ಇದು ಸುಮಾರು ಎರಡು ಮೂರು ತಿಂಗಳ ಹಿಂದಿನ ಘಟನೆ. ಅಂದು ಬೆಳಿಗ್ಗೆ 10-30 ರ ಸಮಯದಲ್ಲಿ ಧಾರವಾಡದಿಂದ ಹುಬ್ಬಳ್ಳಿಯ ಉದಯ ಟಿ.ವಿ. ಕಛೇರಿಗೆ ಹೋಗಲು ಬಸ್ ಹತ್ತುವ ಸಮಯದಲ್ಲಿ ನನ್ನ ಮೊಬೈಲ್ ಗೆ ಕರೆ ಬಂತು. ಅತ್ತ ಕಡೆ ಬೆಂಗಳೂರಿನಿಂದ ಮಾತನಾಡುತ್ತಿದ್ದವರು ಜಯಶಂಕರ್ ಹಲಗೂರು ಎಂಬ ನನ್ನ ಮಿತ್ರರು. ಇವೊತ್ತಿಗೂ ಅವರು ನನಗೆ ಮುಖ ಪರಿಚಯವಿಲ್ಲ. ಆದರೆ ನನ್ನ ಜೆಲ್ಲೆಯವರಾದ ಜಯಶಂಕರ್ ಅವರಲೇಖನಗಳನ್ನು ಲಂಕೇಶ್ ಪತ್ರಿಕೆ, ಕನ್ನಡ ಟೈಮ್ಸ್, ಇವುಗಳಲ್ಲಿ ಓದಿ ಅವರ ಪರಿಚಯವಿತ್ತು. ಜೊತೆಗೆ ಫೇಸ್ ಬುಕ್ ನಲ್ಲಿ ನನ್ನ ಗೆಳೆಯರಾಗಿದ್ದರು. ಅವರ ಕರೆ ಬಂದಾಗ, ಬಸ್ ಹತ್ತುವುದನ್ನು ನಿಲ್ಲಿಸಿ, ಅವರ ಮಾತುಗಳಿಗೆ ಕಿವಿಗೊಟ್ಟೆ. ಅವರ ಮಾತುಗಳು ಹೀಗಿದ್ದವು. " ಸರ್, ನಿಮ್ಮ ಜಾಗತೀಕರಣ ಮತ್ತು ಉನ್ನತ ಶಿಕ್ಷಣ ಎಂಬ ಪ್ರಬಂಧವನ್ನು ಡಿಗ್ರಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದೇನೆ ಖುಷಿಯಾಗುತ್ತಿದೆ" ಎಂದರು. ನನಗೆ ನಿಜಕ್ಕೂ ಅವರ ಮಾತು ಕೇಳಿ ಸಂತೋಷಕ್ಕೆ ಬದಲಾಗಿ ಮುಜಗರವಾಗಿ ಪಾಪಪ್ರಜ್ಞೆಯಿಂದ ಬಳಲುವಂತಾಯಿತು.. ಇದೇ ಮಾತನ್ನು ಅವರಿಗೆ ಹೇಳಿದೆ. " ಜಯಶಂಕರ್ ನನಗೆ ನಿಮ್ಮ ಮಾತು ಕೇಳಿ ನಾಚಿಕೆಯಾಗುತ್ತಿದೆ. ಅದು ಹತ್ತು ವರ್ಷದ ಹಿಂದೆ ಡಾಕ್ಟರೇಟ್ ಪದವಿಗಾಗಿ ಬರೆದ ಪ್ರಬಂಧದ ಅಧ್ಯಾಯಗಳಲ್ಲಿ ಒಂದು, ನನ್ನ ಈ ಪ್ರಬಂಧವನ್ನು ಜಾಗತೀಕರಣ ಮತ್ತು ಸಾಂಸ್ಕೃತಿಕ ಪಲ್ಲಟಗಳು ಎಂಬ ಹೆಸರಿನಲ್ಲಿ ಹೊಸದಾಗಿ ಬರೆಯಬೇಕೆಂದು ನಿರ್ಧರಿಸಿ ಐದು ವರ್ಷವಾಯಿತು. ಆದರೆ ನನ್ನ ಒಡಕಲು ವ್ಯಕ್ತಿತ್ವ ( Split Personality) ದಿಂದ ಸಾದ್ಯವಾಗಿಲ್ಲ ಎಂದು ತಪ್ಪೊಪ್ಪಿಕೊಂಡೆ.



ನಿನ್ನೆ ದಿನ ಅಂದರೆ ಮೇ 17 ರಂದು ನನ್ನ ಬದುಕನ್ನು ಮತ್ತು ಚಿಂತನೆಯನ್ನು ರೂಪಿಸಿದ ಮಹಾನ್ ಮಾನವತಾವಾದಿ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಗುನ್ನಾರ್ ಮಿರ್ಡಲ್ ನಿಧನರಾಗಿ 28 ವರ್ಷವಾಯಿತು. ಲೇಖನ ಬರೆಯಲು ಕಂಪ್ಯೂಟರ್ ಸಿಸ್ಟಂ ಮುಂದೆ ಕುಳಿತು, ಅನಾರೋಗ್ಯದಿಂದ ಹಿಂದೆ ಸರಿದೆ. ಆದರೆ ಈ ದಿನ ನನ್ನ ಹಿರಿಯ ಮಿತ್ರರಾದ ಎಡಪಂಥೀಯ ಚಳುವಳಿಯ ನಾಯಕರಾದ ಜಿ.ಎನ್. ನಾಗರಾಜು ಅವರು ಜಗತ್ತಿನ ಅಭಿವೃದ್ಧಿಯ ವಿಕೃತಿಗಳನ್ನು ಕುರಿತು ಫೇಸ್ ಬುಕ್ ನಲ್ಲಿ ಒಂದು ಸ್ಟೇಟಸ್ ಹಾಕಿದ್ದಾರೆ. ಅದನ್ನು ಓದಿದ ಮೇಲೆ ಇದನ್ನು ಬರೆಯಲೇಬೇಕೆನಿಸಿತು.
ಇಂದಿಗೂ ಸಹ ಬಹಳ ಮಂದಿ ಅರ್ಥಶಾಸ್ತ್ರವೆಂದರೆ ಕಗ್ಗಂಟು ಮತ್ತು ಅದು ಹಣಕಾಸಿನ ವಿಷಯ ಮತ್ತು ಆರ್ಥಿಕ ಸಿದ್ಧಾಂತಗಳಿಗೆ ಒಳಪಟ್ಟ ಜ್ಞಾನ ಶಿಸ್ತು ಎಂದು ಕೊಂಡಿದ್ದಾರೆ. ಇದು ಅರ್ಧ ಸತ್ಯಮಾತ್ರ. ಆರ್ಥಿಕ ಒಣ ಸಿದ್ಧಾಂತಗಳನ್ನು ಧಿಕ್ಕರಿಸಿ ಮಾನವೀಯ ನೆಲೆಯಲ್ಲಿ ಈ ಜಗತ್ತಿನ ಬಡತನ, ಅಭಿವೃದ್ಧಿ ಕುರಿತ ಚಿಂತನೆ, ಮತ್ತು ಪರಿಸರ ಸಮತೋಲನ, ಹಾಗೂ ಸಮಕಾಲೀನ ರಾಜಕೀಯವನ್ನು ಅರ್ಥಶಾಸ್ತ್ರದ ನೆಲೆಯಿಂದ ವಿಶ್ಲೇಷಿಸಬಹುದಾದ ಮತ್ತು ಯೋಚಿಸಬಹುದಾದ ಅಪರೂಪದ ಜ್ಞಾನ ಶಿಸ್ತು ಎಂಬುದು ಬಹಳ ಮಂದಿಗೆ ಗೊತ್ತಿಲ್ಲ. ಇಂತಹ ಚಿಂತನೆಯನ್ನು ಬೆಳಸಿ ವಿಸ್ತರಿಸಿದವರು ಗುನ್ನಾರ್ ಮಿರ್ಡಾಲ್. 1974 ರಲ್ಲಿ ಇವರು ಮೂರು ಸಂಪುಟಗಳಲ್ಲಿ ಬರೆದ ಏಷ್ಯನ್ ಡ್ರಾಮಾ ಎನ್ನುವ ಕೃತಿ ಇಂದಿಗೂ ಕೂಡ ಬಡತನ ಕುರಿತ ವಾಖ್ಯಾನಕ್ಕೆ ಬೈಬಲ್ ನಂತಿದೆ.
 ಸ್ವೀಡನ್ ನಲ್ಲಿ ಜನಿಸಿ, ಬೆಳೆದು, ವಿದ್ಯಾವಂತರಾಗಿ ಅರ್ಥಶಾಸ್ತ್ರಜ್ಞರಾಗಿ ಹೊರಹೊಮ್ಮಿದ ಮಿರ್ಡಾಲ್ ಅವರು ತಮ್ಮ ಬದುಕಿನುದ್ದಕ್ಕೂ ಏಷ್ಯಾ ರಾಷ್ಟ್ರಗಳ ಬಡತನ ಕುರಿತು ಚಿಂತಿಸಿದವರು. ಇದಕ್ಕಾಗಿ ಅವರನ್ನು ಆಡಂ ಸ್ಮಿತ್ ನನ್ನು ಅರ್ಥಶಾಸ್ತ್ರದ ಪಿತಾ ಮಹಾ ಎಂದು ಕರೆಯುವಂತೆ , ಗುನ್ನಾರ್ ಮಿರ್ಡಾಲ್ ಅವರನ್ನು ಏಷ್ಯಾ ರಾಷ್ಟ್ತ್ರಗಳ ಪಿತಾ ಮಹಾ ಎಂದು ಕರೆಯಲಾಗುತ್ತಿದೆ. ಈ ವ್ಯಕ್ತಿಯದು ಎಂತಹ ಪ್ರಖರ ಚಿಂತನೆಯೆಂದರೆ, 1974 ರಲ್ಲಿ ಭಾರತದ ರಾಜಕಾರಣ ಮತ್ತು ಬಡತನವನ್ನು ಕುರಿತು ಹೀಗೆ ಬರೆದಿದ್ದರು. " ಭಾರತದಲ್ಲಿ ಜನಪ್ರತಿನಿಧಿಗಳ ಕಾಳಜಿ ಕೇವಲ ಅಧಿಕಾರದ ಕುರ್ಚಿಯನ್ನು ಉಳಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿದೆ. ಹಾಗಾಗಿ ಭಾರತದಲ್ಲಿ ಬಡತನ ನಿರ್ಮೂಲನೆ ಎಂಬುದು ಘೋಷಣೆ ಮತ್ತು ಓಲೈಕೆಯ ರಾಜಕಾರಣವೇ ಹೊರತು, ನಿಜವಾದ ಕಾಳಜಿಯಾಗಿ ಉಳಿದಿಲ್ಲ" ಎಂದಿದ್ದ ಅವರ ಮಾತು ಇಂದಿಗೂ ಪ್ರಸ್ತುತವಾಗಿದೆ. ನೆಮ್ಮದಿಯ ಸಂಗತಿಯೆಂದರೆ, ಗುನ್ನಾರ್ ಮಿರ್ಡಲ್ ಹೊತ್ತಿಸಿದ ಮಾನವೀಯ ನೆಲೆಯ ಚಿಂತನೆಗಳ ಜ್ಯೋತಿಯನ್ನು ಅಮೇರಿಕಾದ ಜೋಸೆಫ್ ಸ್ಲಿಗ್ಲಿಡ್ಜ್ ಮತ್ತು ನಮ್ಮವರೇ ಅಮಾರ್ಥ್ಯ ಸೇನ್, ಹಾಗೂ ನೆರೆಯ ಬಂಗ್ಲಾ ದೇಶದ ಮಹಮ್ಮದ್ ಯೂನಸ್ ಮುಂತಾದ ಅರ್ಥಶಾಸ್ತ್ರಜ್ಞರು ಆರದಂತೆ ಎತ್ತಿ ಹಿಡಿದಿದ್ದಾರೆ. ನನ್ನಂತಹ ಹಳ್ಳಿಗಾಡಿನ ವ್ಯಕ್ತಿಗೆ ಪ್ರೇರೇಣೆಯಾಗಿದ್ದಾರೆ. Thanks to G.N. Nagaraj sir.