ಸೋಮವಾರ, ಜನವರಿ 20, 2014

ಸೂಫಿ ಪ್ರೇಮ ಕಾವ್ಯ ಮತ್ತು ತತ್ವ- ಭಾಗ ಒಂದು

ಎಲ್ಲರಿಗೂ ನಮಸ್ಕಾರ,


ಸೂಫಿಸಂ ತತ್ವಗಳ ಬಗ್ಗೆ ಮಾತನಾಡುವಾಗ, ನನ್ನೊಳಗೆ ಗೊಂದಲ ಉಂಟಾಗುತ್ತಿದೆ. ಏಕೆಂದರೆ, ಸೂಫಿಸಂ ವಿಚಾರಧಾರೆ ನೆನದಾಗ ಅದು ಯಾವ್ಯಾವ ರೂಪದಲ್ಲಿ ನಮ್ಮನ್ನು ಆವರಿಸಿಕೊಂಡಿದೆ ಎಂಬುದನ್ನು ಅಕ್ಷರಗಳಲ್ಲಿ ಮತ್ತು ಮಾತುಗಳಲ್ಲಿ ಹಿಡಿದಿಡಲು ಅಸಾಧ್ಯ. ಕಾರಣಕ್ಕಾಗಿ ನನಗೆ ನನಗೆ ಸದಾ, ಅಲ್ಲಮನ ವಚನದಸಾಲುಗಳು ನೆನಪಾಗುತ್ತವೆ.
          ಹರಿವ ನದಿಗೆ ಮೈಯೆಲ್ಲಾ ಕಾಲು
          ಉರಿವ ಕಿಚ್ಚಿಗೆ ಮೈಯೆಲ್ಲಾ ನಾಲಿಗೆ        
          ಬೀಸುವ ಗಾಳಿಗೆ ಮೈಯೆಲ್ಲಾ ಕೈ
ಎನ್ನುವ ಹಾಗೆ ನಮ್ಮ ಮೈ ಮನಸ್ಸುಗಳನ್ನು ಆವರಿಸಿಕೊಂಡಿರುವ ಸೂಫಿ ತತ್ವ ಕುರಿತು ಮಾತನಾಡುವಾಗ ಬೌದ್ಧಿಕ ಎಚ್ಚರ ಕೂಡ ಅಗತ್ಯ ಎಂದು ನಾನು ಭಾವಿಸಿದ್ದೇನೆ.

ಜಗತ್ತಿನಲ್ಲಿ ಸಾಂಸ್ಥಿಕ ರೂಪು ತಾಳಿ ಉದಯವಾದ ಧರ್ಮಗಳ ಜೊತೆ ಜೊತೆಯಲ್ಲಿಯೆ ಅವುಗಳ ವೈರುಧ್ಯ ಅಥವಾ ವಿಕೃತಿಗಳನ್ನು ಪ್ರತಿಭಟಿಸುವ ವಿಚಾರಧಾರೆಗಳು ಕೂಡ ಜೊತೆ ಜೊತೆಯಾಗಿ  ಹುಟ್ಟಿಕೊಂಡಿವೆ. ನಮ್ಮಲ್ಲಿನ ಶರಣರ ವಿಚಾರಧಾರೆ, ತತ್ವಪದಕಾರರ ಅನುಭಾವ ಇವೆಲ್ಲವನ್ನು ಉದಾಹರಣೆಯಾಗಿ ಕೊಡಬಹುದು.

ಜಗತ್ತಿನ ಪುರಾತನ ಧರ್ಮ ಎನಿಸಿಕೊಂಡ ಹಿಂದೂ ಧರ್ಮದ ವಿರುದ್ಧ ಮೂರು ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ಲೋಕಾಯುತ ದರ್ಶನ ಜನ್ಮತಾಳಿತು. ಚಾರ್ವಾಕನನ್ನು ಜಗತ್ತಿನ ಪ್ರಥಮ ಬಂಡುಕೋರ ಎಂದರೂ ತಪ್ಪಿಲ್ಲ. ಚಾರ್ವಾಕ ದರ್± ಎಂದು ಕರೆಸಿಕೊಳ್ಳುವ ಲೋಕಾಯುತ ದರ್ಶನದಲ್ಲಿ ನಮ್ಮ ವೇದಗಳನ್ನು ಕಟು ವಿಮರ್ಶೆಗೆ ಒಡ್ಡಲಾಗಿದೆ. ಏಕೆಂದರೆ, ಚಾರ್ವಾಕನದು ಬೌತಿಕವಾದದ ಪ್ರಜ್ಞೆ. ಜೊತೆಗೆ ಪ್ರಕೃತಿಯನ್ನು ಪ್ರಕೃತಿಯಿಂದ ಅರಿಯುವ ಮನಸ್ಸು ಆತನದು. ಹಾಗಾಗಿ ಆತನನ್ನು ಭಾರತದ ಪ್ರಥಮ ತತ್ವಜ್ಞಾನಿ ಎಂದೂ ಸಹ ನಾವು ಕರೆಯಬಹುದು.

ಇನ್ನೊಂದು ಕುತೂಹಲ ಸಂಗತಿಯೆಂದರೆ, ನೆಲದ ಮೂಲನಿವಾಸಿಗಳು ಎನಿಸಿಕೊಂಡ ದ್ರಾವಿಡರಲ್ಲಿ ಐದು ಸಾವಿರ ವರ್ಷಗಳ ಹಿಂದೆ ನಿಸರ್ಗದ ವಿಸ್ಮಯಗಳಿಗೆ ತಮ್ಮನ್ನು ತೆರೆದುಕೊಂಡು ಕುತೂಹಲಗೊಂಡು ಬೌತಿಕವಾದದ ಪ್ರಜ್ಞೆಯತ್ತ ಹೆಜ್ಜೆ ಇಟ್ಟರು. ದ್ರಾವಿಡರ ಬೌತಿಕವಾದ ಶುದ್ಧ ಪ್ರಾಕೃತಿಕ ವಿಜ್ಞಾನವಾಗಿತ್ತು. ಬುಡಕಟ್ಟು ಜನಾಂಗಗಳ ರೀತಿಯಲ್ಲಿ ಬದುಕಿದ ದ್ರಾವಿಡರ ಭೌತಿಕವಾದದ ಪ್ರಜ್ಞೆ ಆನಂತರದ ದಿನಗಳಲ್ಲಿ ಇಲ್ಲಿಗೆ ಕಾಲಿಟ್ಟ ಆರ್ಯರಿಂದ ನಾಶವಾಯಿತು.

ಚಾರ್ವಾಕನಿಂದ ಪ್ರೇರಿತಗೊಂಡ ಗೌತಮ ಬುದ್ಧ ಕೂಡ ಲೋಕಾಯುತ ದರ್ಶನದ ವಿಚಾರಗಳಿಂದ ಪ್ರಭಾವಿತನಾಗಿದ್ದಾನೆ. ದೇವರ ಕುರಿತು ಮೌನ ತಾಳಿದ್ದು, ಹಿಂದೂ ಧರ್ಮದ ವಿರುಧ್ಧ ಸಿಡಿದೆದ್ದು ಪ್ರತ್ಯೇಖ ಪಥ ಕಟ್ಟಿಕೊಂಡಿದ್ದೂ ಸಹ ಕಾರಣದಿಂದ ಎಂದು ಹೇಳಬಹುದು.

ಭಾರತದ ದರ್ಶನಗಳಲ್ಲಿ ಬೌತಿಕವಾದ ಮತ್ತು ಆಧ್ಯಾತ್ಮವಾದ ಎರಡು ಜ್ಞಾನಪರಂಪರೆಗಳು ಪ್ರತೇಖ ಶಾಖೆಗಳಾಗಿ ಹಲವಾರು ಶತಮಾನಗಳ ಕಾಲ ನಮ್ಮ ಮನ ಮಾನಸದಲ್ಲಿ ಗುಪ್ತ ನದಿಗಳಂತೆ ಹರಿದಿವೆ.

ಇನ್ನೊಂದು ಸೋಜಿಗದ ಸಂಗತಿಯೆಂದರೆ, ಭಾರತದಲ್ಲಿ ಬೌತಿಕವಾದದ  ಸಿದ್ಧಾಂತ ದರ್ಶನದ ಸ್ಥಾನ ಅಲಂಕರಿಸುವ ಮೊದಲೇ ಗ್ರೀಸ್ ಅಂಥವಾ ಅಂದಿನ ಗ್ರೀಕ್ ನಾಗರೀಕ ಸಮಾಜದಲ್ಲಿ ಅಸ್ತಿತ್ವದಲ್ಲಿ ಇತ್ತು.

ಎಪಿಕ್ಯೂರಸ್, ಡಿಮಾಕ್ರಟಿಸ್, ಉಕ್ರೇಶಿಯಸ್, ಮೊದಲಾದವರು ಪ್ರಕೃತಿವಾದವನ್ನು ಪ್ರತಿಪಾದಿಸಿದ್ದರು. ಆನಂತರದ ದಿನಗಳಲ್ಲಿ ಸಾಂಸ್ಥಿಕ ರೂಪು ತಳೆದ ಕ್ರೈಸ್ತ ಧರ್ಮ ಚರ್ಚುಗಳ ಮೂಲಕ ಇಂತಹ ವಾದಗಳನ್ನು ತಳ್ಳಿಹಾಕಿತು. ಗೆಲಿಲಿಯೊ, ಕೂಪರ್ನಿಕಸ್ ಚರ್ಚುಗಳ ಅಬ್ಬರಕ್ಕೆ ಮತ್ತು ಕ್ರೌರ್ಯಕ್ಕೆ ಬಲಿಯಾದದ್ದು ಈಗ ಇತಿಹಾಸ.




ಹೀಗೆ ಜಗತ್ತಿನ ಯಾವುದೇ ನೆಲದಲ್ಲಿ ಜನ್ಮತಳೆದ ಪ್ರತಿಯೊಂದು ಧರ್ಮವೂ ತನ್ನ ಒಡಲೊಳಗಿನ ವಿಕೃತಿ ಮತ್ತು ವಿಕಾರಗಳ ಜೊತೆಗೆ ಅವುಗಳಿಗೆ ಪ್ರತಿಯಾಗಿ ಪ್ರತಿಭಟನೆಯ ರೂಪಗಳು ಸಹ ಜನ್ಮತಾಳಿವೆ. ಇಸ್ಲಾಂ ಧರ್ಮ ಕೂಡ ಇದಕ್ಕೆ ಹೊರತಲ್ಲ.

ಸೂಫಿಸಂ ಎಂಬ ಅನುಭಾವಿಗಳ ವಿಚಾರಧಾರೆ ಹುಟ್ಟಿದ್ದು ಎಲ್ಲಿ? ಇವುಗಳ ಮೂಲ ಮಾತೃಕೆಗಳು ಎಲ್ಲಿವೆ ಎಂಬುದು ಬಹಳ ಮುಖ್ಯವಾದ ವಿಚಾರ. ಇವೊತ್ತಿಗೂ ಸೂಫಿಸಂ ಎನ್ನುವುದು ಇಸ್ಲಾಂ ಧರ್ಮದೊಳಗೆ ಟಿಸಿಲೊಡೆದ ಒಂದು ವಿಚಾರ ಧಾರೆ ಎಂಬ ಮಾತಿದೆ. ಇದನ್ನು ಸಂಪೂರ್ಣ ಸತ್ಯ ಎನ್ನುವ ಬದಲು ಅರ್ಧ ಸತ್ಯ ಎಂದೇ ನಾವು ವಾಕ್ಯಾನಿಸಿಕೊಳ್ಳಬೇಕು.

ಏಕೆಂದರೆ, ಅಂದಿನ ಕಾಲದಲ್ಲಿ ಪೂರ್ವ ಮತ್ತು ಪಶ್ಚಿಮದೇಶಗಳ ನಡುವೆ ಹೆಬ್ಬಾಗಿಲಿನಂತೆ ಇದ್ದ ಮಧ್ಯ ಏಷ್ಯಾದ ಪರ್ಷಿಯ ಅಂದರೆ, ಇಂದಿನ ಟರ್ಕಿ, ಇರಾನ್, ಇರಾಕ್ ಪ್ರದೇಶಗಳಲ್ಲಿ ಸೂಫಿ ವಿಚಾರಧಾರೆಯೊಂದು ಅಸ್ತಿತ್ವದಲ್ಲಿತ್ತು. ವಿಚಾರಧಾರೆ, ಅತ್ತ ಗ್ರೀಕ್ ನಿಂದ, ಇತ್ತ ಭಾರತದದಿಂದ ಮತ್ತು ತನ್ನ ಪ್ರದೇಶದ ಜತುರಾಷ್ಟ್ರನ ಹಾಗೂ ಯುಹೂದಿಗಳಿಂದ ಅನೇಕ ಚಿಂತನೆಧಾರೆಗಳಿಂದ ಪ್ರಭಾವಗೊಂಡಿತ್ತು.

ಯಾವುದೇ ಗಡಿ ರೇಖೆಗಳಿಲ್ಲದೆ, ಮುಕ್ತವಾಗಿದ್ದ ಅಂದಿನ ಕಾಲದಲ್ಲಿ ಭಾರತದ ಬೌದ್ಧ ಬಿಕ್ಕುಗಳು, ನಾಥಸಂಪ್ರದಾಯದ ಸಾಧಕರು ಮತ್ತು ಪರ್ಷಿಯಾದ ಸೂಫಿ ಸಂತರು ಇವರೆಲ್ಲಾ ಪೂರ್ವ ಮತ್ತು ಪಶ್ಚಿಮದ ನಡುವೆ ನೆಲದ ಮೇಲಿನ ರಹದಾರಿಯಾಗಿದ್ದ ಸಿಲ್ಕ್ ರೂಟ್ ಎಂಬ ದಾರಿಯಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದರು. ಸಂದರ್ಭದಲ್ಲಿ ಅನೇಕ ದರ್ಶನ ಮತ್ತು ವಿಚಾರಧಾರೆಗಳ ನಡುವೆ ಕೊಳು ಕೊಡೆಗಳು ನಡೆದು ಪರಸ್ಪರ ವಿನಿಮಯ ನಡೆದಿರುವುದನ್ನು ನಾವು ತಳ್ಳಿಹಾಕುವಂತಿಲ್ಲ.

ಅರಬ್ ರಾಷ್ಟ್ರಗಳಲ್ಲಿ ಪ್ರಬಲವಾಗಿ ತಲೆ ಎತ್ತಿದ ಇಸ್ಲಾಂ ದರ್ಮ ಆನಂತರದ ದಿನಗಳಲ್ಲಿ ಪರ್ಷಿಯ ಪ್ರದೇಶಕ್ಕೆ ವಿಸ್ತರಿಸಿತಾದರೂ, ಸಂಪೂರ್ಣವಾಗಿ ಪರ್ಷಿಯಾದ ಸಂಸ್ಕøತಿಯನ್ನು ಆಪೋಶನ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಪರ್ಷಿಯನ್ ಭಾಷೆಯ ಸಾಹಿತ್ಯ ಅರಬ್ಬಿ ಭಾಷೆಯ ನಡುವೆ ಹಲವು ಶತಮಾನಗಳ ಕಾಲ ಉಳಿಯಲು ಸಾಧ್ಯವಾಯಿತು. ಅದೇ ರೀತಿ ಇಸ್ಲಾಂ ಧರ್ಮದ ಹೆಸರಿನಲ್ಲಿ
ಅನೇಕ ಧರ್ಮ ಪ್ರಚಾರಕರು, ಮೌಲ್ವಿಗಳು ಮತ್ತು ದೊರೆಗಳು ಹಿಂಸೆಯ ಖಡ್ಗವನ್ನು ಕೈಗೆತ್ತಿಕೊಂಡಾಗ ಧರ್ಮದ ಕಟ್ಟುಪಾಡುಗಳನ್ನು ನಿರಾಕರಿಸಿದ ಸೂಫಿಸಂ ವಿಚಾರಧಾರೆ ಅದಕ್ಕೆ ಪ್ರತಿಭಟನೆಯ ರೂಪದಲ್ಲಿ ಅಸ್ತಿತ್ವ ತಾಳಿತು.



ಹಾಗಾದರೆ, ಸೂಫಿಸಂ ಎಂದರೆ, ಏನುಸೂಫಿಸಂ ಶಬ್ಧದ ಅರ್ಥ ಏನು ಎಂಬ ಪ್ರಶ್ನೆ ಕೂಡ ಸಹಜವಾದದ್ದು. ಒಂದು ಸರಳ ಮಾತಿನಲ್ಲಿ ಹೇಳಬಹುದಾದರೆ, “ ಜಗತ್ತಿನಲ್ಲಿರು, ಆದರೆ, ಜಗತ್ತಿನಲ್ಲಿರದಂತೆ ಬಾಳಲು ಪ್ರಯತ್ನಿಸುಎಂದು ಹೇಳಬಹುದು. ನಮ್ಮ ಭಾರತೀಯ ಪರಂಪರೆಯ ಲೌಕಿಕದಲ್ಲಿದ್ದುಕೊಂಡು ಅಲೌಕಿಕ ಬದುಕಿನತ್ತ ಪಯಣಿಸುವುದು ಅಥವಾ ಚಿಂತಿಸುವುದು ಎಂಬುದರ ಸಮಾನ ಚಿಂತನೆ.

ಸೂಫಿಸಂ ಎಂಬ ಶಬ್ಧ ಗ್ರೀಸ್ ತತ್ವಶಾಸ್ತ್ರದ ಸೂಫಿಷ್ಟರಿಂದ ಸೋಫಿಯಾ ಎಂಬ ಶಬ್ದದಿಂದ ಚಾಲ್ತಿಗೆ ಬಂದಿತು ಎನ್ನುವ ಮಾತಿದೆ. ಆದರೆ, ಅರಬ್ಬಿ ಭಾಷೆಯ ಸುಪ್ಫಾ ಅಂದರೆ, ಜಗುಲಿ ಮತ್ತು ಸೂಫ್ ಅಂದರೆ ಉಣ್ಣೆ ಎಂಬ ಶಬ್ಧಗಳಿಂದ ಅಸ್ತಿತ್ವಕ್ಕೆ ಬಂದಿದೆ ಎನ್ನುವ ಮಾತು ಹೆಚ್ಚು ಸೂಕ್ತ.

ಸೂಫಿಸಂ ಮೂಲ ಚಿಂತನೆಗಳು ಮತ್ತು ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ  ಕುರಾನ್ ನಲಿರುವ ಅನೇಕ ತತ್ವಗಳಲ್ಲಿ ಸಾಮ್ಯತೆಗಳಿವೆ. ಕುರಾನ್ ನಲ್ಲಿದೇವರಿಗಾಗಿ ಕಾರ್ಯ ನಿರ್ವಹಿಸುವುದು, ಮತ್ತು ದೇವರ ಹೆಸರಿನಲ್ಲಿ ತ್ಯಾಗ ಮಾಡುವುದುಇವುಗಳಿಗೂ ಮತ್ತು ಸೂಫಿ ಪ್ರೇಮ ತತ್ವಗಳಿಗೂ ಅಂತಹ  ವೆತ್ಯಾಸವೇನಿಲ್ಲ. ಇಸ್ಲಾಂ ಧರ್ಮದಲ್ಲಿ ಮಹಮ್ಮದ್ ದೇವರ ಪ್ರವಾದಿ ಎಂಬುದನ್ನು ಸೂಫಿಗಳು ಒಪ್ಪುತ್ತಾರೆ, ಆದರೆ, ಸೈತಾನ ಎಂಬ ಪರಿಕಲ್ಪನೆಯನ್ನು ಸೂಫಿಗಳು ಒಪ್ಪುವುದಿಲ್ಲ. ಇಸ್ಲಾ ಧರ್ಮದ ಪ್ರಕಾರ ಜನರ ಕಷ್ಟ ಮತ್ತು ದುಖಃಗಳಿಗೆ ಕಾರಣ ಸೈತಾನನ ಪ್ರಭಾವ. ಅಲ್ಲಾನ ಆಜ್ಞೆ ಮೀರಿದ ಫಲ ಮತ್ತು ಮಾಡಿದ ತಪ್ಪಿಗೆ ವಿಧಿಸಿದ ದಂಡವನ್ನು ತೆರಲು ಒಪ್ಪದೆ  ಸೃಷ್ಟಿಯಾದವನು ಸೈತಾನ ಎಂಬ ನಂಬಿಕೆ ಧರ್ಮದಲ್ಲಿದೆ. ಈತನ ಕೆಲಸ ಸಜ್ಜನರನ್ನು ದಾರಿ ತಪ್ಪಿಸುವುದೇ ಆಗಿದೆ. ಮಾತುಗಳನ್ನು ಸೂಫಿ ವಿಚಾರೆ ಧಾರೆ ಮಾನ್ಯತೆ ಮಾಡಿಲ್ಲ. ಸೂಫಿ ಸಂತರ ದೃಷ್ಟಿಯಲ್ಲಿ ದೇವರು ಒಬ್ಬನೇ. ಅವನಲ್ಲಿ ಮಿಲನವಾಗುವುದು ತಮ್ಮ ಏಕೈಕ ಗುರಿ ಎಂಬುದಾಗಿದೆ. ಅವರ ಚಿಂತನೆಗಳಲ್ಲಿ ದ್ವೈತಕ್ಕಿಂತ ಅದ್ವೈತಕ್ಕೆ ಪ್ರಾಧಾನ್ಯತೆ ನೀಡಿರುವುದನ್ನು ನಾವು ಗಮನಿಸಬಹುದು.

ಹಾಗಾಗಿ ಇಸ್ಲಾಂ ಧರ್ಮದ ಯಾವುದೇ ಕಟ್ಟುಪಾಡುಗಳನ್ನು ತಮ್ಮ ಮೇಲೆ ಹೇರಿಕೊಳ್ಳಲು ಇಚ್ಛಿಸಿದ ಸೂಫಿಗಳು ನೈತಿಕ ಹಾದಿಯಲ್ಲಿ ದೇವರನ್ನು ಅರಸುತ್ತಾ, ಅವನಲ್ಲಿ ಲೀನವಾಗುವ ವ್ಯವಸ್ಥೆಯನ್ನು  ನಾವು ಸೂಫಿಗಳ ಪ್ರೇಮ ತತ್ವ ಪಥ ಎಂದೂ ಸಹ ಕರೆಯಬಹುದು.


ಸೂಪಿಯೊಬ್ಬ ದೇವರನ್ನು ಅರಸಿ, ಅವನಲ್ಲಿ ಲೀನವಾಗುವ ನಿಟ್ಟಿನಲ್ಲಿ ತನ್ನನ್ನು ಸಾಲೀಕ್ ಅಂದರೆ,ಸಾಧಕ ಎಂದು ಕರೆದುಕೊಳ್ಳುತ್ತಾನೆ. ನಂತರ ಒಂದು ನಿರ್ಧಿಷ್ಟ ಪಥದಲ್ಲಿ ಇದನ್ನು ತರೀಕತ್ ಎಂದು ಕರೆಯಲಾಗುತ್ತದೆ. ಸಾಗುತ್ತಾ ಅಂತಿಮವಾಗಿ ಒಂದೊಂದೇ ಸಾಧನೆಯ ( ಮಕಾಮತ್ ಎಂದು ಹಂತವನ್ನು ಕರೆಯಲಾಗುತ್ತದೆ) ಮೆಟ್ಟಿಲೇರುತ್ತಾ ಅಂತಿಮವಾಗಿ ದೇವರಲ್ಲಿ ಲೀನವಾಗುವ ತನಕ ಮುಂದುವರಿಯುತ್ತಾನೆ. ಇದೊಂದು ಒಂದು ರೀತಿಯಲ್ಲಿ ಖಾಲಿ ಹಾಥ್, ಖಾಲಿ ಗಾಥ್ ಎಂಬ ಸ್ಥಿತಿ. ಇದನ್ನು ನಮ್ಮ ಭೌದ್ಧ ಬಿಕ್ಕುಗಳ ಶೂನ್ಯದ ಪ್ರಜ್ಞೆಯ ಪರಿಕಲ್ಪನೆ ಅಥವಾ ನಮ್ಮ ಶರಣರ ಬಯಲು ತತ್ವದ ಪರಿಕಲ್ಪನೆಗೆ ಹೋಲಿಸಬಹುದು.
ಸೂಫಿ ಪಂಥದ ಅತ್ಯಂತ ಪ್ರಾಚೀನ ಗ್ರಂಥವಾದಕಿತಾಬ್ಅಲ್- ಲುಮಾಕೃತಿಯಲ್ಲಿ ಸೂಫಿಗಳ ಸತ್ಯಾನ್ವೇóಣೆಗೆ ಏಳು ಮಾರ್ಗಗಳನ್ನು ಸೂಚಿಸಲಾಗಿದೆ. ಒಬ್ಬ ವ್ಯಕ್ತಿ ತಸ್ವುಪ್ ಎಂದು ಕರೆಯಲಾಗುವ ಅನುಭಾವ ಪರಂಪರೆಗೆ ತೆರೆದುಕೊಂಡು, ಸೂಫಿ ಯಾಗಲು ಏಳು ಹಂತಗಳನ್ನು ಸೋಫಾನಗಳು ಎಂದು ವ್ಯಾಖ್ಯಾನಿಸಲಾಗಿದೆ.

ಅವುಗಳೆಂದರೆಪಶ್ಚಾತಾಪ- ಸಂಯಮ- ವೈರಾಗ್ಯ- ದೈನ್ಯ- ಧೈರ್ಯ- ದೇವರಲ್ಲಿ ನಂಬಿಕೆ- ಸಂತೋó ಮತ್ತು ಆನಂದ  ಇವುಗಳು ಸೂಫಿಯಾಗುವ ವ್ಯಕ್ತಿಯೊಬ್ಬನಿಗೆ ಅನುಶಾಸನಗಳಾಗಿವೆ.
 ಸೂಫಿ ಮತ್ತು ದೇವರ ನಡುವಿನ ಅನುಸಂಧಾನವನ್ನು ನಾವು ನಮ್ಮ ಭಾರತೀಯ ಪರಂಪರೆಯ ಅಲ್ಲಮ-ಗುಹೆಶ್ವರ, ಅಕ್ಕ ಮತ್ತು ಚನ್ನ ಮಲ್ಲಿಕಾರ್ಜುನ ಕನಕದಾಸ ಮತ್ತು ಕೃಷ್ಣ, ಪುರಂದರ ದಾಸರು ಮತ್ತು ವಿಠಲ ಇವರುಗಳ ಸಂಬಂಧಕ್ಕೆ ಹೋಲಿಸಬಹುದು.
ಸೂಫಿಗಳ ಮನೋಭಾವವಂತೂ ಕೂಡ ಅಕ್ಕ ಮಹಾದೇವಿ  ಹೇಳುವಂತೆ,
ಹಸಿವಾದೊಡೆ ಬಿಕ್ಷಾನ್ನಗಳುಂಟು
ತೃಷೆಯಾದೊಡೆ ಹಳ್ಳ ಬಾವಿಗಳುಮಟು
ಶಯನಕ್ಕೆ ಪಾಳು ದೇಗುಲವುಂಟು
ಚನ್ನ ಮಲ್ಲಿಕಾರ್ಜುನ ಆತ್ಮ ಸಂಗಾತಕ್ಕೆ ನೀನುಂಟು
ಎಂಬ ಸ್ಥಿತಿ.
ತಾವು ನಂಬಿದ ದೇವರನ್ನು ತಮ್ಮೊಳಗೆ ಕಾಣಲು ಸೂಫಿಗಳು ಬದುಕಿನುದ್ದಕ್ಕೂ ನಡೆಸಿದ ಅಥವಾ ಹೋರಾಟ ನಿಜಕ್ಕೂ ಕುತೂಹಲಕಾರಿಯಾದುದು. ಭಾರತದ ಭಕ್ತಿಯ ಪರಂಪರೆ ಮತ್ತು ಅದರೊಂದಿಗೆ ಮಿಳಿತಗೊಂಡಿದ್ದ ಮೈ ಮರೆಯುವ ಪ್ರಜ್ಞೆ ಅಥವಾ ವಿರಕ್ತ ಮಠದ ಪರಿಕಲ್ಪನೆಯಷ್ಟೂ ಸುಲಭವಾಗಿರಲಿಲ್ಲ.
ಅಲ್ಲಮ ಹೇಳಿದ
ಮಠವೇಕೊ? ಪರ್ವತವೇಕೊ?
ಜನರೇಕೊ? ನಿರ್ಜನವೆಕೋ/
ಚಿತ್ತ ಸಮಾಧಾನವುಳ್ಳ ಶರಣಂಗೆ
ಎಂಬ ಸ್ಥಿತಿಯನ್ನು ತಲುಪಲು  ಸೂಫಿಗಳು ತಮ್ಮ ಕಾಯವನ್ನು ದಂಡಿಸುತ್ತಾ, ಕಂಬಳಿ ಅಥವಾ ತೇಪೆ ಹಾಕಿದ ನಿಲುವಂಗಿ ಮತ್ತು ಬಿಕ್ಷಾ ಪಾತ್ರೆಗಳ ಮೂಲಕ ಜೀವನವನ್ನು ಸೆವೆಸಬೇಕಾಯಿತು. ಹಾಗಾಗಿ ಇಹಲೋಕದ ಗುಂಗನ್ನು ದಾಟಲು, ಮಾದಕ ವಸುಗಳು, ಪಾನೀಯ ಮತ್ತು ಮೈದಣಿಯುವ ನೃತ್ಯಕ್ಕೆ ಮೊರೆಹೋದರು.
ದೇವgಲ್ಲಿ  ಮೊರೆಹೋಗುವ ಅಥವಾ ಲೀನವಾಗುವ ಹಂತದಲ್ಲಿ ಅವರು ನಡೆಸಿದ ಅನುಸಂಧಾನ ಮತ್ತು ಧರ್ಮದ ಕಂದಾಚಾರಗಳು ಹಾಗೂ ರಾಜಪ್ರಭತ್ವದ ಹಿಂಸೆಯಿಂದ ಪಾರಾಗಲು ಅವರು ತಮ್ಮ ಕಾವ್ಯ ಅಥವಾ ಹಾಡುಗಳಲ್ಲಿ ಬಳಸಿದ ಪ್ರತಿಮಾ ರೂಪಗಳು ಹಾಗೂ ರೂಪಕ ಭಾಷೆಗಳು ಸೂಫಿಸಂ ಪ್ರೇಮ ತತ್ವದ ನಿಜವಾದ ಜೀವಾಳಗಳು. ಜೊತೆಗೆ ಸೂಫಿಗಳ ಮೂಲ ತತ್ವಗಳಲ್ಲಿ ಒಂದಾದ ಗುರು ಶಿಷ್ಯ ಪರಂಪರೆಯಲ್ಲಿ ಗುರುಗಳಿಗೆ ತಮ್ಮನ್ನು ಒಡ್ಡಿಕೊಂಡು, ಗುರುವಿನ ಮೂಲಕ ಲೋಕವಿದ್ಯೆ ಮತ್ತು ರಹಸ್ಯ ವಿದ್ಯೆ ಕಲಿಯುವ ಸೂಫಿಗಳು ಗುರುವನ್ನು ದೈವತ್ವಕ್ಕೆ ಏರಿಸಿದ್ದರು. ಅಲ್ಲಾನನ್ನು ಹೊರತು ಪಡಿಸಿ ಬೇರೆಯವರಿಗೆ ಮಣಿಯಬಾರದು ಎಂಬ ಇಸ್ಲಾಂ ಮೂಲತತ್ವಕ್ಕೆ ಇವರು ಒಡ್ಡಿದ ವಿರೋಧಕಟ್ಟಾ ಮುಸ್ಲಿಂವಾದಿಗಳ ಪಾಲಿಗೆ ದೈವವಿರೋಧಿ ನೀತಿಯಯಿತು.
ತಾವು ಬದುಕಿದ ವರ್ತಮಾನದ ಬದುಕಿನ ವೈರುಧ್ಯಗಳನ್ನು ಮತ್ತು ಧರ್ಮ ಮತ್ತು ಸಮಾಜದ ಜೀವ ವಿರೋಧಿ ನಿಲುವುಗಳನ್ನು ಪ್ರತಿಭಟಿಸುವ ಸಲುವಾಗಿ ಇವರು ತುಳಿದ ಅನುಭಾವದ ಮಾರ್ಗ ನಿಜಕ್ಕೂ ಬೆರಗು ಮುಡಿಸುವಂತಹದ್ದು. ಇದನ್ನು ಅರ್ಥೈಸಿಕೊಂಡಾಗ ಮಾತ್ರ ನಮಗೆ ಸೂಫಿ ಪಂಥದ ಪ್ರೇಮ ಭಾವನೆಗಳು ನಮಗೆ ದಕ್ಕಲು ಸಾಧ್ಯ.

ಇದು ಸೂಫಿ ಸಂತರ ಅನುಭಾವದ ಮಾರ್ಗ

ಒಂದು- ವ್ಯಕ್ತಿಯೊಬ್ಬ ಲೌಕಿಕ ಬದುಕಿನಲ್ಲಿ ತಾನು ಮಾಡಿದ ಪಾಪಗಳ ಬಗ್ಗೆ ಪಶ್ಚಾತಾಪ ಪಡುವುದು ಅನುಭಾವದ ಮೊದಲ ಹೆಜ್ಜೆ.

ಎರಡು- ಅಲ್ಲಾನನ್ನು ಹೊರತು ಪಡಿಸಿ, ಉಳಿದೆಲ್ಲಾ ಜಗತ್ತನ್ನು ಮರೆತುಬಿಡುವುದು ನಿಜವಾದ ಪಶ್ಚಾತಾಪ.

ಹೀಗೆ ಸರ್ವಸಂಗ ಪರಿತ್ಯಾಗಿಯಾಗಿ ಸಮರ್ಪಣಾ ಭಾವದಿಂದ ಸನ್ಯಾಸತ್ವ ಅಥವಾ ವೈರಾಗ್ಯವನ್ನು ತಾಳುವ ಸಾಧಕನನ್ನು ಮೂರು ವರ್ಷಗಳ ಕಾಲ ಆಧ್ಯಾತ್ಮಿಕ ಅನುಶಾಸನಗಳ ಚೌಕಟ್ಟಿನಲ್ಲಿ ಇರಿಸಲಾಗುತ್ತದೆ.




ಅವಧಿಯಲ್ಲಿ ಮೊದಲನೆಯ ವರ್ಷ ಜನಸಾಮಾನ್ಯರ ಸೇವೆ, ಎರಡನೇಯ ವರ್ಷದಲ್ಲಿ ದೇವರ ಸೇವೆ ಮತ್ತು ಮೂರನೆಯ ವರ್ಷದಲ್ಲಿ ತನ್ನ ಹೃದಯವನ್ನು  ಅಲ್ಲಾನಿಗಾಗಿ ಜಾಗೃತಗೊಳಿಸಬೇಕಾಗುತ್ತದೆ. ರೀತಿ ಮೂರು ವರ್ಷಗಳ ಕಾಲ ದೇವರ ಉಪಾಸನೆ ಮಾಡಿದ ಸಾಧಕನಿಗೆ ಮುರಾಕ್ಕಾತ್ ದೀಕ್ಷೆ. ಅಂದರೆ, ಅವನಿಗೆ ತೇಪೆ ಹಾಕಿದ ಬಟ್ಟೆಯನ್ನು ನೀಡಲಾಗುತ್ತದೆ.
 ಆತ ಸಾಧನೆಯ ಹಾದಿಯನ್ನು ತುಳಿಯುತ್ತಾ, ತನ್ನ ಇಂದ್ರಿಯದ ಆಕಾಂಕ್ಷೆಗಳನ್ನು ದಮನ ಮಾಡುತ್ತಾ, ತನ್ನ ವ್ಯಕ್ತಿತ್ವದಲ್ಲಿದ್ದ ಅವಗುಣಗಳಾದ, ಕೋಪ, ತಾಪ, ಕಾಮ, ಆಸೆ, ದುಖಃ ಇವೆಲ್ಲವನ್ನು ಕಡಿಮೆಗೊಳಿಸುತ್ತಾ ನಡೆಯುತ್ತಿದ್ದಂತೆ, ದೇವರಲ್ಲಿನ ಅವನ ನಂಬಿಕೆ ಬಲಗೊಳ್ಳುತ್ತಾ ಹೋಗುತ್ತದೆ. ಕೇವಲ ದೇವರ ಧ್ಯಾನದಲ್ಲಿ ಮುಳುಗುವ ಸೂಫಿಯ ಹೃದಯದಲ್ಲಿ ಪ್ರೇಮ ಭಾಷೆಯಲ್ಲದೆ ಬೇರೇನೂ ಉದಯಿಸದು. ಹೀಗೆ ಅಲ್ಲಾನಲ್ಲಿ ಲೀನವಾಗುವ ನಿಟ್ಟಿನಲ್ಲಿ ಸೂಫಿಗಳು ಹಾಡಿದ ಕಾವ್ಯವೇ ಪ್ರೇಮ ಕಾವ್ಯ. ಅವರು ದೇವರನ್ನು ಮತ್ತು ತಮ್ಮ ಗುರುಗಳನ್ನು ಪ್ರಿಯತಮೆಗೆ ಹೋಲಿಸಿ ಕಟ್ಟಿದ ಹಾಡುಗಳು ಪ್ರೇಮ ಕಾವ್ಯ ಅಥವಾ ಪ್ರೇಮ ತತ್ವಗಳಾಗಿ ಪ್ರಸಿದ್ಧಿ ಪಡೆದಿವೆ.
ಸೂಫಿಗಳು ತಾವು ಬದುಕಿದ ವರ್ತಮಾನದ ಬದುಕಿನ ವೈರುಧ್ಯಗಳನ್ನು ಮತ್ತು ಧರ್ಮಶಾಸ್ತ್ರದ ಮಿತಿಗಳನ್ನು ಕಾವ್ಯದ ಮೂಲಕ ಪ್ರತಿಭಟಿಸಿದರಾದರೂ ಸೂಫಿ ಕಾವ್ಯಕ್ಕೆ ಅವರು ಬಳಸಿದ್ದು ರೂಪಕ ಭಾಷೆಯಾಗಿತ್ತು. ಸತ್ಯವನ್ನು ಪ್ರತಿಮೆಗಳ ಮೂಲಕ ಬೆಡಗಿನ ಭಾಷೆಯಲ್ಲಿ ವಿವರಿಸುತ್ತಾ, ಧರ್ಮದ ವಿರುದ್ಧ ತಮ್ಮ ತಾತ್ವಿಕ ವಿರೋಧವನ್ನು ವ್ಯಕ್ತ ಪಡಿಸುತ್ತಾ ಬಂದರು. ಜೊತೆಗೆ ತಮ್ಮ ಶಿಷ್ಯರಿಗೆ ಕೆಲವು  ರಹಸ್ಯಗಳನ್ನು ಹೇಳುವ ವಿಧಾನವೂ ಇದಾಗಿತ್ತು. ಭಾರತದಲ್ಲಿ ನಮ್ಮ ಶರಣರು ಬಳಸಿದ ಬೆಡಗಿನ ವಚನಗಳು, ಬೌದ್ಧ ಯತಿಗಳು ಬಳಸಿದ  ಗಹನ ಗುಹರ ಭಾಷೆ ಅಥವಾ ನಾಥ ಪಂಥದಲ್ಲಿ ಅಸ್ತಿತ್ವದಲ್ಲಿದ್ದ ಸಂಧ್ಯಾ ಭಾಷ ಇವೆಲ್ಲವೂ ಹೊಸ ಸತ್ಯಗಳನ್ನು ಹೇಳಲು ಅನುಭಾವಿಗಳು ಕಂಡುಕೊಂಡ ಮಾರ್ಗವಾಗಿತ್ತು.

ಸೂಫಿಗಳು ರೂಪಕ ಭಾಷೆಗಿಂತ ಅಧಿಕವಾಗಿ ತಮ್ಮ ಕಾವ್ಯದಲ್ಲಿ ಪ್ರತಿಮೆಗಳನ್ನು ಬಳಸಿದ್ದಾರೆ. ಇಸ್ಲಾಂ ಧರ್ಮಕ್ಕೆ ವಿರೋಧ ಎನಿಸುವ ಮದಿರೆ, ಮಧುಶಾಲೆ, ಮಧುಪಾತ್ರೆ, ಸಾಕಿ, ಪ್ರಿಯತಮೆ, ಉದ್ಯಾನವನ, ಬುಲ್ ಬುಲ್ ಹಕ್ಕಿ ಇವೆಲ್ಲವೂ ಸಾಕಷ್ಟು ಪ್ರತಿಮೆಗಳಾಗಿ ಅವರ ಪ್ರೇಮ ಕಾವ್ಯಗಳಲ್ಲಿ ಕಾಣಿಸಿಕೊಂಡಿವೆ.

ಪ್ರತಿಮೆಗಳ ಮೂಲಕ ಮತ್ತು ರೂಪಕ ಭಾಷೆಗಳ ಮೂಲಕ ಮಾತನಾಡುವುದು ಅಥವಾ ಕಾವ್ಯ ಕಟ್ಟುವುದು ಕೇವಲ ಕವಿಗಳಿಗೆ ಮತ್ತು ಅನುಭಾವಿಗಳಿಗೆ ಸೀಮಿತವಾದುದಲ್ಲ. ಭಾರತದಂತಹ ಬಹು ಸಂಸ್ಕøತಿಯ ನೆಲದಲ್ಲಿ ನಮ್ಮ ಜನಪದರು ಮತ್ತು ತತ್ವ ಪದಕಾರರು ಇಂತಹ ಸಾವಿರಾರು ಪದಗಳನ್ನು ಕಟ್ಟಿ ಹಾಡಿದ್ದಾರೆ, ನಮ್ಮ ನೆರೆಯ ತಮಿಳುನಾಡಿನ ಪ್ರಾಚೀನ ತಮಿಳು ಕಾವ್ಯದಲ್ಲಂತೂ ಇಂತಹ ಉದಾಹರಣೆಗಳು ಹೇರಳವಾಗಿ ದೊರೆಯುತ್ತವೆ. ಅವರು ಪ್ರಿಯೆ, ಅಥವಾ ಪ್ರಿಯತಮನ ನೋವು, ನಲಿವುಗಳಿಗೆ ಪಚ್ಚೆಕ್ಕಿಳಿ ಎಂಬ ಅಂದರೆ ಹಸಿರು ಗಿಣಿಯನ್ನು ಪ್ರತಿಮೆಯಾಗಿ ಇಂದಿಗೂ ಬಳಸುತ್ತಾ ಬಂದಿದ್ದಾರೆ. ನಮ್ಮ ಕನ್ನಡದ ಪ್ರಸಿದ್ಧ ಜಾನಪದ ಗೀತೆಯೊಂದರಲ್ಲಿ
ಮಾಮರದ
ಹಸಿರಲ್ಲಿ ಕುಳಿತಿರುವ
ಗಿಣಿಗಳೆ
ನಿಮ್ಮ ಚದುರಂಗಿ ಮಾತ ನಿಲ್ಲಿಸಿ.
ಎಂದು ಹೇಳುತ್ತಾ ತವರು ಮನೆಯಿಂದ ಗಂಡನ ಮನೆಗೆ ಹೊರಟಿರುವ ನನ್ನನ್ನು ಹರಸ ಬನ್ನಿ ಎಂದು ಕೇಳಿಕೊಳ್ಳುವ  ಹೆಣ್ಣು ಮಗಳೊಬ್ಬಳು ಹಾಡಿದ ಹಾಡು ಹೇಗೆ ಹೆಣ್ಣೋಬ್ಬಳ ಮಾನಸಿಕ ತಾಕಲಾಟಕ್ಕೆ ಪ್ರತಿಮೆಯಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಇಸ್ಲಾಂ ಜಗತ್ತಿನಲ್ಲಿ ಕುಡಿಯುವುದು ಧರ್ಮ ವಿರೋಧಿ ಚಟುವಟಿಕೆ ಎಂಬ ಕಾನೂನು ಜಾರಿಗೆ ಬಂದಾಗ, ಸೂಫಿಗಳಲ್ಲದೆ, ಅನೇಕ ಕವಿಗಳು, ಮದಿರೆ, ಮತ್ತು ಮದಿರಾಲಯವನ್ನು ತಮ್ಮ ಕಾವ್ಯಗಳಲ್ಲಿ ಪ್ರತಿಮೆಯ ರೂಪದಲ್ಲಿ ಜೀವಂತವಿಟ್ಟರು. ಇವರಲ್ಲಿ ಹಾಫೀಜ್ ಮತ್ತು ಉಮರಖಯಾಮ್ ಅಗ್ರಗಣ್ಯರು.



ದೇವರನ್ನು ತಲುಪಲು ಗುಂಗು ಅಥವಾ ಉನ್ಮಾದ ಒಂದು ಮಾಧ್ಯಮವೆಂಬುದು ಸೂಫಿಗಳ ನಂಬಿಕೆಯಾಗಿತ್ತು. ಜೊತೆಗೆ ದೇವರು ಮತ್ತು ಭಕ್ತನ ನಡುವಿನ ಅವಿನಾಭಾವ ಸಂಬಂಧಗಳನ್ನು ಪ್ರಿಯತಮೆಯ ಪ್ರೇಮದ ಪ್ರತಿಮೆಗಳಾಗಿ ಬಳಸಿಕೊಂಡರು. ಜಲಾಲೂದ್ದೀನ್ ರೂಮಿಯಂತೂ ಹೆಣ್ಣೊಬ್ಬಳನ್ನು ಪ್ರೇಮಿಸಿದ, ಆರಾಧಿಸದ ದೇವರನ್ನು ನಾನು ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದ. ಹಾಗಾಗಿ ಸೂಫಿಗಳ ಕಾವ್ಯದಲ್ಲಿ ಕಂಡುಬರುವ ಮದಿರೆ, ಮಾನಿನಿ, ಮದಿರಾಲಯ, ಸಾಕಿ, ಅಥವಾ ಪ್ರಿಯತಮೆ ಅವಳ ಕುರಿತ ವಿರಹ ವೇದನೆ ಇವೆಲ್ಲವೂ ಸಾಂಕೇತಿಕ ಅರ್ಥದಲ್ಲಿ ಬಳಕೆಯಾಗಿವೆ. ಆದರೆ. ಪಾಶ್ಚಿಮಾತ್ಯ ವಿದ್ವಾಂಸರು 19 ಮತ್ತು 20 ನೇ ಶತಮಾನದಲ್ಲಿ ಸೂಫಿ ಕಾವ್ಯದಲ್ಲಿ ಬೇರೊಂದು ಅರ್ಥವನ್ನು ಗ್ರಹಿಸಿ, ರೋಚಕತೆಯಿಂದ ಇಂಗ್ಲೀಷ್ ಭಾಷೆಗೆ ಅನುವಾದಿಸಿದರು. ಇವರಲ್ಲಿ ಉಮರ್ ಖಯಾಮನನ್ನು ಅನುವಾದಿಸಿದ ಫಿಟ್ಸ್ ಜೆರಾಲ್ಡ್ ಪ್ರಮುಖನು.

ಸೂಫಿಗಳು ತಮ್ಮ ಕಾವ್ಯ ಭಾಷೆಯಲ್ಲಿ ಬಳಸಿದ ರೂಪಕದ ಭಾಷೆಯಾಗಲಿ ಅಥವಾ ಪ್ರತಿಮೆಗಳಾಗಲಿ ಇವೆಲ್ಲವು ತಾವು ಕಂಡ ಸತ್ಯವನ್ನು ಹೇಳುತ್ತಾ, ಧಾರ್ಮಿಕ ಆಚರಣೆಗಳ ಹುಸಿತತ್ವಗಳನ್ನು ಬಯಲು ಮಾಡುತ್ತಾ. ಏಕಕಾಲಕ್ಕೆ ಪ್ರಭುತ್ವದಿಂದ ಮತ್ತು ಧಾರ್ಮಿಕ ನಾಯಕರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳು ಮಾರ್ಗ ಇದಾಗಿತ್ತು.

ಇಂತಹ ಪರ್ಯಾಯ ಮಾರ್ಗಗಳ ನಡುವೆಯೂ ಅನೇಕ ಸೂಫಿಗಳು ಸತ್ಯ ನುಡಿದ ಫಲವಾಗಿ ತಮ್ಮ ಜೀವವನ್ನು ತೆತ್ತಿದ್ದಾರೆ. ಇವರುಗಳಲ್ಲಿ ಪ್ರಮುಖವಾಗಿ ಸೂಫಿ ಜಗತ್ತನ್ನು ಕಾಡುವವರಲ್ಲಿ ಮುಖ್ಯರಾದವರೆಂದರೆ, ಅಂದಿನ ಪರ್ಷಿಯಾದ ಭಾಗವಾಗಿದ್ದ ಇರಾನಿನ  ಹಲ್ಲಾಜ್ ಮತ್ತು ನಮ್ಮ ದೆಹಲಿಯಲ್ಲಿ ಔರಂಗಜೇಬನಿಂದ ನಡುಬೀದಿಯಲ್ಲಿ ವಧಿಸಲ್ಪಟ್ಟ ದಾರಾಶಿಕೊವಿನ  ಗುರು ಸಮರ್ದ್ ಎಂಬ ಸೂಫಿ ಸಂತ..
ಅಲ್ ಹಲ್ಲಾಜ್ ನಾನೇ ಸತ್ಯ ಎಂದು ಘೊಷಿಸಿಕೊಂಡ ಪರಿಣಾಮವಾಗಿ ಅಲ್ಲಿನ ಧರ್ಮಾಂದರಿಂದ ವಧಿಸಲ್ಪಟ್ಟ ದುರದೃಷ್ಟ ಸೂಫಿ ಸಂತ. ತಾನು ಸಾಯುವ ವೇಳೆಯಲ್ಲಿ ಆತ ನುಡಿದ ಕಾವ್ಯದ ಸಾಲುಗಳು ಸೂಫಿ ಕಾವ್ಯದಲ್ಲಿ ಇವೊತ್ತಿಗೂ ಜೀವಂತವಾಗಿವೆ
    ನನ್ನ ಮತ್ತು ಸತ್ಯದ ನಡುವಿನ
    ತಿಳುವಳಿಕೆಯಲ್ಲಿ ಯಾವ
    ವೆತ್ಯಾಸವು ಇಲ್ಲ. ಇದನು
    ಅಳಿಸುವ ಯಾವ ಸಾಕ್ಷಿಯೂ ಇಲ್ಲ.
    ಸತ್ಯವೆಂಬುದು ಕಣ್ಣೆದುರಿಗಿನ ಬೆಳಕು
    ಪ್ರತಿ ಬೆಳಕಿನ ಕಿಡಿಯಿಂದ
    ಅದು ಪ್ರಜ್ವಲಿಸುತ್ತದೆ.
ಇದೇ ಸಂದರ್ಭದಲ್ಲಿ ಗ್ರೀಕ್ ರೋಮ್ ಸಾಮ್ರಾಜ್ಯದಲ್ಲಿ ಯುವಕರನ್ನು ಹಾದಿ ತಪ್ಪಿಸುತ್ತಿದ್ದಾನೆ ಎಂಬ ಆರೋಪಕ್ಕೆ ಗುರಿಯಾದ ತತ್ವಜ್ಞಾನಿ ಸಾಕ್ರೇಟಿಸ್ ಗೆ ಅಲ್ಲಿನ ನ್ಯಾಯಾಲಯ ಮರಣ ದಂಡನೆ ವಿಧಿಸಿದಾಗ, ಆತನು ನುಡಿದನಾನು ಸಾಯಲು ಹೋಗುತ್ತಿದ್ದೇನೆ, ನೀವು ಬದುಕಲು ಹೋಗುತ್ತಿದ್ದೀರಿ, ಯಾವುದೇ ಶ್ರೇಷ್ಟ ಎಂಬುದನ್ನು ನೀವು ನಿರ್ಧರಿಸಿಎಂಬ ಮಾತು ನೆನಪಾಗುತ್ತದೆ.



ಮೊಗಲ್ ಸಾಮ್ರಾಜ್ಯದ ಮನೆತನದ ದಾರಾಶಿಕೊವನ ಗುರು ಸಮರ್ದ್ ತನ್ನ ಶಿಷ್ಯನ ಕೊಲೆಯಿಂದ ತಲ್ಲಣಿಸಿ ಹೋದವನು. ಅವನ ತಲ್ಲನಗಳು ಸೂಫಿ ಸಂತ ಪರಂಪರೆಯ ಗುರು-ಶಿಷ್ಯ ಪರಂಪರೆಗೆ ಸಾಕ್ಷಿಯಾಗಿದೆ. ದಾರಾಶಿಕೊ ತನ್ನ ಸಹೋದರ ಔರಂಗಜೇಬನಿಂದ ಕೊಲ್ಲಲ್ಪಟ್ಟಾಗ ಕೊಲೆಯನ್ನು ಪ್ರತಿಭಟಿಸಿದ ಸಮರ್ದ್, ದೆಹಲಿ ಬೀದಿಗಳಲ್ಲಿ ಬೆತ್ತಲೆ ತಿರುಗಿ ಔರಂಗಜೇಬನ ಕ್ರಮವನ್ನು ಪ್ರತಿಭಟಿಸಿದ. ಬಟ್ಟೆ ತೊಡಿಸಲು ಬಂದ ಔರಂಗಜೇಬನಿಗೆನೀನು ನನ್ನ ತೊತ್ತುನಿನ್ನಿಂದ ಯಾವ ಭಿಕ್ಷೆಯೂ ಬೇಡವೆಂದು ಪ್ರತಿಭಟಿಸಿ, ನಂತರ ತಾನೂ ಕೊಲ್ಲಲ್ಪಟ್ಟ ದುರಾದೃಷ್ಟ ಸೂಫಿ ಸಂತ.

ಹೀಗೆ  ಅನೇಕ ಬಲಿದಾನ ಮತ್ತು ತ್ಯಾಗ ಪರಂಪರೆಯ ಸೂಫಿಗಳು ಜಗತ್ತಿನ ಯಾವ ಧರ್ಮ ಅಥವಾ ಪ್ರಭುತ್ವದ ಒತ್ತಡಗಳಿಗೆ ಮಣಿಯದೆ, ತಮ್ಮ ಪ್ರೇಮ ತತ್ವಗಳನ್ನು ಪ್ರತಿಪಾದಿಸುತ್ತಾ, ಸಾರುತ್ತಾ ಬಂದಿದ್ದಾರೆ. ಸೂಫಿಸಂ ಎಂಬುದು ಬದುಕಿನ ಒಂದು ಕ್ರಮ ಎಂಬುದನ್ನು ನಿರೂಪಿಸಿದ್ದಾರೆ.
( ಮೈಸೂರಿನಲ್ಲಿ ನಡೆದ ಸೂಫಿ-ಸಂತ- ಸಾಮರಸ್ಯ ಕುರಿತ ವಿಚಾರ ಸಂಕಿರಣದಲ್ಲಿ ಮಂಡಿಸಲಾದ ಪ್ರಬಂಧ)
                                                                                   ಮುಂದುವರಿಯುವುದು







ಸೋಮವಾರ, ಜನವರಿ 13, 2014

ತ್ಯಾಗರಾಜರ ಆರಾಧನೆಯಲ್ಲಿ ನೈಪಥ್ಯಕ್ಕೆ ಸರಿದ ನಾಗರತ್ನಮ್ಮನೆಂಬ ನಾದದೇವತೆ.


ತಂಜಾವೂರು ಸಮೀಪದ ತಿರುವಯ್ಯೂರು ಎಂಬ ಪುಟ್ಟ ಗ್ರಾಮವನ್ನು ( ಈಗ ಪಟ್ಟಣವಾಗಿ ಬೆಳದಿದೆ)  ದಕ್ಷಿಣ ಭಾರತದ ಕರ್ನಾಟಕ ಸಂಗೀತದ ತೊಟ್ಟಿಲು ಎಂದು ಕರೆದರೂ ತಪ್ಪಿಲ್ಲ. ಕರ್ನಾಟಕ ಸಂಗೀತದ ಪಿತಾಮಹಾರೆಂದು ಕರೆಯಲಾಗುವ ಕರ್ನಾಟಕದ ಪುರಂದರದಾಸರು ಮತ್ತು ಆಂಧ್ರದ ಅನ್ನಮಯ್ಯ ಇವರನ್ನು ಹೊರತು ಪಡಿಸಿದರೆ, ತ್ರೀಮೂರ್ತಿಗಳೆಂದು ಖ್ಯಾತರಾದ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು  ಶ್ಯಾಮಶಾಸ್ತ್ರಿ ಈ ಮೂವರು ತಿರುವಯ್ಯೂರು ಗ್ರಾಮದವರು. ಜೊತೆಗೆ ನಮ್ಮ ಕನ್ನಡದ ಬೈರವಿ ಕೆಂಪೇಗೌಡ ಹಾಗೂ ಮೈಸೂರು ವಾಸುದೇವಾಚಾರ್ಯ ಇವರಿಗೆ ಸಂಗೀತ ಧಾರೆಯೆರೆದ ಪಟ್ಟಣಂ ಸುಬ್ರಮಣ್ಯ ಅಯ್ಯರ್ ಕೂಡ ಇದೇ ಊರಿನವರು.

 ಹೀಗೆ ಕರ್ನಾಟಕ ಸಂಗೀತಕ್ಕೆ ಅನೇಕ ಪಿತಾಮಹಾರನ್ನು ಮತ್ತು ವಿಧ್ವಾಂಸರನ್ನು ಕೊಟ್ಟ ತಿರುವಯ್ಯುರು ಕಾವೇರಿ ನದಿಯ ದಡದಲ್ಲಿದ್ದು, ತಂಜಾವೂರನ್ನು ಆಳಿದ ವಿಜಯನಗರ ಸಾಮಂತರು ಮತ್ತು ಮರಾಠ ದೊರೆಗಳ ಆಳ್ವಿಕೆಯಲ್ಲಿ  ಸಂಗೀತದ ಕಾಶಿಯೆಂದು ಪ್ರಸಿದ್ಧಿ ಪಡೆಯಿತು. ಮರಾಠ ದೊರೆ ಸರ್ಫೊಜಿ ಕಟ್ಟಿಸಿದ ಸಂಗೀತ ಮಹಲ್ ಕಟ್ಟಡ ಈಗಲೂ ಸಹ ಕಾವೇರಿಯ ದಡದಲ್ಲಿದ್ದು ತನ್ನ ಗತ ವೈಭವವನ್ನು ಸಾರುತ್ತಿದೆ.
ಕಳೆದ ಆರು ದಶಕಗಳಿಂದ ಈ ಊರಿನಲ್ಲಿ ಪ್ರತಿ ವರ್ಷ ನಡೆಯುವ ತ್ಯಾಗರಾಜರ ಆರಾಧನೆ ಎಂಬ ಐದು ದಿನಗಳ ಸಂಗೀತ ಉತ್ಸವಕ್ಕೆ ದೇಶ ವಿದೇಶಗಳಿಂದ ಸಂಗೀತ ಪ್ರೇಮಿಗಳು ಆಗಮಿಸುತ್ತಾರೆ. ಈ ಉತ್ಸವದಲ್ಲಿ ಬೆಳಿಗ್ಗೆ ಆರುಗಂಟೆಯಿಂದ ಮಧ್ಯರಾತ್ರಿ ಹನ್ನೆರೆಡು ಗಂಟೆಯವರೆಗೆ ನಿರಂತರ ಕರ್ನಾಟಕ ಸಂಗೀತದ ಗಾಯನ, ಪಿಟಿಲು, ವೀಣಾ ವಾದನ, ನಾದಸ್ವರ ಹೀಗೆ ಸಂಗೀತ ರಸದೌತಣವನ್ನು ಕಲಾವಿದರು ಉಣಬಡಿಸುತ್ತಾರೆ. ಈ ಉತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮ ನೀಡುವುದು ಕರ್ನಾಟಕ ಸಂಗೀತದ ಪ್ರತಿಯೊಬ್ಬ ಕಲಾವಿದನ/ಳ ಜೀವಮಾನದ ಕನಸು ಕೂಡ ಹೌದು
.
ಈ ವರ್ಷ ಜನವರಿ 17 ರಿಂದ 21 ರವರೆಗೆ ತಿರುವಯ್ಯೂರಿನಲ್ಲಿ ತ್ಯಾಗರಾಜರ ಆರಾಧನೆ ನಡೆಯಲಿದ್ದು ಈಗಾಗಲೇ ಭರದ ಸಿದ್ಧತೆಗಳು ನಡೆಯುತ್ತಿವೆ. ಇಡೀ ದೇಶವೇ ತಿರುಗಿ ನೋಡುವಂತ ಇಂತಹ ಉತ್ಸವದ ಹಿಂದೆ ಕನ್ನಡದ ಹೆಣ್ಣು ಮಗಳೊಬ್ಬಳ ತ್ಯಾಗ ಮತ್ತು ಸಾಧನೆಯ ಇತಿಹಾಸವಿದೆ ಎಂಬುದು ಬಹುತೇಕ ಕನ್ನಡಿಗರಿಗೆ ತಿಳಿಯದಿರುವ ವಿಚಾರ. 1910 ರ ದಶಕದಲ್ಲಿ ತನ್ನ ಗಾಯನ, ನೃತ್ಯದಿಂದ ದಕ್ಷಿಣ ಭಾರತದ  ಕರ್ನಾಟಕ ಸಂಗೀತದಲ್ಲಿ  ಅದ್ವಿತಿಯ ಕಲಾವಿದೆಯೆಂದು ಹೆಸರು ಮಾಡಿದ್ದ ದೇವದಾಸಿ ಕುಟುಂಬದಿಂದ ಬಂದ ಬೆಂಗಳೂರು ನಾಗರತ್ನಮ್ಮ 1904 ರ ಲ್ಲಿ ಬೆಂಗಳೂರಿನಿಂದ ಮದ್ರಾಸಿಗೆ ತೆರಳಿ, ಆ ಕಾಲದಲ್ಲಿ ಅರಸೊತ್ತಿಗೆ ಕಳೆದುಕೊಂಡು (ಈಸ್ಟ್ ಇಂಡಿಯ ಕಂಪನಿಗೆ) ಮದ್ರಾಸ್ ನಗರದಲ್ಲಿ ವಾಸವಾಗಿದ್ದ ದಕ್ಷಿಣ ಭಾರತದ ಅನೇಕ ರಾಜಮನೆತನಗಳು ಮತ್ತು ಶ್ರೀಮಂತ ಮೊದಲಿಯಾರ್ ಹಾಗೂ ಚೆಟ್ಟಿಯಾರರ ಅಚ್ಚು ಮೆಚ್ಚಿನ ಕಲಾವಿದೆಯಾಗಿದ್ದರು. 

1910 ರ ದಶಕಲದಲ್ಲಿ ಬ್ರಿಟೀಷ್ ಸರ್ಕಾರಕ್ಕೆ ವರಮಾನ ತೆರಿಗೆ ಪಾವತಿಸಿದ ದಕ್ಷಿಣ ಭಾರತದ ಏಕೈಕ ಕಲಾವಿದೆ ನಾಗರತ್ನಮ್ಮನವರು ಎಂಬುದು ಇವೊತ್ತಿಗೂ ದಾಖಲೆಯಾಗಿ ಉಳಿದಿದೆ. ಕನ್ನಡ, ತಮಿಳು, ಮತ್ತು ತೆಲುಗು ಹಾಗೂ ಸಂಸ್ಕೃತ ಭಾಷೆಗಳ ಮೇಲೆ  ಪ್ರೌಢಿಮೆ ಸಾಧಿಸಿದ್ದ ನಾಗರತ್ನಮ್ಮ ಕನ್ನಡ ಮತ್ತು ತೆಲುಗು ಸಾಹಿತ್ಯ ಕೃತಿಗಳ ಬಗ್ಗೆ ಅಪಾರವಾದ ಒಳನೋಟಗಳನ್ನು ಒಳಗೊಂಡಿದ್ದರು. ಇವರು ಸಂಪಾದಿಸಿ , ಪ್ರಕಟಿಸಿದ ಹದಿನೆಂಟನೆಯ ಶತಮಾನದ ತೆಲುಗು ಕೃತಿ “ ರಾಧಾ ಸ್ವಾಂತನಮು” ಎಂಬ ಕೃತಿ 1920-30 ರ ದಶಕದಲ್ಲಿ ಆಂಧ್ರ, ತಮಿಳುನಾಡು ಮತ್ತು ದಕ್ಷಿಣ ಕರ್ನಾಟಕ ಹಾಗೂ ಮಂಗಳೂರನ್ನು ಒಳಗೊಂಡ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ದೊಡ್ಡ ಬಿರುಗಾಳಿಯೆಬ್ಬಿಸಿ ನ್ಯಾಯಾಲಯದ ಮೆಟ್ಟಿಲು ಏರುವಂತೆ ಮಾಡಿತ್ತು. ಈ ಸಂದರ್ಭದಲ್ಲಿ ತೆಲುಗು ಸಾಹಿತ್ಯ ದಿಗ್ಗಜರೊಂದಿಗೆ ನಾಗರತ್ನಮ್ಮ ನಡೆಸಿದ ವಾಗ್ವಾದ ಅವರಿಗೆ ಅಂತಿಮವಾಗಿ ತೆಲುಗು ಸಾಹಿತ್ಯದಲ್ಲಿ ವಿಧ್ವಾಂಸೆ ಎಂಬ ಬಿರುದು ತಂದು ಕೊಟ್ಟಿತು.
ಮೈಸೂರು ಅರಮನೆಯ ವಿಶೇಷ ಆಹ್ವಾನಿತ ಕಲಾವಿದೆ, ವೀಣೆ ಶೇಷಣ್ಣ, ಸುಬ್ಬಣ್ಣ ಇವರಿಂದ ಪ್ರತಿಭಾವಂತೆ ಹಾಗೂ ಬಿಡಾರಂ ಕೃಷ್ಣಪ್ಪ ಇವರ  ಅಚ್ಚು ಮೆಚ್ಚಿನ ಶಿಷ್ಯೆಯಾಗಿ ಸಂಗೀತವನ್ನು ತಮ್ಮ ಬದುಕಿನುದ್ದಕ್ಕೂ ಧ್ಯಾನಿಸಿದ ನಾಗರತ್ನಮ್ಮ ಎಂಬ ಈ ಮಹಾತಾಯಿ ಇವೊತ್ತಿಗೂ ತಮಿಳುನಾಡು ಮತ್ತು ಆಂಧ್ರದಲ್ಲಿ ಬೆಂಗಳೂರು ನಾಗರತ್ನಮ್ಮಾಳ್ ಎಂದು ಪ್ರಸಿದ್ದರು. ಇವರ ಕುರಿತು ತೆಲುಗು ಮತ್ತು ತಮಿಳು ಭಾಷೆಯಲ್ಲಿ ಹಾಗೂ ಇಂಗ್ಲೀಷ್ ನಲ್ಲಿ ಜೀವನ ಚರಿತ್ರೆ ಪ್ರಕಟವಾಗಿದೆ. ಕನ್ನಡದಲ್ಲಿ ಡಿ.ವಿ.ಜಿಯವರು ತಮ್ಮ ನೆನಪಿನ ಚಿತ್ರಗಳು ಕೃತಿಯಲ್ಲಿ ಒಂದು ಲೇಖನ ಮತ್ತು ಮೈಸೂರು ವಾಸುದೇವಾ ಚಾರ್ಯರು ಬರೆದಿರುವ ನಾ ಕಂಡ ಕಲಾವಿದರು ಕೃತಿಯಲ್ಲಿ ಬರೆದಿರುವ ಒಂದಿಷ್ಟು ನೆನಪುಗಳನ್ನು ಹೊರತು ಪಡಿಸಿದರೆ. ಬೇರೆಲ್ಲೂ ಪ್ರಸ್ತಾಪವಿಲ್ಲ.

ಇತಿಹಾಸದ ಗರ್ಭದೊಳಗೆ ಹೂತು ಹೋಗುತ್ತಿರುವ ಈ ಮಹಾತಾಯಿಯ ಹೆಜ್ಜೆಯ ಗುರುತುಗಳನ್ನು ಹುಡುಕಿಕೊಂಡು, ಚೆನ್ನೈ, ತಂಜಾವೂರು, ತಿರುವಯ್ಯೂರು, ಮೈಸೂರು ಹಾಗೂ ಬೆಂಗಳೂರು ನಗರಗಳನ್ನು ತಿರುಗುತ್ತಾ ಕಲೆಹಾಕಿದ ಮಾಹಿತಿಗಳ ಜೊತೆಗೆ ವರ್ತಮಾನದ ಅನೇಕ ಸಂಗತಿಗಳು ನನ್ನಲ್ಲಿ ನೋವುಂಟು ಮಾಡಿವೆ. ಇದನ್ನು ಹೇಗೆ ವಿಶ್ಲೇಷಿಸಬೇಕು ಅರ್ಥವಾಗುತ್ತಿಲ್ಲ ಏಕೆಂದರೆ, ಇತಿಹಾಸ ಹಂಗಿಲ್ಲದೆ ಬದುಕುವುದನ್ನು ರೂಢಿಸಿಕೊಂಡಿರುವ ವರ್ತಮಾನದ ಜಗತ್ತಿಗೆ ಒಬ್ಬ ಕಲಾವಿದೆಗೆ ಚರಿತ್ರೆ ಮತ್ತು ವರ್ತಮಾನ ಎಸಗಿರುವ ದ್ರೋಹ ಇವುಗಳು ವ್ಯರ್ಥ ಪ್ರಲಾಪ ಎಂದು ಅನಿಸಿಬಿಡುವ ಸಾದ್ಯತೆಗಳೇ ಹೆಚ್ಚು. ಏನೇ ಇರಲಿ “ ನಾದ ದೇವತೆ ನಾಗರತ್ನಮ್ಮ” ಎಂಬ ಶಿರ್ಷಿಕೆಯಡಿ ರಚಿಸುತ್ತಿರುವ ಕೃತಿಯಲ್ಲಿ  ನಾನು ಎಲ್ಲವನ್ನೂ ದಾಖಲಿಸಲು ತೀರ್ಮಾನಿಸಿದ್ದೇನೆ.
ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ದೇವದಾಸಿಯಾಗಿದ್ದ ಹೆಗ್ಗಡದೇವನಕೋಟೆ ಮೂಲದ ಪುಟ್ಟಲಕ್ಮಮ್ಮ ಎಂಬುವರ ಮಗಳಾಗಿ 1878 ರಲ್ಲಿ ಜನಿಸಿದ ನಾಗರತ್ನಮ್ಮ, ಮೈಸೂರಿನಲ್ಲಿ ಗಿರಿಭಟ್ಟರ ತಮ್ಮಯ್ಯ ಮತ್ತು ಬಿಡಾರಂ ಕೃಷ್ಣಪ್ಪನವರ ಬಳಿ ಸಂಗೀತ ವಿದ್ಯಾಭ್ಯಾಸ ಮಾಡಿ, ಆನಂತರ ಬೆಂಗಳೂರಿಗೆ ಬಂದು ತನ್ನ ಸಹೋದರ ಮಾವ ವೆಂಕಟಸ್ವಾಮಪ್ಪನವರ ಬಳಿ ತೆಲುಗು ಕೀರ್ತನೆ ಸೇರಿದಂತೆ, ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡಿ ಕಲಾವಿದೆಯಾಗಿ ರೂಪುಗೊಂಡು,ಬೆಂಗಳೂರಿನ ಜಸ್ಟೀಸ್ ನರಹರಿರಾವ್ ಆಶ್ರಯದಲ್ಲಿ ಬೆಳೆದವರು. ಅವರ ನಿವೃತ್ತಿಯ ಸಮಯದಲ್ಲಿ ದಕ್ಷಿಣ ಭಾರತದಲ್ಲಿ ಸಂಗೀತದ ಕಾಶಿಯಾಗಿ ರೂಪುಗೊಳ್ಳುತ್ತಿದ್ದ ಮದ್ರಾಸ್ ನಗರಕ್ಕೆ ತೆರಳಿ, ತಮ್ಮ ನೃತ್ಯ, ಸೌಂದರ್ಯ, ಸಂಗೀತದ ಕಂಠಸಿರಿ ಹಾಗೂ ವಿದ್ವತ್ ಗಳಿಂದ ಅಲ್ಲಿನ ಸಂಗೀತ ಪ್ರೇಮಿಗಳ ಮನಗೆದ್ದು, ಆ ಕಾಲಕ್ಕೆ ಮದ್ರಾಸ್ ನಗರದಲ್ಲಿ ಸಂಗೀತ ಲೋಕದ ಅದ್ವಿತೀಯರು ಎನಿಸಿದ ವೀಣಾ ದಾನಮ್ಮಾಳ್ ಮತ್ತು ಲಲಿತಾಂಗಿ ( ಎಂ.ಎಲ್.ವಸಂತ ಕುಮಾರಿ ಇವರ ತಾಯಿ) ಮತ್ತು ಕೊಯಮತ್ತೂರು ತಾಯಿ ಎಂಬುವರ ಸರಿಸಮಾನಕ್ಕೆ ಬೆಳೆದು ನಿಂತವರು.


ಚೆನ್ನೈ ನಗರದ ಮದ್ರಾಸ್ ಹೈಕೋರ್ಟ್ ನ ಉತ್ತರ ಭಾಗಕ್ಕೆ 1840 ರಲ್ಲಿ ರೂಪುಗೊಂಡ ಜಾರ್ಜ್ ಟೌನ್ ಪ್ರದೇಶದಲ್ಲಿ ನೆಲೆಗೊಂಡು, ಆನಂತರ ಅಲ್ಲಿನ ಶ್ರೀನಿವಾಸ್ ಅಯ್ಯರ್ ರಸ್ತೆಯಲ್ಲಿ ಮ್ಯಾನ್ಸನ್ ಹೌಸ್ ಗಳೆಂದು ಕರೆಯಲಾಗುತ್ತಿದ್ದ ಬೃಹತ್ ಬಂಗಲೆಯೊಂದನ್ನು ಕಟ್ಟಿಕೊಂಡು ವಾಸಿಸತೊಡಗಿದರು. ಅಲ್ಲದೆ. ಪಕ್ಕದ ತಾತ ಮುತ್ತಪ್ಪ ಚೆಟ್ಟಿಯಾರ್ ರಸ್ತೆಯಲ್ಲಿ ಆಂಜನೇಯ ದೇವಸ್ಥಾನ ನಿರ್ಮಾಣ ಮಾಡಿ, ಆ ದೇಗುಲದಲ್ಲಿ ರಾಮ, ಸೀತೆ, ಲಕ್ಷ್ಮಣ, ಆಂಜನೇಯ ವಿಗ್ರಹಗಳ ಸ್ಥಾಪಿಸಿ ಪೂಜಿಸತೊಡಗಿದರು.

 ತ್ಯಾಗರಾಜರ ಕೀರ್ತನೆಗಳನ್ನು ಅರಂಭದಿಂದಲೂ ಮನದುಂಬಿ ಹಾಡುತ್ತಿದ್ದ ನಾಗರತ್ನಮ್ಮನವರಿಗೆ ಮೊದಲಿನಿಂದಲೂ ತಮ್ಮ ಗುರು ಬಿಡಾರಂ ಕೃಷ್ಣಪ್ಪನವರ ಪ್ರಭಾವದಿಂದ ರಾಮನೆಂದರೆ, ಅಪಾರ ಪ್ರೀತಿ ಮತ್ತು ಗೌರವ. ತ್ಯಾಗರಾಜರ ಆರಾಧ್ಯ ದೈವ ಕೂಡ ಶ್ರೀರಾಮ ಹಾಗಾಗಿ ಭಾರತದ ಪುರಾಣದಲ್ಲಿ ಮರ್ಯಾದ ಪುರುಷೋತ್ತಮ ಎನಿಸಿಕೊಂಡ ಶ್ರೀರಾಮ ಅಂತಿಮವಾಗಿ ಬೆಂಗಳೂರಿನ ನಾಗರತ್ನಮ್ಮನವರನ್ನು ತ್ಯಾಗರಾಜರ ಬಳಿ ಕೊಂಡೊಯ್ದ ನಿಲ್ಲಿಸಿದ.


ಒಮ್ಮೆ ತಿರುವಯ್ಯೂರಿಗೆ ಬೇಟಿ ನೀಡಿದ ನಾಗರತ್ನಮ್ಮನವರಿಗೆ ಅಲ್ಲಿನ ಕಾವೇರಿ ನದಿತೀರದಲ್ಲಿ ಮುಳ್ಳು ಕಂಠಿಗಳಿಂದ ಮುಚ್ಚಿಹೋಗಿದ್ದ ತ್ಯಾಗರಾಜರ ಸಮಾಧಿ ನೋಡಿ ಮನಸ್ಸಿಗೆ ಬೇಸರವಾಯಿತು. ಆ ವೇಳೆಗಾಗಲೇ ಮಕ್ಕಳಿಲ್ಲದ ನಾಗರತ್ನಮ್ಮ ಅಪಾರ ಐಶ್ವರ್ಯವಿದ್ದರೂ ಕೂಡ ವೈರಾಗ್ಯದತ್ತ ವಾಲಿದ್ದರು. ಹಾಗಾಗಿ ತ್ಯಾಗರಾಜರ ಸಮಾಧಿಯನ್ನು ಅಭಿವೃದ್ಧಿಪಡಿಸಿ, ಅವರಿಗೊಂದು ಗುಡಿ ಕಟ್ಟಿಸಿ, ಜೊತೆಗೆ ಸಮಾಧಿಯ ಸುತ್ತ ಮುತ್ತ ಇದ್ದ ಸುಮಾರು ಇಪ್ಪತ್ತು ಎಕರೆ ಪ್ರದೇಶವನ್ನು ಆರ್ಕಾಟ್ ನವಾಬನಿಂದ ಖರೀದಿಸಿ ಅಭಿವೃದ್ಧಿಪಡಿಸಿದರು. ಇದಕ್ಕಾಗಿ ತಮ್ಮ ಮದ್ರಾಸಿನ ಮನೆ ಮತ್ತು ತಮ್ಮ ಬಳಿ ಇದ್ದ ವಜ್ರ ವೈಢೂರ್ಯಗಳನ್ನು ಮಾರಿ ಹಾಕಿ, ಒಬ್ಬ ವಿರಾಗಿಣಿಯಂತೆ, ಬಂದು ತಿರುವಯ್ಯೂರಿನಲ್ಲಿ ನೆಲೆ ನಿಂತರು.

ಆದರೆ, ಅವರು ತಿರುವಯ್ಯೂರಿನಲ್ಲಿ ಎದುರಿಸಿದ ಅವರು ಸವಾಲುಗಳು, ಸಂಕಟಗಳು ಅಷ್ಟಿಷ್ಟಲ್ಲ, ಒಬ್ಬ ದೇವದಾಸಿ ಹೆಣ್ಣು ಮಗಳು ಅಂದಿನ ಜಾತಿಯ ರೋಗದಿಂದ ಬಳಲುತ್ತಿದ್ದ ಸಮಾಜವನ್ನು ಎದುರಿಸಿದ ರೀತಿಯೇ ಒಂದು ಕೃತಿಯಾಗಬಲ್ಲದು. ತ್ಯಾಗರಾಜರ ಆರಾಧನೆ ಆರಂಭಿಸಿದಾಗ, ನಾಗರತ್ನಮ್ಮ ಅನೇಕ ಅಪಮಾನಗಳನ್ನೂ ಸಹ ಎದುರಿಸಬೇಕಾಯಿತು. ಎಲ್ಲವನ್ನೂ ಸಮರ್ಪಕವಾಗಿ ಎದುರಿಸಿ, ಚಿನ್ನ ಮೇಳ ಮತ್ತು ಪೆರಿಯ ಮೇಳ ಎಂಬ ಎರಡು ಪಂಗಡಗಳು ನಡೆಸುತ್ತಿದ್ದ ಎರಡು ಆರಾಧನೆಯ ಕಾರ್ಯಕ್ರಮಗಳನ್ನು ಒಟ್ಟುಗೂಡಿಸಿದರು. ಅಲ್ಲದೆ, ಹೆಣ್ಣು ಮಕ್ಕಳಿಗೆ ಸಂಗೀತಾಧನೆಯಲ್ಲಿ ಸ್ಥಳವಿಲ್ಲ ಎಂಬ ಸವಾಲನ್ನು ಸ್ವೀಕರಿಸಿ, ಪ್ರತ್ಯೇಕವಾಗಿ ಕಲಾವಿದೆಯರ ಸಮ್ಮೆಳನ ನಡೆಸಿ ಎಲ್ಲರ ಬಾಯಿ ಮುಚ್ಚಿಸಿದರು. ಕೊನೆಗೆ ಅದೇ ತಿರುವಯ್ಯೂರು ಗ್ರಾಮದಲ್ಲಿ, ತ್ಯಾಗರಾಜರ ಸ್ಮರಣೆಯಲ್ಲಿ 1952 ರಲ್ಲಿ ನಿಧನಹೊಂದಿದರು. ಇದೀಗ ತ್ಯಾಗರಾಜರ ದೇಗುಲ ಮತ್ತು ಸಮಾಧಿ ಎದುರಿಗೆ ಸುಮಾರು ನೂರು ಅಡಿ ದೂರದಲ್ಲಿ ನಾಗರತ್ನಮ್ಮನವರ ಪುಟ್ಟ ಗುಡಿ ನಿರ್ಮಾಣ ಮಾಡಿ ಅಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

ದುರಂತವೆಂದರೆ, ಇಡೀ ತಿರುವಯ್ಯೂರು ತ್ಯಾಗರಾಜಮಯವಾಗಿರುವ ಈ ದಿನಗಳಲ್ಲಿ ಯಾರಿಗೂ ನಾಗರತ್ನಮ್ಮನವರ ನೆನಪು ಬೇಡವಾಗಿದೆ.ತ್ಯಾಗರಾಜರ ಸಮಾಧಿ ಇರುವ ದೇಗುಲದಲ್ಲಿ ನಾಗರತ್ನಮ್ಮನವರ ಒಂದು ಚಿತ್ರ ಮತ್ತು ನಾಗರತ್ನಮ್ಮಾಳ್ ಟ್ರಸ್ಟ್ ಎಂಬ ಫಲಕ ಬಿಟ್ಟರೆ, ಬೇರೇನೂ ಮಾಹಿತಿಯಿಲ್ಲ. ನಾಯಿ ಗೂಡಿನಂತಿರುವ ನಾಗರತ್ನಮ್ಮನವರ ಪುಟ್ಟ ಗುಡಿಗೆ ಬೀಗ ಹಾಕಿ ಜಡಿಯಲಾಗಿದೆ. ಅವರ ಮೂರ್ತಿಗೆ ಉಡಿಸಿದ ಸೀರೆಗೆ ದೂಳು ಆವರಿಸಿಕೊಂಡಿದೆ. ಪ್ರತಿ ಎರಡು ಮೂರು ಗಂಟೆಗೆ ತ್ಯಾಗರಾಜರ ಮೂರ್ತಿಯ ಮೇಲಿನ ವಸ್ತ್ರವನ್ನು, ರುದ್ರಾಕ್ಷಿ ಹಾರವನ್ನು ತೆಗೆದು, ಗಂದ, ವಿಭೂತಿ ಹಚ್ಚಿ, ಹೊಸ ವಸ್ತ್ರ ತೊಡಿಸುವ ಮಂದಿಗೆ ನಾಗರತ್ನಮ್ಮ ನೆನಪಾಗುವುದಿಲ್ಲ. ಅಂದು ನಾಗರತ್ನಮ್ಮ ಮನಸ್ಸು ಮಾಡದಿದ್ದರೆ, ಇಂದು ತಿರುವಯ್ಯೂರಿನಲ್ಲಿ ತ್ಯಾಗರಾಜರೂ ಇರುತ್ತಿರಲಿಲ್ಲ, ತಿರುಪತಿ ತಿಮ್ಮಪ್ಪನೂ ಇರುತ್ತಿರಲಿಲ್ಲ. ಈ ವಾಸ್ತವವನ್ನು ಮರೆತಿರುವ ಇಂದಿನ ಜನಕ್ಕೆ ತ್ಯಾಗರಾಜರ ಆರಾಧನೆ ಒಬ್ಬ ದೇವದಾಸಿ ಹೆಣ್ಣು ಮಗಳಿಂದ ಆರಂಭವಾದ ಆರಾಧನೆ ಎಂದು ಹೇಳಿಕೊಳ್ಳುವುದು ಮುಜುಗರದ ಸಂಗತಿಯಾಗಿದೆ.

ಇತ್ತೀಚೆಗೆ ಆರಂಭಗೊಂಡಿರುವ ಸಮುದಾಯ ಭವನಕ್ಕೆ ಸದ್ಗುರು ತ್ಯಾಗರಾಜರ್ ಭವನ ಎಂದು ಹೆಸರಿಟ್ಟು, ಜನರೆಟರ್ ಕೊಠಡಿಗೆ ಶ್ಯಾಮಶಾಸ್ತ್ರಿ ಹೆಸರಿಟ್ಟಿರುವ ಮನಸ್ಸುಗಳಿಗೆ ಎಲ್ಲಿಯೂ ನಾಗರತ್ನಮ್ಮನವರ ಪ್ರತಿಮೆಯನ್ನು ಬಹಿರಂಗವಾಗಿ ಸ್ಥಾಪಿಸಲು ಮನಸ್ಸು ಇದ್ದಂತಿಲ್ಲ.

 ಅಂದು ನಾಗರತ್ನಮ್ಮ ತ್ಯಾಗರಾಜರ ಸಮಾಧಿಗೆ ಸೇರ್ಪಡೆ ಮಾಡಿದ ಇಪ್ಪತ್ತು ಎಕರೆ ಭೂಮಿಯ ಇಂದಿನ ಮಾರುಕಟ್ಟೆಯ ಮೌಲ್ಯ ಸುಮಾರು ಅರವತ್ತು ಕೋಟಿ ರೂಪಾಯಿಗಳು. ಗೆದ್ದಲು ಕಟ್ಟಿದ ಹುತ್ತಕ್ಕೆ ಹಾವು ಬಂದು ಠಿಕಾಣಿ ಹೂಡಿತು ಎಂಬ ಮಾತು ಕಳೆದ ಈತಿಂಗಳ ಐದು ಮತ್ತು ಆರಂದು ತಿರುವಯ್ಯುರು ಪಟ್ಟಣದಲ್ಲಿ ಸಂಚರಿಸುತ್ತಾ, ಕಾವೇರಿ ನದಿಯ ದಡದಲ್ಲಿ ಕುಳಿತಾಗ ನೆನಪಿಗೆ ಬಂದಿತು. ಅದಕ್ಕೆ ಎರಡು ದಿನಗಳ ಹಿಂದೆ ಮದ್ರಾಸ್ ನಗರದಲ್ಲಿ ಕಷ್ಟಪಟ್ಟು ಹುಡುಕಿದ ಅವರ ಮನೆ, ದೇಗುಲ, ರಸ್ತೆ ಇವುಗಳನ್ನು ನೆನೆಸಿಕೊಂಡಾಗ ಇದನ್ನು ಸಂಶೋಧನೆ ಸುಖ ಎನ್ನಲೋ? ಸಂಕಟವೆನ್ನಲೋ? ಎಂಬುದು ಅರಿಯದಾಯಿತು.