ಕನ್ನಡ
ಸಾಹಿತ್ಯ ಮಾತ್ರವಲ್ಲದೆ ಜಗತ್ತಿನ ಬಹುತೇಕ ಭಾಷೆಯ ಸಾಹಿತ್ಯವನ್ನೂ ಒಳಗೊಂಡತೆ, ಭಾರತೀಯ ಭಾಷೆಗಳಲ್ಲಿ ತಾಯಿ ಅಥವಾ ಅಮ್ಮನನ್ನು ಕುರಿತಂತೆ ಕಾವ್ಯ, ಲೇಖನಗಳು ಮತ್ತು ಪ್ರಬಂಧಗಳು ಅನೇಕ ಬಗೆಯ ಸಾಹಿತ್ಯದ ಕೃಷಿಯ ಸಮೃದ್ಧ ಫಸಲನ್ನು ನಾವು ಕಾಣುತ್ತೇವೆ. ಆದರೆ, ತಂದೆ ಅಥವಾ ಅಪ್ಪನ ಕುರಿತಂತೆ ಬಂದಿರುವ ಬರಹಗಳು
ತೀರಾ ವಿರಳ ಅಥವಾ ನಗಣ್ಯವೆಂದು ಹೇಳಬಹುದು. ಹುಟ್ಟಿನಿಂದ ಕಳ್ಳು ಬಳ್ಳಿಯ ಸಂಬಂಧ ಹೊಂದುವುದರ ಮೂಲಕ ತಾಯಿಯ ಮಡಿಲಲ್ಲಿ ಬೆಳೆದು, ಆಕೆಯ ಎದೆ ಹಾಲು ಕುಡಿದು ಅವಳ ಕಣ್ಣೆಚ್ಚರದಲ್ಲಿ ಬೆಳೆಯುವ ಈ ಜಗತ್ತಿನ
ಪ್ರತಿಯೊಂದು ಜೀವಿಯೂ ತಾಯಿಯ ಕುರಿತು ಭಾವನಾತ್ಮಕ ಸಂಬಂಧ ಹೊಂದಿರುವುದು ಸಹಜ ಸಂಗತಿ. ಆದರೆ, ತಾಯಿಯ ಜೊತೆ ಜೊತೆ ಗೆ ಆಕೆಯ ಸಂಗಾತಿಯಾಗಿ,
ಪೋಷಕನಾಗಿ, ಮಕ್ಕಳ ಪಾಲಿನ ರಕ್ಷಕನಾಗಿ ತಂದೆ ನಿರ್ವಹಿಸಿದ/ ನಿರ್ವಹಿಸುವ ಪಾತ್ರವನ್ನೂ ಸಹ ನಾವು ಕಡೆಗಣಿಸುವಂತಿಲ್ಲ.
ನನ್ನ
ಅನುಭವದಲ್ಲಿ ಹೇಳುವುದಾದರೆ, ನನಗೆ ತಾಯಿಗಿಂತ ತಂದೆಯ ಪ್ರಭಾವ ಹೆಚ್ಚಾಗಿದೆ. ನಾನು ಹುಟ್ಟಿ, ಈ ಜಗತ್ತಿನ ಅನುಭವಗಳಿಗೆ
ಕಣ್ತೆರೆದುಕೊಳ್ಳುವವರೆಗೆ
ನನ್ನ ಅಜ್ಜಿಯ ಮಡಿಲಲ್ಲಿ (ನನ್ನಪ್ಪನ ತಾಯಿ) ಬೆಳೆದೆ. ಅವ್ವ
ನನ್ನೂರು ಕೊಪ್ಪ ಗ್ರಾಮಕ್ಕೆ ಐದು ಕಿಲೊಮೀಟರ್ ದೂರದ ದೊಡ್ಡ ಹೊಸಗಾವಿ ಗ್ರಾಮದ ಪಟೇಲ್ ಚೆನ್ನೇಗೌಡ ಎಂಬ ಆ ಕಾಲದಲ್ಲಿ ಏಳು
ಊರುಗಳಿಗೆ ನ್ಯಾಯ ಮತ್ತು ಪಂಚಾಯಿತಿ
ಮಾಡುತ್ತಿದ್ದ ದೊಡ್ಡ
ಜಮೀನ್ದಾರನ ಮಗಳು. ನನ್ನಜ್ಜನಾದ ಮದ್ದನಹಟ್ಟಿ ನಂಜೇಗವಡನದು (ಅಪ್ಪನ ತಂದೆ) ತೀರಾ ಶ್ರೀಮಂತಿಕೆ ಅಲ್ಲದಿದ್ದರೂ ಎಂಟು ಎಕರೆ
ನೀರಾವರಿ ಜಮೀನು, ಆರು ಎಕರೆ
ತೆಂಗು, ಅಡಿಕೆ, ಬಾಳೆಯ ತೋಟ ಮತ್ತು ಹದಿನೈದು ಎಕರೆ
ಮಳೆಯಾಶ್ರಿತ ಭೂಮಿಯನ್ನು
ಹೊಂದಿದ್ದ ಕುಟುಂಬವಾಗಿತ್ತು. ಜೊತೆಗೆ ೧೯೦೬ ರಲ್ಲಿ ಮೈಸೂರಿನ ದೊರೆಗಳು ನನ್ನೂರಿನಲ್ಲಿ ಬಳುವಳಿಯಾಗಿ ನೀಡಿದ್ದ ಗುಂಡು ತೋಪನ್ನು ನಿರ್ವಹಣೆ ಮಾಡುತ್ತಾ, ಅಲ್ಲಿ ಒಂದು ಕಲ್ಯಾಣಿ ಮತ್ತು ಮಂಟಪವನ್ನು ನಿರ್ಮಿಸಿ ತಿರುಪತಿಗೆ
ಹೋಗುವ ಭಕ್ತರಿಗೆ ಮತ್ತು ಸನ್ಯಾಸಿಗಳಿಗೆ ತಂಗಲು ವ್ಯವಸ್ಥೆ ಕಲ್ಪಿಸಿದ್ದನು. ( ಕೊಪ್ಪದ ಸಂತೆ ಮೈದಾನಕ್ಕೆ ಹೊಂದಿಕೊಂಡಂತೆ ಇದ್ದ ಆ ಜಾಗದಲ್ಲಿ
ಈಗ ಸಮುದಾಯ ಭವನ ಹಾಗೂ ಸರ್ಕಾರಿ ಬಸ್ ನಿಲ್ದಾಣ ನಿರ್ಮಾಣವಾಗಿವೆ.)
ಅಪ್ಪ
ಆ ಕಾಲದಲ್ಲಿ (೧೯೫೦ ರ ದಶಕದಲ್ಲಿ)
ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿ
ಸಂಬಂಧಿಕರ ಮನೆಯಲ್ಲಿ ಇದ್ದುಕೊಂಡು ಬೆಂಗಳೂರು ನ್ಯಾಷನಲ್ ಹೈಸ್ಕೂಲಿನಲ್ಲಿ ಹತ್ತನೇ ತರಗತಿಯವರೆ ಓದಿದ್ದರು. ಊರಿನಲ್ಲಿದ್ದ ನನ್ನ
ಅಜ್ಜ ಮತ್ತು ಚಿಕ್ಕಜ್ಜ ಇಬ್ಬರೂ ಆಸ್ತಿಯನ್ನು ಪಾಲು ಮಾಡಿಕೊಂಡ ಕಾರಣ
ಅಜ್ಜನ ಪಾಲಿಗೆ ಬಂದ ಆಸ್ತಿಯನ್ನು ನೋಡಿಕೊಳ್ಳುವ ಸಲುವಾಗಿ ಊರಿಗೆ ಹಿಂತಿರುಗಿದ ಅಪ್ಪ ಕುಟುಂಬದ ಪಾರಂಪರಿಕ ವೃತ್ತಿಯಾದ ಕೃಷಿಯನ್ನು ಕೈಗೆತ್ತಿಕೊಂಡರು. ವಿದ್ಯಾವಂತ ಎಂಬ ಕಾರಣಕ್ಕಾಗಿ ನನ್ನಪ್ಪ ನಂಜೇಗೌಡನಿಗೆ ಪಟೇಲ್ ಚೆನ್ನೇಗೌಡ ಎಂಬ ಜಮೀನ್ದಾರ ತನ್ನ ಮಗಳು ಈರಮ್ಮನನ್ನು(ನನ್ನವ್ವ) ಧಾರೆಯೆರೆದು
ಕೊಟ್ಟಿದ್ದನು
.
ಸಹಜವಾಗಿ
ದೊಡ್ಡ ಕುಟುಂಬದಿಂದ ಬಂದ ಹೆಣ್ಣು ಮಗಳು ಎಂಬ ಏಕೈಕ ಕಾರಣದಿಂದ ನನ್ನಜ್ಜಿ (ತಿಮ್ಮಮ್ಮ ) ಸೊಸೆಗೆ ಯಾವ
ಗೃಹಕೃತ್ಯದ ಕೆಲಸಗಳನ್ನು ವಹಿಸದೆ, ಸಾಯುವವರೆಗೂ
ತಾನೇ ಸ್ವತಃ
ನಿರ್ವಹಿಸಿದಳು. ನನ್ನವ್ವನ ದಿಚರಿಯೆಂದರೆ, ಊಟ ಮಾಡುವುದು, ಅಚ್ಚುಕಟ್ಟಾದ
ಜಾಗದಲ್ಲಿ ಕೂರುವುದು, ಹೋಗಿ ಬರುವವರ ಜೊತೆ ಹರಟೆ ಹೊಡೆಯುವುದು ಮತ್ತು ಮಕ್ಕಳನ್ನು ಹೆತ್ತು ಅತ್ತೆಯ
ಕೈಗೆ ವರ್ಗಾಯಿಸುವುದು ಮಾತ್ರವಾಗಿತ್ತು. ಅಪ್ಪಟ ಅನಕ್ಷರಸ್ತೆಯಾಗಿದ್ದ ನನ್ನವ್ವ ಒಳ್ಳೆಯ ಕಂಠ ಸಿರಿ ಹೊಂದಿದ್ದಳು. ಆಕೆ ಹಾಡುತ್ತಿದ್ದ ಜೋಗುಳ ಪದಗಳು, ಸೋಬಾನೆ ಪದಗಳು ಮತ್ತು ರಾಗಿ ಬೀಸುವ ಪದಗಳು ಈಗಲೂ ನನ್ನ ಕಿವಿಯಲ್ಲಿ ಅನುರಣಿಸುತ್ತಿವೆ. ಒಳ್ಳೆಯ ಹಾಡುಗಾರ್ತಿಯಾಗಿದ್ದಂತೆ ಅವ್ವ ಅಶ್ಲೀಲ ಬೈಗುಳಗಳ ಮತ್ತು ಗಾದೆಗಳ ಕಣಜವಾಗಿದ್ದಳು. ಜಗಳದಲ್ಲಿ
ನಿಪುಣೆಯಾಗಿದ್ದ ಆಕೆ ನನ್ನೂರ ಕೇರಿಗಳಲ್ಲಿ ಅಷ್ಟೇ ಪ್ರಸಿದ್ಧಳಾಗಿದ್ದಳು. ಅವಳಿಂದ ಅಷ್ಟೂ ಬೈಗುಳ ಮತ್ತು ಅಶ್ಲೀಲ ಗಾದೆಗಳು ನನಗೆ ಬಳುವಳಿಯಾಗಿ ಬಂದಿರುವುದು ವಿಶೇಷ. ನನಗೆ ಸಿಟ್ಟು ಬಂದಾಗ ನನ್ನ ಬಾಯಿಂದ ಉದುರುವ ಅಣಿಮುತ್ತುಗಳಲ್ಲಿ ಅಶ್ಲೀಲ ಗಾದೆಗಳು ಅಗ್ರ ಸ್ಥಾನ ಪಡೆದಿವೆ. ಅವ್ವನ ವ್ಯಕ್ತಿತ್ವಕ್ಕೆ ತೀರಾ ಭಿನ್ನವಾದ ಮೃದು ಸ್ವಭಾವದ ವ್ಯಕ್ತಿತ್ವ ಅಪ್ಪನದು. ಅವ್ವನ ಬಾಯಿಗೆ ಹೆದರಿ ಅಪ್ಪ ಸದಾ ಮೌನವಾಗಿರುತ್ತಿದ್ದರು. ಮದ್ದನಟ್ಟಿ ಈರೇಗೌಡರ ನಂಜೇಗೌಡ ಎಂಬು ಅಪ್ಪನ ನಿಜವಾದ ಹೆಸರಾಗಿದ್ದರೂ ಸಹ, ನನ್ನೂರು
ಕೊಪ್ಪ ಸೇರಿದಂತೆ ಸುತ್ತ
ಮುತ್ತಲಿನ ಹಳ್ಳಿಗಳಲ್ಲಿ ಈರೇಗೌಡರ ತಮ್ಮಯ್ಯ ಅಥವಾ ತಮ್ಮೆಯಣ್ಣ
ಎಂದು ವರು ಪ್ರಸಿದ್ಧಿಯಾಗಿದ್ದರು. ಜೊತೆಗೆ ತನ್ನ ಮೃದು ಸ್ವಭಾವ ಹಾಗೂ ಸ್ನೇಹ
ಜೀವಿ ಮತ್ತು ಆತಿಥ್ಯದಲ್ಲಿ
ಹೆಸರಾಗಿದ್ದ ಅಪ್ಪನನ್ನು ಎಲ್ಲರೂ ತಮ್ಮೆಯಣ್ಣಾ ಅಂದರೆ ಧರ್ಮರಾಯ ಎಂದು ಹಾಡಿ
ಹೊಗಳುತ್ತಿದ್ದರು.
ಬಾಲ್ಯದಿಂದ
ಬೆಂಗಳೂರು ನಗರದಲ್ಲಿ ಪಡೆದ ಶಿಕ್ಷಣ, ತಾನು ಹುಟ್ಟಿದ ಹಳ್ಳಿಯಾಚೆಗಿನ ಬದುಕನ್ನು ನೊಡುತ್ತಾ ಬೆಳೆದಿದ್ದ ಅಪ್ಪನಿಗೆ ಜಾತಿ, ಧರ್ಮದ ಕಟ್ಟುಪಾಡುಗಳಿರಲಿಲ್ಲ. “ಹಸಿದವರಿಗೆ ಹಾಗೂ ಮನೆಗೆ ಬಂದ ಅತಿಥಿಗಳಿಗೆ ಊಟ
ಹಾಕಬೇಕು ಇದು ನನ್ನ ಬದುಕಿನ ಏಕೈಕ ಪರಮ ಗುರಿ” ಎಂಬAತೆ ಅಪ್ಪ ಬದುಕಿದ್ದು
ಇಂದಿಗೂ ನನಗೆ ವಿಸ್ಮಯದ ಸಂಗತಿಯಂತೆ ಕಾಣುತ್ತದೆ. ಇದು
ಅಂತಿಮವಾಗಿ ನನ್ನ ಕುಟುಂಬವನ್ನು ಬಡತನದ ಅಂಚಿಗೆ ನೂಕಿಬಿಟ್ಟಿತು. ೧೯೬೯
ರ ವೇಳೆಗೆ ನನ್ನ ಅಕ್ಕನ ವಿವಾಹಕ್ಕೆ ನಾಲ್ಕು ಸಾವಿರ ರೂಪಾಯಿ ಸಾಲ ಮಾಡಿದ್ದ ಅಪ್ಪ ಅದನ್ನು ತೀರಿಸಲಾರದೆ ಹ್ಶೆರಾಣಾಗಿ ಹೋಗಿದ್ದ. ಸಾಲಗಾರರು ಹಣ ವಸೂಲಿಗಾಗಿ ಕೂರ್ಟ್
ಮೆಟ್ಟಿಲೇರಿದಾಗ ಅಪಮಾನಿತನಾಗಿ ಮನೆಯಿಂದ ಹೊರಗೆ ಬಾರದೆ, ತಿಂಗಳುಗಟ್ಟಲೆ ಕುಳಿತಲ್ಲೇ
ಕುಳಿತು ಚಿಂತಿಸಿ ಸಾವಿನ ಕದ ಬಡೆಯುವ ಸ್ಥಿತಿ
ತಲುಪಿದ್ದರು. ನಂತರ ಅಪ್ಪನ ಗೆಳೆಯರ ಸಲಹೆಯಂತೆ ಒಂದಿಷ್ಟು ಜಮೀನು ಮಾರಾಟ ಮಾಡಿ ಸಾಲ ತೀರಿಸಿ, ಜೀವನದ ಯುದ್ಧದಲ್ಲಿ ಸೋತವನಂತೆ ಸಾರ್ವಜನಿಕ ಬದುಕಿನ ಎಲ್ಲಾ ಚಟುವಟಿಕೆಗಳಿಗೆ ತಿಲಾಂಜಲಿ ಇತ್ತು ಬೆಳಿಗ್ಗೆ ಊಟ ಮಾಡಿ ಎರಡು
ಕುರಿ ಮತ್ತು ಹಸುವಿನೊಂದಿಗೆ ತೋಟಕ್ಕೆ ಹೋಗಿ ಮುಸ್ಸಂಜೆಯಲ್ಲಿ ಮನೆಗೆ ಬಂದು ಏಳು ಗಂಟೆಗೆ ಊಟ ಮಾಡಿ ರಾತ್ರಿ
ಎಂಟು ಗಂಟೆಯ ವೇಳೆಗೆ ಮನೆಯ
ಜಗುಲಿಯಲ್ಲಿದ್ದ ಮಂಚದ ಮೇಲೆ ನಿದ್ರೆಗೆ ಜಾರುತ್ತಿದ್ದರು.
ನಾನು
ಕಂಡಂತೆ ಅಪ್ಪ ಸ್ವತಃ ಕೃಷಿ ಕೆಲಸ ಮಾಡುತ್ತಿದ್ದರು. ಜೊತೆಗೆ ಭತ್ತದ ನಾಟಿ, ಕುಯ್ಲು, ರಾಗಿ ಬಿತ್ತನೆ ಮತ್ತು ತೋಟದ ನಿರ್ವಹಣೆಗಾಗಿ ಒಂದು
ಹರಿಜನ ಕುಟುಂಬವನ್ನು ನಮ್ಮ
ಮನೆಯಲ್ಲಿ ಕೆಲಸ ಮಾಡುವಂತೆ ಇಟ್ಟುಕೊಂqದ್ದರು. ( ಉಳಿದೆಡೆ ಜೀತದಾಳು ಎಂದು ಕರೆಯುವ ಈ ಪದ್ಧತಿಯನ್ನು ಮಂಡ್ಯ
ಜಿಲ್ಲೆಯಲ್ಲಿ ಆಳು ಮಗ ಎಂದು ಕರೆಯುತ್ತಿದ್ದರು.)
ಅವರಿಗೆ ವಾರ್ಷಿಕವಾಗಿ ಮನೆಗೆ ಬೇಕಾಗುವಷ್ಟು ದಿನಸಿ ಅಂದರೆ ಭತ್ತ, ರಾಗಿ, ತೆಂಗಿನ ಕಾಯಿ, ಹಬ್ಬ ಹರಿದಿನಗಳಲ್ಲಿ ಹೊಸ ಬಟ್ಟೆ ಇತ್ಯಾದಿ ಹಾಗೂ ವಾರಕ್ಕೊಮ್ಮೆ ಕೂಲಿ
ಪಾವತಿಸುತ್ತಿದ್ದರು. ಇದಲ್ಲದೆ ಅವರ ಮನೆಯ ಮಕ್ಕಳ ವಿವಾಹದ ಸಂದರ್ಭದಲ್ಲಿ ಪೂರ್ಣ ಖರ್ಚನ್ನು
ಭರಿಸುತ್ತಿದ್ದರು. ದೊಡ್ಡ ಕುಳ್ಳ, ಚಿಕ್ಕಕುಳ್ಳ ಎಂಬ ಸಹೋದರರು ಹಾಗೂ ಅವರ ವಿಧವಾ ಸಹೋದರಿ ತಿಮ್ಮಿ ಎಂಬ ಹೆಣ್ಣು ಮಗಳು ಮತ್ತು ಆಕೆಯ ಪುತ್ರಿ ಹೊನ್ನಿ ಇವರೆಲ್ಲರೂ ನಮ್ಮ ಕುಟುಂಬದ ಖಾಯಂ ಸದಸ್ಯರಾಗಿದ್ದರು.
ಬಾಲ್ಯದಲ್ಲಿ
ಸದಾ ಅಜ್ಜಿಯ ಜೊತೆ ಇರುತ್ತಿದ್ದ ನಾನು ೧೮೬೬ ರ ವೇಳೆಗೆ ಅಂದರೆ,
ನನ್ನ ಹತ್ತನೆಯ ವಯಸ್ಸಿನಿಂದ
ಶಾಲೆ ಬಿಟ್ಟ ನಂತರ ಇಲ್ಲವೆ ರಜಾ ದಿನಗಳಲ್ಲಿ ಅಪ್ಪನ
ಜೊತೆ ಸದಾ ಹೊಲ,
ಗದ್ದೆ, ತೋಟ ಹೀಗೆ ಸುತ್ತಾಡುತ್ತಿದ್ದೆ. ಸುಗ್ಗಿಯ ಕಾಲದಲ್ಲಿ ಊರಾಚೆಗಿನ “ಊರಮುಂದಲ ಹೊಲ” ಎಂದು ಕರೆಯುತ್ತಿದ್ದ ನಮ್ಮ ಜಮೀನಿನಲ್ಲಿ ಹಾಕಿರುತ್ತಿದ್ದ ಭತ್ತ, ರಾಗಿ ಮೆದೆಗಳನ್ನು (ಬಣವೆ) ಕಣದಲ್ಲಿ ಕಾಯುತ್ತಾ, ತಾತ್ಕಾಲಿಕ
ನಿರ್ಮಇಸಲಾಗುತ್ತಿದ್ದ ಪುಟ್ಟಗುಡಿಸಲಿನ ಲಾಟಿನ್ ಬೆಳಕಿನಲ್ಲಿ ಡಿಸಂಬರ್,
ಜನವರಿ ತಿಂಗಳ ಮೈ
ನಡುಗಿಸುವ ಚಳಿಯಲ್ಲಿ ಅಪ್ಪನ ಕಂಬಳಿಯೊಳಗೆ ತೂರಿ ಮಲಗುತ್ತಿದ್ದೆ.
ಅಂದು ನನ್ನ ಮೂಗಿಗೆ ಬಡಿದ ಅಪ್ಪನ
ಮೈ ಬೆವರು ವಾಸ£ ಇಂದಿಗೂ ನನ್ನೊಳಗೆ
ಜೀವಂತವಾಗಿದೆ.
ಮಂಡ್ಯ
ಜಿಲ್ಲಯಲ್ಲಿ ತುಮುಕೂರು ಗಡಿ ಭಾಗದಲ್ಲಿರುವ ನನ್ನೂರು ಕೊಪ್ಪ ಗ್ರಾಮವು ಹೋಬಳಿ
ಕೇಂದ್ರವಾಗಿತ್ತು. ಊರಿನ ಏಳೆಂಟು ಕಿಲೊಮೀಟರ್ ದೂರದಲ್ಲಿ ಹರಿಯುತ್ತಿದ್ದ ಶಿಂಷಾ ನದಿಯು ಭೌಗೂಳಿಕವಾಗಿ ಮಂಡ್ಯ ಮತ್ತು ತುಮಕೂರು ಜಿಲ್ಲೆಗಳನ್ನು ಬೇರ್ಪಡಿಸಿತ್ತು. ೧೯೬೦ ರ ದಶಕದಲ್ಲಿ ನನ್ನೂರಿನಲ್ಲಿ
ಇದ್ದ ಖಾಸಾಗಿ ಪೌಢಶಾಲೆಯು ಸುತ್ತ ಮುತ್ತಲಿನ ವಿದ್ಯಾಥಿಗಳಿಗೆ ಏಕೈಕ ಶಿಕ್ಷಣ ಕೇಂದ್ರವಾಗಿತ್ತ. ಶಿಂಷಾ ನದಿಯಾಚೆಗಿನ ಹೆಬ್ಬರಳು, ಅರಗಿನಮೆಳೆ, ನವಿಲೆ, ಈಚೆಗಿನ ಮೂಡ್ಯ, ಕಿರಂಗೂರು, ಬೆಕ್ಕಳಲೆ,
ಕೌಡ್ಲೆ ಹೀಗೆ ಅನೇಕ ಗ್ರಾಮಗಳಿಂದ ಬರುತ್ತಿದ್ದ ಹದಿನಾರು ವಿದ್ಯಾರ್ಥಿಗಳಿಗೆ ಅಪ್ಪ
ಮಧ್ಯಾಹ್ನದ ಊಟ ಮನೆಯಲ್ಲಿ ಹಾಕುತ್ತಿದ್ದರು.
ಇದಲ್ಲದೆ ಶಾಲೆಯ ಶಿಕ್ಷಕರಿಗೆ ಉಚಿತ ಊಟ, ವಸತಿ ವ್ಯವಸ್ಥೆ ಒದಗಿಸುತ್ತಿದ್ದರು. ಇಷ್ಟು ಮಾತ್ರವಲ್ಲದೆ ತಾಲ್ಲೂಕು ಕೇಂದ್ರವಾದ ಮದ್ದೂರಿನಿಂದ ರಾತ್ರಿ ಎಂಟು ಗಂಟೆಗೆ ಬರುತ್ತಿದ್ದ ಎಸ್.ಎಲ್.ಎನ್ ಬಸ್ ಹಾಗು ಮಂಡ್ಯ ನಗರದಿಂದ ಎಂಟೂವರೆ ಗಂಟೆಗೆ ಊರಿಗೆ
ಬರುತ್ತಿದ್ದ ಎಸ್.ಎಲ್. ವಿ. ಬಸ್ ಬಂದ ನಂತರ ಈ ರಾತ್ರಿ ಯಾರೂ
ಅತಿಥಿಗಳಿಲ್ಲ ಎಂದು ಖಚಿತಪಡಿಸಿಕೊಂಡು ನಂತರ ರಾತ್ರಿ ಊಟ ಮಾಡುತ್ತಿದ್ದರು. ಕೋರ್ಟ್,
ಕಚೇರಿಗಳಿಗೆ ಹೋಗಿದ್ದ ಸುತ್ತ ಮುತ್ತಲಿನ ಗ್ರಾಮಗಳ ಅಪ್ಪನ ಸ್ನೇಹಿತರು
ವಾರದಲ್ಲಿ ಎರಡು ಮೂರು ದಿನ ರಾತ್ರಿ ನಮ್ಮ ಮನೆಯಲ್ಲಿ ಮಲಗಿ ಬೆಳಿಗ್ಗೆ ಎದ್ದು ತಮ್ಮೂರಿಗೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದರು. ಅತಿಥಿಗಳಿಗಾಗಿ ಮನೆಯ ಜಗುಲಿಯಲ್ಲಿದ್ದ ಕೋಣೆಯಲ್ಲಿ ಒಂದು ಚಾಪೆ, ಎರಡು ದಿಂಬು, ಎರಡು ಹೊದಿಕೆಗಳನ್ನು ಖಾಯಂ ಇರಿಸಲಾಗಿತ್ತು.
ಅಪ್ಪನ ಈ ದಾನಶೂರ ಕರ್ಣನ
ವ್ಯಕ್ತಿತ್ವ ಅವ್ವನಿಗೆ ಇಷ್ಟವಾಗುತ್ತಿಲ್ಲ. ಮನೆಯಲ್ಲಿ ಯಾರೂ ಇಲ್ಲದಿದ್ದ ಸಮಯದಲ್ಲಿ ಅತಿಥಿಗಳು ಹೋದನಂತರ ಅಪ್ಪನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಳು. ಅವ್ವನ ಬೈಗುಳಕ್ಕೆ ಪ್ರತಿಯಾಗಿ ಅಪ್ಪ ಜಗುಲಿ ಮೇಲೆ ಮಂಚಕ್ಕೆ ಒರಗಿ ಬರ್ಕಲಿ ಸಿಗರೇಟ್ ಹಚ್ಚಿಕೊಂಡು ಹೊಗೆ
ಬಿಡುತ್ತಾ, “ ಬಾರೆ, ಗೊಡೆ ಅದಿಕಂಡ್ರೆ ( ಮೈ ಮೇಲೆ ಬಿದ್ದು
ಹೋದರೆ) ಸತ್ತ ಹೋಗ್ತಿವಿ ಕನಾ, ಸಾಲ
ಅದಿಕಂಡ್ರೆ ಸಾಯಲ್ಲ ಇವತ್ತು
ನಾನು ಎರಡು ತುತ್ತು ಅನ್ನ ಹಾಕಿದರೆ, ಆ ದೇವರು ನಾಳೆ
ನನ್ನ ಮಕ್ಕಳಿಗೆ ನಾಲ್ಕು ತುತ್ತು ಅನ್ನ ಇಟ್ಟಿರ್ತನೆ” ಎನ್ನುತ್ತಿದ್ದರು. ಅಂದು ನನಗೆ ಅರ್ಥವಾಗದ ಅಪ್ಪನ ಈ ಅನುಭಾದ ಮಾತು
ಈಗ ಅರ್ಥವಾಗಿದೆ. ಜೊತೆಗೆ ಅಪ್ಪನೆ ನಿರೀಕ್ಷೆ ನನ್ನ ಪಾಲಿಗೆ ನಿಜವಾಗಿದೆ. ಬಡತನದ ಬೇಗೆ ಮತ್ತು ಅಪಮಾನಗಳ ನಡುವೆ ಹೋರಾಡುತ್ತಾ ಬದುಕು ಕಟ್ಟಿಕೊಂಡಿಡಿರುವ ನಾನು ಇಂದು ಹಲವಾರು ಗೆಳೆಯರ ಮತ್ತು ಹಿತೈಷಿಗಳ ನೆರವಿಂದ ನೆಮ್ಮದಿಯ
ಬದುಕನ್ನು ಬದುಕಲು ಸಾಧ್ಯವಾಗಿದೆ. ಅಂದು ಅಪ್ಪ ಮಾಡಿದ ದಾನ ಧರ್ಮಗಳು ಇಂದು ನನ್ನ ಹಾಗೂ ನನ್ನ ಸಹೋದರ, ಸಹೋದರಿಯರ ಬದುಕನ್ನು ಕಾಪಾಡಿದೆ ಎಂದು ನಾನು ಬಲವಾಗಿ ನಂಬಿದ್ದೇನೆ. ಅಪ್ಪನ ಕೈಯಲ್ಲಿ ಊಟ ಮಾಡಿದ ಅಷ್ಟೂ
ಮಂದಿ ನಮ್ಮ ಪಾಲಿಗೆ ಸಂಬಂಧಿಕರಂತೆ
ಇದ್ದುಕೊಂಡು, ತಂದೆಯ
ನಿಧನಾನಂತರವೂ ಸಹ ನನ್ನ ಕುಟುಂಬದೊಂದಿಗೆ
ಸಂಪರ್ಕ ಇರಿಸಿಕೊಂಡಿದ್ದಾರೆ.
ತಾನು
ಬೆಂಗಳೂರು ನಗರ ತೊರೆದು ಬಂದರು ಸಹ, ಅಲ್ಲಿನ ಅಪಾರ ಗೆಳೆಯರೊಂದಿಗೆ ಅಪ್ಪನಿಗೆ ನಿರಂತರ
ಸಂಪರ್ಕವಿತ್ತು. ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಮೀಪವಿರುವ ಪ್ರಕಾಶ್ ಕಫೆಯ ಮಾಲೀಕರು ಅಪ್ಪನ ಸಹಪಾಠಿಯಾಗಿದ್ದರು. ದೇಶಹಳ್ಳಿ ಜಿ.ನಾರಾಯಣ, ದೇವರಾಜ
ಅರಸು ಕಾಲದಲ್ಲಿ ಕಂದಾಯ ಸಚಿವರಾಗಿದ್ದ ಎನ್.ಹುಚ್ಚಮಾಸ್ತಿಗೌಡ, ಸಂಬಂಧದಲ್ಲಿ ನನಗೆ ಸೋದರಮಾವ ಆಗಿದ್ದರು. ಮದ್ದೂರು ಕ್ಷೇತ್ರದ ಮಾಜಿ ಶಾಸP ಎ.ಡಿ.ಬಿಳಿಗೌಡ
ಹೊಸಗಾವಿಯ ಎ.ಚೆನ್ನಯ್ಯ ( ಖ್ಯಾತ
ಸಿನಿಮಾ ಮತ್ತು ಧಾರವಾಹಿ ನಿರ್ದೇಶಕರಾದ ಹುಲಿ ಚಂದ್ರಶೇಖರ್ ತಂದೆ) ಇವರೆಲ್ಲರೂ
ಅಪ್ಪನ ಆತ್ಮೀಯ ಬಳಗದಲ್ಲಿದ್ದರು. ಪ್ರತಿ ವರ್ಷ ಯುಗಾದಿ ಮತ್ತು ಮಹಾಲಯ ಅಮವಾಸ್ಯೆ ಹಬ್ಬಕ್ಕೆ ಹೊಸಬಟ್ಟೆ ತರುವ ನೆಪದಲ್ಲಿ ಅಪ್ಪ ಬೆಂಗಳ್ರರಿಗೆ ತೆರಳುತ್ತಿದ್ದರು. ಅವರ ಜೊತೆ ನಾನು ಹೋಗುತ್ತಿದ್ದೆ. ಅರವತ್ತರ ದಶಕದಲ್ಲಿ ಮದ್ದೂರಿನಿಂದ
ಬೆಂಗಳ್ರರಿಗೆ ಬೆಳಿಗ್ಗೆ ಏಳು ಗಂಟೆಗೆ ಒಂದು ಉಗಿ ಬಂಡಿ ರೈಲು ಹೊರಡುತ್ತಿತ್ತು. ಈಗಿನ ಬೆಂಗಳೂರಿನ ರೈಲ್ವೆ ಸ್ಟೇಶನ್ನಿನ ಐದು ಮತ್ತು ಆರನೇ ಪ್ಲಾಟ್ ಪಾರಂ ಆಗಿನ ಮುಖ್ಯ ನಿಲ್ದಾಣವಾಗಿತ್ತು. ಮದ್ದೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ನಾಲ್ಕಾಣೆ (೨೫ ಪೈಸೆ)ದರವಿದ್ದರೆ,
ರಾಜ್ಯ ಸಾರಿಗೆ ಬಸ್ ಗಳಲ್ಲಿ ಹನ್ನೆರಡಾಣೆ ( ೭೫ ಪೈಸೆ) ದರವಿತ್ತು.
ಬೆಂಗಳೂರಿನ ಮುಖ್ಯ ಬಸ್ ನಿಲ್ದಾಣ ಕಲಾಸಿಪಾಳ್ಯದ ಈಗಿನ ನಗರ ಸಾರಿಗೆ ಬಸ್ ನಿಲ್ದಾಣದಲ್ಲಿತ್ತು (೧೯೬೯
ರಲ್ಲಿ ಸುಭಾಷ್ ನಗರ ಬಸ್ ನಿಲ್ದಾಣ ನಿರ್ಮಾಣವಾದ ನಂತರ ಮೆಜಸ್ಟಿಕ್ ಗೆ ಸ್ಥಳಾಂತರವಾಯಿತು) ಚಿಕ್ಕ ಪೇಟೆಯಲ್ಲಿ
ಬಟ್ಟೆಯನ್ನು ಖರೀದಿಸಿ, ಅವುಗಳನ್ನು ಪ್ಯಾಕ್ ಮಾಡಿ ಅಂಗಡಿಯಲ್ಲಿ ಇರಿಸಿ, ಆನಂತರ ಉಡುಪಿ ಕೃಷ್ಣ ಭವನ್ ಹೋಟೆಲ್ ಗೆ ತೆರಳುತ್ತಿದ್ದರು. ಅಲ್ಲಿ ಮಸಾಲೆ
ದೋಸೆಯನ್ನು ತಿಂದು, ನನಗೂ ತಿನ್ನಿಸುತ್ತಿದ್ದರು.
ಸಂಜೆಯ ವೇಳೆಗೆ ಈಗಿನ ಮೆಜಸ್ಟಿಕ್ ನ ನಗರ ಸಾರಿಗೆ
ಬಸ್ ನಿಲ್ದಾಣದ ಪ್ರದೇಶದಲ್ಲಿ ಆಗ ನಡೆಯುತ್ತಿದ್ದ
ಹಿರಣ್ಣಯ್ಯ ಮಿತ್ರ ಮಂಡಳಿಯ ನಾಟಕಗಳಿಗೆ
ನನ್ನನ್ನು ಕರೆದೊಯ್ಯುತ್ತಿದ್ದರು. ಮಾಸ್ಟರ್ ಹಿರಣ್ಣಯ್ಯ ಅಭಿನಯಿಸುತ್ತಿದ್ದ ಲಂಚಾವತಾರ, ಭ್ರಷ್ಟಾಚಾರ, ನಡುಬೀದಿ ನಾರಾಣ ಇವುಗಳಲ್ಲವೂ ಅಪ್ಪನ
ಅಚ್ಚು ಮೆಚ್ಚಿನ ನಾಟಕಗಳಾಗಿದ್ದವು. ರಾತ್ರಿ ಶಾಸಕರ ಭವನದಲ್ಲಿ ಇಲ್ಲವೆ, ಚಾಮರಾಜಪೇಟೆಯ ಗೆಳೆಯರ ಮನೆಯಲ್ಲಿ ಉಳಿದುಕೊಂಡು ಮರುದಿನ ಊರಿಗೆ ವಾಪಸ್ ಬರುತ್ತಿದ್ದೆವು.
ಖ್ಯಾತ
ಪತ್ರಕರ್ತ ಖಾದ್ರಿ ಶಾಮಣ್ಣನವರ ಅಭಿಮಾನಿಯಾಗಿದ್ದ ಅಪ್ಪನಿಗೆ ತಪ್ಪದೆ ಪತ್ರಿಕೆ ಓದುವ ಅಭ್ಯಾಸವಿತ್ತು. ಗಾಂಧಿ ಮತ್ತು
ಪೆರಿಯಾರ್ ಕುರಿತಂತೆ ಹಾಗೂ ಅವರ ವಿಚಾರಧಾರೆಗಳ ಕುರಿತಂತೆ ಅಪಾರ ಗೌರವಿತ್ತು. ಅವರ ಕುರಿತು ಬಹಳಷ್ಟು ಓದಿಕೊಂಡಿದ್ದರು. ಅವರು ತಾವು ಕಲಿತ ವಿದ್ಯೆಯ ಮೂಲಕ ವರ್ತಮಾನದ ಜಗತ್ತನ್ನು ಗ್ರಹಿಸುವುದನ್ನು ಕಲಿತಿದ್ದರು. ಜಾತಿ, ಧರ್ಮ, ಮೌಡ್ಯ, ಕಂದಾಚಾgಗಳ ಕುರಿತಂತೆ ಎಲ್ಲಿಯೂ
ಕ್ರಾಂತಿಕಾರಿಯಂತೆ ಮಾತನಾಡದಿದ್ದರೂ ಸಹ ಅವುಗಳಾಚೆ
ನಿಂತು ಬದುಕುವುದನ್ನು ಮತ್ತು ಯೋಚಿಸುವುದನ್ನು ಕಲಿತಿದ್ದರು. ಹಬ್ಬದ ಸಂದರ್ಭಗಳಲ್ಲಿ ನಾನು ನನ್ನ ಹೈಸ್ಕೂಲು ಮತ್ತು ಕಾಲೇಜಿನ ದಲಿತ ಸಮುದಾಯದ ಸಹಪಾಠಿಗಳನ್ನು ಮನೆಗೆ
ಕರೆದೊಯ್ಯುತ್ತಿದ್ದೆ. ಅವ್ವ ಅವರ ಜಾತಿ ಕೇಳುತ್ತಿದ್ದಳು. ಅವಳಿಗೆ ಸುಳ್ಳು ಹೇಳುತ್ತಿದ್ದೆ. ಆದರೆ ಅಪ್ಪನಿಗೆ
ಮಾತ್ರ ನಿಜ ಹೇಳುತ್ತಿದ್ದೆ. ಅಪ್ಪ ಎಲ್ಲರನ್ನು ನಡುಮನೆಯಲ್ಲಿ ನನ್ನ ಜೊತೆ ಸಾಲಾಗಿ ಕೂರಿಸಿ ಊಟ ಹಾಕುತ್ತಿದ್ದರು. ನನ್ನೂರಿನ ಸೋದರ
ಸಂಬಂಧಿ ಹಾಗೂ ಬಾಲ್ಯದ ಸಹಪಾಠಿ ಅಪ್ಪಾಜಿಗೌಡ ಮೈಸೂರಿನಲ್ಲಿ ಎಂ.ಎ. ಓದುವಾಗ
ಮಳ್ಳವಳ್ಳಿಯ ದಲಿತ ಸಮುದಾಯ ಸಹಪಾಠಿ ಹೆಣ್ಣುಮಗಳನ್ನು ಅಂತರ್ಜಾತಿಯ ವಿವಾಹವಾದ. ವಿವಾಹಕ್ಕೆ ಮುನ್ನ ಊರಿಗೆ ಬಂದು ಅಪ್ಪಾಜಿಗೌಡ ಈ
ವಿಷಯ ತಿಳಿಸಿದಾಗ ಅವನ ಕುಟುಂಬದವರು ಅವನನ್ನು ಮರ್ಯಾದೆ ಹತ್ಯೆ ಮಾಡಲು ಯೋಚಿಸಿದ್ದರು. ಅಲ್ಲಿಂದ ತಪ್ಪಿಸಿಕೊಂಡು ಹೋದ
ಅವನು ಆನಂತರ ತನ್ನ ಕುಟುಂಬದ ಗೈರು ಹಾಜರಿಯಲ್ಲಿ ೧೯೮೦ರಲ್ಲಿ ಮೈಸೂರಿನಲ್ಲಿ
ವಿವಾಹವಾದ. ದಂಪತಿಗಳಿಬ್ಬರೂ ಹಾಸನದಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಾ ಬದುಕು ಕಟ್ಟಿಕೊಂಡರು. ಆದರೆ, ಊರಿನ ಕಡೆ ಮುಖ ಮಾಡಲಿಲ್ಲ. ನಾನು ಆಗಾಗ್ಗೆ ಹಾಸನಕ್ಕೆ ಹೋಗಿ ಅವನ ಮನೆಯಲ್ಲಿ ಇದ್ದು ಬರುತ್ತಿದ್ದೆ. ಒಂದು ದಿನ ಅಪ್ಪ ನನ್ನನ್ನು ಕರೆದು “ ಮಗಾ, ಅಪ್ಪಾಜಿಯನ್ನು ನೋಡಬೇಕು ಅಂತಾ ಅನಿಸಿದೆ. ಮನೆಗೆ ಕರೆದುಕೊಂಡು ಬಾ. ಗಂಡ ಹೆಂಡತಿ ಇಬ್ಬರೂ ಬಂದು ನಮ್ಮ ಮನೆಯಲ್ಲಿರಲಿ, ಯಾರು ಏನ್ ಮಾಡ್ತಾರೆ ನೋಡಣ” ಎಂದಿದ್ದರು. ಅಪ್ಪನ ಆಹ್ವಾನದ
ಮೇರೆಗೆ ಊರಿಗೆ ಬಂದ ಅಪ್ಪಾಜಿ ಎರಡು ದಿನ ನನ್ನ ಮನೆಯಲ್ಲಿದ್ದುಕೊಂಡು, ಊರಿನ ಜನರನ್ನು ಮಾತನಾಡಿಸಿಕೊಂಡು, ತಿರುಗಾಡಿದ ಜೊತೆಗೆ ತನ್ನ ಕುಟುಂಬದ ಸದಸ್ಯರು ಮುಜಗರ ಅನುಭವಿಸುವಂತೆ ಮಾಡಿ ಹೋಗಿದ್ದ. ಈಗಲೂ ಆತನನ್ನು ನಾನು
“ಮಂಡ್ಯ ಜಿಲ್ಲೆಯಲ್ಲಿ ಪ್ರಥಮ ಮರ್ಯಾದಾ ಹತ್ಯೆಗೆ ಗುರಿಯಾಗಿ ಹುತಾತ್ಮನಾಗುವ ಅವಕಾಶವನ್ನು ತಪ್ಪಿಸಿಕೊಂಡ ನತದೃಷ್ಟ” ಎಂದು ತಮಾಷೆ ಮಾಡುವುದುಂಟು.
ಅಪ್ಪ
ನಿಧನರಾಗಿ ಹದಿಮೂರು ವರ್ಷಗಳಾದವು. ಪ್ರತಿ ದಿನವೂ ಅಪ್ಪನ ಮಾನವೀಯ ಮುಖದ ನಡುವಳಿಕೆಗಳನ್ನು ಯೋಚಿಸುತ್ತಾ ಇರುತ್ತೇನೆ. ಅಪ್ಪ ನನಗೆ ಬುದ್ಧನಾಗಿ, ಬಸವಣ್ಣನಾಗಿ, ಗಾಂಧಿಯಾಗಿ ನನ್ನೊಳಗೆ ಬೆಳೆಯುತ್ತಲೇ ಇದ್ದಾರೆ. ಅವರದು ಎಂತಹ ಸ್ವಾಭಿಮಾನದ ವ್ಯಕ್ತಿತ್ವವೆಂದರೆ, ತಮ್ಮ
ಇಳಿ ವಯಸ್ಸಿನಲ್ಲಿ ಅಂದರೆ ಎಂಬತ್ತನೇ ವಯಸ್ಸಿನಲ್ಲಿ ಬೆಳಿಗ್ಗೆ ಎದ್ದು ತೋಟಕ್ಕೆ ಹೋಗಿ ಅಲ್ಲಿ ಬಿದ್ದಿರುವ ತೆಂಗಿನ ಕಾಯಿಗಳನ್ನು ಆಯ್ದುಕೊಂಡು, ಹಣ್ಣಾಗಲು ಸಿದ್ಧವಾಗಿರುವ ಬಾಳೆಗೊನೆಯನ್ನು ಕಡಿದು ಹೊತ್ತುಕೊಂಡು
ಮನೆಗೆ ಬರುತ್ತಿದ್ದರು. ಊಟ ಮಾಡಿ ಬೆಳಿಗ್ಗೆ
ಹತ್ತು ಗಂಟೆಗೆ ಎರಡು ಮೂರು ಕುರಿಗಳ ಜೊತೆ ಹೊರಟು ಊರಾಚೆ ಬಯಲಿನಲ್ಲಿ ಸಂಜೆಯವರೆಗೆ ಅವುಗಳನ್ನು ಮೇಯಿಸಿಕೊಂಡು ವಾಪಸ್ ಮನೆಗೆ ಬರುತ್ತಿದ್ದರು. ನನ್ನ ಅನ್ನವನ್ನು ನಾನೇ ಸಂಪಾದಿಸಿ ಉಣ್ಣಬೇಕು ಎಂಬ ನಿರ್ಧಾರ ಅವರದು. ಪ್ರತಿ
ವರ್ಷ ಮಹಾಲಯ ಅಮವಾಸ್ಯೆ ಹಬ್ಬದಲ್ಲಿ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹರಿಜನ ಕುಟುಂಬz ಸದಸ್ಯರುÀ ನನ್ನ ಜೊತೆ ಊಟ ಮಾಡಬೇಕು ಎಂಬುವುದು
ಅವರ ಆಸೆಯಾಗಿತ್ತು. ನನ್ನ ಸಹೋದರರು ಅಪ್ಪನ ಆಸೆಗೆ ಎಂದೂ ಅಡ್ಡಿಯಾಗಲಿಲ್ಲ. ತಮ್ಮ ಎಂಬತ್ತಾರನೇ ವಯಸ್ಸಿನಲ್ಲಿ ಮಂಚದ ಮೇಲೆ ಮಲಿದ್ದ ಅವರು ಮಧ್ಯರಾತ್ರಿ ಮಗ್ಗುಲು ಬದಲಾಸುವಾಗ ಕೆಳಕ್ಕೆ ಬಿದ್ದು ಭುಜದ ಕೀಲಿಗೆ ಪೆಟ್ಟಾಗಿ ಕಳಚಿಕೊಂಡಿತು. ಮಂಡ್ಯ ನಗರದಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಿ, ತಿಂಗಳು ಕಾಲ ಮಂಡ್ಯ
ನಗರದ ನನ್ನ ಮನೆಯಲ್ಲಿ ಇರಿಸಿಕೊಂಡಿದ್ದೆ. ನನ್ನ
ಪತ್ನಿಗೆ ಅಪ್ಪನ ಕುರಿತು ವಿಶೇಷ ಗೌರವವಿತ್ತು. ಶ್ರೀಮಂತ ಮನೆತನದಲ್ಲಿ ಹುಟ್ಟಿ ಹದಿನಾಲ್ಕು ವರ್ಷಗಳ ಕಾಲ ಹೋರಾಟ ಮಾಡಿ ಸಾಮಾನ್ಯ ಕುಟುಂಬದ ನನ್ನ ಮಗನನ್ನು ಕೈ ಹಿಡಿದಿದ್ದಾಳೆ ಎಂಬ
ಏಕೈಕ ಕಾರಣದಿಂದಾಗಿ ಅಪ್ಪ ಆಕೆಯನ್ನು ಬಹುವಚನದಲ್ಲಿ ಮಾತನಾಡಿಸುತ್ತಿದ್ದರು. ಚಿಕಿತ್ಸೆ ಯ ನಂತರ ಊರಿಗೆ
ಮರಳಿದ ಅಪ್ಪ ಯಾರಿಗೂ ಹೊರೆಯಾಗಬಾರದೆಂಬ ಕಾರಣದಿಂದ ಜೈನ ಮುನಿಯ ರೀತಿಯಲ್ಲಿ ಆರು ದಿನಗಳ ಕಾಲ ಅನ್ನ ನೀರು ತ್ಯಜಿಸಿ, ಏಳನೆಯ ದಿನವಾದ ಸೋಮವಾರದಂದು ನನ್ನ ತಮ್ಮನ ಪುತ್ರಿಯ ಕೈಯಲ್ಲಿ ಅರ್ಧ ಲೋಟ ಹಾಲು ಕುಡಿದು ಇಚ್ಚಾಮರಣಿಯಂತೆ ಪ್ರಾಣ ತ್ಯಜಿಸಿದ್ದರು.
ನಾನು ಧಾರವಾಡದಿಂದ ಹೊರಟು ಮರುದಿನ ಬೆಳಿಗ್ಗೆ ನಸುಕಿನಲ್ಲಿ ಮನೆ ತಲುಪಿದೆ. ಮನೆಯ ಜಗುಲಿಯ ಮೇಲೆ ಮಲಗಿಸಿದ್ದ ಅಪ್ಪನ ಶವದ ಕಾಲಬಳಿ ನನ್ನ ಮನೆಯ ಆಳು ಮಕ್ಕಳಾಗಿದ್ದ ದಲಿತರ ಚಿಕ್ಕ
ಕುಳ್ಳಪ್ಪ, ಆತನ ಅಕ್ಕ ತಿಮ್ಮಿ, ಮಗಳು ಹೊನ್ನಿ ಇವರೆಲ್ಲ ಕುಳಿತಿರುವುದನ್ನು ನೋಡಿದಾಕ್ಚಣ, ಅಲ್ಲಿಯವರೆಗೆ ನಾನು
ತಡೆ ಹಿಡಿದಿದ್ದ ದುಖಃವೆಲ್ಲಾ ಕಣ್ಣೀರಾಗಿ
ಹರಿದು ಹೋಯಿತು. ಅಪ್ಪನ ಸಾವಿನ ಸುದ್ದಿ ತಿಳಿದಾಕ್ಷಣ ಮಧ್ಯಾಹ್ನ ಎರಡು ಗಂಟೆಗೆ ಮನೆಗೆ
ಬಂದಿದ್ದ ಅವರು ಮರುದಿನ ಅಪ್ಪನ ಅಂತ್ಯ ಕ್ರಿಯೆ ಮುಗಿಸಿ ಸಂಜೆ ನಾಲ್ಕು ಗಂಟೆಗೆ ವಾಪಸ್ ತೆರಳಿದರು. ಮನೆಯ ಹಿರಿಯ ಮಗನಾಗಿ ಅಪ್ಪನ ಅಂತ್ಯಕ್ರಿಯೆ ಮತ್ತು ತಿಥಕಾರ್ಯಗಳನ್ನು
ಮುಗಿಸಿದ ನಾನು ಅಪ್ಪನ ಸಾವಿನೊಂದಿಗೆ ಹುಟ್ಟಿದೂರಿನ ಸಂಬಂಧವನ್ನು ಕಡಿದುಕೊಂಡೆ. ಹತ್ತೊಂಬತ್ತು
ವರ್ಷದ ಹಿಂದೆ ಕ್ಯಾನ್ಸರ್ ಕಾಯಿಲೆಯಿಂದ ತನ್ನ ಅರವತ್ತೈದನೆಯ ವಯಸ್ಸಿನಲ್ಲಿ ಅವ್ವ ತೀರಿಕೊಂಡಿದ್ದಳು. ಅಪ್ಪ ಇರುವವರೆಗೂ ನಾನು ಹುಟ್ಟಿದ ಮನೆ ನನ್ನದು ಎಂಬ ಭಾವನೆ ಇತ್ತು. ಅಪ್ಪನ ಸಾವಿನ ನಂತರ ಆ
ಮನೆಗೆ ನಾನು ಅತಿಥಿ ಅಥವಾ ಆಗುಂತಕ ಎಂಬ ಭಾವನೆ ಕಾಡತೊಡಗಿದ್ದರಿಂದ ಎಲ್ಲವನ್ನೂ ಕಡಿದುಕೊಂಡೆ. ನನ್ನೆದುರು
ಇಲ್ಲದಿರುವ ಅಪ್ಪನ ಎಲ್ಲಾ ಸದ್ಗುಣಗಳನ್ನು ಮತ್ತು ಮಾತು ಹಾಗೂ ಮೌನ
ಎಲ್ಲವನ್ನೂ ಈಗ ಕುಶಾಲನಗರದ
ಪ್ರಾದೇಶಿಕ ವಲಯದ ಮುಖ್ಯಸ್ಥನಾಗಿದ್ದುಕೊಂಡು ಅರಣ್ಯಾಧಿಕಾರಿಯಾಗಿರುವ ನನ್ನ ಮಗನಲ್ಲಿ ಕಾಣುತ್ತಿದ್ದೇನೆ
.
ಐದು
ವರ್ಷದ ಹಿಂದೆ ನಾಗರಹೊಳೆ ಅಭಯಾರಣ್ಯದ ಮೇಟಿ ಕುಪ್ಪೆ ವಲಯದಲ್ಲಿ ಅವನು ಅರಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಬೇಸಿಗೆ ಕಾಲದಲ್ಲಿ ಕಾಡ್ಗಿಚ್ಚು ನಿಭಾಯಿಸಲು ಮೂರು ತಿಂಗಳುಗಳ ಕಾಲಕ್ಕೆ ಸ್ಥಳೀಯ
ಬುಡಕಟ್ಟು ಜನಾಂಗದ ತೊಂಬತ್ತು ಮಂದಿಯನ್ನು ದಿನಗೂಲಿ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದ. ಅವರಿಗೆ ನ್ಯಾಯಬೆಲೆ
ಅಂಗಡಿಯಿಂದ ಕ್ವಿಂಟಾಲ್ ಗಟ್ಟಲೆ ಅಕ್ಕಿಯನ್ನು ತರಿಸಿ
ಪ್ರತಿ ದಿನ ಮಧ್ಯಾಹ್ನ ಅವರಿಗೆ ಸ್ವಂತ ಖರ್ಚಿನಲ್ಲಿ ಊಟ ಹಾಕುತ್ತಿದ್ದ. ಅವನೂ
ಸಹ ಅಲ್ಲಿಯೇ ಅವರ ಜೊತೆ ಊಟ ಮಾಡುತ್ತಿದ್ದ. ಒಂದು
ದಿನ ಅವನೊಂದಿಗೆ ಊಟ ಮಾಡುವಾಗ ಮೆಲ್ಲಗೆ
ಅವನನ್ನು ಹೀಗೆ ಪ್ರಶ್ನಿಸಿದೆ “ ಚಿಲ್ಟು, ನಿನಗೆ ಇದು ಹೊರೆಯಾಗುವುದಿಲ್ಲವೆ?” ನನ್ನ ಪ್ರಶ್ನೆಗೆ ಮಗ ಉತ್ತರಿಸಿದ್ದು ಹೀಗೆ
“ ಪಪ್ಪಾ ಮನುಷ್ಯ ಏನು ಕೊಟ್ಟರೂ, ಎಷ್ಟೇ ಕೊಟ್ಟರೂ ಬೇಡ ಎನ್ನುವುದಿಲ್ಲ ಅಥವಾ ಸಾಕು ಎನ್ನುವುದಿಲ್ಲ ಆದರೆ ಊಟ ಮಾತ್ರ ಸಾಕು
ಎನ್ನುತ್ತಾನೆ. ಇದರಿಂದ ನನಗೇನು ಹೆಚ್ಚಿನ ಖರ್ಚಿಲ್ಲ ಬಡವರಿಗೆ ಊಟ ಹಾಕಿದೆ ಎಂಬ
ತೃಪ್ತಿ ಇದೆ” ಮಗನ ಈ
ಮಾತಗಳನ್ನು ಕೇಳಿದಾಕ್ಷಣ ನನಗೆ ಅಪ್ಪ ನೆನಪಾದರು. ನನ್ನ
ಮಗ ಅನನ್ಯನಿಗೆ ಆ ಸಮಯದಲ್ಲಿ
ಕೇವಲ ಇಪ್ಪತ್ತನಾಲ್ಕು ವರ್ಷ. ನನ್ನ ಪಾಲಿಗೆ ಇಲ್ಲವಾಗಿರುವ ಅಪ್ಪ ನನ್ನ
ಮಗನೊಳಗೆ ಕುಳಿತು ಮಾತನಾಡುತ್ತಿದ್ದಾರೆ
ಎಂದು ಎಂದು ಆ
ಕ್ಷಣಕ್ಕೆ ನನಗೆ ಅನಿಸಿತು.
ಅಪ್ಪನ
ನೆನಪು ಎಂಬುವುದು ನನ್ನ
ಪಾಲಿಗೆ ಎಂದೆAದಿಗೂ ಬತ್ತಲಾರದ ಗಂಗೆಯಂತೆ ಸದಾ ಜೀವಂತವಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ