ಸೋಮವಾರ, ಜುಲೈ 18, 2022

ಪ್ರತಿಯೊಬ್ಬ ಪತ್ರಕರ್ತ ಓದಲೇಬೇಕಾಗಿರುವ ಕೃತಿ

 


ನಾನು ಕಳೆದ ಎರಡು ವರ್ಷಗಳಿಂದ ಎಲ್ಲಿಯೂ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುತ್ತಿಲ್ಲ. ಕಳೆದ ತಿಂಗಳು ಹುಬ್ಬಳ್ಳಿಯಲ್ಲಿ ನಾಲ್ವಡಿಯವರ ಕುರಿತು ಉಪನ್ಯಾಸ ಹೊರತು ಪಡಿಸಿದರೆ, ನಿನ್ನೆ ಬೆಂಗಳೂರಿನಲ್ಲಿ ವಡ್ಡರ್ಸೆ ಅವರ ಕೃತಿ ಕುರಿತು ಮಾತನಾಡಲು ಭಾಗವಹಿಸಿದ್ದೆ. ಈ ಇಬ್ಬರು ಮಹನೀಯರ ಮೇಲಿದ್ದ ಗೌರವ ಇದಕ್ಕೆ ಪ್ರಮುಖ ಕಾರಣ.
ವಡ್ಡರ್ಸೆಯವರು ಒಂದು ರೀತಿಯಲ್ಲಿ ನನ್ನ ಪಾಲಿಗೆ ಗುರುಗಳು. ಪ್ರಜಾವಾಣಿಯಲ್ಲಿ ಇದ್ದಾಗ ನಂತರ ಮುಂಗಾರು ಪತ್ರಿಕೆ ಆರಂಭಿಸಿ ಅನಂತರ ಅವರು ತ್ಯೆಜಿಸಿ ಬಂದ ಮೇಲೆ ಅವರ ಕಷ್ಟದ ನೋವಿನ ಸಂಧರ್ಭದಲ್ಲಿ ನಿರಂತರವಾಗಿ ಒಡನಾಟ ಇರಿಸಿಕೊಂಡಿದ್ದೆ. ಅವರ ನಿಲುವುಗಳು, ಎಂತಹ ಸಂಧರ್ಭದಲ್ಲಿಯೂ ಸಹ ತಮಗೆ ನೋವುಂಟು ಮಾಡಿದವರ ಬಗ್ಗೆ ಒಂದು ಕೆಟ್ಟ ಶಬ್ದ ಮಾತನಾಡದ ಅವರ ಸಂತನಂತಹ ವ್ಯಕ್ತಿತ್ವ ಹಾಗೂ ಅಗಾಧವಾದ ನೆನಪಿನ ಶಕ್ತಿ ಈಗಲೂ ನನ್ನ ಮೇಲೆ ಪರಿಣಾಮ ಬೀರಿವೆ.
ಅವರು ಮುಂಗಾರು ಪತ್ರಿಕೆಗೆ ಬರೆದ ವ್ಯಕ್ತಿಚಿತ್ರಗಳು ಮತ್ತು ಸಂಪಾದಕೀಯ ಬರಹಗಳನ್ನು ನಾನು ಓದಿರಲಿಲ್ಲ. ಮಿತ್ರರಾದ ದಿನೇಶ್ ಅವುಗಳನ್ನು ಕಾಯ್ದಿಟ್ಟುಕೊಂಡಿದ್ದ ಕಾರಣ ಈಗ ಬೇರೇಯ ಮಾತು ಹೆಸರಿನಲ್ಲಿ ಪ್ರಕಟವಾಗುವುದರೊಂದಿಗೆ ಕನ್ನಡ ಪತ್ರಿಕೋದ್ಯಮಕ್ಕೆ ಒಂದು ಅಮೂಲ್ಯ ಪಠ್ಯ ದೊರೆತಂತಾಗಿದೆ.
ಪಿ.ಲಂಕೇಶರ ಟೀಕೆ ಟಿಪ್ಪಣಿಯ ಮೊದಲ ಸಂಪುಟ ಕೂಡ ಇದೇ ಮಾದರಿಯ ಅಮೂಲ್ಯ ಕೃತಿ. ಈ ಎರಡು ಕೃತಿಗಳು ಒಬ್ಬ ಪ್ರಾಮಾಣಿಕ‌ ಹಾಗೂ ಪಾರದರ್ಶಕತೆಯ ಗುಣವುಳ್ಳ ಹಾಗೂ ರಾಗ ದ್ವೇಷಗಳಿಲ್ಲದ ಪತ್ರಕರ್ತ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿವೆ.
ವಡ್ಡರ್ಸೆಯವರು ಕಟ್ಟಿಕೊಟ್ಟಿರುವ ರಾಜಕೀಯ ವ್ಯಕ್ತಿಗಳ ಚಿತ್ರಣ ನಿಜವಾಗಿಯೂ ವಿಸ್ಮಯ ಮೂಡಿಸುವಂತಹದ್ದು. ಅದೇ ರೀತಿ ಸಾಮಾಜಿಕ ವಿಷಯಗಳ ಕುರಿತಂತೆ ಅವರು ತಾಳಿದ್ದ ನಿಲುವು ಇಂದಿಗೂ ಪ್ರಸ್ತುತವಾಗಿವೆ.
ಅವರು ತೊಂಬತ್ತರ ದಶಕದಲ್ಲಿ ಜಾಫರ್ ಷರೀಪರ ಕುರಿತಾಗಿ ‌ಸಾಧಕನ ಬದುಕು ಎಂಬ ಕೃತಿ ರಚಿಸಿದ್ದರು.
ಬೆಂಗಳೂರು ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಬಳಿಯ ಅತಿಥಿ ಗೃಹದಲ್ಲಿ ಮೂರು ತಿಂಗಳಕಾಲ ಉಳಿದು ಶೆಟ್ಟರು ಸಾಧಕನ ಬದುಕು ರಚಿಸಿದ್ದರು.
ಕೃತಿ ಬಿಡುಗಡೆಯಾದ ಮೂರು ನಾಲ್ಕು ದಿನಗಳ ನಂತರ ಎ.ಕೆ. ಸುಬ್ಬಯ್ಯನವರು ಕೃತಿಯ ಹೆಸರು ಮೀರ್ ಸಾಧಕನ ಬದುಕು ಎಂದು ಇರಬೇಕಾಗಿತ್ತು ಎನ್ನುವುದರ ಮೂಲಕ ಲೇವಡಿ ಮಾಡಿಬಿಟ್ಟರು. ಇದು ರಾಜ್ಯಾದ್ಯಂತ ಸುದ್ದಿಯಾಯಿತು. ಅದಕ್ಕೆ ಕಾರಣ ಕೂಡ ಇತ್ತು.
ವಾಸ್ತವವಾಗಿ ಚಿತ್ರದುರ್ಗ ಮೂಲದ ಜಾಫರ್ ಷರೀಪರು‌ಎಸ್.ನಿಜಲಿಂಗಪಗಪನವರ ಕಾರಿನ ಚಾಲಕರಾಗಿದ್ದರು. ನಿಜಲಿಂಗಪ್ಪ ಮತ್ತು ಇಂದಿರಾಗಾಂಧಿ ನಡುವೆ ನಡೆಯುತ್ತಿದ್ದ‌ ಶೀತಲ ಸಮರದಲ್ಲಿ ನಿಜಲಿಂಗಪ್ಪನವರ ರಾಜಕೀಯ ಚಟುವಟಿಕೆಗಳನ್ನು ಇಂದಿರಾ ಗಾಂಧಿಗೆ ತಲುಪಿಸುತ್ತಿದ್ದ ಜಾಫರ್ ಷರೀಪ್‌1969 ರಲ್ಲಿ ಬೆಂಗಳೂರು ಲಾಲ್ ಬಾಗಿನ‌ ಗಾಜಿನ‌ಮನೆಯಲ್ಲಿ ಕಾಂಗ್ರೇಸ್ ಇಬ್ಭಾಗವಾದಾಗ ಇಂದಿರಾ ಬಳಗ ಸೇರಿ ರಾಜಕೀಯದಲ್ಲಿ ಮೇಲೆ ಬಂದಿದ್ದರು.
ಈ ಕುರಿತು ಪ್ರೆಸ್ ಕ್ಲಬ್ ನಲ್ಲಿ ರಾತ್ರಿ ಊಟ ಮಾಡುವಾಗ ವಡ್ಡರ್ಸೆಯವರ ಜೊತೆ ವಿಷಯ ಪ್ರಸ್ತಾಪ ಮಾಡಿದೆ. ಅವರ ಉತ್ತರ ಹೀಗಿತ್ತು.
ತಮ್ಮಾ, ಸುಬ್ಬಯ್ಯನವರ ಹೇಳಿಕೆ ತೀಕ್ಷ್ಙವಾಗಿದ್ದರೂ ಸತ್ಯವಾಗಿದೆ. ನಾನು ಕೃತಿ ರಚನೆಯ ಸಂಧರ್ಭದಲ್ಲಿ ನಗಣ್ಯ ಎಂದು ಪರಿಗಣಿದ್ದ ವಿಷಯವನ್ನು ‌ಅವರು‌ ಮುನ್ನೆಲೆಗೆ ತಂದಿದ್ದಾರೆ. ಅವರ ಬಗ್ಗೆ ಬೇಸರ ಪಡುವ ಅಗತ್ಯವಿಲ್ಲ. ಈ ಕೃತಿಯಲ್ಲಿ ಎ.ಕೆ. ಸುಬ್ಬಯ್ಯನವರ ಕುರಿತಾಗಿ ಶೆಟ್ಟರು ಅದ್ಭುತವಾದ ವ್ಯಕ್ತಿ ಚಿತ್ರವನ್ನು ದಾಖಲಿಸಿದ್ದಾರೆ. ಅದನ್ನು ಓದುವಾಗ ಈ ಘಟನೆ ನೆನಪಾಯಿತು.
ವಡ್ಡರ್ಸೆಯವರ ಇಂತಹ ಮನೋಭಾವ, ಆಲೋಚನೆಗಳು, ಜನಸಾಮಾನ್ಯರ ಬಗ್ಗೆ‌ ವಿಶೇಷವಾಗಿ ಹಿಂದುಳಿದವರ ಬಗ್ಗೆ ಅವರಿಗಿದ್ದ ಕಾಳಜಿಯಿಂದಾಗ‌ ನನ್ನ ತಲೆಮಾರಿನ ಪತ್ರಕರ್ತರ ಮೇಲೆ ಗಾಢ ಪ್ರಭಾವ ಬೀರಿದ್ದಾರೆ. ಇಂದು ಕೇವಲ ಐದು ವರ್ಷಗಳ ಕಾಲ ಪತ್ರಿಕೆ ಅಥವಾ ಛಾನಲ್ ಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದವರು ( ಎಲ್ಲರೂ ಅಲ್ಲ) ಕೋಟ್ಯಾಧೀಶರಾಗಿ‌ ಹೊರ ಬರುತ್ತಿದ್ದಾರೆ. ಭಿಕ್ಷಾಧೀಶರಾಗಿ ಹೊರಬಂದ ನನ್ನ ಕಾಲದ ಪತ್ರಕರ್ತರು ಹಣವಿಲ್ಲದಿದ್ದರೂ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಇದಕ್ಕೆ ಮುಖ್ಯ ಕಾರಣ ವಡ್ಡರ್ಸೆ ಅವರಂತಹ ಪತ್ರಕರ್ತರು ನಮ್ಮ ನಡುವೆ ಇದ್ದರು.
ಎರಡು ತಿಂಗಳ ಹಿಂದೆ ಪ್ರಮುಖ ದಿನಪತ್ರಿಕೆಯ ಸಂಪಾದಕನಿಗೆ ತಾನು ಹುದ್ದೆ ತ್ಯೆಜಿಸುವ ಹಿಂದಿನ ದಿನ ರಾಜ್ಯ ಸರ್ಕಾರ ಉತ್ತರ ಕನ್ನಡ ಜೆಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಐದು ಎಕರೆ ಭೂಮಿಯನ್ನು ಉಚಿತವಾಗಿ ‌ನೀಡಿದ‌ ಮಾಹಿತಿ ನನಗೆ ಇತ್ತೀಚೆಗಷ್ಟೇ ಗೊತ್ತಾಯಿತು.
ಇದು ಈಗಿನ ಪತ್ರಕರ್ತರಿಗೂ ಹಾಗೂ ವಡ್ಡರ್ಸೆ ರಘುರಾಮ ಶೆಟ್ಟರ ಕಾಲದ ಪತ್ರಕರ್ತರಿಗೂ ಇರುವ ವೆತ್ಯಾಸ.
ವಡ್ಡರ್ಸೆಯವರ ಈ ಕೃತಿ ಇದೀಗ ಎರಡನೇ ಮುದ್ರಣ ಕಂಡಿದೆ. ನೀವು ಓದಲೇಬೇಕಾದ ಕೃತಿ ಇದಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ