ಬುಧವಾರ, ಮೇ 1, 2024

ಅಳಿಸಿ ಹೋದ ಗೋಡೆಯ ಬರಹದ ಸಂಸ್ಕೃತಿ

 

ವರ್ತಮಾನದ ಭಾರತದಲ್ಲಿ ಸಾರ್ವಜನಿಕ ಚುನಾವಣೆಗಳು ಎಂದರೆಒಂದು ರೀತಿಯಲ್ಲಿ ರಾಜಕೀಯ ಹಾಗೂ ಸಾಮಾಜಿಕ ಯುದ್ಧಗಳಾಗಿ ಪರಿವರ್ತನೆಗೊಂಡಿವೆ. ಇಪ್ಪತ್ತೊಂದನೆಯ ಶತಮಾನದ ಮಾಹಿತಿ ತಂತ್ರಜ್ಞಾನದ  ಪ್ರಭಾವದಿಂದಾಗಿ ಟ್ವಿಟ್ಟರ್, ಇನ್ ಸ್ಟಾ ಗ್ರಾಂ, ಫೇಸ್ ಬುಕ್ ಎಂಬ ಸಾಮಾಜಿಕ ತಾಣಗಳು ಈಗ ಯುದ್ಧಭೂಮಿಯಾಗಿ ಪರಿವರ್ತನೆಗೊಂಡಿವೆ. ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಪ್ರತಿ ಕ್ಷಣವೂ ಪರ ಮತ್ತು ವಿರೋಧಿ ಹೇಳಿಕೆಗಳನ್ನು ನೀಡುತ್ತಾ ಸಕ್ರಿಯರಾಗಿದ್ದಾರೆ. ಬಾರಿಯ ಲೋಕಸಭಾ ಚುನಾವಣೆಯು ಇಂತಹ ರಣರಂಗಕ್ಕೆ ಸಾಕ್ಷಿಯಾಗಿದೆ.

ಸ್ವಾಂತAತ್ರ್ಯಾ ನಂತರದ ಭಾರತದಲ್ಲಿ ವಿಶೇಷವಾಗಿ 1960 ರಿಂದ 1990 ಅವಧಿಯಲ್ಲಿ ರಾಜಕೀಯ ಸಂಘಟನೆಗಳು ಮತ್ತು ನಾಯಕರುಗಳ ಅಭಿವ್ಯಕ್ತಿಯ ಮಾಧ್ಯಮವಾಗಿ ಗೋಡೆ ಬರಹಗಳು ಚಾಲ್ತಿಯಲ್ಲಿದ್ದವು. ಚುನಾವಣೆಯ ಪ್ರಣಾಳಿಕೆಗಳಿಂದ ಹಿಡಿದು, ರಾಜಕೀಯ ಪಕ್ಷಗಳ ಸಿದ್ಧಾಂತ ಮತ್ತು ಅಭ್ಯರ್ಥಿಗಳ ಪರಿಚಯ ಇವೆಲ್ಲವೂ ಗೋಡೆ ಬರಹಗಳ ಮೂಲಕ ಸಾರ್ವಜನಿಕರಿಗೆ ಪರಿಚಯವಾಗುತ್ತಿದ್ದವು. ಭಾರತದಲ್ಲಿ ಗೋಡೆ ಬರಹಗಳ ಸಂಸ್ಕೃತಿಯನ್ನು ಚಾಲ್ತಿಗೆ ತಂದ ಕೀರ್ತಿಯು ಕಮ್ಯೂನಿಷ್ಟ್ ಪಕ್ಷಗಳಿಗೆ ಸಲ್ಲುತ್ತದೆ. ಆರಂಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಆನಂತರ ದಕ್ಷಿಣ ಭಾರತದ ತಮಿಳುನಾಡಿನಲ್ಲಿ ಸಂಸ್ಕೃತಿಯು ಅಸ್ತಿತ್ವಕ್ಕೆ ಬಂದಿತು. ತಮಿಳುನಾಡಿನಲ್ಲಿ ಪೆರಿಯಾರ್ ರಾಮಸ್ವಾಮಿ ಅವರು ಆರಂಭಿಸಿದ ದ್ರಾವಿಡ ಮುನ್ನೇತ್ರ ಕಳಗಂ ಸಂಘಟನೆಯು ಗೋಡೆ ಬರಹ ಸಂಸ್ಕೃತಿಯನ್ನು ತಮಿಳುನಾಡಿನಲ್ಲಿ ಸಂಘಟನೆಗಳ ಹೋರಾಟದ ಅಸ್ತçವನ್ನಾಗಿ ಪರಿಚಯಿಸಿತು.

ಆರಂಭದ ದಿನಗಳಲ್ಲಿ ಗೋಡೆಯ ಮೇಲೆ ಇದ್ದಲಿನಿಂದ ಆರಂಭವಾದ ಗೋಡೆ ಬರಹಗಳನ್ನು ನಂತರ ನೀಲಿ ಮತ್ತು ಕೆಂಪು ಬಣ್ಣದಿಂದ ಬರೆಯಲಾಗುತ್ತಿತ್ತುಗೋಡೆಯ ಬಣ್ಣಗಳು ಮಾರುಕಟ್ಟೆಗೆ ಪ್ರವೇಶಿಸಿದ ನಂತರ ನಾಯಕರ ಬಣ್ಣದ ಚಿತ್ರಗಳೊಂದಿಗೆ ಗೋಡೆಬರಹಗಳು ಪ್ರಸಿದ್ಧಿಯಾದವು. ಪಶ್ಚಿಮ ಬಂಗಾಳ ಮತ್ತು ಕೇರಳ ಸೇರಿದಂತೆ ಆಂಧ್ರಪ್ರದೆಶ ಹಾಗೂ ಇತರೆ ರಾಜ್ಯಗಳಲ್ಲಿ ಕಮ್ಯೂನಿಸ್ಟ್ ಸಂಘಟನೆಗಳ ಬರಹಗಳಲ್ಲಿ ತಾವು ನಂಬಿದ ತಾತ್ವಿಕ ಸಿದ್ಧಾಂತಗಳು ಬರಹಗಳಲ್ಲಿ ಎದ್ದು ಕಾಣುತ್ತಿದ್ದವುಪಶ್ಚಿಮ ಬಂಗಾಳದಲ್ಲಿ 1960 ರ ದಶಕದಲ್ಲಿ ನಕ್ಸಲ್ ಚಳುವಳಿಯನ್ನು ಹುಟ್ಟು ಹಾಕಿದ ಚಾರು ಮುಂಜುAದಾರ್ 1972 ಜುಲೈ ತಿಂಗಳಿನಲ್ಲಿ ಕೊಲ್ಕತ್ತ ನಗರದ ಲಾಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ನಡುರಾತ್ರಿ ಮರಣ ಹೊಂದಿದಾಗ, ಅದೇ ಕೊಲ್ಕತ್ತ ನಗರದ ಸೆರೆಮನೆಯಲ್ಲಿದ್ದ ಚಾರು ಮುಜಂದಾರ್ ಸಂಗಡಿಗರು ತಮ್ಮ ಮಿತ್ರನ ಸಾವಿನ ಸುದ್ದಿ ತಿಳಿದಾಗ ತಮ್ಮನ್ನು ಇರಿಸಲಾಗಿದ್ದ ಬಂಧಿಖಾನೆಯ ಕೊಠಡಿಯ ಗೋಡೆಯ ಮೇಲೆ ಇದ್ದಲಿನಿಂದ ಅವರು ಬರೆದಿದ್ದ ಕವಿತೆಯ ಸಾಲುಗಳಿವು.

 ಇಲ್ಲಿ ನಮ್ಮ ಸಹೋದರ/ ತಣ್ಣಗೆ ನಿದ್ರಿಸುತ್ತಿದ್ದಾನೆ/ ಭಾರವಾದ ಎದೆಯೊಳಗೆ, ಜೋಲು ಮೋರೆ ಹೊತ್ತು/ಅವನ ಬಳಿ ನಿಲ್ಲಬೇಡಎಲ್ಲರ ಮುಖದಲ್ಲಿನ/ ನಗುವಿಗಾಗಿ ಹಂಬಲಿಸಿ. ಪ್ರಾಣ ತೆತ್ತವನು ಅವನು./

ಹೂವಿನಿಂದ ಶರೀರವನ್ನು/ ಶೃಂಗರಿಸಬೇಡ ಗೆಳೆಯಾ/ ಹೂವಿಗೇಕೆ? ಹೋವಿನ ಅಲಂಕಾರ?/ ಸಾಧ್ಯವಾದರೆ ಎದೆಯೊಳಗೆ/ ಅವನನ್ನು ಹುಗಿದಿಟ್ಟಿಕೊ/ ನಿನ್ನ ಹೃದಯದ ಪಕ್ಷಿ/ ರಕ್ಕೆ ಬಿಚ್ಚಿ ಹಾರುವುದನ್ನ/ ಮಲಗಿರುವ ನಿನ್ನಾತ್ಮ. ಎಚ್ಚರವಾಗುವುದನ್ನು/ ನೀನು ಕಾಣುವೆ/

ಸಾಧ್ಯವಾದರೆ/ ಒಂದು ಹನಿ ಕಣ್ಣೀರು/ ಒಂದು ತೊಟ್ಟು ನೆತ್ತರನು/ ಇಲ್ಲಿ ಸುರಿಸು.

ಎಡಪಕ್ಷಗಳ ಘೊಷಣೆಗಳಲ್ಲಿ ಕಾವ್ಯಾತ್ಮಕ ಅಮಶಗಳ ಇಂತಹ ಗೋಡೆ ಬರಹಗಳನ್ನು ನಾವು ಕಾಣಬಹುದಾಗಿತ್ತು. 1977 ರಲ್ಲಿ ಕಾಂಗ್ರೇಸ್ ಪಕ್ಷದ ವತಿಯಿಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಸಿದ್ಧಾರ್ಥ ಶಂಕರ್ ರೇ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ಸಂದರ್ಭದಲ್ಲಿ ಕಮ್ಯೂನಿಷ್ಟ್ ಗೋಡೆ ಬರಹಗಳಲ್ಲಿ ಕಾಂಗ್ರೇಸ್ ಪಕ್ಷದ ಸಿದ್ಧಾಂತ ಮತ್ತು ಆಡಳಿತ ವೈಖರಿಯನ್ನು ಲೇವಡಿ ಮಾಡುವ ಬರಹಗಳು ಪ್ರಥಮಬಾರಿಗೆ ಕಂಡು ಬಂದವು. ಆನಂತರ ಅಧಿಕಾರಕ್ಕೆ ಬಂದ ಕಮ್ಯೂನಿಷ್ಟ್ ಪಕ್ಷವು ಸತತ ಮೂರೂವರೆ ದಶಕಗಳ ಕಾಲ ಆಡಳಿತ ನಡೆಸಿ ಕಮ್ಯೂನಿಸ್ಟ್ ಸರ್ಕಾರವು ಇಂತಹದ್ದೇ ಗೋಡೆಬರಹಗಳ ಮೂಲಕ ಪ್ರಸಿದ್ಧಿಗೆ ಬಂದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೇಸ್ ಪಕ್ಷಕ್ಕೆ  ಅಧಿಕಾರವನ್ನು ಒಪ್ಪಿಸಿತು.

ಭಾರತದಲ್ಲಿ ಆಧುನಿಕ ತಂತ್ರಜ್ಞಾನದ ಭರಾಟೆಯ ನಡುವೆಯೂ ಸಹ ಪಶ್ಚಿಮ ಬಂಗಾಳದಲ್ಲಿ ಮತ್ತು ತಮಿಳುನಾಡಿನಲ್ಲಿ  ವೈವಿಧ್ಯಮಯ ಗೋಡೆ ಬರಹಗಳಗಳನ್ನು ನಾವು ಇಂದಿಗೂ  ಕಾಣಬಹುದು. ಅವುಗಳನ್ನು ಸಾರ್ವಜನಿಕರು ರಸ್ತೆ ಬದಿಯಲ್ಲಿ ನಿಂತು ಆಸಕ್ತಿಯಿಂದ ಓದುತ್ತಾರೆ. ಇಂತಹ ಗೋಡೆ ಬರಹಗಳ ಮೂಲಕ  ನಾಯಕರಾಗಿ ಹೊರಹೊಮ್ಮಿದ ಅನೇಕ ಮಹನೀಯರನ್ನು ನಾವು ಭಾರತದ ರಾಜಕೀಯ ಇತಿಹಾಸದಲ್ಲಿ ಕಾಣಬಹುದಾಗಿದೆ. ಪಶ್ಚಿಮ ಬಂಗಾಳದ ಜ್ಯೂತಿ ಬಸು, ಕೇರಳದಲ್ಲಿ .ಎಸ್.ನಂಬೂದರಿಪಾಡ್, ತಮಿಳುನಾಡಿನಲ್ಲಿ  ಕೆ.ಕಾಮರಾಜ್, ಅಣ್ಣಾದೊರೈ, ಎಂ.ಕರುಣಾನಿಧಿ, ಎಂ.ಜಿ.ಆರ್ ಮತ್ತು ಜಯಲಿತಾ ಹೀಗೆ ಅನೇಕರನ್ನುಉದಾಹರಿಸಬಹುದು.


ಕರ್ನಾಟಕದಲ್ಲಿ ಗೋಡೆ ಬರಹ ಸಂಸ್ಕೃತಿಯು ಕಾರ್ಮಿಕ ಮತ್ತು ವಿದ್ಯಾರ್ಥಿ ಚಳುವಳಿಗಳ ಮೂಲಕ ಬಹುತೇಕ ನಗರಗಳಲ್ಲಿ ಹಲವಾರು ವರ್ಷಗಳ ಕಾಲ ಅಸ್ತಿತ್ವದಲ್ಲಿತ್ತು. ಬೆಂಗಳೂರು ನಗರದಲ್ಲಿ ಕೆಂಪೇಗೌಡ ರಸ್ತೆ, ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳ ಸುತ್ತಮುತ್ತಲಿನ ಕಾಂಪೌAಡ್ ಗೋಡೆಗಳ ಮೇಲೆ ನೀಲಿ ಮತ್ತು ಕೆಂಪು ಬಣ್ಣದಲ್ಲಿ ಬರೆಯುತ್ತಿದ್ದ ಪ್ರತಿಭಟನಾ ಕಾರ್ಯಕ್ರಮದ ವಿವರ ಮತ್ತು ದಿನಾಂಕ ಇವುಗಳು ಒಂದು ರೀತಿಯಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ನಗರಕ್ಕೆ ಬರುತ್ತಿದ್ದ ಜನತೆಗೆ ಸುದ್ದಿ ಮುಟ್ಟಿಸಲು ನೆರವಾಗುತ್ತಿದ್ದವು. ಸಂದರ್ಭದಲ್ಲಿ ಶಿವಕಾಶಿಯಿಂದ ಮುದ್ರಣವಾಗಿ ಬರುತ್ತಿದ್ದ ಸಿನಿಮಾ ಪೋಸ್ಟರ್ ಗಳು ಅತಿ ಸಣ್ಣ ಆಕಾರದಲ್ಲಿ ಇರುತ್ತಿದ್ದ ಕಾರಣ ಬೆಂಗಳೂರು ಹಾಗೂ  ರಾಜ್ಯದ ಇತರೆ ನಗರದ ಗೋಡೆಗಳಲ್ಲಿ ಸಿನಿಮಾ ಪೋಸ್ಟರ್ ಗಳ ಜೊತೆಗೆ ಗೋಡೆ ಬರಹಗಳಿಗೂ ಸಹ ಸ್ಥಳ ಇರುತ್ತಿತ್ತು.

ಸಿನಿಮಾ ಪೊಸ್ಟರ್ ಅಂಟಿಸುವವರು ವಾರಕ್ಕೊಮ್ಮೆ  ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದರು. ರಾತ್ರಿ ಹನ್ನೊಂದು ಗಂಟೆಗೆ ಬೆಂಗಳೂರಿನ ಗಾಂಧಿನಗರದ ಮೂವಿಲ್ಯಾಂಡ್ ಥಿಯಟರ್ ಬಳಿಯಿಂದ ಸೈಕಲ್ ನ ಹ್ಯಾಂಡಲ್ ಗೆ ಮೈದಾ ಹಿಟ್ಟಿನಿಂದ ತಯಾರಿಸಿದ ಪೇಸ್ಟ್ ಅನ್ನು ಡಬ್ಬದಲ್ಲಿ ಹಾಕಿಕೊಂಡು, ಕ್ಯಾರಿಯರ್ ನಲ್ಲಿ ಸಿನಿಮಾ ಪೋಸ್ಟರ್ ಗಳು ಮತ್ತು ಹೆಗಲಿಗೆ ನೇತುಹಾಕಿಕೊಂಡ ಐದು ಅಥವಾ ಆರು ಅಡಿ ಉದ್ದದ  ಏಣಿಯ ಜೊತೆ ಹೊರಟರೆ, ಬೆಳಿಗ್ಗೆ ಆರು ಗಂಟೆಯವರೆಗ ಬೆಂಗಳೂರಿಗೆ ಹೊರ ಊರುಗಳಿಂದ ಮಾರ್ಗ ಕಲ್ಪಿಸಿರುವ ತಮಕೂರು ರಸ್ತೆ, ಮೈಸೂರು ರಸ್ತೆ, ಹಳೆ ಮದ್ರಾಸ್ ರಸ್ತೆ, ಬಳ್ಳಾರಿ ರಸ್ತೆಯ ಮುಖ್ಯ ಬಡಾವಣೆಗಳಲ್ಲಿ ಮತ್ತು ಸಿನಿಮಾ ಪ್ರದರ್ಶನ ಕಾಣುವ ಠಿಯಟರ್ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಪೋಸ್ಟರ್ ಅಂಟಿಸಿ ಬರುತ್ತಿದ್ದರು.

ಸಿನಿಮಾ ಕಾರ್ಮಿಕರದು ಹೊಟ್ಟೆ ಪಾಡಿನ ಕ್ರಿಯೆಯಾದರೆ, ಕಾರ್ಮಿಕ ಮತ್ತು ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರದು ಮತ್ತು ನಾಯಕರದು ಸಂಘಟನೆಯನ್ನು ಕಟ್ಟುವ ನಿಟ್ಟಿನಲ್ಲಿ ತಮ್ಮ ಮೈ ಮತ್ತು ಮನಗಳನ್ನು ತೆತ್ತುಕೊಳ್ಳುವ ಕ್ರಿಯೆಯಾಗಿತ್ತು. ಇವರೂ ಸಹ ರಾತ್ರಿಯ ವೇಳೆಯಲ್ಲಿ ಒಂದು ಡಬ್ಬದಲ್ಲಿ ಬಿಳಿಯ ಬಣ್ಣ ಮತ್ತು ಬ್ರಶ್ ಹಾಗೂ ಮತ್ತೊಂದು ಸಣ್ಣನೆಯ ಡಬ್ಬದಲ್ಲಿ ಕೆಂಪು ಅಥವಾ ನೀಲಿ ಬಣ್ಣ ಹಾಗೂ ಅಕ್ಷರ ಬರೆಯಲು ಸಣ್ಣನೆಯ ಬ್ರಶ್ ಹಿಡಿದು ಹೊರಟರೆ, ಇಡೀ ರಾತ್ರಿ ಕಾಂಪೌAಡ್ ಗಳನ್ನು ತಮ್ಮ ಘೋಷಣೆಗಳ ಮೂಲಕ ತುಂಬಿಸಿ ಬರುತ್ತಿದ್ದರು. ದುಂಡನೆಯ ಅಕ್ಷರಗಳನ್ನು ಬರೆಯಬಲ್ಲ ಕಾರ್ಯಕರ್ತರು ಪ್ರತಿಯೊಂದು ಸಂಘಟನೆಯಲ್ಲೂ ಇರುತ್ತಿದ್ದರು.



ನೆರೆಯ ಆಂಧ್ರದಲ್ಲಿ ನಕ್ಸಲ್ ಚಳುವಳಿಯ ಕೇಂಧ್ರ ಬಿಂದುವಾದ ಪೀಪಲ್ಸ್ ವಾರ್ ಗ್ರೂಪ್ ಅಥವಾ ಪ್ರಜಾ ಸಮರಂ ಸಂಘಟನೆಯ ಬರಹಗಳು ಅಲ್ಲಿನ ಬಹುತೇಕ ನಗರ ಮತ್ತು ಪಟ್ಟಣಗಳಲ್ಲಿ  ಸಾಮಾಜಿಕ ಬದುಕಿನ ಅವಿಭಾಜ್ಯ ಅಂಗವಾಗಿದ್ದವು. ಕೇರಳದಲ್ಲಿಯೂ ಸಹ ಎಡಪಂಥಿಯ ಸಂUಘಟನೆಗಳ ಹೋರಾಟದ ಬರಹಗಳು, ಘೋಷಣೆ ಮತ್ತು ಕೆಂಪು ಭಾವುಟ ಇವೆಲ್ಲವೂ ಅಲ್ಲಿನ ರಾಜಕೀಯ ಮತ್ತು ಸಾಮಾಜಿಕ ಬದುಕಿನ ಭಾಗವಾಗಿದ್ದವು. 1990 ನಂತರ ಸಿನಿಮಾ ಪೋಸ್ಟರ್ ಗಳಲ್ಲಿ ವಿಶೇಷ ಕ್ರಾಂತಿಯುAಟಾಯಿತು. ಕೇವಲ ಮೂರು ಅಡಿ ಎತ್ತರ ಹಾಗೂ ಐದು ಅಡಿ ಉದ್ದವಿದ್ದ ಪೋಸ್ಟರ್ ಗಳು ಹತ್ತು ಅಡಿ ಎತ್ತರ, ಇಪ್ಪತ್ತು ಅಡಿ ಉದ್ದದ ವಿಸ್ತಾರಕ್ಕೆ ಬೆಳೆದವು. ಇದರ ಜೊತೆಗೆ ಸಿನಿಮಾ ಪೊಸ್ಟರ್ ಗಳಲ್ಲಿ ಪ್ರೇಕ್ಷರನ್ನು ಸೆಳೆಯುವ ನಿಟ್ಟಿನಲ್ಲಿ ಕಾಲದ ಕ್ಯಾಬರೆ ನೃತ್ಯ ತಾರೆಯರಾದ ಜ್ಯೋತಿಲಕ್ಷಿö್ಮ, ಸಿಲ್ಕ್ ಸ್ಮಿತಾ, ಜಯಮಾಲಿನಿ  ಇವರುಗಳ ತುಂಬಿದ ಎದೆ ಮತ್ತು ತೊಡೆಗಳ ಚಿತ್ರವನ್ನು ಪೋಸ್ಟರ್ ತುಂಬಾ ಪ್ರಿಂಟ್ ಹಾಕಿಸುವ ಹವ್ಯಾಸವನ್ನು ಚಿತ್ರ ನಿರ್ಮಾಪಕರು ಬೆಳೆಸಿಕೊಂಡರು. ಇದು ಅಂತಿಮವಾಗಿ ಮಹಾನಗರ ಪಾಲಿಕೆಗಳ ಕೆಂಗಣ್ಣಿಗೆ ಗುರಿಯಾಗಿ ನಗರದ ಸೌಂದರ್ಯಕ್ಕೆ ಅಡ್ಡಿಯುಂಟು ಮಾಡುವ ಸಿನಿಮಾ ಪೋಸ್ಟರ್ಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಅಂಟಿಸುವುದಕ್ಕೆ ನಿಷೇಧ ಹೇರಿದರು. ಜೊತೆಗೆ ಬಹುತೇಕ ಕಟ್ಟಡ ಮಾಲೀಕರು ಸಹ ಗೋಡೆ ಬರಹಗಳು ಮತ್ತು ಪೋಸ್ಟರ್ ಗಳಿಗೆ ಅವಕಾಶ ನೀಡುವುದನ್ನು ನಿಲ್ಲಿಸಿದರು.

ಗೋಡೆ ಬರಹದ ಸಂಸ್ಕೃತಿಯು ನಿಧಾನವಾಗಿ ನಶಿಸುತ್ತಾ ಬಂದರೂ ಸಹ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಅಲ್ಲಿನ ಜನರ ಅಭಿರುಚಿಗೆ ತಕ್ಕಂತೆ ಹೊಸ ರೂಪವನ್ನು ತಾಳುತ್ತಾ ಬಂದಿದೆ. ಖ್ಯಾತ ಚಿತ್ರ ಕಲಾವಿದರು ಗೋಡೆಯ ಮೇಲೆ ಚಿತ್ರಿಸುವ ಕರುಣಾ ನಿಧಿ, ಜಯಲಿತಾ, ಅಣ್ಣಾದೊರೈ, ಎಂ.ಜಿ.ಆರ್ ಚಿತ್ರಗಳು ತಮಿಳುನಾಡಿನಲ್ಲಿ ಹಾಗೂ  ಮಮತಾ ಬ್ಯಾನರ್ಜಿ ಅವರ ಚಿತ್ರಗಳು ಪಶ್ಚಿಮ ಬಂಗಾಳದಲ್ಲಿ ಇಂದಿಗೂ ಅಸ್ತಿತ್ವದಲ್ಲಿವೆ. ಇವುಗಳ ಜೊತೆಗೆ ಇತ್ತೀಚೆಗಿನ ದಿನಗಳಲ್ಲಿ ವ್ಯಂಗ್ಯ ಚಿತ್ರಗಳು ಹಾಗೂ ರಾಜಕೀಯ ಪಕ್ಷಗಳ ಧೋರಣೆಗಳನ್ನು ಗೇಲಿ ಮಾಡುವ ಬರಹಗಳು ಸಹ ಪ್ರಾಮುಖ್ಯತೆ ಪಡೆದಿವೆ.

ಹೋರಾಟದ ಭಾಗವಾಗಿ ಸೃಷ್ಟಿಯಾದ ಗೋಡೆ ಬರಹದ ಸಂಸ್ಕೃತಿಯು ಇಡೀ ದೇಶಾದ್ಯಂತ ಸ್ಥಳಿಯ ಸಂಸ್ಥೆಗಳಾದ ಪುರಸಭೆನಗರ ಸಭೆಯ ಸದಸ್ಯನಿಂದ ಹಿಡಿದು, ರಾಜ್ಯ ವಿಧಾನಸಭೆ ಮತ್ತು ಕೇಂದ್ರದ ಪಾರ್ಲಿಮೆಂಟ್ ಜನಪ್ರತಿನಿಗಳನ್ನು ಸೃಷ್ಟಿಸುವುದರ ಜೊತೆಗೆ ರಾಜ್ಯ ಮತ್ತು ರಾಷ್ಟç ಮಟ್ಟದ ನಾಯಕರನ್ನು ಹುಟ್ಟಿ ಹಾಕಿರುವುದನ್ನು ನಾವು ಮರೆಯಲಾಗದು.

(  ಮೇ ತಿಂಗಳ ಸಮಾಜಮುಖಿ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಜಗದೀಶ್ ಕೊಪ್ಪ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ