Thursday, 27 February 2014

ದೃಶ್ಯ ಬ್ರಹ್ಮನ ಅಗಲಿಕೆಯ ನೋವುಕಳೆದ ಪೆಬ್ರವರಿ ಹದಿನೆಂಟರೆಂದು ನಮ್ಮನ್ನು ಅಗಲಿದ ಪ್ರಖ್ಯಾತ ಛಾಯಾಚಿತ್ರಗ್ರಾಹಕ, ಮತ್ತು ಕನ್ನಡಿಗ ಹಾಗೂ ಬೆಂಗಳೂರಿನಲ್ಲಿ ವಾಸವಾಗಿದ್ದ ಟಿ.ಎಸ್. ನಾಗರಾಜನ್ ಅವರ ಸಾವಿನ ಸುದ್ಧಿ, ರಾಹುಲ್ ಮತ್ತು ನರೇಂದ್ರಮೋದಿಯವರ ಚುನಾವಣಾ ಪ್ರಚಾರದ ನಡುವೆ ಪ್ರಮುಖ ಸುದ್ಧಿಯಾಗಲಿಲ್ಲ. ಇಂದಿನ ತಲೆಮಾರಿನ ಪತ್ರಕರ್ತರಿಗೆ ಮತ್ತು ಪತ್ರಿಕೋದ್ಯಮಕ್ಕೆ ಅಪರಿಚಿತರಾಗಿ ಉಳಿದ ಟಿ.ಎಸ್.ಸತ್ಯನ್ ಮತ್ತು ಟಿ.ಎಸ್.ನಾಗರಾಜನ್ ಎಂಬ ಇಬ್ಬರು ಮೈಸೂರು ಮೂಲದ ಛಾಯಾಗ್ರಾಹಕ ಸಹೋದರರು ತಮ್ಮ ಕಪ್ಪು ಬಿಳುಪಿನ ಚಿತ್ರಗಳ ಮೂಲಕ ಕೇವಲ ಭಾರತ ಮಾತ್ರವಲ್ಲ ಜಗತ್ತಿನ ಪತ್ರಿಕೋದ್ಯಮದಲ್ಲಿ ತಮ್ಮ ಪ್ರತಿಭೆಯ ಛಾಪು ಮೂಡಿಸಿದವರು.
ಛಾಯಾಚಿತ್ರ ಕಲೆಯನ್ನು ಒಂದು ತಪಸ್ಸಿನಂತೆ ಧ್ಯಾನಿಸಿದ ಟಿ.ಎಸ್. ನಾಗರಾಜನ್ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತಮಿಳುನಾಡು ಮತ್ತು ಕೇರಳದ ಅಪರೂಪದ ಮನೆಗಳನ್ನು ಸೆರೆಹಿಡಿದು ಭಾರತದ ಸಂಸ್ಕೃತಿಯನ್ನು ತಮ್ಮ ಚಿತ್ರಗಳ ಮೂಲಕ ದಾಖಲಿಸಿದ ಅಪರೂಪದ ಮಹಾನ್  ಕಲಾವಿದ.

ಮೈಸೂರು ನಗರದಲ್ಲಿ 1932 ರಲ್ಲಿ ಜನಿಸಿದ ನಾಗರಾಜನ್ ತಮ್ಮ ಬಾಲ್ಯದ ವಿದ್ಯಾಭ್ಯಾಸ ಮತ್ತು ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿ, ನಂತರ ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆಯಲ್ಲಿ ಚಿತ್ರಗ್ರಾಹಕರಾಗಿ ವೃತ್ತಿ ಆರಂಭಿಸಿದರು. ಕೇಂದ್ರ ವಾರ್ತಾ ಇಲಾಖೆಯು ಪ್ರಕಟಿಸುವ “ ಯೋಜನಾ” ಎಂಬ ಪತ್ರಿಕೆಗೆ ಮುಖ್ಯ ಛಾಯಾಗ್ರಾಹಕರಾಗಿ ನೇಮಕಗೊಂಡ ನಾಗರಾಜನ್ ತಮ್ಮ ನಿಕಾನ್ ಕ್ಯಾಮರಾವನ್ನು ಹೆಗಲಿಗೇರಿಸಿ ಇಡೀ ದೇಶವನ್ನು ಸುತ್ತಿದವರು.
ಭಾರತದ ದೇಗುಲಗಳು, ವಾಸ ಸ್ಥಳವಾದ ಮನೆಗಳು, ಅಲ್ಲಿನ ವಿಶಿಷ್ಟ ಸಂಸ್ಕೃತಿ, ಜನರು ಮತ್ತು ಅವರ ಉಡುಪು ಇವುಗಳನ್ನು ಮುಖ್ಯಗುರಿಯಾಗಿರಿಸಿಕೊಂಡು ತೆಗೆದ ಚಿತ್ರಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ನಾಗರಾಜನ್ ಅವರಿಗೆ ಹೆಸರು ತಂದುಕೊಟ್ಟವು

ಮೈಸೂರಿನಲ್ಲಿ ಪಿ.ಯು.ಸಿ. ಓದುತ್ತಿದ್ದ ಸಂದರ್ಭದಲ್ಲಿ ನಡೆದ ಒಂದು ಘಟನೆ ಟಿ.ಎಸ್ ನಾಗರಾಜನ್ ಅವರ ಭವಿಷ್ಯದ ದಿಕ್ಕನ್ನು ಬದಲಿಸಿತು ಅಂದಿನ ಮೈಸೂರು ಮಹಾರಾಜರ ಪ್ರೀತಿಯ ಪಟ್ಟದ ಆನೆ ವೃದ್ಧಾಪ್ಯದಿಂದ ಮೃತಪಟ್ಟಾಗ ಇಡೀ ಮೈಸೂರಿನ ಜನತೆ ಅರಮನೆಯ ಪರಿವಾರದೊಂದಿಗೆ ಶೋಕಸಾಗರದಲ್ಲಿ ಮುಳುಗಿತು. ಈ ಸಂದರ್ಭದಲ್ಲಿ ಸ್ಥಳೀಯ ಸ್ಟುಡಿಯೊ ಛಾಯಾಗ್ರಾಹಕ ತೆಗೆದಿದ್ದ ಆನೆಯ ಚಿತ್ರವನ್ನು ಸಂಗ್ರಹಿಸಿದ ನಾಗರಾಜನ್, ಆನೆಯ ಸಾವಿನ ಸುದ್ಧಿ ಮತ್ತು ಪಟ್ಟದಾನೆಯ ಜೊತೆಗೆ ಮೈಸೂರಿನ ಜನತೆಗೆ ಇದ್ದ ಭಾವನಾತ್ಮಕ ಸಂಬಂಧ ಇವುಗಳನ್ನು ಆಧರಿಸಿ, “ A Mysore Gentlemen Passes Away” ಎಂಬ ಲೇಖನವನ್ನು ಬರೆದರು. ಅದನ್ನು ಅಂದಿನ ಬಾಂಬೆಯಿಂದ ಪ್ರಕಟವಾಗುತ್ತಿದ್ದ ಇಂಗ್ಲೀಷ್ ಪತ್ರಿಕೆಗೆ ಕಲಿಸಿಕೊಟ್ಟರು. ಒಂದು ತಿಂಗಳು ಕಳೆದ ನಂತರ ನಾಗರಾಜನ್ ಅವರ ಸರಸ್ವತಿ ಪುರಂ ಮನೆಯ ವಿಳಾಸಕ್ಕೆ ಲೇಖನ ಪ್ರಕಟವಾದ ಪತ್ರಿಕೆ, ಸಂಪಾದಕರ ಪತ್ರವನ್ನು ಒಳಗೊಂಡ ಹಣದ ಚೆಕ್ ಇವೆಲ್ಲವೂ ತಲುಪಿದವು.  ಇಂಗ್ಲೀಷ್ ಮೂಲದ ಸಂಪಾದಕ ನಾಗರಾಜನ್ ಅವರ ಲೇಖನ ಶೈಲಿಯನ್ನು ಮೆಚ್ಚುವುದರ ಜೊತೆಗೆ ಒಳ್ಳೆಯ ಕ್ಯಾಮರಾ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದ. ಸಂಭಾವನೆಯಾಗಿ ಬಂದ ಹಣದಲ್ಲಿ ಕ್ಯಾಮರಾ ಖರೀದಿಸಿದ ನಾಗರಾಜನ್ ರವರ ಬದುಕಿನ ದಿಶೆಯನ್ನು ಒಂದು ಲೇಖನ ಅನಿರೀಕ್ಷಿತವಾಗಿ ರೂಪಿಸಿತ್ತು,
1978 ರಲ್ಲಿ ತಮ್ಮ ಹುದ್ದೆಗೆ ರಾಜಿನಾಮೆ ನೀಡಿ, ಛಾಯಾಗ್ರಹಣ ಕಲೆಗೆ ತಮ್ಮನ್ನು ಅರ್ಪಿಸಿಕೊಂಡ ನಾಗರಾಜನ್ ತಮ್ಮ ಹಿರಿಯಣ್ಣ ಟಿ.ಎಸ್. ಸತ್ಯನ್ ಅವರಂತೆ ಕಪ್ಪು ಬಿಳುಪು ಚಿತ್ರಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದರು. ಇವರು ತೆಗೆದ ಭಾರತದ ಖ್ಯಾತ ನಾಮರ ಚಿತ್ರಗಳು, ಇಂದಿಗೂ ಅಪರೂಪದ ಚಿತ್ರಗಳೆಂದು ಪ್ರಸಿದ್ಧಿಯಾಗಿವೆ, ಇವುಗಳಲ್ಲಿ ಖ್ಯಾತ ಸಂಗೀತ ಕಲಾವಿದೆ ಎಂ.ಎಸ್. ಸುಬ್ಬುಲಕ್ಷ್ಮಿಯವರು ತಮ್ಮ ಮನೆಯ ಮುಂದೆ ಕುಳಿತು ರಂಗೋಲಿ ಬಿಡಿಸುತ್ತಿರುವ ಚಿತ್ರ ಏಕಕಾಲದಲ್ಲಿ ಸುಬ್ಬುಲಕ್ಷ್ಮಿ ಮತ್ತು ನಾಗರಾಜನ್ ಅವರಿಗೆ ಖ್ಯಾತಿಯನ್ನು ತಂದು ಕೊಟ್ಟಿತು.

ಮನುಷ್ಯರು ಕ್ಯಾಮರಾ ಮುಂದೆ ಅಭಿನಯಿಸಬಾರದು, ಅವರ ನಡುವಳಿಕೆ ಸಹಜವಾಗಿರಬೇಕು ಎಂಬ ವಿಷಯದಲ್ಲಿ ಧೃಡನಂಬಿಕೆಯಿಟ್ಟಿದ್ದ ನಾಗರಾಜನ್ ಅವರು, ಈ ನಿಟ್ಟಿನಲ್ಲಿ ತೆಗೆದ  ಸಹಜ ಚಿತ್ರಗಳು ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡು  ಅವರಿಗೆ ಹೆಸರು ತಂದುಕೊಟ್ಟಿವೆ.

ಕಳೆದ ವರ್ಷ ತಮ್ಮ ಜೀವಮಾನದ ಸಾಧನೆಗೆ ಕೇಂದ್ರ ಸರ್ಕಾರದಿಂದ ಗೌರವಿಸಲ್ಪಟ್ಟ ಟಿ.ಎಸ್. ನಾಗರಾಜನ್ “ ಮದ್ರಾಸ್ ನಗರ ಸಂಸ್ಥೆಯೊಂದರ ಸಹಯೋಗದಲ್ಲಿ ಹೊರ ತಂದಿರುವ “ ವ್ಯಾನಿಶಿಂಗ್ ಹೋಮ್ಸ್ ಆಫ್ ಇಂಡಿಯ” ಎಂಬ ಚಿತ್ರ ಸಂಪುಟ ಅವರ ಸೃಜನಶೀಲತೆಯ ಪ್ರತಿಬಿಂಭವಾಗಿದೆ.


ಚಿತ್ರಗಳ ಜೊತೆ ತಮ್ಮ ನೆನಪುಗಳನ್ನು ಸಹ ಅವರು ದಾಖಲಿಸಿರುವುದು ವಿಶೇಷ. ಇಂದಿರಾಗಾಂಧಿ, ಎಂ.ಎಸ್. ಸುಬ್ಬುಲಕ್ಷ್ಮಿ ಮುಂತಾದವರ ಜೊತೆಗಿನ ತಮ್ಮ ನೆನಪುಗಳನ್ನು ತಾವು ಬರೆಯುತ್ತಿದ್ದ ಆತ್ಮಕಥನದಲ್ಲಿ ದಾಖಲಿಸಿದ್ದಾರೆ. ಆತ್ಮ ಕಥನದ ಹೆಸರು” ಎ ಪರ್ಲ್ ಆಫ್ ವಾಟರ್ ಆನ್ ಎ ಲೋಟಸ್ ಲೀಫ್” ಆದರೆ ಆ ಕೃತಿ ಹೊರಬಂದ ಬಗ್ಗೆ ನನಗೆ ಮಾಹಿತಿ ಇಲ್ಲ.

ಟಿ.ಎಸ್. ನಾಗರಾಜನ್ ಅವರು ಸೆರೆ ಹಿಡಿದ ಕೆಲವು ಚಿತ್ರಗಳು ಇಲ್ಲಿವೆ.
Sunday, 16 February 2014

ಭಾರತದ ರಾಜಕಾರಣದ ವೈಫಲ್ಯ ಮತ್ತು ವಿಷಾಧಭಾರತದ ರಾಜಕಾರಣದಲ್ಲಿ ಪ್ರಜ್ಞಾವಂತ ನಾಗರೀಕರ ಆಶಾಕಿರಣದಂತೆ ಗೋಚರಿಸಿದ್ದ ಅರವಿಂದ್ ಕೇಜ್ರಿವಾಲರ ಅಮ್ ಆದ್ಮಿ ಪಕ್ಷ ಕೊನೆಗೂ ಎಲ್ಲರನ್ನೂ ನಿರಾಸೆಗೊಳಿಸಿದೆ. ಅನಿರೀಕ್ಷಿತವಾಗಿ ದೆಹಲಿಯಲ್ಲಿ ಗದ್ದೆಗೆಯೇರಿದ ರೀತಿ ನಮ್ಮನ್ನು ವಿಸ್ಮಯಗೊಳಿಸುವಷ್ಟರಲ್ಲಿ ಅಧಿಕಾರದಿಂದ ನಿರ್ಗಮಿಸುವುದರ ಮೂಲಕ ತನ್ನ ಅಸಹಾಯಕತೆ ಮತ್ತು ಅಸಮರ್ಥತೆಯನ್ನು ಅನಾವರಣಗೊಳಿಸಿದೆ.
ಕಳೆದ ಒಂದು ದಶಕದಿಂದ ಭಾರತದಲ್ಲಿ ವಿಫಲಗೊಂಡಿರುವ ಹಾಗೂ, ರಾಜಕಾರಣದ ಪ್ರಲೋಭನೆ ಮತ್ತು ಹುನ್ನಾರಗಳಿಗೆ ಬಲಿಯಾಗಿ ಘಾಸಿಗೊಂಡ ಸಾಮಾಜಿಕ ಚಳುವಳಿಗಳ ಪಟ್ಟಿಗೆ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದ ಅಮ್ ಆದ್ಮಿ ಪಕ್ಷ ಕೂಡ ಸೇರ್ಪಡೆಯಾಗುವುದರ ಮೂಲಕ ಇತಿಹಾಸದ ಕಸದಬುಟ್ಟಿಗೆ ಸೇರಿದೆ.
ಈ ದೇಶದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದುದ್ದಕ್ಕೂ ಸ್ವಯಂಕೃತ ಅಪರಾಧ ಮತ್ತು ಸಂಘಟನೆಗಳ ನಾಯಕರ ಅಹಂ ನಿಂದಾಗಿ ವಿಫಲಗೊಂಡ ಚಳುವಳಿಗಳ ಪಟ್ಟಿ ಸಾಕಷ್ಟು ಉದ್ದವಾಗಿದೆ. ನಮ್ಮ ಕಣ್ಣೆದುರುಗಿನ ಈ ದುರಂತಗಳಿಗೆ ಸಾಕ್ಷಿಯಾದ ನಾವೆಲ್ಲರೂ ಈಗ ಬೇಸರಪಡುವುದರ ಬದಲಾಗಿ, ಯಾವುದೇ ಭಾವನೆಗಳಿಲ್ಲದ  ಸಂತರಾಗುವ ಕಾಲ ಇದಾಗಿದೆ.
ಸ್ವಾತಂತ್ರ್ಯಾನಂತರದ ಭಾರತದ ರಾಜಕಾರಣದಲ್ಲಿ ಆಳವಾಗಿ ಬೇರು ಬಿಟ್ಟ ಭ್ರಷ್ಟಾಚಾರ, ಮತ್ತು ಕುಟುಂಬ ರಾಜಕಾರಣ ಹಾಗೂ ರಾಜಕಾರಣಿಗಳು ಮತ್ತು ಕಾರ್ಪೋರೇಟ್ ಸಂಸ್ಥೆಗಳ ಅಪವಿತ್ರ ಮೈತ್ರಿ, ಇವುಗಳನ್ನು ಒಂದು ದಿನ, ವಾರ, ಅಥವಾ ತಿಂಗಳಲ್ಲಿ ತೊಡೆದು ಹಾಕಲು ಹೊರಡುವುದು ಸಾಹಸದ ಕ್ರಿಯೆಯಾಗಲಾರದು, ಬದಲಾಗಿ ಅದು ಹುಂಬುತನದ ಸಾಹಸವಾಗುತ್ತದೆ. ಇದೀಗ ಅರವಿಂದ್ ಕೇಜ್ರಿವಾಲ್ ಮಾಡಿದ್ದು ಇಂತಹ ಸಾಹಸವೇ ಹೊರತು ಬೇರೇನಲ್ಲ.
ಅಮೇರಿಕಾದಲ್ಲಿ ಸಮಾನ ಸ್ವಾತಂತ್ರ್ಯ ಮತ್ತು ನಾಗರೀಕ ಹಕ್ಕುಗಳಿಗಾಗಿ ಅಲ್ಲಿನ ಬಿಳಿಯರ ವಿರುದ್ಧ ಹೋರಾಡಿದ ನಿಗ್ರೋಗಳ ಪರವಾಗಿ ಧ್ವನಿ ಎತ್ತಿದ ಅನೇಕ ಕವಿಗಳು, ಬರಹಗಾರರು 1980 ರ ದಶಕದಲ್ಲಿ ಹೊರತಂದಿದ್ದ “ ಬ್ಲಾಕ್ ಪೊಯಮ್ಸ್” ಎಂಬ ಕವಿತೆಗಳ ಸಂಕಲನದಲ್ಲಿ ಮಾರ್ಗರೇಟ್ ವಾಕಲ್ ಎಂಬಾಕೆ ಬರೆದ ಕವಿತೆಯ ಸಾಲುಗಳಿವು.
              ಗೊತ್ತಿದೆ ನಮಗೆ
              ಸ್ವಾತಂತ್ರ್ಯದ ಹಾಡು
              ಹಾಡುತ್ತಾ ಎದೆಯುಬ್ಬಿಸಿ
              ನಡೆಯುವ ನಮಗೆಲ್ಲಾ
              ಸರಳ ಹಿಂದಿನ ಕ್ರೂರ
              ಕತ್ತಲ ಕರಾಳ ಬದುಕು
              ಕಾದಿದೆ ಎಂದು.
              ಗೊತ್ತಿದೆ ನಮಗೆ
              ಸ್ವಾತಂತ್ಯವೆಂಬುದು
              ಬೀದಿ ಬದಿಯ ಅಗ್ಗದ
              ಸರಕಲ್ಲವೆಂದು
              ಏಕೆಂದರೆ,
              ರೋಮ್ ಸಾಮ್ರಾಜ್ಯವನ್ನು
              ಒಂದೇ ದಿನದಲ್ಲಿ
             ನಿರ್ಮಿಸಲಿಲ್ಲವಲ್ಲಾ?
ನಾವು ಕನಸುವ ಒಂದು ಆದರ್ಶ ಸಮಾಜದ ಬಗ್ಗೆ ಇಂತಹ ತಾಳ್ಮೆ ವಿವೇಕ ಇಲ್ಲದಿದ್ದರೆ, ದುರಂತಗಳು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಅರವಿಂದ್ ಕೇಜ್ರಿವಾಲ್ ಸಾಕ್ಷಿಯಾಗಿದ್ದಾರೆ. ಭ್ರಷ್ಟಾಚಾರವನ್ನು ಗುಡಿಸಿ ಹಾಕುತ್ತೇನೆ ಎಂದು ಪೊರಕೆಯನ್ನು ತನ್ನ ಚುನಾವಣಾ ಚಿಹ್ನೆಯನ್ನಾಗಿ ಮಾಡಿಕೊಂಡ ಅರವಿಂದ್ ಕೇಜ್ರಿವಾಲ್ ತನ್ನ ನಲವತ್ತೆಂಟು ದಿನಗಳ ಅಧಿಕಾರದಲ್ಲಿ ಆಸೆ ಮೂಡಿಸಿದ್ದಕ್ಕಿಂತ ಹೆಚ್ಚಾಗಿ ಅರಾಜಕತೆಯನ್ನು ಸೃಷ್ಟಿ ಮಾಡಿದ್ದೇ ಹೆಚ್ಚು. ಸಮಸ್ಯೆಗಳ ಪರಿಹಾರಕ್ಕೆ ಸಂಘರ್ಷವೊಂದೇ ಪರಿಹಾರವಲ್ಲ, ಸಮಾಲೋಚನೆ ಕೂಡ ಪರ್ಯಾಯ ಮಾರ್ಗ ಎಂಬುದನ್ನು ಈ ಜನನಾಯಕ ಅರಿಯದೇ ಹೋದದ್ದು ನಮ್ಮಗಳ ವರ್ತಮಾನದ ದುರಂತ. ಸ್ವತಃ ಒಬ್ಬ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ಚಳುವಳಿಗೆ ದುಮುಕಿದ ಕೇಜ್ರಿವಾಲ್ ಗೆ, ಒಂದು ಸರ್ಕಾರದ ಆಡಳಿತ  ವ್ಯವಸ್ಥೆಯಲ್ಲಿ ಅಧಿಕಾರಿ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾನು ಕನಸಿದ್ದ ಯೋಜನೆಗಳನ್ನು ಅನುಷ್ಟಾನಗೊಳಿಸುವುದು ಮುಖ್ಯ ಎಂಬುದು ಅರ್ಥವಾಗಲೇ ಇಲ್ಲ. ಅಂತಿಮವಾಗಿ  ಮುಲಯಂಸಿಂಗ್, ಶರದ್ ಪವಾರ್, ಜಯಲಲಿತ, ಚಂದ್ರಬಾಬುನಾಯ್ಡು, ಜಗನ್ ರೆಡ್ಡಿ, ಲಾಲೂ, ದೇವೆಗೌಡ, ಕರುಣಾನಿಧಿ ಮುಂತಾದವರು ಕಾಂಗ್ರೇಸ್ ಮತ್ತು ಬಿ.ಜೆ.ಪಿ. ಪಕ್ಷಗಳ ನಡುವೆ ನಡೆಸುವ  ಚೌಕಾಶಿ ರಾಜಕಾರಣವನ್ನು, ಮುಂದಿನ ದಿನಗಳಲ್ಲಿಯೂ ನಾವು ನೋಡಬೇಕಾಗಿದೆ.

ಒಮ್ಮೆ ರೋಮ್ ನಗರದ ಬೀದಿಯ ನಡುವೆ ಏಕಾಂತದಲ್ಲಿ ಕುಳಿತಿದ್ದ ಸಾಕ್ರೇಟಿಸ್ ನ ಬಳಿ ಬಂದ ಶಿಷ್ಯನೊಬ್ಬ “ ಗುರುಗಳೆ, ನಾನು ವಿವಾಹವಾಗುತ್ತಿದ್ದೇನೆ ಹರಸಿ” ಎಂದಾಗ, ಸಾಕ್ರೇಟಿಸ್ ಶಿಷ್ಯನನ್ನು ಹರಸುತ್ತಾ” ಒಳ್ಳೆಯ ಹೆಂಡತಿ ಸಿಕ್ಕರೆ ಒಳ್ಳೆಯ ನಾಗರೀಕನಾಗಿ ಬಾಳುತ್ತಿ, ಕೆಟ್ಟ ಗಯ್ಯಾಳಿ ಹೆಂಡತಿ ಸಿಕ್ಕರೆ ನನ್ನ ಹಾಗೆ ತತ್ವಜ್ಞಾನಿಯಾಗುತ್ತಿ” ಎಂದನಂತೆ. ಈಗ ಭಾರತದ ಯುವಜನತೆ ಮತ್ತು ಪ್ರಜ್ಞಾವಂತ ನಾಗರೀಕರ ಸ್ಥಿತಿ ಕೂಡ ಇದೇ ಆಗಿದೆ. ಭಾರತದ ಪ್ರಸ್ತುತ ರಾಜಕಾರಣ ನಮ್ಮನ್ನು ಸಂತರನ್ನಾಗಿ ರೂಪಿಸುತ್ತಿದೆ. ನಮ್ಮಗಳ ಸಿಟ್ಟು, ಬೇಸರ, ಅಸಹಾಯಕತೆ ಮತ್ತು ಅಸಮರ್ಥತೆಗಳ ನಡುವೆ ತಮ್ಮ ರಾಜಕೀಯ ಚಿಂತನೆ, ದೃಷ್ಟಿಕೋನ ಹಾಗೂ ಆಲೋಚನೆಗಳಲ್ಲಿ ಎರಡು ವಿರುದ್ಧ ದಿಕ್ಕಿನ  ದ್ರುವಗಳಂತಿರುವ ಅರವಿಂದ್ ಕೇಜ್ರಿವಾಲ್ ಮತ್ತು ರಾಹುಲ್ ಗಾಂಧಿ ಇವರನ್ನು ನಾವು ಆಸೆಗಣ್ಣಿನಿಂದ ನೋಡಬಹುದು. ಇವರುಗಳು ತಮ್ಮ  ಪ್ರಯೋಗ, ಕನಸುಗಳಿಗೆ ಪ್ರಬುಧ್ಧತೆಯನ್ನು ಕಸಿಮಾಡಿಕೊಂಡರೆ, ಭವಿಷ್ಯದ ನಾಯಕರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. 

ವೃದ್ಧಾಶ್ರಮದಂತೆ ಕಾಣುವ ಕಾಂಗ್ರೇಸ್ ಪಕ್ಷದಲ್ಲಿ ಗುಲಾಮಗಿರಿ ಸಂಸ್ಕೃತಿಯೆಂಬುದು, ಹೈಕಮಾಂಡ್ ಸಂಸ್ಕೃತಿಯ ಹೆಸರಿನಲ್ಲಿ ಚಾಲ್ತಿಯಲ್ಲಿದ್ದು, ಅಲ್ಲಿ ಆಂತರೀಕ ಪ್ರಜಾಪ್ರಭುತ್ವ ವ್ಯವಸ್ಥೆಯೆಂಬುದು ನಾಶವಾಗಿದೆ. ಹಾಗಾಗಿ ಅಲ್ಲಿನ ನಾಯಕರು ಉಸಿರು ತೆಗೆದುಕೊಳ್ಳುವುದರಿಂದ ಹಿಡಿದು, ಹೂಸು ಬಿಡುವವರೆಗೂ ಹೈ ಕಮಾಂಡ್ ಅನುಮತಿಗೆ ಕಾಯಬೇಕಿದೆ. ಪಕ್ಷದ ಇಂತಹ ಗೊಡ್ಡು ವ್ಯವಸ್ಥೆಯಿಂದ ಬೇಸತ್ತಿರುವ ರಾಹುಲ್ ಗಾಂಧಿ ಈಗ ನಮ್ಮೆದುರು ಏಳುಸುತ್ತಿನ ಕೋಟೆಯಲ್ಲಿ ಬಂಧಿಯಾಗಿರುವ ಅಸಹಾಯಕ ರಾಜಕುಮಾರನಂತೆ ಕಾಣುತ್ತಾರೆ.


ಕಳೆದ ಅರ್ಧ ಶತಮಾನದಲ್ಲಿ ಭಾರತದಲ್ಲಿ ಬೇರುಬಿಟ್ಟ ಬಡಜನರ ಅಸಹಾಯಕತೆ ಮತ್ತು ಅನಕ್ಷರತೆಯನ್ನು ಬಂಡವಾಳ ಮಾಡಿಕೊಂಡು, ಆಟವಾಡುತ್ತಿರುವ ರಾಜಕಾರಣಿಗಳನ್ನು ಮತ್ತು ಅಧಿಕಾರಿಶಾಹಿ ಹಾಗೂ ಜಡ್ಡುಗಟ್ಟಿದ ಕೊಳೆ ಮತ್ತು ವ್ಯವಸ್ಥೆಯನ್ನು ಬದಲಾಯಿಸಲು, ಕ್ರಾಂತಿಯೊಂದೇ ಸಾಲದು, ಜೊತೆ ಜೊತೆಗೆ ಬದಲಾಗುತ್ತಿರುವ ಕಾಲ ಮತ್ತು ತಂತ್ರಗಳ ಅನುಗುಣವಾಗಿ ನಮ್ಮ ಕಾರ್ಯತಂತ್ರ ರೂಪುಗೊಳ್ಳಬೇಕಿದೆ. ಈ ಕಾರಣಕ್ಕಾಗಿ ಮಾವೂ ಚೀನಾ ಕ್ರಾಂತಿಯ ಸಂದರ್ಭದಲ್ಲಿ “ ನಮ್ಮ ಪಾದಗಳ ಅಳತೆಗೆ ಅನುಗುಣವಾಗಿ ಪಾದರಕ್ಷೆಗಳು ಇರಬೇಕೇ ಹೊರತು, ಅವುಗಳ ಅಳತೆಗೆ ನಮ್ಮ ಪಾದಗಳನ್ನು ಕತ್ತರಿಸಕೊಳ್ಳಬಾರದು” ಎಂದು ನುಡಿದಿದ್ದ. ಪ್ರಸ್ತತ ಸನ್ನೀವೇಶದಲ್ಲಿ ಅರವಿಂದ್ ಕೇಜ್ರಿವಾಲ್  ಮತ್ತು ರಾಹುಲ್ ಗಾಂಧಿ ಅರಿಯಲೇ ಬೇಕಾದ ಸತ್ಯವಿದು