ಕರ್ನಾಟಕದ ಸಾಹಿತ್ಯವೂ ಸೇರಿದಂತೆ ಸಾಮಾಜಿಕ ಮತ್ತು ಧಾರ್ಮಿಕ ವಲಯಗಳಲ್ಲಿ ಹನ್ನೆರೆಡನೆಯ ಶತಮಾನವು ಮಹತ್ವದ ಕಾಲಘಟ್ಟವಾಗಿದೆ. ಕರ್ನಾಟಕದ ಇತಿಹಾಸದಲ್ಲಿ ಪ್ರಪಥಮ ಬಾರಿಗೆ ಅಕ್ಷರವನ್ನು ಆಯುಧವನ್ನಾಗಿ ಬಳಸಿದ ಶಿವಶರಣರು ತಮ್ಮ ಆತ್ಮ ವಿಮರ್ಶೆ ಹಾಗೂ ಸಮಾಜ ವಿಮರ್ಶೆ ಮತ್ತು ಕಾವ್ಯಪ್ರಧಾನ ಗುಣಗಳಿಂದ ಕೂಡಿರುವ ವಚನಗಳ ಮೂಲಕ ಕಣ್ಣೆದುರುಗಿನ ಎಲ್ಲಾ ಅಸಮಾನತೆಗಳನ್ನು, ಅನಿಷ್ಟಗಳನ್ನು, ಜಾತಿಯ ತರತಮಗಳನ್ನು ವಿಮರ್ಶೆಯ ಒರೆಗಲ್ಲಿಗೆ ಹಚ್ಚಿದರು. ಜೊತೆಗೆ ಸಮಾಜದ ಕೊಳೆಯನ್ನು ತೊಳೆಯುವಲ್ಲಿ ಯಶಸ್ವಿಯಾದರು. ತಮ್ಮ ಜೀವನಾನುಭವಗಳಿಗೆ ಅನುಭಾವದ ಸ್ಪರ್ಶ ನೀಡುವುದರ ಜೊತೆಗೆ ತಾವು ಹಾಡಿದ ಅಥವಾ ಬರೆದು ದಾಖಲಿಸಿದ ವಚನಗಳು ಶ್ರೇಣಿಕೃತ ಸಮಾಜದ ಎಲ್ಲಾ ವರ್ಗದ ಜನರ ಎದೆಗೆ ತಲುಪಿಸುವ ನಿಟ್ಟಿನಲ್ಲಿ ತಮ್ಮೊಳಗಿನ ಭಾವನೆಗಳ ಅಭಿವ್ಯಕ್ತಿಗೆ ಹೊಸ ಭಾಷೆಯೊಂದನ್ನು ರೂಪಿಸಿದರು.
ಶಿವಶರಣರು ತಮ್ಮ ವಚನಗಳ ಸೃಷ್ಟಿಗೆ ಬಳಸಿದ ಭಾಷೆಯು ಜನರ ನಡುವಿನ ಆಡುಭಾಷೆಯಾಗಿತ್ತು. ಭಾಷೆಯ ಬಳಕೆಯ ದೃಷ್ಟಿಯಿಂದ ಇದು ಕ್ರಾಂತಿಕಾರಕ ನಿಲುವು ಎಂದರೆ ಅತಿಶಯದ ಮಾತಾಗಲಾರದು. ಜನರ ನಡುವಿನ ಬಳಕೆಯ ಆಡು ಭಾಷೆಯು ಸಾಹಿತ್ಯ ಸೃಷ್ಟಿಗೆ ಮೈಲಿಗೆ ಭಾಷೆ ಎಂಬ ಕಲ್ಪನೆ ಚಾಲ್ತಿಯಲ್ಲಿದ್ದ ಕಾಲಘಟ್ಟದಲ್ಲಿ ತಮ್ಮೊಳಗಿನ ಭಾವನೆಗಳಿಗೆ ಯಾವುದೇ ಕೃತಕ ಭಾಷೆಗೆ ಮೊರೆ ಹೋಗದೆ, ಛಂದಸ್ಸು, ಅಲಂಕಾರ, ಪ್ರಾಸ, ಇಂತಹುಗಳ ಹಂಗಿಲ್ಲದೆ ರಚಿಸಿದ ವಚನಗಳು ಕನ್ನಡ ಸಾಹಿತ್ಯ ಮಾತ್ರವಲ್ಲದೆ, ಭಾರತದ ಸಾಹಿತ್ಯದ ಇತಿಹಾಸದಲ್ಲಿ ಒಂದು ಅಪೂರ್ವವಾದ ಮೈಲಿಗಲ್ಲು ಎಂದು ಬಣ್ಣಿಸಬಹುದು.
ಅಕ್ಷರವೆಂಬುದು ಪಂಡಿತರ ಸ್ವತ್ತು ಎಂಬ ನಂಬಿಕೆಯಿದ್ದ ಕಾಲಘಟ್ಟದಲ್ಲಿ ರಚಿತವಾದ ಸಂಸ್ಕೃತ, ಹಳೆಗನ್ನಡ ಮತ್ತು ಚಂಪೂ ಶೈಲಿಯ ಕಾವ್ಯ ಕೃತಿಗಳೆಲ್ಲವೂ ವಿದ್ವಾಂಸರಿಂದ ವಿದ್ವಾಂಸರಿಗೆ ಮಾತ್ರ ಎಂಬಂತಿದ್ದವು. ಆದರೆ, ಹನ್ನೆರೆಡನೇ ಶತಮಾನದ ಬಸವಯುಗದ ವಚನಕಾರರು ಮತ್ತು ವಚನಕಾರ್ತಿಯರು ಹಾಗೂ ಇದಕ್ಕೂ ಮೊದಲು ಇದ್ದ ಆದ್ಯ ವಚನಕಾರ ಎನಿಸಿಕೊಂಡ ದೇವರ ದಾಸಿಮಯ್ಯನ ವಚನಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಅಭಿವ್ಯಕ್ತಿಗೆ ಹೊಸ ಭಾಷೆಯನ್ನು ಬಳಸುವುದರ ಜೊತೆಗೆ ಅದರ ನೆಲೆಯನ್ನು ಮತ್ತಷ್ಟು ವಿಸ್ತರಿಸಿದರು.
ಶರಣರ ವಚನ ಸಾಹಿತ್ಯದ ಸೃಷ್ಟಿಯ ಸಮಯದಲ್ಲಿ ಸಮಾಜದಲ್ಲಿ ಜಾತಿ ಪದ್ಧತಿ ತಾಂಡವಾಡುತ್ತಿತ್ತು. ಒಂದೊಂದು ಜಾತಿ ಸಮುದಾಯವು ಒಂದೊಂದು ದ್ವಿÃಪದಂತೆ ಬದುಕುತ್ತಿತ್ತು. ಕೆಲವು ವಚನಗಳಲ್ಲಿ ಉಲ್ಲೇಖವಾಗಿರುವ ಕಸಬಗೇರಿ, ಹೊಲಗೇರಿ ಅಥವಾ ಹದಿನೆಂಟು ಜಾತಿಯ, ಹೊಲೆ ಹದಿನೆಂಟು ಜಾತಿಗಳು ಇತ್ಯಾದಿ ನುಡಿಗಟ್ಟುಗಳು ಅಂದಿನ ಶ್ರೆÃಣೀಕೃತ ಸಮಾಜಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಇಂತಹ ಅಸಮಾನತೆಯ ವಿರುದ್ಧ ಹೋರಾಡಲು ವಚನಕಾರರಿಗೆ ಸರಳ ಭಾಷೆಯಲ್ಲಿ ಸಾಹಿತ್ಯ ಪ್ರಕಾರವನ್ನು ಸೃಷ್ಟಿಸುವ ಅಗತ್ಯ ಮತ್ತು ಸವಾಲು ಎರಡೂ ಒಟ್ಟಿಗೆ ಎದುರಾಗಿದ್ದವು. ಈ ಕಾರಣಕ್ಕಾಗಿ ಜನರ ನಡುವಿನ ಭಾಷೆಯನ್ನು ತಮ್ಮ ವಚನಗಳ ಸಂವಹನದ ಭಾಷೆಯನ್ನಾಗಿ ಮಾಡಿಕೊಂಡರು. ಇದಕ್ಕೆ ಉದಾಹರಣೆಯಾಗಿ ಸಮಾಜದ ಅಂತ್ಯಜರ ಬದುಕನ್ನು ಬಸವಣ್ಣನವರು ತಮ್ಮ ಒಂದು ವಚನದಲ್ಲಿ
ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆವಂತರಾಗಿ ಒಳಗೆ ಐದಾರೆ
ಅನು ದೇವಾ ಹೊರಗಣವನು,
ಸಂಬೋಳಿ ಎನ್ನುತ್ತಾ ಇದ್ದಲ್ಲಿ ಇದ್ದೆÃನೆ
ಕೂಡಲ ಸಮಗಮ ದೇವಾ,
ನಿಮ್ಮ ನಾಮವಿಡಿದ ಅನಾಮಿಕ ನಾನು
ಹಾಡಿರುವ ಬಗೆಯನ್ನು ಗಮನಿಸಿದರೆ, ಅಂದಿನ ಸಮಾಜದ ಚಿತ್ರಣ ಮತ್ತು ಸರಳ ನುಡಿಗಟ್ಟಿನ ಭಾಷೆಯ ಮಹತ್ವ ನಮಗೆ ಅರಿವಾಗುತ್ತದೆ.
ತಮ್ಮ ಸಾಹಿತ್ಯ ಸೃಷ್ಟಿಗೆ ಅಥವಾ ಅಭಿವ್ಯಕ್ತಿಗೆ ಶಿವಶರಣರು ನೀಡಿದ “ ವಚನ” ಎಂಬ ನಾಮಾಂಕಿತ ನಿಜಕ್ಕೂ . ಶಿವಶರಣರ ಅದ್ಭುತ ಪರಿಕಲ್ಪನೆಯಾಗಿದೆ.ಜೊತೆಗೆ ಅವರ ನಡೆ ಮತ್ತು ನುಡಿ ಕುರಿತ ಬದುಕಿನ ಬದ್ಧತೆಗೆ ಸಾಕ್ಷಿಯಾಗಿದೆ. ವಚನವೆಂದರೆ ಸಾಮಾನ್ಯ ಅರ್ಥದಲ್ಲಿ ಆಣೆ ಅಥವಾ ಪ್ರಮಾಣ ಎಂದರ್ಥ. ಈ ನಿಟ್ಟಿನಲ್ಲಿ ಶಿವಶರಣರು ತಾವು ನುಡಿದಂತೆ ನಡೆಯುವವರು ಹಾಗೂ ನಡೆದಂತೆ ನುಡಿಯುವವರು ಎಂಬ ಆತ್ಮಸಾಕ್ಷಿಯ ಪ್ರಜ್ಞೆಗೆ ಅನುಗುಣವಾಗಿ ಬದುಕಿ ಬಾಳಿದ ಪರಿ ಮತ್ತು ಅವರ ವಚನ ಸಾಹಿತ್ಯದ ಸೃಷ್ಟಿ ಕನ್ನಡದ ಪಾಲಿಗೆ ಎಂದಿಗೂ ನಂದಿಹೋಗದ ದಾರಿದೀಪಗಳಾಗಿವೆ. ಈ ಕಾರಣದಿಂದಾಗಿ ವಚನ ಸಾಹಿತ್ಯವು ಆಚಾರ್ಯ ಅಥವಾ ಪಂಡಿತರ ಸಾಹಿತ್ಯವಾಗಿರದೆ ಅದು ಪಾಮರರ ಸಾಹಿತ್ಯವಾಗಿದೆ. ನೊಂದವರ, ಮೌಡ್ಯಗಳ ವಿರುದ್ಧ ಸಿಡಿದೆದ್ದವರ ಎದೆಯಂತರಾಳದ ಧ್ವನಿಯಾಗಿದೆ. ಬಸವಣ್ಣನವರು “ ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ” ಎಂದು ಜಾತಿಯ ಮೂಲವನ್ನರಸಿ, “ ಕರ್ಣದಲ್ಲಿ ಜನಿಸಿದವರುಂಟೆ” ಎಂದು ಜಾತಿಯ ಅಸ್ಮಿತೆಯನ್ನೆÃ ಪ್ರಶ್ನಿಸಿದರು. ಏಕೆಂದರೆ,ಜಾತಿಯ ಸೂತಕದ ಜೊತೆಗೆ ಆ ಕಾಲದಲ್ಲಿ ಆಚರಣೆಯಲ್ಲಿದ್ದ ಜೈನ ಧರ್ಮದ ನಿಯಮಗಳು ಮತ್ತು ಆಚರಣೆಗಳು ಅತಿನಿಷ್ಟೆಯಿಂದ ಕೂಡಿದ್ದವು. ಇದರ ಜೊತೆಗೆ ಬೌದ್ಧ ಧರ್ಮದಲ್ಲಿ ಆಚರಣೆಯಲ್ಲಿದ್ದ ತಾಂತ್ರಿಕ ಆಚರಣೆಗಳು ವಾಮಾಚಾರದ ಅಡ್ಡಹಾದಿಯನ್ನಿಡಿದು ದಾರಿ ತಪ್ಪಿದ್ದವು. ಇವೆಲ್ಲವನ್ನೂ ಗಮನಿಸಿದ್ದ ಅಲ್ಲಮ ಪ್ರಭು ದೇವರು ತಮ್ಮ ಒಂದು ವಚನದಲ್ಲಿ “ “ಹಠಯೋಗ ಅಂಬಿಕೆಯೆಂದು, ಅಂಕುಚನವೆಂದು, ವಜ್ರಿ, ಅಮಯ ಕಲ್ಪವೆಂದು ಮಲಮೂತ್ರಗಳಂ ಸೇವಿಸುತ್ತಾ, ಇದು ಮೇಣು ತಲೆಯೊಳಗಣ ವಾತಾಪಿತ್ತಶ್ಲೆಷ್ಮವ ತೆಗೆದು ಅಮೃತವೆಂದು ಬಿನುಗುದೃಷ್ಟವ ತೋರುವವರಲ್ಲ ಶರಣರು” ಎನ್ನುವುದರ ಮೂಲಕ ಅಂದಿನ ಅನಿಷ್ಟಾಚರಣೆಗಳಿಗೆ ತಮ್ಮ ಚಾಟಿಯೇಟು ಬೀಸಿದ್ದಾರೆ.
ವಚನಗಳಲ್ಲಿ ಬಳಕೆಯಾಗಿರುವ ಭಾಷೆ ಎಷ್ಟೊಂದು ಪರಿಣಾಮಕಾರಿ ಮತ್ತು ತೀವ್ರತೆಯಿಂದ ಕೂಡಿದೆಯೆಂದರೆ, ಇದಕ್ಕಿಂತ ಪರಿಣಾಮಕಾರಿ ಅಭಿವ್ಯಕ್ತಿ ಸಾಧ್ಯವಿಲ್ಲ ಎಂಬುದನ್ನು ವಚನಕಾರು ಮತ್ತು ವಚನಕಾರ್ತಿಯರು ಸಾಬೀತು ಪಡಿಸಿದ್ದಾರೆ. ಹನ್ನೆರೆಡನೇ ಶತಮಾನದ ಶಿವಶರಣರು ಮತ್ತು ಶಿವಶರಣೆಯರು ಅಭಿವ್ಯಕ್ತಿಗಾಗಿ ಕಾವ್ಯದ ಛಂದಸ್ಸು, ಅಲಂಕಾರ, ಲಯ ಅಥವಾ ಪ್ರಾಸಗಳಿಗೆ ಜೋತು ಬಿದ್ದವರಲ್ಲ, ಬದಲಾಗಿ ಜನರ ನಡುವಿನ ಗಾದೆ, ನುಡಿಗಟ್ಟುಗಳನ್ನು, ರೂಪಕ ಮತ್ತು ಪ್ರತಿಮೆಗಳ ಮೂಲಕ ಪ್ರತಿಬಿಂಬಿಸಿದರು. ಆದ್ಯ ವಚನಕಾರ ಎನಿಸಿಕೊಂಡ ಜೇಡರ ದಾಸಿಮಯ್ಯ ಸರಳ ಭಾಷೆಯಲ್ಲಿ ನಿರೂಪಿಸುವ ಮಾರ್ಗವನ್ನು ತೋರಿಸಿಕೊಟ್ಟನಂತರ, ಅದನ್ನು ಬಸವಣ್ಣ, ಅಲ್ಲಮ ಪ್ರಭುಮ ಅಕ್ಕ ಮಹಾದೇವಿ ಮುಂತಾದ ವಚನಕಾರರು ಮತ್ತು ವಚನಕಾರ್ತಿಯರು ಅಭಿವ್ಯಕ್ತಿಯ ಹೆದ್ದಾರಿಯಾಗಿ ಪರಿವರ್ತಿಸಿದರು. ಈ ಕಾರಣಕ್ಕಾಗಿ ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ವಚನ ಸಾಹಿತ್ಯ ತನ್ನ ಭಾಷೆ ಹಾಗೂ ಪರಿಣಾಮಕಾರಿ ಅಭಿವ್ಯಕ್ತಿಯ ಮೂಲಕ ವಿಭಿನ್ನವಾಗಿರುವುದು ಮಾತ್ರವಲ್ಲದೆ, ತನ್ನದೇ ಆದ ವೈಶಿಷತೆಯ ಸ್ಥಾನಮಾನವನ್ನು ಹೊಂದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕಾಲಮಾನದ ಅಗತ್ಯತೆಗೆ ಅನುಗುಣವಾಗಿ ಸ್ಪಂದಿಸಿದೆ.
ವಚನಗಳನ್ನು ಹಾಡುವಾಗ ಅಥವಾ ದಾಖಲಿಸುವಾಗ ಶಿವಶರಣರಿಗೆ ತಾವು ಬದುಕಿದ್ದ ಕಾಲಘಟ್ಟದ ಅರಿವು ನಿಖರವಾಗಿತ್ತು. ಇದರಿಂದಾಗಿ ಅವರು ತಾವು ತಮ್ಮ ಬದುಕಿನಲ್ಲಿ ಕಂಡ ವಾಸ್ತವ ಹಾಗೂ ಕಠೋರ ಸತ್ಯಗಳನ್ನು ಪರಿಣಾಮಕಾರಿಯಾದ ಭಾಷೆಯಲ್ಲಿ ಅಭಿವ್ಯಕ್ತಿಗೊಳಿಸಿದರು. ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೇ ಎಡರು ತೊಡರುಗಳಿಗೆ ಅಂಜದೆ, ಅಳುಕದೆ ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ವಚನ ಸಾಹಿತ್ಯವನ್ನು ನಿರ್ಮಾಣ ಮಾಡಿದರು. ಬಿಜ್ಜಳನ ಆಸ್ಥಾನದಲ್ಲಿ ಭಂಡಾರಿಯಾಗಿದ್ದ ಬಸವಣ್ಣನವರು ತಮ್ಮ ಒಂದು ವಚನದಲ್ಲಿ
ವ್ಯಾದನೊಂದು ಮೊಲವ ತಂದೊಡೆ ಸಲುವ ಹಾಗೆ ಬಿಲಿವರಯ್ಯಾ
ನೆಲನಾಳ್ವನ ಹೆಣವೆಂದಡೆ ಒಂದಡಕೆಗೆ ಕೊಂಬರಿಲ್ಲ ನೋಡಯ್ಯಾ
ಎಂದು ಹೇಳುವುದರ ಮೂಲಕ ತಮ್ಮ ಎದೆಗಾರಿಕೆಯನ್ನು ತೋರಿದರು. ಅದೇ ರೀತಿ ಬಸವಣ್ಣನನ್ನು ಒಳಗೊಂಡಂತೆ ಎಲ್ಲಾ ಶರಣ-ಶರಣೆಯರಿಗೆ ಸಾಮಾಜಿಕ ಎಚ್ಚರ ಮತ್ತು ಆದರ್ಶ ಸಮಾಜವೊಂದರ ನಿರ್ಮಾಣದ ಕನಸಿತ್ತು. ತಾವು ನುಡಿದ ಮಾತುಗಳಲ್ಲಿ ಅಥವಾ ಬರೆದ ವಚ£ಗಳಲ್ಲಿ ಕೇಡಿನ ಇಲ್ಲವೆ, ಮಾತ್ಸರ್ಯದ ಕುರುಹುಗಳಿಲ್ಲ. ಬಸವಣ್ಣನವರ “ನಾನು ಹಾಡುವನಯ್ಯಾ ನಿನಗೆ ಕೇಡಿಲ್ಲವಾಗಿ” ಎಂಬ ವಚನದಂತೆ ಸಮಾಜಕ್ಕೆ ಅಥವಾ ವ್ಯಕ್ತಿಗೆ ಯಾವುದೇ ಕೇಡು ಬಯಸದೆ ತಮ್ಮ ಅಭಿವ್ಯಕ್ತಿ ಸ್ವಾತಂತ್ರö್ಯವನ್ನು ಕಾಪಾಡಿಕೊಂಡು ಬಂದರು. ಕನ್ನಡದ ಪ್ರಾಚೀನ ಸಾಹಿತ್ಯವು ರಾಜ ಮಹಾರಾಜರ ಆಸ್ಥಾನದ ಆಶ್ರಯಗಳಲ್ಲಿ, ಸಂಸ್ಕೃತ ಮತ್ತು ಕಾವ್ಯ ಮೀಮಾಂಸೆಯ ನೆರಳಲ್ಲಿ ಬೆಳೆಯುತ್ತಾ, ಪುರಾಣದಂತಹ ಪರಂಪರಾಗತ ವಸ್ತು, ವಿಷಯಗಳ ಸುತ್ತಾ ಗಿರಕಿ ಹೊಡೆಯುತಿದ್ದಾಗ ಇಂತಹ ಮಾರ್ಗವನ್ನು ಧಿಕ್ಕರಿಸಿದ ವಚನಕಾರರು ಜನರಿಗೆ ಹತ್ತಿರವಾದ ಆಡು ಭಾಷೆಯಲ್ಲಿ ವಚನಸಾಹಿತ್ಯದ ಕೃಷಿ ಮಾಡಿದರು.
ಕನ್ನಡದ ವಚನ ಸಾಹಿತ್ಯ ಮತ್ತು ಅದರ ಪರಿಭಾಷೆ ಕುರಿತಂತೆ ಅನೇಕ ವಿದ್ವಾಂಸರು ವಿಭಿನ್ನ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಕೆಲವರು ವಚನ ಸಾಹಿತ್ಯವು ತಮಿಳಿನ ಅರವತ್ಮೂರು ಶೈವ ಪುರಾತನರ ರಚನೆಗಳಾದ “ತೇವಾರಂ” ಗಳಿಂದ ಪ್ರಭಾವಿತಗೊಂಡಿದೆ ಎಂದು ಅಭಿಪ್ರಾಯ ಪಟ್ಟರೆ, ಇದಕ್ಕೆ ಭಿನ್ನವಾಗಿ ಹಲವು ವಿದ್ವಾಂಸರು ಉಪನಿಷತ್ತುಗಳಿಂದಪ್ರೇರಣೆ ಪಡೆದಿದೆ ಎಂದಿದ್ದಾರೆ. ಇಡೀ ವಚನ ಸಾಹಿತ್ಯದ ಆಂತರೀಕ ಸ್ವರೂಪ, ಬಾಹ್ಯ ಸ್ವರೂಪ ಮತ್ತು ವಚನಗಳಲ್ಲಿರುವ ಕಾವ್ಯಗುಣ ಇವುಗಳನ್ನು ಕೂಲಂಕುಶವಾಗಿ ಅವಲೋಕಿಸಿದರೆ ಶಿವಶರಣ,ಶರಣೆಯಯರ ವಚನಗಳು ಸಂಪೂರ್ಣವಾದ ಸ್ವತಂತ್ರ ರಚನೆಗಳೆಂದು ಹೇಳಬಹುದು. ಬಹುತೇಕ ವಚನಕಾರರ ವಚನಗಳಲ್ಲಿ ಅಲಂಕಾರ, ಪ್ರಾಸ, ಅಥವಾ ಹಾಡಬಹುದಾದ ಸ್ವರ ಕೃತಿಗಳಂತೆ ಕಂಡು ಬಂದರೂ ಸಹ ಇಂತಹ ಅಂಶಗಳು ಆನಂತರ ದಿನಗಳಲ್ಲಿ ಆಧುನಿಕ ವಿದ್ವಾಂಸರು ಕಂಡುಕೊಂಡ ಸಾಹಿತ್ಯಿಕ ಗುಣಗಳು ಹೇಳಬಹುದು. ಏಕೆಂದರೆ ಹದಿನೈದನೆಯ ಶತಮಾನದಲ್ಲಿ ವಚನದ ಕಟ್ಟುಗಳು ದೊರೆತು ಅವುಗಳು ಪ್ರಸಾರಕ್ಕೆ ಬರುತ್ತಿದ್ದಂತೆ ದಾಸ ಸಾಹಿತ್ಯ ರಚನೆಗೆ(ಉಗಬೋಗಾ ಸುಳಾದಿಗಳು) ಪ್ರೇರಣೆಯಾದ ನಂತರ ಇಂತಹ ಅಧ್ಯಯನಗಳು ನಡೆದಿರುವುದನ್ನು ನಾವು ಕಾಣಬಹುದು.
ಕನ್ನಡದ ವಚನಗಳಲ್ಲಿ ಪ್ರತಿಯೊಬ್ಬ ವಚನಕಾರನ/ಳ ಅಭಿವ್ಯಕ್ತಿಯಲ್ಲಿ ಸಾಮಾಜಿಕ, ಕೌಟುಂಬಿಕ, ಧಾರ್ಮಿಕ ಮತ್ತು ಅನುಭಾವಿಕ ವಿಷಯಗಳು ಅಂತರ್ಗತವಾಗಿ ಮಿಳಿತಗೊಂಡಿವೆ. ಬಹುತೇಕ ವಚನಗಳ ವಿನ್ಯಾಸ, ಅವುಗಳ ವಸ್ತು, ವಿಷಯ ನಿರೂಪಣೆ ಹಾಗೂ ನಾಮಾಂಕಿತಗಳು ಮತ್ತು ಬಳಕೆಯಾಗಿರುವ ಭಾಷೆಯಲ್ಲಿ ಏಕರೂಪತೆ ಕಂಡು ಬಂದರೂ ಸಹ ವಚನಕಾರರ ಅಭಿವ್ಯಕ್ತಿಯಲ್ಲಿ ವೈವಿಧ್ಯತೆಯನ್ನು ನಾವು ಕಾಣಬಹುದು. ಅಲ್ಲಮ ಪ್ರಭುವಿನ ಭಾಷೆ ಮತ್ತು ಅಭಿವ್ಯಕ್ತಿಯಲ್ಲಿ ಅನುಭಾವ ಮತ್ತು ನಿಷ್ಟುರ ಸತ್ಯಗಳು ಮಿಳಿತಗೊಂಡಿದ್ದರೆ, ಬಸವಣ್ಣ, ಅಕ್ಕನ ವಚನಗಳಲ್ಲಿ ನಿಷ್ಟುರ ಸತ್ಯಗಳ ಜೊತೆ ಜೊತೆಯಲ್ಲಿ ಮೃದುವಾದ ಕಾವ್ಯಗುಣವುಳ್ಳ ಭಾಷೆಯನ್ನು ನಾವು ಕಾಣಬಹುದು. ಅದೇ ರೀತಿ ಚೆನ್ನ ಬಸವಣ್ಣನವರ ವಚನಗಳಲ್ಲಿ ಧಾರ್ಮಿಕತೆ ಮತ್ತು ಅಲೌಕಿಕತೆಯ ಗುಣಗಳು ಪ್ರಧಾನವಾಗಿವೆ. ಇದಕ್ಕೆ ಭಿನ್ನವಾಗಿ ತಳವರ್ಗದ ವಚನಕಾರರು ತಮ್ಮ ವೃತ್ತಿ ಅಥವಾ ಕಸುಬಿನ ಪರಿಕರಗಳನ್ನು ಉಪಮೆಯಾಗಿ ಬಳಸಿಕೊಂಡು ಅಸಮಾನತೆಯ ಸಮಾಜದ ವಿರುದ್ಧ ಹಾಗೂ ಡಾಂಬಿಕತನ ಮತ್ತು ಮೌಡ್ಯಗಳ ಆಚರಣೆಯ ವಿರುದ್ಧ ಸಿಡಿದ ಸಿಡಿಗಂಡುಗಳಂತೆ ಕಾಣುವ ಭಾಷೆಯನ್ನು ಬಳಕೆ ಮಾಡಿದ್ದಾರೆ. ಹಾಗಾಗಿ ಇವರ ಇವರ ವಚನಗಳಲ್ಲಿ ಆಕ್ರೋಶವು ಪ್ರಾಮುಖ್ಯತೆಯನ್ನು ಪಡೆದಿದೆ. ಇದಕ್ಕೆ ಉದಾಹರಣೆಯಾಗಿ ಅಮ್ಮುಗೆ ರಾಯಮ್ಮನ ಈ ವಚನವನ್ನು ಗಮನಿಸಬಹುದು.
ವೇದ ಶಾಸ್ತç ಆಗಮ ಪಿರಾಣಗಳಿಂದ ಅರಿದಹೆನೆಂಬ
ಅಜ್ಞಾನಿಗಳು ನೀವು ಕೇಳಿರೋ ಭಕ್ತಿ ಜ್ಞಾನ ವೈರಾಗ್ಯದಿಂದ ವಿರಕ್ತರಾದೆಹವಂಬರು
ನೀವು ಕೇಳಿರೋ…..
ವಚನಗಳ ಭಾಷೆ ಮತ್ತು ಕನ್ನಡ ಪದಗಳ ಬಳಕೆಯಲ್ಲಿ ಶಿವಶರಣರು ಮಾಡಿರುವ ಪ್ರಯೋಗ ಕನ್ನಡದ ನೆಲದಲ್ಲಿನ ಒಂದು ಅಚ್ಚರಿಯ ಪ್ರಯೋಗವೆಂದು ಬಣ್ಣಿಸಬಹುದು. ಏಕೇಂದರೆ, ಕನ್ನಡ ನಾಡಿನಲ್ಲಿ ಪ್ರತಿ ನಲವತ್ತು ಕಿಲೊಮೀಟರ್ ಅಂತರದಲ್ಲಿ ಕನ್ನಡ ಭಾಷೆಯು ತನ್ನದೇ ಆದ ಪ್ರಾದೇಶಿಕ ಲಯ ಮತ್ತು ನುಡಿಗಟ್ಟನ್ನು ಹೊಂದಿದೆ. ಪದಗಳ ಉತ್ಪತ್ತಿ, ಅವುಗಳ ಉಚ್ಛಾರಣೆಯಲ್ಲಿ ವಿಭಿನ್ನತೆ ಇದೆ. ಹೈದರಾಬಾದ್ ಕರ್ನಾಟಕದ ಕನ್ನಡದಲ್ಲಿ ಉರ್ದು ಭಾಷೆ, ಕೋಲಾರ, ತುಮಕೂರು ಭಾಗದಲ್ಲಿ ತೆಲುಗು ಭಾಷೆ, ಬಾಂಬೆ ಕನಾಟಕದಲ್ಲಿ ಹಿಂದಿ, ಮರಾಠಿಯ ಭಾಷೆಯ ಪ್ರಭಾವ, ಮಲೆನಾಡಿನ ಕನ್ನಡ, ಕರಾವಳಿ ಪ್ರದೇಶದ ಕನ್ನಡ ಮತ್ತು ದಕ್ಷಿಣ ಕರ್ನಾಟಕದ ಬೆಂಗಳೂರು, ಮಂಡ್ಯ, ಮೈಸೂರಿನ ಕನ್ನಡ, ಚಾಮರಾಜನಗರದ ತಮಿಳು ಪ್ರಭಾವದ ಕನ್ನಡ ಹೀಗೆ ಕನ್ನಡದ ನೆಲದಲ್ಲಿ ಹಲವು ಮಾದರಿಗಳಿದ್ದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಇಂದಿನ ಬೀದರ್ ಜಿಲ್ಲೆಯ ಬಸವಕಲ್ಯಾಣದ ನೆಲದಲ್ಲಿ ಕುಳಿತು ಎಲ್ಲರಿಗೂ ಸಲ್ಲುವ ಕನ್ನಡ ಭಾಷೆಯನ್ನು ವಚನಕಾರರು ಬಳಕೆ ಮಾಡಿರುವ ಪರಿಯನ್ನು ಗಮನಿಸಿದರೆ, ಅವರುಗಳ ದೂರದೃಷ್ಟಿ, ಲೋಕದೃಷ್ಟಿ ಮತ್ತು ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಗೆಗಿನ ಕಾಳಜಿ, ಅವರಿಗಿದ್ದ ಪರಿಕಲ್ಪನೆ, ಐಕ್ಯತೆಯ ಮನೋಭಾವ ಇವೆಲ್ಲವೂ ವಚನಕಾರರ ಬಗ್ಗೆ ಗೌರವ ಮೂಡಿಸುತ್ತವೆ.
ಶಿವಶರಣ-ಶರಣೆಯರ ವಚನಗಳ ಭಾಷೆಯು ಅಷ್ಟು ಪರಿಣಾಮಕಾರಿಯಾಗಿರಲು ಮುಖ್ಯ ಕಾರಣ ವಚನಗಳಲ್ಲಿ ಯಥೇಚ್ಚವಾಗಿ ಬಳಸಿರುವ ಗಾದೆಗಳು, ಜನಪ್ರಿಯ ನುಡಿಗಟ್ಟುಗಳು, ಪ್ರತಿಮೆಗಳು ಸಹ ಮೂಲಕಾರಣವಾಗಿವೆ. ಗಾದೆಗಳ ಬಳಕೆಯನ್ನು ಸಾಮಾನ್ಯವಾಗಿ ಪ್ರತಿಯೊಬ.ವಚನಕಾರರಲ್ಲಿಯೂ ನಾವು ಕಾಣಬಹುದಾಗಿದೆ. ಬಸವಣ್ಣನವರ ವಚನಗಳಲ್ಲಿ ಬರುವ “ ಕಂಬಳಿಯಲ್ಲಿ ಕಣಕವ ನಾದಿದಂತೆ” “ಕೋಡುಗವ ಹುಲ್ಲಲ್ಲಿ ಮುಸುಕಿದಂತೆ” ಅಕ್ಕನ ವಚನದ “ ಬಂಜೆ ಬೇನೆಯನವರಿಳೆ. ಮಲತಾಯಿ ಮದ್ದು ಬಲ್ಲಳೆ” ಇವುಗಳ ಜೊತೆಗೆ “ಕುರುಡ ಕನ್ನಡಿಯ ಹಿಡಿದಂತೆ” “ನೀರೊಳಗೆ ಹೋದವನ ಹೆಜ್ಜೆಯ ಕಾಂಬುವರುಂಟೆ” ಒಲುಮೆಯ ಕೂಟಕ್ಕೆ ಹಾಸಿಗೆಯ ಹಂಗೇಕೆ? ಮುಂತಾದ ಶಬ್ದಗಳ ಪ್ರಯೋಗಗಳು ಅವರುಗಳ ಸಾಮಾಜಿಕ ಪ್ರಜ್ಞೆಯನ್ನು ಎತ್ತಿ ತೋರಿಸುವವುದರ ಜೊತೆಗೆ ಭಾಷೆಯ ಬಳಕೆಯ ಎಚ್ಚರವನ್ನು ತೋರಿಸುತ್ತವೆ. ಬದುಕಿನಲ್ಲಿ ಮತ್ತು ಚಿಂತನೆಯಲ್ಲಿ ಪಾರದರ್ಶಕ ಗುಣವನ್ನು ಹೊಂದಿದ್ದ ಶಿವಶರಣ ಶರಣೆಯರಿಗೆ ಆತ್ಮ ವಿಮರ್ಶೆ ಎಂಬುದು ಅವರ .ಜೀವನದ ಅವಿಭಾಜ್ಯ ಅಂಗವಾಗಿತ್ತು. ಅವರ ಬದುಕು, ಭಾಷೆ ಮತ್ತು ಭಾವಗಳಲ್ಲಿ ಹೊರಗೊಂದು, ಒಳಗೊಂದು ಎಂಬ ದೃಷ್ಟಿಕೋನವಿರಲಿಲ್ಲ. ಇದರಿಂದಾಗಿಯೇ ಎಂಟನೂರು ವರ್ಷಗಳ ನಂತರವೂ ವಚನಗಳು ಮತ್ತು ವಚನಕಾರರು ಪ್ರಸ್ತುತರಾಗಿದ್ದಾರೆ. ಇದರ ಜೊತೆಗೆ ವಚನ ಸಾಹಿತ್ಯದ ಭಾಷೆ ಮತ್ತು ಅಲ್ಲಿನ ಶಬ್ದ ಸಂಪತ್ತು ಕನ್ನಡದ ಕಾವ್ಯವನ್ನು ಶ್ರೀಮಂತಗೊಳಿಸಿದೆ. ಆಧುನಿಕ ಕನ್ನಡದ ಯಾವೊಬ್ಬ ಕವಿಯೂ ವಚನಕಾರರ ಪ್ರಭಾವದಿಂದ ತಪ್ಪಿಸಿಕೊಳ್ಳಲಾದ ಸ್ಥಿತಿ ನಿರ್ಮಾಣಗೊಂಡಿದೆ.
( ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ " ಮಹಾಮನೆ"
ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಆಹ್ವಾನಿತ ಲೇಖನ)