ಶುಕ್ರವಾರ, ಸೆಪ್ಟೆಂಬರ್ 28, 2018

ದಾಸ್ಯದಿಂದ ಆಚೆಗೆ: ಮಹಾನ್ ಹೋರಾಟಗಾರನೊಬ್ಬನ ಕಥನ ಕೃತಿ ಕುರಿತು

¸

ಕನ್ನಡ ವಾಜ್ಮಯ ಜಗತ್ತಿನಲ್ಲಿ ಡಾ,ಕೆ.ಪುಟ್ಟಸ್ವಾಮಿಯವರ ಹೆಸರು ಎದ್ದುಕಾಣುವಂತಹ ಹೆಸರು. ಪತ್ರಕರ್ತರಾಗಿ, ಲೇಖಕರಾಗಿ ವಿಭಿನ್ನ ಹಾಗೂ ಆಸಕ್ತಿದಾಯಕದಾಯಕ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಬರೆಯುತ್ತಾ ಬಂದವರಲ್ಲಿ ಮತ್ತು ಅನುವಾದಿಸುವವರಲ್ಲಿ ಮುಖ್ಯರಾದವರು. ಸ್ವಾತಂತ್ರ್ಯ ಪೂರ್ವದದಲ್ಲಿ ಡಿ.ವಿ. ಗುಂಡಪ್ಪ ಮತ್ತು ಸಿದ್ದವನಹಳ್ಳಿ ಕೃಷ್ಣ ಶರ್ಮ ಈ ಇಬ್ಬರು ಮಹನೀಯರು ಹುಟ್ಟು ಹಾಕಿದ ಈ ಭವ್ಯ ಪರಂಪರೆಯನ್ನು  ಪಿ.ಲಂಕೇಶರು ಎತ್ತಿ ಹಿಡಿಯುವುದರ ಮೂಲಕ ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ಬೆಸುಗೆ ಹಾಕಿದರು. ಆನಂತರದ ದಿನಗಳಲ್ಲಿ ನನ್ನ ತಲೆಮಾರಿನ ನಡುವೆ ನಮಗೆ ಎನ್.ಎಸ್.ಶಂಕರ್ ಮತ್ತು ಡಾ,ಕೆ,ಪುಟ್ಟಸ್ವಾಮಿ ಗಮನಾರ್ಹ ಬರಹಗಾರರಾಗಿ, ಅನುವಾದಕರಾಗಿ ಕಾಣುತ್ತಾರೆ.
ಮೂಲತಃ ವಿಜ್ಞಾನ ಪದವೀಧರರಾದ ಪುಟ್ಟಸ್ವಾಮಿಯವರು ಪತ್ರಕರ್ತರಾಗಿ ವೃತ್ತಿಯನ್ನು ಆರಂಭಿಸಿದ ದಿನಗಳಲ್ಲಿ ತಮ್ಮ ಕ್ರೀಡಾ ವರದಿಗಳು,  ಲೇಖನಗಳು ಹಾಗೂ ಸಿನಿಮಾ ಕುರಿತ ವಿಶ್ಲೇಷಣೆಗಳ ಮೂಲಕ  ಪ್ರಭಾವ ಬೀರಿದವರು.  ಕಥೆಗಳನ್ನು ಸಹ ಬರೆಯುತ್ತಿದ್ದ ಪುಟ್ಟಸ್ವಾಮಿಯವರು 1990 ರ ದಶಕದ ಆರಂಭದ ದಿನಗಳಲ್ಲಿ ಚಾರ್ಲ್ಸ್ ಡಾರ್ವಿನ್ನನ " ಅರಿಜನ್ ಆಫ್ ಸ್ಪೈಸಿಸ್' ಕೃತಿಯನ್ನು ಜೀವ ಸಂಕುಲಗಳ ಉಗಮ ಎಂಬ ಹೆಸರಿನಲ್ಲಿ ಅನುವಾದ ಮಾಡುವುದರ ಮೂಲಕ ತಮ್ಮಲ್ಲಿದ್ದ ದೈತ್ಯ ಪ್ರತಿಭೆಯನ್ನು ಕನ್ನಡದ ಜಗತ್ತಿನೆದುರು ಅನಾವರಣ ಮಾಡಿದರು. ಇದರ ಹಿಂದೆ ಬಂದ ಹಾಗೂ ಕೃಪಾಕರ್ ಸೇನಾನಿ ಜೊತೆಗೂಡಿ ರಚಿಸಿದ  ಕೃತಿ ಜೀವ ಜಾಲ ಪುಟ್ಟಸ್ವಾಮಿಯವರನ್ನು ಕನ್ನಡದ ಅತ್ಯುತ್ತಮ ವಿಜ್ಞಾನ ಲೇಖಕರಲ್ಲಿ ಮುಖ್ಯರು ಎಂಬುದನ್ನು ಸಾಭೀತು ಪಡಿಸಿತು. ಆರ್ಕಿಡ್ ಸಸ್ಯಗಳನ್ನು ಒಳಗೊಂಡತೆ ನಿಸರ್ಗದ ಜೀವ ಜಗತ್ತಿನ ಕುರಿತು ನೂರಾರು ಲೇಖನಗಳನ್ನು ಬರೆದಿರುವ ಇವರು, ತಾವು ಬರೆಯುತ್ತಿರುವ ಕೃತಿಗಳ ಮೂಲಕ ವೈವಿಧ್ಯತೆಯನ್ನೂ ಕಾಪಾಡಿಕೊಂಡವರು.
ವರ್ತಮಾನದ ಈ ದಿನಗಳಲ್ಲಿ ಕೃತಿಗಳ ಸಂಖ್ಯೆಯನ್ನು ಬೆನ್ನಿಗಿಟ್ಟುಕೊಂಡು ಬೀಗುವ ಟೊಳ್ಳು ಲೇಖಕರ ನಡುವೆ ಡಾ,ಕೆ,ಪುಟ್ಟಸ್ವಾಮಿ ಏಕೆ ಗಮನಾರ್ಹ ಲೇಖಕರಾಗಿ ಕಾಣುತ್ತಾರೆ ಎಂದರೆ, ಅವರು ಕನ್ನಡದ ಜಗತ್ತಿಗೆ ನೀಡಿದ ಬಹುತೇಕ ಕೃತಿಗಳು ಅಮೂಲ್ಯ ಕೃತಿಗಳಾಗಿ ಉಳಿದುಕೊಂಡಿವೆ. ಜೀವಸಂಕುಲಗಳ ಉಗಮ, ಕ್ರೀಡಾ ಲೋಕ ಕುರಿತಂತೆ ಬರೆದ " ಭುವನದ ಭಾಗ್ಯ" ಕನ್ನಡ ಸಿನಿಮಾ ಜಗತ್ತಿನ ಇತಿಹಾಸ ಕುರಿತ : ಸಿನಿಮಾ ಯಾನ" ( ಈ ಕೃತಿಗೆ ರಾಷ್ಟ್ರ ಪ್ರಶಸ್ತಿ ದೊರಕಿದೆ) ಗಾಂಧೀಜಿ ಕುರಿತಂತೆ ಕನ್ನಡ ಬಂದಿರುವ ಶ್ರೇಷ್ಟ ಕೃತಿಗಳಲ್ಲಿ ಒಂದಾಗಿರುವ ಸಹಸ್ರಬುದ್ಧೆಯವರ " ಆಧುನಿಕ ವಿಜ್ಞಾನಕ್ಕೆ ಗಾಂಧಿಯ ಸವಾಲುಗಳು" ಎಂಬ ಅನುವಾದಿತ ಕೃತಿ. ಇವೆಲ್ಲವೂ ಪುಟ್ಟಸ್ವಾಮಿಯವರ ಹೆಸರನ್ನು ಕನ್ನಡದ ಸಾಂಸ್ಕೃತಿಕ ಜಗತ್ತಿನಲ್ಲಿ ಚಿರಸ್ಥಾಯಿಗೊಳಿಸಿವೆ. ಇದೀಗ ಇದೇ ಸಾಲಿನಲ್ಲಿ ನಿಲ್ಲಬಲ್ಲ "ದಾಸ್ಯದಿಂದ ಆಚೆಗೆ" ಎಂಬ ಅಮೇರಿಕಾದ ಕಪ್ಪು ಜನಾಂಗದ ಜನನಾಯಕನೊಬ್ಬನ ಆತ್ಮ ಚರಿತ್ರೆಯ ಕೃತಿಯನ್ನು ನಮ್ಮ ಮುಂದಿರಿಸಿದ್ದಾರೆ. ( ಅಭಿನವ ಪ್ರಕಾಶನದ ಪ್ರಕಟಣೆ)  ಈವರೆಗೆ ನಾವು ಕೇಳದ, ಓದದ ಬೂಕರ್ ಟಿ.ವಾಷಿಂಗ್ ಟನ್ ಎಂಬ ದಾರ್ಶನಿಕ ಮನೋಭಾದ ವ್ಯಕ್ತಿಯ ಈ ಆತ್ಮಕಥೆ ಹಲವು ಕಾರಣಗಳಿಗಾಗಿ ಮುಖ್ಯ ಕೃತಿಯಾಗಿ ನಿಲ್ಲುತ್ತದೆ.

ಅಸಮಾನತೆ, ಲಿಂಗತಾರತಮ್ಯ, ವರ್ಣತಾರತಮ್ಯ, ಜನಾಂಗೀಯ ದ್ವೇಷ ಇವುಗಳ ನಿವಾಎರಣೆಗೆ ಸಂಘರ್ಷ, ಉಗ್ರ ಹೋರಾಟಗಳು ಆಯುಧ ಎಂದು ನಂಬಿಕೊಂಡಿದ್ದ ಕಾಲಘಟ್ಟದಲ್ಲಿ ತಮ್ಮನ್ನು ತುಳಿಯುತ್ತಿದ್ದ ಬಿಳಿಯರ ಜೊತೆ ಅನುಸಂಧಾನ ನಡೆಸುತ್ತಾ, ಮಾನವೀಯ ಗುಣವುಳ್ಳ ಬಿಳಿಯರನ್ನು ಗುರುತಿಸುತ್ತಾ, ಅವರ ನೆರವು ಪಡೆದು, ಕಪ್ಪು ಜನಾಂಗಕ್ಕೆ ದೊರಕಿಸಿಕೊಡಬಹುದಾದ ಶಿಕ್ಷಣ ಮತ್ತು ಜ್ಞಾನ ಬಹು ದೊಡ್ಡ ಆಯಧ ಎಂದು ಬದುಕಿ ತೋರಿಸಿದ ಈ ಮಹಾತ್ಮನ ಕಥೆ ಕನ್ನಡ ಲೋಕಕ್ಕೆ ಬಂದಿರುವುದು ನಿಜಕ್ಕೂ ಶ್ಲಾಘನೀಯವಾದುದು.
ಇಡೀ ಮನುಕುಲವೇ ನಾಚಿ ತಲೆತಗ್ಗಿಸುವಂತಹ ಗುಲಾಮರ ವ್ಯಾಪಾರ ಹಾಗೂ ಅವರ ಶೋಷಣೆಯ ಇತಿಹಾಸವು  ಜಗತ್ತಿನ ಚರಿತ್ರೆಯ ಪುಟಗಳಲ್ಲಿ  ಕರಾಳ ಹಾಗೂ ಕಪ್ಪು ಅಧ್ಯಾಯವಾಗಿ ದಾಖಲಾಗಿದೆ. 1492 ರಲ್ಲಿ ಕೊಲಂಬಸ್ ಅಮೇರಿಕಾವನ್ನು ಕಂಡು ಹಿಡಿದ ನಂತರ, ಈ ಗುಲಾಮಗಿರಿಯ ವೃತ್ತಿ  ತನ್ನ ಪರಾಕಾಷ್ಟೆಯನ್ನು ಮುಟ್ಟಿತು. ಆಫ್ರಿಕಾದ ಮುಗ್ಧ ಹಾಗೂ ಅನಕ್ಷರಸ್ತ ಕಪ್ಪು ಜನರನ್ನು ಅಮೇರಿಕಾ ಮತ್ತು ಇಂಗ್ಲೇಂಡ್ ರಾಷ್ಟ್ರಗಳು ತಮ್ಮ ಗುಲಾಮರನ್ನಾಗಿ ಮಾಡಿಕೊಂಡು ತಮ್ಮ ತೋಟಗಳಲ್ಲಿ ಪ್ರಾಣಿಗಳಂತೆ ದುಡಿಸಿಕೊಂಡಿವು. . ಇಂತಹ ನತದೃಷ್ಟರ ನಡುವೆ  ಅಮೇರಿಕಾದ ತೋಟವೊಂದರಲ್ಲಿ ಜೀತದಾಳಾಗಿದ್ದ ನತದೃಷ್ಟ ಕಪ್ಪು ಹೆಣ್ಣು ಮಗಳೊಬ್ಬಳ ಉದರಲ್ಲಿ ಜನಿಸಿದ ಬೂಕರ್ ಟಿ.ವಾಷಿಂಗ್ ಟನ್ ಮುಂದಿನ ದಿನಗಳಲ್ಲಿ  ಕಪ್ಪುಜನರ ಘನತೆ, ಸ್ವಾಭಿಮಾನ ಹಾಗೂ ಮಾನವೀತೆಯ ಪ್ರತೀಕವಾಗಿ ಬದುಕಿ ಬಾಳುವುದರ ಮೂಲಕ  ಯಾವುದೋ ಒಂದು ಪುರಾಣ ಮಹಾಕಾವ್ಯದ ನಾಯಕನಂತೆ ಗೋಚರಿಸುತ್ತಾರೆ. ಬೂಕರ್ ವಾಷಿಂಗ್ ಟನ್  ಬದುಕಿದ್ದು 1856ರಿಂದ 1915 ರವರೆಗೆ ಮಾತ್ರ. ಆದರೆ, ತನ್ನ ಐವತ್ತೊಂಬತ್ತು ವರ್ಷಗಳ  ಅವಧಿಯಲ್ಲಿ ಉಪ್ಪಿನ ಗಣಿಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ತನ್ನ ಮಲತಂದೆಯ ಆಶ್ರಯದಲ್ಲಿ ಗಣಿ ಮಾಲಿಕನೊಬ್ಬ  ತಂದೆಗೆ ನೀಡಿದ್ದ 18 ಎಂಬ ಗುಲಾಮಗಿರಿಯ ಸಂಖ್ಯೆಯ ಮೇಲೆ ಮೋಹಗೊಂಡು, ಬಾಲ್ಯದಲ್ಲಿ ತಾನು ಪತ್ರಿಕೆ ಓದುವಷ್ಟು ವಿದ್ಯಾವಂತನಾಗಬೇಕೆಂದು ಕನಸು ಕಾಣುತ್ತಾ ಅಕ್ಷರ ಲೋಕಕ್ಕೆ ಕಾಲಿರಿಸಿದವನು.ನಂತರ 1875 ರ ವೇಳೆಗೆ  ಪದವಿ ಪಡೆದು ನಿಗ್ರೋ ಜನಾಂಹಕ್ಕೆ ಹೆಮ್ಮೆಯ ಪುತ್ರ ಎನಿಸಿದವರು.
ಆ ಕಾಲಘಟ್ಟದಲ್ಲಿ ಪದವಿ ಪಡೆದವರೆಲ್ಲಾ ಅಮೇರಿಕಾದಲ್ಲಿ ಶ್ರೇಷ್ಟ ಹಾಗೂ ಉನ್ನತ ಹುದ್ದೆ ಅಲಂಕರಿಸುತ್ತ ದಿನಗಳು. ವಾಷಿಂಗ್ಟನ್ .ಮನಸ್ಸು ಮಾಡಿದ್ದರೆ, ಬಿಳಿಯರ ಮನವೊಲಿಸಿ ಉನ್ನತ ಹುದ್ದೆಯಲ್ಲಿ ವೈಭವದ ಜೀವನ ನಡೆಸಬಹುದಿತ್ತು. ಆದರೆ, ಅವರು ಹಸಿವು, ಅಪಮಾನ ಮತ್ತು ದಾರಿದ್ರ್ಯ ಕೂಪದಿಂದ ತಾನು ಮತ್ತು ತನ್ನ ಕುಟುಂಬ ಪಾರಾದರೆ ಸಾಲದು, ಇಡೀ ಸಮುದಾಯ ಗುಲಾಮಗಿರಿಯ ದಾಸ್ಯದಿಂದ ಮತ್ತು ಅಜ್ಞಾನದಿಂದ ಆಚೆಗೆ ಬರಬೇಕೆಂದು ಕನಸು ಕಾಣುವುದರ ಮೂಲಕ ತ್ಯಾಗದ ಜೀವನಕ್ಕೆ ಬದುಕನ್ನು ಮುಡಿಪಾಗಿಟ್ಟರು.
ನಿಗ್ರೊ ಮಕ್ಕಳ ಶಿಕ್ಷಣಕ್ಕೆ ಟೆಸ್ಕಜೀ ಎಂಬಲ್ಲಿ ವಸತಿ ಶಾಲೆಯನ್ನು ಸ್ಥಾಪಿಸಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸ್ವಾವಲಂಬಿ ಬದುಕನ್ನು ಬುದುಕುವ ಮಾರ್ಗವನ್ನು ತೋರಿದರು. ನಿಗ್ರೋ ಸಮುದಾಯದ ಅಭ್ಯುದಯಕ್ಕಾಗಿ ಉದಾರ ಮನಸ್ಸಿನ ಬಿಳಿಯರ ಮನವೊಲಿಸಿ ಅವರ ಸಹಕಾರದಿಂದ ಸಾವಿರಾರು ಮಕ್ಕಳಿಗೆ ಶಿಕ್ಷಣವನ್ನು ಧಾರೆಯೆರೆದರು. ದಾಸ್ಯದಿಂದ ಬಿಡುಗಡೆಗಾಗಿ ಹಿಂಸೆಯ ಹಾದಿ ತುಳಿದಿದ್ದ ಹಲ ಕಪ್ಪು ಜನಾಂಗದ ನಾಯಕರಿಗೆ ಬೂಕರ್ ವಾಷಿಂಗ್ ಟನ್ ಅವರ ನಿಲುವುಗಳ ಬಗ್ಗೆ ಸಹಮತವಿರಲಿಲ್ಲ. ಆದರೆ, ಸಂಘರ್ಷವಿದ್ದಲ್ಲಿ ಮನುಷ್ಯ-ಮನುಷ್ಯ ನಡುವೆ ಸಂವಹನ ಮತ್ತು ಸಂಬಂಧ ಸಾಧ್ಯವಿಲ್ಲ ಎಂಬಿದ್ದ ಅವರು ತಮ್ಮ ಜನಾಂಗದ ಏಳಿಗೆಗಾಗಿ ದುಡಿಯುತ್ತಾ ಶಿಕ್ಷಣ ಸಂಸ್ಥೆಯನ್ನು ಅಭಿವೃದ್ಧಿ ಪಡಿಸಿದ ಕಥನ ಈ ಕೃತಿಯಲ್ಲಿ ರೋಚಕವಾಗಿ ಮೂಡಿ ಬಂದಿದೆ.

ಅಂದಿನ ಅಮೇರಿಕಾದ ಅಧ್ಯಕ್ಷ ರೂಸ್ ವೆಲ್ಟ್ ಅವರನ್ನು ತಮ್ಮ ಶಾಲೆಗೆ ಆಹ್ವಾನಿಸಿದ ವಾಷಿಂಗ್ ಟನ್ ಅಧ್ಯಕ್ಷರ ಶ್ವೇತಭವನಕ್ಕೆ ಅತಿಥಿಯಾಗಿ ಆಹ್ವಾನ ಪಡೆದ ಪ್ರಥಮ ಕರಿಯ ಜನಾಂಗದ ನಾಯಕ ಎಂಬ ಕೀರ್ತಿಗೆ ಪಾತ್ರರಾದರು. ಅತ್ಯುತ್ತಮ ವಾಗ್ಮಿಯಾಗಿದ್ದ ಅವರು ಮಾತಿನ ಮೂಲಕ ಎಲ್ಲರ ಮನಗೆದ್ದಿದ್ದರು. ವಾಷಿಂಗ್ ಟನ್ ಅವರ ಪ್ರಭಾವ ಅಮೇರಿಕಾದಲ್ಲಿ ಹೇಗಿತ್ತು ಎಂಬುದಕ್ಕೆ ಅವರು ತಮ್ಮ ಆತ್ಮಕಥೆಯ ಕೊನೆಯ ಪುಟದಲ್ಲಿ ದಾಖಲಿಸಿರುವ ಮಾತುಗಳಿವು.
" ಈಗ ರಿಚ್ಮಂಡ್ ನಗರಕ್ಕೆ ಅತಿಥಿಯಾಗಿ ಬಂದಿದ್ದೇನೆ.ನಗರದ ಅತಿ ದೊಡ್ಡ ಹಾಗೂ ಸುಂದರವಾದ ಅಕಾಡೆಮಿ ಆಫ್ ಮ್ಯೂಸಿಕ್ ಸಂಸ್ಥೆಯ ಸಭಾಂಗಣದಲ್ಲಿ ನನ್ನ ಎರಡು ಜನಾಂಗವಿದ್ದ  ಸಭೆಯನ್ನು ಉದ್ದೇಶಿಸಿ ಉಪನ್ಯಾಸ ಮಾಡಿದೆ. ಕರಿಯರಿಗೆ ಈ ಸಭಾಂಗಣಕ್ಕೆ ಪ್ರವೇಶ ದೊರೆತದ್ದು ಇದೇ ಮೊದಲ ಬಾರಿ. ನಾನು ಇಲ್ಲಿಗೆ ಬರುವ ಹಿಂದಿನ ದಿನ ನಗರ ಸಭೆಯ ಎಲ್ಲಾ ಸದಸ್ಯರೆಲ್ಲರೂ ಹಾಜರಿರಬೇಕೆಂದು ನಿರ್ಣಯವಾಗಿತ್ತು.  ಅದೇ ರೀತಿ ರಾಜ್ಯ ಶಾಸನ ಸಭೆ ಮತ್ತು ಸೆನೆಟ್ ಸದಸ್ಯರು ಭಾಗವಹಿಸಬೇಕೆಂದು ಠರಾವು ನೀಡಲಾಗಿತ್ತು. ನೂರಾರು ಕರಿಯರಿದ್ದ, ಅನೇಕ ಬಿಳಿಯ ಪ್ರತಿಷ್ಟಿತರಿದ್ದ ನಗರ ಸಭೆ, ಶಾಸನಸಭೆಯ ಸೆನೆಟ್ ನ ಸದಸ್ಯರು ಉಪಸ್ಥಿತರಿದ್ದ ಸಭೆಯಲ್ಲಿ ನಾನು ಭರವಸೆ ಮತ್ತು ಸಂತೋಷವನ್ನು ಬಿತ್ತುವ ಸಂದೇಶದ ಉಪನ್ಯಾಸ ನೀಡಿದೆ. ನನಗೆ ಜನ್ಮ ನೀಡಿದ ರಾಜ್ಯಕ್ಕೆ, ವಾಪಸ್ ಕರೆಸಿದ ಎರೆಡೂ ಜನಾಂಗದ ಸಜ್ಜನರಿಗೆ ನಾನು ಹೃದಯತುಂಬಿದ ವಂದನೆಗಳನ್ನು ಸಲ್ಲಿಸಿದೆ"

ವಾಷಿಂಗ್ ಟನ್ ತನ್ನ ಬಡತನ, ಅಪಮಾನಗಳನ್ನು ಮೀರಿ ಸಂಯಮದ ದೃಷ್ಟಿಕೋನದಿಂದ ಬದುಕನ್ನು ಸ್ವೀಕರಿಸಿ ಯಶಸ್ವಿಯಾದ ಒಂದು ಶತಮಾನದ ಹಿಂದಿನ ಆತ್ಮಕಥನವನ್ನು ಲೇಖಕ ಮಿತ್ರ ಪುಟ್ಟಸ್ವಾಮಿಯವರು ಅಷ್ಟೇ ಪರಿಣಾಮಕಾರಿಯಾಗಿ ಅನುವಾದಿಸಿದ್ದಾರೆ. ಈ ಕೃತಿ ಒಬ್ಬ ಕೇವಲ  ಕಪ್ಪು ಜನಾಂಗದ ನಾಯಕನೊಬ್ಬನ ಕಥೆಯಾಗಿರದೆ, ಅಮೇರಿಕಾದಲ್ಲಿ ನಡೆದ ಕಪ್ಪು ವರ್ಣಿಯರ ಹೋರಾಟದ ಕಥನವನ್ನು ಸಹ ಒಳಗೊಂಡಿದೆ. ಇಲ್ಲಿನ ಅನೇಕ ಮಹನೀಯರ ಭಾವಚಿತ್ರಗಳೊಂದಿಗೆ ಇರುವ ವಿವರಗಳು ಇಡೀ ಹೋರಾಟದ ಇತಿಹಾಸಕ್ಕೆ ಪೂರಕವಾಗಿವೆ. ಈ ಮಾಹಿತಿ ಕೃತಿಯ ಘನತೆಯನ್ನು ಹೆಚ್ಚಿಸಿದೆ. ಕನ್ನಡದ ಜಗತ್ತಿಗೆ ಇಂತಹ ಅಪರೂಪದ ಕೃತಿ ನೀಡಿದ ಲೇಖಕರು ನಿಜಕ್ಕೂ ಅಭಿನಂದನಾರ್ಹರು.

ಶುಕ್ರವಾರ, ಸೆಪ್ಟೆಂಬರ್ 21, 2018

ಮಧ್ಯಮ ಮಾರ್ಗದ ಪ್ರತಿಪಾದಕ : ಗಿರಡ್ಡಿ ಗೋವಿಂದರಾಜರ ನೆನಪುಗಳು






ಕನ್ನಡ ಸಾಂಸ್ಕøತಿಕ ಲೋಕದ ಪರಿಚಾರಕರಂತಿದ್ದ ಡಾ.ಗಿರಡ್ಡಿ ಗೋವಿಂದರಾಜರು ನಿಧನರಾಗಿ ಐದು ತಿಂಗಳಾಯಿತು. ಅವರ ನಿರ್ಗಮನದೊಂದಿಗೆ ಧಾರವಾಡ ಮತ್ತು ಕನ್ನಡದ ಸಾಹಿತ್ಯಲೋಕದಲ್ಲಿ ಸೃಷ್ಟಿಯಾದ ಶೂನ್ಯ ಬಹುಕಾಲ ನಮ್ಮನ್ನೆಲ್ಲಾ ಕಾಡುವಂತಹದ್ದು. ಸಂಶೋಧನೆಯ ಕ್ಷೇತ್ರದಲ್ಲಿ ಮಾರ್ಗದರ್ಶಕರಂತಿದ್ದ ಡಾ.ಎಂ.ಎಂ.ಕಲ್ಬುರ್ಗಿ ಮತ್ತು ವಿಮರ್ಶೆಯ ಲೋಕದಲ್ಲಿ ಮಾದರಿಯಾಗಿದ್ದ ಗಿರಡ್ಡಿ  ಇಬ್ಬರು ದಿಗ್ಗಜರ ಅಗಲಿಕೆಯ ನೋವನ್ನು ಜೀರ್ಣಿಸಿಕೊಳ್ಳುವುದು ಅವರ ಒಡನಾಡಿಗಳ ಪಾಲಿಗೆ ಸುಲಭದ ಸಂಗತಿಯಲ್ಲ.
ಧಾರವಾಡ ಮಣ್ಣಿನ ಹಾಗೂ ಇಲ್ಲಿನ ನೆಲಮೂಲ ಸಂಸ್ಸøತಿಯ  ವಾರಸುದಾರರಂತೆ ಬದುಕಿದ್ದ ಇಂತಹ  ಮಹಾನ್ ವಿದ್ವಾಂಸರ ಜೀವನ ಮತ್ತು ಸಾಧನೆಯನ್ನು ಸ್ಮರಣೆಯ ನೆಪದಲ್ಲಿ ಜೀವಂತವಾಗಿಡಲು ಅವರ ಅನೇಕ ಒಡನಾಡಿಗಳು ಮತ್ತು ಶಿಷ್ಯರು ಶ್ರಮಿಸುತ್ತಿದ್ದಾರೆ. ನಿಟ್ಟಿನಲ್ಲಿ ಗಿರಡ್ಡಿ ಗೋವಿಂದರಾಜರ ಜನ್ಮ ದಿನವಾದ ಇಂದು (22-9-2018) ಧಾರವಾಡದಲ್ಲಿಗಿರಡ್ಡಿ ಗೋವಿಂದರಾಜ ಪ್ರತಿಷ್ಟಾನಎಂಬ ಸಾಂಸ್ಕೃತಿಕ ಸಂಸ್ಥೆ ಆರಂಭಗೊಳ್ಳುತ್ತಿದೆ. ಇದರ ಜೊತೆಗೆ ಅವರ ಆಸಕ್ತಿಯ ವಿಷಯಗಳಲ್ಲಿ ಒಂದಾದಬದಲಾಗುತ್ತಿರುವ ಜಗತ್ತುಕುರಿತು ರಾಷ್ಟ್ರೀಯ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿದೆ. ಇದಲ್ಲದೆ, ಸಂಜೆ ಅವರ ಸಾಹಿತ್ಯ ಕೃತಿಗಳ ಆಧಾರಿತಆಮುಖ- ಮುಖನಾಟಕವನ್ನು  ಸಹ ಆಯೋಜಿಸಲಾಗಿದೆ.
ಅರವತ್ತು ವರ್ಷಗಳ ಸುಧೀUರ್ಘ  ಕಾಲ ಡಾ. ಗಿರಡ್ಡಿಗೋವಿಂದರಾಜು ಕನ್ನಡ ಸಾಹಿತ್ಯ ಮತ್ತು ರಂಗಭೂಮಿ ಹಾಗೂ ಜಾನಪದ ಕ್ಷೇತ್ರದಲ್ಲಿ ಒಡನಾಟವಿರಿಸಿಕೊಂಡು ಸೃಷ್ಟಿಸಿದ ಸಾಹಿತ್ಯ, ನೀಡಿದ ಉಪನ್ಯಾಸಗಳು ಮತ್ತು ಸಂಪಾದಿಸಿಕೊಟ್ಟ ಕೃತಿಗಳು ಇವೆಲ್ಲವೂ ಕನ್ನಡದ ಸಾಂಸ್ಕತಿಕ ಲೋಕವನ್ನು ಶ್ರೀಮಂತಗೊಳಿಸಿವೆ. ಗಿರಡ್ಡಿಯವರು ಕೈ ಆಡಿಸದೆ ಇರುವ ಕ್ಷೇತ್ರಗಳಿಲ್ಲ. ಕಥೆ, ಕಾವ್ಯ, ನಾಟಕ, ವಿಮರ್ಶೆ, ಪ್ರಬಂಧ, ಸಂಪಾದನೆ, ಅನುವಾದ ಹಾಗೂ ಸಾಹಿತ್ಯ ಪತ್ರಿಕೆಯ ಸಂಪಾದಕ ಹೀಗೆ ಹಲವು ಕ್ಷೇತ್ರಗಳಲ್ಲಿ ಅವರ ದೈತ್ಯ ಪ್ರತಿಭೆಯ ಹರವು ಹರಡಿದೆ. ತಾವು ಕೈ ಆಡಿಸಿದ ಪ್ರಕಾರದಲ್ಲಿ ತಮ್ಮ ವ್ಯಕ್ತಿತ್ವ ಹಾಗೂ ಪ್ರತಿಭೆಯ ಛಾಪನ್ನು ಒತ್ತುವುದರ ಮೂಲಕ ಕನ್ನಡದ ಎಲ್ಲಾ ಕ್ಷೇತ್ರಗಳಲ್ಲೂ ಗಿರಡ್ಡಿಯವರು ತಮ್ಮ ಹೆಸರನ್ನು ಅವಿಸ್ಮರಣೀಯಗೊಳಿಸಿದ್ದಾರೆ.
ತಮ್ಮ ಸಾಹಿತ್ಯ ಕೃಷಿಯ  ಆರಂಭದ ದಿನಗಳಲ್ಲಿ  ಎರಡು ಕವನ ಸಂಕಲಗಳನ್ನು ಹೊರ ತಂದಿದ್ದ ಗಿರಡ್ಡಿಯವರು ಮರ್ಲಿನ್ ಮನ್ರೊ ಕಾವ್ಯ ಸಂಕಲನದ ಮೂಲಕ ಸಾಹಿತ್ಯ ಲೋಕದ ಗಮನ ಸೆಳೆದಿದ್ದರು. ಆನಂತರದ ದಿನಗಳಲ್ಲಿ  ಅವರು ಕಥಾ ಕ್ಷೇತ್ರದತ್ತ ಹೊರಳಿ, ಬರೆದ ಹಂಗು ಮತ್ತು ಮಣ್ಣು ಎಂಬ ನೀಳ್ಗತೆ ಇವುಗಳು ಕನ್ನಡ ಕಥಾಲೋಕದಲ್ಲಿ ಅನನ್ಯ ಕಥೆಗಳಾಗಿ ಉಳಿದುಕೊಂಡವು. ಇವುಗಳಲ್ಲಿ ಹಂಗು ಕಥೆ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲರು 1976 ರಲ್ಲಿ ನಿರ್ಮಿಸಿದ  ಕಥಾ ಸಂಗಮಎಂಬ ಸಿನಿಮಾದ ಮೂರು ಕಥೆಗಳಲ್ಲಿ ಒಂದಾಗಿರುವುದು ವಿಶೇಷ. ( ಸಿನಿಮಾ ರಜನಿಕಾಂತ್ ಅವರ ಮೊದಲ ಸಿನಿಮಾ ಕೂಡ ಹೌದು)  ಧಾರವಾಡದ ಕರ್ನಾಟಕ ವಿ.ವಿ.ಯಿಂದ ಕನ್ನಡದಲ್ಲಿ ಎಂ..  ಪದವಿ ಹಾಗೂ  ಇಂಗ್ಲೆಂಡಿನಲ್ಲಿ ಇಂಗ್ಲೀ ಷ್ ವಿಷಯದ ಭಾಷಾ ಶಾಸ್ತ್ರದಲ್ಲಿ ಎಂ.. ಪದವಿ ಪಡೆದಿದ್ದ ಗಿರಡ್ಡಿಯವರು ನಂತರ ಗುಲ್ಬರ್ಗಾ ವಿ.ವಿ.ಯಲ್ಲಿ ಶೈಲಿ ಶಾಸ್ತ್ರ ಕುರಿತಂತೆ ಪಿ.ಹೆಚ್.ಡಿ ಪದವಿ ಹಾಗೂ ಹೈದರಾಬಾದಿನ ಸೆಂಟ್ರಿಲ್ ಇನ್ಸಿಟ್ಯೂಟ್ ಆಫ್ ಇಂಗ್ಲೀಷ್ ಸಂಸ್ಥೆಯಿಂದ ಡಿಪ್ಲಮೊ ಇನ್ ಇಂಗ್ಲೀಷ್ನಲ್ಲಿ  ಪದವಿಯನ್ನು ಪಡೆದಿದ್ದರು. ಹೀಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ಮೇಲೆ ಅವರಿಗಿದ್ದ ಆಳವಾದ ಜ್ಞಾನ ಮತ್ತು ವಿದ್ವತ್ತು ಕನ್ನಡದ ವಿಮರ್ಶೆಯ ಲೋಕಕ್ಕೆ ವರವಾಗಿ ಪರಿಣಮಿಸಿತು.
1970 ದಶಕದಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ವಿಮರ್ಶೆಯ ಪರಂಪರೆಯನ್ನು ಹುಟ್ಟು ಹಾಕಿದ ಆದ್ಯರಲ್ಲಿ ಒಬ್ಬರಾದ ಡಾ.ಗಿರಡ್ಡಿ ಗೋವಿಂದರಾಜರು ತಮ್ಮ ವಸ್ತುನಿಷ್ಟ ಶೈಲಿಯಿಂದ ಕನ್ನಡ  ಕಥೆ ಮತ್ತು ಕಾವ್ಯ ಹಾಗೂ ಕಾದಂಬರಿ ಇವುಗಳ ಕಥಾವಸ್ತು, ಭಾಷೆ ಮತ್ತು ಶೈಲಿ ಇವುಗಳನ್ನು ವಿಮರ್ಶಿಸುತ್ತಾ, ಲೇಖಕ ಮತ್ತು ಓದುಗನ ನಡುವೆ ಸಂವಹನ ಸೇತುವೆಯಾಗಿ ಕಾರ್ಯನಿರ್ವಹಿಸುವುದರ ಜೊತೆಗೆ  ಓದುಗರ ಅಭಿರುಚಿಯ ದಿಕ್ಕನ್ನು ಬದಲಿಸಿದವರಲ್ಲಿ ಮುಖ್ಯರು. 70 ಮತ್ತು 80 ದಶಕದಲ್ಲಿ ನಿರಂತರವಾಗಿ ಹದಿನೈದು ವಿಮರ್ಶಾ ಕೃತಿಗಳನ್ನು ಬರೆದ ಕೀರ್ತಿ ಗಿರಡ್ಡಿಯವರದು. ತಾವು ಇಂಗ್ಲೆಂಡಿನಲ್ಲಿದ್ದ ಸಮಯದಲ್ಲಿ ಅಲ್ಲಿನ ರಂಗಭೂಮಿ ಕುರಿತಂತೆ ಆಸಕ್ತಿ ಬೆಳೆಸಿಕೊಂಡಿದ್ದ ಅವರು ಭಾರತಕ್ಕೆ ಹಿಂತಿರುಗಿದ ನಂತರ ರಚಿಸಿದ ಇಂಗ್ಲೇಡಿನ ರಂಗಭೂಮಿಎಂಬ ಕೃತಿ ಕನ್ನಡ ರಂಗಭೂಮಿಗೆ ಅಮೂಲ್ಯ ಕೊಡುಗೆಯಾಗಿದೆ.. ವೃತ್ತಿಯಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರೂ ಸಹ ತಮ್ಮ ಬದುಕಿನುದ್ದಕ್ಕೂ ಕನ್ನಡವನ್ನು ಧ್ಯಾನಿಸಿದ ಗಿರಡ್ಡಿಯವರು ವಚನ ಸಾಹಿತ್ಯ ಕುರಿತಂತೆ ಹಾಗೂ ಜಾನಪದ ಸಾಹಿತ್ಯ ಕುರಿತಂತೆ ಅಧಿಕಾರಯುತವಾಗಿ ಮಾತನಾಡಬಲ್ಲ, ಬರೆಯಬಲ್ಲ ವಿದ್ವಾಂಸರಲ್ಲಿ ಒಬ್ಬರಾಗಿದ್ದರು.
 ಬದುಕು, ಬರೆವಣಿಗೆ ಹಾಗೂ  ಸಾಮಾಜಿಕ ಚಟುವಟಿಕೆ ಇವುಗಳಲ್ಲಿ ನಿರಂತವಾಗಿ ಅರವತ್ತು ವರ್ಷಗಳ ಕಾಲ ತೊಡಗಿಸಿಕೊಂಡಿದ್ದರೂ ಸಹ ಗಿರಡ್ಡಿಯವರದು ಎಂದಿಗೂ  ಆರ್ಭಟ ಅಥವಾ ಅಬ್ಬರದ ನಡುವಳಿಕೆಯಲ್ಲ.  ತಮ್ಮ ವಸ್ತು ನಿಷ್ಟ ನೆಲೆಯಿಂದ ಅತ್ತ ಇತ್ತ ಕದಲದೆ ಹೇಳಬೇಕಾದ ನಿಷ್ಟುರ ಸತ್ಯಗಳನ್ನು ಅತ್ಯಂತ ಮೆದುಮಾತಿನಲ್ಲಿ ಹೇಳುತ್ತಾ ಬಂದರು. ಬೀದಿಗಳಿದು ಘೋಷಣೆ ಕೂಗಿದರೆ ಮಾತ್ರ ಪರಿವರ್ತನೆಯ ಹರಿಕಾರರು ಮತ್ತು ಕ್ರಾಂತಿಕಾರರು ಎಂದು ನಂಬಿರುವ ಕಾಲಘಟ್ಟದಲ್ಲಿ ಅವರು ತಮ್ಮ ಸಾಹಿತ್ಯ ಮತ್ತು ಸಾಂಸ್ಕøತಿಕ ಚಿಂತನೆಗಳ ಮೂಲಕ ಸಮಾಜದಲ್ಲಿ ಸದ್ದಿಲ್ಲದೆ ಮೌನ ಕ್ರಾಂತಿಯನ್ನು ಸೃಷ್ಟಿಸಿದರು. ಕಾರಣಕ್ಕಾಗಿ ಅತಿರೇಖದ ತುತ್ತ ತುದಿಗಳಂತಿರುವ ಎಡ ಮತ್ತು ಬಲಗಳ ತಾತ್ವಿಕ ಮಾರ್ಗವನ್ನು ತುಳಿಯಲು ನಿರಾಕರಿಸಿದ ಅವರು ಬುದ್ಧ ಮತ್ತು ಗಾಂಧೀಜಿಯವರು ಪ್ರತಿಪಾದಿಸಿದ ಮಧ್ಯಮ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ನನ್ನ ತಲೆ ಮಾರಿನ ಅನೇಕರಿಗೆ ಮಾಗದರ್ಶಕರಾಗಿದ್ದರು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುಬೆ ಸಂವಹನ, ಮಾತುಕತೆ ಅಥವಾ  ಚರ್ಚೆ ಇಂತಹ ಕ್ರಿಯೆಗಳು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿರುವ ಕಾಲಘಟ್ಟದಲ್ಲಿ ಅಸಹಿಷ್ಣುತೆ ಮತ್ತು ಹಿಂಸೆಯ ಹಿಂದಿನ ಕಾರಣಗಳನ್ನು ಗ್ರಹಿಸಲಾರದಷ್ಟು ಅಸೂಕ್ಷಮತೆ ನಾವು ಒಳಗಾಗಿದ್ದೆವೆ. ಈಕಾರಣದಿಂದಾಗಿ   ನಮಗಿನ್ನೂ ಗಿರಡ್ಡಿಯವರು ಪ್ರತಿಪಾದಿಸಿದ ಮಧ್ಯಮ ಮಾರ್ಗ ಸಮಗ್ರವಾಗಿ ಅರ್ಥವಾಗಿಲ್ಲ. ಧರ್ಮ ಅಥವಾ ಪಂಥಗಳ ನಡುವಿನ ಚಿಂತನೆಗ¼ ಕೊಡುಕೊಳೆಗೆ ಆಸ್ಪದವಿಲದೆ ಅನೇಕ ಬಗೆಯ ತಲ್ಲಣಗಳಿಗೆÀ ಪಲ್ಲಟಗಳಿಗೆ ಕಾರಣವಾಗುತ್ತಿರುವ ದಿನಮಾನಗಳಲ್ಲಿ ಗಿರಡ್ಡಿಯರ ಮಧ್ಯಮ ಮಾರ್ಗದ ಮಹತ್ವ  ಅರಿವಾಗತೊಡಗಿದೆ.

ಸಾಹಿತ್ಯದದಲ್ಲಿ ಅನೇಕ ಪಂಗಡಗಳಾಗಿ ದ್ವೀಪದಂತೆ ಬರಹಗಾರರು ಬದುಕುತ್ತಿದ್ದ ಸಂದರ್ಭದಲ್ಲಿ ಹಾಗೂ ಸಾಹಿತ್ಯ ಸಮ್ಮೇಳನಗಳು ಜಾತ್ರೆಯ ಸ್ವರೂಪ ಪಡೆದುಕೊಡು ಸಾಹಿತ್ಯ ಸಂವಾದ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ,  ಆರು ವರ್ಷಗಳ ಹಿಂದೆ ಧಾರವಾಡದಲ್ಲಿ ಗಿರಡ್ಡಿಯವರು ತಮ್ಮ ಸಹಪಾಠಿ ಎಂ.ಎಂ.ಕಲ್ಬುರ್ಗಿಯವರ ಜೊತೆಗೂಡಿ  ಪ್ರಜಾವಾಣಿ ಸಹಭಾಗಿತ್ವದಲ್ಲಿ ಹುಟ್ಟು ಹಾಕಿದಧಾರವಾಡ ಸಾಹಿತ್ಯ ಸಂಭ್ರಮಎಂಬ ಕಾರ್ಯಕ್ರಮ ಇದೀಗ ಸಾಹಿತ್ಯದ ಮೈಲಿಗಲ್ಲಾಗಿದೆ. ಎಲ್ಲಾ ಬಗೆಯ ನಂಬಿಕೆ ಮತ್ತು ದೃಷ್ಟಿಕೋನದ ಬರಹಗಾರರು ಹಾಗೂ ಓದುಗರು ಒಂದೆಡೆ ಕಲೆತು ಸಾಹಿತ್ಯ, Àಂಸ್ಕøತಿ ಮತ್ತು ಕಲೆ ಹೀಗೆ ವಿವಿಧ ವಿಷಯಗಳ ಕುರಿತು ಮೂರು ದಿನಗಳ ಕಾಲ  ಗಂಭೀರವಾಗಿ ಚರ್ಚಿಸುವುದು ಸುಲಭದ ಮಾತಲ್ಲ., ಇಂತಹ ಪರಂಪರೆಯನ್ನು ಹುಟ್ಟು ಹಾಕಿದ ಕೀರ್ತಿ ಗಿರಡ್ಡಿಯವರದು.
ಇತ್ತೀಚೆಗಿನ ದಿನಗಳಲ್ಲಿ ವಿಮರ್ಶೆಯಿಂದ ಕಳಚಿಕೊಂಡು ಲಲಿತ ಪ್ರಬಂಧಗಳನ್ನು ರಚಿಸುತ್ತಾ ಓದುಗರಲ್ಲಿ ಆಹ್ಲಾದಕರ ಹಾಗೂ ಪ್ರಫುಲ್ಲವಾದ ಮನಸ್ಸನ್ನು ಸೃಷ್ಟಿ ಮಾಡಿದ್ದ ಅವರು,  ದೇವದತ್ತ ಪಟ್ನಾಯಕ್ ಅವರ ಜಯ ಎಂಬ ಮಹಾಭಾರತz ಇಂಗ್ಲೀಷ್À ಕೃತಿಯನ್ನು ಕನ್ನಡಕ್ಕೆ ಅನುವಾದಿಸುವುದರ ಮೂಲಕ  ಅನುವಾದದ ಶೈಲಿ ಮತ್ತು ಕ್ರಿಯೆ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟಿದ್ದರು. ಇದು ಅವರ ಪಾಲಿಗೆ ಕೊನೆಯ ಕೃತಿಯಾಯಿತು.
ಇಂದು ಗಿರಡ್ಡಿಗೋವಿಂದರಾಜರು ನಮ್ಮೊಡನಿಲ್ಲ ಆದರೆ, ಅವರ ಸಾಹಿತ್ಯಕೃತಿಗಳು, ಅವರ ಗಂಭೀರವಾದ ಚರ್ಚೆ, ತಿಳಿಹಾಸ್ಯ, ತನ್ನ ಶಿಷ್ಯ ಬಳಗಕ್ಕೆ ಸಾಹಿತ್ಯವನ್ನು ಉಣಬಡಿಸುತ್ತಿದ್ದ ರೀತಿ ಇವೆಲ್ಲವೂ ಅವರ ನೆನಪುಗಳ ಜೊತೆ ನಮ್ಮೊಳಗೆ ಸದಾ ಹಸಿರಾಗಿರುತ್ತವೆ.
( ಇಂದು ಡಾ.ಗಿರಡ್ಡಿ ಗೋವಿಂದರಾಜರ ಜನ್ಮದಿನ.( 22-9-2018) ಈ ದಿನ ಧಾರವಾಡದಲ್ಲಿ ಅವರ ಹೆಸರಿನಲ್ಲಿ ಪ್ರತಿಷ್ಠಾನ ಆರಂಭಗೊಳ್ಳುತ್ತಿದೆ. ಇದರ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಪ್ರಜಾವಾಣಿ ಆವೃತ್ತಿಯ ಮೆಟ್ರೊ ಪುರವಣಿಗೆಗೆ ಬರೆದ ಲೇಖನ)
ಚಿತ್ರಗಳು ಸೌಜನ್ಯ- ಡೆಕ್ಕನ್ ಹೆರಾಲ್ಡ್ ಮತ್ತು ದ.ಹಿಂದೂ

ಗುರುವಾರ, ಆಗಸ್ಟ್ 30, 2018

ಅಭಿವ್ಯಕಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯ ಕಪ್ಪು ಇತಿಹಾಸ



ದಿನಾಂಕ 28-8-18 ರ ಬುಧವಾರ ಮಹಾರಾಷ್ಟ್ರ, ದೆಹಲಿ  ಸೇರಿದಂತೆ ದೇಶದ ಹಲವೆಡೆ  ಮಾನವ ಹಕ್ಕು ಹಾಗೂ ಸಾಮಾಜಿಕ ಹೋರಾಟಗಾರ ನಿವಾಸದ ಮೇಲೆ ನಡೆದ ಪೊಲೀಸರ ದಾಳಿ ಹಾಗೂ ಕಾರ್ಯಕರ್ತರ ಬಂಧನ ಭಾರತದ ಪ್ರಜ್ಞಾವಂತ ನಾಗರೀಕರನ್ನು ಬೆಚ್ಚಿ ಬೀಳಿಸಿದೆ.  ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಇಂತಹ ಘಟನೆಗಳು ಹೊಸದೇನಲ್ಲ. ನಮ್ಮನನ್ನಾಳುವ ಸರ್ಕಾರಗಳು ಪಕ್ಷಬೇಧ ವಿಲ್ಲದೆ, ಇಂತಹ ದುಷ್ಕೃತ್ಯಗಳಿಗೆ ಕೈ ಹಾಕುತ್ತಲೇ ಬಂದಿವೆ.
ಇಂದಿರಾಗಾಂಧೀಯವರು1975 ರಲ್ಲಿ ದೇಶಾದ್ಯಂತ ಹೇರಿದ್ದ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಾಗರೀಕ ಹಕ್ಕುಗಳನ್ನು ಮೊಟಕುಗೊಳಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಾಯಿಗೆ ಬೀಗ ಜಡಿದು, ಬರೆಯುವ ಕೈಗಳಿಗೆ ಕೋಳ ತೊಡಗಿಸಲಾಗಿತ್ತು. 2011 ಮತ್ತು 12 ರ ಡಾ.ಮನಮೋಹನ್ ಸಿಂಗ್ ನೇತೃತ್ವದ ಅವಧಿಯಲ್ಲಿಯೂ ಸಹ ಛತ್ತೀಸ್ ಗಡದ  ಡಾ.ಬಿಯಾಂಕ್ ಸೇನ್ ಮತ್ತು ಮಹಾರಾಷ್ಟ್ರದ ಮೂಲದ ಅರುಣ್ ಫೆರಿರಾ ಮುಂತಾದ ಸಾಮಾಜಿಕ ಹೋರಾಟಗಾರರನ್ನು ಸೆರೆಮನೆಗೆ ತಳ್ಳಿ ಇನ್ನಿಲ್ಲದಂತಹ ಚಿತ್ರ ಹಿಂಸೆ ನೀಡಲಾಗಿತ್ತು. ಇದೀಗ ಜಾಗತಿಕ ಮಟ್ಟದಲ್ಲಿ ಯುಗ ಪುರುಷ ಎಂದು ಬಿಂಬಿಸಿಕೊಳ್ಳುತ್ತಿರುವ ನರೇಂದ್ರ ಮೋದಿಯವರ ಅವಧಿಯಲ್ಲಿ  ಪೊಲೀಸರು   ಅದೇ ಹೀನ ಕೃತ್ಯಕ್ಕೆ ಕೈ ಹಾಕಿ ಸುಪ್ರೀಂ ಕೋರ್ಟಿನಿಂದ ಕಪಾಳ ಮೋಕ್ಷ ಮಾಡಿಸಿಕೊಂಡಿದ್ದಾರೆ.
2012 ರಲ್ಲಿ ಡಾ.ಬಿಯಾಂಕ್ ಸೇನ್ ಅವರನ್ನು ಬಿಡುಗಡೆ ಮಾಡುವ ಸಮಯದಲ್ಲಿ ಅವರ ಮೇಲೆ ಹೊರಿಸಲಾಗಿದ್ದ ಆರೋಪ ಪಟ್ಟಿಯಲ್ಲಿ, ಬಿಯಾಂಕ್ ಅವರ ನಿವಾಸದಲ್ಲಿ  ನಕ್ಸಲ್ ಸಾಹಿತ್ಯ ಹಾಗೂ ಕರಪತ್ರಗಳಿದ್ದವು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಸುಪ್ರೀಂ ಕೋರ್ಟ್ “ ಗಾಂಧೀಜಿ ಕೃತಿ ಓದುವನನ್ನು ಗಾಂಧಿವಾದಿ ಎಂದು ಏಕೆ ಹಣೆಪಟ್ಟಿ ಕಟ್ಟುತ್ತೀರಿ? ಮಾಕ್ಕ್ಸ್ ಓದುವವನು ಮಾರ್ಕ್ಸ್ ವಾದಿಯಲ್ಲ, ಗಾಂಧಿ ಓದುವವನು ಗಾಂಧಿವಾದಿಯಲ್ಲ” ಎಂದು ಪೊಲೀಸರಿಗೆ ಚಾಟಿ ಏಟು ಬೀಸಿತ್ತು. ಇದೀಗ  ಅದೇ ಸರ್ವೋಚ್ಚ ನ್ಯಾಯಾಲಯ “ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನ ಧ್ವನಿಗಳು ಇರಬಾದೆ? ಇಂತಹ ಭಿನ್ನತೆ ಪ್ರಜಾಪ್ರಭುತ್ವಕ್ಕೆ ಸುರಕ್ಷಾ ಕವಚ ಇದ್ದಂತೆ” ಎಂಬ ಮಹತ್ವದ  ಅಭಿಪ್ರಾಯವನ್ನು ನೀಡುವುದರ ಮೂಲಕ  ಆಳುವ ಸರ್ಕಾರಗಳಿಗೆ ಬಿಸಿ ಮುಟ್ಟಿಸುವುದರ ಜೊತೆಗೆ ಸಂವಿಧಾನದ ಘನತೆಯನ್ನು ಎತ್ತಿ ಹಿಡಿದಿದೆ. ಬಂಧಿತರಾಗಿದ್ದ ಐವರು ಕಾರ್ಯಕರ್ತರನ್ನು ಅವರ ನಿವಾಸದಲ್ಲಿ ಮುಂದಿನ ವಿಚಾರಣೆಯ ತನಕ ( 6-9-18 ರವರೆಗೆ) ಗೃಹಬಂಧನದಲ್ಲಿ ಇರಿಸಬೇಕೆಂದು ಆದೇಶ ನೀಡಿದೆ.
ಆದಿವಾಸಿ ಹಕ್ಕುಗಳಿಗಾಗಿ, ದಮನಿತರ ಪರವಾಗಿ ಹಾಗೂ ಪರಿಸರ ರಕ್ಷಣೆಗಾಗಿ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತರನ್ನು  ವ್ಯವಸ್ಥಿತ ಹುನ್ನಾರ ಹಗೂ   ಕ್ಷುಲ್ಲಕ ಆರೋಪಗಳಿಂದ  ಸದೆಬಡಿಯಲು ಹೊರಟ ಜಗತ್ತಿನ ಎಲ್ಲಾ ಸರ್ಕಾರಗಳು ಮತ್ತು ಸರ್ವಾಧಿಕಾರಿಗಳು ಅಂತಿಮವಾಗಿ ಮಣ್ಣು ಮುಕ್ಕಿದ್ದಾರೆ.  ಇಂತಹ ಸಾರ್ವಕಾಲಿಕ ಸತ್ಯವನ್ನು ನಮ್ಮನ್ನಾಳುವ ದೊರೆಗಳಿಗೆ ಮತ್ತು ಅವರ ಗುಲಾಮರಂತೆ ವರ್ತಿಸುತ್ತಿರುವ ಪೊಲೀಸರಿಗೆ ಮುಟ್ಟಿಸುವ  ಕೆಲಸವನ್ನು  ಈ ದೇಶದ ಪ್ರಜ್ಞಾವಂತ ನಾಗರೀಕರು ಮಾಡಬೇಕಿದೆ. ಇಂತಹ ಕಾರ್ಯವನ್ನು ಡಾ.ಬಿಯಾಂಕ್ ಸೇನ್ ಮತ್ತು ಅರುಣ್ ಫೆರಿರಾ ತಮ್ಮ ಹೋರಾಟಗಳ ಮೂಲಕ ವರ್ತಮಾನದ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಅರುಣ್ ಫೆರಿರಾ ಅವರು ತಮ್ಮ ಬಂಧನದ ಅವಧಿಯಲ್ಲಿ ಅನುಭವಿಸಿದ ಚಿತ್ರಹಿಂಸೆಯನ್ನು ಅತ್ಯಂತ ನಿರ್ಭಾವುಕ ಶೈಲಿಯಲ್ಲಿ ದಾಖಲಿಸಿರುವ “ ಕಲರ್ಸ್ ಆಫ್ ದ ಕೇಜ್ “ ( ಪಂಜರದ ಬಣ್ಣಗಳು) ಕೃತಿ ಓದುಗರನ್ನು ಬೆಚ್ಚಿ ಬೀಳಿಸುವುದರ ಜೊತೆಗೆ ಕಣ್ಣಲ್ಲಿ ನೀರು ತರಿಸುತ್ತದೆ.

ಮುಂಬೈ ನಗರದಲ್ಲಿ ಹುಟ್ಟಿ ಬೆಳೆದ ಅರುಣ್ ಫೆರಿರಾ  ಅಲ್ಲಿನ ಪ್ರತಿಷ್ಠಿತ ಸೆಂಟ್ ಕ್ಷೇವಿಯರ್ ಕಾಲೇಜಿನಲ್ಲಿ ಪದವಿ ಪಡೆದು, ವ್ಯಂಗ್ಯ ಚಿತ್ರಗಾರರಾಗಿ ವೃತ್ತಿಯನ್ನು ಆರಂಭಿಸಿದ್ದರು.  ಮಹಾರಾಷ್ಟ್ರದ ಎಲ್ಲಾ ಪ್ರಗತಿ ಪರ ಸಂಘಟನೆಗಳ ಜೊತೆ ಗುರುತಿಸಿಕೊಂಡವರು. ಜೊತೆಗೆ ಸಂಘಟನೆಗಳ ಸಮಾವೇಶಕ್ಕೆ ಭಿತ್ತಿ ಪತ್ರ, ಕರ ಪತ್ರ, ಬ್ಯಾನರ್ ಇತ್ಯಾದಿಗಳಿಗೆ ಚಿತ್ರ ಬರೆಯುತ್ತಾ, ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. 2007 ರಲ್ಲಿ ಸಮಾವೇಶವೊಂದನ್ನು ಮುಗಿಸಿಕೊಂಡು ಮುಂಬೈ ನಗರಕ್ಕೆ ಹಿಂತಿರುಗಲು ನಾಗಪುರ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದ ಅರುಣ್ ಅವರನ್ನು ಸಂಗಡಿಗರೊಂದಿಗೆ ಬಂಧಿಸಿದ ಮಹಾರಾಷ್ಟ್ರ ಪೊಲೀಸರು ಅರುಣ್ ಫೆರಿರಾಗೆ ನಕ್ಸಲ್ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದಾನೆ ಎಂಬ ಪಟ್ಟ ಕಟ್ಟಿ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ನಾಗಪುರದ ಜೈಲಿಗೆ ತಳ್ಳಿದರು.  ಜೈಲಿನಲ್ಲಿ ಇದ್ದುಕೊಂಡು, ಕಾನೂನು ಪದವಿಗಾಗಿ ಶಿಕ್ಷಣ ಪಡೆಯುತ್ತಾ, ಬೇಸಿಗೆಯ ದಿನಗಳಲ್ಲಿ 47 ಡಿಗ್ರಿ ಉಷ್ಣಾಂಶ  ಇರುವ ನಾಗಪುರದಲ್ಲಿ ಕೇವಲ ಒಂದು ಸಣ್ಣ ಕಿಟಿಕಿ ಇದ್ದಅಂಡಾ ಶೆಲ್ ಎಂದು ಕರೆಯಲಾಗುವ ಮೊಟ್ಟೆ ಆಕಾರದ ಕೊಠಡಿಯೊಳಗೆ ಬದುಕಿದ್ದ ಮಾತ್ರವಲ್ಲದೆ, , ಅಲ್ಲಿನ ಕ್ರಿಮಿನಲ್ ಅಪರಾಧಿಗಳ ವರ್ತನೆ, ಪೊಲೀಸ್ ಅಧಿಕಾರಿಗಳ ಲಂಚಾವತಾರ , ಕ್ರೌರ್ಯ ಎಲ್ಲವನ್ನೂ ಈ ಕೃತಿಯಲ್ಲಿ  ತಾವೇ ಸೃಷ್ಟಿಸಿದ ಚಿತ್ರಗಳ ಸಮೇತ ಬಣ್ಣಿಸಿದ್ದಾರೆ. 2011 ರ ಸೆಪ್ಟಂಬರ್ ತಿಂಗಳಿನಲ್ಲಿ ಎಲ್ಲಾ ಆರೋಪಗಳಿಂದ ಖುಲಾಸೆಗೊಂಡು , ಕಾನೂನು ಪದವಿಯ ಜೊತೆ ಜೈಲಿನ ಮುಖ್ಯ ದ್ವಾರದಿಂದ ಹೊರಬಂದು,  ತನಗಾಗಿ ಕಾಯುತ್ತಿದ್ದ ತನ್ನ ತಂದೆ, ತಾಯಿ, ಪತ್ನಿ ಮತ್ತು ಮಗು ಇವರನ್ನು ಭೇಟಿ ಮಾಡುವಷ್ಟರಲ್ಲಿ ಸಾದಾ ಉಡುಗೆಯಲ್ಲಿದ್ದ ಪೊಲೀಸರು ಮತ್ತೇ ಅವರನ್ನು ಬಂಧಿಸಿ, ಹೊಸ ಆರೋಪಗಳನ್ನು ಹೊರಿಸುವುದರ ಮೂಲಕ ಮತ್ತೇ ಅವರನ್ನು ಸೆರೆಮನೆಗೆ ನೂಕಿದರು. ಪೊಲೀಸರ ಎಲ್ಲಾ ಆರೋಪಗಳಿಂದ ಮುಕ್ತವಾಗಲು ಪುನಃ ಒಂದು ವರ್ಷದ ಅವಧಿ ಹಿಡಿಯಿತು. ಯಾವುದೇ ಹುರುಳಿಲ್ಲದ ಆರೋಪಗಳಿಗೆ ಬಲಿಯಾದ ಅರುಣ್ ಫೆರಿರಾ  ಅವರ ಯವ್ವನದ ಐದು ವರ್ಷಗಳು ಸೆರೆಮನೆಯ ಕತ್ತಲ ಕೂಪದಲ್ಲಿ ಕಳೆದು ಹೋದವು. ಇತ್ತ ಮುಂಬೈ ನಗರದಲ್ಲಿ ಅವರ ಕುಟುಂಬದ ಸದಸ್ಯರು ಸಮಾಜದ ಕ್ರೂರ ಕಣ್ಣಿಗೆ ತುತ್ತಾಗಿ ಅಪಮಾನದ ಬೇಗುದಿಯಲ್ಲಿ ಬೆಂದು ಹೋದರು. ಇದು  ಪ್ರಜ್ಞಾವಂತ ನಾಗರೀಕರನ್ನು  ನಮ್ಮನ್ನು ಆಳಿದ ಸರ್ಕಾರಗಳು ಹೇಗೆ ನಡೆಸಿಕೊಳ್ಳುತ್ತಾವೆ ಎಂಬುದಕ್ಕೆ ಒಮದು ಉದಾಹರಣೆ. ಮೊನ್ನೆ ಬಂಧಿತರಾದ ಐವರು ಸಾಮಾಜಿಕ ಕಾರ್ತರಲ್ಲಿ ಅರುಣ್ ಫೆರಿರಾ ಕೂಡ ಒಬ್ಬರಾಗಿದ್ದಾರೆ. ಛತ್ತೀಸ್ ಗಡದಲ್ಲಿ ಮಾನವ ಹಕ್ಕುಗಳ ಪರವಾಗಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದ ಅರುಣ್ ಅವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಯಥಾ ಪ್ರಕಾರ ಅವರ ಮೇಲೆ ದೇಶ ದ್ರೋಹದ ಆರೋಪ ಹೊರಿಸಲಾಗಿದೆ.

ಅರುಣ್ ಫೆರಿರಾ ಅವರಿಗಿಂತ ಭಿನ್ನವಾದ ಕಥೆ ಡಾ.ಬಿಯಾಂಕ್ ಸೇನ್ ಅವರದು. ಪಶ್ಚಿಮ ಬಂಗಾಳ ಮೂಲದ ಸೇನ್ ಅವರು ದೆಹಲಿಯಲ್ಲಿ ಎಂ.ಬಿ. ಬಿ.ಎಸ್. ಪದವಿ ಹಾಗೂ ಸ್ನಾತಕೋತ್ತರ ಪಡವಿ ಪಡೆದು ಮಕ್ಕಳ ತಜ್ಞರಾಗಿ ಹೊರಬಂದ ಅವರು, ಲಕ್ಷಾಂತರ ರೂಪಾಯಿಗಳ ಸಂಬಳ ತೊರೆದು ಮೂರು ದಶಕಗಳ ಹಿಂದೆ ತಮ್ಮ ಪತ್ನಿ ಪ್ರೊ.ಇಲ್ಲಿಯಾ ಸೇನ್ ಜೊತೆ ಛತ್ತೀಸ್ ಗಡದ ರಾಯ್ ಪುರ ನಗರಕ್ಕೆ ಬಂದು ನೆಲೆಸಿದರು. ಆ ಕಾಲದಲ್ಲಿ  ಮಧ್ಯ ಪ್ರದೇಶದ ಭಾಗವಾಗಿದ್ದ ರಾಯ್ ಪುರ್ ಪ್ರದೇಶದ ಸುತ್ತ ಮುತ್ತಲಿನ  ಅರಣ್ಯದ ಆದಿವಾಸಿ ಹಳ್ಳಿಗಳ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದನ್ನು ನೋಡಿದ ಡಾ.ಬಿಯಾಂಕ ಸೇನ್, ಹಳ್ಳಿಗಳಲ್ಲಿ ಸಂಚರಿಸುತ್ತಾ ಮಕ್ಕಳ ಆರೋಗ್ಯ ಸೇವೆಯಲ್ಲಿ ನಿರತರಾಗಿದ್ದರು. ಅವರ ಪತ್ನಿ ಇಲ್ಲಿಯಾ ಸೇನ್ ರವರು ದೆಹಲಿಯ ಜವಹರ್ ಲಾಲ್ ನೆಹರೂ ವಿ.ವಿ. ಹಾಗೂ ಕೊಲ್ಕತ್ತ ನಗರದಲ್ಲಿ ಶಿಕ್ಷಣ ಪಡೆದು ವಾರ್ಧಾ ದಲ್ಲಿರುವ ಮಹಾತ್ಮ ಗಾಂಧಿ ಅಂತರಾಷ್ಟ್ರೀಯ ಹಿಂದಿ ವಿಶ್ವ ವಿದ್ಯಾಲಯದಲ್ಲಿ ಮಹಿಳಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಾ, ಪತಿಯ ಜೊತೆ ಛತ್ತಿಸ್ ಗಡ ಅರಣ್ಯದ ಮಹಿಳಾ ಆದಿವಾಸಿಗಳ ಶ್ರೇಯೋಭಿವೃದ್ಧಿಗಾಗಿ ದುಡಿದರು.
2007 ರಲ್ಲಿ ಅರುಣ್ ಫೆರಿರಾ ಬಂಧನವಾದ ಒಂದು ವಾರದ ನಂತರ ಡಾ.ಬಿಯಾಂಕ ಸೇನರನ್ನು ರಾಯಪುರ ನಗರದಲ್ಲಿ ಛತ್ತೀಸ್ ಗಡ ಪೊಲೀಸರು ಬಂಧಿಸಿದರು.  ಸೆರೆಮನೆಯಲ್ಲಿರುವ ನಕ್ಸಲ್ ನಾಯಕರು ಮತ್ತು ಅರಣ್ಯದೊಳಗೆ ಇರುವ ನಕ್ಸಲರು ಇವರ ನಡುವೆ ಸಂವಹನ ದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪದಡಿ ಬಿಯಾಂಕ್ ಸೇನರನ್ನು ಬಂಧಿಸಿದ ಪೋಲಿಸರು ಅವರಿಗೆ ಛತ್ತೀಸ್ ಗಡ ಹೈ ಕೋರ್ಟಿನಲ್ಲಿ ಜೀವಾವಧಿ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದರು. ಈ ಸುದ್ಧಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು, ವಿಶ್ವ ಪ್ರಸಿದ್ಧ ಭಾಷಾ ತಜ್ಞ ನೋಮ್ ಚಾಮ್ ಸ್ಕಿ ಅವರಿಂದ ಹಿಡಿದು, ಅಮಾರ್ತ್ಯ ಸೇನ್, ವಿಶ್ವ ಮಾನವ ಹಕ್ಕುಗಳ ಸಂಘಟನೆ ಹೀಗೆ ಹಲವು ಗಣ್ಯರಿಂದ  ಜಾಗತಿಕ ಮಟ್ಟದಲ್ಲಿತೀವ್ರವಾದ ವಿರೋಧ ವ್ಯಕ್ತವಾಯಿತು. ಅಂತಿಮವಾಗಿ ನಾಲ್ಕು ವರ್ಷಗಳ ನಂತರ 2011 ರಲ್ಲಿ ಸುಪ್ರೀಂಕೋರ್ಟ್ ಮಧ್ಯ ಪ್ರವೇಶದಿಂದಾಗಿ  ಡಾ,ಬಿಯಾಂಕ್ ಸೇನ್ ಹೊರಬರಲು ಸಾಧ್ಯವಾಯಿತು.

ಅವರ ಪತ್ನಿ ಇಲ್ಲಿಯಾ ಸೇನ್ ಅವರು ತಮ್ಮ ಪತಿಯ ಬಂಧನ ಹೋರಾಟ ಹಾಗೂ ತಾವಿಬ್ಬರೂ ಛತ್ತೀಸ್ ಗಡದಲ್ಲಿ ಮೂರು ದಶಕಗಳ ಕಾಲ ಸಲ್ಲಿಸಿದ ನಿಸ್ವಾರ್ಥ ಸೇವೆಯ ಅನುಭವಗಳನ್ನು ತಮ್ಮ “ ಇನ್ ಸೈಡ್ ದ ಛತ್ತೀಸ್ ಗಡ್” ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.  ಇಡೀ ಕೃತಿಯಲ್ಲಿ ಆರಂಭದ ಅಧ್ಯಾಯಗಳಲ್ಲಿ ತಮ್ಮ ಪತಿಯ ಬಿಡುಗಡೆಗಾಗಿ ನಡೆಸಿದ ಹೋರಾಟವನ್ನು ದಾಖಲಿಸಿರುವ ಅವರು, ನಂತರ ಅಧ್ಯಾಯಗಳಲ್ಲಿ ಆದಿವಾಸಿ ಮಹಿಳಾ ಸಮುದಾಯದಲ್ಲಿ ತಾವು ತಂದ ಬದಲಾವಣೆ ಹಾಗೂ ಸುಧಾರಣೆಗಳನ್ನು ದಾಖಲಿಸಿದ್ದಾರೆ. ಈ ಎರಡು ಕೃತಿಗಳು ಆಳುವ ಸರ್ಕಾರಗಳ ಮೊತ್ತೊಂದು ಮುಖವನ್ನು ಸಮರ್ಥವಾಗಿ ಅನಾವರಣಗೊಳಿಸುವುದರ ಜೊತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯವಸ್ಥಿತವಾಗಿ ಹೇಗೆ ದಮನಗೊಳಿಸಲಾಗುತ್ತಿದೆ ಎಂಬುದನ್ನು ತಿಳಿಸಿಕೊಡುತ್ತವೆ.
ನೊಂದವರು, ಬಡವರು, ಆದಿವಾಸಿಗಳು, ಕೂಲಿಕಾರ್ಮಿಕರ ಪರವಾಗಿ ದುಡಿಯವವರಿಗೆ “ನಗರದ ನಕ್ಸಲರು” ಎಂಬ ಹೊಸ ಹಣೆ ಪಟ್ಟಿ ಕಟ್ಟುವವರು ಒಮ್ಮೆ ತಮ್ಮ ಒಳಗಣ್ಣನ್ನು ತೆರೆದು ಆತ್ಮ ಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕಿದೆ.
(ಚಿತ್ರಗಳು ಸೌಜನ್ಯ ಟೈಮ್ಸ್ ಆಫ್ ಇಂಡಿಯ ಮತ್ತು ಇಂಡಿಯಾ ಟುಡೆ)

ಶನಿವಾರ, ಆಗಸ್ಟ್ 25, 2018

ಮಾರ್ಕ್ಸ್ ರವರ ರಾಜಕೀಯ ಅರ್ಥಶಾಸ್ತ್ರ




ಕಾರ್ಲ್ ಮಾರ್ಕ್ಸ್ ರವರ ಇನ್ನೂರನೆಯ ಜನ್ಮ ಶತಾಬ್ದಿ ಹಾಗೂ  ಅವರು ರಚಿಸಿದ " ದಾಸ್ ಕ್ಯಾಪಿಟಲ್" ಕೃತಿಗೆ ನೂರ ಐವತ್ತು ವರ್ಷ ತುಂಬಿದ ಅಂಗವಾಗಿ ನಾಡಿನ ಪ್ರಸಿದ್ಧ  ನವಕರ್ನಾಟಕ ಪ್ರಕಾಶನ ಸಂಸ್ಥೆಯು "ದಾಸ್ ಕ್ಯಾಪಿಟಲ್" ಸೇರಿದಂತೆ,  ಮಾಕ್ರ್ಸ್ ರವರ ಇನ್ನಿತರೆ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಪರಿಚಯಿಸುವ ಮಹತ್ವದ ಯೋಜನೆಯನ್ನು ಆರಂಭಿಸಿದೆ. ಈಗಾಗಲೆ ಈ ಯೋಜನೆಯ ಅಂಗವಾಗಿ ಮೂರು ಕೃತಿಗಳು ಬಿಡುಗಡೆಯಾಗುವುದರ ಮೂಲಕ ಮಾರ್ಕ್ಸ್ ರವರ ಪ್ರಖರ ಪ್ರತಿಭೆಯ ಜೊತೆಗೆ ಅವರ ಅರ್ಥಶಾಸ್ತ್ರದ ಚಿಂತನೆಗಳು ಕನ್ನಡಿಗರಿಗೆ ಪರಿಚಯವಾಗುತ್ತಿವೆ.
ಕಾರ್ಲ್ ಮಾರ್ಕ್ಸ್ ಕೇವಲ ಪ್ರಸಿದ್ಧ ರಾಜಕೀಯ ಮತ್ತು ತತ್ವಶಾಸ್ತ್ರದ ತಜ್ಞ ಎಂದು ಭಾವಿಸಿರುವ ಬಹುತೇಕ ಮಂದಿಗೆ ಅವರೊಳಗೊಬ್ಬ ಅರ್ಥಶಾಸ್ತ್ರದ ಅದ್ಭುತ ವಿಶ್ಲೇಷಕ ಹಾಗೂ ತಜ್ಞ ಕೂಡ ಜೀವಂತವಾಗಿದ್ದ ಎಂಬುದಕ್ಕೆ ಅವರ " ರಾಜಕೀಯ ಅರ್ಥಶಾಸ್ತ್ರದ ವಿಮರ್ಶೆಗೊಂದು ಕೊಡುಗೆ" "ಭಾರತವನ್ನು ಕುರಿತ ಮಾರ್ಕ್ಸ್" ಹಾಗೂ ತತ್ವಶಾಸ್ತ್ರದ ಬಡತನ ಅಥವಾ ದಾರಿದ್ರ್ಯ" ಎಂಬ ಮೂರು ಕೃತಿಗಳು ಸಾಕ್ಷಿಯಾಗಿವೆ. ಮನುಷ್ಯನ ಜಗತ್ತಿನ ಆರ್ಥಿಕ ಚಟುವಟಿಕೆಗಳನ್ನು ವಿಶ್ಲೇಷಿಸುವ ಅರ್ಥಶಾಸ್ತ್ರವು ಮನುಕು¯ದ ನಾಗರೀಕತೆಯ ಕಾಲದಿಂದಲೂ ರಾಜಕೀಯಶಾಸ್ತ್ರದ ಜೊತೆ ಜೊತೆಯಲ್ಲಿ ಒಂದು ಜ್ಞಾನ ಶಿಸ್ತುವಾಗಿ ಬೆಳೆದು ಬಂದಿದೆ. ಬೆಬಿಲೋನಿಯಾ, ಮೆಸಪಟೋಮಿಯಾ, ಗ್ರೀಸ್ ನಾಗರೀಕತೆಗಳ ಜೊತೆಗೆ ಪರ್ಷಿಯಾ, ಚೀನಾ ಮತ್ತು ಭಾರತದಲ್ಲಿ  ಅರ್ಥಶಾಸ್ತವ್ರು  ಹಲವು ರೂಪಗಳಲ್ಲಿ ವಿಸ್ತರಿಸುತ್ತಾ ಬೆಳೆದು ಬಂದಿರುವುದು ಈಗ ಇತಿಹಾಸ.  ಅರಿಸ್ಟಾಟಲ್, ಚೀನಾದ ಚೀನ್ ಶಿ ಹ್ಯಾಂಗ್, ಮತ್ತು ಇಬೆನ್ ಕಾಲ್ಡನ್, ಭಾರತದ  ಕೌಟಿಲ್ಯ ಇವರುಗಳು ಅರ್ಥಶಾಸ್ತ್ರಕ್ಕೆ ಭದ್ರವಾದ ಅಡಿಪಾಯ ಹಾಕಿದವರಲ್ಲಿ ಪ್ರಮುಖರು.  ಆದರೆ, 1776 ರಲ್ಲಿ ಇಂಗ್ಲೇಂಡಿನ ಆಡಂ ಸ್ಮಿತ್ ಎಂಬುವನು ತನ್ನ " ವೆಲ್ತ್ ಆಫ್ ನೇಷನ್" ಕೃತಿಯಲ್ಲಿ ಪ್ರಕೃತಿ ನಿಯಮದ ದೃಷ್ಟಿಕೋನದಲ್ಲಿ ಅರ್ಥಶಾಸ್ತ್ರವನ್ನು ವಿಶ್ಲೇಷಿಸುವುದರ ಮೂಲಕ  ಭೂಮಿ, ಬಂಡವಾಳ ಮತ್ತು ಕಾರ್ಮಿಕರು ಇವರನ್ನು ಒಂದು ರಾಷ್ಟ್ರದ ಸಂಪತ್ತು ಎಂದು ಕರೆದನು. ಒಂದು ರಾಷ್ಟ್ರದ ಸಂಪತ್ತಿನ ಹಂಚಿಕೆ ಮತ್ತು ವಿನಿಯೋU,ಸರಕುಗಳ ವಿನಿಮಯ, ನಾಣ್ಯ ಪದ್ಧತಿ ಮತ್ತು ಚಲಾವಣೆÀ  ಕುರಿತು ವ್ಯವಸ್ಥಿತ ರೀತಿಯಲ್ಲಿ ಆರ್ಥಿಕ ಚಿಂತನೆಗೆ ಹೊಸ ರೂಪ ಕೊಟ್ಟು ಇವುಗಳನ್ನು ವಾಣಿಜ್ಯ, ವ್ಯಾಪಾರಗಳ ಸಿದ್ಧಾಂತ ಎಂದು ವ್ಯಾಖ್ಯಾನಿಸಿದನು, ಹಾಗಾಗಿ  ಆತನನ್ನು ಅರ್ಥಶಾಸ್ತ್ರದ ಪಿತಾಮಹಾ ಎಂದು ಗುರುತಿಸಲಾಗಿದೆ. ನಂತರದ ದಿನಗಳಲ್ಲಿ ಥಾಮಸ್ ಮಾಲ್ತಸ್, ಡೆವಿಡ್ ರಿಕಾರ್ಡೊ ಮುಂತಾದವರು ಅರ್ಥಶಾಸ್ತ್ರದ ಚಿಂತನೆಗಳನ್ನು ಮತ್ತಷ್ಟು ವಿಸ್ತರಿಸಿದರು. ಮಾಲ್ತಸ್ ನ ಜನಸಂಖ್ಯಾ ಸಿದ್ಧಾಂತ, ಡೆವಿಡ್ ರಿಕಾರ್ಡೊವಿನ ಗೇಣಿ ಸಿದ್ಧಾಂತಗಳು ಭೂಮಿ, ಬಂಡವಾಳ, ಕಾರ್ಮಿಕರು, ಕಾರ್ಮಿಕರ ಬೇಡಿಕೆ ಮತ್ತು ಪೂರೈಕೆ, ಕೆಳವರ್ಗದ ಜನರ ಜೀವನ ಮಟ್ಟದ ಸುಧಾರಣೆ ಇಂತಹ ಅಂಶಗಳು ಇವರುಗಳ ಸಿದ್ಧಾಂತದಲ್ಲಿ ಒಳಗೊಂಡಿದ್ದವು.

ನಂತರದ ದಿನಗಳಲ್ಲಿ  ಕಾರ್ಲ್ ಮಾರ್ಕ್ಸ್ ರವರ "ಮೂಲಕ  ನಿಯೊ ಕ್ಲಾಸಿಕಲ್ ಸಿದ್ಧಾಂತ" ಎಂಬ ಹೊಸ ಚಿಂತನೆಯೊಂದು ಬೆಳೆದು ಬಂದಿತು. ಕಾರ್ಮಿಕರ ಶ್ರಮ ಕುರಿತ ಚಿಂತನೆಯನ್ನು ಇದು ಒಳಗೊಂಡಿತ್ತು. ಕೈಗಾರಿಕಾ ಕ್ರಾಂತಿಯ ಪರಿಣಾಮವನ್ನು ಬಲ್ಲವರಾಗಿದ್ದ ಮಾರ್ಕ್ಸ್ ರವರು ತಮ್ಮ ಚಿಂತನೆಗನ್ನು ಪ್ರಕೃತಿ ವಿಜ್ಞಾನದಲ್ಲಿ ಬಳಸಲಾಗುವ ಗಣಿತ ಶಾಸ್ತ್ರದ ವಿಧಾನಗಳನ್ನು ಬಳಸಿ ಸಿದ್ಧಾಂತವನ್ನು ಮಂಡಿಸಿದ್ದರು. ನವಶಾಸ್ತ್ರೀಯ ಅರ್ಥಶಾಸ್ತ್ರ ಎಂದು ಕರೆಯಲಾದ ಈ ಸಿದ್ಧಾಂತದಲ್ಲಿ ಬೇಡಿಕೆ, ಪೂರೈಕೆಯ ಜೊತೆಗೆ ಮಾರುಕಟ್ಟೆಯ ಪ್ರಭಾವ ಕುರಿತು ಅವರು ವಿಶ್ಲೇಷಣೆ ಮಾಡಿದ್ದರು. 1930 ರಲ್ಲಿ ಇಡೀ ವಿಶ್ವವು ಆರ್ಥಿಕ ಹಿಂಜರಿತಕ್ಕೆ ಒಳಗಾದ ನಂತರ ಅರ್ಥಶಾಸ್ತ್ರದಲ್ಲಿ ಹೊಸಮಾದರಿಯ ಚಿಂತನೆಗಳು ಆರಂಭಗೊಂಡವು. ಜಾನ್ ಮೇನಾರ್ಡ್ ಕೇನ್ಸ್ ಅವರ ಸಿದ್ಧಾಂತದ ಜೊತೆಗೆ ಹಲವು ಚಿಂತನೆಯ ಶಾಖೆಗಳು ಹುಟ್ಟಿಕೊಂಡವು. ಸ್ಕೂಲ್ ಆಫ್ ಥಾಟ್ಸ್ ಎಂದು ಕರೆಯಲಾಗುವ ವಿವಿಧ ಜ್ಞಾನಶಾಖೆಗಳಲ್ಲಿ ಮಾರುಕಟ್ಟೆಯ ಪ್ರಭಾವ, ಪ್ರಭುತ್ವದ ಪಾತ್ರ, ಹಣಕಾಸು ನಿರ್ವಹಣೆಯಲ್ಲಿ ಸರ್ಕಾರಗಳು ಕೈಗೊಳ್ಳಬೇಕಾದ ಜವಬ್ದಾರಿಯ ಅಂಶಗಳು ಒಳಗೊಂಡಿದ್ದವು. 1990 ರವರೆಗೆ ಬೆಳೆದು ಬಂದ ಈ ರೀತಿಯ ಚಿಂತನೆಗಳು 1990 ರ  ವೇಳೆಗೆ ಹಿನ್ನಲೆಗೆ ಸರಿದವು. ಜಾಗತೀಕರಣವೆಂಬ ಹೊಸ ಪರಿಕಲ್ಪನೆ  ಮತ್ತು ಮಾರುಕಟ್ಟೆಯ ವ್ಯವಸ್ಥೆ ಹುಟ್ಟಿಕೊಂಡ ಪರಿಣಾಮವಾಗಿ ತಮ್ಮ ಮಹತ್ವವನ್ನು ಕಳೆದುಕೊಂಡವು. ಜೊತೆಗೆ ಅರ್ಥಶಾಸ್ತ್ರದ ವಾಖ್ಯಾನವೂ ಕೂಡ ಬದಲಾಯಿತು. ಅಭಿವೃದ್ಧಿ ಅರ್ಥಶಾಸ್ತ್ರ, ಗ್ರಾಹಕರ ನಡುವಳಿಕೆಯ ಅರ್ಥಶಾಸ್ತ್ರ ( ಬಿಹೇವಿಯರ್ ಎಕನಾಮಿಕ್ಸ್) ಕೃಷಿ ಅರ್ಥಶಾಸ್ತ್ರ, ಮಾರುಕಟ್ಟೆಯ ಅರ್ಥಶಾಸ್ತ್ರ ಹೀಗೆ ಹಲವು ಶಾಖೆಗಳು ಜನ್ಮ ತಾಳಿದವು. ಇವುಗಳಲ್ಲಿ ಅಭಿವೃದ್ಧಿ ಶಾಸ್ತ್ರದಲ್ಲಿ ಬಡತನ, ಹಸಿವು, ನಿರುದ್ಯೋಗ, ಆರೋಗ್ಯ, ಶಿಕ್ಷಣ ಇವುಗಳಿಗೆ ಹೆಚ್ಚು ಒತ್ತು ನೀಡಿದ್ದರ ಫಲವಾಗಿ ಸ್ವೀಡನ್ನಿನ ಗುನ್ನಾರ್ ಮಿರ್ಡಲ್, ಅಮೇರಿಕಾದ ಜೋಸೆಫ್ ಸ್ಲಿಗ್ಲಿಟ್ಜ್ ಭಾರತದ ಅಮಾತ್ರ್ಯಸೇನ್, ಬಂಗ್ಲಾ ದೇಶದ ಮಹಮ್ಮದ್ ಯೂನಸ್ ಮುಂತಾದ ಮಾನವೀಯ ಮುಖವಳ್ಳ ಅರ್ಥಶಾಸ್ತ್ರಜ್ಞರಾಗಿ ಹೊರಹೊಮ್ಮಿದರು.  ಈ ಎಲ್ಲಾ ಮಹಾನುಭಾವರ ಚಿಂತನೆ ಹಾಗೂ ಕೃತಿಗಳಲ್ಲಿ ಜೀವಪರವಾದ  ನಿಲುವುಗಳು ಮಾರ್ಕ್ಸ್ ರವರ ಚಿಂತನೆಗಳಿಂದ ಪ್ರಭಾವಿತವಾಗಿವೆ. ಗುನ್ನಾರ್ ಮಿರ್ಡಲ್ ರವರ " ದ ಏಷಿಯನ್ ಡ್ರಾಮ" ಜೋಸೆಫ್ ಸ್ಲಿಗ್ಲಿಟ್ಜ್ ರವರ " ದ ಗ್ಲೋಬಲೇಜಷನ್ ಅಂಡ್ ಇಟ್ಸ್  ಡಿಸ್‍ಕಂಟೆಂಟ್ಸ್" ಅಮಾತ್ರ್ಯ ಸೇನ್ ರವರ " ಐಡಿಯಾ ವಿತ್ ಜಸ್ಟೀಸ್" ಮಹಮ್ಮದ್ ಯೂನಸ್ ರವರ " ಬ್ಯಾಂಕರ್ ಆಫ್ ಪೂರ್" ಈ ಎಲ್ಲಾ ಕೃತಿಗಳು ಮಾರ್ಕ್ಸ್  ಪ್ರತಿಪಾದಿಸಿದ ಮನುಷ್ಯಪರವಾದ ನಿಲುವುಗಳನ್ನು ಪುಷ್ಟೀಕರಿಸುತ್ತವೆ. ಈ ಕಾರಣಕ್ಕಾಗಿ ಇವರೆಲ್ಲರೂ ಅರ್ಥಶಾಸ್ತ್ರದ ನೋಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಇಂದಿನ ಜಗತ್ತು ಮಾರ್ಕ್ಸ್ ರವರ " ನವಶಾಸ್ತ್ರೀಯ ಅರ್ಥಶಾಸ್ತ್ರವನ್ನು" ಪಕ್ಕಕ್ಕೆ ಸರಿಸಿ ಮುಂದೆ ಚಲಿಸಲು ಸಾಧ್ಯವಾಗದ ರೀತಿಯಲ್ಲಿ ಅವರು ಒಬ್ಬ ಪ್ರಭಾವಿ ಅರ್ಥಶಾಸ್ತ್ರಜ್ಞರಾಗಿರುವುದು ವಿಶೇಷವಾಗಿದೆ. ವಿಸ್ಮಯದ ಸಂಗತಿಯೆಂದರೆ, ಮಾರ್ಕ್ಸ್ರರವರು ಜರ್ಮನಿಯನ್ನು ತ್ಯೆಜಿಸಿದ ನಂತರ ಜೀವನ ನಿರ್ವಹಣೆಗಾಗಿ ಲಂಡನ್ ನಗರದಲ್ಲಿ ಅವರು ಪತ್ರಿಕೆಗಾಗಿ ಬರೆದ ಲೇಖನಗಳು ಅರ್ಥಶಾಸ್ತ್ರದ ಚಿಂತನೆಗಳಾಗಿ ರೂಪ ಪಡೆದಿವೆ. ಅವರ ಭಾರತವನ್ನು ಕುರಿತ  ಬರೆದ ಕೃತಿಯಲ್ಲಿ " ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವ್ಯವಹಾರ, ಇಲ್ಲಿನ ತೆರಿಗೆ ಪದ್ಧತಿ ಕುರಿತಂತೆ  ಚಿಂತನೆಗಳಿದ್ದರೆ, ತತ್ವಶಾಸ್ತ್ರದ ಬಡತನ ಕುರಿತ ಕೃತಿಯು ಪ್ರೊಧಾನ್ ಎಂಬುವರ ಬಡತನ ತತ್ವಶಾಸ್ತ್ರ ಎಂಬ ಕೃತಿಗೆ ಪತ್ರದ ರೂಪದಲ್ಲಿ ಬರೆದ ಚಿಂತನೆಗಳಾಗಿವೆ. ಹಣದ ವಿನಿಮಯ ಮೌಲ್ಯ, ಹಣ, ದುಡಿಮೆಯಿಂದ ಉಳಿತಾಯವಾಗುವ ಹಣ, ಶ್ರಮ ಮತ್ತು ವಿಭಜನೆ, ಯಂತ್ರಗಳು ಹಾಗೂ ಆಸ್ತಿ ಮತ್ತು ಗೇಣಿ, ಪೈಪೋಟಿ ಮತ್ತು ಏಕಸ್ವಾಮ್ಯತೆ ಹೀಗೆ ಹಲವಾರು ವಿಷಯಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಎರಡು ಕೃತಿಗಳ ಮುಂದುವರಿದ ಚಿಂತನೆಗಳು ಎನ್ನುವ ಹಾಗೆ ಅವರು ತಮ್ಮ " ರಾಜಕೀಯ ಅರ್ಥಶಾಸ್ತ್ರದ ವಿಮರ್ಶೆಗೊಂದು ಕೊಡುಗೆ" ಕೃತಿಯಲ್ಲಿ ಬಂಡವಾಳ, ಸರಕು, ಹಣದ ಚಲಾವಣೆ, ವಿನಿಮಯದ ಮೌಲ್ಯ, ನಾಣ್ಯಗಳು ಹಾಗೂ ಅವುಗಳ ಮೌಲ್ಯದ ಸಂಕೇತ ಇವುಗಳು ಕುರಿತು ಗಂಭೀರ ಚಿಂತನೆ ನಡೆಸಿದ್ದಾರೆ.

ಉತ್ಪಾದನೆ, ಬಳಕೆ, ವಿತರಣೆ ಕುರಿತು ದಾಖಲಿಸಿರುವ ಮಾಕ್ರ್ಸ್ ರವರು, ಬಂಡವಾಳವು ಕೆಲವೇ ಮಂದಿಯ ಕೈಯಲ್ಲಿ ಶೇಖರಗೊಳ್ಳುವುದರ ಮೂಲಕ ಒಂದೆಡೆ ಕೇಂದ್ರೀಕೃತಗೊಂಡು ಉತ್ಪಾದನೆಯ ಸಾಮಾಥ್ರ್ಯದ ಪರಿಣಾಮ ಬೀರುತ್ತದೆ. ಇಂತಹ ಬಂಡವಾಳವು ರೈತರು ಮತ್ತು ಕಾರ್ಮಿಕರಿಂದ ಬಂಡವಾಳಶಾಹಿ ಜಗತ್ತು ಕಸಿದುಕೊಂಡ ಸಂಪತ್ತು ಎಂದು ವಿಶ್ಲೇಷಿಸುತ್ತಾರೆ.  ಮಾನವ ಶ್ರಮವನ್ನು ಸಾರ್ವಜನಿಕ ಶ್ರಮ ಎಂದು ಕರೆದ ಮಾರ್ಕ್ಸ್. ಅದಕ್ಕೆ ಬಂಡವಾಳದಷ್ಟೇ ಮಾನ್ಯತೆಯನ್ನು ತಂದುಕೊಟ್ಟು ಮಹಾನ್ ಮಾನತಾವಾದಿ ಎಂದು ಬಣ್ಣಿಸಬಹುದು.ಈ ಮೂರು ಕೃತಿಗಳು ಉತ್ತಮವಾದ ಭಾಷೆಯಲ್ಲಿ ಕನ್ನಡಕ್ಕೆ ಅನುವಾದಗೊಂಡಿದ್ದರೂ ಸಹ ಇಲ್ಲಿನ ವಿಷಯಗಳು ಮಾಕ್ಸ್ ್ ರವರ ಚಿಂತನೆಗಳ ಆಸಕ್ತರಿಗೆ ಮತ್ತು ಅರ್ಥಶಾಸ್ತ್ರದ ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಗೆ ಹೆಚ್ಚಿನ ಉಪಯೋಗವಾಗುವದರಲ್ಲಿ ಸಂಶಯವಿಲ್ಲ. ಆದರೆ, ಸಾಮಾನ್ಯ ಓದುಗರಿಗೆ ಇಂತಹ ವಿಷಯಗಳನ್ನು ಓದಿ ಜೀರ್ಣಿಸಿಕೊಳ್ಳುವುದು ಕೊಂಚ ಮಟ್ಟಿಗೆ ತ್ರಾಸದಾಯಕ. ಆದರೆ, ಕನ್ನಡದ ಸಾಹಿತ್ಯ ಮತ್ತು ಸಾಂಸ್ಕøತಿಕ ಜಗತ್ತಿಗೆ ಕನ್ನಡದ ಭಾಷೆಯಲ್ಲಿ ಮಾರ್ಕ್ಸ್ ರವರ ಚಿಂತನೆಗಳು ಕೃತಿಯ ರೂಪದಲ್ಲಿ ಪ್ರಕಟವಾಗುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಹಾಗೂ ಸ್ತುತಾರ್ಹ ಕಾರ್ಯವಾಗಿದೆ.
( ಹೊಸತು ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)