ಸೋಮವಾರ, ಆಗಸ್ಟ್ 18, 2014

ನಲ್ಮೆಗೆ ಮತ್ತೊಂದು ಹೆಸರು ನಲ್ಲೂರ್ ಪ್ರಸಾದ್.

                 

                       ಮನವೆ ಲಿಂಗವಾದ ಬಳಿಕ ಇನ್ನಾರ ನೆನೆವುದಯ್ಯಾ?
                       ಭಾವವೆ ಐಕ್ಯವಾದ ಬಳಿಕ ಬಯಸುವುದಿನ್ನಾರನು?
                       ಭ್ರಮೆಯಳಿದ ನಿಜವು ಸಾಧ್ಯವಾದ ಬಳಿಕ
                       ಅರಿವುದಿನ್ನಾರನು ಗುಹೇಶ್ವರಾ?
                                                     :- ಅಲ್ಲಮ ಪ್ರಭು

ಅವು 1970 ದಶಕದ ದಿನಗಳು. ಬಾಲ್ಯದ ಹಸಿವು, ಬಡತನ ಮತ್ತು ಅಪಮಾನಗಳಿಂದ ಘಾಸಿಗೊಂಡಿದ್ದ ನಾನು ನರಕದಿಂದ ಪಾರಾಗಲು ಇರುವ ಏಕೈಕ ಮಾರ್ಗ ಅಕ್ಷರ ಎಂದು ನಂಬಿಕೊಂಡಿದ್ದಕಾಲ. 1972 ರಲ್ಲಿ ಪ್ರಕಟವಾದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶದ  ನಂತರ ನನ್ನನ್ನು ಓದಿಸಲಾಗದೆ ಅಸಹಾಯಕಾಗಿದ್ದ ನನ್ನಪ್ಪ, ಎರಡು ವರ್ಷಗಳ ಕಾಲ ನನ್ನನ್ನು ಹಸು ಮತ್ತು ಕುರಿ ಮೇಯಿಸಲು ಹಾಕಿದ್ದ. (ನನ್ನೂರು ಕೊಪ್ಪದಿಂದ ಎಂಟು ಕಿಲೋಮೀಟರ್ ದೂರದ ಬೆಸಗರಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಪ್ರತಿದಿನ ಹದಿನಾರು ಕಿ.ಮಿ. ಬರಿಗಾಲಲ್ಲಿ ನಡೆದು ಹೈಸ್ಕೂಲ್ ಮುಗಿಸಿದ್ದೆ.) ಎರಡು ವರ್ಷಗಳಲ್ಲಿ ನಮ್ಮ ತೋಟದಲ್ಲಿ ಒಣಗಿ ಬೀಳುತ್ತಿದ್ದ ತೆಂಗಿನ ಗರಿಗಳನ್ನು ಹಳ್ಳದ ನೀರಿನಲ್ಲಿ ನೆನೆ ಹಾಕಿ ನಂತರ ಎಣೆದು, ನನ್ನೂರಿನ ಭಾನುವಾರದ ಸಂತೆಯಲ್ಲಿ ಒಂದು ರೂಪಾಯಿಗೆ ನಾಲ್ಕು ಉಂಡೆಯಂತೆ ದಲಿತರಿಗೆ ಮಾರಾಟ ಮಾಡುತ್ತಿದ್ದೆ. (ಒಂದು ಉಂಡೆಯೆಂದರೆ ಎರಡು ಹೆಣೆದ ಗರಿಗಳು) ಹೀಗೆ ಉಳಿಸಿದ ಹಣದಲ್ಲಿ ಮತ್ತೇ ಬೆಸಗರಹಳ್ಳಿಯ ಸರ್ಕಾರಿ ಕಾಲೇಜಿಗೆ 1976 ರಲ್ಲಿ ಪಿ.ಯು.ಸಿ. ಗೆ ಸೇರ್ಪಡೆಯಾಗಿ 1978 ರಲ್ಲಿ ತೇರ್ಗಡೆಯಾಗಿದ್ದೆ.
ಪದವಿ ಓದಲು ಮತ್ತೇ ನನ್ನ ಬಡತನ ಅಡ್ಡಿಯಾದಾಗ ಬೆಂಗಳೂರಿನ ಚಾಮರಾಜಪೆಟೆಯಲ್ಲಿದ್ದ ನನ್ನ ದೊಡ್ಡಮ್ಮನ ಮಗಳು ಮನೆ ಹೊಕ್ಕು ಅಕ್ಕ ಮತ್ತು ಭಾವನ ಬಳಿ ಒಂದು ಹಿಡಿ ಅನ್ನ ಮತ್ತು ಒಂದಿಷ್ಟು ಅಕ್ಷರಕ್ಕಾಗಿ ಅಕ್ಷರಶಃ ಅಂಗಲಾಚಿದ್ದೆ. ಅವರು ತೋರಿದ ಕರುಣೆ, ಪ್ರೀತಿ ಮತ್ತು  ವಿಶ್ವಾಸದಿಂದ ಮನೆಯಿಂದ (ಮಕ್ಕಳ ಕೂಟದ ಬಳಿ) ಕೂಗಳತೆಯಲ್ಲಿದ್ದ ವಿ.ವಿ.ಪುರಂ ಸಂಜೆ ಕಾಲೇಜಿಗೆ 1978 ಜುಲೈ ತಿಂಗಳಿನಲ್ಲಿ ಸೇರ್ಪಡೆಯಾಗಿದ್ದೆ. ನನ್ನ ಭಾವನವರು ತಮ್ಮ ಸ್ನಹಿತರ ಮೂಲಕ ಗಾಂಧಿನಗರದ ಕಿಸಾನ್ ಸೀಡ್ಸ್ ಕಾರ್ಪೊರೇಶನ್ ಎಂಬ ಸಂಸ್ಥೆಯಲ್ಲಿ ಒಂದು ಕೆಲಸವನ್ನು ಕೊಡಿಸಿಕೊಟ್ಟಿದ್ದರು. ಹೀಗೆ ಬೆಂಗಳೂರು ಎಂಬ ಮಾಯಾನಗರಿಯಲ್ಲಿ ತಬ್ಬಲಿಯಂತೆ ಅನಾಥನಾಗಿ, ಬಡತನವೆಂಬ ನರಕದ ಬಾಗಿಲು ದಾಟಲು ವಿದ್ಯೆಯೊಂದೇ ಅಂತಿಮ ಎಂದು ನಾನು ನಂಬಿಕೊಂಡಿದ್ದ ಕಾಲದಲ್ಲಿ ನನಗೆ ನಲ್ಲೂರು ಪ್ರಸಾದ್ ಎಂಬ ವಿಸ್ಮಯಕಾರಿ ಅಧ್ಯಾಪಕನೊಬ್ಬನ  ದರ್ಶನವಾಯಿತು. ಜಾನಪದ ತಜ್ಞರೆಂದು ಹೆಸರಾದ ಮಂಡ್ಯ ಜಿಲ್ಲೆಯ  ಡಿ.ಲಿಂಗಯ್ಯನವರು ಪ್ರಾಂಶುಪಾಲರಾಗಿದ್ದ ಸಂಜೆ ಕಾಲೇಜಿನ ತರಗತಿಗೆ ನಾನು ಹಾಜರಾಗುವ ವೇಳೆ ಅದೇ ಕಲಾ ಮತ್ತು ವಿಜ್ಞಾನ ಕಾಲೇಜಿನ ಮುಂದೆ ಜುಬ್ಬ ಪೈಜಾಮ ಧರಿಸಿದ ಎತ್ತರ ಹಾಗೂ ಬಲಿಷ್ಟ ಕಾಯದ ನಲ್ಲೂರು ಪ್ರಸಾದ್ರವರು ಸಿಗರೇಟ್ ಸೇದುತ್ತಾ ತಮ್ಮ ಮುಂದೆ ಜಮಾಯಿಸಿದ ಶಿಷ್ಯ ಕೋಟಿಯ ಎದೆಗೆ  ತಮ್ಮ ಎತ್ತರದ ಗಡಸು ಧ್ವನಿಯಲ್ಲಿ ವೈಚಾರಿಕತೆಯ ಬೀಜವನ್ನು ಬಿತ್ತುತ್ತಿದ್ದರು. ಹಳ್ಳಿಗಾಡಿನಿಂದ ಬಂದು ಕೀಳರಿಮೆಯಿಂದ ಬಳಲುತ್ತಿದ್ದ ಹುಡುಗರಿಗೆ ಅಪ್ಪಟ ಗ್ರಾಮೀಣ ಭಾಷೆಯಲ್ಲಿ ಪ್ರೀತಿಯಿಂದ ಗದರುತ್ತಾ, ಬೈಯುತ್ತಾ ಆತ್ಮ ವಿಶ್ವಾಸ ತುಂಬುತ್ತಿದ್ದರು. ವಿ.ವಿ. ಪುರಂ ಕಲಾ ಮತ್ತು ವಿಜ್ಞಾನ  ಕಾಲೇಜಿನಲ್ಲಿ ತಿಂಗಳಿಗೆ ಕನಿಷ್ಟ ಎರಡಾದರೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಟಕ, ಸಂಗೀತ, ಜಾನಪದ ಹಾಡುಗಳು, ಕನ್ನಡ ಸಾಹಿತ್ಯ ಕುರಿತಂತೆ ಚರ್ಚೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಕಾಲದಲ್ಲಿ ಸಂಜೆ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮ ಜಾರಿಯಲ್ಲಿ ಇರದಿದ್ದ ಕಾರಣ ನಾನು, ನನಗೆ ಅರ್ಥವಾಗದ ಅರ್ಥಶಾಸ್ತ್ರ, ಸಮಾಜ ಶಾಸ್ತ್ರ ತರಗತಿಗಳಿಂದ ತಪ್ಪಿಸಿಕೊಂಡು   ನಲ್ಲೂರ್ ಪ್ರಸಾದ್ ಅವರ ಸಾಂಸ್ಕøತಿಕ ಚಟುವಟಿಕೆಗಳಿಗೆ ಸಾಕ್ಷಿಯಾಗುತ್ತಿದ್ದೆನೇರ ಪರಿಚಯವಿಲ್ಲದ ನಲ್ಲೂರ್ ಪ್ರಸಾದ್ ಅವರನ್ನು ನಾನು ಆರಂಭದ ಕಂಡ  ದಿನಗಳ ನೆನಪುಗಳಿವು.

ದಶಕದ ನಂತರ ಒಬ್ಬ ಪತ್ರಕರ್ತನಾಗಿ, ಕವಿಯಾಗಿ ಬೆಂಗಳೂರಿನ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಅವರ ಸ್ನೇಹ ವಲಯಕ್ಕೆ ನಾನೂ ಸಹ ಸೇರ್ಪಡೆಯಾದೆ. ಸದಾ ತಾಯಿ ಕೊಳಿಯೊಂದು ತನ್ನ ಮರಿಗಳನ್ನು ಜೊತೆಯಲ್ಲಿ ಕರೆದುಕೊಂಡು ತಿರುಗುವ ಹಾಗೆ ಶಿಷ್ಯರನ್ನು ಕಟ್ಟಿಕೊಂಡು ಓಡಾಡುತ್ತಿದ್ದ ನಲ್ಲೂರ್ ಪ್ರಸಾದ್, ನಾಡಿನ ಮೂಲೆ ಮೂಲೆಯಿಂದ ಬೆಂಗಳೂರು ನಗರಕ್ಕೆ ಬಂದು ದಿಕ್ಕೆಟ್ಟವರಂತೆ ಕಾಣುತ್ತಿದ್ದ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಅಪ್ಪಟ ಹಳ್ಳಿ ಭಾಷೆಯಲ್ಲಿ ಬೈಯುತ್ತಾ, ಆತ್ಮವಿಶ್ವಾಸ ತುಂಬುತ್ತಾ ಬದುಕುವ ಬಗೆಯನ್ನು ಹೇಳಿಕೊಡುತ್ತಿದ್ದರು. ಕಾರಣಕ್ಕಾಗಿ ಅವರ ಹೃದಯ ವೈಶಾಲ್ಯತೆಗೆ ಮಾರುಹೋಗಿದ್ದೆ. ಮೇಲುನೋಟಕ್ಕೆ ಅಪ್ಪಟ ಗೌಡನಂತೆ ಕಾಣುವ ನಲ್ಲೂರ್ಪ್ರಸಾದ್  ಅವರ ನಡೆ ಮತ್ತು ನುಡಿಯಲ್ಲಿ ನಾನು ತಾಯ್ತನದ ಹೆಂಗರುಳನ್ನು ನಾನು ಕಂಡುಕೊಂಡಿದ್ದೆ.
 ನನಗಿಂತ ಒಂಬತ್ತು ವರ್ಷ ದೊಡ್ಡವರಾದ ನಲ್ಲೂರ್ ಪ್ರಸಾದ್ ಅವರನ್ನು ಸಾರ್ ಎಂದು ಕರೆಯುತ್ತಿದ್ದ ನನಗೆ ಮುಂದಿನ ದಿನಗಳಲ್ಲಿ ಅಣ್ಣಾ ಎಂದು ಕರೆಯುವ ಸಂದರ್ಭವೂ ಒದಗಿ ಬಂದಿತು. ಕನ್ನಡ ಕಥಾಲೋಕದ ದಿಗ್ಗಜ ಎನಿಸಿಕೊಂಡ ನನ್ನ ಮಂಡ್ಯ ಜಿಲ್ಲೆಯ ಕಥೆಗಾರ ಡಾ.ಬೆಸಗರಹಳ್ಳಿ  ರಾಮಣ್ಣನವರು ನನ್ನನ್ನು ಒಳಗೊಂಡಂತೆ ಅನೇಕ ಗೆಳೆಯರನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೈ ಹಿಡಿದು ನಡೆಸಿಕೊಂಡು ಬಂದವರು. ಅವರು ಮಾತ್ರ ನಮ್ಮೆಲ್ಲರನ್ನೂ ಪ್ರೀತಿಯಿಂದಕಂದಾಎಂದು ಕರೆಯುತ್ತಿದ್ದರು. ಇದೇ ರೀತಿಯ ಸಂಬೋಧನೆಯನ್ನು ನಾನು ನಲ್ಲೂರ್ ಅವರಲ್ಲಿ ಕಂಡಾಗ, ನನ್ನ ಪಾಲಿಗೆ ಇಲ್ಲವಾಗಿರುವ ರಾಮಣ್ಣ, ಪ್ರಸಾದ್ ಎಂಬ ಅಣ್ಣನ ರೂಪದಲ್ಲಿ  ಸ್ಥಾನ  ತುಂಬಿದರಲ್ಲ ಎಂಬ ಸಂತೋಷ ಮತ್ತು  ತೃಪ್ತಿ ನನ್ನದಾಯಿತು.
ವಚನಕಾರ್ತಿ ಅಕ್ಕ ಮಹಾದೇವಿ ತನ್ನ ವಚನವೊಂದರಲ್ಲಿನೊಂದವರ ನೋವ ನೋಯದವರೆತ್ತ ಬಲ್ಲರೊಎಂದು ಹೇಳುವ ಹಾಗೆ ಗ್ರಾಮೀಣ ಸಂಸ್ಕತಿಯಿಂದ ಬಂದು ಅಕ್ಷರ ಲೋಕಕ್ಕೆ ಪ್ರಥಮವಾಗಿ ತರೆದುಕೊಂಡ ನನ್ನ ತಲೆಮಾರಿನ ತಲ್ಲಣ ಮತ್ತು ತಳಮಳಗಳನ್ನು ಒಡಲಲ್ಲಿ ಒತ್ತು ತಿರುಗುವಂತೆ ಕಾಣುವ ನಲ್ಲೂರ್ ಅವರು, ತಾನು ಬೇರು ಕತ್ತರಿಸಿಕೊಂಡು ಬಂದ ತನ್ನ ಗ್ರಾಮಸಂಸ್ಕøತಿ ಮತ್ತು ಅದರ ಮೇಲಿನ ಪ್ರೀತಿಯನ್ನು ತೊರೆಯಲಾರದೆ, ಇತ್ತ ನಗರ ಸಂಸ್ಕøತಿಗೆ ಸಂಪೂರ್ಣ ತೆರೆದುಕೊಳ್ಳಲಾಗದೆ ಒದ್ದಾಡಿದವರು, ತನ್ನೊಳಗಿನ ಧರ್ಮ ಸಂಕಟಕ್ಕೆ ಒಳಗೊಳಗೆ ಅತ್ತವರು. ಅವರ ಇಂತಹ ಮಾನಸಿಕ ತಾಕಲಾಟಗಳು ಅವರನ್ನು ಮಾನವೀಯ ಮುಖವುಳ್ಳ ಒಬ್ಬ ಶ್ರೇಷ್ಠ ಜಾನಪದ ವಿಧ್ವಾಂಸನಾಗಿ, ಶ್ರೇಷ್ಠ ಕವಿಯಾಗಿ, ಅಧ್ಯಾಪಕನಾಗಿ ಮತ್ತು ನಾಡು ಕಂಡ ಅತ್ಯುತ್ತಮ ವಾಗ್ಮಿ ಹಾಗೂ ಸಾಂಸ್ಕøತಿಕ ಸಂಘಟಕಕಾರನಾಗಿ  ರೂಪಿಸಿದವು.

ನಲ್ಲೂರು ಪ್ರಸಾದ್ ಅವರ ವ್ಯಕ್ತಿತ್ವದ ವಿಶೇಷವೆಂದರೆ, ಅವರಲ್ಲಿರುವ ನಾಯಕತ್ವದ ಗುಣ. ಒಂದು ಚಳುವಳಿಯಾಗಲಿ ಅಥವಾ ಸಂಘಟನೆಯಾಗಲಿ ಅದರ ನಾಯಕತ್ವ ವಹಿಸಿಕೊಂಡವನಿಗೆ ಪ್ರಾಥಮಿಕವಾಗಿ ತನ್ನ ಒಡನಾಡಿಗಳ ಸಲಹೆ ಮತ್ತು ಸೂಚನೆಗಳನ್ನು ಹಾಗೂ ಟೀಕೆ ಟಿಪ್ಪಣಿಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳವ ಗುಣವಿರಬೇಕು. ವರ್ತಮಾನದ ಸಾಮಾಜಿಕ ಚಳುವಳಿಗಳ ವಿಫಲತೆಯ ಹಿಂದೆ ಇರುವ ಬಹು ಮುಖ್ಯ ಅಂಶ ಇದೇ ಆಗಿದೆ. ಕನಾಟಕದ ರೈತ ಮತ್ತು ದಲಿತ ಚಳುವಳಿಗಳ ವಿಫಲತೆ ವಿಶಾಲ ಮನೋಭಾವದ ನಾಯಕರ ಕೊರತೆ ಕಾರಣವಾದುದನ್ನು ನಾವು ಅಲ್ಲಗೆಳೆಯಲಾಗದು. ಒಂದು ಸಮುದಾಯದ ನೋವನ್ನು ತನ್ನ ವೈಯಕ್ತಿಕ ನೋವೆಂದು ಪರಿಭಾವಿಸುವ ವ್ಯಕ್ತಿ ಮಾತ್ರ ನಾಯಕನಾಗಬಲ್ಲ. ಇಂತಹ ಗುಣ ನಮ್ಮ ನೆಲದಲ್ಲಿ ಬಸವಣ್ಣನಿಗಿತ್ತು, ಭಾರತದಲ್ಲಿ ಗಾಂಧೀಜಿಯವರಿಗೆ ಇತ್ತು. ಇಂತಹ ಉದಾತ್ತ ಪರಂಪರೆಯನ್ನು ತನ್ನದಾಗಿಸಿಕೊಂಡು ಮೈಗೂಡಿಸಿಕೊಂಡಿರುವ ನಲ್ಲೂರ್ ಪ್ರಸಾದ್ ಅವರಲ್ಲಿ ಎಲ್ಲರ ಧ್ವನಿಗೆ ಕಿವಿಯಾಗುವ, ಕಣ್ಣೀರಿಗೆ ಕರವಸ್ತ್ರವಾಗುವ ಗುಣಗಳಿವೆ ಕಾರಣಕ್ಕಾಗಿ ಅವರಿಗೆ ನಾಡಿನುದ್ದಕ್ಕೂ ಪ್ರೀತಿಸಬಲ್ಲ ಗೆಳೆಯರಿದ್ದಾರೆ, ಶಿಷ್ಯ ಸಮುದಾಯವಿದೆ. ವಿಧ್ವಾಂಸರ ಒಡನಾಟವಿದೆ. ವರ್ತಮಾನದ ಜಗತ್ತಿನಲ್ಲಿ ಕನ್ನಡ ಭಾಷೆ, ರೈತ ಸಮುದಾಯದ ಬವಣೆ ಮತ್ತು ದಲಿತ ಹಾಗೂ ಹಿಂದುಳಿದವರ ರಕ್ಷಣೆ ಇವೆಲ್ಲವೂ ಹೋರಾಟವೆಂಬ ನೆಪದಲ್ಲಿ ಹಲವರಿಗೆ ಉದ್ಯೋಗ ಹಾಗೂ ಉದ್ಯಮವಾಗಿರುವ ಸಂದರ್ಭದಲ್ಲಿ ಗಂಭೀರವಾಗಿ ಯೋಚಿಸಬಲ್ಲ, ನಾಡನ್ನು ಮುನ್ನಡೆಸಬಲ್ಲ ನಿಜವಾದ ಸಾಂಸ್ಕøತಿಕ ಮತ್ತು ಸಾಮಾಜಿಕ ನಾಯಕರ ಅಗತ್ಯವಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಮಂಡ್ಯ ಗಡಿ ಭಾಗದ ಕೊನೆಯ ಹಳ್ಳಿಗಳಲ್ಲಿ ಒಂದಾದ ನಲ್ಲೂರಿನ ಸ್ವಾತಂತ್ರ್ಯ ಹೋರಾಟಗಾರನ ಮಗನಾಗಿ ಜನಿಸಿರುವ ಪ್ರಸಾದ್ ಅವರಲ್ಲಿ ಗಾಂಧಿಜಿಯವರಿಗೆ ಇದ್ದ  ಕಠೋರ ನಿಯಮ, ಸತ್ಯವನ್ನು ನೇರವಾಗಿ ಹೇಳುವ ಎದೆಗಾರಿಕೆ ಮತ್ತು ತಾಯ್ತನದ ಗುಣಗಳಿವೆ. ಕಾರಣಕ್ಕಾಗಿ ಅವರು ಕನ್ನಡದ ಶಕ್ತಿ ಕೇಂದ್ರವೆನಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಸಾಧ್ಯವಾಯಿತು.
ಪ್ರಥಮ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಚಂದ್ರಶೇಖರಪಾಟಿಲರ ವಿರುದ್ಧ ಸೋಲಪ್ಪಿದಾಗ, ತಮ್ಮ ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದ ಪ್ರಸಾದ್, ತಮ್ಮ ತೆರೆದ ಮನಸ್ಸಿನಿಂದ ಚಂದ್ರಶೇಖರ ಪಾಟೀಲರ ಅವಧಿಯಲ್ಲಿ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾಗಿ ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆದರು. ನಲ್ಲೂರ್ ಪ್ರಸಾದ್ ಅವರ ನಡೆ ಮುಂದಿನ ದಿನಗಳಲ್ಲಿ ಅವರಿಗೆ ರಾಜ್ಯಾದ್ಯಂತ ಅಪಾರ ಗೆಳೆಯರನ್ನು ಸಂಪಾದಿಸಿಕೊಟ್ಟಿತಲ್ಲದೆ, ನಂತರದ ಅವಧಿಗೆ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಪರೋಕ್ಷವಾಗಿ ನೆರವಾಯಿತು.


ಗ್ರಾಮೀಣ ಸಂಸ್ಕøತಿಯ ಹಿನ್ನಲೆಯಿಂದ ಬಂದ   ಹಳ್ಳಿಗಾಡಿನ ವಿದ್ಯಾರ್ಥಿಗಳು ಇಂಗ್ಲೀಷ್ ಭಾಷೆ ಮತ್ತು ಗಣಿತ ಹಾಗೂ ವಿಜ್ಞಾನ ವಿಷಯಗಳನ್ನು ಕಲಿಯುವ ಸಂದರ್ಭದಲ್ಲಿ ಅನುಭವಿಸಬೇಕಾದ ಕೀಳರಿಮೆ, ಅನಾಥ ಪ್ರಜ್ಞೆ ಇವೆಲ್ಲವನ್ನೂ ಸ್ವತಃ ಅನುಭವಿಸಿ ಬೆಳೆದಿರುವ ನಲ್ಲೂರ್ ತಮ್ಮ ಬದುಕಿನುದ್ದಕ್ಕೂ ತಮಗಿದ್ದ ಆತ್ಮವಿಶ್ವಾಸದ ಮೂಲಕ ಎಲ್ಲಾ ಅಪಮಾನ ಮತ್ತು ಕೀಳರಿಮೆಗಳನ್ನು ಮೆಟ್ಟಿನಿಂತವರು. ಹಾಗಾಗಿ ಶಾಲಾ ಕಾಲೇಜು ದಿನಗಳಲ್ಲಿ ಅವರೊಳಗೊಬ್ಬ ನಾಯಕ ರೂಪುಗೊಂಡಿದ್ದ. ನಾಯಕನೊಳಗೆ ಕೇವಲ ನಾಯಕತ್ವ ವಹಿಸುವ ಗುಣವಲ್ಲದೆ ನಾಟಕ, ಸಂಗೀತ, ಕಲೆ, ಸಾಹಿತ್ಯವನ್ನು ಆಸ್ವಾದಿಸುವ ಮತ್ತು ಸೃಷ್ಟಿಸುವ ಸೃಜನಶೀಲತೆಯೂ ಮನೆ ಮಾಡಿತ್ತು. ಕರ್ನಾಟಕದ ಬಲಿಷ್ಟ ಜಾತಿ ಸಮುದಾಯದಲ್ಲಿ ಹುಟ್ಟಿ ಬೆಳದರೂ ಅವರೊಳಗೆ ಜಾತಿ ಮತ್ತು ಧರ್ಮವನ್ನು ಮೀರುವ ಗುಣಗಳಿದ್ದವು. ತನ್ನದೇ ಆದ ಹಾಸನ ಜಿಲ್ಲೆಯ ಪ್ರತಿಭಾವಂತ ದಲಿತ ಕವಿಯಾಗಿರುವ ಸುಬ್ಬು ಹೊಲೆಯಾರ್ ಅವರನ್ನು ಉದ್ದೇಶಿಸಿ ತಮ್ಮ ರೆಕ್ಕೆ ಬಡಿಯುವ ಮುನ್ನಕವನ ಸಂಕಲನದ ಕವಿತೆಯೊಂದರಲ್ಲಿ  ಹೀಗೆ ಬರೆದುಕೊಂಡಿದ್ದಾರೆ.
                    ಹೇಗಿದ್ದಿ ಸುಬ್ಬು?
                    ಕೇಳಲು ಕಷ್ಟವಾಗಿದೆ ನನಗೆ
                    ಶೂದ್ರ ತ್ರಿಶೂಲ ತಿವಿದ
                    ಗೌಡ ಪರಂಪರೆಯ
                    ಪರದೇಸಿಯ ಕೂಸು ನಾನು.
                    ನಿನ್ನ ನೋವಿಗೆ ನನ್ನ ನಿಟ್ಟುಸಿರು
                    ನಿನ್ನ ಅವಮಾನಕ್ಕೆ ನನ್ನ ತಗ್ಗಿದ ತಲೆ.
ಸಾಲುಗಳು ನಲ್ಲೂರು ಪ್ರಸಾದ್ ಅವರ ಆತ್ಮ ಸಾಕ್ಷಿಯ ಪ್ರಜ್ಞೆಗೆ ಸಾಕ್ಷಿಯಂತಿವೆ. ಶತ ಶತ ಮಾನಗಳ ಕಾಲ ಪುರೊಹಿತಶಾಹಿಯ ಕಾಲಲ್ಲಿ ತುಳಿಸಿಕೊಂಡ ಅಪಮಾನದ ಮತ್ತು ನೋವಿನ ಚರಿತ್ರೆಯನ್ನು ಬೆನ್ನಿಗೆ ಕಟ್ಟಿಕೊಂಡು ಬಂದಿರುವ ಶೂದ್ರ ಜಾತಿಯ ಸಮುದಾಯದಲ್ಲಿ  ಜನಿಸಿದ್ದರೂ ಕೂಡತನ್ನ ಒಡಲೊಳಗೆ  ಅಪಮಾನದ ಹಾಡಗಳನ್ನು ಬಚ್ಚಿಟ್ಟುಕೊಂಡು ಇನ್ನೊಬ್ಬರ ನೋವಿನ ಹಾಡಿಗೆ ದನಿಯಾಗುವ ನಲ್ಲೂರ್ ಪ್ರಸಾದ್ ಅವರ ಪರಿ ನಿಜಕ್ಕೂ  ಅಚ್ಚರಿ ಪಡುವಂತಹದ್ದು. ಮಾನವಿಯತೆಯ ನೆಲೆಯಲ್ಲಿ ಒಬ್ಬ ಅಪ್ಪಟ ಮನುಷ್ಯನೊಬ್ಬ ಬದುಕಬಹುದಾದ ಶ್ರೇಷ್ಠವಾದ ಬದುಕಿನ ದಾರಿ  ಇದು ಎಂದು ನನಗನಿಸಿದೆ. ಇದು ಒಂದು ರೀತಿಯಲ್ಲಿ ಅಲ್ಲಮ ಪ್ರಭು ಹೇಳುವ ಕಂಗಳಲಿ ನಟ್ಟ ಗಾಯವನಾರಿಗೆ ತೋರಬಹುದಯ್ಯಾ?” ಎನ್ನುವ ಸ್ಥಿತಿ.
ಜಗದ ನೀತಿ ನಿಯಮಗಳು ಏನೇ  ಇರಲಿ, ತಾನು ನಡೆದದ್ದು ದಾರಿ ಎಂಬಂತೆ ಕುವೆಂಪು ವಿಚಾರಧಾರೆಯಲ್ಲಿ ಬೆಳೆದು,  “ ಯಾವ ಶಾಸ್ತ್ರ ಏನು ಹೇಳಿದರೇನು? ಎದೆಗಿಂತ ಮಿಗಿಲಾದ ದನಿ ಇಹುದೇನು? ಎಂಬ ಅವರ ಕವಿತೆಯ ಸಾಲಿನಂತೆ ಬದುಕುತ್ತಿರುವ ನಲ್ಲೂರು ಪ್ರಸಾದ್, ತಮ್ಮ ಆತ್ಮ ಸಾಕ್ಷಿಗೆ ಅನುಗುಣವಾಗಿ  “ಆನು ಒಲಿದಂತೆ ಹಾಡುವೆ ನಿನಗೆ ಕೇಡಿಲ್ಲವಾಗಿಎಂಬ ಬಸವಣ್ಣನ ವಚನದಂತೆ ನಡೆಯುತ್ತಿರುವವರುಕಳೆದ ಕಾಲು ಶತಮಾನದಿಂದ ಇಂತಹ ಒಬ್ಬ ಅಣ್ಣನ ಜೊತೆ ಕಿರಿಯ ಗೆಳಯನಾಗಿ, ತಮ್ಮನಾಗಿ  ಬದುಕುತ್ತಿರುವ ನನಗೆ  ಇವೆಲ್ಲವೂ   ಬದುಕಿನ ಅವಿಸ್ಮರಣೀಯ ಕ್ಷಣಗಳು ಎನಿಸಿವೆ.
                         ( ಡಾ. ನಲ್ಲೂರ್ ಪ್ರಸಾದ್ ಅವರ ಅಭಿನಂದನಾ ಗ್ರಂಥಕ್ಕೆ ಬರೆದ ಲೇಖನ)



ಶುಕ್ರವಾರ, ಆಗಸ್ಟ್ 15, 2014

ಭಾರತದ ಕೃಷಿ ಮತ್ತು ಕುಲಾಂತರಿ ತಳಿಗಳ ಅವಾಂತರ


ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ದಿನಗಳಲ್ಲಿ ಭಾರತದ ಬೆನ್ನೆಲುಬು ಎಂದು ಪರಿಗಣಿಸಲಾಗಿದ್ದ ಕೃಷಿಲೋಕ ಇದೀಗ ತನ್ನ ಅಸ್ಮಿತೆ ಹಾಗೂ ಅಸ್ತಿತ್ವವನ್ನು ಕಳೆದುಕೊಂಡು ಕವಲು ಹಾದಿಯಲ್ಲಿದೆ.   ಸಂದರ್ಭದಲ್ಲಿ ಭಾರತದ ಕೃಷಿವಲಯಕ್ಕೆ ಹೊಸದಾಗಿ ಅಪ್ಪಳಿಸಿರುವ ಕುಲಾಂತರಿ ತಳಿಗಳ (Genetical modified Crops) ಪ್ರಯೋಗಕ್ಕೆ ತೆರೆದುಕೊಳ್ಳುತ್ತಿರುವ ಸಂದಿಗ್ಧ ಸ್ಥಿತಿಯಲ್ಲಿ ರೈತ ಸಮುದಾಯ ತೊಳಲಾಡುತ್ತಿದೆ. ಈಗಾಗಲೇ ಕೃಷಿ ಎಂಬುದು ಲಾಭದಾಯಕ ವೃತ್ತಿಯಲ್ಲ ಎಂಬ ನಿರ್ಧಾರಕ್ಕೆ ರೈತ ಸಮುದಾಯ ಬಂದಿರುವಾಗ ಕುಲಾಂತರ ತಳಿ ಎಂಬ ಪ್ರಯೋಗಕ್ಕೆ ಒಡ್ಡಿಕೊಳ್ಳಬೇಕಾದ ಅನಿವಾಂರ್i ಸ್ಥಿತಿಗೆ ಭಾರತದ ರೈತ ಸಿಲುಕಿದ್ದಾನೆ. ಇದು ಕೇವಲ ಅವನೊಬ್ಬನ ಬದುಕಿನ ಅಳಿವು-ಉಳಿವಿನ ಪ್ರಶ್ನೆಯಾಗಿರದೆ ಭಾರತದ ಆಹಾರ ಭಧ್ರತೆಯ ಪ್ರಶ್ನೆಯಾಗಿ ಕೂಡ ಪರಣಮಿಸಿದೆ. ಜಾಗತಿಕ ಮಟ್ಟದಲ್ಲಿ ಕಳೆದೊಂದು ದಶಕದಿಂದ ಹಲವು ವಾದ ವಿವಾದಗಳನ್ನು ಸೃಷ್ಟಿಸಿ ಜಿಜ್ಞಾಸೆಗೆ ಕಾರಣವಾಗಿರುವ ಜೈವಿಕ ತಂತ್ರಜ್ಞಾನದ ಕುಲಾಂತರಿ ತಳಿಗಳ ಪ್ರಯೋಗ ಇದೀಗ ಭಾರತದಲ್ಲಿಯೂ ಸಹ ವಿಜ್ಞಾನಿಗಳ ಮತ್ತು ಪರಿಸರ ವಾದಿಗಳ ನಡುವಿನ ಬೌದ್ಧಿಕ ಸಂಘರ್ಷಕ್ಕೆ ಕಾರಣವಾಗಿದೆ.
ಕಳೆದ ಜುಲೈ ಹದಿನೆಂಟರಂದು ಭಾರತದ ಕುಲಾಂತರಿ ತಂತ್ರಜ್ಞಾನ ಅನುಮತಿ ಸಮಿತಿಯು (Genetic Engineering Appraisal Committeeಭಾರತದಲ್ಲಿ ಅರವತ್ತು ಬಗೆಯ ಹಣ್ಣು, ತರಕಾರಿ ಮತ್ತು ಆಹಾರ ಬೆಳೆಗಳ ಕುಲಾಂತರಿ ತಳಿಗಳ ಪ್ರಯೋಗಕ್ಕೆ ಅನುಮತಿ ನೀಡಿದಾಗ ಭಾರತದ ಕೃಷಿ ವಲಯದಲ್ಲಿ ದೊಡ್ಡ ಸಂಚಲನ ಉಂಟಾಯಿತು. ಈಗಾಗಲೇ ಬಳಕೆಯಲ್ಲಿರುವ ಆಹಾರ ಬೆಳೆಯಲ್ಲದ ಬಿ.ಟಿ. ಹತ್ತಿ ಬೆಳೆಯ ಪ್ರಯೋಗವು ಭಾರತದ ರೈತ ಸಮುದಾಯವನ್ನು ಅವನತಿಯ ಹಾದಿಗೆ ಕೊಂಡೊಯ್ದಿರುವಾಗ, ಇಂತಹ ಅನುಮತಿ ದೇಶಕ್ಕೆ ಅಗತ್ಯವಿತ್ತೆ? ಎಂಬ ಪ್ರಶ್ನೆ ಎಲ್ಲರನ್ನು ಕಾಡತೊಡಗಿದೆ.


ಕೇಂದ್ರದಲ್ಲಿ ಅಸ್ತಿತ್ವದಲ್ಲಿರುವ, ನರೇಂದ್ರ ಮೋದಿ ನೇತೃತ್ವದ ಎನ್.ಡಿ.. ಸರ್ಕಾರದ ಆಡಳಿತ ವ್ಯವಸ್ಥೆಯನ್ನು  ನಿಯಂತ್ರಿಸುತ್ತಿರುವ ಸಂಘಪರಿವಾರದ ಶಾಖೆಗಳಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸ್ವದೇಶಿ ಜಾಗರಣ್ ಮಂಚ್ ಮತ್ತು ಭಾರತೀಯ ಕಿಸಾನ್ ಸಂಘ ಇವುಗಳ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ತೀವ್ರ ವಿರೋಧ ವ್ಯಕ್ತ ಪಡಿಸಿದ ಹಿನ್ನಲೆಯಲ್ಲಿ ಕುಲಾಂತರಿ ತಳಿಗಳ ಪ್ರಯೋಗಕ್ಕೆ ಇದೀಗ ತಾತ್ಕಾಲಿಕ ತಡೆಯಾಜ್ಞೆ ಬಿದ್ದಿದೆ. ಆದರೆ ಇದು ಯಾವುದೇ ಕ್ಷಣದಲ್ಲಿ ತೆರವಾದರೂ ಆಶ್ಚರ್ಯವಿಲ್ಲ. ಕಳೆದ ವರ್ಷ ಯು.ಪಿ.. ನೇತೃತ್ವದ ಕೇಂದ್ರ ಸರ್ಕಾರದಲ್ಲಿ  ಪರಿಸರ ಖಾತೆ ಸಚಿವರಾದ ಜೈರಾಂ ರಮೇಶ್ರವರು ದೇಶದ ವಿವಿದೆಡೆ ಕುಲಾಂತರಿ ತಳಿಗಳ ಪ್ರಯೋಗ ಕುರಿತಂತೆ ಸಾರ್ವಜನಿಕ ಅಭಿಪ್ರಾಯಗಳನ್ನು ಸಂಗ್ರಹಿಸಿ ಜೊತೆಗೆ ಕೆಲವು ವಿಜ್ಞಾನಿಗಳ ಶಿಫಾರಸ್ಸನ್ನು ಪರಿಗಣಿಸಿ ಅಂತಿಮವಾಗಿ ಬಿ.ಟಿ. ಬದನೆ ಒಳಗೊಂಡಂತೆ ಇತರೆ ತರಕಾರಿ ಮತ್ತು ಆಹಾರ ಬೆಳೆಗಳ ಪ್ರಯೋಗಕ್ಕೆ ತಡೆಯೊಡ್ಡಿದ್ದರು. ಇಂತಹ ಅಡೆತಡೆಗಳ ನಡುವೆಯೂ ಸಹ ಭಾರತದ ಕೆಲವು ಕೃಷಿ ವಿಜ್ಞಾನಿಗಳು ಕುಲಾಂತರಿ ತಳಿಗಳು ಕುರಿತಂತೆ ತೋರುತ್ತಿರುವ ಅಪಾರ ಆಸಕ್ತಿ ಮತ್ತು  ಉತ್ಸಾಹ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈಗಾಗಲೇ ಕೇಂದ್ರ ಸರ್ಕಾರದ ಅನುಮತಿ ಪಡೆಯದೆ ಕರ್ನಾಟಕ ಧಾರವಾಡ ಕೃಷಿ ವಿಶ್ವ ವಿದ್ಯಾಲಯವು ಬಿಟಿ.ಬದನೆ ಪ್ರಯೋಗ ಕೈಗೊಂಡು ವಿವಾದದಲ್ಲಿ ಸಿಲುಕಿದೆ. ಇದರ ಜೊತೆಗೆ ಬೆಂಗಳೂರಿನ ಕೃಷಿ ವಿ.ವಿ. ಸೇರಿದಂತೆ ಕೊಯಮತ್ತೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ  ಬಿ.ಟಿ. ಬತ್ತ ಕುರಿತು ಸಂಶೋಧನೆ ಮತ್ತು ಹರಿಯಾಣದ ಕರ್ನಾಲ್ ನಲ್ಲಿ ಅಲ್ಲಿನ ಕೃಷಿ ವಿ.ವಿ. ನೇತೃತ್ವದಲ್ಲಿ  ಗೋಧಿ ಕುರಿತಂತೆ ರಹಸ್ಯವಾಗಿ ನಡೆಯುತ್ತಿದ್ದ ಪ್ರಯೋಗಗಳನ್ನು ರೈತ ಸಮುದಾಯ ಪತ್ತೆ ಹಚ್ಚಿದೆ. ಇದು ಜಾಗತಿಕ ಮಟ್ಟದಲ್ಲಿ ಕುಲಾಂತರಿ ತಳಿಗಳ ಮಾತೃ ಸಂಸ್ಥೆಯಾದ ಮಾನ್ಸಂಟೊ ಮತ್ತು ಭಾರತದ ಕೃಷಿ ವಿಜ್ಞಾನಿಗಳ ಅನೈತಿಕ ಸಂಬಂಧವನ್ನು ಅನಾವರಣಗೊಳಿಸಿದೆ.

ಕುಲಾಂತರಿ ತಳಿಗಳ ಬಗ್ಗೆ ಅತ್ಯುತ್ಸಹಾದಿಂದ ಮಾತನಾಡುವ ನಮ್ಮ ಕೃಷಿ ವಿಜ್ಞಾನಿಗಳು  ಕಳೆದ ಒಂದು ದಶಕದಿಂದ ಭಾರತದಲ್ಲಿ ನಡೆಯುತ್ತಿರುವ ಬಿ.ಟಿ. ಹತ್ತಿಯ ಪ್ರಯೋಗದ ಪ್ರತಿಫಲವೇನು ಎಂಬುದರ ಕುರಿತು ದೇಶದ ರೈತ ಸಮುದಾಯಕ್ಕೆ ಉತ್ತರ ನೀಡಬೇಕಾಗಿದೆ. ಸಾಂಪ್ರದಾಯಿಕ ದೇಶಿ ಹತ್ತಿ ಬೆಳೆಯನ್ನು ಕಾಡುತ್ತಿದ್ದ ಕಾಯಿಕೊರಕ ಹುಳುಗಳ ಬಾಧೆಯನ್ನು ಬಿ.ಟಿ. ಹತ್ತಿ ಅಲ್ಪಮಟ್ಟಿಗೆ ನಿವಾರಿಸಿದ್ದರೂ ಸಹ, ಬಿ.ಟಿ. ಹತ್ತಿಯ ಇಳುವರಿ ಪ್ರಮಾಣ ಪ್ರತಿ ವರ್ಷ ಕಡಿಮೆಯಾಗುತ್ತಿದೆ. ಇದರ ಜೊತೆಗೆ ಅತ್ಯಂತ ದುಬಾರಿಯಾದ  ಬಿ.ಟಿ. ಹತ್ತಿಯ ಬಿತ್ತನೆ ಬೀಜವೂ ಸೇರಿದಂತೆ, ರಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಗೆ ವಿನಿಯೋಗಿಸಿದ ಕೃಷಿ ಬಂಡವಾಳವನ್ನು ವಾಪಸ್ ಪಡೆಯಲಾರದೆ ರೈತ ಸಮುದಾಯ ಅತಂತ್ರರಾಗಿ ಆತ್ಮಹತ್ಯೆಯ ಹಾದಿ ತುಳಿದಿದ್ದಾರೆ. ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯ ಸೇರಿದಂತೆ ಆಂಧ್ರದ ಮೇಡಕ್ ಹಾಗೂ ಅದಿಲಾಬಾದ್ ಜಿಲ್ಲೆಗಳಲ್ಲಿ ತರಗೆಲೆಗಳಂತೆ ನೆಲಕ್ಕುರುಳುತ್ತಿರುವ ಬಹುತೇಕ ರೈತರು ಬಿ.ಟಿ. ಹತ್ತಿ ಬೆಳೆದ ರೈತರೇ ಆಗಿರುವುದು ವಿಶೇಷ. ಇದೀಗ ಬಿ. ಟಿ. ಹತ್ತಿಗೂ ಸಹ  ದಾಳಿಯಿಡುತ್ತಿರುವ ಕಾಯಿಕೊರಕ ಹುಳ ಹಾಗೂ  ತಿಗಣೆ, ಹೇನು ಮುಂತಾದ ಕೀಟಗಳು ರಸಾಯನಿಕ ಕೀಟನಾಶಕವನ್ನು  ಜೀರ್ಣಿಸಿಕೊಳ್ಳುವ  ಶಕ್ತಿಯನ್ನು ವೃದ್ಧಿಸಿಕೊಂಡಿರುವುದನ್ನು ಸ್ವತಃ ಕೃಷಿ ವಿಜ್ಞಾನಿಗಳೇ ಒಪ್ಪಿಕೊಂಡಿದ್ದಾರೆ.
ಅಮೇರಿಕಾ ಮೂಲದ  ಮಾನ್ಸಂಟೊ, ಕಾರ್ಗಿಲ್ ಸೇರಿದಂತೆ ಹಲವಾರು ಬಹು ರಾಷ್ಟ್ರಿಯ ಕಂಪನಿಗಳು ಜಗತ್ತಿನಲ್ಲಿರುವ  ವೈವಿಧ್ಯಮಯ ದೇಶಿ ತಳಿಗಳನ್ನು ನಾಶಪಡಿಸಿ, ಪರಂಪರಾನುಗತವಾಗಿ ಬಂದಿರುವ ರೈತರ ಬೀಜ ಸ್ವಾಂತಂತ್ರ್ಯದ ಮೇಲೆ ಏಕ ಸ್ವಾಮ್ಯ ಹಕ್ಕು ಸ್ಥಾಪಿಸಲು ಹೊರಟಿರುವುದು ವರ್ತಮಾನದ ಜಗತ್ತಿನಲ್ಲಿ ಗುಟ್ಟಾಗಿ ಉಳಿದಿಲ್ಲ. ಕಂಪನಿಗಳ ಆಮೀಷಕ್ಕೆ ಒಳಗಾದ ವಿಜ್ಞಾನಿಗಳು ರೈತ ಸಮುದಾಯವನ್ನು ಮತ್ತು ಜಾಗತಿಕ ಜೀವ ಜಾಲದ ಪರಿಸರವನ್ನು ಬಲಿಕೊಡಲು ಹೊರಟಿರುವುದು ಮಾತ್ರ ನಿಜಕ್ಕೂ ವಿಪರ್ಯಾಸ.
ಭಾರತದಂತಹ ಕೃಷಿ ಪ್ರಧಾನವಾದ ದೇಶದಲ್ಲಿ ಆಹಾರ ಬೆಳೆಗಳ ಜೊತೆಗೆ ಹಣ್ಣು, ತರಕಾರಿಗಳ ಬೆಳೆಗಳ ಕುರಿತು ಕುಲಾಂತರಿ ಪ್ರಯೊಗಕ್ಕೆ  ಇನ್ನಿಲ್ಲದ ಉತ್ಸಾಹ ತೋರುತ್ತಿರುವ ಕೃಷಿ ವಿಜ್ಞಾನಿಗಳು ಪ್ರಯೋಗಕ್ಕೆ ಮೊದಲು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ.

ಬಿ.ಟಿ. ಬದನೆ  ಸೇರಿದಂತೆ ಟಮೋಟೊ, ಬೆಂಡೆಕಾಯಿ ಹೀಗೆ ವಿವಿಧ ತರಕಾರಿ ಬೆಳೆಗಳ ಕುಲಾಂತರಿ ಪ್ರಯೋಗ ಅವಶ್ಯಕತೆ ಇದೆಯಾ? ಇವು ಆಹಾರದ ಒಂದು ಭಾಗವೇ ಹೊರತು ಮನುಷ್ಯನ ಹಸಿವು ನೀಗಿಸುವ ಆಹಾರ ಬೆಳೆಗಳಲ್ಲಕುಲಾಂತರಿ ತಳಿಯ ಹಣ್ಣು, ತರಕಾರಿ ಬೆಳೆಗಳಿಂದ ಅಧಿಕ ಇಳುವರಿ ಪಡೆದ ರೈತ ಸಮುದಾಯ ಇವುಗಳನ್ನು ಎಲ್ಲಿ ಮಾರಾಟ ಮಾಡಬೇಕು? ಈಗಾಗಲೇ ಭಾರತದಿಂದ ರಫ್ತಾಗುವ ಹಣ್ಣು ಮತ್ತು ತರಕಾರಿಗಳಲ್ಲಿ ಅಧಿಕ ಮಟ್ಟದ ರಸಾಯನಿಕ ವಿಷವಸ್ತುಗಳಿವೆ ಎಂಬ ನೆಪ ಒಡ್ಡಿ ಅಮೇರಿಕಾ ಸೇರಿದಂತೆ ಐರೋಪ್ಯ ರಾಷ್ಟ್ರಗಳು ನಿಷೇಧ ಹೇರಿವೆ. ಸಂದರ್ಭದಲ್ಲಿ ಬಿ.ಟಿ. ಹಣ್ಣು ಮತ್ತು ತರಕಾರಿ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಹೇಗೆ ರೂಪಿಸುತ್ತೀರಿ? ಉತ್ತರ ಕರ್ನಾಟಕದ  ಹಲವು ಜಿಲ್ಲೆಗಳಲ್ಲಿ ಕಳೆದ ವರ್ಷ ಕನಕ ಎಂಬ ಹೆಸರಿನ  ಬಿ.ಟಿ. ಹತ್ತಿಯನ್ನು ಬೆಳೆದು ಕೈ ಸುಟ್ಟುಕೊಂಡ ರೈತರಿಗೆ ನಿಮ್ಮ ಪರಿಹಾರ ಮತ್ತು ಮಾರ್ಗೋಪಾಯವೇನು? ಕಳಪೆ ಹತ್ತಿಬೀಜ ಮಾರಿದ ಫಲವಾಗಿ ಕರ್ನಾಟಕ ಸರ್ಕಾರದಿಂದ ನಿಷೇಧಿಷಲ್ಪಟ್ಟ  ಮಹಾರಾಷ್ಟ್ರ ಮೂಲದ  ಮಹಿಕೊ ಬೀಜ ಕಂಪನಿಯು ಮಾನ್ಸಂಟೊ ಬಹುರಾಷ್ಟ್ರೀಯ ಕಂಪನಿಯ ಅಂಗ ಸಂಸ್ಥೆ ಎಂದು ನಿಮಗೆ ತಿಳಿದಿಲ್ಲವೆ? ಅಮೇರಿಕಾ ಸೇರಿದಂತೆ ಜಗತ್ತಿನಾದ್ಯಂತ ಕುಲಾಂತರಿ ತಳಿಗಳ ಆಹಾರ ಮತ್ತು ಹಣ್ಣು ತರಕಾರಿಗಳನ್ನು ತಿರಸ್ಕರಿಸಿರುವಾಗ ಭಾರತದಲ್ಲಿ ನಿಮಗೆ ಇವುಗಳ ಕುರಿತು ವ್ಯಾಮೋಹವೇಕೆ?   ಎರಡು ವರ್ಷಗಳ ಹಿಂದೆ ಅಮೇರಿಕಾ  ಉಚಿತವಾಗಿ ನೀಡಲು ಹೊರಟ ಬಿ.ಟಿ. ಮೆಕ್ಕೆ ಜೋಳವನ್ನು  ಹಸಿವಿಂದ ಬಳಲುತ್ತಿದ್ದರೂ ಸಹ ಪಶ್ಚಿಮ ಆಫ್ರಿಕಾದ ಬಡರಾಷ್ಟ್ರಗಳು ತಿರಸ್ಕರಿಸಿದ ಸಂಗತಿ ವಿಜ್ಞಾನಿಗಳಾದ ನಿಮಗೆ ತಿಳಿದಿಲ್ಲವೆ? ಆಯಾ ಪ್ರದೇಶದ ಭೌಗೂಳಿಕ ಪರಿಸರ ಮತ್ತು ಅಲ್ಲಿನ ಜನತೆಯ ಆಹಾರ ಸಂಸ್ಕøತಿಗೆ ಅನುಗುಣವಾಗಿ ಬೆಳೆಯುತ್ತಿದ್ದ  ರೋಗ ನಿರೋಧಕ ಶಕ್ತಿ ಪಡೆದ ಹಾಗೂ  ಬರಗಾಲ ಅಥವಾ ಮಳೆಗಾಲದಂತಹ ಅತಿವೃಷ್ಟಿ, ಅನಾವೃಷ್ಟಿ ತಡೆದುಕೊಳ್ಳುವ ದೇಶಿ ಬಿತ್ತನೆ ಬೀಜಗಳು ನಿಮ್ಮ ಕುಲಾಂತರಿ ತಳಿ ಪ್ರಯೋಗದಲ್ಲಿ ಕಲುಷಿತಗೊಂಡಿಲ್ಲವೆಅವುಗಳ ಪರಿಶುದ್ಧತೆ ಮತ್ತು ಮೂಲಗುಣ ನಾಶವಾದರೆ ಇದಕ್ಕೆ ಪರಿಹಾರ ಏನು?
ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರವನ್ನು ಉತ್ಪಾದಿಸುವುದು ಮತ್ತು ಜಾಗತಿಕ ಹಸಿವನ್ನು ನೀಗಿಸುವುದು ನಮ್ಮ ಗುರಿ ಎಂಬ ಪೊಳ್ಳು ಘೋಷಣೆಗಳನ್ನು ಸಾರುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ಜಗತ್ತಿನ ರೈತರ ಬೀಜ ಸ್ವಾತಂತ್ರ್ಯವನ್ನು ಕಸಿಯುವುದರ ಮೂಲಕ ಏಕರೂಪಿ ಬೆಳೆ ಮತ್ತು ಏಕರೂಪದ ಆಹಾರ ಸಂಸ್ಕøತಿಯನ್ನು ಹೇರುತ್ತಿರುವುದು ಸುಳ್ಳಲ್ಲ.



ಭಾರತದಲ್ಲಿ ಅಸ್ತಿತ್ವದಲ್ಲಿರುವವ ಕುಲಾಂತರಿ ತಂತ್ರಜ್ಞಾನ ಅನುಮೋದನೆ ಸಮಿತಿಯ ಸದಸ್ಯರ ವರ್ತನೆಗಳು ಸಹ ಇತ್ತೀಚೆಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ. ಭಾರತದ ಶ್ರೇಷ್ಠ ಕೃಷಿ ವಿಜ್ಞಾನಿಗಳಲ್ಲಿ ಒಬ್ಬರಾದ ಡಾ.ಎಂ.ಎಸ್. ಸ್ವಾಮಿನಾಥನ್ ಅವರು, ಭಾರತದಲ್ಲಿ ಕುಲಾಂತರಿ ಬೆಳೆಗಳ ಪ್ರಯೋಗಕ್ಕೆ ಮುನ್ನ, ದೇಶದಲ್ಲಿರುವ ಎಲ್ಲಾ ಬಗೆಯ  ಆಹಾರ ಬೆಳೆಗಳನ್ನೂ ಒಳಗೊಂಡಂತೆ ಹಣ್ಣು ಮತ್ತು ತರಕಾರಿಗಳ ಸಾಂಪ್ರದಾಯಕ ದೇಶಿ ಬಿತ್ತÀನೆ ಬೀಜಗಳನ್ನು ಜೋಪಾನವಾಗಿ  ಸಂಗ್ರಹಿಸಿಡಬೇಕು ಹಾಗೂ  ಇವುಗಳ ರಕ್ಷಣೆಗಾಗಿ ದೇಶದ ಹಲವು ಭಾಗಗಳಲ್ಲಿ  ದೇಶಿ ಬಿತ್ತನೆ ಬೀಜಗಳ ಬ್ಯಾಂಕ್ ಗಳನ್ನು ಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದರು. ಆದರೆಈವರೆಗೂ ಯಾರೊಬ್ಬರೂ ದೇಶಿ ಬಿತ್ತನೆ ಬೀಜದ ತಳಿಗಳ ಬಗ್ಗೆ ತಲೆಕೆಡಿಸಿಕೊಂಡ ಉದಾಹರಣೆಗಳಿಲ್ಲ. ಕಾರಣಕ್ಕಾಗಿ ಭಾರತದ ಸರ್ವೋಚ್ಛ ನ್ಯಾಯಾಲಯವು ಕಳೆದ ವರ್ಷ ಹಿರಿಯ ವಿಜ್ಞಾನಿ ಡಾ. ಪುಷ್ಪಾ ಭಾರ್ಗವ ಅವರನ್ನು ಕುಲಾಂತರಿ ತಂತ್ರಜ್ಞಾನ ಅನುಮೋದನಾ ಸಮಿತಿಗೆ ವಿಶೇಷ ಆಹ್ವಾನಿತರಾಗಿ ನೇಮಿಸಿತು. ಇವರು ನೇಮಕಗೊಂಡನಂತರ ಅನುಮೋದನಾ ಸಮಿತಿಯ ಹುಳುಕುಗಳು ಮತ್ತು ತಪ್ಪು ನಿರ್ಧಾರಗಳು ಒಂದೊಂದಾಗಿ ಹೊರಬರುತ್ತಿವೆ.
ಬಿ.ಟಿ. ಬದನೆ ಕುರಿತು ಇಲಿಗಳ ಮೇಲೆ ನಡೆಸಿರುವ ಪ್ರಯೋಗವು ನಿಖರವಾಗಿಲ್ಲ ಮತ್ತು ಡಾ. ಶಶಿಕೇರನ್ ಎಂಬ ವಿಜ್ಞಾನಿಯ ನೇತೃತ್ವದಲ್ಲಿ ಕೇವಲ ಇಪ್ಪತ್ತು ಇಲಿಗಳ ಮೇಲೆ ನಡೆಸಿರುವ ಪ್ರಯೋಗವಾಗಲಿ, ಫಲಿತಾಂಶವಾಗಲಿ ನಂಬಿಕೆಗೆ ಅರ್ಹವಲ್ಲ ಎಂದಿರುವ ಡಾ, ಪುಪ್ಷಭಾರ್ಗವ, ತಂತ್ರಜ್ಞಾನ ಸಮಿತಿಯ ಮಾರ್ಗದರ್ಶಿ ಸೂತ್ರಗಳು ಸಹ  ಪರಿಣಾಮಕಾರಿಯಾಗಿರದೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದಿದ್ದಾರೆ.
1960 ಮತ್ತು 70 ದಶಕದಲ್ಲಿ ಭಾರತದಲ್ಲಿ ನಡೆದ ಹಸಿರು ಕ್ರಾಂತಿಯ ಪ್ರಯೋಗಗಳು ಸಕಾರದ ಸಾರ್ವಜನಿಕ ಸಂಸ್ಥೆಗಳಲ್ಲಿ ಪಾರದರ್ಶಕವಾಗಿ ನಡೆದಿದ್ದವು. ಗೋಧಿ ಮತ್ತು ಬತ್ತದ ಬೆಳೆಗಳ ಕುರಿತ ಪ್ರಯೋಗಗಳು ಫಲಿತಾಂಶಗಳು ಎಲ್ಲರಿಗೂ ದೊರಕುವಂತಿದ್ದವು. ಆದರೆ, ಕಳೆದ ಒಂದು ದಶಕದಿಂದ ಕೃಷಿ ಕುರಿತ ಎಲ್ಲಾ ವಿಧವಾದ ಸಂಶೋಧನೆಗಳು ಮತ್ತು ಪ್ರಯೋಗಗಳು ಖಾಸಾಗಿ ಕಂಪನಿಗಳ ಪಾಲಾಗಿರುವ ಪರಿಣಾಮ ನಮ್ಮ ಬಹುತೇಕ ಕೃಷಿ ವಿಜ್ಞಾನಿಗಳು ಇವುಗಳ ಫಲಾನುಭವಿಗಳಾಗಿದ್ದಾರೆ. ಇವರಿಗೆ ಒಂದು ನೆಲದ ಸಂಸ್ಕøತಿ.ಗಿಂತ ಅಥವಾ ಸಮುದಾಯದ ಹಿತಾಸಕ್ತಿಗಿಂತ  ತಮ್ಮ ವೈಯಕ್ತಿಕ ಹಿತಾಸಕ್ತಿಗಳು ಮುಖ್ಯವಾದಂತಿದೆ. ಹಾಗಾಗಿ ರಹಸ್ಯವಾಗಿ ನಡೆಯುತ್ತಿರುವ ಕುಲಾಂತರಿ ತಳಿಗಳ ಪ್ರಯೋಗ ಮತ್ತು ಪ್ರಮಾದಕ್ಕೆ ಜಗತ್ತಿನ ರೈತ ಸಮುದಾಯ ನೇರವಾಗಿ ನೇರ ಬಲಿಯಾಗುತ್ತಿದ್ದರೆ, ನಾವು ಮೂಕ ಸಾಕ್ಷಿಗಳಾಗುತ್ತಿದ್ದೆವೆ.


ಮಂಗಳವಾರ, ಆಗಸ್ಟ್ 12, 2014

ಮೇಲುಕೋಟೆಯ ಗಾಂಧಿ- ಸುರೇಂದ್ರ ಕೌಲಗಿಗೆ ಜಮ್ನಲಾಲ್ ಬಜಾಜ್ ಪ್ರಶಸ್ತಿ



ಮೇಲುಕೋಟೆಯೆಂಬುದು ಮಂಡ್ಯ ಜಿಲ್ಲೆಯ ಪ್ರಸಿದ್ಧ ಯಾತ್ರ ಸ್ಥಳವಷ್ಟೇ ಅಲ್ಲ, ಅಲ್ಲಿ ನನ್ನಂತಹವನ ಪಾಲಿಗೆ ಇನ್ನಷ್ಟು ಆಕರ್ಷಣಿಯ ಸ್ಥಳಗಳಿವೆ. ಬೆಟ್ಟದ ಮೇಲಿರುವ ಚಲುವ ನಾರಾಯಣಸ್ವಾಮಿ ದೇಗುಲ, ಬೆಟ್ಟದ  ತಡಿಯಲ್ಲಿರುವ  ಲೋಕ ಪ್ರಸಿದ್ಧ ಕಲ್ಯಾಣಿ, ಯೋಗನರಸಿಂಹ ಸ್ವಾಮಿ ದೇಗುಲ ಮತ್ತು  ಅರ್ಧಕ್ಕೆ ನಿಂತ ರಾಜಗೋಪುರದ ಹೆಬ್ಬಾಗಿಲು, ಅದರ ಪಕ್ಕದ ಅಕ್ಕ-ತಂಗಿ ಕೊಳಗಳು, ರಾಜಗೋಪುರದ ಹಿಂದಿನ ಗುಡ್ಡದ ಮೇಲಿರುವ ಸಂಸ್ಕೃತ ಸಂಶೋಧನಾ ಕೇಂದ್ರದ ಬಳಿ ನಲಿದಾಡುವ ನವಿಲುಗಳು, ಮಾಮರದ ಮರೆಯಲ್ಲಿ ಕುಳಿತು ಕೂಗುವ ಕೋಗಿಲೆಗಳು, ಮೇಲುಕೋಟೆಯ ಅಯ್ಯಂಗಾರ್ ಬೀದಿಗಳಲ್ಲಿ ಯಾತ್ರಿಕರಿಗಾಗಿ ಮನೆಯಲ್ಲಿ ಸಿದ್ಧಪಡಿಸಿದ ಪುಳಿಯೊಗರೆಯ ವಾಸನೆ ಮತ್ತು ಸಿಹಿ ಪೊಂಗಲ್, ಕಾಫಿಯ ಸುವಾಸನೆ ಹಾಗೂ ಮೇಲುಕೋಟೆಯ ಸಮೀಪದ ಬೇಬಿ ಎಂಬ ಹಳ್ಳಿಯ ದಲಿತರ ಕೇರಿಗಳಲ್ಲಿ ಚಲುವನಾರಾಯಣಸ್ವಾಮಿ ಮತ್ತು ಬೇಬಿ ನಾಚ್ಚಿಯಾರ್ ಕುರಿತು ಹಾಡುವ ಸುಶ್ರಾವ್ಯ ಜನಪದಗೀತೆಗಳು  ಇವೆಲ್ಲವೂ  ಮೇಲುಕೋಟೆಯ ನೆನಪಿನ ಭಾಗಗಳಾಗಿ ಉಳಿದುಕೊಂಡಿವೆ.

ಇವುಗಳ ಜೊತೆ ಜೊತೆಗೆ ತಮ್ಮ ಜೀವನ ಪೂರ್ತಿ ಕವಿತೆಗಳಲ್ಲಿ ಮೇಲುಕೋಟೆಯನ್ನು ಧ್ಯಾನಿಸಿದ ಕನ್ನಡದ  ಹಿರಿಯ ಕವಿ ಪು.ತಿ.ನ. ನೆನಪು ಹಾಗೂ ಅವರ ನಿವಾಸ, ಕನ್ನಡ ಪತ್ರಿಕೋದ್ಯಮಕ್ಕೆ ಘನತೆ ತಂದುಕೊಟ್ಟ ಖಾದ್ರಿ ಶಾಮಣ್ಣ ನವರ ಜೊತೆ ಜನಪದಸೇವಾ ಟ್ರಸ್ಟ್ ನ ಸುರೇಂದ್ರ ಕೌಲಗಿ ಇವರ ನೆನಪುಗಳು ಸಹ ಮೇಲುಕೋಟೆಯೊಂದಿಗೆ ತಳುಕುಹಾಕಿಕೊಂಡಿವೆ.
ಮೇಲುಕೋಟೆಯ ಗಾಂಧೀಜಿ ಎಂದು ನನ್ನ ತಲೆಮಾರಿನ ಗೆಳೆಯರು ಪ್ರೀತಿ ಮತ್ತು ಗೌರವದಿಂದ ಕರೆಯುವ ಜನಪದಸೇವಾ ಟ್ರಸ್ಟ್ ನ ರೂವಾರಿ ಸುರೇಂದ್ರ ಕೌಲಗಿಯವರಿಗೆ ಈ ಬಾರಿಯ ಪ್ರತಿಷ್ಟಿತ ಜಮ್ನಲಾಲ್ ಬಜಾಜ್ ಪ್ರಶಸ್ತಿಯ ಗೌರವ ದೊರೆತಿದೆ. ಗಾಂಧೀಜಿಯವರ ತತ್ವ ಮತ್ತು ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಾ, ನಡೆ ಮತ್ತು ನುಡಿಯಲ್ಲಿ ಒಂದಾಗಿ ಬದುಕುತ್ತಿರುವ ಆದರ್ಶ ವ್ಯಕ್ತಿಗಳಿಗೆ ಕೊಡಮಾಡುವ ಈ ರಾಷ್ಟ್ರ ಮಟ್ಟದ ಪ್ರಶಸ್ತಿಯು ಈ ಬಾರಿ ಸುರೇಂದ್ರ ಕೌಲಗಿಯವರಿಗೆ ದೊರಕಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ.


ಮೇಲುಕೋಟೆಯನ್ನು ತಮ್ಮ ಸುಧೀರ್ಘ ಅರವತ್ತು ವರ್ಷಗಳಿಂದ ಕರ್ಮಭೂಮಿಯನ್ನಾಗಿ ಮಾಡಿಕೊಂಡಿರುವ ಹಾಗೂ ನಿಜ ಭಾರತದ ಆತ್ಮವೆನಿಸಿರುವ ಗ್ರಾಮಭಾರತದ ಕಲ್ಪನೆಯನ್ನು ಸಾಕಾರಗೊಳಿಸಲು ತಮ್ಮ ಈ ಎಂಬತ್ತನೇಯ ವಯಸ್ಸಿನಲ್ಲೂ ಶ್ರಮಿಸುತ್ತಿರುವ ಸುರೇಂದ್ರಕೌಲಗಿಯವರು ನನ್ನ ತಲೆಮಾರಿಗೆ ಬಹು ದೊಡ್ಡ ಆದರ್ಶ. ಮೂಲತಃ ಧಾರವಾಡ ಜಿಲ್ಲೆಯ ಗುಡಿಗೇರಿ ಗ್ರಾಮದವರಾದ ಸುರೇಂದ್ರ ಕೌಲಗಿಯವರು ಸುಮಾರು ಐದು ವರ್ಷಗಳ ಕಾಲ ಜಯಪ್ರಕಾಶ್ ನಾರಾಯಣ್ ಅವರಿಗೆ 1954 ರಿಂದ 59 ರವರೆಗೆಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು. ನಂತರ ವಿನೋಭಾ ಅವರ ಜೊತೆ ಕೂಡ ಒಡನಾಡಿದರು. ಈ ಸಂದರ್ಭದಲ್ಲಿ ಗಾಂಧಿಜಿಯವರ ತತ್ವ ಮತ್ತು ಆದರ್ಶಗಳನ್ನು ತಮ್ಮ ಎದೆಗೆ ಇಳಿಸಿಕೊಂಡ ಇವರು , ಅವುಗಳನ್ನು ಸಾಕಾರಗೊಳಿಸಲು ಮಂಡ್ಯ ಜಿಲ್ಲೆಯ ಮೇಲುಕೋಟೆಯ ಎಂಬ ಪುಟ್ಟ ಗಿರಿಧಾಮವನ್ನು ತಮ್ಮ ಕರ್ಮಭೂಮಿಯನ್ನಾಗಿ ಆರಿಸಿಕೊಂಡರು.

1960 ರ ದಶಕದಲ್ಲಿ ಜನಪದ ಸೇವಾ ಟ್ರಸ್ಟ್ ಅನ್ನು ಸ್ಥಾಪಿಸಿದ ಕೌಲಗಿಯವರು, ಟ್ರಸ್ಟ್ ನ ಅಡಿ ಅಂಗವಿಕಲ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವಸತಿ ಸೌಲಭ ನೀಡುವ ಉದ್ದೇಶದಿಂದ ಆರಂಭಿಸಿದ “ ಕರುಣಾಗೃಹ “ ಹಾಗೂ ದುಡಿಯುವ ಕೈಗಳಿಗೆ ಆಸರೆಯಾಗಲು ಗ್ರಾಮೋದ್ಯೋಗ ಕ್ಕೆ ದಾರಿಯಾಗುವಂತೆ ಸ್ಥಾಪಿಸಿದ  “ ಹೊಸ ಜೀವನ ದಾರಿ” ಎಂಬ ಸಂಸ್ಥೆ ಈಗಾಗಲೇ ಐವತ್ತು ವರ್ಷಗಳನ್ನು ಪುರೈಸಿವೆ. ಚರಕ ಮತ್ತು ಖಾದಿಯನ್ನು ತಮ್ಮ ಜೀವದ ಉಸಿರಿನಂತೆ ಪ್ರೀತಿಸುವ ಮತ್ತು ಗೌರವಿಸುವ ಸುರೇಂದ್ರ ಕೌಲಗಿಯವರ ಸಂಸ್ಥೆಯಲ್ಲಿ ಚರಕ ಮತ್ತು ಕೈ ಮಗ್ಗದ ಚಟುವಟಿಕೆಗಳು  ನಿರಂತರವಾಗಿ ಕ್ರಿಯಾಶೀಲವಾಗಿವೆ. ಜನಪದ ಎಂಬ ಮಾಸಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಕೌಲಗಿಯವರು ಈ ಪತ್ರಿಕೆಯಲ್ಲಿ ಕೃಷಿ, ಪರಿಸರ ಕುರಿತಂತೆ ಅನೇಕ ಮೌಲಿಕ ಲೇಖನಗಳನ್ನು ಪ್ರಕಟಿಸುತ್ತಿದ್ದರು. ಸಹಜ ಮತ್ತು ನೈಸರ್ಗಿಕ ಕೃಷಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಜಪಾನಿನ ನೈಸರ್ಗಿಕ ಕೃಷಿ ತಜ್ಞ ಪುಕಾವೊಕ ಅವರ “ ಒಂದು ಹುಲ್ಲಿನ ಕ್ರಾಂತಿ” ಎಂಬ ಅಪರೂಪದ ಕೃತಿಯನ್ನು ಕನ್ನಡಕ್ಕೆ ತಂದ ಕೀರ್ತಿ ಇವರದು. 


ಸದಾ ಖಾದಿ ಜುಬ್ಬ, ಪಂಚೆ, ಹೆಗಲಿಗೆ ಒಂದು ಬ್ಯಾಗ್, ಮುಖದ ತುಂಬಾ ಮಾಸದ ಮುಗುಳ್ನಗೆ ಇವು ಸುರೇಂದ್ರ ಕೌಲಗಿಯವರ ಚಹರೆಗಳು. ಸಾಮಾಜಿಕ ಸ್ವಾಸ್ಥವನ್ನು ಕಾಪಾಡಬಲ್ಲ ಯಾವುದೇ ಚಳುವಳಿಗಳು, ಸಭೆ ಸಮಾರಂಭಗಳು  ಮಂಡ್ಯ ನಗರದಲ್ಲಿ ನಡೆಯುವಾಗ ತಪ್ಪದೇ ಹಾಜಾರಾಗುತ್ತಿದ್ದ ಇವರು, ಕಳೆದ ಇತ್ತೀಚೆಗೆ ಅನಾರೋಗ್ಯದಿಂದ ತಮ್ಮ ಚಟುವಟಿಕೆಗಳನ್ನು ಜನಪದ ಸೇವಾ ಟ್ರಸ್ಟ್ ಗೆ ಮಾತ್ರ ಸೀಮಿತವಾಗಿರಿಸಿಕೊಂಡಿದ್ದಾರೆ. ತಂದೆಯವರ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಅವರ ಪುತ್ರ ಸಂತೋಷ್ ಕೌಲಗಿ  ಟ್ರಸ್ ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಕರ್ನಾಟಕಕ್ಕೆ ಎರಡನೇಯ ಬಾರಿಗೆ ಜಮ್ನ ಲಾಲ್ ಪ್ರಶಸ್ತಿ ಸುರೇಂದ್ರ ಕೌಲಗಿ ಮೂಲಕ ದೊರೆತಿರುವುದು ಕನ್ನಡಿಗರ ಪಾಲಿಗೆ ಹೆಮ್ಮೆಯ ಸಂಗತಿಯಷ್ಟೇ ಅಲ್ಲ, ಜೊತೆಗೆ ಗಾಂಧೀಜಿ ಚಿಂತನೆಗಳಿಗೆ ಮತ್ತು ಕನಸುಗಳಿಗೆ ಸಾವಿಲ್ಲವೆಂಬುದಕ್ಕೆ ಇದು ಸಾಕ್ಷಿಯಾಗಿದೆ.