ಶುಕ್ರವಾರ, ಆಗಸ್ಟ್ 25, 2017

ದ್ವೇಷದ ರಾಜಕಾರಣಕ್ಕೆ ಬಲಿಯಾಗುತ್ತಿರುವ ವ್ಯಕ್ತಿತ್ವದ ಘನತೆ ಮತ್ತು ನೈತಿಕತೆ



ಇದು ಭಾರತದ ರಾಜಕಾರಣದ ದುರಂತ ಮಾತ್ರವಲ್ಲ, ಕರ್ನಾಟಕದ ರಾಜಕಾರಣದ ದುರಂತವೂ ಸಹ ಹೌದು. ರಾಜಕೀಯ ಪಕ್ಷಗಳ ಹಾಗೂ ರಾಜಕೀಯ ನೇತಾರರ ನಡುವೆ ಇರಬೇಕಾದ ಸೈದ್ಧಾಂತಿಕ ಭಿನ್ನಭಿಪ್ರಾಯ ಅಥವಾ ವೈಚಾರಿಕ ಸಂಘರ್ಷಗಳು ವೈಯಕ್ತಿಕ ಹಿತಾಸಕ್ತಿಯ  ಮಟ್ಟಕ್ಕೆ ಇಳಿಯುವುದರ ಮೂಲಕ ವ್ಯಕ್ತಿ ಚಾರಿತ್ರ್ಯದ ಹರಣ ರಾಜಾ ರೋಷವಾಗಿ ಮುಂದುವರಿದಿದೆ.
ಒಂದು ರಾಜಕೀಯ ಪಕ್ಷ ಅಥವಾ ಒಬ್ಬ ನಾಯಕನನ್ನು ಮಣಿಸಲು ಈಗ ರಾಜಕೀಯ ನಾಯಕನೊಬ್ಬ ತನ್ನ ಅಧಿಕಾರದ ಅವಧಿಯಲ್ಲಿ ಮಾಡಿರಬಹುದಾದ ಹಗರಣಗಳನ್ನು ಅವನ ವಿರುದ್ಧ ಆಯುಧಗಳನ್ನಾಗಿ ಬಳಕೆ ಮಾಡಲಾಗುತ್ತಿದೆ. ಯಾವ ಕ್ಷಣದಲ್ಲಿ ಯಾರೊಬ್ಬರ ಆರೋಪಗಳು ಅಥವಾ ಯಾವ ತನಿಖಾ ವರದಿಗಳು ಮುಂಚೂಣಿಗೆ ಬರುತ್ತವೆ ಎಂಬುದನ್ನು ಯಾರೂ ನಿರೀಕ್ಷಿಸಲಾಗದ ರೀತಿಯಲ್ಲಿ ಕ್ಷಿಪ್ರಗತಿಯಲ್ಲಿ ಎದ್ದು ನಿಲ್ಲುತ್ತಿವೆ. ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಇತ್ಯಾದಿಗಳ ತನಿಖೆಗಾಗಿ ಇರುವ ಕೇಂದ್ರದ ಸಿ.ಬಿ..ಸಂಸ್ಥೆ ಮತ್ತು ರಾಜ್ಯಮಟ್ಟದ .ಸಿ.ಬಿ. ಸಂಸ್ಥೆಗಳು ಆಳುವ ಸರ್ಕಾರಗಳ ಕೈಗೊಂಬೆಗಳಾಗಿವೆ. ಜೊತೆಗೆ ಸಂಸ್ಥೆಗಳು ನೀಡುವ ತನಿಖಾ ವರದಿಗಳಿಗಳಾಗಲಿ ಅಥವಾ ಸರ್ಕಾರ ನೇಮಿಸುವ ತನಿಖಾ ಆಯೋಗದ ವರದಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾರತದಲ್ಲಿ ಜನತೆಯ ವಿಶ್ವಾಸವನ್ನು ಕಳೆದುಕೊಂಡು ಎಷ್ಟೋ ದಶಕಗಳು ಉರುಳಿ ಹೋದವು.
1975 ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ದೇಶದ ಮೇಲೆ ಹೇರಿದ ತುರ್ತುಪರಿಸ್ಥಿತಿ ಹಾಗೂ ಅವಧಿಯಲ್ಲಿ ನಡೆಯಿತು ಎನ್ನಲಾದ ದೌರ್ಜನ್ಯಗಳು ಮತ್ತು ಅಧಿಕಾರ ದುರುಪಯೋಗ ಸ್ಭೆರಿದಂತೆ ಹಲವು ಪ್ರಕರಣಗಳಿಗೆ ನಂತರ ಬಂದ ಜನತಾ ಸರ್ಕಾರ ನೇಮಿಸಿದ  ಷಾ ಆಯೋಗದಿಂದ ಹಿಡಿದು, ಕರ್ನಾಟಕದ ದೇವರಾಜ ಅರಸು ವಿರುದ್ಧ ನೇಮಿಸಿದ ಗ್ರೋವರ್ ಆಯೋಗದವರೆಗೆ ಮುಂದುವರಿದು ನಂತರ ಇಂದಿನ ನ್ಯಾಯಮೂರ್ತಿ ಕೆಂಪಣ್ಣ ಆಯೋಗದವರೆಗೆ ಪರಾಮರ್ಶಿಸಿದರೆ, ಇದೊಂದು ರಾಜಕೀಯ ರಂಗದ ಕಣ್ಣ ಮುಚ್ಚಾಲೆಯ ಆಟ ಎನ್ನದೆ ವಿಧಿಯಿಲ್ಲ. ದೇಶದ ಇತಿಹಾಸದಲ್ಲಿ ಹರಿಯಾಣದ ಮಾಜಿ ಮುಖ್ಯ ಮಂತ್ರಿ ಚೌತಾಲ, ಬಿಹಾರದ ಲಾಲುಪ್ರಸಾದ್ ಯಾದವ್, ತಮಿಳುನಾಡಿನ ಜಯಲಲಿತಾ ಹೀಗೆ ಕೆಲವರನ್ನು ಹೊರತು ಪಡಿಸಿದರೆ, ಉಳಿದ ರಾಜಕಾರಣಿಗಳು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ ಉದಾಹರಣೆಗಳು ತೀರಾ ಕಡಿಮೆ ಎಂದು ಹೇಳಬೇಕು.
ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಹಲವಾರು ವಿಲಕ್ಷಣ ಸಂಗತಿಗಳಿಗೆ ಸಾಕ್ಷಿಯಾಗುತ್ತಿವೆ. ಗುಜರಾತಿನ  ಕಾಂಗ್ರೇಸ್ ಶಾಸಕರಿಗೆ ಆತಿಥ್ಯ ನೀಡಿದರು ಎಂಬ ಏಕೈಕ ಕಾರಣಕ್ಕಾಗಿ ಕಾಂಗ್ರೇಸ್ ಸರ್ಕಾರದ ಪ್ರಭಾವಿ ಸಚಿವರಲ್ಲಿ ಒಬ್ಬರಾದ ಡಿ.ಕೆ.ಶಿವಕುಮಾರ್ರವರ ನಿವಾಸ, ಸಂಸ್ಥೆಗಳು ಮತ್ತು ಸಂಬಂಧಿಕರು ಹಾಗೂ ಆಪ್ತರ ನಿವಾಸಗಳ ಮೇಲೆ ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯದ ಅಡಿಯಲ್ಲಿ ತೆರಿಗೆ ದಾಳಿ ನಡೆಯಿತು. ಇದಕ್ಕೆ ಪ್ರತಿಯಾಗಿ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಅಧಿಕಾರದ ಅವಧಿಯಲ್ಲಿ  ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯಲ್ಲಿ ನೂರಾರು ಎಕರೆ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿದ್ದರು ಎನ್ನಲಾದ ಐದು ವರ್ಷದ ಹಿಂದೆ ದಾಖಲಾಗಿದ್ದ ದೂರಿಗೆ ಇದೀಗ ಮರುಜೀವ ನೀಡಲಾಗಿದೆ. ಕರ್ನಾಟಕ ಸರ್ಕಾರದ ಕ್ರಮಕ್ಕೆ ಪ್ರತಿಯಾಗಿ ರಾಜಸ್ತಾನದಲ್ಲಿರುವ ವಸುಂಧರಾ ರಾಜೆ ನೇತೃತ್ವದ ಬಿ.ಜೆ.ಪಿ. ಸರ್ಕಾರವು ಮೂರು ದಿನಗಳ ಹಿಂದೆ ಸೋನಿಯಾ ಗಾಂಧಿಯ ಅಳಿಯ ರಾಬರ್ಟ್ವಾದ್ರಾ ಅವರ ಭೂಹಗರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ. ಇವುಗಳು ಕಾಕತಾಳಿಯ ಘಟನೆಗಳು ಎಂದು ನಿರ್ಲಕ್ಷಿಸಲು ಸಾಧ್ಯವಾಗದ ರೀತಿಯಲ್ಲಿ ಅನೇಕ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತಿವೆ. ಹಿಂದೆ ಜನಾರ್ಧನ ರೆಡ್ಡಿ ಎಬ ಖದೀಮನ  ಗಣಿದೂಳಿನ ಹಣದಿಂದ ಆಂಧ್ರದಲ್ಲಿ ತನ್ನದೇ ಆದ ಸಾಮ್ರಾಜ್ಯ ಕಟ್ಟಿಕೊಂಡು, ತನ್ನ ತಂದೆಯ (ಮಾಜಿ ಮುಖ್ಯಮಂತ್ರಿ ಡಾ. ವೈ.ಎಸ್. ರಾಜಶೇಖರ ರೆಡ್ಡಿ) ಸಾವಿನ ನಂತರ ವೈ.ಎಸ್.ಆರ್. ಕಾಂಗ್ರೇಸ್ ಪಕ್ಷವನ್ನು ಸ್ಥಾಪಿಸಿ  ಕಾಂಗ್ರೇಸ್ ಪಕ್ಷಕ್ಕೆ ಸವಾಲೆಸದ ಜಗನ್ ರೆಡ್ಡಿಯನ್ನು ಹಿಂದಿನ ಯು.ಪಿ.. ಸರ್ಕಾರ ಅಕ್ರಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅವನ ರೆಕ್ಕ ಪುಕ್ಕಗಳನ್ನು ಕತ್ತರಿಸಿ ಹಾಕಿತು. ಇದೀಗ, ಕಾಂಗ್ರೇಸ್ ಪಕ್ಷದ ಮಾಜಿ ಕೇಂದ್ರ ಸಚಿವ ಪಿ.ಚಿದಂರಂ ಅವರ ಪುತ್ರ ಕಾರ್ತಿಕ್ ಸಾಮ್ರಾಜ್ಯದ ಮೇಲೆ ಮೋದಿ ನೇತೃತ್ವದ ಸರ್ಕಾರ ಇಂತಹದ್ದೇ ಕ್ರಮಕ್ಕೆ ಮುಗಿಬಿದ್ದಿದೆ.
ಒಟ್ಟಾರೆ, ಇಂತಹ ಸೇಡಿನ ರಾಜಕಾರಣಕ್ಕೆ ತುತ್ತಾದವರಲ್ಲಿ ಯಾರೋಬ್ಬರೂ ಪ್ರಾಮಾಣಿಕರಲ್ಲ, ಸತ್ಯಹರಿಶ್ಚಂದ್ರರಂತೂ ಮೊದಲೇ ಅಲ್ಲ, ಇಂತಹ ನಿರ್ಲಜ್ಜ ರಾಜಕಾರಣಿಗಳನ್ನು ಪಕ್ಷ ಅಥವಾ ಜಾತಿಯ ಹಿನ್ನಲೆಯಲ್ಲಿ ಸಮರ್ಥಿಸಿಕೊಳ್ಳುತ್ತಿರುವ ಹಿನ್ನಲೆ, ಇಂತಹವರ ನಿವಾಸಗಳಿಗೆ ಹೋಗಿ ಅವರನ್ನು ಸಂತೈಸಿ, ಹರಸಿ ಬರುತ್ತಿರುವ ಮಠಾಧೀಶರ ಬೌದ್ಧಿಕ ಮತ್ತು ನೈತಿಕ ಪ್ರಜ್ಞೆಯ ದಿವಾಳಿತನ ಇವೆಲ್ಲವೂ ದೇಶದ ರಾಜಕೀಯ ಮತ್ತು ಸಾಮಾಜಿಕ ಹಾಗೂ ಸಾರ್ವಜನಿಕ ಬದುಕನ್ನು ಮರು ವ್ಯಾಖ್ಯಾನಕ್ಕೆ ಒಳಪಡಿಸುವಂತೆ ನಾಗರೀಕ ಸಮಾಜವನ್ನು ಒತ್ತಾಯಿಸುತ್ತಿವೆ.
ಸ್ವಾತಂತ್ರ್ಯಾನಂತರದ ಭಾರತದಲ್ಲಿ 2010 ವರೆಗೆ ರಾಜಕೀಯ ರಂಗದಲ್ಲಿದ್ದ ವ್ಯಕಿಗಳಿಗೆ  ಘನತೆ ಮತ್ತು ನೈತಿಕತೆ ಎಂಬುದು ಇರುತ್ತಿತ್ತು. ಅವರಿಗೆ ಸಾರ್ವಜನಿಕ ಲಜ್ಜೆ  ಸದಾ ಕಾಡುತ್ತಿತ್ತು. ತಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಮತದಾರರ ಮುಂದೆ ನಿಲ್ಲಬೇಕು ಅಥವಾ ಅವರ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂಬ ಆತಂಕವಿರುತ್ತಿತ್ತು. ಆದರೆ, ರಾಜಕೀಯ ಕ್ಷೇತ್ರಕ್ಕೆ ಕಳ್ಳರು, ಹಗಲು ದರೋಡೆಕೋರರು, ಲಾಭಕೋರ ಉದ್ಯಮಿಗಳು ಸಮಾಜ ಸೇವಕರ ಮುಖವಾಡ ಹೊತ್ತು ಲಗ್ಗೆ ಹಾಕಿದ ನಂತರ ಎಲ್ಲವೂ ತಲೆಕೆಳಗಾಯಿತು. ಹಣವೊಂದಿದ್ದರೆ ಸಾಕು ಮತದಾರರನ್ನು ಖರೀದಿಸಬಹುದು ಎಂಬುದನ್ನು ಲಫಂಗರು ಜಗತ್ತಿಗೆ ತೋರಿಸಿಕೊಟ್ಟನಂತರ, ಎಲ್ಲರೂ ಅದೇ ಹಾದಿಯನ್ನು ತುಳಿದರು.
ಇಂದಿನ ಅಸಹ್ಯಕರವಾದ ರಾಜಕಾರಣವನ್ನು ನೋಡುವಾಗ, ದೇಶದ ರಾಜಕಾರಣದಲ್ಲಿ ಮುಖ್ಯಮಂತ್ರಿಗಳಾಗಿ ರಾಜಕೀಯಕ್ಕೆ ಘನತೆ ತಂದುಕೊಟ್ಟ ಪಶ್ಚಿಮ ಬಂಗಾಳದ ಜ್ಯೋತಿ ಬಸು, ಕೇರಳದ ,ಎಂ.ಎಸ್. ನಂಬೂದರಿಪಾಡ್, ಕರ್ನಾಟಕದ ದೇವರಾಜ ಅರಸ್, ತಮಿಳುನಾಡಿನ ಕೆ.ಕಾಮರಾಜ ನಾಡರ್ ಮತ್ತು ಸಿ.ಎಸ್. ಅಣ್ಣಾದೊರೈ ಹಾಗೂ ಈಗಿನ ತ್ರಿಪುರಾ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಇಂತಹ ಮಹನೀಯರು ನೆನಪಾಗುತ್ತಾರೆ. ಇಂದಿನ ಕುಲಗೆಟ್ಟ ರಾಜಕಾರಣಿಗಳಿಗೆ ಮಹಾನುಭಾವರ ಜೀವನವನ್ನು ಬೋಧಿಸುವ ಅಗತ್ಯವಿದೆ. ತಮಿಳುನಾಡಿನಲ್ಲಿ ಕೆ.ಕಾಮರಾಜ ನಾಡರ್ 1954 ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾದ ನಂತರ ಮಾಡಿದ ಸಾಧನೆಗಳು ಇಂದಿಗೂ ಎಲ್ಲರಿಗೂ ಮಾದರಿಯಾಗಿವೆ. ಪ್ರಾಥಮಿಕ ಶಾಲೆಗಳಿಲ್ಲದ ಹಳ್ಳಿಗಳು ಇರಕೂಡದು ಎಂಬುದು ಅವರ ನಿಲುವಾಗಿತ್ತು. ದೇಶದಲ್ಲಿ ಪ್ರಥಮ ಬಾರಿಗೆ ಶಾಲೆಯಲ್ಲಿ ಮಧ್ಯಾಹ್ನದ ಊಟವನ್ನು ಪರಿಚಯಿಸಿದರು ಅವರು. ತಮಿಳುನಾಡಿನಲ್ಲಿ ವಿವಿಧ ನದಿಗಳಿಗೆ ಎಂಟು ಜಲಾಶಯಗಳನ್ನು ನಿರ್ಮಿಸಿ ನೀರಾವರಿಯ ಮೂಲಕ ಅಲ್ಲಿನ ರೈತರಿಗೆ ಆರ್ಥಿಕ ಭದ್ರತೆ ಒದಗಿಸಿದರು. ಯಾವುದೇ ಸಮಸ್ಯೆಗಳಿಗೆ ಬೆನ್ನು ತಿರುಗಿಸಬೇಡಿ, ಧೈರ್ಯದಿಂದ ಎದುರಿಸಿ, ಇದು ಅವರು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಹೇಳುತ್ತಿದ್ದ ಮಾತುಗಳು. ಬ್ರಹ್ಮಚಾರಿಯಾಗಿ ತೀರಾ ಸರಳವಾದ ಬದುಕನ್ನು ಬದುಕುತ್ತಿದ್ದ ಅವರು, ಶಾಲೆಯ ಮಕ್ಕಳ ಬಿಸಿಯೂಟದ ಯೋಜನೆಗೆ ತಮ್ಮ ವ್ಯಯಕ್ತಿಕ ವೆಚ್ಚವನ್ನು ಕಡಿತಗೊಳಿಸುವುದರ ಜೊತೆಗೆ ಸರ್ಕಾರದ ವೆಚ್ಚಕ್ಕೆ ಕಡಿವಾಣ ಹಾಕಿದ್ದರು. ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಕಾಮರಾಜರ ನೇತೃತ್ವದ ಕಾಂಗ್ರೇಸ್ ಸರ್ಕಾರ 1967 ರಲ್ಲಿ ಸಿ.ಎಸ್. ಅಣ್ಣಾದೊರೈ ನೇತೃತ್ವದ ಡಿ.ಎಂ.ಕೆ. ಪಕ್ಷದ ಎದುರು ಸೋತಾಗ, ಕಾಮರಾಜರು ಎದೆ ಬಡಿದುಕೊಂಡು ರೋಧಿಸಲಿಲ್ಲ. ಯಾರನ್ನೂ ದೂಷಿಸಲಿಲ್ಲ ಅತ್ಯಂತ ಘನತೆಯಿಂದ ಅಧಿಕಾರವನ್ನು ಬಿಟ್ಟುಕೊಟ್ಟು ನಿರ್ಗಮಿಸಿದರು. ಅದೇ ರೀತಿಯಲ್ಲಿ  ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ ಅಣ್ಣಾದೊರೈ ತಮಟೆ, ಡೋಲು, ನಗಾರಿ ಮತ್ತು ಅಭಿಮಾನಿಗಳ ಜೈಕಾರ ಅಥವಾ ವಿಜಯದ ಸಂಕೇತವಾಗಿ  ತಮ್ಮ ಎರಡು ಬೆರಳುಗಳನ್ನು ತೋರಿಸುತ್ತಾ ಅಧಿಕಾರದ ಗದ್ದುಗೆಯನ್ನು ಏರಲಿಲ್ಲ. ಕಾಂಚಿಪುರಂ ನೇಕಾರ ವೃತ್ತಿಯ ಬಡ ಕುಟುಂಬದಿಂದ ಬಂದ ಅಣ್ಣಾದೊರೈ ಪತ್ರಕರ್ತನಾಗಿ, ಸಿನಿಮಾಗಳಿಗೆ ಚಿತ್ರಕಥೆ ಬರೆಯುವ ಲೇಖಕನಾಗಿ ಬೆಳೆದು, ಪೆರಿಯಾರ್ ರಾಮಸ್ವಾಮಿಯವರ ಗರಡಿಯಲ್ಲಿ ಬೆಳೆದವರಾಗಿದ್ದರು. 1965 gಲ್ಲಿ ಹಿಂದಿ ಹೇರಿಕೆ ವಿರುದ್ಧ ತಮಿಳುನಾಡಿನಲ್ಲಿ ದೊಡ್ಡ ಆಂಧೋಲನವನ್ನು ನಡೆಸಿ, ಹಿಂದಿ ಭಾಷೆಯು ತಮಿಳುನಾಡಿಗೆ ಕಾಲಿಡದಂತೆ ನೊಡಿಕೊಂಡವರು. ಅವರ ಹೋರಾಟ ಅವರನ್ನು ಮುಖ್ಯಮಂತ್ರಿ ಗದ್ದುಗೆಗೆ ಏರಿಸಿತು. ಅಂತಹವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಕಾಮರಾಜರನ್ನು ಮತ್ತು ಅವರ ಅನುಪಮ ಸೇವೆಯನ್ನು ನೆನದು, ಅವರು ನನಗೆ ಮಾರ್ಗದರ್ಶಕರಾಗಲಿ ಎಂದು ಕೇಳಿಕೊಂಡಿದ್ದರು. ಇದು ಎರಡು ವಿಭಿನ್ನ ರಾಜಕೀಯ ಪಕ್ಷಗಳ ನಡುವಿನ ರಾಜಕೀಯ ನಾಯಕರು ಪರಸ್ಪರ ಗೌರವ ತೋರಿಸುತ್ತಿದ್ದ ಅವರ ದೊಡ್ಡ ಗುಣಕ್ಕೆ ಮಾದರಿಯಾಗಿದೆ. ಇಂತಹವರನ್ನು ಈಗ ಎಲ್ಲಿ ಹುಡುಕೊಣ?

ಇಂತಹದ್ದೇ ರೀತಿಯ ದೊಡ್ಡ ಗುಣ ನಮ್ಮ ಕರ್ನಾಟಕದ ದೇವರಾಜ ಅರಸರಿಗಿತ್ತು. 1978 ರಿಂದ 1980 ಅವಧಿಯಲಿÉುರಡನೆಯ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅರಸುರವರು ತಮ್ಮ ಸಹೋದ್ಯೋಗಿಗಳ ಕುತಂತ್ರದಿಂದ ಮುಖ್ಯ ಮಂತ್ರಿ ಪದವಿಯನ್ನು ಕಳೆದುಕೊಂಡರು. ಆದರೆ, ಎಂದಿಗೂ ಬಹಿರಂಗವಾಗಿ ತಮ್ಮ ಬೆನ್ನಿಗೆ ಚೂರಿ ಹಾಕಿದವರ ಕುರಿತು ಒಂದು ಮಾತನ್ನೂ ಆಡಿದವರಲ್ಲ. ತಾವೇ ರಾಜಕೀಯಕ್ಕೆ ಕರೆತಂದು ಬೆಳೆಸಿದ ನಾಯಕರು, ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ, ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದ್ದ ಅರಸುರವನ್ನು ಕಟು ಮಾತುಗಳ ಚೂರಿಯಿಂದ ಇರಿದರೂ ಸಹ ಅವರ ಸಾರ್ವಜನಿಕ ಬದುಕಿಗೆ ಇರಬೇಕಾದ ಸಂಯಮವನ್ನು ಅವರು ಕಳೆದುಕೊಳ್ಳಲಿಲ್ಲ. ಹೆಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ, ರಾಮಕೃಷ್ಣ ಹೆಗ್ಡೆ, ಜೆ.ಹೆಚ್.ಪಟೇಲ್, ಎಂ.ಪಿ.ಪ್ರಕಾಶ್ ರಂತಹ ಅನೇಕ ಮಹನೀಯರು ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ಸಹ ಸಾರ್ವಜನಿಕ ಬದುಕಿಗೆ ಇರಬೇಕಾದ ಸಜ್ಜನಿಕೆ ಮತ್ತು ಸಭ್ಯತೆಯನ್ನು ಕಾಪಾಡಿಕೊಂಡು ಬಂದವರಾಗಿದ್ದಾರೆ. ಇಂತಹವರ ನಡುವೆ, ಈಗಿನ ರಾಜಕಾರಣದ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ. ಆರ್.ಅಶೋಕ್, ಶೋಭಾಕರಂದ್ಲಾಜೆ, ಇಂತಹವರ ತುಟಿ ಮೀರಿದ ಮಾತುಗಳು,ಹಾಗೂ ಕಾಂಗ್ರೇಸ್ ಪಕ್ಷದ ವಿ.ಎಸ್.ಉಗ್ರಪ್ಪನವರ ಭಾವಾವೇಶದ ಮಾತುಗಳನ್ನು ಕೇಳುತ್ತಿದ್ದರೆ, ನಾವು ಮೌನದಿಂದ ತಲೆ ತಗ್ಗಿಸುವಂತಾಗಿದೆ. ಘನತೆ ಮತ್ತು ನೈತಿಕತೆಯಿಲ್ಲದ ಇಂತಹ ಕುಲಗೆಟ್ಟ ರಾಜಕಾರಣ ನಿಜಕ್ಕೂ ನಮಗೆ ಅವಶ್ಯಕತೆ ಇದೆಯಾ? ಇದು ನಾಗರೀಕ ಸಮಾಜವನ್ನು ಸದಾ ಕಾಡುತ್ತಿರುವ ಪ್ರಶ್ನೆಯಾಗಿದೆ.

ಅಣ್ನಾದೊರೈ ಮತ್ತು ಕಾಮರಾಜ್ ಇವರ ಚಿತ್ರಗಳು- ಸೌಜನ್ಯ- ದಿನತಂತಿ (ತಮಿಳು ದಿನಪತ್ರಿಕೆ)

( ಕರಾವಳಿ ಮುಂಜಾವು ಪತ್ರಿಕೆಯ " ಜಗದಗಲ" ಅಂಕಣ ಬರಹ)

ಶುಕ್ರವಾರ, ಆಗಸ್ಟ್ 18, 2017

ಬೆಂಗಳೂರಿಗೆ ಮಹಾ ಮಳೆಯೆಂಬ ವರದಿ ಹಾಗೂ ಸುದ್ದಿ ಜಗತ್ತಿನ ಸೋಗಲಾಡಿತನಗಳು



ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನಲೆಯಲ್ಲಿ ದಕ್ಷಿಣ ಕರ್ನಾಟಕದ ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ಕೋಲಾರ ಜಿಲ್ಲೆಗಳಲ್ಲಿ ಇತ್ತೀಚೆಗೆ ಮಳೆಯಾಯಿತು. ಆದರೆ, ಎರಡು ದಿನಗಳ ಕಾಲ ಬಿದ್ದ ಮಳೆಯು ಧಾರಾಕಾರವಾಗಿ ಸುರಿದರೂ ಜನಜೀವನ ಅಸ್ತವ್ಯಸ್ತವಾಗುವಂತೆ ಬೀಳುವ ಮಳೆಯೇನಾಗಿರಲಿಲ್ಲ. ಬೆಂಗಳೂರು ನಗರವನ್ನು ಹೊರತು ಪಡಿಸಿದರೆ, ಉಳಿದ ಯಾವುದೇ ಜಿಲ್ಲೆಗಳಲ್ಲಿ ಅಥವಾ ಜಿಲ್ಲಾ ಕೇಂದ್ರಗಳಲ್ಲಿ ಮಳೆಯಿಂದ ಯಾವುದೇ ಅವಾಂತರ ಸೃಷ್ಟಿಯಾಗಲಿಲ್ಲ. ತಗ್ಗು ಪ್ರದೇಶಗಳಲ್ಲಿ, ರಸ್ತೆಗಳಲ್ಲಿ ನೀರು ನಿಲ್ಲುವುದರ ಮೂಲಕ ಜನಜೀವನಕ್ಕೆ ತೊಂದರೆಯಾಗಲಿಲ್ಲಬೆಂಗಳೂರಿನಲ್ಲಿ ಬಿದ್ದ ಮಳೆಯ ಪ್ರಮಾಣದಷ್ಟೇ ಸಮನಾಗಿ  ಇತರೆ ಪ್ರದೇಶಗಳಲ್ಲೂ ಸಹ ಮಳೆ ಬಿದ್ದಿದೆ. ಆದರೆ, ನಮ್ಮ ದೃಶ್ಯಮಾಧ್ಯಮಗಳು ಮಾತ್ರ ಹಗಲಿರುಳು ಬೆಂಗಳೂರು ನಗರಕ್ಕೆ ಮಹಾ ಮಳೆ, ಬೆಂಗಳೂರಿನಲ್ಲಿ ಜಲಪ್ರಳಯ, ಬೆಂಗಳೂರಿಗೆ ಶತಮಾನದ ಮಳೆ ಹೀಗೆ ತಮಗೆ ಅನಿಸಿದ ವಿಶೇಷಣಗಳನ್ನು ಸೇರಿಸಿ ನಿರಂತರವಾಗಿ ಎರಡು ಮೂರು ದಿನಗಳ ಗಂಟಲಿನ ಪಸೆ ಆರಿ ಹೋಗುವವರೆಗೂ ಸುದ್ದಿಯನ್ನು ಬಿತ್ತರಿಸಿದವು.
ಉತ್ತರ ಭಾರತದ ಹಲವು ರಾಜ್ಯಗಳಲ್ಲಿ  ಯಾರಾದರೂ ಸತ್ತರೆ, ಮನೆಯ ಮುಂದೆ ಅಳುವುದಕ್ಕಾಗಿ ಬಾಡಿಗೆ ಮಹಿಳೆಯರನ್ನು ಕರೆಸುತ್ತಾರೆ. ಇವರನ್ನು ರುಡಾಲಿಗಳೆಂದು ಕರೆಯುತ್ತಾರೆ. ಅತ್ಯಂತ ರಾಗಬದ್ಧವಾಗಿ ಧ್ವನಿ ಎತ್ತರಿಸಿ ಅಳುವ ಸಮುದಾಯಕ್ಕೆ ಸೇರಿದಂತೆ ಕಾಣುವ ನಮ್ಮ ಮಾಧ್ಯಮದ ಪಂಜರದ ಗಿಣಿಗಳು ಬೆಂಗಳೂರಿನ ರಸ್ತೆಗಳಲ್ಲಿ, ತಗ್ಗು ಪ್ರದೇಶಗಳಲ್ಲಿ, ನಿಂತಿರುವ ನೀರನ್ನು ನೋಡಿ, ಜಲಪ್ರಳಯ, ಪ್ರಕೃತಿ ವಿಕೋಪ ಎಂದು ಬಣ್ಣಿಸುವ ಮುನ್ನ ಇಂತಹ ಅವ್ಯವಸ್ಥೆಯಲ್ಲಿ ಮಾನವ ನಿರ್ಮಿತ  ಪ್ರಕೃತಿ ವಿಕೋಪದ ಪಾಲೆಷ್ಟು ಎಂಬುದನ್ನು ಯೋಚಿಸಬೇಕಿದೆ.ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಲು ಹೊರಟ ಮುಲ್ಲಾನಂತೆಬೆಂಗಳೂರು ಮಳೆಯ ದುರಂತವನ್ನು ಬಣ್ಣಿಸುವಾಗ ಅಥವಾ ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುವ ಉತ್ಸಾಹ ಉಳಿದ ದಿನಗಳಲ್ಲಿ ಎಲ್ಲಿ ಹೋಗಿರುತ್ತದೆ? ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದರು ಎಂಬ ಏಕೈಕ ಕಾರಣಕ್ಕೆ ಬಡವರು, ಮಧ್ಯಮ ವರ್ಗದವರ ಮನೆಗಳನ್ನು ನೆಲಸಮ ಮಾಡಿ ಅವರನ್ನು ಬೀದಿಗೆ ನೂಕಿದ ಸರ್ಕಾರದ ಕ್ರಮವನ್ನು  ಮಾಧ್ಯಮಗಳು ನಿರಂತರ ವರದಿ ಮಾಡಿದವುಆದರೆ, ಬೆಂಗಳೂರು ನಗರದ ರಾಜಕಾಲುವೆಗಳ ಮೇಲೆ ನಿರ್ಮಾಣ ಮಾಡಲಾಗಿದೆ ಎನ್ನಲಾದ ಪ್ರಭಾವಿ ರಾಜಕಾರಣಿಗಳು, ಸಿನಿಮಾ ನಟರು, ಉದ್ಯಮಿಗಳು ಇವರ ಮನೆ, ಆಸ್ಪತ್ರೆ, ಕೈಗಾರಿಕೆಗಳು ಮತ್ತು ವಸತಿ ಸಮುಚ್ಚಯಗಳು ಇವುಗಳನ್ನು ಕೆಡವಲಾರದೆ ಸರ್ಕಾರ ಮಂಡಿಯೂರಿ ಕುಳಿತಾಗ, ಇದೇ ಮಾಧ್ಯಮಗಳು ವಿಷಯವನ್ನು ಮರೆತಂತೆ ನಟಿಸತೊಡಗಿದವು. ಜೊತೆಗೆ ಇವುಗಳನ್ನು ಸಕ್ರಮಗೊಳಿಸಲು ಸರ್ಕಾರ ಮುಂದಡಿಯಿಟ್ಟಾಗ, ಪ್ರತಿಭಟಿಸಲಾರದೆ, ಮನೆ ಕಳೆದುಕೊಂಡ ನಿರಾಶ್ರಿತರಿಗೆ  ಬೆಂಬಲ ಸೂಚಿಸಲಾರದಷ್ಟು ಅಸಹಾಯಕವಾದವು. ತನಿಖಾ ಪತ್ರಿಕೋದ್ಯಮ ಅಥವಾ ಅಭಿವೃದ್ಧಿ ಪತ್ರಿಕೋದ್ಯಮವೆಂದರೆ, ಘಟನೆಯೊಂದು ಸಂಭವಿಸಿದಾಗ ಹಗಲು ರಾತ್ರಿ ಸುದ್ದಿ ಬಿತ್ತರಿಸಿ ನಂತರ ಸುಮ್ಮನಾಗುವುದಲ್ಲ. ಕೈಗೆತ್ತಿಕೊಂಡ ವಿಷಯಕ್ಕೆ ತಾರ್ಕಿಕವಾಗಿ ಅಂತ್ಯ ಕಾಣುವವರೆಗೂ ವಿಕ್ರಮಾದಿತ್ಯನ ಬೆನ್ನು ಹತ್ತಿದ ಬೇತಾಳದಂತೆ ಬೆನ್ನು ಹತ್ತಬೇಕು. ವಿಷಯದಲ್ಲಿ ಉತ್ತರ ಪ್ರದೇಶದ ಗೋರಖ್ ಪುರದ ಆಸ್ಪತ್ರೆಯಲ್ಲಿ ಸಂಭವಿಸಿದ ಮಕ್ಕಳ ಸಾವಿನ ನಂತರ ಹಿಂದು ಇಂಗ್ಲೀಷ್ ದಿನಪತ್ರಿಕೆಯು ಕಳೆದ ಒಂದು ವಾರದಿಂದ ದೇಶದ 12 ಮಹಾನಗರಗಳಲ್ಲಿ ಪ್ರಕಟವಾಗುವ ಎಲ್ಲಾ  ಆವೃತ್ತಿಗಳಲ್ಲಿ ಅಲ್ಲಿನ ಅವ್ಯವಸ್ಥೆ ಕುರಿತು ಪ್ರತಿ ದಿನ ಅರ್ಧಪುಟದಷ್ಟು ಸರಣಿ ವರದಿಯನ್ನು ಪ್ರಕಟಿಸುತ್ತಿರುವುದನ್ನು ಆಸಕ್ತರು ಗಮನಿಸಬಹುದು.


ಬೆಂಗಳೂರಿನ ಮಳೆಯ ಅವಾಂತರಕ್ಕೆ ಕಳೆದ ಎರಡು ಮೂರು ದಶಕದಲ್ಲಿ ನಗರವು ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಅಡ್ಡಾದಿಡ್ಡಿಯಾಗಿ ಬೆಳೆದಿದೆ. 2011 ಸಮೀಕ್ಷೆಯಲ್ಲಿ 84 ಲಕ್ಷ ಜನಸಂಖ್ಯೆ ಇದ್ದ ಬೆಂಗಳೂರು ಮಹಾನಗರದ ಜನಸಂಖ್ಯೆಯು 2017 ಸಮೀಕ್ಷೆಯ ಪ್ರಕಾರ 1ಕೋಟಿ, 23 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ರೀತಿಯ ದಿಡೀರ್ ಬೆಳವಣಿಗೆಯಲ್ಲಿ ಸುತ್ತಮುತ್ತಲಿನ  ಸುಮಾರು ಐವತ್ತು ಅಥವಾ ಅರವತ್ತು ಪಟ್ಟಣ ಪಂಚಾಯಿತಿಗಳನ್ನು ಮಹಾನಗರ ವ್ಯಾಪ್ತಿಗೆ ತೆಗೆದುಕೊಂಡಿದ್ದು ಒಂದು ಕಾರಣವಾಗಿದೆ. ಒಟ್ಟು 198 ವಾರ್ಡ್ಗಳನ್ನು ಮತ್ತು ಕಾರ್ಪೋರೇಟರ್ ಗಳನ್ನು ಬೆಂಗಳೂರು ಮಹಾನಗರ ಪಾಲಿಕೆ ಹೊಂದಿದೆ. ಪಟ್ಟಣ ಪಂಚಾಯಿತಿಗಳ ಸೇರ್ಪಡೆಯಿಂದ ಸುಮಾರು 20 ಲಕ್ಷ ಜನಸಂಖ್ಯೆ ಹೆಚ್ಚಿರಬಹುದೆಂದು ಊಹಿಸಬಹುದು. ಆದರೆ, ವಾರ್ಷಿಕವಾಗಿ ಸರಾಸರಿ ನಾಲ್ಕರಿಂದ ಐದು ಲಕ್ಷ ವಲಸಿಗರು ಬೆಂಗಳೂರು ನಗರಕ್ಕೆ ಜಮೆಯಾಗುತ್ತಿದ್ದಾರೆ. ಇವರಲ್ಲಿ ಉತ್ತರ ಪ್ರದೇಶ, ಬಿಹಾರ, ನೇಪಾಳ ಹಾಗೂ ನೆರೆಯ ತಮಿಳುನಾಡಿನ ಮಂದಿ ಅಧಿಕ ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದಾರೆ.
ಭಾರತದ ಗ್ರಾಮಾಂತರ ಪ್ರದೇಶಗಳಲ್ಲಿ ದುಡಿಯುವ ಕೈಗಳಿಗೆ  ವರ್ಷಪೂರ್ತಿ ಕೆಲಸ ನೀಡುತ್ತಿದ್ದ ಕೃಷಿ ವಲಯ ನೆಲಕಚ್ಚಿದ ನಂತರ ಕೆಟ್ಟು ಪಟ್ಟಣ ಸೇರು ಎಂಬಂತೆ ಕೂಲಿ ಕಾರ್ಮಿಕರು ನಗರದತ್ತ ವಲಸೆ ಬರುತ್ತಿದ್ದಾರೆ. ಬಾರತದ ಬಹುತೇಕ ನಗರಗಳಲ್ಲಿ ಅಕ್ರಮ ಬಡಾವಣೆಗಳು ಮತ್ತು ಕೊಳೆಗೇರಿಗಳು ನಾಯಿಕೊಡೆ ಅಣಬೆಯಂತೆ ನಿರಂತರವಾಗಿ ತಲೆ ಎತ್ತುತ್ತಿವೆ. ಬೆಂಗಳೂರು ನಗರವೊಂದರಲ್ಲಿ 2500 ಹೆಚ್ಚು ಖಾಸಾಗಿ ಬಡಾವಣೆಗಳು ತಲೆ ಎತ್ತಿ ನಿಂತಿವೆ. ಇವುಗಳ ಜೊತೆಗೆ  ಹತ್ತು ಅಂತಸ್ತಿನ ನಲವತ್ತು ಅಪಾರ್ಟ್ಮೆಂಟ್ಗಳ  ಹತ್ತರಿಂದ ಇಪ್ಪತ್ತು ಕಟ್ಟಡಗಳುಳ್ಳ ವಸತಿ ಸಮುಚ್ಚಯಗಳು ಸಾವಿರಕ್ಕೂ ಮೇಲ್ಪಟ್ಟಿವೆ. ಇವುಗಳನ್ನು ಲೆಕ್ಕ ಹಾಕಿದಾಗ ಬೆಂಗಳೂರು ನಗರವೊಂದರಲ್ಲಿ ಸುಮಾರು ಐದರಿಂದ ಆರು ಸಾವಿರ ಹಳ್ಳಿಗಳಿವೆ ಎಂದು ಊಹಿಸಬಹುದು.
1960 ಮತ್ತು 70 ದಶಕದಲ್ಲಿ ಇಪ್ಪತ್ತು ಲಕ್ಷ ಜನಸಂಖ್ಯೆ ಇದ್ದ ಬೆಂಗಳೂರು ನಗರಕ್ಕೆ ನಿರ್ಮಿಸಲಾದ ಒಳಚರಂಡಿಗಳು, ರಾಜಕಾಲುವೆಗಳು ಈಗಿನ ಒಂದು ಕೋಟಿ ಇಪ್ಪತ್ಮೂ ರು ಲಕ್ಷ ಜನಸಂಖ್ಯೆಗೆ ಉಪಯೋಗಿಸಲ್ಪಡುತ್ತಿವೆ. ಒಂದಿಷ್ಟು ರಸ್ತೆ ಅಗಲೀಕರಣ ಹೊರತು ಪಡಿಸಿದರೆ, ಅದೇ ರಸ್ತೆಗಳು ಬಳಕೆಯಾಗುತ್ತಿವೆ. ಇಂತಹ ಸ್ಥಿತಿಯಲ್ಲಿ ಎಲ್ಲಾ ಸಾರ್ವಜನಿಕ ಸ್ಥಳಗಳು, ಕೆರೆಗಳು, ಪಾರ್ಕುಗಳು ದುರ್ಬಳಕೆಯಾಗಿ ಖಾಸಾಗಿಯವರ ಸ್ವತ್ತಾದವು. ಮಳೆ ನೀರುವ ಹಿಂಗುವ ತೆರೆದ ಭೂಮಿಯು ಕಾಂಕ್ರೀಟ್ ಕಾಡುಗಳಾಗಿ ಪರಿವರ್ತನೆ ಹೊಂದಿವೆ. ಬೆಂಗಳೂರು ನಗರ ಹಾಗೂ ಸುತ್ತ ಮುತ್ತ ಇದ್ದ ನೂರಕ್ಕೂ ಹೆಚ್ಚು ಕೆರೆಗಳು ಕಾಣೆಯಾದವು. ಅಳಿದುಳಿದಿರುವ ಅಲಸೂರು, ಹೆಬ್ಬಾಳ, ಸ್ಯಾಂಕಿ ಕೆರೆ, ವರ್ತೂರು, ಬೆಳ್ಳಂದೂರು, ನಾಗವಾರ, ಕೆಂಗೇರಿ, ಅಗರ, ಮಡಿವಾಳ, ಹೆಸರಗಟ್ಟ, ಚಿನ್ನಪ್ಪನಹಳ್ಳಿ, ಲಾಲ್ ಬಾಗ್   ಹೀಗೆ ಹತ್ತಿಪ್ಪತ್ತು ಕೆರೆಗಳು ಜೀವಂತವಾಗಿದ್ದು, ಅವುಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡಿವೆ. ಈಗ ಅವೆಲ್ಲವೂ ನಗರದ ಒಳಚರಂಡಿಯ ಮೂಲಕ ಹರಿಯುವ ರಸಾಯನಿಕ ತ್ಯಾಜ್ಯವನ್ನು ಒಳಗೊಂಡ ಕೊಳಚೆ ನೀರಿನ ಶೇಖರಣೆಯ ಹೊಂಡಗಳಾಗಿವೆ.
ನಗರದಲ್ಲಿ ಬೀಳುತ್ತಿದ್ದ ಮಳೆಯ ನೀರು ಒಳಚರಂಡಿಯ ಮೂಲಕ ರಾಜಕಾಲುವೆಗೆ ಹರಿದು ಅದರ ಮೂಲಕ ನಗರದ ಹೊರ ಭಾಗದಲ್ಲಿ  ಹಳ್ಳ ಕೊಳ್ಳಗಳ ಮೂಲಕ ತಮಿಳುನಾಡಿಗೆ ಸೇರುತ್ತಿತ್ತು. ಈಗ ಬೆಂಗಳೂರು ನಗರದಲ್ಲಿ ಶೇಕಡ 70 ರಷ್ಟು ರಾಜಕಾಲುವೆಗಳು ಕಾಣೆಯಾಗಿವೆ. ಪ್ರಭಾವಿ ಬಿಲ್ಡರ್ ಗಳು ಮತ್ತು ರಾಜಕಾರಣಿಗಳು ನಿರ್ಮಿಸಿರುವ ಕಟ್ಟಡಗಳ ಕೆಳಗೆ ಹೂತು ಹೋಗಿವೆ. ಐವತ್ತು ವರ್ಷದ ಹಿಂದಿನ ಬೆಂಗಳೂರು ನಗರದ ನಕ್ಷೆಯನ್ನು ಪರಿಶೀಲಿಸಿದರೆ, ಬೆಂಗಳೂರಿನ ಕೆರೆಗಳು ಮತ್ತು ರಾಜಕಾಲುವೆಗಳು ಹೇಗೆ ನಾಶವಾಗಿವೆ ಎಂಬ ಮಾಹಿತಿ ದೊರೆಯುತ್ತದೆ. ಬೆಂಗಳೂರಿನ ವಸ್ತು ಸ್ಥಿತಿ ರೀತಿಯಲ್ಲಿ  ದಯನೀಯವಾಗಿರುವಾಗ, ಮಳೆ ನೀರು ರಸ್ತೆಯಲ್ಲಿ ನಿಲ್ಲದೆ, ತಗ್ಗು ಪ್ರದೇಶಗಳಿಗೆ ನುಗ್ಗದೆ ಬೇರೆಲ್ಲಿ ಹೋಗಲು ಸಾಧ್ಯ?
ಬೆಂಗಳೂರು ನಗರವೊಂದರಲ್ಲಿ ಪ್ರತಿ ದಿನ ಸುಮಾರು ನಾಲ್ಕು ಸಾವಿರ ಆರನೂರು ಟನ್ ಕಸ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಮನೆಗಳಿಂದ ಉತ್ಪತ್ತಿಯಾಗುತ್ತಿರುವ ಪ್ರಮಾಣ ಶೇಕಡ 40 ರಷ್ಟು ಮಾತ್ರ. ಉಳಿದ 60 ರಷ್ಟು ಭಾಗ ಕೈಗಾರಿಕೆಗಳು, ಆಸ್ಪತ್ರೆ ಮತ್ತು ಹೊಟೇಲ್ಗಳಿಂದ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಸಾಪ್ಟ್ ವೇರ್ ಕಂಪನಿಗಳ -ತ್ಯಾಜ್ಯ ಮತ್ತು ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಉಳಿಯುವ ಕಟ್ಟಡದ ಅವಶೇಷಗಳ ತ್ಯಾಜ್ಯ ಸೇರಿಲ್ಲ. ಈವರೆಗೆ ಬೆಂಗಳೂರು ನಗರದಲ್ಲಿ ದಿನವೊಂದಕ್ಕೆ ಕೇವಲ ಒಂದು ಸಾವಿರ ಟನ್ ಕಸವನ್ನು ಮಾತ್ರ ಸಂಸ್ಕರಿಸಲಾಗುತ್ತಿದೆ. ಸುಮಾರು ಇನ್ಮ್ನರರಿಂದ ಮುನ್ನೂರು ಟನ್ ಕಸವನ್ನು ನಗರದಿಂದ ಹೊರ ಪ್ರದೇಶಗಳಿಗೆ ಕೊಂಡೊಯ್ದು ಹಳ್ಳ ಕೊಳ್ಳಗಳಿಗೆ ಸುರಿಯಲಾಗುತ್ತಿದೆ. ಇನ್ನುಳಿದ ಸುಮಾರು ಮೂರು ಸಾವಿರ ಟನ್ ಕಸದಲ್ಲಿ ಅರ್ಧಭಾಗ ಕೊಳೆತು ಮಳೆ ನೀರಿನಲ್ಲಿ ಕೊಚ್ಚಿ ಹೋಗುವುದು ಇಲ್ಲವೆ, ಭೂಮಿಯಲ್ಲಿ ಕರಗುತ್ತಿದ್ದರೆ, ಕರಗಲಾದ ಮತ್ತು ಕೊಳೆಯಲಾಗದ ಪ್ಲಾಸ್ಟಿಕ್ ತ್ಯಾಜ್ಯವು ನಗರದ ಒಳಚರಂಡಿಗಳಲ್ಲಿ ಮತ್ತು ರಾಜಕಾಲುವೆಗಳಲ್ಲಿ ತುಂಬಿ ತುಳುಕುತ್ತಿದೆ. ಇಂತಹ ಸ್ಥಿತಿಯಲ್ಲಿ ಬೆಂಗಳ್ರರಿಗೆ ಮಹಾ ಮಳೆ ಎಂದು ಬಾಯಿ ಬಡಿದುಕೊಳ್ಳುವುದರಲ್ಲಿ ಯಾವ ಅರ್ಥವಿದೆ?
ಇಂದು ಬೆಂಗಳೂರು ನಗರ ಮಾತ್ರವಲ್ಲದೆ, ಜಗತ್ತಿನ ಬಹುತೇಕ ನಗರಗಳನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯೆಂದರೆ, ವಾಹನಗಳ ದಟ್ಟಣೆಯಿಂದ ಉಂಟಾದ ಸಂಚಾರದ ಅಡಚಣೆ, ಕುಡಿಯುವ ನೀರಿನ ಸಮಸ್ಯೆ, ಶುದ್ಧ ಗಾಳಿಯ ಸಮಸ್ಯೆ ಹಾಗೂ ಕಸ ವಿಲೆವಾರಿಯ ಸವಾಲು. ಬೆಂಗಳೂರು ನಗರದಲ್ಲಿ ಇಪ್ಪತ್ತೈದು ವರ್ಷಗಳ ಹಿಂದೆ ಕೇವಲ ನೂರ ಐವತ್ತು ಅಡಿ ಆಳದಲ್ಲಿ ಕೊಳವೆ ಬಾವಿಯ ಮೂಲಕ ದೊರೆಯುತ್ತಿದ್ದ ನೀರು ಈಗ ಒಂದು ಸಾವಿರದ ಎಂಟನೂರು ಅಡಿಗಳಿಂದ ಎರಡು ಸಾವಿರ ಅಡಿಗಳ ಆಳಕ್ಕೆ ಇಳಿದಿದೆ. ಮಳೆ ನೀರು ಸಂಗ್ರಹಿಸಿ, ಇಂಗು ಗುವ್ಮಡಿಗಳ ಮೂಲಕ ಭೂಮಿಗೆ ನೀರುಣಿಸುವ ಕನಿಷ್ಟ ಜ್ಞಾನವಾಗಲಿ, ವ್ಯವಧಾನವಾಗಲಿ ಯಾರಿಗೂ ಇಲ್ಲವಾಗಿದೆ. ಮಳೆ ನೀರನ್ನು ಹಿಡಿದಿಟ್ಟುಕೊಂಡರೆ  ಶೇಕಡ ನಲವತ್ತರಷ್ಟು ಬೆಂಗಳೂರು ನಗರದ ನೀರಿನ ಸಮಸ್ಯೆಗೆ ಪರಿಹಾರ ಸಿಗಬಲ್ಲದು. ಜಲಮೂಲದ ತಾಣಗಳಾದ ಕೆರೆಗಳು, ಕಲ್ಯಾಣಿಗಳು ನಾಶವಾದ ನಂತರ ಬೆಂಗಳೂರು ನಗರದಲ್ಲಿ ಟ್ಯಾಂಕರ್ ನೀರಿಗೆ ಬಹುತೇಕ ಅಪಾರ್ಟ್ಮೆಂಟ್ ನಿವಾಸಿಗಳು ಆಶ್ರಯಿಸುವಂತಾಗಿದ್ದು, ನಾಲ್ಕು ಸಾವಿರ ಲೀಟರ್ ನೀರಿನ ಟ್ಯಾಂಕರ್ ಗೆ ಎರಡರಿಂದ ನಾಲ್ಕು ಸಾವಿರ ರೂಪಾಯಿ ಪಾವತಿಸುತ್ತಿದ್ದಾರೆ. ನೆಲಕ್ಕೆ ಬಿದ್ದು ವ್ಯರ್ಥವಾಗಿ ಹರಿದು ಹೋಗುತ್ತಿರುವ ಮಳೆಯ ನೀರು ಯಾರಿಗೂ ಬೇಡವಾಗಿದೆ. ಹಾಗಾಗಿ ಮಳೆ ಮತ್ತು ಮಳೆಯ ನೀರಿನ ವರದಿ ಅಥವಾ ಸುದ್ಧಿ ಮಾಧ್ಯಮಗಳ ವ್ಯರ್ಥ ಪ್ರಲಾಪವಲ್ಲದೆ ಬೇರೇನೂ ಅಲ್ಲ.

(ಕರಾವಳಿ  ಮುಂಜಾವು ದಿನಪತ್ರಿಕೆಯ " ಜಗದಗಲ" ಅಂಕಣ ಬರಹ)