ನಾನು ಕರ್ನಾಟಕದಲ್ಲಿ
ಈವರೆಗೆ ಕಂಡರಿಯದ
ಪ್ರಕೃತಿಯ ವಿಕೋಪಕ್ಕೆ
ಮತ್ತು ಸಂತ್ರಸ್ತರ
ಬವಣೆಗೆ ಸಾಕ್ಷಿಯಾದ
ನಂತರ ನನ್ನೊಳಗೆ
ಒಂದು ರೀತಿಯ
ಸೂತಕದ ಛಾಯೆ
ಮನೆ ಮಾಡಿದೆ.
ಬರದ ಬವಣೆಯಲ್ಲಿ
ಕಳೆದ ಐದಾರು
ವರ್ಷಗಳಿಂದ ನರಳಿದ
ರೈತ ಸಮುದಾಯದ
ಬದುಕು ಈ
ಬಾರಿ ನೆರೆಯಲ್ಲಿ
ಕೊಚ್ಚಿ ಹೋಗಿದೆ.
ಅನ್ನದಾತ ಎಂದು
ಕರೆಸಿಕೊಂಡ ರೈತ
ಈಗ ನಿರಾಶ್ರಿತರ
ಶಿಬಿರದಲ್ಲಿ ಕುಳಿತು
ತುತ್ತು ಅನ್ನಕ್ಕೆ
ಕೈಚಾಚುವುದನ್ನು ನೋಡಿ
ಮನಸ್ಸು ಭಾರವಾಗಿದೆ.ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಭಾಷಣ ಬಿಗಿದು ಓಟು ಗಿಟ್ಟಿಸಿಕೊಂಡವರು ದಿಲ್ಲಿಯೆಂಬ ನಾಯಕಸಾನಿಯ ಸೆರಗಿನಲ್ಲಿ ಮರೆಯಾಗಿದ್ದಾರೆ. ಉತ್ತರ ಕರ್ನಾಟಕದ ಅದರಲ್ಲೂ ವಿಶೇಷವಾಗಿ ಬೆಳಗಾವಿ, ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಗಳ ಬದುಕು ಮೂರಾಬಟ್ಟೆಯಾಗಿದೆ.
ಭವಿಷ್ಯದ ಬದುಕಿನ ಆತಂಕ, ಸಾವು ಮತ್ತು ನೋವು ಇವುಗಳು ಎಲ್ಲರನ್ನೂ ಜಾತಿ, ಧರ್ಮದ ಬೇಧವಿಲ್ಲದೆ ಒಂದುಗೂಡಿಸಿವೆ.ಈ ಸಂದರ್ಭದಲ್ಲಿ ನನಗೆ ಹದಿನಾಲ್ಕು ವರ್ಷಗಳ ಹಿಂದಿನ ತಮಿಳುನಾಡಿನಲ್ಲಿ ಸಂಭವಿಸಿದ ಸುನಾಮಿ ದುರಂತ ನೆನಪಾಯಿತು.
೨೦೦೪ ರ ಡಿಸೆಂಬರ್ ತಿಂಗಳಲ್ಲಿ ನಡೆದ ಈ ದುರಂತದಲ್ಲಿ ನಾಗಪಟ್ಟಣಂ ಜಿಲ್ಲೆಗೆ ಅತೀವ ಹಾನಿಯಾಯಿತು.ಚಿದಂಬರಂ, ಕಾರೈಕಲ್ ಹಾಗೂ ಕಡಲೂರು ಮತ್ತು ನಾಗಪಟ್ಟಣಂ ಸಮೀಪದ ಕಡಲತೀರದ ಮೀನುಗಾರರ ಹಳ್ಳಿಗಳನ್ನು ಸಮುದ್ರ ಆಪೋಶನ ತೆಗೆದುಕೊಂಡಿತ್ತು. ಬದುಕುಳಿದ ಸಾವಿರಾರು ಜನ ಅನ್ನ ಮತ್ತು ಸೂರಿಲ್ಲದೆ ಬಯಲಿಗೆ ಬಿದ್ದ ಸಂದರ್ಭದಲ್ಲಿ ನಾಗಪಟ್ಟಣಂ ಸಮೀಪದ ನಾಗೂರ್ ದರ್ಗಾ ಎಂಟು ಸಾವಿರ ಮಂದಿಗೆ ನಲವತ್ತು ದಿನಗಳ ಕಾಲ ಊಟ ಹಾಕಿ ಬಹುತ್ವದ ಈ ನೆಲದಲ್ಲಿ ಮಾನವೀಯತೆ ಸತ್ತಿಲ್ಕ ಎಂಬುದನ್ನಸಾಬೀತುಪಡಿಸಿತು.
ತಂಜಾವೂರು ದೊರೆಯ ಕಣ್ಣಿನ ಬೇನೆ ವಾಸಿಮಾಡಿದ ಮುಸ್ಲಿಂ ಸಂತನಿಗೆ ದೊರೆ ನೀಡಿದ ಜಾಗದಲ್ಲಿ ಈ ದರ್ಗಾ ನಿರ್ಮಾಣಗೊಂಡಿದೆ. ಜೊತೆಗೆ ತಮಿಳುನಾಡಿನ ಹಿಂದೂ ಮತ್ತು ಮುಸ್ಲಿಂ ಬಾಂಧವರ ಶ್ರದ್ಧಾ ಕೇಂದ್ರವಾಗಿದೆ. ನಾಗಪಟ್ಟಣಂ ಜಿಲ್ಲಾಧಿಕಾರಿ ಕಚೇರಿ ಎದುರುಗಿನ ಹತ್ತು ಎಕರೆ ಭೂಮಿಯಲ್ಲಿ ಹಾಕಲಾಗಿದ್ದ ತೆಂಗಿನ ಗರಿಯ ಚಪ್ಪರದಲ್ಲಿ ಆರು ಸಾವಿರ ಮಂದಿ ಮತ್ತು ದರ್ಗಾದಲ್ಲಿ ಜಾತಿ, ಧರ್ಮ ಬೇಧವಿಲ್ಲದೆ ಎರಡು ಸಾವಿರ ಮಂದಿ ಆಶ್ರಯ ಪಡೆದಿದ್ದರು
ಬೆಳಿಗ್ಗೆ ಇಡ್ಲಿ ಅಥವಾ ಪೊಂಗಲ್, ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಾಂಬಾರ್ ಬಡಿಸಲಾಗುತ್ತಿತ್ತು.
ಅಲ್ಲಿ ನೊಂದವರು ಮತ್ತು ನೋಯದವರ ನಡುವೆ ಮನುಷ್ಯತ್ವ ಸೇತುವೆ ನಿರ್ಮಾಣವಾಗಿತ್ತು. ನೀಡುವವನಿಗೆ ನೀಡುತ್ತಿದ್ದೇನೆ ಎಂಬ ಅಹಂಕಾರವಿರಲಿಲ್ಲ. ಬೇಡುವವನಿಗೆ ಪಡೆಯುತ್ತಿದ್ದೇನೆ ಎಂಬ ಕೀಳರಿಮೆಯಿರಲಿಲ್ಲ. ಅಕ್ಕಿ, ಬೇಳೆ ಕೊಟ್ಟವನು ಯಾವ ಧರ್ಮದವನು, ಅಡುಗೆ ಮಾಡಿದವನು ಯಾವ ಜಾತಿ? ಬಡಿಸುತ್ತಿರುವವನು ಯಾವ ಕುಲ? ಎಂಬ ಪ್ರಶ್ನೆ ಅಲ್ಲಿ ಯಾರ ಎದೆಯಲ್ಲೂ ಉದ್ಭವಿಸಲಿಲ್ಲ.
ಕಾರೈಕಲ್, ನಾಗಪಟ್ಟಣಂ ಮತ್ತು ಕುಂಭಕೋಣಂ ತಾಲೋಕಿನಲ್ಲಿ ಅಸಂಖ್ಯಾತ ಮುಸ್ಲಿಂ ಕುಟುಂಬಗಳು ಕೃಷಿ ಮತ್ತು ವ್ಯಾಪಾರದ ಮೂಲಕ ಶ್ರೀಮಂತವಾಗಿವೆ. ಪ್ರತಿ ಕುಟುಂಬಗಳು ಲಾರಿ, ವ್ಯಾನುಗಳ ಮೂಲಕ ನಾಗೂರು ದರ್ಗಾಕ್ಕೆ ಅಕ್ಕಿ, ಬೇಳೆ, ಎಣ್ಣೆ, ತರಕಾರಿ ಕಳುಹಿಸಿ ತಮ್ಮ ಹೆಸರು ಎಲ್ಲಿಯೂ ಪ್ರಚಾರಕ್ಕೆ ಬರದಂತೆ ನೋಡಿಕೊಂಡವು.
ಡಿಸೆಂಬರ ಕೊನೆಯವಾರ ಐದು ದಿನಗಳ ಕಾಲ ನೆಲದ ಮೇಲಿನ ನರಕ ಮತ್ತು ಸ್ಮಶಾನದಂತಿದ್ದ ಈ ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದ ನಾನು ಒಂದು ದಿನ ದರ್ಗಾದಲ್ಲಿದ್ದೆ.
ಮುಸ್ಲಿ ಸಂತನ ಕುಟುಂಬದ ವಾರಸುದಾರರ ನೇತೃತ್ವದಲ್ಲಿ ನಡೆಯುತ್ತಿರುವ ಈ ದರ್ಗಾದ ಮುಖ್ಯಸ್ಥ ರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ
ಈ ರೀತಿ ಊಟ ಹಾಕುವ ಧೈರ್ಯ ನಿಮಗೆ ಹೇಗೆ ಬಂತು? ಎಂದು ಪ್ರಶ್ನಿಸಿದೆ. ಅವರು ನಗುತ್ತಾ ಹೀಗೆ ಉತ್ತರಿಸಿದರು.
ದೇವರು ನೆರವಿಗೆ ಬರುತ್ತಾನೆ ಎಂಬ ಇಚ್ಚಾಶಕ್ತಿಯಿಂದ ಆರಂಭಿಸಿದೆ. ದರ್ಗಾದ ಭಕ್ತರು ದೇವರ ರೂಪದಲ್ಲಿ ಸಹಕರಿಸಿದರು ಎಂದು ಹೇಳಿದರು. ಜೊತೆಗೆ ಮಧ್ಯಾಹ್ನದ ಭೊಜನಕ್ಕೆ ಆಹ್ವಾನಿಸಿದರು. ಹತ್ತು ಕಿ.ಮಿ. ದೂರದ ನಾಗಪಟ್ಟಣಂ ಗೆ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ರವಾನೆಯಾಗುತ್ತಿದ್ದ ಅನ್ನ,ಸಾಂಬಾರ್ ನೋಡುತ್ತಾ ದರ್ಗಾದ ಮುಖ್ಯಸ್ಥರ ಜೊತೆ ಊಟ ಮಾಡುವಾಗ ನನಗೆ ಅನಿಸಿದ್ದು ಹೀಗೆ.
"ಮಠ, ಮಂದಿರ, ಮಸೀದಿಗಳೆಂದರೆ ಕೇವಲ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲ, ಮಾನವೀಯತೆಯ ಶ್ರದ್ಧಾಕೇಂದ್ರಗಳೂ ಹೌದು."
ಜಿಮೊಟೊ ಎಂಬ ಆಹಾರ ಸರಬರಾಜು ಮಾಡುವ ಕಂಪನಿಯ ಡೆಲಿವರಿ ಬಾಯ್ ಮುಸ್ಲಿಂ ಎನ್ನುವ ಕಾರಣಕ್ಕೆ ಆಹಾರ ನಿರಾಕರಿಸಿದ ಹಾಗೂ ಕಂಪನಿಯ ವಿರುದ್ಧ ಸಿಡಿದೆದ್ದ ನಮ್ಮ ನವನಾಗರೀಕತೆಯ ಅನಾಗರಿಕರಿಗೆ ಇಂತಹ ಸುನಾಮಿ ಒಮ್ಮೆ ಅವರ ಬದುಕಿನಲ್ಲಿ ಅಪ್ಪಳಿಸಬಾರದೆ ಎಂದು ಈ ಕ್ಷಣದಲ್ಲಿ ಹಂಬಲಿಸುತ್ತಿದ್ದೇನೆ.
ನೊಂದವರ ನೋವ ನೋಯದವರೆತ್ತ ಬಲ್ಲರೊ? ಎಂಬ ಅಕ್ಕನ ವಚನದ ಸಾಲು ಈ ಪ್ರವಾಹ ಸಂತ್ರಸ್ತರನ್ನು ನೋಡಿದಾಗ ನೆನಪಾಗುತ್ತಿದೆ.
o
.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ