ಶುಕ್ರವಾರ, ಫೆಬ್ರವರಿ 28, 2020

ಬಡವರ ಬಾಪು ಕೃತಿ ಪ್ರಕಟಣೆಗೆ ಮುನ್ನ




 ಭಾರತದ ರಕ್ತ ಸಿಕ್ತ ನಕ್ಸಲ್  ಇತಿಹಾಸ ಕುರಿತಂತೆ 2011 ಸೆಪ್ಟಂಬರ್ ತಿಂಗಳಲ್ಲಿ ಅಧ್ಯಯನ ಮಾಡುತ್ತಿದ್ದ ನಾನು ನಕ್ಸಲ್ ಸಂಘಟನೆಯ ನಾಯಕರಾಗಿದ್ದ ಚಾರು ಮುಜಂದಾರ್ ಮತ್ತು ಕನು ಸನ್ಯಾಲ್ ರವರ ದುರಂತ ಕಥೆಯನ್ನು ಅರಸುತ್ತಾ ಕೊಲ್ಕತ್ತ ನಗರ ಹಾಗೂ ಡಾರ್ಜಿಲಿಂಗ್ ಬಳಿಯ ಸಿಲುಗುರಿ ಪಟ್ಟಣ ಮತ್ತು ನಕ್ಸಲ್ ಬಾರಿ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದೆ. ನಂತರ, ಕೊಲ್ಕತ್ತ ನಗರದಲ್ಲಿ ನಾನು ಉಳಿದುಕೊಂಡಿದ್ದ ಯೂತ್ ಹಾಸ್ಟಲ್ ಗೆ ಸಮೀಪವಿದ್ದ ರವಿಂದ್ರ ನಾಥ್ ಟ್ಯಾಗೂರ್ ವಿ.ವಿ.ಗೆ ಭೇಟಿ ನೀಡಿದೆ.  ಪಶ್ಚಿಮ ಬಂಗಾಳದ ರಾಜಕೀಯ ಮತ್ತು ಸಾಮಾಜಿಕ ವಲಯದ ಮೇಲೆ ನಕ್ಸಲ್ ಹೋರಾಟದಿಂದ  ಆಗಿರುವ ಪರಿಣಾಮವನ್ನು ಅರಿಯುವುದು ನನ್ನ ಮುಖ್ಯ ಉದ್ದೇಶವಾಗಿತ್ತು. ಅಲ್ಲಿನ ಅರ್ಥಶಾಸ್ತ್ರ ಪ್ರಾಧ್ಯಾಪಕರು “ ನೀವು ಶಾಂತಿನಿಕೇತನದ ವಿಶ್ವ ಭಾರತಿ ವಿ.ವಿ.ಗೆ ಹೋಗುವುದು ಒಳಿತು. ಅಲ್ಲಿ ವಿಸ್ತೃತ ಅಧ್ಯಯನಗಳು ನಡೆದಿವೆ” ಎಂಬ ಸಲಹೆ ನೀಡಿದರು. ಮರುದಿನ  ಕೊಲ್ಕತ್ತ ನಗರದಿಂದ ಸುಮಾರು 140  ಕಿಲೊಮೀಟರ್ ದೂರವಿರುವ ಶಾಂತಿನಿಕೇತನಕ್ಕೆ ಭೇಟಿ ನೀಡಿದೆ. ಅಲ್ಲಿರುವ ಹಾಗೂ  ಸೇನ್ ಹೌಸ್ ಎಂದು ಕರೆಸಿಕೊಳ್ಳುವ ಪ್ರಖ್ಯಾತ  ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್ ರವರ ಅಜ್ಜನ ನಿವಾಸವು ಈಗ  ವಿಶ್ವ ಭಾರತಿ ವಿ.ವಿ. ಯ ಅರ್ಥಶಾಸ್ತ್ರದ  ಅಧ್ಯಯನ ಕೇಂದ್ರವಾಗಿದೆ. ( ಅಮಾರ್ತ್ಯ ಸೇನ್ ಹಿಂಭಾಗದಲ್ಲಿರುವ ನಿವಾಸ) ಅವರ ಅಜ್ಜ ಅಂದರೆ, ತಾಯಿಯ ತಂದೆ ಶಾಂತಿನಿಕೇತನದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದು, ವಿಜ್ಞಾನದ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿದ್ದರು. ಹಾಗಿ ಸೇನ್ ಹೌಸ್ ಈಗ ಅಮಾರ್ತಯ ಸೇನರ ವಶದಲ್ಲಿದ್ದು, ಅವರು ತಮಗೆ ಬಂದ ನೊಬೆಲ್ ಪ್ರಶಸ್ತಿ ಹಣ, ಇತರೆ ಪ್ರಶಸ್ತಿ ಹಾಗೂ ಸಂಭಾವನೆಯ ಹಣವನ್ನು ಠೇವಣಿಯನ್ನಾಗಿ ಇಟ್ಟು ಪ್ರಾಚಿ ಎಂಬ ಟ್ರಸ್ಟ್ ಒಂದನ್ನು ಸ್ಥಾಪಿಸಿದ್ದಾರೆ.  ಠೇವಣಿ ಹಣದಿಂದ ಬರುವ ವಾರ್ಷಿಕ  ನಲವತ್ತು ಲಕ್ಷ ರೂಪಾಯಿಗಳನ್ನು ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಯು ಅಧ್ಯಯನಕ್ಕಾಗಿ ವಿನಿಯೋಗಿಸುತ್ತಿದ್ದಾರೆ.

ಅಲ್ಲಿನ ಪ್ರಾಧ್ಯಾಪಕರಾದ ಡಾ. ಬ್ರಹ್ಮಾನಂದ ಚಟ್ಟೋಪದ್ಯಾಯ  ಅವರನ್ನು ಭೇಟಿ ಮಾಡಿದಾಗ, ಅವರು ತಮ್ಮ ಸಂಶೋಧನಾ ವಿದ್ಯಾರ್ಥಿಗಳ ಜೊತೆ  ಸಂತಾಲ್ ಬುಡಕಟ್ಟ ಜನಾಂಗವಿರುವ ಹಳ್ಳಿಗಳತ್ತ ಸೈಕಲ್ ನಲ್ಲಿ ಹೊರಟಿದ್ದರು. ನನಗೂ ಸಹ ಸೈಕಲ್ ಕೊಡಿಸಿ  ಜೊತೆಯಲ್ಲಿ  ಕರೆದುಕೊಂಡು ಕರೆದುಕೊಂಡು ಹೋದರು. ಅವರು ತಮ್ಮ ಪ್ರಯಾಣದ ಜೊತೆ ಅಲ್ಲಿ ಆಗಿರುವ ಅನೇಕ ಅಧ್ಯಯನಗಳ ಮಾಹಿತಿ ನೀಡುವುದರ ಜೊತೆಗೆ ನಕ್ಸಲ್ ಹೋರಾಟದಿಂದ ಪಶ್ಚಿಮ ಬಂಗಾಳ ರಾಜ್ಯದ ಮೇಲೆ ಆಗಿರುವ ಒಳಿತು-ಕೆಡುಕು ಎರಡನ್ನೂ ವಿವರಿಸಿದರು. ಗೇಣಿದಾರರ ಮೇಲೆ ಮತ್ತು ಕೃಷಿ ಕೂಲಿ ಕಾರ್ಮಿಕರ ಮೇಲೆ ನಡೆಯುತ್ತಿದ್ದ ಜಮೀನ್ದಾರರ ದಬ್ಬಾಳಿಕೆ ಸಂಪೂರ್ಣ ಸ್ಥಗಿತಗೊಂಡಿರುವುದನ್ನು ವಿವರಿಸಿದರು. ಏಕೆಂದರೆ, ಶಾಂತಿನಿಕೇತನ  ಅಥವಾ ವಿಶ್ವ ಭಾರತಿ ವಿ.ವಿ. ಇರುವ ಬೀರ್ ಭೂಮಿ ( ವೀರ ಭೂಮಿ) ಜಿಲ್ಲೆಯು ಒಂದು ಕಾಲದಲ್ಲಿ ಜಮೀನ್ದಾರರ ಜಿಲ್ಲೆಯಾಗಿತ್ತು. ಈಗ ಅವರೆಲ್ಲರೂ ಭೂಮಿ ಮಾರಾಟ ಮಾಡಿ ಕೊಲ್ಕತ್ತ ನಗರ ಸೇರಿಕೊಂಡಿರುವ ವಿಷಯ ತಿಳಿಸಿದರು.
ದಕ್ಷಿಣ ಭಾರತದಿಂದ ಅಧ್ಯಯನಕ್ಕಾಗಿ ಅಷ್ಟು ದೂರು ಬಂದಿರುವುದು ಮತ್ತು ನಾನು ಅರ್ಥಶಾಸ್ತ್ರದ ವಿದ್ಯಾರ್ಥಿ ಎಂದು ತಿಳಿದ ನಂತರ ನನ್ನ ಜೊತೆ ಮುಕ್ತವಾಗಿ ಮಾತನಾಡಿದರು. ಜೊತೆಗೆ 2012 ರ ಜನವರಿ ಎರಡನೆಯ ವಾರ  ಪ್ರಾಚಿ ಟ್ರಸ್ಟ್ ನಲ್ಲಿ “ಭಾರತದ ಅಭಿವೃದ್ಧಿಯ  ಸವಾಲುಗಳು” ಕುರಿತು ಐದು ದಿನಗಳ ಕಾರ್ಯಾಗಾರ ಇರುವುದಾಗಿ, ಇದರಲ್ಲಿ ಅಮಾರ್ತ್ಯ ಸೇನ್ ಮತ್ತು ಮಹಮ್ಮದ್ ಯೂನಸ್ ಪಾಲ್ಗೊಳ್ಳುವುದಾಗಿ ತಿಳಿಸಿದರು.  ಜೊತೆಗೆ ನನಗೂ ಶಿಬಿರದ  ಅಭ್ಯರ್ಥಿಯಾಗಿ  ಪಾಲ್ಗೊಳ್ಳಲು ಆಮಂತ್ರಣವಿತ್ತರು. ನನ್ನ ಮೇಲೆ ಅಗಾಧ ಪ್ರಭಾವ ಬೀರಿರುವ ಜಗದ್ವಿಖ್ಯಾತ ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞರ ಮಾತು ಕೇಳುವ ಉದ್ದೇಶದಿಂದ ಆಹ್ವಾನವನ್ನು  ಮರು ಮಾತಿಲ್ಲದೆ ಒಪ್ಪಿಕೊಂಡೆ.
2012 ರ ಜನವರಿಯಲ್ಲಿ ಕಾರ್ಯಾಗಾರಕ್ಕೆ ಹೋದಾಗ,   ಅಲ್ಲಿನ ಪ್ರವಾಸೋದ್ಯಮ ಇಲಾಖೆಯ ಹೋಟೆಲ್ ನಲ್ಲಿ ಉಳಿದುಕೊಂಡಿದ್ದೆ. ನನ್ನ ಅದೃಷ್ಟವೆಂಬಂತೆ ಮಹಮದ್ ಯೂನಸ್ ಸಹ ಅದೇ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಅಮಾರ್ತ್ಯ ಸೇನ್ ಎಂದಿನಂತೆ ತಮ್ಮ ಪೂರ್ವಿಕರ ನಿವಾಸದಲ್ಲಿ ಉಳಿದುಕೊಂಡಿದ್ದರು. ನನಗೆ ಮಹಮ್ಮದ್ ಯೂನಸ್ ರವರ ಉಪನ್ಯಾಸಗಳನ್ನು ಕಾರ್ಯಾಗಾರದಲ್ಲಿ ಮತ್ತು ಸಂಜೆಯ ವೇಳೆ ಹೋಟೆಲ್ ಸಭಾಂಗಣದಲ್ಲಿ ನಡೆಯುತ್ತಿದ್ದ ಖಾಸಾಗಿ ಸಮಾರಂಭಗಳಲ್ಲಿ ಕೇಳುವ ಅವಕಾಶ ದೊರೆಯಿತು.
ಪ್ರತಿ ದಿನ ಬೆಳಿಗ್ಗೆ 5-30 ಕ್ಕೆ ಎದ್ದು ಬೋಲ್ ಪುರ್ ರೈಲು ನಿಲ್ದಾಣದ ಬಳಿ ತೆರಳಿ ಅವರಿಗಾಗಿ  ದ ಟೆಲಿಗ್ರಾಪ್  (ಇಂಗ್ಲೀಷ್) ಹಾಗೂ ಆನಂದ್ ಬಜಾರ್ ( ಬಂಗಾಳಿ) ದಿನ ಪತ್ರಿಕೆಗಳನ್ನು ತಂದು ಅವರಿಗೆ  ನೀಡುತ್ತಿದ್ದೆ. ಒಂದು ದಿನ ಬೆಳಿಗ್ಗೆ ಹೋಟೆಲ್ ಮುಂದಿನ ಆವರಣದಲ್ಲಿ ವಾಕ್ ಮಾಡುತ್ತಿದ್ದಾಗ, ನಾನು ಅವರ ಬಡತನ ಕುರಿತ ಉಪನ್ಯಾಸಗಳ ಪ್ರಬಂಧಗಳನ್ನು ಓದಿರುವುದಾಗಿ ತಿಳಿಸಿದೆ. ನನಗೆ ತಮ್ಮ ಆತ್ಮ ಚರಿತ್ರೆಯ ಕೃತಿ ನೀಡುವುದರ ಜೊತೆಗೆ ಅನೇಕ ಚಿಂತನೆಗಳನ್ನು   ಅವರು ಹಂಚಿಕೊಂಡರು, ನಾನು ಇಸ್ಲಾಂ ಧರ್ಮದಲ್ಲಿ ಜನಿಸಿದ್ದರೂ ಸಹ  ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡುವುದು ಅಥವಾ ರಂಜಾನ್ ಹಬ್ಬದ ಉಪವಾಸ ಮಾಡುವುದಿಲ್ಲ. ಸದಾ ಜಗತ್ತಿನಾದ್ಯಂತ ತಿರುಗುತ್ತಿರುವುದರಿಂದ ಸಾಧ್ಯವಾಗಿಲ್ಲ ಎಂದರು.

ಚಂದ್ರನ ಮೇಲೆ ಕಾಲಿಡುವುದು ಅಥವಾ ಮಂಗಳ ಗ್ರಹದಲ್ಲಿ ನೀರು ಇದೆಯಾ? ಎಂದು ಹುಡುಕುವುದು ನನಗೆ ಮಹತ್ವದ ಸಂಗತಿಗಳಲ್ಲ.  ಈ ನೆಲದ ಮೇಲಿನ ಪ್ರತಿಯೊಂದು ಜೀವವು ಗಂಡು-ಹೆಣ್ಣು ಎಂಬ ಬೇಧವಿಲ್ಲದೆ, ಜಾತಿ, ಧರ್ಮ, ದೇಶಗಳು ಎಂಬ ಗಡಿಗಳಿಲ್ಲದೆ  ಆಹಾರ ಮತ್ತು ನೀರಿನ ಕೊರತೆಯಿಲ್ಲದೆ ಬದುಕುವುದು ಮತ್ತು ಪೌಷ್ಟಿಕತೆಯ ಆಹಾರದ ಮೂಲಕ ಗಟ್ಟಿಯಾಗಿ ಈ ನೆಲದ ಮೇಲೆ ಕಾಲೂರುವುದು ಮುಖ್ಯ ಎಂದು  ಮಹಮ್ಮದ್ ಯೂನಸ್ ನುಡಿದಾಗ ನನಗೆ ರೋಮಾಂಚನ ವಾಯಿತು. ಅವರು ಪ್ರತಿಪಾದಿಸುವ ಮೂರು ಶೂನ್ಯಗಳು ( ಶೂನ್ಯ ಬಡತನ, ಶೂನ್ಯ ನಿರುದ್ಯೋಗ, ಶೂನ್ಯ  ಕಲ್ಮಷ ವಾತಾವರಣ)  ಇವುಗಳು  ನನ್ನ ಮೇಲೆ ಅಗಾಧ ಪರಿಣಾಮ ಬೀರಿದವು. ಇವೆಲ್ಲವನ್ನೂ ಅಡಕಗೊಳಿಸಿ, ಅವರ ಸಂದರ್ಶನದೊಂದಿಗೆ (2017 ರಲ್ಲಿ ನಡೆದ ಭೇಟಿ)  ಮಹಮ್ಮದ್ ಯೂನಸ್ ರವರ  ಜೀವನ ಚರಿತ್ರೆ, “ ಬಡವರ ಬಾಪು” ಕೃತಿ ಮಾರ್ಚ್ ತಿಂಗಳಿನಲ್ಲಿ ಅಭಿರುಚಿ ಪ್ರಕಾಶನದಿಂದ  ಮೈಸೂರಿನಲ್ಲಿ ಬಿಡುಗಡೆಯಾಗುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ