( ನನ್ನ ಅಪ್ಪ ನಂಜೇಗೌಡ)
ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ, ಮತ್ತು ಅವರ ಬವಣೆಯ ಬದುಕು ಹಾಗೂ ರೈತರ ಕುಟುಂಬಗಳ ಕಣ್ಣೀರಿನ ಕಥೆ ಇವೆಲ್ಲವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಈ ಜಗತ್ತಿನಲ್ಲಿ ಮೌಲ್ಯ ಮತ್ತು ಪ್ರತಿಫಲವಿಲ್ಲದ ವೃತ್ತಿ ಎಂಬುದು ಇರುವುದಾದರೆ ಅದು ಬೇಸಾಯದ ವೃತ್ತಿ ಎಂದು ನಿಸ್ಸಂಕೋಚವಾಗಿ ಹೇಳಬಹುದು. ಇದು ಹಲವರಿಗೆ ಸಿನಿಕತನದ ಮಾತೆಂದು ಕಂಡು ಬಂದರೆ ಅಶ್ಚರ್ಯವಿಲ್ಲ. ಸ್ವತಃ ಒಬ್ಬ ಬೇಸಾಯಗಾರನ ಮಗನಾಗಿ ಹುಟ್ಟಿ ನನ್ನ ಕುಟುಂಬದ ಬೇಸಾಯದ ಬವಣೆಗಳನ್ನು ಮತ್ತು ನನ್ನ ಸಹೋದರರು ಈ ವೃತ್ತಿಗೆ ಬೆನ್ನು ತಿರುಗಿಸಿ ಕುಳಿತಿರುವ ಪರಿಯನ್ನು ಗಮನಿಸಿದಾಗ ಅವರ ಈ ನಿರ್ಧಾರ ಸರಿಯಾದುದೇನೋ? ಎಂದು ಅನಿಸತೊಡಗಿದೆ. ಸುಮಾರು ಮೂರು ಶತಮಾನಗಳ ಕಾಲ ಬೇಸಾಯವನ್ನು ನಂಬಿ ಬದುಕು ಕಟ್ಟಿಕೊಂಡ ನನ್ನ ಕುಟುಂಬದಲ್ಲಿ ನನ್ನ ತಲೆಮಾರಿಗೆ ಬೇಸಾಯದ ಜೊತೆ ಈವರೆಗೆ ಇದ್ದ ಕಳ್ಳು ಬಳ್ಳಿಯ ಸಂಬಂಧ ಕತ್ತರಿಸಿ ಹೊಗುತ್ತಿದೆ. ಇದು ನಾನು ಮತ್ತು ನನ್ನ ಸಹೋದರರು ಜೀರ್ಣಿಸಿಕೊಳ್ಳಬೇಕಾಗಿರುವ ವಾಸ್ತವ ಕಹಿ ಸತ್ಯ.
ನಾವು ನಾಲ್ವರು ಸಹೋದರರಲ್ಲಿ ನಾನು ಮತ್ತು ಕಿರಿಯವನು ಈ ವೃತ್ತಿಯಿಂದ ದೂರ ಉಳಿದ ಕಾರಣದಿಂದಾಗಿ ಊರಿನಲ್ಲಿರುವ ಇಬ್ಬರು ಸಹೋದರರು ಮಾತ್ರ ಬೇಸಾಯ ನಂಬಿಕೊಂಡು ಬದುಕುತ್ತಿದ್ದಾರೆ.
ನನ್ನಪ್ಪನ ಸಾವಿನ ನಂತರ ನಾವು ಸಹೋದರರು ಜಮೀನುಗಳನ್ನು ಹಂಚಿಕೊಳ್ಳದ ಕಾರಣದಿಂದಾಗಿ ಊರಿನಲ್ಲಿ ಬೇಸಾಯ ಮಾಡುವವರು ಕೊಂಚ ನೆಮ್ಮದಿಯಿಂದ ಬದುಕಿದ್ದಾರೆ. ಆದರೆ, ಬೇಸಾಯ ಮಾಡುತ್ತಿರುವ ನನ್ನ ಸಹೋದರನೊಬ್ಬನ ಮಗ ಬೆಂಗಳೂರಿನ ಖಾಸಾಗಿ ಕಂಪನಿಯಲ್ಲಿದ್ದುಕೊಂಡುಸಿಂಗಾಪುರ, ಬಾಂಕಾಂಗ್ ಥಾಯ್ಲೆಂಡ್ ಎಂದು ದೇಶ ಸುತ್ತುತ್ತಿರುವ ಅವನು ಎಂದೂ ಬೇಸಾಯದತ್ತ ತಿರುಗಿ ನೋಡಲಿಲ್ಲ, ಇನ್ನೂ ನನ್ನ ಮಗ ಹುಟ್ಟಿದ ಊರಿನಲ್ಲಿ ಮೊದಲ ಎಂಟು ವರ್ಷ ಕಳೆದದ್ದನ್ನು ಹೊರತುಪಡಿಸಿದರೆ, ಅಪ್ಪನ ಊರು ಹೇಗಿದೆ ಎಂದು ವಿಚಾರಿಸಿದವನಲ್ಲ. ಅರಣ್ಯಾಧಿಕಾರಿಯಾಗಿ ಬದುಕು ಕಟ್ಟಿಕೊಂಡ ಅವನಿಗೆ ಅಪ್ಪನ ಆಸ್ತಿಯಾಗಲಿ, ಊರಾಗಲಿ ಈಗ ಬೇಡವಾಗಿದೆ. ಇನ್ನುಳಿದ ಒಬ್ಬ ಸಹೋದರರಿಗೆ ಗಂಡು ಸಂತಾನವಿಲ್ಲ ಇದ್ದ ಒಬ್ಬ ಹೆಣ್ಣು
ಮಗಳು ವಿವಾಹವಾಗಿ ತವರು ಮನೆ ತೊರೆದಿದ್ದಾಳೆ..ಇಷ್ಟು ವರ್ಷ ನಮ್ಮನ್ನೆಲ್ಲಾ ಪೊರೆದ ಭೂಮಿ ತಾಯಿಯ ಸಂಬಂಧವನ್ನು ನಾನು ಮತ್ತು ನನ್ನ ಸಹೋದರರು ನಮ್ಮ ಸಾವಿನೊಂದಿಗೆ ಕಳೆದುಕೊಳ್ಳಲಿದ್ದೇವೆ. ಇದು ಹೇಳಲಾರದ, ಅನುಭವಿಸಲಾರದ ನಮ್ಮೊಳಗಿನ ಸಂಕಟಗಳು.
( ನನ್ನ ತಮ್ಮನ ಮಗ ಮಂಜುಗೌಡ)
ಇತ್ತೀಚೆಗೆ (ಕಳೆದ ವರ್ಷ) ನಾನು ಮತ್ತು ನನ್ನ ಪತ್ನಿ ಇಬ್ಬರೂ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ದೇವರಕಾಡುಗಳು ಮತ್ತು ಬೇಸಾಯದ ಬದುಕನ್ನು ಅರಿಯಲು ಎರಡು ರಾತ್ರಿ ಮತ್ತು ಮೂರು ಹಗಲು ಶಿರಸಿ, ಅಂಕೋಲಾ, ಕುಮಟಾ, ಕೊಲ್ಲೂರು ಅರಣ್ಯ ಮತ್ತು ಕುಂದಾಪುರ, ಹಿರಿಯಡ್ಕ, ಉಡುಪಿ, ಬೆಳ್ತಂಗಡಿ, ಮೂಡುಬಿದರೆ, ಗುರುವಾಯೂರು ಹೀಗೆ ಹಲವು ಊರುಗಳನ್ನು ಸುತ್ತಿದೆವು. ಅಲ್ಲಿನ ಬೇಸಾಯದ ರೀತಿ ರಿವಾಜುಗಳು, ಜನರಿಗೆ ಭೂಮಿಯ ಮೇಲಿರುವ ಪ್ರೀತಿ ಬದ್ಧತೆ, ಇವೆಲ್ಲವನ್ನು ಗಮನಿಸಿದ ನಂತರ ಬೇಸಾಯ ವೃತಿಯ ಸಂಕಟಗಳು ಮತ್ತು ಅದರೊಂದಿಗಿನ ನನ್ನ ಬಾಲ್ಯದ ನೆನಪುಗಳು ಎಡೆಬಿಡದೆ ನನ್ನನ್ನು ಕಾಡುತ್ತಿವೆ. ಕುಂದಾಪುರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ಸುರಿವ ಮಳೆಯಲ್ಲಿ ತಾವು ಬೆಳೆದ ತರಕಾರಿಗಳನ್ನು ಮಾರಾಟ ಮಾಡಲು ಪಡುತ್ತಿದ್ದ ಬವಣೆ ನೋಡಿ ನನ್ನ ಶತ್ರುವಿಗೂ ಈ ಬೇಸಾಯವೆಂಬ ವೃತ್ತಿ ಬೇಡ ಎಂಬ ಭಾವನೆ ಮನಸ್ಸಿನಲ್ಲಿ ಮೂಡಿಬಂತು. ನಿವೃತ್ತಿಯ ನಂತರ ಬೇಸಾಯ ವೃತ್ತಿಗೆ ತೆರಳಬೇಕೆಂಬ ನನ್ನ ಕನಸುಗಳು
ಕರಗಿ ಹೋದವು.
ನನಗಿನ್ನೂ ನೆನಪಿದೆ. ಅದು 1968
ನೇ ಇಸವಿ. ನನಗಾಗ ಹನ್ನೊಂದು ವರ್ಷ ವಯಸ್ಸು. ಶಾಲೆ ಮುಗಿದ ನಂತರ ಯಾವಾಗಲೂ ಅಪ್ಪನ ಜೊತೆ, ತೋಟ, ಗದ್ದೆ, ಹೊಲ ಎಂದು ತಿರುಗುತ್ತಿದ್ದೆ. ರಾತ್ರಿಯ ವೇಳೆ ಅಪ್ಪ ಊರಾಚೆ ಮಾಡುತ್ತಿದ್ದ ಕಣದಲ್ಲಿ ಭತ್ತ ಮತ್ತು ರಾಗಿಯ ಮೆದೆಗಳನ್ನು(ಬಣವೆ) ಕಾಯುತ್ತಾ ಪುಟ್ಟ ಗುಡಿಸಲಿನಲ್ಲಿ ಲಾಟೀನ್ ದೀಪದ ಬೆಳಕಿನಲ್ಲಿ ಅಪ್ಪನ ಕಂಬಳಿಯೊಳಗೆ ಕಾಂಗರೊ ಪ್ರಾಣಿಯ ಹೊಟ್ಟೆಯೊಳಗಿನ ಮರಿಯಂತೆ ಹುದುಗಿ ಮಲಗುತ್ತಿದ್ದೆ. ಆ ವರ್ಷ ಬೆಲ್ಲದ ಬೆಲೆ ತೀವ್ರ ವಾಗಿ ಇಳಿದು ಹೋಗಿತ್ತು. ಒಂದು ಸಾವಿರ ಬೆಲ್ಲದ ಬೆಲೆ ಕೇವಲ ಒಂಬತ್ತು ರೂಪಾಯಿಗೆ ತಲುಪಿತ್ತು. ( ಮಂಡ್ಯ ಜಿಲ್ಲೆಯಲ್ಲಿ ಬೆಲ್ಲದ ಅಚ್ಚುಗಳನ್ನು ತಯಾರಿಸುತ್ತಾರೆ. ಐವತ್ತು ಬೆಲ್ಲದ ಅಚ್ಚುಗಳನ್ನು ಕೂಡಿಸಿ ಪಿಂಡಿ ಕಟ್ಟುತ್ತಾರೆ. ಇಪ್ಪತ್ತು ಪಿಂಡಿಗಳಿಗೆ ಒಂದು ಸಾವಿರ ಬೆಲ್ಲ ಎಂದು ಲೆಕ್ಕ) ಕಬ್ಬು ಕಡಿಯುವುದು, ಸಾಕಾಣೆ ಮಾಡುವುದು, ಮತ್ತು ಆಲೆಮನೆಯಲ್ಲಿ ಅರೆಯುವುದು ಹೀಗೆ ಒಟ್ಟು ವೆಚ್ಚ ಒಂದು ಸಾವಿರಕ್ಕೆ ಹನ್ನೆರೆಡು ರೂಪಾಯಿ ತಗುಲುತ್ತಿತ್ತು. ಅಂದರೆ, ಕಬ್ಬನ್ನು
ಮುರಿಸಿ ಆಲೆಮನೆಗೆ ಸಾಗಿಸಿದರೆ,ಕೈಯಿಂದ ಹಣ ಕಳೆದುಕೊಳ್ಳುವ ಸ್ಥಿತಿ. ಈ ಸ್ಥಿತಿಯಲ್ಲಿ ಅಪ್ಪ ಹನ್ನೆರೆಡು ತಿಂಗಳಿಗೆ ಕಟಾವು ಮಾಡಬೇಕಿದ್ದ ಕಬ್ಬಿಗೆ ಹದಿನೈದು ತಿಂಗಳುವರೆಗೆ ಕಾದ. ನಂತರ ಒಂದು ಧೃಡ ನಿರ್ಧಾರ
ತೆಗೆದುಕೊಂಡನಂತೆ ಇಡೀ ಎರಡು ಎಕರೆ ಕಬ್ಬಿನ ಗದ್ದೆಗೆ ತಾನೆ ನಿಂತು ಬೆಂಕಿ ಹಚ್ಚಿದ. ಇಡೀ ಕಬ್ಬಿನ ಗದ್ದೆ ಧಗ ಧಗನೆ ಹತ್ತಿ ಉರಿಯುತ್ತಿದ್ದಾಗ, ಅಪ್ಪ, ಗದ್ದೆ ತೆವರಿನ (ಬದು) ಮೇಲೆ ಕುಳಿತು ತನ್ನ ಮುಖಕ್ಕೆ ಟವಲ್ ಹಿಡಿದುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದ. ನನ್ನಪ್ಪನ ಆ ಚಿತ್ರ ಇವೊತ್ತಿಗೂ ನನ್ನೆದೆಯೊಳಗೆ ಶಿಲಾ ಶಾಸನದ ಬರಹದಂತೆ ಅಚ್ಚೊತ್ತಿ ಕುಳಿತು ಬಿಟ್ಟಿದೆ. ರೈತನೊಬ್ಬನ ಸಂಕಟಗಳೇನು ಎಂಬದು ಈಗ ಅರ್ಥವಾಗತೊಡಗಿದೆ.
ನನ್ನ ಪುತ್ರ ಅನನ್ಯ
ಬದುಕಿಗೆ ಯಾವುದೇ ನೆಲೆಯಿಲ್ಲದೆ ಕೂಲಿಯನ್ನು ವೃತ್ತಿಯನ್ನಾಗಿ ಆಶ್ರಯಿಸಿಕೊಂಡಿರುವ ಒಬ್ಬ ಶ್ರಮಜೀವಿ ಇಂದಿನ ದಿನಗಳಲ್ಲಿ ತನ್ನ ಶ್ರಮಕ್ಕೆ ತಕ್ಕ ಕೂಲಿ ಸಿಗದಿದ್ದರೆ ಆತ ಹಸಿವಿನಿಂದ ಇದ್ದರೂ ಕೂಡ ಮೂಟೆ ಹೊರಲು ಇಲ್ಲವೆ ಸಾಮಾನು ಹೊರಲು ನಿರಾಕರಿಸುತ್ತಾನೆ. ಇದನ್ನು ನಾವು ಅವನ ಅಹಂಕಾರವೆಂದು ಕರೆಯಲಾಗದು. ಹಸಿವಿನ ನಡುವೆ ಆತ ತನ್ನ ಶ್ರಮದ ಬಗ್ಗೆ ಇಟ್ಟುಕೊಂಡಿರುವ ಗೌರವ, ಸ್ಭಾಭಿಮಾನ ಇವೆಲ್ಲವನ್ನೂ ನಾವು ಪರಿಗಣಿಸಬೇಕಿದ ಜೊತೆಗೆ
ಗೌರವಿಸಬೇಕಾಗಿದೆ.. ಒಬ್ಬ ಕೂಲಿಕಾರನಿಗೆ ಇರುವ ತನ್ನ
ವೃತ್ತಿಯ ಬಗೆಗಿನ ಸ್ವಾತಂತ್ರ್ಯ ಈ ದೇಶದಲ್ಲಿ ಒಬ್ಬ ಬೇಸಾಯಗಾರನಿಗೆ ಇಲ್ಲ ಎಂದರೆ, ಇದಕ್ಕಿಂತ
ದುರಂತ ಬೇರೆ ಬೇಕೆ?
ಈ ದಿನ ನಮ್ಮೆದುರು ಅಕ್ಕಿ, ತರಕಾರಿ, ಬೇಳೆ, ಈರುಳ್ಳಿ ಮುಂತಾದ
ಅವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಬದುಕಿಗೆ ದೂಡಿವೆ. ಈರುಳ್ಳಿಗೆ ತಲಾ ಕೇಜಿಯಂತೆ ನಾವು ನೀಡಿದ ಮುವತ್ತು ರೂಪಾಯಿ ಅಥವಾ ನಲವತ್ತು ರೂಪಾಯಿ ರೈತನಿಗೆ ನೇರವಾಗಿ
ಸಂದಾಯವಾಗುತ್ತದೆ ಎಂಬ ಕಲ್ಪನೆ ಹಲವು ಗ್ರಾಹಕರಲ್ಲಿ ಇದೆ. ರೈತನಿಂದ ಕೆ.ಜಿ.ಒಂದಕ್ಕೆ ಹದಿನೈದು ರೂಪಾಯಿನಿಂದ ಹಿಡಿದು ಇಪ್ಪತ್ತು ರೂಪಾಯಿ ಬೆಲೆಯಲ್ಲಿ ಕ್ವಿಂಟಾಲ್ ಗಟ್ಟಲೆ ಖರೀದಿಸಿದ ಈರುಳ್ಳಿ ಬೆಲೆ,ಯು ಮಾರ್ಗ ಮಧ್ಯದಲ್ಲಿ ಮುವತ್ತು ಅಥವಾ
ನಲವತ್ತು ರೂಪಾಯಿಗೆ ಹೇಗೆ ಏರಿತು? ಈ ಲಾಭ ಯಾರ ಕಿಸೆಗೆ ಸೇರಿತು? ಎಂಬುದರ ಬಗ್ಗೆ ನಾವು ಯಾವತ್ತೂ ಗಂಭೀರವಾಗಿ ಯೋಚಿಸಿದವರಲ್ಲ.
ಏಕಕಾಲದಲ್ಲಿ ಉತ್ಪಾದಕ ಮತ್ತು ಗ್ರಾಹಕ ಇಬ್ಬರನ್ನೂ ಶೋಷಿಸುವ ಜಗತ್ತು ಎಂಬುದು ಇದ್ದರೆ ಅದು ಭಾರತದಲ್ಲಿ ಮಾತ್ರ. ಇವೊತ್ತಿಗೂ ಈ ದೇಶದಲ್ಲಿ ಕೃಷಿ ಉತ್ಪನ್ನಗಳಿಗೆ ನಿಗದಿತ ಬೆಲೆ ಎಂಬುದು ಇಲ್ಲ ಎಂದರೆ ಅದಕ್ಕಿಂತ ದುರಂತ ಬೇರೇನು ಬೇಕು? ಒಂದು ಗುಂಡು ಪಿನ್ನು. ತಯಾರಿಸುವವನಿಗೆ, ಬೆಂಕಿಕಡ್ಡಿ ತಯಾರಿಸುವವನಿಗೆ, ಚಪ್ಪಲಿ ತಯಾರಿಸುವವನಿಗೆ ತನ್ನ ವಸ್ತುವಿಗೆ ಬೆಲೆ ನಿರ್ಧರಿಸಲು ಇರುವ ಸ್ವಾತಂತ್ಯ ಇಂದು ಈ ದೇಶದಲ್ಲಿ ಅನ್ನಧಾತ ಎನಿಸಿಕೊಂಡ ರೈತನಿಗೆ ಇಲ್ಲ. ಒಂದು
ಕಡೆ ಭತ್ತ, ಕಬ್ಬು, ತೊಗರಿಬೇಳೆ, ತೆಂಗಿನ ಕಾಯಿ ಮುಂತಾದ ಬೆಳೆಗಳಿಗೆ ಕೃಷಿ ಮಾರು ಕಟ್ಟೆಯಲ್ಲಿ
ಸೂಕ್ತ ಬೆಲೆ ಇಲ್ಲ ಎಂಬ ಕಾರಣಕ್ಕಾಗಿ ಬೆಂಬಲ ಬೆಲೆ
ಘೋಷಿಸುವ ಸರ್ಕಾರ ಮತ್ತೊಂದು ಕಡೆ
ಅಕ್ಕಿ, ಸಕ್ಕರೆ, ಬೇಳೆ, ತರಕಾರಿ ಬೆಲೆಗಳು ಗಗನಕ್ಕೇರಿ ಕೊಳ್ಳಲಾಗದೆ
ತತ್ತ್ರಿಸುತ್ತಿರುವ ಜನಸಾಮಾನ್ಯರು. ಕೃಷಿ ಮಾರುಕಟ್ಟೆಯಲ್ಲಿ ರೈತನಿಂದ ಮಾರಾಟವಾಗುವ
ಉತ್ಪನ್ನಗಳಿಗೆ ಇಲ್ಲದಿರುವ ಬೆಲೆ, ಗ್ರಾಹಕರಿಗೆ ಮಾರಾಟ ಮಾಡುವಾಗ ಹೇಗೆ ಬಂತು? ಇದರ ಮಧ್ಯವರ್ತಿಗಳು ಯಾರು? ಕೃಷಿ
ಉತ್ಪನ್ನಗಳ ಲಾಭ ಯಾರ ತಿಜೋರಿಗೆ ಹರಿಯುತ್ತಿದೆ?
ರೈತನ ಕುರಿತು ಮತ್ತು , ಆತನ ಶ್ರಮದ ಬಗ್ಗೆ ವೇದಿಕೆಗಳಲ್ಲಿ ಮಾತನಾಡುವ ನಮ್ಮ ರಾಜಕಾರಣಿಗಳಿಗೆ ರೈತನ
ಬೆವರಿಗೆ ಮತ್ತು ಶ್ರಮಕ್ಕೆ ಇರುವ ಮೌಲ್ಯ ಮತ್ತು
ಬೇಸಾಯದೊಂದಿಗೆ ಇರುವ ಆತನ ಆಧ್ಯಾತ್ಮಿಕ ಮನೋಭಾವದ
ಬದುಕು ಅರ್ಥವಾಗಬಲ್ಲದೆ?
ಭಾರತದಲ್ಲಿ ಆತ್ಮ ಹತ್ಯೆಯ ಮೂಲಕ ತರಗೆಲೆಗಳಂತೆ ನೆಲಕ್ಕುರುಳುತ್ತಿರುವ ರೈತರ ಸಾವಿನಲ್ಲಿ ಕೆಲವು ಸ್ವಯಂ ಕೃತ ಅಪರಾಧಗಳಿವೆ ಇದನ್ನು ತಳ್ಳಿ ಹಾಕಲಾಗದು. ಆದರೆ, ಸಾವಿಗೆ ಶರಣಾದ ಶೇಕಡ ತೊಂಬತ್ತರಷ್ಟು ರೈತರ ಸಾವು ಈ ವ್ಯವಸ್ಥೆಯ ಕ್ರೂರತನದಿಂದ ಸಂಭವಿಸಿದ್ದು ಎಂಬ ಸತ್ಯವನ್ನು ತಳ್ಳಿ
ಹಾಕಲು ಸಾದ್ಯವೆ? ಇಂತಹ ಅಭದ್ರತೆಯ ನಡುವಿನ
ಹೀನ ಸ್ಥಿತಿಯಲ್ಲಿ ರೈತ ಇನ್ನೂ ಏಕೆ ಭೂಮಿ ನೆಚ್ಚಿಕೊಂಡಿದ್ದಾನೆ? ಇದು ಅಕ್ಷರಕ್ಕೆ ಮತ್ತು ಮಾತಿಗೆ ನಿಲುಕದ ಅವಿನಾಭಾವ ಸಂಬಂಧ. ಭೂಮಿತಾಯಿ ನಮ್ಮನ್ನು ಕೈ ಬಿಡಲಾರಳು ಎಂಬ ರೈತರ ಒಂದು ಅಚಲ ನಂಬಿಕೆಯಿಂದಾಗಿ ನಾವೆಲ್ಲಾ ಬದುಕುತ್ತಿರುವ
ಈ ವರ್ತಮಾನದ ಜಗತ್ತಿನಲ್ಲಿ ಒಂದಿಷ್ಟು ಅನ್ನ ತಿನ್ನುತ್ತಿದ್ದೆವೆ. ಅನ್ನಧಾತ ಭೂಮಿಯ ಮೇಲಿನ ನಂಬಿಕೆ ಕಳೆದುಕೊಂಡ ದಿನ ನಾವು ಹೊಟ್ಟೆಗೆ ಏನನ್ನು ತಿನ್ನಬೇಕು ಈ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಈ ಕುರಿತು ಸಂಶೋಧನೆ ನಡೆಯಬೇಕಿದೆ ಜೊತೆಗೆ ನಾವೂ ಕೂಡ ಯೋಚಿಸಬೇಕಾಗಿದೆ.