ಶನಿವಾರ, ಏಪ್ರಿಲ್ 4, 2020

ಭಾರತಕ್ಕೆ ಬೇಕಾಗಿರುವ ಸಾಕ್ರೇಟಿಸ್ ನ ಸಂತತಿ



ಒಂದು ದೇಶದ ಆಡಳಿತ ಚುಕ್ಕಾಣಿ ಹಿಡಿದ ನೇತಾರನಿಗೆ ಸುಗಮ ಆಡಳಿತಕ್ಕೆ ಬೇಕಾದ ಸೂತ್ರಗಳೇನು? ಎಂದು ಕೇಳಿದರೆ, ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಜನತೆಯ ಶ್ರೇಯೋಭಿವೃದ್ಧಿ ಕುರಿತ ಬದ್ಧತೆ ಇವುಗಳು ಮಾತ್ರ ಎಂಬುವುದು ಎಲ್ಲಾ ಪ್ರಜ್ಞಾವಂತ ನಾಗರೀಕರ ನಂಬಿಕೆಯಾಗಿತ್ತು.

ಆದರೆ, ಈಗ ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಎಂಬ ಮಹಾಶಯ ಹೊಸ ಸೂತ್ರವನ್ನು ಕಂಡು ಹಿಡಿದಿದ್ದಾರೆ. ಜನತೆಯನ್ನು ಮುಠಾಳರನ್ನಾಗಿ ಮಾಡಿದರೆ, ಅವರು ಏನನ್ನೂ ಪ್ರಶ್ನಿಸಿದರೆ
 ಪ್ರಭುತ್ವ ಮತ್ತು ನಾಯಕತ್ವವನ್ನು ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಜಗತ್ತಿಗೆ ಸಾಬೀತು ಪಡಿಸಿ ತೋರಿಸಿದ್ದಾರೆ, ಅವರ ಈ ಸಂಶೋಧನೆಗೆ 2020 ರ ಸಾಲಿನ ನೋಬೆಲ್ ಪ್ರಶಸ್ತಿ ಸಿಗಲೇಬೇಕು. ( ಸಿಕ್ಕರೂ ಆಶ್ಚರ್ಯವಿಲ್ಲ)

ಜಗತ್ತನ್ನು ಬಾಧಿಸುತ್ತಿರುವ ಕೊರೊನಾ ವೈರಸ್ ಕುರಿತಂತೆ ಎಲ್ಲಾ ರಾಷ್ಟ್ರಗಳಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಹೋರಾಟ ಮಾಡುತ್ತಿದ್ದರೆ, ಭಾರತದಲ್ಲಿ ತಣಿಗೆ, ಚೊಂಬು, ತಟ್ಟೆ, ಲೋಟ, ಗಂಟೆ ಜಾಗಟೆಗಳ ಮೂಲಕ ಬೀದಿಗಿಳಿದು ಹೋರಾಟ ಮಾಡಲು ಕರೆ ನೀಡಿದ್ದಾಯಿತು. ಈಗ ಮೊಂಬತ್ತಿ ಬೆಳಗಿರಿ ಎಂಬ ಕರೆ ನೀಡಲಾಗಿದೆ.  ದೀಪದ ಬೆಳಕಿಗೆ ವೈರಸ್ ಗಳು ಆಕರ್ಷಿತವಾಗಿ ಸುಟ್ಟು ಹೋಗುತ್ತವೆ ಎಂದು ಕರ್ನಾಟಕ ಬಿ,ಜೆ,ಪಿ. ಶಾಸಕ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾನೆ, ಈತ ಹಿಂದೆ ಕರ್ನಾಟಕದ ಆರೋಗ್ಯ ಸಚಿವನಾಗಿದ್ದ ಎಂಬುದು ನಮ್ಮ ದುರಂತ, ( ಕೆ.ರಾಮದಾಸ್) ಇದಕ್ಕಿಂತ ದುರಂತೆವೆಂದರೆ, ಹೆಚ್.ಆರ್. ರಂಗನಾಥ್ ಎಂಬ ಮಾನಸಿಕ ಅಸ್ವಸ್ಥನಾದ ಪತ್ರಕರ್ತನೊಬ್ಬ ತನ್ನ ಚಾನಲ್ ನಲ್ಲಿ ( ಪಬ್ಲಿಕ್ ಟಿ.ವಿ) ನರೇಂದ್ರ ಮೋದಿಯ ದೀಪದ ರಜಸ್ಯ ಎಂಬ ಹೆಸರಿನಲ್ಲಿ ಮುಖಹೇಡಿ ಜ್ಯೋತಿಷಿಗಳನ್ನು ಕೂರಿಸಿಕೊಂಡು ತೌಡು ಕುಟ್ಟುತ್ತಿದ್ದಾನೆ.

ಈ ಸಂದರ್ಭದಲ್ಲಿ ನನಗೆ ನೆನಪಾಗುವುದು ಕ್ರಿಶ್ತಪೂರ್ವ 399 ರಲ್ಲಿ ಬದುಕಿದ್ದ ಹಾಗೂ ತನ್ನ ನಿಷ್ಟುರ ಸತ್ಯಗಳ ಮೂಲಕ ಜಗತ್ತಿಗೆ ರಾಜಕೀಯ ಮತ್ತು ತತ್ವಶಾಸ್ತ್ರಗಳ ಸಿದ್ಧಾಂತಗಳನ್ನು ನೀಡಿದ ಗ್ರೀಕ್ ನ ಸಾಕ್ರೇಟಿಸ್ ಎಂಬ ತತ್ವಜ್ಞಾನಿ.
1969 ರಿಂದ ಕಥೆ, ಕಾದಂಬರಿ ಓದುತ್ತಿದ್ದ ನಾನು 1976 ರಲ್ಲಿ ಪ್ರಥಮ ಬಾರಿಗೆ ಎ.ಎನ್. ಮೂರ್ತಿರಾಯರ “ ಸಾಕ್ರೇಟಿಸನ ಕೊನೆಯ ದಿನಗಳು” ಎಂಬ ಕೃತಿಯನ್ನು ಓದಿದೆ. ನನ್ನ ಬದುಕಿನಲ್ಲಿ ನಾನು ಓದಿದ ಮೊದಲ ವೈಚಾರಿಕ ಕೃತಿ ಅದು. ಅದೇ ವರ್ಷ ನಾನು ಓದುತ್ತಿದ್ದ ಬೆಸಗರಹಳ್ಳಿಯ ಸರ್ಕಾರಿ ಪಿ.ಯು.ಸಿ. ಕಾಲೇಜಿನ ಇಕ್ಷು ಸುಧಾ ಎಂಬ ವಾರ್ಷಿಕ ವಿಶೇಷಾಂಕಕ್ಕೆ ಇದೇ ಸಾಕ್ರೇಟಿಸ್ ಕುರಿತು ಜೀವನದಲ್ಲಿ ಪ್ರಥಮ ಲೇಖನವನ್ನು ಬರೆದೆ.

ಸದಾ ಗ್ರೀಕ್ ನ ರಸ್ತೆಗಳಲ್ಲಿ ನಿಂತು ಯುವಕರನ್ನು ಪ್ರಶ್ನೆಗಳ ಮೂಲಕ ಪ್ರಚೋದಿಸುವ ಜೊತೆಗೆ ತಪ್ಪುದಾರಿಗೆ ಎಳೆಯುತ್ತಿದ್ದಾನೆ ಎಂದು ಆರೋಪಿಸಿ, ಅಂದಿನ ಗ್ರೀಕ್ ನ ಪ್ರಭುತ್ವ ಸಾಕ್ರೇಟಿಸ್ನನ್ನು ನ್ಯಾಯಾಲಯಕ್ಕೆ ಎಳೆಯಿತು, ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಕ್ಷಮೆ ಕೋರಲು ನಿರಾಕರಿಸಿದ ಸಾಕ್ರೇಟಿಸ್ ಗೆ ನ್ಯಾಯಾಲಯ ವಿಷ ಕುಡಿಸಿ ಸಾಯಿಸುವ ಮರಣ ದಂಡನೆ ವಿಧಿಸಿದಾಗ ಎದೆಗುಂದದ ಸಾಕ್ರೇಟೀಸ್, “ ನಾನು ಸತ್ಯವನ್ನು ಹೇಳಿ ಸಾಯಲು ಹೊರಟಿದ್ದೇನೆ. ನೀವು ಸುಳ್ಳುಗಳನ್ನು ಸಮರ್ಥಿಸಿಕೊಂಡು ಬದುಕಲು ಹೊರಟಿದ್ದೀರಿ” ಇವುಗಳನ್ನು ಶ್ರೇಷ್ಠ ಮಾರ್ಗ ಯಾವುದು ಎಂಬುದನ್ನು ಎದೆ ಮುಟ್ಟಿ ಪರೀಕ್ಷಿಸಿಕೊಳ್ಳಿ” ಎಂದು ಪ್ರಭತ್ವಕ್ಕೆ ನೇರ ಸವಾಲನ್ನು ಎಸೆದ.

ಸಾಕ್ರೇಟಿಸ್ ನ ಶಿಚ್ಯರಲ್ಲಿ ಪ್ಲೇಟೊ ಪ್ರಮುಖನಾದವನು. ( ರಾಜಕೀಯ ಶಾಸ್ತ್ರದ ಪಿತಾ ಮಹಾ ಎಂದು ಕರೆಯುವ  ಅರಿಸ್ಟಾಟಲ್ ಪ್ಲೇಟೊನ ಶಿಷ್ಯ)  ತನ್ನ ಗುರುವನ್ನು ಕ್ಷಮೆ ಕೋರಲು ಒತ್ತಾಯಿಸಿದಾಗ, ಶಿಷ್ಯರ ಒತ್ತಾಯವನ್ನು ನಿರಾಕರಿಸಿ, ಜೈಲು ಅಧಿಕಾರಿ ತಂದಿತ್ತ ವಿಷದ ಬಟ್ಟಲನ್ನು ನಗುತ್ತಾ ಕುಡಿದುಬಿಟ್ಟ. ಶರೀರಕ್ಕೆ ವಿಷ ಏರುವವರೆಗೂ ಮಾತನಾಡುತ್ತಲೇ ಇದ್ದ ಸಾಕ್ರೇಟಿಸ್, ಜೈಲಿನ ಅಧಿಕಾರಿಯ ಕುಟುಂಬದ ಬಗ್ಗೆ ವಿಚಾರಿಸಿದ. ನಂತರ ಶಿಷ್ಯರತ್ತ ತಿರುಗಿ ಸತ್ಯ ಎಷ್ಟೇ ಕಠೋರವಾಗಿರಲಿ ಅಥವಾ ಕಹಿಯಾಗಿರಲಿ ಅದರಿಂದ ದೂರ ಸರಿಯಬೇಡಿ ಎಂದು ತನ್ನ ಕೊನೆಯ ಸಂದೇಶವನ್ನು ಹೇಳಿದ.

ಸತ್ಯಕ್ಕಿಂತ, ಧರ್ಮ, ಜಾತಿ, ಮುಠಾಳತನ ಮತ್ತು ಅವಿವೇಕತನ ಅಧಿಕವಾಗಿರುವ ಇಂದಿನ ಭಾರತಕ್ಕೆ ತುರ್ತಾಗಿ ಸಾಕ್ರೇಟಿಸ್ ನ ಸಣತತಿ ಬೇಕಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ