Wednesday, 25 April 2018

ಹೋರಿ ಸಿದ್ಧನ ಕಥೆನಾನು ಹುಟ್ಟಿ ಬೆಳೆದ ಮಂಡ್ಯ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಈ ಕಥೆ ಚಾಲ್ತಿಯಲ್ಲಿದೆ. ಅತ್ಯಂತ ಪಟಿಂಗನಾದ ಮತ್ತು ಐನಾತಿ ಕುಳ ಎನ್ನಬಹುದಾದ ವ್ಯಕ್ತಿಯ ಕುರಿತು ಮಾತನಾಡುವಾಗ  ಈ ಹೋರಿ ಸಿದ್ಧನ ಕಥೆಯನ್ನು ರೂಪಕವಾಗಿ ಬಳಸುತ್ತಾರೆ.
ಒಂದೂರಿನಲ್ಲಿ ಸಿದ್ಧ ಎಂಬ ಅನಕ್ಷರಸ್ತನಿದ್ದ. ಅವನು ಹಸು, ಎಮ್ಮೆಗಳನ್ನು ಸಾಕಿಕೊಂಡು ಆರಾಮವಾಗಿದ್ದನು.  ಹಾಲು ಕರೆಯುವ ವಿಷಯದಲ್ಲಿ ಸುತ್ತಮತ್ತಲಿನ ಊರುಗಳಲ್ಲಿ ಅವನನ್ನು ಮೀರಿಸುವವರು ಯಾರೂ ಇರಲಿಲ್ಲ. ಎಲ್ಲಿಯಾದರೂ ಹಾಲು ಹಿಂಡುವ ಸ್ಪರ್ಧೆ ನಡೆದರೆ, ಅಲ್ಲಿಗೆ ಹೋಗಿ ಕೇವಲ ಐದು ನಿಮಿಷದಲ್ಲಿ ಇಪ್ಪತ್ತು ಅಥವಾ ಇಪ್ಪತ್ತೈದು ಲೀಟರ್ ಹಾಲನ್ನು ಹಿಂಡುವುದರ ಮೂಲಕ ಬಹುಮಾನವನ್ನು ಗೆದ್ದು ತರುತ್ತಿದ್ದ. ಸಿದ್ಧ ಎಂದರೆ ಇಡೀ ಊರಿಗೆ ಹೆಮ್ಮೆ. ಅವನನ್ನು ಮೊದಲು ಸ್ಪರ್ಧೆಗೆ ಕಳಿಸಿ, ಆ ನಂತರ ಊರಿನ ಜನ  ಎತ್ತಿನ ಗಾಡಿಯಲ್ಲಿ ನಗಾರಿ, ತಮಟೆ, ಕೊಂಬು, ಕಹಳೆ ತೆಗೆದುಕೊಂಡು ಹೋಗಿ ಅವನನ್ನು ಊರಿಗೆ ಕರೆತರುತ್ತಿದ್ದರು.
ಒಮ್ಮೆ ನೆರೆಯ ಊರಿನಲ್ಲಿ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಎಂದಿನಂತೆ ಊರಿನವರು ಸಿದ್ಧನನ್ನು ಮೊದಲು  ಕಳುಹಿಸಿ, ನಂತರ ಡೋಲು, ತಮಟೆ, ಕಹಳೆಯೊಂದಿಗೆ ಸ್ವರ್ಧಾ ಸ್ಥಳಕ್ಕೆ ಹೋದರು. ಆದರೆ, ಅಲ್ಲಿ ಸಿದ್ಧ ಹಾಲುಕರೆಯುವಲ್ಲಿ ಸೋತು, ಪೆಚ್ಚು ಮೋರೆ ಹಾಕಿಕೊಂಡು ನಿಂತಿದ್ದ. ಊರಿನ ಜನಕ್ಕೆ ಆಶ್ಚರ್ಯವಾಯಿತು. “ ಯಾಕ್ಲಾ ಬಡ್ಡತ್ತದೆ ಸೋತು ಹೋಗಿದ್ದೀಯಾ?” ಎಂದು ಕೇಳುತ್ತಿದ್ದಂತೆ, ದುಃಖ ಉಮ್ಮಳಿಸಿ ಬಂದಂತೆ ಅಳುತ್ತಾ ಸಿದ್ದ ಮಾತನಾಡತೊಡಗಿದ “ ನೀವೆ ನೋಡ್ರುಲಾ, ಆ ಬೋಳಿಮಕ್ಕಳು ಹಾಲ್ ಕರೆಯಾಕೆ  ಎಲ್ಲರಿಗೂ  ಎಮ್ಮೆ ಕಟ್ಟ್ ಬುಟ್ಟು, ನನಗೆ ಮಾತ್ರ ಕೋಣವನ್ನು ಕಟ್ಟಿಬುಟ್ಟಿದ್ದರು. ಅದರಲ್ಲಿ ಇಷ್ಟು ಮಾತ್ರ ಕರೆಯಲಿಕ್ಕೆ ಸಾಧ್ಯವಾಯುತ್ತು” ಎನ್ನುತ್ತಾ, ಬಕೇಟ್ ನಲ್ಲಿದ್ದ ಮೂರು ಲೀಟರ್ ಹಾಲನ್ನು ತೋರಿಸಿದ.  ಆ ಸಂದರ್ಭದಲ್ಲಿ ಊರಿನ ಜನಕ್ಕೆ ಮೂರ್ಚೆ ಬಂದು ಕೆಳಕ್ಕೆ ಬೀಳುವುದು ಮಾತ್ರ ಬಾಕಿ ಇತ್ತು.
ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ಚುನಾವಣೆಯನ್ನು ಗಮನಿಸಿದಾಗ ಈ ಕಥೆ  ಪುನಃ ಜ್ಞಾಪಕಕ್ಕೆ ಬಂದಿತು. ಇಲ್ಲಿವರೆಗೆ ಸಿದ್ಧನ ವಂಶಸ್ಥರಂತೆ ಕಾಣುತ್ತಿದ್ದ ಜನರಾರ್ಧನ ರೆಡ್ಡಿ ಮತ್ತು ಅಶೋಕ್ ಖೇಣಿ ಮಾತ್ರ ಇದ್ದರು. ಈ ಬಾರಿಯ ಚುನಾವಣೆಯಲ್ಲಿ ಮೂರು ಅಥವಾ ನಾಲ್ಕು ಕ್ಷೇತ್ರಗಳನ್ನು ಹೊರತು ಪಡಿಸಿದರೆ, ಉಳಿದವರೆಲ್ಲರೂ ಹೋರಿ ಸಿದ್ಧನ ಕುಲದವರಂತೆ ಕಾಣುತ್ತಿದ್ದಾರೆ. ಇಂತಹವರನ್ನು ಜಾತಿ, ಪಕ್ಷ ಅಥವಾ ಇಂತಹವರ ನಾಯಕತ್ವದಲ್ಲಿ ಆಯಕಟ್ಟಿನ ಜಾಗದಲ್ಲಿ ಲಾಭದಾಯಕ ಹುದ್ದೆ  ಸಿಕ್ಕಿತು ಎಂಬ ಕಾರಣಕ್ಕೆ  ಹೊಗಳಿ ಬರೆಯುವುದು ಅಥವಾ ಮಾತನಾಡುವುದು  ಬೌದ್ಧಿಕ ವ್ಯಭಿಚಾರವಲ್ಲದೆ ಮತ್ತೇನು ಅಲ್ಲ.
ಹತ್ತು ವರ್ಷಗಳ ಹಿಂದೆ ನನ್ನ ಗುರುಗಳಲ್ಲಿ ಒಬ್ಬರಾದ ವಿಚಾರವಾದಿ ಪ್ರೊ. ಹೆಚ್. ಎಲ್. ಕೇಶವಮೂರ್ತಿಯವರನ್ನು ಮಂಡ್ಯದ ಇಬ್ಬರು ಹಿರಿಯ ರಾಜಕೀಯ ನಾಯಕರ ಕುರಿತು ಅಭಿಪ್ರಾಯ ಕೇಳಿದಾಗ, ನಿಷ್ಟುರ ಮಾತಿಗೆ ಹೆಸರಾಗಿದ್ದ ಅವರು , “ ಒಂದು ಹೇಸಿಗೆಯನ್ನು ಎರಡು ಭಾಗ ಮಾಡಿ ಇದರಲ್ಲಿ ಶ್ರೇಷ್ಟ ಯಾವುದು? ಎಂದು ಕೇಳಿದರೆ, ನಾನೇನು ಉತ್ತರ ಹೇಳಲಿ” ಎಂಬ ಮಾತನ್ನಾಡಿದ್ದರು.  ಅಂದು ಹೆಚ್. ಎಲ್. ಕೆ. ಆಡಿದ್ದ ಮಾತನ್ನು  ಇಂದು ಯಾವುದೇ ಮುಲಾಜಿಲ್ಲದೆ ಇಂದಿನ ರಾಜಕೀಯ ಪಕ್ಷಗಳಗೆ ಮತ್ತು ಅವುಗಳ ನಾಯಕರಿಗೆ ಬಳಸಬಹುದು.

Sunday, 8 April 2018

ಕನ್ನಡದ ಚಿತ್ರರಂಗದ ಅನನ್ಯ ಪ್ರತಿಭೆ ಟಿ.ಎಸ್.ರಂಗಾ ಇನ್ನಿಲ್ಲ.

ಕಳೆದ ಎರಡು ದಶಕಗಳಿಂದ ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ರಂಗದಿಂದ  ದೂರ ಉಳಿದುಕೊಂಡು  ಈ ಎರಡೂ ಕ್ಷೇತ್ರಗಳಿಗೆ ಅಪರಿಚತರಂತೆ, ಹಾಗೂ ಅನಾಮಿಕರಂತೆ ಕಾಣುತ್ತಿದ್ದ ಕನ್ನಡದ  ಅತ್ಯಂತ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಟಿ.ಎಸ್. ರಂಗಾ  ಇಂದು ನಮ್ಮನೆಲ್ಲಾ ಅಗಲಿದ್ದಾರೆ.
ಅಪಾರ ಓದು ಮತ್ತು ತಿಳುವಳಿಕೆಯ ಅಗರವಾಗಿದ್ದ ಟಿ.ಎಸ್.ರಂಗಾ ರವರು ಕನ್ನಡದಲ್ಲಿ ನಿರ್ದೇಶನ ಮಾಡಿದ ಕೃಷ್ಣ ಆಲನಹಳ್ಳಿಯವರ ಗಿಜಗನ ಗೂಡು, ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ತಂದುಕೊಟ್ಟ ಕನ್ನಡದ ಸಾವಿತ್ರಿ ಸಿನಿಮಾ ಹಾಗೂ ಹಿಂದಿಯಲ್ಲಿ ಸ್ಮಿತಾಪಾಟಿಲ್, ಓಂಪುರಿ ಅಭಿನಯದ “ ಗಿದ್” ಸಿನಿಮಾ ಇವುಗಳು 1980 ರ ದಶಕದಲ್ಲಿ ಟಿ.ಎಸ್. ರಂಗಾ ಅವರನ್ನು ಭಾರತದ ಪ್ರಖ್ಯಾತ ನಿರ್ದೇಶಕರ ಸಾಲಿನಲ್ಲಿ ನಿಲ್ಲಿಸಿದ್ದವು.
ಖಚಿತವಾದ ನಿಲುವು ಮತ್ತು ನಡೆ ಹಾಗೂ ನುಡಿಗಳಿಗೆ ಹೆಸರಾಗಿದ್ದ ಟಿ.ಎಸ್. ರಂಗಾ ನಮ್ಮಂತಹ ಗೆಳೆಯರ ಪಾಲಿಗೆ ನಡೆದಾಡುವ ವಿಶ್ವ ವಿದ್ಯಾಲಯವಾಗಿದ್ದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಹಾಗೂ ಅಪ್ಪಟ ಗಾಂಧಿವಾದಿಯಂತೆ ಬದುಕಿದ್ದ ಟಿ.ಆರ್. ಶಾಮಣ್ಣ  ಅವರ ಪುತ್ರರಾಗಿದ್ದ ರಂಗಾ ಅವರು ಎಂದಿಗೂ ತಾನೊಬ್ಬ ಸಂಸದರ ಪುತ್ರ ಎಂದು ಗುರುತಿಸಿಕೊಳ್ಳಲಿಲ್ಲ. ಏಕೆಂದರೆ, ಅವರ ತಂದೆಯವರೂ ಸಹ ಸದಾ ಆಟೊದಲ್ಲಿ ಓಡಾಡುತ್ತಾ ಜನಸಾಮಾನ್ಯರಂತೆ ಬದುಕಿದರು.
1970 ರ ದಶಕದಲ್ಲಿ ಬಿ.ವಿ.ಕಾರಂತರು ಬೆಂಗಳೂರು ನಗರದಲ್ಲಿ ಕಟ್ಟಿದ ಬೆನಕ ನಾಟಕ ತಂಡದ ಸದಸ್ಯರಾಗಿದ್ದ ರಂಗಾ ಅವರು ತಮ್ಮ ಒಡನಾಡಿಗಳಾದ ಟಿ.ಎಸ್.ನಾಗಾಭರಣ, ಸುಂದರರಾಜ್, ಕೋಕಿಲಾ ಮೋಹನ್ ( ತಮಿಳು ಸಿನಿಮಾದ ಪ್ರಖ್ಯಾತ ನಾಯಕ ನಟನಾಗಿ ಪ್ರಸಿದ್ಧಿ ಪಡೆದವರು) ಹಾಗೂ ಗಿರೀಶ್ ಕಾಸರವಳ್ಳಿ ಅವರ ಪತ್ನಿ ವೈಶಾಲಿ ಇವರ ಜೊತೆಗೂಡಿ ಬೆನಕ ತಂಡಕ್ಕೆ ಜೀವ ತುಂಬಿದರು. ಹಾಗಾಗಿ ಅವರು ಚಲನಚಿತ್ರಗಳು, ಧಾರವಾಹಿ, ಹಾಗೂ ಸಾಕ್ಷ್ಯ ಚಿತ್ರ ಇವುಗಳ  ನಿರ್ಮಾಣದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದರೂ ಸಹ ರಂಗಭೂಮಿ ಅವರ ಆದ್ಯತೆಯ ಕ್ಷೇತ್ರವಾಗಿತ್ತು.
ಬೆಂಗಳೂರಿನ ತ್ಯಾಗರಾಜನಗರದ ಕಟ್ಟೆ ಬಳಗದ ಹತ್ತಿರ ಇದ್ದ  ಅವರ ನಿವಾಸದ ಮುಂದಿನ ಅಂಗಡಿ ಮಳಿಗೆಗಳ ಮೇಲಿನ ಕಛೇರಿ ಹಾಗೂ ಅತಿಥಿ ಗೃಹ ನನ್ನಂತಹ ಗೆಳೆಯರಿಗೆ ಆಶ್ರಯತಾಣ ಮತ್ತು ಚರ್ಚೆಯ ಅಡ್ಡೆಯಾಗಿತ್ತು. ಶುದ್ಧ ಸಸ್ಯಹಾರಿಯಾಗಿದ್ದ ರಂಗಾ ಅವರ ಜೊತೆ ಅವರ ನೆಚ್ಚಿನ ಪಾನಿಯವಾಗಿದ್ದ ಡೈರಕ್ಟರ್ ಸ್ಪೆಷಲ್ ಬ್ಲಾಕ್, ವಿಸ್ಕಿ, ಬಿಸಿ ಇಡ್ಲಿ, ಚಟ್ನಿ, ಕಾಂಗ್ರೇಸ್ ಕಡ್ಲೆ ಬೀಜದ ಜೊತೆ ಕುಳಿತು ಅವರ ಮಾತುಗಳನ್ನು ಕೇಳುತ್ತಾ ಕುಳಿತರೆ ಅಲ್ಲೊಂದು ಹೊಸ ಲೋಕ ತೆರೆದುಕೊಳ್ಳುತ್ತಿತ್ತು.  ಕುಡಿಯು ಗ್ಲಾಸ್, ಸಿಗರೇಟ್ ಹಾಕುವ ಆಶ್ ಟ್ರೆ, ತಿಂಡಿಯ ಪ್ಲೆಟ್ ಗಳು, ಕೂರುವ ಕುರ್ಚಿಗಳು ಇವುಗಳಲ್ಲಿ ತೀರಾ ಮಡಿವಂತಿಕೆ  ಎನಬಹುದಾದ ಅಚ್ಚುಕಟ್ಟುತನವನ್ನು ತೋರುತ್ತಿದ್ದ ರಂಗಾರವರು ತಮ್ಮ ಮಾತು ಮತ್ತು ಚಿಂತನೆಯಲ್ಲಿ ಎಲ್ಲಾ ಕಟ್ಟು ಪಾಡುಗಳನ್ನು ಮೀರಿದ ಸಂತನಂತೆ ಕಾಣುತ್ತಿದ್ದರು. ಅವರ ಪರಮ ಶಿಷ್ಯನಾದ  ಹಾಗೂ ಈಗಿನ ಪ್ರಸಿದ್ಧ ಸಹ ಕಲಾವಿದ ಮತ್ತು ನಿರ್ಮಾಪಕರಲ್ಲಿ  ಒಬ್ಬನಾಗಿರುವ ಗೆಳೆಯ ಕರಿಸುಬ್ಬು, ನಿರ್ದೇಶಕ ಟಿ.ಎಸ್ ನಾಗಾಭರಣ ಮತ್ತು ಕಲಾವಿದೆ ಹಾಗೂ ಸಚಿವೆಯಾಗಿರುವ ಉಮಾಶ್ರೀ ಇವರೆಲ್ಲರೂ ಸದಾ ರಂಗಾ ಅವರ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡವರಾಗಿದ್ದರು. ಅಲ್ಲಿ ಹಳೆಯ ರಂಗಗೀತೆಗಳು ಸಾಮೂಹಿಕ ಗಾನದಲ್ಲಿ ಅನುರಣಿಸುತ್ತಿದ್ದವು.
ಬೆಂಗಳೂರು ನಗರದಲ್ಲಿ ಹುಟ್ಟಿ ಬೆಳದರೂ ಸಹ  ಟಿ.ಎಸ್, ರಂಗಾ ಅವರು ತಮ್ಮ ಬದುಕಿನುದ್ದಕ್ಕೂ ಉತ್ತರ ಕರ್ನಾಟಕದ ಗ್ರಾಮೀಣ ಬದುಕನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಹಾಗಾಗಿ ಅವರ ಸಾವಿತ್ರಿ ಹಾಗೂ ಗಿದ್ ಸಿನಿಮಾಗಳನ್ನು ಒಳಗೊಂಡಂತೆ, ಅವರು ದೂರದರ್ಶನಕ್ಕಾಗಿ ನಿರ್ಮಿಸಿದ ಬಹುತೇಕ ಧಾರವಾಹಿಗಳು ಉತ್ತರ ಕರ್ನಾಟಕದ ಕಥೆಗಳನ್ನು ಒಳಗೊಳ್ಳುತ್ತಿದ್ದವು.  ರಂಗಾ ಅವರು ಧಾರವಾಹಿ ನೆಪದಲ್ಲಿ ಧಾರವಾಡ, ಜಮಖಂಡಿ, ಬಾಗಲಕೋಟೆ, ಬಿಜಾಪುರದಲ್ಲಿ ಹೆಚ್ಚು ಕಾಲಕಳೆಯುತ್ತಿದ್ದರು.
ಟಿ.ಎಸ್.ರಂಗಾ ಎಂತಹ ಸೃಜನಶೀಲ ನಿರ್ದೇಶಕ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕನ್ನಡ ವಾರ್ತಾ ಇಲಾಖೆಗೆ ಶಂಬಾ ಜೋಶಿಯವರ ಕುರಿತು ಸಾಕ್ಷ್ಯ ಚಿತ್ರ ನಿರ್ಮಾಣ ಮಾಡುತ್ತಿದ್ದರು. ಜೋಶಿಯವರು ಹುಟ್ಟಿ ಬೆಳೆದ ಊರು ಅಣೆಕಟ್ಟಿನ ಹಿನ್ನಿರಿನಲ್ಲಿ ಮುಳುಗಿ ಹೋಗಿತ್ತು. ಅವರ ಊರನ್ನು ಚಿತ್ರಿಸುವುದು ಹೇಗೆ ಎಂಬ ಕುತೂಹಲದ ಪ್ರಶ್ನೆಯನ್ನು ನಮ್ಮೆಲ್ಲಾ ಗೆಳೆಯರ ಮುಂದಿಟ್ಟಿದ್ದರು. ಅಂತಿಮವಾಗಿ ಶಂಬಾ ಅವರ ಊರಿನ ನಕಾಶೆಯನ್ನು ಬಣ್ಣ ಬಣ್ಣದ ಪೆನ್ಸಿಲ್ ನಲ್ಲಿ ಸಿದ್ಧಪಡಿಸಿಕೊಂಡು, ಅದನ್ನು ನೀರಿನಲ್ಲಿ ಮುಳುಗಿಸಿ, ಊರಿನ ಮುಳುಗಡೆಯ ಕಥೆಯನ್ನು ಹೇಳಿದ್ದರು.

ರಂಗಾ ಅವರಿಗೆ ರಾವ್ ಬಹುದ್ದೂರ್ ಅವರ ಗ್ರಾಮಾಯಣ ಮತ್ತು ಚೀನಾದ ಪ್ರಸಿದ್ಧ ಕಾದಂಬರಿ  ಪರ್ಲ್. ಎಸ್. ಬರ್ಕ್ ಅವರ “ ಗುಡ್ ಅರ್ಥ್” ಕಾದಂಬರಿಗಳನ್ನು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣ ಮಾಡಬೇಕೆಂದು ಅಪಾರವಾದ ಕನಸಿತ್ತು. ಈ ಕಾರಣಕ್ಕಾಗಿ ಅವರು ಧಾರವಾಡಕ್ಕೆ ಬಂದರೆ, ಹೋಟೆಲ್ ಧಾರವಾಡದಲ್ಲಿ, ಬಿಜಾಪುರಕ್ಕೆ ಬಂದರೆ, ಗೋಳ ಗುಮ್ಮಟದ ಎದುರಿಗಿನ ಹೋಟೆಲ್ ಸ್ವಾಗತ್ ನಲ್ಲಿ ವಾರಗಟ್ಟಲೆ  ಉಳಿದುಕೊಂಡು ರಾತ್ರಿಯ ಮೆಹಪಿಲ್ ಗಳಲ್ಲಿ ಚರ್ಚೆ ಮಾಡುತ್ತಿದ್ದರು. ಧಾರವಾಡದಲ್ಲಿ ಅಶೋಕ್ ಶೆಟ್ಟರ್, ಗಣೇಶ ಜೋಶಿ, ಅನಿಲ್ ದೇಸಾಯಿ, ಅಶೋಕ್ ಮೊಕಾಶಿ, ನರೇಂದ್ರ ಹಾಗೂ ಬಿಜಾಪುರದಲ್ಲಿ ಬಸವರಾಜು ಯಂಕಚಿ, ಬಸವರಾಜ ಮೇಲುಪ್ಪರಿಗೆ ಮಠ ಹಾಗೂ ದೇಶಪಾಂಡೆ  ಇವರಲ್ಲರೂ ರಂಗಾ ಅವರ ಖಾಯಂ ಸಂಗಾತಿಗಳಾಗಿದ್ದರು.
ನೋವಿನ ಸಂಗತಿಯೆದರೆ, ಕನ್ನಡ ಚಿತ್ರರಂಗಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗಿರೀಶ್ ಕಾರ್ನಾಡ್, ಕಾರಂತ ಹಾಗೂ ಕಾಸರವಳ್ಳಿಯವರ ಜೊತೆಯಲ್ಲಿ ಮಾನ್ಯತೆ ತಂದುಕೊಟ್ಟ ಇಂತಹ ಅಪರೂಪದ ನಿರ್ದೇಶಕನ ನಿಧನ ಸುದ್ದಿಯನ್ನು ಪ್ರಕಟಿಸುವ ಕನಿಷ್ಠ ಸೌಜನ್ಯವೂ ನಮ್ಮ ದೃಶ್ಯ ಮಾಧ್ಯಮಗಳಿಗೆ ಇಲ್ಲವಾಗಿದೆ.

Saturday, 31 March 2018

ಹರಿಲಾಲ್‍ಗಾಂಧಿ ಕಥನ-ಒಂದುಇಡೀ ಜಗತ್ತು ಆಶ್ಚರ್ಯ ಪಡುವ ರೀತಿಯಲ್ಲಿ ಅತ್ಯಂತ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಬದುಕಿದ ಮಹಾತ್ಮ ಗಾಂಧಿ ಅವರ ಜೀವನ ಭಾರತದಲ್ಲಿ ನಿರಂತರವಾಗಿ ಚರ್ಚೆಗೆ ಒಳಗಾಗುತ್ತಲೇ ಇದೆ. “ನನ್ನ ಬದುಕೇ ಸಂದೇಶ  ಎಂದು ನುಡಿದ ಗಾಂಧೀಜಿಯವರ ಪ್ರತಿ ಕ್ಷಣದ ಜೀವನ ವಿವರಗಳ ವೃತ್ತಾಂತವನ್ನು ಹಿಡಿದುಕೊಂಡು ಕೂದಲು ಸೀಳುವ ಕಾರ್ಯ ಇಂದಿಗೂ ಸಹ  ಮುಂದುವರಿದಿದೆ. ತಮ್ಮ ಆತ್ಮ ಕಥೆಯನ್ನು  ನನ್ನ ಸತ್ಯಾನ್ವೇಷಣೆಎಂದು ಕರೆದುಕೊಂಡ ಗಾಂಧೀಜಿ ತಮ್ಮ ಇಡೀ ಬದುಕನ್ನು ಸಾರ್ವಜನಿಕ ಬದುಕಿಗೆಗೆ ಮೀಸಲಿಟ್ಟಿದ್ದರು. ಕಾರಣದಿಂದಾಗಿ ತಮ್ಮ ಕುಟುಂಬದ ಸದಸ್ಯರ ಹಿತರಕದಷಣೆಯಲ್ಲಿ ಅವರು ವಿಫಲರಾದರು. ವೈಯಕ್ತಿಕ ಹಿತಾಸಕ್ತಿಗಿಂತ ನನ್ನ ಕಣ್ಣೆದುರು ಸಮಾಜದಲ್ಲಿ  ನೋಯುವವರು ಮತ್ತು ನೊಂದವರ ಹಿತಾಸಕ್ತಿ ಮುಖ್ಯವೆಂದು ನಂಬಿದ ಅವರು; ಎಂದಿಗೂ ವೈಯಕ್ತಿಕ ನೋವನ್ನು ಒಂದು ಸಮುದಾಯದ ನೋವೆಂಬಂತೆ ಬಿಂಬಿಸಲಿಲ್ಲ. ಇವೆಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕ ಬದುಕಿನಲ್ಲಿರುವ ವ್ಯಕ್ತಿಗೆ ತನ್ನ ಕುಟುಂಬದ ಸದಸ್ಯರ ಪ್ರತಿಯೊಂದು ವಿವರವೂ ಸಮಾಜದ ದೃಷ್ಟಿಯಲ್ಲಿ ಪಾರದರ್ಶಕವಾಗಿರಬೇಕೆಂದು ನಂಬಿದ್ದರದ್ದಿಚಿತಹ ದೃಷ್ಟಿಕೋನದಿಂದಾಗಿ ಗಾಂಧೀಜಿಯವರ ಪತ್ನಿ ಕಸ್ತೂರ ಬಾ ಮತ್ತು ತಮ್ಮ ಮಕ್ಕಳ ಜೊತೆಗಿನ ಒಡನಾಟ, ಸಂಘರ್ಷ ಇವೆಲ್ಲವೂ ಗಾಂಧೀಜಿಯವರ ಆತ್ಮಕಥನ, ಅವರು ಬರೆದ ಪತ್ರಗಳು ಮತ್ತು ಹರಿಜನ ಹಾಗೂ ಯಂಗ್ ಇಂಡಿಯಾ ಪತ್ರಿಕೆಗಳಲ್ಲಿ ನೀಡಿದ ಸೃಷ್ಟೀಕರಣದ ಲೇಖನಗಳ ಮೂಲಕ ಬಹಿರಂಗಗೊಂಡಿವೆ.
ಮಹಾತ್ಮಗಾಂಧಿ ಮತ್ತು ಅವರ ಹಿರಿಯ ಪುತ್ರ ಹರಿಲಾಲ್ ಗಾಂಧಿ ಇವರ ನಡುವೆ ಉಂಟಾದ ಭಿನ್ನಾಭಿಪ್ರಾಯಗಳು ಹಾಗೂ ನಂತರದ ದಿನಗಳಲ್ಲಿ ಸೃಷ್ಟಿಯಾದ ಸೈದ್ಧಾಂತಿಕ ಸಂಘರ್ಷಗಳಿಗೆ ಹಲವು ಆಯಾಮಗಳಿವೆ. ಆದರೆ, ಕುರಿತು ಸೂಕ್ತ ಅಧ್ಯಯನ ಅಥವಾ ಪರೀಶೀಲನೆ ಹಾಗೂ ವಿವೇಚನೆಯಿಲ್ಲದೆ ಜನಸಾಮಾನ್ಯರಲ್ಲಿ ರೋಚಕತೆಯನ್ನು ಉಂಟು ಮಾಡುವ ದೃಷ್ಟಿಕೋನದಿಂದ ತಂದೆ-ಮಗನ ಕುರಿತಂತೆ ಹಿಂದಿ ಹಾಗೂ ಗುಜರಾತಿ ಭಾಷೆಯಲ್ಲಿ ಅನೇಕ ಕಾದಂಬರಿಗಳು ಮತ್ತು ನಾಟಕಗಳು ರಚನೆಗೊಂಡವು. ಇವೆಲ್ಲವೂ ಭಾರತೀಯ ಇತರೆ ಭಾಷೆಗೂ ಕೂಡ ಅನುವಾದಗೊಳ್ಳುವುದರ ಮೂಲಕ ಗಾಂಧೀಜಿಯ ಹಿರಿಯ ಪುತ್ರ ಹರಿಲಾಲ್ ಕುರಿತಂತೆ ಜನಸಾಮಾನ್ಯರಲ್ಲಿ ಇನ್ನಿಲ್ಲದ ಕುತೂಹಲವನ್ನು ಉಂಟು ಮಾಡಿದವು. ಇಂತಹ ಅರ್ಧ ಸತ್ಯದ ಕಥೆಗಳಿಗೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಗುಜರಾತಿ ಭಾಷೆಯಲ್ಲಿ  ಚಂದೂಲಾಲ್ ದಲಾಲ್ ಅವರು ರಚಿಸಿದ ಹಾಗೂ ಸಂಪೂರ್ಣವಾದ ವಿದ್ವತ್ ಹಾಗೂ ಸಂಶೋಧನೆಯಿಂದ ಕೂಡಿದ ಹರಿಲಾಲ್ ಗಾಂಧಿಯವರ ಜೀವನ ಚರಿತ್ರೆ ಮತ್ತು ಹರಿಲಾಲ್ ಗಾಂಧಿಯವರ ಮೊಮ್ಮಗಳು ಹಾಗೂ ಮಹಾತ್ಮನ ಮರಿಮೊಮ್ಮಗಳಾದ ನೀಲಂ ಪರೀಖ್ ಎಂಬ ಹೆಣ್ಣು ಮಗಳು ರಚಿಸಿದ ತನ್ನ ಅಜ್ಜನ ಕುರಿತಾದ ನೆನಪುಗಳು ಮತ್ತು ಅಪೂರ್ವ ದಾಖಲೆಗಳನ್ನು ಒಳಗೊಂಡಗಾಂಧೀಜಿ ಕಳೆದುಕೊಂಡ ಹರಿಲಾಲ್ ಎಂಬ ರತ್ನಎಂಬ ಹೆಸರಿನ ಕೃತಿ ಇವುಗಳು ನಮಗೆ ಮಹಾತ್ಮ ಮತ್ತು ಅವರ ಪುತ್ರ ಹರಿಲಾಲ್ ಗಾಂಧಿ ಕುರಿತಂತೆ ಅಪೂರ್ವ ಒಳನೋಟಗಳನ್ನು ನೀಡಬಲ್ಲವು.
ಹರಿಲಾಲ್ ಮತ್ತು ಮಹಾತ್ಮ ಗಾಂಧಿಯವರ ನಡುವೆ ಇಪ್ಪತ್ತು ವರ್ಷಗಳಿಗೂ ಕಡಿಮೆ ಅಂತರವಿತ್ತು. ಹರಿಲಾಲ್ ದಕ್ಷಿಣಾ ಆಫ್ರಿಕಾದಲ್ಲಿ ತನ್ನ ತಂದೆಯಿಂದ ಪ್ರಭಾವಿತರಾಗಿ ಕೇವಲ ಹದಿನೈದು ವರ್ಷಕ್ಕೆ ಸತ್ಯಾಗ್ರಹಿಯಾಗಿ ರೂಪುಗೊಂಡವರು ಜೊತೆಗೆ ಆರು ಬಾರಿ ಜೈಲಿಗೆ ಹೋಗಿ ಬಂದರು. ತನ್ನ ತಾಯಿ ಹಾಗೂ ಒಡ ಹುಟ್ಟಿದ ಸಹೋದರರ ಕುರಿತಾಗಿ ಅಪಾರ ಕಾಳಜಿ ಹಾಗೂ ಕರುಣೆಯುಳ್ಳವರಾಗಿದ್ದರು. ಆದರೆ, ತಂದೆ ಮಗನ ನಡುವೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಿದ್ದು ಏಕೆ? ಮತ್ತು ಯಾವ ಕಾರಣಕ್ಕಾಗಿ? ಇಂತಹ ಪ್ರಶ್ನೆಗಳನ್ನಿಟ್ಟುಕೊಂಡು ಹುಡುಕಾಟ ನಡೆಸಿದರೆ, ನಮಗೆ ಎರಡು ಪ್ರಮುಖ ವಿಷಯಗಳು ಎದುರಾಗುತ್ತವೆ.  ಅವುಗಳಲ್ಲಿ ಪ್ರಮುಖವಾಗಿ ಗಾಂಧೀಜಿಯವರು ಸ್ವಂತ ತಮ್ಮ ಮಕ್ಕಳಿಗಿಂತ ಇತರೆ ಮಕ್ಕಳನ್ನು ಪ್ರೀತಿಸುತ್ತಿದ್ದಾರೆ ಎಂಬ ಅಂಶವು ಹರಿಲಾಲ್ ಗಾಂಧಿಯ ಅಸಮಾಧಾನಕ್ಕೆ ಕಾರಣವಾಗಿತ್ತು. ಎರಡನೆಯದಾಗಿ ಆಧುನಿಕ ಶಿಕ್ಷಣ ಪದ್ಧತಿ ಕುರಿತಂತೆ ಗಾಂಧೀಜಿಗೆ ಇದ್ದ ಅಭಿಪ್ರಾಯಗಳ ಕುರಿತಂತೆ ಅವರ ಪುತ್ರ ಹರಿಲಾಲ್ ಗೆ ಸಹಮತವಿರಲಿಲ್ಲ. ಎರಡು ಅಂಶಗಳು ತಂದೆ ಮಗನ ಪಥವನ್ನು ಜೀವನ ಪೂರ್ತಿ ಬದಲಾಯಿಸಿದವು. ಹರಿಲಾಲ್ ತನ್ನ ತಂದೆಯ ವಿರುದ್ಧ ಬೀಸಿದ ಬಂಡಾಯದ ಬಾವುಟ ಗಾಂಧೀಜಿಯವರನ್ನು ಜೀವನದುದ್ದಕ್ಕೂ ನಲುಗಿಸಿದವು. ಆದರೆ, ಎಂತಹ ಮುಜುಗರದ ಸಂದರ್ಭದಲ್ಲಿಯೂ ತನ್ನ ಕುಟುಂಬದ ಭಿನ್ನಾಭಿಪ್ರಾಯಗಳನ್ನು ಬಚ್ಚಿಡಲು ಅವರು ಪ್ರಯತ್ನಿಸಲಿಲ್ಲ.

ಗಾಂಧೀಜಿಯವರು 1915 ರಲ್ಲಿ ಅಹಮದಾಬಾದ್ ನಗರದಲ್ಲಿ ಸಬರಮತಿ ಆಶ್ರಮವನ್ನು ಆರಂಭಿಸುವ ಮೊದಲು ದಕ್ಷಿಣ ಆಫ್ರಿಕಾದಲ್ಲಿ  ಆರಂಭಿಸಿದ್ದ  ಆಶ್ರಮದಲ್ಲಿ ಆಶ್ರಮವಾಸಿಗಳಿಗೆ  ಕೆಲವು ಷರತ್ತುಗಳನ್ನು ವಿಧಿಸಿದ್ದರು. ಅವುಗಳಲ್ಲಿ ಪ್ರಮುಖವಾಗಿ ಆಶ್ರಮದಲ್ಲಿರುವ ಕಾರ್ಯಕರ್ತರು ದೇಶ ಸೇವೆಗೆ ಸದಾ ಸಿದ್ಧರಿರಬೇಕು, ಸಾಮೂಹಿಕ ಶ್ರಮದಾನ ಹಾಗೂ ತಮ್ಮ ಕೆಲಸಗಳನ್ನು (ಕಸ ಗುಡಿಸುವುದು, ಅಡುಗೆ ಮಾಡುವುದು, ಬಟ್ಟೆ ಸ್ವಚ್ಛಗೊಳಿಸುವುದು, ಶೌಚಾಲಯಗಳನ್ನು ಶುದ್ಧಗೊಳಿಸುವುದು ಇತ್ಯಾದಿ) ತಾವೇ ಮಾಡಿಕೊಳ್ಳಬೇಕು. ಇಂತಹ ವಿಚಾರಗಳ ಕುರಿತಾಗಿ ಹರಿಲಾಲ್ ಗೆ ಭಿನ್ನಾಭಿಪ್ರಾಯವಿತ್ತು. ಜೊತೆಗೆ  ಆಧುನಿಕ ಶಿಕ್ಷಣ ಕ್ರಮವು ಮನುಷ್ಯನನ್ನು ಭೋಗಿಯನ್ನಾಗಿಸುತ್ತದೆ. ಸರಳವಾದ ಹಾಗೂ ಇತಮಿತವಾದ ಬದುಕು ಶ್ರೇಷ್ಠ ಎಂಬ ಗಾಂಧೀಜಿಯವರ ಚಿಂತನೆಗೆ ಬದಲಾಗಿ ಹರಿಲಾಲ್ ಗಾಂಧಿ ಪಶ್ಚಿಮ ಜಗತ್ತಿನ ಆಧುನಿಕ ಶಿಕ್ಷಣ ಕುರಿತಂತೆ ಒಲವು ಉಳ್ಳವರಾಗಿದ್ದರು. ಕಾರಣಕ್ಕಾಗಿ ದಕ್ಷಿಣಾ ಆಫ್ರಿಕಾದಲ್ಲಿ ಇದ್ದಾಗ, ಇಂಗ್ಲೇಂಡಿನ ಶಿಕ್ಷಣಕ್ಕಾಗಿ ಒಬ್ಬ ವಿದ್ಯಾರ್ಥಿಗೆ  ಧನ ಸಹಾಯ  ದೊರೆತ ಸಂದರ್ಭದಲ್ಲಿ ಗಾಂಧೀಜಿಯವರು ಅದನ್ನು ತಮ್ಮ ಮಕ್ಕಳಿಗೆ ಬಳಸಿಕೊಳ್ಳದೆ, ಇನ್ನೋರ್ವ ವಿದ್ಯಾರ್ಥಿಗೆ ( ತಮ್ಮ ಸಂಬಂಧಿಕರ ಪುತ್ರ) ಅವಕಾಶ ಮಾಡಿಕೊಟ್ಟಿದ್ದು ಭಿನ್ನಾಭಿಪ್ರಾಯದ ಸ್ಪೋಟಕ್ಕೆ  ಪ್ರಬಲ ಕಾರಣವಾಯಿತು.  1911 ರಲ್ಲಿ ಹರಿಲಾಲ್ ತನ್ನ ತಂದೆ, ಹಾಗೂ ಕುಟುಂಬದ ಸದಸ್ಯರನ್ನು ತೊರೆದ ಭಾರತಕ್ಕೆ ಹಿಂತಿರುಗಿದರು.
 ಹರಿಲಾಲ್ ಗಾಂಧಿ ಯವರ ಕೃತಿಯನ್ನು ಗುಜರಾತಿ ಭಾಷೆಯಲ್ಲಿ ರಚಿಸಿರುವ ಹಾಗೂ  ವೃತ್ತಿಯಲ್ಲಿ ಲೆಕ್ಕ ಪರಿಶೋಧಕರಾಗಿದ್ದ ಚಂದೂಲಾಲ್ ದಲಾಲ್ ಅವರು ಹರಿಲಾಲ್ ಗಾಂಧಿ ಕುರಿತ ಅಧ್ಯಯನಕ್ಕಾಗಿ ನಡೆಸಿರುವ ವಿಸ್ತø ಅಧ್ಯಯನ ಓದುಗರಲ್ಲಿ ಬೆರಗು ಮೂಡಿಸುತ್ತದೆ. ಗಾಂಧೀಜಿಯವರ ಬದುಕಿನ ಸಮಗ್ರ ದಿನಚರಿ ಹಾಗೂ ಬದುಕಿನ ವಿವರಗಳನ್ನು ಕಲೆ ಹಾಕಿಕೊಳ್ಳುವುದರ ಜೊತೆಗೆ  ಮಹಾತ್ಮ ಗಾಂಧೀಜಿಯವರು  ತಮ್ಮ ಜೀವಿತಾವಧಿಯಲ್ಲಿ  ಬರೆದಿರುವ ಮುವತ್ತು ನಾಲ್ಕು ಸಾವಿರ ಪತ್ರಗಳನ್ನು ಕೂಲಂಕುಶವಾಗಿ ಅಧ್ಯಯನ ನಡೆಸಿದ್ದಾರೆ. ಇದೂ ಸಾಲದೆಂಬಂತೆ ಮಹಾತ್ಮ ಗಾಂಧೀಜಿಯವರ ಆಪ್ತ ಕಾರ್ಯದರ್ಶಿಯಾಗಿದ್ದ ಮಹಾದೇವ ದೇಸಾಯಿ ಅವರು ಗುಜರಾತಿ ಭಾಷೆಯಲ್ಲಿ ಬರೆದಿರುವ ಇಪ್ಪತ್ತಮೂರು ಸಂಪುಟಗಳ ದಿನಚರಿಯ 9.300 ಮುದ್ರಿತ ಪುಟಗಳನ್ನು ಜಾಲಾಡಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಮಹಾದೇವ ದೇಸಾಯಿ ಅವರು ಸಬರಮತಿ ಆಶ್ರಮವನ್ನು ಸೇರಿದ ದಿನದಿಂದ ಹಿಡಿದು, 1942 ಆಗಸ್ಟ್ 15 ರಂದು ಪುಣೆನಗರದ ಆಗಖಾನ್ ಅರಮನೆಯಲ್ಲಿ ಗಾಂಧೀಜಿ ಜೊತೆ ಗೃಹಬಂಧನದಲ್ಲಿದ್ದು ಹೃದಯಾಪಘಾತದಿಂದ ನಿಧನರಾಗುವ ದಿನದವರೆಗೂ ಅಂದರೆ ಸುಮಾರು ಇಪ್ಪತ್ತೈದು ವರ್ಷಗಳ ಕಾಲದ ಗಾಂಧಿಜಿಯವರ ಆಪ್ತಕಾರ್ಯದರ್ಶಿಯಾಗಿದ್ದುಕೊಂಡು ಅವರ ಜೊತೆಗಿನ ಒಡನಾಟದ ದಿನಚರಿಯನ್ನು ದಾಖಲಿಸಿದ್ದಾರೆ.
ಮಹಾತ್ಮನನ್ನು ಭೇಟಿ ಮಾಡಿದವರ ಹೆಸರು ಮತ್ತು ಅವರ ಜೊತೆಗೆ ಗಾಂಧಿಜಿ ನಡೆಸಿದ ಮಾತುಕತೆಯ ವಿವರಗಳಲ್ಲದೆ,  ಗಾಂಧಿಜಿಗೆ ಬಂದ ಪತ್ರಗಳ ವಿವರಗಳು ಮತ್ತು  ಅದಕ್ಕೆ ಅವರು ಬರೆದ ಉತ್ತರ ಇವೆಲ್ಲವನ್ನೂ ಸವಿವರವಾಗಿ ದಾಖಲಿಸಿದ್ದಾರೆ. ಆದರೆ, ಮಹಾದೇವ ದೇಸಾಯಿರವರು ಗಾಂಧಿ ಮತ್ತು ಅವರ ಪುತ್ರ ಹರಿಲಾಲ್ ನಡುವಿನ  ಭೇಟಿಯ ವಿವರ ಹಾಗೂ ನಡೆದ ಪತ್ರ ವ್ಯವಹಾರ ಕುರಿತಂತೆ ಮೌನ ವಹಿಸಿದ್ದಾರೆ. ಇದೇ ರೀತಿ ಗಾಂಧಿಜಿಯವರ ಜೊತೆ ನಿಕಟ ಸಂಪರ್ಕದಲ್ಲಿದ್ದ ಜಮ್ನಲಾಲ್ ಬಜಾಜ್ ಸೇರಿದಂತೆ ಬಹುತೇಕ  ಅನುಯಾಯಿಗಳು ಮೌನಕ್ಕೆ ಶರಣಾಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿತು. ಕಾರಣದಿಂದಾಗಿ ಇಂತಹ ಸಂಶಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ತೆರೆದ ಪುಸ್ತಕದಂತೆ ಬದುಕಿದ ಮಾಹಾತ್ಮ ಗಾಂಧಿಯವರು  ಬರೆದ ಪತ್ರಗಳು ಹಾಗೂ ಅವರಿಗೆ ಬಂದ ಪತ್ರಗಳು ಜೊತೆಗೆ ಹರಿಲಾಲ್ ಅವರ ಸೊಸೆ ಹಾಗೂ ಮೊಮ್ಮಗಳು ಮತ್ತು ಹರಿಲಾಲ್ ಅವರ ಸಹೋದರರ ಪುತ್ರರು ದಾಖಲಿಸಿರುವ ಮಾಹಿತಿಗಳು ನಮಗೆ ಹರಿಲಾಲ್ ಗಾಂಧಿಯವರ ವ್ಯಕ್ತಿತ್ವದ ಎಲ್ಲಾ ಆಯಾಮಗಳ ಮೇಲೆ ಬೆಳಕು ಚೆಲ್ಲಲು ಸಹಾಯಕವಾಗಿವೆ.
ಗಾಂಧೀಜಿಯವರ ಚಿಂತನೆ ಮತ್ತು ಹರಿಲಾಲ್ ಚಿಂತನೆಗಳ ನಡುವೆ ಇದ್ದ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹರಿಲಾಲ್ ಗಾಂಧಿಯನ್ನು ಕುಟುಂಬದಿಂದ ದೂರ ಮಾಡಿತು. ದಕ್ಷಿಣ ಆಫ್ರಿಕಾದಿಂದ ವಾಪಸ್ ಬಂದ ಹರಿಲಾಲ್ ಹಲವಾರು ವ್ಯವಹಾರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರೂ ಸಹ ಅವರ ವಿಕ್ಷಿಪ್ತ ಮನಸ್ಸು ಮತ್ತು ಆತುರದ ಪ್ರವೃತ್ತಿಯಿಂದ ಯಾವುದರಲ್ಲಿಯೂ ಯಶಸ್ವಿಯಾಗಲಿಲ್ಲ. ಹತಾಶೆಯ ಸ್ಥಿತಿ ತಲುಪಿದ ಅವರು ಮದ್ಯಪಾನದ ದಾಸರಾದದ್ದು ದುರಂತವೇ ಸರಿ. ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸುತ್ತಿದ್ದ ನಾಯಕನೊಬ್ಬನ ಹಿರಿಯ ಪುತ್ರ ಎಂಬ ಏಕೈಕ ಕಾರಣದಿಂದ ಹರಿಲಾಲ್ ಹೋದ ಸ್ಥಳಗಳಲ್ಲಿ ಅನುಕಂಪದ ಆತಿಥ್ಯ ಸಿಗುತ್ತಿತ್ತು. ಆದರೆ, ಹಣದ ವಿಷಯದಲ್ಲಿ ತೀರಾ ಕಟ್ಟುನಿಟ್ಟಿನ ವ್ಯಕ್ತಿಯಾಗಿದ್ದ ಗಾಂಧೀಜಿಯವರು ತಮ್ಮ ಪುತ್ರನಿಗೆ ಯಾರೂ ಅತಿಯಾದ ಹಣದ ಸಹಾಚಿ ನೀಡುವುದು ಮತ್ತು ಸಾಲ ನೀಡಬಾರದೆಂದು ತಾಕೀತು ಮಾಡಿದ್ದರು. ಇಷ್ಟೆಲ್ಲಾ ಭಿನ್ನಾಭಿಪ್ರಾಯಗಳ ನಡುವೆ ತಂದೆ ಮಗನ ನಡುವೆ ನಿರಂತರ ಪತ್ರ ವ್ಯವಹಾರ ನಡೆಯುತ್ತಿತ್ತು. ಜೊತೆಗೆ ತನ್ನ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ ತನ್ನ ನಾದಿನಿಯರಿಗೆ ( ಸಹೋದರರ ಪತ್ನಿಯರು) ಹಾಗೂ ತಾಯಿ ಕಸ್ತೂರ ಬಾ ಅವರಿಗೆ ಅತ್ಯಂತ ಕೃತಜ್ಞತೆಯಿಂದ ಹರಿಲಾಲ್ ಪತ್ರ ಬರೆಯುತ್ತಿದ್ದರು.
ವಾಸ್ತವವಾಗಿ ತಮ್ಮ ಪತ್ನಿ ಗುಲಾಬ್ ಬೆಹನ್ ನಿಧನಾನಂತರ ಮಾನಿಸಿಕ ಸ್ಥಿಮಿತ ಕಳೆದುಕೊಂಡ  ಹರಿಲಾಲ್ ಗಾಂಧಿ ದೇಶದುದ್ಧಕ್ಕೂ ತಮ್ಮ ವಿಕ್ಷಿಪ್ತ ಮನಸ್ಸನ್ನು ಹೊತ್ತು ಅಲೆದಾಡಿದರು. ಸ್ವತಂತ್ರ ಉದ್ಯೋಗ ಅಥವಾ ವ್ಯವಹಾರ ನಡೆಸಲು ಅವರು ನಡೆಸಿದ ಪ್ರಯತ್ನಗಳೆಲ್ಲ ವಿಫಲವಾದ ನಂತರ ಅವರು ಮದ್ಯ ವ್ಯಸನಿಯಾಗಿದ್ದರು. ಆದರೆ, ಹರಿಲಾಲ್ ಗಾಂಧಿಯವರನ್ನು ಓರ್ವ ಪರಮ ಕುಡುಕ ಎಂದು ಹಲವರು ಬಿಂಬಸಿಕೊಂಡು ಬಂದಿದ್ದಾರೆ. ಆದರೆ, ಹರಿಲಾಲಗ ಗಾಂಧಿಯವರ ಪುತ್ರ ಕಾಂತಿಲಾಲ್ 1944 ರಿಂದ 1948 ಅವಧಿಯಲ್ಲಿ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾಗ, ಅನೇಕ ಬಾರಿ ಮೈಸೂರಿಗೆ ಹರಿಲಾಲ್ ಗಾಂಧಿ ಭೇಟಿ ನೀಡಿರುವ ವಿವರ ನಮಗೆ ಹರಿಲಾಲ್ ಅವರ ಮತ್ತೊಂದು ಮುಖವನ್ನು ಪರಿಚಯಿಸುತ್ತದೆ.  ಅಂದಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರನ್ನು ಭೇಟಿ ಮಾಡಿ, ಅವರಿಂದ ಮೈಸೂರು ಮಲ್ಲಿಗೆ, ಮೈಸೂರು ಪಾಕ್ ಸಿಹಿ ತಿಂಡಿ ಹಾಗೂ ದರ್ಭಾರ್ ಸುವಾಸನೆಯ ಅಗರ ಬತ್ತಿ ( ಅರಮನೆಯಲ್ಲಿ ಅತಿಥಿಗಳು ಉಳಿದು ಕೊಳ್ಳುತ್ತಿದ್ದ ಕೊಠಡಿಗಳಲ್ಲಿ ಉಪಯೋಗಿಸುತ್ತಿದ್ದ ಮೂರು ಅಡಿ ಎತ್ತರದ ಅಗರಬತ್ತಿ) ಇವುಗಳಲ್ಲದೆ ಇನಾಮು ರೂಪದಲ್ಲಿ ನೀಡುತ್ತಿದ್ದ ಐನೂರು ರೂಪಾಯಿ ಇವೆಲ್ಲವನ್ನು ತಂದು ತಮ್ಮ ಸೊಸೆಯ ಕೈಯಲ್ಲಿ ಇರುಸುತ್ತಿದ್ದ ಘಟನೆಗಳನ್ನು ಡಾ.ಕಾಂತಿಲಾಲ್ ಅವರ ಪತ್ನಿ ಹಾಗೂ ಕೇರಳದ ಹೆಣ್ಣು ಮಗÀಳಾದ ಸುಶೀಲಾ ಎಂಬುವರು ತಮ್ಮ ಮಾವನ ಕುರಿತಂತೆ ಹೃದಯ ಸ್ಪರ್ಶಿಯಾಗಿ ದಾಖಲಿಸಿದ್ದಾರೆ.

ಭಾರತದ ಬಡತನ, ಅನಕ್ಷರತೆ, ಜಾತಿ ಜಾತಿಗಳ ತಾರತಮ್ಯ, ಅನಾರೋಗ್ಯ ಇವುಗಳ ಜೊತೆಗೆ ಸ್ವಾತಂತ್ರ್ಯ ಹೋರಾಟ ಹೀಗೆ ಹಲವು ರೂಪದ ಜವಬಾýರಿಗಳನ್ನು ಒಟ್ಟಿಗೆ ಹೆಗಲ ಮೇಲೆ ಹೊತ್ತು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ನಿರಂತರ ದೇಶ ಸುತ್ತುತ್ತಿದ್ದ ಗಾಂಧೀಜಿಯವರು ತನ್ನ ಕುಟುಂಬದ ಸದಸ್ಯರ ಕಾಳಜಿಯನ್ನು ಮರೆತಿರಲಿಲ್ಲ. ಅನೇಕ ಬಾರಿ ಹರಿಲಾಲ್ ಗಾಂಧಿಯ ವರ್ತನೆಯಿಂದ ತೀವ್ರವಾಗಿ ನೊಂದುಕೊಂಡಾಗನನ್ನೊಳಗಿನ ಕಾಮದ ವಿಕೃತಿಗೆ ದೇವರು ನನಗೆ ಕೊಟ್ಟ ಶಿಕ್ಷೆಎಂದುಕೊಳ್ಳುತ್ತಾ ಒಳಗೊಳಗೆ ಅತ್ತು ಕಣ್ಣಿರು ಒರೆಸಿಕೊಂಡರು. ಒಮ್ಮೆ ಅಂದಿನ ಬಾಂಬೆಯಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ನಂತರ ಮತ್ತೇ ಹಿಂದೂ ಧರ್ಮಕ್ಕೆ ಹಿಂತಿರುಗಿದ ಹರಿಲಾಲ್ ಗಾಂಧಿಯ ಚಂಚಲ ಪ್ರವೃತ್ತಿಯ ಕುರಿತಂತೆ ಮುಸ್ಲಿಂ ಬಾಂಧವರಿಗೆ ಗಾಂಧಿಜಿಯವರು ಬರೆದ ಬಹಿರಂಗ ಪತ್ರ ಅವರ ಹ್ಲದಯ ವೈಶಾಲ್ಯತೆಗೆ ಸಾಕ್ಷಿಯಾಗಿದೆ.
1988 ರಲ್ಲಿ ಬಂದ ಗುಜರಾತಿ ಭಾಷೆಯಬೆಳಕಿನಡಿಯ ಕತ್ತಲುಮತ್ತು ಪ್ರಖ್ಯಾತ ರಂಗನಿರ್ದೇಶಕ ಪೆರೋಜ್ ಖಾನ್ ರಚಿಸಿ ನಿರ್ದೆಶಿಸಿದಮಹಾತ್ನನ ವಿರುದ್ಧ ಗಾಂಧಿಎಂಬ ನಾಟಕ ಮತ್ತು ಕೀತ್ ಹೆಲ್ಲರ್ ಎಂಬ ಮಹಿಳಾ ಲೇಖಕಿ ರಚಿಸಿದ ಇಂಗ್ಲೀಷ್ ಕಾದಂಬರಿಗಾಂಧಿಗೆ ಗೊತ್ತಿದ್ದ ಮಹಿಳೆ  ಇಂತಹ ಕೃತಿಗಳಲ್ಲಿ ಹರಿಲಾಲ್ ಅವರನ್ನು ಶೋಚನೀಯವಾಗಿ, ವ್ಯಗ್ರ ಮನಸ್ಸಿನ ಪುತ್ರನಾಗಿ, ಚಂಚಲ ಸ್ವಭಾವದ ವ್ಯಕ್ತಿಯಾಗಿ ಚಿತ್ರಿಸಲಾಗಿದೆ. ಇಂತಹ ಅರ್ಧ ಸತ್ಯಗಳ ಮೇಲೆ ಬೆಳಕು ಚೆಲ್ಲುವಂತ ಅನೇಕ ಘಟನೆಗಳನ್ನು  ಓದುಗರು ಮುಂದಿನ ಅಧ್ಯಾಯಗಳಲ್ಲಿ  ಕಾಣಬಹುದಾಗಿದೆ.
( ಮುಂದುವರಿಯುವುದು)
(ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್ ಹೊರ ತರುತ್ತಿರುವ “ ಜನಪದ” ಮಾಸಿಕ ಪತ್ರಿಕೆಯಲ್ಲಿ ಏಪ್ರಿಲ್ ತಿಂಗಳಿನಿಂದ ಆರಂಭವಾಗಿರುವ ಸರಣಿಯ ಕಥನ)