ಶನಿವಾರ, ಏಪ್ರಿಲ್ 27, 2013
ಆದಿವಾಸಿಗಳ ಅನ್ನದ ಬಟ್ಟಲು
ಭಾರತದ ಆದಿವಾಸಿಗಳೆಂದರ, ಅಶಿಕ್ಷಿತರು, ಅನಾಗರೀಕರು ಎಂಬ ಭಾವನೆ ನಮ್ಮಲ್ಲಿ ಬೆಳೆದುಬಂದಿದೆ. ಆಧುನಿಕತೆ ಮತ್ತು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವ ಭಾರತದ ಆಹಾರ ಭದ್ರತೆಯ ಕೀಲಿ ಕೈ ಇವರ ಬಳಿ ಇದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ, ಇದನ್ನು ನೀವು ನಂಬಲೇಬೇಕು.
ನಾವು ಓರಿಸ್ಸಾ, ಅಥವಾ ಮಧ್ಯಭಾರತದ ಛತ್ತೀಸ್ ಗಡ, ಮಧ್ಯಪ್ರದೇಶ ರಾಜ್ಯಗಳಿಗೆ ಬೇಟಿ ನೀಡಿದಾಗ, ಅಲ್ಲಿ ಸಿಗುವ ಅಲ್ಲಿನ ದೇಶಿ ಭತ್ತದ ತಳಿಯಿಂದ ತಯಾರಿಸಿದ ಅನ್ನ, ರುಚಿ ರುಚಿಯಾದ ತರಕಾರಿಗಳು ಮತ್ತು ಕಾಳುಗಳನ್ನು ತಿಂದಾಗ ಮಾತ್ರ ಇವರ ಪಾರಂಪರಿಕ ಜ್ಞಾನ ನಮಗೆ ಮನದಟ್ಟಾಗುವುದು.
ಕಳೆದ ವರ್ಷ ನಕ್ಸಲ್ ಕಥನದ ಮಾಹಿತಿಗಾಗಿ ದಂಡಕಾರಣ್ಯದ ಪ್ರದೇಶಗಳಲ್ಲಿ ಅಲೆಯುವಾಗ, ಜಿಲ್ಲಾ ಕೇಂದ್ರಗಳ ಹೋಟೆಲ್ ಗಳಲ್ಲಿ ಕೇವಲ ಹತ್ತು ರೂಪಾಯಿಗೆ ಬೊಗಸೆ ತುಂಬಾ ಪ್ಲೇಟಿಗೆ ಹಾಕಿದ ಅನ್ನ ಮತ್ತು ವಿವಿಧ ಮೊಳಕೆಯೊಡೆದ ಕಾಳುಗಳ ಸಾರು, ಇಲ್ಲವೆ ನಮ್ಮ ಹಪ್ಪಳದ ಅಗಲದ ಐದು ಚಪಾತಿ ಮತ್ತು ತರಕಾರಿ ಪಲ್ಯ ನೀಡುವ ಇಲ್ಲಿನ ಜನರ ಔದಾರ್ಯಕ್ಕೆ ಮನಸೋತಿದ್ದೀನಿ. ಏಕೆಂದರೆ,
ಇಲ್ಲಿನ ಬುಡಕಟ್ಟು ಜನಾಂಗ ಇನ್ನೂ ಅನ್ನ, ಅಥವಾ ಆಹಾರವನ್ನು ನಾಗರೀಕ ಜಗತ್ತಿನ ಹಾಗೆ ವ್ಯಾಪಾರದ ಮಟ್ಟಕ್ಕೆ ಇಳಿಸಿಲ್ಲ.
ಭಾರತದ ಅನ್ನದ ಬಟ್ಟಲು ಎಂದು ಕರೆಸಿಕೊಳ್ಳುವ ಛತ್ತೀಸ್ ಗಡ ರಾಜ್ಯದ ಬಸ್ತಾರ್ ಅರಣ್ಯ ವಲಯದಲ್ಲಿ 55ದಿನಗಳಿಂದ 180 ದಿನಗಳ ಅವಧಿಯಲ್ಲಿ ಬೆಳೆಯಬಹುದಾದ ಎರಡು ಸಾವಿರಕ್ಕೂ ಹೆಚ್ಚು ದೇಶಿ ಭತ್ತದ ತಳಿಗಳನ್ನು ಖ್ಯಾತ ಭತ್ತದ ತಳಿ ತಜ್ಞ ಡಾ.ಆರ್ ಹೆಚ್. ರಿಚಾರಿಯ ಗುರಿತಿಸಿದ್ದಾರೆ. ಅತಿ ಉದ್ದನೆಯ ಭತ್ತದ ತಳಿಗಳಲ್ಲಿ ಒಂದಾದ ಸ್ಥಳಿಯ ಭಾಷೆಯಲ್ಲಿ " ಡೊಕ್ರ-ಡೊಕ್ರಿ" ಎನ್ನುವ ಭತ್ತದ ತಳಿಯೊಂದು ಪತ್ತೆಯಾಗಿದೆ.
ಇಲ್ಲಿನ ಆಹಾರ ಬೆಳೆಗಳು ಮತ್ತು ತಳಿಗಳ ವೈಶಿಷ್ಟವೆಂದರೆ, ಆಯಾ ಭೌಗೂಳಿಕ ಮತ್ತು ಹವಾಮಾನಕ್ಕೆ ಅನುಗುಣವಾಗಿ ಬೆಳೆಯಬಹುದಾದ ಗುಣಗಳನ್ನು ಹೊಂದಿವೆ.. ಇಲ್ಲಿನ ಆದಿವಾಸಿಗಳು ಬಸ್ತಾರ್ ಅರಣ್ಯದ ಅಬುಜ್ ಮರ್ ಗಿರಿಶ್ರೇಣಿಯ ತಪ್ಪಲಿನ ಪ್ರದೇಶದಲ್ಲಿ ಸಮತಟ್ಟಾದ ನೆಲಕ್ಕೆ ಮಳೆಗಾಲಕ್ಕೆ ಮುನ್ನ ಭತ್ತದ ಬೀಜಗಳನ್ನು ಚೆಲ್ಲಿ, ಮಳೆ ಆಶ್ರಿತ ಭತ್ತವನ್ನು ಸಹ ಬೆಳೆಯುತ್ತಾರೆ. ಎಲ್ಲಾ ವಿಧವಾದ ರೋಗನಿರೋಧಕ ಶಕ್ತಿಯನ್ನು ಈ ತಳಿಗಳು ಪಡೆದು ಕೊಂಡಿರುವುದು ವಿಶೇಷ. ಈ ಪ್ರದೇಶದಲ್ಲಿ ವಾಸಿಸುತ್ತಿರುವ ಮರಿಯ ಎಂಬ ಬುಡಕಟ್ಟು ಜನಾಂಗದ ಆದಿವಾಸಿಗಳು ಮಳೆ ಆಶ್ರಿತ ಭತ್ತದ ಕೃಷಿಯಲ್ಲಿ ಪರಿಣಿತ ತಜ್ಞರಾಗಿದ್ದಾರೆ. ಇಲ್ಲಿನ ಬಹುತೇಖ ತರಕಾರಿ ಗಳು ಕೂಡ ದೇಶಿ ಬಿತ್ತನೆ ಬೀಜಗಳಿಂದ ಕೂಡಿವೆ. ಟಮೋಟೊ, ಬದನೆ, ಹಾಗಲ, ಕುಂಬಳ, ಹೀರೆಕಾಯಿ, ಸೋರೆ ಕಾಯಿ, ಬಗೆ ಬಗೆಯ ಸೊಪ್ಪುಗಳು ವಿಶಿಷ್ಟ ರುಚಿ ಮತ್ತು ಪೌಷ್ಟಿಕಾಂಶಗಳು ಹಾಗೂ ನಾರಿನಿಂದ ಕೂಡಿವೆ.
ಇತ್ತೀಚೆಗೆ ಛತ್ತೀಸಗಡದ ರಾಜಧಾನಿ ರಾಯ್ ಪುರ್ ದಲ್ಲಿ ಆರಂಭವಾಗಿರುವ ಇಂದಿರಾಗಾಂಧಿ ಕೃಷಿ ವಿಶ್ವ ವಿದ್ಯಾಲಯಯ ಇಲ್ಲಿನ ಸ್ಥಳಿಯ ಬೀಜ ಸಂಸ್ಕೃತಿ ಮತ್ತು ಆದಿವಾಸಿಗಳ ಕೃಷಿಯ ವೈವಿಧ್ಯತೆ ಹಾಗೂ ಅವರ ದೇಶಿ ಜ್ಞಾನ ಪರಂಪರೆ ಕುರಿತಂತೆ
ಅಧ್ಯಯನ ಕೈಗೊಂಡಿದೆ. ಕೆಲವು ಖಾಸಾಗಿ ಬೀಜ ಕಂಪನಿಗಳ ಹಾವಳಿಯಿಂದಾಗಿ ಬೀಜ ಸಂಕರದ ಕೆಲಸ ಕೂಡ ಗುಪ್ತವಾಗಿ ನಡೆಯುತ್ತಿದ್ದು, ಹೈಬ್ರಿಡ್ ತಳಿಗಳ ಹಾವಳಿಯಿಂದಾಗಿ ದೇಶಿ ಬಿತ್ತನೆ ಬೀಜಗಳು ನಶಿಸುತ್ತಿವೆ. ಇವುಗಳನ್ನು ಸಂರಕ್ಷಿಸಲು " ರೂಪಾಂತರ್ "ಎಂಬ ಸ್ವಯಂ ಸೇವಾ ಸಂಸ್ಥೆಯೊಂದು ಸ್ಥಳೀಯ ಆದಿವಾಸಿಗಳ ನೆರವಿನಿಂದ ಈ ಪ್ರದೇಶದಲ್ಲಿ. ಕ್ರಿಯಾಶೀಲವಾಗಿದೆ.
ಇಲ್ಲಿನ ಬೀಜ ಸಂಸ್ಕೃತಿಯ ಬೀಗದ ಕೀಲಿ ಆದಿವಾಸಿ ಮಹಿಳೆಯರ ಕೈಯಲ್ಲಿದೆ.
ವಾರಕ್ಕೊಮ್ಮೆ ಸ್ಥಳೀಯವಾಗಿ ನಡೆಯುವ ವಾರದ ಸಂತೆಗಳಲ್ಲಿ ತಮ್ಮಮ ತರಕಾರಿಗಳನ್ಹಿನು ಮಾರಲು ಹೋಗುವ ಮಹಿಳೆಯರು ಮಳೆಗಾಲಕ್ಕೆ ಮುನ್ನ ಬೀಜ ವಿನಿಮಯ ಮಾಡಿಕೊಳ್ಳುತ್ತಾರೆ. ಈ ವಿನಿಮಯ ಪದ್ಧತಿ ಇತರೆ ಬುಡಕಟ್ಟು ಜನಾಂಗಗಳ ನಡುವೆ ಸಹ ನಡೆಯುತ್ತದೆ. ಯಾವುದೇ ರಸಾಯನಿಕ ಅಥವಾ ಕೀಟ ನಾಶಕ ಬಳಸದೆ, ಅಧಿಕ ಇಳುವರಿ ಪಡೆಯಬಹುದಾಗ ಅನೇಕ ಭತ್ತ ಮತ್ತು ಗೋಧಿಯ ತಳಿಗಳು ಇಲ್ಲಿರುವುದು ವಿಶೇಷವಾಗಿದೆ. ಕಪ್ಪು ಭತ್ತ ಎಂದು ಕರೆಯುವ ವಿಶೇಷ ತಳಿಯೊಂದಿದ್ದು. ಇದರಲ್ಲಿರುವ ನಾರಿನ ಅಂಶ ಕ್ಯಾನ್ಸರ್ ರೋಗವನ್ನು ತಡೆಗಟ್ಟುವ ಗುಣವನ್ನು ಹೊಂದಿದೆ ಎಂಬುದು ಅಧ್ಯಯನದಿಂದ ಧೃಡಪಟ್ಟಿದೆ.
ಈ ಪ್ರದೇಶದಲ್ಲಿ ದೊರೆಯುವ ಮೂಲಂಗಿ, ಈರುಳ್ಳಿ, ಬೆಳ್ಳುಳ್ಳಿ, ಇವುಗಳಲ್ಲಿ ಇರುವ ಖಾರದ ಅಂಶ ನಮ್ಮ ನಾಲಿಗೆಯನ್ನು ಸುಡುತ್ತವೆ. ಅದೇ ರೀತಿ ಸ್ಥಳಿಯವಾಗಿ ಬೆಳೆಯುವ ಆಲೂಗೆಡ್ಡ. ಹೂ ಕೋಸು, ಎಲೆ ಕೋಸು ಇವುಗಳನ್ನು ತರಕಾರಿ ಮಾರುಕಟ್ಟೆಯಲ್ಲಿ ನೋಡುವುದೇ ಕಣ್ಣಿಗೆ ಹಬ್ಬ.
ಅರಣ್ಯ ದೊಳಗಿದ್ದು ಯಾವುದೇ ಸಾಂಕ್ರಾಮಿಕ ರೋಗಗಳಿಗೆ ಅಥವಾ ಸೊಳ್ಳೆಗಳಿಂದ ತಗಲುಬಹುದಾದ ಹಲವು ಕಾಯಿಲೆಗಳಿಗೆ ತುತ್ತಾಗದೆ ಇರುವಂತಹ, ಆದಿವಾಸಿಗಳ ರೋಗ ನಿರೋಧಕ ಶಕ್ತಿಯ ಹಿಂದೆ ಅವರ ಆಹಾರ ಸಂಸ್ಕೃತಿಯ ಇತಿಹಾಸವಿದೆ. ಹಸಿವು, ಬಡತನ , ಅಪೌಷ್ಟಿಕತೆಯಿಂದ ಬಳಲುತ್ತಿರುವ ಆದಿವಾಸಿಗಳ ರೋಗನಿರೋಧಕ ಶಕ್ತಿಗೆ ಬಹು ಮುಖ್ಯ ಕಾರಣ ಕೃಷಿ ಮತ್ತು ಆಹಾರ ಸಂಸ್ಕೃತಿಯಲ್ಲಿ ಅವರು ಅಳವಡಿಸಿಕೊಂಡು ಬಂದಿರುವ ದೇಶಿ ಜ್ಞಾನ ಪರಂಪರೆಯನ್ನು ನಾವು ಅಲ್ಲಗೆಳೆಯಲಾಗದು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ