ರಾಷ್ಟ್ರಮಟ್ಟದಲ್ಲಿ ಪ್ರಧಾನಿಗೆ ದಿಟ್ಟ ಹೋರಾಟ ನೀಡಬಲ್ಲ ಛಲಗಾತಿ ಹೆಣ್ಣು ಮಗಳು ಎಂದು ಪ್ರಸಿದ್ಧರಾದ ಮಮತಾ ಬ್ಯಾನರ್ಜಿ ಇಂದಿನ ಪರಿಸ್ಥಿತಿಯಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಇಂಡಿಯಾ ಮೈತ್ರಿ ಪಕ್ಷಗಳ ಜೊತೆಯಲ್ಲಿ ಇರಬೇಕಾಗಿತ್ತು. ಇಂದು ಪ್ರಧಾನಿ ನರೇಂದ್ರಮೋದಿಗೆ ಸವಾಲುಗಳಾಗಿರುವ ರಾಜ್ಯಗಳೆದರೆ, ದಕ್ಷಿಣ ಭಾರತದಲ್ಲಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಹಾಗೂ ಉತ್ತರದಲ್ಲಿ ದೆಹಲಿ ಮತ್ತು ಪೂರ್ವದಲ್ಲಿ ಪಶ್ಚಿಮ ಬಂಗಾಳ ರಾಜ್ಯಗಳು ಮಾತ್ರ.
ಕಳೆದ
ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ
ಬಂಗಾಳದಲ್ಲಿ ಹದಿನೆಂಟು ಲೋಕಸಭಾ ಕ್ಷೇತ್ರಗಳನ್ನು ಗೆದ್ದಿದ್ದ ಬಿ.ಜೆ.ಪಿ. ಪಕ್ಷಕ್ಕೆ ಈ ವರ್ಷ ಅಷ್ಟೇ
ಸ್ಥಾನಗಳು ಲಭ್ಯವಾಗುತ್ತವೆ ಎಂದು ಹೇಳಲಾಗದು. ಆದರೆ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೇಸ್
ಪಕ್ಷಕ್ಕೆ ಸರಿ ಸಮಾನಾಗಿ ಕಾಂಗ್ರೇಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಬಿ.ಜೆ.ಪಿ.ಯನ್ನು ವಿರೋಧಿಸುವ
ಪಕ್ಷಗಳಾಗಿರುವುದರಿಂದ ಅವುಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಇಂದಿನ ಸಂದರ್ಭದಲ್ಲಿ ಅನಿವಾರ್ಯವಾಗಿತ್ತು.ಏಕೆಂದರೆ,
ಬಿ.ಜೆ.ಪಿ.ಯ ವಿರೋಧಿ ಮತಗಳು ಛಿದ್ರವಾಗುವುದರ ಮೂಲಕ
ಇದು ಪರೋಕ್ಷವಾಗಿ ಬಿ.ಜೆ.ಪಿ. ಪಕ್ಷಕ್ಕೆ
ನೆರವಾಗಬಲ್ಲದು.
ಕೊಲ್ಕತ್ತ ನಗರದ
ಸಾಮಾನ್ಯ ಕುಟುಂಬದಿಂದ ಬಂದಿರುವ 69 ವರ್ಷ ವಯಸ್ಸಿನ ಮಮತಾ ಬ್ಯಾನರ್ಜಿ ಅವರು ಬಾಲ್ಯದಿಂದಲೂ, ವಿಶೇಷವಾಗಿ
ವಿದ್ಯಾರ್ಥಿ ಜೀವನದಿಂದಲೂ ಹೋರಾಟದ ಮನೋಭಾವವನ್ನು ಬೆಳೆಸಿಕೊಂಡು ಬಂದವರು. 1975 ರ ವೇಳೆಗೆ ಕಾಂಗ್ರೇಸ್
ಯುವ ಸಂಘಟನೆಗೆ ಸೇರಿದ ಮಮತಾ ಅವರು ಆ ಸಂಧರ್ಭದಲ್ಲಿ ಇಂದಿರಾಗಾಂಧಿ ಅವರು ದೇಶಾದ್ಯಂತ ಹೇರಿದ್ದ ತುರ್ತು
ಪರಿಸ್ಥಿತಿಯ ವಿರುದ್ಧ ಜಯಪ್ರಕಾಶ ನಾರಾಯಣ್ ಅವರು ವಿದ್ಯಾರ್ಥಿ ಚಳುವಳಿ ಹೋರಾಟ ಹಮ್ಮಿಕೊಂಡಾಗ ಕೊಲ್ಕತ್ತ
ನಗರದಲ್ಲಿ ಅವರ ಕಾರಿನ ಮೇಲೆ ನಿಂತು ಕಾಳಿ ನೃತ್ಯ
ಮಾಡುತ್ತಾ, ಅವರ ಹೋರಾಟವನ್ನು ವಿರೋಧಿಸುವದರ ಮೂಲಕ ಇಡೀ ಪಶ್ಚಿಮ
ಬಂಗಾಳ ರಾಜ್ಯದ ಗಮನ ಸೆಳೆದಿದ್ದರು.
ಜ್ಯೋತಿ ಬಸು ಅವರು
ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಓರ್ವ ಬಾಲಕಿಯು ಅತ್ಯಾಚಾರಕ್ಕೆ ಒಳಗಾದಾಗ ಆ ಬಾಲಕಿಯನ್ನು ಮುಖ್ಯಮಂತ್ರಿ
ಕಚೇರಿಗೆ ಕರೆದೊಯ್ದು, ಈಕೆಗೆ ನ್ಯಾಯ ಕೊಡಿಸಿ ಇಲ್ಲದಿದ್ದರೆ, ನಾವು ನಾಳೆ ಈ ರೈಟರ್ಸ್ ಬಿಲ್ದಿಂಗ್
ನಲ್ಲಿ ಅಧಿಕಾರ ನಡೆಸಬೇಕಾಗುತ್ತದೆ ಎಂದು ಸವಾಲು ಹಾಕಿದ್ದರು. ಅದರಂತೆ ಮುಂದಿನ ದಿನಗಳಲ್ಲಿ ಅತ್ಯಂತ
ಚಿಕ್ಕ ವಯಸ್ಸಿನಲ್ಲಿ ಸಂಸತ್ತನ್ನು ಪ್ರವೇಶಿಸುವುದರ ಮೂಲಕ ರಾಜಕೀಯ ಪ್ರವೇಶ ಮಾಡಿದರು. ಇಷ್ಟು ಮಾತ್ರವಲ್ಲದೆ, ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕ
ಸೋಮನಾಥ ಮುಖರ್ಜಿಯನ್ನು ಲೋಕಸಭಾ ಚುನಾವಣೆಯಲ್ಲಿ ಮಣಿಸಿದ್ದರು. ಕೇಂದ್ರ ಸರ್ಕಾರದಲ್ಲಿ ಎರಡು ಬಾರಿ ರೈಲ್ವೆ ಸಚಿವೆ, ಒಂದು ಬಾರಿ ಕಲ್ಲಿದ್ದಲು ಖಾತೆ
ಸಚಿವೆಯಾಗಿ ಕಾಂಗ್ರೇಸ್ ನಲ್ಲಿ ಭವಿಷ್ಯದ ನಾಯಕಿ ಎಂದು ಭರವಸೆ ಮೂಡಿಸಿದ್ದ ಮಮತಾ ಬ್ಯಾನರ್ಜಿ ನನಗೆ
ನೆನಪಿರುವ ಹಾಗೆ 1997 ಅಥವಾ 1998 ರಲ್ಲಿ ಪಕ್ಷ ತೊರೆದು ತೃಣಮೂಲ ಕಾಂಗ್ರೇಸ್ ಪಕ್ಷವನ್ನು ಸ್ಥಾಪಿಸಿದರು.
ಮಮತಾಗೆ ಕೇಂದ್ರದಲ್ಲಿ
ಇರುವುದಕ್ಕಿಂತ ಹೆಚ್ಚಾಗಿ ತನ್ನ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಕಮ್ಯೂನಿಸ್ಟ್ ಪಕ್ಷವನ್ನು ಮಣಿಸಿ
ಮುಖ್ಯಮಮತ್ರಿಯಾಗಬೇಕೆಂಬ ಆಸೆ ಆ ಸಂದರ್ಭದಲ್ಲಿ ಮೂಡಿ ಬಂದಿತ್ತು. ನಂತರ ಅದು 2010 ಮತ್ತು 2011 ರ
ವೇಳೆಗೆ ನೆರೆವೇರಿತು. ಜ್ಯೋತಿಬಸು ಅವರು ಸುಧೀರ್ಘ 24 ವರ್ಷಗಳ ಮುಖ್ಯಮಂತ್ರಿ ಅವದಿಯನ್ನು ಮುಗಿಸಿ,
ಅಧಿಕಾರದಿಂದ ಇಳಿದಾಗ, ಅವರ ಉತ್ತರಾಧಿಕಾರಿಯಾಗಿ ಬುದ್ಧದೇವ ಭಟ್ಟಾಚಾರ್ಯ ಮುಂಖ್ಯಮಂತ್ರಿಯಾದರು. ಇವರ
ಅವಧಿಯಲ್ಲಿ ಟಾಟಾ ಕಂಪನಿಯು ನ್ಯಾನೊ ಕಾರನ್ನು ತಯಾರಿಸಲು ಸಂಗೂರ್ ಎಂಬಲ್ಲಿ ಪಶ್ಚಿಮ ಬಂಗಾಳ ಸರ್ಕಾರದ
ಜೊತೆ ಒಪ್ಪಂಧ ಮಾಡಿಕೊಂಡಿತು. ಜೊತೆಗೆ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಭೂಮಿಗೆ ವಿನಿಯೋಗಿಸಿತು.
ಇದರ ಜೊತೆಗೆ ಸರ್ಕಾರವು ನಂದಿ ಗ್ರಾಮದ ಬಳಿ ಕೈಗಾರಿಕಾ ಪ್ರದೇಶವನ್ನು ಮಾಡಲು ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು
ಹೊರಟಾಗ ಮಮತಾ ಬ್ಯಾನರ್ಜಿ ಹೋರಾಟಕ್ಕೆ ಮಹತ್ವದ ತಿರುವು ಸಿಕ್ಕಿತು.
ಪಕ್ಷದಲ್ಲಿ ಒಡಹುಟ್ಟಿದ
ಸಹೋದರನಂತೆ ಇದ್ದ ಸುವೆಂದು ಅಧಿಕಾರಿ ಯ ಜೊತೆ ಹೋರಾಟ ಮಾಡಿ ನಂದಿಗ್ರಾಮ ಮತ್ತು ಸಂಗೂರ್ ಎರಡರಲ್ಲಿಯೂ
ಜಯಗಳಿಸಿದ ಮಮತಾ ಅವರು 2011 ರಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ
ತಂದರು. ಅವಿವಾಹಿತೆಯಾಗಿ ಉಳಿದುಕೊಂಡು ತನ್ನ ನೆಲದ ಜನರ ಬವಣೆಗಳಿಗೆ ಅತ್ಯಂತ ಸೂಕ್ಷ್ಮವಾಗಿ ಸ್ಪಂದಿಸಬಲ್ಲ
ಗುಣವುಳ್ಳ ಈ ಹೆಣ್ಣುಮಗಳ ಆತ್ಮಸ್ಥೈರ್ಯ ಮೆಚ್ಚುವಂತಹದ್ದು
ನಿಜ. ಆದರೆ, ತಾನು ಹಿಡಿದ ಮೊಲಕ್ಕೆ ಮೂರೇ ಕಾಲು ಎಂದು ವಾದಿಸುವುದು ಈಕೆಯ ದೌರ್ಭಲ್ಯವಾಗಿದೆ. ಈ ಕಾರಣದಿಂದಾಗಿ ಸುವೆಂದು ಅದಿಕಾರಿ ಐದು ವರ್ಷಗಳ ಹಿಂದೆ
ಪಕ್ಷ ತೊರೆದು ಈಗ ಬಿ.ಜೆ.ಪಿ. ನಾಯಕನಾಗಿದ್ದಾನೆ.
ಸಾಮಾನ್ಯ ಜನರಿಗೆ
ವಿಶೇಷವಾಗಿ ಮಹಿಳೆಯರಿಗೆ ಮತ್ತು ಮುಸ್ಲಿಂ ಸಮುದಾಯದ ಜನರಿಗೆ ಆಸರೆಯಾಗಿ ನಿಂತಿರುವ ಮಮತಾ ಪಶ್ಚಿಮ
ಬಂಗಾಳದಲ್ಲಿ ಜಾರಿಗೆ ತಂದಿರುವ ಯೋಜನೆಗಳು ಈಗ ಕರ್ನಾಟಕದಲ್ಲಿ ಜಾರಿಗೆ ಬಂದಿರುವ ಗ್ಯಾರಂಟಿ ಯೋಜನೆಗಳನ್ನು
ಮೀರಿಸುವಂತಿವೆ. ಆದರೆ, ಇತ್ತೀಚೆಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸಂಭವಿಸುತ್ತಿರುವ ಅನೇಕ ಅಹಿತಕರ
ಘಟನೆಗಳು (ವಿಶೇಷವಾಗಿ ಸಂದೇಶ್ ಖಾಲಿ ಘಟನೆ) ಭವಿಷ್ಯದಲ್ಲಿ ಮಮತಾ ಅವರ ಭವಿಷ್ಯವನ್ನು ಮಸುಕಾಗಿಸಬಲ್ಲವು.
ಭಾರತದ ಇತಿಹಾಸದಲ್ಲಿ
ಜಯಲಲಿತಾ, ಮಾಯಾವತಿ ಇವರಿಬ್ಬರೂ ತಮ್ಮ ಪಕ್ಷಗಳನ್ನು ತಮ್ಮ ಅವನತಿಯ ಜೊತೆ ಕೊನೆಗಾಣಿಸಿದ ರೀತಿಯಲ್ಲಿ
ಮಮತಾ ಬ್ಯಾನರ್ಜಿ ಕೂಡಾ ತೃಣಮೂಲ ಕಾಂಗ್ರೇಸ್ ಪಕ್ಷವನ್ನು ಕೊನೆಗಾಣಿಸಲು ತೀರ್ಮಾನಿಸಿದ ಹಾಗೆ ಕಾಣುತ್ತೆ.
ಭವಿಷ್ಯದ ಭಾರತದ ದೃಷ್ಟಿಯಿಂದ ಸುಳ್ಳುಗಳ ಮೂಲಕ ದೇಶ ಆಳುತ್ತಿರುವ ನಕಲಿ ಶಾಮಣ್ಣರನ್ನು ಕಿತ್ತೊಗೆಯಲು
ಮಮತಾ ಬ್ಯಾನರ್ಜಿ ತನ್ನ ಮನೋಭಾವವನ್ನು ಬದಲಿಸಿಕೊಳ್ಳುವುದು ಈಗ ಅನಿವಾರ್ಯವಾಗಿದೆ.
ಹತ್ತು ವರ್ಷಗಳ
ಹಿಂದೆ ಕೊಲ್ಕತ್ತ ನಗರದಿಂದ ಮಮತಾ ಆತ್ಮಕಥೆಯನ್ನು ಕೊಂಡು ತಂದಿದ್ದೆ. ಅದರಲ್ಲಿ ಆಕೆ ಮುಖ್ಯಮಂತ್ರಿಯಾಗುವವರೆಗೂ
ಹೋರಾಡದ ಕಥನ ಮತ್ತು ಬಾಲ್ಯದ ವಿವರಗಳಿದ್ದವು. ನಿರೂಪಣೆಯು ಇಂಗ್ಲೀಷ್ ಭಾಷೆಯಲ್ಲಿ ತೃಪ್ತಕರವಾಗಿರಲಿಲ್ಲ.
ಹಾಗಾಗಿ ಅನುವಾದಿಸುವ ಕ್ರಿಯೆಯನ್ನು ಕೈ ಬಿಟ್ಟು ಇನ್ನಷ್ಟು ವರ್ಷ ಕಾಯೋಣ ಎಂದು ನಿರ್ಧರಿಸಿದ್ದೆ. ಈಗ ನನ್ನ ನಿರ್ಧಾರ ಸರಿ ಎನಿಸಿದೆ.
ಜಗದೀಶ್ ಕೊಪ್ಪ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ