ಕನ್ನಡ
ಪತ್ರಿಕೋದ್ಯಮದಲ್ಲಿ ಸಂಪೂರ್ಣವಾಗಿ ಅಲ್ಲದಿದ್ದರೂ ಬಹುತೇಕ ಭಾಗ ದೃಶ್ಯಮಾಧ್ಯಮಗಳು ಮತ್ತು ಮುದ್ರಣ
ಮಾಧ್ಯಮಗಳು ಕಳೆದ ಎರಡು ತಿಂಗಳ ಅವಧಿಯಲ್ಲಿ ತಲುಪಿರುವ ಅಧೋಗತಿ ಮತ್ತು ಮುಸ್ಲಿಮರ ವಿರುದ್ಧ ವಿಷ ಕಕ್ಕುತ್ತಿರುವ
ವೈಖರಿಯನ್ನು ಗಮನಿಸಿದರೆ ನಿಜಕ್ಕೂ ಆತಂಕವಾಗುತ್ತದೆ. ಜಾತಿ, ಧರ್ಮದ ಹಂಗಿಲ್ಲದೆ ಸಾಮಾನ್ಯ ಜನರ ಧ್ವನಿಯಾಗಿ
ನಿಲ್ಲಬೇಕಾದ ಮಾಧ್ಯಮಗಳು ಆಳುವವರ ಹಾಗೂ ಹಿಂದೂ ಧರ್ಮದ ತಗಡಿನ ತುತ್ತೂರಿಗಳಂತೆ ಗೋಚರವಾದರೆ, ಪತ್ರಕರ್ತರು
ಅಕ್ಷರದ ವ್ಯಭಿಚಾರಿಗಳಂತೆ ಕಾಣಿಸುತ್ತಾರೆ.
ಇಲ್ಲಿ ನಾನು ಎತ್ತುತ್ತಿರುವ
ಪ್ರಶ್ನೆಗಳು ಕೇವಲ ನನ್ನವು ಮಾತ್ರವಲ್ಲದೆ ಕನ್ನಡ
ನೆಲದ ಪ್ರತಿಯೊಬ್ಬ ಪ್ರಜ್ಞಾವಂತನ ಪ್ರಶ್ನೆಗಳಾಗಿವೆ.
ಪ್ರಶ್ನೆ ಒಂದು-
ಉಡುಪಿಯ ಕಾಲೇಜಿನಲ್ಲಿ ಸ್ಥಳಿಯ ಶಾಸಕನೊಬ್ಬ ಎತ್ತಿದ ಹಿಜಾಬ್ ಪ್ರಶ್ನೆ ನಿಜಕ್ಕೂ ಈ ಸಮಾಜದ ಸಮಸ್ಯೆಯಾಗಿತ್ತಾ?
ಹರೆಯದ ಹೆಣ್ಣು ಮಕ್ಕಳು ಅವರು ಯಾವ ಧರ್ಮಕ್ಕೆ ಸೇರಿರಲಿ. ಸಾರ್ವಜನಿಕವಾಗಿ ತಲೆಯ ಮೇಲೆ ಸರಗಿನ ರೀತಿ
ವಸ್ತ್ರ ಹಾಕಿಕೊಂಡು ಬಂದು ತರಗತಿಯಲ್ಲಿ ಕುಳಿತು ಮುಸುಕು ತೆಗೆದು ಪಾಠ ಕೇಳುವುದು ತಪ್ಪಾ? ಎಂದು ನೀವು
ಕೇಳುವುದರ ಬದಲು ಈ ವಿವಾದವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ
ಕೊಂಡೊಯ್ದಿರಿ. ವಿಷ ಕಕ್ಕುವ ಅನಾಮಧೇಯ ನರಿ ನಾಯಿಗಳಿಗೆ ಇಲ್ಲದ ಪ್ರಚಾರವನ್ನು ನೀಡಿದಿರಿ. ಇದು ಪರೋಕ್ಷವಾಗಿ
ಈಗ ತಾನೆ ಶಿಕ್ಷಣಕ್ಕೆ ತೆರೆದುಕೊಂಡು ಧರ್ಮದೊಳಗಿನ ಕಂದಾಚಾರಗಳಿಗೆ ಧ್ವನಿ ಎತ್ತಬೇಕಾಗಿದ್ದ ಹೆಣ್ಣುಮಕ್ಕಳ
ಭವಿಷ್ಯವನ್ನು ಕಸಿದುಕೊಂಡಿರಿ. ಇದು ಮಾಧ್ಯಮದ ನಿಜವಾದ ನೈತಿಕ ಕ್ರಿಯೆ ಅಥವಾ ಕರ್ತವ್ಯವೆ? ದಯವಿಟ್ಟು
ಇದಕ್ಕೆ ಉತ್ತರಬೇಡ. ನಿಮ್ಮ ಆತ್ಮಸಾಕ್ಷಿಯನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ. ಯಾವನೋ ಒಬ್ಬ ಅವಿವೇಕಿಯೊಬ್ಬ
ಹೇಳಿದ ಅಂಬೇಡ್ಕರ್ ಬುರ್ಖಾವನ್ನು ವಿರೋಧಿಸಿದ್ದರು
ಮಾತನ್ನು ಮಾಧ್ಯಮದಲ್ಲಿ ದೊಡ್ಡದಾಗಿ ಪ್ರತಿಬಿಂಬಿಸುವ ನಿಮಗೆ ಬುರ್ಖಾ ಮತ್ತು ಹಿಜಾಬ್ ನಡುವಿನ ವೆತ್ಯಾಸ
ತಿಳಿಯಲಿಲ್ಲವೆ?
ಪ್ರಶ್ನೆ ಎರಡು- ಮೂರು ಬಾರಿ ಶಾಸಕನಾಗಿ ಈಗ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿರುವ
ರೇಣುಕಾಚಾರ್ಯ ಎಂಬ ವೀರಶೈವ ಜನಾಂಗದ ವ್ಯಕ್ತಿ ತನ್ನ ಮಕ್ಕಳಿಗೆ ಬೇಡ ಜಂಗಮದ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿರುವುದು
ಮತ್ತು ಇದನ್ನು ಶಾಸನ ಸಭೆಯಲ್ಲಿ ಒಪ್ಪಿಕೊಂಡ ಸಂಗತಿಯನ್ನು ವರದಿ ಮಾಡಿದರೆ ನಿಮ್ಮ ಕರ್ತವ್ಯ ಮುಗಿಯಿತು
ಎಂದು ಏಕೆ ಭಾವಿಸಿದಿರಿ? ಇದೊಂದು ಕ್ರಿಮಿನಲ್ ಅಪರಾಧವಲ್ಲವೆ? ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ
ಸಚಿವ ಸಂಪುಟದ ೆಲ್ಲಾ ಸವಲತ್ತುಗಳನ್ನು ಈ ವ್ಯಕ್ತಿ ಹೇಗೆ ಪಡೆಯಲು ಸಾಧ್ಯ? ಜನಪ್ರತಿಯಾಗಿ ಹುದ್ದೆ
ಹೊಂದಲು ಅನರ್ಹನಾಗಿರುವ ಈ ವ್ಯಕ್ತಿ ಅಥವಾ ಈ ಘಟನೆ
ಬಗ್ಗೆ ಏಕೆ ಮೌನವಾಗಿದ್ದೀರಿ? ಈ ಸರ್ಕಾರದ ಮುಖ್ಯಮಂತ್ರಿಯಿಂದ ಹಿಡಿದು, ಸಚಿವ, ಶಾಸಕ ಹಾಗೂ ಎಲ್ಲಾ
ಬಗೆಯ ಸರ್ಕಾರಿ ನೌಕರರು ಪಡೆಯುವ ಸವಲತ್ತು ಮತ್ತು ಸಂಬಳದಲ್ಲಿ ಬಡಕೂಲಿಕಾರರಿಂದ ಹಿಡಿದು ಜನಸಾಮಾನ್ಯರು
ಧರ್ಮ, ಜಾತಿಯ ಬೇಧವಿಲ್ಲದೆ ಪಾವತಿಸಿದ ತೆರಿಗೆ ಹಣದ ಋಣವಿದೆ. ಈ ಬಗ್ಗೆ ಸರ್ಕಾರವನ್ನು ಪ್ರಶ್ನಿಸಬೇಕಾದ
ನಿಮ್ಮ ಬದ್ಧತೆ ಮತ್ತು ನೈತಿಕತೆ ಎಲ್ಲಿ ಅಡಗಿ ಹೋಯಿತು?
ಪ್ರಶ್ನೆ ಮೂರು
ಕಲ್ಬುರ್ಗಿ ನಗರದ ದಿವ್ಯಾ ಹಾಗರಗಿ ಎಂಬ ಬಿ.ಜೆ.ಪಿ.ಯ ಬೊಗಳು ನಾಯಿಯೊಂದು ಇತ್ತೀಚೆಗಿನ ವರ್ಷಗಳಲ್ಲಿ
ಸ್ಥಾಪಿಸಿದ ಇಂಗ್ಲೀಷ್ ಶಾಲೆಯಲ್ಲಿ ಪೊಲೀಸ್ ಸಬ್ ಇನ್ಸೆಪೆಕ್ಟರ್ ಹೆದ್ದೆಗೆ ನಡೆದ ಲಿಖಿತ ಪರೀಕ್ಷೆಯಲ್ಲಿ
ಪ್ರಮುಖ ಆರೋಪಿಯಾಗಿರುವ ಆಕೆ ಈವರೆಗೆ ಹೇಗೆ ತಲೆ ತಪ್ಪಿಸಿಕೊಂಡು ಇರಲು ಸಾಧ್ಯ? ಆಕೆ ನಮ್ಮ ಕಾರ್ಯಕರ್ತಳಲ್ಲ
ಎಂದು ಹೇಳುವ ಬಿ.ಜೆ.ಪಿ. ನಾಯಕರ ಹೇಳಿಕೆಯನ್ನು ಅತ್ಯಂತ ಶ್ರದ್ಧೆಯಿಂದ ಪ್ರಕಟಿಸುವ ಮುನ್ನ ಕಳೆದ ಎರಡು ಮೂರು ವರ್ಷಗಳಲ್ಲಿ ಒನಕೆ ಓಬವ್ವನ ವೇಷತೊಟ್ಟು ಮುಸ್ಲಿಮರ
ವಿರುದ್ಧ ಆಡಿದ್ದ ಮಾತುಗಳನ್ನು ಪ್ರಕಟಿಸಿದ್ದ ನಿಮಗೆ ಆಕೆಯ ಇತಿಹಾಸ ಏಕೆ ಮರೆತು ಹೋಯಿತು? ಸರ್ಕಾರದ
ಪರೀಕ್ಷೆಗಳನ್ನು ನಡೆಸುವಾಗ ಆಯ್ಕೆ ಮಾಡಿಕೊಳ್ಳುವ ವಿದ್ಯಾ ಸಂಸ್ಥೆಗಳ ಇತಿಹಾಸ ಮತ್ತು ಅನುಭವಗಳ ಕುರಿತು
ಎಂದಾದರೂ ನೀವು ಪ್ರಶ್ನಿಸಿದ್ದೀರಾ? ಕಳೆದ ಅಕ್ಟೋಬರ್
ತಿಂಗಳಿನಲ್ಲಿ ಆಕೆಯ ವಿದ್ಯಾ ಸಂಸ್ಥೆಗೆ ಅವಕಾಶ ಹೇಗೆ ದೊರೆಯಿತು? ಇದಕ್ಕೆ ಶಿಫಾರಸ್ಸು ಮಾಡಿದವರು
ಯಾರು? ಎಂದು ಈವರೆಗೆ ನೀವು ಪ್ರಶ್ನಿಸಿದ್ದೀರಾ? ನೀವು ಯಾರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದೀರಿ?
ಈಗಲಾದರೂ ಸ್ಪಷ್ಟಪಡಿಸಿ.
ಪ್ರಶ್ನೆ ನಾಲ್ಕು-
ತಮ್ಮ ಜೀವಮಾನದಲ್ಲಿ ಎಂದೂ ಕುರಿ, ಕೋಳಿ ಮೇಕೆ ತಿನ್ನದ ಹಿಂದೂ ಧರ್ಮದ ಮೇಲ್ಜಾತಿಯ ಹಲಾಲುಕೋರರಿಗೆ
ಶೂದ್ರ, ದಲಿತ ಮತ್ತು ಮುಸ್ಲಿಂರ ಆಹಾರ ಸಂಸ್ಕೃತಿಯ ಬಗ್ಗೆ ಮಾತನಾಡಲು ಹಕ್ಕು ನೀಡಿದವರು ಯಾರು? ಹಲಾಲ್
ಮತ್ತು ಜಟ್ಕಾ ಎಂದೆಲ್ಲಾ ಬಡಬಡಿಸುತ್ತಿರುವ ಇವರು ಬೇಳೆ ತೊವ್ವೆಯಲ್ಲಿ ಅನ್ನು ಉಂಡು, ಹೆಸರು ಬೇಳೆ
ಪಾಯಸ ಕುಡಿದು ಢರ್ ಎಂದು ತೇಗಿ, ಪುರ್ ಎಂದು ಹೂಸು ಬಿಡುವಾಗ, ಈ ನಾಡಿನ ಶೂದ್ರರು, ದಲಿತರು ಇವರ ಆಹಾರ ಸಂಸ್ಕೃತಿಯನ್ನು ಪ್ರಶ್ನಿಸಿದ ಉದಾಹರಣೆಗಳುಂಟಾ? ಇದು
ಈ ದೇಶದ ನಾಗರೀಕರಿಗೆ ಸಂವಿಧಾನ ನೀಡಿರುವ ಹಕ್ಕಿನ ಉಲ್ಲಂಘನೆ ಎಂದು ನಿಮಗೆ ಏಕೆ ಅನಿಸಲಿಲ್ಲ? ಇದು
ಪತ್ರಿಕೋದ್ಯಮವೇ?
ನಾನು ಮತ್ತು ನನ್ನ
ತಲೆಮಾರಿನ ನೂರಾರು ಮಂದಿ ಗೆಳೆಯರು ಪತ್ರಿಕೋದ್ಯಮದ
ವೃತ್ತಿಯಲ್ಲಿ ಬದುಕು ಕಟ್ಟಿಕೊಂಡು ಘನತೆಯ ನಿವೃತ್ತಿ ಜೀವನ ನಡೆಸುತ್ತಿದ್ದೇವೆ. ನಾವ್ಯಾರೂ ನಿಮ್ಮ
ಹಾಗೆ ಪತ್ರಿಕೋದ್ಯಮದ ಪದವಿ ಪಡೆದವರಲ್ಲ. ಸಾಮಾನ್ಯ ಪದವಿ ಪಡೆದು ಹಿರಿಯ ಪತ್ರಕರ್ತರ ವರದಿಗಳನ್ನು
ಅವರ ಕಾರ್ಯ ವೈಖರಿ ಮತ್ತು ಜೀವನ ವಿಧಾನವನ್ನು ಪತ್ರಿಕೋಧ್ಯಮದ ಪಠ್ಯವನ್ನಾಗಿ ಮಾಡಿಕೊಂಡವರು. ನಮ್ಮ
ಮುಂದೆ ಪಿ.ಲಂಕೇಶ್ ಇದ್ದರು, ಖಾದ್ರಿ ಶಾಮಣ್ಣನವರ ಸಂಪಾದಕಿಯ ಬರಹಗಳಿದ್ದವು, ವಡ್ಡರ್ಸೆ ರಘುರಾಮಶೆಟ್ಟರಿದ್ದರು.
ಪ್ರಜಾವಾಣಿ, ಡೆಕ್ಕನ್ ಹೆರಾಲ್ಟ್ ನಲ್ಲಿ ಕೆ.ಎನ್. ಹರಿಕುಮಾರ್ ಎಂಬ ಸಂಪಾದಕರಿದ್ದರು ಹೀಗೆ ಕರ್ನಾಟಕದಲ್ಲಿ
ಕನಿಷ್ಟ ಐವತ್ತು ಮಂದಿ ಹಿರಿಯ ಪತ್ರಕರ್ತರು ನಮಗೆ ಮಾರ್ಗದರ್ಶಿಗಳಾಗಿದ್ದರು.
ರಾಷ್ಟ್ರೀಯ ಮಟ್ಟದಲ್ಲಿ
ನಮಗೆ ಕುಲದೀಪ್ ನಯ್ಯಾರ್, ವಿನೋದ್ ಮೆಹತಾ, ಖಶ್ವಂತ್ ಸಿಂಗ್ ಮತ್ತು ಮಾರ್ಕ್ ಟುಲಿ ಎಂಬ ಬಿ.ಬಿ.ಸಿ.
ವರದಿಗಾರರ ಬರಹಗಳಿದ್ದವು. ಇಂತಹ ಮಹನೀಯರಿಂದ ನಾವು ಕಲಿತ ಪಾಠಗಳು ಜೀವನ ಪೂರ್ತಿ ನಮ್ಮನ್ನು ಮಾನಸಿಕವಾಗಿ
ಭ್ರಷ್ಟರನ್ನಾಗಿಸದೆ ಜನಸಾಮಾನ್ಯರ ಪ್ರತಿನಿಧಿಯಾಗಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಲು ಸಹಾಕಾರಿಯಾದವು.
ನೀವು ಮಾನವೀಯ ಮುಖವುಳ್ಳ ಪತ್ರಕರ್ತನಾಗಲು ಕನ್ನಡದಲ್ಲಿ ಪಿ.ಲಂಕೇಶರ ಟೀಕೆ ಟಿಪ್ಪಣಿ ಭಾಗ 1 ಮತ್ತು
2 ರ ಸಂಪುಟಗಳು ಮತ್ತು ಭಾರತದಲ್ಲಿ ನಾಲ್ಕು ದಶಕಗಳ
ಕಾಲ ಬಿ.ಬಿ.ಸಿ. ವರದಿಗಾರರಾಗಿದ್ದ ಮಾರ್ಕ್ ಟುಲಿ. ಅವರ
ಇಂಡಿಯಾಸ್ ಅನ್ ಎಂಡಿಂಗ್ ಜರ್ನಿ, ಮೋ ಪುಲ್
ಸ್ಟಾಪ್ ಇನ್ ಇಂಡಿಯಾ, ಹಾರ್ಟ್ ಆಫ್ ಇಂಡಿಯಾ, ಇಂಡಿಯಾ ಆನ್ ಮೂವ್ ಮುಂತಾದ ಕೃತಿಗಳನ್ನು ಓದಿದರೆ ಸಾಕು
ಬಹುಮುಖಿ ಭಾರತವನ್ನು ಹೇಗೆ ಗ್ರಹಿಸಬೇಕು ಎಂಬುದು ನಿಮಗೆ ಮನದಟ್ಟಾಗುತ್ತದೆ.
ಭಾರತದಲ್ಲಿ ಪ್ರಥಮವಾಗಿ ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಬ್ರಿಟನ್ ಮೂಲದ ಟುಲಿಯವರು ಈಗ ಕೊಲ್ಕತ್ತ ನಗರದಲ್ಲಿ ವಾಸಿಸುತ್ತಿದ್ದಾರೆ. ಅವರ ಪ್ರತಿಯೊಂದು ಪ್ರಬಂಧ ರೂಪದ ಲೇಖನವು ಮುವತ್ತು ಪುಟಗಳಿಂದ ಅರವತ್ತು ಪುಟಗಳವರೆಗೆ ವ್ಯಾಪಿಸಿರುತ್ತದೆ. ಒಂದು ಘಟನೆಯನ್ನು ಅತ್ಯಂತ ಸೂಕ್ಷ್ಮವಾಗಿ ಹೀಗೂ ನೋಡಬಹುದೆ? ಎಂದು ಅವರ ಕೃತಿಗಳನ್ನು ಓದುವಾಗ ಆಶ್ಚರ್ಯವಾಗುತ್ತದೆ. ಈ ಕಾರಣಕ್ಕಾಗಿ ಜಗತ್ ಪ್ರಸಿದ್ಧ ಟೈಮ್ಸ್ ವಾರಪತ್ರಿಕೆಯು ಮಾರ್ಕ್ ಟುಲಿ ಅವರನ್ನು ‘ ಬಹುಮುಖಿ ಸಂಸ್ಕೃತಿಯ ಭಾರತವನ್ನು ಅಪ್ಪಟ ದೇಶಿ ಹೃದಯದಿಂದ ನೋಡಿದ ಮಹಾನ್ ಪತ್ರಕರ್ತ’ ಎಂದು ಬಣ್ಣಿಸಿದೆ. 1992 ರ ಡಿಸಂಬರ್ 6 ರಂದು ಸಂಜೆ ಐದು ಗಂಟೆಯ ವೇಳೆಗೆ ಸಂಘಪರಿವಾರದ ಭಕ್ತರು ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕೆಡವಿ ಹಾಕಿದರು. ಆಗ ಇದ್ದುದ್ದು ಆಕಾಶವಾಣಿ ಮತ್ತು ದೂರದರ್ಶನ ಮಾತ್ರ. ಪ್ರಧಾನಿ ಪಿ.ವಿ.ನರಸಿಂಹರಾವ್ ದೆಹಲಿಯಲ್ಲಿ ಮಹಾ ಮೌನಕ್ಕೆ ಶರಣಾಗಿದ್ದರು. ಸರ್ಕಾರದ ಮಾಧ್ಯಮಗಳು ಘಟನೆ ಬಗ್ಗೆ ಏನನ್ನೂ ಹೇಳದೆ, ಪರಿಸ್ಥಿತಿ ಬಿಗುವಿನಿಂದ ಕೂಡಿದೆ ಎಂಬ ಮಾತನ್ನು ಪದೇ ಪದೇ ಬಿತ್ತರಿಸುತ್ತಿದ್ದವು. ಸಂಜೆ ಆರು ಗಂಟೆಯ ಬಿ.ಬಿ.ಸಿ. ವಾರ್ತೆಯಲ್ಲಿ ಬಾಬರಿ ಮಸೀದಿ ಧ್ವಂಸವಾದ ಘಟನೆಯನ್ನು ಬಿತ್ತರಿಸುತ್ತಿದ್ದಂತೆ ಕೇಂದ್ರ ಸರ್ಕಾರ ವಸ್ತು ಸ್ಥಿತಿಯನ್ನು ಪ್ರಸಾರಮಾಡುವುದು ಅನಿವಾರ್ಯವಾಯಿತು. ಇದು ಮಾರ್ಕ್ ಟುಲಿಯವರ ಪತ್ರಿಕೋದ್ಯಮದ ಬದ್ದತೆಗೆ ಇರುವ ಪ್ರಮುಖ ಸಾಕ್ಷಿ. ಇಂತಹ ಮಹನೀಯರಿಂದ ನಮ್ಮ ಮಾಧ್ಯಮದ ವಿಷಜಂತುಗಳು ಕಲಿಯುವುದು ಅಪಾರವಿದೆ.