ಶನಿವಾರ, ಜುಲೈ 6, 2013

ಲೋಕೇಶ್ ಮೊಸಳೆಯೆಂಬ ವನ್ಯಲೋಕದ ವಿಸ್ಮಯ

ಇಂದಿನ ದಿನಗಳಲ್ಲಿ ವನ್ಯಲೋಕದ ಛಾಯಾಗ್ರಹಣ ಹಲವು ಯುವ ಮನಸ್ಸುಗಳಿಗೆ ಪ್ರೀತಿಯ ಹವ್ಯಾಸವಾಗಿದೆ. ಇಂದಿನ ಮುಂದುವರಿದ ತಂತ್ರ ಜ್ಙಾನದಿಂದಾಗಿ ಸುಧಾರಿತ ಡಿಜಿಟಲ್ ಕ್ಯಾಮರಾಗಳು ನಮ್ಮ ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತಿವೆ. ಇದಲ್ಲದೆ, ಛಾಯಾಚಿತ್ರ ತೆಗೆಯುವ ಸಮಯದಲ್ಲಿ ಎದುರಾಗುತ್ತಿದ್ದ ಅಡ್ಡಿ ಆತಂಕಗಳನ್ನು ನಿವಾರಿಸಿಬಿಟ್ಟಿವೆ. ಜೊತೆಗೆ ಅಪಾಯಕಾರಿ ಪ್ರಾಣಗಳಿಂದ ದೂರನಿಂತು ಜೂಮ್ ಲೆನ್ಸ್ ಬಳಸಿ ಅವುಗಳ ಚಿತ್ರ ತೆಗೆಯಬಹುದಾದ ವ್ಯವಸ್ಥೆಯನ್ನೂ ಸಹ ಕಲ್ಪಿಸಿಕೊಟ್ಟಿವೆ.ಹಾಗಾಗಿ ನಮ್ಮ ಯುವ ಚೇತನಗಳು ಇದನ್ನು ಹವ್ಯಾಸ ಮಾಡಿಕೊಳ್ಳುತ್ತಿರುವುದು ಒಂದು ರೀತಿಯಲ್ಲಿ ನಮಗೆ ಸ್ವಸ್ಥ ಸಮಾಜದ ಸಂಕೇತ.ಕಾಣುತ್ತಿದೆ.
ಅತ್ಯಾಧುನಿಕ ಕ್ಯಾಮರಾಗಳ ನೆರವಿಲ್ಲದೆ, ವನ್ಯಮೃಗಗಳ ಚಿತ್ರ ತೆಗೆಯುವುದನ್ನು ವೃತ್ತಿಯ ಜೊತೆಗೆ ಉಸಿರಾಗಿಸಿಕೊಂಡ ಅನೇಕ ಛಾಯಾಚಿತ್ರಗ್ರಾಹಕರು ನಮ್ಮ ನಡುವೆ ಇದ್ದಾರೆ. ಭಾರತದಲ್ಲಿ ಬೇಡಿ ಸಹೋದರರು ಹೆಸರು ಮಾಡಿದ್ದರೆ, ಕರ್ನಾಟಕದಲ್ಲಿ ಇವರದೊಂದು ಪ್ರತಿಭಾವಂತರ ದೊಡ್ಡ ಪಡೆಯೇ ಇದೆ. ಮಾಜಿ ಸಚಿವ ಎಂ.ವೈ.ಘೋರ್ಪಡೆ, ಪೆರುಮಾಳ್, ಕೃಪಾಕರ್ ಸೇನಾನಿ, ಮಾಜಿ ಅರಣ್ಯಾಧಿಕಾರಿ ಬಸಪ್ಪನವರ್ ಹೀಗೆ ಹಲವರನ್ನು ಹೆಸರಿಸುತ್ತಾ ಹೋಗಬಹುದು. ಇವರ ಸಾಲಿಗೆ ಇತ್ತೀಚೆಗೆ ಸೇರಬಹುದಾದ ಗಮನಾರ್ಹವಾದ ಹೆಸರು, ಮೈಸೂರಿನ ಲೋಕೇಶ್ ಮೊಸಳೆ. ಓದಿದ್ದು, ಮತ್ತು  ಬೋಧಿಸಿದ್ದು ಪತ್ರಿಕೋದ್ಯಮವಾದರೂ ಅಂತಿಮವಾಗಿ ಲೋಕೇಶ್ ಕೈಹಿಡಿದಿದ್ದು ವನ್ಯಲೋಕದ ಛಾಯಾಗ್ರಹಣ ವೃತ್ತಿಯನ್ನು.. ಕಳೆದ ಒಂದು ದಶಕದಿಂದ ಇದನ್ನೇ ಉಸಿರಾಗಿಸಿಕೊಂಡು ಈ ಹವ್ಯಾಸದಲ್ಲಿ ತನ್ಮಯತೆಯಿಂದ ತೊಡಗಿಸಿಕೊಂಡಿರುವ ಲೋಕೇಶರ ಸಾಧನೆ ನಿಜಕ್ಕೂ  ಬೆರಗು ಮೂಡಿಸುವಂತಹದ್ದು.



ಮೇಲುನೋಟಕ್ಕೆ ನಮಗೆಲ್ಲಾ ವನ್ಯಲೋಕದ ಛಾಯಾಗ್ರಹಣ ಆಕರ್ಷಣೀಯವಾಗಿ ಕಂಡರೂ ಅದು ಬೇಡುವ, ಏಕಾಂತ, ತಾಳ್ಮೆ, ಜೀವದ ಹಂಗು ತೊರೆದು ಎದುರಿಸಬೇಕಾದ ಅನಿರೀಕ್ಷಿತ ಅವಘಡಗಳು, ಮಳೆ, ಚಳಿ, ಹಸಿವು, ನೀರಡಿಕೆ ಎನ್ನದೆ, ಅರಣ್ಯದಲ್ಲಿ ಇರಬೇಕಾದ ಒತ್ತಡ ಹಾಗೂ ಅರಣ್ಯಲೋಕದ ವ್ಯವಹಾರಗಳ ತಿಳುವಳಿಕೆ, ಅಲ್ಲಿನ ಪ್ರಾಣಗಳ ನಡುವಳಿಕೆ ಕುರಿತಾದ ಅಧ್ಯಯನ ಇವೆಲ್ಲವನ್ನೂ ಅರಿತ ವ್ಯಕ್ತಿ ಮಾತ್ರ ಒಬ್ಬ ಶ್ರೇಷ್ಟ ಛಾಯಾಚಿತ್ರಗ್ರಾಹಕನಾಗಬಲ್ಲನು. ನಾವು ಅರಣ್ಯದಲ್ಲಿ ವಿಸರ್ಜಿಸಿದ ಮೂತ್ರದ ವಾಸನೆಯಿಂದ ಸುಳಿವು ಪಡೆಯುವ ಪ್ರಾಣಿಗಳು ನಮ್ಮ ಸನೀಹ ಸುಳಿಯುವಿದಿಲ್ಲ ಎಂಬ ಕನಿಷ್ಟ ತಿಳುವಳಿಕೆ ಛಾಯಾಚಿತ್ರಗ್ರಾಹಕನಿಗೆ ಇರಬೇಕಾಗುತ್ತದೆ. ಇಂತಹ ವಿಷಯಗಳನ್ನು ಕರಗತ ಮಾಡಿಕೊಂಡವರಲ್ಲಿ ಲೋಕೇಶ್ ಮೊಸಳೆ ಸಹ ಒಬ್ಬರು.

ಇಂತಹ ಎಲ್ಲಾ ಸೂಕ್ಷ್ಮ ವಿಚಾರಗಳನ್ನು ಬಲ್ಲ ಲೋಕೇಶ್ ಮೊಸಳೆ ತಾವು ಭೋಧಿಸುತ್ತಿದ್ದ ಪತ್ರಿಕೋದ್ಯಮದ ವೃತ್ತಿಯನ್ನು ಬಿಟ್ಟು ಹೆಗಲಿಗೆ ಕ್ಯಾಮರಾ ತಗುಲಿಸಿಕೊಂಡು, ನಾಗರಹೊಳೆ, ಬಂಡಿಪುರ, ಮತ್ತು ಹೆಗ್ಗಡದೇವನಕೋಟೆಯತ್ತ ಹೊರಟಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಆದರೆ, ಹಾಸನದ ಬಳಿಯ ಮೊಸಳೆ ಎಂಬ ಗ್ರಾಮದಿಂದ ಬಂದಿದ್ದ ಲೋಕೇಶ್ ಗೆ ನಿಸರ್ಗದ ನಂಟು ತಾನು ಹುಟ್ಟಿ ಬೆಳೆದ ಹಳ್ಳಿಯಿಂದಲೇ ಬೆಳೆದು ಬಂದಿತ್ತು. ಹಾಗಾಗಿ ಅದರ ಮೇಲಿನ  ಮೋಹವನ್ನು ಹರಿದುಕೊಳ್ಳಲಾರದೆ, ಕೈತುಂಬಾ ಹಣ ತರುವ ಉದ್ಯೋಗವನ್ನು ಬಿಟ್ಟು, ದುಬಾರಿ ಮತ್ತು ಸವಾಲು ಎನ್ನಬಹುದಾದ ವನ್ಯಲೋಕದ ಬೆನ್ನುಹತ್ತಿದರು.
ಮೈಸೂರು ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯದಲ್ಲಿ ಪದವಿ ಮತ್ತು ಮೈಸೂರು ವಿ.ವಿ.ಯಲ್ಲಿ ಅದೇ ಪತ್ರಿಕೋದ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಲಂಕೇಶ್ ಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿ, ಪತ್ರಿಕೋದ್ಯಮ ವೃತ್ತಿಗೆ ಇರಬೇಕಾದ ಘನತೆ, ನಿಷ್ಟುರತೆ, ಬದ್ಧತೆಯನ್ನು ಮೈಗೂಡಿಸಿಕೊಂಡಿದ್ದ ಲೋಕೇಶ್,  ವೃತ್ತಿಯ ಜೊತೆ ಜೊತೆಗೆ ಮೈಸೂರು ವಿ.ವಿ.ಯ ಪತ್ರಿಕೋದ್ಯಮ ವಿಭಾಗದಲ್ಲಿ ಉಪನ್ಯಾಸಕರಾಗಿಯೂ ದುಡಿದರು. ಲಂಕೇಶರು ನಿಧನರಾದ ನಂತರ ಮೈಸೂರಿನಲ್ಲಿ ಒಂದಿಷ್ಟು ಕಾಲ ಜನಾಂಧೋಲನ ಎಂಬ ವಾರಪತ್ರಿಕೆಯನ್ನು ನಡೆಸಿ, ನಂತರ ಛಾಯಾಗ್ರಹಣದತ್ತ ವಾಲಿದರು. ಲೋಕೇಶ್ ಮೊಸಳೆಯ ಬಹುತೇಕ ಗೆಳೆಯರೆಲ್ಲಾ ಇಂದು ಭಾರತದ ಪ್ರಸಿದ್ದ ಮಾಧ್ಯಮ ಸಂಸ್ಥೆಗಳಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಆದರೆ, ಲಂಕೇಶರ ಬಳುವಳಿಯೇನೊ ಎಂಬಂತೆ ಇರುವ ಒಂದಿಷ್ಟು ನೇರನುಡಿ ಮತ್ತು ನಿಷ್ಟುರತೆಯನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿರುವ ಲೋಕೇಶ್ ಗೆ ಸದ್ದುಗದ್ದಲದ ಲೋಕಕ್ಕಿಂತ ನಿಸರ್ಗದ ಏಕಾಂತ ಅಚ್ಚುಮೆಚ್ಚಿನ ಹವ್ಯಾಸವಾಗಿದೆ.
ಕಳೆದ ಒಂದು ದಶಕದ ಅವಧಿಯಲ್ಲಿ ಲೋಕೇಶ್ ಸೆರೆಹಿಡಿದಿರುವ ವನ್ಯಮೃಗಗಳ ಚಿತ್ರಗಳು ವಿಸ್ಮಯವನ್ನು ಮೂಡಿಸುವಂತಿವೆ. ಪ್ರಾಣಿಗಳ ಮತ್ತು ಪಕ್ಷಿಗಳ ಚಲನ ವಲನ ಕುರಿತು ಚಿತ್ರದಲ್ಲಿ ದಾಖಲಿಸುವುದು ನಿಜಕ್ಕೂ ಸವಾಲಿನ ಕೆಲಸ. 1974 ರಲ್ಲಿ ಮಣಿಪಾಲ್ ಗ್ರೂಪ್ ನ ಉದಯವಾಣಿ ಪತ್ರಿಕೆಯವರು ಈಶ್ವರಯ್ಯ ನವರ ಸಂಪಾದಕತ್ವದಲ್ಲಿ ಆರಂಭಿಸಿದ ತುಷಾರ ಮಾಸಪತ್ರಿಕೆಗೆ ಪೂರ್ಣಚಂದ್ರ ತೇಜಸ್ವಿಯವರು ಕಪ್ಪು ಬಿಳುಪು ಚಿತ್ರಗಳಲ್ಲಿ ಸೆರೆಹಿಡಿಯುತ್ತಿದ್ದ ಚಿತ್ರಗಳು ಚಿತ್ರಸಂಪುಟ ಎಂಬ ಅಂಕಣದಲ್ಲಿ ಪ್ರಕಟವಾಗುತ್ತಿದ್ದವು. ತಾವು ಸೆರೆ ಹಿಡಿದ ಚಿತ್ರಗಳನ್ನು ತೆಗೆಯುವ ಸಂದರ್ಭದಲ್ಲಿ ಎದುರಿಸಿದ ಸವಾಲುಗಳನ್ನು ತೇಜಸ್ವಿಯವರು ಸ್ವಾರಸ್ಯಕರವಾಗಿ ಎಂಟರಿಂದ ಹತ್ತು ಪುಟಗಳಲ್ಲಿ ಚಿತ್ರಗಳ ಸಮೇತ ವಿವರಿಸಿ ಬರೆಯುತ್ತಿದ್ದರು
1980 ರ ದಶಕದಲ್ಲಿ ಈ ಲೋಕಕ್ಕೆ ಇಳಿದ ಅಪರೂಪದ ಗೆಳಯರಾದ ಕೃಪಾಕರ್ ಮತ್ತು ಸೇನಾನಿ ಕೂಡ ಕಾಡು ಮೇಡು ಅಲೆದು ತೆಗೆದ ಚಿತ್ರಗಳ ಬಗ್ಗೆ ಬರೆದ ಅನೇಕ ಲೇಖನಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವ ಕೃತಕ ಬೆಳಕಿನ ಸಹಾಯವಿಲ್ಲದೆ, ನಿಸರ್ಗದ ಬೆಳಕಿನಲ್ಲಿ ಪ್ರಾಣಿಗಳ ಮತ್ತು ಪಕ್ಷಿಗಳ ಚಿತ್ರ ತೆಗೆಯುವುದು ಪ್ರತಿಯೊಬ್ಬ ಛಾಯಾಗ್ರಾಹಕನಿಗೆ ಬೌದ್ಧಿಕ ಸವಾಲು. ಇಂದಿನ ಅತ್ಯಾಧುನಿಕ ಡಿಜಿಟಲ್ ಕ್ಯಾಮರಾಗಳ ನೆರವಿಲ್ಲದೆ ಅಂದಿನ ಪ್ರತಿಭಾವಂತರು ತೆಗೆದ ಚಿತ್ರಗಳು ಇವೊತ್ತಿಗೂ ನಿಸರ್ಗ ಪ್ರೇಮಿಗಳ ಮನದಲ್ಲಿ ಹಸಿರಾಗಿವೆ.
ಇಲ್ಲಿ ಲೋಕೇಶ್ ತೆಗೆದ ಜಿಂಕೆಯ ಚಿತ್ರದ ನೆಳಲು-ಬೆಳಕಿನಾಟ ಅವರ ಪ್ರತಿಭೆಗೆ ಸಾಕ್ಷಿಯಾಗಿದೆ. ಲೋಕೇಶ್ ಮೊಸಳೆಯವರ ಚಿತ್ರಗಳು ಮೈಸೂರು, ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ಪ್ರದರ್ಶನಗೊಂಡಿವೆ. ಹಲವಾರು ಸಂಸ್ಥೆಗಳು ತಮ್ಮ ವಾರ್ಷಿಕ ಕ್ಯಾಲೆಂಡರ್ ಗಳಿಗಾಗಿ ಇವರ ಚಿತ್ರಗಳನ್ನು ಬಳಸಿಕೊಂಡಿವೆ. ಇವರ ದೊಡ್ಡತನವೆಂದರೆ, ಎಂದೂ ತಮ್ಮ ಚಿತ್ರಗಳ ಕುರಿತಂತೆ ವ್ಯವಹಾರಿಕವಾಗಿ ಜಿಪುಣತನ ತೋರದ ಲೋಕೇಶ್ ಯಾರಾದರೂ ನನ್ನ ಚಿತ್ರ ಬಳಸಿಕೊಳ್ಳಲಿ, ಕನಿಷ್ಟ ಚಿತ್ರದ ಜೊತೆ ನನ್ನ ಹೆಸರಿದ್ದರೆ ಸಾಕು ಎಂಬ ಉಧಾರತನವನ್ನು ತೋರುತ್ತಾರೆ. ಲೋಕೇಶರ ಪ್ರತಿಭೆ ನಿಮಗೆ  ಇಷ್ಟವಾದರೆ ಒಮ್ಮ ಇವರ’ lokeshmosale.com ಅಂತರ್ಜಾಲ ಪುಟಕ್ಕೆ ಬೇಟಿ ನೀಡಿ. ಅಲ್ಲಿನ ಚಿತ್ರಗಳು ನಿಮಗೆ ಖುಷಿ ನೀಡಿದರೆ, ಈ ಗೆಳಯನಿಗೆ ಒಮ್ಮೆ ಅಭಿನಂದನೆ ಸಲ್ಲಿಸಿ. ಮೊಬೈಲ್ ನಂಬರ್,9448434448.

ಪರಿಸರ ಕುರಿತು ಮಾತನಾಡುವುದು, ಬರೆಯುವುದಷ್ಟೇ ಸಮಾನವಾಗಿ  ವನ್ಯಲೋಕದ ಚಿತ್ರಗಳ ಮೂಲಕವೂ ಸಹ ಜಾಗೃತಿ ಮೂಡಿಸಬಹುದು ಎಂಬುದನ್ನ ಸಾಧಿಸುತ್ತಿರುವ ಈ ನನ್ನ ಕಿರಿಯ ಮಿತ್ರನಿಗೆ ತುಂಬು ಹೃದಯದ ಅಭಿನಂದನೆಗಳು.

ಬುಧವಾರ, ಜುಲೈ 3, 2013

ಉರಿವ ಒಲೆಯೊಳಗೆ ಬೆಂದುಹೋದವರು.



ಭಾರತದ ಗ್ರಾಮಾಂತರ ಪ್ರದೇಶಗಳ ಸ್ಥಿತಿ ಗತಿ ಹಿಂದೆಂದಿಗಿಂತಲೂ ಈಗ  ಶೋಚನೀಯವಾಗಿದೆ ಎಂಬ ಕಟು ವಾಸ್ತವ ಸಂಗತಿಯನ್ನು ನಾವು ಮನಸ್ಸಿಗೆ ತೆಗೆದುಕೊಳ್ಳಲು, ಮಾನಸಿಕರಾಗಿ ಸಿದ್ದರಾಗಿಲ್ಲ. ಆದರೆ, ಗ್ರಾಮಭಾರತದ ಈ ಎಲ್ಲಾ ನೋವು, ಸಂಕಟಗಳಿಗೆ ನೇರ ಬಲಿಯಾಗುತ್ತಿರುವವರು ನಮ್ಮ ಮಹಿಳೆಯರು. ,ನಮ್ಮ ಗ್ರಾಮಭಾರತದ  ಮಹಿಳೆಯರು ಕುಡಿಯುವ ನೀರಿಗಾಗಿ, ಮತ್ತು ಉರವಲು ಕಟ್ಟಿಗೆಗಾಗಿ ಪ್ರತಿದಿನ ಆರ ರಿಂದ ಎಂಟು ಕಿಲೋಮೀಟರ್ ದೂರ ಕ್ರಮಿಸುತ್ತಿದ್ದಾರೆ ಎಂಬ ಸತ್ಯವನ್ನು ವರ್ತಮಾನದ ಸಮಾಜಕ್ಕೆ ಮನದಟ್ಟು ಮಾಡಿಕೊಡುವುದು ನಿಜಕ್ಕೂ ತ್ರಾಸದಾಯಕ ಸಂಗತಿಯಾಗಿದೆ. ನಮ್ಮ ಜನಪ್ರತಿನಿಧಿಗಳಿಗೆ ಮತ್ತು ಆಡಳಿತ ಚುಕ್ಕಾಣಿ ಹಿಡಿದ ಅಧಿಕಾರಿಶಾಹಿ ವರ್ಗಕ್ಕೆ  ನಗರದ ಬವಣೆಗಳ ಚಿಂತೆ ಕಾಡಿದಂತೆ, ಹಳ್ಳಿಗಳ ಬಗೆಗಿನ ಚಿಂತೆಗಳು ಅವರೆನ್ನೆಂದೂ  ಕಾಡಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 65 ವರ್ಷ ಮುಗಿದು 66ನೇ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಇವೊತ್ತಿಗೂ ಭಾರತದಲ್ಲಿ 80 ಸಾವಿರ ಹಳ್ಳಿಗಳಿಗೆ ವಿದ್ಯುತ್ ಇಲ್ಲ ಎಂಬುದು,ನಮಗೆ ಅಪಮಾನದ ಸಂಗತಿ ಎನಿಸಲಿಲ್ಲ.

ನಾವು ಭಾರತದ ಮಾಹಿತಿ ತಂತ್ರಜ್ಙಾನದ ಬಗ್ಗೆ ಮಾತನಾಡುತ್ತೀವಿ, ಹಾರಿಬಿಟ್ಟ ಉಪಗ್ರಹಗಳಬಗ್ಗೆ ಮಾತನಾಡುತ್ತೀವಿ. ಕ್ರಿಕೇಟ್ ಕುರಿತು ಮಾತನಾಡುತ್ತಿದ್ದೇವೆ, ಮನುಷ್ಯರನ್ನು ಪ್ರಾಣಿಗಳಂತೆ , ಮನೆಯೆಂಬ ಪಂಜರದೊಳಕ್ಕೆ ಕೂಡಿ ಹಾಕಿ ಅವರ ವಿಕೃತ ವರ್ತನೆಗಳನ್ನು ಮನರಂಜನೆ ಎಂಬ ಹೆಸರಿನಲ್ಲಿ ಉಣಬಡಿಸುವ ಕಾರ್ಯಕ್ರಮಗಳ ಬಗ್ಗೆ ದಿನವಿಡಿ ಚರ್ಚೆಯ ನೆಪದಲ್ಲಿ ತೌಡು ಕುಟ್ಟುತ್ತಾ,  ಬಾಯಲ್ಲಿನ ಉಗುಳು ಒಣಗಿಹೋಗುವತನಕ ಮಾತನಾಡುತ್ತಿದ್ದೇವೆ. ಆದರೆ, ನಾನು ತಿನ್ನುವ ಅನ್ನ, ಮತ್ತು ಕುಡಿಯುವ ನೀರು ಇವುಗಳಿಗಾಗಿ ಇಡೀ ಜೀವಮಾನವನ್ನು ತೇಯುತ್ತಿರುವ ಗ್ರಾಮೀಣ ಮಹಿಳೆಯರ ಬವಣೆಗಳ ಕುರಿತು ಮಾತನಾಡಲು ಮಾತ್ರ ನಮಗೆ ವ್ಯವಧಾನವಿಲ್ಲ.  ನಮ್ಮ ಗ್ರಾಮಾಂತರ ಪ್ರದೇಶಗಳ ಮನೆಗಳಲ್ಲಿ ಶೇಕಡ 75 ರಷ್ಟು ಭಾಗ ಅಡುಗೆ ಸಾಂಪ್ರದಾಯಕ ಒಲೆಗಳಲ್ಲಿ ಉರವಲು ಕಟ್ಟಿಗೆ ಮುಖಾಂತರ ಸಿದ್ದವಾಗುತ್ತಿದೆ ಎಂಬ ಅಂಶ ಯಾವತ್ತೂ ನಮ್ಮೆದೆಯ ಕದವನ್ನು ತಟ್ಟಲಿಲ್ಲ.
ನಗರ ಪ್ರದೇಶಗಳಲ್ಲಿ ಶೇಕಡ 22 ರಷ್ಟು ಮಂದಿ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಶೇಕಡ 75 ರಷ್ಟು ಮಂದಿ ಉರವಲು ಕಟ್ಟಿಗೆ ಮತ್ತು ಸಗಣಿಯಿಂದ ತಯಾರಾದ ಬೆರಣಿಗಳನ್ನು ಉಪಯೋಗಿಸುತ್ತಿದ್ದಾರೆ. ಶೇಕಡ ನಾಲ್ಕರಷ್ಟು ಮಂದಿ ಮಾತ್ರ ಅಡುಗೆ ಅನಿಲ ಮತ್ತು ಸೀಮೆಎಣ್ಣೆ ಉಪಯೋಗಿಸುತ್ತಿದ್ದಾರೆ. 1992 ರ ಸಮೀಕ್ಷೆಯಲ್ಲಿ ದೇಶದ 25 ಕೋಟಿ ಜನ ಉರುವಲು ಕಟ್ಟಿಗೆ ಮತ್ತು ಹತ್ತುಕೋಟಿ ಅರವತ್ತು ಲಕ್ಷ ಜನ ಸಗಣಿಯಿಂದ ತಯಾರಾದ ಬೆರಣಿಗಳನ್ನು ಬಳಸುತ್ತಿದ್ದರು. ನಾವು ದೆಹಲಿಯ ಹೊರಭಾಗದಲ್ಲಿ ಉತ್ತರ ಪ್ರಧೇಶಕ್ಕೆ ಸೇರಿದ ಗಜಿಯಾಬಾದ್ ಮೂಲಕ ಉತ್ತರ ಪ್ರದೇಶವನ್ನು ಪ್ರವೇಶಿಸಿದರೆ, ಇಡೀ ರಾಜ್ಯದ ಬಹುತೇಕ ಗ್ರಾಮಗಳ ಮನೆಯೆದುರು ಸಗಣಿಯಿಂದ ತಯರಾದ ಬೆರಣಿಗಳ ರಾಶಿಯನ್ನು ನೋಡಬಹುದು. ಕಟ್ಟಿಗೆ ಮತ್ತು ಬೆರಣಿಯ ಬಳಕೆಯಿಂದ ಹೊರ ಬರುವ ಹೊಗೆ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಮೇಲೆ ತೀವ್ರ ಗತಿಯಲ್ಲಿ ದುಷ್ಪರಿಣಾಮ ಬೀರುತ್ತಿದೆ. 1970 ಮತ್ತು 1980ರ ದಶಕಗಳಲ್ಲಿ ಆಧುನಿಕ ತಂತ್ರಜ್ಙಾನದಿಂದ ತಯಾರಿಸಿದ ಹೆಚ್ಚು ಹೊಗೆಯುಗುಳದ ಮತ್ತು ಉರುವಲು ಬೇಡದ ಸುಧಾರಿತ ಒಲೆಗಳು ಅಸ್ತಿತ್ವಕ್ಕೆ ಬಂದಿದ್ದರೂ ಸಹ ಅವುಗಳು ಸಮರ್ಪಕವಾಗಿ ಬಡಕುಟುಂಬಗಳಿಗೆ ವಿತರಣೆಯಾಗಿಲ್ಲ. ಇನ್ನೂ ವಿದ್ಯುತ್ ಒಲೆಗಳಂತೂ ಹಳ್ಳಿಗಳ ಜನರ ಪಾಲಿಗೆ ಕನಸಿನ ಮಾತು. ಏಕೆಂದರೆ, ದೇಶದಲ್ಲಿ ಉತ್ಪಾದನೆಯಾಗುತ್ತಿರು  ವಿದ್ಯುತ್ ಪ್ರಮಾಣದಲ್ಲಿ ಶೇಕಡ 52 ರಷ್ಟು ಮಾತ್ರ ಹಳ್ಳಿಗಳಿಗೆ ಸಮರ್ಪವಾಗಿ ಸರಬರಾಜಾಗುತ್ತಿದೆ. ಅದು ಎಂಟರಿಂದ ಹನ್ನೆರೆಡು ಗಂಟೆಗಳವರೆಗೆ ಮಾತ್ರ.

ದೇಶದ ಬಹುತೇಕ ದಲಿತರು, ಹಿಂದುಳಿದ ವರ್ಗದ ಕುಟುಂಬಗಳು, ಮತ್ತು ಆದಿವಾಸಿ ಜನಾಂಗ ನಿಸರ್ಗದಲ್ಲಿ ಸಿಗುವ ಸೌದೆ ಮತ್ತು ಜಾನುವಾರುಗಳ ಸಗಣಿಯನ್ನು ತಮ್ಮ ದಿನನಿತ್ಯದ ಅಡುಗೆಯ ಬಳಕೆಗಾಗಿ ಅವಲಂಬಿಸಿವೆ. ಇದರಿಂದಾಗಿ ಹದಗೆಟ್ಟ ಬಡವರ ಆರೋಗ್ಯ ಸಧ್ಯದ ಸ್ಥಿತಿಯಲ್ಲಿ ದೇಶದ ಅಪೌಷ್ಟಿಕತೆ ಮತ್ತು ಕಲುಷಿತ ನೀರು ಸೇವನೆ ಹಾಗೂ ಶೌಚಾಲಯ ಸಮಸ್ಯೆಯ ನಂತರ ಮೂರನೇ ಅತಿ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ.


ಶನಿವಾರ, ಜೂನ್ 29, 2013

ಗಾಂಧಿಗಿರಿಯ ಫಸಲುಗಳು


ಶತಮಾನದ ಹಿಂದೆ ಗಾಂಧೀಜಿಯವರು ಬರೆದ ಹಿಂದ್ ಸ್ವರಾಜ್ ಕೃತಿಯನ್ನು ಇವೊತ್ತಿಗೂ ನಮಗೆ ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಅಲ್ಲಿನ ಗ್ರಾಮಸ್ವರಾಜ್ಯದ ಪರಿಕಲ್ಪನೆಗಳು ಮತ್ತು ಜೀವ ಪರಿಸರಕ್ಕೆ ಎರವಾಗದಂತಹ ಅವರ ಕ್ರಾಂತಿಕಾರಿ ಚಿಂತನೆಗಳು ಕುರಿತಂತೆ ಅವರ ನಿಲುವುಗಳು ಬದುಕಿನುದ್ದಕ್ಕೂ ಬದಲಾಗಲಿಲ್ಲ. ಗಾಂಧಿಯವರ ಚಿಂತನೆಗಳಲ್ಲಿ ಭಾರತದ ಬಹುಮುಖಿ ಸಂಸ್ಕೃತಿ ಮತ್ತು ಇಲ್ಲಿನ ಜನರ ವಿಶೇಷವಾಗಿ ಪೂರ್ವಿಕರ ಲೋಕವಿದ್ಯೆಯ ಜ್ಙಾನದ ಬಗ್ಗೆ ಅಪಾರ ನಂಬಿಕೆಗಳಿದ್ದವು. ನಿಸರ್ಗದ ಚಟುವಟಿಕೆಯನ್ನು ಗಹನವಾಗಿ ಅಧ್ಯಯನ ಮಾಡಿದ್ದ ಗಾಂಧೀಜಿಗೆ ಜಗತ್ತಿನ ಸಕಲೆಂಟು ಜೀವರಾಶಿಗಳಿಗೆ ಎರವಾಗದಂತೆ ಮನುಷ್ಯ ಬದುಕುವುದು ಮುಖ್ಯವಾಗಿತ್ತು. ಹಾಗಾಗಿ ಅವರು, ಸ್ವದೇಶಿ, ಚರಕ, ಅಹಿಂಸೆ ಮುಂತಾದ ಪರಿಕಲ್ಪನೆಗಳಲ್ಲಿ ತಮ್ಮ ಚಿಂತನೆಯ ಧಾರೆಗಳನ್ನು ಸಂಲಗ್ನಗೊಳಿಸಿದರು. ಅವರ ಚಿಂತನೆಗಳು ಇವೊತ್ತಿನ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಸಹ ನಮ್ಮನ್ನು  ತೀವ್ರಗತಿಯಲ್ಲಿ ಕಾಡುತ್ತಿವೆ. ಅಭಿವೃದ್ದಿಯ ವಿಕೃತಿಗಳು ಮತ್ತು ಕೊಳ್ಳುಬಾಕು ಸಂಸ್ಕೃಯಿಂದಾಗಿ ನಮ್ಮ ಕಣ್ಣೆದರುಗಿನ ನೀರು, ನೆಲ, ಬೆಟ್ಟ, ಕಾಡುಗಳು ಕರಗುತ್ತಿರುವಾಗ ಪದೇ ಪದೇ  ಗಾಂಧೀಜಿ ನೆನಪಾಗುತ್ತಾರೆ. ಗಾಂಧೀಜಿ ನಮ್ಮೆದುರು ಇಲ್ಲದಿದ್ದರೂ ಅವರ ಚಿಂತನೆಗಳು ಆಧುನಿಕ ಜಗತ್ತನ್ನು ಇದೀಗ  ಹಲವು ಬಗೆಯಲ್ಲಿ ಪ್ರೆರೇಪಿಸುತ್ತಿವೆ.
ವರ್ತಮಾನದ ಜಗತ್ತಿನ ಅರ್ಥಶಾಸ್ತ್ರಜ್ಙರ ಪಡೆಯೊಂದು ರೂಪುಗೊಂಡಿದ್ದು, ಅವರೆಲ್ಲರೂ ಜಾಗತೀಕರಣದ ಪ್ರಭಾವದಿಂದ ದಿಕ್ಕೆಟ್ಟ ಆಧುನಿಕ ಜಗತ್ತಿಗೆ ದಿಕ್ಕು ದೆಸೆ ತೋರಿಸುತ್ತಿದ್ದಾರೆ. ನೋಬಲ್ ಪ್ರಶಸ್ತಿ ವಿಜೇತರಾದ ಅಮಾರ್ತ್ಯ ಸೇನ್, ಜೋಸೆಫ್ ಸ್ಲಿಗ್ಲಿಟ್ಜ್, ಮಹಮದ್ ಯೂನಸ್, ಡೊಗ್ಲಾಸ್ ಸಿ. ನಾಥ್. ಇವರ ಚಿಂತನೆಗಳಲ್ಲಿ ಗಾಂದೀಜಿಯವರ ಪ್ರಭಾವಗಳಿವೆ. ಅಷ್ಟೆ ಏಕೆ? ಭಾರತದ ಹಿರಿಯ ಪತ್ರಕರ್ತರಾದ ಪಿ.ಸಾಯಿನಾಥ್, ಕಲ್ಪನಾ ಶರ್ಮ, ಮತ್ತು ರಜನಿ ಕೊಥಾರಿಯವರ ಕೃತಿ ಮತ್ತು ಬರಹಗಳಲ್ಲಿ ಗಾಂಧೀಜಿಯವರ ಜೀವಪರ ಚಿಂತನೆಗಳನ್ನು ನಾವು ಕಾಣಬಹುದು.
ಗಾಂಧೀಜಿ ಬದುಕಿದ್ದಾಗಲೇ ಅವರಿಂದ ಪ್ರಭಾವಿತಗೊಂಡ ಜೆ.ಸಿ. ಕುಮಾರಪ್ಪ ಮತ್ತು ಶೂಮಾಕರ್ ಅರ್ಥಶಾಸ್ತ್ರದ ವಾಖ್ಯಾನಗಳನ್ನು ಬದಲಾಯಿಸಿದ್ದರು. ಪ್ರಕೃತಿ ತನ್ನ ಎಲ್ಲಾ ಘಟಕಗಳ ಸಹಕಾರವನ್ನು ಬಯಸುತ್ತದೆ. ಪ್ರತಿಯೊಂದು ಘಟಕ ತನ್ನಷ್ಟಕ್ಕೆ ತಾನು ಕೆಲಸ ಮಾಡುತ್ತಾ, ಬೇರೆಯ ಘಟಕಗಳು ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ನಡೆದಾಡಬಲ್ಲವನು, ನಡೆಯಲಾರದವನಿಗೆ ನೆರವಾಗುವಂತೆ, ನಿಸರ್ಗದ ಪ್ರತಿಯೊಂದು ಕ್ರಿಯೆಯೂ ಇನ್ನೊಂದರ ಮೇಲೆ ಅವಲಂಬಿತವಾಗಿರುತ್ತದೆ. ಮನುಷ್ಯನ ಹಸ್ತಕ್ಷೇಪ ಅಥವಾ ಹಿಂಸೆಯ ಮೂಲಕ ಈ ಜೈವಿಕ ಸರಪಳಿಯನ್ನು ನಾವು ಕತ್ತರಿಸಬಾರದು. ಇದು ಗಾಂಧಿ ತತ್ವದ ಆಧಾರದ ಮೇಲೆ ಕುಮಾರಪ್ಪನವರು ರೂಪಿಸಿದ ಶಾಶ್ವತ ಅರ್ಥಶಾಸ್ತ್ರದ ನೀತಿಗಳು. 
ಇಂಗ್ಲೆಂಡ್ ಮೂಲದ ಶೂಮಾಕರ್ 1950 ರಿಂದ 1970 ರವರೆಗೆ ಭಾರತ ಮತ್ತು ಬರ್ಮಾ ದೇಶಗಳಲ್ಲಿ ಬ್ರಿಟೀಷ್ ಸರ್ಕಾರದ ಪರವಾಗಿ ಸೇವೆಸಲ್ಲಿಸಿದವರು. ಈ ಎರಡು ದೇಶಗಳ ಬಡತನ ಮತ್ತು ಇಲ್ಲಿನ ಜನರ ಅಸಹಾಯಕತೆಯನ್ನು ಕಣ್ಣಾರೆ ಕಂಡು ತಲ್ಲಣಿಸಿ ಹೋದವರು. 1961 ರಲ್ಲಿ ಭಾರತ ಪ್ರವಾಸ ಕೈಗೊಂಡು, ಇಲ್ಲಿನ ಜನಸಾಮಾನ್ಯರ ದುಃಖ ದುಮ್ಮಾನಗಳಿಗೆ ಕಣ್ಣು ಕಿವಿಯಾದ ಶೂಮಾಕರ್, ಭಾರತದಲ್ಲಿ ಎರಡು ಭಾರತಗಳಿವೆ. ಒಂದು ಉಳ್ಳವರ ಭಾರತ ಮತ್ತೊಂದು ಅಗೋಚರವಾದ ಹಸಿದವರ, ಕಂಗೆಟ್ಟವರ ಭಾರತ ಎಂದು ಪ್ರಥಮ ಬಾರಿಗೆ ಘೋಷಿಸಿದರು. ಬಡತನ ಮತ್ತು ಹಸಿವಿನಿಂದಾಗಿ ಆತ್ಮ ಸ್ಥೈರ್ಯವನ್ನು ಕಳೆದುಕೊಂಡಿರುವ ಭಾರತದ ಬಡ ಜನರ ಸ್ವಾವಲಂಬನೆಗೆ ಇರುವ ಏಕೈಕ ಮಾರ್ಗವೆಂದರೆ, ದುಡಿಯುವ ಕೈಗಳಿಗೆ ಕೆಲಸಕೊಡುವುದು ಎಂಬುದನ್ನು ಅವರು ಕಂಡುಕೊಂಡರು. ಇಂತಹ ಸ್ಥಿತಿಯಲ್ಲಿ ಅವರ ಚಿಂತನೆಗಳಿಗೆ ದಾರಿ ದೀಪವಾದದ್ದು ಗಾಂಧೀಜಿಯವರ ಗ್ರಾಮಸ್ವರಾಜ್ಯ ಪರಿಕಲ್ಪನೆ ಮತ್ತು ಗುಡಿ ಕೈಗಾರಿಕೆಗಳ ಪುನಶ್ಚೇತನ. ಇವುಗಳನ್ನು ಆಧಾರವಾಗಿಟ್ಟುಕೊಂಡು ಅವರು ರಚಿಸಿದ Smal is bueatifull ( ಸಣ್ಣದು ಸುಂದರ) ಎಂಬ ಕೃತಿ ಜಗತ್ ಪ್ರಸಿದ್ಧಿಯಾಯಿತು. ಆಧುನಿಕ ವಿಜ್ಙಾನವನ್ನು ಸಂಪೂರ್ಣವಾಗಿ ತಿರಸ್ಕರಿಸದೆ, ಸ್ಥಳಿಯ ಪ್ರದೇಶಗಳಿಗೆ ಮತ್ತು ಪ್ರತಿಭೆಗಳಿಗೆ ಅನುಕೂಲವಾಗುವಂತೆ ಪರಿಷ್ಕರಿಸಿ ಅವುಗಳನ್ನು ಅಳವಡಿಸಿಕೊಳ್ಳಬೇಕೆಂಬುದು ಅವರ ಧೃಡ ನಿಲುವಾಗಿತ್ತು. ಇದನ್ನು ಅವರು Inter medeiate technology ಎಂದು ಕರೆದರು. ಮಧ್ಯಂತರ ತಂತ್ರಜ್ಙಾನ ಅಥವಾ ಸೂಕ್ತ ತಂತ್ರಜ್ಙಾನ ಎಂದು ಕರೆಯಬಹುದಾದ ಈ ಪರಿಕಲ್ಪನೆಯಲ್ಲಿ ಒಂದು ಪ್ರದೇಶದಲ್ಲಿ ಅಭಿವೃದ್ಧಿಯಾದ ತಂತ್ರಜ್ಙಾನವು, ಭಿನ್ನವಾದ ಸಾಂಸ್ಕೃತಿಕ ಮತ್ತು ಸಾಮಾಜಿಕ ಹಿನ್ನಲೆಯುಳ್ಳ ಮತ್ತೊಂದು  ಪರಿಸರದಲ್ಲಿ ಅನ್ವಯವಾಗಲಾರದು. ಇಂತಹ ಸ್ಥಿತಿಯಲ್ಲಿ ಅಲ್ಲಿನ ಪರಿಸರಕ್ಕೆ ಅನುಗುಣವಾಗಿ ತಂತ್ರಜ್ಙಾನವನ್ನು ನಾವು ಅವಶ್ಯಕತೆಗೆ ತಕ್ಕಂತೆ ಪರಿಷ್ಕರಿಸಿ ಬಳಸಬೇಕು ಹಾಗೂ  ಎಲ್ಲವೂ ಬೃಹತ್ ಆಗಿರಬೇಕು ಅಥವಾ ಕಡಿಮೆ ಮಾನವ ಶಕ್ತಿಯನ್ನು ಬಳಸಿ ಅಧಿಕ ಉತ್ಪಾದನೆ ಮಾಡುವ ಬಂಡವಾಳಶಾಹಿ ಜಗತ್ತಿನ ಲಾಭಕೋರ ಆರ್ಥಿಕ ಚಿಂತನೆಗಳಿಗೆ  ಬದಲಾಗಿ ದುಡಿಯುವ ಸಮೂಹದ ಕೈಗಳಿಗೆ ಕೈ ತುಂಬಾ ಕೆಲಸ ಕೊಡುವ ಗುಡಿ ಕೈಗಾರಿಕೆಗಳು ಮಾತ್ರ ಸಮಾನ ಸ್ಥಿತಿಯಲ್ಲಿ ಸಮಾಜದ ಸ್ವಾಸ್ಥವನ್ನು ಕಾಪಾಡಬಲ್ಲದು ಎಂದು ಶೂಮಾಕರ್ ಬಲವಾಗಿ ನಂಬಿದ್ದರು. ಇಂದು ಅವರ ಮತ್ತು ಗಾಂಧೀಜಿಯವರ ಚಿಂತನೆಯ ಫಲಗಳನ್ನು ಮತ್ತು  ಅನೇಕ ಫಸಲುಗಳನ್ನು ನಾವೀಗ  ಹಲವು ರೂಪದಲ್ಲಿ ಕಾಣುತ್ತಿದ್ದೇವೆ. ಭಾರತದ ನಾಗರೀಕರಿಗೆ ಮತ್ತು ಹೊರಜಗತ್ತಿಗೆ ಅನಾಮಿಕರಂತೆ ಉಳಿದು ಹೋದ ಇಬ್ಬರು ಮಹನೀಯರೆಂದರೆ, ಒಬ್ಬರು ದಿವಂಗತ ಮನ್ಸೂರು ಹೊಡ ಮತ್ತು ಈಗ ನಮ್ಮ ನಡುವೆ ಇರುವ ಸುನಿಲ್ ಸಹಸ್ರಬುಧೆ. ಮನ್ಸೂರು ಹೊಡ, ಶೂಮಾಕರ್ ರಿಂದ ಪ್ರಭಾವಿತರಾದರೆ, ಸುನಿಲ್ ಸಹಸ್ರಬುಧೆ ಗಾಂಧೀಜಿ ಚಿಂತನೆಗಳಿಂದ ಪ್ರಭಾವಿತರಾದವರು.( ಇವರು ಕಾನ್ಪುರದ ಐ.ಐ.ಟಿ. ಸಂಸ್ಥೆಯಲ್ಲಿ ಕನ್ನಡದ ಹಿರಿಯ ರಂಗಕರ್ಮಿ ಪ್ರಸನ್ನ ಅವರ ಸಹಪಾಠಿಯಾಗಿದ್ದವರು. ಇವರ ಶ್ರೇಷ್ಟ ಕೃತಿಯೊಂದು “ ಆಧುನಿಕ ವಿಜ್ಙಾನಕ್ಕೆ ಗಾಂಧಿಯ ಸವಾಲು” ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಪ್ರಕಟವಾಗಿದೆ. ಅನುವಾದಕರು- ಡಾ.ಕೆ.ಪುಟ್ಟಸ್ವಾಮಿ. ಪ್ರಕಾಶಕರು-ಕನ್ನಡ ಪುಸ್ತಕ ಪ್ರಾಧಿಕಾರ)
 ಮನ್ಸೂರ್ ಹೊಡ
1930 ರ ಏಪ್ರಿಲ್ 22 ರಂದು ಬಿಹಾರದ ಚೊಪ್ರಾ ಎಂಬ ಗ್ರಾಮದಲ್ಲಿ ಜನಿಸಿದ. ಮನ್ಸೂರ್ ಹೊಡ, ಅಲಿಘರ್ ವಿಶ್ವವಿದ್ಯಾನಿಲಯದಲ್ಲಿ ವಿಜ್ಙಾನದದಲ್ಲಿ ಪದವಿ ಪಡೆದು, ನಂತರ ಇಂಗ್ಲೆಂಡ್ ಗೆ ತೆರಳಿ ಅಲ್ಲಿನ ಸರ್ರೆ ವಿಶ್ವ ವಿದ್ಯಾನಿಲಯದಿಂದ ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಎಂ.ಎಸ್ಸಿ ಪದವಿ ಪಡೆದರು. ಇಂಗ್ಲೆಂಡ್ ನಲ್ಲಿ ಇದ್ದಾಗ 1968 ರಲ್ಲಿ ಶೂಮಾಕರ್ ಅವರ ಪ್ರಭಾವಕ್ಕೆ  ಒಳಗಾಗಿ, ಅವರ ಚಿಂತನೆಗಳಿಂದ ಪ್ರೇರಿತರಾದರು. ಅಲ್ಲದೆ, ಭಾರತದಲ್ಲಿ ಜನಸಾಮಾನ್ಯರಿಗೆ ನಿಲುಕುವಂತಹ ಸರಳ ತಂತ್ರಜ್ಙಾನ ರೂಪಿಸುವ ನಿಟ್ಟಿನಲ್ಲಿ ತನ್ನ ಸಹೋದರ ಸುರುರ್ ಜೊತೆಗೂಡಿ ಇಂಡಿಯನ್ ಡೆವಲಪ್ ಮೆಂಟ್ ಗ್ರೂಪ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. 1972 ರಲ್ಲಿ ಶೂಮಾಕರ್ ಜೊತೆಗೂಡಿ ಭಾರತಕ್ಕೆ ಬಂದಿದ್ದಾಗ, ಗಾಂಧಿವಾದಿ ಜಯಪ್ರಕಾಶ್ ನಾರಾಯಣ್ ಅವರ ಕರೆಯ ಮೇರೆಗೆ ಭಾರತದಲ್ಲಿ ಉಳಿದು ವಾರಾಣಾಸಿಯಲ್ಲಿ  ಗಾಂಧಿಯನ್ ಇನ್ಸ್ಟಿಟ್ಯೂಟ್  ಸ್ಥಾಪಿಸಿದರು. ಸಂಸ್ಥೆಯ ಮೂಲಕ  ರಿಕ್ಷಾವಾಲಗಳಿಗೆ ಅನುಕೂಲವಾಗುವಂತೆ ಸೈಕಲ್ ಅನ್ನು  ಸುಧಾರಿಸಿದರು, ಕೃಷಿಕರ ಬೇಸಾಯದ ಸಲಕರಣೆಗಳನ್ನು ಅಧುನಿಕ ತಂತ್ರಜ್ಙಾನದ ಮೂಲಕ ಸುಧಾರಿಸಿದರಲ್ಲದೆ, ಚರಕ ಹಾಗೂ ಸಾಂಪ್ರದಾಯಕ ನೇಯ್ಗೆ ಮಗ್ಗಗಳಿಗೆ ಹೊಸ ರೂಪ ನೀಡಿ ನೇಕಾರರಿಗೆ ನೆರವಾದರು. ಅನಂತರ 1972  ಲಕ್ನೊ ನಗರಕ್ಕೆ ತೆರಳಿ ಅಲ್ಲಿ ತಮ್ಮ ಗುರುಗಳಾದ ಶುಮಾಕರ್ ಹೆಸರಿನಲ್ಲಿ ಸಂಸ್ಥೆಯನ್ನು ಅರಂಭಿಸಿ ಸ್ಥಳಿಯ ಕರಕುಶಲಗಾರರು, ಮತ್ತು ರೈತರಿಗೆ ನೆರವಾದರು.

ಇವೊತ್ತಿಗೂ ಆ ಸಂಸ್ಥೆ ನಿರೋದ್ಯೋಗಿಗಳಿಗೆ ಮರಗೆಲಸ, ಕಟ್ಟಡನಿರ್ಮಾಣ, ವಿದ್ಯುತ್ ಉಪಕರಣ, ಮೋಟಾರ್ ದುರಸ್ತಿ, ಹೀಗೆ ಹಲವಾರು ವೃತ್ತಿ ಕೌಶಲ್ಯದ ತರಬೇತಿ ನೀಡುತ್ತಿದೆ. ಇದಕ್ಕೂ ಮುನ್ನ ಅವರು ಭಾರತದ ರೈಲ್ವೆ ಇಲಾಖೆ ಹಾಗೂ ಬಿಹಾರ್ ಕೈಗಾರಿಕೆ ಇಲಾಕೆಯಲ್ಲಿ ಹತ್ತು ವರ್ಷ ಕೆಲಸ ಮಾಡಿ. ಸಣ್ಣ ಕೈಗಾರಿಕೆಗಳಿಗೆ ತಳಹದಿ ನಿರ್ಮಿಸಿದ್ದರು. ಹಿಂದುಳಿದ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ದಿನವೊಂದಕ್ಕೆ 10 ಟನ್ ಸಿಮೆಂಟ್ ತಯಾರಿಸುವ, ಘಟಕ ಹಾಗೂ ಒಂದು ಟನ್ ಸಕ್ಕರೆ ತಯಾರಿಸಬಲ್ಲ ಯಂತ್ರೋಪಕರಣಗಳನ್ನು ಅವಿಷ್ಕಾರಗೊಳಿಸಿದ್ದರು.(ಖಂಡಸಾರಿ ಸಕ್ಕರೆ)
1983 ರಲ್ಲಿ ಮತ್ತೆ ಇಂಗ್ಲೆಂಡ್ ಗೆ ತೆರಳಿ ಲಂಡನ್ ನಗರದಲ್ಲಿ ಗಾಂಧಿ ಪ್ರತಿಷ್ಟಾನವನ್ನು ಸ್ಥಾಪಿಸಿದರು. ಈ ಮೊದಲು ಅವರು ಆರಂಭಿಸಿದ್ದ ಇಂಡಿಯನ್ ಡೆವಲಪ್ ಮೆಂಟ್ ಗ್ರೂಪ್ ಸಂಸ್ಥೆ ಜೊತೆ ಈಗ ಶೂಮಾಕರ್ ಕುಟುಂಬ ಕೂಡ ಕೈ ಜೋಡಿಸಿದೆ. ಮನ್ಸೂರ್ ಮತ್ತು ಶೂಮಾಕರ್ ಕುಟುಂಬದ ಸದಸ್ಯರು  ಭಾರತದಲ್ಲಿ  ಸ್ಥಾಪಿಸಿರುವ ಜೀವಿಕಾ ಎನ್ನುವ ಸಂಸ್ಥೆ ಕಳೆದ ಒಂದು ದಶಕದಲ್ಲಿ ಭಾರತದ ಹಲವು ರಾಜ್ಯಗಳಲ್ಲಿ ಒಂದು ಲಕ್ಷ ಕುಟುಂಬಗಳನ್ನು ಬಡತನದ ರೇಖೆಯಿಂದ ಮೇಲೆತ್ತಲು ಶ್ರಮಿಸಿದೆ. ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ದುಡಿಯುತ್ತಿರುವ ಜೀವಿಕಾ, ಮಹಿಳೆಯರಿಗೆ ಕರ ಕುಶಲ ತರಬೇತಿ, ಅವರ ಆರೋಗ್ಯ,ಸ್ವಸಹಾಯ ಸಂಘಗಳಿಗೆ ಧನ ಸಹಾಯ ಮಾಡುವುದರ ಮೂಲಕ ಘನತೆಯ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡುತ್ತಿದೆ.
ವಾರಣಾಸಿಯಲ್ಲಿ ಮನ್ಸೂರ್ ಹೊಡ ಸ್ಥಾಪಿಸಿದ ಗಾಂಧಿಯನ್ ಇನ್ಸಿಟ್ಯೂಟ್ ಸಂಸ್ಥೆಯನ್ನು ಈಗ ಇನ್ನೊಬ್ಬ ಗಾಂಧಿವಾದಿ ಸುನಿಲ್ ಸಹಸ್ರಬುಧೆ ಮುನ್ನಡೆಸುತ್ತಿದ್ದಾರೆ, ಲೋಕವಿದ್ಯಾ ಎಂಬ ಆಂಧೋಲನದ ಮೂಲಕ ಸ್ಥಳಿಯ ಮಾರುಕಟ್ಟೆಯನ್ನು ರೂಪಿಸಿ, ಈ ಮೂಲಕ ಸ್ಥಳೀಯ ಜನರು ಉತ್ಪಾದಿಸುವ ವಸ್ತುಗಳಿಗೆ ನೆರವಾಗುತ್ತಿದ್ದಾರೆ. ಅಲ್ಲದೆ ಗಾಂಧೀಜಿಯ ಚಿಂತನೆಗಳನ್ನು ಮುರಿದು ಕಟ್ಟುವುದರ ಮೂಲಕ ಅವುಗಳಿಗೆ ಹೊಸ ವಾಖ್ಯಾನ ನೀಡುತ್ತಿದ್ದಾರೆ.

ಮಂಗಳವಾರ, ಜೂನ್ 25, 2013

ಮೂಕ ಪ್ರಾಣಿಗಳ ಮೌನ ರೋಧನ


ಇತ್ತೀಚೆಗಿನ ದಿನಗಳಲ್ಲಿ ಅರಣ್ಯದಲ್ಲಿರಬೇಕಾದ ಪ್ರಾಣಿಗಳೆಲ್ಲವೂ ನಾಡಿನತ್ತ ಮುಖ ಮಾಡುತ್ತಿವೆ .ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ಆವರಿಸಿಕೊಂಡ ಬರದ ಛಾಯೆಯ ಪರಿಣಾಮ ಆಹಾರ, ನೀರು ಇಲ್ಲದೆ ದಿಕ್ಕೆಟ್ಟು ಅಲೆಯುತ್ತಿರುವ ವನ್ಯ ಮೃಗಗಳು, ನಾಡಿಗೆ ಬಂದು ಸಂಘರ್ಷ ಮತ್ತು ಸಾವಿನ ಮೂಲಕ  ದಿನ ನಿತ್ಯ ಸುದ್ಧಿಯಾಗುತ್ತಿವೆ. ಕಳೆದ ಮೂರು ದಿನಗಳಿಂದ ಬೆಂಗಳೂರಿನ ಹೊರವಲಯದಲ್ಲಿ ಕಾಣಿಸಿಕೊಂಡ ಕಾಡಾನೆಗಳ ಗುಂಪು ಸೃಷ್ಟಿಸಿದ ಆತಂಕ ಜನಸಾಮಾನ್ಯರನ್ನು ಬೆಚ್ಚಿಬೀಳಿಸಿದೆ. ಇದೊಂದು ರೋಚಕ ಸುದ್ಧಿಯೆಂಬಂತೆ ನಮ್ಮ ದೃಶ್ಯ ಮಾಧ್ಯಮಗಳು ಒಂದೇ ಸಮನೆ ಗಂಟಲು ಹರಿದುಕೊಳ್ಳುತ್ತಿವೆ. ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಲು ಹೊರಡುವ ನಮ್ಮ ಅರಣ್ಯ ಇಲಾಖೆ ಮತ್ತು ಸರ್ಕಾರ ಅಕ್ಷರಶಃ ಕಂಗೆಟ್ಟು ಕುಳಿತಿವೆ. ಮನುಷ್ಯ ಮತ್ತು ಪ್ರಾಣಿಗಳ ಈ ಸಂಘರ್ಷದ ಹಿಂದಿರುವ ಕಟುವಾಸ್ತವವನ್ನು ಗ್ರಹಿಸಲಾರದ ನಮ್ಮ ಜನಸಾಮಾನ್ಯರು ಆನೆಗಳಿಗೆ ಪಟಾಕಿ, ಸಿಡಿಮದ್ದು ಗಳ ಮೂಲಕ ಬೆದರಿಕೆ ಹಾಕಿ ಮೋಜಿನ ಮೂಲಕ ಮನರಂಜನೆ ಪಡೆಯುತ್ತಿದ್ದಾರೆ.  ಈ ದಿನ ಪ್ರಕಟವಾದ ವಿಜಯಕರ್ನಾಟಕದ ಮುಖಪುಟದ ವರದಿ ಮತ್ತು ಪ್ರಜಾವಾಣಿಯ ಸಂಪಾದಕೀಯ  ಮಾತ್ರ ವ್ಯವಸ್ಥೆಯ ಕಣ್ಣು ತೆರಸುವಂತಿವೆ.
ಕಳೆದ ಒಂದು ದಶಕದಲ್ಲಿ  ಭಾರತದ ಆನೆ, ಹುಲಿ ಮತ್ತು ಚಿರತೆಗಳ ಸಂತತಿ  ಗಣನೀಯವಾಗಿ ಕುಸಿಯುತ್ತಿದೆ. ಇವುಗಳಿಗೆ ಮೀಸಲಿಟ್ಟಿದ್ದ ಅಭಯಾರಣ್ಯಗಳು ಉಳ್ಳವರ ಪಾಲಿನ ಮೋಜಿನ ತಾಣಗಳಾಗಿ ಪರಿವರ್ತನೆಗೊಂಡಿವೆ. ಪ್ರವಾಸಿಗರಾಗಿ, ಬೇಟೆಗಾರರಾಗಿ, ನಿಸರ್ಗ ಪ್ರೇಮಿಗಳಾಗಿ ಹೀಗೆ ಹಲವು ರೂಪದಲ್ಲಿ  ಅರಣ್ಯ ಪ್ರಪಂಚಕ್ಕೆ ಕಾಲಿಡುತ್ತಿರು ಮಾನವ ಪ್ರಾಣಿಗಳ ಹಸ್ತಕ್ಷೇಪದಿಂದಾಗಿ ವನ್ಯ ಮೃಗಗಳು ತಮ್ಮ ನಿಸರ್ಗ ಸಹಜ ಬದುಕನ್ನು ಕಳೆದುಕೊಂಡಿವೆ. ಭಾರತದಲ್ಲಿ ನಿಸರ್ಗದ ಸಮತೋಲನ ತಪ್ಪಿ ದಶಕಗಳೇ ಉರುಳಿಹೋಗಿವೆ. ಆಧುನಿಕತೆ ಮತ್ತು ಅಭಿವೃದ್ಧಿ ನಮಗೆ ಎಲ್ಲವನ್ನು ವಾಣಿಜ್ಯ ಮತ್ತು ಮನರಂಜನೆಯ ದೃಷ್ಟಿಯಿಂದ ನೋಡುವುದನ್ನು ಕಲಿಸಿದೆ.

ಏಷ್ಯಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಆನೆಗಳನ್ನು ಪಡೆದ ಕೀರ್ತಿ ಒಂದು ಕಾಲದಲ್ಲಿ ಕರ್ನಾಟಕಕ್ಕೆ ಇತ್ತು. ( 28 ಸಾವಿರ ಆನೆಗಳು) 2010 ರ ಗಣತಿಯ ಪ್ರಕಾರ 5350 ರಿಂದ 6230 ಆನೆಗಳು ಇರಬಹುದೆಂದು ಅಂದಾಜಿಸಲಾಗಿದೆ. ಒಂದು ಸಮಾಧಾನಕರ ಸಂಗತಿಯೆಂದರೆ, 1983ರಲ್ಲಿ 3579 ಸಂಖ್ಯೆಯಲ್ಲಿದ್ದ ಆನೆಗಳ ಸಂತತಿ ವೃದ್ಧಿಸಿದೆ. 10 ನೇ ಶತಮಾನದಿಂದ ಕರ್ನಾಟಕದ  ಹೊಯ್ಸಳರು, ಚಾಲಿಕ್ಯರು, ವಿಜಯನಗರದ ಅರಸರು ಮತ್ತು ಟಿಪ್ಪುಸುಲ್ತಾನ್ ನಂತರ ಮೈಸೂರು ಅರಸರು ಇವರುಗಳ ಪ್ರೀತಿಯಿಂದಾಗಿ ರಾಜ್ಯದಲ್ಲಿ ಆನೆಗಳ ಸಂತತಿ ಈವರೆಗೆ ಉಳಿದುಕೊಂಡು ಬಂದಿದೆ.
ಕಳೆದ ಐದು ವರ್ಷಗಳಲ್ಲಿ ಆನೆಗಳು ತಮ್ಮ ವ್ಯಾಪ್ತಿ ಪ್ರದೇಶವನ್ನು  ಬಿಟ್ಟು ನಾಡಿನತ್ತ ಮುಖ ಮಾಡಿರುವುದು ನಿಜಕ್ಕೂ ಆತಂಕಕಾರಿಯಾದ ವಿಷಯ. ಆದರೆ, ಈ ಕುರಿತಂತೆ ನಮ್ಮ ಅರಣ್ಯ ಇಲಾಖೆ ತಲೆಕೆಡಿಸಿಕೊಂಡ ಉದಾಹರಣೆಗಳಿಲ್ಲ. ಹೋಗಲಿ ರಾಜ್ಯ ಹೈಕೋರ್ಟ್ ಸೂಚನೆ ಮೇರೆಗೆ 2012 ಸೆಪ್ತಂಬರ್ ತಿಂಗಳಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ ಹಿರಿಯ ವಿಜ್ಙಾನಿ ಪ್ರೋ.ರಮಣ್ ಸುಕುಮಾರ್ ನೇತೃತ್ವದ ಹದಿಮೂರು ತಜ್ಙ ಸದಸ್ಯರುಗಳನ್ನು ಒಳಗೊಂಡ  ಆನೆ ಕಾರ್ಯಪಡೆಯ (Elephant task force ) ತಂಡವೊಂದು 141 ಪುಟಗಳ ವರದಿಯನ್ನು ಸಲ್ಲಿಸಿದೆ. 
ಈ ವರದಿಯಲ್ಲಿ ಕೂಲಂಕುಶವಾಗಿ ಕರ್ನಾಟಕದ 19 ಅರಣ್ಯವಲಯಗಳಲ್ಲಿ ಹಂಚಿಹೋಗಿರುವ ಆನೆಗಳ ಸಂತತಿ, ಮತ್ತು ಬಂಡಿಪುರ, ಮಳವಳ್ಳಿ, ಸಾವನ್ ದುರ್ಗ, ಅರಕಲಗೂಡು, ಆಲೂರು, ಸಕೇಲೇಶ್ವರ ಈ ಪ್ರದೇಶಗಳಲ್ಲಿ ಆನೆಗಳ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು, ರೈತರ ವಿದ್ಯತ್ ಬೇಲಿಗೆ ಮತ್ತು  ದಂತಕ್ಕಾಗಿ ಬಲಿಯಾಗುತ್ತಿರುವ ಆನೆಗಳ ಸ್ಥಿತಿ ಮತ್ತು ಅಭಯಾರಣ್ಯಗಳಲ್ಲಿ ತಲೆಯೆತ್ತುತ್ತಿರುವ ರೆಸಾರ್ಟ್ ಗಳು, ಆನೆಗಳ ಸಹಜ ವಲಸೆಗೆ ಇದ್ದ ಕಾರಿಡಾರ್ ಗಳು ಮುಚ್ಚಿ ಹೋಗಿರುವ ಸಂಗತಿ ಎಲ್ಲವನ್ನೂ ಅಂಕಿ ಅಂಶಗಳ ಸಹಿತ ವಿವರಿಸಿ, ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಸೂಚಿಸಲಾಗಿದೆ. ಅಲ್ಲದೆ ಸಕಲೇಶ್ವರ ಮತ್ತು ಹಾಸನದ ಆಲೂರು ಬಳಿ ರೈತರ ಜಮೀನಿಗೆ ನುಗ್ಗಿ ಹಾನಿಯುಂಟು ಮಾಡುತ್ತಿರು ಓರ್ವ ಸಲಗ ಸೇರಿದಂತೆ 26 ಆನೆಗಳನ್ನು ಸ್ಥಳಾಂತರಿಸಲು ವರದಿಯಲ್ಲಿ ಸೂಚಿಸಲಾಗಿದೆ. ಆದರೆ ಇದನ್ನು ಓದಲಾರದಷ್ಟು ಅವಿವೇಕಿಗಳು ಮತ್ತು ಸೋಮಾರಿಗಳಾಗಿರುವ ನಮ್ಮ ಅರಣ್ಯಾಧಿಕಾರಿಗಳು, ಅರಣ್ಯದ ನಡುವೆ ಇರುವ ಐಷಾರಾಮದ ಅತಿಥಿಗೃಹದಲ್ಲಿ ತಮ್ಮ ಹೆಂಡತಿ, ಮಕ್ಕಳು ಮತ್ತು ಸ್ನಹಿತರ ಜೊತೆ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿದ್ದಾರೆ. ವಿದ್ಯುತ್ ತಂತಿ ಬೇಲಿಗೆ ಸಿಲುಕಿ ಆನೆಗಳು ಸಾಯುತ್ತಿರುವುದನ್ನು ಗಮನಿಸಿದ ರಾಜ್ಯ ಉಚ್ಛ ನ್ಯಾಯಾಲಯ ಕಳೆದ ವಾರ ಸ್ವಯಂಪ್ರೇರಿತವಾಗಿ ಅರ್ಜಿಯೊಂದನ್ನು ದಾಖಲಿಸಿಕೊಂಡು ಅರಣ್ಯ ಇಲಾಖೆಗೆ ನೋಟೀಸ್ ಜಾರಿ ಮಾಡಿದೆ. ಈ ಕೂಡಲ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ, ಭವಿಷ್ಯದಲ್ಲಿ ದುರಂತದ ಅಧ್ಯಾಯವೊಂದು ನಮಗಾಗಿ ಕಾದಿದೆ ಎಂಬುದನ್ನು ನಾವು ಮರೆಯಬಾರದು. ಈ ನಿಟ್ಟಿನಲ್ಲಿ ನಮ್ಮ ಮಾಧ್ಯಮಗಳು ವಿಶೇಷವಾಗಿ ದೃಶ್ಯ ಮಾಧ್ಯಮಗಳು ಆನೆಗಳು ನಾಡಿಗೆ ಬಂದ ಸಂದರ್ಭದಲ್ಲಿ  ದಿನವಿಡಿ ಕಿಟಾರನೆ ಕಿರುಚಿಕೊಳ್ಳುವುದನ್ನು ಬಿಟ್ಟು ಸಮಸ್ಯೆಯ ಪರಿಹಾರಕ್ಕೆ ತಜ್ಙರ ಜೊತೆ ಕುಳಿತು ಚರ್ಚಿಸಿ ಪರಿಹಾರ ಹುಡುಕಬೇಕಿದೆ. ಕಳೆದ 2012 ರ ಜನವರಿಯಿಂದ ಡಿಸಂಬರ್ ವರೆಗೆ ಕರ್ನಾಟಕದಲ್ಲಿ 183 ಆನೆಗಳು ಮೃತಪಟ್ಟಿವೆ. ಕ್ರಮವಾಗಿ ಜನವರಿ-9, ಪೆಬ್ರವರಿ-12, ಮಾರ್ಚಿ-12, ಏಪ್ರಿಲ್-18, ಮೇ-30, ಜೂನ್-25, ಜುಲೈ-19, ಆಗಸ್ಟ್-15, ಸೆಪ್ಟಂಬರ್-16, ಅಕ್ಟೋಬರ್-12, ನವಂಬರ್-9, ಡಿಸಂಬರ್-6 ಹೀಗೆ ಸಾವನ್ನಪ್ಪಿವೆ. ಇದರಲ್ಲಿ, ದಂತಕ್ಕಾಗಿ ಬೇಟೆ, ಅಪಘಾತ, ವಿದ್ಯುತ್ ಸ್ಪರ್ಶ ಮುಂತಾದ ಅನಾಹುತಗಳಿಗಿಂತ ಬೇಸಿಗೆಯ ದಿನಗಳಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟ ಸಂಖ್ಯೆ ಮತ್ತು ಆಹಾರ, ನೀರಿಲ್ಲದೆ ಸತ್ತ ಆನೆಗಳ ಸಂಖ್ಯೆ ಹೆಚ್ಚಿನಾದಾಗಿದೆ. ಪ್ರತಿದಿನ ಒಂದು ಆನೆಗೆ 200 ರಿಂದ 250 ಕೆ.ಜಿ.ಯಷ್ಟು ಹಸಿರು ಹುಲ್ಲು, ಬಿದಿರು ಮತ್ತು 150 ಲೀಟರ್ ನೀರು ಬೇಕಾಗಿದೆ. ಈ ಸಂಗತಿಯನ್ನು ನಾವು ಅರ್ಥೈಸಿಕೊಂಡರೆ, ಈ ಮೂಕ ಪ್ರಾಣಿಗಳು ನಾಡಿಗೇಕೆ ನುಗ್ಗಿ ಬರುತ್ತಿವೆ ಎಂಬುದು ಮನದಟ್ಟಾಗುತ್ತದೆ. ದಕ್ಷಿಣ ಭಾರದಲ್ಲಿ ಆನೆಗಳ ದುರಂತ ಒಂದು ಬಗೆಯದಾದರೆ, ಪೂರ್ವ ಭಾರತದ ರಾಜ್ಯಗಳ ಆನೆಗಳ ದುರಂತ ಇನ್ನೊಂದು ಬಗೆಯದು.
ಒರಿಸ್ಸಾ ರಾಜ್ಯದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ 310 ಆನೆಗಳು ಮೃತಪಟ್ಟಿವೆ. ಇವುಗಳಲ್ಲಿ ಶಿಕಾರಿ, ಸಹಜ ಸಾವು, ಇವುಗಳಿಗಿಂತ, ರೈಲಿಗೆ ಸಿಕ್ಕಿ ಸಾವನ್ನಪ್ಪಿದ ಆನೆಗಳ ಸಂಖ್ಯೆ ಹೆಚ್ಚಿನಾದಾಗಿದೆ. 2012ರ ಡಿಸಂಬರ್ 29 ರಂದು ಹೌರ-ಚೆನ್ನೈ ನಡುವೆ ಸಂಚರಿಸುವ ಕೋರಮಂಡಲ್ ಎಕ್ಸ್ ಪ್ರಸ್ ರೈಲಿಗೆ ಸಿಲುಕಿ ಗಂಜಾಂ ಜಿಲ್ಲೆಯ ಅರಣ್ಯದಲ್ಲಿ 8 ಆನೆಗಳು ಮೃತಪಟ್ಟವು. ಒರಿಸ್ಸಾದಲ್ಲಿ 14 ಆನೆಗಳ ಕಾರಿಡಾರ್ ಗಳು ಇದ್ದು, ಅಲ್ಲಿರುವ ಆನೆಗಳ ಸಂಖ್ಯೆ ಕೇವಲ 1930 ಮಾತ್ರ. ಪಶ್ಚಿಮ ಬಂಗಾಳದಲ್ಲಿ ವಿಶೇಷವಾಗಿ ಸಿಲಿಗುರಿ- ಅಲಿಪುರ್ದರ್ ನಡುವಿನ  168 ಕಿ.ಮಿ. ರೈಲು ಮಾರ್ಗದಲ್ಲಿ 8 ವರ್ಷಗಳ ಅವಧಿಯಲ್ಲಿ ರೈಲಿಗೆ ಸಿಲುಕಿ 43 ಆನೆಗಳು ಮೃತಪಟ್ಟಿವೆ. ಅರಣ್ಯ ಪ್ರದೇಶದಲ್ಲಿ ಸಂಚರಿಸುವಾಗ ರೈಲಿನ ವೇಗ 40 ಕಿ.ಮಿ. ಇರಬೇಕು ಎಂಬ ನಿಯಮವನ್ನು ಭಾರತೀಯ ರೈಲ್ವೆ ಇಲಾಖೆ ಗಾಳಿಗೆ ತೂರಿದೆ. ಭಾರತದ ಅರಣ್ಯಗಳಲ್ಲಿ ಒಟ್ಟು 88 ಆನೆಗಳ ಕಾರಿಡಾರ್ ಗಳು ಇದ್ದು ಇವುಗಳ ಸುರಕ್ಷತೆಗೆ ಅರಣ್ಯ ಇಲಾಖೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಕನಿಷ್ಟ ಅರಣ್ಯ ಪ್ರಧೇಶಗಳಲ್ಲಿ ರೈಲು ಮಾರ್ಗ ಇರುವ ಇಕ್ಕೆಲಗಳಲ್ಲಿ ತಂತಿ ಬೇಲಿ ನಿರ್ಮಾಣ ಮಾಡಿ, ಪ್ರತಿ ಒಂದು ಕಿಲೋಮೀಟರ್ ದೂರದಲ್ಲಿ  ಹಳಿಗಳ ಕೆಳಗೆ 10 ಅಡಿ ಅಗಲ ಮತ್ತು 10 ಅಡಿ ಆಳದ ಸುರಂಗ ರಸ್ತೆ ನಿರ್ಮಾಣವಾದರೆ, ಪ್ರಾಣಿಗಳ ಚಲನಕ್ಕೆ ಧಕ್ಕೆ ಬರುವುದಿಲ್ಲ, ಜೊತೆಗೆ ಅವುಗಳು ಅಪಘಾತಕ್ಕೆ ಬಲಿಯಾಗುವುದನ್ನು ತಪ್ಪಿಸಬಹುದು. ಆದರೆ, ಉಳ್ಳವರು ಕುಡಿದ ನೀರು ಹೊಟ್ಟೆಯಲ್ಲಿ ಅಲುಗಾಡದ ಹಾಗೆ ಕಾರಿನಲ್ಲಿ ಚಲಿಸಲು  ಪ್ರತಿ ಕಿಲೋಮೀಟರ್ ಗೆ ನಾಲ್ಕರಿಂದ ಆರು ಕೋಟಿ ರೂಪಾಯಿ ವೆಚ್ಚದಲ್ಲಿ ಹೆದ್ದಾರಿ ನಿರ್ಮಿಸಲು ಆಸಕ್ತಿ ತೋರುವ  ನಮ್ಮ ಸರ್ಕಾರಗಳಿಗೆ ಮೂಕ ಪ್ರಾಣಿಗಳ ಪ್ರಾಣದ ಬಗ್ಗೆ ಯಾವ ಕಾಳಜಿಯೂ ಇದ್ದಂತಿಲ್ಲ. ಏಕೆಂದರೆ, ಹೆದ್ದಾರಿಯ ಶುಲ್ಕದ ನೆಪದಲ್ಲಿ ಜನರ ಮೈ ಚರ್ಮ ಸುಲಿಯುವ ಹಾಗೆ ಪ್ರಾಣಿಗಳ ಚರ್ಮ ವನ್ನು ಸುಲಿಯಲಾಗದು ಎಂಬ ಸತ್ಯವನ್ನು ನಮ್ಮ ಸರ್ಕಾರಗಳು ಕಂಡುಕೊಂಡಿವೆ.


ಸೋಮವಾರ, ಜೂನ್ 24, 2013

ಮುಂಗಾರು ಮಳೆ ಮತ್ತು ಬಿತ್ತನೆಯ ಬವಣೆಗಳು

ಅದೊಂದು ಕಾಲವಿತ್ತು. ಮೊದಲ ಮುಂಗಾರು ಹನಿ ಇಳೆಗೆ ಬಿದ್ದೊಢನೆ ರೈತನ ಎದೆಯೊಳಗೆ ಪುಳಕ, ರೋಮಾಂಚನಗಳು ಉಂಟಾಗುತ್ತಿದ್ದವು. ಮಳೆ ಬಿದ್ದ ಮಾರನೆ ದಿನ ಎತ್ತು, ನೇಗಿಲ ಜೊತೆ ಭೂಮಿಯತ್ತ ಹೊರಟ ಅವನ ನಡಿಗೆಯಲ್ಲಿ, ಯುದ್ಧರಂಗಕ್ಕೆ ಹೊರಟ ಯೋಧನೊಬ್ಬ ಗತ್ತು ಇರುತ್ತಿತ್ತು. ಈಗ ಬಿತ್ತನೆ ಬೀಜಗಳ ಪರದಾಟ, ರಸಗೊಬ್ಬರಕ್ಕಾಗಿ ಅಹಾಕಾರ, ಕೂಲಿ ಕಾರ್ಮಿಕರ ಸಮಸ್ಯೆ, ಹೀಗೆ ಹತ್ತಾರು ಸಂಕಟಗಳ ಸರಮಾಲೆ ಮುಂಗಾರಿನ ಮಳೆಯ ಜೊತೆ ಅವನ ಕೊರಳಿಗೆ ಸುತ್ತಿಕೊಳ್ಳುತ್ತಿವೆ. ಇವೆಲ್ಲವೂ ವ್ಯವಸ್ಥೆ ಸೃಷ್ಟಿಸಿದ ನರಕವೇನಲ್ಲ, ಬದಲಾಗಿ ತನ್ನ ಸ್ವಯಂಕೃತ ಅಪರಾಧದಿಂದಾಗಿ ರೈತನೂ ಸಹ ಭಾಗಿಯಾಗಿದ್ದಾನೆ.
ಪ್ರತಿ ಮುಂಗಾರು ಸಮಯದಲ್ಲಿ ಬಿತ್ತನೆ ಚಟುವಟಿಕೆ ಆರಂಭಗೊಳ್ಳುತ್ತಿದ್ದಂತೆ, ಬಿತ್ತನೆ ಬೀಜಗಳ ಕಾಳಸಂತೆಯ ಮಾರಾಟಗಾರರು ಚುರುಕಾಗುತ್ತಾರೆ. ಬೀಜಕಂಪನಿಗಳು ದಿಡೀರನರ ಬೆಲೆ ಏರಿಸಿ ರೈತ ಸಮುದಾಯದ ಸುಲಿಗೆಗೆ ಕೈಜೋಡಿಸುತ್ತವೆ. ಈ ದೇಶದಲ್ಲಿ ಕೃಷಿ ರಂಗದ ಮೇಲೆ ನಿಖರವಾದ ನಿಯಂತ್ರಣವಿಲ್ಲದ ಅಸಮರ್ಥ ಸರ್ಕಾರಗಳೂ ಇದರಲ್ಲಿ ಭಾಗಿಯಾಗಿವೆ.
ಭಾರತದಲ್ಲಿ ಪ್ರತಿವರ್ಷ 15 ಸಾವಿರ ಕೋಟಿ ರೂಪಾಯಿಗಳ ಬಿತ್ತನೆ ಬೀಜಗಳ ವ್ಯಾಪಾರ ನಡೆಯುತ್ತಿದೆ.  ಈಗಲೂ ದೇಶದ ಅರ್ಧಕ್ಕಿಂತ ಕಡಿಮೆ ರೈತರು ತಮ್ಮ ಸಾಂಪ್ರದಾಯಕ ಬಿತ್ತನೆ ಬೀಜಗಳನ್ನು ಬೇಸಾಯಕ್ಕಾಗಿ  ಬಳಸುತ್ತಿದ್ದಾರೆ. ವಿಶೇಷವಾಗಿ ಭತ್ತ, ರಾಗಿ, ಜೋಳ, ಗೋಧಿ ಮುಂತಾದ ಆಹಾರ ಧಾನ್ಯಗಳ ಬೀಜವನ್ನು ರೈತರು ತಾವೇ ಸಂಗ್ರಹಿಸಿ ಇಟ್ಟುಕೊಂಡು, ಕೃಷಿಗೆ ಉಪಯೋಗಿಸುತ್ತಿದ್ದಾರೆ.
ದೇಶದ ಹಲವಾರು ರಾಜ್ಯ ಸರ್ಕಾರಗಳು ಬೀಜ ನಿಗಮವನ್ನು ಸ್ಥಾಪಿಸಿ, ಕೈಗೆಟುಕುವ ಬೆಲೆಯಲ್ಲಿ ರೈತರಿಗೆ ವಿತರಣೆ ಮಾಡುತ್ತಿದ್ದರೂ ಸಹ,  ಅವುಗಳು ಹೈಬ್ರಿಡ್ ಬೀಜಗಳು, ಅವುಗಳ ಮರು ಬಳಕೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ರೈತರು ಅವುಗಳನ್ನು ತಿರಸ್ಕರಿಸುತ್ತಾ ಬಂದಿದ್ದರು. ಆದರೆ, ಇತ್ತೀಚೆಗೆ ಎಲ್ಲಾ ವಿಧವಾದ ಸಾಂಪ್ರದಾಯಕ ಬೀಜಗಳು ಕಲುಷಿತಗೊಳ್ಳುತ್ತಾ ಬಂದಿವೆ. ಹಾಗಾಗಿ ಅಸಲಿ ಮತ್ತ ನಕಲಿ ನಡುವಿನ ಗಡಿರೇಖೆ ಅಳಿಸಿ ಹೋಗಿದೆ.
ಭಾರತದಲ್ಲಿ ಶೇಕಡ 87 ರಷ್ಟು ಆಹಾರ ಧಾನ್ಯ ಬೆಳೆಗಳ ಬೀಜಗಳು ಮತ್ತು ಶೇಕಡ 13 ರಷ್ಟು ತರಕಾರಿ ಬೆಳೆಗಳ ಬೀಜಗಳು ರೈತರಿಂದ ಬಳಕೆಯಾಗುತ್ತಿವೆ. ಜಗತ್ತಿನಲ್ಲಿ ಎರಡನೇ  ಅತಿ ಹೆಚ್ಚು ಬೀಜ ಬಳಕೆ ಮತ್ತು ಕೃಷಿ ಚಟುವಟಿಕೆಯ ರಾಷ್ಟ್ರವಾಗಿರುವ ಭಾರತದ ಮೇಲೆ ಎಲ್ಲಾ ಬಹುರಾಷ್ಟ್ರೀಯ ಬೀಜ ಕಂಪನಿಗಳ ಕಣ್ಣು ಬಿದ್ದಿದೆ. ಈ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸುವುದರ ಮೂಲಕ  ದುಬಾರಿ ಬೆಲೆಗೆ ಬಿತ್ತನೆ ಬೀಜ ಮತ್ತು ರಸಾಯನಿಕ ಗೊಬ್ಬರಗಳನ್ನು ಮಾರುವ ಪ್ರವೃತ್ತಿಯೂ ಸಹ ಹೆಚ್ಚಾಗತೊಡಗಿದೆ.
ಹೈಬ್ರಿಡ್ ಬೀಜಗಳು ಕುರಿತಂತೆ ಯಾವುದೇ ಉತ್ತರದಾಯಕತ್ವ ಕಂಪನಿಗಳಿಗೆ ಇಲ್ಲವಾದ ಕಾರಣ ಇಂತಹ ಬೀಜಗಳ ಬಳಕಗೆ ರೈತ ಹಿಂಜರಿಯುತ್ತಾನೆ. ಇವೊತ್ತಿಗೂ ಅನೇಕ ತರಕಾರಿ, ಹತ್ತಿ, ಜೋಳ ಮುಂತಾದ ಬೆಳೆಗಳ ಫಸಲು ಕೈ ಕೊಟ್ಟ ಉದಾಹರಣೆಗಳು ದಿನ ನಿತ್ಯ ಸುದ್ಧಿಯಾಗುತ್ತಿವೆ. ಇಳುವರಿ ಸ್ವಲ್ಪ ಕಡಿಮೆಯಾದರೂ ಚಿಂತೆ ಇಲ್ಲ, ರಸಗೊಬ್ಬರ, ಕೀಟನಾಶಕದಂತಹ ದುಬಾರಿ ವೆಚ್ಚದ ತಲೆನೋವುಗಳು ಇರುವುದಿಲ್ಲ ಎಂಬ ಏಕೈಕ ಕಾರಣದಿಂದಾಗಿ ರೈತರು ದೇಶೀ ಬಿತ್ತನೆ ಬೀಜಗಳ ಮೊರೆ ಹೋಗಿದ್ದಾರೆ. ಆದರೆ, ಎಣ್ಣೆಕಾಳು ಮತ್ತು ಮುಸುಕಿನ ಜೋಳದಂತಹ ವಾಣಿಜ್ಯಬೆಳೆಗಳಿಗೆ ಮಾತ್ರ  ಹೈಬ್ರಿಡ್ ಬೀಜಗಳನ್ನು ಬಳಸುತ್ತಿದ್ದಾರೆ.

ಕೃಷಿ ರಂಗದ ದುಷ್ಪಾರಿಣಾಗಳು ಮತ್ತು ಅವ್ಯವಸ್ಥೆಗಳನ್ನು ಅರಿತ ಪರಿಣಿತ ಹಾಗೂ ಪ್ರಗತಿಪರ ರೈತರು ಇತ್ತೀಚೆಗೆ ಸಾವಯವ ಕೃಷಿಗೆ ಹೊರಳುತ್ತಿದ್ದು, ದುಬಾರಿ ವೆಚ್ಚದ ಕೃಷಿಗೆ ವಿದಾಯ ಹೇಳಿದ್ದಾರೆ ಅಲ್ಲದೆ, ಏಕಬೆಳೆಯ ಪದ್ಧತಿಗೆ ಜೋತು ಬೀಳದೆ, ಮಿಶ್ರ ಬೆಳೆಗಳ ಪ್ರಯೋಗ ಮಾಡುವುದರ ಮೂಲಕ ಯಶಸ್ವಿಯಾಗಿದ್ದಾರೆ.
ರೈತರ ಸ್ವಾವಲಂಬನೆಯ ಈ ಬದುಕಿನ ಮೇಲೆ ಕಣ್ಣಿಟ್ಟಿರುವ ಬಹುರಾಷ್ಟ್ರೀಯ ಬೀಜ ಕಂಪನಿಗಳು, ಈಗಾಗಲೇ ಏಷ್ಯಾ ರಾಷ್ಟ್ರಗಳ ಬಹುತೇಕ ಆಹಾರಧಾನ್ಯ, ಮತ್ತು  ಹಣ್ಣು ಹಾಗೂ ತರಕಾರಿ ಬೀಜಗಳನ್ನು ಕುಲಾಂತರಗೊಳಿಸಿ ಅವುಗಳ ಸಂತಾನ ಶಕ್ತಿಯನ್ನು ಹರಣಗೊಳಿಸುತ್ತಿವೆ. ಈ ರೀತಿ ಕ್ರೌರ್ಯಕ್ಕೆ ತುತ್ತಾಗಿ, ಏಷ್ಯಾ ರಾಷ್ಟ್ರಗಳಲ್ಲಿ ಅವಸಾನದ ಅಂಚಿಗೆ ತಲುಪಿರುವ ಬೀಜಗಳ ವಿವರ ಈ ಕೆಳಗಿನಂತಿವೆ.

ಒಂದು- ಆಹಾರ ಧಾನ್ಯ ಬೆಳೆಗಳ ಬೀಜಗಳು
ಬಾರ್ಲಿ, ಗಿಡ್ಡಗೋಧಿ, ಭತ್ತ, ಪ್ರೋಸೊ ಎಂಬ ಒರಟು ಧಾನ್ಯ, ಇತ್ಯಾದಿ

ಎರಡು – ತರಕಾರಿ ಬೀಜಗಳು
ಕೆಂಪು ಅವರೆ, ಎಲೆಕೋಸು, ಕ್ಯಾರೆಟ್, ಕುಂಬಳ, ಚೀನಾ ಕೋಸು, ಚಿಟ್ಟೆ ಅವರೆ, ಈರುಳ್ಳಿ, ಬಟಾಣಿ, ಮೂಲಂಗಿ ಮುಂತಾದವು

ಮೂರು- ಹಣ್ಣುಗಳ ಬೀಜಗಳು
ಸೇಬು, ಅಂಜೂರ, ದ್ರಾಕ್ಷಿ, ನಿಂಬೆ, ಬಾಳೆ, ಮಾವು, ಇತ್ಯಾದಿ.
ಇನ್ನೊಂದು ದಶಕದಲ್ಲಿ ನಮ್ಮ ಸಾಂಪ್ರದಾಯಕ ಹಣ್ಣು ಮತ್ತು ತರಕಾರಿ ಹಾಗೂ ಆಹಾರ ಧಾನ್ಯಗಳ ಫಸಲನ್ನು ನಾವು ಪಠ್ಯ ಪುಸ್ತಕದಲ್ಲಿ ಮತ್ತು ಸಂಗ್ರಹಿಸಿ ಇಡಲಾದ ಚಿತ್ರಗಳಲ್ಲಿ ನೋಡುವ ಸಾಧ್ಯತೆಗಳು ಹೆಚ್ಚಾಗಿವೆ.


ಶುಕ್ರವಾರ, ಜೂನ್ 21, 2013

ಹಸಿವು, ಬಡತನ ಮತ್ತು ಆಹಾರ ಭದ್ರತೆ

ಭಾರತದ ಪ್ರಜಾಪ್ರಭುತ್ವದ ದೇಗುಲ ಎನಿಸಿಕೊಂಡಿರುವ ಸಂಸತ್ತಿನಲ್ಲಿ ಆಹಾರಭದ್ರತೆ ಕುರಿತಾದ ಮಸೂದೆ ರಾಜಕೀಯ ಪಕ್ಷಗಳ ಬೌದ್ಧಿಕ ದಿವಾಳಿತನದಿಂದಾಗಿ ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿದೆ.  ದೇಶದ ಕೋಟ್ಯಾಂತರ ಜನ ಇಂದಿಗೂ ಹಸಿವಿನಿಂದ ಬಳಲತ್ತಾ ಖಾಲಿ ಹೊಟ್ಟೆಯಲ್ಲಿ ದಿನ ರಾತ್ರಿಮಲಗುತ್ತಿದ್ದಾರೆ. ಇಲ್ಲಿನ ಜನರ ಬಡತನ ಮತ್ತು ಅನಕ್ಷರತೆ,ಹಾಗೂ ಅಜ್ಙಾನಗಳು ಪ್ರತಿಯೊಂದು ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯ ವಿಷಯಗಳಾಗುತ್ತಾ, ಅಧಿಕಾರ ಹಿಡಿಯುವ ಅದೃಷ್ಟದ ಬಾಗಿಲುಗಳಾಗಿವೆ.

ಒಂದೆಡೆ ಹಸಿವಿನಿಂದ ಕಂಗೆಟ್ಟ ಬಡವರು, ಇನ್ನೊಂದೆಡೆ, ಗೋದಾಮುಗಳಲ್ಲಿ ಸಮರ್ಪಕವಾಗಿ ವಿತರಣೆಯಾಗದೆ ಕೊಳೆಯುತ್ತಿರುವ ಆಹಾರ ಧಾನ್ಯಗಳು, ಕಣ್ಣಿಗೆ ರಾಚುವಂತಹ ಇಂತಹ ಕಟು ವಾಸ್ತವ ಸಂಗತಿಗಳನ್ನು ಮುಚ್ಚಿಕೊಳ್ಳಲು ಅಭಿವೃದ್ಧಿ ಕುರಿತಂತೆ ಪುಂಖಾನು ಪುಂಖವಾಗಿ ಹಸಿ ಸುಳ್ಳುಗಳನ್ನು ಹೇಳುತ್ತಿರುವ ಸರ್ಕಾರಗಳು, ಇಂತಹ ಅಯೋಮಯ ಸ್ಥಿತಿಯಲ್ಲಿ  ಅಸಮರ್ಪಕ ಆಡಳಿತವನ್ನು ನಾವು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ.
ವಿಶ್ವ ಆಹಾರ ಯೋಜನಾ ಮಂಡಳಿಯ ಸಮೀಕ್ಷೆ ಪ್ರಕಾರ ಜಗತ್ತಿನಲ್ಲಿ ಹಸಿವಿನಿಂದ ಬಳಲುತ್ತಿರುವ ಜನಸಂಖ್ಯೆಯಲ್ಲಿ ಶೇಕಡ, 25 ರಷ್ಟು ಮಂದಿ ಭಾರತದಲ್ಲಿ ಇದ್ದಾರೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಜಗತ್ತಿನ 86 ಕೋಟಿ 80 ಲಕ್ಷ ಜನತೆಯಲ್ಲಿ, ಬಾರತದಲ್ಲಿ 27 ಕೋಟಿ, 70 ಲಕ್ಷ ಜನರಿದ್ದಾರೆ.  ಈ ಧಾರುಣ ಸ್ಥಿತಿಯಲ್ಲಿ ಜನತೆಯ ಹಸಿವನ್ನು ನೀಗಸಲು ಕೇಂದ್ರ ಸರ್ಕಾರ ಸಿದ್ಧಪಡಿಸಿದ ಆಹಾರ ಭದ್ರತೆಯ ಮಸೂದೆ ಬಡವರ ಪಾಲಿಗೆ ಸಂಜೀವಿನಿಯಾಗುವ ಎಲ್ಲಾ ಸಾಧ್ಯತೆಗಳಿದ್ದವು. ಆದರೆ, ಜನಪ್ರತಿನಿಧಿಗಳ ಇಚ್ಛಾ ಕೊರತೆ,ಮತ್ತು  ರಾಜಕೀಯ ಪಕ್ಷ ಮತ್ತು ನೇತಾರರನ್ನು ಆರಾಧಿಸುವ ಭಾರತದ ಜನ ಸಾಮಾನ್ಯರ ಬೌದ್ಧಿಕ ದಾರಿದ್ರ್ಯದ ಕಾರಣದಿಂದಾಗಿ ಮಸೂದೆಗೆ ಇನ್ನೂ ಮುಕ್ತಿ ದೊರಕಿಲ್ಲ.

ಭಾರತದ ಪಡಿತರ ವ್ಯವಸ್ಥೆಯಲ್ಲಿರುವ ದೋಷಗಳನ್ನು ಸರಿಪಡಿಸಿ ಆಹಾರ ಭದ್ರತೆಯ ಮಸೂದೆಯನ್ನು ಜಾರಿಗೆ ತಂದದ್ದೇ ಆದರೆ, ಈ ದೇಶದ 21 ಕೋಟಿ ಬಡವರು ಮತ್ತು 6 ಕೋಟಿ ಮಕ್ಕಳು ಹಸಿವೆಂಬ ನರಕದಿಂದ ಹೊರಬರಲು ಅವಕಾಶದ.ಸಾಧ್ಯತೆಗಳಿವೆ.  ಭಾರತದಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳ ಸ್ಥಿತಿ ನಿಜಕ್ಕೂ ಕಳವಳಕಾರಿಯಾಗಿದೆ. ಮಕ್ಕಳ ಈ ದುಸ್ಥಿಯಿಂದಾಗಿ ಭಾರತ ಸರ್ಕಾರ ಪ್ರತಿವರ್ಷ ಎರಡೂವರೆ ಸಾವಿರ ಕೋಟಿ ರೂಪಾಯಿಗಳನ್ನು ಆರೋಗ್ಯಕ್ಕಾಗಿ ವ್ಯಯ ಮಾಡುತ್ತಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ. ಹಸಿವು ಮತ್ತು ಅಪೌಷ್ಟಿಕತೆಯಿಂದಾಗಿ ಭಾರತದ ಅಭಿವೃದ್ಧಿ ಬೆಳವಣಿಗೆ ದರದಲ್ಲಿ ಶೇಕಡ ಮೂರರಷ್ಟು ಕುಂಟಿತವಾಗಿದೆ ಎಂದು ಸಹ ಬ್ಯಾಂಕ್  ಅಭಿಪ್ರಾಯಪಟ್ಟಿದೆ,
ಜಗತ್ತಿನಲ್ಲಿ ಅತಿ ಹೆಚ್ಚು ಶ್ರೀಮಂತರು ಇರುವ ರಾಷ್ಟ್ರಗಳಲ್ಲಿ ಭಾರತಕ್ಕೆ ಎರಡನೆಯ ಸ್ಥಾನ ಎಂಬ ರೋಚಕ ವರದಿಗಳು ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾದ ತಕ್ಷಣ ಭಾರತದ ಬಡವರ ಹಸಿವು ನೀಗುವುದಿಲ್ಲ. ಕೇವಲ ಆರ್ಥಿಕ ಅಭಿವೃದ್ಧಿಯ ಬೆಳವಣಿಗೆಯನ್ನು ಸಮಗ್ರ ಅಭಿವೃದ್ಧಿಯ ಬೆಳವಣಿಗೆ ಎಂದು ಬಿಂಬಿಸುವುದರೊಂದಿಗೆ  ಅಬಿವೃದ್ಧಿ ಕುರಿತಂತೆ  ಜನ ಸಾಮಾನ್ಯರ ದಿಕ್ಕು ತಪ್ಪಿಸುವ ಪ್ರಯತ್ನಗಳು ಇತ್ತೀಚೆಗೆ ಎಡಬಿಡದೆ ಸಾಗಿವೆ.
ಕಾರ್ಪೊರೇಟ್ ಸಂಸ್ಥೆಗಳು, ಮತ್ತು ದೇಶದ ಉಗ್ರ ಬಲಪಂಥೀಯರು, ಗುಜರಾತಿನ ನರೇಂದ್ರ ಮೋದಿಯನ್ನು ಅಭಿವೃದ್ಧಿಯ ಹರಿಕಾರ ಎಂದು ಹಾಡಿ ಹೊಗಳುವ ಮುನ್ನ ಒಮ್ಮೆ ಗುಜರಾತಿನ ಮಾನವ ಅಭಿವೃದ್ಧಿಯ ಬೆಳವಣಿಗೆ ದರವನ್ನು ಕೂಲಂಕುಶವಾಗಿ ಪರಶೀಲನೆ ಮಾಡುವುದು ಒಳಿತು.
ಗುಜರಾತ್ ರಾಜ್ಯದಲ್ಲಿ ಅಲ್ಲಿನ ಜನಸಂಖ್ಯೆಯಲ್ಲಿ(6ಕೋಟಿ,30ಲಕ್ಷ) ಶೇಕಡ 45 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮಹಿಳೆಯರಲ್ಲಿ ಶೇಕಡ 36 ರಷ್ಟು ಪಾಲು ಇದ್ದರೆ, ಈ ಮಹಿಳೆಯರ ಪೈಕಿ ಶೇಕಡ 61 ರಷ್ಟು ಜನ ಮಹಿಳೆಯರು ಹಿಂದುಳಿದ ಜಾತಿ ಮತ್ತು ವರ್ಗಕ್ಕೆ ಸೇರಿದವರಾಗಿದ್ದಾರೆ.  ಗುಜರಾತ್ ರಾಜ್ಯ ಇತ್ತೀಚೆಗೆ ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ಬೆಳವಣಿಗೆ ಸಾಧಿಸಿದ್ದರೂ ಕೂಡ, ಗ್ರಾಮೀಣ ಪ್ರದೇಶದಲ್ಲಿ ನಿರೊದ್ಯೋಗಿಗಳ ಸಂಖ್ಯೆ ಶೇಕಡ 51 ರಷ್ಟನ್ನು ದಾಟಿದೆ. ಇದು ಗುಜರಾತ್ ಒಂದರ ಕಥೆಯಲ್ಲ, ಎಲ್ಲಾ ರಾಜ್ಯಗಳ ನೋವಿನ ಕಥೆ ಕೂಡ ಹೌದು.
 ಇಪ್ಪೊತ್ತೊಂದನ ಶತಮಾನದ ಜಗತ್ತಿನ ಅತಿಶ್ರೇಷ್ಟ ಅರ್ಥಶಾಸ್ತ್ರಜ್ಙರಲ್ಲಿ ಒಬ್ಬರಾದ ಡಾ. ಮನಮೋಹನ್ ಸಿಂಗ್ ರಂತಹ ಪ್ರಧಾನಿ ಇದ್ದರೂ ಕೂಡ ಭಾರತ ಹಸಿವು ಮತ್ತು ನಿರೂದ್ಯೋಗದಿಂದ ಮುಕ್ತವಾಗಲು ಸಾಧ್ಯವಾಗಲಿಲ್ಲ. ಆದರೆ, ಭಾರತದಂತೆ ಬ್ರೆಜಿಲ್ ಕೂಡ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದು. ಆ ರಾಷ್ಟ್ರದ ಅಧ್ಯಕ್ಷ ಲೂಲ ನಮ್ಮ ಪ್ರಧಾನಿಯಂತೆ ವಿದ್ಯಾವಂತನಲ್ಲ, ತಜ್ಙನಲ್ಲ, ಆದರೆ ಎರಡು ಬಾರಿ ಅಧ್ಯಕ್ಷನಾಗಿ ಬ್ರೆಜಿಲ್ ರಾಷ್ಟವನ್ನು ಹಸಿವಿನಿಂದ ಮುಕ್ತಗೊಳಿಸಿ, ಅಬಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ಬಗೆ ನಿಜಕ್ಕೂ ವಿಸ್ಮಯ ಮೂಡಿಸುತ್ತದೆ.
ಕೊಳಗೇರಿಯಲ್ಲಿ ಹುಟ್ಟಿ ಬೆಳೆದು, ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು , ನಂತರ ತನ್ನ  ತಾಯಿ ಮತ್ತೊಬ್ಬ ವ್ಯಕ್ತಿಯನ್ನು ವಿವಾಹವಾದಾಗ, ಅದೇ ಕೊಳಗೇರಿಯ ಗುಡಿಸಲಿನಲ್ಲಿ ಮಲತಂದೆಯ ಜೊತೆ ವಾಸಿಸುತ್ತಾ, ತಾಮ್ರ ದ ಕುಲುಮೆಯಲ್ಲಿ ಕೂಲಿ ಕಾರ್ಮಿಕ ನಾಗಿ ದುಡಿದು ಬದುಕು ಕಟ್ಟಿಕೊಂಡ ಲೂಲಾನ ಬದುಕು ಸೋಜಿಗವಷ್ಟೇ ಅಲ್ಲ, ಒಂದು ಅಪರೂಪದ ಯಶೋಗಾಥೆ.. ಮುಂದೆ ಕಾರ್ಮಿಕ ನಾಯಕನಾಗಿ ಬೆಳೆದು, ತನ್ನದೇ ಆದ ಲೇಬರ್ ಪಕ್ಷವನ್ನು ಕಟ್ಟಿ, ಅದನ್ನು ಅಧಿಕಾರಕ್ಕೆ ತರುವುದರ ಹಿಂದೆ ಲೂಲಾ ಹೃದಯದಲ್ಲಿ ಹಲವಾರು ಕನಸುಗಳಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ ತಾನು ಬಾಲ್ಯದಲ್ಲಿ ಎದುರಿಸಿದ ಸಂಕಷ್ಟಗಳು ಆತನ ಎದೆಯಲ್ಲಿ ಹಸಿರಾಗಿದ್ದವು. ( ತಾಮ್ರದ ಕುಲುಮೆಯಲ್ಲಿ ಕೆಲಸ ಮಾಡುವಾಗ ತನ್ನ ಎಡಗೈನ ಎರಡು ಬೆರಳುಗಳನ್ನು ಲೂಲಾ ಕಳೆದುಕೊಂಡರು) ಕೆಲಸವಿಲ್ಲದ ದಿನಗಳಲ್ಲಿ ನಗರದ ಬೀದಿಗಳಲ್ಲಿ ಶೇಂಗಾ ಬೀಜ ಮಾರಿ ಬದುಕಿದ ಲೂಲಾ ರವರಿಗೆ  ಬಡವರ ಹಸಿವು ಅರ್ಥವಾಗಿತ್ತು. ಹಾಗಾಗಿ 2003 ರಲ್ಲಿ ಅವರು, ಬ್ರೆಜಿಲ್ ದೇಶದಲ್ಲಿ  ಪರಿಣಾಮಕಾರಿಯಾಗಿ ಜಾರಿಗೆ ತಂದ ಆಹಾರ ಭದ್ರತೆಯ ಮಸೂದೆಯಿಂದಾಗಿ  ಆ ದೇಶದ ಮಕ್ಕಳು ಅಪೌಷ್ಟಿಕತೆಯ ಕಾಯಿಲೆಯಿಂದ ಪಾರಾಗಿದ್ದಾರೆ, ಬಡವರನ್ನು ಮೇಲೆತ್ತಲು ಅವರು ಆಹಾರ ಭಧ್ರತೆ ಮಸೂದೆ ಜೊತೆಗೆ ಎಲ್ಲಾ ಬಡವರಿಗೂ ಉಚಿತ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯ ಹಾಗೂ ವಸತಿ ಯೋಜನೆಯನ್ನು ಜೋಡಿಸಿದ್ದಾರೆ. ಇದರ ಪರಿಣಾಮ ಆ ದೇಶದಲ್ಲಿ ಶೇಕಡ 67ರಷ್ಟು ಇದ್ದ ಮಕ್ಕಳ ಅಪೌಷ್ಟಿಕತೆ ಕೇವಲ ಐದು ವರ್ಷಗಳಲ್ಲಿ  ಶೇಕಡ 13 ಕ್ಕೆ ಇಳಿದಿದೆ. ಎರಡು ಕೋಟಿ ಜನ ಬಡತನದ ರೇಖೆಯಿಂದ ಮೇಲೆದ್ದು ಬಂದು ಸ್ವತಂತ್ರ ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿ ಬ್ರೆಜಿಲ್ ದೇಶ ಚೀನಾ ಹಾಗೂ ಭಾರತವನ್ನು ಮಾನವ ಅಭಿವೃದ್ಧಿ ದರದಲ್ಲಿ ಮೀರಿಸಿ, ಜಗತ್ತಿಗೆ ಮಾದರಿ ರಾಷ್ಟ್ರವಾಗಿದೆ. ನಮ್ಮ ಜನಪ್ರತಿನಿಧಿಗಳಾದ, ಗ್ರಾಮಪಂಚಾಯಿತಿ ಸದಸ್ಯನಿಂದ ಹಿಡಿದು, ನಗರ ಸಭೆ, ಪಟ್ಟಣ ಪಂಚಾಯಿತಿ ಸಭೆಯ ಸದಸ್ಯರು ಮತ್ತು  ಶಾಸಕರುಗಳೆಂಬ   ಅಯೋಗ್ಯರು, ರಸ್ತೆ ದುರಸ್ತಿ, ಚರಂಡಿ ನಿರ್ಮಾಣ, ಕಸ ವಿಲೆವಾರಿ ಯಂತಹ ಕ್ಷುಲ್ಲಕ ಸಂಗತಿಗಳ ಅದ್ಯಯನಕ್ಕಾಗಿ ವಿದೇಶ ಪ್ರವಾಸದ ಮೂಲಕ ಮೋಜು ಮಸ್ತಿ ಮಾಡಿದರು. ಕರ್ನಾಟಕ ರಾಜ್ಯ ಸತತ ಎರಡು ವರ್ಷಗಳ ಕಾಲ ತೀವ್ರ ಬರಗಾಲದಲ್ಲಿ ನರಳಿದರೂ ಸಹ ಆತ್ಮ ಸಾಕ್ಷಿಯ ಪ್ರಜ್ಙೆ ಇಲ್ಲದವರಂತೆ, ಪೈಪೋಟಿಗೆ ಬಿದ್ದು ತಮ್ಮ ಪತ್ನಿಯರ ಸಮೇತ ವಿದೇಶ ಪ್ರವಾಸ ಮಾಡಿ ಬಂದರು. ಅದರ ಬದಲು ಇವರು  ಒಮ್ಮೆ ಬ್ರೆಜಿಲ್ ಗೆ ಬೇಟಿ ನೀಡಿ, ಅಲ್ಲಿನ   ಅಭಿವೃದ್ಧಿಯನ್ನು ಗಮನಿಸಿ ಬಂದಿದ್ದರೆ, ಇವರಿಂದ ಈ ನಾಡು ಉದ್ಧಾರವಾಗುವುದು ಇರಲಿ, ಕನಿಷ್ಟ ಇವರ ತಲೆಯಲ್ಲಿರುವ ಸಗಣಿಯ ಪ್ರಮಾಣವಾದರೂ  ಸ್ವಲ್ಪ ಕಡಿಮೆಯಾಗುತ್ತಿತ್ತು.

ಬುಧವಾರ, ಜೂನ್ 19, 2013

ಕರ್ನಾಟಕದ ಅಪ್ಪಿಕೊ ಚಳವಳಿಯ ಇತಿಹಾಸ

ಜಗತ್ತಿನ ಜೀವರಾಶಿಗಳಿಗೆ ಒಳಿತನ್ನು ಬಯಸುವ ಚಿಂತನೆಗಳಿಗೆ ಸಾವಿಲ್ಲವೆಂಬುದಕ್ಕೆ ಭಾರತದ ಅಪ್ಪಿಕೊ ಚಳವಳಿಯ ಇತಿಹಾಸ ಸಾಕ್ಷಿಯಂತಿದೆ. ಮುನ್ನೂರು ವರ್ಷಗಳ ಹಿಂದೆ ರಾಜಸ್ಥಾನದ ಈಗಿನ ಜೋಧಪುರ ಜಿಲ್ಲಾ ಕೇಂದ್ರದಿಂದ ಕೇವಲ 26 ಕಿಲೋಮೀಟರ್ ದೂರವಿರುವ ಖೇಜ್ರಾಲಿ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿಕೊಂಡ, ಮರಗಳನ್ನು ಉಳಿಸಿ ಕಾಪಾಡುವ ಒಂದು ಸಾಮುದಾಯಿಕ ಪ್ರಜ್ಙೆ ಮೂರು ಶತಮಾನಗಳ ನಂತರವೂ, ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಹಲವು ರೂಪ ತಾಳುತ್ತಾ ಮೈದಾಳುತ್ತಾ ಬಂದಿದೆ.ಜಗತ್ತಿನ ದಾರ್ಶನಿಕರು ನಮ್ಮ ನಡುವೆ ಇಲ್ಲದಿದ್ದರೂ ಅವರ ಚಿಂತನೆಗಳ ಮೂಲಕ ಜೀವಂತವಿದ್ದಾರೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಮುಂತಾದವರು ಇನ್ನೂ ನಮ್ಮಗಳ ಎದೆಯಲ್ಲಿ ಹಸಿಯಾಗಿರುವುದು ಮತ್ತು ಜೀವಂತವಾಗಿರುವುದು ಇಂತಹ ಜೀವಪರ ಚಂತನೆಗಳ ಕಾರಣಕ್ಕಾಗಿ ಎಂದರೆ. ಅತಿಶಯವಾಗಲಾರದು.
ಎಲ್ಲಿಯ ರಾಜಸ್ಥಾನ? ಎಲ್ಲಿಯ ಹಿಮಾಲಯದ ಪರ್ವತದ ಕಣಿವೆ? ಎಲ್ಲಿಯ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ? ಗಡಿ, ಭಾಷೆ, ಮತ್ತು ಸಂಸ್ಕೃತಿಗಳನ್ನು ಮೀರಿ ಬೆಳೆದ ಅಪ್ಪಿಕೊ ಚಳವಳಿಯ ವೈಶಾಲ್ಯತೆಯನ್ನು ಗಮನಿಸಿದರೆ, ಅಚ್ಚರಿಯಾಗುತ್ತದೆ. ಮೂರು ಶತಮಾನಗಳ ಕಾಲ ಗುಪ್ತ ಗಾಮಿನಿ ನದಿಯಂತೆ ಜನಮಾನಸದಲ್ಲಿ ಹರಿದು ಬಂದ ಈ ಪರಿಸರ ಪ್ರಜ್ಙೆ ನಿಜಕ್ಕೂ ಒಂದು ರೀತಿ ಸೋಜಿಗದ ಸಂಗತಿಯೆ ಸರಿ.

 ಜೋಧಪುರ ಸಂಸ್ಥಾನದ ಮಹಾರಾಜ ಅಭಯಸಿಂಗ್ ಎಂಬಾತ,ತನ್ನ ಕೈ ಕೆಳಗಿನ ಮಾಂಡಲೀಕ ಖರ್ದ ಸಂಸ್ಥಾನದ ಥಾಕೂರ್ ಸೂರತ್ ಸಿಂಗ್ ಎಂಬಾತನಿಗೆ 1726 ರಲ್ಲಿ ಖೇಜ್ರಾಲಿ ಗ್ರಾಮವನ್ನು ಬಳುವಳಿಯಾಗಿ ನೀಡಿದ್ದ. ಈ ಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಷ್ಣೋಯ್ ಎಂದು ಕರೆಸಿಕೊಳ್ಳುವ ವೈಷ್ನವ ಪಂಥದ ಅನುಯಾಯಿಗಳು ವಾಸವಾಗಿದ್ದರು. ಗುರು ಜಂಬುಕೇಶ್ವರ್ ಎಂಬ ಸಂತನ ಪರಮ ಅನುಯಾಯಿಗಳಾಗಿದ್ದ ಇವರೆಲ್ಲಾ ಅಹಿಂಸೆ ಕುರಿತಾದ 29 ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಅವುಗಳಲ್ಲಿ ಮರಗಳ ಕಡಿಯುವಿಕೆಯ ನಿಷೇಧ ಮತ್ತು ಪ್ರಾಣಿಗಳ ಬೇಟೆಯ ನಿಷೇಧಗಳು ಸೇರಿದ್ದವು.
1730 ರ ಸೆಪ್ಟಂಬರ ತಿಂಗಳಿನ ಒಂದು ಮಂಗಳವಾರ ಬೆಳಿಗ್ಗೆ ಮಾಡಲೀಕ ಥಾಕೂರ್ ಸಿಂಗ್  ತಾನು ನಿರ್ಮಿಸುತ್ತಿದ್ದ ಅರಮನೆಗಾಗಿ ಹುಲುಸಾಗಿ ಬೆಳದಿದ್ದ ಮರಗಳನ್ನು ಕಡಿಯಲು ಖೇಜ್ರಾಲಿ ಗ್ರಾಮಕ್ಕೆ ತನ್ನ ಸೇವಕರನ್ನು ಕಳುಹಿಸಿದ. ಸುದ್ದಿ ತಿಳಿದ ಗ್ರಾಮದ  ಅಮೃತಾದೇವಿ ಎಂಬ ಗೃಹಣಿ, ತನ್ನ ಮೂವರು ಹೆಣ್ಣು ಮಕ್ಕಳಾದ, ರತ್ನಿ,ಅಸು ಮತ್ತು ಬಾಗು ಇವರ ಜೊತೆಗೂಡಿ ಸ್ಥಳಕ್ಕೆ ದಾವಿಸಿಬಂದು ಮರಗಳನ್ನು ಕಡಿಯದಂತೆ, ಅವುಗಳನ್ನು ಅಪ್ಪಿಕೊಂಡು ಅಡ್ಡಿಪಡಿಸಿದರು. ಸುದ್ಧಿ ತಿಳಿದ ಮಾಂಡಲೀಕ ಥಾಕೂರ್ ಸುರತ್ ಸಿಂಗ್ ಅವರ ತಲೆ ಕಡಿದು ಮರಗಳನ್ನು ಉರುಳಿಸುವಂತೆ ಸೇವಕರಿಗೆ ಆಜ್ಙಾಪಿಸಿದ. ಸೇವಕರು ಅಮೃತಾದೇವಿ ಸೇರಿದಂತೆ ಮೂವರು ಮಕ್ಕಳ ತಲೆ ಕಡಿದು, ಮರಗಳನ್ನು ಉರುಳಿಸಿದರು. ಈ ವಿಷಯ ಸುತ್ತಮುತ್ತಲಿನ ಗ್ರಾಮಗಳಿಗೆ ಹರಡುತ್ತಿದ್ದಂತೆ, ನೂರಾರು ಮಹಿಳೆಯರು ಮುಂದೆ ಬಂದು ತಮ್ಮ ಜೀವವನ್ನು ಬಲಿಕೊಟ್ಟು ಮರಗಳನ್ನು ಸಂರಕ್ಷಿಸಲು ಮುಂದಾದರು. ಮರಗಳ ರಕ್ಷಣೆಗಾಗಿ ನಡೆದ ಮಾರಣ ಹೋಮದಲ್ಲಿ ಒಟ್ಟು 363 ಮಂದಿ ಮಹಿಳೆಯರು ಬಲಿಯಾಗಿದ್ದರು.
ವಿಷಯ ರಾಜಸ್ಥಾನದೆಲ್ಲೆಡೆ ಹರಡುತ್ತಿದ್ದಂತೆ, ಖೇಜ್ರಾಲಿ ಗ್ರಾಮಕ್ಕೆ ಸ್ವತಃ ಆಗಮಿಸಿದ ಜೋಧಪುರದ ಮಹಾರಾಜ ಅಭಯ್ ಸಿಂಗ್ ಜನತೆಯಲ್ಲಿ ನಡೆದ ಘಟನೆಗೆ ಕ್ಷಮೆ ಯಾಚಿಸಿದ. ಜೊತೆಗೆ ಖೇಜ್ರಾಲಿ ಗ್ರಾಮವೂ ಸೇರಿದಂತೆ,ಸುತ್ತ ಮುತ್ತಲಿನ ಗ್ರಾಮಗಳ ಪರಿಸರದಲ್ಲಿ ಮರಗಳನ್ನು ಕಡಿಯುವುದಕ್ಕೆ ನಿಷೇಧ ಹೇರಿದ.ಜೊತೆಗೆ, ಪ್ರಾಣಿಗಳ ಬೇಟೆಯನ್ನು ಸಹ ನಿಷೇಧಿಸಿದ. ಸ್ವತಃ ಮಾಂಸಹಾರಿಯಾಗಿದ್ದ ಮಹಾರಾಜ ಅಭಯ್ ಸಿಂಗ್ ತನ್ನ ವಂಶಸ್ಥರು ಸಹ ಎಂದಿಗೂ ಈ ಪ್ರದೇಶದಲ್ಲಿ ಪ್ರಾಣಿಗಳನ್ನು ಶಿಕಾರಿ ಮಾಡುವುದಿಲ್ಲ ಎಂದು ಪ್ರತಿಜ್ಙೆಗೈದ. ಈ ಪದ್ದತಿಯನ್ನು ಅವನ ವಂಶಸ್ಥರು ಇಂದಿಗೂ ಸಹ  ಜಾರಿಯಲ್ಲಿಟ್ಟಿದ್ದಾರೆ.

ಖೇಜ್ರಾಲ್ ಹಳ್ಳಿಯಲ್ಲಿ ಮರಗಳ ರಕ್ಷಣೆಗಾಗಿ ಅಮೃತಾದೇವಿ ಸೇರಿದಂತೆ 363 ಹುತಾತ್ಮ ಮಹಿಳೆಯರಿಗಾಗಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಪ್ರತಿ ವರ್ಷ ಸೆಪ್ಟಂಬರ್ ತಿಂಗಳ ಮೊದಲ ಮಂಗಳವಾರ ಅಮೃತಾದೇವಿ ಮತ್ತು ಸಂಗಡಿಗರ ನೆನಪಿಗಾಗಿ ಜಾತ್ರೆ ನಡೆಯುತ್ತದೆ. ಆ ಮಹಿಳೆಯರು ತಮ್ಮ ಜೀವಗಳ ಬಲಿದಾನದ ಮೂಲಕ ಉಳಿಸಿದ ಮರಗಳು ಇಂದಿಗೂ ಖೇಜ್ರಾಲಿ ಗ್ರಾಮದಲ್ಲಿ ಜೀವಂತವಾಗಿವೆ.
 ಹೀಗೆ ಮರಗಳ ಸಂರಕ್ಷಣೆಗಾಗಿ 1730 ರಲ್ಲಿ ಹುಟ್ಟಿಕೊಂಡ ಅಪ್ಪಿಕೊ ಚಳವಳಿ, 1970 ರಲ್ಲಿ ಹಿಮಾಲಯದ ಗೋಪೇಶ್ವರ, ತೆಹ್ರಿ, ಘರ್ ವಾಲ್, ಚಮೋಲಿ ಜಿಲ್ಲೆಗಳಲ್ಲಿ ಮತ್ತೆ ಜನ್ಮತಾಳಿತು. ನಂತರ 1980 ರಲ್ಲಿ ಸ್ಥಗಿತಗೊಂಡ ಈ ಹೋರಾಟ, ಅಚ್ಚರಿ ಎಂಬಂತೆ 1983 ರ ಸೆಪ್ಟಂಬರ್ ಎಂಟರಂದು ದಕ್ಷಿಣ ಭಾರತದ ಕರ್ನಾಟಕದಲ್ಲಿ  ಪ್ರಥಮ ಬಾರಿಗೆ ಜನ್ಮ ತಾಳಿತು. ಇದರ ರೂವಾರಿ ಉತ್ತರ ಕನ್ನಡ ಜಿಲ್ಲೆಯ ಪಾಂಡು ರಂಗ ಹೆಗ್ಡೆ.

1956 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಅರಣ್ಯದ ನಡುವಿನ ಒಂಬತ್ತು ಮನೆಗಳ ಪುಟ್ಟ ಗ್ರಾಮವೊಂದರಲ್ಲಿ ಜನಿಸಿದ ಪಾಂಡುರಂಗ ಹೆಗ್ಡೆಯವರು ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡವರು. ಆನಂತರ ಉದ್ಯೋಗಿಯಾಗಿದ್ದ ಅಣ್ಣನ ಆಶ್ರಯದಲ್ಲಿ ಮುಂಬೈ ಮತ್ತು ನಾಗಪುರ ನಗರಗಳಲ್ಲಿ ಬೆಳೆದವರು. ಬಿ,ಕಾಂ. ಪದವಿಯ ನಂತರ 1979 ರಲ್ಲಿ ದೆಹಲಿಗೆ ತೆರಳಿದ ಹೆಗ್ಡೆಯವರು ಛಾರ್ಟಡ್ ಅಕೌಂಟೆಡ್ ಆಗಿ ವೃತ್ತಿ ಆರಂಭಿಸಿದ್ದರು. ಆದರೆ, ಹಾಳೆಗಳ ಮೇಲಿನ ಲೆಕ್ಕ, ಅವರಿಗೆ ಕೂಡಿ ಬರಲಿಲ್ಲ. ನಂತರ ವೃತ್ತಿ ತ್ಯೆಜಿಸಿ, ದೆಹಲಿಯ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ಸಂಸ್ಥೆಗೆ ದಾಖಲಾದರು. ಮರುವರ್ಷ ಸ್ವಯಂ ಸೇವಾ ಸಂಘಟನೆಯೊಂದರ ಕಾರ್ಯಕರ್ತರಾಗಿ ಮಧ್ಯಪ್ರದೇಶಲ್ಲಿ ಕಾರ್ಯ ನಿರ್ವಹಿಸಿದರು. ಈ ವೇಳೆಗೆ ಹಿಮಾಲಯದ ಕಣಿವೆಯಲ್ಲಿ ಆರಂಭಗೊಂಡಿದ್ದ ಚಿಪ್ಕೊ ಚಳವಳಿಗೆ ಸಾಕ್ಷಿಯಾಗಿದ್ದ ಅವರು, ತನ್ನ ಹುಟ್ಟುನೆಲದಲ್ಲಿನ ಮರಗಳ ಸಂರಕ್ಷಣೆಗಾಗಿ ಇಂತಹ ಆಂಧೋಲನವನ್ನು ಆರಂಭಿಸಬೇಕೆಂದು  ನಿರ್ಧರಿಸಿ ಮತ್ತೆ ಕರ್ನಾಟಕಕ್ಕೆ ವಾಪಸ್ಸಾದರು.
1983 ರ ಸೆಪ್ಟಂಬರ್ 8 ರಂದು ಉತ್ತರ ಕನ್ನಡ ಜಿಲ್ಲೆಯ ಕಳಸೆ ಅರಣ್ಯದ ಸಾಲ್ಕುಣಿ ಎಂಬ ಪ್ರದೇಶದಲ್ಲಿ
ಉಳಿಸು, ಬೆಳಸು, ಬಳಸು, “ಎಂಬ ಪರಿಕಲ್ಪನೆಯೊಂದಿಗೆ ಅಪ್ಪಿಕೊ ಚಳವಳಿಗೆ ಪಾಂಡುರಂಗ ಹೆಗ್ಡೆ  ಚಾಲನೆ ನೀಡಿದರು. 1950 ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡ 81 ರಷ್ಟು ಭಾಗ ಅರಣ್ಯವಿದ್ದದು, ದಾಂಡೇಲಿಯಲ್ಲಿ ಆರಂಭವಾದ ಪ್ಲೈವುಡ್ ಕಾರ್ಖಾನೆ ಮತ್ತು ಕಾಳಿ ನದಿಯ ಅಣೆಕಟ್ಟು ಯೋಜನೆಗಳಿಂದಾಗಿ ಶೇಕಡ 66 ರಷ್ಟು ಭಾಗಕ್ಕೆ ಕುಸಿದಿತ್ತು. ಕೇರಳ ರಾಜ್ಯ ಪಶ್ಚಿಮಗಟ್ಟದ ವಿಸ್ತೀರ್ಣದ ಶೇಕಡ 42 ರಷ್ಟು ಭಾಗವನ್ನು ಹೊಂದಿದ್ದು, ಶೇಕಡ 44 ರಷ್ಟು ಇದ್ದ ಅರಣ್ಯ ಪ್ರದೇಶ ಕೇವಲ ಮೂರು ದಶಕಗಳ ಅವಧಿಯಲ್ಲಿ ಶೇಕಡ 9 ರಷ್ಟು ಭಾಗಕ್ಕೆ ಕುಸಿದಿತ್ತು. ದಕ್ಷಿಣ ಭಾರತದಲ್ಲಿ ಅರಣ್ಯದ ಅವಸಾನವಾಗುತ್ತಿರುವ ಕುರಿತು ಅರಿವಿದ್ದ ಪಾಂಡು ರಂಗ ಹೆಗ್ಡೆಯವರಿಗೆ ಮರಗಳ ಮಾರಣ ಹೋಮ ತಪ್ಪಿಸುವ ಬಗ್ಗೆ ಚಿಂತೆಯೊಂದು ಅವರನ್ನು ಸದಾ \ಕಾಡುತ್ತಿತ್ತು. ಅವರ ಈ ಚಿಂತನೆಯ ಫಲವಾಗಿ ಕಡಿಮೆ ಉರವಲು ಬೇಡುವ ಅತ್ಯಾಧುನಿಕ ಒಲೆಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ  ಬಳಕೆಗೆ ಬಂದವು. ತಾವೇ ಸ್ವತಃ ನಿಂತು ಹೋಟೇಲುಗಳಿಗೆ, ಚಹಾ ಅಂಗಡಿಗಳಿಗೆ, ಮನೆಗಳಿಗೆ ಹೀಗೆ ಎರಡು ಸಾವಿರ ಒಲೆಗಳನ್ನು ವಿತರಿಸಿದರ. ಮಕ್ಕಳಲ್ಲಿ, ಗ್ರಾಮಸ್ಥರಲ್ಲಿ ಜಾಗೃತಿಯನ್ನುಂಟು ಮಾಡಿ, ಸಸಿಗಳನ್ನು ಬೆಳಸಿ, ನೆಡುವಂತೆ ಪ್ರೋತ್ಸಾಹಿಸಿದರು. ಅಲ್ಲದೆ ಚಿಪ್ಕೊ ಚಳವಳಿಯ ನೇತಾರ ಸುಂದರ ಲಾಲ್ ಬಹುಗುಣರನ್ನು ಕರ್ನಾಟಕಕ್ಕೆ ಕರೆತಂದು ಪರಿಸರದ ಪ್ರಜ್ಙೆ ಮೂಡಿಸಿ
ದರು. ಕೇವಲ ಮೂರು ವರ್ಷದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 12 ಲಕ್ಷ ಸಸಿಗಳನ್ನು ನೆಡಲು ಕಾರಣಕರ್ತರಾದರು. ಪಾಂಡುರಂಗ ಹೆಗ್ಡೆಯವರ ಈ ಪರಿಸರ ಆಂದೋಲನ ನೆರೆಯ ಕೇರಳ, ತಮಿಳುನಾಡು ಮತ್ತು ಗೋವಾ ರಾಜ್ಯಗಳಿಗೆ ವಿಸ್ತರಿಸಲು ಪ್ರೇರಣೆಯಾಯಿತು. ಅಲ್ಲದೆ, 1984 ರ ವೇಳೆಗೆ ವಿಶ್ವಬ್ಯಾಂಕ್ ನೆರವಿನಿಂದ ಕರ್ನಾಟಕದಲ್ಲಿ ಜಾರಿಗೆ ಬಂದ ಸಾಮಾಜಿಕ ಅರಣ್ಯಯೋಜನೆ ಕಾರ್ಯಕ್ರಮದಲ್ಲಿ ಕೇವಲ ನೀಲಗಿರಿ ಮತ್ತು ಅಕೇಶಿಯಾ ಗಿಡಗಳನ್ನು ನೆಡುತ್ತಿದ್ದುದನ್ನು ಸಾರ್ವಜನಿಕರು ಪ್ರತಿಭಟಿಸಲು ಕಾರಣವಾಯಿತು. ಆನಂತರ ಅರಣ್ಯ ಇಲಾಖೆ ಇತರೆ ಗಿಡಗಳನ್ನು ಬೆಳಸಿ, ನೆಡಲು ಆರಂಭಿಸಿತು.
ಹೀಗೆ ಸತತ ಮೂರು ಶತಮಾನಗಳ ಕಾಲದ ಇತಿಹಾಸವಿರುವ ಅಪ್ಪಿಕೊ ಚಳವಳಿ ಆಯಾ ಕಾಲಕ್ಕೆ ತಕ್ಕಂತೆ ವಿವಿಧ ರೂಪಗಳಲ್ಲಿ ಜನ್ಮ ತಾಳುತ್ತಲೇ ಇದೆ. ಇದಕ್ಕೆ ಇತ್ತೀಚೆಗಿನ ಉದಾಹರಣೆಯೆಂದರೆ, ಐದು ವರ್ಷದ ಹಿಂದೆ ಗೋಕರ್ಣ ಸಮೀಪದ ತದಡಿ ಬಂದರು ಪ್ರದೇಶದಲ್ಲಿ ಕಲ್ಲದ್ದಲು ಆಧಾರಿತ ವಿದ್ಯುತ್ ಸ್ಥಾವರ ಸ್ಥಾಪನೆಗೆ ಕರ್ನಾಟಕ ಸರ್ಕಾರ  ( ನಾಲ್ಕು ಸಾವಿರ ಮೆಗಾವ್ಯಾಟ್) ಮುಂದಾದಾಗ 25 ಸಾವಿರ ಮಂದಿ ಪರಿಸರ ವಾದಿಗಳ ಪ್ರತಿಭಟನೆಯಿಂದ  ಅದು ಸ್ಥಗಿತಗೊಂಡಿತು.
ಭಾರತದ ಸಂದರ್ಭದಲ್ಲಿ ಅಪ್ಪಿಕೊ ಚಳವಳಿ ಕೊಟ್ಟ ಅತಿ ದೊಡ್ಡ ಕೊಡುಗೆಯೆಂದರೆ, ಒಂದನೇಯದಾಗಿ ಜನಸಾಮಾನ್ಯರಲ್ಲಿ ಪರಿಸರ ಕುರಿತಂತೆ ಜಾಗೃತಿ ಮೂಡಿಸಿದ್ದು. ಎರಡನೇಯದಾಗಿ ಈ ದೇಶಕ್ಕೆ ಅತಿ ಮುಖ್ಯ ಹಾಗೂ ಪ್ರತಿಭಾವಂತ ಪರಿಸರ ತಜ್ಙರನ್ನು ಈ ಆಂಧೋಲನ ನೀಡಿದೆ.ಈ ದಿನ ನಮ್ಮ ನಡುವೆ ಇರುವ ಡಾ.ವಂದನಾ ಶಿವ( ಭೌತ ವಿಜ್ಙಾನಿಯಾಗಬೇಕಿದ್ದವರು) ಮತ್ತು ದೆಹಲಿಯ ಸೆಂಟರ್ ಪಾರ್ ಸೈನ್ಸ್ ಅಂಡ್ ಎನ್ವಿರಾನ್ ಮೆಂಟ್ ಸಂಸ್ಥೆಯ ಸ್ಥಾಪಕ ದಿವಂಗತ ಅನಿಲ್ ಅಗರ್ ವಾಲ್ ಹಾಗೂ ನಮ್ಮ ಕನ್ನಡಿಗರಾದ ನಾಗೇಶ್ ಹೆಗ್ಡೆ ( ಇವರಿಬ್ಬರೂ ಕಾನ್ಪರ್ ಮತ್ತು ಖರಗ್ ಪುರದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಪದವೀಧರರು, ಲಕ್ಷಾಂತರ ರೂಪಾಯಿ ಸಂಬಳ ತರುವ ಪ್ರಾಧ್ಯಾಪಕ ಹುದ್ದೆ ತ್ಯೆಜಿಸಿ ಪರಿಸರ ರಕ್ಷಣೆಗೆ ಜೀವ ಮುಡಿಪಾಗಿಟ್ಟವರು) ಹಾಗೂ  ಪಾಂಡು ರಂಗ ಹೆಗ್ಡೆ, ಸುನೀತಾ ನಾರಾಯಣ್ ( ಡೌನ್ ಟು ಅರ್ಥ್ ಪತ್ರಿಕೆ ಸಂಪಾದಕಿ) ಹೀಗೆ ಹೆಸರಿಸಲು ಸಾದ್ಯವಾಗದಷ್ಟು ಮಹನೀಯರನ್ನು ಅಪ್ಪಿಕೊ ಚಳವಳಿ ಕೊಡುಗೆ ನೀಡಿದ್ದು, ಈ ಸಂತತಿ ದೇಶದೆಲ್ಲೆಡೆ ಬೆಳೆಯುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.

                                                                           (ಮುಗಿಯಿತು)