ಸೋಮವಾರ, ಸೆಪ್ಟೆಂಬರ್ 18, 2023

ಬಹುತ್ವದ ಭಾರತದ ಸವಾಲುಗಳು

 



ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ಇಲ್ಲಿಗೆ ಎಪ್ಪತ್ತೈದು ವರ್ಷಗಳಾದವು.  ಈ ಸಂದರ್ಭದಲ್ಲಿ ಬಹುಸಂಸ್ಕೃತಿಯ ನೆಲವಾದ ಭಾರತದ ನೆಲದಲ್ಲಿ ಈಗ ತಾಂಡವವಾಡುತ್ತಿರುವ ಕೋಮುವಾದದ ಪರಿಣಾಮದಿಂದಾಗಿ  ಏಕರೂಪಿ  ಚಿಂತನೆಗಳು ಮುನ್ನೆಲೆಗೆ ಬಂದು  ಬಹುತ್ವದ ಭಾರತವು  ನಶಿಸಿ  ಹೋಗುತ್ತಿದೆ. ನಮ್ಮ ದೇಶಿ ಚಿಂತನೆಗಳು ಮಾತ್ರವಲ್ಲದೆ;  ತತ್ವಪದಕಾರರ ಆಶಯಗಳು ಮತ್ತು  ಮನುಕುಲಕ್ಕೆ ಬೆಳಕಾಗಬಲ್ಲ ದಾರ್ಶನಿಕರ ಚಿಂತನೆಗಳು ಇವೆಲ್ಲವೂ ಕಣ್ಣೆದುರು ಅಳಿಸಿಹೋಗುತ್ತಿರುವ ಆತಂಕ ನಮ್ಮೆದುರು  ಸೃಷ್ಟಿಯಾಗಿದೆ.

ಪಾಶ್ಚಿಮಾತ್ಯ ಜಗತ್ತಿನ ಚಿಂತನೆ ಮತ್ತು ವಸಾಹಿತು  ಜಗತ್ತಿನ ಏಕಾಧಿಪತ್ಯ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಮಹಾತ್ಮ ಗಾಂಧೀಜಿ ಮತ್ತು ಅವರ  ಸಮಕಾಲೀನ ಸಹಸ್ರಾರು ಹೋರಾಟಗಾರರು ಕನಸು ಕಂಡಿದ್ದು ಬಹು ಸಂಸ್ಕೃತಿಯ ಭಾರತವನ್ನಲ್ಲದೆ  ಏಕ ಸಂಸ್ಕೃತಿ ಅಥವಾ ಏಕ ಧರ್ಮದ ಭಾರತವನ್ನಲ್ಲ. ಅವರೆಲ್ಲರ ಕನಸಿನ ಭಾರತದಲ್ಲಿ ಹಿಂದೂ ಧರ್ಮದ ವ್ಯಕ್ತಿ ಇದ್ದನು ನಿಜ ಜೊತೆಗೆ ಮುಸಲ್ಮಾನ, ಸಿಖ್, ಪಾರ್ಸಿ, ಕ್ರೈಸ್ತ, ಹೀಗೆ ಎಲ್ಲಾ ಧರ್ಮದ ಜನರಿದ್ದರು. ನೊಂದ ಜನರಿಗೆ ಸಮಾಧಾನ ಹೇಳುವುದರ ಜೊತೆಗೆ ಪರಿಹಾರ ಮತ್ತು  ಹಸಿದ ಜನರಿಗೆ ಅನ್ನ ಹಾಗೂ ಸೂರಿಲ್ಲದವರಿಗೆ ವಸತಿ ಇವುಗಳು ಅವರ ನಿಜ ಭಾರತದ ಕನಸುಗಳಾಗಿದ್ದವು. ಅವರ ಕಲ್ಪನೆಯ ಭಾರತದಲ್ಲಿ ಶ್ರೀ ರಾಮನ ಜೊತೆಗೆ ಶಿವನೂ ಇದ್ದನು. ಹನುಮನ ಜೊತೆಗೆ ಗಣಪನೂ ಇದ್ದನು.  ಇಷ್ಟು ಮಾತ್ರವಲ್ಲದೆ, ನಮ್ಮ ಗ್ರಾಮೀಣ ಸಂಸ್ಕೃತಿಯ ಜನರ ಎದೆಯೊಳಗೆ ಮಾರಮ್ಮನಿಗೆ ಮತ್ತು  ಬೋರಪ್ಪನಿಗೂ ಸ್ಥಾನವಿತ್ತು. ಬಗೆ ಬಗೆಯ ಭಾಷೆಗಳಿದ್ದವು, ಹಾಡುಗಳಿದ್ದವು, ಆಯಾ ಪ್ರಾದೇಶಿಕ ಸಂಸ್ಕೃತಿಗಳು ಜನರ ಜೀವನದ ಅಂಗವಾಗಿದ್ದವು. ಒಂದು ತಟ್ಟೆಯ ಅನ್ನವನ್ನು ಹಾಗೂ ಒಂದು ಬಟ್ಟಲಿನ ನೀರನ್ನು ಹಂಚಿಕೊಂಡು ತಿನ್ನುವ ಮತ್ತು ಕುಡಿಯುವ ಮಾನವೀಯ ಗುಣ ಅವರಲ್ಲಿತ್ತು.

ಭಾರತದ ನೆಲದಲ್ಲಿ ವಿಶೇಷವಾಗಿ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಹಲವು ತತ್ವ ಸಿದ್ಧಾಂತಗಳ ಸರ್ಕಾರಗಳು ಈ ದೇಶವನ್ನು ಮತ್ತು ಇಲ್ಲಿನ ರಾಜ್ಯಗಳನ್ನು  ಆಳಿವೆ. ಆದರೆ, 2014 ರಿಂದ ಭಾರತದಲ್ಲಿ ಅಸ್ತಿತ್ವಕ್ಕೆ ಬಂದ ನರೇಂದ್ರಮೋದಿ ನೇತೃತ್ವದ ಬಿ.ಜೆ.ಪಿ. ಸರ್ಕಾರವು ತನ್ನ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಮುನ್ನೆಲೆ ತರಲಾದ ಧರ್ಮ ಮತ್ತು ಜಾತಿಯ ವಿಚಾರಗಳು ಇತ್ತೀಚೆಗೆ ಭಾರತದ ಬಹುಸಂಸ್ಕೃತಿಯ ಮೂಲವನ್ನು ಅಳಿಸಿ ಹಾಕುತ್ತಿವೆ. ಅಕ್ಷರವಂತರು ವಿಚಾರವಂತರು, ವಿದ್ವಾಂಸರು ಎನಿಸಿಕೊಂಡವರು ಮಾತ್ರವಲ್ಲದೆ ಜಾತಿಯತೆಯನ್ನು ಉಸಿರಾಡುತ್ತಿರುವ  ಪ್ರಸಿದ್ಧ ಕಾದಂಬರಿಕಾರ .ಎಸ್.ಎಲ್,ಭೈರಪ್ಪನಂತಹವರು ಈ ಅಮಾನುಷ ಕ್ರಿಯೆಗಳಿಗೆ ವಕ್ತಾರರಾಗಿ ಶ್ರಮಿಸುತ್ತಿರುವುದು ವರ್ತಮಾನದ ಭಾರತದ ದುರಂತಗಳಲ್ಲಿ ಒಂದು.  ಗುಜರಾತ್ ರಾಜ್ಯದಲ್ಲಿ ಮೂರೂವರೆ ದಶಕಗಳ ಕಾಲ ತತ್ವಶಾಸ್ತ್ರ ಬೋಧಿಸಿದ ಪ್ರಾಧ್ಯಾಪಕ ಮತ್ತು ರಾಷ್ಟ್ರೀಯ ಪ್ರೊಫೆಸರ್  ಎಂಬ ಗೌರವ ಹುದ್ದೆಗೆ ನೇಮಕಗೊಂಡಿರುವ ಪ್ರೊ.ಎಸ್.ಎಲ್. ಭೈರಪ್ಪನವರು ಓದಿರುವ ತತ್ವಶಾಸ್ತ್ರ ಯಾವುದು? ಅದು ಎಂದಾದರೂ ಈ ನೆಲದ  ಮುಸ್ಲಿಂರನ್ನು ದ್ವೇಷಿಸಬೇಕು ಎಂದು ಹೇಳಿರುವ ದಾಖಲೆ ಇದೆಯಾ?

ಅರ್ಧ ಶತಮಾನದ ಅವಧಿಯಲ್ಲಿ ಅನೇಕ ಕಾದಂಬರಿಗಳನ್ನು ಬರೆದು ಜನಪ್ರಿಯ ಕಾದಂಬರಿಕಾರ  ಎಂದು ಕರೆಸಿಕೊಂಡ ಹಾಗೂ ಸುಮಾರು ಎಂಬತ್ತೇಳು ವರ್ಷ ದಾಟಿರುವ ಭೈರಪ್ಪನವರಿಗೆ  ವೈವಿಧ್ಯತೆಯಲ್ಲಿ ಏಕತೆಯನ್ನು ಕಾಪಾಡಿಕೊಂಡು ಬಂದಿರುವ ಭಾರತದ ಸಂಸ್ಕೃತಿಯ ಕುರಿತಾಗಿ  ವಯಸ್ಸಿನಲ್ಲಿ ಇಪ್ಪತ್ತೈದು ವರ್ಷ ಚಿಕ್ಕವನಾದ ನನ್ನಂತಹವನು ಪಾಠ ಹೇಳಿಕೊಡಬೇಕಾದ ಸ್ಥಿತಿ ಸೃಷ್ಟಿಯಾಗಿದೆ.  ಇಲ್ಲಿನ ಓರ್ವ ಅನಕ್ಷರಸ್ಥ ಬಡವನಿಗೆ ರಾಮನೂ ಒಂದೇ, ರಹಿಮನೂ ಒಂದೇ. ಆಗಿದ್ದಾನೆ. ನಮ್ಮ ಗ್ರಾಮೀಣ ಬದುಕಿನ ಜನಪದರು ಕಣ್ಣಿಗೆ ಬಿದ್ದ ಕಲ್ಲುಗಳನ್ನು ಎತ್ತಿಕೊಂಡು ಬಂದು ಮರದ ಬುಡದಲ್ಲಿಟ್ಟು ಅದಕ್ಕೆ ಅರಿಶಿನ, ಕುಂಕಮ ಹಚ್ಚಿ ದೇವರೆಂದು ಪೂಜಿಸಿದವರು. ಸಕಲೆಂಟು ದೇವರನ್ನು ಅಣ್ಣತಮ್ಮಂದಿರೆಂದು, ದೇವತೆಗಳನ್ನು ಅಕ್ಕತಂಗಿಯರೆಂದು ಕರೆದು ಕೈಯೆತ್ತಿ ಮುಗಿದರು. ನಮ್ಮ ಜನಪದರಿಗೆ ಅಥವಾ ಗ್ರಾಮೀಣ ಭಾಗದ ಹಿರಿಯ ಜೀವಗಳಿಗೆ ಇಲ್ಲದ ವಿವೇಕ ಪ್ರೊಫೆಸರ್ ಎಂದು ಕರೆಸಿಕೊಂಡ  ಇಂದಿನ ಜನರಿಗೆ  ಇಲ್ಲದಿರುವುದು ದುರಂತವಲ್ಲದೆ ಬೇರೇನೂ ಅಲ್ಲ.

ಗೋಮಾತೆಯ ಹೆಸರಿನಲ್ಲಿ ಪುಂಖಾನುಪುಂಖವಾಗಿ ಭಾಷಣ ಬಿಗಿಯುವ ಧಾರ್ಮಿಕ ಚಿಂತಕರೆಂಬ ಅಜ್ಞಾನಿಗಳಿಗೆ ನಮ್ಮ ಗ್ರಾಮೀಣ ಭಾಗದ ರೈತರ ಮನೋಭಾವ ಹೇಗಿತ್ತು ಎಂಬ ಕನಿಷ್ಠ ಜ್ಞಾನವಿಲ್ಲ, ಕರು ಹಾಕಿದ ಹಸು ಅಥವಾ ಎಮ್ಮೆಯ ಕೆಚ್ಚಲಿನಲ್ಲಿ ಇರುವ ನಾಲ್ಕು ತೊಟ್ಟುಗಳಲ್ಲಿ ಒಂದನ್ನು ಕರು ಹಾಲು ಕುಡಿಯುವುದಕ್ಕೆ ಮೀಸಲಾಗಿಟ್ಟು ಉಳಿದ ಮೂರರಲ್ಲಿ ಹಾಲು ಹಿಂಡುವ ಪದ್ಧತಿ  ಇವತ್ತಿಗೂ ಗ್ರಾಮೀಣ ಪ್ರದೇಶದಲ್ಲಿ ರೂಢಿಯಲ್ಲದೆ.  ನಮ್ಮ ಜನಪದರು  ಇಂದಿನ ಆಧುನಿಕ ಮನೋಭಾವದ ಜನಾಂಗದ ಹಾಗೆ ಹುಟ್ಟಿದ ಗಂಡು ಕರುವನ್ನು ರಸ್ತೆಯಲ್ಲಿ  ಬಿಟ್ಟು ಬಂದು  ಹಸುಗಳಲ್ಲಿ ಹಾಲು ಹಿಂಡುವ  ಅಧರ್ಮಿಗಳಲ್ಲ. ದೇಶಾದ್ಯಂತ ನಗರಗರಳಲ್ಲಿ ತುಂಬಿ ತುಳುಕಾಡುತ್ತಿರುವ ಹಾಗೂ ಆಹಾರ ಮತ್ತು ಕುಡಿಯುವ ನೀರಿಗಾಗಿ ಪರದಾಡುತ್ತಿರುವ  ಬೀಡಾಡಿ ದನ ಕರುಗಳ ಬಗ್ಗೆ .ಸಾಂಸ್ಕೃತಿಕ ಚಿಂತಕರೆಂಬ ಈ ಆಧುನಿಕ ಧಾರ್ಮಿಕ ಭಯೋತ್ಪಾದಕರು ಪ್ರತಿಪಾದಿಸುವ  ಹುಸಿ ಧರ್ಮಕ್ಕಿಂತ ನಮ್ಮ ಜನಪದರು ಶತಮಾನಗಳದ್ದಕ್ಕೂ  ಪ್ರತಿಪಾದಿಸಿಕೊಂಡು ಬಂದಿರುವ ಮನುಷ್ಯ ಧರ್ಮವೇ  ನಿಜವಾದ ಧರ್ಮವಾಗಿದೆ.

ನಮ್ಮ ಜನಪದರ ದೃಷ್ಟಿಯಲ್ಲಿ ನ್ಯಾಯವಲ್ಲದ್ದು, ಮತ್ತು ಅಮಾನುಷ ಕ್ರಿಯೆಗಳಿಂದ ಒಳಗೊಂಡಿದ್ದ ಕ್ರಿಯೆಯನ್ನು ಅವರು ‘ ಇದು ಧರ್ಮವಲ್ಲ’ ಎಂದು ವಿಶ್ಲೇಷಿಸಿದ್ದರು. ಈ ಒಂದೇ ಶಬ್ದದ ಮೂಲಕ  ಇಡೀ ಮನುಕುಲದ ಬದುಕನ್ನು ನಿಜವಾದ ಧರ್ಮದ ಮೂಲಕ ವ್ಯಾಖ್ಯಾನಿಸಿದ್ದರು. ಈ ಕಾರಣದಿಂದಾಗಿ ನಮ್ಮ ಹಿಂದಿಯ ಪ್ರಸಿದ್ಧ ಕವಿ  ಜಾವೆದ್ ಅಕ್ತರ್ ರವರು ಬಹುತ್ವ ಭಾರತದ ಮಹತ್ವವನ್ನು ಪ್ರತಿಪಾದಿಸುತ್ತಾ  ‘ಭಾರತಕ್ಕೆ ಬಹುತ್ವ ಅನಿವಾರ್ಯವಾಗಿದೆ. ಜಗತ್ತಿನ ಮತ್ಯಾವ ದೇಶದಲ್ಲಿಯೂ ಬಹುತ್ವವನ್ನು ಕಾಣಲು ಸಾಧ್ಯವಿಲ್ಲ. ಭಾರತದ ಭೌಗೋಳಿಕ ಲಕ್ಷಣ, ಭಾಷೆ, ಸಾಂಸ್ಕೃತಿಕತೆ, ವಸ್ತ್ರವಿನ್ಯಾಸ ಎಲ್ಲವೂ ಭಿನ್ನವಾಗಿದೆ ನಿಜ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಮಹಾರಾಷ್ಟ್ರದಿಂದ ಮಣಿಪುರದವರೆಗೆ ವೈವಿಧ್ಯತೆ ಇದೆ. ಇವೆಲ್ಲಕ್ಕೂ ನಮ್ಮನ್ನು ಒಡ್ಡಿಕೊಳ್ಳುತ್ತಲೇ, ಬೇರೆ ಇದ್ದೇವೆ ಎಂದು ಭ್ರಮಿಸುತ್ತೇವೆ. ಏನೇ ಪ್ರಯತ್ನ ನಡೆದರೂ ಇದನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ’ ಎಂದು ನುಡಿದಿದ್ದಾರೆ.

ಇಂತಹದ್ದೇ ಅರ್ಥಪೂರ್ಣ ಮಾತುಗಳನ್ನು ಭಾರತದ ಪ್ರಸಿದ್ಧ ಇತಿಹಾಸಕಾರರಾದ ಕೆ.ನೀಲಕಂಠಶಾಸ್ತ್ರಿಯವರು 1959 ರಲ್ಲಿ ದಾಖಲಿಸಿದ್ದಾರೆ. ಅವರ ಮಾತುಗಳು ಹೀಗಿವೆ’ ‘ಭಾರತದ ಪ್ರಾಚೀನ ಇತಿಹಾಸವು ಐದು ಸಾವಿರ ವರ್ಷಗಳಿಗಿಂತ ಹಿಂದಿನದು. ಅದು ತನ್ನ ಜೀವನದ ಅಪರಿಮಿತ ಬಹುತ್ವದ ಮೂಲಕ ಸಾಗುವ ಏಕತೆಯ ಬಲವಾದ ಎಳೆಯೊಂದಿಗೆ ಸೂಕ್ಷ್ಮವಾಗಿದೆ.  ಸಂತರು, ತತ್ವಜ್ಞಾನಿಗಳು, ಕವಿಗಳು, ಕಲಾವಿದರು ಹೀಗೆ ಹಲವಾರು ಮಂದಿ ನಾವೀಗ ಸಾಂಸ್ಕೃತಿಕ ಎಂದು  ಕರೆಯುವ ಈ ವ್ಯವಸ್ಥೆಯನ್ನು ತಲೆಮಾರಿನಿಂದ ತಲೆಮಾರಿಗೆಗೆ  ದಾಟಿಸಿದ್ದಾರೆ. ಹೀಗೆ ರವಾನೆಯಾಗುವ ಜೀವನ ಮೌಲ್ಯಗಳು ಮತ್ತು ಸಾಮಾಜಿಕ ರೂಪಗಳ ಒಟ್ಟು ಸಂಗ್ರಹವೇ ಬಹುತ್ವದ ಭಾರತವಾಗಿದೆ.’ ಈ ಸಂಸ್ಕೃತಿಯನ್ನು ನಮ್ಮ ಭಾರತದ ಗ್ರಾಮೀಣ ಕೃಷಿ ಸಮಾಜವು ಒಳಗೊಂಡಿತ್ತು. ಅಲ್ಲಿನ ಜನರ ಸಂತೋಷವು ಮಳೆ, ಬೆಳೆ ಹಾಗೂ ಜಾನುವಾರುಗಳ ಯೋಗಕ್ಷೇಮವನ್ನು ಒಳಗೊಂಡಿತ್ತು. ಈ ಕಾರಣಕ್ಕಾಗಿ ನಾವು ಪಂಚಭೂತಗಳೆಂದು ಕರೆಯುವ ನೆಲ, ಜಲ, ಅಗ್ನಿ, ವಾಯು, ಆಕಾಶಗಳಿಗೆ ಪೂಜಿಸುವುದರೊಂದಿಗೆ ಈ ನೆಲದ ಸರ್ವ ಜೀವಿಗಳ ಶ್ರೇಯಸ್ಸಿಗಾಗಿ ಪ್ರಾರ್ಥಿಸುತ್ತಿದ್ದರು. ಅವರುಗಳು ಎಂದಿಗೂ ವೇದ, ಉಪನಿಷತ್ತುಗಳನ್ನು ಓದಲಿಲ್ಲ, ಮಂತ್ರಗಳನ್ನು ಪಠಿಸಲಿಲ್ಲ ಆದರೆ, ತಮ್ಮ ಸುತ್ತಮುತ್ತಲಿನ  ಜಗತ್ತಿನ ಸಮಗ್ರ ಬದುಕು ನೆಮ್ಮದಿಯಾಗಿರಬೇಕು ಎಂಬುದು ಅವರ ಬದುಕಿನ ಮೂಲಮಂತ್ರವಾಗಿತ್ತು.

ಹತ್ತೊಂಬತ್ತನೇ ಶತಮಾನದಲ್ಲಿ ತನ್ನ ವಿಶಿಷ್ಠ ಮನುಕುಲದ ಚಿಂತನೆಗಳಿಂದ  ಇಡೀ ಜಗತ್ತನ್ನೇ ಪ್ರಭಾವಿಸಿದ ಚಿಂತಕ ಕಾರ್ಲ್ ಮಾರ್ಕ್ಸ್ ರವರು  ಜೀವನದುದ್ದಕ್ಕೂ ಬಡತನವನ್ನೇ ಹಾಸಿ. ಹೊದ್ದು  ಜೀವನವನ್ನು ಕಳೆದವರು. 1840 ಆಸುಪಾಸಿನ ಸಮಯದಲ್ಲಿ ತಮ್ಮ ಹನ್ನೆರೆಡು ವರ್ಷದ ಪುತ್ರನೊಬ್ಬ ಅನಾರೋಗ್ಯಕ್ಕೆ ತುತ್ತಾದಾಗ  ಆ ಕಾಲದಲ್ಲಿ ಅವರ ಬಳಿ ಔಷಧಕ್ಕಾಗಿ  ಕೇವಲ ಎರಡು ರೂಪಾಯಿನಷ್ಟು ಹಣವಿರಲಿಲ್ಲ. ಇಂತಹ ಧಾರಣ ಸ್ಥಿತಿಯಲ್ಲಿ  ಅವರ ಪುತ್ರ ನಿಧನ ಹೊಂದಿದನು. ರಾತ್ರಿಯಿಡಿ ಪುತ್ರನ ಶವದ ಮುಂದೆ ಕುಳಿತಿದ್ದ ಮಾರ್ಕ್ಸ್ ರವರು ಬೆಳಗಿನ ಜಾಗ ಮೂರು ಗಂಟೆ ಸಮಯದಲ್ಲಿ ತನ್ನ ಜೀವದ ಗೆಳೆಯ ಏಂಜೆಲ್ಸ್ ಗೆ ಕಾಗದ ಬರೆಯುತ್ತಾ ‘ ಪ್ರಿಯ ಮಿತ್ರಾ, ಈ ಕ್ಷಣದಲ್ಲಿ ಬದುಕಬಾರದು ಎನಿಸಿದೆ. ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ರಾತ್ರಿಯಿಡೀ ಯೋಚಿಸಿದೆ. ಆದರೆ, ಈ ಜಗತ್ತಿನ ಕಾರ್ಮಿಕರ ಕಣ್ಣುಗಳಲ್ಲಿ ಬೆಳಕು ನೋಡಬೇಕೆಂಬ ಏಕೈಕ ಆಸೆಯು ನನ್ನನ್ನು ಜೀವಂತ ಉಳಿಸಿದೆ.’  ಎಂದು ತಮ್ಮ ಮನದಾಳದ  ಆಸೆಯನ್ನು ದಾಖಲಿಸಿದ್ದಾರೆ. ಕಾರ್ಲ್ ಮಾರ್ಕ್ಸ್ ಕನಸಿದ್ದ ಕಾರ್ಮಿಕರು ಎಂದರೆ, ಅವರು ಕೇವಲ ಕ್ರೈಸ್ತರಾಗಿರಲಿಲ್ಲ ಅಥವಾ ಯಹೂದಿಗಳಾಗಿರಲಿಲ್ಲ, ಅವರಲ್ಲಿ ಹಿಂದೂ, ಮುಸಲ್ಮಾನ, ಬೌದ್ಧ ಧರ್ಮೀಯ, ಹೀಗೆ ಜಗತ್ತಿನ ಶ್ರಮಿಕರೆಲ್ಲರೂ ಇದ್ದರು. ಈ ಕಾರಣಕ್ಕಾಗಿ ಮಾರ್ಕ್ಸ್ ವಾದ ಎಂಬುದು ಮನುವಾದಕ್ಕಿಂತ ಸಾವಿರ ಪಟ್ಟು ಶ್ರೇಷ್ಠ ಹಾಗೂ ಉತ್ಕೃಷ್ಟ ಚಿಂತನೆಯಾಗಿದೆ. ಕೇವಲ ಭೂಮಿ, ಸರಕು ಅಥವಾ ವ್ಯವಹಾರಕ್ಕೆ ವಿನೋಗಿಸುವ ಹಣ ಮಾತ್ರ ಬಂಡವಾಳವಲ್ಲ, ಮನುಷ್ಯನ ಶ್ರಮ ಅರ್ಥಾತ್ ಕಾರ್ಮಿಕರ ಶ್ರಮವೂ ಕೂಡ ಬಂಡವಾಳ ಎಂಬ ಪರಿಕಲ್ಪನೆಯನ್ನು ಮಾರ್ಕ್ಸ್ ಈ ಜಗತ್ತಿಗೆ ನೀಡಿದರು. ಇಂದು ಮಾನವ ಸಂಪನ್ಮೂಲ ಎಂದು ಕರೆಯುವ ಈ ಪರಿಕಲ್ಪನೆಯ ಮೂಲ ಜನಕ  ಕಾರ್ಲ್ ಮಾರ್ಕ್ಸ್ ಅವರನ್ನು ಹೀಗೆಳೆಯುವ ಮನುವಾದಿಗಳು ಒಮ್ಮೆ ಭಾರತದ ಇತಿಹಾಸ ಮಾತ್ರವಲ್ಲ,ಜಗತ್ತಿನ ಇತಿಹಾಸವನ್ನು ಗಂಭೀರವಾಗಿ  ಅಧ್ಯಯನ ಮಾಡುವುದು ಒಳಿತು.

ದೇಶದ ಪ್ರಧಾನಿಯಾಗಿ 2014 ರಲ್ಲಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿಯವರು ಮೇ ತಿಂಗಳ 26 ರಂದು ಲೋಕಸಭೆಯನ್ನು ಪ್ರವೇಶಿಸುವಾಗ ಅದರ ಮೆಟ್ಟಿಲುಗಳಿಗೆ ತಲೆ ತಾಗಿಸಿ ನಮಸ್ಕಾರ ಮಾಡಿದ್ದರು. ಅವರ ಈ ನಮಸ್ಕಾರ  ಯಾವ ಉದ್ದೇಶಕ್ಕಾಗಿ ಎಂದು ಈಗ ನಾವುಗಳು ಪ್ರಶ್ನಿಸಬೇಕಿದೆ. ಭಾರತದ ಸಂವಿಧಾನದ ಮೂಲ ಆಶಯಗಳನ್ನು ಓರ್ವ ಪ್ರಧಾನಿಯಾಗಿ ಈ ವ್ಯಕ್ತಿಯು ಅಧ್ಯಯನ ಮಾಡಿದ್ದರೆ, ಏಕ ಧರ್ಮದ ಬಗ್ಗೆ, ಏಕ ದೇವರ ಬಗ್ಗೆ ಮತ್ತು ಏಕ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಮಾತನಾಡುತ್ತಿರಲಿಲ್ಲ. ಡಾ.ಅಂಬೇಡ್ಕರ್ ಅವರ ಆಳವಾದ ಅಧ್ಯಯನ ಮತ್ತು ಬಹುಸಂಸ್ಕೃತಿಯ ಭಾರತದ ಕುರಿತಾಗಿ ಹಾಗೂ ಇಲ್ಲಿನ ಧರ್ಮಗಳ ಕುರಿತಾಗಿ ಅವರಿಗಿದ್ದ ಆಳವಾದ ಜ್ಞಾನದಿಂದಾಗಿ ಜಗತ್ತಿನ ಸರ್ವ ಶ್ರೇಷ್ಠ ಸಂವಿಧಾನವು ಭಾರತದಲ್ಲಿ ರಚನೆಯಾಗಲು ಕಾರಣವಾಯಿತು.

 ದೇಶದ ಸಂಸತ್ ಸದನದಲ್ಲಿ 1949 ನವಂಬರ್ 25 ರಂದು ಅಂದರೆ, ಭಾರತಕ್ಕೆ ಸಂವಿಧಾನವನ್ನು ಅರ್ಪಿಸುವ ಒಂದು ದಿನ ಮೊದಲು   ಅವರು ಲೋಕಸಭೆಯಲ್ಲಿ  ಮಾತನಾಡುತ್ತಾ, ‘ ಈ ನೆಲಕ್ಕೆ ಬಹುತ್ವವೇ ಭಾರತದ ಮೂಲ ಧರ್ಮವಾಗಿದೆ.  ರಾಷ್ಟ್ರ ನಿರ್ಮಾಣದ ನೆಪದಲ್ಲಿ   ದೇಶಕ್ಕಿಂತ ಜಾತಿ, ಧರ್ಮ ದೊಡ್ಡದು  ಎಂಬ ಮಾತಾಡಿದರೆ ನಮಗೆ  ದಕ್ಕಿರುವ ಈ ಸ್ವಾತಂತ್ರ್ಯ ನಾಶವಾಗಬಹುದು” ಎಂಬ  ಎಚ್ಚರಿಕೆಯನ್ನು ಅವರು ನೀಡಿದ್ದರು. ಅಷ್ಟು ಮಾತ್ರವಲ್ಲದೆ ಈ ಸಂವಿಧಾನವನ್ನು ಯಾವುದೇ ಮಹಾತ್ಮನ ಪಾದದ ಬಳಿ ಇಡಕೂಡದು ಎಂಬ ಕಟುವಾದ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, .ಇಂದು ವರ್ತಮಾನದ ಭಾರತದಲ್ಲಿ ನಾವು ಕಾಣುತ್ತಿರುವ ಸಮಾಜದಲ್ಲಿ ಗಾಂಧೀ- ಅಂಬೇಡ್ಕರ್ ಕನಸಿದ್ದ ಬಹುತ್ವ ಜೀವಂತವಾಗಿದೆಯಾ? ಎಂದು ನಮ್ಮ ನಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕಿದೆ.

ಸಂವಿಧಾನ ರಚನೆಯ ಸಂದರ್ಭದಲ್ಲಿ ಭಾರತವನ್ನು ಹಿಂದೂಸ್ತಾನ ಎಂದು ಘೋಷಿಸಬೇಕು, ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯನ್ನಾಗಿ ಜಾರಿ ಮಾಡಬೇಕು ಎಂದು ಸನಾತನವಾದಿಗಳು ಬೇಡಿಕೆ ಇಟ್ಟಾಗಲೂ ಸಹ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ನಿರ್ಧಾಕ್ಷಿಣ್ಯವಾಗಿ ತಿರಸ್ಕರಿಸಿದರು. ತಳ ಸಮುದಾಯದ ಅಸ್ಪೃಶ್ಯ ಕುಟುಂಬದಲ್ಲಿ ಜನಿಸಿದ್ದ ಅವರಿಗೆ ಈ ಬಹುಸಂಸ್ಕೃತಿಯ ನೆಲದಲ್ಲಿ ಜನಿಸಿದ ಪ್ರತಿಯೊಂದು ಗಂಡು ಅಥವಾ ಹೆಣ್ಣು ಅಪ್ಪಟ ಭಾರತೀಯ ನಾಗರೀಕರಾಗಿ ಬದುಕಬೇಕೇ ಹೊರತು ಓರ್ವ ಬ್ರಾಹ್ಮಣನಾಗಿ ಓರ್ವ ದಲಿತನಾಗಿ ಶ್ರೇಣೀಕೃತ ಸಮಾಜದಲ್ಲಿ ಬದುಕುವುದು ಬೇಕಿರಲಿಲ್ಲ. ಧರ್ಮಾತೀತವಾಗಿ ಜಾತ್ಯಾತೀತವಾಗಿ ಜೀವಿಸುವುದೇ ನಿಜವಾದ ಮಾನವ ಧರ್ಮ ಎಂಬುದು ಅಂಬೇಡ್ಕರ್ ಆಶಯವಾಗಿತ್ತು. ಇದು ಗಾಂಧೀಜಿಯವರ ಕನಸು ಕೂಡಾ ಆಗಿತ್ತು. ಅವರು 1908 ರಲ್ಲಿ ಬರೆದ ಹಿಂದ್ ಸ್ವರಾಜ್ ಕೃತಿಯಲ್ಲಿ  ಭಾರತವೆಂಬುದು ಹಲವು ಧರ್ಮಗಳೆಂಬ ಹೂ ಗಿಡಗಳ ತೋಟವೇ ಹೊರುತು ಕಾಡು ಮೃಗಗಳ ಅರಣ್ಯವಲ್ಲ ಎಂದು ಪ್ರತಿ ಪಾದಿಸಿದ್ದರು.

ಗೌತಮ ಬುದ್ಧನು  ಒಂದು ಧರ್ಮವು ಸದ್ಧರ್ಮ ಅಥವಾ ಒಳ್ಳೆಯ ಧರ್ಮವಾಗಬೇಕಾದರೆ, ಮನುಷ್ಯನಿಗೆ ಪ್ರಜ್ಞೆಯ ಜೊತೆಗೆ ಶೀಲವೂ ಅಗತ್ಯ ಎಂದು ಪ್ರತಿಪಾಧಿಸಿದ್ದಾನೆ. ಇಂದು ಹಿಂದೂ ಧರ್ಮದ ಬಗ್ಗೆ ಎದೆಯುಬ್ಬಿಸಿ ಮಾತನಾಡುವ ಧಾರ್ಮಿಕ ಭಯೋತ್ಪಾದಕರು ಒಮ್ಮೆ ನಮ್ಮ ಕನ್ನಡದ ಮಹಾನ್  ವಚನಕಾರ ಅಲ್ಲಮಪ್ರಭುವಿನ

ವೇದವೆಂಬುದು ಓದಿನ ಮಾತು

ಶಾಸ್ತ್ರವೆಂಬುದು ಸಂತೆಯ ಸುದ್ದಿ

ಪುರಾಣವೆಂಬುದು ಪುಂಡರ ಗೋಷ್ಟಿ

ತರ್ಕವೆಂಬುದು ತಗರ ಹೊರಟೆ

ಭಕ್ತಿಯೆಂಬುದು ತೋರಿ ಉಂಬ ಲಾಭ

ಗುಹೇಶ್ವರನೆಂಬುದು ಮೀರಿದ ಘನವು.

ಎಂಬ ವಚನವನ್ನು ಓದಿ ಅರ್ಥ ಮಾಡಿಕೊಳ್ಳುವುದು ಒಳಿತು. ಈಗ ನಮ್ಮ ಮುಂದಿರುವ ಕೋಮುವಾದಿಗಳ ಭಾರತವನ್ನು ಮನುವಾದಿಗಳ ಕಪಿ ಮುಷ್ಠಿಯಿಂದ ಬಿಡಿಸುವುದರ ಮೂಲಕ ಅದನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಬೇಕಿದೆ.iಇಷ್ಟು ಮಾತ್ರವಲ್ಲದೆ  ಬಹುಸಂಸ್ಕೃತಿಯ, ಬಹುತ್ವದ ಭಾರತವನ್ನು ನಿರ್ಮಾಣ ಮಾಡಬೇಕಿದೆ. ಇದು ಭಾರತದ ಎಲ್ಲಾ ವರ್ಗದ,  ಎಲ್ಲಾ ವಯೋಮಾನದ ನಾಗರೀಕರ ನೈತಿಕ ಕರ್ತವ್ಯ ಎಂಬುದನ್ನು ನಾವು ಮರೆಯಲಾಗದು.

 

 

 

 

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ