ಶುಕ್ರವಾರ, ಜುಲೈ 31, 2015

ಜಾಗತೀಕರಣದ ಕರಿನೆರಳಲ್ಲಿ ಭಾರತದ ಉನ್ನತ ಶಿಕ್ಷಣ



ಅನ್ನ ದಾನ ಮತ್ತು ಶಿಕ್ಷಣ ದಾನ ಎಲ್ಲಾ ಧಾನಗಳಲ್ಲಿ ಶ್ರೇಷ್ಠ  ಎಂಬ ನಂಬಿಕೆಯ ಕಾಲವೂ ಭಾರತದ ಭವ್ಯ ಪರಂಪರೆ ಮತ್ತು ಸಂಸ್ಕೃತಿಗಳಲ್ಲಿ ಒಂದಾಗಿತ್ತು. ಆದರೆ, ಮಾನವೀಯ ಮುಖವಿಲ್ಲದ, ಲಾಭಕೋರತನವೇ ಗುರಿ ಎಂಬ ಸಿದ್ಧಾಂತದೊಂದಿಗೆ ಜಗತ್ತಿಗೆ ಕಾಲಿಟ್ಟ ಜಾಗತೀಕರಣದ ವ್ಯವಸ್ಥೆಯಿಂದಾಗಿ ಮಾನವೀಯ ಜಗತ್ತು ಕಣ್ಮರೆಯಾಗಿದೆ.
ಹಣದ ಮಳೆ ಸುರಿಸುವ ಲಾಭದಾಯಕ ದಂಧೆಗಳಲ್ಲಿ ಈಗ ಉನ್ನತ ಶಿಕ್ಷಣವೂ ಒಂದಾಗಿದೆ. ಭಾರತದಲ್ಲಿ ಒಂದು ಕಾಲದಲ್ಲಿ ಟಿ.ಸಿ.ಹೆಚ್, ನರ್ಸಿಂಗ್, ಬಿ.ಎಡ್. ಡಿಪ್ಲಮೋ ಕೋರ್ಸ್ ಗಳು ಹಣದ ಬೆಳೆ ತೆಗೆಯುವಲ್ಲಿ ಬಹಳ ಮುಖ್ಯವಾಗಿದ್ದವು. ಕಳೆದ ದಶಕದಿಂದೀಚೆಗೆ ಇಂಜಿನಿಯರಿಂಗ್, ವೈದ್ಯಕೀಯ ಹಾಗೂ ಮ್ಯಾನೇಜ್ ಮೆಂಟ್ ಕೋರ್ಸ್ ಗಳು ಈ ಸ್ಥಾನವನ್ನು ಅಲಂಕರಿಸಿವೆ. ಹಾಗಾಗಿ  ಭಾರತದ ಬಹುತೇಕ ಶಿಕ್ಷಣ ಸಂಸ್ಥೆಗಳು ಇಂತಹ ಉನ್ನತ ಶಿಕ್ಷಣದ ಕೋರ್ಸ್ ಗಳಿಗೆ ಇನ್ನಿಲ್ಲದ ಮಹತ್ವ ನೀಡಿವೆ. ಸೋಜಿಗವೆಂದರೆ, ಉನ್ನತ ಶಿಕ್ಷಣ ನೀಡುವ ಬಹುತೇಕ ಸಂಸ್ಥೆಗಳು ದೇಶದ ರಾಜಕಾರಣಿಗಳ ಮತ್ತು ಮಠ ಮಾನ್ಯಗಳ ಒಡೆತನದಲ್ಲಿವೆ. ಇಂತಹ ದೇಶಿ ಹಗಲು ದರೋಡೆಕೋರರ ಲಾಭಕೋರ ನೀತಿಯಿಂದಾಗಿ ಉನ್ನತ ಶಿಕ್ಷಣವೆಂಬುದು  ಗ್ರಾಮೀಣ ಭಾಗದ  ಬಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪಾಲಿಗೆ ಗಗನ ಕುಸುಮವಾಗಿದೆ.  ಈಗ ದೇಶಿ ದರೋಡೆಕೋರರ ಜೊತೆ ವಿದೇಶಿ ದರೋಡೆಕೋರರು  ಸಹ ಉನ್ನತ ಶಿಕ್ಷಣದ ಹೆಸರಿನಲ್ಲಿ ಭಾರತಕ್ಕೆ ಲಗ್ಗೆ ಇಡಲಿದ್ದಾರೆ. ಸಧ್ಯದಲ್ಲೇ ಉರುಗ್ವೆಯಲ್ಲಿ ನಡೆಯಲಿರುವ  ವಿಶ್ವ ವಾಣಿಜ್ಯ ಸಂಘಟನೆಯ ಶೃಂಗ ಸಭೆಯಲ್ಲಿ ಭಾರತವು ಉನ್ನತ ಶಿಕ್ಷಣ ಕುರಿತಂತೆ ಜಾಗತೀಕರಣದ ಒಪ್ಪಂಧಕ್ಕೆ ಸಹಿ ಹಾಕಲಿದೆ. ಅದರ ದುಷ್ಪರಿಣಾಮಗಳನ್ನು ಕುರಿತು ದಶಕ ಹಿಂದೆ ನಾನು  ಡಾಕ್ಟರೇಟ್ ಪದವಿಗಾಗಿ ಬರೆದಿದ್ದ ಪ್ರೌಢ ಪ್ರಬಂಧ “ ಜಾಗತೀಕರಣದ ಮತ್ತು ಗ್ರಾಮ ಭಾರತ” ಕೃತಿಯ ಒಂದು ಅಧ್ಯಾಯವನ್ನು ಇಲ್ಲಿ ನೀಡುತ್ತಿದ್ದೇನೆ. ಈ ಅಧ್ಯಾಯವು ಬೆಂಗಳೂರು ವಿ.ವಿ.ಯ ಬಿ.ಎ. ಪದವಿಗೆ ಪಠ್ಯವಾಗಿದೆ.
ಕಳೆದ ಎರಡು ದಶಕಗಳಿಂದ ಜಗತ್ತಿನಾದ್ಯಂತ ವ್ಯಾಪಿಸುತ್ತಿರುವ ಜಾಗತೀಕರಣದ ಆಕ್ಟೋಪಸ್ ಕಬಂಧ ಬಾಹುಗಳು ಭಾರತದ ಕೃಷಿ, ಕೈಗಾರಿಕೆ, ವಾಣಿಜ್ಯ ಕ್ಷೇತ್ರಗಳಿಗೆ ಮಾತ್ರ ಆವರಿಸಿದೆ ಎಂಬ ನಂಬಿಕೆ ಈಗ ಸುಳ್ಳಾಗಿದೆ. ವಿಶ್ವ ವ್ಯಾಪಾರ ಸಂಘಟನೆಯ ಒಪ್ಪಂಧಗಳಲ್ಲಿ ಒಂದಾದ ಸೇವೆಗಳ ವ್ಯಾಪ್ತಿಯಡಿ ಶಿಕ್ಷಣವನ್ನು ಸಹ ಒಳಪಡಿಸಿ, ಉನ್ನತಶಿಕ್ಷಣಕ್ಕೆ ಈಗ ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತವನ್ನೂ ಒಳಗೊಂಡಂತೆ ತೃತೀಯ ಜಗತ್ತಿಗೆ ಲಗ್ಗೆ ಇಟ್ಟಿವೆ. ಇದು ಇದ್ದಕ್ಕಿದ್ದಂತೆ ಸೃಷ್ಟಿಯಾದ ಆತಂಕವೇನಲ್ಲ. ಜಾಗತೀಕರಣದ ಸೂತ್ರಗಳನ್ನು ಸಿದ್ಧಪಡಿಸುವಾಗ ಇಂತಹ ಚಕ್ರವ್ಯೂಹವನ್ನು ಹೆಣೆಯಲಾಗಿತ್ತು.
ಶತ-ಶತಮಾನಗಳಿಂದ ಶ್ರೀಮಂತವಾದ ಸಾಂಸ್ಕøತಿಕ  ಪರಂಪರೆ ಹಾಗೂ ಹಿನ್ನೆಲೆಯುಳ್ಳ ಭಾರತದಂತಹ ಬಹು ಸಂಸ್ಕøತಿಯ ನೆಲದ ಅಡಿಪಾಯಕ್ಕೆ ಬಿದ್ದ  ಬಲವಾದ ಪೆಟ್ಟು ಇದು ಎಂದರೆ ತಪ್ಪಾಗಲಾರದು. ನಮ್ಮ ಪೂರ್ವಕಾಲದ ಋಷಿಗಳು, ಮುನಿಪುಂಗವರು ಜ್ಞಾನಾರ್ಜನೆಯ ವಿಷಯದಲ್ಲಿ ಯಾವುದೇ ಬೇಧ ಭಾವ ತೋರದೆ, ಜ್ಞಾನ ಯಾವುದಾದರೇನು ಅದು ಜಗತ್ತಿನ ಎಲ್ಲೆಡೆಯಿಂದ ಹರಿದುಬರಬೇಕು ಮತ್ತು ಸ್ವೀಕರಿಸುವ ಉದಾತ್ತ ಮನೋಭಾವ ಇರಬೇಕು ಎಂದಿದ್ದರು. ಆದರೆ ಇಂದು ಜಾಗತೀಕರಣದ ನೆಪದಲ್ಲಿ ಮುಂದುವರಿದ ಅಭಿವೃದ್ಧಿಶೀಲ ಹಾಗೂ  ಶ್ರೀಮಂತ ರಾಷ್ಟ್ರಗಳು ಶಿಕ್ಷಣವನ್ನು ವ್ಯಾಪಾರದ ಸರಕನ್ನಾಗಿಸಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಭಾರತೀಯ  ಬಹು ಮುಖಿ ಸಂಸ್ಕತಿಯ  ಹಿನ್ನೆಲೆಯಲ್ಲಿ ಜಾಗತೀಕರಣ ಕುರಿತು ಅವಲೋಕಿಸಿದಾಗ ಶಿಕ್ಷಣವೆಂಬುದು ಕೇವಲ ಜ್ಞಾನ ಸಂಪಾದನೆ ಅಥವ ಪ್ರಸರಣೆ ಮಾತ್ರವಾಗಿರಲಿಲ್ಲ, ಅದೊಂದು ರಾಷ್ಟ್ರದ ಸಾಂಸ್ಕತಿಕ ಬದುಕಿನ ಪ್ರತಿಬಿಂಬ ಎನ್ನುವುದು ಅರಿವಾಗುತ್ತದೆ. ಪ್ರತಿಯೊಂದು ರಾಷ್ಟ್ರಕ್ಕೆ ತನ್ನದೇ ಆದ ಸಾಂಸ್ಕತಿಕ ಹಿನ್ನೆಲೆ, ಪರಂಪರೆ, ದೇಶಿ ಜ್ಞಾನವನ್ನೊಳಗೊಂಡ ನೆಲೆಗಟ್ಟೊಂದಿದ್ದು ತಳಹದಿಯಮೇಲೆ ಆಯಾ ರಾಷ್ಟ್ರದ ಶಿಕ್ಷಣ ವ್ಯವಸ್ಥೆಯು ರೂಪುಗೊಳ್ಳುತ್ತಾ ಬಂದಿದೆ.

ಯಾವುದೇ ಒಂದು ತಲೆಮಾರು ತನ್ನ ನೆಲದ ಸಾಂಸ್ಕತಿಕ, ಐತಿಹಾಸಿಕ, ಪ್ರಾಚೀನ ಇತಿಹಾಸದ ಹಿನ್ನೆಲೆಯಿಲ್ಲದೆ ವಿದ್ಯೆಯಲ್ಲಿ ಪರಿಪೂರ್ಣವಾಗಲಾರದು. ಕಾರಣಕ್ಕಾಗಿ ಒಂದು ರಾಷ್ಟ್ರದ ಶಿಕ್ಷಣ ವ್ಯವಸ್ಥೆಯೆಂದರೆ ಅದು ರಾಷ್ಟ್ರದ ಸಾಮಾಜಿಕ ಸ್ಥಿತಿ-ಗತಿ ಹಾಗೂ ರಾಷ್ಟ್ರೀಯ ಮೌಲ್ಯಗಳನ್ನೊಳಗೊಂಡ ವ್ಯವಸ್ಥೆ ಎಂದೇ ನಾವು ಭಾವಿಸಬೇಕಾಗುತ್ತದೆ.ಒಂದು ರಾಷ್ಟ್ರದ ಆರ್ಥಿಕ ಬೆಳವಣಿಗೆಯಲ್ಲಿ ಶಿಕ್ಷಣದ ಮಹತ್ವವಿರುವುದನ್ನು ನಾವು ತಳ್ಳಿ ಹಾಕುವಂತಿಲ್ಲ ನಿಜ. ಆದರೆ, ಶಿಕ್ಷಣ ವೊಂದೇ ಅಭಿವೃದ್ಧಿಗೆ ಮಾನದಂಡವಲ್ಲ. ಶಿಕ್ಷಣವು ರಾಷ್ಟ್ರದ ಆರ್ಥಿಕಾಭಿವೃದ್ಧಿಯ ಜೊತೆಗೆ ಸಾಂಸ್ಕøತಿಕ ಬೆಳವಣಿಗೆ, ವ್ಯಕ್ತಿಯ ಬೌದ್ಧಿಕ ಪ್ರಜ್ಞೆಯ ವಿಕಸನ ಹಾಗು ನಾಗರೀಕ ಸಮಾಜದ ಮೌಲ್ಯಗಳ ಪುನರುತ್ಥಾನ ಮತ್ತು ಬೆಳವಣಿಗೆಗೆ ಪೂರಕವಾಗಿರಬೇಕು. ಹಿನ್ನೆಲೆಯಲ್ಲಿ ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ನೆಪದಲ್ಲಿ ವಿಶ್ವ ವ್ಯಾಪಾರ ಸಂಘಟನೆ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುತ್ತಿರುವುದು ವಿವಾದ ಮತ್ತು ಪ್ರತಿರೋಧಕ್ಕೆ ಕಾರಣವಾಗಿದೆ.
ವಿಶ್ವ ವ್ಯಾಪಾರ ಸಂಘಟನೆ ಎಂಬ ಜಾಗತೀಕರಣದ ಧ್ಯೇಯಗಳನ್ನು ಜಾರಿಗೆ ತರಲು ಹುಟ್ಟಿಕೊಂಡಿರುವ ಸಂಸ್ಥೆಯು ಜ್ಞಾನದ ಮೂಲಗುಣ ಹಾಗು ಮಹತ್ವದ ಮೌಲ್ಯಗಳನ್ನು ಗಾಳಿಗೆ ತೂರಿದ ಫಲವಾಗಿ ಆಯಾ ರಾಷ್ಟ್ರಗಳಲ್ಲಿ ಶಿಕ್ಷಣದ ಜೊತೆ ತಲೆಮಾರಿನಿಂದ ತಲೆಮಾರಿಗೆ ಪ್ರಸರಿಸುತ್ತಿದ್ದ ಹಾಗೂ ನದಿಯ ನೀರಿನಂತೆ ಹರಿಯುತ್ತಿದ್ದ  ಐತಿಹಾಸಿಕ ಪ್ರಜ್ಞೆ, ಸಾಂಸ್ಕøತಿಕ ಹಾಗು ಸಾಮಾಜಿಕ ಮೌಲ್ಯಗಳು  ಸ್ಥಗಿತಗೊಂಡು ನಿಂತ ನೀರಾಗಿವೆ.

ಸಂದರ್ಭದಲ್ಲಿ ಇತ್ತೀಚೆಗೆ ಭಾರತದ ಕೇಂದ್ರ ವಾಣಿಜ್ಯ ಸಚಿವಾಲಯ `ಉನ್ನತ ಶಿಕ್ಷಣಗಳ ವಿದೇಶಿ ಬಂಡವಾಳ' ಕುರಿತಂತೆ ಸಲಹೆ-ಸೂಚನೆಗಳನ್ನು ಕೇಳಿ ಪ್ರಕಟಣೆ ಹೊರಡಿಸಿರುವುದು ರಾಷ್ಟ್ರದ ಶಿಕ್ಷಣ ತಜ್ಞರಲ್ಲಿ ಆತಂಕ ಮೂಡಿಸಿದೆಕಳೆದ ಒಂದು ದಶಕದಿಂದ ಭಾರತದಲ್ಲಿ ಉನ್ನತ ಶಿಕ್ಷಣ ಅತ್ಯಂತ ವೇಗದಲ್ಲಿ ಬೆಳೆಯುತ್ತಿದೆ. ದೇಶದಲ್ಲಿ 357 ವಿಶ್ವವಿದ್ಯಾನಿಲಯಗಳಿವೆ. ಇವುಗಳಲ್ಲಿ 20 ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದ್ದು, ಸಂಶೋಧನೆಗಾಗಿ ಬೆಂಗಳೂರಿನ ಟಾಟಾ ವಿಜ್ಞಾನಮಂದಿರ ( ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್) ಸೇರಿದಂತೆ 13 ಉನ್ನತ ಕೇಂದ್ರಗಳಿವೆ. ಇಂಜಿನಿಯರಿಂಗ್, ವೈದ್ಯಕೀಯ, ಜೀವ ವಿಜ್ಞಾನ ಸೇರಿದಂತೆ ಇತರೆ ವಿಷಯಗಳ ಉನ್ನತ ಶಿಕ್ಷಣಕ್ಕೆ 17 ಸಾವಿರದ 625 ಕಾಲೇಜುಗಳಿವೆ. ಇವೆಲ್ಲವುಗಳನ್ನು ಗಮನಿಸಿದಾಗ ಮೇಲ್ಕಂಡ ಸಂಸ್ಥೆಗಳಲ್ಲಿ ಶೇ.50 ರಷ್ಟು ಸಂಸ್ಥೆಗಳು ಉನ್ನತ ಮಟ್ಟದ ಶಿಕ್ಷಣ ನೀಡುತ್ತಿರುವುದನ್ನು ತಳ್ಳಿಹಾಕುವಂತಿಲ್ಲ.ಇತ್ತೀಚಿನ ತಲೆಮಾರಿನಲ್ಲಿ ಉನ್ನತ ಶಿಕ್ಷಣದ ಬಗ್ಗೆ ಆಸಕ್ತಿ ಹೆಚ್ಚಾಗುತ್ತಿದೆ. ಆದರೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಕೇಂದ್ರ ಹಾಗು ರಾಜ್ಯ ಸರಕಾರಗಳ ಶ್ರದ್ಧೆ ಕ್ಷೀಣಿಸುತ್ತಿದೆ. ಕಳೆದ ಹತ್ತು ವರ್ಷಗಳಿಂದೀಚೆಗೆ ಪ್ರಾರಂಭವಾಗಿರುವ ಶಿಕ್ಷಣ ಸಂಸ್ಥೆಗಳಲ್ಲಿ ಶೇ.92 ರಷ್ಟು ಶಿಕ್ಷಣ ಸಂಸ್ಥೆಗಳು ಖಾಸಗೀಕರಣದಲ್ಲಿ ತಲೆ ಎತ್ತಿವೆ. ಸ್ಥಿತಿಯಲ್ಲಿ ಶುಲ್ಕ ಹಾಗು ಇತರೆ ವಿಷಯಗಳಲ್ಲಿ ಸರಕಾರ ಯಾವುದೇ ನಿಯಂತ್ರಣ ಹೇರಲಾರದಂತಹ ಪರಿಸ್ಥಿತಿಗೆ ಸಿಲುಕಿದ್ದು, ದುಭಾರಿ ಶುಲ್ಕದಿಂದಾಗಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದು ಉಳ್ಳವರಿಗಾಗಿ  ಶಿಕ್ಷಣವೇನೊ ಎಂಬಂತಾಗಿದೆ. ಇವೆಲ್ಲವುಗಳ ಜೊತೆ ಈಗ ಭಾರತಕ್ಕೆ ವಿವಿಧ ರಾಷ್ಟ್ರಗಳ 150 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಲಗ್ಗೆ ಇಟ್ಟಿದ್ದು, ಆಕರ್ಷಕ ಕರಪತ್ರಗಳ ಮೂಲಕ ವಿದ್ಯಾರ್ಥಿಗಳಿಗೆ ಆಮಿಷ ಒಡ್ಡುತ್ತಿವೆ. ಸಂಸ್ಥೆಗಳು ನೀಡುವ ಶಿಕ್ಷಣದ ಗುಣಮಟ್ಟ ಅಥವಾ ಪದವಿ ಇಲ್ಲವೆ, ಆಯಾ ರಾಷ್ಟ್ರಗಳಲ್ಲಿ ವಿಶ್ವವಿದ್ಯಾಲಯಗಳಿಗೆ ಮಾನ್ಯತೆ ದೊರಕಿದೆಯೇ ಎಂಉದರ ಕುರಿತು  ಪರೀಕ್ಷಿಸುವ ಗೋಜಿಗೆ ಸರ್ಕಾರವಾಗಲಿ, ತಜ್ಞರುಗಳಾಗಲಿ, ಪೋಷಕರಾಗಲಿ ಹೋಗದಿರುವುದು ವರ್ತಮಾನದ ದುರಂತವೇ ಸರಿ.
        
     

ವಿಶ್ವ ವ್ಯಾಪಾರ ಸಂಘಟನೆಯ ಒಪ್ಪಂಧದ ಸೇವೆಗಳಡಿಯಲ್ಲಿ ಲಗ್ಗೆ ಇಟ್ಟಿರುವ ವಿದೇಶಿ ವಿಶ್ವವಿದ್ಯಾಲಯಗಳು ಒಂದು ನಯಾ ಪೈಸೆ ಬಂಡವಾಳ ಹೂಡದೆ ದುಬಾರಿ ಶುಲ್ಕ ಪಡೆದು ಪದವಿ ನೀಡಲಾರಂಬಿಸಿವೆ. ಆದರೆ, ಸ್ಥಳೀಯವಾಗಿ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು, ರಾಜ್ಯ ಸರಕಾರಗಳು ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿ ಉನ್ನತ ಶಿಕ್ಷಣ ಭೋಧನೆಗೆ ಪ್ರಯತ್ನಿಸುತ್ತಿರುವಾಗ, ವಿದೇಶಿ ವಿ.ವಿ.ಗಳನ್ನು ಯಾವುದೇ ನಿಯಂತ್ರಣವಿಲ್ಲದೆ ದೇಶಕ್ಕೆ ಬರಮಾಡಿಕೊಳ್ಳುವುದು ಭವಿಷ್ಯದಲ್ಲಿ ಅಪಾಯಕಾರಿ ಎಂಬುದನ್ನು ಕೇಂದ್ರ ಸರಕಾರ ಮನಗಾಣಬೇಕಾಗಿದೆ.
ಕೆಲವು ವಿಶ್ವವಿದ್ಯಾನಿಲಯಗಳನ್ನು ಹೊರತು ಪಡಿಸಿದರೆ, ಬಹುತೇಕ ವಿದೇಶಿ ಶಿಕ್ಷಣ ಸಂಸ್ಥೆಗಳ ಶಿಕ್ಷಣದ ಉದ್ದೇಶ ಲಾಭ ಕ್ಕಾಗಿ ಎಂಬುದನ್ನು ನಾವು ಅರಿಯಬೇಕಿದೆ. ಇತ್ತೀಚೆಗೆ ಕೇಂದ್ರ ಸರಕಾರ ಉನ್ನತ ಶಿಕ್ಷಣಸಂಶೋಧನೆ ಕುರಿತಂತೆ ಖಾಸಗೀ ರಂಗಕ್ಕೆ ಅವಕಾಶವನ್ನು ನಿಷೇಧಿಸಿರುವಾಗ, ವಿದೇಶಿ ನೇರ ಬಂಡವಾಳವನ್ನು ಶಿಕ್ಷಣಕ್ಷೇತ್ರಕ್ಕೆ ಆಹ್ವಾನಿಸ ಹೊರಟಿರುವುದು ಚರ್ಚೆಗೆ ಗ್ರಾಸವಾಗಿದೆ. ಇದೊಂದು ಆತ್ಮಹತ್ಯೆಯ ಹಾದಿಯೆಂದು ಶಿಕ್ಷಣ ತಜ್ಞ ಹಾಗು ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಅಧ್ಯಕ್ಷ ಫ್ರೊ. ಎಂ.ಅನಂತಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ. 1986 ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವಾಗ ಶಿಕ್ಷಣವೆಂಬುದು ವರ್ತಮಾನ ಹಾಗೂ ಭವಿಷ್ಯದ ನಿರ್ಮಾಣಕ್ಕಾಗಿ ಹೂಡಲಾಗುವ ಮತ್ತು  ಬೆಲೆ ಕಟ್ಟಲಾಗದ ಅಪರಿಮಿತ ಬಂಡವಾಳ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಇಂದು ಭಾರತದಲ್ಲಿ ಶಿಕ್ಷಣವೆಂಬುದು ವ್ಯಾಪಾರೀಕರಣಗೊಂಡು ಎಲ್ಲಾ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವುದನ್ನು ನಾವು ಎಲ್ಲೆಡೆ ಕಾಣುತ್ತಿದ್ದೇವೆ.
                                   
ಜಾಗತೀಕರಣದ ಕರಿ ನೆರಳಿನಲ್ಲಿ ವಿಶ್ವ ವ್ಯಾಪಾರ ಸಂಘಟನೆ ರೂಪಿಸಿರುವ ಶಿಕ್ಷಣದ ನೀತಿ-ನಿಯಮಗಳು ಆಯಾ ರಾಷ್ಟ್ರಗಳ ರಾಷ್ಟ್ರೀಯ ನೀತಿಗಳಿಗೆ ವಿರುದ್ಧವಾಗಿವೆ. ಕೆಲವು ಅಭಿವೃದ್ಧಿ ರಾಷ್ಟ್ರಗಳು ರೂಪಿಸಿರುವ ಏಕರೂಪದ ನೀತಿ-ನಿಯಮಗಳು ತೃತೀಯ ಜಗತ್ತಿನ ಬಡ ಹಾಗು ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಸಮುದಾಯದ ಏಳಿಗೆಗೆ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅಡ್ಡಿಯಾಗಿವೆ. ಅಲ್ಲದೆ ಸಾಮಾಜಿಕ ಅಸಮಾನತೆಗೆ ಕಾರಣವಾಗಿ ವರ್ಗ ವರ್ಗಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿವೆ. ಇದರಪ್ರತಿಫಲವನ್ನು ಉನ್ನತ ಶಿಕ್ಷಣದಲ್ಲಿ ಮೀಸಲಾತಿ ತಂದ ಕೇಂದ್ರ ಸರಕಾರದ ವಿರುದ್ಧ ನಡೆಯುತ್ತಿರುವ ಒಂದು ವರ್ಗದಪ್ರತಿಭಟನೆಯನ್ನು, ಅದನ್ನು ವೈಭವೀಕರಿಸುತ್ತಿರುವ ಮೇಲ್ವರ್ಗದ ಮನೋಭಾವನೆಯುಳ್ಳ ಮಾಧ್ಯಮಗಳನ್ನು ನಾವುನೋಡುತ್ತಿದ್ದೇವೆ.


                               
ವಿಶ್ವ ವ್ಯಾಪಾರ ಸಂಘಟನೆಯ ಶಿಕ್ಷಣ ಕುರಿತಂತೆ `ಸೇವೆ' ವಿಭಾಗದಲ್ಲಿ ಹನ್ನೆರಡು ವರ್ಗಗಳ ವಿವಿಧ ಶಿಕ್ಷಣಸೇವೆಯನ್ನು ಗುರುತಿಸಿದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ,
ಮೊದಲನೆಯದಾಗಿ: ಒಂದು ರಾಷ್ಟ್ರದಿಂದ ಮತ್ತೊಂದು ರಾಷ್ಟ್ರಕ್ಕೆ ಶಿಕ್ಷಣ ಸೇವೆಯನ್ನು ಯಾವುದೇ ಭೌತಿಕ ಚಲನೆ ಇಲ್ಲದೆ ನೀಡುವ ವ್ಯವಸ್ಥೆ, ಅಂದರೆ ಕಟ್ಟಡ-ಕಛೇರಿ,ಉಪನ್ಯಾಸಕ-ಬೋಧಕ ಇವರುಗಳು ಇದ್ದ ಸ್ಥಳದಿಂದ ಶಿಕ್ಷಣವನ್ನು ಉಪಗ್ರಹದ ಮೂಲಕ ಇನ್ನೊಂದು ರಾಷ್ಟ್ರದಲ್ಲಿನೀಡುವುದು.
ಎರಡನೆಯದು: ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಒಂದು ರಾಷ್ಟ್ರದಿಂದ ಮತ್ತೊಂದು ರಾಷ್ಟ್ರದ ವಿ.ವಿ.ಗಳಿಗೆ, ಸಂಶೋಧನಾ ಸಂಸ್ಥೆಗಳಿಗೆ ಯಾವುದೇ ಅಡೆ-ತಡೆ ಇಲ್ಲದೆ ತೆರಳುವ ವ್ಯವಸ್ಥೆ. ಇದನ್ನು ವಿದೇಶದಲ್ಲಿ `ಶಿಕ್ಷಣ ಸೇವೆಯ ಬಳಕೆ' ಎಂದು ಕರೆಯಲಾಗಿದೆ.
ಮೂರನೆಯದು: ಯಾವುದಾದರು ವಿದೇಶಿ ಸಂಸ್ಥೆ ಅಥವಾ ವಿಶ್ವವಿದ್ಯಾನಿಲಯ ಶಿಕ್ಷಣ ಸೇವೆಗಳು ತನ್ನಉಪಶಾಖೆಗಳನ್ನು ಮತ್ತೊಂದು ರಾಷ್ಟ್ರದಲ್ಲಿ ತೆರೆಯಬಹುದು. ಇದಕ್ಕಾಗಿ ಸ್ಥಳೀಯ ಸಂಸ್ಥೆ ಅಥವಾ ವಿ.ವಿ.ಗಳ ಜೊತೆಒಪ್ಪಂದಗಳನ್ನು ಮಾಡಿಕೊಳ್ಳಬಹುದು.
ನಾಲ್ಕನೆಯದು: ಶಿಕ್ಷಣದ ಸೇವೆಗಾಗಿ ಜಾಗತಿಕ ಮಟ್ಟದಲ್ಲಿ ಪ್ರಾಧ್ಯಾಪಕರು, ತಜ್ಞರು, ಉಪನ್ಯಾಸಕರು,ಸಂಶೋಧನಾ ವಿದ್ಯಾರ್ಥಿಗಳು ಮುಕ್ತವಾಗಿ ಪ್ರವಾಸ ಮಾಡಬಹುದು. ಇವಷ್ಟೇ ಅಲ್ಲದೆ, ವಿಶ್ವಸಂಸ್ಥೆಯ ಶಿಕ್ಷಣ ಕುರಿತ ನಿಯಮಾವಳಿಯ  ಪ್ರಕಾರ ವಿಶ್ವ ವ್ಯಾಪಾರ ಸಂಘಟನೆಯ ಒಪ್ಪಂದಕ್ಕೆ ಅಂಶಗಳನ್ನು ಸಹ ಸೇರಿಸಲಾಗಿದೆ. ಶಿಶುಪಾಲನಾ ಕೇಂದ್ರಗಳನ್ನು ಹೊರತುಪಡಿಸಿ,  ಪ್ರಾಥಮಿಕ ಹಾಗೂ ಪೂರ್ವಪ್ರಾಥಮಿಕ ಶಿಕ್ಷಣವೂ ಸಹ ಈ ಒಪ್ಪಂದಕ್ಕೆ ಒಳಪಡುತ್ತದೆ.
148 ಸದಸ್ಯ ರಾಷ್ಟ್ರಗಳ ವಿಶ್ವವ್ಯಾಪಾರ ಸಂಘಟನೆಯಲ್ಲಿ ಈವರೆಗೆ 49 ರಾಷ್ಟ್ರಗಳು ಮಾತ್ರ ಒಪ್ಪಂದಕ್ಕೆಸಮ್ಮತಿ ಸೂಚಿಸಿವೆ. ಇವುಗಳಲ್ಲಿ 21 ರಾಷ್ಟ್ರಗಳು ಉನ್ನತ ಶಿಕ್ಷಣದ ಸೇವೆ ನೀಡಲು ವಿದೇಶಿ ಸಂಸ್ಥೆಗಳನ್ನು, ವಿ.ವಿ.ಗಳನ್ನು ಆಹ್ವಾನಿಸಲು ನಿರ್ಧರಿಸಿವೆ. ಇದರಲ್ಲಿ ಕುತೂಹಲಕಾರಿ ಹಾಗು ಕಳವಳಕಾರಿ ಸಂಗತಿಯೆಂದರೆ, ಅತ್ಯಂತ ಬಡರಾಷ್ಟ್ರಗಳಾದ ಕಾಂಗೊ, ಲೆಸಥೊ, ಸಿಯುಕ್ರಾಲಿಯಾನ್ನಂತಹ ಪಶ್ಚಿಮ ಆಫ್ರಿಕಾದ ಪುಟ್ಟ ಗಣರಾಜ್ಯಗಳು ಸಹಮತ ವ್ಯಕ್ತಪಡಿಸಿವೆ. ಏಕೆಂದರೆ ರಾಷ್ಟ್ರಗಳು ಜೀವಂತವಾಗಿರುವುದೇ ಅಮೇರಿಕಾದ ಕೃಪಾಕಟಾಕ್ಷದಿಂದ. ದೇಶ ನೀಡುವ ಆರ್ಥಿಕ ನೆರವು, ಆಹಾರದ ನೆರವು ಇದಕ್ಕೆ ಕಾರಣವಾಗಿದೆ. ಆಸ್ಟ್ರೇಲಿಯಾ, ಐರೋಪ್ಯ ಒಕ್ಕೂಟದ ಕೆಲವು ಸದಸ್ಯ ರಾಷ್ಟ್ರಗಳು, ನ್ಯೂಜಿಲೆಂಡ್, ಅಮೆರಿಕಾ, ಜಪಾನ್ ಉನ್ನತ ಶಿಕ್ಷಣದ ಸೇವೆ ಮಾತ್ರ ಬಳಸಿಕೊಳ್ಳಲು ಒಪ್ಪಿವೆ. ಅಭಿವೃದ್ಧಿಶೀಲರಾಷ್ಟ್ರಗಳು ಒಪ್ಪಂದದ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಆದರೂ ಕೂಡ ತೆರೆಮರೆಯಲ್ಲಿ `ಶಿಕ್ಷಣ ಸೇವೆ' ವ್ಯವಸ್ಥೆಯು ನಿಧಾನವಾಗಿ ಎಲ್ಲೆಡೆ ಕಾಲೂರುತ್ತಿದೆ. ಸಧ್ಯದಲ್ಲಿ ಉರುಗ್ವೆಯಲ್ಲಿ ನಡೆಯುವ ವಿಶ್ವ ವಾಣಿಜ್ಯ ಸಂಘಟನೆಯ ಶೃಂಗಸಭೆಯಲ್ಲಿ ಭಾರತವೂ ಸೇರಿದಂತೆ ಬಹುತೇಕ ರಾಷ್ಟ್ರಗಳು ಸಹಿ ಹಾಕಲು ನಿರ್ಧರಿಸಿವೆ. ಸಹಿ ಹಾಕುವಂತಹ ಪರೋಕ್ಷ ಒತ್ತಡಗಳಗಳನ್ನು ಈಗಾಗಲೇ ಸೃಷ್ಟಿ  ಮಾಡಲಾಗಿದೆ.
ಉನ್ನತ ಮಟ್ಟದ ಸಂಶೋಧನೆ ಮತ್ತು ಶಿಕ್ಷಣಕ್ಕಾಗಿ ವಿದೇಶಿ ವಿಶ್ವವಿದ್ಯಾನಿಲಯಗಳನ್ನು ಅಥವಾ ಸಂಸ್ಥೆಗಳನ್ನು ಬದಲಾಗುತ್ತಿರುವ ಜಾಗತಿಕ ವಿದ್ಯಮಾನದ ಹಿನ್ನೆಲೆಯಲ್ಲಿ ಆಹ್ವಾನಿಸುವುದು ಮೇಲ್ನೋಟಕ್ಕೆ ಸಮರ್ಪಕ ಎನಿಸಿದರೂ ಸಹ,  ದೇಶೀಯ ನೀತಿ, ಸಂಸ್ಕತಿ, ಇತಿಹಾಸವನ್ನು ಬಿಂಭಿಸುವ ಸ್ಥಳೀಯ ಶಿಕ್ಷಣ ನೀತಿಗೆ ಇದು  ಮಾರಕವಾಗಲಿದೆ ಎಂಬ ಆತಂಕ ಎಲ್ಲಾ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಕಾಡುತ್ತಿದೆ. ಜೊತೆಗೆ ಶಿಕ್ಷಣದ ಗುಣಮಟ್ಟ, ಪದವಿಗಳ ಮಾನ್ಯತೆ ಕುರಿತಂತೆ ಸದಸ್ಯ ರಾಷ್ಟ್ರಗಳ ನಡುವಿನ ಒಪ್ಪಂಧಕ್ಕೆ ಮಾತ್ರ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. ಆದರೆ ಈಗಾಗಲೇ ಹಲವಾರು ವಿಷಯಗಳಲ್ಲಿ ಅಸಮಾನತೆಯಿಂದ ಬಳಲುತ್ತಿರುವ ಮತ್ತು ಉನ್ನತ ಮಟ್ಟದ ಶಿಕ್ಷಣಕ್ಕೆ ಸಂಪನ್ಮೂಲವನ್ನು ಕ್ರೋಡೀಕರಿಸಲು ಹೆಣಗಾಡುತ್ತಿರುವ ಬಡರಾಷ್ಟ್ರಗಳು, ಜಾಗತೀಕರಣದ ನೆಪದಲ್ಲಿ ಶ್ರೀಮಂತ ರಾಷ್ಟ್ರಗಳು ಹೇರುತ್ತಿರುವ ಕೇವಲ ಲಾಭಾಪೇಕ್ಷೆಯೇ ಮುಖ್ಯ ಗುರಿಯಾಗಿರುವ ಉನ್ನತ ಶಿಕ್ಷಣ ವ್ಯವಸ್ಥೆ ಅಥವಾ ಸೇವೆಯನ್ನು ಭವಿಷ್ಯದಲ್ಲಿ ತಾಳಿಕೊಳ್ಳಬಲ್ಲವೆ? ಎಂಬ ಪ್ರಶ್ನೆ ಎಲ್ಲಾ ಪ್ರಜ್ನಾವಂತರನ್ನು ಕಾಡುತ್ತಿದೆ.



ಜಾಗತೀಕರಣ ವ್ಯವಸ್ಥೆಯಲ್ಲಿ ಶಿಕ್ಷಣಕ್ಕೆ ಎದುರಾಗಿರುವ ದೊಡ್ಡ ಸವಾಲೆಂದರೆ ಉನ್ನತ ಶಿಕ್ಷಣ ವ್ಯವಸ್ಥೆ. ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಜಾಗತಿಕ ವಿದ್ಯಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮುಂತಾದ ಕ್ರಾಂತಿಕಾರಿ ಬೆಳವಣಿಗೆಗಳಿಂದಾಗಿ ಉನ್ನತ ಶಿಕ್ಷಣದ ಪ್ರಕಾರಗಳಾದ ಪದವಿ, ಸ್ನಾತಕೋತ್ತರ ಪದವಿ ಮತ್ತು ಸಂಶೋಧನೆಗಳಲ್ಲಿ ಇತ್ತೀಚೆಗೆ ಹೊಸ-ಹೊಸ ವಿಷಯಗಳು ಸೇರ್ಪಡೆಯಾಗುತ್ತಿವೆ. ಇವುಗಳ ಶಿಕ್ಷಣದ ಅವಕಾಶ ಎಲ್ಲರಿಗೂ ದೊರಕುವಂತಿರಬೇಕು. ಇದಕ್ಕಾಗಿ ಆಯಾ ರಾಷ್ಟ್ರಗಳು ಶಿಕ್ಷಣಕ್ಕೆ ಆರ್ಥಿಕ ನೆರವನ್ನು ಸಹಾಯಧನದ ಮೂಲಕ ನೀಡಬೇಕಾಗಿರುವುದುಅನಿವಾರ್ಯ. ತಮ್ಮ ತಮ್ಮ ಆರ್ಥಿಕ ನೀತಿಗಳ ನಡುವೆ ತೃತೀಯ ಜಗತ್ತಿನ ರಾಷ್ಟ್ರಗಳು ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳು ಲಿಂಗ-ಜಾತಿ- ಧರ್ಮದ ತಾರತಮ್ಯವಿಲ್ಲದೆ ಎಲ್ಲರಿಗೂ ಉನ್ನತ ಶಿಕ್ಷಣ ನೀಡಲು ಪ್ರಯತ್ನಿಸುತ್ತಿವೆ.
ಇಂತಹ ಸಂದರ್ಭದಲ್ಲಿ `ಸೇವೆ' ಹೆಸರಿನಲ್ಲಿ, ಅಭಿವೃದ್ಧಿ ಹೊಂದಿದ ಶ್ರೀಮಂತ ರಾಷ್ಟ್ರಗಳ ವಿ.ವಿ.ಗಳಿಗೆ,ಸಂಸ್ಥೆಗಳಿಗೆ ಅವಕಾಶ ಮಾಡಿಕೊಟ್ಟರೆ, ಇವುಗಳು ವಿಧಿಸುವ ದುಬಾರಿ ಶುಲ್ಕಗಳಿಂದಾಗಿ ಬಡವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ದೂರ ಉಳಿಯಬೇಕಾಗುತ್ತದೆ. ಲಾಭವೇ ಮುಖ್ಯ ಗುರಿಯಾಗಿರುವ ಸಂದರ್ಭದಲ್ಲಿ ಶಿಕ್ಷಣದಲ್ಲಿ ಗುಣಮಟ್ಟ ನಿರೀಕ್ಷಿಸಲು ಸಾಧ್ಯವೆ ಎಂಬ ಪ್ರಶ್ನೆ ಕೂಡ ಎದುರಾಗಿದೆ.
ಉನ್ನತ ಶಿಕ್ಷಣಕ್ಕೆ ಅಪಾರ ಪ್ರಮಾಣದಲ್ಲಿ ಸಹಾಯಧನದ ಅಗತ್ಯವಿದೆ. ಜೊತೆಗೆ ಕೆಲವು ಆಧ್ಯತಾ ವಲಯ ಗಳ ಸಂಶೋಧನೆಗೆ ವಿದೇಶಿ ಸಂಸ್ಥೆಗಳು ಹಣವನ್ನು ಹೇಗೆ ಭರಿಸುತ್ತವೆ ಎಂಬ ಪ್ರಶ್ನೆ ಎದುರಾಗುತ್ತದೆ. ಶಿಕ್ಷಣ ಮತ್ತು ಸಂಶೋಧನೆಯ ಸಂಪೂರ್ಣ ವೆಚ್ಚವನ್ನು ವಿದ್ಯಾರ್ಥಿಗಳ ಮೇಲೆ ಹೊರಿಸುವುದು ಬಡರಾಷ್ಟ್ರಗಳಲ್ಲಿ ಆಗದ ಮಾತು.
ನಿಟ್ಟಿನಲ್ಲಿ ವಿಶ್ವವ್ಯಾಪಾರ ಸಂಘಟನೆ ಹಾಗು ಎಲ್ಲಾ ರಾಷ್ಟ್ರಗಳು ಗಂಭಿರ ಚಿಂತನೆ ನಡೆಸುವ ಅಗತ್ಯವಿದೆ. ಅಲ್ಲದೆ
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ದೇಶೀಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಉನ್ನತ ಶಿಕ್ಷಣದ ಬಗ್ಗೆ ತಜ್ಞರು ಚಿಂತಿಸಬೇಕಾಗಿದೆ.


ಶಿಕ್ಷಣ ವ್ಯವಸ್ಥೆ ಕುರಿತಂತೆ ವಿಶ್ವವ್ಯಾಪಾರ ಸಂಘಟನೆಯ ಒಪ್ಪಂದಗಳನ್ನು ಇಡಿಯಾಗಿ ಅವಲೋಕಿಸಿದಾಗ ಇದು ಬಡ ಹಾಗು ಅಭಿವೃದ್ಧಿಶೀಲ ರಾಷ್ಟ್ರಗಳ ಪಾಲಿಗೆ ಮಾರಕವಾಗುವುದರಲ್ಲಿ ಸಂಶಯವಿಲ್ಲ. ವೈವಿಧ್ಯಮಯ ಶಿಕ್ಷಣನೀತಿಗಳನ್ನು ತಮ್ಮ ತಮ್ಮ ಸಂಸ್ಕøತಿಗೆ ಅನುಗುಣವಾಗಿ ರಾಷ್ಟ್ರೀಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು  ರೂಪಿಸಿದ್ದ ರಾಷ್ಟ್ರಗಳು, ಇದೀಗ ಬಲವಂತವಾಗಿ ಹೇರುತ್ತಿರುವ ಏಕರೂಪದ ಶಿಕ್ಷಣ ವ್ಯವಸ್ಥೆಯನ್ನು ಹೇಗೆ ನಿಭಾಯಿಸುತ್ತವೆಎಂಬ ಪ್ರಶ್ನೆಯೂ ಉದ್ಭವವಾಗಿದೆ.
 2002 ವಿಶ್ವಬ್ಯಾಂಕ್ ವರದಿಯಲ್ಲಿ ವಿಶ್ವವ್ಯಾಪಾರ ಸಂಘಟನೆಯ ಶಿಕ್ಷಣ ನೀತಿಯ ಬಗ್ಗೆ ಪ್ರಸ್ತಾಪ ಮಾಡಿರುವ ಅರುಣ್ನಿಗ್ವೇಕರ್ ಹೊಸ ಶಿಕ್ಷಣ ನೀತಿಯಿಂದ ಭಾರತದ ವಿ.ವಿ.ಗಳು, ಶಿಕ್ಷಣ ಸಂಸ್ಥೆಗಳು, ಶ್ರೀಮಂತರಾಷ್ಟ್ರಗಳ ಶಿಕ್ಷಣ ವ್ಯಾಪಾರಕ್ಕೆ ಹೊಸ ಮಾರುಕಟ್ಟೆಯಾಗಲಿವೆ” ಎಂದಿದ್ದಾರೆ. ಒಂದು ಅಂದಾಜಿನ ಪ್ರಕಾರ ಜಾಗತಿಕವಾಗಿ48 ಲಕ್ಷ ಕೋಟಿ ರೂಪಾಯಿಗಳನ್ನು ಶಿಕ್ಷಣಕ್ಕಾಗಿ ವ್ಯಯಮಾಡಲಾಗುತ್ತಿದೆ. ಶಿಕ್ಷಣ ಸೇವೆಯಿಂದ ಲಾಭ ಪಡೆಯುತ್ತಿರುವ ರಾಷ್ಟ್ರಗಳಲ್ಲಿ ಅಮೆರಿಕಾ ಐದನೆಯ ಸ್ಥಾನದಲ್ಲಿದೆ. 2005 ರಲ್ಲಿ ಅಮೆರಿಕಕ್ಕೆ 7 ಶತಕೋಟಿ ಡಾಲರ್ ಹಣ ಶಿಕ್ಷಣ ಸೇವೆಯಿಂದ ಲಭ್ಯವಾಗಿದೆ.
                ಇತ್ತ ಭಾರತದ ಸ್ಥಿತಿಯನ್ನು ಅವಲೋಕಿಸಿದರೆ ಶಿಕ್ಷಣಕ್ಕಾಗಿ ಸರಕಾರ ವ್ಯಯಮಾಡುತ್ತಿರುವ ಹಣದ ಪ್ರಮಾಣ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕುಸಿಯುತ್ತಿದೆ. ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ಶೇ.7.2ರಷ್ಟಿದ್ದ ಹಣದ ವಿನಿಯೋಗವು ಹತ್ತನೇ ಪಂಚವಾರ್ಷಿಕ ಯೋಜನೆಯ ಅಂತ್ಯಕ್ಕೆ ಶೇ.2.4 ಕ್ಕೆ ಕುಸಿದಿತ್ತು. ಒಟ್ಟಾರೆ ಭಾರತದ ಶಿಕ್ಷಣ ವಲಯದ ವೆಚ್ಚ 1990-91 ರಲ್ಲಿ ಶೇ. 20.19 ರಷ್ಟು ಇದ್ದದ್ದು 2003-04 ರಲ್ಲಿ ಶೇ. 17.7 ಕ್ಕೆ ಇಳಿದಿದೆ. ಇವೆಲ್ಲವನ್ನೂ ಗಮನಿಸಿದಾಗ ಇಡೀ ಶಿಕ್ಷಣರಂಗವೇ ಖಾಸಗೀರಂಗದ ಪಾಲಾಗುವ ಸಂಭವ ಹೆಚ್ಚಾಗಿದೆ ಎಲ್ಲಾ ವಾಸ್ತವ ಸಂಗತಿಗಳ ನೆಲೆಗಟ್ಟಿನಲ್ಲಿ ಶಿಕ್ಷಣ ರಂಗವನ್ನು ಅವಲೋಕಿಸಿದಾಗ, ಇಂದಿನ ವಿದ್ಯಮಾನದಲ್ಲಿ
ಜಾಗತೀಕರಣದ ಅಪಾಯವನ್ನು ಅರ್ಥಮಾಡಿಕೊಂಡು ತಮ್ಮ ತಮ್ಮ ಸಮಾಜಿಕ, ಆರ್ಥಿಕ, ಸಾಂಸ್ಕøತಿಕ ರಂಗದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರದ ಹಿತಾಸಕ್ತಿಗೆ ಧಕ್ಕೆಯಾಗದಂತೆ ವಿಶ್ವವ್ಯಾಪಾರ ಸಂಘಟನೆಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳಬೇಕಾಗಿದೆ. ಅದು ಅನಿವಾರ್ಯ ಕೂಡ ಆಗಿದೆ.


                                                                                                                                

ಸೋಮವಾರ, ಜುಲೈ 20, 2015

ಲಂಕೇಶರು ಹೇಳಿದ ರೈತನ ಕಥೆ


ನನಗೆ ನೆನಪಿರುವಂತೆ 1980ರ ಜುಲೈ ಅಥವಾ ಸೆಪ್ಟಂಬರ್ ತಿಂಗಳಿನಲ್ಲಿ ಮೇಷ್ಟ್ರು “ಲಂಕೇಶ್ ಪತ್ರಿಕೆಯನ್ನು ಆರಂಭಿಸಿದರು. ನಂತರ ಮರುವರ್ಷ ಒಂದು ವಾರ ತಮ್ಮ ಕಾಲಂ ಒಂದರಲ್ಲಿ ಶಿವಮೊಗ್ಗನ ರೈತನ ಕಥೆಯನ್ನು ಹಾಸ್ಯದ ದಾಟಿಯಲ್ಲಿ ಬರೆದಿದ್ದರು. ಆ ಕಥೆಗೆ ಆ ಕಾಲಘಟ್ಟದ ಗ್ರಾಮಾಂತರ ರೈತರ ಬವಣೆಗಳನ್ನು ಹಿನ್ನಲೆಯಾಗಿಟ್ಟುಕೊಂಡಿದ್ದರು. ಆ ಬವಣೆ ಏನೆಂದರೆ, ಗ್ರಾಮಾಂತರ ಪ್ರದೇಶದ ನಮ್ಮ ಮನೆಗಳು ಮಣ್ಣಿ ಗೋಡೆಗಳಿಂದ ಕೂಡಿರುತ್ತಿದ್ದವು. ಜೊತೆಗೆ ನೆಲ ಕೂಡ ಮಣ್ಣಿನಾದಾಗಿದ್ದು ಪ್ರತಿ ಸೋಮವಾರ ನಮ್ಮ ಅವ್ವಂದಿರು ಇಲ್ಲವೆ ಅಕ್ಕ ತಂಗಿಯರು ಸಗಣೆಯಿಂದ ಸಾರಿಸಿ, ದೂಳು ಹೇಳದಂತೆ ಚೊಕ್ಕಟ ಮಾಡುತ್ತಿದ್ದರು. ಆದರೆ ಸಗಣಿ ಸಾರಿಸಿದ ಎರಡು ಮೂರು ದಿನಕ್ಕೆ ನೆಲದಲ್ಲಿ ಚಕ್ಕೆ ಏಳುತ್ತಿದ್ದವು.
ಏನಾದರೂ ಮಾಡಿ ನೆಲಕ್ಕೆ ಮತ್ತು ಬಚ್ಚಲು ಮನೆಗೆ ಸೀಮೆಂಟಿನಿಂದ ಗಿಲಾವ್ ಮಾಡಿಸಬೇಕೆಂಬುದು ನಮ್ಮ ಅಪ್ಪಂದಿರ ಆಸೆಯಾಗಿರುತ್ತಿತ್ತು. ಆದರೆ 1970 ರ ದಶಕದಲ್ಲಿ 50 ಕೆ.ಜಿ. ಸಿಮೆಂಟ್ ಚೀಲಕ್ಕೆ ನಾಲ್ಕು ರೂಪಾಯಿ ಬೆಲೆ ಇತ್ತು. ಆದರೆ ಸಿಮೆಂಟ್ ಸುಲಭವಾಗಿ ಮಾರಾಟಕ್ಕೆ ದೊರೆಯುತ್ತಿರಲಿಲ್ಲ. ಮನೆ ದುರಸ್ತಿಗೆ ಸಿಮೆಂಟ್ ಬೇಕಾದರೆ, ರೈತರು ಶ್ಯಾನುಭೋಗನ (ವಿಲೇಜ್ ಅಕೌಂಟೆಂಟ್) ಬಳಿ ಅರ್ಜಿಗೆ ಶಿಪಾರಸ್ಸು ಬರೆಸಿಕೊಂಡು ಅದನ್ನು ತಾಲ್ಲೂಕು ಕೇಂದ್ರಕ್ಕೆ ಹೋಗಿ ತಹಸಿಲ್ದಾರ್ ಗೆ ಕೊಡಬೇಕಿತ್ತು. ತಿಂಗಳು ನಂತರ ನಮಗೆ ಒಂದೊ, ಎರಡು ಚೀಲ ಸಿಮೇಂಟ್ ಕೊಳ್ಳಲಿಕ್ಕೆ ಅನುಮತಿ ಚೀಟಿ ದೊರೆಯುತ್ತಿತ್ತು. ಆ ಚೀಟಿಯನ್ನು ಮಾರಾಟಗಾರರಿಗೆ ಕೊಟ್ಟು ಸಿಮೆಂಟ್ ಪಡೆಯಬೇಕಿತ್ತು. ಹಾಗಾಗಿ ಆ ಕಾಲದಲ್ಲಿ ಲೆವಿ ಸಿಮೆಂಟ್ ಎಂದು ಅದನ್ನು ಕರೆಯುತ್ತಿದ್ದರು. ಹೀಗೆ ಸಿಕ್ಕ ಸಿಮೆಂಟ್ ನಲ್ಲಿ ನೆಲಕ್ಕೆ ರೆಡ್ ಆಕ್ಸೈಡ್ ನಿಂದ ಗಾರೆ ನೆಲ ಮಾಡಿಕೊಂಡು, ಉಳಿದದ್ದನ್ನು ಬಚ್ಚಲು ಮನೆಯಲ್ಲಿ ನೀರು ಸರಾಗವಾಗಿ ಹರಿಯಲು ನೆಲ ಮತ್ತು ಗೋಡೆಗೆ ಸಿಮೇಂಟ್ ಸವರುತ್ತಿದ್ದರು. ( ವಾರಕ್ಕೆ ಒಂದೇ ಸ್ನಾನ)
ರೈತರ ಇಂತಹ ಬವಣೆಗಳ ಅರಿವಿದ್ದ ಲಂಕೇಶರು ಶಿವಮೊಗ್ಗ ರೈತನ ಕಥೆ ಬರೆದರು. ( ಟಿಪ್ಪಣಿ) ಒಬ್ಬ ರೈತನ ಜಮೀನಿಗೆ ಕಾಡು ಪ್ರಾಣಿಗಳ ಕಾಟ ವಿಪರೀತ ಎನಿಸಿದಾಗ, ಇವುಗಳ ನಿಗ್ರಹಕ್ಕಾಗಿ ನನಗೆ ಒಂದು ಪಿರಂಗಿ ಕೊಳ್ಳಲು ಲೈಸನ್ಸ್ ನೀಡಬೇಕೆಂದು ತಹಸಿಲ್ದಾರ್ ಗೆ ಅರ್ಜಿ ಸಲ್ಲಿಸಿದ. ಅರ್ಜಿ ನೋಡಿ ತಹಸಿಲ್ದಾರ್ ಗೆ ತಲೆ ಕೆಟ್ಟು ಹೋಯಿತು. ರೈತನನ್ನು ಕರೆಸಿ ವಿಚಾರಣೆ ನಡೆಸಿದರು. ಅವರಿಬ್ಬರ ಸಂಭಾಷಣೆ ಹೀಗಿತ್ತು.
ಏನಯ್ಯಾ ನೀನಾ ಪಿರಂಗಿಗೆ ಅರ್ಜಿ ಸಲ್ಲಿಸಿರೋದು?
ರೈತ- ಹೌದು ಸ್ವಾಮಿ
ಪಿರಂಗಿ ಮೋಡಿದ್ದೀಯಾ?
ರೈತ- ನೋಡಿದ್ದೀನಿ ಸ್ವಾಮಿ.
ಹೇಗಿದೆ ಹೇಳು?
ರೈತ- ಕೊಳವೆ ಆಕಾರದಲ್ಲಿ ಏಳೆಂಟು ಅಡಿ ಉದ್ದವಿರುತ್ತೆ ಸ್ವಾಮಿ. ಹಿಂದೆ ರಾಜ ಮಹರಾಜರು ಯುದ್ಧದಲ್ಲಿ ಅದನ್ನು ಬಳಸುತ್ತಿದ್ದರು.
ಮತ್ತೇ ಕಾಡು ಪ್ರಾಣಿ ನಿಗ್ರಹಕ್ಕೆ ಪಿರಂಗಿ ಬೇಕು ಎಂದು ಅರ್ಜಿ ಬರೆದಿದ್ದೀಯಾ ಏಕೆ?
ರೈತ- ಇನ್ನೇನು ಮಾಡ್ಲಿ ಸ್ವಾಮಿ? ಹೋದ ವರ್ಷ ಹತ್ತು ಮೂಟೆ ಸಿಮೆಂಟ್ ಬೇಕು ಅಂತ ಅರ್ಜಿ ಕೊಟ್ಟಿದ್ದೆ. ನೀವು ಎರಡು ಚೀಲ ಕೊಟ್ಟಿರಿ. ಅದಕ್ಕೆ ಪಿರಂಗಿ ಬೇಕು ಅಂತ ಅರ್ಜಿ ಸಲ್ಲಿಸಿದ್ದೀನಿ. ಕೊನೆಗೆ ಬಂದೂಕನಾದ್ರು ಸಿಗಲಿ ಅಂತಾ. ನಾನು ಬಂದೂಕಿಗೆ ಅರ್ಜಿ ಸಲ್ಲಿಸಿದಾಗ, ನೀವು  ದೀಪಾವಳಿ ಹಬ್ಬದಲ್ಲಿ ಚಿನಕುರುಳಿ ಪಟಾಕಿ ಹೊಡಿಯುವ ಗನ್ ಕೊಟ್ರೆ ಏನು ಮಾಡೋದು?
ನಂತರ ತಹಸಿಲ್ದಾರ್ ನಗುತ್ತಾ ಲೈಸನ್ಸ್ ಕೊಟ್ಟನಂತೆ. ರೈತರು ದಿಕ್ಕೆಟ್ಟು ಆತ್ಮ ಹತ್ಯೆಯ ಮೂಲಕ ತರಗೆಲೆಗಳಂತೆ ನೆಲಕ್ಕೆ ಉರುಳುತ್ತಿರುವ  ಈ ಸಂದರ್ಭದಲ್ಲಿ ಲಂಕೇಶರು ಸೃಷ್ಟಿಸಿದ ಬುದ್ಧಿವಂತ ರೈತ ನೆನಪಾದ. ನಮ್ಮ ದುರಂತವೆಂದರೆ, ರೈತರಿಗೆ ಮಾರ್ಗದರ್ಶನ ಮಾಡಲು ಲಂಕೇಶರೂ ಇಲ್ಲ, ಪ್ರೊಫೆಸರ್ ನಂಜುಂಡಸ್ವಾಮಿಯವರೂ ಇಲ್ಲ. ಇಲ್ಲಿನ ಭುಮಿ ಹೇಗೆ ಬರಡಾಗಿದೆಯೋ, ಅದೇ ರೀತಿ ನಮ್ಮಗಳ ಎದೆ ಕೂಡ ಬರಡಾಗಿದೆ. ಇದನ್ನು ಮೊದಲೇ ಊಹಿಸಿದವರಂತೆ ಲಂಕೇಶರು 1980 ರಲ್ಲಿ ನನ್ನ ಹಿರಿಯ ಮಿತ್ರ ಮಂಗ್ಳೂರ ವಿಜಯ ಸಂಪಾದಕತ್ವದಲ್ಲಿ ಹೊರತಂದಿದ್ದ “ ಕಪ್ಪು ಜನರ ಕೆಂಪು ಕಾವ್ಯ” ಎಂಬ ಕವನ ಸಂಕಲನಕ್ಕೆ ಕವಿತೆಯ ರೂಪದಲ್ಲಿ ಮುನ್ನುಡಿ ಬರೆದಿದ್ದರು. ಅದರ ಒಂದೆರೆಡು ಸಾಲುಗಳು ನನಗೆ ಈಗಲೂ ನೆನಪಿವೆ.
ಗೆಳೆಯರೇ, ಈ ಜನರ ಎದೆಗೆ ಕವಿತೆಯಿರಲಿ
ಕತ್ತಿ ಕೂಡ ತಲುಪಲಾಗದ ಸ್ಥಿತಿ.
(ರೈತರ ಸಾವಿನ ಸೂತಕದ ಹಾಗೂ ಸಂಕಟದ ಸಮಯದಲ್ಲಿ ಸುಮ್ಮನೆ ಮೇಷ್ಟ್ರು ನೆನಪಾದರು. ಅದಕ್ಕಾಗಿ ಈ ಬರಹ.)