ಮಂಗಳವಾರ, ಅಕ್ಟೋಬರ್ 31, 2023

ಸುವರ್ಣ ಕರ್ನಾಟಕ ಸಂಭ್ರಮ ಮತ್ತು ಸವಾಲುಗಳು


 


ಸ್ವಾತಂತ್ರಾö್ಯ ನಂತರದ ಭಾರತದಲ್ಲಿ 1956 ರಿಂದ ಮೈಸೂರು ರಾಜ್ಯ ಎಂದು ಕರೆಸಿಕೊಳ್ಳುತ್ತಿದ್ದ ಕನ್ನಡನಾಡಿನ ಈ ನೆಲವು  ಸಮಸ್ತ ಕನ್ನಡಿಗರಿಗೆ ಸ್ಪೂರ್ತಿಯಾಗಬಲ್ಲ ಕರ್ನಾಟಕ ಎಂದು ನಾಮಕರಣವಾಗಿ ಇಂದಿಗೆ ಐವತ್ತು ವರ್ಷಗಳಾದವು1973   ನವಂಬರ್ ಒಂದರಂದು ಅಂದಿನ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಡಿ.ದೇವರಾಜ ಅರಸು ಅವರು ಮೈಸೂರು ರಾಜ್ಯವನ್ನು ‘’ಕರ್ನಾಟಕ’’ ಎಂದು ನಾಮಕರಣ ಮಾಡಿ ರಾಜ್ಯದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆದರು.ಮೈಸೂರು ರಾಜ್ಯ ಎಂಬ ಹೆಸರಿನ ಕುರಿತಾಗಿ ಉತ್ತರ ಕರ್ನಾಟಕದ ಸಾಹಿತಿ ಮತ್ತು ಕಲಾವಿದರಿಗ ಅಸಮಾಧಾನವಿತ್ತುಸ್ವಾತಂತ್ರ್ಯ ಪೂರ್ವದ ಮೈಸೂರು ಸಂಸ್ಥಾನದ ಹೆಸರನ್ನು ಗಣರಾಜ್ಯವಾದ ನಂತರ ನಾಮಕರಣ ಮಾಡುವುದರ ಜೊತೆಗೆ ನಾಡಿನ ಅಭಿವೃದ್ಧಿಯ ಜೊತೆಗೆ ಸಾಹಿತ್ಯಕಲೆ ಇತ್ಯಾದಿ ಪ್ರಕಾರಗಳಲ್ಲಿ ಉತ್ತರ ಕರ್ನಾಟಕದ ಜನತೆಯನ್ನು ಕಡೆಗಣಿಸಲಾಗುತ್ತಿದೆ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು

ವಾಸ್ತವವಾಗಿ ಅವರ ಮಾತುಗಳು ಪೂರ್ಣ ಸತ್ಯಾಂಶಗಳಿಂದ ಕೂಡಿರಲಿಲ್ಲ. ಏಕೆಂದರೆ, ಬಾಂಬೆ ಪ್ರೆಸಿಡೆನ್ಸಿ ಹಾಗೂ ಹೈದರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ ಉತ್ತರ ಕರ್ನಾಟಕ ( ಬಾಂಬೆ ಕರ್ನಾಟಕ) ಮತ್ತು ಹೈದರಾಬಾದ್ ಕರ್ನಾಟಕದ ಪ್ರದೇಶಗಳು ಅಭಿವೃದ್ಧಿಯಲ್ಲಿ ಹಿಂದುಳಿಯಲು ಕಾರಣ ಆಗಿನ ಆಡಳಿತ ವ್ಯವಸ್ಥೆ ಕಾರಣವಾಗಿತ್ತು. ಆದರೆ  ಮೈಸೂರು ಸಂಸ್ಥಾನವು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂಬ ಅತ್ಯಂತ ಪ್ರಗತಿಶೀಲ ದೊರೆಯಿಂದಾಗಿ ಇಡೀ ಭಾರತದಲ್ಲಿ ಕೃಷಿ, ಕೈಗಾರಿಕೆ, ವಾಣಿಜ್ಯೋದ್ಯಮ, ಕಲೆ, ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ಇತರೆ ಸಂಸ್ಥಾನಗಳಿಗಿಂತ ಎತ್ತರದ ಸ್ಥಾನದಲ್ಲಿತ್ತು.

ಅರವತ್ತರ ದಶಕದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ನಿಜಲಿಂಗಪ್ಪನವರ ಅವಧಿಯಲ್ಲಿ ಅಂದರೆ 1962  ರಲ್ಲಿ ಸಮಗ್ರ ರಾಜ್ಯದ ಅಭಿವೃದ್ಧಿಗೆ ಬುನಾದಿಯನ್ನು ಹಾಕಲಾಯಿತು. ನಂತರ 1972 ರಲ್ಲಿ ಮುಖ್ಯಮಂತ್ರಿ ಪದವಿಗೆ ಏರಿದ ದೇವರಾಜು ಅರಸು ಕಾಲದಲ್ಲಿ ಸಮಗ್ರ ಕನಾಟಕದ ಏಳಿಗೆಯ ಯುಗ ಆರಂಭವಾಯಿತು. ಪ್ರಾದೇಶಿಕತೆಯ ಅಸಮಾನತೆಯನ್ನು ತೊಡೆದು ಹಾಕುವುದರ ಜೊತೆಗೆ ಹಿಂದುಳಿದ ವರ್ಗ ಮತ್ತು ತಳ ಸಮುದಾಯದವರ ಧ್ವನಿಗೆ ಅರಸುರವರು ವೇದಿಕೆ ಒದಗಿಸಿಕೊಟ್ಟರು. ಜೊತೆಗೆ ಕರ್ನಾಟಕ ಎಂದು ನಾಮಕರಣ ಮಾಡಿದರು. ಇದೇ ಸಂದರ್ಭದಲ್ಲಿ ಪ್ರಸಿದ್ಧ ಕವಿ ಧಾರವಾಡದ ಚೆನ್ನವೀರ ಕಣವಿ ಅವರು ‘’ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’’ ಎಂಬ ಜನಪ್ರಿಯ ಘೋಷಣಾ ವಾಕ್ಯವನ್ನು ರಚನೆ ಮಾಡಿದರು.

ಕನ್ನಡ ನೆಲದ ಜೀವಾಳ ಮಾತ್ರವಲ್ಲದೆ, ಅದರ ಮಾಂಸ ಮತ್ತು ಮಜ್ಜೆಯಾದ ಕನ್ನಡ ಭಾಷೆಗೆ ನಾಡಿನ ನಾಹಿತಿಗಳು, ಕವಿಗಳು, ನಾಟಕಕಾರರು, ಕಲಾವಿದರು, ಗಾಯಕರು ಭಾಷೆಯು ಜೀವಂತವಾಗಿರುವಂತೆ ಹಾಗೂ ಹಸಿರಾಗಿರುವಂತೆ ನೋಡಿಕೊಂಡರುಕಳೆದ ಮೂರು ದಶಕಗಳ ಹಿಂದೆ ಜಾಗತೀಕರಣದ ಪ್ರಕ್ರಿಯೆಗೆ  ದೇಶ ಮಾತ್ರವಲ್ಲದೆ, ಇಡೀ ಜಗತ್ತೇ ತೆರೆದುಕೊಂಡಾಗ ದೇಶಗಳ ಮತ್ತು ಭಾಷೆಗಳ ನಡುವೆ ಇದ್ದ ಗಡಿರೇಖೆಗಳು ಅಳಿಸಿಹೋದವು. ಜಗತ್ತೇ ಒಂದು ಹಳ್ಳಿ ಎಂಬ ಕಲ್ಪನೆ ಮುಂಚೂಣಿಗೆ ಬರುತ್ತಿದ್ದಂತೆ ಒಂದೇ ಭಾಷೆ, ಒಂದೇ ರೀತಿಯ  ಸಂಸ್ಕೃತಿ ಮತ್ತು ರೀತಿ ನೀತಿಗಳು ಸದ್ದಿಲ್ಲದೆ ಮುನ್ನೆಲೆಗೆ ಬಂದವು. ಅಘೋಷಿತ ಯುದ್ದದಲ್ಲಿ ನಾವೆಲ್ಲಾ ಮೌನವಾಗಿ ಶರಣಾಗತರಾದ ನಂತರ ನಮ್ಮ ಮಾತೃ ಭಾಷೆ ಕನ್ನಡ ಮತ್ತು ಸಂಸ್ಕೃತಿಯ ಅಸ್ಮಿತೆಯನ್ನು ಉಳಿಸಿಕೊಳ್ಳುವ ಸವಾಲುಗಳು  ಈಗ ಎದುರಾಗಿವೆ.

ನಾವು ಬದುಕುತ್ತಿರುವ ಇಪ್ಪತ್ತೊಂದನೆಯ ಶತಮಾನದ ಕಾಲಘಟ್ಟದಲ್ಲಿ ಈವರೆಗೆ ನಾವು  ಕಾಪಾಡಿಕೊಂಡು ಬಂದಿದ್ದ ಆಹಾರ ಸಂಸ್ಕೃತಿ, ಭಾಷಾ ಸಂಸ್ಕೃತಿ ಹಾಗೂ ಬದುಕಿನ ಸಂಸ್ಕೃತಿ ಎಲ್ಲವೂ ಗಾಳಿಗೆ ತೂರಿ ಹೋದ ತರಗೆಲೆಗಳಂತಾಗಿವೆ. ಅನಕ್ಷರತೆ ತಾಂಡವಾಡುತ್ತಿದ್ದ ಶತಮಾನಗಳ ಹಿಂದಿನ ಕಾಲದಿಂದಲೂ ಅಕ್ಷರಸ್ಥರಾದ ವೈದಿಕ ಸಮುದಾಯದ ವೇದ, ಪುರಾಣಗಳ ಕಥನಗಳಿಗೆ ಪರ್ಯಾಯಾಗಿ ನಮ್ಮ ಜನಪದರು ಮೌಖಿಕ ಅಥವಾ ಅಲಿಖಿತ ಪಠ್ಯಗಳನ್ನು ತಲೆಮಾರಿನಿಂದ ತಲೆ ಮಾರಿಗೆ ಬಾಯಿಂದ ಬಾಯಿಗೆ ತಲುಪಿಸುವುದರ ಮೂಲಕ ನಮ್ಮ ಭಾಷಾ ಪರಂಪರೆಯನ್ನು ಜೀವಂತವಾಗಿಟ್ಟಿದ್ದರು. ನಾಟಕ, ಹರಿಕಥೆ, ಜಾನಪದ ಸಂಗೀತ, ಹಾಡುಗಳು, ಯಕ್ಷಗಾನ, ದೊಡ್ಡಾಟ ಹೀಗೆ ಅನೇಕ ಪ್ರಕಾರಗಳಲ್ಲಿ ಕನ್ನಡ ಭಾಷೆಯು  ದೇಶಿಯ ಪರಂಪರೆಯಲ್ಲಿ ಜೀವಂತವಾಗಿತ್ತು.

ಇಂದಿನ ದಿನಗಳಲ್ಲಿ ಇಂಗ್ಲೀಷ್ ಭಾಷೆಯು ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕುಳಿಯಲು ಇರುವ ಏಕೈಕ ಭಾಷೆ ಎಂಬುದು ಜಗತ್ತಿನಾದ್ಯಂತ ದಟ್ಟವಾಗಿ ಬೆಳೆದಿದೆ. ಮಾಹಿತಿ ತಂತ್ರಜ್ಞಾನದ ಮಾಧ್ಯಮದ ಭಾಷೆಯಾಗಿರುವ ಇಂಗ್ಲೀಷ್ ಭಾಷೆಯನ್ನು ಚೀನಾ, ಜಪಾನ್, ರಷ್ಯಾ, ಜರ್ಮನಿ ಹಾಗೂ ಪ್ರಾನ್ಸ್ ರಾಷ್ಟçಗಳೂ ಸಹ ಒಪ್ಪಿಕೊಂಡಿವೆ. ಜಗತ್ತಿನ ಸಂಪರ್ಕ ಭಾಷೆಯಾದ ಇಂಗ್ಲೀಷ್ ಇಂದು ದೇಶದ ಹಳ್ಳಿ ಹಳ್ಳಿಗೂ ಆವರಿಸಿಕೊಂಡಿದೆ. ಕಾರಣದಿಂದಾಗಿ ಇಂದಿನ ಬಹುತೇಕ ಇಪ್ಪತ್ತು ವರ್ಷದ ಒಳಗಿನ ಮಕ್ಕಳಿಗೆ ಕನ್ನಡ ಭಾಷೆ ಮಾತೃಭಾಷೆಯಾಗಿದ್ದರೂ ಸಹ ಅದು ಅವರ ಪಾಲಿಗೆ ಲೋಕೋಪಯೋಗಿ ಭಾಷೆಯಾಗಿಲ್ಲ. ಪ್ರಾಥಮಿಕ ಶಿಕ್ಷಣದಿಂದ ಅವರ ಪದವಿಯವರೆಗೂ ಅವರು ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಕಾರಣದಿಂದಾಗಿ ಕನ್ನಡದ ಸಾಹಿತ್ಯ ಅಥವಾ ಸಾಂಸ್ಕೃತಿಕ ಲೋಕಕ್ಕೆ ಅವರೆಲ್ಲರೂ ಅಪರಿಚಿತರಾಗಿದ್ದಾರೆ.

ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ಸಾಹಿತ್ಯ ಲೋಕದ ಮುತ್ತು ರತ್ನಗಳು ಎನಿಸಿದ ಕುವೆಂಪು, ಬೇಂದ್ರೆ, ಶಿವರಾಮಕಾರಂತ, ಗೋವಿಂದ ಪೈ, ಜೆ.ಪಿ.ರಾಜರತ್ನಂ, ಬಿ.ಎಂ.ಶ್ರೀ, ಟಿ.ಎಸ್.ವೆಂಕಣ್ಣಯ್ಯ ಹೀಗೆ ನೂರಾರು ಮಹನೀಯರ ಹೆಸರು ಅಥವಾ ಪರಿಚಯವಿರಲಿ ಅವರ ಕೃತಿಗಳನ್ನು ನಾವು ನಮ್ಮ ಇಂದಿನ ಮಕ್ಕಳ ಕೈಗೆ ತಲುಪಿಸುವಲ್ಲಿ ವಿಫಲರಾಗಿದ್ದೀವಿ.  ಕನ್ನಡ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಕಲಿಸುವುದು ಅಪರಾದ ಎಂಬ ಮನೋಭಾವ ಇಂದಿನ ಪೋಷಕರಲ್ಲಿ ಮನೆ ಮಾಡಿದೆ. ಕನ್ನಡ ಮಾಧ್ಯಮದಲ್ಲೇ ಓದಿದ ಬಹುತೇಕ ನನ್ನ ತಲೆಮಾರಿನ ಅರವತ್ತು ದಾಟಿದ ಲೇಖಕರು ಮತ್ತು ಕಲಾವಿದರ ಮೇಲೆ ಕನ್ನಡದ ಭಾಷೆಯ ಮೇಲೆ ನಂಬಿಕೆಯನ್ನು ಜನಸಾಮಾನ್ಯರಲ್ಲಿ ಹುಟ್ಟು ಹಾಕುವ ನೈತಿಕ ಜವಾಬ್ದಾರಿ ಇರುವುದನ್ನು ಮರೆಯಲಾಗದು. ಇದನ್ನು ಸರ್ಕಾರಗಳ ಮೂಲಕ ಮಾಡಿಸುವುದರ ಜೊತೆಗೆ  ಸಾರ್ವಜನಿಕವಾಗಿ ನಾವು ಸಹ ಕ್ರಿಯಾಶೀಲರಾಗಬೇಕಿದೆ.

ಪ್ರಸ್ತುತ ಕನ್ನಡ ಭಾಷೆಯ ವಿದ್ಯಾಮಾನಗಳ ಕುರಿತಾಗಿ ಆಳವಾದ ಜ್ಞಾನವೊಂದಿರುವ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮತ್ತು ಪಠ್ಯ ಪುಸ್ತಕಗಳ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಪ್ರೊ. ಬರಗೂರು ರಾಮಚಂದ್ರಪ್ಪನವರು ಕನ್ನಡ ಭಾಷೆಯ ಅಭಿವೃದ್ಧಿ ಕುರಿತು ಆಡಿರುವ ಮಾತುಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ. ಅವರು ಕನ್ನಡ ತಾತ್ವಿಕತೆ ಎಂಬ ಲೇಖನದಲ್ಲಿ ‘’ ಕನ್ನಡಾಭಿಮಾನವೆಂದರೆ, ಕೇವಲ ಗತವೈಭವದ ಕನವರಿಕೆಯಲ್ಲ; ಕನ್ನಡಾಭಿಮಾನವು ಸದಾ ಸಮಕಾಲೀನವಾಗುತ್ತಾ ಹೋಗುವ ಸಾರ್ಥಕ ಸಂವೇದನೆ. ಕನ್ನಡನಾಡು ಶ್ರೀಗಂಧದ ನಾಡು ಎಂದು ವೈಭವೀಕರಿಸಲಾಗುತ್ತದೆ. ಆದರೆ, ಬಹುಪಾಲು ಮಂದಿ ಶ್ರೀಗಂಧದ ಮರವನ್ನು ನೋಡಲು ಸಾಧ್ಯವಾಗಿಲ್ಲ ಹಾಗಾದರೆ ಶ್ರೀಗಂಧವಿಲ್ಲದ ನಾಡು ಕನ್ನಡ ನಾಡು  ನಾಡಲ್ಲವೆ? ಕನ್ನಡ ನಾಡಿನಲ್ಲಿ ಶ್ರೀಗಂಧವೂ ಇದೆ, ಗೊಬ್ಬಳಿ (ಜಾಲಿ) ಮರವೂ ಇದೆ, ಕೋಗಿಲೆಯೂ ಇದೆ ಕಾಗೆಯೂ ಇದೆ, ಹರಿಯುವ ನದಿಗಳು, ಬತ್ತಿದ ಕೆರೆಗಳು, ವೈಭವೋಪೇತ ಬಂಗಲೆಗಳು, ಗುಡಿಸಲುಗಳು, ತುಂಬಿದ ಕಡಲು, ಹಸಿದ ಒಡಲು ಎಲ್ಲವೂ ಇವೆ. ಜಡವಾಗುವ ಮನೋಧರ್ಮವನ್ನು ರೂಪಿಸುವುದು ಕನ್ನಡಾಭಿಮಾನವಲ್ಲ, ಭೇದ ಭಾವಗಳಿಲ್ಲದ ಕರ್ನಾಟಕವನ್ನು ಕಾಣುವುದು ಕನ್ನಡಾಭಿಮಾನದ ಒಳನೋಟಬಾಗಬೇಕು’’ ಎಂದು ಅರ್ಥಗರ್ಭಿತ ಮಾತುಗನ್ನು ಆಡಿದ್ದಾರೆ.

ಈಗಾಗಲೇ  ಕನ್ನಡವೊಂದೇ ಅಧಿಕೃತ ಆಡಳಿತ ಭಾಷೆಯೆಂದು ಕರ್ನಾಟಕ ಸರ್ಕಾರವು 1966ಅಕ್ಟೋಬರ್ 10 ರಂದು ಆದೇಶ ಹೊರಡಿಸಿ ಹಂತ ಹಂತವಾಗಿ ಆಡಳಿದಲ್ಲಿ ಕನ್ನಡವನ್ನು ಜಾರಿಗೆ ತಂದಿದೆ. ವಿಧಾನ ಮಂಡಲದ ಉಭಯ ಸದನಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ನ್ಯಾಯಾಲಯಗಳು, ಆಡಳಿತ ವಿಭಾಗದ ಎಲ್ಲಾ ಹಂತದ ಕಚೇರಿಗಳಲ್ಲಿ ಕನ್ನಡ ಭಾಷೆ ಅಧಿಕೃತವಾಗಿ ಜಾರಿಯಲ್ಲಿದೆ. ಆದರೆ, ಮಕ್ಕಳ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ಅಧಿಕೃತವಾಗಿ ಜಾರಿ ತರಲು  ಹಲವಾರು ಅಡೆತಡೆಗಳು ಎದುರಾಗಿವೆ. ಖಾಸಾಗಿ ಶಿಕ್ಷಣ ಸಂಸ್ಥೆಗಳು ಸವೋಚ್ಛ ನ್ಯಾಯಾಲಯದ ಮೊರೆಹೋಗಿವೆ. ಶಿಕ್ಷಣ ತಜ್ಞರು ಹಾಗೂ ಮಕ್ಕಳ ತಜ್ಞರ ಅಭಿಪ್ರಾಯದಲ್ಲಿ ಮಕ್ಕಳು ಮಾತೃಭಾಷೆಯಲ್ಲಿ ಶಿಕ್ಷಣ ಕಲಿಯುವುದು ಸೂಕ್ತ ಎಂದು ಸಲಹೆ ನೀಡಿದ್ದರೂ ಸಹ ಮಕ್ಕಳ ಪೋಷಕರ ಪಾಲಿಗೆ ಇಂಗ್ಲೀಷ್ ಭಾಷೆಯೊಂದೇ ಬದುಕಿಗೆ ಮಾರ್ಗ ನಂಬಿಕೆಯು ಬಲವಾಗಿ ಬೇರೂರಿದೆ.

ಕನ್ನಡದ ಮಕ್ಕಳು ಮಾತೃಭಾಷೆಯಿಂದ ವಂಚಿತವಾದರೆ, ಮುಂದಿನ ದಿನಗಳಲ್ಲಿ ಕನ್ನಡ ಭಾಷೆಯೆಂಬುದು ಕೇವಲ ಸಂವಹನ ಭಾಷೆಯಾಗಿ ಮಾತ್ರ ಉಳಿಯುವ ಸಾಧ್ಯತೆಯುಂಟು. ಕಾರಣದಿಂದಾಗಿ ನಾಡಿನ ವಿದ್ವಾಂಸರು, ಶಿಕ್ಷಣ ತಜ್ಞರು ನಿಟ್ಟಿನಲ್ಲಿ ಗಂಭೀರವಾಗಿ  ಆಲೋಚಿಸುವ ಅವಶ್ಯಕತೆ ಇದೆ. ಶತಮಾನದ ಹಿಂದೆ ನಾಡಿನ ಅನಕ್ಷರಸ್ಥರಿಗೆ ಅಲಿಖಿತ ಕಾವ್ಯಗಳು ಮತ್ತು ಪುರಾಣ ಕಥನಗಳು ಇದ್ದವು ಅವುಗಳು ಪರೋಕ್ಷವಾಗಿ ಸಾಂಸ್ಕೃತಿಕ ಬದುಕನ್ನು ಜೀವಂತವಾಗಿಟ್ಟಿದ್ದವು. ಈಗಿನ ತಂತ್ರಜ್ಞಾನದ ಯುಗದಲ್ಲಿ ರೊಬಟ್ಗಳು, ಟಾಮ್ ಅಂಡ್ ಜೆರಿ, ಮಿಕ್ಕಿಮೌಸ್ ನಂತಹ ಕಾರ್ಯಕ್ರಮಗಳು ನಮ್ಮ ಮಕ್ಕಳ ಸಾಂಸ್ಕೃತಿಕ ಅಭಿರುಚಿಯ ಕೇಂದ್ರ ಬಿಂದುಗಳಾಗುವ ಅಪಾಯವಿದೆ.

ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ವಿಶೇಷ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)

ಡಾ.ಎನ್.ಜಗದೀಶ್ ಕೊಪ್ಪ

ಮಂಗಳವಾರ, ಅಕ್ಟೋಬರ್ 17, 2023

ಯುದ್ಧದೆದುರು ಮಂಡಿಯೂರಿದ ವಿಶ್ವ (ಅಂಗವಿಕಲ) ಸಂಸ್ಥೆ

 


ಕಳೆದ ಕಲವು ವಾರಗಳಿಂದ ನಡೆಯುತ್ತಿರುವ  ಇಸ್ರೇಲ್ ಪ್ಯಾಲೆಸ್ತೇನ್ ನಡುವಿನ ಯುದ್ಧ ಜಗತ್ತಿನ ಪ್ರಜ್ಞಾವಂತ ನಾಗರೀಕರ ನಿದ್ದೆಗೆಡಿಸಿದೆ. ಮತಿಗೆಟ್ಟವರ ಈ ಯುದ್ಧದ ಹಿಂಸೆಯಿಂದ ಮಕ್ಕಳು ಮತ್ತು ಮಹಿಳೆಯರು ಅಮಾಯಕರಾಗಿ ಅಸು ನೀಗುತ್ತಿರುವುದನ್ನು ನೋಡಿದರೆ ಮನಸ್ಸು ಮುದುಡಿ ಹೋಗುತ್ತದೆ.

ಈ ಯುದ್ಧ ಕುರಿತಾಗಿ ಭಾರತದಲ್ಲಿ ಎರಡು ಬಣಗಳಾಗಿ ಸಿಡಿದು ಹೋಗಿರುವ  ಕೆಲವರು ಇಸ್ರೇಲ್ ಪರವಾಗಿ ನಿಂತರೆ, ಮತ್ತೇ ಹಲವರು ಪ್ಯಾಲೆಸ್ತಾನ್ ಪರವಾಗಿ ನಿಂತು ತಬ್ಬಲಿಗಳಾದ ಪ್ಯಾಲೆಸ್ತೆನಿಯರು ಎಂದು ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇಸ್ರೇಲ್ ಪ್ಯಾಲೆಸ್ತೇನ್ ಯುದ್ಧ ಇತಿಹಾಸ ಈ ಜಗತ್ತಿಗೆ ಹೊಸದೇನಲ್ಲ. ಆದರೆ, ಕಳೆದ ಹತ್ತು ವರ್ಷಗಳಿಂದ ತಣ್ಣಗಿದ್ದ ಈ ಯುದ್ಧವನ್ನು ಪ್ಯಾಲೆಸ್ತೇನ್ ಗಾಜಾ ಪಟ್ಟಿ ಎಂಬ ಪ್ರದೇಶದಲ್ಲಿ ಹಮಾಸ್ ಎಂಬ ಬಂಡುಕೋರರು ಮೂರು ವಾರಗಳ ಹಿಂದೆ ಇಸ್ರೇಲ್ ಮೇಲೆ ಏಕಾಏಕಿ ಐನೂರು ರಾಕೇಟ್ ಗಳ ಮೂಲಕ ದಾಳಿ ಮಾಡಿ 298 ನಾಗರೀಕರನ್ನು ಹತ್ಯೆಗೈಯ್ಯುವುದರ ಮೂಲಕ ಬಡಿದೆಬ್ಬಿಸಿದರು.

ಕಳೆದ ಮೂರು ದಶಕಗಳಲ್ಲಿ ಇಸ್ರೇಲ್ ಪುಟ್ಟ ರಾಷ್ಟ್ರವಾಗಿದ್ದರೂ ಅದು ಆಧುನಿಕ ತಂತ್ರಜ್ಞಾನದಲ್ಲಿ ಅತ್ಯಂತ ಪ್ರಬಲ ರಾಷ್ಟ್ರವಾಗಿದೆ. ಜಗತ್ತಿನ ದೊಡ್ಡಣ್ಣ ಎನಿಸಿಕೊಂಡ ಅಮೇರಿಕಾದ ಕನಸಿನ ಕೂಸಾಗಿ ಬೆಳೆದಿರುವ  ಇಸ್ರೇಲ್ ರಾಷ್ಟ್ರವನ್ನು ಇಂದು ಪ್ಯಾಲೆಸ್ತೇನ್ ಮಾತ್ರವಲ್ಲ, ಮಧ್ಯ ಪ್ರಾಚ್ಯದ ಯಾವ ರಾಷ್ಟ್ರಗಳು ಮಣಿಸುವುದು ಅಷ್ಟು ಸುಲಭವಲ್ಲ.  ಈ ವಾಸ್ತವ ಸಂಗತಿ ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ. ಇದು ಹಮಾಸ್ ಉಗ್ರರನ್ನು ಸಾಕಿ ಸಲಹುತ್ತಿರುವ ಪ್ಯಾಲೆಸ್ತೇನ್ ಸರ್ಕಾರಕ್ಕೆ ಗೊತ್ತಿಲ್ಲವೆ? ಪ್ಯಾಲೆಸ್ತೇನಿಯರ ಮೂರ್ಖತನದಿಂದಾಗಿ ಇಂದು ಸಾವಿರಾರು ಅಮಾಯಕ ನಾಗರೀಕರು ಜೀವ ಬಲಿಕೊಡಬೇಕಿದೆ. ವಸ್ತು ಸ್ಥಿತಿ ಹೀಗಿರುವಾಗ ಇಸ್ರೇಲ್ ಅಥವಾ ಪ್ಯಾಲೆಸ್ತೇನ್ ಪರವಾಗಿ ನಿಂತು ವಾದಿಸುವುದು ಅವಿವೇಕದ ಪರಮಾವಧಿ. ಮನುಕುಲಕ್ಕೆ ಅನಿಷ್ಠವಾಗಿ ಪರಿಣಮಿಸಿರುವ ಯುದ್ಧ ಮತ್ತು ಹಿಂಸೆಯ ಕುರಿತಾಗಿ ನಾವು ಮಾತನಾಡಬೇಕಿದೆ.

ಆಗಿ ಹೋದ ಇತಿಹಾಸವನ್ನು ಕೆದುಕುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಅಮೇರಿಕಾದ ಮೂಲ ನಿವಾಸಿಗಳಾದ ರೆಡ್ ಇಂಡಿಯನ್ನರಿಗೆ ಮರಳಿ ಅಮೇರಿಕಾವನ್ನು ದೊರಕಿಸಿಕೊಡಲಾಗದು. ಈ ಇಪ್ಪತ್ತೊಂದನೆಯ ಶತಮಾನದ ಜಗತ್ತು ಅತ್ಯಾಧುನಿಕ ತಂತ್ರಜ್ಞಾನದ ಹೆಸರಿನಲ್ಲಿ ಆತ್ಮಹತ್ಯೆಯ ಮಾರ್ಗದಲ್ಲಿ ಶರವೇಗದಲ್ಲಿ ಚಲಿಸುತ್ತಿದೆ. ಮುಂದಿನ ಮೂರು ದಶಕಗಳ ಅವಧಿಯಲ್ಲಿ ಅಂದರೆ, 2050 ರ ಅವಧಿಗೆ ಈ ಭೂಮಂಡಲದ ಬಹು ಭಾಗ ಇರುತ್ತದೆ  ಎಂಬುವುದರ ಬಗ್ಗೆ ಹವಾಮಾನ ಹಾಗೂ ಭೂ ಗರ್ಭ ಶಾಸ್ತ್ರದ ತಜ್ಞರಿಗೆ ನಂಬಿಕೆಯಿಲ್ಲ. ಹವಾಮಾನ ಬದಲಾವಣೆಯಿಂದ ಬತ್ತಿ ಹೋದ ನದಿಗಳು, ಅಕಾಲಿಕ ಮಳೆಯಿಂದ ಅನಿರೀಕ್ಷಿತವಾಗಿ ತುಂಬಿ ಹರಿಯುವ ನದಿಗಳು, ನಿರಂತರವಾಗಿ ಜಗತ್ತಿನಾದ್ಯಂದ ಕಾಡ್ಗಿಚ್ಚಿನಿಂದಾಗಿ ಹತ್ತಿ ಉರಿಯುತ್ತಿರುವ ಅರಣ್ಯಗಳು, ಕರಗುತ್ತಿರುವ ಹಿಮಗುಡ್ಡೆಗಳು, ದಿನೇ ದಿನೇ ಸಂಭವಿಸುತ್ತಿರುವ ಭೂಕಂಪ  ಇವೆಲ್ಲವೂ ಭವಿಷ್ಯದ ಜಗತ್ತಿನ ಇತಿಹಾಸದ ಬಗ್ಗೆ ಈಗಾಗಲೇ ಸೂಚನೆ ನೀಡಿವೆ.


ಅಂತರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರಗಳ ನಡುವೆ ಸಮಸ್ಯೆಗಳು ಉದ್ಭವವಾದಾಗ  ಶಾಂತರೀತಿಯಲ್ಲಿ ಪರಿಹರಿಸಿಕೊಳ್ಳಲು ಸೃಷ್ಟಿಯಾದ ವಿಶ್ವಸಂಸ್ಥೆ ಎಂಬ ಸಂಘಟನೆ ಈಗ  ಅಂಗವಿಕಲ ಕೂಸಿನಂತಾಗಿದೆ. ಕಳೆದ  ಐವತ್ತು ವರ್ಷಗಳ ಇತಿಹಾಸದಲ್ಲಿನಾನು ಬಲ್ಲ ಹಾಗೆ ಒಂದೇ ಒಂದು ಸಮಸ್ಯೆಯನ್ನು ಬಗೆಹರಿಸಿಲ್ಲ. ಯಾವ ಯುದ್ಧಗಳನ್ನೂ ತಡೆಗಟ್ಟಲು ಇದರಿಂದ ಸಾಧ್ಯವಾಗಿಲ್ಲ. ಅಂತರಾಷ್ಟ್ರೀಯ ನ್ಯಾಯಾಲಯ ಎಂಬ ಭಾಗವು ವಿಶ್ವ ಸಂಸ್ಥೆಯಲ್ಲಿದ್ದು ಅಲ್ಲಿ ಅಣಕು ನ್ಯಾಯಾಲಯ ನಡೆಯುತ್ತದೆ. 1972 ರಲ್ಲಿ ಅಮೇರಿಕಾವು ವಿಯಟ್ನಾಂ ಮೇಲೆ ಯುದ್ಧ ಸಾರಿದ ಘಟನೆ, 2002 ರಲ್ಲಿ ಕುವೈತ್ ಮೇಲೆ ಇರಾಕ್ ದಾಳಿ ಮಾಡಿತು ಎಂ ಬ ಏಕೈಕ ಕಾರಣದಿಂದ ಮಾರಕಾಸ್ತ್ರಗಳನ್ನು ಹೊಂದಿರವ ರಾಷ್ಟ್ರ ಎಂದು  ಇರಾಕ್ ರಾಷ್ಟ್ರವನ್ನು ಘೋಷಿಸುವುದರ ಮೂಲಕ ಅಲ್ಲಿನ ಸರ್ವಾಧಿಕಾರಿ ಸದ್ದಾಂ ಹುಸೇನ್ ಅನ್ನು  ಅಮೇರಿಕಾ ಸದೆ ಬಡಿಯಿತು. ಆದರೆ, ಇರಾಕ್ ನಲ್ಲಿ ಯಾವುದೇ ರಸಾಯನಿಕ ಮಾರಕಾಸ್ತ್ರಗಳು ಪತ್ತೆಯಾಗಲಿಲ್ಲ. ಈ ಬಗ್ಗೆ ವಿಶ್ವ ಸಂಸ್ಥೆ ತುಟಿ ಬಿಚ್ಚಲಿಲ್ಲ. ನಮ್ಮ ನೆರೆಯ ಬರ್ಮಾ ರಾಷ್ಟ್ರದಲ್ಲಿ ಸೇನಾಧಿಕಾರಿಯ ಆಢಳಿತವಿದ್ದು, ಬೌದ್ಧ ಧರ್ಮದ ಬಂಡುಕೋರರಿಂದ ಲಕ್ಷಾಂತರ ಮಂಡಿ ರೋಹಿಂಗ್ಯಾ ಮುಸ್ಲಿಂ ಸಮುದಾಯದ ಜನತೆ ದೇಶ ಬಿಟ್ಟು ಬರಬೇಕಾಯಿತು. ಈ ಕುರಿತು ವಿಶ್ವ ಸಂಸ್ಥೆಯಲ್ಲಿ ಚರ್ಚೆಯಾಗಲಿಲ್ಲ. ಅಷ್ಟೇ ಏಕೆ? ಆಧುನಿಕ ಸರ್ವಾಧಿಕಾರಿ ಮತ್ತು ಹಿಟ್ಲರನ ಪ್ರತಿ ರೂಪದಂತೆ ಕಾಣುತ್ತಿರುವ ವ್ಲಾದಿಮೀರ್ ಪುಟಿನ್ ನಿರಂತರವಾಗಿ ಉಕ್ರೇನ್ ಮೇಲೆ ದಾಳಿ ನಡೆಸಿ ಸಾವಿರಾರು ಮಂದಿಗೆ ಕಾರಣನಾಗುತ್ತಿದ್ದಾನೆ. ಇದಕ್ಕೂ ವಿಶ್ವ ಸಂಸ್ಥೆಯಲ್ಲಿ ಪರಿಹಾರವಿಲ್ಲ.


ಎರಡನೆಯ ಮಹಾಯುದ್ಧದ ಸಮಯದಲ್ಲಿ ಜಗತ್ತಿನಲ್ಲಿ ಶಾಶ್ವತ ಶಾಂತಿ ನೆಲೆಸಬೇಕೆಂಬ ದೃಷ್ಟಿಕೋನದಿಂದ 1942 ರ ಲ್ಲಿ ಅಮೇರಿಕಾ. ರಷ್ಯಾ. ಇಂಗ್ಲೇಂಡ್ ಮತ್ತು ಪ್ರಾನ್ಸ್ ಹಾಗೂ ಚೀನಾ ರಾಷ್ಟçಗಳು ಒಪ್ಪಂಧಕ್ಕೆ  ಬಂದ ಫಲವಾಗಿ ರಾಷ್ಟçಗಳ ನಡುವಿನ ಕಲಹ ಮತ್ತು ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಲಾಯಿತು. 1943 ರ ಡಿಸಂಬರ್ ತಿಂಗಳಿನಲ್ಲಿ ರಷ್ಯಾದ ಅಧ್ಯಕ್ಷ ಸ್ಟಾಲಿನ್ ಮತ್ತು ಅಮೇರಿಕಾ ಅಧ್ಯಕ್ಷ ಪ್ರಾಂಕ್ಲಿನ್ ರೂಸ್ ವೆಲ್ಟ್ ಇರಾನಿನ ರಾಜಧಾನಿ ಟೆಹರಾನ್ ನಗರದಲ್ಲಿ ಪರಸ್ಪರ ಭೇಟಿಯಾಗಿ ಸಹಿ ಹಾಕಿದರು. ಇದರ ಫಲವೆಂಬಂತೆ  1945 ರ ಅಕ್ಟೋಬರ್ ತಿಂಗಳಿನಲ್ಲಿ ಐವತ್ತು ರಾಷ್ಟçಗಳ ಸದಸ್ಯತ್ವದೊಂದಿಗೆ ಅಮೇರಿಕಾದಲ್ಲಿ ವಿಶ್ವಸಂಸ್ಥೆ ಆರಂಭಗೊಂಡಿತು. ಸಹಜವಾಗಿ ಭದ್ರತಾಮಂಡಳಿಯ ಸದಸ್ಯ ರಾಷ್ಟçಗಳಾಗಿ ಐದು ಶಕ್ತಿ ರಾಷ್ಟçಗಳಾದ ಅಮೇರಿಕಾ, ರಷ್ಯಾ, ಇಂಗ್ಲೆಂಡ್, ಪ್ರಾನ್ಸ್ ಮತ್ತು ಚೀನಾ ಆಯ್ಕೆಯಾದವು. ಈಗ ವಿಶ್ವಸಂಸ್ಥೆಯಲ್ಲಿ 193 ಸದಸ್ಯರಾಷ್ಟçಗಳಿದ್ದರೂ ಸಹ ಎಲ್ಲಾ ಅಂತಿಮ ತೀರ್ಮಾನವು ಈ ಐದು ರಾಷ್ಟಗಳ ನಿರ್ಧಾರವನ್ನು ಅವಲಂಬಿಸಿದೆ. ವಿಶ್ವಸಂಸ್ಥಾಪನೆಯ ಉದ್ದೇಶಗಳಿಗೂ ಅದರ ಕಾರ್ಯಾಚರಣೆಗೂ ಯಾವುದೇ ಸಂಬಂಧವಿಲ್ಲ.  ಇಡೀ ಜಗತ್ತಿನಲ್ಲಿ ಯುದ್ಧ ಶಸ್ತಾçಸ್ರಗಳನ್ನು ಈ ಐದು ರಾಷ್ಟçಗಳು  ಮಾತ್ರ ಉತ್ಪಾದಿಸುತ್ತಿದ್ದು. ಇತರೆ ದೇಶಗಳಿಗೆ ಮಾರಾಟ ಮಾಡುವುದು ಇವುಗಳ ಮುಖ್ಯ ಗುರಿಯಾಗಿದೆ. ಹಾಗಾಗಿ ಯಾವ ರಾಷ್ಟಗಳು ನೆಮ್ಮದಿಯಿಂದ ಇರುವುದು ಅಥವಾ ಜನತೆಯ ಯೋಗಕ್ಷೇಮ ವಿಚಾರಿಸಿಕೊಳ್ಳುವುದು ಈ ರಾಷ್ಟçಗಳಿಗೆ ಬೇಕಾಗಿಲ್ಲ. ಈ ಕಾರಣದಿಂದಾಗಿ ಇವುಗಳ ಕನಸಿನ ಕೂಸುಗಳಾದ ವಿಶ್ವಸಂಸ್ಥೆ, ವಿಶ್ವಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಸೇರಿದಂತೆ ಬಹುತೇಕ ಜಾಗತಿಕ ಸಂಸ್ಥೆಗಳು ಅಮೇರಿಕಾ ಸೇರಿದಂತೆ ಪ್ರಬಲ ರಾಷ್ಟçಗಳ ಕಣ್ಣಳತೆಯಲ್ಲಿ ಕಾರ್ಯ ನಿರ್ವಹಿಸುವ ಗುಲಾಮಗಿರಿ ಸಂಸ್ಥೆಗಳಾಗಿವೆ.

ಈ ಸಂದರ್ಭದಲ್ಲಿ ನಾವು ಧ್ವನಿ ಎತ್ತಬೇಕಾಗಿರುವುದು ಯಾವುದೋ ಒಂದು ರಾಷ್ಟ್ರದ ಪರವಾಗಿ ಅಲ್ಲ. ಯುದ್ಧ ಮತ್ತು ಹಿಂಸೆಯ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದು ಬೃಹತ್ತಾದ ಕಹಳೆ ಇಂದಿನ ಅಗತ್ಯವಾಗಿದೆ.

ಚಿತ್ರ ಸೌಜನ್ಯ- ಸುಜಿತ್ ಕುಮಾರ್ ( ಡೆಕ್ಕನ್ ಹೆರಾಲ್ಡ್) ಮತ್ತು ಅಲೋಕ್ ( ಮುಂಬೈ) ಹಾಗೂ ರಾಯಿಟರ್ಸ್ ಸುದ್ದಿ ಸಂಸ್ಥೆ.