ಭಾನುವಾರ, ಜೂನ್ 10, 2018

ಅಪರೂಪದ ಅನ್ವೇಷಣೆಯ ಕೃತಿಯ ಕುರಿತು



ಮೊದಲಿನ ಹಾಗೆ ಪುಸ್ತಕ ಕೊಳ್ಳುವ ಹಾಗೂ ಓದುವ ಶಕ್ತಿ ಕುಂದು ಹೋಗುತ್ತಿದೆ.  ಆರ್ಥಿಕ ಕೊರತೆಯ ನಡುವೆಯೂ ತಿಂಗಳಿಗೆ ಒಂದು ಪುಸ್ತಕವನ್ನು ಕೊಳ್ಳುವ  ಮತ್ತುಓದುವ ಪ್ರೀತಿ ಉಳಿಸಿಕೊಂಡಿದ್ದೀನಿ.  ಕಳೆದ  ಹದಿನೈದು ದಿನಗಳ  ದ ಹಿಂದು ಪತ್ರಿಕೆಯಲ್ಲಿ  ಪ್ರಕಟವಾಗಿದ್ದ  ವಿಮರ್ಶೆಯನ್ನು  ಓದಿದ ನಂತರ   ಸ್ಟೀವರ್ಟ್ ಗಾರ್ಡ್ ಮನ್ ಎಂಬ ಅಮೇರಿಕಾ ಮೂಲದ ಇತಿಹಾಸಕಾರ ಹಾಗೂ ಸಂಶೋಧಕ ನ ಅಧ್ಯಯನ ಕೃತಿ “ ದೇರ್ ಅಂಡ್ ಬ್ಯಾಕ್:  ಎಂಬ ಜಗತ್ತಿನ ಹನ್ನೆರೆಡು ಅನ್ವೇಷಣಾ ಮಾರ್ಗಗಳ ಕುರಿತು ಅಧ್ಯಯನವನ್ನು ಒಳಗೊಂಡಿರುವ ಕೃತಿಯನ್ನು ತರಿಸಿಕೊಂಡು ಓದಿದೆ.   ಈ ಕೃತಿಯನ್ನು ಓದಿದಾಗ  ಲೇಖಕರು ಎಂಬ ಮುಖವಾಡ ಹೊತ್ತ ನನ್ನಂತಹವರು ನೀರಿಲ್ಲದ ಬಾವಿಗೆ ತಲೆಕೆಳಕಾಗಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದು ಲೇಸು ಎನಿಸಿತು. . ಅಧ್ಯಯನದ ಗಂಧ ಗಾಳಿಯಿಲ್ಲದ ಹಾಗೂ  ಆಸಕ್ತಿಯಿಲ್ಲದೆ, ಕೇವಲ ಫೇಸ್ ಬುಕ್ ಮತ್ತು ವಾಟ್ಸ್ ಅಪ್ ಹಾಗೂ  ಟ್ವಿಟ್ಟರ್  ಎಂಬ ಸಾಮಾಜಿಕ ತಾಣಗಳಲ್ಲಿ ಗಾಳಿಯಲ್ಲಿ ಕತ್ತಿ ತಿರುವಿಸಿದ ಹಾಗೆ ಬರೆವಣಿಗೆಯಲ್ಲಿ ತೊಡಗಿರುಕೊಂಡಿರುವ ಲೇಖಕರು, ಚಿಂತಕರು, ಬುದ್ದಿಜೀವಿಗಳು ಎಂಬ ಆರೋಪ ಹೊತ್ತಿರುವವರು ಇಂತಹ  ಕೃತಿಗಳ ಮೇಲೆ ಒಮ್ಮೆ ಕಣ್ಣಾಡಿಸಬೇಕು. ( ಮತ್ತೋಂದು ಕೃತಿ ಇಂಗ್ಲೆಂಡ್ ಮೂಲದ   ರಾಯ್ ಮೋಕ್ಷ್ ಹಾಂ ಎಂಬಾತನ “ ಥೆಪ್ಟ್ ಆಫ್ ಇಂಡಿಯಾ) ನಮ್ಮ ಬೌದ್ಧಿಕ ದಾರಿದ್ರ್ಯ ಯಾವ ಹಂತ ತಲುಪಿದೆ ಎಂದರೆ, ಕರ್ನಾಟಕದಲ್ಲಿಇಪ್ಪತ್ತಕ್ಕೂ ಹೆಚ್ಚು ವಿಶ್ವ ವಿದ್ಯಾಲಯಗಳಿವೆ. ಆದರೆ,  ಇವುಗಳಲ್ಲಿ ವಿದ್ವಾಂಸರನ್ನು ಹುಡುಕುತ್ತಾ ಹೋದರೆ, ಅಂತಹವರ ಸಂಖ್ಯೆ ಅರ್ಧ ಡಜನ್ ದಾಟುವುದಿಲ್ಲ.  ಬಹುತೇಕ ವಿ.ವಿ.ಗಳಲ್ಲಿ ಸಂಶೋಧನೆ ಮತ್ತು ಪ್ರಕಟಣೆ ವಿಭಾಗಗಳು ಸ್ಥಗಿತಗೊಂಡು ದಶಕಗಳೇ ಉರುಳಿ ಹೋದವು.

ಅಮೇರಿಕಾದ ಮಿಚಿಗನ್ ವಿ.ವಿ. ಯಲ್ಲಿ ಸೌತ್ ಏಷ್ಯಾ ಅಧ್ಯಯನ ಕೇಂದ್ರದ ನೆರವಿನಿಂದ ಸ್ವತಂತ್ರವಾಗಿ ಅಧ್ಯಯನ ನಡೆಸುತ್ತಿರುವ ಸ್ಟೀವರ್ಡ್ ನ  ಈ ಕೃತಿಯು ಈಗಾಗಲೇ ಬರೆದಿರುವ “ ವೆನ್  ಏಷ್ಯಾ ವಾಸ್ ದ ವರ್ಡ್”  ಕೃತಿಯ ಮುಂದುವರಿದ ಭಾಗವಾಗಿದೆ. ಚೀನಾ, ಭಾರತ, ಒಳಗೊಂಡಂತೆ ಆಗ್ನೇಯ ಏಷ್ಯಾ ರಾಷ್ಟ್ರಗಳನ್ನು ಅಪಾರ ಪ್ರೀತಿ ಮತ್ತು ಗೌರವದ ಜೊತೆಗಿನ ಕುತೂಹಲದಿಂದ ಕಳೆದ ಹತ್ತು ವರ್ಷಗಳಿಂದ  ಅಧ್ಯಯನ ಮಾಡುತ್ತಿರುವ ಲೇಖಕನಿಗೆ ಈ ಹಿಂದೆ ಇದ್ದ ಸಿಲ್ಕ್ ರೂಟ್  ಎಂದು ಕರೆಯಲಾಗುತ್ತಿದ್ದ ರೇಷ್ಮೆ ಮಾರ್ಗ   ದಿಂದ ಆಸಕ್ತಿ ಉಂಟಾಗಿ ಮೆಕ್ಕಾ ಯಾತ್ರೆ ಮಾರ್ಗ, ನೈಲ್ ನದಿಯ ಮಾರ್ಗ, ಮಿಸಿಸಿಪ್ಪಿ ನದಿಯ ಮಾರ್ಗ, ಪೆರುವಿನ ಇಂಕಾ ಮಾರ್ಗ, ಹೀಗೆ  ಭೂ ಮಾರ್ಗ ಮತ್ತು ನದಿಮಾರ್ಗಗಳು, ಪುಣ್ಯ ಕ್ಷೇತ್ರಗಳ ಭೇಟಿಯ ಮಾರ್ಗಗಳು ಮತ್ತು ವ್ಯಾಪಾರದ ಮಾರ್ಗಗಳು ಎಂಬಂತೆ ವಿಂಗಡಿಸಿಕೊಂಡು ಅಧ್ಯಯನ ಮಾಡಿರುವ  ವೈಖರಿ ಹಾಗೂ  ಕಲೆ ಹಾಕಿರುವ ಮಾಹಿತಿಗಳು ಮತ್ತು ಹಳೆಯ ನಕ್ಷೆಗಳು ಓದುಗರಲ್ಲಿ ಬೆರಗು ಮೂಡಿಸುತ್ತವೆ. ಜೊತೆಗೆ ಈ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಿರುವುದು ಒಬ್ಬ ಸಂಶೋಧಕನಿಗೆ ಇರಬೇಕಾದ ಬದ್ಧತೆಯನ್ನು ಸೂಚಿಸುತ್ತದೆ.
ಜಗತ್ತಿನ ಐದು ಖಂಡಗಳ ಹಲವು ರಾಷ್ಟ್ರಗಳಲ್ಲಿ ಹರಡಿಕೊಂಡಿರುವ ಈ ಮಾರ್ಗಗಳ ಕುರಿತು ನೀಡಿರುವ ಇತಿಹಾಸವನ್ನು ಓದಿದಾಗ, ಮಾನವ ತನ್ನ ಇತಿಹಾಸದಲ್ಲಿ ಅಳವಡಿಸಿಕೊಂಡ ಅನ್ವೇಷಣಾ ಮತ್ತು ಸಾಹಸದ ಪ್ರವೃತಿ, ತಾನಿರುವ ನೆಲೆಯಾಚೆ ಇರಬಹುದಾದ ಇನ್ನೊಂದು ಜಗತ್ತಿನ ಕುರಿತು ತಿಳಿಯಲು ಅವನು ತುಳಿದ ಹಾದಿ, ಪ್ರತಿ ಹೆಜ್ಜೆಯಲ್ಲೂ ದಕ್ಕಿಸಿಕೊಂಡ ಅನುಭವ ನಿಜಕ್ಕೂ ರೋಮಾಂಚನಕಾರಿಯಾದುದು.
ಸಾಮ್ರಾಜ್ಯ ವಿಸ್ತರಣೆಗಾಗಿ ಸಾಮ್ರಾಟರು, ವ್ಯಾಪಾರದ ವಿಸ್ತರಣೆಗಾಗಿ ವ್ಯಾಪಾರಿಗಳು, ಸಂಸ್ಕೃತಿ ಹಾಗೂ ಧರ್ಮದ ವಿಸ್ತರಣೆಗಾಗಿ ಮಿಷನರಿಗಳು, ಇವರುಗಳ ಜೊತೆ  ಇಂತಹ  ಯಾವುದೇ ಮಹತ್ವಾಕಾಂಕ್ಷೆಯಿಲ್ಲದ ಅನುಭಾವಿ ಜಗತ್ತಿನ  ಸಾದು ಸಂತರು ನಡೆಸಿದ ಹುಡುಕಾಟದ ಫಲವಾಗಿ ಇಂದು ಜಗತ್ತಿನ ಹಲವು ಧರ್ಮ, ಸಂಸ್ಕೃತಿಗಳು ಹಾಗೂ ಭಾಷೆ, ಆಹಾರ ಪದ್ಧತಿ ಇವುಗಳೆಲ್ಲವೂ ಪರಸ್ಪರ ಮುಖಾಮುಖಿಯಾಗಿವೆ. ಜೊತೆಗೆ   ಕೊಡು ಕೊಳೆಯಲ್ಲಿ ನಿರತವಾಗಿವೆ.

ಖಂಡ-ಖಂಡಗಳ ನಡುವೆ, ರಾಷ್ಟ್ರ-ರಾಷ್ಟ್ರಗಳ ನಡುವೆ ವಿನಿಮಯವಾದ ವಸ್ತುಗಳು, ಗುಲಾಮರು, ಪ್ರಾಣಿ, ಪಕ್ಷಿಗಳು, ಸಾಂಬಾರ ಪದಾರ್ಥಗಳು, ರೇಷ್ಮೆ, ಹತ್ತಿ, ಪಿಂಗಾಣಿ ವಸ್ತುಗಳು, ದವಸ ಧಾನ್ಯಗಳು, ಬಿತ್ತನೆ ಬೀಜಗಳು, ಸಂಗೀತ, ಸಾಹಿತ್ಯ, ವಿಜ್ಞಾನ, ಧರ್ಮಗ್ರಂಥಗಳು, ಅವುಗಳ ವ್ಯಾಖ್ಯಾನಗಳು, ಮಹಿಳೆಯರು, ಮದ್ಯ ಹಾಗೂ ಅಮಲಿನ ಪದಾರ್ಥಗಳು, ಮದ್ದು-ಗುಂಡುಗಳು ಇವುಗಳ ಜೊತೆಗೆ ಯುದ್ಧ ನೀತಿಯ ಕ್ರೌರ್ಯಗಳು ಇಂತಹುಗಳ ಕುರಿತು ಅಧ್ಯಯನ ಮಾಡುತ್ತಾ ಹೊರಟರೆ ಒಬ್ಬ ಸಂಶೋಧಕನಿಗೆ ಅಥವಾ ವಿದ್ವಾಂಸನಿಗೆ ಒಂದು ಜನ್ಮದ ಆಯಸ್ಸು ಸಾಲದು ಎಂಬ ಭಾವನೆ   ಈ ಕೃತಿಯನ್ನು ಓದುವಾಗ  ನಮ್ಮೊಳಗೆ ಒಡಮೂಡುತ್ತದೆ.

ಶನಿವಾರ, ಜೂನ್ 2, 2018

ಹರಿಲಾಲ್ ಗಾಂಧಿ ಕಥನ:-- ದಕ್ಷಿಣಾ ಆಫ್ರಿಕಾದಲ್ಲಿ ಸತ್ಯಾಗ್ರಹಿಯಾಗಿ ಹರಿಲಾಲ್



1906 ಮೇ ತಿಂಗಳಿನಲ್ಲಿ ವಿವಾಹವಾದ ನಂತರ ಮೂರು ತಿಂಗಳು ಮಾತ್ರ ಹರಿಲಾಲ್ ಗಾಂಧಿ ಭಾರತದಲ್ಲಿದ್ದರು. ನಂತರ ತಂದೆಯ ಕರೆಗೆ ಓಗೊಟ್ಟು, ತಮ್ಮ ಪತ್ನಿ ಗುಲಾಬ್ ಬೆಹನ್ ಅವರನ್ನು ಅವರ ತವರು ಮನೆಯಲ್ಲಿರಿಸಿ ದಕ್ಷಿಣ ಆಫ್ರಿಕಾದತ್ತ ಪ್ರಯಾಣ ಬೆಳಸಿದರು. ತಮ್ಮ ಪುತ್ರನ ಪ್ರಯಾಣದ ವೆಚ್ಚಕ್ಕಾಗಿ ಗಾಂಧೀಜಿಯವರು ಯಾವುದೇ ಹಣ ಕಳಿಸಿರಲಿಲ್ಲ ಹಾಗಾಗಿ ಹರಿಲಾಲ್ ಅವರು ಸಂಬಂಧಿಯಾದ ಕುಶಾಲ್ ಚಂದ್ ಎಂಬುವವರ ಬಳಿ ಹತ್ತು ಪೌಂಡ್ ಹಣವನ್ನು ಸಾಲವನ್ನಾಗಿ ಪಡೆದು ತೃತಿಯ ದರ್ಜೆಯ ವರ್ಗದಲ್ಲಿ ಹಡಗಿನ ಮೂಲಕ ಪ್ರಯಾಣ ಬೆಳೆಸಿದರು. ತಮ್ಮ ಪುತ್ರ ಹರಿಲಾಲ್ ದಕ್ಷಿಣಾ ಆಫ್ರಿಕ್ಕಾದತ್ತ ಬರುತ್ತಿರುವ ವಿಷಯ ತಿಳಿದು ಗಾಂಧೀಜಿಯವರು ಸಂತೋಷಪಟ್ಟರು. 1906 ಸೆಪ್ಟಂಬರ್ ಕೊನೆಯ ವಾರದಲ್ಲಿ ಹೊರಟ ಹರಿಲಾಲ್ ಅಕ್ಟೋಬರ್ ತಿಂಗಳಿನಲ್ಲಿ ದಕ್ಷಿಣಾ ಆಫ್ರಿಕಾವನ್ನು ತಲುಪಿದರು.
ವಾಸ್ತವವಾಗಿ ಗಾಂಧೀಜಿಯವರಿಗೆ ತಮ್ಮ ಪುತ್ರ ಹರಿಲಾಲ್ ಆತುರದಲ್ಲಿ ವಿವಾಹವಾದದ್ದು ವ್ಯಯಕ್ತಿವಾಗಿ ಇಷ್ಟವಿರಲಿಲ್ಲ. ಇದರ ಜೊತೆಗೆ ಅವರ ಹಿರಿಯ ಸಹೋದರ ಲಕ್ಷ್ಮಿದಾಸ್ ರವರು  ಹರಿಲಾಲ್ಗಾಂಧಿ ಮತ್ತು ಗುಲಾಬ್ ಬೆಹನ್ ವಿವಾಹಕ್ಕಾಗಿ ದುಂದು ವೆಚ್ಚ ಮಾಡಿದ ವಿಷಯ ತಿಳಿದು ಅವರು ಬೇಸರಗೊಂಡಿದ್ದರು. ನಂತರದ ದಿನಗಳಲ್ಲಿ ಅವರ ಸಹೋದರ ಗಾಂಧಜಿಯವರಿಗೆ ಪತ್ರ ಬರೆದು ಹಣವನ್ನು ಕೇಳಿದಾಗ ವಿವಾಹದ ವೆಚ್ಚವನ್ನು ಭರಿಸಲು ಅವರು ನಿರಾಕರಿಸಿದರಲ್ಲದೆ, ಹಣ ಕಳಿಸಲಾಗದ ತಮ್ಮ ಆರ್ಥಿಕ ದುಸ್ಥಿತಿಯನ್ನು ಸಹೋದರನಿಗೆ ಪತ್ರದ ಮೂಲಕ ವಿವರಿಸಿದರು. 1907 ಏಪ್ರಿಲ್ ತಿಂಗಳಿನಲ್ಲಿ ಬರೆದಿರುವ ಪತ್ರದಲ್ಲಿ ತಮ್ಮ ಪುತ್ರ ಹರಿಲಾಲ್ ಗಾಂಧಿಯ ವಿವಾಹದ ಬಗ್ಗೆ ಪ್ರಸ್ತಾಪಿಸುತ್ತಾ, “ವಿವಾಹ ಕುರಿತಂತೆ ನಾನು ಯಾವ ವಿರೋಧವನ್ನು ವ್ಯಕ್ತ ಪಡಿಸಲಾರೆ ಜೊತೆಗೆ  ವಿವಾಹಕ್ಕೆ ನನ್ನ ಸಂಪೂರ್ಣ ಸಮ್ಮತಿಯಿದೆ ಎಂದು ಸಹ ಹೇಳಲಾರೆಎಂದು ಮಾರ್ಮಿಕವಾಗಿ ತಮ್ಮ ಮನದಾಳದ ಭಾವನೆಗಳನ್ನು ಹೊರಹಾಕಿದ್ದರು. ಆರಂಭದಲ್ಲಿ ಕುರಿತು ಅವರಿಗೆ ನಿರಾಶೆಯಾದರೂ ಸಹ ನಂತರದ ದಿನಗಳಲ್ಲಿ ಎಲ್ಲವನ್ನೂ ಮರೆತು ತಮ್ಮ ಪುತ್ರ ಹಾಗೂ ಸೊಸೆಯನ್ನು ಪ್ರೀತಿಸುತ್ತಾ ಕಾಳಜಿ ಮಾಡತೊಡಗಿದರು.
ಹರಿಲಾಲ್ ಜೋಹಾನ್ಸ್ ಬರ್ಗ್ ನಗರದಲ್ಲಿದ್ದ ತಮ್ಮ ಕುಟುಂಬವನ್ನು ಸೇರಿಕೊಂಡ ನಂತರ ಶಿಕ್ಷಣ ಮುಂದುವರಿಸಲು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗದೆ, ಮನೆಯಲ್ಲಿ ತಮ್ಮ ತಂದೆಯಿಂದ ಇತರೆ ಸಹೋದರರ ಜೊತೆ ಕುಳಿತು ಶಿಕ್ಷಣ ಪಡೆಯತೊಡಗಿದರು. ಆನಂತರ ಹರಿಲಾಲ್ ಗಾಂಧಿಯನ್ನು ಪೊಯನಿಕ್ಸ್ ಆಶ್ರಮಕ್ಕೆ ಕಳಿಸಿಕೊಡಲಾಯಿತು. ಅವರು ಅಲ್ಲಿನ ಪ್ರಿಂಟಿಂಗ್ ಪ್ರೆಸ್ ನಲ್ಲಿ ದುಡಿಯತೊಡಗಿದರು. ಪೊಯನಿಕ್ಸ್ ಆಶ್ರಮದಿಂದಇಂಡಿಯನ್ ಒಪಿನಿಯನ್ಎಂಬ ಪತ್ರಿಕೆಯನ್ನು ಗಾಂಧೀಜಿಯವರು ಪ್ರಕಟಿಸುತ್ತಿದ್ದುದರಿಂದ ಆಶ್ರಮವು ಪತ್ರಿಕೆಯ ಕಚೇರಿ ಕೂಡ ಆಗಿತ್ತು. ಕಚೇರಿಗಾಗಿ ಪ್ರತಿ ದಿನ ಹರಿಲಾಲ್ ಜೋಹಾನ್ಸ್ ಬರ್ಗ್ ನಗರದಿಂದ ಬಂದು ಹೋಗಬೇಕಿತ್ತು. ದಿನ ನಿತ್ಯದ ಪ್ರಯಾಣ, ದಣಿವು, ಪತ್ನಿಯನ್ನು ತೊರೆದು ಬಂದ ವಿರಹ ವೇದನೆ ಹೀಗೆ ಹರಿಲಾಲ್ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿ ಹೋದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಗಾಂಧೀಜಿಯವರು ಹರಿಲಾಲ್ ಅವರ ಮಾವನಿಗೆ ಪತ್ರ ಬರೆದು ತಮ್ಮ ಸೊಸೆ ಗುಲಾಬ್ ಬೆಹನ್ ಳನ್ನು ದಕ್ಷಿಣ ಆಫ್ರಿಕಾಕ್ಕಾ ಬರುವ ಭಾರತಿಯರ ಜೊತೆ ಕಳುಹಿಸಿಕೊಡಬೇಕೆಂದು ಪ್ರಾರ್ಥಿಸಿಕೊಂಡರು. ತಮ್ಮ ಸೊಸೆ ಮಗನ ಜೊತೆ ಮನೆಯಲ್ಲಿರುವುದು ಒಳಿತೆಂದು ಕಸ್ತೂರಬಾ ಕೂಡ ತಮ್ಮ ಪತಿಗೆ ಸಲಹೆ ನೀಡಿದ್ದರು. ಆದರೆ,  ದಕ್ಷಿಣ ಆಫ್ರಿಕಾಕ್ಕೆ ಹೋಗುವ ಯಾವೊಬ್ಬ ಪ್ರಯಾಣಿಕ  ಸಿಗದಿದ್ದಾಗ ಅಂತಿಮವಾಗಿ 1907 ಮೇ ತಿಂಗಳಿನಲ್ಲಿ ಹರಿಲಾಲ್ ಅವರನ್ನು ಭಾರತಕ್ಕೆ ಕಳುಹಿಸಿದ, ಗಾಂಧಜಿಯವರು ತಮ್ಮ ಸೊಸೆಯನ್ನು ದಕ್ಷಿಣ ಆಫ್ರಿಕಾಕ್ಕೆ ಕರೆಸಿಕೊಂಡರು.
1907 ಸೆಪ್ಟಂಬರ್ ತಿಂಗಳಿನಲ್ಲಿ  ಗುಲಾಬ್ ಬೆಹನ್ ರವರ ತಂದೆ ಗಾಂಧೀಜಿಯವರ ಆಹ್ವಾನದ ಮೇರೆಗೆ ದಕ್ಷಣ ಆಫ್ರಿಕಾಕಕ್ಕೆ ಆಗಮಿಸಿ, ಪೊಯನಿಕ್ಸ್ ಆಶ್ರಮದಲ್ಲಿದ್ದ ತಮ್ಮ ಪುತ್ರಿ ಹಾಗೂ ಅಳಿಯನನ್ನು ಸೇರಿಕೊಂಡರು. ಅವರು ಬರುವ ವೇಳೆಗೆ ದಕ್ಷಿಣ ಆಫ್ರಿಕಾದ ರಾಜಕೀಯದಲ್ಲಿ ಕಲಹ ಆರಂಭಗೊಂಡಿತ್ತು. ಟ್ರಾನ್ಸ್ ವಾಲ್ ನಗರದಲ್ಲಿ ಪರಿಸ್ಥಿತಿ ಉದ್ವಿಗ್ನತೆಯಿಂದ ಕೂಡಿತ್ತು. ಅಲ್ಲಿನ ಸರ್ಕಾರ ಭಾರತೀಯರ ವಿರುದ್ಧ ತೆರಿಗೆ ವಿಧಿಸುವುದು, ಅವರ ನೊಂದಣಿಯನ್ನು ಕಡ್ಡಾಯಗೊಳಿಸುವುದು ಸೇರಿದಂತೆ ಹಲವು ಮಸೂದೆಗಳನ್ನು ಜಾರಿಗೆ ತಂದಿತ್ತು. ಗಾಂಧೀಜಿಯವರ ನೇತೃತ್ವದಲ್ಲಿ ಕಾನೂನಿಗೆ ಪ್ರಬಲವಾಗಿ ವಿರೋಧಿಸಲಾಯಿತು. ಜೊತೆಗೆ ಮಹಾತ್ಮ ಗಾಂಧಿಯವರು ಇಂಗ್ಲೆಂಡಿಗೆ ನಿಯೋಗವನ್ನು ಕೊಂಡೊಯ್ದು ಭಾರತೀಯರ ವಿರುದ್ಧ ಅನುಸರಿಸುತ್ತಿರುವ ತಾರತಮ್ಯ ನೀತಿಯನ್ನು ಬ್ರಿಟನ್ ಸರ್ಕಾರಕ್ಕೆ ಮನದಟ್ಟು ಮಾಡಿಕೊಟ್ಟರು. ಮಸೂದೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ ದಕ್ಷಿಣ ಆಫ್ರಿಕಾ ಸರ್ಕಾರ, ಪುನಃ ಅದನ್ನು ಜಾರಿಗೆ ತಂದಾಗ ಗಾಂಧೀಜಿಯವರ ನೇತೃತ್ವದಲ್ಲಿ ಸತ್ಯಾಗ್ರಹ ಆರಂಭವಾಯಿತು. ಭಾರತೀಯರು ತಮ್ಮ ಹೆಸರನ್ನು ನೊಂದಣಿ ಮಾಡಿಕೊಳ್ಳಬಾರದು ಎಂದು ಕರೆನೀಡಿದ ಗಾಂಧಿಯವರನ್ನು ಅಲ್ಲಿನ ಸರ್ಕಾರ 1907 ಡಿಸಂಬರ್ ತಿಂಗಳಿನಲ್ಲಿ ಬಂಧಿಸಿ ಎರಡು ತಿಂಗಳ ಕಾಲ ಸೆರೆಮನೆ ವಾಸ ವಿಧಿಸಿತು. ಇದೇ ಸಂದರ್ಭದಲ್ಲಿ ಪೊಯನಿಕ್ಸ್ ಆಶ್ರಮದಲ್ಲಿ ಹರಿಲಾಲ್ ಮತ್ತು ಗುಲಾಬ್ ಬೆಹನ್ ದಂಪತಿಗಳು ವಾಸವಾಗಿದ್ದರು. ಗರ್ಭವತಿಯಾಗಿದ್ದ ಗುಲಾಬ್ ಬೆಹನ್ ಅವರಿಗೆ ಆಶ್ರಮದಲ್ಲಿ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

1908 ಜನವರಿ 30 ರಂದು ದಕ್ಷಿಣ ಆಫ್ರಿಕಾ ಸರ್ಕಾರವು ಗಾಂಧೀಜಿಯವರನ್ನು ಬಿಡುಗಡೆ ಮಾಡಿತು. ಸರ್ಕಾರದ ಜೊತೆ ನಡೆದ ಒಪ್ಪಂಧದ ಪ್ರಕಾರ ಗಾಂಧೀಜಿಯವರು ಪ್ರಥಮವಾಗಿ ಅಲ್ಲಿನ ಸರ್ಕಾರದಲ್ಲಿ ತಮ್ಮ ಹೆಸರನ್ನು ನೊಂದಾಯಿಸಿದರು. ಅವರು ಹೆಸರು ನೊಂದಣಿ ಮಾಡಿಸಲು ಕಚೇರಿಗೆ ಹೋಗಿದ್ದ ಸಂದರ್ಭದಲ್ಲಿ ಮೀರ್ ಆಲಂ ಎಂಬ ಭಾರತೀಯ ಮೂಲದ ವ್ಯಕ್ತಿಯೊಬ್ಬ ಗಾಂಧೀಜಿಯ ಮೇಲೆ ಹಲ್ಲೆ ನಡೆಸಿದನು. ಹಲ್ಲೆಗೆ ನಿಕಟ ಕಾರಣ ತಿಳಿಯಲಿಲ್ಲವಾದರೂ ಸಂದರ್ಭದಲ್ಲಿ ಹರಿಲಾಲ್ ತಂದೆಯ ಜೊತೆ ಇರಲಿಲ್ಲವಾದ್ದರಿಂದ ಗಾಂಧೀಜಿ ತೀವ್ರತರ ಹಲ್ಲೆಗೆ ತುತ್ತಾದರು.  1908 ಏಪ್ರಿಲ್ 10 ರಂದು ಹರಿಲಾಲ್ ಮತ್ತು ಗುಲಾಬ್ ಬೆಹನ್ ದಂಪತಿಗಳಿಗೆ ಹೆಣ್ಣು ಮಗುವಿನ ಜನನವಾಯಿತು. ರಾಮನವಮಿ ದಿವಸ ಮೊವ್ಮ್ಮಗಳು ಜನಿಸಿದ್ದರಿಂದ ಗಾಮಧೀಜಿಯವರು ಹೆಣ್ಣು ಮಗುವಿಗೆ ರಾಮಿ ಎಂದು ನಾಮಕರಣ ಮಾಡಿದರು.
ಇತ್ತ ಟ್ರಾನ್ಸ್ ವಾಲ್ ಪ್ರಾಂತ್ಯದ ಸರ್ಕಾರವು ಭಾರತೀಯ ನಾಗರೀಕರು ಸತ್ಯಾಗ್ರಹದ ಮೂಲಕ ಇರಿಸಲಾಗಿದ್ದ ಯಾವೊಂದು ಬೇಡಿಕೆಯನ್ನು ಈಡೇರಿಸಲಿಲ್ಲ. ಸ್ಥಳಿಯ ಭಾರತೀಯರು ಇದನ್ನು ಪ್ರತಿಭಟಿಸಿ, ಅಲ್ಲಿನ ಸರ್ಕಾರದಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳದೆ ವ್ಯವಹಾರದಲ್ಲಿ ನಿರತರಾದರು. ಅಲ್ಲಿದ್ದ ಬಹುತೇಕ ಭಾರತೀಯರು ವ್ಯಾಪಾರಸ್ಥರಾಗಿದ್ದರಿಂದ ಅವರುಗಳು ತಮ್ಮ ವ್ಯಾಪಾರ, ವಹಿವಾಟುಗಳಿಗೆ ಪರವಾನಗಿ ಪಡೆದುಕೊಳ್ಳಲು ನಿರಾಕರಿಸುವುದರ ಮೂಲಕ ವ್ಯವಹಾರ ನಡೆಸುತ್ತಾ ಅಲ್ಲಿನ ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆ ಸೂಚಿಸಿದರು. ಟ್ರಾನ್ಸ್ ವಾಲ್ ನಗರದಲ್ಲಿ ವ್ಯಾಪರ ಮತ್ತು ವಹಿವಾಟು ನಡೆಸಲು ಪರವಾನಗಿ ಕಡ್ಡಾಯವಾಗಿತ್ತು. ಪರವಾನಗಿ ಪಡೆಯದೆ ವ್ಯಾಪಾರ ಮಾಡುತ್ತಿದ್ದ ಭಾರತೀಯರ ಮೇಲೆ ಸರ್ಕಾರ ಮೊಕದ್ದಮೆ ದಾಖಲಿಸಿದಾಗ; ಗಾಂಧೀಜಿಯವರು ಭಾರತೀಯರ ಪರವಾಗಿ ವಕಾಲತ್ತು ವಹಿಸತೊಡಗಿದರು. ಇದು ಭಾರತೀಯರಿಗೆ ನೈತಿಕ ಸ್ಥೈರ್ಯವನ್ನು ತಂದುಕೊಟ್ಟಿತು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಗಮನಿಸಿದ ಟ್ರಾನ್ಸ್ ವಾಲ್ ಸರ್ಕಾರವು ವಲಸಿಗರ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದು ವಿದ್ಯಾವಂತ ಭಾರತೀಯರು ಟ್ರಾನ್ಸ್ ವಾಲ್ ನಗರ ಪ್ರವೇಶಿಸದಂತೆ ತಡೆಯಿತು. ಅತಿಕ್ರಮ ಪ್ರವೇಶ ಮಾಡಿದವರನ್ನು ಬಂಧಿಸಿ ಸೆರೆಮನೆಗೆ ಕಳಿಸಲು ಆರಂಭಿಸಿತು.
ಹರಿಲಾಲ್ ಗಾಂಧಿ ಪೊಯನಿಕ್ಸ್ ಆಶ್ರಮದಲ್ಲಿದ್ದುಕೊಂಡು, ಎಲ್ಲಾ ಬೆಳವಣಿಗೆಯ ಜೊತೆಗೆ ತನ್ನ ತಂದೆ ಗಾಂಧೀಜಿ ನಡೆಸುತ್ತಿರುವ ಹೋರಾಟವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಇಂತಹ ಹೋರಾಟದಲ್ಲಿ ಭಾಗವಹಿಸುವುದು ಹಾಗೂ ಬಿಳಿಯರ ವರ್ಣಬೇಧ ನೀತಿಯಿಂದ ಬಳಲುತ್ತಿರುವ ಭಾರತೀಯರು ಸೇರಿದಂತೆ ಎಲ್ಲಾ ಕಪ್ಪು ಮತ್ತು ಕಂದು ಬಣ್ಣದ ಜನಾಂಗದ ಜೊತೆ ನಿಲ್ಲುವುದು ನಮ್ಮೆಲ್ಲರ ಕರ್ತವ್ಯ ಎಂದು ಭಾವಿಸಿದರು. ಅದರಂತೆ ಹೋರಾಟದಲ್ಲಿ ಭಾಗವಹಿಸಲು ಹರಿಲಾಲ್ ಪೊಯನಿಕ್ಸ್ ಆಶ್ರಮದಿಂದ ಹೊರಟು ನಿಂತಾಗ ಹರಿಲಾಲ್ ಗೆ ಆಶ್ರಮವಾಸಿಗಳು ಸನ್ಮಾನಿಸಿ ಕಳುಹಿಸಿದರು. ಪ್ರಸಂಗವನ್ನು ಅವರ ಕಿರಿಯ ಸಹೋದರ ದೇವದಾಸ್ ಗಾಂಧಿ ಹೆಮ್ಮೆಯಿಂದ ಸ್ಮರಿಸಿಕೊಂಡಿದ್ದಾರೆ.
1908 ಜುಲೈ 4 ರಂದು ಹರಿಲಾಲ್ ಗಾಂಧಿಯು ಟ್ರಾನ್ಸ್ ವಾಲ್ ನಗರವನ್ನು ಪ್ರವೇಶಿಸಿ, ಸರ್ಕಾರದ ಆದೇಶವನ್ನು ಧಿಕ್ಕರಿಸಿ, ಅಲ್ಲಿನ ಪರವಾನಗಿ ಪಡೆಯದೆ ಪುಟ್ಟದಾದ ವ್ಯಾಪಾರವನ್ನು ಆರಂಭಿಸಿದರು. ಜುಲೈ 27 ರಂದು ಪೋಲಿಸರು ಅವರನ್ನು ಬಂಧಿಸಿದರು. ಮರುದಿನ ಹಲವಾರು ಸತ್ಯಾಗ್ರಹಿಗಳ ಜೊತೆ ಹರಿಲಾಲರನ್ನೂ ಸಹ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ತಮ್ಮ ಪುತ್ರನ ಹೋರಾಟದ ಬಗ್ಗೆ ಹೆಮ್ಮೆಪಟ್ಟ ಗಾಂಧಿಜಿಯವರುಯಾವುದೇ ಕಾರಣಕ್ಕೂ ನ್ಯಾಯಾಲಯ ವಿಧಿಸುವ ಜುಲ್ಮಾನೆಯನ್ನು ಒಪ್ಪಿಕೊಳ್ಳಬೇಡ, ಅದರ ಬದಲು ಸೆರೆಮನೆ ವಾಸವನ್ನು ಒಪ್ಪಿಕೊಎಂದು ತಮ್ಮ ಪುತ್ರನಿಗೆ ಕಿವಿ ಮಾತು ಹೇಳಿದರು. ಗಾಂಧಿಜಿಯವರು ಸತ್ಯಾಗ್ರಹಿಗಳ ಪರವಾಗಿ ಮಂಡಿಸಿದ ವಾದವನ್ನು ನಿರಾಕರಿಸಿದ ನ್ಯಾಯಾಲಯ ಎಲ್ಲರಿಗೂ ದಂಡವನ್ನು ವಿಧಿಸಿತು. ಹರಿಲಾಲ್ ಗೆ ಒಂದು ಪೌಂಡ್ ದಂಡವನ್ನು ವಿಧಿಸಲಾಗಿತ್ತು. ಪಾವತಿಸಲು ನಿರಾಕರಿಸಿದ ಕಾರಣ ಅವರಿಗೆ ಒಂದು ವಾರ ಜೈಲು ಶಿಕ್ಷೆಯನ್ನು ಕಾಯಂಗೊಳಿಸಲಾಯಿತು. 
ಹರಿಲಾಲ್ ಗೆ ದಕ್ಷಿಣ ಆಫ್ರಿಕಾದಲ್ಲಿ ಪ್ರಥಮವಾಗಿ ಜೈಲಿಗೆ ಹೋದಾಗ ಅವರಿಗೆ ಇಪ್ಪತ್ತು ವರ್ಷ ವಯಸ್ಸಾಗಿತ್ತು. ತಮ್ಮ ಪುತ್ರನನ್ನು ಹೋರಾಟಕ್ಕೆ ಪ್ರೆರೇಪಿಸಿ ಜೈಲಿಗೆ ಕಳುಹಿಸುತ್ತಿರುವ ಹಿನ್ನಲೆ ಕುರಿತಂತೆ ಹಲವಾರು ಮಂದಿ ಗಾಂಧೀಜಿಯನ್ನು ಪ್ರಶ್ನಿಸಿದ್ದರು. ಅವರೆಲ್ಲರಿಗೂ ಗಾಂಧೀಜಿಯವರು ನೀಡಿದ ಉತ್ತರ ಹೀಗಿತ್ತು  ದಕ್ಷಿಣ ಆಫ್ರಿಕಾದಲ್ಲಿರುವ ವರ್ಣಬೇಧ ನೀತಿಯ ಕಾನೂನನ್ನು ಉಲ್ಲಂಘಿಸಬೇಕೆಂದು ನಾನು  ಪ್ರತಿಯೊಬ್ಬ ಭಾರತೀಯನಿಗೂ ಕರೆ ನೀಡುತ್ತೀದ್ದೇನೆ, ಏಕೆಂದರೆ, ಓರ್ವ ನ್ಯಾಯವಾದಿಯಾಗಿ ನಾನು ಉಲ್ಲಂಘಿಸಲು ಸಾಧ್ಯವಾಗುತ್ತಿಲ್ಲ. ಇದೀಗ ನನ್ನ ಪುತ್ರ ಹರಿಲಾಲ್ ನನ್ನ ಪ್ರತಿನಿಧಿಯಾಗಿ ಇಲ್ಲಿನ ಕಾನೂನನ್ನು ಪ್ರತಿಭಟಿಸಿ ಸೆರೆಮನೆವಾಸ   ಅನುಭವಿಸುತ್ತಿರುವುದು ವೈಯಕ್ತಿಕವಾಗಿ ನನಗೆ ಸಂತೋಷ ತಂದಿದೆ. ರೀತಿಯ ಹೋರಾಟದ ಅನುಭವ ಹರಿಲಾಲ್ ಗೆ ಮುಂದಿನ ದಿನಗಳಲ್ಲಿ ಅಮೂಲ್ಯ  ಶಿಕ್ಷಣವಾಗಲಿದೆಎಂದಿದ್ದ ಅವರು, ಸೆರೆಮನೆಯಲ್ಲಿದ್ದ ತಮ್ಮ ಪುತ್ರನಿಗೆ ಪತ್ರವೊಂದನ್ನು ಬರೆದು ತುಂಬು ಹೃದಯದಿಂದ ಅಭಿನಂದಿಸಿದ್ದರು.
ಹರಿಲಾಲ್ 1908 ಏಪ್ರಿಲ್ 3 ರಂದು ಬಿಡುಗಡೆಯಾದರು. ಮತ್ತೆ ಆಗಸ್ಟ್ 10 ರಂದು ಸರ್ಕಾರದಿಂದ ಬಂಧಿಸಲ್ಪಟ್ಟರು. ಎರಡನೆಯ ಬಾರಿ ಅವರ ಮೇಲೆ ಟ್ರಾನ್ಸ್ ವಾಲ್ ನಗರದಲ್ಲಿ ಜೀವಿಸಲು ಅನುಮತಿ ಪತ್ರ ಪಡೆದಿಲ್ಲ ಎಂಬ ಮೊಕದ್ದಮೆಯನ್ನು ಹೂಡಲಾಗಿತ್ತು. ಗಾಂಧೀಜಿ ತಮ್ಮ ಪುತ್ರ ಹರಿಲಾಲ್ ಪರವಾಗಿ ನ್ಯಾಯಲಯದಲ್ಲಿ ಹಾಜರಿದ್ದರು. ಹರಿಲಾಲ್ ಯಾವುದೇ ಕಾರಣಕ್ಕೂ ಟ್ರಾನ್ಸ್ ವಾಲ್ ನಗರವನ್ನು ತೊರೆದು ಹೋಗಲು ಬಯಸುವುದಿಲ್ಲ ಎಂದು ಅವರು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರುದರೆ, ನ್ಯಾಯಾಲಯ ಅಪರಾಧಿಯು 24 ಗಂಟೆಯ ಅವಧಿಯೊಳಗೆ ನಗರ ತೊರೆಯಬೇಕೆಂದು ಆದೇಶ ನೀಡಿತು. ಆದರೆ, ಸಂದರ್ಭದಲ್ಲಿ ಇನ್ನಿಬ್ಬರು ಭಾರತೀಯರ ಅವಧಿ ಸಧ್ಯದಲ್ಲಿ ಮುಗಿಯಲಿದ್ದು ಎಲ್ಲವನ್ನೂ ಒಟ್ಟಿಗೆ ವಿಚಾರಣೆಗೆ ತೆಗೆದುಕೊಳ್ಳಬೇಕಾಗಿರುವ್ಯದರಿಂದ ಕಾಲಾವಕಾಶ ನೀಡಬೇಕೆಂದು ಗಾಂಧೀಯವರು ನ್ಯಾಯಾಲಯವನ್ನು ಪ್ರಾರ್ಥಿಸಿಕೊಂಡಾಗ, ಹರಿಲಾಲ್ ಒಂದು ವಾರ ಕಾಲ ಟ್ರಾನ್ಸ್ ವಾಲ್ ನಗರದಲ್ಲಿರಲು ಅನುಮತಿ ನೀಡಲಾಯಿತು.
ನ್ಯಾಯಾಲಯದ ಆದೇಶದಂತೆ ಆಗಸ್ಟ್ 18 ನಂತರವೂ ಹರಿಲಾಲ್ ಅವರು ನಗರವನ್ನು ತೊರೆಯದೆ ಟ್ರಾನ್ಸ್ ವಾಲ್ ನಗರದಲ್ಲಿ ಉಳಿದುಕೊಂಡ ಕಾರಣ ಅವರನ್ನು ಅಲ್ಲಿನ ಸರ್ಕಾರ ಪುನಃ ಬಂಧಿಸಿತು. ಬಾರಿ ನ್ಯಾಯಾಲಯವು ಅವರಿಗೆ ಒಂದು ತಿಂಗಳ ಕಾಲ ಕಠಿಣ ಶಿಕ್ಷೆಯನ್ನು ವಿಧಿಸಿತು. ಒಂದು ತಿಂಗಳ ಸೆರೆಮನೆವಾಸ ಮುಗಿಸಿದ ಪುತ್ರನನ್ನು ಕರೆತರಲು ಗಾಂಧೀಜಿಯವರು ಸೆಪ್ಟಂಬರ್ 17 ರಂದು ಹೋದಾಗ ಅವರಿಗೆ ಆಶ್ಚರ್ಯ ಕಾದಿತ್ತು. ದಿನ ಬೆಳಿಗ್ಗೆ 7 ಗಂಟೆಗೆ ಹರಿಲಾಲ್ ಗಾಂಧಿಯನ್ನು ಜೈಲಿನಿಂದ ಬಿಡುಗಡೆ ಮಾಡಿದ ಪೋಲಿಸರು, ತಮ್ಮ ಸುಪರ್ಧಿಯಲ್ಲಿ ರೈಲಿನಲ್ಲಿ ಅವರನ್ನು ಕರೆದೊಯ್ದು ನಟಾಲ್ ನಗರಕ್ಕೆ ಕರೆದೊಯ್ದು ಬಿಟ್ಟು ಬಂದಿದ್ದರು. ಪೊಯನಿಕ್ಸ್ ಆಶ್ರಮ ತಲುಪಿದ್ದ ಹರಿಲಾಲ್ ಗೆ ಟೆಲಿಗ್ರಾಂ ಕಳಿಸಿದ ಗಾಂಧೀಯವರು ವಾಪಸ್ ಟ್ರಾನ್ಸ್ ವಾಲ್ ನಗರಕ್ಕೆ ಬರುವಂತೆ ತಿಳಿಸಿದರು. ಮರುದಿನ ರೈಲಿನಲ್ಲಿ ಆಗಮಿಸುತ್ತಿದ್ದ ಹರಿಲಾಲ್ ನನ್ನು ವೊಲ್ಕ್ ಸ್ಟ್ರಟ್ ನಗರದ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದರು. ಸೆಪ್ಟಂಬರ್ 22 ರಂದು ವಿಚಾರಣೆ ನಡೆಸಿದ ನ್ಯಾಯಾಧೀಶರು 50 ಪೌಂಡ್ ಮೊತ್ತದ ಜಾಮೀನು ನೀಡಿ ತೆರಳಬಹುದೆಂದು ಆದೇಶಿಸಿದರು. ಆದರೆ, ತನ್ನ ಅಸಹಾಯಕತೆಯನ್ನು ವ್ಯಕ್ತ ಪಡಿಸಿದ ಹರಿಲಾಲ್ ಜೈಲು ಶಿಕ್ಷೆ ಅನುಭವಿಸಲು ಸಿದ್ಧ ಎಂದು ನುಡಿದಾಗ, ಮನಕರಗಿದ ನ್ಯಾಯಾಧೀಶರು ಬಿಡುಗಡೆ ಮಾಡಿ ಕಳಿಸಿದರು.
ನಡುವೆ ಗಾಂಧೀಜಿ ಕರೆ ನೀಡಿದ ಹೋರಾಟಕ್ಕೆ ಬಿಳಿಯರನ್ನು ಹೊರತು ಪಡಿಸಿ ಎಲ್ಲಾ ವರ್ಗಗಳಿಂದ ಬೆಂಬಲ ದೊರೆಯತೊಡಗಿತು. 1908 ಅಕ್ಟೋಬರ್ 8 ರಂದು ಗಾಂಧಿಯನ್ನು  ಬಂಧಿಸಿ ಬಿಡುಗಡೆ ಮಾಡಿದ್ದ ಪೋಲಿಸರು ಹೋರಾಟವು ತೀವ್ರವಾದ ಸ್ವರೂಪವನ್ನು ಪಡೆಯುತ್ತಿರುವುದನ್ನು ಗಮನಿಸಿ ಪುನಃ 14 ರಂದು  ಪುನಃ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಅವರ ಮುಂದೆ 25 ಪೌಂಡ್ ಜುಲ್ಮಾನೆ ಅಥವಾ ಎರಡು ತಿಂಗಳು ಜೈಲು ಶಿಕ್ಷೆಯ ಆಯ್ಕೆಯನ್ನು ನೀಡಲಾಯಿತು. ಗಾಂಧಿಯವರು ಅಂತಿಮವಾಗಿ  ಶಿಕ್ಷೆಯನ್ನು ಆಯ್ಕೆ ಮಾಡಿಕೊಂಡರು. ಅವರನ್ನು ಒಂದು ವಾರ ಕಾಲ ವೊಲ್ಕ್ ಸ್ರುಟ್ ನಗರದ ಬಂಧಿಖಾನೆಯಲ್ಲಿಟ್ಟಿದ್ದು, ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಜೋಹಾನ್ಸ್ಬರ್ಗ್ ಸೆರೆಮನೆಗೆ ವರ್ಗಾಯಿಸಲಾಯಿತು. ಇದೇ ವೇಳೆಗೆ ಪೊಯನಿಕ್ಸ್ ಆಶ್ರಮದಲ್ಲಿ ವಾಸಿಸುತ್ತಿದ್ದ ಕಸ್ತೂರಬಾ ತೀವ್ರ ಅನಾರೋಗ್ಯಕ್ಕೆ ತುತ್ತಾದರು. ಸಂದರ್ಭದಲ್ಲಿ ತನ್ನನ್ನು ಕಾಣಲು ಬಂದ ಪುತ್ರ ಹರಿಲಾಲ್ ಗೆ ತಾಯಿಯ ಯೋಗಕ್ಷೇಮದ ಜೊತೆಗೆ ನಿನ್ನ ಪತ್ನಿ ಗುಲಾಬ್ ಹಾಗೂ ಪುತ್ರಿ ರಾಮಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು.
  ಎಲ್ಲಾ ಘಟನಾವಳಿಗಳನ್ನು ಗಮನಿಸಿದಾಗ, ಗಾಂದೀಜಿಗೆ ತಮ್ಮ ಪುತ್ರ ಹರಿಲಾಲ್ ಕುರಿತಂತೆ ಯಾವುದೇ ಕಹಿ ಭಾವನೆ ಇರಲಿಲ್ಲ. ತನ್ನ ಇಚ್ಚೆಗೆ ವಿರುದ್ಧವಾಗಿ ಹದಿನಾರನೆಯ ವಯಸ್ಸಿಗೆ ವಿವಾಹವಾದ ಸಂದರ್ಭದಲ್ಲಿ ತಮ್ಮ ಅಸಮಾಧಾನವನ್ನು ಅವರು ಹೊರಹಾಕಿದ್ದನ್ನು ಹೊರತು ಪಡಿಸಿದರೆ, ಅದನ್ನು ಎಂದಿಗೂ ದ್ವೇಷವನ್ನಾಗಿ ಅವರು ಪರಿವರ್ತಿಸಲಿಲ್ಲ. ಕಸ್ತೂರಬಾ ಚೇತರಿಸಿಕೊಂಡ ನಂತರ ಹರಿಲಾಲ್ ಮತ್ತೇ ಹೋರಾಟಕ್ಕೆ ದುಮುಕಿದರು. ಪ್ರತಿ ಸಾರಿ ಅವರನ್ನು ಬಂಧಿಸುತ್ತಿದ್ದ ಪೋಲಿಸರು ಗಡಿಪಾರು ಮಾಡುತ್ತಿದ್ದರು. ಹೀಗೆ ಮೂರು ನಾಲ್ಕು ಬಾರಿ ಬಂಧಿಸಿ ಗಡಿಪಾರು ಮಾಡಿದ ನಂತರ ಅವರನ್ನು ಕಾನೂನು ಉಲ್ಲಂಘಿಸಿದ ಕಾರಣಕ್ಕೆ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಆರು ತಿಂಗಳ ಕಾಲ ಕಠಿಣ ಶಿಕ್ಷೆಯನ್ನು ವಿಧಿಸಲಾಯಿತು. ತಂದೆ ಮತ್ತು ಮಗ ಒಂದೇ ಸೆರೆಮನೆಯಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಹರಿಲಾಲ್ ಬಂಧನದಿಂದ ಕಳವಳಗೊಂಡ ಗಾಂಧಿಜಿಯವರು ಜೈಲಿನಿಂದ ತಮ್ಮ ಸೊಸೆ ಗುಲಾಬ್ ಬೆಹನ್ ಗೆ ಪತ್ರ ಬರೆದು ಮಗುವಿನ ಆರೋಗ್ಯ ಮತ್ತು ನಿನ್ನ ಬಗ್ಗೆ ಕಾಳಜಿ ವಹಿಸಬೇಕೆಂದು ಕೇಳಿಕೊಂಡರಲ್ಲದೆ, ತಮ್ಮ ಎರಡನೆಯ ಪುತ್ರ ಮಣಿಲಾಲ್ ಗೆ ಪತ್ರ ಬರೆದು ತಾಯಿ ಕಸ್ತೂರಬಾ ಹಾಗೂ ಅತ್ತಿಗೆ ಗುಲಾಬ್ ಬೆಹನ್ ಮತ್ತು ಮಗುವನ್ನು ಆಶ್ರಮದಲ್ಲಿ ಜೋಪಾನ ಮಾಡುವ ಜವಾಬ್ದಾರಿ ನಿನ್ನದೆಂದು ಹೇಳಿದರು. ಇದು ಸಾಲದೆಂಬಂತೆ ತಮ್ಮ ಮಿತ್ರ ಪೊಲ್ಲಾಕ್ ಅವರಿಗೆ ಪತ್ರ ಬರೆದು  ಸೊಸೆ ಹಾಗೂ ಮೊಮ್ಮಗಳ ಯೋಗಕ್ಷೇಮ ವಿಚಾರಿಸುವಂತೆ ಮನವಿ ಮಾಡಿಕೊಂಡಿದ್ದರು.

( ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್ ನಿಂದ ಪ್ರಕಟವಾಗುವ “ ಜನಪದ ವಿಚಾರ” ಮಾಸಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಕಥನ)

(ಮುಂದುವರಿಯುವುದು)