ಭಾನುವಾರ, ಜುಲೈ 31, 2022

ಯಾರಿಗೆ ಬಂತು? ಎಲ್ಲಿಗೆ ಬಂತು? ಎಪ್ಪತ್ತೆöÊದರ ಸ್ವಾತಂತ್ರö್ಯ?

 


 


ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ರಾಷ್ಟ್ರ ಎಂಬ ಅರ್ಧ ಸತ್ಯದ ಬಿರುದನ್ನು ಹೊತ್ತಿರುವ ಭಾರತ ಈಗ ಎಪ್ಪತ್ತೈದರ ಸ್ವಾತಂತ್ರ್ಯದ ಸಂಭ್ರಮದಲ್ಲಿದೆ. ನನ್ನ ಹಿರಿಯ ಮಿತ್ರರಾದ ದಿ. ಸಿದ್ದಲಿಂಗಯ್ಯನವರುಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯಎಂಬ ಕವಿತೆಯನ್ನು ಬರೆದಿದ್ದರು. ಈಗ ಅದೇ ಕವಿತೆಯನ್ನು ನಾವು ಎಪ್ಪತ್ತೈದರ ಸ್ವಾತಂತ್ರ್ಯ ಸಂಭ್ರಮದ ಸಮಯದಲ್ಲಿ ಮತ್ತೇ ಹಾಡಬೇಕಾಗಿದೆ.  ನಾಡಿನೆಲ್ಲೆಡೆ, ಮನೆ ಹಾಗೂ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಭಾರತ್ ಮಾತಾ ಕಿ ಜೈ ಎಂದು ಒಮ್ಮ ಘೋಷಣೆ ಹಾಕಿದರೆ ಸಂಭ್ರಮದ ದಿನಾಚರಣೆಯಿಂದ ನಿಜವಾದ ಸ್ಮರಣೆ ಸಾಧ್ಯವೆ? ಸ್ವಾತಂತ್ರ್ಯಕ್ಕಾಗಿ ಮನೆ ಮಠಗಳನ್ನು ಕಳೆದುಕೊಂಡು ಹೋರಾಡಿ ಅನಾಮಿಕರಂತೆ ಜೀವ ಕಳೆದುಕೊಂಡುವರ ಸ್ಮರಣೆಗಿಂತ ಇತ್ತೀಚೆಗೆ ನಮ್ಮ ಕಣ್ಣ ಮುಂದಿನ ನಕಲಿ ದೇಶಭಕ್ತರ ಭಜನೆ ಮತ್ತು ಆರಾಧನೆ ಮುಗಿಲು ಮುಟ್ಟುತ್ತಿದೆ. ಸ್ವಾತಂತ್ರ್ಯದ ಮೂಲ ಪರಿಕಲ್ಪನೆಗಳಾದ ಅಭಿವ್ಯಕ್ತಿಯ  ಸ್ವಾತಂತ್ರ್ಯ ಮತ್ತು ಧರ್ಮಾತೀತವಾಗಿ ಸ್ವತಂತ್ರವಾಗಿ ಬದುಕುವ ಸ್ವಾತಂತ್ರ್ಯ ಈಗ ಮಣ್ಣು ಪಾಲಾಗಿವೆ   ದೇಶದಲ್ಲಿ ಈಗ ಸಂವಿಧಾನ ಬದ್ಧ ಆಡಳಿತ ಇದೆಯಾ? ಎಂಬ ಪ್ರಶ್ನೆ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕನನ್ನು ಕಾಡತೊಡಗಿದೆ. ಭಾರತಕ್ಕೆ ಸ್ವಾತಂತ್ರ ಲಭಿಸಿ ಎಪ್ಪತ್ತೈದು ವರ್ಷಗಳಾದವು ಗಮನಾರ್ಹ ಸಂಗತಿಯೆAದರೆ ಭಾರತದ ನಾಗರೀಕರ ಮೂಲಭೂತ ಸ್ವಾತಂತ್ರ್ಯವು ೧೯೭೫ ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂದಿಯವರು ಹೇರಿದ್ದ ತುರ್ತುಪರಿಸ್ಥಿತಿಯ ಅವಧಿಯಲ್ಲಿ ದಮನಗೊಂಡಿದ್ದ ಮಾದರಿಂಯಲ್ಲಿ ಈಗ ಎಪ್ಪತ್ತೈದನೆಯ ವರ್ಷದ ಸ್ವಾತಂತ್ರ್ಯದ ಆಚರಣೆಯ ಸಮಯದಲ್ಲಿ ಕೂಡ ದಮನಗೊಂಡಿದೆ.

ಭಾರತದ ಇತಿಹಾಸದಲ್ಲಿ ೧೯೭೫ ರಲ್ಲಿ  ಪ್ರಧಾನಿಯಾಗಿದದ್ದ ಇಂದಿರಾ ಗಾಂಧಿಯವರು ಜಾರಿಗೆ ತಂದಿದ್ದ ತುರ್ತುಪರಿಸ್ಥಿತಿ ಪರಿಣಾಮದಿಂದಾಗಿ ನಾಗರೀಕ ಹಕ್ಕುಗಳಿಂದ ಹಿಡಿದು, ಪತ್ರಿಕಾ ಸ್ವಾತಂತ್ರ , ಅಭಿವ್ಯಕ್ತಿ ಸ್ವಾತಂತ್ರ ಇವೆಲ್ಲವೂ ನಿಷ್ಕಿçಯವಾಗಿದ್ದ ಘಟನೆಗಳಿಗೆ ನನ್ನ ತಲೆಮಾರು ಸಾಕ್ಷಿಯಾಗಿತ್ತು. ಇಷ್ಟು ಮಾತ್ರವಲ್ಲದೆ  ಇಂದಿರಾ ಗಾಂಧಿಯವರ  ವಿರುದ್ಧ ಸಿಡಿದೆದ್ದ ಜಯಪ್ರಕಾಶ್ ನಾರಾಯಣ್ ಅವರ ಕ್ರಾಂತಿಕಾರಕ ಚಳುವಳಿಯಿಂದ ನಾವುಗಳು ಪ್ರಭಾವಿತರಾಗಿದ್ದೆವ ಜೆ.ಪಿ,ಯವರ ಚಿಂತನೆ ನಮ್ಮನ್ನು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಉದ್ದೀಪಿಸಿತ್ತು. ಇಂದಿಗೂ ನನ್ನ ತಲೆಮಾರಿನ ಬಹುತೇಕ ಹೋರಾಟಗಾರರು ಮತ್ತು ಲೇಖಕರು ಹಾಗೂ ಪತ್ರಕರ್ತರಲ್ಲಿ ಏನಾದರೂ ಒಂದಿಷ್ಟು ಬದ್ಧತೆ ಉಳಿದುಕೊಂಡಿದ್ದರೆ ಅದಕ್ಕೆ ಜಯಪ್ರಕಾಶ್ ನಾರಾಯಣರು ಹುಟ್ಟುಹಾಕಿದ್ದ  ಚಳುವಳಿಯು ಮೂಲ ಕಾರಣ ಎಂದು ನಿಸ್ಸಂಕೋಚವಾಗಿ ಹೇಳಬಹುದು

ನಮ್ಮಗಳ ಕಾಲೇಜು  ಶಿಕ್ಷಣದ  ನಡುವೆಯೂ ತುರ್ತುಪರಿಸ್ಥಿತಿಯ ಎಲ್ಲಾ ಕಠೋರ ನಿಯಮಗಳು, ಹಿಂಸೆ ಮತ್ತು ಭಯಾನಕ ವಾತಾವರಣಕ್ಕೆ   ನೇರ ಸಾಕ್ಷಿಯಾದ ಕಾರಣ  ನೆನಪುಗಳು ಇಂದಿಗೂ ಸಹ ಮಾಯದ ಗಾಯದ ಕಲೆಗಳಂತೆ ನಮ್ಮೊಳಗೆ ಶಾಶ್ವತವಾಗಿ ಉಳಿದುಕೊಂಡಿವೆ. ಕರ್ನಾಟಕದಲ್ಲಿ ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದ ಕಾರಣದಿಂದಾಗಿ ತುರ್ತುಪರಿಸ್ಥಿತಿಯ ಕಠೋರ ನಿಯಮಗಳು ತೀರಾ ಕಡಿಮೆ ಪ್ರಮಾಣದಲ್ಲಿದ್ದವು. ಸ್ನೇಹ ಲತಾ ರೆಡ್ಡಿಯವರಿಗೆ ಸರಿಯಾದ ವೈದ್ಯರ ಸೇವೆ ಮತ್ತು ಔಷಧ ದೊರೆಯದ ಕಾರಣ ಅವರು ಸೆರೆಮನೆಯಲ್ಲಿ ಅಸು ನೀಗಿದರು. ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ಸಹೋದರ ಮೈಕಲ್ ಫೆರ್ನಾಂಡಿಸ್ ಅವರು ಬೆಂಗಳೂರಿನಲ್ಲಿ  ಪೊಲೀಸರ ಚಿತ್ರಹಿಂಸೆಗೆ ಗುರಿಯಾಗಿ ಶಾಶ್ವತ ಅಂಗವಿಕಲರಾದರು. ಇಂತಹ ಘಟನೆಗಳನ್ನು ಹೊರತು ಪಡಿಸಿದರೆ, ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿದ್ದ ಎಲ್.ಕೆ.ಅದ್ವಾನಿಯಂತಹ ನಾಯಕರಿಂದ ಹಿಡಿದು ರಾಜ್ಯ ಮತ್ತು ರಾಷ್ಟç ನಾಯಕರನ್ನು ದೇವರಾಜ ಅರಸುರವರು ಅತ್ಯಂತ ಘನತೆ ಮತ್ತು ಪ್ರೀತಿಯಿಂದ ನೋಡಿಕೊಂಡಿದ್ದರು. ಇದು ಮುಂದಿನ ದಿನಗಳಲ್ಲಿ ಇಂದಿರಾ ಮತ್ತು ಅರಸು ನಡುವಿನ ವೈಮನಸ್ಸಿಗೆ ಪರೋಕ್ಷವಾಗಿ ಕಾರಣವಾಯಿತು.

ಇಂದಿನ ಪ್ರಧಾನಿ ನರೇಂದ್ರಮೋದಿಯವರು ಈಗ ಜಾರಿಗೆ ತಂದಿರುವ ಇಪ್ಪತ್ತೊಂದನೆಯ ಶತಮಾನದ ಅಗೋಚರ ತುರ್ತುಪರಿಸ್ಥಿತಿಯು ೧೯೭೫ ತುರ್ತುಪರಿಸ್ಥಿತಿಗಿಂತ ಏನೇನೂ ಭಿನ್ನವಾಗಿಲ್ಲ. ಇಂದಿರಾ ಗಾಂಧಿಯವರದು ತಮ್ಮ ಸರ್ವಾಧಿಕಾರದ ಮನೋಭಾವದಲ್ಲಿಯೂ ಕೂಡ ತಮ್ಮ ನಡೆ ಮತ್ತು ನುಡಿಗಳಲ್ಲಿ ಯಾವುದೇ ರೀತಿಯ ಮುಚ್ಚು ಮರೆ ಇರಲಿಲ್ಲ  ಈಗಿನ ಪ್ರಧಾನಿಯವರ ರೀತಿಯಲ್ಲಿ ತುಟಿಯಂಚಿನಲ್ಲಿ ಬೆಣ್ಣೆ ಮತ್ತು ಕಂಕುಳಲ್ಲಿ ದೊಣ್ಣೆ ಎನ್ನುವ ರೀತಿಯಲ್ಲಿ ಕಪಟತನ ತೋರಿಸಿರಲಿಲ್ಲ. ಅತ್ಯಂತ ವ್ಯವಸ್ಥಿತವಾಗಿ ನಾಗರೀಕ ಹಕ್ಕುಗಳನ್ನು ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ಧಾರ್ಮಿಕ ಭಾವನೆಗೆ ಕೆಡಕನ್ನು ಉಂಟು ಮಾಡುವ ಹೇಳಿಕೆಗಳು ಎಂತಲೂ ಹಾಗೂ ರಾಜಕೀಯ ನಾಯಕನ ಕಾರ್ಯ ವೈಖರಿಯನ್ನು ಟೀಕಿಸಿದರೆ ಅದು ರಾಷ್ಟ್ರ ದ್ರೋಹವೆಂತಲೂ ಸೆರೆಮನೆಗೆ ದೂಡುವ ಈಗಿನ  ಪ್ರವೃತ್ತಿ  ನಮಗೆ ೧೯೭೫ ತುರ್ತುಪರಿಸ್ಥಿತಿಯ ದಿನಗಳನ್ನು ನೆನಪಿಗೆ ತರುತ್ತಿದೆ. ಇಂದಿರಾ ಗಾಂಧಿಯವರು ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದರು ನಿಜ ಆದರೆ, ಅದಕ್ಕಿಂತ ಭಿನ್ನವಾಗಿ ಈಗಿನ ಪ್ರಧಾನಿಯವರು ನಮಗೆ ಮಾಧ್ಯಮ ಸ್ವಾತಂತ್ರವನ್ನು ದಯಪಾಲಿಸಿದ್ದಾರೆ. ಏಕೆಂದರೆ, ಇಂದು ಭಾರತದಲ್ಲಿರುವ  ಶೇಕಡ ಎಂಬತ್ತರಷ್ಟು ಮಾಧ್ಯಮ ಸಂಸ್ಥೆಗಳು ಮೋದಿ ಭಜನಾ ಮಂಡಳಿಯ ಸದಸ್ಯರ ಒಡೆತನದಲ್ಲಿವೆ ಮುಖೇಶ್ ಅಂಬಾನಿ,  ಗೌತಮ್ ಅದಾನಿ,  ಟೈಮ್ಸ್ ಆಫ್ ಇಂಡಿಯಾ ಜೈನ್ ಕುಟುಂಬ ಹಾಗೂ   ಜೀ  ಸಮೂಹದ ಸುಭಾಶ್ ಚಂದ್ರ ಇಂತಹವರು ದಿನ ನಿತ್ಯದ ವಸ್ತು ಸ್ಥಿತಿಯನ್ನು ಹಾಗೂ ರಾಷ್ಟç ಜ್ವಲಂತ ಸಮಸ್ಯೆ ಮತ್ತು ಆರ್ಥಿಕ ಪರಿಸ್ಥಿತಿ ಇವುಗಳನ್ನು ಬದಿಗಿಟ್ಟು ಮೋದಿ ಸರ್ಕಾರದ ಭಜನೆಯಲ್ಲಿ  ನಿರತರಾಗಿದ್ದಾರೆ. ಅಂದು ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಸ್ಟೇಟ್ಮನ್ ಪತ್ರಿಕೆಗಳು ತೋರಿದ ಪತ್ರಿಕೋದ್ಯಮದ ಘನತೆಯನ್ನು ನಾವು ದಿನಗಳಲ್ಲಿ ಹಿಂದೂ ಮತ್ತು ಟೆಲಿಗ್ರಾಪ್ ಪತ್ರಿಕೆಗಳಲ್ಲಿ ಮತ್ತು ಎನ್.ಡಿ.ಟಿ.ವಿ. ದೃಶ್ಯ ಮಾಧ್ಯಮದಲ್ಲಿ  ಹಾಗೂ ಕೆಲವು ಇಂಗ್ಲೀಷ್ ಪತ್ರಕರ್ತರು ನಡೆಸುತ್ತಿರುವ  ದ ವೈರ್ ಮತ್ತು ದ ಪ್ರಿಂಟ್  ಇನ್  ಎಂಬ ಸಾಮಾಜಿಕ ರಾಣಗಳಲ್ಲಿ ಮಾತ್ರ ನೋಡಬಹುದಾಗಿದೆ.

ಭಾರತದ ಮಾಧ್ಯಮ ಕ್ಷೇತ್ರವು ನೈತಿಕವಾಗಿ ದಿವಾಳಿ ಎದ್ದು ಹೋಗಿರುವ ಈಗಿನ  ಸ್ಥಿತಿಗೆ ಜಾಗತಿಕ ಮಟ್ಟದಲ್ಲಿ ಆಶ್ಚರ್ಯದ ಜೊತೆಗೆ ಕಟುಟೀಕೆಗಳು ವ್ಯಕ್ತವಾಗುತ್ತಿವೆ. ಇಂದಿರಾ ಅವರ ಕಾಲಘಟ್ಟದಲ್ಲಿ ದೃಶ್ಯಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳು ಇರಲಿಲ್ಲ. ಇದ್ದ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳು ಕೇಂದ್ರ ಸರ್ಕಾರ ಸಾಕಿದ ಗಿಣಿಗಳಂತೆ ಉಲಿಯುತ್ತಿದ್ದವು.  ಇಂದಿರಾ ಅವರ ಹಠಮಾರಿತನ ಮತ್ತು ಸರ್ವಾಧಿಕಾರದ ಪ್ರವೃತ್ತಿಯ ವಿರುದ್ಧ ಸಿಡಿದೆದ್ದ ಅಂದಿನ ಬಹುತೇಕ ಪತ್ರಿಕೆಗಳು ಅದರಲ್ಲೂ ವಿಶೇಷವಾಗಿ ಇಂಡಿಯನ್ ಎಕ್ಸ್ ಪ್ರಸ್ ಸಮೂಹದ ರಾಮನಾಥ ಗೋಯಂಕಾ ಅವರ ಹೋರಾಟ ಇಂದಿನ ಮಾಧ್ಯಮ ಕ್ಷೇತ್ರಕ್ಕೆ  ಮಾದರಿಯಾಗುವಂತಹದ್ದು.  ಕನ್ನಡದ ಸಂದರ್ಭದಲ್ಲಿ ಹೇಳುವುದಾದರೆ, ಕನ್ನಡದ ಬಹುತೇಕ ದಿನಪತ್ರಿಕೆಗಳು ತಮ್ಮ ಸಂಪಾದಕಿಯ ಬರೆವಣಿಗೆಯ ಸ್ಥಳವನ್ನು ಖಾಲಿಯಾಗಿ ಮುದ್ರಿಸಿ ಪ್ರತಿಭಟನೆ ತೋರಿದವು. ಕನ್ನಡ ಪ್ರಭ ಪತ್ರಿಕೆಯ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣನವರು ಪತ್ರಿಕೆಯ ಮುಖಪುಟದಲ್ಲಿ ಎರಡು ಕಾಲಂ ವಿಸ್ತಾರದಲ್ಲಿ ಮೇಲಿನಿಂದ ಕೆಳಗಿನವರೆಗೂ ಪರಿಣಾಮಕಾರಿ ಶಬ್ದಗಳಲ್ಲಿ  ಬರೆಯುತ್ತಿದ್ದ ಸಂಪಾದಕೀಯವನ್ನು ಇಂದಿನ ತಲೆಮಾರಿನ ಪತ್ರಕರ್ತರು ಒಮ್ಮ ಗಮನಿಸುವುದು ಒಳಿತು.

ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಪತ್ರಕರ್ತೆಯಾಗಿದ್ದ ಕೂಮಿ ಕಪೂರ್ ಅವರು ಬರೆದ ಎಮರ್ಜೆನ್ಸಿ, ಪರ್ಸನಲ್ ಹಿಸ್ಟರಿ ಮತ್ತು  ಅನ್ಟೋಲ್ಡ್  ಸ್ಟೋರಿ ಆಫ್ ಎಮರ್ಜೆನ್ಸಿಎಂಬ ಜೆ.ಪಿ.ಗೋಯಲ್ ಅವರ ನೆನಪುಗಳ ಕೃತಿ ಇವುಗಳು ನಮಗೆ ೧೯೭೫ ತುರ್ತುಪರಿಸ್ಥಿತಿಯ ವಿವರಗಳನ್ನು ಸಮಗ್ರವಾಗಿ ಒದಗಿಸುತ್ತವೆ. ಇಂದಿರಾಗಾಂಧಿಯವರು ತಮ್ಮ ಆಪ್ತ ಕಾರ್ಯದರ್ಶಿಯಾಗಿದ್ದ ಕೇರಳ ಮೂಲದ ಆರ್.ಕೆ.ಧವನ್ ಮೂಲಕ ಹಾಗೂ ಅವರ ಪುತ್ರ ಸಂಜಯ್ಗಾAಧಿ ದೆಹಲಿಯ ಲೆಪ್ಟಿನೆಂಟ್ ಗವರ್ನರ್ ಆಗಿದ್ದ ಜಗಮೋಹನ್ ಮೂಲಕ ನಡೆಸಿದ ದಬ್ಬಳಾಳಿಕೆಯಿಂದಾಗಿ ಪ್ರಜಾಪ್ರಭತ್ವದ ಮೌಲ್ಯಗಳು ಮತ್ತು ಜನಸಾಮಾನ್ಯರು ಅನುಭವಿಸಿದ ಯಾತನೆಗಳನ್ನು ಕೃತಿಗಳು ನಮ್ಮೆದುರು ತೆರದಿಡುತ್ತವೆ. ಸಂಧರ್ಭದಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಮಾಲಿಕ ರಾಮನಾಥ ಗೋಯೆಂಕಾ ಅವರ ಪತ್ರಿಕಾ ಕಚೇರಿಗಳ ಮೇಲೆ ನಿರಂತರ ದಾಳಿ ನಡೆದವು ಮತ್ತು ಕಂಪನಿಯ ವ್ಯವಹಾರ ಪಾರದರ್ಶಕವಾಗಿಲ್ಲ ಎಂಬ ನೆಪದಲ್ಲಿ ಮುನ್ನೂರಕ್ಕೂ ಅಧಿಕ ಮೊಕದ್ದಮೆಗಳು ದಾಖಲೆಯಾಗಿದ್ದವು ಪ್ರತಿಯೊಂದು ವಿಚಾರಣೆಗೆ ಸಂಸ್ಥೆಯ ಅಧ್ಯಕ್ಷರ  ಹಾಜರಾತಿ ಕಡ್ಡಾಯ ಎಂಬ ನಿಯಮವನ್ನು ಜಾರಿ ಮಾಡಲಾಗಿತ್ತು.  ಇಂತಹ ಸ್ಥಿತಿಯಲ್ಲಿ ವೃದ್ಧಾಪ್ಯದ ನಡುವೆಯೂ ಸಹ ರಾಮನಾಥ ಗೋಯಂಕಾ ಅವರು ಅಂದಿನ ಪ್ರಸಿದ್ಧ ವಕೀಲರಾಗಿದ್ದ ನಾರಿಮನ್ ಪಾಲ್ಕಿವಾಲ ಅವರನ್ನು ಕಟ್ಟಿಕೊಂಡು ಹೋರಾಡಿದ್ದರು. ಹಿರಿಯ ಗಾಂಧಿವಾದಿ ಹಾಗೂ ಜಯಪ್ರಕಾಶ್ ನಾರಾಯಣರ ಆಪ್ತರಾಗಿದ್ದ ಗೋಯಂಕಾರವರು ಯಾವ ಕಾರಣಕ್ಕೂ ಪ್ರಜಾ ಪ್ರಭುತ್ವದ ಮೌಲ್ಯಗಳನ್ನು ಸರ್ವಾಧಿಕಾರಿ ಮನೋಭಾವಕ್ಕೆ ಹೆದರಿ ಗಾಳಿಗೆ ತೂರಬಾರದು ಎಂಬ ನಿಲುವಿಗೆ ಅಂಟಿಕೊಂಡು ಹೋರಾಡಿದ್ದರು. ದಿನಗಳಲ್ಲಿ ಪತ್ರಿಕೆಯ ಸಂಪಾದಕರಾಗಿದ್ದ ಕುಲದೀಪ್ ನಯ್ಯರ್ ಎಂಬ  ಅಪರೂಪದ ಪ್ರಾಮಾಣಿಕ ಪತ್ರಕರ್ತರು ರಾಮನಾಥ ಗೋಯಂಕಾ ಅವರ ಬೆಂಬಲಕ್ಕೆ ನಿಂತಿದ್ದರು.

2014  ರಲ್ಲಿ ಪ್ರಧಾನಿ ಹುದ್ದೆಗೆ ಏರಿದ ನಂತರ ನರೇಂದ್ರ ಮೋದಿಯವರ ಮುಂದೆ ಇದ್ದ ಎರಡು ಪ್ರಮುಖ ಗುರಿಗಳು ಈಗ ಸಾರ್ವಜನಿಕವಾಗಿ ಅನಾವರಣಗೊಂಡಿವೆ. ಅವುಗಳಲ್ಲಿ ಮೊದಲನೆಯದು ದೇಶಾದ್ಯಂತ  ನೈತಿಕತೆ ಮತ್ತು ಅನೈತಿಕತೆ ಇವುಗಳನ್ನು ದೂರವಿಟ್ಟು ಬಿ.ಜೆ.ಪಿ.ಯನ್ನು ಅಧಿಕಾರಕ್ಕೆ ತರುವುದು  ಮೊದಲನಯ ಗುರಿಯಾದರೆ,   ಎರಡನೆಯದಾಗಿ ತಮ್ಮ ನೇತೃತ್ವದ ಆಡಳಿತವನ್ನು ಬಹಿರಂಗವಾಗಿ ವಿಮರ್ಶಿಸುವ ಅಥವಾ ಟೀಕಿಸುವ ಲೇಖಕರು, ಪತ್ರಕರ್ತರು ಮತ್ತು ಹೋರಾಟಗಾರರನ್ನು ದೇಶ ದ್ರೋಹದ ಆಪಾಧನೆಯಡಿ  ಜಾಮೀನು ದೊರಕದಂತೆ ಸೆರೆಮನೆಗೆ ದೂಡುವುದು. ಎರಡನೆಯ ಗುರಿಯಾಗಿದೆ. ನರೇಂದ್ರ ಮೋದಿ ತನ್ನ ಎಂಟು ವರ್ಷದ ಅಧಿಕಾರದ ಆಡಳಿತಾವಧಿಯಲ್ಲಿ ಒಂದು ದಿನವಾದರೂ ದೇಶದ ಸಮಸ್ಯೆ ಕುರಿತಾಗಿ ಆಲೋಚಿಸಿದ ಬಗ್ಗೆಯಾಗಲಿ ಅಥವಾ ಆರ್ಥಿಕ ಸ್ಥಿತಿ ಗತಿಯ ಕುರಿತಾಗಿ ತಜ್ಞರ ಸಲಹೆ ಕೇಳಿದ ಕುರಿತಾಗಲಿ ಮಾಹಿತಿಯಿಲ್ಲ. ಕೋವಿಡ್ ಸಂದರ್ಭದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ಮುಂಬೈ ಮತ್ತು ದೆಹಲಿಯಂತಹ ಪ್ರಮುಖ  ನಗರಗಳಿಂದ ನೂರಾರು ಕಿಲೋಮೀಟರ್ ದೂರದ ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲಿ ಪ್ರಯಾಣ ಹೊರಟಾಗ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ ಸರ್ಕಾರವು ನ್ಯಾಯಾಲಯಕ್ಕೆ ತನ್ನ ಬಳಿ ವಲಸೆ ಕಾರ್ಮಿಕರ ಕುರಿತಾಗಿ ಅಧಿಕೃತ ಮಾಹಿತಿಗಳಿಲ್ಲ ಎಂಬ ಹೇಳಿಕೆಯನ್ನು ನೀಡಿತು. ಭಾರತದ ನೆಲದಲ್ಲಿ ದುಡಿಯುವ ಕಾರ್ಮಿಕರ ಕುರಿತಾಗಿ ತನಗಿರುವ ಅಸಹನೆಯನ್ನು ಮತ್ತು ಬೇಜಾವ್ದಾರಿತನವನ್ನು ಅನಾವರಣಗೊಳಿಸಿತು.  ನಿರುದ್ಯೋಗದಿಂದ ಹತಾಶರಾಗಿರುವ ವಿದ್ಯಾವಂತ ಯುವಕರಿಗೆ ರಸ್ತೆಯಲ್ಲಿ ಪಕೋಡ ಮಾರಿ  ಜಿವನ ಸಾಗಿಸಿ ಎಂದು ಹೇಳಬಲ್ಲ ಇಂತಹ  ಪ್ರಧಾನಿಯನ್ನು ಬಹುಶಃ ಜಗತ್ತಿನಲ್ಲಿ ಯಾವ ರಾಷ್ಟçವೂ ನೋಡಿರಲು ಸಾಧ್ಯವಿಲ್ಲ.

ಪ್ರಜಾ ಪ್ರಭುತ್ವ ವ್ಯವಸ್ತೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕೋದ್ಯಮವನ್ನು ನಾಲ್ಕು ಆಧಾರ ಸ್ಥಂಭಗಳು ಎಂದು ಗುರುತಿಸಲಾಗಿದೆ. ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ಲೊಪಗಳಾದರೆ ತಿದ್ದುವ ಹೊಣೆಗಾರಿಕೆ ಈವರೆಗೆ ನ್ಯಾಯಾಂಗ ಮತ್ತು ಮಾಧ್ಯಮಗಳ ಮೇಲಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ  ಎರಡು ಆಧಾರ ಸ್ತಂಭಗಳು ಆಳುವವರ ಗುಲಾಮರಂತೆ ವರ್ತಿಸತೊಡಗಿವೆ. ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಸವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು  ಅಧಿಕಾರಕ್ಕೆ ಹಾತೊರೆದು ನ್ಯಾಯಾಂಗದ ಘನತೆಯನ್ನು ಗಾಳಿಗೆ ತೂರುತ್ತಿದ್ದಾರೆ. ಹಿಂದೆ 2005 ರಲ್ಲಿ ಪಿ.ಸುಂದರಂ ಎಂಬ ನ್ಯಾಯಮೂರ್ತಿ ಕೇರಳದ ರಾಜ್ಯಪಾಲರಾಗಿದ್ದರು. ಈವರಗೆ  ನ್ಯಾಯಮೂರ್ತಿಗಳು ತನಿಖಾ ಆಯೋಗದ ಅಧ್ಯಕ್ಷರಾಗುವುದು ಅಥವಾ ಕಾನೂನುಗಳಿಗೆ ಸಂಬಂಧಪಟ್ಟ ಸಲಹಾ ಸಮಿತಿಗಳಿಗೆ ಅದ್ಯಕ್ಷರಾಗಿರುವುದನ್ನು  ಹೊರತು ಪಡಿಸಿದರೆ ಉಳಿದ ರಾಜಕೀಯ ಹುದ್ದೆಗಳನ್ನು ಅಲಂಕರಿಸಿದ ಉದಾಹರಣೆಗಳಿಲ್ಲ. ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೋಗಯ್ ಎಂಬ ವ್ಯಕ್ತಿಯು ಕಳೆದ ವರ್ಷ ಅಯೋಧ್ಯೆಯ ರಾಮಮಂದಿರದ ವಿಷಯದಲ್ಲಿ ಸರ್ಕಾರದ ಪರವಾಗಿ ತೀರ್ಪು ನೀಡಿದ್ದಕ್ಕೆ ಪ್ರತಿಫಲವಾಗಿ  ಈಗ ರಾಜ್ಯಸಭೆಗೆ ಸದಸ್ಯರಾಗಿ  ನಾಮಕರಣವಾಗುವುದರ ಮೂಲಕ  ನ್ಯಾಯಾಲಯ ಮತ್ತು ನ್ಯಾಯಮೂರ್ತಿಯ ಸ್ಥಾನದ  ಘನತೆಯನ್ನು ಕುಗ್ಗಿಸಿದ್ದಾರೆ. ಇಂತಹ ನಡುವಳಿಕೆಗಳು ಸರ್ಕಾರದ ಪರವಾಗಿ ತೀರ್ಪು ನೀಡುವುದು ಅಥವಾ ಸರ್ಕಾರದ ಅವ್ಯವಹಾರಗಳ ಕುರಿತಾಗಿ ಮೌನ ವಹಿಸಿದರೆ ಮುಂದಿನ ದಿನಗಳಲ್ಲಿ ನ್ಯಾಯಾಧೀಶರಿಗೆ  ಲಾಭವಾಗಲಿದೆ ಎಂಬ ಸಂದೇಶವನ್ನು ರವಾನಿಸುತ್ತಿವೆ.  ಹಾಗಾಗಿ ನ್ಯಾಯಾಂಗದ ಕಾರ್ಯವೈಖರಿ ಕುರಿತಂತೆ (ಕೆಲವು ನಿಷ್ಟಾವಂತ ನಾಯ್ಯಾಧೀಶರನ್ನು ಹೊರತು ಪಡಿಸಿ) ಜನಸಾಮಾನ್ಯರಿಗೆ ಇದ್ದ ನಂಬಿಕೆಯು ಕುಸಿದು ಹೋಗಿದೆ.

ಸರ್ಕಾರ ಮತ್ತು ಸಮಾಜದ ನಡುವೆ ಸಂಪರ್ಕ ಸೇತುವೆಯಾಗಬೇಕಿದ್ದ ಮಾಧ್ಯಮ ಕ್ಷೇತ್ರವು ಈಗ  ಸಂಪೂರ್ಣವಾಗಿ ಶರಣಾಗತವಾಗುವುದರ ಮೂಲಕ ಯಾವುದೇ ಸಂಕೋಚ ಅಥವಾ ಮುಜುಗರವಿಲ್ಲದೆ ಆಳುವವರ ಮತ್ತು ಉಳ್ಳವರ ತುತ್ತೂರಿಯಾಗಿದೆ. ಇಂತಹ ದುಸ್ಥಿತಿಯ ನಡುವೆ ಪ್ರಮಾಣಿಕ ಹಾಗೂ ಘನತೆಯ ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸರ್ಕಾರ ಕಸಿದುಕೊಂಡಿದೆ. ಎರಡೂವರೆ ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ದಲಿತ ಬಾಲಕಿಯ ಮೇಲೆ ನಡೆದ ಅತ್ಯಾಚಾರದ ಘಟನೆಯನ್ನು ವರದಿ ಮಾಡಲು ತೆರಳಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದಿಕಿ ಎಂಬ ಯುವಕನನ್ನು ರಾಷ್ಟç ಮತ್ತು ರಾಜ್ಯ ಸರ್ಕಾರಗಳ ವಿರುದ್ಧದ ಕಾನೂನು ಬಾಹಿರ ಚಟುವಟಿಕೆ ಎಂಬ ಆಧಾರದ ಮೇಲೆ ಬಂಧಿಸಲಾಗಿದ್ದು  ಆತ ಜಾಮೀನು ದೊರೆಯದೆ ಇಂದಿಗೂ ಸಹ ಸೆರೆಮನೆಯಲ್ಲಿ ಬಂಧಿಯಾಗಿ ಕೊಳೆಯುತ್ತಿದ್ದಾನೆ. ಇಷ್ಟು ಮಾತ್ರವಲ್ಲದೆ ದೇಶವಿರೋಧಿ, ಸಂವಿಧಾನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಎಂಬ ಹುಸಿ ಆರೋಪಗಳ ಮೇಲೆ  ದೇಶದ ಹಲವಾರು ಚಿಂತಕರನ್ನು, ನ್ಯಾಯವಾದಿಗಳನ್ನು ಮತ್ತು ಸಾಮಾಜಿಕ ಹೋರಾಟಗಾರರನ್ನು ಕಳೆದ ನಾಲ್ಕೈದು ವರ್ಷಗಳಿಂದ ಭಿಮಾ ಕೋರೆಗಾಂವ್ ಘಟನೆಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷಾಧಾರಗಳಿಲ್ಲದಿದ್ದರೂ ಮಹಾರಾಷ್ಟ್ರದ ಜೈಲಿನಲ್ಲಿ ಬಂಧಿಸಿ ಇಡಲಾಗಿದೆ. ಪ್ರೊ.ಆನಂದ್ ತೇಲ್ದುಂಬೆ, ವರವರರಾವ್, ಸುಧಾಭಾರಧ್ವಾಜ್ ( ವರವರರಾವ್ ಮತ್ತು ಸುಧಾ ಭಾರದ್ವಾಜ್ ಇಬ್ಬರೂ ಅನಾರೋಗ್ಯದ ನಿಮಿತ್ತ ತಾತ್ಕಾಲಿಕವಾಗಿ ಜಾಮೀನು ಪಡೆದಿದ್ದಾರೆ) ಪ್ರೊ.ಹನಿಬಾಬು, ಅರುಣ್ ಫೆರಿರಾ ಸೇರಿದಂತೆ ದೆಹಲಿಯ ಜವಹರ ಲಾಲ್ ವಿಶ್ವ ವಿದ್ಯಾಲಯದ ಅನೇಕ ವಿದ್ಯಾರ್ಥಿ ಮುಖಂಡರನ್ನು ಬಂಧಿಸಿ ಸತ್ಯ ಹೇಳುವವವರಿಗೆ ಇಲ್ಲಿ ಉಳಿಗಾಲವಿಲ್ಲ ಎಂಬ ಸಂದೇಶವನ್ನು ರವಾನಿಸಲಾಗಿದೆ.  ಸುಳ್ಳು ಸುದ್ದಿಗಳನ್ನು ಬಯಲಿಗೆಳೆಯುತ್ತಿದ್ದ ಆಲ್ಟ್ ನ್ಯೂಸ್ ಎಂಬ ಅಂತರ್ಜಾಲ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬನಾಗಿದ್ದ ಬೆಂಗಳೂರು ಮೂಲದ ಮಹಮ್ಮದ್ ಜಯಬೈರ್ ಎಂಬ ಯುವ ಪ್ರತಿಭಾವಂತನನ್ನು ಈಗ ಬಂಧಿಸಲಾಗಿತ್ತು. ಇದೀಗ ಈ ಯುವಕ ಜಾಮೀನನ ಮೇಲೆ ಹೊರಬಂದಿದ್ದಾನೆ.

ನಮ್ಮ ನಡುವಿನ ಸಾಕ್ಷಿ ಪ್ರಜ್ಞೆಯಂತೆ ಬದುಕುತ್ತಾ, ಬರೆಯುತ್ತಿರುವ ಹಿರಿಯ  ಸಾಹಿತಿ ದೇವನೂರು ಮಹಾದೇವ ಅವರು ಇತ್ತೀಚೆಗೆ ಬರೆದಆರ್.ಎಸ್.ಎಸ್ ಆಳ ಅಗಲಎಂಬ ಕೃತಿಯಲ್ಲಿ ದಾಖಲಿಸಿರುವ ಮಾತುಗಳು ಹೀಗಿವೆ. ‘ ಕಾಂಗ್ರೇಸ್ ಪಕ್ಷದ ಇಂದಿರಾ ಗಾಂದಿಯವರು ಕೂಡ ಸರ್ವಾಧಿಕಾರಿಯಾಗಿದ್ದರು ಆದರೆ ಅದು ಅಲ್ಪಾವಧಿಯವರೆಗೆ ಮಾತ್ರ. ಇಂದಿರಾ ಅವರ ಸರ್ವಾಧಿಕಾರವು ಕೇವಲ  ಆಡಳಿತಾತ್ಮಕ ಸರ್ವಾಧಿಕಾರವಾಗಿತ್ತು. ಇಂದಿರಾ ಅವರ ಸರ್ವಾಧಿಕಾರದಲ್ಲಿ ಕಾರ್ಯಾಂಗ, ನ್ಯಾಯಾಂಗ  ಹಾಗೂ ಪತ್ರಿಕಾ ರಂಗ ಮುಂತಾದ ಸ್ವಾಯತ್ತ ಸಂಸ್ಥೆಗಳು ಈಗಿನಷ್ಟು ನಿತ್ರಾಣಗೊಂಡಿರಲಿಲ್ಲ ಆದರೆ, ಇಂದಿನ ಮೋದಿಯವರ ಆಳ್ವಿಕೆಯಲ್ಲಿ ನ್ಯಾಯಾಂಗ, ಕಾರ್ಯಾಂಗ ಹಾಗೂ ಮಾಧ್ಯಮ ಸಂಸ್ಥೆಗಳು  ಉಸಿರಾಡಲು ಕಷ್ಟ ಪಡುತ್ತಿವೆ.

ಆರ್ ಎಸ್.ಎಸ್. ಸಂಸ್ಥೆಯ ಕನಸಿನ ಆಳ್ವಿಕೆಯು ಸಮಾಜದ ಎಲ್ಲಾ ಕ್ಷೇತ್ರಗಳನ್ನು ಕಬ್ಜಾ ಮಾಡಿಕೊಳ್ಳತೊಡಗಿದೆ. ಅಂದರೆ, ಪಕ್ಷ, ಸಮಾಜ, ಸಂಸ್ಕೃತಿ,  ಆಡಳಿತಾತ್ಮಕ, ಎಲ್ಲವಕ್ಕೂ ಏಕ ನಾಯಕತ್ವವೇ ಅಂತಿಮ ಎಂಬಂತಾಗಿದೆ ಇದು ಸರ್ವಾಧಿಕಾರವೆಂಬುದನ್ನು ನಾವು ನೆನಪಿಟ್ಟುಕೊಳ್ಳೊಣಎಂದು ಹೇಳಿರುವ ಮಾತುಗಳನ್ನು ಗಮನಿಸಿದರೆ ಅಥವಾ ಕುರಿತು ನಾವು ಗಂಭೀರವಾಗಿ ಆಲೋಚಿಸಿದರೆ  ಭಾರತದ ಪ್ರಜೆಗಳಾದ ನಾವು ಎಪ್ಪತ್ತೈದರ ಸ್ವಾತಂತ್ರ್ಯ ಸಂಭ್ರಮದ ಆಚರಣೆಯ ಮನಸ್ಥಿತಿಯಲ್ಲಿ ನಾವು ಇರಲು ಸಾಧ್ಯವೆ? ಇದು ನಮ್ಮಗಳ ಆತ್ಮಸಾಕ್ಷಿಗೆ ಹಾಕಿಕೊಳ್ಳಬೇಕಾದ ಪ್ರಶ್ನೆ ಮಾತ್ರವಾಗಿರದೆ  ಭವಿಷ್ಯದ ಭಾರತದ ಬಗ್ಗೆ ಕೂಡ ನಾವು  ಆಲೋಚಿಸಬೇಕಿದೆ.

ಡಾ.ಎನ್.ಜಗದೀಶ್ ಕೊಪ್ಪ

( ಆಗಸ್ಟ್ ತಿಂಗಳ ಹೊಸತು ಮಾಸ ಪತ್ರಿಕೆಗೆ ಬರೆದ ಅಂಕಣ ಬರಹ)