ಉದಯಗಿರಿ
ಸ್ಟಾಲಿನ್ ಎಂಬ ಯುವ ರಾಜಕಾರಣಿ ಸನಾತನ ಧರ್ಮ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕ ಪಿಡುಗಿನ
ರೂಪದಲ್ಲಿ ಎಲ್ಲೆಡೆ ಹರಡುತ್ತಿದೆ ಎಂದು ವ್ಯಾಖ್ಯಾನಿಸಿದ್ದನು. ವಾಸ್ತವವಾಗಿ ಹಿಂದೂ ಧರ್ಮವನ್ನು ಸನಾತನ
ಧರ್ಮ ಎಂದು ಏಕೆ ಕರೆಯುತ್ತಾರೆ. ಸನಾತನದ ಧರ್ಮದ ಅರ್ಥವೇನು ಎಂಬುದರ ಬಗ್ಗೆ
ಏನೇನೂ ಗೊತ್ತಿಲ್ಲದ ವಾಟ್ಸ್ ಅಪ್ ಯೂನಿರ್ವಸಿಟಿಯ ಪ್ರೊಫೆಸರ್ ಗಳು ಮತ್ತು ವಿದ್ಯಾರ್ಥಿಗಳಿಂದ ದೇಶಾದ್ಯಂತ ಗಹನವಾದ ಚರ್ಚೆ ಆರಂಭವಾಗಿದೆ.
ರಾಜಕೀಯಕ್ಕೆ ಧರ್ಮ ಬೆರೆಸುವುದಾಗಲಿ ಅಥವಾ ಧರ್ಮಕ್ಕೆ ರಾಜಕೀಯ ಬೆರೆಸುವುದು ಈ ಎರಡೂ ಕ್ರಿಯೆಗಳು ಅಮಾನುಷ
ಮತ್ತು ಅರ್ಥಹೀನ ಕ್ರಿಯೆ ಎಂಬ ಕನಿಷ್ಠ ಜ್ಞಾನ ನಮ್ಮಲ್ಲಿ
ಇರಬೇಕು. ಈ ಕಾರಣಕ್ಕಾಗಿ ಕುವೆಂಪು ಹಿಂದೂ ಧರ್ಮದ ಬಗ್ಗೆ ಈ ರೀತಿ ಕಟುವಾಗಿ ವ್ಯಾಖ್ಯಾನಿಸಿದ್ದರು.
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಎಂದೊ ಮನು ಬರೆದಿಟ್ಟುದಿಂದೆಮೆಗೆ ಕಟ್ಟೆನು?
ಈ
ಜಗತ್ತಿನ ಪ್ರಾಚೀನ ನಾಗರೀಕತೆಗಳಲ್ಲಿ ಗ್ರೀಕ್, ಈಜಿಪ್ತ್ ಹಾಗೂ ಮೆಸಪಟೋಮಿಯಾ ನಾಗರೀಕತೆಗಳ ಜೊತೆಗೆ
ಭಾರತದ ಸಿಂಧೂ ನಾಗರೀಕತೆ ಕೂಡಾ ಒಂದಾಗಿದೆ. ಭಾರತದಲ್ಲಿ ಕ್ರಿಸ್ತಪೂರ್ವದ ಅವಧಿಯಲ್ಲಿ ಜಾರಿಗೆ ಬಂದ
ಆಚರಣೆಗಳು ಹಾಗೂ ವೇದ ಮತ್ತು ಉಪನಿಷತ್ತುಗಳು ಇವುಗಳನ್ನು ಹಿಂದು ಧರ್ಮ ಎಂದು ಕರೆಯಯಲಾಗುತ್ತದೆ. ಹಾಗೆಂದು
ಮಾತ್ರಕ್ಕೆ ಇದು ಜಗತ್ತಿನ ಅತ್ಯಂತ ಪುರಾತನ ಧರ್ಮವೇನಲ್ಲ. ಸತಾನತನ ಎಂದರೆ, ಅತ್ಯಂತ ಪ್ರಾಚೀನ ಎಂಬ ಅರ್ಥ ಇದೆಯಾದರೂ
ಸನಾತನ ಪದವನ್ನು ಅಳಿಯದ, ಚಿರಂತನವಾದ ಮತ್ತು ನಿರಂತರವಾದ ಎಂಬ ಅರ್ಥದಲ್ಲಿ ವ್ಯಾಖ್ಯಾನಿಸಲಾಗುತ್ತದೆ.
ಒಂದು ಧರ್ಮವು ಚಿರಂತನವಾಗಿ ಅಳಿಯದೆ ಉಳಿಯುವುದಕ್ಕೆ ಅದು ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಪರಿಷ್ಕೃತಗೊಳ್ಳುವ
ಗುಣ ಅಥವಾ ಲಕ್ಷಣಗಳನ್ನು ಒಳಗೊಂಡಿರಬೇಕು. ಇಂತಹ ಗುಣ ಹಿಂದೂ ಧರ್ಮಕ್ಕೆ ಇದೆಯಾ? ಇದು ಧರ್ಮದ ಪ್ರತಿಪಾದಕರು
ತಮ್ಮ ಆತ್ಮಸಾಕ್ಷಿಗೆ ಹಾಕಿಕೊಳ್ಳಬೇಕಾದ ಪ್ರಶ್ನೆ.
ವಾಸ್ತವವಾಗಿ ಹಿಂದೂ ಧರ್ಮವನ್ನು ಸನಾತನ ಧರ್ಮ ಎಂದು ಮಹಾತ್ಮಗಾಂಧಿಜಿಯವರು ಕರೆಯುವುದರ ಮೂಲಕ 1921 ರಲ್ಲಿ ಈ ಶಬ್ದವನ್ನು ಜನಪ್ರಿಯಗೊಳಿಸಿದರು.
ಹಿಂದೂ ಧರ್ಮದಲ್ಲಿ ಅಡಕವಾಗಿದ್ದ ವರ್ಣಾಶ್ರಮ ಪದ್ಧತಿಯನ್ನು ತೀವ್ರವಾಗಿ ವಿರೋಧಿಸಿದ ಗಾಂಧೀಜಿಯವರು
ಅಸ್ಪೃಶ್ಯತೆಯ ಆಚರಣೆಯನ್ನು ಖಂಡಿಸಿದರು. ಜೊತೆಗೆ ದಲಿತರಿಗೆ ಹರಿಜನ ಅಥವಾ ಶಿವನ ಪುತ್ರರು ಅಥವಾ ಸಂತಾನ
ಎಂದು ಕರೆಯುವುದರ ಮೂಲಕ ವೈದಿಕ ಪರಂಪರೆಗೆ ಸವಾಲು ಎಸೆದರು. ಗಾಂಧೀಜಿಯವರ ದೃಷ್ಟಿಕೋನದಲ್ಲಿ ಸನಾತನ
ಧರ್ಮ ಎಂದರೆ,ವರ್ಗ,ಜಾತಿ ಮತ್ತು ಪಂಥಗಳ ಗಡಿಯನ್ನು ಮೀರಿದ ಧರ್ಮವೇ ನಿಜವಾದ ಸನಾತನ ಧರ್ಮ ಎಂಬುದಾಗಿತ್ತು.
ಜೊತೆಗೆ ಸನಾತನ ಧರ್ಮ ಎನಿಸಿಕೊಳ್ಳಬೇಕಾದರೆ, ಅದು ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಅನ್ಯಜೀವಿಗಳನ್ನು
ಮಾನಸಿಕವಾಗಿ ಮತ್ತು ದೈಹಿಕವಾಗಿ ಗಾಯಗೊಳಿಸದೆ, ಬಾತೃತ್ವ, ಸದ್ಭಾವನೆ, ಪ್ರೀತಿ ಮತ್ತು ಔದಾರ್ಯಗಳನ್ನು
ಒಳಗೊಂಡಿರಬೇಕು ಎಂದು ಪ್ರತಿಪಾದಿಸಿದ್ದರು. ಈ ಲಕ್ಷಣಗಳು ಇಂದು ಹಿಂದೂ ಧರ್ಮದಲ್ಲಿ ಈಗ ಆಚರಣೆಯಲ್ಲಿ
ಇದ್ದಿದ್ದರೆ, ಅನ್ಯ ಧರ್ಮದ ವಸ್ತ್ರಗಳ ಕುರಿತಾಗಿ ಮತ್ತು ಆಹಾರ ಸಂಸ್ಕೃತಿಯ ಕುರಿತಾಗಿ ದಬ್ಬಾಳಿಕೆ
ನಡೆಯುತ್ತಿರಲಿಲ್ಲ.
ಬಹುಷಃ ನನ್ನ ದೃಷ್ಟಿಕೋನದಲ್ಲಿ
ಜಗತ್ತಿನ ಧರ್ಮಗಳ ಕುರಿತಾಗಿ ಬಸವಣ್ಣನವರು ನುಡಿದ ‘’ ದಯವೇ ಧರ್ಮದ ಮೂಲವಯ್ಯಾ’’ ಎಂಬ ಮಾತು ಅತ್ಯುನ್ನುತ
ಹಾಗೂ ಸರಳವಾದ ವ್ಯಾಖ್ಯಾನ. ಬಸವಣ್ಣನವರ ಮಾತನ್ನು ನಾವು ಆಚರಣೆಗೆ ತಂದಿದ್ದರೆ, ಇಂದು ಧರ್ಮಗಳ ಕುರಿತಾಗಿ
ಇಂತಹ ಹೀನ ಸಂಸ್ಕೃತಿಯನ್ನು ನಾವು ಕಾಣಲು ಆಗುತ್ತಿರಲಿಲ್ಲ. ಹನ್ನೆರೆಡನೇ ಶತಮಾನದ ಮತ್ತೊಬ್ಬ ವಚನಜಾರ
ಮತ್ತು ಸಂತಮನೋಭಾವದ ಅಲ್ಲಮ ಪ್ರಭು ಧರ್ಮವನ್ನು ಗುತ್ತಿಗೆ
ಹಿಡಿದ ಸರ್ವಾಧಿಕಾರಿಗಳಿಗೆ ಅರ್ಥಪೂರ್ಣವಾಗಿ ಈ ವಚನದ ಮೂಲಕ ಕಿವಿಮಾತು ಹೇಳಿದ್ದಾನೆ.
ನಾನು ಘನ ನಾನು ಘನವೆಂಬ
ಹಿರಿಯರುಂಟೆ ಜಗದೊಳಗೆ
ಹಿರಿಯರ ಹಿರಿಯತನ ಹಿಂದೇನಾಯಿತು?
ಹಿರಿಯ ಹಿರಿದೆಂಬ ಶಬ್ದವಡಗಿದೆಡೆ
ಆತನೇ ಶರಣ ಗುಹೇಶ್ವರಾ
ಸ್ವಾಮಿವಿವೇಕಾನಂದರು
ಸಹ ಹಿಂದೂ ಧರ್ಮದ ಅನೇಕ ಆಚರಣೆಗಳನ್ನು ಅದರಲ್ಲೂ ವಿಶೇಷವಾಗಿ ವರ್ಣಾಶ್ರಮ ಪದ್ಧತಿಯನ್ನು ವಿರೋಧಿಸಿ
ಒಂದು ಧರ್ಮವು ಮನುಷ್ಯ ಧರ್ಮವಾಗಿ ಹೇಗಿರಬೇಕೆಂದು ವ್ಯಾಖ್ಯಾನಿಸಿದ್ದರು. ವಿವೇಕಾನಂದರನ್ನು ಪೂಜಿಸುವ
ಧರ್ಮ ಭಕ್ತರಿಗೆ ಅವರ ನಂಬಿಕೆಗಳನ್ನು ಆಚರಣೆಗೆ ತರಲು ಈವರೆಗೆ ಸಾಧ್ಯವಾಗಿಲ್ಲ ಈ ನೆಲಮೂಲ ಸಂಸ್ಕೃತಿಯನ್ನು ಅರಿತುಕೊಳ್ಳಲು ವ್ಯಕ್ತಿಯೊಬ್ಬನಿಗೆ ಯಾವ ಬ್ರಾಹ್ಮಣ್ಯ ಅಥವಾ ಪಾಂಡಿತ್ಯವೂ ಬೇಕಾಗಿಲ್ಲ. ನಾವು
ಉಸಿರಾಡುವ ಗಾಳಿಗೆ, ಹರಿಯುವ ನೀರಿಗೆ ಮತ್ತು ಉರಿಯುವ
ಅಗ್ನಿಗೆ ಜಾತಿ, ಧರ್ಮದ ಹಂಗಿಲ್ಲ ಎಂಬ ಕನಿಷ್ಠ ಜ್ಞಾನವಿದ್ದರೆ ಸಾಕು. ಅಂತಹವನು ಧರ್ಮ ಮಾತ್ರವಲ್ಲದೆ, ಬ್ರಾಹ್ಮಣ, ಲಿಂಗಾಯುತ,
ಒಕ್ಕಲಿಗೆ, ಕುರುಬ, ದಲಿತ ಇತ್ಯಾದಿ ಜಾತಿಗಳನ್ನು
ಮೀರಿದ ಅಪ್ಪಟ ಮನುಷ್ಯನಾಗಿ ಬದುಕಲು ಸಾಧ್ಯವಿದೆ. ಅಂತಹ ಬದುಕನ್ನು ಬದುಕಿ ತೋರಿಸಿದ ಈ ನೆಲದ ಬುದ್ದ, ಬಸವಣ್ಣ, ಗಾಂಧಿ, ಅಂಬೇಡ್ಕರ್, ಲೋಹಿಯಾ,
ಕುವೆಂಪು ನಮಗೆ ಇಂದಿಗೂ ಮಾದರಿಯಾಗಿದ್ದಾರೆ.
ನಮ್ಮ ಜನಪದರ ದೃಷ್ಟಿಯಲ್ಲಿ
ನ್ಯಾಯವಲ್ಲದ್ದು, ಮತ್ತು ಅಮಾನುಷ ಕ್ರಿಯೆಗಳಿಂದ ಒಳಗೊಂಡಿದ್ದ ಕ್ರಿಯೆಯನ್ನು ಅವರು ‘ ಇದು ಧರ್ಮವಲ್ಲ’ ಎಂದು ವಿಶ್ಲೇಷಿಸಿದ್ದರು.
ಈ ಒಂದೇ ಶಬ್ದದ ಮೂಲಕ ಇಡೀ ಮನುಕುಲದ ಬದುಕನ್ನು ನಿಜವಾದ
ಧರ್ಮದ ಮೂಲಕ ವ್ಯಾಖ್ಯಾನಿಸಿದ್ದರು. ಹಿಂದೂ ಧರ್ಮದ ಬಗ್ಗೆ ಪ್ರಥಮವಾಗಿ ಲೋಕಾಯತನು ವಿಮರ್ಶೆ ಮಾಡಿದ್ದನ್ನು
ಹೊರತು ಪಡಿಸಿದರೆ, ತಥಾಗತ ಬುದ್ಧನು ಹಿಂದೂ ಧರ್ಮದ ಅನಿಷ್ಠಗಳಿಂದ ಸಿಡಿದೆದ್ದು ತನ್ನದೇ ಆದ ಬೌದ್ಧ
ಧರ್ಮವನ್ನು ಸ್ಥಾಪಿಸಿದನು. ಜೀವನದಲ್ಲಿ ಸಂತೋಷವೇ
ಪರಮ ಗುರಿ ಈ ಜಗತ್ತನ್ನು ಹೊರತು ಪಡಿಸಿದರೆ ಸ್ವರ್ಗ ಅಥವಾ ನರಕ ಎಂಬ ಲೋಕಗಳಿಲ್ಲ, ಹುಟ್ಟು ಸಾವುಗಳಿಂದ
ಬಿಡುಗಡೆ ಎಂಬುದು ಕೇವಲ ಭ್ರಮೆ, ಮನುಷ್ಯ ಜನ್ಮಕ್ಕೆ ಪುನರ್ಜನ್ಮ ಎನ್ನುವುದು ಹುಚ್ಚು ಪರಿಕಲ್ಪನೆ.
ಮನುಷ್ಯ ಜೀವಿ ತಾನು ಬದುಕಿರುವ ಕಾಲಘಟ್ಟದಲ್ಲಿ ನೆಮ್ಮದಿಯಿಂದ ಬದುಕಬೇಕಾದರೆ ಸುಖ ಮತ್ತು ದುಃಖಗಳನ್ನು
ಸಮಾನವಾಗಿ ಸ್ವೀಕರಿಸುವ ಗುಣವನ್ನು ಹೊಂದಿರಬೇಕು. ಈ ಜಗತ್ತು ಯಾವೊಂದು ಅಗೋಚರ ಶಕ್ತಿಯಿಂದ ನಿರ್ಮಾಣವಾಗಿಲ್ಲ.
ಇಲ್ಲಿನ ಭೂಮಿ, ಅಗ್ನಿ, ವಾಯು, ಜಲ ಎಲ್ಲವೂ ಪ್ರಕೃತಿಯ ಸೃಷ್ಟಿಯೇ ಹೊರತು ಯಾವ ದೇವರ ಸೃಷ್ಟಿಯಲ್ಲ.
ವೇದಗಳು ಮತ್ತು ಯಜ್ಞ ಯಾಗಾದಿಗಳು ಕೆಲವು ಜನರು ಹೊಟ್ಟೆಪಾಡಿಗಾಗಿ ಸೃಷ್ಟಿಸಿದ ಕ್ರಿಯೆಗಳು ಇದು ಬುದ್ಧನ
ಅಚಲ ನಂಬಿಕೆಯಾಗಿತ್ತು.
ಬುದ್ಧನ ದೃಷ್ಟಿಕೋನದಲ್ಲಿ
ಅತೀಂದ್ರಿ ಶಕ್ತಿಯನ್ನು ನಂಬುವುದು ಧರ್ಮವಲ್ಲ, ದೇವರಲ್ಲಿ ನಂಬಿಕೆ ಇಡುವುದು ಧರ್ಮವಲ್ಲ, ಬ್ರಹ್ಮಲೋಕ ಆಧಾರಿತ
ಧರ್ಮವು ಸುಳ್ಳು ಧರ್ಮವಾಗಿರುತ್ತದೆ, ಯಜ್ಞಗಳ ನಂಬಿಕೆ ಧರ್ಮವಲ್ಲ, ಧರ್ಮಗ್ರಂಥಗಳನ್ನು ಓದುವುದು ಧರ್ಮವಲ್ಲ,
ಊಹೆಯ ಆಧಾರಿತ ನಂಬಿಕೆಯು ಧರ್ವಲ್ಲ ಎಂಬ ವಿಷಯವು ಇಂದಿಗೂ ಮುಖ್ಯವಾದುದು. ಇದೇ ಮಾತನ್ನು ಕುವೆಂಪು
ಅವರು ತಮ್ಮ ಮುವತ್ತೊಂದನೇ ವಯಸ್ಸಿನಲ್ಲಿ ಯುವಜನರಿಗೆ ನಿರಂಕಶ ಮತಿಗಳಾಗಿ ಎಂಬ ಉಪನ್ಯಾಸದಲ್ಲಿ ‘’
ಆ ಚತುರ್ಮುಖಿ ಬ್ರಹ್ಮನೇ ಸಾಕ್ಷಾತ್ತಾಗಿ ಬಂದು ನಾನೀಗ ನಿಮ್ಮೊಡನೆ ಮಾತನಾಡುತ್ತಿರುವಂತೆ ಋಷಿಗಳಿಗೆ
ವೇಧಗಳನ್ನು ಬೋಧಿಸಿದೆನು ಎಂದು ಹೇಳಿದರೆ, ಕಣ್ಣುಮುಚ್ಚಿಕೊಂಡು ನಂಬಬೇಡಿ. ಯಾವುದೋ ಕಾಲದಲ್ಲಿ ಯಾವುದೋ
ಸಮಾಜಕ್ಕಾಗಿ ಮನು ಬರೆದಿಟ್ಟ ಕಟ್ಟಳೆಗಳು ಇಂದಿಗೂ ನಮ್ಮನ್ನಾಳಬೇಕೆಂದು ಹೇಳಿದರೆ ನೀವು ನಂಬಿ ತಲೆತೂಗಬೇಡಿ’’
ಎಂದು ಹೇಳಿದ್ದರು.
ಉದಯಗಿರಿ ಸ್ಟಾಲಿನ್
ಮಾತುಗಳಲ್ಲಿ ಬುದ್ಧ, ಗಾಂಧಿ ಮತ್ತು ಕುವೆಂಪು ಅವರ ವಿಚಾರಗಳು ಪುನರಾವರ್ತನೆಯಾಗಿವೆ ಎಂದು ನಾವುಗಳು
ಹೆಮ್ಮೆ ಪಡಬೇಕೇ ಹೊರತು ವಿರೋಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಹಾಗಾಗಿ ದೇಶಭಕ್ತರ ಹಾಗೂ ಧರ್ಮಭಕ್ತರ
ಉನ್ಮಾದದ ಮಾತುಗಳನ್ನು ನಾವುಗಳು ಕಡಎಗಣಿಸುವುದು ಸೂಕ್ತ.