ಇಪ್ಪತ್ತೊಂದನೆಯ ಶತಮಾನದ ಆಧುನಿಕ ಯುಗದಲ್ಲಿ ಮಹಿಳೆ ಪುರುಷ ನಸಮಾನವಾಗಿ ಬೆಳೆದು ನಿಂತಿದ್ದಾಳೆ. ಮಹಿಳೆಯರು ನಿರ್ವಹಿಸುವ ಕಾರ್ಯಗಳಲ್ಲ ಎಂದು ಪರಿಗಣಿಸಿದ್ದ ವಿಮಾನ ಚಾಲನೆ, ರೈಲು ಚಾಲನೆ ಹಾಗೂ ಟ್ರಕ್ ಮತ್ತು ಆಟೋಗಳ ಚಾಲನೆಯಲ್ಲಿ ಸರಿಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಇದಕ್ಕೆ ಪ್ರೇರಣೆಯಾಗಿ ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಕರ್ನಾಟಕ ಸಂಗೀತದ ಲೋಕದಲ್ಲಿ ಮಹಿಳೆಯರು ನುಡಿಸುವ ವಾದ್ಯಗಳಲ್ಲ ಎಂಬ ತೀರ್ಮಾನದಲ್ಲಿ ಪುರುಷ ಜಗತ್ತು ಮುಳುಗಿರುವಾಗ ನಾದಸ್ವರ ವಾದನದಲ್ಲಿ ಪೊನ್ನಮಾಳ್ ಮತ್ತು ಮೃದಂಗ ವಾದನ ಕಲೆಯಲ್ಲಿ ರಂಗನಾಯಕಿ ಅಮ್ಮಾಳ್ ಹೊಸ ಇತಿಹಾಸವನ್ನು ಬರೆದರು.
ಅವರು ಹಾಕಿಕೊಟ್ಟ ಮಾರ್ಗದಲ್ಲಿ ಇಂದಿನ ಮಹಿಳಾ ಕಲಾವಿದರು ಮೃದಂಗ, ನಾದಸ್ವರ, ತಬಲ, ಗೋಟು ವಾದ್ಯ ಮುಂತಾದ ಕಲೆಗಳಲ್ಲಿ ನೈಪುಣ್ಯತೆಯನ್ನು ಸಾಧಿಸುವುದರ ಮೂಲಕ ಪುರುಷರ ಸಮಾನವಾಗಿ ಬೆಳೆದು ನಿಂತಿದ್ದಾರೆ.
ರಂಗನಾಯಕಿ ಅಮ್ಮಾಳ್ ಸಾಧನೆಯ ಇತಿಹಾಸವು 1927 ರಿಂದ ಆರಂಭವಾಗಿ ಇತಿಹಾಸದಲ್ಲಿ ದಾಖಲಾಗಿದೆ. ರಂಗನಾಯಕಿ ಅಮ್ಮಾಳ್ ಹದಿನೇಳು ವರ್ಷ ಪ್ರಾಯದ ಯುವತಿಯಾಗಿದ್ದಾಗ ಮದ್ರಾಸ್ ನಗರದಲ್ಲಿ ನಡೆದ ಅಖಿಲ ಭಾರತ ಕಾಂಗ್ರಸ್ ಅಧಿವೇಶನದ ನಿಮಿತ್ತ ಆಯೋಜಿಸಿದ್ದ ಸಂಗೀತ ಸಮ್ಮೇಳನದಲ್ಲಿ ಮೃದಂಗ ವಾದಕಿಯಾಗಿ ಭಾಗವಹಿಸಿದಾಗ ಅಲ್ಲಿ ಹೊಸ ಮಹಿಳಾ ಇತಿಹಾಸ ಸೃಷ್ಟಿಯಾಯಿತು.
ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಪ್ಪತ್ಮೂರು ಮಂದಿ ಮೃದಂಗ ಕಲಾವಿದರ ಪೈಕಿ ರಂಗನಾಯಕಿಯವರು ಏಕೈಕ ಮಹಿಳಾ ಕಲಾವಿದೆಯಾಗಿದ್ದರು. ಈ ಕಾರಣದಿಂದಾಗಿ ಟಿ. ಎಸ್. ರಂಗನಾಯಕಿ ಅಮ್ಮಾಳ್ ಅವರು 1930 ರ ದಶಕದ ಹಿಂದೆಯೇ ಮೃದಂಗ ಕಲಾವಿದರಾಗಿ ಪ್ರಸಿದ್ಧಿ ಪಡೆದರು. ಕರ್ನಾಟಕ ಸಂಗೀತದ ತಾಳವಾದ್ಯದ ಪುರುಷ ಪ್ರಧಾನ ಜಗತ್ತಿನಲ್ಲಿ ಯಶಸ್ಸನ್ನು ಸಾಧಿಸಿದ ಮೊದಲ ಮಹಿಳೆ ಎಂದು ಪ್ರಸಿದ್ಧಿಯಾದರು.
ಪುರುಷರು ಮಾಡುವ ಯಾವುದನ್ನೂ ಮಹಿಳೆಯರಿಗೆ ಅನುಮತಿಸದ ಇದ್ದ ಆ ಕಾಲಘಟ್ಟದಲ್ಲಿ, ಈ ಚಿಕ್ಕ ಹುಡುಗಿಯೊಬ್ಬಳು ಮೃದಂಗವನ್ನು ನುಡಿಸುವಲ್ಲಿ ಪ್ರಯತ್ನಿಸಿ ಯಶಸ್ಸು ಸಾಧಿಸಿದ್ದು ಸಾಮಾನ್ಯ ಸಂಗತಿಯಲ್ಲ. ರಂಗನಾಯಕಿ ಅಮ್ಮಾಳ್ ಅವರ ತಂದೆ ತಿರುಕೋಕರ್ಣಂ ಶಿವರಾಮನ್ ಅವರು ಪುದುಕೋಟೈ ಸಂಸ್ಥಾನದಲ್ಲಿ ಆಸ್ಥಾನ ವಿದ್ವಾನ್ ಹಾಗೂ ಪ್ರತಿಷ್ಠಿತ ನಟುವನಾರ್ ಅಂದರೆ ನೃತ್ಯ ಶಿಕ್ಷಕ ಅಥವಾ ಗುರುವಾಗಿ ಹೆಸರು ಪಡೆದ್ದರು. ಅವಧಾನ ಪಲ್ಲವಿಗಳ ಪಾಂಡಿತ್ಯಕ್ಕಾಗಿ ಅವರು ಹೆಸರುವಾಸಿಯಾಗಿದ್ದರು. ಇದು ನೃತ್ಯದಲ್ಲಿ ಕೈಗಳನ್ನು ಮಾತ್ರವಲ್ಲದೆ ಕಾಲುಗಳು ಮತ್ತು ತಲೆಗಳನ್ನು ಬಳಸಿ ವೈವಿಧ್ಯಮಯ ತಾಳಎಂದುನು ಕೌಶಲ್ಯದಿಂದ ಪ್ರದರ್ಶಿಸುವ ಒಂದು ಕಲಾ ಪ್ರಕಾರವಾಗಿದೆ.
ದೇವದಾಸಿ ಪದ್ಧತಿಯ ವಿರುದ್ಧ ಹೋರಾಟ ನಡೆಸಿದ ಪುದುಕೋಟೈ ಮೂಲ ದ ಖ್ಯಾತವೈದ್ಯೆ ಹಾಗೂ ಸಮಾ ಜ ಸುಧಾರಕಿ ಡಾ. ಮುತ್ತುಲಕ್ಷ್ಮಿ ರೆಡ್ಡಿ ಇವರ ಹತ್ತಿರ ಸಂಬಂಧಿಯಾಗಿದ್ದರು.
ಏಳು ಮಂದಿ ಒಡಹುಟ್ಟಿದವರ ಕುಟುಂಬದಲ್ಲಿ ರಂಗನಾಯಕಿ ಅಮ್ಮಾಳ್ ಅವರು 1910 ರ ಮೇ 10 ರಂದು ಎರಡನೇ ಮಗುವಾಗಿ ಜನಿಸಿದರು. ಅವರ ಸಹೋದರ ಉಲಗನಾಥನ್ ಪಿಳ್ಳೈ, ಪಿಟೀಲು ವಾದಕರಾಗಿದ್ದರು. ಹಿರಿಯ ಸಹೋದರಿ ಶಿವ ಬೃಂದಾದೇವಿ ಎಂಬುವರು ಶೈವಪರಂಪರೆಯ ಪೀಠವೊಂದರ ಅಧ್ಯಕ್ಷೆಯಾಗಿದ್ದರು.
ರಂಗನಾಯಕಿ ಅವರು ಬಾಲ್ಯದಿಂದಲೂ ಮೃದಂಗ ತಾಳಗಳ ಲಯ ಪರಾಕ್ರಮದಿಂದ ಪ್ರೇರಿತರಾದರು, ಮೃದಂಗವನ್ನು ಆಯ್ಕೆ ಮಾಢಿಕೊಂಡರು ಮತ್ತು ಬಾಲ್ಯದಲ್ಲಿ ಭರತನಾಟ್ಯದ ಶಿಕ್ಷಣವನ್ನು ಪಡೆಯುತ್ತಾ, ಮೃದಂಗದ ಶಿಕ್ಷಣವನ್ನು ಪಡೆಯುತ್ತಿದ್ದರು. ಅವರಿಗೆ ಹದಿಮೂರು ವರ್ಷವಾಗಿದ್ದಾಗ ಭರತನಾಟ್ಯದ ಅರಂಗೇಟ್ರಂ ( ನೃತ್ಯ ಪ್ರವೇಶ) ಕಾರ್ಯಕ್ರ ಮನಡೆಯಿತು. ಅವರ ನೃತ್ಯ ಕಾರ್ಯಕ್ರಮಕ್ಕೆ ತಂದೆಯವರ ಜೊತೆ ಮೃದಂಗಕ್ಕೆ ರಾಮಚಂದ್ರಪಿಳ್ಳೈ ಮತ್ತು ವಯಲಿನ್ ವಾದನಕ್ಕೆ ಇಕಪ್ಪೂರ್ ಮುನಿಸ್ವಾಮಿ ಪಿಳ್ಳೈ ಆಗಮಿಸಿದ್ದರು. ಇವರೆಲ್ಲರೂ ಪುದುಕೋಟೈ ಸಂಸ್ಥಾನದ ಸಂಗೀತಗಾರರಾಗಿದ್ದರು.
ಪುದುಕೋಟೈ ಸಂಸ್ಥಾನದಲ್ಲಿ ಮೃದಂಗ ವಾದನದಲ್ಲಿ ಶ್ರೇಷ್ಠ ಗುರುಗಳಲ್ಲಿ ಒಬ್ಬರಾಗಿದ್ದ ಪುದುಕೊಟ್ಟೈ ದಕ್ಷಿಣಾಮೂರ್ತಿ ಪಿಳ್ಳೈ ಅವರ ಬಳಿ ಹದಿಮೂರು ವರ್ಷಗಳ ಕಾಲ ಗುರುಕುಲ ಪದ್ಧತಿಯಲ್ಲಿ ಮೃದಂಗ ವಾದನದ ಅಭ್ಯಾಸ ಮಾಡಿದರು.
ರಂಗನಾಯಕಿ ಅಮ್ಮಾಳ್ ಅವರು ತಮಗೆ ಹದಿನೈದು ವರ್ಷವಾದಾಗ, ಭರತನಾಟ್ಯವನ್ನು ನಿಲ್ಲಿಸಿ ಮೃದಂಗ ವಾದನದ ಕಲೆಯತ್ತ ತೀವ್ರ ಆಸಕ್ತಿ ತಾಳಿದರು."ರಂಗನಾಯಕಿ ಅಮ್ಮಾಳ್ ಕೇವಲ ಎರಡು ವರ್ಷಗಳಲ್ಲಿ ಅದರ ನಾದದ ಗುಣಮಟ್ಟಕ್ಕೆ ತುಂಬಾ ಹೊಳಪನ್ನು ಸೇರಿಸಿದ್ದಾರೆ ಎಂದು ಸಂಗೀತ ವಿಮರ್ಶಕರು ಕೊಂಡಾಡಿದ್ದರು. ಮತ್ತೊಬ್ಬ ವಿಮರ್ಶಕರು ತನಿ ಆವರ್ತನದಲ್ಲಿ ಮೃದಂಗದ ಮೇಲಿನ ಅವರ ಚಳಕ ಕಾರ್ಯಕ್ರಮದ ಮುಖ್ಯಾಂಶವೆಂದು ಘೋಷಿಸಿದ್ದರು. ಸಂಗೀತ ಕೃತಿಯೊಂದಿಗಿನ ಅವರ ವಿಧಾನವನ್ನು ಮತ್ತು ಅದ್ಭುತ ಅಭಿನಯವನ್ನು ಶ್ಲಾಘಿಸಿದರು ಅವರು 1930 ದಶಕದಿಂದ ಪ್ರಸಿದ್ಧ ಕಲಾವಿದರೊಂದಿಗೆ ವೇದಿಕೆಯನ್ನು ಹಂಚಿಕೊಂಡರು. ಡಿಕೆ ಪಟ್ಟಮಾಳ್ ಅವರಂತಹ ಪ್ರಮುಖ ಗಾಯಕಿರ ಸಂಗೀತ ಕಚೇರಿಯಲ್ಲಿ ರಂಗನಾಯಕಿ ಅಮ್ಮಾಳ್ ಅವರು 1936 ರಲ್ಲಿ ಮೃದಂಗವನ್ನು ನುಡಿಸಿದರು.
ನಂತರದ ದಿನಗಳಳಲ್ಲಿ ಎಂ ಎಸ್ ಸುಬ್ಬಲಕ್ಷ್ಮಿ ಅವರ ತಾಯಿ ಮಧುರೈ ಷಣ್ಮುಗವಡಿವು ಅವರ ವೀಣಾ ವಾದನಕ್ಕೆ ಮೈಸೂರಿಗೆ ಬರಲು ಸಾಧ್ಯವಾಗದ ಕಾರಣ ಬದಲಿಗೆ ಮೈಸೂರು ಅರಮನೆಯಲ್ಲಿ ಮೊದಲ ಬಾರಿಗೆ ವೇದಿಕೆಯಲ್ಲಿ ಮೃದಂಗ ವಾದನ ಪ್ರದರ್ಶನ ನೀಡಿದರು. ಅವರ ಮೃದಂಗ ವಾದನದ ಕಲೆಗೆ ಎಲ್ಲರೂ ನಿಬ್ಬೆರಗಾದರು. ರಂಗನಾಯಕಿ ಅಮ್ಮಾಳ್ ಅವರು ಅರಿಯಕುಡಿ ರಾಮಾನುಜ ಅಯ್ಯಂಗಾರ್, ಟಿ ಆರ್ ಮಹಾಲಿಂಗಂ, ಮೈಸೂರಿನ ಪಿಟಿಲು ಚೌಡಯಾ ಮತ್ತು ವೀಣಾ ಧನಮ್ಮಾಳ್ ಸೇರಿದಂತೆ ಅನೇಕ ಸಂಗೀತ ದಿಗ್ಗಜರೊಂದಿಗೆ ಮೃದಂಗ ನುಡಿಸಿದ್ದಾರೆ.
ತನಿ ಆವರ್ತನಗಳು (ಸಂಗೀತದ ಸಮಯದಲ್ಲಿ (ಏಕವ್ಯಕ್ತಿ ಪ್ರದರ್ಶನ) ಮತ್ತು ಹೆಚ್ಚು ಸಂಕೀರ್ಣವಾದ ಜಾತಿಗಳು (ಬೀಟ್ ಮಾದರಿಗಳು) ಮತ್ತು ತೀರ್ಮಾನಗಳು (ಸಾಮಾನ್ಯವಾಗಿ ಮೂರು ಬಾರಿ ಆಡುವ ಅಂತ್ಯದ ಮಾದರಿ) ಸಮಯದಲ್ಲಿ ಸಂಕೀರ್ಣವಾದ ಲಯದ ಮಾದರಿಗಳನ್ನು ನೇಯ್ಗೆ ಮಾಡುವುದರ, ಮೂಲಕ ಅವರು ತನ್ನ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಿದ್ದರು.
ಪುದುಕೋಟೈಗೆ ಸಮೀಪದ ತಿರುಚ್ಚರಾಪಳ್ಳಿಯ ಆಕಾಶವಾಣಿಯ ಕೇಂದ್ರದಿಂದ ಅವರ ಮೃದಂಗವಾದನ ನಿರಂತರ ಪ್ರಸಾರಗೊಳ್ಳುತ್ತಿದ್ದಂತೆ ಅವರ ಜನಪ್ರಿಯತೆ ಎಲ್ಲೆಡೆ ಹಬ್ಬಿತು. ರಂಗನಾಯಕಿ ಅವರಿಗೆ ದೇಶ ವಿದೇಶಗಳಿಂದ ಆಮಂತ್ರಣಗಳು ಬರತೊಡಗಿದವು. ಅವರು ಸಿಂಗಾಪುರ, ಮಲೇಷಿಯಾ, ಶ್ರೀಲಂಕಾ ರಾಷ್ಟ್ರಗಳಿಗೆ ಕುಟುಂಬ ಸದಸ್ಯರ ಜೊತೆಗೆ ಹೋಗಿ ಪ್ರದರ್ಶನ ನೀಡಿ ಬಂದರು.
1966 ರಲ್ಲಿ ಅವರು ತಿರುಪತಿಯ ಪದ್ಮಾವತಿ ಸಂಗೀತದ ಕಾಲೇಜಿನಲ್ಲಿ ಅಧ್ಯಾಪಕರಾಗಿ .ನೇಮಕಗೊಂಡರು. ಅವರು ಏಳು ವರ್ಷಗಳ ನಂತರ ಮಧುರೈನ ಶ್ರೀ ಸದ್ಗುರು ಸಂಗೀತ ಸಭಾದಲ್ಲಿ ಅರೆಕಾಲಿಕ ಮೃದಂಗ ಶಿಕ್ಷಕಿಯಾಗಿ ಕೆಲಸ ಮಾಡಿದರು. ಅವರು ತಿರುಚ್ಚಿಯ ಆಕಾಶವಾಣಿಯ ಕೇಂದ್ರದಲ್ಲಿ ಕಾರ್ಯಕ್ರಮ ನೀಡುವುದರ ಜೊತೆಗೆ ಕಲಾವಿದರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದರು.
ಅವರು ತಿರುಪತಿಯ ಪದ್ಮಾವತಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗ ಭರತನಾಟ್ಯ ವಿದ್ಯಾರ್ಥಿಯಾಗಿದ್ದ ಗೊಟ್ಟುವಾದ್ಯಂ ವಾದಕಿ ಉಷಾ ವಿಜಯಕುಮಾರ್ ಎಂಬುವರು ತಮ್ಮ ಗುರುವಿನ ಬಗ್ಗೆ ‘’, ರಂಗನಾಯಕಿ ಅಮ್ಮಾಳ್ ತನ್ನ ಸಣ್ಣ ನಿಲುವಿನ ಹೊರತಾಗಿಯೂ ಪ್ರಭಾವಶಾಲಿ ಉಪಸ್ಥಿತಿಯನ್ನು ಹೇಗೆ ಹೊಂದಿದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ. ಅವರು ಸಂಕೀರ್ಣವಾದ ಲಯದ ಲೆಕ್ಕಾಚಾರಗಳನ್ನು ಸುಲಭವಾಗಿ ಓದಬಲ್ಲವರಾಗಿದ್ದರು. ಅವರಿಗೆ ನಟನೆಗಿಂತ ಕಲಿಸುವುದರಲ್ಲಿಯೇ ಹೆಚ್ಚು ಆಸಕ್ತಿ ಇತ್ತು. ಮೃದಂಗವಲ್ಲದೆ ಭರತನಾಟ್ಯವನ್ನೂ ಕಲಿಸಿದರು.
ರಂಗನಾಯಕಿ ಅಮ್ಮಾಳ್ ಅವರು ತಮ್ಮ ವಿದೇಶಿ ವಿದ್ಯಾರ್ಥಿನಿ ಕ್ಯಾರೋಲಿನ್ ಸೇರಿದಂತೆ ಅವರ ಹಲವಾರು ವಿದ್ಯಾರ್ಥಿಗಳಿಗೆ ಅರಂಗೇಟ್ರಂ ಆಯೋಜಿಸಿದ್ದರು’’ ಎಂಬುದಾಗಿ ತುಂಬು ಹೃದಯದಿಂದ ಸ್ಮರಿಸಿದ್ದಾರೆ. ರಂಗನಾಯಕಿ ಅಮ್ಮಾಳ್ ಅವರು ಸೌದಾಮಿನಿ ರಾವ್ ಸೇರಿದಂತೆ ಅನೇಕ ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲಿಸಿದರು.
ತಮ್ಮ ಇಡೀ ಜೀವನವನ್ನು ಮೃದಂಗ ವಾದನ ಮತ್ತು ಭರತನಾಟ್ಯ ಶಿಕ್ಷಣಕ್ಕೆ ಮೀಸಲಾಗಿಟ್ಟಿದ್ದ ರಂಗನಾಯಕಿ ಅಮ್ಮಾಳ್ ತಮ್ಮ ಎಂಬತ್ತೆಂಟನೆಯ ವಯಸ್ಸಿನಲ್ಲಿ ಅಂದರೆ 1998 ರ ಆಗಸ್ಟ್ ಹದಿನೈದರೆಂದು ನಿಧನರಾದರು. ಅವರ ಹಿರಿಯ ಸಹೋದರಿ ಶಿವ ಬೃಂದಾದೇವಿಯವರ ದತ್ತು ಪುತ್ರ ಹಾಗೂ ದಯಾನಂದ ಚಂದ್ರಶೇಖರ ಸ್ವಾಮೀಜಿಯವರು ತಮ್ಮ ಚಿಕ್ಕಮ್ಮನ ಬಗ್ಗೆ ಸ್ಮರಿಸಿಕೊಳ್ಳುತ್ತಾ, ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಅವರು ಮೃದಂಗ ವಾದನ ಪ್ರದರ್ಶನವನ್ನು ನಿಲ್ಲಿಸಿದ್ದರು. ಆದರೆ, ಹದಿನಾಲ್ಕು ವರ್ಷಗಳ ನಂತರ ನನ್ನ ವಿವಾಹದ ಸಂದರ್ಭದಲ್ಲಿ ಪ್ರದರ್ಶನ ನೀಡಿ ಸಾವಿರಾರು ಪ್ರೇಕ್ಷಕರನ್ನು ರಂಜಿಸಿದರು ಎಂದು ಅವರ ಮರಣದ ಸಮಯದಲ್ಲಿ ಚಿಕ್ಕಮ್ಮನನ್ನು ನೆನಪಿಸಿಕೊಂಡಿದ್ದರು.
1972 ರಲ್ಲಿ ತಮಿಳು ಸರ್ಕಾರವು ರಂಗನಾಯಕಿ ಅಮ್ಮಾಳ್ ಅವರಿಗೆ ಪ್ರತಿಷ್ಠಿತ ಕಲೈ ಮಾಮಣಿ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಜೊತೆಗೆ ಅವರ ನಿಧನಾನಂತರ ಟಿ.ಎಸ್. ರಂಗನಾಯಕಿ ಅಮ್ಮಾಳ್ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿ, ಪ್ರತಿ ವರ್ಷ ಮೃದಂಗ ವಾದಕರಿಗೆ ನೀಡುತ್ತಾ ಬಂದಿದೆ.
ಜಗದೀಶ್ ಕೊಪ್ಪ.
.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ