ಶುಕ್ರವಾರ, ಆಗಸ್ಟ್ 18, 2017

ಬೆಂಗಳೂರಿಗೆ ಮಹಾ ಮಳೆಯೆಂಬ ವರದಿ ಹಾಗೂ ಸುದ್ದಿ ಜಗತ್ತಿನ ಸೋಗಲಾಡಿತನಗಳು



ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನಲೆಯಲ್ಲಿ ದಕ್ಷಿಣ ಕರ್ನಾಟಕದ ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ಕೋಲಾರ ಜಿಲ್ಲೆಗಳಲ್ಲಿ ಇತ್ತೀಚೆಗೆ ಮಳೆಯಾಯಿತು. ಆದರೆ, ಎರಡು ದಿನಗಳ ಕಾಲ ಬಿದ್ದ ಮಳೆಯು ಧಾರಾಕಾರವಾಗಿ ಸುರಿದರೂ ಜನಜೀವನ ಅಸ್ತವ್ಯಸ್ತವಾಗುವಂತೆ ಬೀಳುವ ಮಳೆಯೇನಾಗಿರಲಿಲ್ಲ. ಬೆಂಗಳೂರು ನಗರವನ್ನು ಹೊರತು ಪಡಿಸಿದರೆ, ಉಳಿದ ಯಾವುದೇ ಜಿಲ್ಲೆಗಳಲ್ಲಿ ಅಥವಾ ಜಿಲ್ಲಾ ಕೇಂದ್ರಗಳಲ್ಲಿ ಮಳೆಯಿಂದ ಯಾವುದೇ ಅವಾಂತರ ಸೃಷ್ಟಿಯಾಗಲಿಲ್ಲ. ತಗ್ಗು ಪ್ರದೇಶಗಳಲ್ಲಿ, ರಸ್ತೆಗಳಲ್ಲಿ ನೀರು ನಿಲ್ಲುವುದರ ಮೂಲಕ ಜನಜೀವನಕ್ಕೆ ತೊಂದರೆಯಾಗಲಿಲ್ಲಬೆಂಗಳೂರಿನಲ್ಲಿ ಬಿದ್ದ ಮಳೆಯ ಪ್ರಮಾಣದಷ್ಟೇ ಸಮನಾಗಿ  ಇತರೆ ಪ್ರದೇಶಗಳಲ್ಲೂ ಸಹ ಮಳೆ ಬಿದ್ದಿದೆ. ಆದರೆ, ನಮ್ಮ ದೃಶ್ಯಮಾಧ್ಯಮಗಳು ಮಾತ್ರ ಹಗಲಿರುಳು ಬೆಂಗಳೂರು ನಗರಕ್ಕೆ ಮಹಾ ಮಳೆ, ಬೆಂಗಳೂರಿನಲ್ಲಿ ಜಲಪ್ರಳಯ, ಬೆಂಗಳೂರಿಗೆ ಶತಮಾನದ ಮಳೆ ಹೀಗೆ ತಮಗೆ ಅನಿಸಿದ ವಿಶೇಷಣಗಳನ್ನು ಸೇರಿಸಿ ನಿರಂತರವಾಗಿ ಎರಡು ಮೂರು ದಿನಗಳ ಗಂಟಲಿನ ಪಸೆ ಆರಿ ಹೋಗುವವರೆಗೂ ಸುದ್ದಿಯನ್ನು ಬಿತ್ತರಿಸಿದವು.
ಉತ್ತರ ಭಾರತದ ಹಲವು ರಾಜ್ಯಗಳಲ್ಲಿ  ಯಾರಾದರೂ ಸತ್ತರೆ, ಮನೆಯ ಮುಂದೆ ಅಳುವುದಕ್ಕಾಗಿ ಬಾಡಿಗೆ ಮಹಿಳೆಯರನ್ನು ಕರೆಸುತ್ತಾರೆ. ಇವರನ್ನು ರುಡಾಲಿಗಳೆಂದು ಕರೆಯುತ್ತಾರೆ. ಅತ್ಯಂತ ರಾಗಬದ್ಧವಾಗಿ ಧ್ವನಿ ಎತ್ತರಿಸಿ ಅಳುವ ಸಮುದಾಯಕ್ಕೆ ಸೇರಿದಂತೆ ಕಾಣುವ ನಮ್ಮ ಮಾಧ್ಯಮದ ಪಂಜರದ ಗಿಣಿಗಳು ಬೆಂಗಳೂರಿನ ರಸ್ತೆಗಳಲ್ಲಿ, ತಗ್ಗು ಪ್ರದೇಶಗಳಲ್ಲಿ, ನಿಂತಿರುವ ನೀರನ್ನು ನೋಡಿ, ಜಲಪ್ರಳಯ, ಪ್ರಕೃತಿ ವಿಕೋಪ ಎಂದು ಬಣ್ಣಿಸುವ ಮುನ್ನ ಇಂತಹ ಅವ್ಯವಸ್ಥೆಯಲ್ಲಿ ಮಾನವ ನಿರ್ಮಿತ  ಪ್ರಕೃತಿ ವಿಕೋಪದ ಪಾಲೆಷ್ಟು ಎಂಬುದನ್ನು ಯೋಚಿಸಬೇಕಿದೆ.ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಲು ಹೊರಟ ಮುಲ್ಲಾನಂತೆಬೆಂಗಳೂರು ಮಳೆಯ ದುರಂತವನ್ನು ಬಣ್ಣಿಸುವಾಗ ಅಥವಾ ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುವ ಉತ್ಸಾಹ ಉಳಿದ ದಿನಗಳಲ್ಲಿ ಎಲ್ಲಿ ಹೋಗಿರುತ್ತದೆ? ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದರು ಎಂಬ ಏಕೈಕ ಕಾರಣಕ್ಕೆ ಬಡವರು, ಮಧ್ಯಮ ವರ್ಗದವರ ಮನೆಗಳನ್ನು ನೆಲಸಮ ಮಾಡಿ ಅವರನ್ನು ಬೀದಿಗೆ ನೂಕಿದ ಸರ್ಕಾರದ ಕ್ರಮವನ್ನು  ಮಾಧ್ಯಮಗಳು ನಿರಂತರ ವರದಿ ಮಾಡಿದವುಆದರೆ, ಬೆಂಗಳೂರು ನಗರದ ರಾಜಕಾಲುವೆಗಳ ಮೇಲೆ ನಿರ್ಮಾಣ ಮಾಡಲಾಗಿದೆ ಎನ್ನಲಾದ ಪ್ರಭಾವಿ ರಾಜಕಾರಣಿಗಳು, ಸಿನಿಮಾ ನಟರು, ಉದ್ಯಮಿಗಳು ಇವರ ಮನೆ, ಆಸ್ಪತ್ರೆ, ಕೈಗಾರಿಕೆಗಳು ಮತ್ತು ವಸತಿ ಸಮುಚ್ಚಯಗಳು ಇವುಗಳನ್ನು ಕೆಡವಲಾರದೆ ಸರ್ಕಾರ ಮಂಡಿಯೂರಿ ಕುಳಿತಾಗ, ಇದೇ ಮಾಧ್ಯಮಗಳು ವಿಷಯವನ್ನು ಮರೆತಂತೆ ನಟಿಸತೊಡಗಿದವು. ಜೊತೆಗೆ ಇವುಗಳನ್ನು ಸಕ್ರಮಗೊಳಿಸಲು ಸರ್ಕಾರ ಮುಂದಡಿಯಿಟ್ಟಾಗ, ಪ್ರತಿಭಟಿಸಲಾರದೆ, ಮನೆ ಕಳೆದುಕೊಂಡ ನಿರಾಶ್ರಿತರಿಗೆ  ಬೆಂಬಲ ಸೂಚಿಸಲಾರದಷ್ಟು ಅಸಹಾಯಕವಾದವು. ತನಿಖಾ ಪತ್ರಿಕೋದ್ಯಮ ಅಥವಾ ಅಭಿವೃದ್ಧಿ ಪತ್ರಿಕೋದ್ಯಮವೆಂದರೆ, ಘಟನೆಯೊಂದು ಸಂಭವಿಸಿದಾಗ ಹಗಲು ರಾತ್ರಿ ಸುದ್ದಿ ಬಿತ್ತರಿಸಿ ನಂತರ ಸುಮ್ಮನಾಗುವುದಲ್ಲ. ಕೈಗೆತ್ತಿಕೊಂಡ ವಿಷಯಕ್ಕೆ ತಾರ್ಕಿಕವಾಗಿ ಅಂತ್ಯ ಕಾಣುವವರೆಗೂ ವಿಕ್ರಮಾದಿತ್ಯನ ಬೆನ್ನು ಹತ್ತಿದ ಬೇತಾಳದಂತೆ ಬೆನ್ನು ಹತ್ತಬೇಕು. ವಿಷಯದಲ್ಲಿ ಉತ್ತರ ಪ್ರದೇಶದ ಗೋರಖ್ ಪುರದ ಆಸ್ಪತ್ರೆಯಲ್ಲಿ ಸಂಭವಿಸಿದ ಮಕ್ಕಳ ಸಾವಿನ ನಂತರ ಹಿಂದು ಇಂಗ್ಲೀಷ್ ದಿನಪತ್ರಿಕೆಯು ಕಳೆದ ಒಂದು ವಾರದಿಂದ ದೇಶದ 12 ಮಹಾನಗರಗಳಲ್ಲಿ ಪ್ರಕಟವಾಗುವ ಎಲ್ಲಾ  ಆವೃತ್ತಿಗಳಲ್ಲಿ ಅಲ್ಲಿನ ಅವ್ಯವಸ್ಥೆ ಕುರಿತು ಪ್ರತಿ ದಿನ ಅರ್ಧಪುಟದಷ್ಟು ಸರಣಿ ವರದಿಯನ್ನು ಪ್ರಕಟಿಸುತ್ತಿರುವುದನ್ನು ಆಸಕ್ತರು ಗಮನಿಸಬಹುದು.


ಬೆಂಗಳೂರಿನ ಮಳೆಯ ಅವಾಂತರಕ್ಕೆ ಕಳೆದ ಎರಡು ಮೂರು ದಶಕದಲ್ಲಿ ನಗರವು ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಅಡ್ಡಾದಿಡ್ಡಿಯಾಗಿ ಬೆಳೆದಿದೆ. 2011 ಸಮೀಕ್ಷೆಯಲ್ಲಿ 84 ಲಕ್ಷ ಜನಸಂಖ್ಯೆ ಇದ್ದ ಬೆಂಗಳೂರು ಮಹಾನಗರದ ಜನಸಂಖ್ಯೆಯು 2017 ಸಮೀಕ್ಷೆಯ ಪ್ರಕಾರ 1ಕೋಟಿ, 23 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ರೀತಿಯ ದಿಡೀರ್ ಬೆಳವಣಿಗೆಯಲ್ಲಿ ಸುತ್ತಮುತ್ತಲಿನ  ಸುಮಾರು ಐವತ್ತು ಅಥವಾ ಅರವತ್ತು ಪಟ್ಟಣ ಪಂಚಾಯಿತಿಗಳನ್ನು ಮಹಾನಗರ ವ್ಯಾಪ್ತಿಗೆ ತೆಗೆದುಕೊಂಡಿದ್ದು ಒಂದು ಕಾರಣವಾಗಿದೆ. ಒಟ್ಟು 198 ವಾರ್ಡ್ಗಳನ್ನು ಮತ್ತು ಕಾರ್ಪೋರೇಟರ್ ಗಳನ್ನು ಬೆಂಗಳೂರು ಮಹಾನಗರ ಪಾಲಿಕೆ ಹೊಂದಿದೆ. ಪಟ್ಟಣ ಪಂಚಾಯಿತಿಗಳ ಸೇರ್ಪಡೆಯಿಂದ ಸುಮಾರು 20 ಲಕ್ಷ ಜನಸಂಖ್ಯೆ ಹೆಚ್ಚಿರಬಹುದೆಂದು ಊಹಿಸಬಹುದು. ಆದರೆ, ವಾರ್ಷಿಕವಾಗಿ ಸರಾಸರಿ ನಾಲ್ಕರಿಂದ ಐದು ಲಕ್ಷ ವಲಸಿಗರು ಬೆಂಗಳೂರು ನಗರಕ್ಕೆ ಜಮೆಯಾಗುತ್ತಿದ್ದಾರೆ. ಇವರಲ್ಲಿ ಉತ್ತರ ಪ್ರದೇಶ, ಬಿಹಾರ, ನೇಪಾಳ ಹಾಗೂ ನೆರೆಯ ತಮಿಳುನಾಡಿನ ಮಂದಿ ಅಧಿಕ ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದಾರೆ.
ಭಾರತದ ಗ್ರಾಮಾಂತರ ಪ್ರದೇಶಗಳಲ್ಲಿ ದುಡಿಯುವ ಕೈಗಳಿಗೆ  ವರ್ಷಪೂರ್ತಿ ಕೆಲಸ ನೀಡುತ್ತಿದ್ದ ಕೃಷಿ ವಲಯ ನೆಲಕಚ್ಚಿದ ನಂತರ ಕೆಟ್ಟು ಪಟ್ಟಣ ಸೇರು ಎಂಬಂತೆ ಕೂಲಿ ಕಾರ್ಮಿಕರು ನಗರದತ್ತ ವಲಸೆ ಬರುತ್ತಿದ್ದಾರೆ. ಬಾರತದ ಬಹುತೇಕ ನಗರಗಳಲ್ಲಿ ಅಕ್ರಮ ಬಡಾವಣೆಗಳು ಮತ್ತು ಕೊಳೆಗೇರಿಗಳು ನಾಯಿಕೊಡೆ ಅಣಬೆಯಂತೆ ನಿರಂತರವಾಗಿ ತಲೆ ಎತ್ತುತ್ತಿವೆ. ಬೆಂಗಳೂರು ನಗರವೊಂದರಲ್ಲಿ 2500 ಹೆಚ್ಚು ಖಾಸಾಗಿ ಬಡಾವಣೆಗಳು ತಲೆ ಎತ್ತಿ ನಿಂತಿವೆ. ಇವುಗಳ ಜೊತೆಗೆ  ಹತ್ತು ಅಂತಸ್ತಿನ ನಲವತ್ತು ಅಪಾರ್ಟ್ಮೆಂಟ್ಗಳ  ಹತ್ತರಿಂದ ಇಪ್ಪತ್ತು ಕಟ್ಟಡಗಳುಳ್ಳ ವಸತಿ ಸಮುಚ್ಚಯಗಳು ಸಾವಿರಕ್ಕೂ ಮೇಲ್ಪಟ್ಟಿವೆ. ಇವುಗಳನ್ನು ಲೆಕ್ಕ ಹಾಕಿದಾಗ ಬೆಂಗಳೂರು ನಗರವೊಂದರಲ್ಲಿ ಸುಮಾರು ಐದರಿಂದ ಆರು ಸಾವಿರ ಹಳ್ಳಿಗಳಿವೆ ಎಂದು ಊಹಿಸಬಹುದು.
1960 ಮತ್ತು 70 ದಶಕದಲ್ಲಿ ಇಪ್ಪತ್ತು ಲಕ್ಷ ಜನಸಂಖ್ಯೆ ಇದ್ದ ಬೆಂಗಳೂರು ನಗರಕ್ಕೆ ನಿರ್ಮಿಸಲಾದ ಒಳಚರಂಡಿಗಳು, ರಾಜಕಾಲುವೆಗಳು ಈಗಿನ ಒಂದು ಕೋಟಿ ಇಪ್ಪತ್ಮೂ ರು ಲಕ್ಷ ಜನಸಂಖ್ಯೆಗೆ ಉಪಯೋಗಿಸಲ್ಪಡುತ್ತಿವೆ. ಒಂದಿಷ್ಟು ರಸ್ತೆ ಅಗಲೀಕರಣ ಹೊರತು ಪಡಿಸಿದರೆ, ಅದೇ ರಸ್ತೆಗಳು ಬಳಕೆಯಾಗುತ್ತಿವೆ. ಇಂತಹ ಸ್ಥಿತಿಯಲ್ಲಿ ಎಲ್ಲಾ ಸಾರ್ವಜನಿಕ ಸ್ಥಳಗಳು, ಕೆರೆಗಳು, ಪಾರ್ಕುಗಳು ದುರ್ಬಳಕೆಯಾಗಿ ಖಾಸಾಗಿಯವರ ಸ್ವತ್ತಾದವು. ಮಳೆ ನೀರುವ ಹಿಂಗುವ ತೆರೆದ ಭೂಮಿಯು ಕಾಂಕ್ರೀಟ್ ಕಾಡುಗಳಾಗಿ ಪರಿವರ್ತನೆ ಹೊಂದಿವೆ. ಬೆಂಗಳೂರು ನಗರ ಹಾಗೂ ಸುತ್ತ ಮುತ್ತ ಇದ್ದ ನೂರಕ್ಕೂ ಹೆಚ್ಚು ಕೆರೆಗಳು ಕಾಣೆಯಾದವು. ಅಳಿದುಳಿದಿರುವ ಅಲಸೂರು, ಹೆಬ್ಬಾಳ, ಸ್ಯಾಂಕಿ ಕೆರೆ, ವರ್ತೂರು, ಬೆಳ್ಳಂದೂರು, ನಾಗವಾರ, ಕೆಂಗೇರಿ, ಅಗರ, ಮಡಿವಾಳ, ಹೆಸರಗಟ್ಟ, ಚಿನ್ನಪ್ಪನಹಳ್ಳಿ, ಲಾಲ್ ಬಾಗ್   ಹೀಗೆ ಹತ್ತಿಪ್ಪತ್ತು ಕೆರೆಗಳು ಜೀವಂತವಾಗಿದ್ದು, ಅವುಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡಿವೆ. ಈಗ ಅವೆಲ್ಲವೂ ನಗರದ ಒಳಚರಂಡಿಯ ಮೂಲಕ ಹರಿಯುವ ರಸಾಯನಿಕ ತ್ಯಾಜ್ಯವನ್ನು ಒಳಗೊಂಡ ಕೊಳಚೆ ನೀರಿನ ಶೇಖರಣೆಯ ಹೊಂಡಗಳಾಗಿವೆ.
ನಗರದಲ್ಲಿ ಬೀಳುತ್ತಿದ್ದ ಮಳೆಯ ನೀರು ಒಳಚರಂಡಿಯ ಮೂಲಕ ರಾಜಕಾಲುವೆಗೆ ಹರಿದು ಅದರ ಮೂಲಕ ನಗರದ ಹೊರ ಭಾಗದಲ್ಲಿ  ಹಳ್ಳ ಕೊಳ್ಳಗಳ ಮೂಲಕ ತಮಿಳುನಾಡಿಗೆ ಸೇರುತ್ತಿತ್ತು. ಈಗ ಬೆಂಗಳೂರು ನಗರದಲ್ಲಿ ಶೇಕಡ 70 ರಷ್ಟು ರಾಜಕಾಲುವೆಗಳು ಕಾಣೆಯಾಗಿವೆ. ಪ್ರಭಾವಿ ಬಿಲ್ಡರ್ ಗಳು ಮತ್ತು ರಾಜಕಾರಣಿಗಳು ನಿರ್ಮಿಸಿರುವ ಕಟ್ಟಡಗಳ ಕೆಳಗೆ ಹೂತು ಹೋಗಿವೆ. ಐವತ್ತು ವರ್ಷದ ಹಿಂದಿನ ಬೆಂಗಳೂರು ನಗರದ ನಕ್ಷೆಯನ್ನು ಪರಿಶೀಲಿಸಿದರೆ, ಬೆಂಗಳೂರಿನ ಕೆರೆಗಳು ಮತ್ತು ರಾಜಕಾಲುವೆಗಳು ಹೇಗೆ ನಾಶವಾಗಿವೆ ಎಂಬ ಮಾಹಿತಿ ದೊರೆಯುತ್ತದೆ. ಬೆಂಗಳೂರಿನ ವಸ್ತು ಸ್ಥಿತಿ ರೀತಿಯಲ್ಲಿ  ದಯನೀಯವಾಗಿರುವಾಗ, ಮಳೆ ನೀರು ರಸ್ತೆಯಲ್ಲಿ ನಿಲ್ಲದೆ, ತಗ್ಗು ಪ್ರದೇಶಗಳಿಗೆ ನುಗ್ಗದೆ ಬೇರೆಲ್ಲಿ ಹೋಗಲು ಸಾಧ್ಯ?
ಬೆಂಗಳೂರು ನಗರವೊಂದರಲ್ಲಿ ಪ್ರತಿ ದಿನ ಸುಮಾರು ನಾಲ್ಕು ಸಾವಿರ ಆರನೂರು ಟನ್ ಕಸ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಮನೆಗಳಿಂದ ಉತ್ಪತ್ತಿಯಾಗುತ್ತಿರುವ ಪ್ರಮಾಣ ಶೇಕಡ 40 ರಷ್ಟು ಮಾತ್ರ. ಉಳಿದ 60 ರಷ್ಟು ಭಾಗ ಕೈಗಾರಿಕೆಗಳು, ಆಸ್ಪತ್ರೆ ಮತ್ತು ಹೊಟೇಲ್ಗಳಿಂದ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಸಾಪ್ಟ್ ವೇರ್ ಕಂಪನಿಗಳ -ತ್ಯಾಜ್ಯ ಮತ್ತು ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಉಳಿಯುವ ಕಟ್ಟಡದ ಅವಶೇಷಗಳ ತ್ಯಾಜ್ಯ ಸೇರಿಲ್ಲ. ಈವರೆಗೆ ಬೆಂಗಳೂರು ನಗರದಲ್ಲಿ ದಿನವೊಂದಕ್ಕೆ ಕೇವಲ ಒಂದು ಸಾವಿರ ಟನ್ ಕಸವನ್ನು ಮಾತ್ರ ಸಂಸ್ಕರಿಸಲಾಗುತ್ತಿದೆ. ಸುಮಾರು ಇನ್ಮ್ನರರಿಂದ ಮುನ್ನೂರು ಟನ್ ಕಸವನ್ನು ನಗರದಿಂದ ಹೊರ ಪ್ರದೇಶಗಳಿಗೆ ಕೊಂಡೊಯ್ದು ಹಳ್ಳ ಕೊಳ್ಳಗಳಿಗೆ ಸುರಿಯಲಾಗುತ್ತಿದೆ. ಇನ್ನುಳಿದ ಸುಮಾರು ಮೂರು ಸಾವಿರ ಟನ್ ಕಸದಲ್ಲಿ ಅರ್ಧಭಾಗ ಕೊಳೆತು ಮಳೆ ನೀರಿನಲ್ಲಿ ಕೊಚ್ಚಿ ಹೋಗುವುದು ಇಲ್ಲವೆ, ಭೂಮಿಯಲ್ಲಿ ಕರಗುತ್ತಿದ್ದರೆ, ಕರಗಲಾದ ಮತ್ತು ಕೊಳೆಯಲಾಗದ ಪ್ಲಾಸ್ಟಿಕ್ ತ್ಯಾಜ್ಯವು ನಗರದ ಒಳಚರಂಡಿಗಳಲ್ಲಿ ಮತ್ತು ರಾಜಕಾಲುವೆಗಳಲ್ಲಿ ತುಂಬಿ ತುಳುಕುತ್ತಿದೆ. ಇಂತಹ ಸ್ಥಿತಿಯಲ್ಲಿ ಬೆಂಗಳ್ರರಿಗೆ ಮಹಾ ಮಳೆ ಎಂದು ಬಾಯಿ ಬಡಿದುಕೊಳ್ಳುವುದರಲ್ಲಿ ಯಾವ ಅರ್ಥವಿದೆ?
ಇಂದು ಬೆಂಗಳೂರು ನಗರ ಮಾತ್ರವಲ್ಲದೆ, ಜಗತ್ತಿನ ಬಹುತೇಕ ನಗರಗಳನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯೆಂದರೆ, ವಾಹನಗಳ ದಟ್ಟಣೆಯಿಂದ ಉಂಟಾದ ಸಂಚಾರದ ಅಡಚಣೆ, ಕುಡಿಯುವ ನೀರಿನ ಸಮಸ್ಯೆ, ಶುದ್ಧ ಗಾಳಿಯ ಸಮಸ್ಯೆ ಹಾಗೂ ಕಸ ವಿಲೆವಾರಿಯ ಸವಾಲು. ಬೆಂಗಳೂರು ನಗರದಲ್ಲಿ ಇಪ್ಪತ್ತೈದು ವರ್ಷಗಳ ಹಿಂದೆ ಕೇವಲ ನೂರ ಐವತ್ತು ಅಡಿ ಆಳದಲ್ಲಿ ಕೊಳವೆ ಬಾವಿಯ ಮೂಲಕ ದೊರೆಯುತ್ತಿದ್ದ ನೀರು ಈಗ ಒಂದು ಸಾವಿರದ ಎಂಟನೂರು ಅಡಿಗಳಿಂದ ಎರಡು ಸಾವಿರ ಅಡಿಗಳ ಆಳಕ್ಕೆ ಇಳಿದಿದೆ. ಮಳೆ ನೀರು ಸಂಗ್ರಹಿಸಿ, ಇಂಗು ಗುವ್ಮಡಿಗಳ ಮೂಲಕ ಭೂಮಿಗೆ ನೀರುಣಿಸುವ ಕನಿಷ್ಟ ಜ್ಞಾನವಾಗಲಿ, ವ್ಯವಧಾನವಾಗಲಿ ಯಾರಿಗೂ ಇಲ್ಲವಾಗಿದೆ. ಮಳೆ ನೀರನ್ನು ಹಿಡಿದಿಟ್ಟುಕೊಂಡರೆ  ಶೇಕಡ ನಲವತ್ತರಷ್ಟು ಬೆಂಗಳೂರು ನಗರದ ನೀರಿನ ಸಮಸ್ಯೆಗೆ ಪರಿಹಾರ ಸಿಗಬಲ್ಲದು. ಜಲಮೂಲದ ತಾಣಗಳಾದ ಕೆರೆಗಳು, ಕಲ್ಯಾಣಿಗಳು ನಾಶವಾದ ನಂತರ ಬೆಂಗಳೂರು ನಗರದಲ್ಲಿ ಟ್ಯಾಂಕರ್ ನೀರಿಗೆ ಬಹುತೇಕ ಅಪಾರ್ಟ್ಮೆಂಟ್ ನಿವಾಸಿಗಳು ಆಶ್ರಯಿಸುವಂತಾಗಿದ್ದು, ನಾಲ್ಕು ಸಾವಿರ ಲೀಟರ್ ನೀರಿನ ಟ್ಯಾಂಕರ್ ಗೆ ಎರಡರಿಂದ ನಾಲ್ಕು ಸಾವಿರ ರೂಪಾಯಿ ಪಾವತಿಸುತ್ತಿದ್ದಾರೆ. ನೆಲಕ್ಕೆ ಬಿದ್ದು ವ್ಯರ್ಥವಾಗಿ ಹರಿದು ಹೋಗುತ್ತಿರುವ ಮಳೆಯ ನೀರು ಯಾರಿಗೂ ಬೇಡವಾಗಿದೆ. ಹಾಗಾಗಿ ಮಳೆ ಮತ್ತು ಮಳೆಯ ನೀರಿನ ವರದಿ ಅಥವಾ ಸುದ್ಧಿ ಮಾಧ್ಯಮಗಳ ವ್ಯರ್ಥ ಪ್ರಲಾಪವಲ್ಲದೆ ಬೇರೇನೂ ಅಲ್ಲ.

(ಕರಾವಳಿ  ಮುಂಜಾವು ದಿನಪತ್ರಿಕೆಯ " ಜಗದಗಲ" ಅಂಕಣ ಬರಹ)



ಶುಕ್ರವಾರ, ಆಗಸ್ಟ್ 11, 2017

ಭಾರತದ ಪ್ರಥಮ ನಾದಸ್ವರ ಕಲಾವಿದೆ: ಮಧುರೈ ಪೊನ್ನುತಾಯಿ ಒಂದು ನೆನಪು

ತಮಿಳುನಾಡಿನ ಸಾಂಸ್ಕತಿಕ ನಗರಿ ಮಧುರೈ ಎಂದರೆ, ಅಲ್ಲಿನ ಮೀನಾಕ್ಷಿ  ಬೃಹತ್ ದೇವಾಲಯದ ಮೂಲಕ  ನಗರ ಇಡೀ ಜಗತ್ತಿಗೆ ಪ್ರಸಿದ್ಧವಾಗಿದೆ. ಅದೇ ರೀತಿಯಲ್ಲಿ ಮಧುರೈ ನಗರಕ್ಕೆ ತಮ್ಮ ಕರ್ನಾಟಕ ಸಂಗೀತದ ಮೂಲಕಸಂಗೀತದ ಲೋಕದಲ್ಲಿ ಶಾಶ್ವತ ಸ್ಥಾನ ದೊರಕಿಸಿಕೊಟ್ಟವರೆಂದರೆ,   ಮೀನಾಕ್ಷಿ ಅಮ್ಮನ ಹೆಮ್ಮೆಯ ಪುತ್ರಿಯರಂತೆ ಇದ್ದ ಮಧುರೈ ಷಣ್ಮುಗವಡಿವು ಎಂಬ ಪ್ರಸಿದ್ಧ ವೀಣಾವಾದಕಿ, ಮತ್ತು ಅವರ ಪುತ್ರಿ ಮಧುರೈ ಷಣ್ಮುಗವಡಿವು ಸುಬ್ಬುಲಕ್ಷ್ಮಿ( ಎಂ.ಎಸ್. ಸುಬ್ಬುಲಕ್ಷ್ಮಿ) ಹಾಗೂ ಮಧುರೈ ಪೊನ್ನುತಾಯಿ. ಮೂವರು ದೇವದಾಸಿ ಸಮುದಾಯದ ಹಿನ್ನಲೆಯಿಂದ ಬಂದು ಕರ್ನಾಟಕ ಸಂಗೀತ ಲೋಕದಲ್ಲಿ ದೇವತೆಯರ ಸ್ಥಾನಮಾನಗಳನ್ನು ಗಳಿಸಿಕೊಂಡ ಅಪ್ರತಿಮ ಕಲಾವಿದೆಯರಾಗಿದ್ದಾರೆ.
ಮಧುರೈ ಪೊನ್ನುತಾಯಿ ಪುರುಷಲೋಕಕ್ಕೆ ಮಿಸಲಾಗಿದ್ದ ನಾದಸ್ವರ ವಾದನಕ್ಕೆ ಪ್ರವೇಶಿಸಿದ ಪಥಮ ಮಹಿಳಾ ಕಲಾವಿದೆ. ನಿರಂತರ ಮುವತ್ತೆರೆಡು ವರ್ಷಗಳ ಕಾಲ,  (1940 ರಿಂದ 1972 ರವರೆಗೆದಕ್ಷಿಣದ ತಮಿಳುನಾಡಿನ ತಂಜಾವೂರು, ತಿರುವರೂರು, ತಿರುಚರಾಪಳ್ಳಿ, ಮಧುರೈ, ಪುದುಕೊಟೈ, ನಾಗರಕೋಯಿಲ್, ತಿರುನಾನ್ವೇಲಿ, ಥೇಣಿ,ಜಿಲ್ಲೆಗಳು, ಮತ್ತು  ಕೇರಳದ ತಿರುವನಂತಪುರ, ಕೊಲ್ಲಂ, ಪಾಲಕ್ಕಾಡ್, ಎರ್ನಾಕುಲಂ, ಅಲ್ಲಪುಜ, ತ್ರಿಸೂರು, ಕೊಟ್ಟಾಯಂ ಜಿಲ್ಲೆಗಳ ಪ್ರಮುಖ ದೇವಾಲಯಗಳ ವಾರ್ಷಿಕ ದೇವರ ಉತ್ಸವಗಳು, ಶ್ರೀಮಂತ ಜಮೀನ್ದಾರರ ಮತ್ತು ರಾಜಕಾರಣಿಗಳ ಕುಟುಂಬದ ವಿವಾಹಗಳಲ್ಲಿ ನಾದಸ್ವರ  ನುಡಿಸುವುದರ ಮೂಲಕ ಜನಸಾಮಾನ್ಯರ ಎದೆಯಲ್ಲಿ ತಮ್ಮ ಮಧುರವಾದ ವಾದನದ ನೆನಪುಗಳ ಮೂಲಕ ಚಿರಸ್ಥಾಯಿಯಾಗಿ ಉಳಿದಿದ್ದಾರೆ.
ಭಾರತೀಯ ಹಿಂದೂ ಸಂಸ್ಕತಿಯಲ್ಲಿ ಶುಭಕಾರ್ಯಗಳಿಗೆ ಮಂಗಳವಾದ್ಯವೆಂದರೆ, ಉತ್ತರಭಾರತದಲ್ಲಿ ಶಹನಾಯಿ ಮತ್ತು ದಕ್ಷಿಣಭಾರತದಲ್ಲಿ ನಾದಸ್ವರ (ವಾಲಗ) ವಾದ್ಯಗಳು ಪ್ರಸಿದ್ಧಿಯಾಗಿವೆ.   ಪ್ರಕಾರಗಳೆರೆಡೂ ಉತ್ತರ-ದಕ್ಷಿಣ ಎಂಬ ಭೇದ-ಭಾವವಿಲ್ಲದೆ ತಳಸುಮುದಾಯದಿಂದ ಬಂದ ಕಲಾವಿದರ ಆಸ್ತಿಯಾಗಿರುವುದು ವಿಶೇಷವಾಗಿದೆ.. ಪ್ರಾಚೀನ ಕಾಲದಿಂದಲೂ ದೇವಸ್ಥಾನ, ರಾಜರುಗಳ ದರ್ಭಾರಿನಲ್ಲಿ, ಗೃಹ ಪ್ರವೇಶ, ವಿವಾಹ, ಪೂಜೆ ಇತ್ಯಾದಿ ಶುಭಕಾರ್ಯಗಳಲ್ಲಿ ಅತ್ಯಗತ್ಯವಾದ ಸಂಗೀತ ಪ್ರಕಾರವಾಗಿದ್ದರೂ ಸಹ ಇವುಗಳನ್ನು ನುಡಿಸುವ ಕಲಾವಿದರನ್ನು ಮಾತ್ರ  ದೇಗುಲಗಳ ಬಾಗಿಲುಗಳಾಚೆ, ವಿವಾಹ ಮಂಟಪಗಳ ಮೂಲೆಯಲ್ಲಿ ಕೂರಿಸಿ ದೂರವಿರಿಸಲಾಗಿತ್ತು.. ನೀವು ನುಡಿಸುವ ಸಂಗೀತ ನಮಗೆ ಅಸ್ಪೃಶ್ಯವಲ್ಲ ಆದರೆ, ನೀವು ಮಾತ್ರ ನಮಗೆ ಅಸ್ಪೃಶ್ಯರು ಎಂಬ ಸಂದೇಶವನ್ನು ಶತಮಾನಗಳುದ್ದಕ್ಕೂ ಕಲಾವಿದರ ಎದೆಗೆ ನಮ್ಮ ಸಮಾಜ ದಾಟಿಸುತ್ತಾ ಬಂದಿತ್ತು. ಅಸ್ಪೃಶ್ಯತೆಯ ಗಡಿರೇಖೆಯನ್ನು ಉತ್ತರಭಾರತದಲ್ಲಿ ಶಹನಾಯ್ ವಾದಕ ಬಿಸ್ಮಿಲ್ಲಾ ಖಾನ್ ಅಳಿಸಿ ಹಾಕಿದರೆ, ದಕ್ಷಿಣಭಾರತದಲ್ಲಿ ನಾದಸ್ವರದ ಮಾಂತ್ರಿಕ ಟಿ.ಎನ್. ರಾಜರತ್ನಂಪಿಳ್ಳೈ ಅಳಿಸಿಹಾಕಿದರು. ಅಷ್ಟೇ ಅಲ್ಲದೆ, ತಮ್ಮ ಪ್ರಖರ ಪ್ರತಿಭೆಯ ಮೂಲಕ ಹಿಂದುಸ್ತಾನಿ ಸಂಗೀತ ಮತ್ತು ಕರ್ನಾಟಕ ಸಂಗೀತದ ಎರಡೂ ಪ್ರಕಾರಗಳಿಗೆ ಸಂಗೀತದ ಕಛೇರಿಯ ಸ್ಥಾನಮಾನಗಳನ್ನು ಗಳಿಸಿಕೊಡುವುದರ ಮೂಲಕ ಕಲಾವಿದರನ್ನು ಸಮಾಜ ಗೌರವದಿಂದ ನೋಡುವಂತೆ, ಆರಾಧಿಸುವಂತೆ ಮಾಡಿದರು.
ಸಂಗೀತದ ವಾದ್ಯ ಪ್ರಕಾರಗಳಲ್ಲಿ ಕೊಳಲು, ಶಹನಾಯ್ ಮತ್ತು ನಾದಸ್ವರ ಮೂರು ಕಲಾವಿದರ ಪಾಲಿಗೆ ಕ್ಲಿಷ್ಟಕರ ವಾದ್ಯಗಳು. ಏಕೆಂದರೆ, ತಮ್ಮ ಎದೆಯ ತಿದಿಯೊತ್ತಿ ಅವುಗಳಿಗೆ ಉಸಿರು ತುಂಬಿ, ವಾದ್ಯಗಳಿಗೆ ಕೊರೆದಿರುವ ಹತ್ತು ರಂಧ್ರಗಳ ಮೇಲೆ ತಮ್ಮ ಹತ್ತು ಬೆರಳುಗಳನ್ನಾಡಿಸುತ್ತಾ ಅಗತ್ಯಕ್ಕೆ ತಕ್ಕಂತೆ ಧ್ವನಿ ಹೊರಡಿಸುವುದು ಸಾಮಾನ್ಯವಾದ ಸಂಗತಿಯಲ್ಲ. ಕೊಳಲು ಮತ್ತು ಶಹನಾಯ್ ಕೇವಲ ಅರ್ಧ ಇಂಚು ಅಥವಾ ಮುಕ್ಕಾಲು ಇಂಚು ವ್ಯಾಸವಿದ್ದು, ಒಂದು ಅಡಿಯಿಂದ ಒಂದೂವರೆ ಅಡಿ ಉದ್ದವಿದ್ದರೆ, ನಾದಸ್ವರ ವಾದನವು ಎರಡರಿಂದ ಎರಡೂವರೆ ಅಡಿ ಉದ್ದವಿದ್ದು, ಅದರ ವ್ಯಾಸವು ಒಂದು ಇಂಚಿನಿಂದ ಎರಡು ಇಂಚಿನಷ್ಟು ಇರುತ್ತದೆ. ಏಕಕಾಲಕ್ಕೆ ದೈಹಿಕ ಮತ್ತು ಬೌದ್ಧಿಕ ಶ್ರಮವನ್ನು ಬೇಡುತ್ತವೆ. ಕಾರಣಕ್ಕೆ  ವಾದನಗಳು ಬಹಳಷ್ಟು ಕಾಲ ಪುರುಷ ಸಾಮ್ರಾಜ್ಯದ ಕಲಾ ಪ್ರಕಾರಗಳಾಗಿದ್ದವು. ಅದರಲ್ಲೂ ನಾದಸ್ವರ ನುಡಿಸುವುದು ನಿಜಕ್ಕೂ ಸವಾಲಿನ ವಿಷಯ. ದೇವರ ಉತ್ಸವ ಅಥವಾ ಮೆರವಣೆಗೆಯಲ್ಲಿ ಇಡೀ ರಾತ್ರಿ ಹತ್ತರಿಂದ ಹನ್ನೆರೆಡು ಗಂಟೆಗಳ ಕಾಲ ನಿಂತುಕೊಂಡು ಅಥವಾ ದೇವರ ಪಲ್ಲಕ್ಕಿಯ ಮುಂದೆ ಸಾಗುತ್ತಾ ನುಡಿಸುವುದು ಅಪಾರ ದೈಹಿಕ ಶಕ್ತಿಯನ್ನು ಅಪೇಕ್ಷಿಸುತ್ತದೆ. ಇಂತಹ ಕ್ಲಿಷ್ಟಕರವಾದ ನಾದಸ್ವರ ವಾದನಕ್ಕೆ 1940 ರಲ್ಲಿ ಮಧುರೈ ಪೊನ್ನುತಾಯಿ ತಮ್ಮ ಹನ್ನೆರೆಡನೇ ವಯಸ್ಸಿನಲ್ಲಿ ಪ್ರವೇಶಿಸುವುದರ ಮೂಲಕ ಪ್ರಪಥಮ ನಾದಸ್ವರ ಮಹಿಳಾ ಕಲಾವಿದೆ ಎಂಬ ಕೀರ್ತಿಗೆ ಪಾತ್ರರಾದರು.
ತಮಿಳುನಾಡಿನ ಪಳನಿ ಬೆಟ್ಟಗಳ ಗಿರಿಸಾಲಿನ ನಡುವಿನ ಅರಿಯಕುಡಿ ಎಂಬಲ್ಲಿ ಇಸೈವೆಲ್ಲಲಾರ್ ಎಂಬ ಸಂಗೀತ. (ವಾಸ್ತವವಾಗಿ ಸಮುದಾಯವು 1920 ರಿಂದ ಈಚೆಗೆ ತಮಿಳುನಾಡಿನಲ್ಲಿ ದೇವದಾಸಿ ಸಮುದಾಯದಿಂದ ಪ್ರತ್ಯೇಕವಾಗಿ ಗುರುತಿಸಿಕೊಂಡಿದೆ.) ನುಡಿಸುವ ಸಮುದಾಯಕ್ಕೆ ಸೇರಿದ ಕುಟುಂಬದಲ್ಲಿ ಜನಿಸಿದ ಪೊನ್ನುತಾಯಿ ತಮ್ಮ ಆರನೆಯ ವಯಸ್ಸಿನಲ್ಲಿ ನಾದಸ್ವರ ಕಲೆಗೆ ಒಲಿದರು,
ಸತತ ಆರು ವರ್ಷಗಳ ಕಾಲ ಮಧುರೈ ನಗರದ ನಾದಸ್ವರ ವಿದ್ವಾನ್ ನಟೇಶ ಪಿಳ್ಳೈ ಅವರಲ್ಲಿ ಅಭ್ಯಾಸ ಮಾಡಿ 1940 ರಲ್ಲಿ ತಮ್ಮ ಹನ್ನೆರೆಡನೆಯ ವಯಸ್ಸಿಗೆ ಮಧುರೈ ಮೀನಾಕ್ಷಿ ಅಮ್ಮನ ಉತ್ಸವದಲ್ಲಿ ನಾದಸ್ವರ ನುಡಿಸುವುದರ ಮೂಲಕ ಕಲಾಪ್ರಪಂಚಕ್ಕೆ ಕಾಲಿಟ್ಟರು. ಜೊತೆಗೆ ಕಾಲದ ಪ್ರಸಿದ್ಧ ಮಹಾನ್ ಕಲಾವಿದರುಗಳಾದ ಟಿ.ಎನ್, .ರಾಜರತ್ನಂ ಪಿಳ್ಳೈ, ತಿರುವೆಂಕಟಾರ್, ತಿರುವೆಳಿಮಿಳ್ಳೈಯಾರ್ ಮುಂತಾದವರ ಕಛೇರಿಗಳಲ್ಲಿ ಸಹಕಲಾವಿದೆಯಾಗಿ ತಮಿಳುನಾಡು, ಕೇರಳದಲ್ಲಿ ಸಂಗೀತಾಸಕ್ತರ ಗಮನ ಸೆಳೆದರು. ಅವರ ಸಾಧನೆಯು ನಂತರದ ದಿನಗಳಲ್ಲಿ ಪೊನ್ನುತಾಯಿಯವರಿಗೆ ಆಸ್ಥಾನ ವಿದ್ವಾನ್ ಪದವಿಯನ್ನು ತಂದುಕೊಡುವುದರ ಜೊತೆಗೆ ಮಧುರೈ ಮೀನಾಕ್ಷಿ ದೇವಸ್ಥಾನ ಮತ್ತು ಶಬರಿಮಲೈ ಅಯ್ಯಪ್ಪನ ದೇವಸ್ಥಾನ, ತಿರುವಂತಪುರದ ಅನಂತಪದ್ಮನಾಭನ ದೇವಸ್ಥಾನದ ಪ್ರಮುಖ ಕಲಾವಿದೆಯನ್ನಾಗಿ ಮಾಡಿತು.

ಭಾರತದ ಪ್ರಧಾನಿ ಜವಹರಲಾಲ್ ನೆಹರೂ, ರಾಷ್ಟ್ರಪತಿ ಡಾ.ಎಸ್.ರಾಧಾಕೃಷ್ಣನ್ ರವರ ಸಮಾರಂಭಗಳಲ್ಲಿ ನಾದಸ್ವರ ಕಛೇರಿಯನ್ನು ನೀಡಿ ಗಮನ ಸೆಳೆದ ಪೊನ್ನುತಾಯಿ, ಭಾರತದ ಪ್ರಮುಖ ನಗರಗಳು, ಮಲೇಷಿಯಾ, ಶ್ರೀಲಂಕಾ ರಾಷ್ಟ್ರಗಳಲ್ಲಿಯೂ ಸಹ ಕಛೇರಿಯನ್ನು ನೀಡುವುದರ ಮೂಲಕ ಸಂಗೀತಾಸಕ್ತರ ಪಾಲಿಗೆ ಮೆಚ್ಚಿನ ಕಲಾವಿದೆಯಾಗಿದ್ದರು. 1953 ರಲ್ಲಿ ಪೊನ್ನುತಾಯಿ ಹಾಗೂ ಅವರ ಹಿರಿಯ ಸಹೋದರಿ ತಂಗಂ ಅವರನ್ನು ವಿವಾಹದ ಮೂಲಕ  ತಮ್ಮ ಉಪಪತ್ನಿಂiÀiರನ್ನಾಗಿ ಸ್ವೀಕರಿಸಿದ ಮಧುರೈ ನಗರದ ಚಿದಂಬರಂ ಮೊದಲಿಯಾರ್ ಎಂಬುವರು ಪೊನ್ನುತಾಯಿಯ ಕಲೆಗೆ ಎಲ್ಲಾ ವಿಧವಾದ ಪ್ರೋತ್ಸಾಹ ನೀಡುತ್ತಾ ಬಂದಿದ್ದರು. ಮಧುರೈ ಪುರಭೆಯ ಅಧ್ಯಕ್ಷರಾಗಿ, ಒಂದು ಬಾರಿ ಕಾಂಗ್ರೇಸ್ ಪಕ್ಷದ ಪರವಾಗಿ ತಮಿಳುನಾಡು ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಚಿದಂಬರಂ ಮೊದಲಿಯಾರ್ 1972 ರಲ್ಲಿ ನಿಧನರಾದಾಗ ಮಹಾನ್ ಕಲಾವಿದೆ ಪೊನ್ನುತಾಯಿಯವರ ನಾದಸ್ವರ ಲೋಕಕ್ಕೆ ಕತ್ತಲು ಕವಿಯಿತು. ಚಿದಂಬರಂ ಅವರಿಂದ ದಾಂಪತ್ಯದ ಸುಖವನ್ನು ಹೊರತು ಪಡಿಸಿ, ಬೇರೆ ಯಾವ ಸಂಪತ್ತು ಅವರಿಗೆ ಸಿಗದಿದ್ದರೂ ಸಹ, ಅವರಿಗೆ ಅನಿರೀಕಿತವಾಗಿ ದಕ್ಕಿದ ವಿಧವೆಯ ಪಟ್ಟವು ಅವರನ್ನು ಎಲ್ಲಾ ಶುಭ ಕಾರ್ಯಗಳಿಂದ ದೂರವಿರುವಂತೆ ಮಾಡಿತು. ಮಂಗಳಕರ ವಾದ್ಯ ಎನಿಸುವ ನಾದಸ್ವರವನ್ನು ವಿಧವೆಯ ಮೂಲಕ ನುಡಿಸುವುದು ಅಮಂಗಳಕರ ಎನಿಸುವಂತೆ ಮಾಡಿತು. ಇದರ ಫಲವಾಗಿ ಪೊನ್ನುತಾಯಿಯವರು ಅನಿವಾರ್ಯವಾಗಿ, ದೇವಸ್ಥಾನ ಮತ್ತು ವಿವಾಹ ಹಾಗೂ ಶುಭ ಸಮಾರಂಭಗಳಿಂದ ವಂಚಿತರಾಗಿ  ನೈಪಥ್ಯಕ್ಕೆ ಸರಿದರು. 1946 ರಿಂದ 1989 ರವರೆಗೆ ತಿರುಚ್ಚಿಯ ಆಕಾಶವಾಣಿಗೆ ನೀಡುತ್ತಿದ್ದ ಕಾರ್ಯಕ್ರಮದಲ್ಲಿ ದೊರೆಯುತ್ತಿದ್ದ ಅಲ್ಪ ಮಟ್ಟದ ಸಂಭಾವನೆ ಮತ್ತು ಮಾಸಿಕ ಒಂದು ಸಾವಿರ ರೂಪಾಯಿ ಕಲಾವಿದರ ಪಿಂಚಣಿ ಮಹಾನ್ ಕಲಾವಿದೆ ಬದುಕಿರುವವರೆಗೂ ಜೀವನಕ್ಕೆ ಆಸರೆಯಾದವು. ತಮ್ಮ ಕಲಾ ಜೀವನದಲ್ಲಿ ಪಡೆದಿದ್ದ ಇಪ್ಪತ್ಮೂರು ಚಿನ್ನದ ಪದಕಗಳನ್ನು ಮಾರುತ್ತಾ, ತಮ್ಮ ಇಬ್ಬರು ಪುತ್ರಿಯರನ್ನು ವಿವಾಹ ಮಾಡಿದ ಪೊನ್ನುತಾಯಿ ಇದ್ದ ಒಬ್ಬ ಮಗನೊಂದಿಗೆ ಕರ್ನಾಟಕ ಸಂಗೀತ ಲೋಕಕ್ಕೆ ಅನಾಮಿಕಳಂತೆ, ಅನಾಥಳಂತೆ ಬದುಕಿದರು.
ಮಾಹಿತಿ ತಂತ್ರಜ್ಞಾನದ ದೈತ್ಯ ಸಂಸ್ಥೆಯಾದ ಮೈಕ್ರೋಸಾಪ್ಟ್ ಕಂಪನಿಯು ಅಮೇರಿಕಾದ ತನ್ನ ಕೇಂದ್ರ ಕಛೇರಿಯಲ್ಲಿ ಸ್ಥಾಪಿಸಿರುವ ಭಾರತೀಯ ಸಂಗೀತ ಕಲೆಗಳ ದಾಖಲೆಗಳ ಸಂಗ್ರಹಕ್ಕಾಗಿ ಭಾರತದ ನಾದಸ್ವರ ಲೋಕದ ಪ್ರಥಮ ಮಹಿಳಾ ಕಲಾವಿದೆಯಾದ ಪೊನ್ನುತಾಯಿಯವರ ನಾದಸ್ವರವನ್ನು ದಾಖಲಿಸಿಕೊಂಡಿದೆ. ಜಪಾನ್ ರಾಜಧಾನಿ ಟೋಕಿಯೋ ನಗರದಲ್ಲಿರುವ ಭಾರತದ ಸಂಗಿತ ಮತ್ತು ನೃತ್ಯ ಕುರಿತ ಸಂಗ್ರಹಾಲಯದಲ್ಲಿ ಎಂಎಸ್.ಸುಬ್ಬುಲಕ್ಷ್ಮಿಯ ಗಾಯನ, ಮತ್ತು ಪೊನ್ನುತಾಯಿವರ ನಾದಸ್ವರ ವಾದನ ಎರಡೂ ಸ್ಥಾನ ಪಡೆದಿವೆ.
ತಮಿಳುನಾಡಿನಲ್ಲಿ ನಾದಗಾನ ಅರಸಿ, ಮತ್ತು ಕಲೈ ಮಾಮಣಿ ಎಂಬ ಬಿರುದು ಸನ್ಮಾನಗಳನ್ನು ಹೊರತು ಪಡಿಸಿದರೆ, 1972 ರಿಂದ 2012 ರವರೆಗೆ ಸಾರ್ವಜನಿಕ ಲೋಕದ ಗಮನಕ್ಕೆ ಬಾರದ ರೀತಿಯಲ್ಲಿ ಬದುಕಿದ ನಾದಸ್ವರ ಲೊಕದ  ನಾದ ದೇವತೆ ಪೊನ್ನುತಾಯಿ 2012 ರಲ್ಲಿ ಮಧುರೈ ನಗರದ ತಮ್ಮ ಪುತ್ರನ ನಿವಾಸದಲ್ಲಿ ಇಹಲೋಕವನ್ನು ತ್ಯೆಜಿಸಿದರು. ಇದೀಗ ಅವರ ಮೊಮ್ಮಗ ಹಾಗೂ ಮೃದಂಗ ಕಲಾವಿದರಾದ ವಿಘ್ನೇಶ್ವರನ್ ಅವರು ತನ್ನ ಅಜ್ಜಿಯ ಸ್ಮರಣೆಗಾಗಿಪೊನ್ನುತಾಯಿ ಇಸೈ ಆಲಯಂ” ( ಪೊನ್ನುತಾಯಿ ಸಂಗೀತ ನಿಲಯ) ಎಂಬ ಸಂಗೀತ ಶಾಲೆಯನ್ನು ಆರಂಭಿಸಿ, ವಿದ್ಯಾರ್ಥಿಗಳಿಗೆ ಕರ್ನಾಟಕ ಸಂಗೀತದ ಎಲ್ಲಾ ಪ್ರಕಾರಗಳಲ್ಲಿ ತರಬೇತಿಯನ್ನು ನೀಡುತ್ತಿದ್ದಾರೆ. ಕಳೆದ ವಾರ 1960 ಪ್ರಸಿಧ್ಧ ತಮಿಳು ಗೀತೆಯಾದಸಿಂಗಾರ ವೇಲನೆ ನೀ ವಾಎಂಬ ಹಾಡನ್ನು ನಾದಸ್ವರದ ಮೂಲಕ ಕೇಳುವಾಗ ಮಹಾತಾಯಿ ನೆನಪಾದರು. ದಕ್ಷಿಣ ಭಾರತದ ದೇವದಾಸಿಯರ ಇತಿಹಾಸ ಕುರಿತಂತೆ ಕಳೆದ ಐದು ವರ್ಷಗಳಿಂದ ನಾನು ಕೈಗೊಂಡಿರುವ ಅಧ್ಯಯನ ಮತ್ತು ಕ್ಷೇತ್ರಕಾರ್ಯದಲ್ಲಿ ಬರೆದು ಇಟ್ಟುಕೊಂಡಿದ್ದ  ಟಿಪ್ಪಣಿಗಳಿಂದ ಹೊರೆ ತೆಗೆದ ಲೇಖನಗಳಲ್ಲಿ ಇದು ಒಂದು.
(ಪೊನ್ನುತಾಯಿ ಅವರ ಚಿತ್ರ ಕೃಪೆ- “ಹಿಂದೂಇಂಗ್ಲೀಷ್ ದಿನಪತ್ರಿಕೆ, ಚೆನ್ನೈ. ಮತ್ತು ಮಾಹಿತಿ ಸೌಜನ್ಯ- “ಆನಂದ ವಿಕಟನ್”, ತಮಿಳು ವಾರಪತ್ರಿಕೆ, ಚೆನ್ನೈ)
( ಕರಾವಳಿ ಮುಂಜಾವು ದಿನಪತ್ರಿಕೆಯ “ಜಗದಗಲ” ಅಂಕಣ ಬರಹ)