ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ಎಪ್ಪತ್ತು ವರ್ಷಗಳು ಕಳೆದು ಹೋದವು. ದೇಶದುದ್ದಕ್ಕೂ ಅನೇಕ ನದಿಗಳಲ್ಲಿ ನೀರು ಹರಿದು ಬತ್ತಿಹೋಗಿವೆ.
ಧರ್ಮ ನಿರಪೇಕ್ಷತೆ, ಜಾತ್ಯಾತೀತತೆ ಹಾಗೂ ವರ್ಗರಹಿತವಾದ ಮತ್ತು ಯಾವುದೇ ರೀತಿಯ ಅನುಪಾತವಿಲ್ಲದ ಸಮಾನವಾದ ಸಮಾಜ ಎಂಬುವುದು ಇನ್ನೂ ನಮ್ಮ ಪಾಲಿಗೆ ಕನಸಾಗಿದೆ. ಈ ಕುರಿತು ಮಾತನಾಡುವುದು ಅಥವಾ ಬರೆಯುವುದು ಸಹ ಈ ಕ್ಷಣದಲ್ಲಿ ದುಗುಡದ
ಸಂಗತಿಯಾಗಿದೆ.
ಈ ದೇಶಕ್ಕೆ ಹುಟ್ಟಿನಿಂದ ಅಂಟಿಕೊಂಡು ಬಂದಿರುವ ಹಿಂಸೆಯ ಹೀನ ಚರಿತ್ರೆಯೊಂದು ಮಾಯದ ಗಾಯವಾಗಿ ಇನ್ನೂ ಹಸಿ ಹಸಿಯಾಗಿ ಉಳಿದುಕೊಂಡಿದೆ. 1947 ರ ಆಗಸ್ಟ್ 15 ರ ಮಧ್ಯ ರಾತ್ರಿ ಹಿಂಸೆ ಮತ್ತು ಸಾವಿನ ಸೂತಕದಲ್ಲಿ ಸಮಯದಲ್ಲಿ
ಭಾರತವೆಂಬ ರಾಷ್ಟ್ರ ಉದಯವಾಯಿತು.
ಭಾರತವೆಂಬ ಉಪಖಂಡವನ್ನು
ಅಡ್ಡವಾಗಿ ಸೀಳಿ ಭಾರತ ಮತ್ತು ಪಾಕಿಸ್ತಾನವೆಂದು ವಿಭಜಿಸಿದಾಗ ಶತ ಶತಮಾನಗಳ ಕಾಲ ಒಂದು ಊರಿನಲ್ಲಿ, ಒಂದೇ ಬೀದಿಯಲ್ಲಿ ಹಾಗೂ ನೆರೆಹೊರೆಯಲ್ಲಿ ಅಣ್ಣ ತವ್ಮ್ಮಂದಿರಂತೆ ಬದುಕಿ ಬಾಳಿದ್ದ ಹಿಂದೂ- ಮುಸ್ಲಿಂರು ರಾತ್ರೋರಾತ್ರಿ ಪರಸ್ಪರ ಕತ್ತಿ ಹಿರಿದು ಬಡಿದಾಡಿಕೊಂಡರರು. ಈ ಅಘಾತಕಾರಿಯಾದ, ಅಮಾನುಷವಾದ ಘಟನೆಯಲ್ಲಿ ಸಂಭವಿಸಿದ ಕೊಲೆ ಮತ್ತು
ಅತ್ಯಾಚಾರಕ್ಕೀಡಾದ ನತದೃಷ್ಟರ ಲೆಕ್ಕ ಈವರೆಗೆ ಸಿಗಲಿಲ್ಲ, ಸುಮಾರು ಐವತ್ತೈದು ಲಕ್ಷ ಮಂದಿ ನೆಲೆ ಕಳೆದುಕೊಂಡು ತಾವು ಬದುಕಿ ಬಾಳಿದ ನೆಲದಲ್ಲಿ ಅತಂತ್ರರಾದರು.
ಅಂದು ಹರಿದ ಬಿಸಿನೆತ್ತರಿನ ಹೊಳೆಯಲ್ಲಿ ಮಿಂದೆದ್ದವರು ಭಾರತ ಮತ್ತು ಪಾಕಿಸ್ತಾನ ಎಂದು ರಕ್ತದಲ್ಲಿ ಅದ್ದಿದ ಲೇಖನಿಯಿಂದ ಹೆಸರು ಬರೆದು ನಾಮಕರಣ ಮಾಡಿದರು. ಇಂತಹ ರಕ್ತ ಸಿಕ್ತ ಅಧ್ಯಾಯಗಳನ್ನೊಳಗೊಂಡಿರುವ ಭಾರತದಲ್ಲಾಗಲಿ, ಪಾಕಿಸ್ತಾನದಲ್ಲಾಗಲಿ ಧರ್ಮ ರಹಿತ ಅಥವಾ ಜಾತಿ ರಹಿತ ಸಮಾಜದ ಬಗ್ಗೆ ಕನಸುಕಾಣುವುದು ಕೂಡ ನಿರಾಸೆಯ ಸಂಗತಿಯಾಗಿದೆ. ತನ್ನ ಜೀವಿತದಲ್ಲಿ ಕನಿಷ್ಟ ಅರ್ಧಶತಮಾನದಷ್ಟು ಕಾಲ ತನ್ನ ದೇಹವನ್ನು ಸ್ವತಃ ದಂಡಿಸಿಕೊಂಡು, ಅಹಿಂಸೆಯ ಮಾರ್ಗದಲ್ಲಿ ಹೋರಾಡುತ್ತಾ; ಗಂಧದ ಕೊರಡಿನಂತೆ ಜೀವತೇಯ್ದ ಮಹಾತ್ಮ ಗಾಂಧಿಯವರು ತಮ್ಮ ಕನಸು ಮನಸ್ಸಿನಲ್ಲಿ ಇಂತಹ ಸ್ವಾತಂತ್ರ್ಯವನ್ನು ಬಯಸಿರಲಿಲ್ಲ. ಈ ಕಾರಣಕ್ಕಾಗಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದಾಗ ಸಂಭ್ರಮಿಸದೆ, ಅವರು ಕಲ್ಕತ್ತ ನಗರದ ಬೀದಿ ಬೀದಿಗಳಲ್ಲಿ ಇಟ್ಟಿಗೆ, ಕಲ್ಲುಗಳಿಂದ ತುಂಬಿ ಹೋಗಿ ಮನುಷ್ಯರ ರಕ್ತದಿಂದ ತೊಯ್ದು ಹೋಗಿದ್ದ ರಸ್ತೆಗಳಲ್ಲಿ ನಡೆಯುತ್ತಾ, ಅನಾಥರ, ಸಂತ್ರಸ್ತರ
ಕಣ್ಣೀರಿಗೆ
ಕರವಸ್ತ್ರವಾಗುತ್ತಾ, ಅವರೊಳಗೆ ಬೆರೆತು
ಅನಾಮಿಕರಂತೆ ಉಳಿದು ಹೋದರು. ಆನಂತರ ಅವರು ಬದುಕಿದ್ದ ಕೇವಲ ಐದೂವರೆ ತಿಂಗಳು ಮಾತ್ರ. ಈ ಅವಧಿಯಲ್ಲಿ ಜಾತ್ಯಾತೀತ ಮತ್ತು ಧರ್ಮಾತೀತ ಸಮಾಜಕ್ಕಾಗಿ ಹಂಬಲಿಸುತ್ತಿದ್ದರು. ನೂರು ವರ್ಷ ಬದುಕುವ ಹಂಬಲ ಹೊತ್ತಿದ್ದ ಗಾಂಧೀಜಿಯವರು ನನಗೆ ಈ ಜನ್ಮ ಸಾಕು ಎನ್ನುವ ಹಂತ ತಲುಪಿದ್ದರು. ಇಂತಹ ಸಂದರ್ಭಕ್ಕಾಗಿ ಕಾಯುತ್ತಿದ್ದ ಹಾಗೂ ಧರ್ಮದ ಅಮಲನ್ನು ನತ್ತಿಗೇರಿಸಿಕೊಂಡಿದ್ದ ಹಂತಕನ ಗುಂಡಿಗೆ 1948 ರ ಜನವರಿ 30 ರಂದು ಎದೆಯೊಡ್ಡಿ ಬಲಿಯಾಗುವುದರು.
ಈ ಮೊದಲೇ ರಕ್ತದಿಂದ
ತೊಯ್ದು ಹಸಿಯಾಗಿದ್ದ ಭಾರತದ ನೆಲಕ್ಕೆ ತಮ್ಮ
ಮೂರು ಹನಿ ನೆತ್ತರನ್ನು
ಚೆಲ್ಲುವುದರ ಮೂಲಕ ಇಲ್ಲಿನ ನೆಲವನ್ನು
ಮತ್ತಷ್ಟು ಹಸಿಯಾಗಿಸಿ ನಿರ್ಗಮಿಸಿದರು.
ಇಂದು ಗಾಂಧಿಯ ನೆಪದಲ್ಲಿ ಅಹಿಂಸೆಯ ನೆಲೆಯಿಂದ ಜಾತ್ಯಾತೀತ ನಿಲುವನ್ನು, ಬುದ್ಧನ ಹೆಸರಿನಲ್ಲಿ ಶಾಂತಿಯನ್ನು ಮತ್ತು ಬಸವಣ್ಣನ ಸ್ಮರಣೆಯಲ್ಲಿ ವರ್ಗರಹಿತ ಸಮಾಜವೊಂದನ್ನು ನಿರ್ಮಿಸಲಾರದ ಅಸಹಾಯಕತೆಯ ಸ್ಥಿತಿಗೆ ನಾವು ದೂಡಲ್ಪಟ್ಟಿದ್ದೆವೆ. ಜೊತೆಗೆ ಮರಳಿ ಮನುಷ್ಯತ್ವದ ನೆಲೆಗೆ
ಹಿಂತಿರುಗಿ ಬರಲಾರದಷ್ಟು ಬಹುದೂರ ಸಾಗಿ ಬಂದಿರುವ ನಾವು; ಜಾತಿ ಇಲ್ಲವೆ
ಧರ್ಮದ ನೆಪದಲ್ಲಿ ಪರಸ್ಪರ ಇರಿದುಕೊಳ್ಳುತ್ತಾ, ನಮ್ಮ ನಮ್ಮ ಗುಡಿಸಲು ಮತ್ತು ಮನೆಗಳಿಗೆ ಬೆಂಕಿ ಹಚ್ಚಿಕೊಂಡು ಚಳಿ ಕಾಯಿಸುತ್ತಾ ಕೂತಿದ್ದೇವೆ. ಇಂತಹ ಅಮಾನುಷ ಕ್ರಿಯೆಗಳಿಗೆ ದೇಶಭಕ್ತಿ ಎಂತಲೋ ಇಲ್ಲವೆ, ಧರ್ಮ ಜಾಗೃತಿ ಎಂತಲೋ ಹೆಸರಿಟ್ಟಿದ್ದೇವೆ. ಮನೆ ಮತ್ತು ಮನಸ್ಸುಗಳನ್ನು ಹೊಡೆದು ಹಾಕುತ್ತಿರುವವರನ್ನು ಹುತಾತ್ಮರ ಪಟ್ಟಕ್ಕೇರಿಸುತ್ತಿದ್ದೇವೆ. ಭಾರತದಲ್ಲಿ
ಧರ್ಮತೀತವಾದ, ಜಾತ್ಯಾತೀತವಾದ ಹಾಗೂ
ವರ್ಗರಹಿತ ಸಮಾಜ ಕುರಿತು ಮಾತನಾಡುವವರು ಮತ್ತು ದೇಶಭಕ್ತಿ,
ರಾಷ್ಟ್ರೀಯತೆ, ಪ್ರಭುತ್ವ, ಹಿಂದೂರಾಷ್ಟ್ರ ಹೀಗೆ ಅನೇಕ ಪರಿಕಲ್ಪನೆ ಕುರಿತು ಮಾತನಾಡುವವರು ಉತ್ತರ-ದಕ್ಷಿಣವೆಂಬ
ಎರಡು ದ್ರುವಗಳಂತೆ ಬದುಕುತ್ತಿದ್ದಾರೆ. ಇವರ ನಡುವಿನ ಸೌಹಾರ್ಧ ಅಥವಾ ಸಂವಹನ ಸೇತುವೆ ಮುರಿದು ಬಿದ್ದು ಹಲವು ದಶಕಗಳು ಉರುಳಿಹೋದವು. ಅತಿರೇಕದ ತುತ್ತ ತುದಿಯೇರಿ ಕುಳಿತಿರುವ ಈ ಎರಡು ಗುಂಪುಗಳಿಗೆ ನಾವು ನಿರ್ಮಿಸಬೇಕಿರುವ ಸಮಾಜ ಹೇಗಿರಬೇಕು? ಅದು ಯಾವ ರೀತಿ ಇರಬೇಕು ಎಂಬುದರ ಕುರಿತು ನಿರ್ಧಿಷ್ಟವಾದ ಪರಿಕಲ್ಪನೆ ಇದ್ದಂತಿಲ್ಲ. ಜಾತ್ಯಾತೀತ ಸಮಾಜ ಕುರಿತು ಮಾತನಾಡುವವರು ಕಳೆದ ಮೂರು ದಶಗಳಿಂದ ಈ ದೇಶದ ಸಾಮಾಜಿಕ ಚಳುವಳಿಗಳು ಏಕೆ ವೈಫಲ್ಯ ಕಾಣುತ್ತಿವೆ ಎಂದು ಆತ್ಮಶೋಧನೆಯನ್ನು ಮಾಡಿಕೊಳ್ಳಲು ಪುರುಷೊತ್ತಿಲ್ಲದಂತೆ ಸಮುದ್ರದ ದೈತ್ಯ ಅಲೆಗಳ ಎದುರು ಮರಳಿನ ಗೋಪುರ ಕಟ್ಟುತ್ತಾ ಕುಳಿತಿದ್ದಾರೆ.
ಇಂದು ಧರ್ಮದ ಸೋಗಿನಲ್ಲಿ ಹುಟ್ಟು ಹಾಕುತ್ತಿರುವ ಹಿಂಸೆಯಾಗಲಿ, ಜಾತಿ ನೆಪದಲ್ಲಿ ಸಮಾಜವನ್ನು ಒಡೆಯುತ್ತಿರುವ ಕ್ರಿಯೆಯಾಗಲಿ ಈ ದೇಶದ ಸಂಸ್ಕತಿಯ ಲಕ್ಷಣವಲ್ಲ. ಇಲ್ಲಿ ಸಂಸ್ಕತಿ ಎಂದರೆ, ಕೇವಲ ಕಲೆ ಮತ್ತು ಸಾಹಿತ್ಯ ಎಂದು ವ್ಯಾಖ್ಯಾನಗೊಳುತ್ತಿದೆ.
ಈ ಸಂದರ್ಭದಲ್ಲಿ ಸಂಸ್ಕøತಿಯ ಪರಿಧಿಯನ್ನು ಭಾಷೆಗೆ, ಧರ್ಮಕ್ಕೆ ಮತ್ತು ಎಲ್ಲಾ ವರ್ಗದ ಹಾಗೂ ಎಲ್ಲಾ ಜಾತಿಯ ಸಮುದಾಯಗಳು ಒಳಗೊಂಡಿರುವ ಆಚಾರ, ವಿಚಾರ, ಅವರ ಆಹಾರ, ಉಡುಗೆ, ಬದುಕಿನ ಕ್ರಮ ಹೀಗೆ ಎಲ್ಲದಕ್ಕೂ ವಿಸ್ತರಿಸಬೇಕಿದೆ. ಜಾಗತೀರಣದ ಸವಲತ್ತುಗಳನ್ನು ಅತಿ ಸಂಭ್ರಮದಿಂದ ಅಪ್ಪಿಕೊಂಡಿರುವ ಮೇಲ್ವರ್ಗದ ಹಾಗೂ ಮಧ್ಯಮ ವರ್ಗದ ಜನ ಇಂದಿನ ಕ್ರೌರ್ಯ, ಹಿಂಸೆ ಮತ್ತು ಮತೀಯವಾದ ಹಾಗೂ ಕೋಮುವಾದಕ್ಕೆ ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ. ದೇಶದುದ್ದಕ್ಕೂ ಎಲ್ಲಾ ಜಾತಿಗಳು ಪುನಃ ಬಲಗೊಳ್ಳುತ್ತಿವೆ. ಇದಕ್ಕೆ ಪೂರಕವಾಗಿ ಮತ ಬ್ಯಾಂಕ್ ರಾಜಕಾರಣದಲ್ಲಿ ದೇಶದ ಎರಡು ರಾಜಕೀಯ ಪಕ್ಷಗಳಾದ ಕಾಂಗ್ರೇಸ್ ಮತ್ತು ಬಿ.ಜೆ.ಪಿ. ಸೇರಿದಂತೆ ಬಹುತೇಕ ಪ್ರಾದೇಶಿಕ ಪಕ್ಷಗಳು ಸಕ್ರಿಯವಾಗಿವೆ. ಜಾತಿಯ ಹೆಸರಿನಲ್ಲಿ ಎಲ್ಲರನ್ನು ಹತ್ತೊಂಬತ್ತನೆಯ ಶತಮಾನದ ಮೌಡ್ಯ ಮತ್ತು ಜಾತಿಯ ಶ್ರೇಣಿಕೃತ ಸಮಾಜದ
ಭಾರತಕ್ಕೆ ನಮ್ಮನ್ನು ಕೊಂಡೊಯ್ಯುತ್ತಿವೆ. ಇಂತಹ ಅಪಾಯಕಾರಿ ಸಂಗತಿಗಳ ಕುರಿತಂತೆ ನಮಗೆ ಸಾಂಸ್ಕøತಿಕ ಎಚ್ಚರವಿಲ್ಲದಿದ್ದರೆ “ ಜಾತ್ಯಾತೀತ” ಎಂಬ ಶಬ್ದವನ್ನು ನಾವು ಶಬ್ದಕೋಶದಿಂದ ಅಳಿಸಿಹಾಕುವ ದಿನ ದೂರವಿಲ್ಲ.
ವೇದ ಉಪನಿಷತ್ತುಗಳ ಕ್ರಿಸ್ತ ಪೂರ್ವ ಕಾಲದಲ್ಲಿ ಬಂಡೆದ್ದ ಚಾರ್ವಾಕ ಮತ್ತು ಹಿಂದೂ ಧರ್ಮ ಉತ್ತುಂಗಕ್ಕೇರಿದ್ದ ಕಾಲಘಟ್ಟದಲ್ಲಿ ಅದರಿಂದ ಸಿಡಿದೆದ್ದ ಗೌತಮ ಬುದ್ಧ ಇವರಿಗೆ ತಮ್ಮ ತಾತ್ವಿಕ ಭಿನ್ನಾಭಿಪ್ರಾಯಗಳ ನಡುವೆಯೂ ತಮ್ಮ ವಿರೋಧಿಗಳ ಜೊತೆ ಸಂವಹನ ಮತ್ತು ಚರ್ಚೆ ಸಾಧ್ಯವಾಗಿತ್ತು. ಆದರೆ,
ಆಧುನಿಕ ಶಿಕ್ಷಣ ಮತ್ತು ಪಾಶ್ಚಿಮಾತ್ಯ ಚಿಂತನೆಯೂ ಸೇರಿದಂತೆ, ಪೌರಾತ್ಯ ರಾಷ್ರಗಳ ಲೋಕ ಗ್ರ್ಪ್ರಹಿಕೆಗಳು ಇವೆಲ್ಲವೂ ನಮ್ಮಲ್ಲಿ ವಿವೇಕವನ್ನು, ತಾಳ್ಮೆಯನ್ನು ಹಾಗೂ ವಿವೇಚನೆಯನ್ನು ತುಂಬುವ ಬದಲಾಗಿ ಅಹಂಕಾರವನ್ನು ತುಂಬುತ್ತಿವೆ. ಇಂತಹ ಅಹಂಕಾರ ಮತ್ತು ಅಜ್ಞಾನಕ್ಕೆ ನಮ್ಮ ರಾಷ್ಟ್ರೀಯ ಪಕ್ಷಗಳು ಪರೋಕ್ಷವಾಗಿ ನೀರೆರೆದು ಪೋಷಿಸುತ್ತಿವೆ.
ಭಾರತದ ವಾಸ್ತವ ಚರಿತ್ರೆಯನ್ನು ಇದ್ದ ಹಾಗೆ ಒಪ್ಪಿಕೊಳ್ಳುವುದನ್ನು ನಿರಾಕರಿಸುತ್ತಿರುವ ಈ ದಿನಮಾನಗಳಲ್ಲಿ ತಮ್ಮ ತಮ್ಮ ಮೂಗಿನ ನೇರಕ್ಕೆ ಹಾಗೂ ತಮ್ಮ ಧರ್ಮ ಹಾಗೂ ಪಂಥಕ್ಕೆ ಅನುಕೂಲವಾಗುವಂತೆ ಇತಿಹಾಸವನ್ನು ಸೃಷ್ಟಿಸಿ ಅದನ್ನು ನಿಜವೆಂದು ಬಿಂಬಿಸಲಾಗುತ್ತಿದೆ. ಟಿಪ್ಪು ಸುಲ್ತಾನ್ ಕುರಿತ ವಿವಾದ ಮತ್ತು ಇತ್ತೀಚೆಗಿನ ಪದ್ಮಾವತಿ ಚಿತ್ರದ ವಿವಾದವನ್ನು ಗಮನಿಸಿದರೆ, ಭಾರತ ಮತ್ತು ಇಲ್ಲಿನ ಜನತೆ ಎತ್ತ ಸಾಗುತ್ತಿದ್ದಾರೆ ಎಂಬ ಅನುಮಾನ ಕಾಡತೊಡಗುತ್ತದೆ. ಈಗಾಗಲೇ ಸಂಘ ಪರಿವಾರದ ಪ್ರಾಬಲ್ಯವಿರುವ ರಾಜ್ಯಗಳ ಪ್ರಾಥಮಿಕ ಶಿP್ಪ್ಷಣಗಳ ಪಠ್ಯದಲ್ಲಿ ಇತಿಹಾಸವನ್ನು ತಿರುಚಿ ಬೋಧಿಸಲಾಗುತ್ತಿದೆ.
ಇಂತಹ ಗೊಂದಲದ ವಾತಾವರಣದಲ್ಲಿ ಗಂಭೀರವಾಗಿ ಯೋಚಿಸಬೇಕಾದ ವಿದ್ವಾಂಸರು, ಚಿಂತಕರು ಎಡ ಮತ್ತು ಬಲ ಎಂದು ಎರಡು ಗುಂಪುಗಳ ನಡುವೆ ಹಂಚಿ ಹೋಗಿದ್ದಾರೆ. ನಡು ಬೀದಿಯಲ್ಲಿ ನಿಂತು ಪ್ರತಿಭಟಿಸುವುದು ಅಥವಾ ಗಂಟಲರಿಯುವ ಹಾಗೆ ಘೋಷಣೆ ಕೂಗುವುದು ಮಾತ್ರ ಪ್ರಬಲ ವೈಚಾರಿಕತೆ ಇಲ್ಲವೆ, ನಂಬಿದ್ದ ತತ್ವ ಸಿದ್ಧಾಂತಗಳ
ಪ್ರತಿಪಾದನೆ ಎಂದು ನಂಬಿಸಲಾಗುತ್ತಿದೆ. ಇತಿಹಾಸದಲ್ಲಿ ಕ್ರಾಂತಿಯ ಹೆಸರಿನಲ್ಲಿ ಕೂಗಾಡಿದವರೆಲ್ಲಾ ಉರಿದು ಬೂದಿಯಾದರೇ ಹೊರತು, ನಿಗಿ ನಿಗಿಸುವ ಕೆಂಡವಾಗಲಿಲ್ಲ. ಇದು ನಮ್ಮ ಕಣ್ಣ ಮುಂದಿನ ವಾಸ್ತವ. ಇಂತಹ ನಿರಾಸೆಯ ವಾತಾವರಣದಲ್ಲಿ ಯಾರಾದರೂ ಜಾತ್ಯಾತೀತೆಯ ಕುರಿತು ಮಾತನಾಡಿದರೆ ಅವರನ್ನು ಅನುಮಾನದಿಂದ ನೋಡುವಂತಾಗಿದೆ
(ಜನಪದ
ಮಾಸ ಪತ್ರಿಕೆಯಲ್ಲಿ ಹಾಗೂ ಕರಾವಳಿ ಮುಂಜಾವು ಪತ್ರಿಕೆಯ ಜಗದಗಲ ಅಂಕಣ ಬರಹ)