ಕರ್ನಾಟಕದ
ಸಾಕ್ಷಿ ಪ್ರಜ್ಞೆಯಂತಿದ್ದ ಯು.ಆರ್. ಅನಂತಮೂರ್ತಿಯವರ
ಸಾವು ಕಳೆದ ಶುಕ್ರವಾರದಿಂದ ಸೃಷ್ಟಿಸಿರುವ
ಶೂನ್ಯತೆ ಮತ್ತು ಸೂತಕ ಛಾಯೆಯನ್ನು
ಕನ್ನಡದ ಸಾಂಸ್ಕøತಿಕ ಜಗತ್ತು
ಜೀರ್ಣಿಸಿಕೊಳ್ಳಲು ಹಲವು ತಿಂಗಳುಗಳೇ ಬೇಕಾಗಬಹುದು.
ಮಾತಿಗೆ ಮಾಂತ್ರಿಕತೆಯನ್ನು ಮತ್ತು ಕನ್ನಡ ಭಾಷೆಗೆ
ಬೆರಗು ಮತ್ತು ಭವ್ಯತೆಯನ್ನು ತಂದುಕೊಟ್ಟ
ಯು.ಆರ್.ಅನಂತಮೂರ್ತಿಯವರ ಹೆಸರು
ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ
ಮುಂಚೂಣಿಯಲ್ಲಿ ನಿಲ್ಲುವಂತಹದ್ದು. ತಮ್ಮ ಬದುಕಿನುದ್ದಕ್ಕೂ ಚರ್ಚೆ
ಮತ್ತು ವಾಗ್ವಾದಗಳ ಮೂಲಕ ಸಾಹಿತ್ಯ ಮತ್ತು
ಸಾಂಸ್ಕøತಿಕ ಲೋಕದ ಸರಹದ್ದನ್ನು
ವಿಸ್ತರಿಸಿದ ಅನಂತಮೂರ್ತಿಯವರು ಇದಕ್ಕಾಗಿ ಹಲವಾರು
ವಿವಾದ ಗುರಿಯಾಗಬೇಕಾಯಿತು.
ಬೇಂದ್ರೆ,
ಕುವೆಂಪು, ಶಿವರಾಮ ಕಾರಂತ ಮತ್ತು
ಮಾಸ್ತಿ ಮುಂತಾದವರು ಇಪ್ಪತ್ತನೆಯ ಶತಮಾನದ
ಆದಿಭಾಗದಲ್ಲಿ ಆಧುನಿಕ ಕನ್ನಡ ಸಾಹಿತ್ಯವನ್ನು
ಶ್ರೀಮಂತಗೊಳಿಸಿದರೆ, ನಂತರ ಬಂದ ಎರಡನೆಯ
ತಲೆಮಾರಿನ ಲಂಕೇಶ್,
ತೇಜಸ್ವಿ, ಅನಂತಮೂರ್ತಿ, ಡಿ.ಆರ್. ನಾಗರಾಜ್,
ಕೀರಂ ರಂತಹ ಪ್ರತಿಭೆಗಳು ಅದಕ್ಕೆ
ವೈಚಾರಿಕತೆಯ ಸ್ಪರ್ಶ ನೀಡುವುದರ ಮೂಲಕ ಭಾರತೀಯ ಇತರೆ
ಭಾಷೆಗಳಲ್ಲದೆ, ಜಗತ್ತು ಕನ್ನಡದತ್ತ ತಿರುಗಿ
ನೋಡಿವಂತೆ ಮಾಡಿದರು. ಇದೀಗ ಇವರೆನ್ನೆಲ್ಲಾ ಕಳೆದು
ಕೊಂಡಿರುವ ಕನ್ನಡ ಸಾಹಿತ್ಯ ಬಡವಾಯಿತು
ಎಂಬ ಮಾತು ಕ್ಲೀಷೆಯಾಗಿ ತೋರುತ್ತದೆ.
ಆದರೆ ಈ ಮಹಾನಿಯರಿಂದ ಪ್ರಭಾವಿತಗೊಂಡಿದ್ದ
ನನ್ನ ತಲೆಮಾರು ಈಗ ಅಕ್ಷರಶಃ
ಅನಾಥ ಪ್ರಜ್ಞೆಯನ್ನ, ತಬ್ಬಲಿತನವನ್ನು ಅನುಭವಿಸುತ್ತಿದೆ. ನಮ್ಮ ತಲೆಯೊಳಗಿನ ಕಸ
ಮತ್ತು ಎದೆಯೊಳಗಿನ ವಿಷವನ್ನು ತೆಗೆದು ಹಾಕಿದ ಲಂಕೇಶ್,
ತೇಜಸ್ವಿ, ಅನಂತಮೂರ್ತಿಯವರಿಲ್ಲದ ಕನ್ನಡದ ಸಾಂಸ್ಕತಿಕ ಜಗತುದಿನ್ನು
ಮುಂದೆ ಲಂಗು ಲಗಾಮಿಲ್ಲದ ಕುದುರೆಯಾಗಬಹುದು
ಎಂಬ ಆತಂಕ ಮನದೊಳಗೆ ಮಡುವುಗಟ್ಟುತ್ತಿದೆ.
ಲಂಕೇಶ್
ಮತ್ತು ತೇಜಸ್ವಿಯವರಿಗೆ ಹೋಲಿಕೆ ಮಾಡಿದಾಗ ಅನಂತಮೂರ್ತಿಯವರು
ಅವರಿಗಿಂತ ಭಿನ್ನವಾಗಿ ತಮ್ಮ ಅಸ್ಮಿತೆಯನ್ನು ಕಾಪಾಡಿಕೊಂಡವರಾಗಿದ್ದರು.
ಲಂಕೇಶ್ ಮತ್ತು ತೇಜಸ್ವಿಯವರು ಅದ್ಭುತ
ಬರಹಗಾರರಾಗಿದ್ದರೆ ಹೊರತು, ಮಾತುಗಾರರಾಗಿರಲ್ಲ. ಆದರೆ
ಅನಂತಮೂರ್ತಿಯವರು ಅದು ಖಾಸಾಗಿ ಚರ್ಚೆಯಾಗಿರಲಿ,
ಉಪನ್ಯಾಸವಾಗಿರಲಿ ಅಥವಾ ಸಾರ್ವಜನಿಕ ಭಾಷಣವಾಗಿರಲಿ
ಅಲ್ಲಿ ತಮ್ಮ ಮಾತು ಮತ್ತು
ವಿಚಾರಧಾರೆಗಳ ಮೂಲಕ ಮಾಂತ್ರಿಕಲೋಕವನ್ನು ಸೃಷ್ಟಿಸಿಬಿಡುತ್ತಿದ್ದರು.
ಎಂದೂ ಖಾಸಾಗಿತನವನ್ನಾಗಲಿ ಅಥವಾ ಏಕಾಂಗಿತನವನ್ನಾಗಲಿ ಬಯಸದ
ಅನಂತಮೂರ್ತಿಯವರು ಸದಾ ದೇಶ ವಿದೇಶಗಳನ್ನು
ಸುತ್ತುತ್ತಾ ಸುದ್ಧಿಯಲ್ಲಿರುತ್ತಿದ್ದರು.
ಕಳೆದ
ಮೂರು ದಶಕಗಳಲ್ಲಿ ಅಂದರೆ ನವ್ಯದ ಸಾಹಿತ್ಯ
ಉತ್ತುಂಗದಲ್ಲಿದ್ದ ಕಾಲದಿಂದ ಅದರ ಉಗ್ರ
ಪ್ರತಿಪಾದಕರಾಗಿದ್ದ ಅನಂತಮೂರ್ತಿಯವರ ಜೊತೆ ಜಗಳವಾಡದೆ
ಇರುವವರನ್ನು ಕರ್ನಾಟಕದಲ್ಲಿ ದುರ್ಬೀನು ಹಾಕಿ ಹುಡುಕಬೇಕಾಗುತ್ತದೆ. ಏಕೆಂದರೆ,
ಅದು ಸಾಹಿತ್ಯಕವಾಗಿರಲಿ, ಸಾಮಾಜಿಕ ಸಂಗತಿಯಾಗಿರಲಿ ಅಥವಾ
ರಾಜಕೀಯವಾಗಿರಲಿ ಹೊಸ ವಾಗ್ವದಗಳನ್ನು ಹುಟ್ಟು
ಹಾಕುತ್ತಿದ್ದ ಅನಂತಮೂರ್ತಿಯವರು, ತಮ್ಮ ಕೃತಿಗಳು ಅಥವಾ
ತಾವು ಮಂಡಿಸಿದ ವಿಷಯಗಳ ಕುರಿತು
ಯಾರು ಎಷ್ಟೇ ಕಟುವಾಗಿ ಟೀಕಿಸಲಿ
ಅಥವಾ ವಿರೋಧಿಸಲಿ ಅವರ ಜೊತೆ ತಾತ್ವಿಕವಾಗಿ
ಜಗಳವಾಡುತ್ತಿದ್ದರೆ ಹೊರತು, ಎಂದೂ ತಮನ್ನ್ಮು
ವಿರೋಧಿಸಿದವರ ಬಗ್ಗೆ ಮತ್ಸರವನ್ನಾಗಲಿ, ವಿಷವನ್ನಾಗಲಿ
ತಮ್ಮ ಎದೆಯಲ್ಲಿ ಬಚ್ಚಿಟ್ಟುಕೊಂಡವರಲ್ಲ. ಅವರನ್ನು ಕಳೆದುಕೊಂಡ ಈ
ಸಮಯದಲ್ಲಿ ಹಲವಾರು ನೆನಪುಗಳು ನನ್ನನ್ನು
ನಿರಂತರವಾಗಿ ಕಾಡುತ್ತಿವೆ.
ಅದು
1980ರ ಇಸವಿ. ನಾನಾಗ ಬೆಂಗಳೂರಿನ
ವಿ.ವಿ.ಪುರಂ ಕಾಲೇಜಿನ
ಪದವಿ ವಿದ್ಯಾರ್ಥಿಯಾಗಿ ಓದುತ್ತಿದ್ದೆ. ಆಗಿನ ಮಲ್ಲಿಗೆ ಎಂಬ
ಮಾಸಪತ್ರಿಕೆ ಸಂಪಾದಕರಾಗಿದ್ದ ಎಸ್.ದಿವಾಕರ್ ಮೂಲಕ
ಬೆಂಗಳೂರಿನ ಬಹುತೇಕ ಲೇಖಕರ ಸಂಪರ್ಕಕ್ಕೆ
ಬಂದಿದ್ದೆ. ಇದೇ ವೇಳೆಯಲ್ಲಿ ಗಿರಿ
ಎಂಬುವವರ ಗತಿಸ್ಥಿತಿ ಎಂಬ ಕೆಟ್ಟ ಕಾದಂಬರಿಯೊಂದು
ಬಿಡುಗಡೆಯಾಗಿತ್ತು. ನವ್ಯ ಸಾಹಿತ್ಯ ಕನ್ನಡವನ್ನು
ಆವರಿಸಿಕೊಂಡಿದ್ದಾಗ ಅನಂತಮೂತಿಯವರು ಒಳಗೊಂಡಂತೆ ಆ ಕಾದಂಬರಿಯನ್ನು ಶತಮಾನದ
ಕಾದಂಬರಿಯಂತೆ ಎಲ್ಲರೂ ಇನ್ನಿಲ್ಲದಂತೆ ಬಣ್ಣಿಸುತ್ತಿದ್ದರು.
ಕಾದಂಬರಿಯನ್ನು ಓದಿದ್ದ ನನಗೆ ತಲೆ ಕೆಟ್ಟು ಕೆರಹಿಡಿದು
ಹೋಗಿತ್ತು. ಯಾವುದೇ
ರೀತಿಯ ಪ್ರಬುದ್ಧತೆಯಲ್ಲದೆ ಹುಂಬನಂತಿದ್ದ ನಾನು ಒಂದು ದಿನ
ಸೆಂಟ್ರಿಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ
ನಡೆದ ಸಾಹಿತ್ಯ ಕುರಿತಾದ ಕಾರ್ಯಕ್ರಮದ
ನಂತರ ಅನಂತಮೂತಿಯವರನ್ನು ಅಡ್ಡ ಹಾಕಿಕೊಂಡು ಗತಿಸ್ಥಿತಿ
ಕಾದಂಬರಿಯ ಬಗ್ಗೆ ಜಗಳವಾಡಿದ್ದೆ. ಸುಮಾರು
ಹತ್ತು ನಿಮಿಷಗಳ ಕಾಲ ನನ್ನ
ಹೆಗಲ ಮೇಲೆ ಕೈ ಹಾಕಿ
ಕಾಲೇಜಿನ ಕಾರಿಡಾರ್ ಬಳಿ ತಿರುಗಾಡುತ್ತಾ ಉಪನ್ಯಾಸ
ಮಾಡಿದ ಅವರು, ಕಾಮು
ಮತ್ತು ಕಾಪ್ಕ ಇವರನ್ನು ಓದುವ
ಕುರಿತಂತೆ ಹಾಗೂ ಒಳ್ಳೆಯ ಕಾದಂಬರಿಗಳನ್ನು
ಹೇಗೆ ಗ್ರಹಿಸಬೇಕು ಎಂಬುದರ ಕುರಿತು ನನಗೆ
ಮನನ ಮಾಡಿಕೊಟ್ಟಿದ್ದರು. ಆದರೆ, ಆಲ್ಬರ್ಟ್ಕಾಮೂವಿನ
ಕಾದಂಬರಿಗಳು ನನ್ನ ಎದೆಯನ್ನು ತಟ್ಟಿದ
ಹಾಗೆ ಕಾಪ್ಕ ಮತ್ತು ಗಿರಿಯವರ
ಕಾದಂಬರಿಗಳು ಕಥೆಗಳು ಯಾವ ಕಾಲಕ್ಕೂ
ನನ್ನದೆಗೆ ತಾಕಲಿಲ್ಲ.
ಇನ್ನೊಂದು
ಘಟನೆ 1992 ರ ಅಕ್ಟೋಬರ್ ತಿಂಗಳಿನಲ್ಲಿ
ನಡೆದದ್ದು. ಹೆಗ್ಗೋಡಿನ ಕೆ.ವಿ.ಸುಬ್ಬಣ್ಣ
ಮತ್ತು ನನ್ನ ನಡುವಿನ ಸಂಬಂಧ ಒಂದು
ರೀತಿಯಲ್ಲಿ ತಂದೆ-ಮಗನ ಸಂಬಂಧ.
1980 ರ ದಶಕದಲ್ಲಿ ಮುದ್ರಣರಂಗಕ್ಕೆ ಕಾಲಿಟ್ಟ ಡಿ.ಟಿ.ಪಿ. ಮತ್ತು ಆಫ್
ಸೆಟ್ ಮುದ್ರಣ ಇವುಗಳ ಆಗಮನದಿಂದಾಗಿ
ಪುಸ್ತಕಗಳ ಮುದ್ರಣದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾದವು. ಆದರೆ ಸುಬ್ಬಣ್ಣನವರು ಮಾತ್ರ
ಇವುಗಳಿಗೆ ತೆರೆದುಕೊಳ್ಳದೆ ತಮ್ಮ ಅಕ್ಷರ ಪ್ರಕಾಶನದ
ಎಲ್ಲಾ ಕೃತಿಗಳನ್ನು ಹೆಗ್ಗೋಡಿನಲ್ಲಿದ್ದ ತಮ್ಮ ಮುದ್ರಾಣಾಲಯದಲ್ಲಿ ಅಕ್ಷರದ
ಮೊಳೆಗಳನ್ನು ಜೋಡಿಸಿ, ಆ ಕಾಲದ
ಪ್ರಿಂಟಿಂಗ್ ಪ್ರೆಸ್ ಮೆಷಿನ್ ನಲ್ಲಿ
ಮುದ್ರಿಸಿ ಪ್ರಕಟಿಸುತ್ತಿದ್ದರು. ನಾನು ಹೊಸ ತಂತ್ರ
ಜ್ಞಾನ ಕುರಿತು ಅವರಿಗೆ ಮನವರಿಕೆ
ಮಾಡಿಕೊಡುವಾಗಲೆಲ್ಲಾ ಅವರು ನಿರಾಕರಿಸುತ್ತಿದ್ದರು. ಅವರ
ಮುದ್ರಣಾಲಯದಲ್ಲಿ ಮಹಿಳೆಯರೂ ಒಳಗೊಂಡಂತೆ ಹತ್ತು ಅಥವಾ ಹನ್ನೆರೆಡು
ಮಂದಿ ನಿರಂತರವಾಗಿ ಕೆಲಸ ಮಾಡುತ್ತಿದ್ದರು. ತಾನು
ಆಫ್ ಸೆಟ್ ಮುದ್ರಣಕ್ಕೆ ಹೋದರೆ
ಕೆಲಸಗಾರರ ಅನ್ನ ಕಿತ್ತುಕೊಂಡಂತಾಗುತ್ತದೆ ಎಂಬ ಸಂಕಟ
ಅವರನ್ನು ಬಾಧಿಸುತ್ತಿತ್ತು, ಒಮ್ಮೆ ನನ್ನ ಒತ್ತಾಯದ
ಮೇರೆಗೆ ಬೆಂಗಳೂರಿಗೆ ಬಂದು ಆಫ್ ಸೆಟ್
ಮುದ್ರಣದಲ್ಲಿ ತ್ವರಿತ ಗತಿಯಲ್ಲಿ ಪುಸ್ತಕಗಳು
ಪ್ರಿಂಟಾಗುವುದು, ಬಹು ವರ್ಣಗಳಲ್ಲಿ ಮುಖಪುಟಗಳು
ಸಿದ್ಧವಾಗುವುದು ಇವುಗಳನ್ನು ನೋಡಿ ನಂತರದ ದಿನಗಳಲ್ಲಿ
ಅರೆ ಮನಸ್ಸಿನಿಂದ ಒಪ್ಪಿಗೆ ನೀಡಿದ್ದರು. ಆನಂತರ
1993 ಅಥವಾ 94 ರಲ್ಲಿ ಅನಂತಮೂರ್ತಿಯವರ ಭವ
ಎಂಬ ಕಾದಂಬರಿಯನ್ನು ಮುದ್ರಿಸಿ, ನನ್ನೂರಾದ ಕೊಪ್ಪದಲ್ಲಿ ವಾಸವಾಗಿದ್ದ ನನಗೂ ಒಂದು ಪ್ರತಿಯನ್ನು
ರವಾನಿಸಿದ್ದರು.
ಆ
ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಹೆಗ್ಗೋಡಿನಲ್ಲಿ ನಡೆಯುತ್ತಿದ್ದ ನಿನಾಸಂ ಸಂಸ್ಕøತಿ
ಶಿಬಿರಕ್ಕೆ ಪಾಲ್ಗೊಂಡಿದ್ದೆ. ಒಂದು ದಿನ ಬೆಳಿಗ್ಗೆ
ಹೆಗ್ಗೋಡಿನ ಅವರ ಕಚೇರಿಯ ಮುಂದಿದ್ದ
ಮೂರು ಅಡಿ ಎತ್ತರದ ಮೋಟು
ಗೋಡೆಯ ಮೇಲೆ ಗೋಡೆಗೆ
ಒರಗಿ ಎಲೆ ಅಡಿಕೆ ಹಾಕಿಕೊಂಡು
ಕುಳಿತಿದ್ದ ಸುಬ್ಬಣ್ಣನವರು
ನನ್ನನ್ನು ಕರೆದು ಭವ ಕಾದಂಬರಿಯನ್ನು
ಓದಿದೆಯಾ ಕೊಪ್ಪ? ಎಂದರು. ಓದಿದೆ ಎಂದು ನಾನು
ಉತ್ತರಿಸಿದೆ. ಏನನಿಸಿತು? ಎಂದು ಕುತೂಹಲದಿಂದ ಕೇಳಿದರು.
ಸುತ್ತ ಮುತ್ತ ಶಿಬಿರಾರ್ಥಿಗಳು ಚಹಾ
ಮತ್ತು ಕಾಫಿ ಕುಡಿಯುತ್ತಾ ನಿಂತಿದ್ದರಿಂದ
ಮೆಲ್ಲನೆ ಅವರ ಕಿವಿಯ ಬಳಿ ತೆರಳಿ,
“ನಾನು ಓದಿದ ಕೆಟ್ಟ ಕಾದಂಬರಿಗಳಲ್ಲಿ
ಅದು ಕೂಡ ಒಂದು” ಎಂದು ಉತ್ತರಿಸಿದೆ. ನನ್ನ
ಮಾತು ಕೇಳಿ ಸ್ವಲ್ಪ ಕಾಲ
ಮೌನಕ್ಕೆ ಶರಣಾದ ಅವರು, ಸ್ವಗತದ
ಧ್ವನಿಯಲ್ಲಿ ಸಂಸ್ಕಾರ, ಭಾರತೀಪುರ ಮತ್ತು ಅವಸ್ಥೆ ಇವುಗಳು
ಮಾತ್ರ ಅನಂತಮೂರ್ತಿಯ ಹೆಸರನ್ನು ಶಾಸ್ವತಗೊಳಿಸುವ ಕಾದಂಬರಿಗಳು ಎಂದರು. ಮಧ್ಯಾಹ್ನ ಊಟದ
ಸಮಯದ ವೇಳೆಗೆ ಸರಿಯಾಗಿ ನಾನು
ಹೇಳಿದ್ದ ಮಾತನ್ನು ಸುಬ್ಬಣ್ಣನವರು ಅನಂತಮೂರ್ತಿಗೆ
ದಾಟಿಸಿಬಿಟ್ಟಿದ್ದರು. ಮಧ್ಯಾಹ್ನ ಊಟದ ಸಮಯದಲ್ಲಿ ನನ್ನನ್ನು ಕರೆದು ಪಕ್ಕದಲ್ಲಿ ಕೂರಿಸಿಕೊಂಡ
ಅನಂತಮೂರ್ತಿಯವರು, “ಏನಯ್ಯಾ
ಕೊಪ್ಪ? ನೇಪಾಳಕ್ಕೆ ಹೋಗಿ ತಿಂಗಳು ಕಾಲ
ಧ್ಯಾನಸ್ಥ ಮನಸ್ಸಿನಲ್ಲಿ ಕುಳಿತು ಬರೆದ ಕಾದಂಬರಿಯನ್ನು ನೀನು ಈ ರೀತಿನಾ ಟೀಕಿಸೋದು?”
ಎಂದು ಪ್ರೀತಿಯಿಂದ ಗದರುತ್ತಾ ಕಾದಂಬರಿ ಕುರಿತು ಮಾತನಾಡಿದರು.
ಹಿರಿಯ ಅಥವಾ ಕಿರಿಯ ಎನ್ನುವ
ಬೇಧ ಭಾವವಿಲ್ಲದೆ ತಮ್ಮ ಮನಸ್ಸಿನ ಅನಿಸಿಕೆಗಳನ್ನು
ಇನ್ನೊಬ್ಬರಿಗೆ ಮುಟ್ಟಿಸುವ ತವಕ ಅನಂತ ಮೂರ್ತಿಯವರಿಗೆ
ಇದ್ದ ಹಾಗೆ ಬೇರೊಬ್ಬ ಲೇಖಕರಿಗೆ
ಇದ್ದುದನ್ನು ನಾನು ಕಾಣಲೇ ಇಲ್ಲ.
ಅದು ಪ್ರೀತಿಯಿರಲಿ, ಸಿಟ್ಟಿರಲಿ ಅವುಗಳನ್ನು ಹೊರ ಹಾಕಿದರೆ ಮಾತ್ರ
ಅವರ ಆತ್ಮ ತೃಪ್ತಿಗೊಳ್ಳುತ್ತಿತ್ತು.
ಅನಂತಮೂತಿಯವರ
ಬಹು ದೊಡ್ಡಗುಣವೆಂದರೆ, ಅವರೆಂದೂ ತಮ್ಮ ಜೀವಿತದಲ್ಲಿ
ತಮ್ಮ ಕಟು ವಿರೋಧಗಳ ಬಗ್ಗೆಯಾಗಲಿ,
ಟೀಕಿಸುವವರ ವಿರುದ್ಧ ಎಂದು ವೈರತ್ವವನ್ನು
ಸಾಧಿಸಲಿಲ್ಲ. ಈ ಕಾರಣಕ್ಕಾಗಿ ಅವರಿಗೆ
ತಮ್ಮ ಜೀವೀತಾವಧಿಯಲ್ಲಿ ಅವರಿಗೆ ಕೇಂದ್ರ ಸಾಹಿತ್ಯ
ಅಕಾಡೆಮಿ ಪ್ರಶಸ್ತಿ ದೊರಕದಿದ್ದರೂ ಸಹ ಅವರಿಗೆ ಪ್ರಶಸ್ತಿ
ತಪ್ಪಿಸಿದವರ ಬಗ್ಗೆ ಎಂದೂ ಬೇಸರಗೊಳ್ಳಲಿಲ್ಲ.
ನನಗಿನ್ನೂ ನೆನಪಿದೆ. ಹತ್ತು
ವರ್ಷಗಳ ಹಿಂದೆ ಇದೇ ಅಗ್ನಿ
ವಾರಪತ್ರಿಕೆಯಲ್ಲಿ ಅನಂತಮೂರ್ತಿಯವರ ನಡೆ ನುಡಿ ಕುರಿತಾದ
ಒಂದು ಲೇಖನ ಪ್ರಕಟವಾಯಿತು. ಈ
ಲೇಖನದಿಂದ ಘಾಸಿಗೊಂಡ ಅವರು ಮರುದಿನ ತಮ್ಮ
ಪತ್ನಿ, ಪುತ್ರ, ಸೊಸೆ ಸಮೇತರಾಗಿ
ಅಗ್ನಿ ವಾರಪತ್ರಿಕೆ ಕಛೇರಿ ಎದುರು ಧರಣಿ
ಕೂತು ಸಂಪಾದಕರಾಗಿದ್ದ ಶ್ರೀಧರ್, ಮತ್ತು ಅವರ ಬಳಗಕ್ಕೆ
ಮುಜುಗರವನ್ನುವನ್ನುಂಟು ಮಾಡಿ, ತಾವೂ ಸಹ
ಮಾಧ್ಯಮಗಳ ಎದುರು ಮುಜುಗರಕ್ಕೆ ಒಳಗಾದರು.
ಈ ಘಟನೆ ನಡೆದ
ಕೆಲವೇ ತಿಂಗಳಿನಲ್ಲಿ ಬೆಂಗಳೂರು ನಗರದಲ್ಲಿ ಅಗ್ನಿ ಶ್ರೀಧರ್ ನೇತೃತ್ವದಲ್ಲಿ
ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ಸೂಚಿಸಿದರು.
ಆ ಕ್ಷಣಕ್ಕೆ ತಮ್ಮ
ಎದೆಯೊಳಗೆ ಹುಟ್ಟುವ ಸಿಟ್ಟು
ಅಥವಾ ಪ್ರೀತಿಯನ್ನು ಅವರು ಎಂದೂ ಕಾಪಿಟ್ಟುಕೊಂಡವರಲ್ಲ,
ಹಾಗಾಗಿ ಅವರು ತಮ್ಮ ಹೇಳಿಕೆಗಳಿಂದ
ನಿರಂತರವಾಗಿ ವಿವಾದಗಳಿಗೆ ಬಲಿಯಾದರು. ನಿರಂತರವಾಗಿ ಚಲನಶೀಲ ಸಮಾಜದಲ್ಲಿ ಚಾಲ್ತಿಯಲ್ಲಿರುವುದು ಅವರ ಪಾಲಿಗೆ ಒಂದು
ರೀತಿಯಲ್ಲಿ ವ್ಯಸನವಾಗಿ ಮಾರ್ಪಟ್ಟಿತ್ತು.
ನಿಜ
ಹೇಳಬೇಕೆಂದರೆ, ಅನಂತಮೂರ್ತಿಯವರ ಬರೆವಣಿಗೆಯ ಕಸುವು 1990 ರ ವೇಳೆಗೆ ತೀರಿಹೋಗಿತ್ತು,
ಈ ಸಮಯದಲ್ಲಿ ಬಂದ
ಅವರ ಭವ ಮತ್ತು ದಿವ್ಯ
ಎಂಬ ಎರಡು ಕಾದಂಬರಿಗಳನ್ನು ಕನ್ನಡ
ಸಾರಸ್ವತಲೋಕ ಸಾರಾಸಗಟಾಗಿ ತಿರಸ್ಕರಿಸಿತ್ತು. ಹಾಗಾಗಿ ನಂತರದ ದಿನಗಳಲ್ಲಿ
ಅವರು ತಮ್ಮ ಸೃಜನಶೀಲ ಬರೆವಣಿಗೆಗೆ
ಕೈ ಹಾಕದೆ ಹೆಚ್ಚು ಹೆಚ್ಚು
ಮಾತನಾಡತೊಡಗಿದರು. ಅವರ ಪಾಲಿಗೆ ಮಾತೆಂಬುದು
ಮಂತ್ರವಾಯಿತು. 1990ರ ನಂತರ ಕೆಲವು
ವಿಷಯಗಳ ಕುರಿತಾಗಿ ಬರೆದ ಲೇಖನಗಳು ಮತ್ತು
ಹಲವು ಕೃತಿಗಳಿಗೆ ಬರೆದ ಮುನ್ನುಡಿ ಇಲ್ಲವೆ
ಬೆನ್ನುಡಿ ಅವರ ಪಾಲಿನ ಸಾಹಿತ್ಯದ
ಕೃಷಿಯಾಯಿತು. ಕನ್ನಡದ ಅತ್ಯಂತ ಪ್ರಸಿದ್ಧ
ಪಡೆದ ಹಾಗೂ ದೇಶ ವಿದೇಶಗಳಲ್ಲಿ
ಖ್ಯಾತಿ ಪಡೆದ ಅನಂತಮೂರ್ತಿಯವರು ಓರ್ವ
ಪ್ರಸಿದ್ಧ ಲೇಖಕನಾಗಿ ತಾನು ಬದುಕುತ್ತಿದ್ದ ಸಮಾಜದೊಡನೆ
ಕಾಯ್ದುಕೊಳ್ಳಬೇಕಾದ ಅಂತರವನ್ನು ಕಾಯ್ದುಕೊಳ್ಳಲಾರದೆ ಒಮ್ಮೊಮ್ಮೆ ತಮ್ಮ ಪ್ರತಿಷ್ಟೆ ಮತ್ತು
ಘನತೆಯನ್ನು ಎಲ್ಲರದೆರು ಪಣಕ್ಕೊಡ್ಡಿ ಘಾಸಿಗೊಂಡರು ಜೊತೆಗೆ ಅಪಮಾನಿತರಾದರು. ತನ್ನ
ಸುತ್ತ ಮುತ್ತಲಿನ ಜನ ಮತ್ತು ತಾನು
ಬದುಕುತ್ತಿದ್ದ ವರ್ತಮಾನ ಜಗತ್ತಿನ ಕ್ಷುದ್ರ ಸಮಾಜವನ್ನು ಕಂಡು
ವ್ಯಗ್ರರಾಗುತ್ತಿದ್ದ ಲಂಕೇಶರ ಗುಣವಾಗಲಿ ಅಥವಾ
ದಿವ್ಯ ನಿರ್ಲಕ್ಷ್ಯತೆಯಿಂದ ಇದೇ ಸಮಾಜವನ್ನು ನೋಡುತ್ತಿದ್ದ
ತೇಜಸ್ವಿಯವರ ನಿರ್ಭಾವುಕತನವಾಗಲಿ ಅನಂತಮೂರ್ತಿಯವರಿಗೆ ದಕ್ಕಲಿಲ್ಲ. ಹಾಗಾಗಿ ಕುಮಾರಸ್ವಾಮಿಯಂತಹ
ಒಬ್ಬ ಆಕಸ್ಮಿಕ ಮುಖ್ಯಮಂತ್ರಿಯೊಬ್ಬ ಅಪ್ರಬುದ್ದವಾಗಿ “ ಯಾರ್ರೀ
ಅವನು ಅನಂತ ಮೂರ್ತಿ” ಎಂದು ಸಾರ್ವಜನಿಕವಾಗಿ ಪ್ರಶ್ನಿಸಿದಾಗ,
“ಕರ್ನಾಟಕದ ಮೂಲೆ ಮೂಲೆಗೆ ಹೋಗಿ
ಬೀದಿಯಲ್ಲಿ ನಿಂತು ಈ ಪ್ರಶ್ನೆಯನ್ನು
ಕೇಳು” ಎಂದು ನಾಡಿನ ಮುಖ್ಯಮಂತ್ರಿಯೊಬ್ಬನಿಗೆ
ಉತ್ತರ ಹೇಳುವ ಸಾತ್ವಿಕ ಸಿಟ್ಟನ್ನು
ಅವರು ಬೆಳಸಿಕೊಳ್ಳಲಿಲ್ಲ. ಅದೇ ಕುಮಾರಸ್ವಾಮಿ ಯಾವುದೋ
ಒಂದು ಸಂದರ್ಭದಲ್ಲಿ ಉಪವಾಸ ಸತ್ಯಾಗ್ರಹ ಕುಳಿತಾಗ
ಆ ವ್ಯಕ್ತಿಗೆ ನಿಂಬೆ
ರಸ ಕುಡಿಸಲು ಇವರು ಮುಂದಾದರು.
ಸಿನಿಮಾ, ರಾಜಕೀಯ, ಸಾಮಾಜಿಕ ಮತ್ತು
ಸಾಂಸ್ಕøತಿಕ ವಲಯಗಳ ಚಟುವಟಿಕೆಗಳು ಅವರ
ಪಾಲಿಗೆ ಅನುಸಂಧಾನದ ಪ್ರಕ್ರಿಯೆಗಳಾದವು. ಹಾಗಾಗಿ ರಾಜಕೀಯವ್ಯಕ್ತಿಗಳಾಗಲಿ, ಪಕ್ಷಗಳಾಗಲಿ ಅವರ
ಪಾಲಿಗೆ ಎಂದೂ ಮೈಲಿಗೆ ಅನಿಸಲಿಲ್ಲ.
ಈ ಕಾರಣಕ್ಕಾಗಿ ಅವರು
ನನ್ನ ತಲೆಮಾರಿನ ಬಹುತೇಕ ಜನರ ಸಿಟ್ಟು
ಮತ್ತು ಪ್ರೀತಿ ಎರಡಕ್ಕೂ ಕಾರಣರಾದ
ಅಪರೂಪದ ವ್ಯಕ್ತಿಯಾದರು.
ಅನಂತಮೂರ್ತಿಯವರ
ಕುರಿತು ನಮ್ಮ ತಕರಾರುಗಳು ಏನೇ
ಇರಲಿ, ಕನ್ನಡದ ಜಗತ್ತನ್ನು ಜಗತ್ತಿಗೆ
ವಿಸ್ತರಿಸಿದವರಲ್ಲಿ ಅವರು ಅಗ್ರಗಣ್ಯರು. ಭಾರತೀಯ
ಕಾದಂಬರಿಗಳೆಂದರೆ, ಮುಲ್ಕ್ ರಾಜ್ ಆನಂದ್
ರ ಕೂಲಿ, ಅನ್
ಟಚ್ ಬಲ್, ಹಾಸನದ ರಾಜಾರಾವ್
ಅವರ ಕಾಂತಾಪುರ, ಆರ್.ಕೆ. ನಾರಾಯಣ್
ಅವರ ದ ಗೈಡ್ ಇವುಗಳಷ್ಟೇ
ಎಂದು ಜಗತ್ತು ನಂಬಿಕೊಂಡು ನಿರ್ವಚಿಸುತ್ತಿದ್ದ
ಸಂದರ್ಭದಲ್ಲಿ ತಮ್ಮ ಸಂಸ್ಕಾರ ಕಾದಂಬರಿಯತ್ತ
ಇಡೀ ಜಗತ್ತೇ ತಿರುಗಿ ನೋಡುವಂತೆ
ಮಾಡಿದರು.
( ಸಂಸ್ಕಾರ ಕಾದಂಬರಿಯನ್ನು
ಎ.ಕೆ. ರಾಮಾನುಜಂ
ಇಂಗ್ಲೀಷ್ ಭಾಷೆಗೆ ಅನುವಾದಿಸಿದ್ದಾರೆ)
ಕೊನೆಯ
ಮಾತು. ಕಳೆದ ಶನಿವಾರ ಸಂಜೆ
ಬೆಂಗಳೂರಿನಲ್ಲಿ ಅನಂತಮೂರ್ತಿಯವರ ಅಂತ್ಯಕ್ರಿಯೆ ಮುಗಿಸಿಕೊಂಡು ತಿಪಟೂರಿಗೆ ಹೊರಟಿದ್ದ ನಮ್ಮ ನಡುವಿನ ಕತೆಗಾರ,
ಅನುವಾದಕ ಹಾಗೂ ಗೆಳಯ ಗಂಗಾಧರಯ್ಯನವರಿಗೆ
ಪುನಃ ಯಾವಾಗ ಬೇಟಿಯಾಗೊಣ ಎಂದೆ.
ಆ ಕ್ಷಣಕ್ಕೆ ಭಾವುಕರಾದ
ಗಂಗಾಧರಯ್ಯ, ಇವೊತ್ತಿನಿಂದ ಬೆಂಗಳೂರು ನನ್ನದಲ್ಲ ಅನಿಸಿದೆ ಕೊಪ್ಪ, ಲಂಕೇಶರಿಲ್ಲದ,
ಅನಂತಮೂರ್ತಿಯಿಲ್ಲದ, ಕೀರಂ ಇಲ್ಲದ, ಡಿ.ಆರ್ ನಾಗರಾಜ್ ಇಲ್ಲದ
ಈ ಬೆಂಗಳೂರು ನಗರ
ಯಾರಿಗೆ ಬೇಕು? ಇಲ್ಲಿಗೆ ಬಂದು
ಯಾರ ಮಾತನ್ನು ಕೇಳೊಣ? ಎನ್ನುತ್ತಿದ್ದಂತೆ
ಅವರ ಕೊರಳು ಕಟ್ಟಿಕೊಂಡಿತು. ಅವರ
ಈ ಮಾತುಗಳನ್ನು
ಕೇಳಿಸಿಕೊಂಡ ನನ್ನ ಕಣ್ಣುಗಳು ಒದ್ದೆಯಾದವು.
ಇವು ಕೇವಲ ಗಂಗಾಧರಯ್ಯನವರೊಬ್ಬರÀ ಹತಾಶೆಯ
ಮಾತುಗಳಂತೆ ನನಗೆ ಕೇಳಿಸದೆ, ಕನ್ನಡದ ಜಗತ್ತಿಗೆ ಶೂನ್ಯ
ತುಂಬಿಕೊಂಡಿರುವಾಗ ಆಡಬಹುದಾದ ನನ್ನ ತಲೆಮಾರಿನ ಒಕ್ಕೊರಲಿನ
ನೋವಿನ ದನಿಯಾಗಿ ಕೇಳಿಸಿತು.
(ಅಗ್ನಿ ವಾರಪತ್ರಿಕೆಯಲ್ಲಿ ಪ್ರಕಟವಾದ
ಲೇಖನ)