗಿದೆ. ಆಡು ಮುಟ್ಟಿದ ಸೊಪ್ಪಿಲ್ಲ ಎಂಬ ಗಾದೆಯಂತೆ ರಾಷ್ಟ್ರಕವಿ ಗೋವಿಂದ ಪೈ, ಶಿವರಾಮಕಾರಂತರು, ಡಿ.ವಿ.ಜಿ ಹಾಗೂ ನಿರಂಜನ ಇವರುಗಳು ಸೃಷ್ಟಿ ಮಾಡಿರುವ ವೈವಿಧ್ಯಮಯ ಸಾಹಿತ್ಯವನ್ನು ಗಮನಿಸಿದರೆ ಸಾಕು ಆಶ್ಚರ್ಯವಾಗುತ್ತದೆ. ಜೊತೆಗೆ ಇವರೆಲ್ಲರೂ ಯಾವುದೇ ವಿಶ್ವ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರಾಗಿ ನೆಮ್ಮದಿಯ ಬದುಕು ಕಟ್ಟಿಕೊಂಡವರಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ನಿರಂತರ ತಿರುಗಾಟ ನಡೆಸುತ್ತಾ, ಅನುಭವಕ್ಕೆ ದಕ್ಕಿದ ಸಂಗತಿಗಳೆಲ್ಲವನ್ನು ದಾಖಲಿಸಿದರು. ಜಗತ್ತಿನಲ್ಲಿರುವ ಜ್ಞಾನವೆಲ್ಲಾ ಕನ್ನಡ ಭಾಷೆಯಲ್ಲಿಯೂ ಇರಲಿ ಎಂದು ಹಗಲಿರುಳು ಹಂಬಲಿಸಿದರು. ಹಾಗಾಗಿ ಕಥೆ, ಕಾದಂಬರಿ, ಕಾವ್ಯ, ಸಂಶೋಧನೆ, ನಾಟಕ, ಅನುವಾದ, ವಿಜ್ಞಾನ ಸಾಹಿತ್ಯ, ಮಕ್ಕಳ ಸಾಹಿತ್ಯ, ಅನುವಾದ ಹೀಗೆ ಅನೇಕ ಪ್ರಕಾರಗಳು ಕನ್ನಡ ಓದುಗರಿಗೆ ದೊರಕುವಂತಾದವು. ನಾಲ್ವರು ಮಹನೀಯರು ಸೃಷ್ಟಿ ಮಾಡಿದ ಸಾಹಿತ್ಯ ಪ್ರಕಾರಗಳನ್ನು  ಗಮನಿಸಿದರೆ ಹೆಮ್ಮೆಯಾಗುತ್ತದೆ. ಇಂತಹ ಪ್ರತಿಭಾವಂತರನ್ನು ಪಡೆದ ನಾವು ಕನ್ನಡಿಗರು ಪುಣ್ಯವಂತರು ಎಂಬ ನೆಮ್ಮದಿಯ ಭಾವ ಮನದಲ್ಲಿ ಮೂಡುತ್ತದೆ.
ಡಿ.ವಿ.ಜಿಯವರ ಪೂರ್ವಿಕರು ಮೂಲತಃ ತಮಿಳುನಾಡಿನ ತಿರುಚರಾಪಳ್ಳಿವರು.  ಅವರ ಮುತ್ತಾತ ಶೇಕದಾರ ಗುಂಡಪ್ಪ ಎಂಬುವರು ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ಬಂದು ನೆಲೆಸಿದವರು. ಸಾಧಾರಣ ಬ್ರಾಹ್ಮಣ ಕುಟುಂಬವಾಗಿದ್ದ ವೆಂಕಟರಮಣಯ್ಯ ಎಂಬುವರ ಪುತ್ರನಾಗಿ ಜನಿಸಿದ ಗುಂಡಪ್ಪನವರ ಪೂರ್ಣ ನಾಮಧೇಯ ದೇವನಹಳ್ಳಿ ವೆಂಕಟರÀಮಣಯ್ಯ ಗುಂಡಪ್ಪ ಎಂಬುದಾಗಿದೆ. ತಮ್ಮ ಕುಟುಂಬದ ವಿವರ ಹಾಗೂ ಬಾಲ್ಯದ ಪಡಿಪಾಟಲಿನ ಬದುಕನ್ನು ಡಿ.ವಿ.ಜಿಯವರು ತಮ್ಮ ಜಾÐಪಕ ಚಿತ್ರ ಶಾಲೆ ಕೃತಿಯಲ್ಲಿ ಗುಂಡಪ್ಪನವರು ಸ್ವಾರಸ್ಯವಾಗಿ ಬಣ್ಣಿಸಿದ್ದಾರೆ. ಅವರ ಬರೆವಣಿಗೆಯು ಎಷ್ಟೊಂದು ವೈವಿಧ್ಯಮಯವಾಗಿರುವ ಹಾಗೆ ಅವರ ಬದುಕು ಬದುಕು ಸಹ ಹೋರಾಟದಿಂದ ಕೂಡಿದ್ದು ವರ್ಣರಂಜಿತವಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಅಷ್ಟೆಲ್ಲಾ ಕಡು ಕಷ್ಟದ ಬದುಕನ್ನು ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಅವರು ಸ್ವೀಕರಿಸಿ ಬದುಕಿದರು. ಎಲ್ಲಿಯೂ ನೋವನ್ನಾಗಲಿ, ಅಸಮಾಧಾನವನ್ನಾಗಲಿ ಅವರು ಹೊರಹಾಕಲಿಲ್ಲ. ಇಂತಹ ಉದಾತ್ತ ಹಾಗೂ ಸಂತನ ಗುಣವಿದ್ದುದರಿಂದಲೇ, ಡಿ.ವಿ.ಜಿ. ಅವರು ಉತ್ಕøಷ್ಟವಾದವನಸುಮಎಂಬ ಕವಿತೆಯನ್ನು ಹಾಗೂ ಮಂಕುತಿಮ್ಮನ ಕಗ್ಗ ಕಾವ್ಯದಲ್ಲಿಬದುಕು ಜಂಟಕಾ ಬಂಡಿ/ ವಿಧಿ ಅದರ ಸಾಹೇಬ/ ಕುದುರೆ ನೀನ್ ಅವನು ಪೇಳ್ವಂತೆ ಪಯಣಿಗನು/ ಮದುವೆಗೋ, ಮಸಣಕೋ ಹೋಗೆಂದ ಕಡೆ ಹೋಗು/ ಪದಕುಸಿಯೇ ನೆಲವಿಹುದು ಮಂಕುತಿಮ್ಮ. ಎಂಬ ಜೀವನ ದರ್ಶನವನ್ನು ನೀಡಲು ಅವರಿಗೆ ಸಾಧ್ಯವಾಯಿತು.
ಮುಳಬಾಗಿಲು ಪಟ್ಟಣದಲ್ಲಿ ಲೋಯರ್ ಸೆಕಂಡರಿ ಶಿಕ್ಷಣವನ್ನು ಮುಗಿಸಿದ ಅವರು, ಪ್ರೌಡಶಾಲಾ ಶಿಕ್ಷಣಕ್ಕಾಗಿ ಮೈಸೂರಿಗೆ ಹೋಗಿ ವಾರಾನ್ನದ ಮೂಲಕ ಮಹಾರಾಜ ಹೈಸ್ಕೂಲ್ ಗೆ ಸೇರಿದರು. ಆದರೆ, ತಮ್ಮ ಕುಟುಂಬದ ತೊಂದರೆಯ ಮೈಸೂರು ತೊರೆದು ಕೋಲಾರ ಶಾಲೆಗೆ ಸೇರಿ ಬಡತನ ಮತ್ತು ಹೋರಾಟದ ನಡುವೆ ಶಿಕ್ಷಣ ಮುಗಿಸಿದರು. ವೇಳೆಗಾಗಲೇ ಕನ್ನಡ, ಸಂಸ್ಕø, ಇಂಗ್ಲೀಷ್ ಭಾಷೆಯಲ್ಲಿ ಅವರು ಪ್ರೌಡಿಮೆಯನ್ನು ಸಾಧಿಸಿದ್ದರು.
ಗುಂಡಪ್ಪನವರು ಪ್ರೌಡಶಾಲೆ ಶಿಕ್ಷಣ ಮುಗಿಸುವ ವೇಳೆಗೆ ಅವರಿಗೆ ವಿವಾಹವಾಗಿತ್ತು. ಅವರು ಸರ್ಕಾರಿ ಹುದ್ದೆ ಹಿಡಿಯಲಿ ಎಂಬುದು ಕುಟುಂಬದ ಆಕಾಂಕ್ಷೆ. ಆದರೆ, ಸ್ವತಂತ್ರವಾಗಿ ಬದುಕಬೇಕೆಂಬುದು ಅವರ ಗುರಿ. ಹಾಗಾಗಿ ಅವರು ಜೀವನ ನಿರ್ವಹಣೆಗೆ ಮಾಡಿದ ಕೆಲಸಗಳಿಗೆ ಲೆಕ್ಕ ಇಟ್ಟವರಿಲ್ಲ. ಕೋಲಾರದಲ್ಲಿ ಹೈಸ್ಕೂಲ್ ಓದುವಾಗಲೇ  ಕ್ರೈಸ್ತ ಧರ್ಮದ ವಿಚಾರಗಳನ್ನು ಅನುವಾದ ಕೆಲಸ ಮಾಡುತ್ತಾ ಅದರಿಂದ ಸಿಗುತ್ತಿದ್ದ ಐದು ರೂಪಾಯಿ ಸಂಭಾವನೆಯಲ್ಲಿ ಶಿಕ್ಷಣ ಮುಗಿಸಿದರು. ಕೋಲಾರದ ಬಳಿಯ ಕೆ.ಜಿ.ಎಫ್. ಸೋಡಾ ಪ್ಯಾಕ್ಟರಿಯಿಂದ ಹಿಡಿದು, ಬೆಂಗಳೂರು ನಗರಕ್ಕೆ ಬಂದು ಜಟಕಾ ಬಂಡಿಗಳಿಗೆ ಬಣ್ಣ ಹೊಡೆಯುವ ಕೆಲಸವನ್ನೂ ಸಹ ಅವರು ನಿರ್ವಹಿಸಿದರು. ಅಂತಿಮವಾಗಿ ಅವರು ಪತ್ರಿಕಾ ರಂಗದಲ್ಲಿ ಬದುಕು ಕಟ್ಟಿಕೊಂಡರು. ಪತ್ರಿಕೋದ್ಯಮವನ್ನು ಅವರು ಬಯಸಿ ಆಯ್ಕೆ ಮಾಡಿಕೊಳ್ಳಲಿಲ್ಲ. ಜೀವನೋಪಾಯಕ್ಕಾಗಿ ಅದು ಅವರಿಗೆ ಅನಿವಾರ್ಯವಾಯಿತು. ನಂತರ ದಿನಗಳಲ್ಲಿ ಜೀವನ ಪೂರ್ತಿ  ಅವರ ವೃತ್ತಿಯಾಯಿತು.
ಆರಂಭದಲ್ಲಿ ಅವರು ಸೂರ್ಯೋದಯ ಪ್ರಕಾಶಿಕೆ ಎಂಬ ಪತ್ರಿಕೆಯಲ್ಲಿ ಕೆಲಸ ಮಾಡಿದರು. ಎರಡು ವರ್ಷಗಳ ನಂತರ ಪತ್ರಿಕೆ ನಿಂತು ಹೋದ ಪರಿಣಾಮ, ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶದಿಂದ ಹೊರಡುತ್ತಿದ್ದಈವಿನಿಂಗ್ ಮೈಲ್ಎಂಬ ಪತ್ರಿಕೆಗೆ ಲೇಖನ ಬರೆಯುತ್ತಿದ್ದರು. ಇದಕ್ಕಾಗಿ ತಿಂಗಳಿಗೆ ಎರಡು ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಅವರು, ಭಾರತಿ, ಮೈಸೂರು ಸ್ಯಾಂಡರ್ಡ್ ಹಾಗೂ ನಡೆಗನ್ನಡ ಎಂಬ ಪತ್ರಿಕೆಗಳಿಗೂ ಸಹ ಲೇಖನ ಬರೆದು ಜೀವನ ನಿರ್ವಹಣೆ ಮಾಡುತ್ತಿದ್ದರು. ಹೀಗೆ ಅನೇಕ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಡಿ.ವಿ.ಜಿ. ಅವರು ಮದ್ರಾಸ್ ನಗರಕ್ಕೆ ತೆರಳಿ ಅಲ್ಲಿನ ಪ್ರಸಿದ್ಧ  ಹಿಂದೂ ಹಾಗೂ ಇಚಿಡಿಯನ್ ಪೇಟ್ರಿಯಟ್ ಹಾಗೂ ಇಂಡಿಯನ್ ರಿವ್ಯೂ ಪತ್ರಿಕೆಗಳಿಗೆ ಲೇಖನ ಬರೆಯುತ್ತಾ ಪ್ರಸಿದ್ಧ ಲೇಖಕ ಹಾಗೂ ಪತ್ರಕರ್ತರಾಗಿ ಮುಂಚೂಣಿಗೆ ಬಂದರು.
ಕನ್ನಡ ಪತ್ರಿಕೋದ್ಯಮದ ಪಿತಾಮಹಾರಲ್ಲಿ ಒಬ್ಬರೆಂದು ಪರಿಗಣಿಸಬಹುದಾದ ಡಿ.ವಿ.ಜಿ.ಯವರು ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕುತ್ತಾ, ಬರೆಯುತ್ತಾ, ಎಲ್ಲಾ ಜಾತಿ, ಧರ್ಮ ಹಾಗೂ ಪಂಥಗಳನ್ನು ಮೀರಿ ನಿಂತವರು. ಕನ್ನಡದ ಸಾಹಿತ್ಯ ಹಾಗೂ ಪತ್ರಿಕಾ ರಂಗದಲ್ಲಿ ಯಾರೋಬ್ಬರೂ ದಾಖಲಿಸಲಾಗದಂತಹ ಅಮರೂಪದ ಮಾಹಿತಿಗಳನ್ನು ತಮ್ಮ ಜ್ಞಾಪಕ ಚಿತ್ರ ಶಾಲೆಯಲ್ಲಿ ದಾಖಲಿಸಿದವರು. ಸ್ವಾತಂತ್ರ್ಯಪೂರ್ವದ ಯಾವುದೇ ಮಹಾನ್ ಕಲಾವಿದರು, ಸಂಗೀತಗಾರರು, ವಿದ್ವಾಂಸರು ಹೀಗೆ ಅನೇಕ ರಂಗಗಳ ಪ್ರತಿಭೆಗಳನ್ನು ಯಾವುದೇ ಜಾತಿಯ ಸೋಂಕಿಲ್ಲದೆ, ತಾರತಮ್ಯವಿಲ್ಲದೆ ಮುಕ್ತ ಮನಸ್ಸಿನಿಂದ ದಾಖಲಿಸಿದ ಹೃದಯವಂತರಾದ ಡಿ.ವಿ.ಜಿ. ಅವರು ಇಂದಿಗೂ ಕನ್ನಡ ಪತ್ರಿಕೋದ್ಯಮಕ್ಕೆ ಮಾದರಿಯಾಗಿದ್ದಾರೆ.

ಬದುಕಿನ ಅಭದ್ರತೆಯ ನಡುವೆ ತಮ್ಮ ಸೃಜನಶೀಲತೆಯನ್ನು ಕಾಪಾಡಿಕೊಂಡು ಬಂದಿದ್ದ ಅವರ ಅಧ್ಯಯನ ಮತ್ತು ಆಸಕ್ತಿ ನಿಜಕ್ಕೂ ಆಶ್ಚರ್ಯ ಪಡುವಂತಹದ್ದು. ಇತಿಹಾಸ, ಸಂಗೀತ, ಕಾವ್ಯಮೀಮಾಂಸೆ, ಕನ್ನಡ ವ್ಯಾಕರಣ, ಸಂಸ್ಕತ ಗ್ರಂಥಗಳು ಮತ್ತು ಧರ್ಮಗ್ರಂಥಗಳ ವ್ಯಾಖ್ಯಾನ, ಅನುವಾದ ಹೀಗೆ ಎಲ್ಲಾ ರಂಗಗಳಲ್ಲಿ ತಮ್ಮ ತಿಳುವಳಿಕೆಯನ್ನು ವಿಸ್ತರಿಸಿಕೊಳ್ಳುತ್ತಾ, ಅವುಗಳ ಮೂಲಕ ದಕ್ಕಿದ ಅನುಭವವನ್ನು ಕನ್ನಡಿಗರಿಗೆ ಉಣಬಡಿಸುತ್ತಾ ಹೋದರು. ಉಮರನ ಒಸಗೆ,  ಮಂಕು ತಿಮ್ಮನ ಕಗ್ಗ, ಶ್ರೀ ರಾಮ ಪರೀಕ್ಷಾಣಂ, ಶ್ರೀಕೃಷ್ಣ ಪರೀಕ್ಷಣಂ,  ರನ್ನ, ಗಾಂಧೀಜಿ, ಗೋಖಲೆ, ದಾದಾಬಾಯಿ ನವರೋಜಿ ಕುರಿತ ಬಿಡಿಲೇಖನಗಳು, ಕಲೆ, ಸಂಸ್ಕತಿ, ಸಂಗೀತ ಹಾಗೂ ತೆಲುಗಿನ ಕ್ರೇತ್ರಜ್ಞ ( ತೆಲುಗು ಭಾಷೆಯ ಶೃಂಗಾರ ಕಾವ್ಯ ಬರೆದ ಕವಿ) ಕುರಿತ ಅಧ್ಯಯನಗಳು ಇವೆಲ್ಲವನ್ನೂ ಗಮನಿಸಿದರೆ ಡಿ.ವಿ.ಜಿ. ಆಸಕ್ತಿ ನಮ್ಮಲ್ಲಿ ಬೆರಗು ಮೂಡಿಸುತ್ತವೆ.
ಕರ್ನಾಟಕದಲ್ಲಿ ಸುಮಾರು ಹದಿನೆಂಟು ವರ್ಷಗಳ ಕಾಲಕರ್ನಾಟಕಎಂಬ ಪತ್ರಿಕೆಯನ್ನು ನಡೆಸಿದ ಅವರು ನಂತರ ಅದನ್ನು ನಿಲ್ಲಿಸಿದರು. ಆನಂತರ ಸಂಪೂರ್ಣವಾಗಿ ಓದು, ಬರೆವಣಿಗೆ, ಹಾಗೂ ಸಾರ್ವಜನಿಕ ಬದುಕಿನಲ್ಲಿ ತೊಡಗಿಸಿಕೊಂಡಿದ್ದ ಡಿ.ವಿ.ಜಿ. ಎಂದಿಗೂ ತಮ್ಮ ಸ್ಥಾನಮಾನವನ್ನು ದುರಪಯೋಗ ಪಡಿಸಿಕೊಂಡವರಲ್ಲ. ಅಂದಿನ ಮೈಸೂರು ಸಂಸ್ಥಾನದ ದಿವಾನರಾದ ಸರ್.ಎಂ.ವಿಶ್ವೇಶ್ವರಯ್ಯ, ಮಿರ್ಜಾಇಸ್ಮಾಯಿಲ್ ಸೇರಿದಂತೆ ಅನೇಕ ಗಣ್ಯರು ಡಿ.ವಿ.ಜಿ.ಯವರ ಸಲಹೆ ಪಡೆಯುತ್ತಿದ್ದರು. ತಾನು ಬದುಕಿರುವುದೇ ಸಾರ್ವಜನಿಕ ಸೇವೆಗಾಗಿ ಎಂಬಂತೆ ಬದುಕಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿಶ್ವವಿದ್ಯಾಲಯಗಳಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.   ಸದಾ ಎಲೆ ಮರೆಯ ಕಾಯಿಯಂತೆ ಬದುಕಿದ ಡಿ.ವಿ.ಜಿ. ಅವÀರಿಗೆ  ಮೈಸೂರು ವಿ.ವಿ.ಯಿಂದ ಗೌರವ ಡಾಕ್ಟರೇಟ್, 1967 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಹಾಗೂ ಹದಿನೆಂಟನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಅರಸಿಕೊಂಡು ಬಂದವು. ಅನೇಕ ಸಂಘ ಸಂಸ್ಥೆಗಳು ಮತ್ತು ಗಣ್ಯರು ನೀಡಿದ ಗೌರವ ಧನದ ಚೆಕ್ ಗಳನ್ನು ಎಂದಿಗೂ ನಗದಾಗಿ ಪಾವತಿಸಿಕೊಳ್ಳದ ಡಿ.ವಿ.ಜಿ. ಅವರು ಸರ್ಕಾರ ನೀಡಿದ ಐನೂರು ಮಾಸಾಶನವನ್ನು ಕೂಡ ನಯವಾಗಿ ತಿರಸ್ಕರಿಸಿದರು. ಅವರ ಇಳಿ ವಯಸ್ಸಿನಲ್ಲಿ ನಡೆದ ಸಾರ್ವಜನಿಕ ಸನ್ಮಾನ ಸಮಾರಂಭದಲ್ಲಿ ನೀಡಿದ ಒಂದು ಲಕ್ಷ ಗೌರವ ನಿಧಿಯನ್ನು ಗೋಖಲೆ ಸಾರ್ವಜನಿಕ ಸಂಸ್ಥೆಗೆ ಉಡುಗರೆಯಾಗಿ ನೀಡಿದರು.  ತಮ್ಮ ಇಪ್ಪತ್ತನಾಲ್ಕನೆ ವಯಸ್ಸಿಗೆ ಪತ್ನಿಯನ್ನು ಕಳೆದುಕೊಂಡಿದ್ದ ಡಿ.ವಿ.ಜಿ. ಬದುಕಿನುದ್ದಕ್ಕೂ ಒಬ್ಬ ಸಂತನಂತೆ, ಫಕೀರನಂತೆ ಬದುಕಿ, ಇಂದಿಗೂ ಸಹ ಪತ್ರಕರ್ತರಿಗೆ ಮತ್ತು ಲೇಖಕರಿಗೆ ಮಾದರಿಯಾಗಿದ್ದಾರೆ.