ಇತ್ತೀಚಿನ
ವರ್ಷಗಳಲ್ಲಿ ತಮಿಳು ಭಾಷೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬರೆಯುತ್ತಿರುವ ಲೇಖಕ ಪೆರುಮಾಳ್ ಮುರುಗನ್
ತಮ್ಮ ನೆಲದ ಸೊಗಡಿನ ಭಾಷೆಯ
ಮೂಲಕ ಭಾರತ ಮಾತ್ರವಲ್ಲದೆ, ಅಂತರಾಷ್ಟ್ರೀಯ
ಮಟ್ಟದಲ್ಲಿ ಭಾರತದ ಪ್ರಮುಖ ಕಾದಂಬರಿಕಾರ ಎಂದು ಗುರುತಿಸಿಕೊಂಡಿದ್ದಾರೆ. ನಮ್ಮ ಕನ್ನಡದ
ದೇವನೂರು ಮಹಾದೇವ ಅವರ ಮಾದರಿಯಲ್ಲಿ ತಾನು
ಹುಟ್ಟಿ ಬೆಳೆದ ನಾಮಕ್ಕಲ್ ಜಿಲ್ಲೆಯ ಕೊಂಗನಾಡಿನ ಭಾಷೆ ಎಂದು ಕರೆಸಿಕೊಳ್ಳುವ
ಅಲ್ಲಿನ ಉಪ ಭಾಷೆಯನ್ನು
ತಮ್ಮ ಕೃತಿಗಳಲ್ಲಿ ಬಳಸುವುದು ಪೆರುಮಾಳ್ ಮರುಗನ್ ಅವರ ಬರೆವಣಿಗೆಯ
ವಿಶೇಷವಾಗಿದೆ. ಅವರು ಏನೇ ಬರೆಯಲಿ,
ಅದು ಕಾವ್ಯವಿರಲಿ, ಕಥೆಯಾಗಿರಲಿ ಅಥವಾ ಕಾದಂಬರಿಯಾಗಿರಲಿ ಅವರ
ಕಥನದ ವಸ್ತುಗಳು ಅವರು ಹುಟ್ಟಿ ಬೆಳೆದ
ನೆಲದ ಕಥನಗಳಾಗಿರುತ್ತವೆ.
ಇದು
ನಮಗೆ ಶಾಶ್ವತವೇ? ನಾವು ಚಿಂತಾಕ್ರಾಂತರಾಗಿದ್ದೀವಿ
ಸುಟ್ಟು
ಬೆಂದುಹೋದ ಭೂಮಿ
ಮಾತ್ರ ನಮಗೆ ಸಿಗುವುದೇ?
ನಾವು
ಬಡವರು, ಬೇಡಿಕೊಳ್ಳುತ್ತೇವೆ ಮತ್ತೆ ಮತ್ತೆ ಬೇಡಿಕೊಳ್ಳುತ್ತೇವೆ
ಇದು
ನಮ್ಮ ಹಣೆಬರಹವೇ?
ಮಣ್ಣಿನ
ವಾಸನೆಯೊಂದಿಗೆ ಮಳೆ ಬರುವುದು ಯಾವಾಗ
?
ಇಂತಹ ಸಾಲುಗಳನ್ನು ಪೆರುಮಾಳ್
ಮುರುಗನ್ ಮಾತ್ರ ಬರೆಯಬಲ್ಲರು. ತಮಿಳುನಾಡಿನ ನಾಮಕ್ಕಲ್
ಜಿಲ್ಲೆಯ ಕೂಟಪಲ್ಲಿ ಎಂಬ ಹಳ್ಳಿಯ ಬಡ
ರೈತ ಕುಟುಂಬದಲ್ಲಿ ಜನಿಸಿದ ಪೆರುಮಾಳ್ ಅವರ ಬರಹಗಳು ಗ್ರಾಮೀಣ
ಜಗತ್ತಿನ ಭಾಷೆಯ ಸೊಗಡಿನಿಂದ ಕೂಡಿವೆ. ಅವರ ಬಹುತೇಕ ಕವಿತೆಗಳು ಅವರ
ಗದ್ಯ ಬರವಣಿಗೆಗಿಂತ ಭಿನ್ನವಾಗಿ, ತೀವ್ರವಾಗಿ ವೈಯಕ್ತಿಕ ನೆಲೆಯಲ್ಲಿ ಕಟುವಾಗಿರುತ್ತವೆ.
ಜೊತೆಗೆ ಕೃಷಿಕ
ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವ ಚಿಂತನೆಗಳಿಂದ ಕೂಡಿರುತ್ತವೆ.
‘ಒಣಭೂಮಿಗಳು ಒಣಗಿವೆ’ ಎಂಬ ಒಂದು ಕವಿತೆಯಲ್ಲಿ
‘ಭೂಮಿ ಬಂಜರು ಬಂಡೆಗಳಂತೆ
ಮಾರ್ಪಟ್ಟಿವೆ
ಬಿತ್ತಿದ
ಬೀಜಗಳು ಮೊಳಕೆಯೊಡೆಯಲಿಲ್ಲ
ಹೂವು,
ಅರಳಲಿಲ್ಲ
ಮಳೆಯಿಲ್ಲದೆ,
ನೀರಿಲ್ಲದೆ,
ಈ
ಬರದಲ್ಲಿ ನಾವು ನಾಶವಾಗುತ್ತೇವೆ. "
ಈ
ಕಾರಣದಿಂದಾಗಿ ಪೆರುಮಾಳ್ ಮುರುಗನ್ ಅವರ ಬರಹಗಳನ್ನು ವಿಶ್ಲೇಷಿಸಿರುವ
ಖ್ಯಾತ ಕರ್ನಾಟಕ ಸಂಗೀತಗಾರರಾದ ಟಿ.ಎಂ. ಕೃಷ್ಣ
ಅವರು ಹೇಳಿರುವ ‘’ ಗ್ರಾಮೀಣ
ಪ್ರದೇಶದಲ್ಲಿ ಬೇರೂರಿದ ಹಾಗೂ
ಭಾಷೆಯ ಸರಳತೆಯಿಂದ ಮುರುಗನ್ ವರ ಕಥೆ, ಕಾದಂಬರಿಗಳು
ಓದುಗರ ಮನಸೆಳೆಯುತ್ತವೆ. ಕಚ್ಚಾ,
ಮಣ್ಣಿನ ನೈಸರ್ಗಿಕ ವಾಸ್ತವದಿಂದ ಕೂಡಿದ ಅವರ ಕಥೆಗಳನ್ನು ಸ್ಲೋ
ಮೋಷನ್ ನಲ್ಲಿ ಸಿನಿಮಾ ನೋಡಿದಂತೆ. ನಾವು ಸ್ಥಳದ ಪ್ರತಿಯೊಂದು
ಮೂಲೆ , ಮೂಲೆಯನ್ನು ಗಮನಿಸಬಹುದು.
ಮುರುಗನ್ ಯಾವಾಗಲೂ ವಾಸ್ತವವನ್ನು
ಸ್ಪಷ್ಟವಾಗಿ ಹೇಳುವುದಿಲ್ಲ. ಆದರೆ, ಅವರು ದೃಶ್ಯವನ್ನು ಪ್ರಸ್ತುತಪಡಿಸುತ್ತಾರೆ
ಮತ್ತು ಓದುಗರಾದ ನಮ್ಮನ್ನು ನಾವು ಊಹಿಸಬಹುದಾದ ಸ್ಥಳದಲ್ಲಿ
ಇರಿಸುತ್ತಾರೆ.’’ ಎಂಬ ಮಾತುಗಳು ಪೆರುಮಾಳ್
ಪ್ರತಿಭೆಗೆ ಸಾಕ್ಷಿಯಾಗಿವೆ.
ಮುರುಗನ್
ಅವರ ತಂದೆ ಓರ್ವ ಸಾಮಾನ್ಯ
ರೈತರಾಗಿದ್ದರು. ಕೃಷಿಯಲ್ಲಿ
ಕುಟುಂಬ ನಿರ್ವಹಣೆ ಕಷ್ಟವಾದಾಗ ತಮಿಳುನಾಡಿನ
ತಿರುಚೆಂಗೋಡ್ನಲ್ಲಿರುವ ಸಿನಿಮಾ ಥಿಯೇಟರ್ನಲ್ಲಿ ಸೋಡಾ ಅಂಗಡಿ ಮತ್ತು
ಸೈಕಲ್ ಸ್ಟ್ಯಾಂಡ್ ನಡೆಸುತ್ತಿದ್ದರು. ಇಂತಹ ಬಡ ಕುಟುಂಬದಲ್ಲಿ
ಜನಿಸಿದ ಪೆರುಮಾಳ್ ಮುರುಗನ್ ಶಿಕ್ಷಣದುದ್ದಕ್ಕೂ ತಮಿಳು ಸಾಹಿತ್ಯವನ್ನು ಅಧ್ಯಯನ ಮಾಡಿದವರು. ಅವರು ಸ್ನಾತಕೋತ್ತರ ಪದವಿಯಲ್ಲಿ
ತಮಿಳು ಪ್ರಾಚೀನ ಕಾವ್ಯವನ್ನು ಆಯ್ಕೆ ಮಾಡಿಕೊಂಡ ಪರಿಣಾಮವಾಗಿ ದ್ರಾವಿಡ ಭಾಷಾ ವಿಜ್ಞಾನದ ಬಗ್ಗೆ
ಮತ್ತು ತಮಿಳ್ ಸಂಗಂ ಯುಗದ ಸಾಹಿತ್ಯದ
ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಮತ್ತು ಬರೆಯಬಲ್ಲ ಲೇಖಕರಾಗಿ ಹೊರಹೊಮ್ಮಿದ್ದಾರೆ. ತಮಿಳುನಾಡಿನ ಸರ್ಕಾರಿ ಕಾಲೇಜಿನಲ್ಲಿ ತಮಿಳು ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾ, ಕಥೆ,
ಕಾವ್ಯ ರಚನೆಯಲ್ಲಿ ತೊಡಗಿದ್ದ ಅವರು ಹತ್ತು ವರ್ಷಗಳ
ಹಿಂದೆ ತಿರುಂಚಗೋಡ್ ಪ್ರದೇಶದಲ್ಲಿ ಜಾರಿಯಲ್ಲಿದ್ದ ಬಂಜೆಯರು ಮಕ್ಕಳು ಪಡೆಯುವ ಪ್ರಾಚೀನ ಸಂಸ್ಕೃತಿಯ ಬಗ್ಗೆ ಕಾದಂಬರಿ ಬರೆಯುವುದರ ಮೂಲಕ ಓದುಗರ ಮನ
ಸೆಳೆದರು ಇಷ್ಟು ಮಾತ್ರವಲ್ಲದೆ ವಿವಾದಕ್ಕೆ ಒಳಗಾದರು.
ಮಾದೂರ್
ಬಾಗನ್ ಅಂದರೆ, ದೇಹದ ಒಂದು ಭಾಗ
ಹೆಣ್ಣು ಎನ್ನಬಹುದಾದ ಈ ಕಾದಂಬರಿಯಲ್ಲಿ ಮದುವೆಯಾಗಿ
ಮಕ್ಕಳಾಗದ ಸ್ತ್ರೀಯರು ವರ್ಷಕ್ಕೊಮ್ಮೆ ನಡೆಯುವ ಸ್ಥಳಿಯ ಜಾತ್ರೆಯಲ್ಲಿ ಇಷ್ಟವಾದ ಪರಪುರುಷನನ್ನು ಕೂಡಿ ಮಕ್ಕಳನ್ನು ಪಡೆಯಬಹುದಾದ
ಪದ್ಧತಿಯನ್ನು ಕುರಿತಾದ ವಸ್ತುವನ್ನು ಈ ಕಾದಂಬರಿ ಒಳಗೊಂಡಿದೆ.
ಇದು ತಮಿಳುನಾಡು ಮಾತ್ರವಲ್ಲದೆ, ಭಾರತದ ಎಲ್ಲಾ ಭಾಗಗಳಲ್ಲಿ ಎಂಬತ್ತರ ದಶಕದವರೆಗೆ ಅಸ್ತಿತ್ವದಲ್ಲಿತ್ತು. ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ
ಚಂದ್ರಗುತ್ತಿಯ ಜಾತ್ರೆ
ಹಾಗೂ ಬೆಳಗಾವಿ ಜಿಲ್ಲೆ ಸವದತ್ತಿ
ಯಲ್ಲಮ್ಮನ ಗುಡ್ಡದಲ್ಲಿ ವರ್ಷಕ್ಕೊಮ್ಮೆ ನಡೆಯುವ ಭರತ ಹುಣ್ಣಿಮೆಯ ಜಾತ್ರೆಯಲ್ಲಿ
ಈ ರೀತಿಯಲ್ಲಿ ಪರುಷ ಮತ್ತು ಸ್ತ್ರೀಯರು
ಕೂಡುವ ಪದ್ಧತಿಯಿತ್ತು. ಇದೇ
ಪದ್ಧತಿಯು ಪೂರ್ವ ಭಾಗದ ಉತ್ತರ ಪ್ರದೇಶದಲ್ಲಿ
ಚಾಲ್ತಿಯಲ್ಲಿ ಇದ್ದ ಸಂಗತಿಯನ್ನು ಬಿ.ಬಿ.ಸಿ. ಛಾನಲ್
ನ ಹಿರಿಯ ವರದಿಗಾರರಾಗಿದ್ದ ಮಾರ್ಕ್ ಟುಲಿ ಅವರು ತಮ್ಮ ‘’ಹಾರ್ಟ್
ಆಫ್ ಇಂಡಿಯಾ’’ ಕೃತಿಯ ಪ್ರಬಂಧವೊಂದರಲ್ಲಿ ಸುಧೀರ್ಘವಾಗಿ ದಾಖಲಿಸಿದ್ದಾರೆ. ಉತ್ತರ ಭಾರತದಲ್ಲಿ ದಕ್ಷಿಣ ಭಾರತಕ್ಕಿಂತ ಭಿನ್ನವಾಗಿ ಮಕ್ಕಳಿಲ್ಲದ ಮಹಿಳೆಯರನ್ನು ಊರಿನ ಹಿರಿಯ ಮಹಿಳೆಯರು
ದೇವಿ ಪೂಜೆಯ ಹೆಸರಿನಲ್ಲಿ ಅವರನ್ನು ಗಂಗಾ ನದಿಯ ತೀರಕ್ಕೆ
ಕರೆದೊಯ್ದು ಅವರಿಗೆ ಅಫೀಮು ಬೆರೆಸಿದ ರಾಮರಸವನ್ನು ಕುಡಿಸಿ, ಸಾಧುಗಳ ಜೊತೆಗ ಮಲಗಿಸಿ, ಬೆಳಿಗ್ಗೆ ಗಂಗಾನದಿಯಲ್ಲಿ ಸ್ನಾನ ಮಾಡಿಸಿಕೊಂಡು ಕರೆತರುತ್ತಿದ್ದ ಸಂಗತಿಯನ್ನು ವಿವರವಾಗಿ ದಾಖಲಿಸಿದ್ದಾರೆ.
ಪೆರುಮಾಳ್ ಮುರುಗನ್ ಇದನ್ನು ಒಂದು ಸಾಂಪ್ರದಾಯಿಕ ಆಚರಣೆ ಎಂದು ಹೇಳಿಕೊಂಡ ಕಾದಂಬರಿಯ ಈ ಚಿತ್ರಣವು 2015 ರಲ್ಲಿ ಓದುಗರ ಒಂದು ವರ್ಗವನ್ನು ಕೆರಳಿಸಿತು. ಅವರು ಬೇಷರತ್ತಾದ ಕ್ಷಮೆಯಾಚನೆಗೆ ಸಹಿ ಹಾಕಲು ಮತ್ತು ಅವರ ಪುಸ್ತಕದ ಮಾರಾಟವಾಗದ ಪ್ರತಿಗಳನ್ನು ಹಿಂತೆಗೆದುಕೊಳ್ಳುವಂತೆ ತಮಿಳುನಾಡಿನಲ್ಲಿ ಸಂಘಪರಿವಾರದ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ಸಂದರ್ಭದಲ್ಲಿ ಮನ ನೊಂದ ಮುರುಗನ್ ಅವರು ‘’ಲೇಖಕ ಪೆರುಮಾಳ್ ಮುರುಗನ್ ನಿಧನ ಹೊಂದಿದನು’’ ಎಂದು ಘೋಷಿಸಿ ಮೌನಕ್ಕೆ ಶರಣಾದರು. ಆದರೆ, 2016 ರಲ್ಲಿ ಚೆನ್ನೈ ನಗರದ ಮದ್ರಾಸ್ ಹೈಕೋರ್ಟ್ ನೀಡಿದ ತೀರ್ಪು ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಿತು. ಹೈಕೋರ್ಟಿನ ನ್ಯಾಯಾಧೀಶರು ತೀರ್ಪು ನೀಡುವ ಸಂದರ್ಭದಲ್ಲಿ ‘’ಮುರುಗನ್ ಅವರನ್ನು ಇಷ್ಟಪಡದವರಿಗೆ ಮತ್ತು ಅವರ ಪುಸ್ತಕವನ್ನು ನಿಯಂತ್ರಿಸಲು ಬಯಸಿದವರಿಗೆ ಒಂದು ಸಲಹೆಯನ್ನು ನೀಡಿದರು: “ಎಲ್ಲಾ ಬರಹಗಳು, ಒಂದು ವಿಭಾಗಕ್ಕೆ ರುಚಿಸಲಿಲ್ಲ ಎನಿಸಿದರೆ, ಸಮಾಜವನ್ನು ಅಶ್ಲೀಲ, ಅಸಭ್ಯ, ವಿಕೃತ, ಅವಿವೇಕ ಮತ್ತು ಅನೈತಿಕ ಎಂದು ಹಣೆಪಟ್ಟಿ ಕಟ್ಟುವಂತಿಲ್ಲ. . ನಿಮಗೆ ಪುಸ್ತಕ ಇಷ್ಟವಾಗದಿದ್ದರೆ ಪಕ್ಕಕ್ಕಿಟ್ಟು ಮೌನವಾಗಿರಿ ” ಎಂದು ಛಾಟಿಏಟು ಬೀಸಿದರು. ನ್ಯಾಯಾಧೀಶರ ಈ ಆಜ್ಞೆಯು ಮುರುಗನ್ ಅವರ ಬರೆವಣಿಗೆಗೆ ಹೊಸ ಛಾಪನ್ನು ಮೂಡಿಸಿತು.
ಈ
ಸಂದರ್ಭದಲ್ಲಿ ‘’ ಹೇಡಿಗಳ ಹಾಡುಗಳು ಮತ್ತು ನಿರ್ಗಮನದ ಕವಿತೆಗಳು’’ ಎಂಬ ಹೆಸರಿನಲ್ಲಿ ಕಾವ್ಯ
ಸಂಕಲನವನ್ನು ಹೊರತಂದ ಪೆರುಮಾಳ್ ಮುರುಗನ್, ಕಥೆ ಮತ್ತು ಕಾದಂಬರಿಯ
ರಚನೆಯತ್ತ ತೀವ್ರವಾಗಿ ತೊಡಗಿಸಿಕೊಂಡರು. ಅವರು "ಪುಣ್ಣಾಚಿ"
ಎಂಬ ಹೆಸರಿನ ಕಾದಂಬರಿಗೆ ಮುರುಗನ್ ಅವರು ಪ್ರಸ್ತಾವನೆಯನ್ನು ಬರೆಯುತ್ತಾ, "ನಾನು
ಮನುಷ್ಯರ ಬಗ್ಗೆ ಬರೆಯಲು ಹೆದರುತ್ತೇನೆ; ದೇವರುಗಳ ಬಗ್ಗೆ ಬರೆಯಲು ಇನ್ನಷ್ಟು ಭಯಪಡುತ್ತೇನೆ. ಆದ್ದರಿಂದ ಈಗ ನಾನು ಪ್ರಾಣಿಗಳ
ಬಗ್ಗೆ ಬರೆಯುತ್ತೇನೆ. ಕೇವಲ ಐದು ಜಾತಿಯ
ಪ್ರಾಣಿಗಳು ನನಗೆ ಆಳವಾಗಿ ಪರಿಚಿತವಾಗಿವೆ.
ಅವುಗಳಲ್ಲಿ, ನಾಯಿಗಳು ಮತ್ತು ಬೆಕ್ಕುಗಳು ಕಾವ್ಯಕ್ಕೆ ಮೀಸಲಾದವು. ಹಸು ಅಥವಾ ಹಂದಿಗಳ
ಬಗ್ಗೆ ಬರೆಯುವುದನ್ನು ಈ ದೇಶದಲ್ಲಿ ನಿಷೇಧಿಸಲಾಗಿದೆ.
ಈ ಕಾರಣದಿಂದಾಗಿ ಆಡು
ಮತ್ತು ಕುರಿಗಳು ಮಾತ್ರ ಉಳಿದಿವೆ. ಆಡುಗಳು ಸಮಸ್ಯೆಗಳಿಂದ ಮುಕ್ತವಾಗಿವೆ ಜೊತೆಗೆ ಅವು ನಿರುಪದ್ರವ ಹಾಗೂ
ಹೆಚ್ಚು ಶಕ್ತಿಯುತವಾಗಿವೆ. ಕಥೆಗೆ ನಿರೂಪಣೆಯ ವೇಗ ಬೇಕು. ಆದ್ದರಿಂದ,
ನಾನು ಆಡುಗಳ ಬಗ್ಗೆ ಬರೆಯಲು ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದೇನೆ.ಎಂದು ಹೇಳಿಕೊಂಡಿದ್ದಾರೆ.
ಕೃಷಿ
ಕುಟುಂಬದಿಂದ ಪೆರುಮಾಳ್ ಮುರುಗನ್, ತಮ್ಮ ಆರನೇ ವಯಸ್ಸಿನಲ್ಲಿ
ಮನೆಯಲ್ಲಿದ್ದ ಕರುಪ್ಪುತಾಯಿ ಎಂಬ ಹೆಸರಿನ ಕಪ್ಪು
ಬಣ್ಣದ ಹೆಣ್ಣು ಮೇಕೆಯ ಕಥನವನ್ನು ಪೂಣ್ಣಾಚಿ ಹೆಸರಿನಲ್ಲಿ ಕಾದಂಬರಿಯನ್ನಾಗಿ ಬರೆದಿದ್ದಾರೆ. ಮೇಕೆ ಮತ್ತು ಕುರಿಗಳನ್ನು
ಮೇಯಿಸಿದ ಅನುಭವ ಇರುವ ಲೇಖಕರು ಮಾತ್ರ
ಇಂತಹ ಕಥನಗಳನ್ನು ಬರೆಯಲು ಸಾಧ್ಯ ಎಂಬುದು ಈ ಕೃತಿಯನ್ನು ಓದಿದವರಿಗೆ
ಮನವರಿಕೆಯಾಗುತ್ತದೆ. ಬಯಲಿನಲ್ಲಿ ಓತ ಎಂದು ಕರೆಯಲಾಗುವ
ಗಂಡು ಮೇಕೆಯು ಹೆಣ್ಣು ಮೇಕೆಗಳನ್ನು ಒಲಿಸುವ ಪರಿಯನ್ನು ಓದುವಾಗ ಇಂತಹ ಕೃತಿಗಳು ಪೆರುಮಾಳ್
ಮುರುಗನ್ ರಂತಹ ಈ ನೆಲದ
ಅಪ್ಪಟ ಲೇಖಕರಿಂದ ಮಾತ್ರ ಸಾಧ್ಯ ಎಂಬ ನಮಗೆ ಮನವರಿಕೆಯಾಗುತ್ತದೆ. ಅಪರಿಚತನೊಬ್ಬ
ಆಗತಾನೆ ಜನಿಸಿದ್ದ ಒಂದು ಹೆಣ್ಣು
ಮೇಕೆ ಮರಿಯನ್ನು ಒಣಭೂಮಿಯ ಗುಡ್ಡದ ಬಳಿ ವಾಸವಾಗಿದ್ದ
ವೃದ್ಧ ದಂಪತಿಗಳಿಗೆ ಉಡುಗರೆಯಾಗಿ ನೀಡುತ್ತಾನೆ. ಇದು ದೇವರಿಂದ ನಮಗೆ
ದೊರೆತ ಉಡುಗೊರೆ ಎಂದು ಭಾವಿಸಿದ ಅವರು
ಅದಕ್ಕೆ ಪೂಣ್ಣಾಚಿ ಎಂದು ಹೆಸರಿಡುತ್ತಾರೆ.
ಅದು ಸಂತಾನುಭಿವೃದ್ಧಿಯ ಮೂಲಕ ಮನೆಯ ಮಗಳಂತೆ
ಬೆಳೆಯುವುದು ಹಾಗೂ ಪೂಣ್ಣಾಚಿಯ
ಪ್ರೇಮಿ ಹಾಗೂ ದಕ್ಕೆ ಜನಿಸುವ
ಮರಿಗಳ ಕಥೆ ಹೇಳುವುದರ ಜೊತೆಗೆ
ತೀವ್ರ ಬರಗಾಲದಲ್ಲಿ ಹಸಿವಿನಿಂದ ಪರದಾಡುವ ದುರಂತ ಕಥನವನ್ನು ಮನುಷ್ಯರ ಕಥೆಯನ್ನಾಗಿಸುವ ಬದಲಾಗಿ ಈ ಕೃತಿಯಲ್ಲಿ ಲೇಖಕರು
ಪ್ರಾಣಿಗಳ ಕಥೆಯನ್ನಾಗಿಸಿದ್ದಾರೆ. ಮೇಕೆ ಮತ್ತು ಅದರ
ಪ್ರೇಮಿಗೆ ಹೆಸರನ್ನು ನೀಡಿರುವುದನ್ನು ಹೊರತು ಪಡಿಸಿದರೆ, ಮನುಷ್ಯರಿಗೆ ಯಾವುದೇ ಹೆಸರನ್ನು ನೀಡಿಲ್ಲ. ಪೂಣ್ಣಾಚಿ ಎಂಬ ಮೇಕೆಯ ಕಥೆಯು ಭೂಮಿ
ಮತ್ತು ಜಾನುವಾರುಗಳ ಬಗ್ಗೆ ಅದರ ನಿಕಟ ಗಮನದ
ಹೊರತಾಗಿಯೂ, ಎಲ್ಲಕ್ಕಿಂತ ಹೆಚ್ಚಾಗಿ ರಾಜಕೀಯ ಸಾಂಕೇತಿಕವಾಗಿದೆ. ಪ್ರಕೃತಿ ಮತ್ತು ಮಾರುಕಟ್ಟೆಯ ಕರುಣೆಯಲ್ಲಿರುವ ಸಮಾಜದಲ್ಲಿ ಸಾಮಾನ್ಯ ಅಥವಾ ಅಸ್ಪಷ್ಟವಾದವುಗಳು ಹೇಗೆ
ಬದುಕುತ್ತವೆ ಎಂಬುದನ್ನು ಎತ್ತಿ ತೋರಿಸುವ ಪ್ರಯತ್ನವೇ ಈ ಕಾದಂಬರಿಯಾಗಿದೆ.
ಪೆರುಮಾಳ್
ಅವರ ಆತ್ಮಕಥನದ ರೂಪದಲ್ಲಿರುವ ‘’ಅಮ್ಮಾ ‘’ ಎಂಬ ನೆನಪಿನ ಘಟನೆಗಳ
ಈ ಕೃತಿಯು ಓರ್ವ ಬಡ ಕೃಷಿಕಳಾಗಿ
ಅಶಿಸ್ತಿನ ಗಂಡನನ್ನು ಸಹಿಸಿಕೊಂಡು ಮಕ್ಕಳನ್ನು ಪೋಷಿಸಿದ ತನ್ನ ತಾಯಿಯ ಬದುಕನ್ನು
ಹೃದಯಂಗಮವಾಗಿ ಚಿತ್ರಿಸಿದ್ದಾರೆ. ಅದೇ ರೀತಿಯಲ್ಲಿ ಇತ್ತೀಚೆಗೆ
ತಮಿಳುನಾಡಿನಲ್ಲಿ ಅಂತರ್ಜಾತಿ ವಿವಾಹವಾಗುತ್ತಿರುವ ತರುಣ, ತರುಣಿಯರು ಗ್ರಾಮಾಂತರ ಪ್ರದೇಶದ ಜಾತಿಯ ಕ್ರೌರ್ಯಕ್ಕೆ ಬಲಿಯಾಗುತ್ತಿರುವ ಕಥನವನ್ನು ಬೆಂಕಿ ಅಥವಾ ಚಿತೆ ಎಂಬ
ಹೆಸರಿನಲ್ಲಿ ಕಾದಂಬರಿಯನ್ನು ಬರೆದಿದ್ದಾರೆ.
ಕೊಯಮತ್ತೂರು ಸುತ್ತಮುತ್ತಲಿನ ಪ್ರದೇಶವನ್ನು ಕೊಂಗನಾಡು ಎಂದು ಕರೆಯುವುದರಿಂದ ಕೊಯಮತ್ತೂರು
ನಗರದಲ್ಲಿ ಪದವಿ ಓದುತ್ತಿದ್ದಾಗಲೇ, ಕಥೆ
ಬರೆಯಲು ಆರಂಭಿಸಿದ ಪೆರುಮಾಳ್ ಮುರುಗನ್ ಅಲ್ಲಿಯ ಭಾಷೆ ಮತ್ತು ಜೀವನ
ಕ್ರಮವನ್ನು ಅಕ್ಷರದ ಮೂಲಕ ಅಭಿವ್ಯಕ್ತಿಗೊಳಿಸುವುದರ ಜೊತೆಗೆ ರೋಗಗ್ರಸ್ತ
ಗ್ರಾಮೀಣ ಪ್ರದೇಶದಲ್ಲಿ ತಾಂಡವವಾಡುತ್ತಿರುವ ಜಾತಿಯ ಕ್ರೌರ್ಯವನ್ನು ಅಷ್ಟೇ
ಪರಿಣಾಮಕಾರಿಯಾಗಿ ಚಿತ್ರ‍್ರಿಸುತ್ತಿದ್ದಾರೆ.
ಇತ್ತೀಚೆಗಿನ ಅವರ ‘’ಗಂಧದ ಸಾಬೂನು ಮತ್ತು ಇತರೆ ಕಥೆಗಳು’’ ಕೃತಿಯಲ್ಲಿಯೂ ಸಹ ನಾವುಗಳು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಸಾಮಾನ್ಯವಾದ ವಿಷಯಗಳನ್ನು ಎತ್ತಿಕೊಂಡು ಕಥೆಯನ್ನಾಗಿಸಿದ್ದಾರೆ. ಸಾರ್ವಜನಿಕ ಶೌಚಾಲಯಗಳನ್ನು ಬಳಸುವ ವ್ಯಕ್ತಿಗಳನ್ನು ಶೌಚಾಲಯದ ಕೊಠಡಿಯಿಂದ ಹೊರಬರುವಂತೆ ಮಾಡುವ ಹುಡುಗನ ಕಥೆಯಿಂದ ಹಿಡಿದು, ಪಟ್ಟಣಕ್ಕೆ ಹೋಗಿ ವಿದ್ಯೆ ಕಲಿತ ಹುಡುಗನೊಬ್ಬ ತನ್ನ ವೃದ್ಧ ತಾಯಿ ರವಿಕೆಯಿಲ್ಲದೆ ಸೀರೆ ಉಡುವುದನ್ನು ಪ್ರತಿಭಟಿಸುವ ಕಥೆಯು ಅಲ್ಲಿನ ಬದಲಾಗುತ್ತಿರುವ ಗ್ರಾಮೀಣ ಬದುಕಿನ ವಾಸ್ತವಕ್ಕೆ ಹಿಡಿದ ಕೈ ಗನ್ನಡಿಯಂತಿದೆ.
ಎಪ್ಪತ್ತರ
ದಶಕದಲ್ಲಿ ಎಡಪಂಥೀಯ ಚಿಂತಕರಲ್ಲಿ ಒಬ್ಬರಾಗಿದ್ದ ಡಿ. ಜಯಕಾಂತನ್ ಅವರ
ಕಥೆ ಮತ್ತು ಕಾದಂಬರಿಗಳು ಆ ಕಾಲಘಟ್ಟದ ತಮಿಳು
ಸಾಹಿತ್ಯದಲ್ಲಿ ಹುಟ್ಟು ಹಾಕಿದ ಸಾಮಾಜಿಕ ಪ್ರಜ್ಞೆಯನ್ನು ಈಗ ಪೆರುಮಾಳ್ ಮುರುಗನ್
ತಮ್ಮ ಕಥೆ, ಕಾದಂಬರಿಗಳ ಮೂಲಕ ಹುಟ್ಟು
ಹಾಕುತ್ತಿದ್ದಾರೆ. ಕನ್ನಡದಲ್ಲಿ ಬೆಸಗರಹಳ್ಳಿ ರಾಮಣ್ಣ ಮತ್ತು ಕೃಷ್ಣ ಆಲನಹಳ್ಳಿ ಅವರ ಕಥೆಗಳಲ್ಲಿ ಇಂತಹ
ಕಟು ವಾಸ್ತವದ ಚಿತ್ರಗಳನ್ನು ನಾವು ನೋಡಿದ್ದೆವು. ಡಾ.
ರಾಮಣ್ಣ ಅವರ ಗಾಂಧಿ ಮತ್ತು
ಚೆಲುವನ ಪರಂಗಿ ಗಿಡಗಳು ಹಾಗೂ ಮಲೆಯಾಳಂ ಭಾಷೆಯ
ವೈಕಂ ಮಹಮ್ಮದ್ ಬಶೀರ್ ಅವರ
ನನ್ನ ಅಜ್ಜನಿಗೊಂದು ಆನೆಯಿತ್ತು, ಮತ್ತು ಪಾತುಮ್ಮಳ ಆಡು ಇಂತಹ ಕಥನ
ಪರಂಪರೆಯನ್ನು ಮುಂದುವರಿಸಿರುವ ಪೆರುಮಾಳ್ ಮುರುಗನ್ ಅವರು ಸಾಹಿತ್ಯದ ಮೂಲಕ
ನಾವು ಗಂಭಿರವಾಗಿ ಆಲೋಚಿಸಬೇಕಾದ ಜಗತ್ತು ಈಗಲೂ ಸಹ ನಮ್ಮ ಕಣ್ಣೆದುರು ಇದೆ
ಎಂಬುದನ್ನು ತಮ್ಮ ಕಥೆ ಮತ್ತು
ಕಾದಂಬರಿಗಳ ಮೂಲಕ ಎತ್ತಿ ತೋರಿಸುತ್ತಿದ್ದಾರೆ.
( ಹೊಸತು
ಪತ್ರಿಕೆಯಲ್ಲಿ ಪ್ರಕಟವಾದ ‘’ ಬಹುಸಂಸ್ಕೃತಿ’’ ಅಂಕಣ ಬರಹ)
ಡಾ.ಎನ್.ಜಗದೀಶ್ ಕೊಪ್ಪ