ಬುಧವಾರ, ನವೆಂಬರ್ 1, 2023

ಭೂಮಿ ಎಂಬ ನೆಲದ ಮೇಲಿನ ನರಕ

 


 


ಅಕ್ಟೋಬರ್ ಎರಡನೆಯ ವಾರ ಜಾಗತಿಕ ಹಸಿವಿನ ಸೂಚ್ಯಂಕದ ವರದಿಯು ಬಿಡುಗಡೆಯಾಗಿದೆಜಾಗತಿಕವಾಗಿ 125 ರಾಷ್ಟ್ರಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಜಗತ್ತಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ಪ್ರಬಲ ಆರ್ಥಿಕ ರಾಷ್ಟ್ರ ಎಂಬ ಹುಸಿ ಖ್ಯಾತಿಯನ್ನು ಹೊಂದಿರುವ ಭಾರತದ ಸ್ಥಾನ 111 ನೇ ಸ್ಥಾನಕ್ಕೆ ಕುಸಿದಿದೆ.ಕಳೆದವರ್ಷ 107ನೇಸ್ಥಾನದಲ್ಲಿದ್ದ ಭಾರತವು ನೆರೆಯ ನೇಪಾಳ ( 69ನೇ ಸ್ಥಾನಬಾಂಗ್ಲಾ(81 ನೇ ಸ್ಥಾನಮತ್ತು ಪಾಕಿಸ್ತಾನ( 102 ನೇ ಸ್ಥಾನ ರಾಷ್ಟ್ರಗಳಿಗಿಂದ ಶೋಚನೀಯ ಸ್ಥಿತಿಯಲ್ಲಿದೆಜಾಗತಿಕವಾಗಿ ಅರ್ಥಶಾಸ್ತ್ರಜ್ಞರ ನೇತೃತ್ವದಲ್ಲಿ ನಡೆಯುವ  ಸಮೀಕ್ಷೆಯನ್ನು ಭಾರತೀಯ ಜನತಾ ಪಕ್ಷದ ವಿರೋಧಿ ಪಕ್ಷಗಳಾದ  ಕಾಂಗ್ರೇಸ್ಸಿ.ಪಿ..( ಎಂ), ತೃಣಮೂಲ ಕಾಂಗ್ರೇಸ್ ಅಥವಾ ಡಿ.ಎಂ.ಕೆ  ಪಕ್ಷ  ಅಥವಾ ಅದರ ಕಾರ್ಯಕರ್ತರು ನಡೆಸುವುದಿಲ್ಲ.

ಜನಸಾಮಾನ್ಯರಿಗೆ ಅರ್ಥವಾಗುವ ಭಾರತದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯು ಕೇಂದ್ರದಲ್ಲಿ ನಮ್ಮನ್ನಾಳುವ ಜನಪ್ರತಿನಿಧಿಗಳಿಗೆ ಈಗ ಅರ್ಥವಾಗುವುದಿಲ್ಲ. ಹಸಿವು, ಬಡತನ, ಅಪೌಷ್ಟಿಕತೆ, ಶಿಕ್ಷಣ, ಆರೋಗ್ಯ, ನಿರುದ್ಯೋಗ, ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಇವೆಲ್ಲವೂ ಜಾಗತಿಕ ಮಟ್ಟದಲ್ಲಿ ಶೋಚನೀಯ ಸ್ಥಿತಿಯಲ್ಲಿವೆ.  ಸಂಘಪರಿವಾರದ ಪುಂಗಿದಾಸರ ದೃಷ್ಟಿಕೋನದಲ್ಲಿ ವಿಶ್ವಗುರು ಎಂದು ಅವರ ಪಾಲಿಗೆ ಆರಾಧ್ಯ ದೈವವಾಗಿರುವ  ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿಯ ಪರಿಕಲ್ಪನೆ ಮತ್ತು ಯೋಜನೆಗಳನ್ನು ಸಹಿಸಿಕೊಳ್ಳಲಾಗದ ಸಂಸ್ಥೆಗಳು ಬಿಡುಗಡೆ ಮಾಡುವ ಸುಳ್ಳಿನ ಸಮೀಕ್ಷೆ ಎಂಬ ನಂಬಿಕೆ ಬೆಳೆದು ಬಂದಿದೆ. .

ಜಾಗತಿಕ ಬಡತನದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಭಾರತದಲ್ಲಿ ನಾಲ್ಕು ಕೋಟಿ ಇಪ್ಪತ್ತು ಲಕ್ಷದಷ್ಟು ಜನತೆ ಬಡತನದ ರೇಖೆಯಿಂದ ಹೊರಬಂದಿದ್ದಾರೆ. ಬಡತನದ ಮಾನದಂಡಕ್ಕೆ ಜಾಗತಿಕ ಮಟ್ಟದಲ್ಲಿ ಆಯಾ ಪ್ರಾದೇಶಿಕ ಅಥವಾ ರಾಷ್ಟ್ರಕ್ಕೆ ಅನುಗುಣವಾಗಿ ಪ್ರಮಾಣವನ್ನು ನಿಗದಿ ಪಡಿಸಲಾಗಿದೆ. ಭಾರತವೂ ಸೇರಿದಂತೆ ಆಗ್ನೆಯ ಏಷ್ಯಾ ರಾಷ್ಟ್ರಗಳಲ್ಲಿ ದಿನವೊಂದಕ್ಕೆ ಕನಿಷ್ಟ 140 ರೂಪಾಯಿ ಸಂಪಾದಿಸುವ ವ್ಯಕ್ತಿಯನ್ನು  ಬಡತನದ ರೇಖೆ ದಾಟಿದ್ದಾನೆ ಎಂದು ಹೇಳಲಾಗುತ್ತದೆ. ಆದರೆ, 2020 ರಲ್ಲಿ ಜಗತ್ತಿನಾದ್ಯಂತ ಸಂಭವಿಸಿದ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಬಡತನ ವ್ಯಾಖ್ಯಾನ ಬದಲಾಗಿದೆ. ಅವಶ್ಯಕ ವಸ್ತುಗಳ ಬೆಲೆಗಳು ವಿಶೇಷವಾಗಿ ಅಕ್ಕಿ,ಬೇಳೆ, ಗೋಧಿ, ತರಕಾರಿ ಹಾಗೂ ಅಡುಗೆ ಎಣ್ಣೆ ಬೆಲೆಗಳು ಗಗನಕ್ಕೇರಿವೆ ಈ ಸ್ಥಿತಿಯಲ್ಲಿ ದಿನದ 140 ರೂಪಾಯಿಗಳ  ಸಂಪಾದನೆಯಲ್ಲಿ ಕೂಲಿಕಾರನ ಒಂದು ಸಣ್ಣ ಕುಟುಂಬ ಜೀವಿಸಬಹುದು ಎಂಬುದು ನಗೆಪಾಟಲಿನ ಸಂಗತಿ.

ಈ ಕಾರಣದಿಂದಾಗಿ ಇತ್ತೀಚೆಗಿನ ವರದಿಯ ಪ್ರಕಾರ ಭಾರತದ ಜನಸಂಖ್ಯೆಯ ಶೇಕಡ 22 ರಷ್ಟು ಅಂದರೆ, ಸುಮಾರು 44 ಕೋಟಿ ಜನರು ಬಡತನದಿಂದ ನರಳುತ್ತಿದ್ದಾರೆ. ಇದು ವಾಸ್ತವಕ್ಕೆ ತೀರಾ ಹತ್ತಿರವಾಗಿದೆ.  ಮಕ್ಕಳ ಅಪೌಷ್ಟಿಕತೆಯ ಪ್ರಮಾಣ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಶೇಕಡಾ 18.7 ರಷ್ಟಿದೆ. ಭಾರತದಲ್ಲಿ ವರ್ಷವೊಂದಕ್ಕೆ ಹನ್ನೆರೆಡು ತಿಂಗಳು ತುಂಬುವ ಮುನ್ನವೇ ಐದರಿಂದ ಎಂಟು ಲಕ್ಷ ಮಕ್ಕಳು ಸಾವನ್ನಪ್ಪುತ್ತಿದ್ದರೆ, ಹೆರಿಗೆ ಸಮಯದಲ್ಲಿ ಒಂದೂವರೆ ಲಕ್ಷ ತಾಯಂದಿರು ಮರಣವನ್ನಪ್ಪುತ್ತಿದ್ದಾರೆ. ಇದು ನಮ್ಮ ಕಣ್ಣೆದುರುಗಿನ ನೈಜ ಭಾರತದ ಸ್ಥಿತಿ.

ಮನುಕುಲದ ಕಾಳಜಿಯನ್ನು ತಮ್ಮ ಬದುಕಿನ ಮುಖ್ಯ ಗುರಿಯಾಗಿರಿಸಿಕೊಂಡಿರುವ ಜಗತ್ತಿನ ಹಲವಾರು ರಾಷ್ಟ್ರಗಳ ಆರ್ಥಿಕ ತಜ್ಞರು, ಹವಾಮಾನ ತಜ್ಞರು ಮತ್ತು ಆರೋಗ್ಯ ತಜ್ಞರು ಹೀಗೆ ಹಲವು ರಂಗಗಳ ನಿಪುಣರು 2020 ರಲ್ಲಿ ಕ್ಲಬ್ ಆಪ್ ರೋಮನ್ ಎಂಬ ಸಂಘಟನೆಯನ್ನು ರಚಿಸಿಕೊಂಡು, ಈ ಆಧುನಿಕ ಜಗತ್ತು ಸಾಗುತ್ತಿರುವ ಆತ್ಮಹತ್ಯೆಯ ಮಾರ್ಗವನ್ನು ವಿಶ್ಲೇಷಣೆಯ ಮೂಲಕ ನಮ್ಮ ಮುಂದಿಟ್ಟಿದ್ದಾರೆ. ಸತತ ಮೂರು ವರ್ಷಗಳ ಕಾಲ ಅಮೇರಿಕಾ, ಯುರೋಪ್, ಏಷ್ಯಾ ಮತ್ತು ಆಫ್ರಿಕಾ ಖಂಡದ ರಾಷ್ಟ್ರಗಳ ತಜ್ಞರು ಸಭೆ ಸೇರಿ ಹಲವಾರು ವಾದ, ಸಂವಾದಗಳ ಮೂಲಕ ಒಂದು ವರದಿಯನ್ನು ಸಿದ್ಧಪಡಿಸಿದ್ದಾರೆ. 2022 ರ ಸೆಪ್ಟಂಬರ್ ನಲ್ಲಿ ಸಿದ್ಧವಾದ ಈ ವರದಿ 2023 ರ ಮಾರ್ಚ್ ತಿಂಗಳಿನಿಂದ ಜಗತ್ತಿನಾದ್ಯಂತ ಪುಸ್ತಕ ರೂಪದಲ್ಲಿ ಎಲ್ಲರಿಗೂ ದೊರೆತಿದೆ. ‘’ಭೂಮಿ ಎಲ್ಲರಿಗಾಗಿ; ಬದುಕುಳಿಯುವ ಮಾನವೀಯತೆಗಾಗಿ ಮಾರ್ಗದರ್ಶನ’’ ( ಅರ್ಥ್ ಫಾರ್ ಎವರಿಬಡಿ: ದ ಸರ್ವವೈಲ್  ಗೈಡ್ ಫಾರ್ ಹುಮ್ಯಾನಿಟಿ) ಎಂಬ ಶೀರ್ಷಿಕೆಯ 208 ಪುಟಗಳ ಈ ವರದಿಯನ್ನು ಭಾರತದ ಅರ್ಥಶಾಸ್ತ್ರಜ್ಞೆಜಯತಿ ಘೋಷ್ ಸೇರಿದಂತೆ ( ಇವರು ದೆಹಲಿಯ ಜವಹರಲಾಲ್ ವಿ.ವಿ.ಯಲ್ಲಿ ಅಭಿವೃದ್ಧಿ ಅರ್ಥಶಾಸ್ತ್ರದ ಮುಖ್ಯಸ್ಥೆಯಾಗಿದ್ದರು) ಆರು ಮಂದಿ ತಜ್ಞರು  ರಚಿಸಿದ್ದಾರೆ.

ಕೈಗಾರಿಕೆಯ ಕ್ರಾಂತಿಯ ನಂತರ ಮುನ್ನೆಲೆಗೆ ಬಂದ ಬಂಡವಾಳ ಶಾಹಿ ವ್ಯವಸ್ಥೆಯು ಕಾಲಘಟ್ಟಕ್ಕೆ ತಕ್ಕಂತೆ ಅನೇಕ ಅವತಾರಗಳನ್ನುತಾಳಿತು.   1990 ರಲ್ಲಿ ಜಾಗತೀಕರಣ ಹೆಸರಿನಲ್ಲಿ ತಲೆ ಎತ್ತಿದ ಬಂಡವಾಳ ಶಾಹಿ ವ್ಯವಸ್ಥೆ ಜಗತ್ತಿನಾದ್ಯಂತ ಶ್ರೀಮಂತರನ್ನ ಸೃಷ್ಟಿಸುತ್ತಿರುವ ಇತಿಹಾಸವನ್ನು ಸಹ ಈ ವರದಿ ಒಳಗೊಂಡಿದೆ. ಕಾರ್ಪೋರೇಟ್ ಹೆಸರಿನಲ್ಲಿ ಜಗತ್ತಿನಾದ್ಯಂತ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ರಾಷ್ಟ್ರಗಳನ್ನ ತಮ್ಮ ಹಣದ ಥೈಲಿಯಿಂದ ಕುಣಿಸುತ್ತಿರುವ ಶ್ರೀಮಂತರು ಇಂದು ಜಗತ್ತಿನಲ್ಲಿ ಕೇವಲ ಶೇಕಡಾ ಐದರಷ್ಟು ಮಂದಿ ಮಾತ್ರ ಇದ್ದಾರೆ. ಆದರೆ, ಇವರು  ಜಗತ್ತಿನ ಪಾಕೃತಿಕ ಕೊಡುಗೆಗಳನ್ನು ಶೇಕಡಾ 95 ರಷ್ಟುನ್ನು ಬಳಸುತ್ತಿದ್ದಾರೆ. ಈ ಭೂಮಿಯ ಪ್ರತಿಯೊಂದು ಜೀವಿಗೂ ಪುಕ್ಕಟೆಯಾಗಿ ದೊರೆಯಬೇಕಿದ್ದ ನೀರು, ಗಾಳಿ, ಎಲ್ಲವೂ  ಈಗ ಕಲುಷಿತಗೊಂಡಿವೆ.

ಜಗತ್ತಿನಾದ್ಯಂತ ರಾಷ್ಟ್ರಗಳು ಜಾಗತೀಕರಣ ವ್ಯವಸ್ಥೆಗೆ ತೆರೆದುಕೊಂಡ ನಂತರ ಸರ್ಕಾರದಿಂದ ದೊರೆಯಬೇಕಾದ ಮೂಲಭೂತ ಅವಶ್ಯಕತೆಗಳು ಎನಿಸಿಕೊಂಡ ಆಹಾರ, ವಸತಿ, ಆರೋಗ್ಯ, ಶಿಕ್ಷಣ ಎಲ್ಲವುಗಳಿಂದ ನಾಗರೀಕರು  ವಂಚಿತರಾಗಿದ್ದಾರೆ.  ಈ ಎಲ್ಲಾ ಕ್ಷೇತ್ರಗಳು ಉಳ್ಳವರು ಅಥವಾ ಉದ್ಯಮಿಗಳ ಪಾಲಾಗಿವೆ.  ಕಾರ್ಖಾನೆ ಅಥವಾ ಇತರೆ ಉದ್ದಿಮೆಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಈಗ ಸಂಘಟಿತರಾಗುವುದು ಅಪರಾಧ ಎಂಬಂತಾಗಿದೆ. ಅವರುಗಳ ಉದ್ಯೋಗಕ್ಕೆ ಯಾವುದೇ ಭದ್ರತೆ ಇಲ್ಲ. ದುಡಿಮೆಯ ಅವಧಿಯನ್ನು ಎಂಟು ಗಂಟೆಯಿಂದ ಹನ್ನೆರೆಡು ಗಂಟೆಗೆ ಅವಧಿಗೆ ವಿಸ್ತರಿಸುವ ಯೋಜನೆ ಜಾರಿಯಲ್ಲಿದೆ. ಲಿಂಗ ಅಸಮಾನತೆಯ  ನಡುವೆ ಈ ನೆಲದ ಮೇಲಿನ ಹೆಣ್ಣು ಜೀವಕ್ಕೆ ಇನ್ನೂ ಬಿಡುಗಡೆ ದೊರೆತಿಲ್ಲ. ಹವಾಮಾನ ಬದಲಾವಣೆ ಏಕಕಾಲಕ್ಕೆ ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ.

ಬಡತನದ ಕಾರಣಗಳು ರಾಷ್ಟ್ರ , ಪ್ರದೇಶ ಮತ್ತು ಜಾಗತಿಕ ಮಟ್ಟದಲ್ಲಿ ಇತರ ರಾಷ್ಟ್ರಗಳಿಗೆ ಹೋಲಿಸಿದಾಗ  ಬದಲಾವಣೆಗಳನ್ನು ನಾವು ಕಾಣಬಹುದು  ಆದರೂ ಸಹ ಹಲವು ಕಾರಣಗಳಲ್ಲಿ ಸಾಮಾನ್ಯತೆ ಇದೆ. ಈ ಕಾರಣಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸೂಕ್ಷ್ಮ ಮತ್ತು ಸ್ಥೂಲ ಮಟ್ಟದಲ್ಲಿ ಕೆಲವು ಅಂಶಗಳನ್ನು ಒಳಗೊಂಡಂತೆ ತಾತ್ವಿಕ ದೃಷ್ಟಿಕೋನಗಳು ಮತ್ತು ವಿಶೇಷವಾಗಿ ಐತಿಹಾಸಿಕ ದೃಷ್ಟಿಕೋನಗಳನ್ನು ನಾವು  ಪರಿಗಣಿಸಬಹುದು.

ಈ ಜಗತ್ತಿನ ಬಹುತೇಕ ಕಡೆ ಭೂಮಿಯಲ್ಲಿ ದುಡಿದು ತಿನ್ನುತ್ತಿದ್ದ ರೈತನಿಗೆ ಫಸಲು ಕೈಗೆ ಸಿಗುತ್ತದೆ ಎಂಬ ಭರವಸೆಯಿಲ್ಲ. ಕೃಷಿಯನ್ನು ನಂಬಿಕೊಂಡಿದ್ದ ಲಕ್ಷಾಂತರ ಕೂಲಿಕಾರ್ಮಿಕರು ಉದ್ಯೋಗ ಅರೆಸಿಕೊಂಡು ನಗರದತ್ತ ವಲಸೆ ಹೋಗುತ್ತಿದ್ದಾರೆ. ಶುದ್ಧವಾದ ಕುಡಿಯುವ ನೀರು, ವಸತಿ, ಶೌಚಾಲಯ ಇಲ್ಲದ ವ್ಯವಸ್ಥೆಯೊಳಗೆ ಕೊಳಚೆಗೇರಿ ಎಂಬ ಹಂದಿಗೂಡಿನಂತ ಪುಟ್ಟ ಗುಡಿಸಲಿನಲ್ಲಿ ಬದುಕುತ್ತಾ ಸಾವಿನ ಮನೆಯ ಕದ ತಟ್ಟುತ್ತಿದ್ದಾರೆ. ವಿದ್ಯತ್ ಇಲ್ಲದ ಕಾರಣ ನಲವತ್ತೈದು ಡಿಗ್ರಿ ಉಷ್ಣಾಂಷದಲ್ಲಿ ಮಲಗುತ್ತಾ, ಸೊಳ್ಳೆಗಳಿಂದ ಕಡಿಸಿಕೊಳ್ಳುತ್ತಾ, ಖಾಸಾಗಿ ಆಸ್ಪತ್ರೆಗಳ ಶುಲ್ಕ ಭರಿಸಲಾಗದೆ ತಮ್ಮ ಮಕ್ಕಳ ಹಾಗೂ ತಮ್ಮ ಜೀವಗಳನ್ನು ಆಧುನಿಕ ಜಗತ್ತಿನ ಭರಾಟೆಗೆ ಬಲಿ ಕೊಡುತ್ತಿದ್ದಾರೆ. ಈಗ ಮರಣ ಹೊಂದಿದವರ ಬಗ್ಗೆ ಯೋಚಿಸುವ ವ್ಯವಧಾನ ಈ ಜಗತ್ತಿಗೆ ಇಲ್ಲವಾಗಿದೆ. ಈಗ ಏನಿದ್ದರೂ ಕಾಸಿದ್ದವನಿಗೆ ಮತ್ತು ಬದುಕುವ ಕಲೆ ಗೊತ್ತಿದ್ದವನಿಗೆ ಮಾತ್ರ ಈ ಜಗತ್ತು ಎಂಬ ನಂಬಿಕೆ ಬಲವಾಗುತ್ತಿದೆ. ಕಡಿಮೆ ಶುದ್ಧ ಗಾಳಿ, ಸೀಮಿತ ಕುಡಿಯುವ ನೀರು ಮತ್ತು ಕಳಪೆ ನೈರ್ಮಲ್ಯವನ್ನು ಸೃಷ್ಟಿಸುವ ಮೂಲಕ ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತಿರುವ ಆಧುನಿಕ  ಜಗತ್ತಿನಲ್ಲಿ ಬಡ ಸಮುದಾಯಗಳು ಹೆಚ್ಚು ಬಳಲುತ್ತಿದ್ದಾರೆ

ಬಡತನದ ಕಾರಣಗಳ ಮೇಲೆ ವರ್ತನೆಯ, ರಚನಾತ್ಮಕ ಮತ್ತು ರಾಜಕೀಯ ಸಿದ್ಧಾಂತಗಳಿವೆ: "ನಡವಳಿಕೆಯ ಸಿದ್ಧಾಂತಗಳು ಪ್ರೋತ್ಸಾಹ ಮತ್ತು ಸಂಸ್ಕೃತಿಯಿಂದ ನಡೆಸಲ್ಪಡುವ ವೈಯಕ್ತಿಕ ನಡವಳಿಕೆಗಳ ಮೇಲೆ ಕೇಂದ್ರೀಕರಿಸುತ್ತವೆ. ರಚನಾತ್ಮಕ ಸಿದ್ಧಾಂತಗಳು ಜನಸಂಖ್ಯಾ ಮತ್ತು ಕಾರ್ಮಿಕ ಮಾರುಕಟ್ಟೆ ಸಂದರ್ಭವನ್ನು ಒತ್ತಿಹೇಳುತ್ತವೆ, ಇದು ನಡವಳಿಕೆ ಮತ್ತು ಬಡತನ ಎರಡನ್ನೂ ಉಂಟುಮಾಡುತ್ತದೆ. ರಾಜಕೀಯ ಸಿದ್ಧಾಂತಗಳು ಆ ಶಕ್ತಿಯನ್ನು ಪ್ರತಿಪಾದಿಸುತ್ತವೆ. ಮತ್ತು ಸಂಸ್ಥೆಗಳು ನೀತಿಯನ್ನು ಉಂಟುಮಾಡುತ್ತವೆ, ಇದು ಪರೋಕ್ಷವಾಗಿ  ಬಡತನವನ್ನು ಸೃಷ್ಟಿ ಮಾಡುತ್ತದೆ .

ತಾತ್ವಿಕ ದೃಷ್ಟಿಕೋನದಲ್ಲಿ ಹೇಳುವುದಾದರೆ,   ಸಮಾಜವಾದಿ ದೃಷ್ಟಿಕೋನವು ಬಡತನವನ್ನು ಬಂಡವಾಳ, ಸಂಪತ್ತು ಮತ್ತು ಸಂಪನ್ಮೂಲಗಳ ಅಸಮರ್ಪಕ ಹಂಚಿಕೆಗೆ ಕಾರಣವೆಂದು ಹೇಳುತ್ತದೆ, ಅದು "ಶ್ರೀಮಂತ ಗಣ್ಯರು" ಅಥವಾ "ಹಣಕಾಸಿನ ಶ್ರೀಮಂತರು" ಮತ್ತು ದೊಡ್ಡ ಸಮುದಾಯದ ಹಿತಾಸಕ್ತಿಗಳನ್ನು ಬೆಂಬಲಿಸುತ್ತದೆ. ಸಮಾಜವಾದಿ ಸಂಪ್ರದಾಯವು ಬಡತನಕ್ಕೆ ಪರಿಹಾರವಾಗಿ ಸಂಪತ್ತಿನ ಮರು-ಹಂಚಿಕೆಗೆ ಒತ್ತಾಯಿಸುತ್ತದೆ. ಮೂಲಭೂತವಾಗಿ, "ಆರ್ಥಿಕತೆಯ ಪ್ರಮುಖ ಮಾನದಂಡಗಳನ್ನು" ಖಾಸಗೀಕರಣಗೊಳಿಸಬೇಕು ಮತ್ತು ದುಡಿಯುವ ಸಮುದಾಯ-ವರ್ಗಕ್ಕೆ ಹಂಚಬೇಕು, ಅದು "ಶ್ರೀಮಂತ ಗಣ್ಯರ ಬದಲಿಗೆ ಸಾಮಾನ್ಯ ಜನರ ಹಿತಾಸಕ್ತಿಗಳನ್ನ ಪರಿಗಣಿಸಬೇಕು ಎಂಬುದು ಸಮಾಜವಾದಿ ಆರ್ಥಿಕ ದೃಷ್ಟಿಕೋನದ ತಿರುಳಾಗಿದೆ.

ಮಾರ್ಕ್ಸ್‌ವಾದಿ ಸಿದ್ಧಾಂತದ ಪ್ರಕಾರ, ವರ್ಗ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಅಸಮಾನತೆಯು ಬಡತನವನ್ನು ಪೋಷಿಸುತ್ತದೆ; ಎರಡೂ ಘಟಕಗಳು "ಬಂಡವಾಳಶಾಹಿ ಉತ್ಪಾದನಾ ವಿಧಾನ" ದಿಂದ "ಅಸಮಾನತಾವಾದಿ ಸಾಮಾಜಿಕ ರಚನೆಗಳಿಗೆ" ಬಂಡವಾಳಶಾಹಿ ವ್ಯವಸ್ಥೆ ಕೊಡುಗೆ ನೀಡುತ್ತವೆ. ಮಾರ್ಕ್ಸ್‌ವಾದಿಗಳು ಸಮಾಜದ ರಚನಾತ್ಮಕ ಸ್ವರೂಪವನ್ನು (ಬಡತನಕ್ಕೆ ಕಾರಣ) ಸಮಾಜದಲ್ಲಿನ ಬಡತನವನ್ನು ನಿವಾರಿಸಲು ಬದಲಾಯಿಸಬೇಕೆಂದು ನಂಬುತ್ತಾರೆ. .

ಐತಿಹಾಸಿಕ ದೃಷ್ಟಿಕೋನದಿಂದ ಬಡತನದ ಕೆಲವು ಪ್ರಮುಖ ಕಾರಣಗಳನ್ನು ಈ ಕೆಳಗಿನಂತೆ ಗುರುತಿಸಲಾಗಿದೆ:

ಆಸ್ತಿ ಮಾಲೀಕತ್ವದಲ್ಲಿ ಹೂಡಿಕೆ ಮಾಡಲು ಬಡ ಕುಟುಂಬಗಳ ಅಸಮರ್ಥತೆ. ಸೀಮಿತ ಹಾಗೂ ಕಳಪೆ ಗುಣಮಟ್ಟದ  ಶಿಕ್ಷಣವು ಕಡಿಮೆ ಅವಕಾಶಗಳಿಗೆ ಕಾರಣವಾಗುತ್ತದೆ. ಸಾಲಗಳ ವಿತರಣೆಯಲ್ಲಿ ಸೀಮಿತ ಅವಕಾಶ ಕೂಡ ಬಡತನಕ್ಕೆ ಕಾರಣವಾಗಿದೆ., ಕೆಲವು ಸಂದರ್ಭಗಳಲ್ಲಿ-ಅನುವಂಶಿಕ ಬಡತನವು ಸಹ  ಮೂಲಕ ಹೆಚ್ಚು ಬಡತನವನ್ನು ಸೃಷ್ಟಿಸುತ್ತದೆ. ಜನಾಂಗೀಯ ಅಲ್ಪಸಂಖ್ಯಾತರು, ಜನಾಂಗೀಯ ಜಾತಿಗಳು, ಬುಡಕಟ್ಟುಗಳು, ಮಹಿಳೆಯರು ಮತ್ತು ವಿಕಲಚೇತನರು ನ್ಯಾಯಯುತ ಆರ್ಥಿಕ ಉದ್ಯಮದಲ್ಲಿ ಭಾಗವಹಿಸುವುದರಿಂದ ಮತ್ತು ಸಂಸ್ಥೆಗಳು/ಮಾರುಕಟ್ಟೆಗಳಿಗೆ ಪ್ರವೇಶವನ್ನು ವ್ಯವಸ್ಥಿತವಾಗಿ ಹೊರಗಿಡುವುದು. ಈ ಹೊರಗಿಡುವಿಕೆಯು ಬಡತನದ ಚಕ್ರ ಮತ್ತು ನಿರಂತರತೆಯನ್ನು ಸೃಷ್ಟಿಸಿತು . ಇವುಗಳ ಜೊತೆಗೆ ಯುದ್ಧ, ಅಪರಾಧ ಮತ್ತು ಹಿಂಸಾಚಾರಗಳು ಬಡತನಕ್ಕೆ ಕೆಲವು ಪ್ರಾಥಮಿಕ ಕಾರಣಗಳಾಗಿವೆ.  ಕಳೆದ ಎರಡು ದಶಕಗಳ್ಲಿ ಹಲವಾರು  ರಾಷ್ಟ್ರಗಳಲ್ಲಿ  ರಾಜಕೀಯ ಹಿಂಸಾಚಾರ ಮತ್ತು ಸಂಘಟಿತ ಅಪರಾಧಗಳು ನಿರಂತರವಾಗಿ ನಡೆಯುತ್ತಿವೆ.  ಇದರ ಪರಿಣಾಮವಾಗಿ ಯುದ್ಧ, ಅಪರಾಧ ಮತ್ತು ಹಿಂಸಾಚಾರದ  ರಾಷ್ಟ್ರಗಳಲ್ಲಿ ಬಡತನದ ಮಟ್ಟವು ಎರಡು ಪಟ್ಟು ಹೆಚ್ಚಾಗಿದೆ.  ಹವಾಮಾನ ಬದಲಾವಣೆಯು ವಿಶೇಷವಾಗಿ ಹೆಚ್ಚು ಸಾಲ ಮಾಡಿರುವ  ರಾಷ್ಟ್ರಗಳಲ್ಲಿ: ಕೃಷಿ ಮತ್ತು ಆಹಾರ ಮೂಲಗಳನ್ನು ಮಿತಿಗೊಳಿಸುತ್ತದೆ.  ಬಡ ರಾಷ್ಟ್ರಗಳಲ್ಲಿ, ಸೀಮಿತ ಕೃಷಿ ಉತ್ಪನ್ನಗಳು/ಆಹಾರ ಉಳಿವಿಕೆಯ  ಸಂಪನ್ಮೂಲಗಳನ್ನು ತಗ್ಗಿಸುತ್ತದೆ,

ಹೆಚ್ಚು ಅಗತ್ಯ ಹಸ್ತಕ್ಷೇಪವಿಲ್ಲದೆ, ಹವಾಮಾನ ಬದಲಾವಣೆಯು 2030 ರ ಅಂತ್ಯದ  ವೇಳೆಗೆ ವಿಶ್ವದಾದ್ಯಂತ ಹತ್ತು ಕೋಟಿಗೂ  ಹೆಚ್ಚು ಜನರನ್ನು ಬಡತನಕ್ಕೆ ದೂಡಬಹುದು ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ. 2050 ರ ಹೊತ್ತಿಗೆ, ಲ್ಯಾಟಿನ್ ಅಮೇರಿಕಾ, ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದಂತಹ ಪ್ರಾದೇಶಿಕ ಪ್ರದೇಶಗಳು ಅಂತ್ಯದ ಅಪಾಯಕಾರಿ ಸ್ಥಿತಿ ತಲುಪಿವೆ ಎಂದು ತಜ್ಞರು ಊಹಿಸಿದ್ದಾರೆ.  ಇವುಗಳ ಒಟ್ಟು ಪರಿಣಾಮವನ್ನು  ಈ ಭೂಮಿಯ ಮೇಲಿ ನ ಮಹಿಳೆಯರು ಮತ್ತು ಮಕ್ಕಳು ಅನುಭವಿಸಬೇಕಾಗಿದೆ. ಹಾಗಾಗಿ ಈಗ ಭೂಮಿಯೆಂಬುದು ಉಳ್ಳವರ ಪಾಲಿಗೆ ಸ್ವರ್ಗವಾಗಿ ಇಲ್ಲದವರ ಪಾಲಿಗೆ ನರಕವಾಗಿ ಮಾರ್ಪಟ್ಟಿದೆ.

ಚಿತ್ರ ಸೌಜನ್ಯ- ಉದಯ್ ಭಾನ್.

( ನವಂಬರ್  ಹೊಸತು  ಮಾಸಪತ್ರಿಕೆಯಲ್ಲಿ ಪ್ರಕಟವಾದ  ಬಹುಸಂಸ್ಕೃತಿ ಹೆಸರಿನ ಅಂಕಣ ಬರಹ)

ಡಾ.ಎನ್. ಜಗದೀಶ್ ಕೊಪ್ಪ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ