ಭಾನುವಾರ, ಜೂನ್ 24, 2018

ಮಳೆ ಮತ್ತು ಬರದ ನಡುವೆ ಬರಿದಾಗುತ್ತಿರುವ ಬದುಕು





ಮಳೆ ಮತ್ತು ಇಳೆಯ ನಡುವೆ ಅವಿನಾಭಾವ ಸಂಬಂಧವಿದೆ. ಅದೇ ರೀತಿ ಇಳೆಯ ಪುಳಕಕ್ಕೆ ಕಾರಣವಾಗುವ ಮಳೆಗೆ ಜಗತ್ತಿನ ಜೀವರಾಶಿಗಳಿಗೆ ಪುನಶ್ಚೇತನ ನೀಡುವ ಶಕ್ತಿಯಿದೆ. ಇದು ಪ್ರಕೃತಿಯ ವಿಸ್ಮಯದ ಜೊತೆಗೆ  ವೈಭೋಗವೂ ಕೂಡ ಹೌದು. ಇದನ್ನು ಅರಿತಿದ್ದ ನಮ್ಮ ಪೂರ್ವಿಕರಿಗೆ ಮಳೆ ಮತ್ತು ಇಳೆಯ ನಡುವಿನ ಸಂಬಂಧಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವ ವಿವೇಕವಿತ್ತು. ಕಾರಣಕ್ಕಾಗಿ ಮಳೆಯನ್ನು ಮಳೆರಾಯನೆಂದು, ಇಳೆಯನ್ನು ಭೂಮಿತಾಯಿಯೆಂದು ಪರಿಗಣಿಸಿ , ಪೂಜಿಸಿ ಆರಾಧಿಸಿದರು.
ಜಗತ್ತಿನ ನಾಗರೀಕತೆ ಬೆಳೆದಂತೆ ಹಾಗೂ ಮನುಷ್ಯನ ಬೌದ್ಧಿಕ ವಿಕಾಸವಾದಂತೆ ಅವನೊಳಗೆ ಬೆಳೆದ ಸ್ವಾರ್ಥದ ಭಾವನೆಗಳು ಬೆಳೆಚಿುತೊಡಗಿದವು.   ಪ್ರಕೃತಿ ಇರುವುದು ನಮಗಾಗಿ, ಅದರ ಕೊಡುಗೆಗಳು ನಮಗಷ್ಟೇ ಸೀಮಿತ ಎಂಬ ಅಹಂಕಾರಗಳು ಬೆಳೆದು ಇಡೀ ಮನುಕುಲವನ್ನು ಇಂದು ವಿನಾಶದ ಅಂಚಿಗೆ ಕೊಂಡೊಯ್ದು ನಿಲ್ಲಿಸಿತು. . ನಿಸರ್ಗದ ಅತ್ಯಮೂಲ್ಯ ಕೊಡುಗೆಯಾದ ಜೀವ ಜಲ ಎನಿಸಿಕೊಂಡ ನೀರಿನ ಬಳಕೆ ಹಾಗೂ ಜಲಮೂಲಗಳ ಕುರಿತು ಅವನಲ್ಲಿ ಬೆಳೆದ ಅನಾಸಕ್ತಿಯ ಕಾರಣದಿಂದಾಗಿ ಇಂದು ಜಗತ್ತಿನಾದ್ಯಂತ ಕುಡಿಯುವ ನೀರಿಗೆ ಹಾಹಕಾರವೆದ್ದಿದೆ. ಕುಡಿಯುವ ನೀರಿಗೂ ಹಾಗೂ ಅಮೃತ ಎನಿಸಿಕೊಂಡ ಹಾಲಿನ ನಡುವೆ ಇದ್ದ ಮೌಲ್ಯ ಅಳಿಸಿಹೋಗಿದೆ. ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ಸಿನಿಕತನದ ಮಾತುಗಳಂತೆ ತೋರುತ್ತಿದ್ದವಿಷ್ಯದಲ್ಲಿ ನಡೆಯಬಹುದ ಯುದ್ಧಗಳು ಸಾಮ್ರಾಜ್ಯದ ವಿಸûರಣೆಯ ಬದಲಾಗಿ ನೀರಿಗಾಗಿ ನಡೆಯುತ್ತವೆಎಂಬ ಮಾತುಗಳು ಈಗ ನಿಜವಾಗತೊಡಗಿವೆ. ನೀರು ಮತ್ತು ಜಲಸಂಪನ್ಮೂಲಗಳ ತಾಣಗಳ ರಕ್ಷಣೆ ಕುರಿತಂತೆ ನಿಧಾನವಾಗಿ ಎಲ್ಲೆಡೆ ಜಾಗೃತಿ ಮೂಡತೊಡಗಿದೆ. ಇದು ಪರೋಕ್ಷವಾಗಿ ಪ್ರಕೃತಿ ನಮಗೆ ಕಲಿಸದ ಪಾಠವೆಂದರೆ ತಪ್ಪಾಗಲಾರದು.
1992 ರಲ್ಲಿ  ಭಾರತದಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಡೌನ್ ಟು ಅರ್ಥ್ ಎಂಬ ಇಂಗ್ಲೀಷ್ ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿದ ಅನಿಲ್ ಅಗರ್ವಾಲ್ ರವರು ( ಇವರು ಪಶ್ಚಿಮ ಬಂಗಾಳದ ಖರಗ್ ಪುರದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ನಮ್ಮ ಕರ್ನಾಟಕದ ಪರಿಸರ ತಜ್ಞ ನಾಗೇಶ್ ಹೆಗ್ಡೆಯವರ  ಸಹಪಾಠಿಯಾಗಿದ್ದವರು) ಭಾರತದ ಪರಿಸರ ಕುರಿತಂತೆ ಇಲ್ಲಿನ ನೀರು, ಗಾಳಿ, ಅರಣ್ಯಗಳ ಪರಿಸ್ಥಿತಿ ಕುರಿತಂತೆ ಇಂಡಿಯನ್ ಎನ್ವಿರಾನ್ ಮೆಂಟ್ ರಿಪೋರ್ಟ್ ಎಂಬ ಶೀರ್ಷಿಕೆಯಡಿ ಕೃತಿಗಳನ್ನು ಪ್ರಕಟಿಸಲು ಆರಂಭಿಸಿದರು. ( ಶಿವರಾಮಕಾರಂತರು ಭಾರತದ ಪರಿಸರದ ಪರಿಸ್ಥಿತಿ ಹೆಸರಿನಲ್ಲಿ ಮೊದಲ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ) ಆನಂತರ ಭಾರತದಲ್ಲಿ ಬತ್ತಿ ಹೋಗುತ್ತಿರುವ ಜಲಸಂಪನ್ಮೂಲಗಳ ಕುರಿತು ಆತಂಕ ವ್ಯಕ್ತಪಡಿಸಿ, ಬದಲಾವಣೆಗೆ ಇದು ಸೂಕ್ತವಾದ ಕಾಲ ಎಂಬ ಘೋಷಣೆಯೊಂದಿಗೆಡೈಯಿಂಗ್ ವಿಸ್ಡಂಎಂಬ ಅಪರೂಪದ ಭಾರತದ ಜಲಸಂಪನ್ಮೂಲಗಳ ಇತಿಹಾಸ ಮತ್ತು ಅವುಗಳ ರಕ್ಷಣೆ ಕುರಿತಂತೆ ನಮ್ಮ ಪೂರ್ವಿಕರು ಅಳವಡಿಸಿಕೊಂಡಿದ್ದ ದೇಸಿ ಜ್ಞಾನಶಿಸ್ತು ಕುರಿತ ಕೃತಿಯನ್ನು ಪ್ರಕಟಿಸಿದರು. ಭಾರತದ ಮೂಲೆ ಮೂಲೆಯಿಂದ ನೀರಾವರಿ ತಜ್ಞರು, ಜಲತಜ್ಞರು, ಇತಿಹಾಸಕಾರ ಮೂಲಕ ರಾಜಸ್ಥಾನ್, ಗುಜರಾತ್ ನಂತಹ ಮರಳುಗಾಡಿನಲ್ಲಿ ಕಡಿಮೆ ಮಳೆ ಬೀಳುವ ಪ್ರದೇಶಗಳ ಮಾಹಿತಿಯಿಂದ ಹಿಡಿದು, ಅತಿ ಹೆಚ್ಚು ಮಳೆಯಾಗುವ ಈಶಾನ್ಯ ಭಾರತದ ಅಸ್ಸಾಂ, ದಕ್ಷಿಣ ಭಾರತದ ತಮಿಳುನಾಡಿನ ಕಾವೇರಿ ಕಣಿವೆ ಪ್ರದೇಶದ ನೀರಾವರಿ ವ್ಯವಸ್ಥೆ ಹಾಗೂ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಕರ್ನಾಟಕ, ಆಂಧ್ರ ಮತ್ತು ತಮಿಳುನಾಡಿನಲ್ಲಿ ನಿರ್ಮಾಣವಾಗಿರುವ ಕೆರೆ ಕಟ್ಟೆಗಳು, ದೇಗುಲಗಳ ಸಮೀಪವರುವ ಕಲ್ಯಾಣಿಗಳು ಮತ್ತು ಅವುಗಳಲ್ಲಿ ಸಂಗ್ರಹವಾಗುವ ಮಳೆ ನೀರು ಮತ್ತು ಬಳಕೆ ಹೀಗೆ ಅಪರೂಪದ ಭಾರತದ ಜಲ ಸಂರಕ್ಷಣೆಯ ಇತಿಹಾಸವನ್ನು ನಮ್ಮ ಮುಂದೆ ತೆರದಿಟ್ಟು, ಭಾರತದಲ್ಲಿ ನೆಲ, ಜಲ ಮತ್ತು ಪರಿಸರದ ಬಗ್ಗೆ ಪ್ರಜ್ಞೆಯನ್ನು ಹುಟ್ಟುಹಾಕಿದ ಅನಿಲ್ ಅಗರ್ ವಾಲ್  ಕೇವಲ ತಮ್ಮ ನಲವತ್ತೆರೆಡನೆಯ ವಯಸ್ಸಿಗೆ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಅಸು ನೀಗಿದರು.

ಅನಿಲ್ ಅಗರ್ ವಾಲ್ ಅವರು ಕೃತಿಯನ್ನು ಪ್ರಕಟಿಸಿ ಇಪ್ಪತ್ತಾರು ವರ್ಷಗಳಾದವು. ಕಾಲು ಶತಮಾನ ಕಳೆದು ಹೋದರೂ ಸಹ ದೇಶವಾಗಲಿ ಅಥವಾ ಇಲ್ಲಿನ ನಾಗರೀಕರಾಗಲಿ ನೀರಿನ ಮಹತ್ವವನ್ನು ಅರಿಯಲಾರದೆ ಹೋದದ್ದು ನಿಜಕ್ಕೂ ದುರಂತವೇ ಸರಿ. ಡೌನ್ ಟು ಅರ್ಥ್ ಪತ್ರಿಕೆಯಲ್ಲಿ ಅವರ ಸಹೋದ್ಯೋಗಿಯಾಗಿದ್ದು ಇದೀಗ ಪತ್ರಿಕೆಯನ್ನು ಮುನ್ನೆಡೆಸುತ್ತಿರುವ ಸುನೀತ ನಾರಾಯಣ್ ಕಳೆದ ವರ್ಷ ಪತ್ರಿಕೆ ಹಾಗೂ ಕೃತಿಗೆ ಇಪ್ಪತ್ತೈದು ವರ್ಷ ತುಂಬಿದ ಸಂದರ್ಭದಲ್ಲಿ ಭಾರತ ಮಾತ್ರವಲ್ಲದೆ ಆಧುನಿಕ ಜಗತ್ತಿಗೆ ಆವರಿಕೊಂಡಿರುವ ಅಹಂಕಾರದ ಬಗ್ಗೆ ಬರೆಯುತ್ತಾಇಂದಿನ ಮಾರುಕಟ್ಟೆ ಪ್ರಭುತ್ವದ ಜಗತ್ತು ಹಾಗೂ ಗ್ರಾಹಕ ಸಮಾಜ ನಿಧಾನವಾಗಿ ವಿಲೀನವಾಗತೊಡಗಿವೆ. ಇದರ ಪರಿಣಾಮವಾಗಿ ಇವುಗಳ ಸುತ್ತ ಬಲಿಷ್ಠ ಕೋಟೆಯೊಂದು ನಿರ್ಮಾಣಗೊಳ್ಳುತ್ತಿದ್ದು ಕೊಳ್ಳು ಬಾಕ ಸಂಸ್ಸøತಿಯ ಜಗತ್ತಿನಲ್ಲಿ ಇಲ್ಲಿನ ಗಾಳಿ, ನೀರು, ಭೂಮಿ ಇವುಗಳ ಮೇಲಿನ ಕಾಳಜಿ ನಿಧಾನವಾಗಿ ಕರಗತೊಡಗಿದೆ. ಜೊತೆಗೆ ಇವುಗಳ ರಕ್ಷಣೆಯ ಕುರಿತು ಹೇಳಬಹುದಾಗ ಕಿವಿಮಾತುಗಳನ್ನು ಕೇಳಿಸಿಕೊಳ್ಳದ ಸ್ಥಿತಿಯಲ್ಲಿ ಈಗಿನ ಜಗತ್ತು ರೂಪುಗೊಳ್ಳುತ್ತಿದೆಎಂದು ದಾಖಲಿಸಿರುವ ಮಾತುಗಳು ಭವಿಷ್ಯದ ಕರಾಳ ಜಗತ್ತಿಗೆ ಬರೆದ ಮುನ್ನಡಿ ಎಂದು ನಾವು ಭಾವಿಸಬಹುದಾಗಿದೆ. ಈಗಾಗಲೇ ಇದರ ಪರಿಣಾಮಗಳನ್ನು ಹಾಗೂ ಜಾಗತಿಕ ಮಟ್ಟದಲ್ಲಿ ಬರಿದಾಗುತ್ತಿರುವ ನೀರಿನ ಸೆಲೆಗಳು, ಕುಡಿಯುವ ನೀರಿಗಾಗಿ ನಗರಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಉಚಿಟಾಗಿರುವ ಹಾಹಾಕಾರಕ್ಕೆ ನಾವೀಗ ಸಾಕ್ಷಿಯಾಗುತ್ತಿದ್ದೇವೆ.
ಇತ್ತೀಚೆಗೆ ಬಿಡುಗಡೆಯಾದ ಜಾಗತಿಕ ಸಮೀಕ್ಷೆ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿಗಳ ಪ್ರಕಾರ ದಕ್ಷಿಣ ಆಫ್ರಿಕಾದ ಕೇಪ್ ಟೌನ್, ಚೀನಾದ ಬೀಜಿಂಗ್, ಮೆಕ್ಸಿಕೋ ನಗರ, ಭಾರತದ ಬೆಂಗಳುರು ನಗರ  ಟರ್ಕಿಯ ಇಸ್ತಾನ್ ಬುಲ್ ನಗರಗಳು ಸೇರಿದಂತೆ ಜಗತ್ತಿನ ಇನ್ನೂರಕ್ಕೂ ಹೆಚ್ಚು ನಗರಗಳಲ್ಲಿ ಅಂತರ್ಜಲ ಬರಿದಾಗಿದ್ದು ಜಲಕ್ಷಾಮವನ್ನು ಎದುರಿಸುತ್ತಿವೆ. ಇದು ಕೇವಲ ನಗರಗಳ ಕುರಿತ ಮಾತಾಗಿರದೆ, Àಕ್ಷಿಣÁಫ್ರಿಕಾ ಮತ್ತು ಏಷ್ಯಾದ ಹಲವು ರಾಷ್ರಗಳ ಗ್ರಾಮಾಂತರ ಪ್ರದೇಶದ ಕಥೆಯೂ ಕೂಡ ಆಗಿದೆ. ಅಸ್ವಾಭಾವಿಕವಾಗಿ ಬೆಳೆಯುತ್ತಿರುವ ನಗರೀಕರಣ, ಮಿತಿ ಮೀರುತ್ತಿರುವ ಜನಸಂಖ್ಯೆ ಹಾಗೂ ಇವುಗಳ ಪರಿಣಾಮವಾಗಿ ಕೈಗಾರಿಕೆಗಳಿಗೆ ಮತ್ತು ಕೃಷಿ ಚಟುವಟಿಕೆಯಲ್ಲಿ ವಾಣಿಜ್ಯ ಬೆಳೆಗಳಿಗೆ ದುರ್ಬಳಕೆಯಾಗಿತ್ತಿರುವ ಅಂರ್ತಜಲವು  ಜನಸಾಮಾನ್ಯರ ಪಾಲಿಗೆ ನಿಲುಕದ ಅಪಾಯದ ಹಂತವನ್ನು ತಲುಪಿದೆ ಎಂದು ಅಮೇರಿಕಾದ ವಿಜ್ಞಾನಿ ರಾಬರ್ಟ್ ಮ್ಯಾಕ್ ಡೋನಾಲ್ಡ್ ಅಭಿಪ್ರಾಯ ಪಟ್ಟಿದ್ದಾರೆ. ಎರಡು ದಶಕಗಳ ಹಿಂದೆ ಶೇಕಡ 3 ರಷ್ಟು ಇದ್ದ ನಗರವಾಸಿಗಳ ಸಂಖ್ಯೆ ಇದೀಗ ಶೇಕಡ 54 ಕ್ಕೆ ಏರಿದೆ.  ಶತಮಾನದ ಅಂತ್ಯಕ್ಕೆ ಶೇಕಡ 66 ರಷ್ಟು ಮಂದಿ ನಗರವಾಸಿಗಳಾಗಿರುತ್ತಾರೆ ಎಂದು ವಿಶ್ವ ಸಂಸ್ಥೆಯ ವರದಿ  ಹೇಳುತ್ತದೆ. ಭಾರತ ಮತ್ತು ಕರ್ನಾಟಕ ರಾಜ್ಯದ  ಚಿತ್ರಣವೂ ಸಹ ಇದಕ್ಕಿಂತ ಭಿನ್ನವಾಗಿಲ್ಲ.

1791 ರಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಪ್ರಕಟವಾಗಿರುವ  ಗೆಜೆಟಿಯರ್ ಒಂದರಲ್ಲಿ ಭಾರತವೂ ಸೇರಿದಂತೆ ಕರ್ನಾಟಕ ಮಳೆ ಮತ್ತು ಬರಗಳ ವಿವರ ದಾಖಲಾಗಿದೆ. ನೆಲಕ್ಕೆ ಅಥವಾ ದೇಶಕ್ಕೆ ಬರ ಮತ್ತು ಕ್ಷಾಮ ಹೊಸದೇನಲ್ಲ. ಆದರೆ, ನಮ್ಮ ಜನ ಬರದ ನಡುವೆಯೂ ಬಡುಕುವ ಕಲೆಯನ್ನು ಅರಿತಿದ್ದರು. ಪ್ರಾಕೃತಿಕ ಸಂಪನ್ಮೂಲಗಳ ಮಿತ ಬಳಕೆ ಹಾಗೂ ಅವುಗಳ ರಕ್ಷಣೆ ಕುರಿತಂತೆ ಅವರಿಗಿದ್ದ ಕಾಳಜಿ ಇವೆಲ್ಲವೂ ಅವರನ್ನು ದೃತಿಗೆಡಿಸಿರಲಿಲ್ಲ. ಆದರೆ, ಸತತ ಮೂರು ವರ್ಷಗಳ ಬರದಿಂದ ನರಳಿದ ಕರ್ನಾಟಕದಲ್ಲಿ ಇತ್ತೀಚೆಗೆ ಉಂಟಾಗಿರುವ ಕುಡಿಯುವ ನೀರಿನ ಬವಣೆ ನಮ್ಮೆಲ್ಲರನ್ನೂ ಮರುಚಂತನೆಗೆ ಪ್ರೇರೇಪಿಸಿದೆ. ಕರ್ನಾಟಕದಲ್ಲಿ ಕಾವೇರಿ, ಕೃಷ್ಣಾ , ತುಂಗಾ, ಸೇರಿದಂತೆ ಏಳು ನದಿಗಳ ನೀರಿನ ಆಶ್ರಯದಲ್ಲಿ 176 ತಾಲ್ಲೂಕುಗಳಲ್ಲಿ ಉತ್ತರ ಕರ್ನಾಟಕದ 30 ತಾಲ್ಲೂಕುಗಳು ಮತ್ತು ದಕ್ಷಿಣ ಕರ್ನಾಟಕದ 40 ತಾಲ್ಲೂಕುಗಳಲ್ಲಿ ಬರದಿಂದಾಗಿ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಉತ್ತರ ಕನಾಟಕದ 16 ಮತ್ತು ದಕ್ಷಿಣ ಕರ್ನಾಟಕದ 11 ತಾಲ್ಲೂಕುಗಳಲ್ಲಿ ಮಳೆಯ ಕೊರೆತೆಯುಂಟಾಗಿತ್ತು.
ಆಶ್ಚರ್ಯಕರ ಸಂಗತಿಯೆಂದರೆ, ಮಲೆನಾಡಿನ ಪ್ರದೇಶವಾದ ಶಿವಮೊಗ್ಗ ಮತ್ತು ನೀರಾವರಿ ಜಿಲ್ಲೆಯಾದ ಮಂಡ್ಯ ಜಿಲ್ಲೆಯ ಹಲವುಗಳಲ್ಲಿ ಕುಡಿಯುವ ನೀರಿನ ಕೊರತೆಯುಂಟಾಗಿದೆ. ರಾಜ್ಯದ 30 ತಾಲ್ಲೂಕುಗಳಲ್ಲಿ ಅಂತರ್ಜಲವನ್ನು ಮಿತಿ ಮೀರಿ ಬಳಕೆ ಮಾಡಿಕೊಂಡಿದ್ದರೆ, (ಇವುಗಳಲ್ಲಿ 13 ತಾಲ್ಲೂಕುಗಳು ಶೇಕಡ 90 ರಷ್ಟು ಅಂತರ್ಜಲವನ್ನು ಬಳಕೆ ಮಾಡಿವೆ) 63 ತಾಲ್ಲೂಕುಗಳಲ್ಲಿ ಮಿತವಾಗಿ ಬಳಕೆಯಾಗಿದೆ. 70 ತಾಲ್ಲೂಕುಗಳಲ್ಲಿ ಮಾತ್ರ ಸುರಕ್ಷಿತ ಮಟ್ಟದಲ್ಲಿವೆ. ಗ್ರಾಮಾಂತರ ಪ್ರದೇಶದಲ್ಲಿ ಕೃಷಿ ಚಟುವಟಿಕೆಯಲ್ಲಿ ಆದ ಬದಲಾವಣೆ ಅಂದರೆ, ವಾಣಿಜ್ಯ ಬೆಳೆಗಳ ಮೇಲಿನ ಅವಲಂಬನೆ  ಮತ್ತು ಹೈನುಗಾರಿಕೆಯಲ್ಲಿ ಮಿತಿ ಮೀರಿದ ಬಳಕೆಯಿಂದಾಗಿ ಅಂತರ್ಜಲ ಕುಸಿತವಾಗಿದೆ. ( ದೇಸಿ ಆಕಳುಗಳು 15 ರಿಂದ 20 ಲೀಟರ್ ಕುಡಿಯುತ್ತಿದ್ದವು. ಇದೀಗ ರೈತರು ಸಾಕುತ್ತಿರುವ ವಿದೇಶಿ ತಳಿಗಳಾದ ಜೆರ್ಸಿ ಮತ್ತು ಹೆಚ್.ಎಫ್ ತಳಿಗಳ ಆಕಳುಗಳು ದಿನವೊಂದಕ್ಕೆ 80 ರಿಂದ 100 ಲೀಟರ್ ನೀರನ್ನು ಸೇವಿಸುತ್ತವೆ. ಜೊತೆಗೆ ಪ್ರತಿ ದಿನ ಅವುಗಳಿಗೆ ಸ್ನಾನ ಮತ್ತು ಕೊಟ್ಟಿಗೆಗಳ ಸ್ವಚ್ಚತೆಗಾಗಿ ಸಾವಿರಾರು ಲೀಟರ್ ನೀರು ಬಳಕೆಯಾಗುತ್ತಿದೆ. ಇಂತಹ ಚಟುವಟಿಕೆಗಳು ಪರೋಕ್ಷವಾಗಿ ನೀರಿನ ಬರಕ್ಕೆ ಕಾರಣವಾಗುತ್ತಿವೆ.
ನಮ್ಮ ರೈತರ ದುರಾಸೆಯ ಫಲವಾಗಿ ಕೃಷಿ ಕ್ಷೇತ್ರ ಬಡವಾಗುತ್ತಿರುವ ಜೊತೆಗೆ ಕರ್ನಾಟಕz ಅಂತರ್ಜಲ ಯಾವ ರೀತಿಯಲ್ಲಿ ದುರ್ಬಳಕೆಯಾಯಿತು ಎಂಬುದಕ್ಕೆ ತುಮಕೂರು ಜಿಲ್ಲೆ ನಮಗೆ ಸಾq್ಷಯನ್ನು ಒದಗಿಸುತ್ತದೆ. ಕರ್ನಾಟಕದಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯ್ಕನ ಹಳ್ಳಿ, ಗುಬ್ಬಿ ಹಾಗೂ ತಿಪಟೂರು ತಾಲ್ಲೂಕುಗಳು ತೆಂಗಿನಕಾಯಿಗೆ ಪ್ರಸಿದ್ಧಿಯಾಗಿದ್ದವು. ತಿಪಟೂರಿನ ಕೊಬ್ಬರಿ ದೇಶವ್ಯಾಪಿ ಹೆಸರಾಗಿತ್ತು. ಆದರೆ, ಅಲ್ಲಿನ ರೈತರು ಮಲೆನಾಡು ಪ್ರದೇಶದಲ್ಲಿ ಅತಿ ಹೆಚ್ಚು ಮಳೆ ಬೀಳುವ ಶಿವಮೊಗ್ಗ, ಸಾಗರ, ಉತ್ತರ ಕರ್ನಾಟಕದ ಸಿರ್ಸಿ ಪ್ರದೇಶಗಳಲ್ಲಿ ಬೆಳೆಯಯವ ಅಡಿಕೆ ಬೆಳೆಯ ಮೇಲೆ ಮೋಹಗೊಂಡು ತುಮಕೂರು ಜಿಲ್ಲೆಯಲ್ಲಿ ಅಡಿಕೆ ಬೆಳೆಯಲು ಪ್ರಾರಂಭಿಸಿದರು. ಅತಿ ಹೆಚ್ಚು ನೀರು ಬೇಡುವ ಅಡಿಕೆ ಬೆ¼ಯುÉ ಒಂದು ವರ್ಷ ಬರ ಆವರಿಸಿಕೊಂಡರೆ, ತೆಂಗನ ಹಾಗೆ ಬದುಕಿರಲಾರದು. ರೈತರು ಇವುಗಳನ್ನು ಉಳಿಸಿಕೊಳ್ಳುವ ಸಲುವಾಗಿ ತೊಟಗಳಲ್ಲಿ ಕೊಳವೆ ಬಾವಿಗಳ ಮೊರೆ ಹೋದರು. ಅಂತಿಮವಾಗಿ 60 ಅಡಿಯಿಂದ 80 ಅಡಿಗೆ ಸಿಗುತ್ತಿದ್ದ ಅಂತರ್ಜಲ ಸಾವಿರ ಅಡಿಯ ಆಳಕ್ಕೆ ಇಳಿದು ಕೊನೆಗೆ ಬತ್ತಿ ಹೋಯಿತು. ಇದೀಗ ಬೆಳೆಯೂ ಇಲ್ಲದೆ, ನೀರು ಇಲ್ಲದೆ ಕಂಗಾಲಾಗಿರುವ ರೈತರು ತಮ್ಮ ತಮ್ಮ ತೊಟಗಳನ್ನು ಪಾಳು ಬಿಟ್ಟು ಬೆಂಗಳೂರಿಗೆ ಬಂದು ಆಟೋ ಚಾಲಕರಾಗಿ, ಸಣ್ಣ ಕೈಗಾರಿಕೆಗಳಲ್ಲಿ ಕಾರ್ಮಿಕರಾಗಿ ಬದುಕು ಸವೆಸುತ್ತಿದ್ದಾರೆ. ಇದು ಪ್ರಕೃತಿ ನಿರ್ಮಿತ ಬರ ಎನ್ನುವ ಬದಲು ಮಾನವ ನಿರ್ಮಿತ ಬರ ಎಂದು ನಾವು ಕರೆಯಬಹುದು.

ಅ0ತರ್ಜಲದ ಶೋಷಣೆಯಲ್ಲಿ ಬೆಂಗಳೂರು ನಗರದ ನಾಗರೀಕರು, ಮಹಾನಗರ ಮತ್ತು ರಾಜ್ಯದ ಸ್ಥಳಿಯ ಸಂಸ್ಥೆಗಳು ಸಹ ಹಿಂುದೆ ಬಿದ್ದಿಲ್ಲ. ರಾಜ್ಯದ 208 ನಗರ ಸಭೆಗಳಚಿತಹ ಸ್ಥಳಿಯ ಸಂಸ್ಥೆಗಳಲ್ಲಿ 48 ಸಂಸ್ಥೆಗಳು ಕುಡಿಯುವ ನೀರಿಗಾಗಿ ಸಂಪೂರ್ಣವಾಗಿ ಕೊಳವೆ ಬಾವಿಗಳನ್ನು ಆಶ್ರಯಿಸಿವೆ. ಆದರೆ, ಈವರೆಗೆ ಪಚಿiÀiರ್Á ವ್ಯವಸ್ಥೆಯ ಕುರಿತು ಯೋಚಿಸಲಿಲ್ಲ. ಜೊತೆಗೆ ಕೊಳವೆ ಬಾವಿಗಳ ಪುನಶ್ಚೇತನಕ್ಕೆ ಯೋಜನೆಯನ್ನೂ ಸಹ ರೂಪಿಸಿಲ್ಲ. ಜಗತ್ತಿನ ಮಾಹಿತಿ ತಂತ್ರಜ್ಞಾನದ ತೊಟ್ಟಿಲು ಎಂದು ಕರೆಯಲಾಗುವ ಬೆಂಗಳೂರು ನಗರ ಇನ್ನು ಐದಾರು ವರ್ಷಗಳಲ್ಲಿ ಮರುಭೂಮಿಯ ಪ್ರದೇಶವಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ. ವಾರ್ಷಿಕವಾಗಿ ಸರಾಸರಿ 800 ರಿಂದ 1000 ಮಿಲಿಮೀಟರ್ ಮಳೆಯಾಗುವ ಬೆಂಗಳುರು ನಗರದಲ್ಲಿ ಈವರೆಗೆ ಇದ್ದ ಜಲಸಂಪನ್ಮೂಲದ ತಾಣಗಳಾಗಿದ್ದ ಎಂಬತ್ತಕ್ಕೂ ಹೆಚ್ಚು ಕೆರೆಗಳಲ್ಲಿ ಕೇವಲ ಏಳು ಅಥವಾ ಎಂಟು ಮಾತ್ರ ಉಳಿದಿವೆ. ಉಳಿದ ಎಲ್ಲಾ ಕೆರೆಗಳು ಕ್ರೀಡಾಂಗಣಗಳಾಗಿ, ವಸತಿ ಪ್ರದೇಶಗಳಾಗಿ, ಕೈಗಾರಿಕಾ ಪ್ರದೇಶಗಳಾಗಿ ಕಳೆದು ಹೋದವು. ಬೆಂಗಳೂರಿಕ ಮೂರನೇ ಬಂದು ಭಾಗದಷ್ಟು ಪ್ರದೇಶಕ್ಕೆ ಕಾವೇರಿ ನದಿ ನೀರು ಲಭ್ಯವಾಗುತ್ತಿದ್ದು ಉಳಿದ ಪ್ರದೇಶ ಹಾಗೂ ಹೊಸ ಬಡಾವಣೆಗಳು ಅಂತರ್ಜಲವನ್ನು ನಂಬಿಕೊಂಡಿವೆ. 25 ವರ್ಷಗಳ ಹಿಂದೆ 55 ಲಕ್ಷ ಲೀೀಟರ್ ನೀರು  ಕೊಳವೆ ಬಾವಿಗಳಿಂದ ಬಳಕೆಯಾಗುತ್ತಿತ್ತು ಇದೀಗ ದಿನವೊಂದಕ್ಕೆ ನಾಲ್ಕು ಕೋಟಿ ಲೀಟರ್ ನೀರು ಕೊಳವೆ ಬಾವಿಗಳಿಂದ ನಗರದಲ್ಲಿ ಬಳಕೆಯಾಗುತ್ತಿದೆ.  ಆಳುವವರ ವಿವೇಚನಾರಹಿತ ನಡುವಳಿಕೆ ಮತ್ತು ತೀರ್ಮಾನಗಳಿಂದಾಗಿ ಅವ್ಯವಸ್ಥಿತವಾಗಿ ನಗರ ಬೆಳೆಯ ತೊಡಗಿದೆ. ಬೆಂಗಳುರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ.ವಿ. ರಾಮಚಂದ್ರನ್ ಅವರ ಅಧ್ಯಯದ ಪ್ರಕಾರ 1973 ರಲ್ಲಿ ಶೇಕಡ 8 ರಷ್ಟು ಇದ್ದ ವಸತಿ ಕ್ಷೇತ್ರದ ಬೆಳವಣಿಗೆ ಇದೀಗ ಶೇಕಡ 77ಕ್ಕೆ ತಲುಪಿದೆ. ಇವುಗಳಲ್ಲಿ ಶೇಕಡ 79 ರಷ್ಟು ವಸತಿ ಕ್ಷೇತ್ರದ ವಿನ್ಯಾಸ ಮತ್ತು ಬಡಾವಣೆಗಳು ಸಮರ್ಪಕವಾಗಿಲ್ಲ. 2030 ವೇಳೆಗೆ ಎರಡು ಕೋಟಿ ಜನ ಸಂಖ್ಯೆಯನ್ನು ದಾಟುವ ಬೆಂಗಳೂರು ನಗರಕ್ಕೆ ಭವಿಷ್ಯದ ದೊಡ್ಡ ಸವಾಲುಗಳೆಂದರೆ, ಕಸ ವಿಲೆವಾರಿ, ಸುಗಮ ಸಂಚಾರ ಮತ್ತು ಕುಡಿಯುವ ನೀರು ಎಂದು ರಾಮಚಂದ್ರನ್ ಅಭಿಪ್ರಾಯಪಟ್ಟಿದ್ದಾರೆ.  ಬೆಂಗಳುರು ನಗರದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಕೊಳವೆ ಬಾವಿಗಳಿದ್ದು ಪ್ರತಿ ದಿನ 44 ಹೊಸ ಕೊಳವೆ ಬಾವಿಗಳನ್ನು ಕೊರೆಯಿಸಲಾಗುತ್ತಿದೆ. ಕೆಲವು ವಾಣಿಜ್ಯ ಪ್ರದೇಶಗಳಲ್ಲಿ ಒಂದು ಚದುರ ಕಿಲೊಇಟರ್ ವ್ಯಾಪ್ತಿಯಲ್ಲಿ ಸಾವಿರಕ್ಕೂ ಹೆಚ್ಚು ಬೋರ್ ವೆಲ್ ಗಳಿವೆ. ಬೆಂಗಳುರು ದಕ್ಷಿಣ ಭಾಗವನ್ನು ಹೊರತು ಪಡಿಸಿದರೆ, ಉಳಿದೆಡೆ ಅಂತರ್ಜಲ ಸಂಪೂರ್ಣ ಬತ್ತಿ ಹೋಗಿದೆ.

ಕುಡಿಯುವ ನೀರಿನ ಕುರಿತು ಜನರಿಗೆ ಮತ್ತು ಆಳುವ ಸರ್ಕಾರಗಳಿಗೆ ಇರುವ ತಾತ್ಸಾರ ಮನೋಭಾವನೆಯಿಂದಾಗಿ ಬಡವರು, ಕೊಳಗೇರಿ ವಾಸಿಗಳ ಬದುಕು ಹಾಗೂ ಗ್ರಾಮಾಂತರ ಪ್ರದೇಶದ ಜನರ ಬದುಕು ನರಕ ಸದೃಶ್ಯವಾಗಿದೆ. ನಮ್ಮ ಪಾರಂಒರಿಕ ಜಲಮೂಲದ ತಾಣಗಳಾದ ಕೆರೆ, ಕಟ್ಟೆ, ಕಲ್ಯಾಣಿಗಳನ್ನು ನವೀಕರಿಸಿ, ಮಳೆ ನೀರನ್ನು ಸಂಗ್ರಹಿಸಿಕೊಂಡು ಭೂಮಿಯ ಅಚಿತರ್ಜಲವನ್ನು ನಾವು ಕಾಪಾಡಿಕೊಳ್ಳದಿದ್ದರೆ, ನಮಗೆ ಮಾತ್ರವಲ್ಲದೆ, ಜಗತ್ತಿನ ಜೀವ ಜಾಲಕ್ಕೆ ಭವಿಷ್ಯವಿಲ್ಲ. ಜೀವ ಜಲದ ಕುರಿತ ಜಾಗೃತಿ ಮತ್ತು ರಕ್ಷಣೆ ಕುರಿತ ಕಾಳಜಿ ನಮ್ಮೆಲ್ಲರ ದಿನ ನಿತ್ಯದ ಕಾಳಜಿಯಾದರೆ ಮಾತ್ರ ನಮ್ಮ ಮುಂದಿನ ತಲೆಮಾರು ಬದುಕ ಬಲ್ಲದು. ಇಲ್ಲದಿದ್ದರೆ ನಾಗರೀಕತೆಯ ಅವಸಾನದಂತೆ ಆಧುನಿಕ ಜಗತ್ತು ಕೂಡ ನಾಶವಾಗುವುದರಲ್ಲಿ ಸಂಶಯವಿಲ್ಲ.
( ದಿನಾಂಕ -24-6-18 ರ ವಿಜಯವಾಣಿ ದಿನಪತ್ರಿಕೆಯ ಸಾಪ್ತಾಹಿಕದಲ್ಲಿ ಮಳೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಶೀರ್ಷಿಕೆಯಡಿ ಪ್ರಕಟವಾದ ಲೇಖನ)