ಶನಿವಾರ, ಆಗಸ್ಟ್ 17, 2019

ಕುರಿಗಳು ಸಾರ್ ನಾವು ಕುರಿಗಳು



ಈ ದಿನ ಇಂಡಿಯಾ ಟುಡೆ ಎಂಬ ಇಂಗ್ಲೀಷ್ ಪಾಕ್ಷಿಕ ಪತ್ರಿಕೆಯು ಭಾರತದ ಆರ್ಥಿಕ ಚಟುವಟಿಕೆ ಕುರಿತಂತೆ ನಡೆಸಿರುವ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದೆ. ಭಾರತದ ಪ್ರಜ್ಞಾವಂತ ನಾಗರೀಕರನ್ನು ಬೆಚ್ಚಿ ಬೀಳಿಸುವ ಸಂಗತಿಯೆಂದರೆ, ಸಧ್ಯದ ಭಾರತದ  ಆರ್ಥಿಕ ಪರಿಸ್ಥಿತಿಯು ಹಿಂದಿನ ಯು.ಪಿ.ಎ. ಸರ್ಕಾರಕ್ಕಿಂತ ಉತ್ತಮವಾಗಿದೆ ಎಂದು ಶೇಕಡ 60ರಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ.
ಕಳೆದ ಜನವರಿಯಲ್ಲಿ ಅಂದರೆ, ಲೋಕಸಭಾ ಚುನಾವಣೆಗೆ ಮುನ್ನ ನಡೆಸಿದ್ದ ಆರ್ಥಿಕ ಸಮೀಕ್ಷಗಿಂತ ಶೇಕಡ 11ರಷ್ಟು ಹೆಚ್ಚು  ಮಂದಿ ಮೋದಿ ಸರ್ಕಾರದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಹಾಗೂ  ಮುಂದಿನ ೈದು ವರ್ಷಗಳಲ್ಲಿ ಮತ್ತಷ್ಟು ಸುಧಾರಿಸಲಿದೆ ಎಂದು ತಿಳಿಸಿದ್ದಾರೆ. ಈ ವರದಿಯನ್ನು ಗಮನಿಸಿದಾಗ ನನಗೆ ಬ್ರಿಟನ್ ಪ್ರಧಾನಿಯಾಗಿದ್ದ ವಿನ್ಸಂಟ್ ಚರ್ಚಿಲ್ ನೆನಪಾಗುತ್ತಿದ್ದಾನೆ. ಆತ  ಭಾರತಕ್ಕ ಸ್ವಾತಂತ್ರ್ಯ ನೀಡುವ ಕುರಿತು ಈ ರೀತಿ ಪ್ರತಿಕ್ರಿಯಿಸಿದ್ದ.
“ ಭಾರತೀಯರು ಗುಲಾಮಗಿರಿಯ ಮನೋಭಾವದವರು. ಅವರು ಇನ್ನೊಬ್ಬರಿಂದ ಆಳಿಸಿಕೊಳ್ಳುವುದಕ್ಕೆ ಲಾಯಕ್ಕೇ ಹೊರತು, ಆಳುವುದಕ್ಕೆ ಯೋಗ್ಯರಲ್ಲ” ಎಂದು 75 ವರ್ಷಗಳ ಹಿಂದೆ  ಭಾರತೀಯರ ಹಣೆ ಬರಹ ಬರೆದಿಟ್ಟ ಚರ್ಚಿಲ್ ನ ದೂರದೃಷ್ಟಿಯ ಆಲೋಚನಾ ಕ್ರಮವನ್ನು ನಾವಿಂದು ಸ್ವಾಗತಿಸಲೇ ಬೇಕಿದೆ. ಏಕೆಂದರೆ, ಕಳೆದ ಇಪ್ಪತ್ತು ವರ್ಷಗಳಲ್ಲಿ ಕಂಡರಿಯದ ಕುಸಿತವನ್ನು ವಾಹನ ಉದ್ದಿಮೆ ಈಗ ಎದುರಿಸುತ್ತಿದೆ. ದೇಶಾದ್ಯಂತ ಮುನ್ನೂರಕ್ಕೂ ಹೆಚ್ಚು ಡೀಲರ್ ಗಳು ಬಾಗಿಲು ಮುಚ್ಚಿದ್ದಾರೆ. ಮಾರುತಿ, ,ಟಾಟಾ ಕಂಪನಿಗಳು ಗಳು ತಮ್ಮ ಉತ್ಪಾದನೆಯನ್ನು ಕಡಿತಗೊಳಿಸಿವೆ. ಉತ್ಪಾದನಾ ವಲಯದ ಬೆಳವಣಿಗೆ  ಶೇಕಡ 6.9 ರಿಂದ ಶೇಕಡ 1,2 ಕ್ಕೆ ಕುಸಿದಿದೆ.  ಗಣಿ ಮತ್ತು ಕೃಷಿ ವಲಯದ ಬೆಳೆವಣಿಗೆ ಸ್ಥಗಿತಗೊಂಡಿದ್ದರೆ, ಜಿ.ಡಿ.ಪಿ. ಬೆಳವಣಿಗೆಯ  ದರ ಶೇಕಡ 7 ರಷ್ಟು ಸಾಧ್ಯ ಎಂದು ಬಹುತೇಕ ಸಮೀಕ್ಷಾ ವರದಿಗಳು ಹೇಳುತ್ತಿವೆ. ಬ್ಯಾಂಕಿಂಗ್ ಕ್ಷೇತ್ರವೂ ಸೇರಿದಂತೆ ಸಾರ್ವಜನಿಕ ಉದ್ಯಮಗಳು ಸಾವಿನ ಹೊಸ್ತಿಲಲ್ಲಿ ತಲೆ ಇಟ್ಟು ಮಲಗಿವೆ.. ಈವರೆಗೆ ಮೂರು ಕೋಟಿ ಉದ್ಯೋಗಗಳು ಕಡಿತಗೊಮಡಿವೆ, ನಿರುದ್ಯೋಗದ ಪ್ರಮಾಣ ದಿನೆ ದಿನೇ ಹೆಚ್ಚುತ್ತಿದೆ ಇಂತಹ ದಯನೀಯ  ಸ್ಥಿತಿಯಲ್ಲಿ ದೇಶದ ಆರ್ಥಿಕ ಸ್ಥಿಗತಿಯ ಕುರಿತಂತೆ  ಶೇಕಡ 60 ರಷ್ಟು ಮಂದಿಗೆ ಕಿಂಚಿತ್ತೂ ಜ್ಞಾನವಿಲ್ಲ ಎಂದರೆ ನಗಬೇಕೋ? ಅಳಬೇಕೋ ತಿಳಿಯುತ್ತಿಲ್ಲ.

ರೈತರ ಆತ್ಮ ಹತ್ಯೆ ಕುರಿತು ಶೇಕಡ 16 ರಷ್ಟು ಮಂದಿ, ಭ್ರಷ್ಟಾಚಾರ ಕುರಿತು ಶೇಕಡ 11 ರಷ್ಟು ಮಂದಿ, ಬೆಲೆ ಏರಿಕೆ ಕುರಿತಂತೆ ಶೇಕಡ 10 ರಷ್ಟು ಮಂದಿ ಮಾತ್ರ ಕಳವಳ ವ್ಯಕ್ತ ಪಡಿಸಿದ್ದಾರೆ. ಉಳಿದವರ ಪಾಲಿಗೆ ಮೋದಿ ಸರ್ಕಾರದ ಆಡಳಿತ ಮತ್ತು ಆರ್ಥಿಕ ಸ್ಥಿತಿಗತಿ ಹಿಂದಿನ ಕಾಂಗ್ರೇಸ್ ನೇತೃತ್ವದ ಯು.ಪಿ.ಎ. ಸರ್ಕಾರಕ್ಕಿಂತ ಉತ್ತಮವಾಗಿದೆ. ದೇಶದ 19 ರಾಜ್ಯಗಳ 97  ಪಾರ್ಲಿಮೆಂಟ್ ಕ್ಷೇತ್ರಗಳಲ್ಲಿ ವಿವಿಧ ವರ್ಗದ 12 ಸಾವಿರ ದ 100ಮಂದಿಯನ್ನು ಕಳೆದ ಜುಲೈ 22 ರಿಂದ 30 ರವರೆಗೆ ಸಂದರ್ಶಿಸಿದಾಗ ಹೊರಬಂದ ಫಲಿತಾಂಶ ಇದಾಗಿದೆ.
ಭೌತಿಕ ಬಡತನಕ್ಕೆ ಮದ್ದು ಕಂಡು ಹಿಡಿಯಬಹುದು. ಆದರೆ, ಬೌದ್ಧಿಕ ಬಡತನಕ್ಕೆ ಮದ್ದು ಅರೆಯುವ ಬಗೆ ಹೇಗೆ? 
ಸಿವನೇ ಚೊಂಬುಲಿಂಗೇಶ್ವರ ನೀನೆ  ನಮ್ಮನ್ನು ಕಾಪಾಡಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ