ಪ್ರಿಯ ಓದುಗರೇ ಕ್ಷಮಿಸಿ. ಗಾಂಧಿ ಮತ್ತು ಗಾಂಧಿ ಚಿಂತನೆಗಳು ಎಂಬುವುದು ನನ್ನ
ಪಾಲಿಗೆ ವ್ಯಸನ ಮತ್ತು ತೀರದ
ದಾಹ. ಏಕೆಂದರೆ, ಆ ಮಹಾತ್ಮ ನಿಧನವಾಗಿ ಎಪ್ಪತ್ತು ವರ್ಷ
ಕಳೆದು ಹೋದರೂ ಸಹ
ಇಂದಿಗೂ ಸಹ
ಪತ್ರಿ ದಿನ
ಮತ್ತು ಪ್ರತಿಕ್ಷಣ ಹಲವು
ರೂಪಗಳಲ್ಲಿ ಈ
ಜಗತ್ತನ್ನು ಕಾಡುತ್ತಲೇ ಇದ್ದಾರೆ.
ಇಂತಹ ಸನ್ನಿವೇಶದಲ್ಲಿ ನನ್ನಂತಹ ಪಾಮರನನ್ನು ಕಾಡುವುದರಲ್ಲಿ ಯಾವ
ವಿಶೇಷವೂ ಇಲ್ಲ.
ನಾನು ಕಳೆದರೆಡು ವರ್ಷಗಳಿಂದ ಆಗಾಗ್ಗೆ ದಾಖಲಿತ್ತಾ ಬಂದಿರುವ “ ಗಾಂಧಿಗಿರಿಯ ಫಸಲುಗಳು” ಎಂಬ ಕೃತಿಗಾಗಿ ಕಳೆದ
ವಾರದಲ್ಲಿ ಎರಡು
ಹೊಸ ಲೇಖನಗಳನ್ನು ಸೇರ್ಪಡೆ ಮಾಡಿದೆ. ಅವುಗಳಲ್ಲಿ ಜಮ್ನಾಲಾಲ್ ಬಜಾಜ್ ಮತ್ತು ಪಶ್ಚಿಮ ಬಂಗಾಳದ ನಿರ್ಮಲ್ ಕುಮಾರ್ ಬೋಸ್
ಎಂಬ ಗಾಂಧಿವಾದಿಗಳ ಕುರಿತು ಬರೆಯುವಾಗ ಸ್ವತಃ ನಾನೇ
ಆಶ್ಚರ್ಯಗೊಂಡಿದ್ದೀನಿ. ಒಬ್ಬ ಮನುಷ್ಯ ತನ್ನ
ನಡೆ, ನುಡಿ ಮತ್ತು ವ್ತಕ್ತಿತ್ವದ ಚಾರಿತ್ರ್ಯದ ಮೂಲಕ
ಇನ್ನೊಬ್ಬರ ಮೇಲೆ ಹೀಗೂ ಪರಿಣಾಮ ಬೀರಬಹುದೆ? ಎಂದು ಆಶ್ಚರ್ಯವಾಗುತ್ತದೆ.
ಗಾಂಧೀಜಿ ಬದುಕಿದ್ದಾಗ ಮಾತ್ರವಲ್ಲದೆ
ನಿಧನಾನಂತರವೂ ಪ್ರಶ್ನಾರ್ಹ ವ್ಯಕ್ತಿಯಾಗಿ ಉಳಿದು ಹೋದರು.. ಅವರನ್ನು ಹಿಂದೂ ರಾಷ್ಟ್ರವಾದಿಗಳು ನಂಬಲಿಲ್ಲ. ಮುಸ್ಲಿಂರಿಗೆ ಅವರ ಜಾತ್ಯಾತೀತ ಹಾಗೂ ಧರ್ಮಾತೀತ ಮನೋಭಾವದ ಬಗ್ಗೆ ಸಂಶಯಗಳಿದ್ದವು.
ಸಮಾಜವಾದಿಗಳಿಗೆ ಮತ್ತು ಎಡಪಂಥೀಯರಿಗೆ ಗಾಂಧೀಜಿಯವರ ಚರಕದಿಂದ ಹಿಡಿದು ಅಹಿಂಸೆಯ ಪರಿಕಲ್ಪನೆಗಳ ಕುರಿತು ನಂಬಿಕೆ ಇರಲಿಲ್ಲ. ಇನ್ನೂ ಭಾರತದ ದಲಿತರಿಗೆ ಗಾಂಧಿಯನ್ನು ಪೂನಾ ಒಪ್ಪಂಧದ ಘಟನೆಯನ್ನು ಆಧಾರವಾಗಿಟ್ಟುಕೊಂಡು ದ್ವೇಷ ಮಾಡುವುದೇ ಅಂಬೇಡ್ಕರ್ ವಾದ ಎಂಬ ನಂಬಿಕೆ ಬಲವಾಗಿ ಬೆಳೆಯತೊಡಗಿತು. ದುರಂತವೆಂದರೆ, ಗಾಂಧೀಜಿಯವರನ್ನು ಯಾರೊಬ್ಬರೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. ಅವರು ತಮ್ಮ ಬದುಕನ್ನು ಸತ್ಯದೊಂದಿಗೆ ನನ್ನ
ಪ್ರಯೋಗ ಏಕೆ ಕರೆದರು? ಎಂದು ಯಾರೊಬ್ಬರೂ ಪ್ರಶ್ನಿಸಿಕೊಳ್ಳಲಿಲ್ಲ.
ಗಾಂಧೀಜಿಯವರು ಎಲ್ಲಿಯೂ ತಮ್ಮ ಬದುಕನ್ನು ಸಾಧನೆ ಎಂದು
ಕರೆದುಕೊಂಡಿಲ್ಲ. ಎಲ್ಲವನ್ನೂ ಪ್ರಯೋಗ ಎಂದು ಕರೆದುಕೊಂಡಿದ್ದಾರೆ. ಈ ಕಾರಣಕ್ಕಾಗಿ ಅವರು ತಪ್ಪು ಹೆಜ್ಜೆ
ಇಟ್ಟಾಗ ತಿದ್ದುಕೊಂಡಿದ್ದಾರೆ. ಜೊತೆಗೆ ಭಾರತದ ಸ್ವಾತಂತ್ರ್ಯ ಹೋರಾಟ ದಿಕ್ಕು ತಪ್ಪಿದಾಗ ಚಳುವಳಿಯನ್ನು
ಸಹ ಹಲವಾರು ಬಾರಿ ಹಿಂತೆಗೆದುಕೊಂಡು ಸ್ಥಗಿತಗೊಳಿಸಿದ್ದಾರೆ.
ಈ ನಿಟ್ಟಿನಲ್ಲಿ ಗಾಂಧೀಜಿಯವರನ್ನು ಪ್ರತಿ ಕ್ಷಣದಲ್ಲಿ ಅಗ್ನಿ ಪರೀಕ್ಷೆಗೆ
ಒಳಪಡಿಸಿ, ಅವರೊಳಗಿನ ಪಾರದರ್ಶಕ ವ್ಯಕ್ತಿತ್ವನ್ನು ಮತ್ತು ಪ್ರಾಮಾಣಿಕತೆ ಮತ್ತು ಬದ್ಧತೆಯ ಜೊತೆಗೆ
ಅವರ ದೌರ್ಬಲ್ಯವನ್ನು ಎತ್ತಿ ಹಿಡಿದವರಲ್ಲಿ ಪಶ್ವಿಮ ಬಂಗಾಳದ ಗಾಂಧಿವಾದಿ, ವಿದ್ವಾಂಸ ಮತ್ತು ಭಾರತದ
ಪ್ರಖರ ಸಮಾಜ ಶಾಸ್ತ್ರಜ್ಙ ನಿರ್ಮಲ್ ಕುಮಾರ್ ಬೋಸ್ ಪ್ರಮುಖರಾಗಿದ್ದಾರೆ. ಇವರ ಕುರಿತು ನನ್ನ ಕೃತಿಯಲ್ಲಿ ವಿವರವಾಗಿ ದಾಖಲಿಸುವುದರಿಂದ ಇಲ್ಲಿ ಹೆಚ್ಚೇನು ಹೇಳಲಾರೆ.
ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎರಡು ಬಗೆಯ ಶಿಷ್ಯರಿದ್ದರು. ಮೊದಲನೆಯವರು ಗಾಂಧಿಯನ್ನು ಒಪ್ಪಿಕೊಂಡು, ಅವರ ಆದೇಶವನ್ನು
ಪಾಲಿಸುವ ಅನುಯಾಯಿಗಳು. ಎರಡನೆಯವರೆಂದರೆ, ಗಾಂಧಿ ಚಿಂತನೆಗಳು ಅಥವಾ ಆಶಯಗಳು ಪ್ರಾಯೋಗಿಕವಾಗಿ ಅಳವಡಿಸಲು ಸಾಧ್ಯವೆ? ಎಂದು
ಪ್ರಶ್ನಿಸಿಕೊಂಡು ಅವುಗಳನ್ನು ವಾಸ್ತವ ರೂಪದಲ್ಲಿ ನೋಡುತ್ತಾ ಅವುಗಳ ಮಹತ್ವವನ್ನು ಜಗತ್ತಿಗೆ ಸಾರಿದದವರು.
ಇವರಲ್ಲಿ ಪ್ರಮುಖರೆಂದರೆ, ಜಿ.ಸಿ.ಕುಮಾರಪ್ಪ ಮತ್ತು ನಿರ್ಮಲ್ ಕುಮಾರ್ ಬೋಸ್. ಈ ಇಬ್ಬರನ್ನು ಭಾರತದಲ್ಲಿ ಗಾಂಧಿವಾದಿಗಳೆಂದು ಪ್ರಥಮ ಬಾರಿಗೆ ಗುರುತಿಸಿಕೊಂಡ
ತಜ್ಞ ವಿದ್ವಾಂಸರು ಮತ್ತು ಬುದ್ದಿ ಜೀವಿಗಳು ಎಂದು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರು
2012 ರಲ್ಲಿ ಹಿಂದೂ ಪತ್ರಿಕೆಯ ತಮ್ಮ ಅಂಕಣ ವೊಂದರಲ್ಲಿ ದಾಖಲಿಸಿದ್ದಾರೆ. ಇದಕ್ಕೆ ಪೂರಕವಾಗಿ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಪದವಿ ಓದುತ್ತಿದ್ದಾಗ ಉಪ್ಪಿನ ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ ಚಳುವಳಿಗೆ ದುಮುಕಿದ
ನಿರ್ಮಲ್ ಕುಮಾರ್ 1935 ರಲ್ಲಿ ಗಾಂಧೀಜಿಯವರ ಜೊತೆ ಅವರ ಚರಕದ ಪರಿಕಲ್ಪನೆ, ಭಾರತದ ಬಡತನ ಹಸಿವು ಮತ್ತು
ಅಹಿಂಸೆ ಕುರಿತು ನಡೆಸಿದ ದೀರ್ಘವಾದ ಸಂದರ್ಶನ ದೆಹಲಿಯ
ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದು
ಗಾಂಧೀಜಿಯವರನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇದಷ್ಟು ಮಾತ್ರವಲ್ಲದೆ ಅವರು ಗಾಂಧೀಜಿ
ಮತ್ತು ಅವರ ಚಿಂತನೆಗಳ ಕುರಿತು ಬರೆದ ಮೂರು ಕೃತಿಗಳು
ನಮಗೆ ಗಾಂಧೀಜಿಯವರ ವ್ಯಕ್ತಿತ್ವದ ಎಲ್ಲಾ ಮಗ್ಗುಲುಗಳನ್ನು ಪರಿಚಯಿಸುತ್ತವೆ. 1946-47 ರ ಅವಧಿಯಲ್ಲಿ
ಗಾಂಧೀಜಿಯವರೆಗೆ ಆಪ್ತ ಕಾರ್ಯದರ್ಶಿಯಾಗಿ ಹಾಗೂ ಪೂರ್ವ ಬಂಗಾಳದ ಹಳ್ಳಿಗಳು ಕೋಮುಜ್ವಾಲೆಯಲ್ಲಿ ಬೇಯುತ್ತಿದ್ದಾಗ ಅವರಿಗೆ ನೌಕಾಲಿಯಲ್ಲಿ ಭಾಷಾಂತಕಾರರಾಗಿ ಕೆಲಸ ಮಾಡಿದ ಬೋಸ್
ಅವರು ಗಾಂಧೀಜಿಯವರು ತಮ್ಮ ಮೊಮ್ಮಕ್ಕಳ ವಯಸ್ಸಿನ ಹೆಣ್ಣು
ಮಕ್ಕಳ ಜೊತೆ ಮಲಗಿ ಬ್ರಹ್ಮ ಚರ್ಯ ವನ್ನು ಪರೀಕ್ಷಿಕೊಂಡಾಗ ಅದನ್ನು ಪ್ರತಿಭಟಿಸಿ ಹೊರಬಂದರು. ಅಷ್ಟು ಮಾತ್ರವಲ್ಲದೆ ತಮ್ಮ ಗುರುವನ್ನು ಪ್ರಶ್ನೆಗಳ
ಮೂಲಕ ನೇಣುಗಂಬಕ್ಕೆ ಏರಿಸಿದರು. ಗುರುಶಿಷ್ಯರ ಪತ್ರ ಸಂವಾದವನ್ನು ನಾವು ನಿರ್ಮಲ್ ಕುಮಾರು 1953 ರಲ್ಲಿ
ಬರೆದು ಪ್ರಕಟಿಸಿದ :” ಮೈ ಡೇಸ್ ವಿತ್ ಗಾಂಧಿ” ಎಂಬ
ಕೃತಿಯನ್ನುಓದಿ ತಿಳಿಯಬೇಕು. ಗಾಂಧೀಜಿ ಕುರಿತಂತೆ ಬಂದಿರುವ ಶ್ರೇಷ್ಠ ಕೃತಿಗಳಲ್ಲಿ ಇದೂ ಕೂಡ ಒಂದಾಗಿದೆ.
ಕೊನೆಯ ಮಾತು. 1947 ರಲ್ಲಿ
ಗಾಂಧೀಜಿಯವರಿಂದ ದೂರವಾಗಿದ್ದ ನಿರ್ಮಲ್ ಕುಮಾರ್ ಬೋಸ್ 1948 ರ ಜನವರಿಯಲ್ಲಿ ಕೊಲ್ಕತ್ತ ವಿ.ವಿ.ಯಲ್ಲಿ
ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಗಾಂಧಿ ಹತ್ಯೆಯಾದ
ವಿಷಯ ತಿಳಿದ ಬಳಿಕ ವಿ.ವಿ.ಯಿಂದ ತಮ್ಮ ನಿವಾಸಕ್ಕೆ
ಸೈಕಲ್ ತುಳಿಯುತ್ತಾ ಈ ಸುದ್ಧಿ ಸುಳ್ಳು ಸುದ್ದಿಯಾಗಲಿ ಎಂದು ದಾರಿಯುದ್ದಕ್ಕೂ ಹಂಬಲಿಸಿದರು. ಮನೆಗೆ
ಬಂದು ರೇಡಿಯೊದಲ್ಲಿ ಸುದ್ದಿ ಪ್ರಸಾರವಾಗುತ್ತಿರುವುದನ್ನು ಕೇಳಿ ಕುಸಿದು ಬಿದ್ದರು. ಆನಂತರ ಚೇತರಿಸಿಕೊಂಡ
ಬೋಸರು ತಮ್ಮ ಜೀನನದುದ್ದಕ್ಕೂ ಅಂದರೆ 1972 ರ ವರೆಗೆ ಗಾಂಧಿ ಚಿಂತನೆಗಳ ವಾರಸು ದಾರರಾಗಿ ಬದುಕುತ್ತಾ
ಹಲವು ಕೃತಿಗಳನ್ನು ರಚಿಸಿದರು.