ಕಲ್ಕುಳಿ ವಿಠಲ ಹೆಗ್ಗಡೆಯವರು ಶೃಂಗೇರಿಯಲ್ಲಿ ಕಳೆದ ಐವತ್ತು ವರ್ಷಗಳಿಂದ ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡು, ಅಲ್ಲಿನ ಆದಿವಾಸಿಗಳು, ದಲಿತರು ಮತ್ತು ಪರಿಸರ ರಕ್ಷಣೆಗಾಗಿ ಇಡೀ ಬದುಕನ್ನು ತಮ್ಮ ವೃತ್ತಿ ಎಂಬಂತೆ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಇಡೀ ಮಲೆನಾಡಿನ ಸಾಂಸ್ಕೃತಿಕ ಬದುಕನ್ನು ದಾಖಲಿಸುತ್ತಾ ಬಂದಿದ್ದಾರೆ. ಇವರು ಶೃಂಗೇರಿಯ ಶಾರದಾ ಪೀಠದ ಬಗ್ಗೆ ಹಾಗೂ ಅದರ ಇತಿಹಾಸ ಕುರಿತಂತೆ ಅಧಿಕೃತವಾಗಿ ಮಾತನಾಡಬಲ್ಲವರು. ಅದೇ ರೀತಿಯಲ್ಲಿ ಮಠದ ಎಲ್ಲಾ ಅವಾಂತರಗಳನ್ನು ಬಯಲಿಗೆಳೆದವರು.
ಹದಿವಾಲ್ಕು ವರ್ಷಗಳ ಹಿಂದೆ ಅಂದರೆ, 2012 ರಲ್ಲಿ ಇವರು ಬರೆದ ಮಂಗನ ಬ್ಯಾಟೆ ಎಂಬ ಕೃತಿಯಲ್ಲಿ ದಾಖಲಿಸಿರುವ ಅಲ್ಲಿನ ಗ್ರಾಮೀಣ ಪರಿಸರದ ಕಥೆಯನ್ನು ಕುವೆಂಪು ಮತ್ತು ತೇಜಸ್ವಿಯವರು ಬರೆದ ಮಲೆನಾಡಿನ ಬದುಕಿನ ಮುಂದುವರೆದ ಭಾಗ ಎನ್ನಬಹುದು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಈ ಕೃತಿ ಈಗಾಗಲೇ ನಾಲ್ಕು ಮುದ್ರಣ ಕಂಡಿದೆ. ಈ ಕೃತಿಯು ವಾಸ್ತವವಾಗಿ ಕಲ್ಕುಳಿಯವರ ಮೊದಲ ಕೃತಿ ಕೂಡಾ ಹೌದು.
ಕುದುರೆಮುಖ ಗಣಿಗಾರಿಕೆಗೆ ಅಲ್ಲಿನ ಮೂಲನಿವಾಸಿಗಳನ್ನು ಸರ್ಕಾರ ಒಕ್ಕಲೆಬ್ಬಿಸಲು ಹೊರಟಾಗ,, ಕಲ್ಕುಳಿ ವಿಠಲ ಹೆಗ್ಗಡೆಯವರು ಹೋರಾಟ ಆರಂಭಿಸಿದರು. ತುಂಗಾ ನದಿ ಮೂಲ ಉಳಿಸಿ ಎಂಬ ಚಳುವಳಿಯ ಮೂಲಕ ಇಡೀ ರಾಜ್ಯದ ಪ್ರಗತಿಪರರನ್ನು ಮಲೆನಾಡಿಗೆ ಆಹ್ವಾನಿಸಿ ಅಲ್ಲಿನ ಪರಿಸರದ ದುರಂತ ಕಥೆಯನ್ನು ಪರಿಚಯಿಸಿ, ಹೋರಾಟದ ಮೂಲಕ ಜೈಲಿಗೂ ಹೋಗಿ ಬಂದರು.
ನಕ್ಸಲ್ ಚಳಿವಳಿಯ ಬೆಂಬಲಿಗ ಎಂದು ಕೆಲವು ಪತ್ರಿಕೆಗಳು ಇವರ ಬಗ್ಗೆ ಬರೆದಾಗ, ಎಲ್ಲಾ ಪತ್ರಿಕೆಗಳ ವಿರುದ್ಧ ಮಾನನಷ್ಠ ಮೊಕದ್ದಮೆ ಹೂಡಿ, ಅವುಗಳಿಂದ ನ್ಯಾಯಾಲಯದಲ್ಲಿ ಬಹಿರಂಗ ಕ್ಷಮೆ ಯಾಚಿಸುವಂತೆ ಮಾಡಿದ ದಿಟ್ಟ ಹೋರಾಟಗಾರರಾದ ಕಲ್ಕಳಿಯವರ ಬಳಿ ಮಲೆನಾಡಿನ ಮಳೆ ಕುರಿತಂತೆ ನೂರು ವರ್ಷದ ಅಧಿಕೃತ ದಾಖಲೆಯಿದೆ. ಪರಿಸರದ ಹಾನಿಯಿಂದ ಮಳೆಯ ಪ್ರಮಾಣದಲ್ಲಿ ಆಗಿರುವ ಏರಿಳಿತ ಕುರಿತ ಮಾಹಿತಿಗಳು ಇವರ ನಾಲಿಗೆಯ ಮೇಲಿವೆ.
ಹತ್ತು ವರ್ಷಗಳ ಹಿಂದೆ, ಶೃಂಗೇರಿಯ ಇವರ ಮನೆಗೆ ಹೋಗಿದ್ದಾಗ, ಮಳೆನಾಡು ಸಂಕಥನ ಹೆಸರಿನಲ್ಲಿ ಮಲೆನಾಡಿನ ಮಳೆ ಮತ್ತು ಅದರೊಂದಿಗೆ ಮಿಳಿತಗೊಂಡಿರುವ ಅಲ್ಲಿನ ಜೀವನ, ಆಹಾರ ಸಂಸ್ಕೃತಿ, ಕೃಷಿ ಚಟುವಟಿಕೆ, ಹಬ್ಬ ಹರಿದಿನ, ಜಾನುವಾರು, ಸಸ್ಯಸಂಕುಲ, ಪ್ರಾಣಿ, ಪಕ್ಷಿಗಳ ಹೀಗೆ ದಾಖಲಿಸಿರುವ ವೈವಧ್ಯಮಯ ಕಥನವನ್ನು ನನಗೆ ತೋರಿಸಿದರು. ಅವರ ಮನೆಯಲ್ಲಿದ್ದುಕೊಂಡು ಇಡೀ ಕೃತಿಯನ್ನು ಓದಿ, ನಾನು ವಿಸ್ಮಗೊಂಡೆ.
ಗುರುವೇ ಈ ಕೃತಿಯನ್ನು ಸಧ್ಯಕ್ಕೆ ಪ್ರಕಟಿಸುವುದು ಬೇಡ, ಇದನ್ನು ಹಂಪಿ ಕನ್ನಡ ವಿ.ವಿ.ಗೆ ಡಿ.ಲಿಟ್ ಅಧ್ಯಯನಕ್ಕೆ ಸಲ್ಲಿಸೋಣ ಎಂದು ಹೇಳಿದೆ. ಅದರಂತೆ, ವಿಠಲ ಹೆಗ್ಗಡೆಯವರು ಕನ್ನಡ ವಿ.ವಿ.ಯಲ್ಲಿ ಅಧ್ಯಯನ ಮಾಡಿ, ಪ್ರಬಂಧಕ್ಕೆ ಶಾಸ್ತ್ರೀಯ ವಿಧಾನವನ್ನು ಅಳವಡಿಸಿ, ಮೂರು ವರ್ಷಗಳ ನಂತರ ಡಾಕ್ಟರೇಟ್ ಪದವಿ ಪಡೆದರು.
ಇದೀಗ ಮಳೆನಾಡು ಸಂಕಥನ ಮುದ್ರಣಕ್ಕೆ ಸಿದ್ಧವಾಗಿ, ಸಧ್ಯದಲ್ಲೇ ಬಿಡುಗಡೆಯಾಗಲಿದೆ. ಯಾವುದೇ ಪ್ರಚಾರ, ಪ್ರಸಿದ್ಧಿಗೆ ಹಂಬಲಿಸದ ಕಲ್ಕುಳಿಯವರ ಈ ಕೃತಿ ಹೊರ ಬರಲೇಬೇಕು ಎಂಬುದು ನನ್ನ ಮಹದಾಸೆ. ಮಂಗನ ಬ್ಯಾಟೆ ಮತ್ತು ಮಳೆನಾಡು ಈ ಎರಡೂ ಕೃತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅತ್ಯಂತ ಮಹತ್ವದ ಕೃತಿಗಳು.
ನಮ್ಮ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮತ್ತು ಸರ್ಕಾರಕ್ಕೆ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಇಂತಹ ದೈತ್ಯ ಪ್ರತಿಭೆಗಳು ನೆನಪಾಗುವುದಿಲ್ಲ.
ಕಲ್ಕುಳಿಯವರ ಪತ್ನಿಯವರು ಇಡೀ ಕುಟುಂಬದ ಕೃಷಿ ವ್ಯವಹಾರ ನೋಡಿಕೊಳ್ಳುವುದರಿಂದ, ಇವರು ಇಂದಿಗೂ ಸಾಮಾಜಿಕ ಹೋರಾಟ ಮತ್ತು ಇಂದಿನ ಸಂಘಪರಿವಾರ ಹಿಂದೂ ಧರ್ಮದ ಹೆಸರಿನಲ್ಲಿ ನಡೆಸುತ್ತಿರುವ ಪುಂಡಾಟಗಳ ವಿರುದ್ಧ ಎಪ್ಪತ್ತರ ವಯಸ್ಸಿನಲ್ಲಿಯೂ ಧ್ವನಿ ಎತ್ತಿ ಮಾತನಾಡುತ್ತಾರೆ ಮತ್ತು ಹೊಸ ಪೀಳಿಗೆಯನ್ನು ಬೆಳೆಸುತ್ತಿದ್ದಾರೆ.
ಎಪ್ಪತ್ತೊಂಬತ್ತು ವರ್ಷ ವಯಸ್ಸಿನ ಕಡಿದಾಳು ದಯಾನಂದ್ ಅವರನ್ನು ನಾನು ಅಣ್ಣಾ ಎಂದೇ ಕರೆಯುವುದು ವಾಡಿಕೆ. ಅವರ ನೆನಪಿನ ಕಣಜದಲ್ಲಿ ಅಪಾರವಾದ ನೆನಪುಗಳಿವೆ. 1960 ರ ದಶಕದಲ್ಲಿ ಪ್ರೌಢ ಶಾಲೆಯ ಶಿಕ್ಷಣ ಮುಗಿಸಿ, ಅಣ್ಣ ಶಾಮಣ್ಣನವರ ಜೊತೆ ಕಾಲೇಜು ಶಿಕ್ಷಣಕ್ಕಾಗಿ ಮೈಸೂರಿಗೆ ಬಂದು ಕುವೆಂಪು ಅವರ ಸಾನಿಧ್ಯದಲ್ಲಿ ದಯಾನಂದ್ ಅಣ್ಣಾ ಬೆಳೆದಿದ್ದಾರೆ.
ತೇಜಸ್ವಿ ಮತ್ತು ಕಡಿದಾಳು ಶಾಮಣ್ಣ ಇಬ್ಬರೂ ಸೇರಿಕೊಂಡು, ಮೈಸೂರಿನಲ್ಲಿ ನೃಪತುಂಗ ಹೆಸರಿನ ಮುದ್ರಣಾಲಯ ಆರಂಭಿದಾಗ, ಅಲ್ಲಿ ಅಕ್ಷರದ ಮೊಳೆ ಜೋಡಿಸುತ್ತಾ, ಪ್ರೂಫ್ ತಿದ್ದುತ್ತಾ, ಅಲ್ಲಿಗೆ ಬರುತ್ತಿದ್ದ ನಾಡಿನ ಎಲ್ಲಾ ಪ್ರಸಿದ್ಧ ಲೇಖಕರ ಮಾತು ಕೇಳುತ್ತಾ, ಮುದ್ರಣವಾಗುತ್ತಿದ್ದ ಅವರ ಕೃತಿಗಳನ್ನು ಓದುತ್ತಾ ದಯಾನಂದ್ ಅಣ್ಣಾ ಬೆಳೆದವರು.
ಶಾಮಣ್ಣನವರ ಜೊತೆ ವಾಪಸ್ ಹಳ್ಳಿಗೆ ಬಂದು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು, ಮಲೆನಾಡಿಗೆ ವೈವಿಧ್ಯಮಯ ಅಲಂಕಾರಿಕ ಗಿಡಗಳನ್ನು ಅಣ್ಣನವರು ಪರಿಚಯಿಸಿದ್ದಾರೆ. ಜೊತೆಗೆ ಗೆಳೆಯರನ್ನು ಕರೆದುಕೊಂಡು, ವರ್ಷಕ್ಕೆ ಎರಡು ಬಾರಿ ಮುವತ್ತಕ್ಕೂ ಹೆಚ್ಚು ದೇಶಗಳಲ್ಲಿ ತಿರುಗಾಡಿ ಬಂದು, ಓರ್ವ ನರ್ಸರಿ ತಜ್ಞ ಎನಿಸಿಕೊಂಡಿದ್ದಾರೆ.
ತೀರ್ಥಹಳ್ಳಿಯಿಂದ ಆರು ಕಿಲೊಮೀಟರ್ ದೂರದ ಭಾರತೀಪುರ ಎಂಬಲ್ಲಿ ತುಂಗಾ ನದಿಯ ದಡದಲ್ಲಿರುವ ಇವರ ವಿಹಂಗಮ ಹೆಸರಿನ ತೋಟ ಮತ್ತು ರಿಸಾರ್ಟ್ ಇಡೀ ದೇಶದಲ್ಲಿ ಆತಿಥ್ಯಕ್ಕೆ ಪ್ರಸಿದ್ಧಿಯಾಗಿದೆ. ಗಿರೀಶ್ ಕಾರ್ನಾಡ್, ಅನಂತ್ ನಾಗ್, ಹೇಮಾಮಾಲಿನಿ, ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ನಟ, ನಟಿಯರು, ನಿರ್ದೇಶಕರು ಮಲೆನಾಡಿಗೆ ಚಿತ್ರೀಕರಣಕ್ಕೆ ಹೋದಾಗ, ಅಣ್ಣನವರ ತೋಟದ ಅತಿಥಿ ಗೃಹದಲ್ಲಿ ಉಳಿದುಕೊಳ್ಳುತ್ತಾರೆ.
ಜಿ.ಎಸ್.ಶಿವರುದ್ರಪ್ಪ ಆದಿಯಾಗಿ ಕನ್ನಡದ ಪ್ರಸಿದ್ಧ ಲೇಖಕರಿಗೆ ಇದು ಮೆಚ್ಚಿನ ತಾಣವಾಗಿದೆ.
ಮೊನ್ನೆ ಅಣ್ಣನವರು, ತೋಟ ತೋರಿಸಲು ನಮನ್ನು ಕರೆದುಕೊಂಡು ಹೋದಾಗ, ತುಂಗಾ ನಂದಿಯಲ್ಲಿ ಸಿಕ್ಕ ಶಿಲ್ಪಗಳ ಮಾದರಿಯ ಅನೇಕ ಕಲ್ಲುಗಳನ್ನು ತೋರಿಸಿದರು. ನದಿಯ ನಡುವೆ ಕಾಳಿಂಗ ಸರ್ಪದ ಮಾದರಿಯಲ್ಲಿ ಇರುವ ಕಪ್ಪು ಶಿಲೆಯನ್ನು ತೋರಿಸುತ್ತಾ, ಶಾಮಣ್ಣನವರು ಹೇಳಿದ ಜೋಕ್ ಅನ್ನು ನೆನಪಿಸಿಕೊಂಡರು.
ಒಮ್ಮೆ ಶಾಮಣ್ಣನವರನ್ನು ದೋಣಿಯಲ್ಲಿ ಕರೆದುಕೊಂಡು ಹೋಗಿ, ಆ ಕಲ್ಲನ್ನು ತೋರಿಸಿದರಂತೆ. ಅದನ್ನು ನೋಡಿದ ಶಾಮಣ್ಣನವರು, ,, ಲೋ ದಯಾ, ಈ ಕಲ್ಲಿಗೆ ಅರಿಶಿನ, ಕುಂಕುಮ ಹಚ್ಚಿ, ತಲೆಯ ಮೇಲೆ ಹೆಂಗಸರು ಸೆರಗು ಹೊದಿಯುವಂತೆ ಒಂದು ಸೀರೆ ಹೊದಿಸಿಬಿಡು. ನಂತರ, ಈ ದೇವತೆಗೆ , ಮಕ್ಕಳಾಗುವಂತೆ ಮತ್ತು ವಿವಾಹವಾಗುವಂತೆ ಹರಕೆ ಹೊತ್ತುಕೊಂಡರೆ, ಕ್ಷಣಾರ್ಧದಲ್ಲಿ ಮಕ್ಕಳೂ ಆಗುತ್ತವೆ ಮತ್ತು ವಿವಾಹ ನೆರವೇರುತ್ತದೆ , ಎಂದು ನಂಬಿಕೆಯನ್ನು ರಾಜ್ಯಾದ್ಯಂತ ಪ್ರಸಾರ ಮಾಡು.
ದೋಣಿಯಲ್ಲಿ ಬಂದು ಈ ಕಪ್ಪು ಶಿಲೆಗೆ ಕೈ ಮುಗಿದು, ಹರಕೆ ಹೊರಲು, ಒಂದು ಸಾವಿರ ಶುಲ್ಕ ನಿಗದಿ ಮಾಡು. ನಿನಗೆ ತೋಟ, ಕೃಷಿ ಚಟುವಟಿಕೆ ಏನೂ ಬೇಡ ದಿಡೀರ್ ಶ್ರೀಮಂತನಾಗುತ್ತೀಯಾ ಎಂದು ಸಲಹೆ ನೀಡಿದ್ದರಂತೆ. ತೋಟದ ಮೆಣಸು, ಅಡಿಕೆ ಬೆಳೆಗಳನ್ನು ತೋರಿಸುತ್ತಾ, ಶಾಮಣ್ಣನವರು ಇವುಗಳನ್ನು ವಾಣಿಜ್ಯ ಬೆಳೆ ಎಂದು ಕರೆಯುವ ಬದಲು ಮಂಗನ ಬೆಳೆ ಎಂದು ಕರೆಯುತ್ತಿದ್ದ ಕಥೆ ಹೇಳಿದರು. ಮಂಗಗಳ ಕಾಟದಿಂದ ಬಚಾವ್ ಆದ ಫಸಲು ರೈತರಿಗೆ ಸಿಗುತ್ತಿದ್ದ ಕಾರಣ, ಶಾಮಣ್ಣನವರು ಈ ಹೆಸರನ್ನು ಇಟ್ಟಿದ್ದರು.
ಇಂತಹ ಅಪಾರ ನೆನಪುಗಳನ್ನು ದಾಖಲಿಸಲು ನಾನು ಕಳೆದ ನಾಲ್ಕೈದು ವರ್ಷಗಳಿಂದ ದಯಾನಂದ್ ಅಣ್ಣನವರ ಬೆನ್ನು ಬಿದ್ದಿದ್ದೀನಿ. ತೋಟದ ವ್ಯವಹಾರ, ವಿದೇಶ ಪ್ರವಾಸಗಳ ಒತ್ತಡದಿಂದ ಅವರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಅಣ್ಣನವರನ್ನು ಎಂಟತ್ತು ದಿನಗಳ ಕಾಲ ಮೈಸೂರಿನಲ್ಲಿ ಇರಿಸಿಕೊಂಡು, ಅವರ ನೆನಪುಗಳನ್ನು ಧ್ವನಿ ಮುದ್ರಿಸಿಕೊಂಡು , ನಾನೇ ಅಕ್ಷರ ರೂಪಕ್ಕೆ ಇಳಿಸಲು ತೀರ್ಮಾನಿಸಿದ್ದೀನಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ