ಸ್ವಾತಂತ್ರ್ಯ
ಪೂರ್ವ ಹಾಗೂ ನಂತರದ ದಿನಗಳಲ್ಲಿ
ಭಾರತದ ಬೆನ್ನೆಲುಬು ಎಂದು ಪರಿಗಣಿಸಲಾಗಿದ್ದ ಕೃಷಿಲೋಕ
ಇದೀಗ ತನ್ನ ಅಸ್ಮಿತೆ ಹಾಗೂ
ಅಸ್ತಿತ್ವವನ್ನು ಕಳೆದುಕೊಂಡು ಕವಲು ಹಾದಿಯಲ್ಲಿದೆ. ಈ ಸಂದರ್ಭದಲ್ಲಿ
ಭಾರತದ ಕೃಷಿವಲಯಕ್ಕೆ ಹೊಸದಾಗಿ ಅಪ್ಪಳಿಸಿರುವ ಕುಲಾಂತರಿ
ತಳಿಗಳ (Genetical modified Crops) ಪ್ರಯೋಗಕ್ಕೆ ತೆರೆದುಕೊಳ್ಳುತ್ತಿರುವ ಸಂದಿಗ್ಧ ಸ್ಥಿತಿಯಲ್ಲಿ ರೈತ
ಸಮುದಾಯ ತೊಳಲಾಡುತ್ತಿದೆ. ಈಗಾಗಲೇ ಕೃಷಿ ಎಂಬುದು
ಲಾಭದಾಯಕ ವೃತ್ತಿಯಲ್ಲ ಎಂಬ ನಿರ್ಧಾರಕ್ಕೆ ರೈತ
ಸಮುದಾಯ ಬಂದಿರುವಾಗ ಕುಲಾಂತರ ತಳಿ ಎಂಬ
ಪ್ರಯೋಗಕ್ಕೆ ಒಡ್ಡಿಕೊಳ್ಳಬೇಕಾದ ಅನಿವಾಂiÀರ್i ಸ್ಥಿತಿಗೆ
ಭಾರತದ ರೈತ ಸಿಲುಕಿದ್ದಾನೆ. ಇದು
ಕೇವಲ ಅವನೊಬ್ಬನ ಬದುಕಿನ ಅಳಿವು-ಉಳಿವಿನ
ಪ್ರಶ್ನೆಯಾಗಿರದೆ ಭಾರತದ ಆಹಾರ ಭಧ್ರತೆಯ
ಪ್ರಶ್ನೆಯಾಗಿ ಕೂಡ ಪರಣಮಿಸಿದೆ. ಜಾಗತಿಕ
ಮಟ್ಟದಲ್ಲಿ ಕಳೆದೊಂದು ದಶಕದಿಂದ ಹಲವು ವಾದ
ವಿವಾದಗಳನ್ನು ಸೃಷ್ಟಿಸಿ ಜಿಜ್ಞಾಸೆಗೆ ಕಾರಣವಾಗಿರುವ ಜೈವಿಕ ತಂತ್ರಜ್ಞಾನದ ಕುಲಾಂತರಿ
ತಳಿಗಳ ಪ್ರಯೋಗ ಇದೀಗ ಭಾರತದಲ್ಲಿಯೂ
ಸಹ ವಿಜ್ಞಾನಿಗಳ ಮತ್ತು ಪರಿಸರ ವಾದಿಗಳ
ನಡುವಿನ ಬೌದ್ಧಿಕ ಸಂಘರ್ಷಕ್ಕೆ ಕಾರಣವಾಗಿದೆ.
ಕಳೆದ
ಜುಲೈ ಹದಿನೆಂಟರಂದು ಭಾರತದ ಕುಲಾಂತರಿ ತಂತ್ರಜ್ಞಾನ
ಅನುಮತಿ ಸಮಿತಿಯು (Genetic Engineering Appraisal
Committee) ಭಾರತದಲ್ಲಿ ಅರವತ್ತು ಬಗೆಯ ಹಣ್ಣು,
ತರಕಾರಿ ಮತ್ತು ಆಹಾರ ಬೆಳೆಗಳ
ಕುಲಾಂತರಿ ತಳಿಗಳ ಪ್ರಯೋಗಕ್ಕೆ ಅನುಮತಿ
ನೀಡಿದಾಗ ಭಾರತದ ಕೃಷಿ ವಲಯದಲ್ಲಿ
ದೊಡ್ಡ ಸಂಚಲನ ಉಂಟಾಯಿತು. ಈಗಾಗಲೇ
ಬಳಕೆಯಲ್ಲಿರುವ ಆಹಾರ ಬೆಳೆಯಲ್ಲದ ಬಿ.ಟಿ. ಹತ್ತಿ ಬೆಳೆಯ
ಪ್ರಯೋಗವು ಭಾರತದ ರೈತ ಸಮುದಾಯವನ್ನು
ಅವನತಿಯ ಹಾದಿಗೆ ಕೊಂಡೊಯ್ದಿರುವಾಗ, ಇಂತಹ
ಅನುಮತಿ ಈ ದೇಶಕ್ಕೆ ಅಗತ್ಯವಿತ್ತೆ?
ಎಂಬ ಪ್ರಶ್ನೆ ಎಲ್ಲರನ್ನು ಕಾಡತೊಡಗಿದೆ.
ಕೇಂದ್ರದಲ್ಲಿ
ಅಸ್ತಿತ್ವದಲ್ಲಿರುವ, ನರೇಂದ್ರ ಮೋದಿ ನೇತೃತ್ವದ
ಎನ್.ಡಿ.ಎ. ಸರ್ಕಾರದ ಆಡಳಿತ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವ
ಸಂಘಪರಿವಾರದ ಶಾಖೆಗಳಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ,
ಸ್ವದೇಶಿ ಜಾಗರಣ್ ಮಂಚ್ ಮತ್ತು
ಭಾರತೀಯ ಕಿಸಾನ್ ಸಂಘ ಇವುಗಳ
ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ತೀವ್ರ
ವಿರೋಧ ವ್ಯಕ್ತ ಪಡಿಸಿದ ಹಿನ್ನಲೆಯಲ್ಲಿ
ಕುಲಾಂತರಿ ತಳಿಗಳ ಪ್ರಯೋಗಕ್ಕೆ ಇದೀಗ
ತಾತ್ಕಾಲಿಕ ತಡೆಯಾಜ್ಞೆ ಬಿದ್ದಿದೆ. ಆದರೆ ಇದು ಯಾವುದೇ
ಕ್ಷಣದಲ್ಲಿ ತೆರವಾದರೂ ಆಶ್ಚರ್ಯವಿಲ್ಲ. ಕಳೆದ ವರ್ಷ ಯು.ಪಿ.ಎ. ನೇತೃತ್ವದ
ಕೇಂದ್ರ ಸರ್ಕಾರದಲ್ಲಿ ಪರಿಸರ
ಖಾತೆ ಸಚಿವರಾದ ಜೈರಾಂ ರಮೇಶ್ರವರು ದೇಶದ ವಿವಿದೆಡೆ
ಕುಲಾಂತರಿ ತಳಿಗಳ ಪ್ರಯೋಗ ಕುರಿತಂತೆ
ಸಾರ್ವಜನಿಕ ಅಭಿಪ್ರಾಯಗಳನ್ನು ಸಂಗ್ರಹಿಸಿ ಜೊತೆಗೆ ಕೆಲವು ವಿಜ್ಞಾನಿಗಳ
ಶಿಫಾರಸ್ಸನ್ನು ಪರಿಗಣಿಸಿ ಅಂತಿಮವಾಗಿ ಬಿ.ಟಿ. ಬದನೆ
ಒಳಗೊಂಡಂತೆ ಇತರೆ ತರಕಾರಿ ಮತ್ತು
ಆಹಾರ ಬೆಳೆಗಳ ಪ್ರಯೋಗಕ್ಕೆ ತಡೆಯೊಡ್ಡಿದ್ದರು.
ಇಂತಹ ಅಡೆತಡೆಗಳ ನಡುವೆಯೂ ಸಹ ಭಾರತದ
ಕೆಲವು ಕೃಷಿ ವಿಜ್ಞಾನಿಗಳು ಕುಲಾಂತರಿ
ತಳಿಗಳು ಕುರಿತಂತೆ ತೋರುತ್ತಿರುವ ಅಪಾರ ಆಸಕ್ತಿ ಮತ್ತು ಉತ್ಸಾಹ
ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈಗಾಗಲೇ ಕೇಂದ್ರ ಸರ್ಕಾರದ
ಅನುಮತಿ ಪಡೆಯದೆ ಕರ್ನಾಟಕ ಧಾರವಾಡ
ಕೃಷಿ ವಿಶ್ವ ವಿದ್ಯಾಲಯವು ಬಿಟಿ.ಬದನೆ ಪ್ರಯೋಗ ಕೈಗೊಂಡು
ವಿವಾದದಲ್ಲಿ ಸಿಲುಕಿದೆ. ಇದರ ಜೊತೆಗೆ ಬೆಂಗಳೂರಿನ
ಕೃಷಿ ವಿ.ವಿ. ಸೇರಿದಂತೆ
ಕೊಯಮತ್ತೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ
ಬಿ.ಟಿ. ಬತ್ತ ಕುರಿತು
ಸಂಶೋಧನೆ ಮತ್ತು ಹರಿಯಾಣದ ಕರ್ನಾಲ್
ನಲ್ಲಿ ಅಲ್ಲಿನ ಕೃಷಿ ವಿ.ವಿ. ನೇತೃತ್ವದಲ್ಲಿ
ಗೋಧಿ ಕುರಿತಂತೆ ರಹಸ್ಯವಾಗಿ ನಡೆಯುತ್ತಿದ್ದ ಪ್ರಯೋಗಗಳನ್ನು ರೈತ ಸಮುದಾಯ ಪತ್ತೆ
ಹಚ್ಚಿದೆ. ಇದು ಜಾಗತಿಕ ಮಟ್ಟದಲ್ಲಿ
ಕುಲಾಂತರಿ ತಳಿಗಳ ಮಾತೃ ಸಂಸ್ಥೆಯಾದ
ಮಾನ್ಸಂಟೊ ಮತ್ತು ಭಾರತದ ಕೃಷಿ
ವಿಜ್ಞಾನಿಗಳ ಅನೈತಿಕ ಸಂಬಂಧವನ್ನು ಅನಾವರಣಗೊಳಿಸಿದೆ.
ಕುಲಾಂತರಿ
ತಳಿಗಳ ಬಗ್ಗೆ ಅತ್ಯುತ್ಸಹಾದಿಂದ ಮಾತನಾಡುವ
ನಮ್ಮ ಕೃಷಿ ವಿಜ್ಞಾನಿಗಳು
ಕಳೆದ ಒಂದು ದಶಕದಿಂದ ಭಾರತದಲ್ಲಿ
ನಡೆಯುತ್ತಿರುವ ಬಿ.ಟಿ. ಹತ್ತಿಯ
ಪ್ರಯೋಗದ ಪ್ರತಿಫಲವೇನು ಎಂಬುದರ ಕುರಿತು ಈ
ದೇಶದ ರೈತ ಸಮುದಾಯಕ್ಕೆ ಉತ್ತರ
ನೀಡಬೇಕಾಗಿದೆ. ಸಾಂಪ್ರದಾಯಿಕ ದೇಶಿ ಹತ್ತಿ ಬೆಳೆಯನ್ನು
ಕಾಡುತ್ತಿದ್ದ ಕಾಯಿಕೊರಕ ಹುಳುಗಳ ಬಾಧೆಯನ್ನು ಬಿ.ಟಿ. ಹತ್ತಿ ಅಲ್ಪಮಟ್ಟಿಗೆ
ನಿವಾರಿಸಿದ್ದರೂ ಸಹ, ಬಿ.ಟಿ.
ಹತ್ತಿಯ ಇಳುವರಿ ಪ್ರಮಾಣ ಪ್ರತಿ
ವರ್ಷ ಕಡಿಮೆಯಾಗುತ್ತಿದೆ. ಇದರ ಜೊತೆಗೆ ಅತ್ಯಂತ
ದುಬಾರಿಯಾದ ಬಿ.ಟಿ. ಹತ್ತಿಯ ಬಿತ್ತನೆ
ಬೀಜವೂ ಸೇರಿದಂತೆ, ರಸಾಯನಿಕ ಗೊಬ್ಬರ ಮತ್ತು
ಕೀಟನಾಶಕಗಳಿಗೆ ವಿನಿಯೋಗಿಸಿದ ಕೃಷಿ ಬಂಡವಾಳವನ್ನು ವಾಪಸ್
ಪಡೆಯಲಾರದೆ ರೈತ ಸಮುದಾಯ ಅತಂತ್ರರಾಗಿ
ಆತ್ಮಹತ್ಯೆಯ ಹಾದಿ ತುಳಿದಿದ್ದಾರೆ. ಮಹಾರಾಷ್ಟ್ರದ
ವಿದರ್ಭ ಪ್ರಾಂತ್ಯ ಸೇರಿದಂತೆ ಆಂಧ್ರದ ಮೇಡಕ್ ಹಾಗೂ
ಅದಿಲಾಬಾದ್ ಜಿಲ್ಲೆಗಳಲ್ಲಿ ತರಗೆಲೆಗಳಂತೆ ನೆಲಕ್ಕುರುಳುತ್ತಿರುವ ಬಹುತೇಕ ರೈತರು ಬಿ.ಟಿ. ಹತ್ತಿ ಬೆಳೆದ
ರೈತರೇ ಆಗಿರುವುದು ವಿಶೇಷ. ಇದೀಗ ಬಿ.
ಟಿ. ಹತ್ತಿಗೂ ಸಹ ದಾಳಿಯಿಡುತ್ತಿರುವ ಕಾಯಿಕೊರಕ ಹುಳ ಹಾಗೂ ತಿಗಣೆ, ಹೇನು ಮುಂತಾದ
ಕೀಟಗಳು ರಸಾಯನಿಕ ಕೀಟನಾಶಕವನ್ನು
ಜೀರ್ಣಿಸಿಕೊಳ್ಳುವ ಶಕ್ತಿಯನ್ನು
ವೃದ್ಧಿಸಿಕೊಂಡಿರುವುದನ್ನು ಸ್ವತಃ ಕೃಷಿ ವಿಜ್ಞಾನಿಗಳೇ
ಒಪ್ಪಿಕೊಂಡಿದ್ದಾರೆ.
ಅಮೇರಿಕಾ
ಮೂಲದ ಮಾನ್ಸಂಟೊ,
ಕಾರ್ಗಿಲ್ ಸೇರಿದಂತೆ ಹಲವಾರು ಬಹು ರಾಷ್ಟ್ರಿಯ
ಕಂಪನಿಗಳು ಜಗತ್ತಿನಲ್ಲಿರುವ ವೈವಿಧ್ಯಮಯ
ದೇಶಿ ತಳಿಗಳನ್ನು ನಾಶಪಡಿಸಿ, ಪರಂಪರಾನುಗತವಾಗಿ ಬಂದಿರುವ ರೈತರ ಬೀಜ
ಸ್ವಾಂತಂತ್ರ್ಯದ ಮೇಲೆ ಏಕ ಸ್ವಾಮ್ಯ
ಹಕ್ಕು ಸ್ಥಾಪಿಸಲು ಹೊರಟಿರುವುದು ವರ್ತಮಾನದ ಜಗತ್ತಿನಲ್ಲಿ ಗುಟ್ಟಾಗಿ ಉಳಿದಿಲ್ಲ. ಈ ಕಂಪನಿಗಳ ಆಮೀಷಕ್ಕೆ
ಒಳಗಾದ ವಿಜ್ಞಾನಿಗಳು ರೈತ ಸಮುದಾಯವನ್ನು ಮತ್ತು
ಜಾಗತಿಕ ಜೀವ ಜಾಲದ ಪರಿಸರವನ್ನು
ಬಲಿಕೊಡಲು ಹೊರಟಿರುವುದು ಮಾತ್ರ ನಿಜಕ್ಕೂ ವಿಪರ್ಯಾಸ.
ಭಾರತದಂತಹ
ಕೃಷಿ ಪ್ರಧಾನವಾದ ದೇಶದಲ್ಲಿ ಆಹಾರ ಬೆಳೆಗಳ ಜೊತೆಗೆ
ಹಣ್ಣು, ತರಕಾರಿಗಳ ಬೆಳೆಗಳ ಕುರಿತು ಕುಲಾಂತರಿ
ಪ್ರಯೊಗಕ್ಕೆ ಇನ್ನಿಲ್ಲದ
ಉತ್ಸಾಹ ತೋರುತ್ತಿರುವ ಕೃಷಿ ವಿಜ್ಞಾನಿಗಳು ಪ್ರಯೋಗಕ್ಕೆ
ಮೊದಲು ಈ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ.
ಬಿ.ಟಿ. ಬದನೆ ಸೇರಿದಂತೆ ಟಮೋಟೊ, ಬೆಂಡೆಕಾಯಿ ಹೀಗೆ
ವಿವಿಧ ತರಕಾರಿ ಬೆಳೆಗಳ ಕುಲಾಂತರಿ
ಪ್ರಯೋಗ ಅವಶ್ಯಕತೆ ಇದೆಯಾ? ಇವು ಆಹಾರದ
ಒಂದು ಭಾಗವೇ ಹೊರತು ಮನುಷ್ಯನ
ಹಸಿವು ನೀಗಿಸುವ ಆಹಾರ ಬೆಳೆಗಳಲ್ಲ. ಕುಲಾಂತರಿ
ತಳಿಯ ಹಣ್ಣು, ತರಕಾರಿ ಬೆಳೆಗಳಿಂದ
ಅಧಿಕ ಇಳುವರಿ ಪಡೆದ ರೈತ
ಸಮುದಾಯ ಇವುಗಳನ್ನು ಎಲ್ಲಿ ಮಾರಾಟ ಮಾಡಬೇಕು?
ಈಗಾಗಲೇ ಭಾರತದಿಂದ ರಫ್ತಾಗುವ ಹಣ್ಣು ಮತ್ತು ತರಕಾರಿಗಳಲ್ಲಿ
ಅಧಿಕ ಮಟ್ಟದ ರಸಾಯನಿಕ ವಿಷವಸ್ತುಗಳಿವೆ
ಎಂಬ ನೆಪ ಒಡ್ಡಿ ಅಮೇರಿಕಾ
ಸೇರಿದಂತೆ ಐರೋಪ್ಯ ರಾಷ್ಟ್ರಗಳು ನಿಷೇಧ
ಹೇರಿವೆ. ಈ ಸಂದರ್ಭದಲ್ಲಿ ಬಿ.ಟಿ. ಹಣ್ಣು ಮತ್ತು
ತರಕಾರಿ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಹೇಗೆ ರೂಪಿಸುತ್ತೀರಿ? ಉತ್ತರ
ಕರ್ನಾಟಕದ ಹಲವು
ಜಿಲ್ಲೆಗಳಲ್ಲಿ ಕಳೆದ ವರ್ಷ ಕನಕ
ಎಂಬ ಹೆಸರಿನ ಬಿ.ಟಿ. ಹತ್ತಿಯನ್ನು ಬೆಳೆದು
ಕೈ ಸುಟ್ಟುಕೊಂಡ ರೈತರಿಗೆ ನಿಮ್ಮ ಪರಿಹಾರ
ಮತ್ತು ಮಾರ್ಗೋಪಾಯವೇನು? ಕಳಪೆ ಹತ್ತಿಬೀಜ ಮಾರಿದ
ಫಲವಾಗಿ ಕರ್ನಾಟಕ ಸರ್ಕಾರದಿಂದ ನಿಷೇಧಿಷಲ್ಪಟ್ಟ ಮಹಾರಾಷ್ಟ್ರ
ಮೂಲದ ಮಹಿಕೊ
ಬೀಜ ಕಂಪನಿಯು ಮಾನ್ಸಂಟೊ ಬಹುರಾಷ್ಟ್ರೀಯ
ಕಂಪನಿಯ ಅಂಗ ಸಂಸ್ಥೆ ಎಂದು
ನಿಮಗೆ ತಿಳಿದಿಲ್ಲವೆ? ಅಮೇರಿಕಾ ಸೇರಿದಂತೆ ಜಗತ್ತಿನಾದ್ಯಂತ
ಕುಲಾಂತರಿ ತಳಿಗಳ ಆಹಾರ ಮತ್ತು
ಹಣ್ಣು ತರಕಾರಿಗಳನ್ನು ತಿರಸ್ಕರಿಸಿರುವಾಗ ಭಾರತದಲ್ಲಿ ನಿಮಗೆ ಇವುಗಳ ಕುರಿತು
ವ್ಯಾಮೋಹವೇಕೆ? ಎರಡು
ವರ್ಷಗಳ ಹಿಂದೆ ಅಮೇರಿಕಾ ಉಚಿತವಾಗಿ ನೀಡಲು ಹೊರಟ ಬಿ.ಟಿ. ಮೆಕ್ಕೆ ಜೋಳವನ್ನು ಹಸಿವಿಂದ
ಬಳಲುತ್ತಿದ್ದರೂ ಸಹ ಪಶ್ಚಿಮ ಆಫ್ರಿಕಾದ
ಬಡರಾಷ್ಟ್ರಗಳು ತಿರಸ್ಕರಿಸಿದ ಸಂಗತಿ ವಿಜ್ಞಾನಿಗಳಾದ ನಿಮಗೆ
ತಿಳಿದಿಲ್ಲವೆ? ಆಯಾ ಪ್ರದೇಶದ ಭೌಗೂಳಿಕ
ಪರಿಸರ ಮತ್ತು ಅಲ್ಲಿನ ಜನತೆಯ
ಆಹಾರ ಸಂಸ್ಕøತಿಗೆ ಅನುಗುಣವಾಗಿ
ಬೆಳೆಯುತ್ತಿದ್ದ ರೋಗ
ನಿರೋಧಕ ಶಕ್ತಿ ಪಡೆದ ಹಾಗೂ ಬರಗಾಲ
ಅಥವಾ ಮಳೆಗಾಲದಂತಹ ಅತಿವೃಷ್ಟಿ, ಅನಾವೃಷ್ಟಿ ತಡೆದುಕೊಳ್ಳುವ ದೇಶಿ ಬಿತ್ತನೆ ಬೀಜಗಳು ನಿಮ್ಮ
ಕುಲಾಂತರಿ ತಳಿ ಪ್ರಯೋಗದಲ್ಲಿ ಕಲುಷಿತಗೊಂಡಿಲ್ಲವೆ? ಅವುಗಳ
ಪರಿಶುದ್ಧತೆ ಮತ್ತು ಮೂಲಗುಣ ನಾಶವಾದರೆ
ಇದಕ್ಕೆ ಪರಿಹಾರ ಏನು?
ಜಾಗತಿಕ
ಮಟ್ಟದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರವನ್ನು ಉತ್ಪಾದಿಸುವುದು ಮತ್ತು ಜಾಗತಿಕ ಹಸಿವನ್ನು
ನೀಗಿಸುವುದು ನಮ್ಮ ಗುರಿ ಎಂಬ
ಪೊಳ್ಳು ಘೋಷಣೆಗಳನ್ನು ಸಾರುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ಜಗತ್ತಿನ ರೈತರ ಬೀಜ
ಸ್ವಾತಂತ್ರ್ಯವನ್ನು ಕಸಿಯುವುದರ ಮೂಲಕ ಏಕರೂಪಿ ಬೆಳೆ
ಮತ್ತು ಏಕರೂಪದ ಆಹಾರ ಸಂಸ್ಕøತಿಯನ್ನು ಹೇರುತ್ತಿರುವುದು ಸುಳ್ಳಲ್ಲ.
ಭಾರತದಲ್ಲಿ
ಅಸ್ತಿತ್ವದಲ್ಲಿರುವವ ಕುಲಾಂತರಿ ತಂತ್ರಜ್ಞಾನ ಅನುಮೋದನೆ ಸಮಿತಿಯ ಸದಸ್ಯರ ವರ್ತನೆಗಳು
ಸಹ ಇತ್ತೀಚೆಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ.
ಭಾರತದ ಶ್ರೇಷ್ಠ ಕೃಷಿ ವಿಜ್ಞಾನಿಗಳಲ್ಲಿ
ಒಬ್ಬರಾದ ಡಾ.ಎಂ.ಎಸ್.
ಸ್ವಾಮಿನಾಥನ್ ಅವರು, ಭಾರತದಲ್ಲಿ ಕುಲಾಂತರಿ
ಬೆಳೆಗಳ ಪ್ರಯೋಗಕ್ಕೆ ಮುನ್ನ, ದೇಶದಲ್ಲಿರುವ ಎಲ್ಲಾ
ಬಗೆಯ ಆಹಾರ
ಬೆಳೆಗಳನ್ನೂ ಒಳಗೊಂಡಂತೆ ಹಣ್ಣು ಮತ್ತು ತರಕಾರಿಗಳ
ಸಾಂಪ್ರದಾಯಕ ದೇಶಿ ಬಿತ್ತÀನೆ
ಬೀಜಗಳನ್ನು ಜೋಪಾನವಾಗಿ ಸಂಗ್ರಹಿಸಿಡಬೇಕು
ಹಾಗೂ ಇವುಗಳ
ರಕ್ಷಣೆಗಾಗಿ ದೇಶದ ಹಲವು ಭಾಗಗಳಲ್ಲಿ ದೇಶಿ
ಬಿತ್ತನೆ ಬೀಜಗಳ ಬ್ಯಾಂಕ್ ಗಳನ್ನು
ಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಸಲಹೆ
ನೀಡಿದ್ದರು. ಆದರೆ, ಈವರೆಗೂ
ಯಾರೊಬ್ಬರೂ ದೇಶಿ ಬಿತ್ತನೆ ಬೀಜದ
ತಳಿಗಳ ಬಗ್ಗೆ ತಲೆಕೆಡಿಸಿಕೊಂಡ ಉದಾಹರಣೆಗಳಿಲ್ಲ.
ಈ ಕಾರಣಕ್ಕಾಗಿ ಭಾರತದ
ಸರ್ವೋಚ್ಛ ನ್ಯಾಯಾಲಯವು ಕಳೆದ ವರ್ಷ ಹಿರಿಯ
ವಿಜ್ಞಾನಿ ಡಾ. ಪುಷ್ಪಾ ಭಾರ್ಗವ
ಅವರನ್ನು ಕುಲಾಂತರಿ ತಂತ್ರಜ್ಞಾನ ಅನುಮೋದನಾ ಸಮಿತಿಗೆ ವಿಶೇಷ ಆಹ್ವಾನಿತರಾಗಿ
ನೇಮಿಸಿತು. ಇವರು ನೇಮಕಗೊಂಡನಂತರ ಅನುಮೋದನಾ
ಸಮಿತಿಯ ಹುಳುಕುಗಳು ಮತ್ತು ತಪ್ಪು ನಿರ್ಧಾರಗಳು
ಒಂದೊಂದಾಗಿ ಹೊರಬರುತ್ತಿವೆ.
ಬಿ.ಟಿ. ಬದನೆ ಕುರಿತು
ಇಲಿಗಳ ಮೇಲೆ ನಡೆಸಿರುವ ಪ್ರಯೋಗವು
ನಿಖರವಾಗಿಲ್ಲ ಮತ್ತು ಡಾ. ಶಶಿಕೇರನ್
ಎಂಬ ವಿಜ್ಞಾನಿಯ ನೇತೃತ್ವದಲ್ಲಿ ಕೇವಲ ಇಪ್ಪತ್ತು ಇಲಿಗಳ
ಮೇಲೆ ನಡೆಸಿರುವ ಪ್ರಯೋಗವಾಗಲಿ, ಫಲಿತಾಂಶವಾಗಲಿ ನಂಬಿಕೆಗೆ ಅರ್ಹವಲ್ಲ ಎಂದಿರುವ ಡಾ, ಪುಪ್ಷಭಾರ್ಗವ,
ತಂತ್ರಜ್ಞಾನ ಸಮಿತಿಯ ಮಾರ್ಗದರ್ಶಿ ಸೂತ್ರಗಳು
ಸಹ ಪರಿಣಾಮಕಾರಿಯಾಗಿರದೆ
ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದಿದ್ದಾರೆ.
1960 ಮತ್ತು 70 ರ
ದಶಕದಲ್ಲಿ ಭಾರತದಲ್ಲಿ ನಡೆದ ಹಸಿರು ಕ್ರಾಂತಿಯ
ಪ್ರಯೋಗಗಳು ಸಕಾರದ ಸಾರ್ವಜನಿಕ ಸಂಸ್ಥೆಗಳಲ್ಲಿ
ಪಾರದರ್ಶಕವಾಗಿ ನಡೆದಿದ್ದವು. ಗೋಧಿ ಮತ್ತು ಬತ್ತದ
ಬೆಳೆಗಳ ಕುರಿತ ಪ್ರಯೋಗಗಳು ಫಲಿತಾಂಶಗಳು
ಎಲ್ಲರಿಗೂ ದೊರಕುವಂತಿದ್ದವು. ಆದರೆ, ಕಳೆದ ಒಂದು
ದಶಕದಿಂದ ಕೃಷಿ ಕುರಿತ ಎಲ್ಲಾ
ವಿಧವಾದ ಸಂಶೋಧನೆಗಳು ಮತ್ತು ಪ್ರಯೋಗಗಳು ಖಾಸಾಗಿ
ಕಂಪನಿಗಳ ಪಾಲಾಗಿರುವ ಪರಿಣಾಮ ನಮ್ಮ ಬಹುತೇಕ
ಕೃಷಿ ವಿಜ್ಞಾನಿಗಳು ಇವುಗಳ ಫಲಾನುಭವಿಗಳಾಗಿದ್ದಾರೆ. ಇವರಿಗೆ ಒಂದು
ನೆಲದ ಸಂಸ್ಕøತಿ.ಗಿಂತ
ಅಥವಾ ಸಮುದಾಯದ ಹಿತಾಸಕ್ತಿಗಿಂತ
ತಮ್ಮ ವೈಯಕ್ತಿಕ ಹಿತಾಸಕ್ತಿಗಳು ಮುಖ್ಯವಾದಂತಿದೆ. ಹಾಗಾಗಿ ರಹಸ್ಯವಾಗಿ ನಡೆಯುತ್ತಿರುವ
ಕುಲಾಂತರಿ ತಳಿಗಳ ಪ್ರಯೋಗ ಮತ್ತು
ಪ್ರಮಾದಕ್ಕೆ ಜಗತ್ತಿನ ರೈತ ಸಮುದಾಯ
ನೇರವಾಗಿ ನೇರ ಬಲಿಯಾಗುತ್ತಿದ್ದರೆ, ನಾವು
ಮೂಕ ಸಾಕ್ಷಿಗಳಾಗುತ್ತಿದ್ದೆವೆ.