ಗೆಳೆಯ
ಕೇಶವರೆಡ್ಡಿ ಹಂದ್ರಾಳ ಈಗಾಗಲೇ ಕನ್ನಡ
ಸಾಹಿತ್ಯಲೋಕದಲ್ಲಿ ತಮ್ಮ
ಅಂತಃಕರಣ ಮತ್ತು ಮಾನವೀಯ ಮೌಲ್ವಗಳನ್ನು
ಎತ್ತಿಹಿಡಿಯುವ ಕಥೆಗಳ
ಮೂಲಕ ತಮ್ಮ ಹೆಸರನ್ನು ಚಿರಸ್ಥಾಯಿಗೊಳಿಸಿದವರು. ಮೂರು
ದಶಕಗಳ ಅವಧಿಯಲ್ಲಿ ಬರೆದಿರುವ ಮುನ್ನೂರಕ್ಕೂ ಹೆಚ್ಚು
ಕಥೆಗಳು ಅವಸಾನದ ಅಂಚಿನಲ್ಲಿರುವ ಗ್ರಾಮಭಾರತದ
ವೈವಿಧ್ಯಮಯ ಕಥಾವಸ್ತುಗಳನ್ನು ಒಳಗೊಂಡಿರುವುದು ವಿಶೇಷ.
ತನ್ನ
ತಾಯ್ತನದ ಹೃದಯದಿಂದ ಕನ್ನಡ ಕಥಾಲೋಕವನ್ನು ವಿಶೇಷವಾಗಿ
ಗ್ರಾಮೀಣ ಜಗತ್ತನ್ನು ಅಕ್ಷರ
ಲೋಕಕ್ಕೆ ವಿಸ್ತರಿಸಿದ ದಿಗ್ಗಜ ಡಾ.ಬೆಸಗರಹಳ್ಳಿ
ರಾಮಣ್ಣನವರ ಉತ್ತರಾಧಿಕಾರಿಯಂತೆ ಕಾಣುವ ಕೇಶವರೆಡ್ಡಿ ಹಂದ್ರಾಳ
ಅವರು ರಾಮಣ್ಣನವರಂತೆ ಬರಹ ಮತ್ತು ಬದುಕಿನಲ್ಲಿ
ಗ್ರಾಮಸಂಸ್ಕøತಿಯನ್ನು ತಮ್ಮ ಉಸಿರಾಗಿಸಿಕೊಂಡವರು.
ಕುಡಿಯುವ ನೀರನ್ನು ಮತ್ತು ಉರಿಯುವ
ಬೆಂಕಿಯನ್ನು ಹಂಚಿಕೊಳ್ಳುವ ಸಂಪ್ರದಾಯದ ಗ್ರಾಮಸಮುದಾಯದಲ್ಲಿ
ಹುಟ್ಟಿ ಬೆಳೆದ ಹಂದ್ರಾಳರವರು ಸಹಜವಾಗಿ
ತನಗೆ ಪರಕೀಯವೆನಿಸಿದ ನಗರ ಸಂಸ್ಕøತಿಯನ್ನು
ಬೆರಗುಗಣ್ಣಿನಲ್ಲಿ ನೋಡುತ್ತಾ ಬೆಳೆದವರು. ಖಡ್ಗ ಮತ್ತು ಲೇಖನಿಗಳಿಗಿಂತ
ಅನ್ನದಾತನ ನೇಗಿಲು ಮಿಗಿಲು ಎಂದು
ಬಲವಾಗಿ ನಂಬಿದವರು. ಜೊತೆಗೆ ತಮ್ಮ ಚಿಕಿತ್ಸಾ
ಮನೋಭಾವದಿಂದ ಅದನ್ನು ತಮ್ಮ ಕಥೆಗಳ
ಮೂಲಕ ಅಗ್ನಿ ಪರೀಕ್ಷೆಗೆ ಒಳಪಡಿಸಿದವರು. ಅಕ್ಷರ
ಜಗತ್ತಿಗಿಂತ ಅನಕ್ಷರಸ್ಥ ಜಗತ್ತು ಅತ್ಯಂತ ಹೆಚ್ಚು
ಪ್ರಾಮಾಣಿಕವಾದದ್ದು ಮತ್ತು ಮಾನವೀಯ ಮುಖವುಳ್ಳದ್ದು
ಎಂದು ಬಲವಾಗಿ ನಂಬಿ ಪ್ರತಿಪಾದಿಸುತ್ತಾ
ಬಂದಿರುವ ಹಂದ್ರಾಳರವರು ತಮ್ಮ ಮನಸ್ಸಿಗೆ ಶೂನ್ಯತೆ
ಆವರಿಸಿಕೊಂಡಾಗ ನೇರವಾಗಿ ತಮ್ಮ ಬಾಲ್ಯದ
ಜಗತ್ತಿಗೆ ಜಾರಿಬಿಡುವ ರಹದಾರಿಯನ್ನು ಕಂಡುಕೊಂಡವರು.
ಕಥೆಗಳಲ್ಲದೆ
ತಮ್ಮ ಬಾಲ್ಯದ ನೆನಪುಗಳನ್ನು “ ಒಕ್ಕಲ
ನೆನಪು” ಎಂಬ ಹೆಸರಿನಲ್ಲಿ ಪರಿಣಾಮಕಾರಿಯಾಗಿ
ದಾಖಲಿಸಿ ಗ್ರಾಮೀಣ ಬದುಕಿನ ಸುಖ
ಮತ್ತು ದುಃಖ ದುಮ್ಮಾನಗಳನ್ನು ಹಾಸ್ಯದ
ಲೇಪನದೊಂದಿಗೆ ಕನ್ನಡಿಗರ
ಮುಂದೆ ಇಟ್ಟಿರುವ ಕೇಶವ ರೆಡ್ಡಿ ಹಂದ್ರಾಳರು
ಇದೀಗ ಅದರ ಮುಂದುವರಿದ ಭಾಗದಂತೆ
“ ಮರೆತ ಭಾರತ” ಕೃತಿಯನ್ನು ನಮ್ಮ ಮುಂದೆ ಇಟ್ಟಿದ್ದಾರೆ.
ಇಂದಿನ ವರ್ತಮಾನದ ಆಧುನಿಕ ಜಗತ್ತಿನ ಹಲವರ
ಪಾಲಿಗೆ ನನ್ನ ತಲೆಮಾರಿನ ಲೇಖಕರು ಗ್ರಾಮ
ಭಾರತದ ಕುರಿತು ಮಾತನಾಡುವುದು
ಸಿನಿಕತನವೆಂಬಂತೆ ತೋರುತ್ತಿದೆ. ಆದರೆ, ಗ್ರಾಮಭಾರತದ ಸಂಸ್ಕøತಿಯೊಳಗೆ ಹುದುಗಿ ಹೋಗಿರುವ
ತಾಯ್ತನದ ಬೇರಿನ ಪರಿಚಯವಿಲ್ಲದ ಹಾಗೂ ಮುಚ್ಚಿದ
ಬಾಗಿಲ ಸಂಸ್ಕøತಿಯೊಳಗೆ ಬೆಳೆದು
ಬಂದಿರುವ, ಎಂದಿಗೂ ಹೆತ್ತ
ತಾಯಿಯ ಎದೆ ಹಾಲು ಕುಡಿಯದೆ ಕೇವಲ “ಅಮುಲ್
ಬೇಬಿ ಪೌಡರ್ ನ ಹಾಲು
ಕುಡಿದ ಅಮುಲ್ ಬೇಬಿಗಳು” ಮಾತ್ರ ಮಾತನಾಡಬಹುದಾದ ಮಾತುಗಳಿವು.
ತಾಯಿಯ ಎದೆಹಾಲಿನೊಂದಿಗೆ, ನೆರೆಮನೆಯ ಸಾರು, ಮುದ್ದೆ ಅಷ್ಟೇ
ಅಲ್ಲ, ನೀರು,
ಬೆಂಕಿ, ಸಾವು, ನೋವು ಹೀಗೆ ಕಷ್ಟ ಸುಖಗಳನ್ನು ಸಹ ಹಂಚಿಕೊಂಡು ಬಂದ
ಹಳ್ಳಿಯಲ್ಲಿ ಬೆಳೆದ ಹಂದ್ರಾಳರು ಒಂದು
ಸಮುದಾಯದ ನೋವನ್ನು ತನ್ನ ವೈಯಕ್ತಿಕ
ನೋವೆಂದು ಪರಿಭಾವಿಸುವ ಗ್ರಾಮ ಸಂಸ್ಕøತಿಯ
ತಿರುಳನ್ನು ಮೈಗೂಡಿಸಿಕೊಂಡವರು. ತನ್ನ ಕಣ್ಣೆದುರು
ಕಂಡವರ ನೋವಿಗೆ ಮುಲಾಮು ಆಗುವ
ಅಥವಾ ಕಣ್ಣೀರಿಗೆ ಕರವಸ್ತ್ರವಾಗುವ ಅವರ ನಡೆಯಲ್ಲಾಗಲಿ ಅಥವಾ ನುಡಿಯಲ್ಲಾಗಲಿ ಯಾವುದೇ ಕೃತಿಮತೆಗಳಿಲ್ಲ ಏಕೆಂದರೆ,
ಅವರು ಬೆನ್ನಿಗೆ ಕಟ್ಟಿಕೊಂಡು ಬೆಳೆದ ಗ್ರಾಮಭಾರತದ ಸಂಸ್ಕತಿ ಅವರ ಬದುಕಿನುದ್ದಕ್ಕೂ
ಅವರ ಚಿಂತನೆಗಳ ಮೇಲೆ ಪ್ರಭಾವ ಬೀರಿರುವುದನ್ನು
ಈ ಕೃತಿಯಲ್ಲದೆ ಅವರ
ಎಲ್ಲಾ ಕೃತಿಗಳಲ್ಲೂ ನಾವು ಕಾಣಬಹುದು.
ಇಂದಿಗೂ
ಕೂಡ ನಾಗರೀಕ ಜಗತ್ತಿಗೆ ಭಾರತದ
ಹಳ್ಳಿಗಳ ಬಗ್ಗೆ ಒಂದು ರೀತಿಯ
ಅಪನಂಬಿಕೆ ಮತ್ತು ಅನಾದರಗಳಿವೆ. ಅದೊಂದು
ಮೌಡ್ಯ ಮತ್ತು ಅನಾಚಾರಗಳಿಂದ ತುಂಬಿದ
ಗೂಡು ಎಂಬ ಅಪಕ್ವ ಕಲ್ಪನೆಗಳಿವೆ
ಈ ದಿನಗಳಲ್ಲಿ ನಾವು
ಕಾಣುತ್ತಿರುವ ಗ್ರಾಮೀಣಜಗತ್ತು
ಜಾಗತೀಕರಣದ ಹೊಡೆತಕ್ಕೆ ಸಿಲುಕಿ ನಲುಗುವುದರ ಮೂಲಕ
ವೃದ್ಧರ ಅನಾಥಶ್ರಮಗಳಂತೆ ಕಾಣುತ್ತಿವೆ ನಿಜ ಆದರೆ, ಬದುಕಿನ
ಲವಲವಿಕೆಯ ಮೂಲಧಾತುಗಳು, ಜೀವಪರವಾದ ತುಡಿತಗಳು, ಸಕಲೆಂಟು ಜೀವರಾಶಿಗಳಿಗೆ ಒಳಿತನ್ನು
ಬಯಸುವ ಭಾವನೆಗಳು ಅದರ
ಮಣ್ಣಿನಡಿ ಹೂತು ಹೋಗಿವೆ. ಇವುಗಳನ್ನು
ನೋಡಲು ಹೊರಗಣ್ಣು ಸಾಲದು; ನಮ್ಮ ಒಳಗಣ್ಣನ್ನು
ತೆರೆಯಬೇಕು. ಈ ಕಾರಣಕ್ಕಾಗಿ ನಮ್ಮ
ದಾರ್ಶನಿಕ ಕವಿ ಕುವೆಂಪು ಅವರು ನಿರಂತರ
ಆರು ದಶಕಗಳ ಕಾಲ ಮೈಸೂರಿನಲ್ಲಿ
ನೆಲೆ ನಿಂತರೂ ಸಹ ಪ್ರತಿ
ಕ್ಷಣ ತಾನು ಹುಟ್ಟಿ ಬೆಳೆದ
ಮಲೆನಾಡನ್ನು ಧ್ಯಾನಿಸಿದರು.
‘ ಹೋಗುವೆ ನಾ ಹೋಗುವೆ ನಾ ನನ್ನ
ಒಲುಮೆಯ ಗೂಡಿಗೆ
ಮಲೆಯ ನಾಡಿಗೆ, ಮಳೆಯ ಬೀಡಿಗೆ,
ಸಿರಿಯ ಚೆಲುವಿನರೂಢಿಗೆ
ಬೇಸರಾಗಿದೆ ಬಯಲು, ಹೋಗುವೆ ಕಣಿವೆಯ
ಕಾಡಿಗೆ ;
ಹಸಿವು ಸೊಂಪಿನ ಬಿಸಿಲು ತಂಪಿನ
ಗಾನದಿಂಪಿನ ಕೂಡಿಗೆ
ಎಂದು ಹಗಲಿರುಳು ಹಂಬಲಿಸಿದ್ದರು.
ಇಂತಹದ್ದೇ
ಉತ್ಕಟ ಭಾವಗಳು ಗೆಳೆಯ ಕೇಶವರೆಡ್ಡಿ
ಹಂದ್ರಾಳರ ಇಲ್ಲಿನ ಪ್ರತಿ ಲೇಖನದ
ಪ್ರತಿ ಅಕ್ಷರಗಳಲ್ಲಿ ಎದ್ದು ಕಾಣುತ್ತವೆ. ಸರ್ಕಾರದ ಓರ್ವ ಹಿರಿಯ
ಅಧಿಕಾರಿಯಾಗಿ ಕಳೆದ ಎರಡು ವರ್ಷಗಳಿಂದ
ಶಿರಸಿಯ ಮಳೆ ಮತ್ತು ಹಸಿರು
ಹಾಗೂ ನಿಸರ್ಗದ ವೈಭವದ ನಡುವೆ
ಬದುಕುತ್ತಿರುವ ಹಂದ್ರಾಳ, ಶಿರಸಿಯ ಮಳೆಯ ಅನುಭವದ
ಜೊತೆ ತಮ್ಮ ಬಯಲುಸೀಮೆಯ ವಿಶೇಷವಾಗಿ
ತುಮಕೂರು ಜಿಲ್ಲೆಯ ಆಂಧ್ರಗಡಿಭಾಗದ ಮಧುಗಿರಿ
ತಾಲ್ಲೂಕಿನ ತಮ್ಮ ಹಳ್ಳಿಯ ಮಳೆಯ
ಅಭಾವದ ದಿನಗಳನ್ನೂ ನೆನೆಯುತ್ತಾರೆ. ಬೇಸಿಗೆ ಬವಣೆಯ ಆ ದಿನಗಳು, ಕುಡಿಯಲು
ನೀರಿಲ್ಲದೆ ಪರಿತಪಿಸುವ ದನಕರುಗಳು, ಬತ್ತಿ ಹೋದ ಕೆರೆಕುಂಟೆಗಳು,
ಮಳೆಗಾಗಿ ಮಳೆರಾಯನನ್ನು ಪೂಜಿಸಿ ಪ್ರಾಥಿಸುವ ರೈತಾಪಿ
ಜನರು ಹೀಗೆ ಎಲ್ಲರೂ ಅವರ ಸ್ಮತಿ ಪಟಲದ ಮೇಲೆ
ಹಾದು ಹೋಗುತ್ತಾರೆ.
ಹಂದ್ರಾಳರ
ಈ “ಮರೆತ ಭಾರತ” ಕೃತಿಯಲ್ಲಿ ಈವರೆಗೆ ಭಾರತದ ಅಕ್ಷರ
ಜಗತ್ತಿನಲ್ಲಿ ದಾಖಲಾಗದೆ ಉಳಿದ ಹಾಗೂ
ಆಧುನಿಕ ಜಗತ್ತಿನ ನಾಗರೀಕ ಸಂಸ್ಕøತಿಗೆ ಅಸ್ಪøಶ್ಯರಂತೆ ಕಾಣುವ ಅನಕ್ಷರಸ್ಥ
ಸಮುದಾಯದ ಪ್ರತಿನಿಧಿಗಳು ಹಂದ್ರಾಳರ ನೆನಪುಗಳಲ್ಲಿ ನಾಯಕರಾಗಿ ವಿಜೃಂಭಿಸಿದ್ದಾರೆ. ಹಳ್ಳಿ ಹಳ್ಳಿಗಳನ್ನು ಅಲೆಯುವ
ಬಳೆಗಾರ, ನೀರಗಂಟಿ, ಕುರಿಕಾಯುವವ, ಆಲೆಮನೆಯ ಕೂಲಿಯಾಳು, ಸೂಲಗಿತ್ತಿ,
ಕೃಷಿಕೂಲಿ ಕಾರ್ಮಿಕರಾದ ದಲಿತ ಹೆಣ್ಣು ಮಕ್ಕಳು,
ಅವರ ಬೇಸಾಯದ ನಾಟಿ ಪದಗಳು,
ಸೋಬಾನೆ ಪದಗಳು ಎಲ್ಲರೂ, ಎಲ್ಲವೂ
ಇಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿವೆ ಮತ್ತು ಪಡೆದುಕೊಂಡಿದ್ದಾರೆ,
ಅಂಬೇಡ್ಕರ್
ಅವರು ಗ್ರಾಮೀಣ ಜಗತ್ತನ್ನು ಜಾತಿ
ಮತ್ತು ಶ್ರೇಣಿಕೃತ ಸಮಾಜಗಳ ಕೊಂಪೆ ಎಂದು
ಜರಿದಿದ್ದರು. ಅವರದು ಪಾರಂಪರಿಕವಾಗಿ ಗ್ರಾಮೀಣ
ಜಗತ್ತಿನಲ್ಲಿ ಬೇರೂರಿದ್ದ ಅಸಮಾನತೆಯ ಜಗತ್ತನ್ನು ಅನುಭವಿಸಿದ ಮತ್ತು ನೋಡಿದ
ನೊಂದ ಮನಸ್ಸಿನ ತೀರ್ಮಾನವಾಗಿತ್ತು. ಆದರೆ
ಇದಕ್ಕೆ ಭಿನ್ನವಾದ ಪರಿಕಲ್ಪನೆ ಹೊಂದಿದ್ದ ಮಹಾತ್ಮ ಗಾಂಧೀಜಿಯವರು ಭಾರತದ
ಆತ್ಮ ಹಳ್ಳಿಗಳಲ್ಲಿದೆ ಎಂದಿದ್ದರು. ಈ ಇಬ್ಬರ ಅಭಿಪ್ರಾಯಗಳು
ವ್ಯಕ್ತಗೊಂಡು ಹಲವಾರು ದಶಕಗಳು ಕಳೆದು
ಹೋಗಿವೆ, ವರ್ತಮಾನದ ಜಗತ್ತಿನಲ್ಲಿ ನಿಂತು ಇಬ್ಬರ ಅಭಿಪ್ರಾಯಗಳನ್ನು
ವಿಶ್ಲೇಷಿಸಿದಾಗ ಈ ನಾಯಕರ ದೃಷ್ಟಿಕೋನಗಳಲ್ಲಿ
ದೋಷವಿದೆ ಎನಿಸುತ್ತೆ. ಏಕೆಂದರೆ, ಅಂಬೇಡ್ಕರ್ ಭಾವಿಸಿದಂತೆ ಭಾರತದ ಹಳ್ಳಿಗಳು ಶೋಷಿತ
ಸಮುದಾಯಗಳಾಗಿರಲಿಲ್ಲ; ಅದೇ ರೀತಿ ಗಾಂಧೀಜಿ
ಪರಿಭಾವಿಸಿದಂತೆ ಹಳ್ಳಿಗಳು ಪರಿಪೂರ್ಣವಾಗಿರಲಿಲ್ಲ. ಗ್ರಾಮ
ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಜಾತಿಯತೆ ಮತ್ತು ಕುಲ
ಕಸುಬುಗಳ ನಡುವೆಯೂ ಸಹ ಎಲ್ಲಾ ಜಾತಿಗಳ ನಡುವೆ
ಪರಸ್ಪರ ತಿಳುವಳಿಕೆಯಿತ್ತು. ವೃತ್ತಿಯನ್ನು ಗೌರವಿಸುವ ಹೃದಯ ಶ್ರೀಮಂತಿಕೆ ಅಂದಿನ
ಸಮುದಾಯಕ್ಕೆ ಇತ್ತು.
ನನ್ನ ಬಾಲ್ಯದ ದಿನಗಳಲ್ಲಿ ನಮ್ಮ
ಹಳ್ಳಿಗಳಲ್ಲಿ ಹಬ್ಬ ಅಥವಾ ಜಾತ್ರೆಯ
ಸಂದರ್ಭಗಳಲ್ಲಿ ಪ್ರದರ್ಶನವಾಗುತ್ತಿದ್ದ ಪೌರಾಣಿಕ ನಾಟಕಗಳಲ್ಲಿ ದಲಿತ,
ಸವರ್ಣಿಯ, ಬಣಜಿಗ,
ಮುಸಲ್ಮಾನ ಎಂಬ ಬೇಧ ಭಾವವಿಲ್ಲದೆ
ಎಲ್ಲರೂ ಅಭಿನಯಿಸುತ್ತಿದ್ದರು. ಊರೊಳಗಿನ ಚಾವಡಿ ಅಥವಾ
ದೇವಸ್ಥಾನದ ಅಂಗಳಗಳು ಎಲ್ಲರ ಕಲಾ
ಪ್ರದರ್ಶನಕ್ಕೆ ವೇದಿಕೆಯಾಗಿ ಪರಸ್ಪರ ಮನಸ್ಸುಗಳನ್ನು ಅರ್ಥಮಾಡಿಕೊಳ್ಳಲು
ಸಹಕಾರಿಯಾಗಿದ್ದವು. ಜಾತಿಯೆಂಬ
ಕೆಟ್ಟ ವ್ಯವಸ್ಥೆ ಜಾರಿಯಲ್ಲಿದ್ದರೂ ಕೂಡ ಜಾತಿಗಳ ಜೊತೆ
ಅಂಟಿಕೊಂಡಿದ್ದ ಕುಲಕಸುಬುಗಳು ಅವರನ್ನು ಕಿತ್ತಾಡದಂತೆ ಬೆಸದಿದ್ದವು.
ಮೊದಲ ಮುಂಗಾರು ಮಳೆ ಬಿದ್ದೊಡನೆ
ರೈತನ ಪಾಲಿಗೆ ಊರಿನಲ್ಲಿರುವ ಬಡಗಿ
ಅಥವಾ ಆಚಾರಿ ದೇವರಾಗುತ್ತಿದ್ದ. ಆತನ
ನೆರವಿಲ್ಲದೆ ರೈತನ ಬೇಸಾಯದ ಸಲಕರಣೆಗಳು
ಸಿದ್ದಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಅದೇ ರೀತಿಯಲ್ಲಿ ರಾಗಿ
ಅಥವಾ ಬತ್ತದ ನಾಟಿಯ ವೇಳೆಯಲ್ಲಿ
ದಲಿತ ಕೃಷಿ ಕೂಲಿಕಾರ್ಮಿಕರಾದ ಹೆಣ್ಣು
ಮಕ್ಕಳು ತಾಯಿ, ತಂಗಿಯರಾಗುತ್ತಿದ್ದರು. ಹೆಚ್ಚಾಗಿ
ಹಣದ ವಿನಿಮಯವಿಲ್ಲದ ಆ ಕಾಲದಲ್ಲಿ ರೈತನ
ಬದುಕು ಮತ್ತು ಅವನು ಬೆಳೆದ
ದವಸ ಧಾನ್ಯಗಳ ಜೊತೆ ಪ್ರತಿ
ಹಳ್ಳಿಯ ಆಚಾರಿ, ಕ್ಷೌರಿಕ, ಅಗಸ,
ಶ್ರಾವಣ ದಿನಗಳಲ್ಲಿ ಮನೆಗೆ ಬರುವ ದಾಸಯ್ಯ,
ಎತ್ತುಗಳಿಗೆ ಲಾಳ ಹಾಕುವ ಮುಸಲ್ಮಾನ,
ಊರಾಚೆಗಿನ ಅಥವಾ ಒಳಗಿನ ದೇವಸ್ಥಾನದಲ್ಲಿ
ಶ್ರದ್ದೆಯಿಂದ ಪೂಜೆ ಸಲ್ಲಿಸುತ್ತಿದ್ದ ಪೂಜಾರಿ
ಹೀಗೆ ಎಲ್ಲರ ಬದುಕು ತಳಕು
ಹಾಕಿಕೊಂಡಿರುತ್ತಿತ್ತು. ಈ ಕಾರಣಕ್ಕಾಗಿ ನಮ್ಮ
ಹಿರಿಯರಿಗೆ ರೈತನನ್ನು “ ಅನ್ನದಾತ” ಎಂದು ಕರೆಯುವ ಹೃದಯ
ವೈಶಾಲ್ಯತೆಯಿತ್ತು.
ನಾವು
ಚರಿತ್ರೆಯನ್ನು ಮುರಿದು
ಕಟ್ಟದೆ ಅಥವಾ ಅದರ
ಸಿದ್ದ ಮಾದರಿಗಳನ್ನು ಮರು ವಿಮರ್ಶೆಗೆ ಒಳಪಡಿಸಿ
ಬದಲಾಯಿಸದೆ ಉಳಿಸಿಕೊಂಡರೆ ಗ್ರಾಮೀಣ ಭಾರತದ ಬಗೆಗಿನ
ಅಭಿಪ್ರಾಯಗಳು ಬದಲಾಗಲು ಸಾಧ್ಯವಿಲ್ಲ. ಗ್ರಾಮೀಣ
ಜಗತ್ತಿನ ಸಿದ್ಧಮಾದರಿಯ ಅಪಕ್ವ ನಂಬಿಕೆಗಳನ್ನು ಪಲ್ಲಟಗೊಳಿಸಬಲ್ಲ
ತಾಕತ್ತು ಕೇಶವ ರೆಡ್ಡಿ ಹಂದ್ರಾಳರ
ಈ ಕೃತಿಯಲ್ಲಿದೆ ಎಂಬುದು
ನನ್ನ ಬಲವಾದ ನಂಬಿಕೆ. ಬಡವರ
ಬಾದಾಮಿ ಎನ್ನುವ ಕಡ್ಲೆಕಾಯಿ ಅಥವಾ
ಶೇಂಗಾ ಬೀಜವನ್ನು ಅವರು “ ಗಾಂಧಿ ಬೀಜ” ಎಂದು ಈ ಕೃತಿಯ ಒಂದು
ಲೇಕನದಲ್ಲಿ ಕರೆದಿರುವುದು, ಅವರ ಆಳವಾದ ನೋಟಕ್ಕೆ
ಸಾಕ್ಷಿಯಾಗಿದೆ. ಬಡತನ ಮತ್ತು ಹಸಿವು
ಇವುಗಳ ಅನುಭವವಿಲ್ಲದವರಿಗೆ ಶೇಂಗಾ ಬೀಜದ ಮಹತ್ವ
ಅರ್ಥವಾಗುವುದಿಲ್ಲ. ಒಂದು ಬೊಗಸೆ ಕಡ್ಲೆಕಾಯಿ
ಮತ್ತು ಕೆರೆ, ಕುಮಟೆ, ಕಾಲುವೆಗಳಲ್ಲಿ
ಸಿಗುತ್ತಿದ್ದ ಎರಡು
ಬೊಗಸೆ ನೀರು ಇವುಗಳು
ಶತಮಾನಗಳ ಕಾಲ ಭಾರತದ ಬಡವರನ್ನು
ಹಸಿವಿನ ಹೆಬ್ಬುಲಿಯಿಂದ ಕಾಪಾಡಿವೆ. ಹಸಿವು, ಬಡತನ ಮತ್ತು
ಅಪಮಾನಗಳ ಅಗ್ನಿಕುಂಡವನ್ನು ಹಾಯ್ದವರಿಗೆ ಮಾತ್ರ ಅರ್ಥವಾಗುವ ಸಂಗತಿಗಳಿವು.
ಹಾಗಾಗಿ ನಾನು ಹಂದ್ರಾಳರ “ ಮರೆತ
ಭಾರತ” ಕೃತಿಯನ್ನು ಘಾಸಿಗೊಂಡವರ ಕಥನ ಎಂದು ಕರೆದಿದ್ದೇನೆ.
ಕೇಶವರೆಡ್ಡಿ ಹಂದ್ರಾಳರ ಬರಹಗಳಲ್ಲಿ ವಿಶೇಷವಾಗಿ ಅವರ ಕಥೆಗಳಲ್ಲಿ ಜೀವಪರವಾದ ಧ್ವನಿಯೊಂದು ಗುಪ್ತನದಿಯಂತೆ ನಿರಂತರ ಹರಿಯುತ್ತಿರುವುದರ ಹಿಂದೆ ಅವರ
ಬಾಲ್ಯದ ದಟ್ಟ ನೆನಪುಗಳು ಸಹ ಪ್ರಮುಖ
ಕಾರಣವಾಗಿವೆ. ಎಂಬುದು ನನ್ನ ನಂಬಿಕೆ. ಈ
ಮಾನವೀಯತೆಯ ನಿಲುವು ಅವರ ಎದೆಯೊಳಗೆ
ಹೀಗೆ ಶಾಶ್ವತವಾಗಿರಲಿ ಎಂಬುದು ನನ್ನ ಮನದಾಳದ
ಆಸೆ ಮತ್ತು ಹಾರೈಕೆ.