ಎಸ್.ಗಂಗಾಧರಯ್ಯ
ಈಗಾಗಲೇ ಕನ್ನಡದ ಕಥಾ ಲೋಕದಲ್ಲಿ ಹೆಸರು ಮಾಡಿದವರು. ಜೊತೆಗೆ ಕನ್ನಡದಲ್ಲಿ ಶ್ರೇಷ್ಠ ಅನುವಾದಕರಲ್ಲಿ
ಒಬ್ಬರಾಗಿರುವ ಇವರು ಮಳೆಯಾಳಂ ಭಾಷೆಯ ವೈಕಂ ಅವರ ಕಥೆಗಳನ್ನು ಕನ್ನಡಕ್ಕೆ ಅನುವಾದಿಸುವುದರ ಮೂಲಕ ತಾನೊಬ್ಬ
ಸೂಕ್ಷ್ಮ ಮನಸ್ಸಿನ ಅನುವಾದಕ ಮತ್ತು ಕಥೆಗಾರ ಎಂಬುದನ್ನು ತೋರಿಸಿಕೊಟ್ಟವರು. ಈ ಹಿಂದೆ ಒಂದು
ಉದ್ದನೆಯ ಬೆರಳು ಕಥಾ ಸಂಕಲನದಿಂದ ಗಮನ ಸೆಳೆದಿದ್ದ ಗಂಗಾಧರಯ್ಯನವರು, ಇದೀಗ ಒಂದು ದಶಕದ ನಂತರ ಧ್ಯಾನಿಸಿ
ಬರೆದ ಕಥೆಗಳನ್ನು " ದೇವರ ಕುದುರೆ" ಎಂಬ ಹೆಸರಿನಲ್ಲಿ ನಮ್ಮ ಮುಂದಿರಿಸಿದ್ದಾರೆ.
ಈ
ಕಥೆಗಳನ್ನು ಓದುವ ಮುನ್ನ ಕಥೆಗಾರ ಬರೆದಿರುವ ಪ್ರಸ್ತಾವನೆ ಮತ್ತು ಮುನ್ನಡಿ ಬರೆದಿರುವ ಚಿಂತಕ ಎಸ್
ನಟರಾಜ ಬೂದಾಳು ಬರೆದಿರುವ ಮುನ್ನುಡಿ ಈ ಎರಡು ಬರಹಗಳನ್ನು ಓದುಗರು ಜೀರ್ಣಿಸಿಕೊಳ್ಳಲು ಕನಿಷ್ಟ ಎರಡು
ದಿನಗಳ ಕಾಲಾವಕಾಶ ಬೇಕು. ಅದೇ ರೀತಿ ಇಲ್ಲಿನ ಕಥೆಗಳು ಒಂದೇ ಓದಿಗೆ ದಕ್ಕುವ ಕಥೆಗಳಲ್ಲ. ಒಂದೊಂದು
ಕಥೆ ಮತ್ತು ಅವುಗಳ ಪಾತ್ರಗಳು ಕಥೆಯನ್ನು ಓದಿ ಮುಗಿಸಿದ ನಂತರವೂ ಓದುಗರ ಮನಸ್ಸನ್ನು ಗಾಡವಾಗಿ ತಟ್ಟುತ್ತವೆ.
ನಾವು
ಬದುಕುತ್ತಿರುವ ವರ್ತಮಾನದ ಬದುಕಿಗೆ ಮುಖಾಮುಖಿಯಾಗಿ, ಅವಸಾನದ ಅಂಚಿಗೆ ದೂಡಲ್ಪಡುತ್ತಿರುವ ಗ್ರಾಮೀಣ
ಬದುಕು, ನಶಿಸಿ ಹೋಗುತ್ತಿರುವ ಮನುಷ್ಯರ ಸಂಬಂಧಗಳು, ಕಳಚಿಕೊಳ್ಳುತ್ತಿರುವ ನೈತಿಕತೆಯ ಕೊಂಡಿಗಳು,
ಕಲುಷಿತಗೊಳ್ಳುತ್ತಿರುವ ನೆಲ ಜಲ ಮತ್ತು ಮನುಷ್ಯರ ಮನಸ್ಸುಗಳು ಹಾಗೂ ಮೌನವಾಗಿ ನರಳುತ್ತಿರುವ ದನ ಕರುವಿನಂತಹ
ಮೂಕ ಪ್ರಾಣಿಗಳ ನಿಟ್ಟುಸಿಗೆ ದನಿಯಾದವರಂತೆ ಬರೆಯುವ ಗಂಗಾಧರಯ್ಯ, ತಮ್ಮ ಅಭಿವ್ಯಕ್ತಿಯಲ್ಲಿ ಮತ್ತು
ಭಾಷೆಯ ಬಳಕೆಯಲ್ಲಿ ಎಲ್ಲಿಯೂ ಆವೇಶಕ್ಕೆ ಮತ್ತು ಭಾವೋದ್ರೇಕಕ್ಕೆ ಒಳಪಡದೆ ಗ್ರಾಮೀಣ ಬದುಕಿನ ದುರಂತಗಳನ್ನು
ತಣ್ಣನೆಯ ಭಾಷೆಯಲ್ಲಿ ಹೇಳುವುದರ ಮೂಲಕ ತಾನೊಬ್ಬ ನುರಿತ ಕಥೆಗಳ ಕಸುಬುದಾರ ಎಂಬುದನ್ನು ಈ ದೇವರ ಕುದುರೆ
ಕಥಾ ಸಂಕಲನದ ಮೂಲಕ ಸಾಬೀತು ಪಡಿಸಿದ್ದಾರೆ.
ಇಂದಿನ
ಅವರಸರದ ಜಗತ್ತಿನಲ್ಲಿ ಸದಾ ಓದುಗರ ನೆನಪಿನಲ್ಲಿರಬೇಕೆಂಬ ಹಪಾಹಪಿಯಲ್ಲಿ "ಸಂತೆಗೆ ಮುನ್ನ ಮೂರು
ಮೊಳ ನೇಯ್ದರು" ಎಂಬ ಗಾದೆಯಂತೆ ಹಲವು ಲೇಖಕರು ಕಥೆ ಮತ್ತು ಕಾದಂಬರಿಗಳನ್ನು ಬರೆಯುತ್ತಿರುವುದನ್ನು
ನಾನು ಗಮನಿಸಿದ್ದೇನೆ. ಆದರೆ, ಅವುಗಳು ಕೇವಲ ಮನರಂಜನೆ ಅಥವಾ ಕಾಲವನ್ನು ತಳ್ಳುವ ಸಾಹಿತ್ಯ ಪ್ರಕಾರಗಳಾದವೇ
ಹೊರತು, ನಿಜ ಲೇಖಕನೊಬ್ಬನ ತಲ್ಲಣದ ಕಥೆಗಳಾಗಿ ಉಳಿದಿಲ್ಲ. ಕುರುಡರ ಊರಿನಲ್ಲಿ ಕನ್ನಡಿ ಮಾರುವ ಕಾಯಕದವರಂತೆ ಕಾಣುವ ಕಥೆ ಮತ್ತು ಕಾದಂಬರಿಗಾರರಿಗಿಂತ
ಭಿನ್ನವಾಗಿ ಗಂಗಾಧರಯ್ಯನವರು ತಮ್ಮ ಸತ್ವಭರಿತ ಕಥೆಗಳ ಮೂಲಕ .ಓದುಗರ ಮನಸ್ಸಿನಲ್ಲಿ ಶಾಸ್ವತವಾಗಿ
ಉಳಿದುಕೊಳ್ಳುತ್ತಾರೆ.
ಒಂದು
ಕಥಾ ವಸ್ತುವನ್ನು ಹೇಗೆ ನಿರ್ವಹಿಸಬೇಕು? ಪಾತ್ರಗಳ ಪೋಷಣೆ ಹೇಗಿರಬೇಕು, ಮತ್ತು ಭಾಷೆಯ ಬಳಕೆಯಲ್ಲಿ
ಇರಬೇಕಾದ ಎಚ್ಚರ ಹಾಗೂ ಕಥೆಗೆ ಪರಿಸರವನ್ನು ಕಟ್ಟಿಕೊಡುವ ರೀತಿ ಈ ಎಲ್ಲಾ ಕೌಶಲ್ಯಗಳನ್ನು ಇಂದಿನ ಯುವ
ಲೇಖಕರು ಗಂಗಾಧರಯ್ಯನವರ ದೇವರ ಕುದುರೆ ಸಂಕಲನದಿಂದ ಕಲಿಯಬಹುದಾಗಿದೆ.
ಕಳೆದ
ನಲವತ್ತು ವರ್ಷಗಳಿಂದ ನನ್ನೊಳಗೆ ದಾಖಲಾಗಿರುವ ಡಾ.ಬೆಸಗರಳ್ಳಿ ರಾಮಣ್ಣ ಮತ್ತು ದೇವನೂರರ ಕಥೆಗಳು, ಶ್ರೀ ಕೃಷ್ನ ಆಲನಹಳ್ಳಿಯವರ ಬುಜಂಗಯ್ಯನ
ದಶಾವತಾರ ಕಾದಂಬರಿ, ಪ್ರೊ. ಕಾಳೇಗೌಡ ನಾಗವಾರರ " ಬೆಟ್ಟ, ಮಳೆ, ಸಾಲು" ಎಂಬ ಒಂದು ನೀಳ್ಗತೆ,
ಯಶವಂತ ಚಿಂತಾಲರ ಕಥೆಗಳು ಇವುಗಳಲ್ಲದೆ, ಕಳೆದ ಇಪ್ಪತ್ತೈದು ವರ್ಷಗಳಿಂದ ಬರೆಯುತ್ತಿರುವ ಅಮರೇಶ ನುಗುಡೋಣಿ,
ಮೊಗಳ್ಳಿ ಗಣೇಶ್ ಕಥೆಗಳು, ಬಾಳಾಸಾಹೇಬ್ ಲೋಕಾಪುರ ಅವರ ಕಥೆ ಮತ್ತು ಕಾದಂಬರಿಗಳಂತೆ ಗಂಗಾಧರಯ್ಯನವರ
ಈ ಕಥೆಗಳು ನನ್ನನ್ನು ಕಾಡತೊಡಗಿವೆ.
ನನ್ನ
ತಲೆಮಾರಿನ ಲೇಖಕರಿಗೆ ಯಾವ ತಲೆಮಾರಿಗೂ ದಕ್ಕದ ವರ
ಮತ್ತು ಶಾಪ ಎರಡೂ ದಕ್ಕಿವೆ, ಅದೇನೆಂದರೆ, ನಾವು ನಮ್ಮ ಕಣ್ಣೆದುರು ಕರಗಿ ಹೋದ ಅಪ್ಪಟ ಮನುಷ್ಯ ಲೋಕದ
ಗ್ರಾಮೀಣ ಜಗತ್ತನ್ನು, ಅಲ್ಲಿನ ಹಬ್ಬ, ಜಾತ್ರೆ, ಪರಿಷೆ, ಜಾನಪದ ಸಂಸ್ಕೃತಿಯ ವೈವಿದ್ಯತೆಗೆ ಸಾಕ್ಷಿಯಾದೆವು.
ಅದೇ ರೀತಿ ಕಳೆದ ಮೂರು ದಶಕದಲ್ಲಿ ನಮ್ಮೆದುರು ತೆರೆದು ಕೊಂಡ, ಕೃತಕ ನಗು, ಅಳು, ಹಾಗೂ ಮೈಥುನದ ಜಗತ್ತು,
ನಾವು ಹೊಂದಿಕೊಳ್ಳಲಾಗದ ನಗರ ಸಂಸ್ಕೃತಿ ಹಾಗೂ ಅಲ್ಲಿನ ವೇಗ ಇವುಗಳಿಗೂ ಸಹ ನಾವು ಸಾಕ್ಷಿಯಾದೆವು. ವರ್ತಮಾನದ ಬದುಕಿನಲ್ಲಿ ಪರದೇಶಿಗಳಂತೆ
ಇಲ್ಲವೆ ಅಬ್ಬೇಪಾರಿ ಕೂಸಿನಂತೆ ಬದುಕುತ್ತಿರುವ ನನ್ನ ತಲೆಮಾರಿನ ಎಲ್ಲಾ ತವಕಗಳಿಗೆ ಮತ್ತು ತಲ್ಲಣಗಳಿಗೆ
ಗಂಗಾಧರಯ್ಯ ನಮ್ಮ ಪರವಾಗಿ ಇಲ್ಲಿ ಧ್ವನಿ ಕೊಟ್ಟಿದ್ದಾರೆ ಎಂದು ಅನಿಸತೊಡಗಿದೆ. ಇಲ್ಲಿನ ಕಥೆಗಳಾದ
ಕರ್ಬಾಲು, ಗುಡ್ಡದ ಕೂಸು, ಕೋರು ನಿಂತಹ ಕಥೆಗಳಿಗೆ
ನಾನು ತಲ್ಲಣಗೊಂಡು ರಾತ್ರಿಯ ನಿದ್ದೆಗಳನ್ನು ಕಳೆದುಕೊಂಡಿದ್ದೀನಿ.
ಪದುಮದೊಳಗೆ
ಬಿಂದು ಸಿಲುಕಿ, ದೇವರ ಕುದುರೆ, ಅಜ್ಜಿಯ ಕೋಲು, ಚಿಕ್ಕನ ನವಿಲು ಮರಿಗಳು ಹೀಗೆ ಅನೇಕ ಕಥೆಗಳು ಮತ್ತು
ನಿರೂಪಣೆಗೆ ಕಥೆಗಾರ ಬಳಸಿರುವ ತಿಪಟೂರು ಸುತ್ತಮುತ್ತಲಿನ ಅಪ್ಪಟ ಗ್ರಾಮೀಣ ಭಾಷೆ ಇವೆಲ್ಲವೂ ಕಥೆಗಳ
ಘನತೆಯನ್ನು ಹೆಚ್ಚಿಸಿವೆ. ಗಂಗಾಧರಯ್ಯನವರು ತಮ್ಮ ಕಥೆಗಳಲ್ಲಿ ಕಟ್ಟಿಕೊಡುವ ಕೆರೆ, ತೊರೆ, ಗುಡ್ಡ,
ಕಣಿವೆ, ಪ್ರಾಣಿ ಪಕ್ಷಿಗಳು, ಹೂವಿನ ಗಿಡಗಳು ಇವೆಲ್ಲವೂ ನಾವು ಕಳೆದುಕೊಂಡ ಬಾಲ್ಯದ ಲೋಕಕ್ಕೆ ಮರಳಿ
ಕೊಂಡೊಯ್ಯುತ್ತವೆ. ಇಂತಹ ಕಾಡುವ ಕಥೆಗಳನ್ನು ನೀಡಿ ನಮ್ಮ ಮನ ತಣಿಸಿದ ಗಂಗಾಧರಯ್ಯನವರಿಗೆ ಅಭಿನಂದನೆಗಳು.
ಅವರ ಮುಂದಿನ ಕೃತಿಗಾಗಿ ರಾಮನಿಗಾಗಿ ಕಾದ ಶಬರಿಯಂತೆ ಕಾಯುತ್ತೇನೆ. ಕುವೆಂಪುರವರು ತಮ್ಮ ಶ್ರೀ ರಾಮಾಯಣ
ದರ್ಶನಂ ಕಾವ್ಯದಲ್ಲಿ ಹೇಳುವ " ಶಬರಿಗಾದನು ಅತಿಥಿ ದಾಶರಥಿ" ಎನ್ನುವ ಹಾಗೆ ಗಂಗಾಧರಯ್ಯನವರು
ಒಂದು ಕಾದಂಬರಿಯ ಮೂಲಕ ಬರಲಿ.
ಜಗದೀಶ್
ಕೊಪ್ಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ