ಮಂಗಳವಾರ, ಏಪ್ರಿಲ್ 21, 2015

ಗಾಂಧೀಜಿ ಕನಸಿದ ಕಟ್ಟಡಗಳ ರೂವಾರಿ ಲಾರಿ ಬೇಕರ್. ಒಂದು ನೆನಪು



ಕಳೆದ ಜನವರಿ ತಿಂಗಳಿನ ಕೊನೆಯ ವಾರದಲ್ಲಿ ಕೇರಳದ ತಿರುವನಂತಪುರದಲ್ಲಿದ್ದೆಅಲ್ಲಿನ ಸೆಂಟ್ರಿಲ್ ರೈಲ್ವೆ ನಿಲ್ದಾಣದ ಎದುರು ಇರುವ  ಹಾಗೂ ಪರಿಸರ ಸ್ನೇಹಿ ಕಟ್ಟಡಗಳ ನಿರ್ಮಾಣದ ಮೂಲಕ ತೃತಿಯ ಜಗತ್ತಿನ ರಾಷ್ಟ್ರಗಳಲ್ಲಿ ತನ್ನ ಸೃಜನಶೀಲತೆಯ ಛಾಪು ಒತ್ತಿದ ಲಾರಿ ಬೇಕರ್ ನಿರ್ಮಿಸಿದ ಕಾಫಿ ಹೌಸ್ ಎಂಬ ಕಟ್ಟಡ ತಿರುವನಂತಪುರದ ಲ್ಯಾಂಡ್ ಮಾರ್ಕ್ ಆಗಿದೆ. ಜೊತೆಗೆ ನನ್ನಂತಹವರಿಗೆ ಕಳೆದ ಮೂರು ದಶಕಗಳಿಂದ ಕಾಫಿ ಮತ್ತು ಕಟ್ಟಾ ಚಾಯ್ ಎಂದು ಕರೆಯಲಾಗುತ್ತಿದ್ದ ಹಾಲಿಲ್ಲದ, ನಿಂಬೆ ರಸದ ಚಹಾ ಸೇವನೆಗೆ ಅಡ್ಡೆಯಾಗಿದೆ. ನಾನು ತಿರುವನಂತಪುರಕ್ಕೆ ಕಾಲಿಟ್ಟ ತಕ್ಷಣ ಕಾಫಿ ಹೌಸ್ಗೆ ಬೇಟಿ ನೀಡಿ ಒಂದು ಕಪ್ ಚಹಾ ಅಥವಾÁ ಕಾಫಿ ಕುಡಿಯುವುದು ವಾಡಿಕೆ.
ಬಾರಿಯ ಬೇಟಿಯಲ್ಲಿ ಅಲ್ಲಿನ ಮೇನೇಜರ್ ಶಶಿಧರನ್ ನಾಯರ್, “ನೀವು ಮುಂದಿನ ಬಾರಿ ತಿರುವನಂತಪುರಕ್ಕೆ ಬಂದಾಗ ಕಟ್ಟಡ ಇರುತ್ತೆ ಎಂದು ಹೇಳಲಾಗುವುದಿಲ್ಲ, ದಯವಿಟ್ಟು ನನ್ನ ಖರ್ಚಿನಲ್ಲಿ ಮತ್ತೊಂದು ಚಹಾ ಕುಡಿಯಿರಿಎಂದು ನಗುತ್ತಾ ಹೇಳಿದಬಿಲ್ ಪಾವತಿಸುತ್ತಿದ್ದ ನನಗೆ ಆಶ್ಚರ್ಯವಾಗಿ, ಆತನ ಮಾತು ಕೇಳುತ್ತಾ ನಿಂತೆ. ಕಾಫಿ ಹೌಸ್ಗೆ ಹೊಂದಿಕೊಂಡಂತೆ ಇದ್ದ ಕೇರಳ ಸರ್ಕಾರದ ಹಳೆಯ ಬಸ್ ನಿಲ್ದಾಣ ಹಾಗೂ ಇತರೆ ಕಟ್ಟಡಗಳನ್ನು ತೆರವುಗೊಳಿಸಿ, ಹೊಸದಾಗಿ ಹತ್ತು ಅಂತಸ್ತಿನ ಕಾರ್ಪೋರೇಟ್ ಶೈಲಿಯ ಬೃಹತ್ ಬಸ್ ನಿಲ್ದಾಣವನ್ನು ಈಗ ನಿರ್ಮಿಸಲಾಗಿದೆ. ನೂತನ ಕಟ್ಟಡದ ಸೌಂದರ್ಯಕ್ಕೆ ಲಾರಿ ಬೇಕರ್ ಮಣ್ಣಿನ ಇಟ್ಟಿಗೆಗಳಿಂದ ಕಟ್ಟಿದ್ದ ಕಾಫಿ ಹೌಸ್ ಕಟ್ಟಡ ಕಪ್ಪು ಚುಕ್ಕೆಯಂತಾಗಿದೆ. ಅದನ್ನು ಕೆಡವಬೇಕೊ? ಬೇಡವೊ? ಎಂಬ ಜಿಜ್ಞಾಸೆಯಲ್ಲಿ ಕೇರಳ ಸರ್ಕಾರ ಮುಳುಗಿದೆ ಎಂಬ ವಿಷಯ ಆತನ ಮಾತಿನಿಂದ ತಿಳಿಯಿತು.
ದಾಖಲೆಗಾಗಲಿ ಚಿತ್ರ ಇರಲಿ ಎಂದು ನನ್ನ ಕ್ಯಾಮರಾದಿಂದ ಕ್ಲಿಕ್ಕಿಸಿಕೊಂಡೆ. ತಿರುವನಂತಪುರಂ ನಗರವೊಂದರಲ್ಲೇ ಅಲ್ಲಿನ ಪ್ರತಿಷ್ಟಿತ ವ್ಯಕ್ತಿಗಳಿಗೆ ಅಂದರೆ, ಮಾಜಿ ಮುಖ್ಯಮಂತ್ರಿ ನಂಬೂದರಿ ಪಾಡ್, ಲೀಲಾ ಇಂಟರ್ ನ್ಯಾಷನಲ್ ಹೋಟೆಲ್ ಎಂಬ ಪಂಚತಾರಾ ಹೋಟೆಲ್ ಸಮೂಹದ ಒಡೆತಿ ಲೀಲಾ ನಾಯರ್ ಮತ್ತು ಮಲೆಯಾಳಂ ಮನೋರಮಾ ಪತ್ರಿಕೆಯ ಮಾಲಿಕರು, ಭಾರತದ ಭೂಸೇನೆ ಮತ್ತು ನೌಕಾ ದಳದ ಮಾಜಿ ದಂಡ ನಾಯಕರು ಹೀಗೆ ನೂರಾರು ಮಂದಿಗೆ ಸ್ಥಳಿಯ ಹವಾಗುಣ ಮತ್ತು ಪರಿಸರಕ್ಕೆ ಹೊಂದಿಕೊಳ್ಳುವ ವಿಭಿನ್ನ ಶೈಲಿಯ ನಿವಾಸಗಳನ್ನು ನಿರ್ಮಿಸಿರುವ ಲಾರಿ ಬೇಕರ್ ಕುರಿತು ಚಿಂತಿಸುತ್ತಾ ಹೋದೆ. ಅಲ್ಲಿ ಮಹಾತ್ಮ ಗಾಂಧಿ ರಸ್ತೆಯ ಪುಸ್ತಕದ ಅಂಗಡಿಗೆ ಬೇಟಿ ನೀಡಿ, ಲಾರಿ ಬೇಕರ್ ಜೀವನ ಚರಿತ್ರೆಯ ಪುಸ್ತಕವೊಂದನ್ನು ಖರೀದಿ ಮಾಡಿದೆ. ಬೇಕರ್ ನಿಂದ ತುಂಬಾ ಪ್ರಭಾವಿತನಾಗಿ, ಇದೀಗ ದೆಹಲಿಯಲ್ಲಿ ವಾಸವಾಗಿದುಕೊಂಡು, ದೇಶದ ಅತ್ಯುತ್ತಮ ವಾಸ್ತು ಶಿಲ್ಪ ತಜ್ಞರಲ್ಲಿ ಒಬ್ಬರಾಗಿರುವ ಗೌತಮ್ ಭಾಟಿಯ ಎಂಬುವರು ಲಾರಿ ಬೇಕರ್ ಅವರ ಜೀವನ ಮತ್ತು ಸಾಧನೆಗಳನ್ನು  ಕೃತಿಯಲ್ಲಿ ದಾಖಲಿಸಿರುವ ಪರಿ ನೋಡಿ ಅಚ್ಚರಿಯಾಯಿತು. ( ಪೆಂಗ್ವಿನ್ ಪ್ರಕಾಶನದ ಕೃತಿಯ ಹೆಸರು- ಲಾರಿಬೇಕರ್- ಲೈಫ್, ವಕ್ರ್ಸ್  ಅಂಡ್ ರೈಟಿಂಗ್ಸ್) ಮಹಾತ್ಮ ಗಾಂಧಿಯವರ ಚಿಂತನೆಗಳು ಹಲವು ವ್ಯಕ್ತಿಗಳಲ್ಲಿ, ಹಲವು ರೂಪುಗಳಲ್ಲಿ ಹೇಗೆ ಮರು ಹುಟ್ಟು ಪಡೆಯುತ್ತಿವೆ ಎಂದು ಆಶ್ಚರ್ಯವಾಗಿ ಬದನವಾಳು ಗ್ರಾಮದಲ್ಲಿ ಸುಸ್ಥಿರ ಬದುಕಿಗೆ ಒತ್ತಾಯಿ ತನ್ನ ದೇಹ ಮತ್ತು ಮನಸ್ಸು ಎರಡನ್ನೂ ದಂಡಿಸುತ್ತಿರುವ ಪ್ರಸನ್ನ ಅವರಿಂದ ಹಿಡಿದು ಬೇಕರ್ ವರೆಗೆ ಕುಳಿತು ಯೋಚಿಸುತ್ತಾ ಇದ್ದೀನಿ. ಯೋಚನಾ ಲಹರಿ ನನ್ನ ಪಾಲಿಗೆ ಅಂತ್ಯವಿಲ್ಲದ ಪಯಣದಂತಾಗಿದೆ.



1917 ಮಾರ್ಚ್ ಎರಡರೆಂದು ಇಂಗ್ಲೇಂಡಿನ ಪಾದಿಯೊಬ್ಬರ್ರ ಕುಟುಂಬದಲ್ಲಿ ಜನಿಸಿದ ಲಾರಿ ಬೇಕರ್ ಅವರ ಮೂಲ ಹೆಸರು ಚಾಲ್ರ್ಸ್ ಪ್ರಡರಿಕ್ ಬೇಕರ್ ಎಂದು. ಬಾಲ್ಯದಲ್ಲಿ ವಾಸ್ತು ಶಿಲ್ಪಿಯಾಗಬೇಕೆಂದು ಅವರು ಕನಸು ಕಂಡಿರಲಿಲ್ಲ. ಒಮ್ಮೆ ತಮ್ಮ ಹರೆಯದ ದಿನಗಳಲ್ಲಿ ಗೆಳೆಯರ ಜೊತೆ ಸೈಕಲ್ ನಲ್ಲಿ ಯುರೋಪ್ ರಾಷ್ಟ್ರಗಳ ಪ್ರವಾಸ ಕೈಗೊಂಡಾಗ, ಅಲ್ಲಿನ ಬಗೆ ಬಗೆಯ ಸಂಸ್ಕøತಿ ಮತ್ತು ಆಯಾ ಪ್ರಾದೇಶಿಕ ಹವಾಮಾನಕ್ಕೆ ಅನುಗುಣವಾಗಿ ಕಟ್ಟಲಾಗಿದ್ದ ಮನೆಗಳು, ವಿವಿಧ ಕಟ್ಟಡಗಳನ್ನು ನೋಡಿ ಅಚ್ಚರಿಗೊಂಡರು. ಪ್ರತಿಯೊಂದು ಕಟ್ಟಡದ ನಿರ್ಮಾಣವೂ ಅಲ್ಲಿನ ಭೂ ಪರಿಸರಕ್ಕೆ ಹೊಂದಿಕೊಳ್ಳುವ ಹಾಗೆ ರಚನೆಯಾಗಿದ್ದುದ್ದು ಅವರಲ್ಲಿ ಕುತೂಹಲ ಮೂಡಿಸಿತು. ನಂತರ ತನ್ನ ದೇಶಕ್ಕೆ ವಾಪಸ್ಸಾದ ಅವರು, ಬರ್ಮಿಂಗ್ ಹ್ಯಾಂ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಶಾಲೆಗೆ ದಾಖಲಾದರು. ಅಲ್ಲಿ ಪದವಿ ಪಡೆದ ನಂತರ 1940-1941 ರಲ್ಲಿ ಸೇವಾ ಸಂಸ್ಥೆಯೊಂದರ ಕಾರ್ಯಕರ್ತರಾಗಿ ಚೀನಾ ದೇಶಕ್ಕೆ ಹೋದರು. ಅಲ್ಲಿನ ಕಮ್ಯೂನಿಷ್ಟ್ ಪಕ್ಷದ ಕಟ್ಟು ಪಾಡುಗಳ ನಡುವೆಯೂ, ಕುಷ್ಠರೋಗಿಗಳ ಸೇವೆ ಮಾಡುತ್ತಿದ್ದ ದಾದಿಯರ ಜೊತೆ ಕೆಲಸ ಮಾಡುತ್ತಾ ಎರಡು ವರ್ಷ ಕಳೆದರು. ಎರಡನೆಯ ಯುದ್ಧದ ಕಾರ್ಮೋಡ ಜಗತ್ತನ್ನು ಆವರಿಸಿಕೊಳ್ಳುತ್ತಿದ್ದಂತೆ ತಾಯ್ನಾಡಿಗೆ ಹಿಂತಿರುಗಿದರು.




1945 ರಲ್ಲಿ ಎರಡನೆಯ ಮಹಾಯುದ್ಧ ಮುಗಿದ ನಂತರ ಬೇಕರ್ ಅವರಿಗೆ ಭಾರತದಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು. ಭಾರತಕ್ಕೆ ಬಂದ ಅವರು, ಇಲ್ಲಿನ ಕುಷ್ಠ ರೋಗಿಗಳ ದಯನೀಯವಾದ ಸ್ಥಿತಿ ಕಂಡು ಆತಂಕಗೊಂಡರು. ಕಾಲದಲ್ಲಿ ಕುಷ್ಟ ರೋಗವನ್ನು ಸಾಂಕ್ರಾಮಿಕ ಕಾಯಿಲೆ ಎಂದು ಪರಿಗಣಿಸಲಾಗಿತ್ತು. ಕುಷ್ಟರೋಗಿಗಳನ್ನು ಊರಾಚೆ ಬಯಲಿನಲ್ಲಿ ಹಂದಿಗೂಡಿನಂತಹ ಶೆಡ್ಡುಗಳಲ್ಲಿ ಕೂಡಿ, ಕ್ರೈಸ್ತ ಮಿಷನರಿಯ ಪಾದ್ರಿಗಳು ಭವ್ಯ ಬಂಗಲೆಯಲ್ಲಿ ಅನೇಕ ಸೇವಕರೊಡನೆ ರಾಜರಂತೆ ಬದುಕುವುದನ್ನು ಕಂಡು ಬೇಕರ್ ಪ್ರತಿಭಟಿಸಿದರು. ನತದೃಷ್ಟ ರೋಗಿಗಳಿಗೆ ಉತ್ತಮ ವ್ಯವಸ್ಥೆಯಿರುವ ಕಟ್ಟಡಗಳ ನಿರ್ಮಾಣದ ಕನಸು ಕಂಡರು. ತಾವು ಕಲಿತಿದ್ದ ವಾಸ್ತಿ ಶಿಲ್ಪ ಶಾಸ್ತ್ರವನ್ನು ಪ್ರಯೋಗಕ್ಕೆ ಇಳಿಸಲು ಮುಂದಾದರು. ವೇಳೆಗೆ ಮಹಾತ್ಮ ಗಾಂಧೀಜಿಯವರು ವಾರ್ಧಾ ಆಶ್ರಮದಲ್ಲಿ ಕುಷ್ಟ ರೋಗಿಗಳ ಉಪಚಾರ ಮಾಡುತ್ತಿದ್ದನ್ನು ಹಾಗೂ ಅವರಿಂದ ಪ್ರೇರಿತರಾಗಿ ಮಹಾರಾಷ್ಟ್ರದ ಬಾಬಾ ಅಮ್ಟೆಯವರು ಕುಷ್ಟರೋಗಿಗಳ ಆಸ್ಪತ್ರೆ ತೆರದಿರುವುದನ್ನು ನೋಡಿದ ಬೇಕರ್, ಕುಷ್ಟ ರೋಗಿಗಳಿಗಾಗಿ ಅತ್ಯಂತ ಸರಳವಾಗಿ, ಪರಿಸರ ಸ್ನೇಹಿ ಮನೆಗಳ ನಿರ್ಮಾಣಕ್ಕೆ ತೊಡಗಿ ಕೊಂಡರು. ಕಟ್ಟಡಗಳ ನಿರ್ಮಾಣಕ್ಕೆ ಸ್ಥಳೀಯವಾಗಿ ದೊರೆಯುವ ಸಂಪನ್ಮೂಲಗಳನ್ನು ಬಳಸಿಕೊಂಡರು. ಪ್ರಯೋಗದಲ್ಲಿ ಅವರು ಯಶಸ್ವಿಯಾಗುತ್ತಿದ್ದಂತೆ ಅವರಲ್ಲಿ ಆತ್ಮ ವಿಶ್ವಾಸ ಹೆಚ್ಚಿತು. ಹೀಗೆ ತಾವು ಕೆಲಸ ಮಾಡುತ್ತಿದ್ದ ಸೇವಾ ಸಂಸ್ಥೆಯ ಮೂಲಕ  ಸೇವೆ ನಿಮಿತ್ತ ಭಾರತವನ್ನು ಸುತ್ತುತ್ತಾ ಇರುವಾಗ 1947 ರಲ್ಲಿ ಹೈದರಾಬಾದ್ ನಗರದಲ್ಲಿ ತಮ್ಮದೇ ಸಂಸ್ಥೆಯಲ್ಲಿ ವೈದ್ಯಳಾಗಿ ಸೇವೆ ಸಲ್ಲಿಸುತ್ತಿದ್ದ ಎಲಿಜಬತ್ ಎಂಬುವರನ್ನು ಬೇಟಿಯಾದರು. ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿ  1948 ರಲ್ಲಿ ಇಬ್ಬರೂ ಭಾರತದಲ್ಲಿ ವಿವಾಹವಾದರು.
ಹನಿಮೂನಿಗಾಗಿ ಉತ್ತರ ಕಾಂಡದ ಪಿತೋರ್ಘರ್ ಎಂಬ ಹಿಮಾಲಯದ ತಪ್ಪಲಿನ ಪ್ರದೇಶಕ್ಕೆ ಹೋದಾಗ ಅಲ್ಲಿನ ಪರಿಸರಕ್ಕೆ ಮನಸೋತ ಬೇಕರ್ ದಂಪತಿಗಳು ತಮ್ಮ ವೃತ್ತಿಗೆ ರಾಜಿನಾಮೆ ನೀಡಿ ಅಲ್ಲಿಯೇ ವಾಸಿಸತೊಡಗಿದರು. ವೃತ್ತಿಯಲ್ಲಿ ವೈದ್ಯೆಯಾಗಿದ್ದ ಎಲಿಜಬತ್ ಸ್ಥಳಿಯ ಚಹಾ ಅಂಗಡಿಯೊಂದರಲ್ಲಿ ಕ್ಲಿನಿಕ್ ತೆಗೆದು ಅಲ್ಲಿನ ಜನರ ಆರೋಗ್ಯದ ಸೇವೆಗೆ ನಿಂತರೆ, ಬೇಕರ್, ಹಿಮಾಲಯದ ಹಳ್ಳಿಗಳಲ್ಲಿ ನಿರ್ಮಾಣಗೊಂಡಿರುವ ಮನೆಗಳ ವಿನ್ಯಾಸದ ಅಧ್ಯಯನದಲ್ಲಿ ನಿರತರಾದರು. ಬಾರತದ ಬಹುಮುಖಿ ಸಂಸ್ಕøತಿ, ಆಹಾರ, ಉಡುಪು, ಭಾಷೆ, ಪ್ರತಿಯೊಂದು ಪ್ರದೇಶಗಳಲ್ಲಿ ವಿಭಿನ್ನವಾಗಿ ತಯಾರಾಗುತ್ತಿದ್ದ ಕೃಷಿ ಹಾಗೂ ಗೃಹಪಯೋಗಿ ಪರಿಕರಗಳು, ಅವುಗಳ ತಯಾರಿಕೆಗಾಗಿ ಬಳಸಲ್ಪಡುತ್ತಿದ್ದ ಸ್ಥಳಿಯ ಸಂಪನ್ಮೂಲಗಳು ಇವೆಲ್ಲವೂ ಬೇಕರ್ ಅವರ ಅಧ್ಯಯನದ ವಸ್ತುಗಳಾಗಿದ್ದವು. ಸ್ವತಃ ಉತ್ತಮ ಚಿತ್ರಗಾರರಾಗಿದ್ದ ಬೇಕರ್ ಅವುಗಳನ್ನು ಚಿತ್ರಗಳ ಮೂಲಕ ಬರೆದು ಇಟ್ಟುಕೊಳ್ಳುತ್ತಿದ್ದರು. ಸತತ ಹದಿನಾರು ವರ್ಷಗಳ ಕಾಲ ಪಿತೋರ್ ಘರ್ ನಲ್ಲಿ ವಾಸವಾಗಿದ್ದ ಬೇಕರ್ ದಂಪತಿಗಳು 1963 ರಲ್ಲಿ ಕೇರಳದ ತಿರುವನಂತಪುರಂ ಗೆ ಬಂದು ವಾಸಿಸತೊಡಗಿದರು.

ಕೇರಳಕ್ಕೆ ಬಂದ ನಂತರ ಸ್ಥಳಿಯ ಮೀನುಗಾರರ ಹಳ್ಳಿಗಳಿಗೆ ಬೇಟಿ ನೀಡುತ್ತಿದ್ದ ಬೇಕರ್, ಅತ್ಯಂತ ಕಡಿಮೆ ವೆಚ್ಚದಲ್ಲಿ ಮನೆಗಳನ್ನು ನಿರ್ಮಾಣ ಮಾಡುವುದರ ಮೂಲಕ ಇಡೀ ಭಾರತದ ಮನಸೆಳೆದರು. ಕೇರಳ ರಾಜ್ಯವೊಂದರಲ್ಲಿ ಬೇಕರ್ರವರಿಂದ  ಶಾಲೆ, ಅಂಗನವಾಡಿ ಕಟ್ಟಡ, ಆಸ್ಪತ್ರೆ, ಚರ್ಚುಗಳು, ಕಾರ್ಮಿಕರ ವಸತಿ ಗೃಹಗಳು, ಇಂಜಿನಿಯರಿಂಗ್ ಕಾಲೇಜು ಕಟ್ಟಡ ಹೀಗೆ ಸುಮಾರು ಎರಡು ಸಾವಿರ ಪರಿಸರ ಕಟ್ಟಡಗಳನ್ನು ನಿರ್ಮಾಣವಾಗಿವೆಜನಸಾಮಾನ್ಯರಿಗೆ ನಿಲುಕುವಂತಹ  ಸಾಮಾನ್ಯ ವೆಚ್ಚದ ಕಟ್ಟಡ ವಿನ್ಯಾಸ ಮತ್ತು ನಿರ್ಮಾಣದಲ್ಲಿ ತಮ್ಮ ಛಾಪು ಮೂಡಿಸಿದ್ದ  ಬೇಕರ್ ನಿರ್ಮಿಸುತ್ತಿದ್ದ ಕಟ್ಟಡಗಳಿಗೆ ಸ್ಥಳಿಯವಾಗಿ ದೊರೆಯುತ್ತಿದ್ದ ಮಣ್ಣಿನಲ್ಲಿ ತಯಾರಿಸುತ್ತಿದ್ದ ಇಟ್ಟಿಗೆಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಸಾಧ್ಯವಾದಷ್ಟು ಮಟ್ಟಿಗೆ ಕಿಟಿಕಿ ಬಾಗಿಲುಗಳಿಗೆ ಮರಗಳ ಉಪಯೋಗವನ್ನು ನಿರಾಕರಿಸಿ, ಯಥೇಚ್ಛವಾದ ಗಾಳಿ ಬೆಳಕು ಇರುವಂತೆ ಅವರು ನೋಡಿಕೊಳ್ಳುತ್ತಿದ್ದರು. ಇಂತಹ ಕಟ್ಟಡಗಳ ನಿರ್ಮಾಣಕ್ಕೆ ಮಹಾತ್ಮ ಗಾಂಧಿಯವರ ಚಿಂತನೆಗಳು ನನಗೆ ಸ್ಪೂರ್ತಿ ಎಂದು ತಮ್ಮ ಆತ್ಮ ಕಥನದಲ್ಲಿ ಬೇಕರ್ ದಾಖಲಿಸಿದ್ದಾರೆ.“ ಭಾರತದಲ್ಲಿ ಜನಸಾಮಾನ್ಯರ ಬವಣೆಗಳ ಕುರಿತು ಮತ್ತು ಅವರ ವಸತಿ ಸಮಸ್ಯೆಗಳ ಕುರಿತು ಮಾತನಾಡಿದ ನಾಯಕರಲ್ಲಿ ನನಗೆ ಮಹಾತ್ಮ ಗಾಂಧೀಜಿ ಮುಖ್ಯರು. ಮನೆಗಳ ನಿರ್ಮಾಣಕ್ಕೆ ಸ್ಥಳೀಯವಾಗಿ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ದೊರೆಯುವ ಕಲ್ಲು, ಇಟ್ಟಿಗೆ, ಮಣ್ಣು, ಮರ ಇವುಗಳನ್ನು ಬಳಸಬೇಕೆಂದು ಯೋಚಿಸಿದವರಲ್ಲಿ ಗಾಂಧೀಜಿ ಪ್ರಥಮ ವ್ಯಕ್ತಿ. ನನ್ನ ಎಪ್ಪತ್ತನೆಯ ಇಳಿ ವಯಸ್ಸಿನಲ್ಲಿ ನನಗೆ ಅವರ ಚಿಂತನೆಗಳಲ್ಲಿ ಯಾವೊಂದು ದೋಷವೂ ಕಂಡು ಬಂದಿಲ್ಲ.” ಇವು 1987 ರಲ್ಲಿ ಲಾರಿ ಬೇಕರ್ ಮಹಾತ್ಮನ ಕುರಿತು ದಾಖಲಿಸಿರುವ ಮಾತುಗಳು. ಇದೇ ರೀತಿ 1943 ರಲ್ಲಿ ಇಂಗ್ಲೇಂಡಿನ ಪ್ರಸಿದ್ಧ ನಾಟಕಕಾರ ಮತ್ತು ಕವಿ ರೋನಾಲ್ಡ್ ಡಂಕನ್, ತಾನು ಸಂಪಾದಿಸಿರುವಸಲೆಕ್ಟಡ್ ವಕ್ರ್ಸ್ ಆಫ್ ಮಹಾತ್ಮ ಗಾಂಧಿಎಂಬ ಕೃತಿಗೆ ಪ್ರಸ್ತಾವನೆಯ ಮಾತುಗಳನ್ನು ಬರೆಯುತ್ತಾ, “ ಇಪ್ಪತ್ತನೆಯ ಶತಮಾನದಲ್ಲಿ ನಿಸರ್ಗದ ಕೊಡುಗೆಗಳ ಕುರಿತು ಮತ್ತು ಅವುಗಳ ಮಿತ ಬಳಕೆಯ ಕುರಿತು ಮಾತನಾಡಿದ ಮೊದಲ ವ್ಯಕ್ತಿ ಗಾಂಧೀಜಿಎಂದು ದಾಖಲಿಸಿದ್ದಾನೆ. ನಾವಿನ್ನೂ ಗಾಂಧೀಜಿಯನ್ನು ಮತ್ತು ಅವರ ಚಿಂತನೆಗಳನ್ನು ಅರ್ಥೈಸಿಕೊಳ್ಳಲು ಹೆಣಗಾಡುತ್ತಿರುವಾಗ ಪಾಶ್ಚಿಮಾತ್ಯ ಜಗತ್ತು ಗಾಂಧೀಜಿಯವರನ್ನು ಅರ್ಥೈಸಿಕೊಂಡಿರುವ ಪರಿ ನನ್ನಲ್ಲಿ ಬೆರಗು ಮೂಡಿಸಿದೆ. ಪರಿಸರ ರಕ್ಷಣೆ ಮತ್ತು ಗಾಂಧೀಜಿ ಚಿಂತನೆಗಳ ವಿಷಯದಲ್ಲಿ ಎಂದೂ ರಾಜಿ ಮಾಡಿಕೊಳ್ಳದ ಲಾರಿ ಬೇಕರ್ರವರು 1986 ರಲ್ಲಿ

ಅಂದಿನ ಪ್ರಧಾನಿ ರಾಜೀವ ಗಾಂಧಿ  ನೀಡಿದ್ದ ಆಹ್ವಾನವನ್ನು ನಿರಾಕರಿಸಿದ್ದರು. ಬಾರತದಲ್ಲಿ ಹುಡ್ಕೊ ಮನೆಗಳ ನಿರ್ಮಾಣ ಕುರಿತ ಹತ್ತು ದಿನಗಳ ಕಾರ್ಯಗಾರಕ್ಕಾಗಿ ಬೇಕರ್ ಅವರನ್ನು  ದೆಹಲಿಗೆ ಬರಬೇಕೆಂದು ಪ್ರಧಾನಿ ಆಹ್ವಾನಿಸಿದಾಗ, “ ನೀವು ಕೊಡುವ ಪ್ರಯಾಣ ಭತ್ಯೆ, ಪಂಚತಾರ ಹೋಟೆಲುಗಳ ವ್ಯವಸ್ಥೆ ಮತ್ತು ದಿನ ಭತ್ಯೆ ಇವು ಸುಮಾರು ನಲವತ್ತು ಸಾವಿರ ರೂಪಾಯಿಗಳು ಆಗ ಬಹುದು. ನಾನು ಹಣದಲ್ಲಿ ಕೇವಲ, ಹತ್ತು ದಿನಗಳ ಅವಧಿಯಲ್ಲಿ ಮೀನುಗಾರರಿಗೆ ಎರಡು ಮನೆಗಳನ್ನು ನಿರ್ಮಿಸಬಲ್ಲೆ. ನನಗೆ ಮಾತಿಗಿಂತ ಕೃತಿ ಮುಖ್ಯ ಕ್ಷಮಿಸಿಎಂದು ಪತ್ರ ಬರೆದಿದ್ದರು.


ಪಾಶ್ಚಿಮಾತ್ಯ ಶೈಲಿಯ ಕಟ್ಟಡಗಳ ನಿರ್ಮಾಣವನ್ನು ವಿರೊಧಿಸುತ್ತಿದ್ದ ಬೇಕರ್, ತಮ್ಮ ಬದುಕಿನ ಕೊನೆಯ ದಿನಗಳ ವರೆಗೂ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣಗಳಲ್ಲಿ ತೊಡಗಿಕೊಂಡಿದ್ದರು. ಬೇಕರ್ ರವರ ಸೇವೆಯನ್ನು ಗಮನಿಸಿದ ವಿಶ್ವಸಂಸ್ಥೆ  ಹಾಗೂ ಇಂಗ್ಲೇಂಡಿನ ಬರ್ಮಿಂಗ್ ಹ್ಯಾಮ ಅರಮನೆ ಇವುಗಳು ತೃತಿಯ ಜಗತ್ತಿನ ಜನಸಾಮಾನ್ಯರ ವಸತಿ ಸಮಸ್ಯೆ ನೀಗಿಸಿದ ಸಾಧಕ ಎಂದು ಪ್ರಶಂಸಿ ಗೌರವಿಸಿವೆ. ಭಾರತದ ನಾಲ್ಕು ವಿ.ವಿ.ಗಳ ಗೌರವ ಡಾಕ್ಟರೇಟ್ ಪದವಿ, ಪದ್ಮಶ್ರೀ ಪ್ರಶಸ್ತಿಯೂ ಒಳಗೊಂಡಂತೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಇಪ್ಪತ್ತಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದ  ಬೇಕರ್, ತಮ್ಮ ಕೊನೆಯ ಉಸಿರು ಇರುವ ತನಕ ತಾವು ನಂಬಿದ್ದ ಚಿಂತನೆಗಳಿಗೆ ಬದ್ಧರಾಗಿ  ಬದುಕಿದರು.2005 ರಲ್ಲಿ ಸುನಾಮಿ ದುರಂತ ಸಂಭವಿಸಿದಾಗ ತಮ್ಮ ಎಂಬತ್ತೆಂಟನೆಯ ವಯಸ್ಸಿನಲ್ಲಿ ತಮಿಳುನಾಡು ಮತ್ತು ಕೇರಳದ ಕಡಲ ತೀರದ ಹಳ್ಳಿಗಳಿಗೆ ಹೋಗಿ ಭೂಕಂಪ ನಿರೋಧಕ ಮನೆಗಳನ್ನು ನಿರ್ಮಾಣ ಮಾಡಿ ಬಂದಿದ್ದರು.


ಇಪ್ಪತ್ತೊಂದನೆಯ ಶತಮಾನದ ಜಗತ್ತು ಏಕರೂಪಿ ಸಂಸ್ಕøತಿಯತ್ತ ದಾಪುಗಾಲು ಇಡುತ್ತಾ, ಜಗತ್ತಿನ ಉತ್ತರದಿಂದ ದಕ್ಷಿಣದವರೆಗೆ ಮತ್ತು ಪೂರ್ವದಿಂದ ಪಶ್ಚಿಮದ ವರೆಗೆ ಒಂದೇ ರೀತಿಯ ಆಹಾರ, ಉಡುಪು, ಚಿಂತನೆಗಳನ್ನು ಮಾರುಕಟ್ಟೆಯ ಸಂಸ್ಕøತಿಯ ರೂಪದಲ್ಲಿ  ಪರೋಕ್ಷವಾಗಿ ಹೇರುತ್ತಿರುವಾಗ, ಲಾರಿ ಬೇಕರ್, ಮಹಾತ್ಮ ಗಾಂಧೀಜಿ ಇವರ ಚಿಂತನೆಗಳು ಯಾರೀಗೂ ಈಗ ಬೇಡವಾಗಿವೆ. ಹಾಗಾಗಿ ಪ್ರಸನ್ನರವರು ಬದನವಾಳಿನಲ್ಲಿ ಹಮ್ಮಿಕೊಂಡ  ಸುಸ್ಥಿರ ಬದುಕಿನತ್ತ ಮರು ಪ್ರಯಾಣ ಎಂಬ ಸತ್ಯಾಗ್ರಹ ನಮಂತಹವರ್ಮ ಪಾಲಿಗೆ ಪ್ರಹಸನದಂತೆ ಕಾಣುತ್ತಿದೆ. ಇದು ಮಾಹಾತ್ಮ ಗಾಂಧಿ ಚಿಂತನೆಗಳ ವಾರಸುದಾರರ ದೋಷವಲ್ಲ, ನಮ್ಮ ದೃಷ್ಟಿಕೋನದ ಮತ್ತು ಗ್ರಹಿಕೆಯ ದೋಷ.

ಮಂಗಳವಾರ, ಮಾರ್ಚ್ 24, 2015

ಭಾರತದ ಇಬ್ಬರು ಪರಿಸರದ ಸಂತರಿಗೆ ಅಂತರಾಷ್ಟ್ರೀಯ ಮನ್ನಣೆ


ಗಾಂಧೀಜಿ ಚಿಂತನೆಗಳ ವಾರಸುದಾರರು ಮತ್ತು ಈ ದೇಶದ ನೆಲ,ಜಲ ಮತ್ತು ಜೈವಿಕ ವೈವಿಧ್ಯತೆ ಹಾಗೂ ಪರಿಸರವನ್ನು ತಮ್ಮ ಜೀವದ ಉಸಿರಿನಂತೆ ಪ್ರೀತಿಸುತ್ತಾ, ಧ್ಯಾನಿಸುತ್ತಾ  ಬಂದಿರುವ ಭಾರತ ಪರಿಸರದ ಸಂತರಿಬ್ಬರೂ ಈ ವಾರ ಎರಡು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿರುವುದು,ಪರಿಸರ ಪ್ರಿಯರಿಗೆ ಖುಷಿಯ ಸಂಗತಿಯಾಗಿದೆ.
ಪ್ರೊ. ಮಾಧವ ಗಾಡ್ಗಿಲ್ ಅವರಿಗೆ ಭಾರತವನ್ನೂ ಒಳಗೊಂಡಂತೆ ಜಗತ್ತಿನ ಜೀವ ವೈವಿಧ್ಯತೆಗಳ ಕಾಳಜಿ ಮತ್ತು ರಕ್ಷಣೆಗಾಗಿ ಸಲ್ಲಿಸಿದ ಸೇವೆಗಾಗಿ ಅಮೇರಿಕಾದ ದಕ್ಷಿಣ ಕ್ಯಾಲಿಪೊರ್ನಿಯಾದ ವಿಶ್ವ ವಿದ್ಯಾಲಯ ಸ್ಥಾಪಿಸಿರುವ “ ಟೈಲರ್ ಪರಿಸರ ಪ್ರಶಸ್ತಿ” ಲಭಿಸಿದೆ.
ಈ ದೇಶದ ಜಲಸಂಪನ್ಮೂಲಗಳು ಮತ್ತು ನದಿಗಳನ್ನು ಪುನಶ್ಚೇತನಗೊಳಿಸುವುದರ ಮೂಲಕ ಜಲಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಿರುವ ರಾಜೇಂದ್ರ ಸಿಂಗ್ ಅವರಿಗೆ  ನೀರಿನ ನೊಬೆಲ್ ಎಂದು ಕರೆಯಲಾಗುವ 2015 ರ ಅಮೇರಿಕಾದ ಸ್ಟಾಕ್ ಹೋಮ್ ಪ್ರಶಸ್ತಿ ಲಭ್ಯವಾಗಿದೆ.
ಇಂದಿನ ದಿನಮಾನಗಳಲ್ಲಿ ಅಭಿವೃದ್ಧಿಯ ವಾಖ್ಯಾನದ ಮೂಲ ಆಶಯ ಪಲ್ಲಟಗೊಂಡ ಪರಿಣಾಮವಾಗಿ ಉಳ್ಳವರ ನೆಮ್ಮೆದಿಯ ಬದುಕಿಗಾಗಿ ಇಲ್ಲದವರ  ಬದುಕನ್ನು ಬಲಿ ಪಡೆಯುವುದೇ ಅಭಿವೃದ್ಧಿ ಎಂಬಾಂತಾಗಿದೆ. ಕೊಳ್ಳುಬಾಕುತನವನ್ನು ಬದುಕಿನ ಮೂಲ ಮಂತ್ರವಾಗಿರಿಸಿಕೊಂಡ ಆಧುನಿಕ ಜಗತ್ತಿಗೆ ಈ ನೆಲದ ನೈಸರ್ಗಿಕ ಕೊಡುಗೆಗಳು ಇರುವುದು, ಯಥೇಚ್ಛವಾದ ಹಾಗೂ  ಮಿತಿ ಮೀರಿದ ಬಳಕೆಗಾಗಿ ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ. ನಾವು ಈ ಭೂಮಿಯ ಹಕ್ಕುದಾರರಲ್ಲ, ಕೇವಲ ವಾರಸುದಾರರು ಮಾತ್ರ,, ನಿಸರ್ಗವನ್ನು ಉಳಿಸಿ ನಮ್ಮ ಮುಂದಿನ ತಲೆಮಾರಿಗೆ ದಾಟಿಸುವ ನೈತಿಕ ಜವಾಬ್ದಾರಿಯೊಂದು ನಮ್ಮ ಮೇಲಿದೆ ಎಂಬ ಪ್ರಜ್ಞೆ ನಮ್ಮ ಸ್ಮೃತಿಯಿಂದ ಅಳಿಸಿಹೋಗಿ ಎಷ್ಟೋ ವರ್ಷಗಳಾಗಿವೆ. ಹಾಗಾಗಿ ಪರಿಸರ ಕುರಿತು ಮಾತನಾಡುವುದು ಸಿನಿಕತನವೇನೋ ಎಂಬ ಧ್ವಂದ್ವದ ಜಗತ್ತಿನಲ್ಲಿ ಮುಳುಗಿ ಏಳುತ್ತಿರುವ ನಮ್ಮಂತಹವರಿಗೆ ಪ್ರೊ. ಮಾಧವ ಗಾಡ್ಗಿಲ್ ಮತ್ತು ರಾಜೇಂದ್ರಸಿಂಗ್ ಆತ್ಮ ವಿಶ್ವಾಸದ ಪ್ರತೀಕವಾಗಿ, ಕಗ್ಗತ್ತಲ ಜಗತ್ತಿನ ಬೆಳಕಿನ ಕಿರಣವಾಗಿ ಗೋಚರಿಸುತ್ತಾರೆ.


 ಪುಣೆ ಎಂದು ಕರೆಸಿಕೊಳ್ಳುವ ಈಗಿನ ಪೂನಾ ನಗರದ ಪ್ರತಿಷ್ಟಿತ ಮನೆತನದಲ್ಲಿ 1942 ರಲ್ಲಿ ಜನಿಸಿದ ಪ್ರೊ .ಗಾಡ್ಗಿಲ್ ಬಾಲ್ಯದಿಂದಲೂ ಒಬ್ಬ ಜೀವಶಾಸ್ತ್ರಜ್ಷನಾಗಬೇಕೆಂದು ಕನಸುಕಂಡವರು. ಅದರಂತೆ ಪೂನಾ. ಫರ್ಗುಸನ್ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಮತ್ತು ಬಾಂಬೆ. ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ಪಡೆದು ನಂತರ  ಅವರು ಅಮೇರಿಕಾದ ಹಾರ್ವಡ್ ವಿ.ವಿ.ಯಲ್ಲಿ ಪರಿಸರ ಮತ್ತು ಜೈವಿಕ ವೈವಿಧ್ಯತೆ ಕುರಿತು ಡಾಕ್ಟರೇಟ್ ಪದವಿ ಪಡೆದರು.
ವಿದೇಶದಿಂದ ಹಿಂತಿರುಗಿದ ನಂತರ ಒಂದಷ್ಟು ವರ್ಷಗಳ ಕಾಲ ಪೂನಾದಲ್ಲಿದ್ದ ಗಾಡ್ಗಿಲ್ ಅವರು 1973 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಸೇರಿ 2004 ರವರೆಗೆ ಕರ್ನಾಟಕವನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡರು. ಗಾಡ್ಗಿಲ್ ಅವರಿಗಿಂತ ಮೊದಲು ಅವರ ಪತ್ನಿ ಸುಲೋಚನಾ ಅವರಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಸಿಕ್ಕಿತು. ಕೆಲಸಕ್ಕೆ ಸೇರುವಾಗ ಅವರು ತಮ್ಮ ಪತಿಯ ವಿವರಗಳನ್ನು ಜೊತೆಯಲ್ಲಿ ತಂದಿದ್ದ ಕಾರಣ, ಪತ್ನಿಯ ಮೂಲಕ ಮಾಧವ ಗಾಡ್ಗಿಲ್ ರವರಿಗೂ ಸಂಸ್ಥೆಯಲ್ಲಿ  ಉದ್ಯೋಗ ದೊರೆಯಿತು. ಮುಂದಿನ ಸತತ ಮೂರು ದಶಕಗಳ ಕಾಲ ಅವರು ಪಶ್ಚಿಮಘಟ್ಟದ ಪರಿಸರ, ಅಲ್ಲಿರುವ ಜೈವಿಕ ವೈವಿಧ್ಯತೆ ಹಾಗೂ ಅಪರೂಪದ ಜೀವ ಜಾಲಗಳ ಸರಪಳಿ ಕುರಿತಂತೆ ಅಧ್ಯಯನ ನಡೆಸಿ, ಭಾರತೀಯರಿಗೆ ವಿಶೇಷವಾಗಿ  ಶಿಕ್ಷಕರಿಗೆ. ವಿಜ್ಞಾನದ ವಿದ್ಯಾರ್ಥಿಗಳಿಗೆ ಮತ್ತು ಸ್ವಯಂ ಸೇವಾ ಸಂಘಟನೆಗಳ ಕಾಯಕರ್ತರಿಗೆ ಪರಿಸರದ ಪ್ರಜ್ಞೆ ಮೂಡಿಸಿದರು. ಇಂತಹ ಅಧ್ಯಯನಗಳ ನಡುವೆಯೂ ಸಹ  ಭಾರತೀಯ ವಿಜ್ಞಾನ ಸಂಸ್ಥೆಯ ಇತರೆ ವಿಭಾಗಗಳ ತಜ್ಞರ ಜೊತೆಗೂಡಿ, ಆಸ್ಟ್ರಾ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ, ಸುಧಾರಿತ ತಂತ್ರಜ್ಞಾನಗಳನ್ನು ಅವಿಷ್ಕರಿಸಿ ಅವುಗಳನ್ನು ಜನಸಾಮಾನ್ಯರಿಗೆ ತಲುಪಿಸಿದರು. ಇವುಗಳಲ್ಲಿ ಸುಧಾರಿತ ಸೌದೆಯ ಒಲೆಗಳು, ಗೋಬರ್ ಅನಿಲ ದಿಂದ ಅಡುಗೆ ಮಾಡುವುದು, ದೀಪ ಉರಿಸುವ ತಂತ್ರಜ್ಞಾನ ಇತ್ಯಾದಿ.
ಈವರೆಗೆ ಸುಮಾರು ಇನ್ನೂರೈವತ್ತಕ್ಕೂ ಹೆಚ್ಚು ಅಂತರಾಷ್ಟ್ರೀಯ ಮಟ್ಟದ ಪ್ರಬಂಧಗಳು ಹಾಗೂ ಪರಿಸರ ಅಧ್ಯಯನ ಕುರಿತಂತೆ ಎಂಟು ಕೃತಿಗಳನ್ನು ರಚಿಸಿರುವ ಪ್ರೊ. ಮಾಧವ ಗಾಡ್ಗಿಲ್ ಅವರು ಭಾರತದ ಪ್ರಧಾನ ಮಂತ್ರಿಯವರ ಕಾರ್ಯಾಲಯದ ವಿಜ್ಞಾನ ಮತ್ತು ಪರಿಸರ ಕುರಿತ ಸಲಹೆಗಾರರಾಗಿ, ಯೋಜನಾ ಆಯೋಗದ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.

ಪಶ್ಚಿಮ ಘಟ್ಟದ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು ಗಾಡ್ಗಿಲ್ ನೇತೃತ್ವದಲ್ಲಿ ಒಂದು ಅಧ್ಯಯನ ಸಮಿತಿಯನ್ನು ರಚಿಸಿತ್ತು. ಅತ್ಯಂತ ಆಳವಾದ ಜ್ಞಾನ, ಮತ್ತು ಖಚಿತ ಅಂಕಿ ಅಂಶಗಳ ಆಧಾರಿತ ಇವರ ಅಧ್ಯಯನ ವರದಿಯನ್ನು ಹಿಂದಿನ ಎನ್.ಡಿ.ಎ. ಸರ್ಕಾರವು 2013 ರಲ್ಲಿ  ತಿರಸ್ಕರಿಸಿತು. ನಂತರ ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದಲ್ಲಿ ಮತ್ತೊಂದು ಸಮಿತಿಯನ್ನು ರಚನೆ ಮಾಡಿ, ಆ ವರದಿಯನ್ನು ಸ್ವೀಕರಿಸಿತು. ಆದರೆ, ಕಸ್ತೂರಿ ರಂಗನ್ ವರದಿ ಕುರಿತು ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಿದೆ.
 ತಮ್ಮ ವರದಿ ತಿರಸ್ಕೃತವಾದ ನಂತರ ಕೇಂದ್ರ ಸರ್ಕಾರದ ಎಲ್ಲಾ ಸಲಹಾ ಸಮಿತಿಗಳಿಗೆ ರಾಜಿನಾಮೆ ನೀಡಿದ ಪ್ರೊ. ಮಾಧವ ಗಾಡ್ಗೀಲ್ ಇದೀಗ ತಮ್ಮ ನಿವೃತ್ತಿಯ ವಯಸ್ಸನ್ನು ಕೇರಳ ಮತ್ತು ಗೋವಾ ರಾಜ್ಯಗಳಲ್ಲಿ ಓಡಾಡುತ್ತಾ ಕಳೆಯುತ್ತಿದ್ದಾರೆ. ಗೋವಾ ರಾಜ್ಯದಲ್ಲಿ ಗಣಿಗಾರಿಕೆಯಿಂದಾಗಿ ಅಲ್ಲಿನ ಅರಣ್ಯ ಮತ್ತು ಸಮುದ್ರ ಮತ್ತು ಕಡಲಜೀವಿಗಳ ಮೇಲಾಗುತ್ತಿರುವ ಪರಿಣಾಮವನ್ನು ಸ್ಥಳಿಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನ ಸಾಮಾನ್ಯರಿಗೆ ವಿವರಿಸುತ್ತಾ ಜನರನ್ನು ಸಂಘಟಿಸುತ್ತಿದ್ದಾರೆ. ಅದೇ ರೀತಿ ಕೇರಳ ರಾಜ್ಯದಲ್ಲಿಯೂ ಕೂಡ ಅಣೆಕಟ್ಟುಗಳ ನಿರ್ಮಾಣ, ಹೆದ್ದಾರಿಯ ಅಗಲೀಕರಣ, ವಿದ್ಯುತ್ ಯೋಜನೆಗಳು, ಟೌನ್ ಶಿಪ್ ಗಳಿಂದ ಪಶ್ಚಿಮ ಘಟ್ಟಕ್ಕೆ ಆಗಿರುವ ದುರಂತವನ್ನು ವಿವರಿಸುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ.
ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸರ್ಕಾರದಿಂದ ಪದ್ಮಶ್ರಿ, ಪದ್ಮಭೂಷಣ ಪ್ರಶಸ್ತಿ,  ಹಾಗೂ ಶಾಂತಿ ಸ್ವರೂಪ್ ಭಟ್ನಾಗರ್  ವಿಜ್ಞಾನಿ ಪ್ರಶಸ್ತಿಗಳಿಗೆ ಭಾಜನರಾಗಿರುವ ಗಾಡ್ಗಿಲ್ ಅವರಿಗೆ 2003 ರಲ್ಲಿ ಪರಿಸರ ಕ್ಷೇತ್ರದಲ್ಲಿನ ಅಧ್ಯಯನ ಮತ್ತು ಸೇವೆಗಾಗಿ “ ವೋಲ್ವೊ ಪರಿಸರ ಅಂತರಾಷ್ಟ್ರೀಯ ಪ್ರಶಸ್ತಿ” ಲಭ್ಯವಾಗಿತ್ತು. ಇದೀಗ  ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಅಂತರಾಷ್ಟ್ರಿಯ ಪ್ರಶಸ್ತಿಯ ಗರಿಯೊಂದು ದೊರಕಿದಂತಾಗಿದೆ.
ಇನ್ನು, ಕಳೆದ ಮೂರು ದಶಕಗಳಿಂದ ( 1984) ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶದುದ್ದಕ್ಕೂ ಓಡಾಡುತ್ತಾ, ಜಲ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಿರುವ ಉತ್ತರ ಪ್ರದೇಶದ ಮೂಲದ ರಾಜೇಂದ್ರ ಸಿಂಗ್ ರವರ ಬದುಕು ಮತ್ತು ಸಾಧನೆ ಈ ತಲೆಮಾರಿಗೆ ಆದರ್ಶನೀಯವಾದುದು.

ರಾಜೇಂದ್ರ ಸಿಂಗ್ ರು 1959 ರಲ್ಲಿ ಉತ್ತರ ಪ್ರದೇಶದ ಭಾಗಪತ್ ಜಿಲ್ಲೆಯ ದೌಲ ಎಂಬ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದವರು. ಗಾಂಧೀಜಿ ಅನುಯಾಯಿ ರಮೇಶ್ ಶರ್ಮ ಎಂಬುವರು  ಮೀರತ್ ನಗರಕ್ಕೆ ಆಗಮಿಸಿ, ಸುತ್ತ ಮುತ್ತಲಿ ಹಳ್ಳಿಗನ್ನು ಗಾಂಧೀಜಿಯ “ ಗ್ರಾಮ ಸ್ವರಾಜ್ಯ” ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದ್ದನ್ನು ಕಣ್ಣಾರೆ ಕಂಡ ರಾಜೇಂದ್ರ ಸಿಂಗರು ಭಾಲ್ಯದಲ್ಲಿಯೆ ಗಾಂಧೀಜಿ ಪರಿಕಲ್ಪನೆಯ ಮಾದರಿಯಲ್ಲಿ ಅಭಿವೃದ್ಧಿಯ ಕನಸು ಕಂಡವರು. ಹಿಂದಿ ಸಾಹಿತ್ಯದಲ್ಲಿ ಅಲಹಬಾದ್ ವಿ.ವಿ.ಯಿಂದ ಸ್ನಾತಕೋತ್ತರ ಪದವಿ ಮತ್ತು ಆರ್ಯುವೇದ ವಿಜ್ಞಾನದಲ್ಲಿ ಪದವಿ ಪಡೆದ ರಾಜೇಂದ್ರ ಸಿಂಗ್ ರವರು ಕೇಂದ್ರ ಸರ್ಕಾರದ ಉದ್ಯೋಗಿಯಾಗಿ ನೇಮಕಗೊಂಡು, ರಾಜಸ್ಥಾನದ ಜೈ ಪುರಕ್ಕೆ ಬಂದರು. ರಾಜಸ್ಥಾನದ ನೀರಿನ ಬವಣೆ, ಅಲ್ಲಿನ ರೈತರ ಗೋಳು,  ಪಡಿಪಾಟಲು ಇವುಗಳಿಗೆ ಸಾಕ್ಷಿಯಾದ ಅವರು 1984 ರಲ್ಲಿ ತಮ್ಮ ಉದ್ಯೋಗಕ್ಕೆ ರಾಜಿನಾಮೆ ನೀಡಿ, ತಮ್ಮಲ್ಲಿದ್ದ ಗೃಹಪಯೋಗಿ ವಸ್ತುಗಳನ್ನು 23 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿ, ಖಾದಿ ಜುಬ್ಬ, ಪೈಜಾಮ ಮತ್ತು ಹೆಗಲ ಮೇಲಿನ ಒಂದು ಕೈ ಚೀಲದೊಂದಿಗೆ ಆಳ್ವಾರ್ ಜಿಲ್ಲೆಗೆ ಆಗಮಿಸಿ ಬದುಕ ತೊಡಗಿದರು. ಜೀವನ ನಿರ್ವಹಣೆಗೆ ಆರ್ಯುವೇದ ವೈದ್ಯರಾಗಿ ಕೆಲಸ ಮಾಡತ್ತಾ,  ರಾಜಸ್ಥಾನದ ಹಳ್ಳಿಗಳಲ್ಲಿ ಓಡಾಡುತ್ತಾ, “ ತರುಣ್ ಭಾರತ್” ಎಂಬ ಸಂಘಟನೆಯೊಂದನ್ನು ಹುಟ್ಟು ಹಾಕಿದರು. ಅದರ ಮೂಲಕ ನದಿ ಮತ್ತು ಕಾಲುವೆಗಳಿಗೆ ಒಡ್ಡುಗಳನ್ನು ನಿರ್ಮಾಣ ಮಾಡುವುದರ ಮೂಲಕ ಅಲ್ಲಿನ ಹಳ್ಳಿಗಳಲ್ಲಿ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವುದರ ಮೂಲಕ ಯಶಸ್ಸು ಸಾಧಿಸಿದರು.  ಗ್ರಾಮ ಮಟ್ಟದಲ್ಲಿ ರೈತರ ಸಮಿತಿಗಳನ್ನು ನಿರ್ಮಿಸಿ, ಅವುಗಳ ಮೂಲಕ ನೀರಿನ ಹಂಚಿಕೆ ಮತ್ತು ಬೆಳೆಯ ಬಹುದಾದ ಬೆಳೆಗಳ ಕುರಿತು ಸಹಕಾರ ತತ್ವದಡಿಯ ಜ್ಞಾನವನ್ನು ಮೂಡಿಸಿದರು.  ಒಂದೆಡೆ ಜಲಮೂಲಗಳ ಸಂರಕ್ಷಣೆಗೆ ಒತ್ತು ಕೊಡುತ್ತಾ, ಇನ್ನೊಂದು ಕಡೆ ಅರಣ್ಯ ಅಭಿವೃದ್ಧಿಗೂ ಒತ್ತು ನೀಡತೊಡಗಿದರು. ಇದರ ಫಲವಾಗಿ ರಾಜಸ್ಥಾನದ ರೈತರ ಬದುಕು ಹಸನಾಯಿತು. ರಾಜೇಂದ್ರಸಿಂಗರ  ಈ ಜಲ ಸಂರಕ್ಷಣೆಯ ಅಭಿಯಾನ ಭಾರತದ ಇತರೆ ರಾಜ್ಯಗಳ ರೈತರಿಗೂ ಮಾದರಿಯಾಯಿತು.



ಭಾರತದ ಸ್ಥಳಿಯ ಸಂಘ ಸಂಸ್ಥೆಗಳಿಂದ ನೂರಕ್ಕೂ ಹೆಚ್ಚು ಪ್ರಶಸ್ತಿಗೆ ಪಾತ್ರರಾಗಿರುವ ರಾಜೇಂದ್ರ ಸಿಂಗ್ ಅವರಿಗೆ ಭಾರತದ ಪ್ರತಿಷ್ಟಿತ ಜಮ್ನಾಲಾಲ್ ಬಜಾಜ್ ಪ್ರಶಸ್ತಿ ( 2005 ರಲ್ಲಿ) ಮತ್ತು 2001 ರಲ್ಲಿ ಏಷ್ಯಾದ ನೊಬೆಲ್ ಪ್ರಶಸ್ತಿ ಎಂದು ಕರೆಯುವ ಮ್ಯಾಗ್ಸಸೆ ಪ್ರಶಸ್ತಿಗಳು ದೊರಕಿವೆ. ಇದೀಗ  “ ನೀರಿನ ನೊಬೆಲ್ ಪ್ರಶಸ್ತಿ” ಎಂದು ಕರೆಯಲಾಗುವ “ಸ್ಟಾಕ್ ಹೊಂ ವಾಟರ್ ಪ್ರೈಜ್” ಎಂಬ ಅಂತರಾಷ್ಟ್ರೀಯ ಪ್ರಶಸ್ತಿ ಲಭ್ಯವಾಗಿದೆ. ಈ ಇಬ್ಬರು ಭಾರತದ ಪರಿಸರ ಸಂತರಿಗೆ ದೊರೆತಿರುವ ಮನ್ನಣೆಗಳು, ಈ ನೆಲದಲ್ಲಿ ಇನ್ನೂ ಜೀವಪರ ಕಾಳಜಿಗೆ ಮಹತ್ವವಿದೆ ಎಂಬುದನ್ನು ದೃಢ ಪಡಿಸುತ್ತಿದೆ.


ಕೊನೆಯ ಮಾತು- ಪಶ್ಚಿಮ ಘಟ್ಟ ಗಳ ಇತಿಹಾಸ ಮತ್ತು ಪ್ರೊ. ಮಾಧವ ಗಾಡ್ಗೀಲ್ ಹಾಗೂ ಕಸ್ತೂರಿ ರಂಗನ್ ರವರ ವರದಿಯ ಬಗ್ಗೆ  ಹೆಚ್ಚಿನ ಮಾಹಿತಿಗಾಗಿ ಇದೇ ಬ್ಲಾಗಿನ 2013 ರ ಮೇ ತಿಂಗಳಿನಲ್ಲಿ ಪ್ರಕಟವಾದ  ಲೇಖನಗಳ ಮೇಲೆ ಕ್ಲಿಕ್ ಮಾಡಿದರೆ, ಮೂರು ಲೇಖನಗಳು ದೊರೆಯುತ್ತವೆ.