ಏಕೆಂದರೆ, ನಮ್ಮ ಕಾಲದ ಗ್ರಾಮೀಣ ಪ್ರದೇಶದಲ್ಲಿ ಹೆರಿಗೆಯ ಸಮಯದಲ್ಲಿ ತಾಯಿಯ ಹೊಟ್ಟೆಯಿಂದ ಹೊರಬಂದ ಮಗುವನ್ನು ಮೊದಲು ಮೊರದಲ್ಲಿ ಮಲಗಿಸುತ್ತಿದ್ದರು. ನಂತರ ಬಿದಿರಿನ ತೊಟ್ಟಿಲಲ್ಲಿ ಮಲಗಿ ಬೆಳೆಯುತ್ತಿದ್ದೆವು. ವೃದ್ಧಾಪ್ಯದಲ್ಲಿ ನನ್ನ ಅಪ್ಪಂದಿರ ಜೀವಕ್ಕೆ ಆಸರೆಯಾದ್ದು ಕೂಡಾ ಇದೇ ಬಿದಿರಿನ ಕೋಲು.
ಈ ಕಾರಣದಿಂದ ನಮ್ಮ ಸಂಸ್ಕೃತಿಯಲ್ಲಿ ಬಿದಿರು ಮತ್ತು ಮೊರಕ್ಕೆ ವಿಶಿಷ್ಠ ಸ್ಥಾನವಿದೆ. ಗೌರಿ ಹಬ್ಬದ ದಿನ ನನ್ನೂರಿನ ಬ್ರಾಹ್ಮಣರ ಮನೆಗಳಲ್ಲಿ ಮೊರದಲ್ಲಿ ಗೌರಿಯ ಮೂರ್ತಿ, ಹಣ್ಣು,ಹಂಪಲು, ಹೂ ಹೀಗೆ ಅನೇಕ ವಸ್ತುಗಳನ್ನು ಇಟ್ಟು ಪೂಜೆ ಮಾಡುತ್ತಿದ್ದರು. ನಮ್ಮ ಮನೆಗಳಲ್ಲಿ ಅಂದಿಗೂ ಮತ್ತು ಇಂದಿಗೂ ಗೌರಿ ಅಥವಾ ಗಣೇಶನ ಹಬ್ಬ ಆಚರಿಸುವುದಿಲ್ಲ. ಹಾಗಾಗಿ ಗೌರಿ ಹಬ್ಬದಲ್ಲಿ ಮೊರ ಬಳಕೆಯಾಗುವುದು ಮಾತ್ರ ಗೊತ್ತು.
ನಮ್ಮ ರೈತರ ಮನೆಗಳಲ್ಲಿ ಮೊರ ಎಂಬುದು, ನೇಗಿಲು, ಗುದ್ದಲಿಯಷ್ಟೇ ಅವಿಭಾಜ್ಯ ಅಂಗ. ನಮ್ಮ ಅಪ್ಪಂದಿರಗೆ ನೇಗಿಲು ಉಳುಮೆಯ ಸಾಧನವಾದರೆ, ಅವ್ವಂದರಿಗೆ, ರಾಗಿ, ಅಕ್ಕಿ, ನಮ್ಮ ಹೊಲಗಳಲ್ಲಿ ಬೆಳೆಯುತ್ತಿದ್ದ ಹುರುಳಿ, ಅವರೆ, ಹಲಸಂದೆ, ಮುಂತಾದ ದ್ವಿದಳ ದಾನ್ಯಗಳನ್ನು ಸ್ವಚ್ಚ ಮಾಡುತ್ತಿದ್ದ ಅವರ ಪಾಲಿನ ಅವಿಭಾಜ್ಯ ಅಂಗವಾಗಿತ್ತು.
ಗೌರಿ ಹಬ್ಬವಾದ ನಂತರ ನಮ್ಮ ರೈತರ ಮನೆಗಳಲ್ಲಿ ಶಿವನ ಹಬ್ಬ ಆಚರಿಸಲಾಗುತ್ತಿತ್ತು. ಮಣ್ಣಿನ ಗೋಡೆಯ ಮೇಲೆ ನನ್ನಪ್ಪ ವಿಭೂತಿ ಉಂಡೆಯಿಂ.ದ ನೇಗಿಲು, ಗುದ್ದಲಿ ಚಿತ್ರಗಳನ್ನು ಬರೆದು, ನೆಲದ ಮೇಲೆ ಮಣೆಯನ್ನು ಅಥವಾ ಹಲಗೆ ಇಟ್ಟು ಅದರ ಮೇಲೆ ಶುದ್ಧ ಬಿಳಿಯ ಪಂಚೆ ಹಾಗೂ ಕೆರೆಯ ನೀರನ್ನು ತಂದಿರುವ ಹಾಗೂ ತುಳಸಿ ಸೊಪ್ಪು ಮತ್ತು ಹೂವಿನಂದ ಶೃಂಗರಿಸಿದ ಕಳಸಕ್ಕೆ ಪೂಜೆ ಮಾಡುತ್ತಿದ್ದರು.
ಆ ದಿನ ಮನೆಯಲ್ಲಿ ಅಕ್ಕಿಯ ಶಾವಿಗೆ, ಬೆಲ್ಲದ ಪಾಯಸ ಮತ್ತು ರಾಗಿ ಶ್ಯಾವಿಗೆ ಹಾಗೂ ಮೊಳಕೆ ಬಂದ ಹುರುಳಿಕಾಳಿನ ಮಸಾಲೆ ಸಾರು ನಮ್ಮ ಪಾಲಿಗೆ ಹಬ್ಬದೂಟವಾಗಿತ್ತು.
ಈ ಕಾರಣದಿಂದ ಹತ್ತೊಂಬತ್ತನೇ ಶತಮಾನದ 1870 ರ ಆಸುಪಾಸಿನಲ್ಲಿ ಜನಸಿದ ಖ್ಯಾತ ತ್ವತ್ವಪದಕಾರ ಶಿಶುನಾಳ ಷರೀಪಜ್ಜ ಬರೆದ
ಬಿದಿರು ನಾನಾರಿಗಲ್ಲದವಳು ಎಂಬ ಪದ ಇಂದಿಗೂ ನನ್ನ ಪಾಲಿಗೆ ಮಹಾ ಕಾವ್ಯವಾಗಿದೆ.
ಹುಟ್ಟುತ್ತಾ ಸಸಿಯಾದೆ
ಬೆಳೆಯುತ್ತಾ ಮರವಾದೆ
ಸುಂದರ ಸ್ರೀಯರಿಗೆ ಕೇರುವ ಮರವಾದೆ
ಪಲ್ಲಕ್ಕಿಗೆ ದಂಡಗೆಯಾದೆ
ಪತ್ರೆಗೆ ಬುಟ್ಟಿಯಾದೆ
ದೊಡ್ಡ ಮಠದೊಳಗೆ ಕಜ್ಜಾಯದ ಬುಟ್ಟಿಯಾದೆ.
ಆಡುವ ಹುಡುಗನ ಕೈಯಲ್ಲಿ
ಊದುವ ಕೊಳಲಾದೆ.
ಮುದಿಕೆಗೆ ಬಡಿಗೆಯಾದೆ, ಮತ್ಯಾಗೆ ಕೋಲಾದೆ
ನನಗೆ ನೆನಪಿರುವ ಹಾಗೆ, ಹೀಗೆ ಸಾಗುವ ಶಿಶುನಾಳರ ಪದದಲ್ಲಿ ಒಂದು ಬಿದಿರು, ಬಿಸಿಲಿಗೆ ಚಪ್ಪರವಾಗುವ ಕಂಬವಾಗಿ, ಕೊಳಲಿಗೆ, ಪಲ್ಲಕ್ಕಿಗೆ, ಮಂಟಪಕ್ಕೆ ಹೀಗೆ ಗ್ರಾಮೀಣ ಬದುಕಿನ ಜನರ ಪಾಲಿಗೆ ಅವಿಭಾಜ್ಯ ಅಂಗವಾಗಿ, ಅಂತಿಮವಾಗಿ ಮನುಷ್ಯನ ಅಂತಿಮ ಯಾತ್ರೆಗೆ ಚಟ್ಟವಾಗಿ ಬಳಕೆಯಾಗುವ ಪರಿಯನ್ನು ಬಣ್ಣಿಸಿರುವ ಪರಿಯನ್ನು ಓದುವಾಗ ಅಥವಾ ಕೇಳುವಾಗ ಇಂದಿಗೂ ರೋಮಾಂಚನವಾಗುತ್ತದೆ.
ಒಂದು ಗ್ರಾಮೀಣ ಸಂಸ್ಕೃತಿ ಸಾಶವಾಗುವುದರ ಜೊತೆಗೆ, ಅದರೊಂದಿಗೆ ಬೆಸೆದುಕೊಂಡಿದ್ದ ಇಂತಹ ಮಹತ್ತರ ಪದಗಳು ಇಂದಿನ ತಲೆಮಾರಿಗೆ ಕೇವಲ ಮನರಂಜನೆಯ ಹಾಡಾಗಬಲ್ಲವು ಅಷ್ಟೆ.
ಏಕೆಂದರೆ, ಈಗ ಮಕ್ಕಳು ಹುಟ್ಟುವುದು ಮನೆಯಲ್ಲಿ ಅಲ್ಲ, ಹೆರಿಗೆ ಆಸ್ಪತ್ರೆಯಲ್ಲಿ. ಅಲ್ಲಿ ಶುದ್ಧವಾದ ಬಟ್ಟೆಯಿಂದ ಪ್ಯಾಕ್ ಮಾಡಿ ಮಕ್ಕಳನ್ನು ತಂದೆ ತಾಯಿಗಳಿಗೆ ಒಪ್ಪಿಸುತ್ತಾರೆ. ನಂತರ ಮನೆಯಲ್ಲಿ ಬೆಳೆಯುವುದು ಮಡಚಬಹುದಾದ ಪ್ಲಾಸ್ಟಿಕ್ ತೊಟ್ಟಿಲುಗಳಲ್ಲಿ. ಇಂದಿನ ದಿನಗಳಲ್ಲಿ ಶವಸಂಸ್ಕಾರ ಅಥವಾ ಅಂತಿಮ ಯಾತ್ರೆಗೆ ಬಿದಿರಿನ ಚಟ್ಟ ಬಳಸುವುದು ತೀರಾ ಕಡಿಮೆ.
ನಗರಗಳಲ್ಲಿ ಶವಸಂಸ್ಕಾರದ ವಾಹನಗಳು ಬಂದಿದ್ದರೆ, ಹಳ್ಳಿಗಳಲ್ಲಿ ಸ್ಟೀಲ್ ಚಟ್ಟಗಳು ಬಂದಿವೆ. ಹಾಗಾಗಿ ಗ್ರಾಮೀಣ ಬದುಕಿನ ಸಂಸ್ಕೃತಿಯ ಸೂಕ್ಷ್ಮತೆ ನಿಧಾನವಾಗಿ ಮರೆಯಾಗುತ್ತಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ