ಶುಕ್ರವಾರ, ಸೆಪ್ಟೆಂಬರ್ 26, 2014

ಗ್ರಾಮ ಭಾರತದ ತಾಯ್ತನದ ಬೇರುಗಳು



ಗೆಳೆಯ ಕೇಶವರೆಡ್ಡಿ ಹಂದ್ರಾಳ ಈಗಾಗಲೇ ಕನ್ನಡ ಸಾಹಿತ್ಯಲೋಕದಲ್ಲಿ  ತಮ್ಮ ಅಂತಃಕರಣ ಮತ್ತು ಮಾನವೀಯ ಮೌಲ್ವಗಳನ್ನು ಎತ್ತಿಹಿಡಿಯುವ  ಕಥೆಗಳ ಮೂಲಕ ತಮ್ಮ ಹೆಸರನ್ನು ಚಿರಸ್ಥಾಯಿಗೊಳಿಸಿದವರುಮೂರು ದಶಕಗಳ ಅವಧಿಯಲ್ಲಿ ಬರೆದಿರುವ ಮುನ್ನೂರಕ್ಕೂ ಹೆಚ್ಚು ಕಥೆಗಳು ಅವಸಾನದ ಅಂಚಿನಲ್ಲಿರುವ ಗ್ರಾಮಭಾರತದ ವೈವಿಧ್ಯಮಯ ಕಥಾವಸ್ತುಗಳನ್ನು ಒಳಗೊಂಡಿರುವುದು ವಿಶೇಷ.
ತನ್ನ ತಾಯ್ತನದ ಹೃದಯದಿಂದ ಕನ್ನಡ ಕಥಾಲೋಕವನ್ನು ವಿಶೇಷವಾಗಿ ಗ್ರಾಮೀಣ ಜಗತ್ತನ್ನು  ಅಕ್ಷರ ಲೋಕಕ್ಕೆ ವಿಸ್ತರಿಸಿದ ದಿಗ್ಗಜ ಡಾ.ಬೆಸಗರಹಳ್ಳಿ ರಾಮಣ್ಣನವರ ಉತ್ತರಾಧಿಕಾರಿಯಂತೆ ಕಾಣುವ ಕೇಶವರೆಡ್ಡಿ ಹಂದ್ರಾಳ ಅವರು ರಾಮಣ್ಣನವರಂತೆ ಬರಹ ಮತ್ತು ಬದುಕಿನಲ್ಲಿ ಗ್ರಾಮಸಂಸ್ಕøತಿಯನ್ನು ತಮ್ಮ ಉಸಿರಾಗಿಸಿಕೊಂಡವರು. ಕುಡಿಯುವ ನೀರನ್ನು ಮತ್ತು ಉರಿಯುವ ಬೆಂಕಿಯನ್ನು ಹಂಚಿಕೊಳ್ಳುವ ಸಂಪ್ರದಾಯದ  ಗ್ರಾಮಸಮುದಾಯದಲ್ಲಿ ಹುಟ್ಟಿ ಬೆಳೆದ ಹಂದ್ರಾಳರವರು ಸಹಜವಾಗಿ ತನಗೆ ಪರಕೀಯವೆನಿಸಿದ ನಗರ ಸಂಸ್ಕøತಿಯನ್ನು ಬೆರಗುಗಣ್ಣಿನಲ್ಲಿ ನೋಡುತ್ತಾ ಬೆಳೆದವರು. ಖಡ್ಗ ಮತ್ತು ಲೇಖನಿಗಳಿಗಿಂತ ಅನ್ನದಾತನ ನೇಗಿಲು ಮಿಗಿಲು ಎಂದು ಬಲವಾಗಿ ನಂಬಿದವರು. ಜೊತೆಗೆ ತಮ್ಮ ಚಿಕಿತ್ಸಾ ಮನೋಭಾವದಿಂದ ಅದನ್ನು ತಮ್ಮ ಕಥೆಗಳ ಮೂಲಕ ಅಗ್ನಿ ಪರೀಕ್ಷೆಗೆ ಒಳಪಡಿಸಿದವರುಅಕ್ಷರ ಜಗತ್ತಿಗಿಂತ ಅನಕ್ಷರಸ್ಥ ಜಗತ್ತು ಅತ್ಯಂತ ಹೆಚ್ಚು ಪ್ರಾಮಾಣಿಕವಾದದ್ದು ಮತ್ತು ಮಾನವೀಯ ಮುಖವುಳ್ಳದ್ದು ಎಂದು ಬಲವಾಗಿ ನಂಬಿ ಪ್ರತಿಪಾದಿಸುತ್ತಾ ಬಂದಿರುವ ಹಂದ್ರಾಳರವರು ತಮ್ಮ ಮನಸ್ಸಿಗೆ ಶೂನ್ಯತೆ ಆವರಿಸಿಕೊಂಡಾಗ ನೇರವಾಗಿ ತಮ್ಮ ಬಾಲ್ಯದ ಜಗತ್ತಿಗೆ ಜಾರಿಬಿಡುವ ರಹದಾರಿಯನ್ನು ಕಂಡುಕೊಂಡವರು.
ಕಥೆಗಳಲ್ಲದೆ ತಮ್ಮ ಬಾಲ್ಯದ ನೆನಪುಗಳನ್ನುಒಕ್ಕಲ ನೆನಪುಎಂಬ ಹೆಸರಿನಲ್ಲಿ ಪರಿಣಾಮಕಾರಿಯಾಗಿ ದಾಖಲಿಸಿ ಗ್ರಾಮೀಣ ಬದುಕಿನ ಸುಖ ಮತ್ತು ದುಃಖ ದುಮ್ಮಾನಗಳನ್ನು ಹಾಸ್ಯದ ಲೇಪನದೊಂದಿಗೆ  ಕನ್ನಡಿಗರ ಮುಂದೆ ಇಟ್ಟಿರುವ ಕೇಶವ ರೆಡ್ಡಿ ಹಂದ್ರಾಳರು ಇದೀಗ ಅದರ ಮುಂದುವರಿದ ಭಾಗದಂತೆಮರೆತ ಭಾರತಕೃತಿಯನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಇಂದಿನ ವರ್ತಮಾನದ ಆಧುನಿಕ  ಜಗತ್ತಿನ  ಹಲವರ ಪಾಲಿಗೆ ನನ್ನ ತಲೆಮಾರಿನ ಲೇಖಕರು  ಗ್ರಾಮ ಭಾರತದ ಕುರಿತು  ಮಾತನಾಡುವುದು ಸಿನಿಕತನವೆಂಬಂತೆ ತೋರುತ್ತಿದೆ. ಆದರೆ, ಗ್ರಾಮಭಾರತದ ಸಂಸ್ಕøತಿಯೊಳಗೆ ಹುದುಗಿ ಹೋಗಿರುವ ತಾಯ್ತನದ ಬೇರಿನ ಪರಿಚಯವಿಲ್ಲದ ಹಾಗೂ  ಮುಚ್ಚಿದ ಬಾಗಿಲ ಸಂಸ್ಕøತಿಯೊಳಗೆ ಬೆಳೆದು ಬಂದಿರುವ, ಎಂದಿಗೂ  ಹೆತ್ತ ತಾಯಿಯ ಎದೆ ಹಾಲು ಕುಡಿಯದೆ  ಕೇವಲ  “ಅಮುಲ್ ಬೇಬಿ ಪೌಡರ್ ಹಾಲು ಕುಡಿದ ಅಮುಲ್ ಬೇಬಿಗಳುಮಾತ್ರ ಮಾತನಾಡಬಹುದಾದ ಮಾತುಗಳಿವು. ತಾಯಿಯ ಎದೆಹಾಲಿನೊಂದಿಗೆ, ನೆರೆಮನೆಯ ಸಾರು, ಮುದ್ದೆ ಅಷ್ಟೇ ಅಲ್ಲನೀರು, ಬೆಂಕಿ, ಸಾವು, ನೋವು ಹೀಗೆ ಕಷ್ಟ ಸುಖಗಳನ್ನು ಸಹ ಹಂಚಿಕೊಂಡು ಬಂದ ಹಳ್ಳಿಯಲ್ಲಿ ಬೆಳೆದ ಹಂದ್ರಾಳರು ಒಂದು ಸಮುದಾಯದ ನೋವನ್ನು ತನ್ನ ವೈಯಕ್ತಿಕ ನೋವೆಂದು ಪರಿಭಾವಿಸುವ ಗ್ರಾಮ ಸಂಸ್ಕøತಿಯ ತಿರುಳನ್ನು ಮೈಗೂಡಿಸಿಕೊಂಡವರು. ತನ್ನ  ಕಣ್ಣೆದುರು ಕಂಡವರ ನೋವಿಗೆ ಮುಲಾಮು ಆಗುವ ಅಥವಾ ಕಣ್ಣೀರಿಗೆ ಕರವಸ್ತ್ರವಾಗುವ ಅವ ನಡೆಯಲ್ಲಾಗಲಿ ಅಥವಾ  ನುಡಿಯಲ್ಲಾಗಲಿ ಯಾವುದೇ ಕೃತಿಮತೆಗಳಿಲ್ಲ ಏಕೆಂದರೆ, ಅವರು ಬೆನ್ನಿಗೆ ಕಟ್ಟಿಕೊಂಡು ಬೆಳೆದ ಗ್ರಾಮಭಾರತದ ಸಂಸ್ಕತಿ ಅವರ ಬದುಕಿನುದ್ದಕ್ಕೂ ಅವರ ಚಿಂತನೆಗಳ ಮೇಲೆ ಪ್ರಭಾವ ಬೀರಿರುವುದನ್ನು ಕೃತಿಯಲ್ಲದೆ ಅವರ ಎಲ್ಲಾ ಕೃತಿಗಳಲ್ಲೂ ನಾವು ಕಾಣಬಹುದು.





ಇಂದಿಗೂ ಕೂಡ ನಾಗರೀಕ ಜಗತ್ತಿಗೆ ಭಾರತದ ಹಳ್ಳಿಗಳ ಬಗ್ಗೆ ಒಂದು ರೀತಿಯ ಅಪನಂಬಿಕೆ ಮತ್ತು ಅನಾದರಗಳಿವೆ. ಅದೊಂದು ಮೌಡ್ಯ ಮತ್ತು ಅನಾಚಾರಗಳಿಂದ ತುಂಬಿದ ಗೂಡು ಎಂಬ ಅಪಕ್ವ ಕಲ್ಪನೆಗಳಿವೆ ದಿನಗಳಲ್ಲಿ ನಾವು ಕಾಣುತ್ತಿರುವ  ಗ್ರಾಮೀಣಜಗತ್ತು ಜಾಗತೀಕರಣದ ಹೊಡೆತಕ್ಕೆ ಸಿಲುಕಿ ನಲುಗುವುದರ ಮೂಲಕ ವೃದ್ಧರ ಅನಾಥಶ್ರಮಗಳಂತೆ ಕಾಣುತ್ತಿವೆ ನಿಜ ಆದರೆ, ಬದುಕಿನ ಲವಲವಿಕೆಯ ಮೂಲಧಾತುಗಳು, ಜೀವಪರವಾದ ತುಡಿತಗಳು, ಸಕಲೆಂಟು ಜೀವರಾಶಿಗಳಿಗೆ ಒಳಿತನ್ನು ಬಯಸುವ ಭಾವನೆಗಳು  ಅದರ ಮಣ್ಣಿನಡಿ ಹೂತು ಹೋಗಿವೆ. ಇವುಗಳನ್ನು ನೋಡಲು ಹೊರಗಣ್ಣು ಸಾಲದು; ನಮ್ಮ ಒಳಗಣ್ಣನ್ನು ತೆರೆಯಬೇಕು. ಕಾರಣಕ್ಕಾಗಿ ನಮ್ಮ ದಾರ್ಶನಿಕ ಕವಿ ಕುವೆಂಪು ಅವರು  ನಿರಂತರ ಆರು ದಶಕಗಳ ಕಾಲ ಮೈಸೂರಿನಲ್ಲಿ ನೆಲೆ ನಿಂತರೂ ಸಹ ಪ್ರತಿ ಕ್ಷಣ ತಾನು ಹುಟ್ಟಿ ಬೆಳೆದ ಮಲೆನಾಡನ್ನು ಧ್ಯಾನಿಸಿದರು.
                            ಹೋಗುವೆ ನಾ  ಹೋಗುವೆ ನಾ ನನ್ನ ಒಲುಮೆಯ ಗೂಡಿಗೆ
                       ಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನರೂಢಿಗೆ
                       ಬೇಸರಾಗಿದೆ ಬಯಲು, ಹೋಗುವೆ ಕಣಿವೆಯ ಕಾಡಿಗೆ ;
                       ಹಸಿವು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕೂಡಿಗೆ
                                                                                   ಎಂದು ಹಗಲಿರುಳು ಹಂಬಲಿಸಿದ್ದರು.
ಇಂತಹದ್ದೇ ಉತ್ಕಟ ಭಾವಗಳು ಗೆಳೆಯ ಕೇಶವರೆಡ್ಡಿ ಹಂದ್ರಾಳರ ಇಲ್ಲಿನ ಪ್ರತಿ ಲೇಖನದ ಪ್ರತಿ ಅಕ್ಷರಗಳಲ್ಲಿ ಎದ್ದು ಕಾಣುತ್ತವೆಸರ್ಕಾರದ ಓರ್ವ ಹಿರಿಯ ಅಧಿಕಾರಿಯಾಗಿ ಕಳೆದ ಎರಡು ವರ್ಷಗಳಿಂದ ಶಿರಸಿಯ ಮಳೆ ಮತ್ತು ಹಸಿರು ಹಾಗೂ ನಿಸರ್ಗದ ವೈಭವದ ನಡುವೆ ಬದುಕುತ್ತಿರುವ ಹಂದ್ರಾಳ, ಶಿರಸಿಯ ಮಳೆಯ ಅನುಭವದ ಜೊತೆ ತಮ್ಮ ಬಯಲುಸೀಮೆಯ ವಿಶೇಷವಾಗಿ ತುಮಕೂರು ಜಿಲ್ಲೆಯ ಆಂಧ್ರಗಡಿಭಾಗದ ಮಧುಗಿರಿ ತಾಲ್ಲೂಕಿನ ತಮ್ಮ ಹಳ್ಳಿಯ ಮಳೆಯ ಅಭಾವದ ದಿನಗಳನ್ನೂ ನೆನೆಯುತ್ತಾರೆ. ಬೇಸಿಗೆ ಬವಣೆಯ  ದಿನಗಳು, ಕುಡಿಯಲು ನೀರಿಲ್ಲದೆ ಪರಿತಪಿಸುವ ದನಕರುಗಳು, ಬತ್ತಿ ಹೋದ ಕೆರೆಕುಂಟೆಗಳು, ಮಳೆಗಾಗಿ ಮಳೆರಾಯನನ್ನು ಪೂಜಿಸಿ ಪ್ರಾಥಿಸುವ ರೈತಾಪಿ ಜನರು  ಹೀಗೆ ಎಲ್ಲರೂ ಅವರ ಸ್ಮತಿ ಪಟಲದ ಮೇಲೆ ಹಾದು ಹೋಗುತ್ತಾರೆ.
ಹಂದ್ರಾಳರ ಮರೆತ ಭಾರತಕೃತಿಯಲ್ಲಿ ಈವರೆಗೆ ಭಾರತದ ಅಕ್ಷರ ಜಗತ್ತಿನಲ್ಲಿ ದಾಖಲಾಗದೆ ಉಳಿದ  ಹಾಗೂ ಆಧುನಿಕ ಜಗತ್ತಿನ ನಾಗರೀಕ ಸಂಸ್ಕøತಿಗೆ  ಅಸ್ಪøಶ್ಯರಂತೆ ಕಾಣುವ ಅನಕ್ಷರಸ್ಥ ಸಮುದಾಯದ ಪ್ರತಿನಿಧಿಗಳು ಹಂದ್ರಾಳರ ನೆನಪುಗಳಲ್ಲಿ ನಾಯಕರಾಗಿ ವಿಜೃಂಭಿಸಿದ್ದಾರೆ. ಹಳ್ಳಿ ಹಳ್ಳಿಗಳನ್ನು ಅಲೆಯುವ ಬಳೆಗಾರ, ನೀರಗಂಟಿ, ಕುರಿಕಾಯುವವ, ಆಲೆಮನೆಯ ಕೂಲಿಯಾಳು, ಸೂಲಗಿತ್ತಿ, ಕೃಷಿಕೂಲಿ ಕಾರ್ಮಿಕರಾದ ದಲಿತ ಹೆಣ್ಣು ಮಕ್ಕಳು, ಅವರ ಬೇಸಾಯದ ನಾಟಿ ಪದಗಳು, ಸೋಬಾನೆ ಪದಗಳು ಎಲ್ಲರೂ, ಎಲ್ಲವೂ ಇಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿವೆ ಮತ್ತು ಪಡೆದುಕೊಂಡಿದ್ದಾರೆ,
ಅಂಬೇಡ್ಕರ್ ಅವರು ಗ್ರಾಮೀಣ ಜಗತ್ತನ್ನು ಜಾತಿ ಮತ್ತು ಶ್ರೇಣಿಕೃತ ಸಮಾಜಗಳ ಕೊಂಪೆ ಎಂದು ಜರಿದಿದ್ದರು. ಅವರದು ಪಾರಂಪರಿಕವಾಗಿ ಗ್ರಾಮೀಣ ಜಗತ್ತಿನಲ್ಲಿ ಬೇರೂರಿದ್ದ ಅಸಮಾನತೆಯ ಜಗತ್ತನ್ನು ಅನುಭವಿಸಿದ ಮತ್ತು  ನೋಡಿದ ನೊಂದ ಮನಸ್ಸಿನ ತೀರ್ಮಾನವಾಗಿತ್ತು. ಆದರೆ ಇದಕ್ಕೆ ಭಿನ್ನವಾದ ಪರಿಕಲ್ಪನೆ ಹೊಂದಿದ್ದ ಮಹಾತ್ಮ ಗಾಂಧೀಜಿಯವರು ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂದಿದ್ದರು. ಇಬ್ಬರ ಅಭಿಪ್ರಾಯಗಳು ವ್ಯಕ್ತಗೊಂಡು ಹಲವಾರು ದಶಕಗಳು ಕಳೆದು ಹೋಗಿವೆ, ವರ್ತಮಾನದ ಜಗತ್ತಿನಲ್ಲಿ ನಿಂತು ಇಬ್ಬರ ಅಭಿಪ್ರಾಯಗಳನ್ನು ವಿಶ್ಲೇಷಿಸಿದಾಗ ನಾಯಕರ ದೃಷ್ಟಿಕೋನಗಳಲ್ಲಿ ದೋಷವಿದೆ ಎನಿಸುತ್ತೆ. ಏಕೆಂದರೆ, ಅಂಬೇಡ್ಕರ್ ಭಾವಿಸಿದಂತೆ ಭಾರತದ ಹಳ್ಳಿಗಳು ಶೋಷಿತ ಸಮುದಾಯಗಳಾಗಿರಲಿಲ್ಲ; ಅದೇ ರೀತಿ ಗಾಂಧೀಜಿ ಪರಿಭಾವಿಸಿದಂತೆ ಹಳ್ಳಿಗಳು ಪರಿಪೂರ್ಣವಾಗಿರಲಿಲ್ಲಗ್ರಾಮ ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಜಾತಿಯತೆ ಮತ್ತು ಕುಲ ಕಸುಬುಗಳ ನಡುವೆಯೂ ಸಹ  ಎಲ್ಲಾ ಜಾತಿಗಳ ನಡುವೆ ಪರಸ್ಪರ ತಿಳುವಳಿಕೆಯಿತ್ತು. ವೃತ್ತಿಯನ್ನು ಗೌರವಿಸುವ ಹೃದಯ ಶ್ರೀಮಂತಿಕೆ ಅಂದಿನ ಸಮುದಾಯಕ್ಕೆ  ಇತ್ತು. ನನ್ನ ಬಾಲ್ಯದ ದಿನಗಳಲ್ಲಿ ನಮ್ಮ ಹಳ್ಳಿಗಳಲ್ಲಿ ಹಬ್ಬ ಅಥವಾ ಜಾತ್ರೆಯ ಸಂದರ್ಭಗಳಲ್ಲಿ ಪ್ರದರ್ಶನವಾಗುತ್ತಿದ್ದ ಪೌರಾಣಿಕ ನಾಟಕಗಳಲ್ಲಿ ದಲಿತ, ವರ್ಣಿಯ, ಬಣಜಿಗ, ಮುಸಲ್ಮಾನ ಎಂಬ ಬೇಧ ಭಾವವಿಲ್ಲದೆ ಎಲ್ಲರೂ ಅಭಿನಯಿಸುತ್ತಿದ್ದರು. ಊರೊಳಗಿನ ಚಾವಡಿ ಅಥವಾ ದೇವಸ್ಥಾನದ ಅಂಗಳಗಳು ಎಲ್ಲರ ಕಲಾ ಪ್ರದರ್ಶನಕ್ಕೆ ವೇದಿಕೆಯಾಗಿ ಪರಸ್ಪರ ಮನಸ್ಸುಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದ್ದವುಜಾತಿಯೆಂಬ ಕೆಟ್ಟ ವ್ಯವಸ್ಥೆ ಜಾರಿಯಲ್ಲಿದ್ದರೂ ಕೂಡ ಜಾತಿಗಳ ಜೊತೆ ಅಂಟಿಕೊಂಡಿದ್ದ ಕುಲಕಸುಬುಗಳು ಅವರನ್ನು ಕಿತ್ತಾಡದಂತೆ ಬೆಸದಿದ್ದವು. ಮೊದಲ ಮುಂಗಾರು ಮಳೆ ಬಿದ್ದೊಡನೆ ರೈತನ ಪಾಲಿಗೆ ಊರಿನಲ್ಲಿರುವ ಬಡಗಿ ಅಥವಾ ಆಚಾರಿ ದೇವರಾಗುತ್ತಿದ್ದ. ಆತನ ನೆರವಿಲ್ಲದೆ ರೈತನ ಬೇಸಾಯದ ಸಲಕರಣೆಗಳು ಸಿದ್ದಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಅದೇ ರೀತಿಯಲ್ಲಿ ರಾಗಿ ಅಥವಾ ಬತ್ತದ ನಾಟಿಯ ವೇಳೆಯಲ್ಲಿ ದಲಿತ ಕೃಷಿ ಕೂಲಿಕಾರ್ಮಿಕರಾದ ಹೆಣ್ಣು ಮಕ್ಕಳು ತಾಯಿ, ತಂಗಿಯರಾಗುತ್ತಿದ್ದರು. ಹೆಚ್ಚಾಗಿ ಹಣದ ವಿನಿಮಯವಿಲ್ಲದ ಕಾಲದಲ್ಲಿ ರೈತನ ಬದುಕು ಮತ್ತು ಅವನು ಬೆಳೆದ ದವಸ ಧಾನ್ಯಗಳ ಜೊತೆ ಪ್ರತಿ ಹಳ್ಳಿಯ ಆಚಾರಿ, ಕ್ಷೌರಿಕ, ಅಗಸ, ಶ್ರಾವಣ ದಿನಗಳಲ್ಲಿ ಮನೆಗೆ ಬರುವ ದಾಸಯ್ಯ, ಎತ್ತುಗಳಿಗೆ ಲಾಳ ಹಾಕುವ ಮುಸಲ್ಮಾನ, ಊರಾಚೆಗಿನ ಅಥವಾ ಒಳಗಿನ ದೇವಸ್ಥಾನದಲ್ಲಿ ಶ್ರದ್ದೆಯಿಂದ ಪೂಜೆ ಸಲ್ಲಿಸುತ್ತಿದ್ದ ಪೂಜಾರಿ ಹೀಗೆ ಎಲ್ಲರ ಬದುಕು ತಳಕು ಹಾಕಿಕೊಂಡಿರುತ್ತಿತ್ತು. ಕಾರಣಕ್ಕಾಗಿ ನಮ್ಮ ಹಿರಿಯರಿಗೆ ರೈತನನ್ನುಅನ್ನದಾತಎಂದು ಕರೆಯುವ ಹೃದಯ ವೈಶಾಲ್ಯತೆಯಿತ್ತು.




ನಾವು ಚರಿತ್ರೆಯನ್ನು  ಮುರಿದು ಕಟ್ಟದೆ ಅಥವಾ  ಅದರ ಸಿದ್ದ ಮಾದರಿಗಳನ್ನು ಮರು ವಿಮರ್ಶೆಗೆ ಒಳಪಡಿಸಿ ಬದಲಾಯಿಸದೆ ಉಳಿಸಿಕೊಂಡರೆ ಗ್ರಾಮೀಣ ಭಾರತದ ಬಗೆಗಿನ ಅಭಿಪ್ರಾಯಗಳು ಬದಲಾಗಲು ಸಾಧ್ಯವಿಲ್ಲ. ಗ್ರಾಮೀಣ ಜಗತ್ತಿನ ಸಿದ್ಧಮಾದರಿಯ ಅಪಕ್ವ ನಂಬಿಕೆಗಳನ್ನು ಪಲ್ಲಟಗೊಳಿಸಬಲ್ಲ ತಾಕತ್ತು ಕೇಶವ ರೆಡ್ಡಿ ಹಂದ್ರಾಳರ ಕೃತಿಯಲ್ಲಿದೆ ಎಂಬುದು ನನ್ನ ಬಲವಾದ ನಂಬಿಕೆ. ಬಡವರ ಬಾದಾಮಿ ಎನ್ನುವ ಕಡ್ಲೆಕಾಯಿ ಅಥವಾ ಶೇಂಗಾ ಬೀಜವನ್ನು ಅವರುಗಾಂಧಿ ಬೀಜಎಂದು ಕೃತಿಯ ಒಂದು ಲೇಕನದಲ್ಲಿ ಕರೆದಿರುವುದು, ಅವರ ಆಳವಾದ ನೋಟಕ್ಕೆ ಸಾಕ್ಷಿಯಾಗಿದೆ. ಬಡತನ ಮತ್ತು ಹಸಿವು ಇವುಗಳ ಅನುಭವವಿಲ್ಲದವರಿಗೆ ಶೇಂಗಾ ಬೀಜದ ಮಹತ್ವ ಅರ್ಥವಾಗುವುದಿಲ್ಲ. ಒಂದು ಬೊಗಸೆ ಕಡ್ಲೆಕಾಯಿ ಮತ್ತು ಕೆರೆ, ಕುಮಟೆ, ಕಾಲುವೆಗಳಲ್ಲಿ ಸಿಗುತ್ತಿದ್ದ  ಎರಡು ಬೊಗಸೆ ನೀರು  ಇವುಗಳು ಶತಮಾನಗಳ ಕಾಲ ಭಾರತದ ಬಡವರನ್ನು ಹಸಿವಿನ ಹೆಬ್ಬುಲಿಯಿಂದ ಕಾಪಾಡಿವೆ. ಹಸಿವು, ಬಡತನ ಮತ್ತು ಅಪಮಾನಗಳ ಅಗ್ನಿಕುಂಡವನ್ನು ಹಾಯ್ದವರಿಗೆ ಮಾತ್ರ ಅರ್ಥವಾಗುವ ಸಂಗತಿಗಳಿವು

ಹಾಗಾಗಿ ನಾನು ಹಂದ್ರಾಳರಮರೆತ ಭಾರತಕೃತಿಯನ್ನು ಘಾಸಿಗೊಂಡವರ ಕಥನ ಎಂದು ಕರೆದಿದ್ದೇನೆ. ಕೇಶವರೆಡ್ಡಿ ಹಂದ್ರಾಳರ ಬರಹಗಳಲ್ಲಿ ವಿಶೇಷವಾಗಿ ಅವರ ಕಥೆಗಳಲ್ಲಿ  ಜೀವಪರವಾದ ಧ್ವನಿಯೊಂದು ಗುಪ್ತನದಿಯಂತೆ ನಿರಂತರ ಹರಿಯುತ್ತಿರುವುದರ ಹಿಂದೆ  ಅವರ ಬಾಲ್ಯದ ದಟ್ಟ ನೆನಪುಗಳು ಸಹ  ಪ್ರಮುಖ ಕಾರಣವಾಗಿವೆ. ಎಂಬುದು ನನ್ನ ನಂಬಿಕೆ ಮಾನವೀಯತೆಯ ನಿಲುವು ಅವರ ಎದೆಯೊಳಗೆ ಹೀಗೆ ಶಾಶ್ವತವಾಗಿರಲಿ ಎಂಬುದು ನನ್ನ ಮನದಾಳದ ಆಸೆ ಮತ್ತು ಹಾರೈಕೆ.


ಶುಕ್ರವಾರ, ಸೆಪ್ಟೆಂಬರ್ 12, 2014

ಮನಸ್ಸಿಗೆ ತಾಕಿದ ಮೂರು ಕೃತಿಗಳು



ಕಳೆದ ನಾಲ್ಕು ವರ್ಷಗಳಿಂದ ಭಾರತದ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪಲ್ಲಟಗಳನ್ನು ಕುರಿತಂತೆ ಆಸಕ್ತಿ ತಾಳಿದ ನಾನು, ಕನ್ನಡದ ಕೃತಿಗಳನ್ನು ಓದಿದ್ದು ತೀರಾ ಕಡಿಮೆ. ಆದರೆ, ಕಳೆದ  ಎರಡು ತಿಂಗಳಿಂದ ಇಂಗ್ಲೀಷ್ ಭಾಷೆಯ ಸಂಶೋಧನೆಯ ಆಕರ ಕೃತಿಗಳನ್ನು ಬದಿಗಿಟ್ಟು, ಕನ್ನಡದ ಕೃತಿಗಳನ್ನು ಓದಲು ಕೈಗೆತ್ತಿಕೊಂಡಿದ್ದೀನಿ. ಶ್ರೀನಿವಾಸ ವೈದ್ಯರ ಕೃತಿಗಳನ್ನು ಮತ್ತು ಅನಂತಮೂರ್ತಿಯವರ ಆತ್ಮ ಕಥನ, (ಸುರಗಿ) ಮತ್ತು ನಟರಾಜ್ ಹುಳಿಯಾರ್ ಅವರ “ಇಂತಿ ನಮಸ್ಕಾರಗಳು” ಹಾಗೂ ಕಲಾವಿದ, ಶ್ರೇಷ್ಠ ಅನುವಾದಕ ರಾಗಿ ಹೊರ ಹೊಮ್ಮಿರುವ ಗೆಳೆಯ ಸೃಜನ್ ಇತ್ತೀಚೆಗೆ ಅನುವಾದಿಸಿರುವ ರಾಮ್ ಗೋಪಾಲ್ ವರ್ಮ ಕುರಿತ ಎರಡು ಕೃತಿಗಳು,( ನನ್ನಿಷ್ಟ ಮತ್ತು ವೋಡ್ಕಾ ವಿತ್ ವರ್ಮಾ) ಮೈಸೂರಿನ ಹರಿಪ್ರಸಾದ್ ಅವರ ಪ್ರಬಂಧ ಸಂಕಲನ,(ರಾಮಾಂದ್ರ) ಅಲ್ಲಾಗಿರಿರಾಜ ಅವರ “ನೂರುಂದು ಗಜಲ್” ಸಂಕಲನ ಮತ್ತು ಡಾ. ಬಸು ಬೇವಿನಗಿಡದ ಅವರು ಬೇಂದ್ರೆ ಕಾವ್ಯದಲ್ಲಿ ಪ್ರಕೃತಿ ಕುರಿತು ರಚಿಸಿದ ಸಂಶೋಧನಾ ಪ್ರಬಂಧ ಇವುಗಳನ್ನು ಓದಿ ಮುಗಿಸಿದೆ. ನನ್ನೊಳಗಿನ ಖಾಲಿತನವೆಲ್ಲಾ  ಭರ್ತಿಯಾದಂತೆ ಅನಿಸಿ, ಮನಸ್ಸು ನಿರಾಳವಾಯಿತು.
ಕಳೆದ ಒಂದು ತಿಂಗಳ ಅವಧಿಯಲ್ಲಿ ಓದಿದ ಡಾ.ಎಲ್.ಸಿ. ಸುಮಿತ್ರ ಅವರ  “ಓದಿನ ಸುಖ”, ಪತ್ರಕರ್ತ ಚಕ್ರವರ್ತಿ ಚಂದ್ರಚೂಡರ “ಖಾಲಿಶಿಲುಬೆ” ಎಂಬ ಕವಿತಾ ಸಂಕಲನ ಮತ್ತು ಯುವ ಕವಿ ಗಿರೀಶ್ ಹಂದಲಗೆರೆ ಯವರ “ನೇಗಿಲ ಗೆರೆ” ಕವನ ಸಂಕಲ ಇವುಗಳು ನನ್ನ ಗಮನ ಸೆಳೆದ ಕೃತಿಗಳು.
ಈಗಾಗಲ ಕನ್ನಡ ಸಾಹಿತ್ಯ ಲೋಕದಲ್ಲಿ ಕಥೆಗಾರ್ತಿಯಾಗಿ, ( ಗುಬ್ಬಿ ಹಳ್ಳದ ಸಾಕ್ಷಿ) ಕವಿಯತ್ರಿಯಾಗಿ, ವಿಮರ್ಶಕಿ ಹಾಗೂ ಶ್ರೇಷ್ಠ ಅನುವಾದಕರಲ್ಲಿ( ಅಮೃತಾ ಪ್ರೀತಂ ಅವರ ಪಿಂಜಾರ್) ಒಬ್ಬರಾಗಿ ಪ್ರಸಿದ್ಧಿ ಪಡೆದಿರುವ ಕನ್ನಡದ ಪ್ರಾಧ್ಯಾಪಕರಾದ ಡಾ.ಎಲ್ ಸಿ. ಸುಮಿತ್ರ ಅವರು ಇತ್ತೀಚೆಗೆ ಹೊರತಂದಿರುವ ಓದಿನ ಸುಖ ಕೃತಿ  ಮನಕ್ಕೆ ತಾಕುವಂತಿದೆ. ಯಾವುದೇ ಪೂರ್ವಾಗ್ರಹಗಳಿಲ್ಲದೆ, ಮುಕ್ತ ಮತ್ತು ಪ್ರಾಂಜ್ವಲ ಮನಸ್ಸಿನಿಂದ ಅವರು ಈ ಕೃತಿಯಲ್ಲಿ ವಿಮರ್ಶೆ ಮಾಡಿರುವ ಕನ್ನಡ ಮತ್ತು ಭಾರತೀಯ ಭಾಷೆಗಳ ಇತರೆ ಲೇಖಕ ಮತ್ತು ಲೇಖಕಿಯರ ಕೃತಿಗಳ ಕುರಿತ ವಾಖ್ಯಾನ ನಿಜಕ್ಕೂ ಮೆಚ್ಚುವಂತಹದ್ದು.  ಭಾರತದ ಬಹುತೇಕ ಭಾಷೆಯ ಲೇಖಕಿಯರ ಕೃತಿಗಳನ್ನು ಆಳವಾಗಿ ಮತ್ತು ಶ್ರದ್ಧೆಯಿಂದ ಅಧ್ಯಯನ ಮಾಡಿರುವ ಸುಮಿತ್ರ ಅವರು, ಮಲೆಯಾಳಂ ನ ಕಮಲಾದಾಸ್, ಪಂಜಾಬಿ ಭಾಷೆಯ ಅಮೃತಾ ಪ್ರೀತಂ, ಅಸ್ಸಾಮಿ ಭಾಷೆಯ ಇಂದಿರಾ ಗೋಸ್ವಾಮಿ,ಯವರ ವ್ಯಕ್ತಿತ್ವ ಮತ್ತು ಕೃತಿಗಳ ಕುರಿತು ವಿದ್ವತ್ ಪೂರ್ಣವಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಜೊತೆಗೆ ಕನ್ನಡದ ಮಹಿಳಾ ಕಾವ್ಯ ಕುರಿತ ಲೇಖನ, ಕೊಡಗಿ ಗೌರಮ್ಮನ ವರ ಕಥೆಗಳು, ಕುವೆಂಪು ಕಾವ್ಯ ಒಳಗೊಂಡಂತೆ ವೈದೆಹಿ, ವೀಣಾ ಶಾಂತೇಶ್ವರ ಮತ್ತು ನಾಗವೇಣಿಯವರ ಕೃತಿಗಳ ಕುರಿತು ತಮ್ಮ ಆಳವಾದ ಒಳನೋಟಗಳನ್ನು ಓದುಗರ ಮುಂದಿರಿಸಿದ್ದಾರೆ.
ಕನ್ನಡದ ವಿಮರ್ಶೆಯ ಲೋಕದಲ್ಲಿ ಭಟ್ಟಂಗಿತನ, ಎಡಬಿಡಂಗಿತನ ಮತ್ತು ದ್ವೇಷ, ಅಸೂಯೆ ಇವುಗಳು ಹೊಸತೇನಲ್ಲ. ಆದರೆ, ಲಂಕೇಶರ ನಿಷ್ಟುರತನದ ಜೊತೆಗೆ ಜಿ.ಹೆಚ್. ನಾಯಕರ  ಸಹೃದಯತೆಯ ವಿಮರ್ಶೆಯ ಗುಣ, ಇವುಗಳನ್ನು ಮೈಗೂಡಿಸಿಕೊಂಡಿರುವ ಡಾ.ಎಲ್. ಸಿ. ಸುಮಿತ್ರಾ ಅವರು, ಭಾರತದ ಬಹುತೇಕ ಎಲ್ಲಾ ಭಾಷೆಗಳ ಕೃತಿಗಳನ್ನು ಗಂಭೀರವಾಗಿ ಓದಿಕೊಂಡಿದ್ದು, ತಾವು ಇಷ್ಟ ಪಟ್ಟ ಕೃತಿಗಳನ್ನು ವಿಮರ್ಶೆಯ ಮಾನದಂಡದಿಂದ ಹೊರಗಿಟ್ಟು, ಅವುಗಳ ಕುರಿತ ತಮ್ಮ ಅನಿಸಿಕೆಯನ್ನು ಓದುವ ಸುಖ ಕೃತಿಯಲ್ಲಿ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಈ ತಲೆಮಾರಿನ ಲೇಖಕಿಯರು ಮತ್ತು ಲೇಖಕರು ಓದಲೇ ಬೇಕಾದ ಕೃತಿಗಳಲ್ಲಿ ಇದೂ ಒಂದು.


ಎರಡನೆಯದಾಗಿ, ಕವಿತೆಗಳಿಂದ ದೂರ ಉಳಿದು ಹಲವು ವರ್ಷಗಳೇ ಕಳೆದು ಹೋಗಿದ್ದ ನನ್ನ ಪಾಲಿಗೆ ಚಕ್ರವರ್ತಿ ಚಂದ್ರಚೂಡರ “ಖಾಲಿಶಿಲುಬೆ” ಕೃತಿ ಇತ್ತೀಚೆಗಿನ ದಿನಗಳಲ್ಲಿ ತೀವ್ರವಾಗಿ ಕಾಡಿದ ಕೃತಿಗಳಲ್ಲಿ ಒಂದು. ಕಾವ್ಯಕ್ಕೆ ಇರಬೇಕಾದ ಧ್ಯಾನಸ್ಥ ಮನಸ್ಸುಗಳು ಇಲ್ಲದಿರುವ ಈ ದಿನಗಳಲ್ಲಿ  ತನ್ನೊಡಲ ನೋವು, ಅಸಹಾಯಕತೆ, ನಿಟ್ಟುಸಿರು  ಮತ್ತು ಕಣ್ಣೀರಿಗೆ  ಅಕ್ಷರ ರೂಪ ಕೊಟ್ಟಿರುವ ಚಂದ್ರಚೂಡರ ಈ ಕೃತಿ ಅವರ ಮೊದಲ ಕವಿತಾ ಸಂಕಲನ ಎಂದು ನಂಬಲು ಸಾಧ್ಯವಾಗದಷ್ಟು ಪ್ರಭುದ್ಧತೆ ಮತ್ತು ಮಾಗಿದ ಮನಸ್ಸಿನಿಂದ ರಚಿತವಾದಂತಿದೆ. ವೈಯಕ್ತಿಕ ನೋವು ನಿರಾಸೆಗಳು ಕಾವ್ಯದ ನೆಪದಲ್ಲಿ ಘೋಷಣೆ, ಸಿಟ್ಟು ಅಥವಾ ಬೈಗುಳಗಳಾಗುತ್ತಿರುವ ಈ ದಿನಗಳಲ್ಲಿ ಅವರ ಈ ಒಂದು ಪದ್ಯ ಮಾಗಿದ  ಅವರ ಮನಸ್ಸಿಗೆ ಸಾಕ್ಷಿಯಂತಿದೆ.
                                           ಅನಂತದಲಿ ಹಕ್ಕಿಯಾಗಿ
                                           ಹಾರುತ್ತಿದ್ದ ಅವಳ
                                           ರೆಕ್ಕೆಗಳು ನಾನೇ; ನಂಬಿಕೊಂಡಿದ್ದೆ.
                                           ಕೆಳಗೆ ನೆಲಬಗೆದು ಬಿದ್ದು
                                           ಸತ್ತ ಹಕ್ಕಿಗೆ
                                          ನನ್ನ ಹೆಸರಿಟ್ಟು
                                           ಜನ ಸುಟ್ಟು ತಿಂದರು.
ಬದುಕಿನ ಚದುರಂಗದಾಟದಲ್ಲಿ ದಾಳವಾಗಿ, ಪರಿಸ್ಥಿತಿಯ ಪಾಪದ ಕೂಸಾಗಿ,  ಎಲ್ಲಾ ವಿಧವಾದ ದಟ್ಟ ವಿಷಾಧಗಳನ್ನು, ಕ್ರೌರ್ಯದ ಮುಖವನ್ನು ಮತ್ತು ಅಪಮಾನದ ಭಾವಗಳನ್ನು ತಮ್ಮ ಕಾವ್ಯದ ಮೂಲ ಸ್ಥಾಯಿ ಭಾವವನ್ನಾಗಿ ಮಾಡಿಕೊಂಡು, ಕರುಳುನ್ನು ಹೊರಗೆ ಕಿತ್ತಿಟ್ಟು ಬಣ್ಣಿಸಿದಂತೆ ಕವಿತೆಗಳನ್ನು ಬರೆದಿರುವ ಚಂದ್ರಚೂಡ್, ಎಲ್ಲಿಯೂ ಕಾವ್ಯಸಕ್ತರ ಅನುಕಂಪ ಬಯಸದೆ, ನಿರ್ಲಿಪ್ತ ಕವಿಯಂತೆ ನಮ್ಮೆದುರು ನಿಲ್ಲುತ್ತಾರೆ. ಸೊಗಸಾದ ವಿನ್ಯಾಸ, ಮುದ್ರಣಗಳಿಂದ ಮನಸೆಳೆಯುವ ಈ ಕೃತಿಯಲ್ಲಿ ಪದೇ ಪದೇ ಓದಬೇಕೆನಿಸುವಂತಹ ಅನೇಕ ಕವಿತೆಗಳಿವೆ. ಬದುಕಿನ ಕಟು ವಾಸ್ತವಗಳಿಗೆ ಸಿದ್ಧ ಮನಸ್ಸಿನಿಂದ ಎದುರಾಗುವ ಇವರು ಬರೆದಿರುವ
                                                ನಾನೊಂದು
                                                ಗೋರಿ ಎದುರು
                                                ಕುಳಿತಿದ್ದೇನೆ.
                                                ನನಗೆ ಗೊತ್ತಿದೆ
                                              ಇದು ನನ್ನದೆ ಗೋರಿ
                                             ಮತ್ತೂ ಗೊತ್ತಿದೆ;
                                             ಒಳಗೆ ನಾನಿಲ್ಲವೆಂದು.
ಹೀಗೆ ಬ್ರೆಕ್ಟ್ ಮತ್ತು ಬೋದಿಲೇರ್ ಅವರನ್ನು ಒಟ್ಟಿಗೆ ಆವಾಹಿಸಿಕೊಂಡವರಂತೆ ಕವಿತೆ ಬರೆದಿರುವ ಚಂದ್ರಚೂಡ್,  ತಮ್ಮ ಕೊನೆಯ ಪುಟ್ಟ ಕವಿತೆಯೊಂದರಲ್ಲಿ
                                             ಯಾವ ವಿಮರ್ಶಕನ
                                             ಪುತ್ಥಳಿಯನ್ನು
                                             ಯಾವೂರಿನ ಸರ್ಕಲ್ ನಲ್ಲೂ
                                             ಇಡುವುದಿಲ್ಲ
ಎಂಬ ಸಂದೇಶದ ಮೂಲಕ ತಮ್ಮ ತಮ್ಮ ಮೂಗಿನ ನೇರಕ್ಕೆ  ಕಂಡವರ ಬದುಕನ್ನು ವಿಮರ್ಶಿಸುವ ಜನರಿಗೆ ತಣ್ಣನೆಯ ಚಾಟಿ ಏಟನ್ನೂ ಸಹ ಬೀಸಿದ್ದಾರೆ.

ಇನ್ನೂ ಯುವ ಕವಿ ಗಿರೀಶ್ ಹಂದಲಗೆರೆ  ಈ ಚಿಕ್ಕ ವಯಸ್ಸಿನಲ್ಲಿ ತಮ್ಮ ಕವಿತೆಗಳಿಗೆ ಅನುಭಾವವನ್ನು ಎರಕ ಹೊಯ್ದು ರಚಿಸಿರುವ ವೈಖರಿ ನನಗೆ  ನಿಜಕ್ಕೂ ಖುಷಿ ಕೊಟ್ಟಿತು. ನಾನು ಗಿರೀಶ್ ಒಂದೇ ನೆಲದ ಸಂಸ್ಕೃತಿಯಿಂದ ಬಂದವರು. ಬೇಸಾಯದ ಕುಟುಂಬದ ನೋವು, ನಲಿವುಗಳನ್ನು,  ದನಗಳ ಕೊಟ್ಟಿಗೆಯ ಗಂಜಲ ಮತ್ತು ಸಗಣಿ ವಾಸನೆಯನ್ನು ಹುಟ್ಟಿನಿಂದ ಉಸಿರಾಡಿಕೊಂಡು ಬಂದಂತಹವರು. ನಮ್ಮಿಬ್ಬರ ಊರುಗಳನ್ನು ಬೇರ್ಪಡಿಸಿರುವುದು ಶಿಂಷಾ ನದಿ ಮಾತ್ರ. ನಾನು ಮಂಡ್ಯ ಜಿಲ್ಲೆಯ ಗಡಿಭಾಗದ ಹಳ್ಳಿಯವನಾದರೆ, ಗಿರೀಶ್, ಶಿಂಷಾ ನದಿಯ ಆಚೆಗಿನ  ತುಮಕೂರು ಜಿಲ್ಲೆಯ ಗಡಿಭಾಗದ ಹಳ್ಳಿಯವರು. ಇಬ್ಬರೂ ಪಾರಂಪರಿಕವಾಗಿ ಘಾಸಿಗೊಂಡ ರೈತ ಸಮುದಾಯದ ಕುಟುಂಬದಿಂದ ಬಂದವರು. ನನ್ನ ತಲೆ ಮಾರಿನ ವಾರಸುದಾರರಂತೆ ಗಿರೀಶ್ ನನಗೆ ಕಾಣುತ್ತಾರೆ. ಏಕೆಂದರೆ, ಅತ್ತ ಹಳ್ಳಿಯ ಬೇರುಗಳನ್ನು ಕತ್ತರಿಸಿಕೊಳ್ಳಲಾರದೆ, ಇತ್ತ ನಗರ ಸಂಸ್ಕೃತಿಯೊಳಗೆ ಬೇರು ಬಿಡಲಾರದೆ, ತೊರೆದು ಬಂದ ಊರು ಕೇರಿಯ ಸ್ಮೃತಿಗಳಲ್ಲಿ ಬದುಕುತ್ತಾ ಅನಾಥ ಪ್ರಜ್ಞೆಯಲ್ಲಿ  ನಾವೆಲ್ಲಾ ನರಳಿದವರು. ಅವರ ಸಂಕಲನಕ್ಕೆ  “ನೇಗಿಲ ಗೆರೆ”ಎಂಬ ಶಿರ್ಷಿಕೆ ಇಟ್ಟಿದ್ದಾರೆ. ಇಡೀ ಕೃತಿಯಲ್ಲಿ ಅಪ್ಪ, ಅವ್ವ, ನೇಗಿಲು, ಮೇಟಿ, ಒಡ್ಡು, ಜೀವಜಲ, ನೇಗಿಲ ಪದ, ರೈತರಋಣ,  ಹಸಿರು ಮನುಷ್ಯ ಇಂತಹ ಹೆಸರಿನ  ಜೀವ ಪರ ನಿಲುವಿನ ಅನೇಕ ಕವಿತೆಗಳು ಕಾಣಿಸಿಕೊಂಡಿವೆ. ಸೂಫಿ ಕಾವ್ಯವನ್ನು ಮತ್ತು ಝೆನ್ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿರುವ ಗಿರೀಶ್, ಎಲ್ಲಿಯೂ ತಮ್ಮ ಕವಿತೆಗಳಲ್ಲಿ ಅಬ್ಬರಿಸುವುದಿಲ್ಲ. ಹೇಳಬೇಕಾದ ಕಹಿ ಸಂಗತಿಗಳನ್ನು ತಣ್ಣನೆಯ ಧ್ವನಿಯಲ್ಲಿ ಹೇಳಿರುವುದು ವಿಶೇಷ.
                                       ಮಣ್ಣಿನ ಘಮಲು ಮೆರವಣಿಗೆ ಹೊರಟಾಗ
                                       ಬೀಜ ಬಿರಿದು ಚಿಗುರುವಾಗ
                                       ಬೇರು ಇಳಿಯುವಾಗ
                                       ಕತ್ತಲೆ ಬೆಳಕು ಕಾಲ ಸರಿಯುವಾಗ
                                       ಕನಸು ನೆನಪುಗಳ ಮಲಕುವಾಗ
                                       ಕಣ್ಣುಗಳು ಬೆಸೆದು ಒಲವರಳುವಾಗ
                                      ಮಂಜು ಕರಗುವಾಗ
                                      ಸಂಬಂಧ ಮುರಿಯುವಾಗ
                                      ಸದ್ದೇ ಆಗುವುದಿಲ್ಲ !
                                      ಮೌನದ್ದೇ .. ಅಬ್ಬರ.
 ಇದು ಮೌನ ಕುರಿತಂತೆ  ಗಿರೀಶ್ ಹಂದಲಗೆರೆಯವರ ಭಾವನೆಯಷ್ಟೇ ಅಲ್ಲ, ಅವರ ಕಾವ್ಯ ಮತ್ತು ವ್ಯಕ್ತಿತ್ವದ ವಿಶೇಷ ಗುಣವೂ ಹೌದು ಎಂಬಂತೆ ನನಗೆ ತೋರಿದೆ.


ಬುಧವಾರ, ಸೆಪ್ಟೆಂಬರ್ 10, 2014

ಯೋಜನಾ ಆಯೋಗದ ಸ್ವರೂಪ ಮತ್ತು ಸವಾಲುಗಳು



ಭಾರತದ ಸರ್ವಾಂಗೀಣ ಅಭಿವೃದ್ದಿಯ ರೂಪು ರೇಷೆಗಳು ಮತ್ತು ಯೋಜನೆಗಳ ಗರ್ಭಗುಡಿ ಅಥವಾ ಚಿಂತಕರ ಚಾವಡಿ ಎಂದು ಕರೆಯಬಹುದಾದ ಯೋಜನಾ ಆಯೋಗದ ಕಾರ್ಯತಂತ್ರಗಳನ್ನು ಬದಲಿಸುವ ನಿಟ್ಟಿನಲ್ಲಿ ಅದಕ್ಕೆ ಹೊಸ ರೂಪ ಕೊಡಲು ಪ್ರಧಾನಿ ನರೇಂದ್ರ ಮೋದಿ ಸಿದ್ಧವಾಗುತ್ತಿದ್ದಾರೆ. ಯೋಜನಾ ಆಯೋಗದ ಕಾರ್ಯ ತಂತ್ರವನ್ನು ಬದಲಿಸುವ ಜೊತೆಗೆ ಇಡೀ ಆಯೋಗದ ಸಮಿತಿ ಸದಸ್ಯರ ನೇಮಕಾತಿ ನೀತಿಯ ಬದಲಾವಣೆ ಕುರಿತು ಕಾಂಗ್ರೇಸ್ ಪಕ್ಷವನ್ನೂ ಒಳಗೊಂಡಂತೆ ಹಲವು ರಾಜಕೀಯ ಪಕ್ಷಗಳು ಅಪಸ್ವರ ಎತ್ತಿವೆ.
ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಅಭಿವೃದ್ಧಿ ಕುರಿತ ನಮ್ಮ ಆಲೋಚನಾ ವಿಧಾನಗಳು ಸಹ ಬದಲಾಗಬೇಕಿದೆ ಆದ್ದರಿಂದ ನರೇಂದ್ರ ಮೋದಿಯವರ ಆಲೋಚನೆಯನ್ನು ನಾವು ರಾಜಕೀಯ ನೆಲೆಯಲ್ಲಿ ಚರ್ಚಿಸುವ ದೃಷ್ಟಿಕೋನವನ್ನು ಬದಿಗಿಟ್ಟು ಇಪ್ಪತ್ತೊಂದನೆಯ ಶತಮಾನದ ಅಗತ್ಯಕ್ಕೆ ಅನುಗುಣವಾಗಿ, ಜಾಗತಿಕ ಮಟ್ಟದ ಬದಲಾವಣೆಗಳನ್ನು ಗಮನದಲ್ಲಿರಿಸಿಕೊಂಡು, ಯೋಜನಾ ಆಯೋಗದ ಕಾರ್ಯತಂತ್ರ ಮತ್ತು ಸ್ವರೂಪ ಇವುಗಳ ಬದಲಾವಣೆ ಕುರಿತು ಮುಕ್ತ ಮನಸ್ಸಿನಿಂದ ಚಿಂತನೆ ನಡೆಸುವ ಅಗತ್ಯವಿದೆ. ಯು.ಪಿ.. ಸರ್ಕಾರದ ಹಿಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರೂ ಸಹ ಯೋಜನಾ ಆಯೋಗದ ಅಭಿವೃದ್ಧಿ ಕುರಿತ ಕಾರ್ಯತಂತ್ರಗಳು ಬದಲಾಗಬೇಕೆಂದು ಒತ್ತಿ ಹೇಳಿದ್ದರು.
ಸ್ವಾತಂತ್ಯಾ ನಂತರದ ಭಾರತದ ಅಭಿವೃದ್ಧಿಗೆ ಒತ್ತು ಕೊಡುವ ನಿಟ್ಟಿನಲ್ಲಿ ಸಮಾಜವಾದಿ ಮತ್ತು ಬಂಡವಾಳಶಾಹಿ ನೀತಿಗಳನ್ನು ಒಳಗೊಂಡ ಮಿಶ್ರ ಆರ್ಥಿಕತೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಅಂದಿನ ಪ್ರಧಾನಿ ಜವಹರಲಾಲ್ ಮುಂದಾಗಿದ್ದರು. ನೀರಾವರಿ, ಕೃಷಿ ಅಭಿವೃದ್ಧಿಯ ಜೊತೆಗೆ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿ, ಉದ್ಯೋಗ ಸೃಷ್ಟಿಯ ಮೂಲಕ ಬಡತನ ನಿವಾರಿಸುವುದು ಮತ್ತು ಭಾರತಕ್ಕೆ ಆಹಾರ ಭದ್ರತೆಯ ವಿಷಯದಲ್ಲಿ ಸ್ವಾವಲಂಬಿತನ ಸಾಧಿಸುವುದು ಇವುಗಳು ಜವಹರಲಾಲ್ ನೆಹರೂ ಅವರಿಗೆ ಮುಖ್ಯವಾಗಿದ್ದವು. ಬ್ರಿಟೀಷರ ದಾಸ್ಯದಿಂದ ಬಿಡುಗಡೆಗೊಂಡ ಸ್ವತಂತ್ರ ಭಾರತಕ್ಕೆ ಆರಂಭz ದಿನಗಳÀಲ್ಲಿ ಅನೇಕ ಸವಾಲುಗಳು ಎದುರಾಗಿದ್ದವು. ಪ್ರಜಾಪ್ರಭುತ್ವದ ತಳಹದಿಯನ್ನು ಸುಸ್ಥಿರಗೊಳಿಸುವುದರ ಜೊತೆ ಜೊತೆಯಲ್ಲಿ ಸದೃಢ ಭಾರತವನ್ನು ನಿರ್ಮಾಣ ಮಾಡುವ ಜವಬ್ದಾರಿ ರಾಜಕೀಯ ನಾಯಕರ ಮೇಲಿತ್ತು. ಕೇವಲ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವುದಕ್ಕಾಗಿ ತಮ್ಮ ಆಯಸ್ಸನ್ನು ಸೆವೆಸಿದ್ದ ನೆಹರೂ, ಪಟೇಲ್ ಮತ್ತು ಸಂಗಡಿಗರಿಗೆ ಆಡಳಿತ ಅನುಭವದ ಕೊರತೆಯಿತ್ತು. ನಾಯಕರುಗಳನ್ನು ದಿಕ್ಕು ತಪ್ಪಿಸದಂತೆ ಕರೆದೊಯ್ಯುವ ನೈತಿಕ ಜವಾಬ್ದಾರಿ ಅಂದಿನ ಅಧಿಕಾರಿಗಳ ಮೇಲಿತ್ತು. ಬ್ರಿಟೀಷರ ಕೈ ಕೆಳಗೆ ದುಡಿದ ಅನುಭವವಿದ್ದ ದಕ್ಷ ಅಧಿಕಾರಿಗಳ ತಂಡವೊಂದು ಸ್ವಾತಂತ್ರ್ಯಾನಂತರದ ಭಾರತದಲ್ಲಿ ನೆಹರೂ ಅವರಿಗೆ ದೊರೆತ ಫಲವಾಗಿ ಅವರು 1951 ರಲ್ಲಿ ಆರಂಭಿಸಿದ ಪಂಚವಾರ್ಷಿಕ ಯೋಜನೆಗಳು ಯಶಸ್ವಿಯಾಗಲು ಕಾರಣವಾಯಿತು..

ಭಾರತದಲ್ಲಿ ಆರಂಭವಾದ ಪಂಚವಾರ್ಷಿಕ ಯೋಜನೆಗಳಿಗೆ 1938 ರಲ್ಲಿ ನಿಜವಾದ ಸ್ವರೂಪ ಸಿಕ್ಕಿತ್ತು. ಹಾಗಾಗಿ ಭಾರತದ ಪಂಚವಾಷಿಕ ಯೋಜನೆಗಳ ಮೂಲ ರೂವಾರಿಗಳೆಂದು ಪಶ್ಚಿಮ ಬಂಗಾಳದ ಬೌತ ವಿಜ್ಞಾನಿ ಮೇಘನಾದ್ಸಹ ಮತ್ತು ನಮ್ಮ ಕರ್ನಾಟಕದ ಸರ್.ಎಂ.ವಿಶ್ವೇಶ್ವರಯ್ಯ ಇವರನ್ನು ಕರೆದರೆ ತಪ್ಪಾಗಲಾರದು. 1938 ರಲ್ಲಿ ದೆಹಲಿಯಲ್ಲಿ ನಡೆದ ಕಾಂಗ್ರೇಸ್ ವಾರ್ಷಿಕ ಅಧಿವೇಶನದ ವೇಳೆ ಅಧ್ಯಕ್ಷರಾಗಿದ್ದ ಸುಭಾಷ್ ಚಂದ್ರ ಬೋಸ್ ಭಾರತದ ಸರ್ವಾಂಗೀಣ ಅಭಿವೃದ್ಧಿಗಾಗಿ ಯೋಜನಾ ಆಯೋಗದ ಕನಸು ಕಂಡರು. ಮೇಘನಾದ್ ಸಹ ಮತ್ತು ವಿಶ್ವೇಶ್ವರಯ್ಯ ಇದರ ರೂಪು ರೇಶೆಗಳನ್ನು ಸಿದ್ಧಪಡಿಸಿದರು. ಯೋಜನಾ ಆಯೋಗಕ್ಕೆ ದೇಶದ ಪ್ರಧಾನಿ ಅಧ್ಯಕ್ಷರಾಗಿದ್ದುಕೊಂಡು, ವಿವಿಧ ರಂಗದ ತಜ್ಞರು ಸದಸ್ಯರಾಗುವುದಕ್ಕೆ ಅವಕಾಶ ಇರುವಂತೆ ಮಾರ್ಗದರ್ಶಿ ಸೂತ್ರವನ್ನು ಸಿದ್ಧಪಡಿಸಿ ಪ್ರಧಾನಿಗೆ ನೀಡಲಾಗಿತ್ತು. ಅದರಂತೆ ನೆಹರೂರವರು 1951 ರಲ್ಲಿ ಯೋಜನೆಯ ಆಯೋಗದ ಮೂಲಕ ತಾವು ಹಾಕಿಕೊಂಡಿದ್ದ  ಗುರಿಗಳನ್ನು ಜಾರಿಗೆ ತರಲು 1952 ರಲ್ಲಿ ಮೊದಲ ಪಂಚವಾರ್ಷಿಕ ಯೋಜನೆಯನ್ನು ಆರಂಭಿಸಿದರು. ನೀರಾವರಿಗೆ ಒತ್ತು ಕೊಟ್ಟು, ಕೃಷಿ ಉತ್ಪನ್ನಗಳನ್ನು ಹೆಚ್ಚಿಸುವ ಸಲುವಾಗಿ ಬೃಹತ್ ಅಣೆಕಟ್ಟುಗಳಿಗೆ ಆದ್ಯತೆ ನೀಡಿದರು. ಜೊತೆಗೆ ರಸಾಯನಿಕ ಗೊಬ್ಬರ, ಕಬ್ಬಿಣ ಮುಂತಾದ ಉತ್ಪನ್ನಗಳ ಉತ್ಪಾದನೆಗಾಗಿ ಸಾರ್ವಜನಿಕ ರಂಗದಲ್ಲಿ ಬೃಹತ್ ಉದ್ದಿಮೆಗಳನ್ನು ಸ್ಥಾಪಿಸಿದರು. ಅಣೆಕಟ್ಟುಗಳು ಮತ್ತು ವಿಜ್ಞಾನದ ಪ್ರಯೋಗಾಲಗಳು ದೇಶದ ಅಭಿವೃದ್ಧಿಯ ದೇಗುಲಗಳು ಎಂದು ನೆಹರೂರವರು  ಘೋಷಿಸಿದರು. ನೆಹರೂ ಅವರ ಚಿಂತನೆಗಳು ಮತ್ತು ಕನಸುಗಳಲ್ಲಿ ರಷ್ಯಾದಲ್ಲಿ ಯಶಸ್ವಿಯಾದ ಪಂಚವಾಷಿಕ ಯೋಜನೆಗಳಿದ್ದವು.
1950 ಮತ್ತು 60 ದಶಕಗಳಲ್ಲಿ ಹಾಗೂ ಅನಂತರ ಬಂದ ಹಸಿರು ಕ್ರಾಂತಿಯ ಯೋಜನೆಗಳ ಮೂಲಕ ಪಂಚವಾರ್ಷಿಕ ಯೋಜನೆಗಳು ಯಶಸ್ವಿಯಾದರೂ ಸಹ 1990 ದಶಕದ ನಂತರ ಯೋಜನೆಗಳ ಗುರಿ ಮತ್ತು ಪ್ರತಿಫಲಗಳಗಳ ನಡುವೆ ಹೊಂದಾಣಿಕೆಯಿಲ್ಲದೆ ದಿಕ್ಕು ತಪ್ಪಿದವು. ಆಯೋಗದ ದೃಷ್ಟಿಕೋನ ಮತ್ತು ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುವ ಅನುದಾನಗಳ ವಿಷಯದಲ್ಲಿ ಅನುಸರಿಸಿದ  ತಾರತಮ್ಯ ನೀತಿಯಿಂದಾಗಿ  ಹಲವಾರು ಆಕ್ಷೇಪಣೆಗಳಿಗೆ ಮತ್ತು ವಿವಾದಗಳಿಗೆ ಗುರಿಯಾಗಬೇಕಾಯಿತು. ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನೆಡಸಲು ಸೂಕ್ತವಾದ ಸಲಹೆ ಹಾಗೂ ಮಾರ್ಗದರ್ಶಕ ತಜ್ಞರ ಕೊರತೆಯಿಂದಾಗಿ ಯೋಜನಾ ಆಯೋಗವೆಂಬುದು ನಿವೃತ್ತ ರಾಜಕಾರಣಿಗಳ ಆಶ್ರಯ ತಾಣವಾಯಿತು. ಆಯೋಗದಲ್ಲಿ ಪ್ರಧಾನಿ ಪದನಿಮಿತ್ತ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡುವುದರ ಮೂಲಕ ಆಡಳಿತದಲ್ಲಿರುವ ಕೇಂದ್ರ ಸರ್ಕಾರ ತನಗೆ ಇಷ್ಟ ಬಂದ ವ್ಯಕ್ತಿಯನ್ನು ನೇಮಕ ಮಾಡಬಹುದಾಗಿದೆ. ಉಳಿದಂತೆ ಕೇಂದ್ರ ಮಂತ್ರಿ ಮಂಡಲದಲ್ಲಿರುವ  ಗೃಹ, ಆರೋಗ್ಯ, ರಸಾಯನಿಕ ಗೊಬ್ಬರ ಖಾತೆ ಸಚಿವ , ಶಿಕ್ಷಣ, ಮಾಹಿತಿ ತಂತ್ರಜ್ಞಾನ ಸಚಿವರನ್ನು ನೇಮಕ ಮಾಡಲಾಗುತ್ತದೆ. ಜನಪ್ರತಿನಿಧಿಯಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ ಎಂಬ ಅರ್ಹತೆಯನ್ನು ಹೊರತು ಪಡಿಸಿದರೆ ಸಚಿವರಿಗೆ ಯೋಜನಾ ಆಯೋಗದಲ್ಲಿ ಸದಸ್ಯರಾಗಲು ಯಾವುದೇ ಅರ್ಹತೆಗಳಿಲ್ಲ ಎಂಬುದು ಕಟುವಾದರೂ ಒಪ್ಪಿಕೊಳ್ಳಲೇ ಬೇಕಾದÀ ವಾಸ್ತವಿಕ ಅಂಶ. ಹೀಗೆ ವಲಯವಾರು ವಿಷಯಗಳ ತಂತ್ರಜ್ಞರಲ್ಲದ ಹಾಗೂ ರಾಜಕೀಯ ವ್ಯಕ್ತಿಗಳಿಂದ ತುಂಬಿ ಹೋಗಿರುವ ಆಯೋಗದಿಂದ ಏನನ್ನು ತಾನೆ ನಿರೀಕ್ಷಿಸಲು ಸಾಧ್ಯ?
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂಪರ್ಕ ಮತ್ತು ಸಂವಹನ ಸೇತುವೆಯಾಗಿ ಕಾರ್ಯನಿರ್ವಹಿಸಬೇಕಾದ ಯೋಜನಾ ಆಯೋಗಕ್ಕೆ ರಾಜಕೀಯೇತರ ಅಂದರೆ ವಿಶೇಷವಾಗಿ ಶಿಕ್ಷಣ, ಆರೋಗ್ಯ, ಮಾಹಿತಿ ತಂತ್ರಜ್ಞಾನ, ಕೃಷಿ, ವಾಣಿಜ್ಯ, ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ತಜ್ಞರನ್ನು ಒಳಗೊಂಡಂತೆ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳಿಗಾಗಿ ಸಮಾಜಶಾಸ್ತ್ರಜ್ಞರು, ಅರ್ಥಶಾಸ್ತ್ರರನ್ನು ನೇಮಕ ಮಾಡುವ ಅವಶ್ಯಕತೆ ಎದ್ದು ಕಾಣುತ್ತಿದೆ. ದೇಶದ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳ ಸದ್ಭಳಕೆ ಹಾಗೂ ಕಾಲಕ್ಕೆ ಅನುಗುಣವಾಗಿ ಯಾವ ಯಾವ ಯೋಜನೆಗಳಿಗೆ ಆದ್ಯತೆ ನೀಡಬೇಕು ಎಂಬುದರ ಕುರಿತ ಚಿಂತನೆ ನಡೆಯಬೇಕಿದೆ. ಅಭಿವೃದ್ಧಿಗೆ ತೊಡಕಾಗಿರುವ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಅಂಶಗಳನ್ನು ಗುರುತಿಸುವಿಕೆ, ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಭ್ರಷ್ಟಾಚಾರಕ್ಕೆ ಎಡೆಯಿಲ್ಲದಂತೆ ನಿಗಾ ವಹಿಸುವುದು ಇವೆಲ್ಲವೂ ಇಂದಿನ ಯೋಜನಾ ಆಯೋಗದ ಆದ್ಯ ಕರ್ತವ್ಯಗಳಾಗಿವೆ.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಅರವತ್ತೇಳು ವರ್ಷಗಳು ಕಳೆದು ಅರವತ್ತೆಂಟನೆಯ ನೇ ವರ್ಷಕ್ಕೆ ಕಾಲಿಟ್ಟರೂ ದೇಶದ ಬಡತನದ ನಿವಾರಣೆಯಾಗಲಿಲ್ಲ. ವಸತಿ ಮತ್ತು ಆರೋಗ್ಯ ಸಮಸ್ಯೆ ಭಾರತದ ಜ್ವಲಂತ ಸಮಸ್ಯೆಗಳಾಗಿ ಇನ್ನೂ ಕಾಡುತ್ತಲೇ ಇವೆ. ಕುಡಿಯುವ ಒಂದು ಲೀಟರ್ ನೀರಿನ ಬೆಲೆ ಇಪ್ಪತ್ತು ರೂಪಾಯಿ ಆಗಿರುವಾಗ, ದಿನಕ್ಕೆ ಇಪ್ಪತ್ತೆಂಟು  ರೂಪಾಯಿಗಳನ್ನು ಸಂಪಾದಿಸುವ ವ್ಯಕ್ತಿ ಬಡವನಲ್ಲ ಎಂದು ವ್ಯಾಖ್ಯಾನಿಸುವ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಮೊಂಟೆಕ್ ಸಿಂಗ್ ಅಹ್ಲುವಾಲಿಯ ಅವರ ಮಾತಗಳನ್ನು ನಾವು ಹೇಗೆ ಅರ್ಥೈಸಿಕೊಳ್ಳಬೇಕು ತಿಳಿಯುತ್ತಿಲ್ಲ. ವಿಶ್ವಬ್ಯಾಂಕ್ ದಿನವೊಂದಕ್ಕೆ ಒಂದೂವರೆ ಡಾಲರ್ ಅಂದರೆ ತೊಂಬತ್ತು ರೂಪಾಯಿ ಸಂಪಾದಿಸಲು ಸಾಧ್ಯವಾಗದ ವ್ಯಕ್ತಿಯನ್ನು ಬಡವನೆಂದು ಗುರುತಿಸಿರುವ ಸಂಗತಿ ಭಾರತದ ಯೋಜನಾ ಆಯೋಗಕ್ಕೆ ತಿಳಿದಿಲ್ಲವೆ? ಇಂತಹ ವೈರುಧ್ಯಮಯ ಹೇಳಿಕೆಗಳಿಂದ ತೀವ್ರ ಟೀಕೆಗೆ ಒಳಗಾಗಿರುವ ಯೋಜನಾ ಆಯೋಗಕ್ಕೆ ಹೊಸ ಸ್ವರೂಪ ಕೊಡುವುದು ಅನಿವಾರ್ಯವಾಗಿದೆ. ಆದರೆ ಜಾಗತೀಕರಣದ ದಿನಗಳಲ್ಲಿ ಯಾವುದೇ ಮಾನವೀಯ ಮುಖವಿಲ್ಲದೆ, ಲಾಭಕೋರತನವೊಂದೇ ತನ್ನ ಗುರಿ ಎಂದು ಹೊರಟಿರುವ ಮುಕ್ತ ಮಾರುಕಟ್ಟೆ ನೀತಿಗೆ ಎದುರಾಗಿ, ಅಭಿವೃದ್ಧಿಯ ಗುರಿ ಮತ್ತು ಯೋಜನೆಗಳು  ದಿಕ್ಕು ತಪ್ಪದಂತೆ ಮುನ್ನೆಡಸಲು, ತಜ್ಞರ ಜೊತೆಗೆ ನೆಲದ ನೈಸರ್ಗಿಕ ಸಂಪತ್ತು ಲೂಟಿಯಾಗದಂತೆ ತಡೆಯಬಲ್ಲ ಮತ್ತು ನೆಲದ ಸಂಸ್ಕøತಿಯ ವಾರಸುದಾರರಾದ ಆದಿವಾಸಿಗಳು ಮತ್ತು ದಲಿತ ಹಾಗೂ ಹಿಂದುಳಿದ ವರ್ಗಗಳ ಪ್ರತಿನಿಧಿಗಳು ಸಹ ಯೋಜನಾ ಆಯೋಗದಲ್ಲಿ ಇರುವಂತೆ ನೋಡಿಕೊಳ್ಳಬೇಕಾಗಿದೆ.


ಪ್ರಧಾನಿಯಾಗಿ ನೂರು ದಿನಗಳು ಪೂರೈಸಿರುವ ನರೇಂದ್ರಮೋದಿಯವರು ಇತ್ತೀಚೆಗೆ ಜಪಾನ್ ಪ್ರವಾಸದ ಸಂದರ್ಭದಲ್ಲಿ ಹೇಳಿದ ಮಾತುಗಳು ನಮ್ಮನ್ನು ಆತಂಕಕ್ಕೆ ದೂಡುತ್ತಿವೆ. “ ಜಪಾನ್ ಹತ್ತು ವರ್ಷಗಳಲ್ಲಿ ಸಾಧಿಸಿದ ಪ್ರಗತಿಯನ್ನು ಭಾರತ ಎರಡು ವರ್ಷಗಳಲ್ಲಿ ಸಾಧಿಸಿ ತೋರಬೇಕಾಗಿದೆಎನ್ನುವ ಅವರ ಮಾತುಗಳಲ್ಲಿ ಬಂಡವಾಳಶಾಹಿ ಜಗತ್ತಿಗೆ ಭಾರತವನ್ನು ಮುಕ್ತವಾಗಿ ತೆರದಿಡುವ ಉತ್ಸಾಹ ಕಂಡು ಬರುತ್ತಿದೆ. ಕೇವಲ ಒಂದು ವಲಯದ ಅಭಿವೃದ್ಧಿಯನ್ನು ದೇಶದ ಅಭಿವೃದ್ಧಿ ಎಂದು ಪ್ರತಿಬಿಂಬಿಸುವ ಕುರುಡು ನೀತಿಯನ್ನು ಕೈ ಬಿಟ್ಟು, ಭಾರತದ ಎಲ್ಲಾ ರಂಗಗಳ ಅಭಿವೃದ್ಧಿಗೆ ಒತ್ತು ನೀಡಬೇಕಾದ ನೈತಿಕ ಜವಾಬ್ದಾರಿ ಯೋಜನಾ ಆಯೋಗದ ಮೇಲಿದೆರಷ್ಯಾದ ಮಾದರಿಯನ್ನು ಕೈ ಬಿಟ್ಟು ಚೀನಾದ ಅಲ್ಪಾವಧಿಯ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕಿದೆ. ಜೊತೆಗೆ ಹೊಸದಾಗಿ ಯೋಜನೆಯನ್ನು ಅನುಷ್ಟಾನಗೊಳಿಸುವ ಮುನ್ನ ಒಂದು ನಿರ್ಧಿಷ್ಟ ಪ್ರದೇಶದಲ್ಲಿ ಅಥವಾ ರಾಜ್ಯದಲ್ಲಿ ಪ್ರಾಯೋಗಿಕ ಅಳವಡಿಸಿ, ಅದರ ಸಾಧಕ ಬಾಧಕಗಳನ್ನು ತಿಳಿದು ನಂತರ ದೇಶ್ಯಾದಂತ ಅಳವಡಿಸಬಲ್ಲ ಸೂಕ್ಷ್ಮ ತಿಳುವಳಿಯುಳ್ಳ ತಜ್ಞರನ್ನು ಆಯೋಗ ಒಳಗೊಳ್ಳಬೇಕಿದೆ. 1971 ರಲ್ಲಿ ಪಾಕಿಸ್ತಾನದಿಂದ ವಿಭಜನೆಗೊಂಡು ನೂತನವಾಗಿ ಉದಯವಾದ ನೆರೆಯ ಬಂಗ್ಲಾ ದೇಶವು ಯುದ್ಧ, ಮತ್ತು ರಾಜಕೀಯ ಅಸ್ಥಿರತೆ ಹಾಗೂ ಬರಗಾಲ, ಪ್ರವಾಹ ಮುಂತಾದ ನೈಸರ್ಗಿಕ ವಿಕೋಪಗಳ ನಡುವೆಯೂ ಜಗತ್ತಿನ ಅತ್ಯಂತ ಬಡರಾಷ್ಟ್ರಗಳಲ್ಲಿ ಒಂದಾಗಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ನೋವಲ್ ಪ್ರಶಸ್ತಿ ವಿಜೇತ ಸ್ಥಾಪಿಸಿದ ಗ್ರಾಮೀಣ ಬ್ಯಾಂಕ್  ಅಲ್ಲಿನ ಜನರ ಬಡತನವನ್ನು ನಿವಾರಿಸುವಲ್ಲಿ ಭಾರತಕ್ಕಿಂತ ಮುಂದಿದೆ ಎಂಬ ಅಂಶವನ್ನು ನಮ್ಮನ್ನಾಳುವ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ಅರಿಯಬೇಕಿದೆ. ಕೇವಲ ರಾಜಕೀಯ ವಿಮೋಚನೆಯೆಂಬುದು ಸ್ವಾತಂತ್ರ್ಯಕ್ಕೆ ಅರ್ಥವಲ್ಲ, ಭಾರತದ ಜನಕ್ಕೆ ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳಿಂದ ವಿಮೋಚನೆ ಸಿಕ್ಕಾಗ ಮಾತ್ರ ಅದು ನಿಜವಾದ ಅರ್ಥದಲ್ಲಿ ಸ್ವಾತಂತ್ಯವಾಗಬಲ್ಲದು.
              

                        ( ದಿನಾಂಕ 10-09-2014 ರಂದು ವಾರ್ತಾ ಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)