ಶುಕ್ರವಾರ, ಸೆಪ್ಟೆಂಬರ್ 22, 2017

ಬ್ರೆಕ್ಟ್ ನ ಕಾವ್ಯವೆಂಬ ಖಡ್ಗ

ನಾಟಕಗಳು ಮತ್ತು ಕಾವ್ಯ (ಸಾನೆಟ್) ಇವುಗಳ ಮೂಲಕ ದೇಶ, ಭಾಷೆ, ಗಡಿ ಇವುಗಳ ಹಂಗಿಲ್ಲದೆ ಇಡೀ ಜಗತ್ತನ್ನು ಪ್ರಭಾವಿಸಿದವನು ಇಂಗ್ಲೇಂಡಿನ ಜಗತ್ಪ್ರಸಿದ್ಧ ನಾಟಕಕಾರ ವಿಲಿಯಂ ಶೇಕ್ಸ್ ಪಿಯರ್. ಆತನ ನಂತರ ಇಪ್ಪತ್ತನೆಯ ಶತಮಾನದಲ್ಲಿ ಅವನಷ್ಟೇ ತೀವ್ರವಾಗಿ ತನ್ನ ನಾಟಕಗಳು ಮತ್ತು ರಂಗಗೀತೆಗಳು ಹಾಗೂ ಕವಿತೆಗಳ ಮೂಲಕ ಜಗತ್ತಿನ ಪ್ರಜ್ಞಾವಂತ ನಾಗರೀಕರ ಮನಸೋರೆಗೊಂಡವನು ಅಪ್ರತಿಮ ಬರಹಗಾರ ಬರ್ಟೋಲ್ಡ್ ಬ್ರೆಕ್ಟ್. ಜರ್ಮನಿ ಮೂಲದ ಬ್ರೆಕ್ಟ್ನದು ಬಹುಮುಖ ಪ್ರತಿಭೆ. ತಾನು ಬದುಕಿದ ವರ್ತಮಾನದ ಬದುಕಿನ ಎಲ್ಲಾ ತಲ್ಲಣಗಳಿಗೆ ನಾಟಕ ಮತ್ತು ಕಾವ್ಯದ ಮೂಲಕ ಸ್ಪಂದಿಸಿದವನು. ಜಗತ್ತಿನಲ್ಲಿ ಪ್ರಶ್ನಿಸುವುದಕ್ಕಿಂತ ಮಿಗಿಲಾದ ಆಯುಧ ಇನ್ನೊಂದಿಲ್ಲ ಎಂದು ಜೀವನಪೂರ್ತಿ ನಂಬಿದವನು, ಅದರಂತೆ ಬದುಕಿದವನು. ಹಾಗಾಗಿ ಪ್ರಶ್ನೆಯನ್ನು ತನ್ನ ಆಯುಧವನ್ನಾಗಿ ಮಾಡಿಕೊಂಡು ಜೀವನ ಪೂರ್ತಿ ದೇಶ ಭ್ರಷ್ಟನಾಗಿ ವಿವಿಧ ದೇಶಗಳಲ್ಲಿ ಬದುಕು ಕಟ್ಟಿಕೊಂಡನು. ತನ್ನ ಬದುಕಿನ ಅಭದ್ರತೆಯ ನಡುವೆಯೂ ತನ್ನೊಳಗಿನ ಸೃಜನಶೀತೆಯನ್ನು ಎಂದೂ ಬತ್ತಿ ಹೋಗದಂತೆ ನೋಡಿಕೊಂಡ ಅಪರೂಪದ ಬರಹಗಾರ ಬರ್ಟೊಲ್ಡ್ ಬ್ರೆಕ್ಟ್. ಸಾವಿನ ತೂಗು ಕತ್ತಿಯ ಕೆಳಗೆ ದಿನಕ್ಕೊಂದು ಕಥೆಯನ್ನು ಸೃಷ್ಟಿಸಿದ ಅರಬ್ಬಿಯನ್ ನೈಟ್ಸ್ ಶಹಜಾದೆಯ ವಾರಸುದಾರನಂತೆ ಬ್ರೆಕ್ಟ್ ನಮಗೆ ಕಾಣುತ್ತಾನೆ
ಸಪ್ತ ದ್ವಾರಗಳ ಥೀಬ್ಸ್ ನಗರವನ್ನು/ ಕಟ್ಟಿದವರು ಯಾರು?/ಪುಸ್ತಕಗಳು ರಾಜ ಮಹಾರಾಜರುಗಳ     /ಹೆಸರುಗಳನ್ನು ಹೇಳುತ್ತವೆ./ ಏನು, ಮಹಾರಾಜರು ಕಲ್ಲು ಹೊತ್ತರೆ?/ಯುವ ಅಲೆಕ್ಸಾಂಡರ್ ಭಾರತವನ್ನುಏನು, ಒಂಟಿಯಾಗಿ ಗೆದ್ದನೆ?
ಇದು ಬ್ರೆಕ್ಟ್ ಜಗತ್ತನ್ನು ಪ್ರಶ್ನಿಸುತ್ತಿದ್ದ ವೈಖರಿ. ಬಾಲ್ಯದಿಂದಲೂ ಇಂತಹ ಪ್ರಖರ ವೈಚಾರಿಕತೆಯನ್ನು ಮೈಗೂಡಿಸಿಕೊಂಡಿದ್ದ ಬ್ರೆಕ್ಟ್ ನಿಗೆ ಅಂದಿನ ಜರ್ಮನಿಯ ರಾಜಕೀಯ ಮತ್ತು ಸಾಮಾಜಿಕ ರಂಗದ ವಿದ್ಯಾಮಾನಗಳು ಅಸಹನೆ ಮೂಡಿಸಿದ್ದವು. ಉಕ್ಕಿನ ಮನುಷ್ಯ ಎಂದು ಕರೆಯಲಾಗುತ್ತಿದ್ದ ಬಿಸ್ಮಾರ್ಕ್ ಆಳ್ವಿಕೆಯಲ್ಲಿ ಜರ್ಮನಿ ರಾಷ್ಟ್ರವು ಇಡೀ ಯುರೋಪ್ ಖಂಡದಲ್ಲಿ ಅತ್ಯಂತ ಬಲಿಷ್ಟ ಹಾಗೂ ಕೈಗಾರಿಕೆಯ ರಾಷ್ಟ್ರವಾಗಿತ್ತು. ಆದರೆ, ಅಲ್ಲಿನ ಗ್ರಾಮೀಣ ಬದುಕು ಮತ್ತು ಕೃಷಿ ರಂಗ ಸಂಪೂರ್ಣ ನೆಲಕಚ್ಚಿತ್ತು. ಬಂಡವಾಳ ಶಾಹಿಯ ಲಾಭಬುಡಕತನ, ಸಮಾಜದಲ್ಲಿ ಶೋಷಣೆ, ರೈತರು ಮತ್ತು ಕಾರ್ಮಿಕರ ದಾರುಣವಾದ ಬದುಕು ಇವೆಲ್ಲವೂ ಬ್ರೆಕ್ಟ್ ಮೇಲೆ ಪ್ರಭಾವ ಬೀರಿದ್ದವು. ನಂತರದ ವರ್ಷಗಳಲ್ಲಿ ಪ್ರಥಮ ಮಹಾಯುದ್ಧದಲ್ಲಿ ಜರ್ಮನಿಯು ಸೋತನಂತರ ಅಲ್ಲಿನ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಉಚಿಟಾದ ಕ್ಷೋಭೆಯು ಬ್ರೆಕ್ಟ್ ನನ್ನು ಮತ್ತಷ್ಟು ತಲ್ಲಣಗೊಳಿಸಿದವು. ನಂತರದ ವರ್ಷಗಳಲ್ಲಿ ಜರ್ಮನಿಯಲ್ಲಿ ಹಿಟ್ಲರ್ ನೇತೃತ್ವದ ನಾಜಿ ಸರ್ಕಾರ ಅಧಿಕಾರಕ್ಕೆ ಏರಿದ ನಂತರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಎಲ್ಲಾ ಅನಿಷ್ಟಗಳಿಗೆ ಸಾಕ್ಷಿಯಾಗಿದ್ದ ಅವನು ನಾಟಕ, ಪ್ರಬಂಧ, ಲೇಖನಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದ. ಇಡೀ ಜಗತ್ತನ್ನು ನಡುಗಿಸಿದ ಸರ್ವಾಧಿಕಾರಿ ಜರ್ಮನಿಯ ಆಡಲ್ಫ್ ಹಿಟ್ಲರ್ ಬ್ರೆಕ್ಟ್ ಬರಹಗಳಿಗೆ ಹೆದರುತ್ತಿದ್ದ. ಹಾಗಾಗಿ ಹಿಟ್ಲರ್ ಜರ್ಮನಿಯಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ, ಜೀವ ಭಯದಿಂದ ಬ್ರೆಕ್ಟ್ ಜರ್ಮನಿಯನ್ನು ತೊರೆಯಬೇಕಾಯಿತು.
1898 ಪೆಬ್ರವರಿ 10 ರಂದು ಜರ್ಮನಿಯ ಬವೇರಿಯಾ ಪ್ರಾಂತ್ಯದ ಆಗಸ್ಬರ್ಗ್ ಎಂಬಲ್ಲಿ ಜನಿಸಿದ ಬ್ರೆಕ್ಟ್   ತಂದೆ ಪ್ರೆಡರಿಕ್ ಬ್ರೆಕ್ಟ್ ಹಾಗೂ ತಾಯಿ ಸೋಫಿಯಾ.   ಇಬ್ಬರೂ ವಿಭಿನ್ನ ಮನೋಭಾವದ ದಂಪತಿಗಳಾಗಿದ್ದರು. ಕ್ಯಾಥೊಲಿಕ್ ಪಂಗಡದ ತಂದೆ ಮತ್ತು ಪೊಟೊಸ್ಟೆಂಟ್ ಪಂಗಡದ ತಾಯಿ ಇವರ ಮಗನಾದ ಬ್ರೆಕ್ಟ್ ಬಾಲ್ಯದಿಂದಲೂ ತಾಯಿಯ ಪ್ರಭಾವಕ್ಕೆ ಒಳಗಾಗಿ ಬೆಳದನು. ತಾನು ಹರೆಯದವನಾಗಿದ್ದ ಸಮಯದಲ್ಲಿ ಹೆತ್ತ ತಾಯಿ ನಿಧನಳಾದಾಗ
ಉಸಿರು ತೊರೆದವಳನ್ನು / ಮಣ್ಣಲ್ಲಿ ಮಲಗಿಸಿದರು. /ಹೂಗಳು ಅರಳಿದವು /ಚಿಟ್ಟೆಗಳು ರೆಕ್ಕೆ ಪಟಿ ಪಟಿಸಿ ಹಾರಾಡಿದವು /ಅಮ್ಮಾ, ಎಷ್ಟು ಹಗುರವಾಗಿದ್ದಳೆಂದರೆ, /ಅವಳ ದೇಹ ನೆಲಕ್ಕೆ ಭಾರವಾಗದ ಹಾಗೆ /ನೀಳವಾಗಿ ಚಾಚಿಕೊಂಡಿತ್ತು. /ಇಷ್ಟುಹಗುರವಾಗಲು ಅವಳು /ಎಷ್ಟು ಕಾಲ ನೆವದು ನೋಯ ಬೇಕಾಯಿತೊ?
ಎಂಬಂತಹ ಅರ್ಥಪೂರ್ಣ ಕವಿತೆಯನ್ನು ಬರೆದು ಅಮ್ಮನಿಗೆ ಶ್ರದ್ಧಾಂಜಲಿ ಸಲ್ಲಿಸಿದನು. ಅಮ್ಮನ ಪ್ರಭಾವದಿಂದ ಬಾಲ್ಯದಲ್ಲಿ ಬೈಬಲ್ ಓದಿಕೊಂಡಿದ್ದ ಬ್ರೆಕ್ಟ್ ಗೆ ಬೈಬಲ್ ಓದು, ಮುಂದಿನ ದಿನಗಳಲ್ಲಿ ಬರೆವಣಿಗೆಗೆ ಪ್ರೇರಣೆಯಾಯಿತು.
ಬ್ರೆಕ್ಟ್ ತಂದೆಯು ಸ್ಥಳಿಯ ಪೇಪರ್ ಮಿಲ್ ಒಂದರಲ್ಲಿ ಕಾರ್ಮಿಕನಾಗಿ ಸೇರಿ, ವ್ಯವಸ್ಥಾಪಕ ಹುದ್ದೆಗೆ ನೇಮಕವಾಗಿದ್ದ. ಹಾಗಾಗಿ ಮಧ್ಯಮ ವರ್ಗದ ಕುಟುಂಬದ ಬಾಲಕನಾಗಿ ಶಾಲೆಗೆ ಸೇರಿದ ಬ್ರೆಕ್ಟ್, ಬಾಲ್ಯದ ದಿನಗಳಿಂದ ಬರೆವಣಿಗೆಯತ್ತ ಆಸಕ್ತಿ ತೋರಿದ್ದ. ಶಾಲೆಯಲ್ಲಿ ಸಹಪಾಠಿಯಾಗಿದ್ದ ಕ್ಯಾಸ್ಪಲ್ ನೆಹರ್ ಎಂಬಾತ ಬ್ರೆಕ್ಟ್ ಬರೆವಣಿಗೆಗೆ ಪ್ರೋತ್ಸಾಹ ನೀಡುತ್ತಾ ಬಂದು, ಮುಂದಿನ ದಿನಗಳಲ್ಲಿ ರಂಗಭೂಮಿಯ ಚಟುವಟಿಕೆಗಳಲ್ಲಿ ಅವನ ಬಹುಕಾಲದ ಸಂಗಾತಿಯಾಗಿ ಉಳಿದನು.
1914 ರಲ್ಲಿ ಬ್ರೆಕ್ಟ್ ಹದಿನಾಲ್ಕು ವರ್ಷ ವಯಸ್ಸಿನಲ್ಲಿ ಶಾಲೆಯಲ್ಲಿ ಇದ್ದಾಗ ಒಂದು ವಿವಾದ ರೂಪದ ಪ್ರಬಂಧ ಬರೆದು ಶಾಲೆಯಿಂದ ಉಚ್ಛಾಟಿತನಾಗುವ ಸ್ಥಿತಿಗೆ ತಲುಪಿದ್ದ ಘಟನೆಯ ನಂತರ ಬ್ರೆಕ್ಟ್ ತಂದೆ, ತನ್ನ ಪುತ್ರ ವೈದ್ಯಕೀಯ ವೃತ್ತಿಯಲ್ಲಿ ಮುಂದುವರಿಯಲಿ ಎಂಬ ಉದ್ದೇಶದಿಂದ ಬ್ರೆಕ್ಟ್ನನ್ನು ಹದಿನಾರನೆಯ ವಯಸ್ಸಿನಲ್ಲಿ ಮ್ಯೂನಿಚ್ ನಗರದ ಮ್ಯೂನಿಚ್. ವಿಶ್ವ ವಿದ್ಯಾಲಯದಲ್ಲಿ ವೈದ್ಯಕೀಯ ಕೋರ್ಸ್ಗೆ ಸೇರಿಸಿದ. ಹುಟ್ಟಿದ ಊರು ತೊರೆದು, ಮ್ಯೂನಿಚ್ ನಗರಕ್ಕೆ ಬಂದ ನಂತರ ಬ್ರೆಕ್ಟ್, ವೈದ್ಯಕೀಯ ಕೋರ್ಸ್ ಜೊತೆ ಜೊತೆಗೆ ರಂಗಭೂಮಿ ಚಟುವಟಿಕೆ ಮತ್ತು ಬರೆವಣಿಗೆಯಲ್ಲಿ ತೀವ್ರತರವಾದ ಆಸಕ್ತಿಯನ್ನು ತಾಳಿದನು. ಪತ್ರಿಕೆಗಳಿಗೆ ಲೇಖನ ಬರೆಯುತ್ತಾ, ಗೆಳೆಚಿುರ ಜೊತೆ ನಾಟಕ ತಂಡವನ್ನು ಕಟ್ಟಿಕೊಂಡು, ಎಫಿಕ್ ರಂಗಭೂಮಿ ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿದನು.
1918 ರಲ್ಲಿ ಪ್ರಥಮ ಮಹಾಯುದ್ಧ ಆರಂಭವಾಗಿ ಯುದ್ಧ ಶಿಬಿರಗಳಲ್ಲಿ ಅವನು ಸೇವೆ ಸಲ್ಲಿಸತೊಡಗಿದ. ಸಂದರ್ಭದಲ್ಲಿ ಅವನಿಗೆ ಯುದ್ಧದ ಭೀಕರತೆ ಮತ್ತು ಹಿಂಸೆಯ ದರ್ಶನವಾಯಿತು. ಹಾಗಾಗಿ ಬ್ರೆಕ್ಟ್ ಬರೆದಿರುವ ಸಾವಿರಕ್ಕೂ ಹೆಚ್ಚು ಕವಿತೆಗಳಲ್ಲಿ ಯುದ್ಧ ಕವಿತೆಗಳು ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಯುದ್ಧವನ್ನು, ಸರ್ವಾಧಿಕಾರಿಯ ಪ್ರಭುತ್ವವನ್ನು ಬ್ರೆಕ್ಟ್ ನಷ್ಟು ಪರಿಣಾಮಕಾರಿಯಾಗಿ ಗೇಲಿ ಮಾಡಿದ ಇನ್ನೊಬ್ಬ ಕವಿಯಿಲ್ಲ ಎಂದರೆ, ಅದು ಅತಿಶಯದ ಮಾತಲ್ಲ.
ಸನ್ಮಾನ್ಯ ಜನರಲ್ ಮಹಾಶಯ /ಅದೇನು ಭರ್ಜರಿ ಟ್ಯಾಂಕು ನಿನ್ನದು! ಎಗ್ಗುಂಟೆ ಅದಕ್ಕೆ?/ ಕಾಡು ಮೇಡು ಎನ್ನದೆ ಎಲ್ಲೆಂದರಲ್ಲಿ ಅದು ನುಗ್ಗುತ್ತೆ! / ಅಡ್ಡಬಂದವರನ್ನು ಅಪ್ಪಚ್ಚಿ ಮಾಡುತ್ತೆ /ಆದರೆ,ಅದರಲ್ಲಿ ಒಂದೇ ಒಂದು ದೋಷ /ಅದಕ್ಕೊಬ್ಬ ಡ್ರೈವರ್ ಬೇಕು. /ಸನ್ಮಾನ್ಯ ಜನರಲ್ ಮಹಾಶಯ / ನಿನ್ನ ಬಾಂಬರ್ ಕೂಡ ಶಕ್ತಿಯಲ್ಲಿ ಅದ್ವಿತೀಯ /ಬಿರುಗಾಳಿಗೂ ಜೋರು,ಹೊರುವ ಸಾಮಥ್ರ್ಯದಲ್ಲಿ ಆನೆಗೂ ಮಿಗಿಲು /ಆದರೆ ಅದರಲ್ಲೊಂದು ನ್ಯೂನ್ಯತೆ ಇದೆ /ಅದಕ್ಕೊಂದು ಮೆಕಾನಿಕ್ ಬೇಕು. / ಮನುಷ್ಯನೂ ಅಷ್ಟೇ ಜನರಲ್ /ಹಾರುತ್ತಾನೆ, ಕೊಲುತ್ತಾನೆ, ಕಡಿಯುತ್ತಾನೆಆದರೆ, ಅವನಲ್ಲೂ ಒಂದು ದೋಷ ಇದ್ದುಬಿಟ್ಟಿದೆ / ಅವನು ಚಿಂತಿಸುತ್ತಾನೆ.
ಹೀಗೆ ಸರ್ವಾಧಿಕಾರದ ಪ್ರವೃತ್ತಿಯನ್ನು ಮತ್ತು ಯುದ್ಧದ ಭೀಕರತೆಯನ್ನು ವ್ಯಂಗವಾಗಿ  ಗೇಲಿ ಮಾಡುವುದರ ಜೊತೆಗೆ ಯುದ್ಧದ ಹಲವು ಮುಖಗಳನ್ನು ಬ್ರೆಕ್ಟ್ ನಮ್ಮೆದುರು ತಣ್ಣನೆಯ ಧ್ವನಿಯಲ್ಲಿ ರೀತಿ ಬಿಚ್ಚಿಡುತ್ತಾನೆ.
ಇದೇನೂ ಮೊದಲ ಯುದ್ಧವಲ್ಲ / ಹಲವು ಯುದ್ಧಗಳು ಆದವು, ಹೋದವು / ಇದರ ಹಿಂದಿನ ಯುದ್ಧದಲ್ಲಿ ಗೆದ್ದವರು ಇದ್ದರು. / ಸೋತವರು ಇದ್ದರು / ಸೋತವರಲ್ಲಿ ಬಡವರು ಹಸಿದು ಕಂಗಾಲಾದರು /ಗೆದ್ದವರಲ್ಲೂ ಬಡವರು ಹಸಿದು ಕಂಗಾಲಾದರು. /ಮೇಲಿನವರು ಹೇಳುವುದು / ಕೀರ್ತಿಗೆ ಇದು ಪಥ /ಕೆಳಗಿನವರು ತಿಳಿಯುವುದು /ಗೋರಿಗೆ ಇದು ಪಥ.
ಹೀಗೆ ಯುದ್ಧ ವಿರೋಧಿ ಕವಿತೆಗಳನ್ನು ಬರೆಯುತ್ತಾ, ಪತ್ರಿಕೆಗಳಲ್ಲಿ ಲೇಖನ ಬರೆಯುತ್ತಾ ಹಿಟ್ಲರ್ ಕೆಂಗಣ್ಣಿಗೆ ಗುರಿಯಾಗಿದ್ದ ಬ್ರೆಕ್ಟ್ ನು 1933 ಎಲ್ಲಿ ಹಿಟ್ಲರ್ ನೇತೃತ್ವದ ಸರ್ಕಾರವು ಜರ್ಮನಿಯಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಜೀವ ಭಯದಿಂದ ತಾಯ್ನಾಡನ್ನು ತ್ಯೆಜಿಸಿದ. ಅಂತಹ ಕಡು ಕಷ್ಟದ ಸಮಯದಲ್ಲಿಯೂ ಸಹ ಅವನೊಳಗಿನ ಸೃಜನಶೀಲತೆ ಬತ್ತಿ ಹೋಗಲಿಲ್ಲ.
ಕಗ್ಗತ್ತಲ ಕಾಲದಲ್ಲಿ ಹಾಡುವುದೂ ಉಂಟೆ? / ಹೌದು ಹಾಡುವುದು ಉಂಟು /ಕಗ್ಗತ್ತಲ ಕಾಲವನ್ನು ಕುರಿತು.
ಎಂಬ ಅದ್ಭುತವಾತ ಕವಿತೆಯೊಂದು ಬ್ರೆಕ್ಟ್ ನಿಂದ ರಚಿತವಾಯಿತು. ಜರ್ಮನಿಯಲ್ಲಿ ಇದ್ದಾಗಲೇ ಬ್ರೆಕ್ಟ್ ಅಲ್ಲಿನ ರಂಗಭೂಮಿಯ ಖ್ಯಾತ ನಿರ್ದೆಶಕರಾದ ಎರ್ವಿನ್ ಪಿಸ್ಕೇಟರ್ ಮತ್ತು ಮ್ಯಾಕ್ಸ್ ರೈನ್ ಹಾರ್ಟ್ ಎಂಬುವವರ ಕೈಕೆಳೆಗೆ ದುಡಿದು,ರಂಗಭೂಮಿಯ ಅನುಭವವನ್ನು ತನ್ನದಾಗಿಸಿಕೊಂಡಿದ್ದ.
ಬ್ರೆಕ್ಟ್ ಮಡದಿ ಹೆಲೆನ್ ವಿಗೆಲ್ ಕೂಡ ರಂಗಭೂಮಿಯ ಹಿನ್ನಲೆಯಿಂದ ಬಂದವಳಾಗಿದ್ದು, ಒಳ್ಳೆಯ ನಟಿ ಕೂಡ ಆಗಿದ್ದಳು. ಬ್ರೆಕ್ಟ್ ಮತ್ತು ವಿಗೆಲ್ ಇಬ್ಬರೂ ಕೂಡಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾಗ, ಮಾಗ್ರೇಟ್ ಸ್ಟೆಪಿನ್ ಎಂಬಾಕೆ ಅವರನ್ನು ಕೂಡಿಕೊಂಡಳು. ನಂತರ ಬ್ರೆಕ್ಟ್ ಆಪ್ತ ಸಂಗಾತಿಯಾಗಿÀ, ಸಹ ನಾಟಕಕಾರ್ತಿಯಾಗಿ ಬ್ರೆಕ್ಟ್ ರಚಿಸಿದಗೆಲಿಲಿಯೋ, ಕಾಕೇಶಿಯನ್ ಚಾಕ್ ಸರ್ಕಲ್ , ಗುಡ್ ವುಮನ್ ಆಫ್ ಸೆಜುವಾನ್ನಾಟಕ ಕೃತಿಗಳಿಗೆ ಕೈ ಜೋಡಿಸಿದ್ದಳು. ಅಲ್ಲದೆ ಬ್ರೆಕ್ಟ್ ರಚಿಸಿದ ನೂರಾರು ಕವಿತೆಗಳನ್ನು ಜೋಪಾನವಾಗಿ ಕಾಯ್ದಿರಿಸಿದ್ದಳು. ಬ್ರೆಕ್ಟ್ ಮತ್ತು ಸ್ಟೆಪಿನ್ ನಡುವಿನ ಸಂಬಂಧ ಹಲವು ಕಾಲ ಬ್ರೆಕ್ಟ್ ಮತ್ತು ಹೆಲೆನ್ ವಿಗೆಲ್ ನಡುವಿನ ದಾಂಪತ್ಯದಲ್ಲಿ ಬಿರುಕು ಮೂಡಿಸಿದ್ದೂ ಉಚಿಟು. ಆದರೆ, ರಂಗಭೂಮಿ ಚಟುವಟಿಕೆಯಲ್ಲಿ ಆಕೆಗಿದ್ದ ಆಸಕ್ತಿ ಮತ್ತು ಬದ್ಧತೆ ಬ್ರೆಕ್ಟ್ ನನ್ನು ಆಕೆಯ ಜೊತೆ ಬಂಧಿಸಿದ್ದವು.
1933 ರಲ್ಲಿ ಜರ್ಮನಿಯಲ್ಲಿ ನಾಜಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬ್ರೆಕ್ಟ್ ತನ್ನ ಸಂಸಾರ ಸಮೇತ ದೇಶವನ್ನು ತೊರೆದು ಡೆನ್ಮಾರ್ಕ್, ಫಿನ್ಲ್ಯಾಂಡ್ , ಸ್ವೀಡನ್ ಹೀಗೆ ಹಲವು ದೇಶಗಳಲ್ಲಿ ದೇಶಭ್ರಷ್ಟನಾಗಿ ಕಾಲಕಳೆಯುತ್ತಿದ್ದಾಗ, ಸ್ಟೆಪಿನ್ ಕೂಡ ಅವನ ಜೊತೆಗಿದ್ದಳು. P್ಪ್ಷಯ ರೋಗದಿಂದ ಬಳಲುತ್ತಿದ್ದ ಆಕೆಯು ರಷ್ಯಾದ ಮಾಸ್ಕೊ ನಗರದಲ್ಲಿ ಅಸು ನೀಗಿದಳು. ಅವಳ ಸಾವು ಬ್ರೆಕ್ಟ್ ಪಾಲಿಗೆ ದೊಡ್ಡ ಅಘಾತವಾಗಿತ್ತು. ಅವನು 1941 ರಲ್ಲಿ ಅಮೇರಿಕಾಕ್ಕೆ ವಲಸೆ ಹೋಗಿ ಅಲ್ಲಿ ನೆಲೆ ನಿಂತ ನಂತರವೂ ಆಕೆಯ ನೆನಪಿಗಾಗಿ ಹಲವು ಕವಿತೆಗಳನ್ನು ಬರೆದನು.
1
ಹಿಟ್ಲರನ ಹಿಂಸೆಯಿಂದ ತಪ್ಪಿಸಿಕೊಳ್ಳಲು /ಊರೂರು ಅಲೆಯುತ್ತಿದ್ದ ಒಂಬತ್ತನೆಯ ವರ್ಷ /ಫಿನ್ ಲ್ಯಾಡಿನ ಹಸಿ ಶೀತ ಗಾಳಿಗೆ, ಒಣ ಹಸಿವಿಗೆ /ಬಸವಳಿದು /ಮತ್ತೊಂದು ಖಂಡಕ್ಕೆ ಓಡಲು /ಕಾಯುತ್ತಿದ್ದಾಗ /ನನ್ನ ಸಂಗಾತಿ ಸ್ಟೆಪಿನ್ ಕೆಂಪು ನಗರಿ ಮಾಸ್ಕೋದಲ್ಲಿ ಕೊನೆಯುಸಿರೆಳದಳು.
2
ನನ್ನ ದಂಡನಾಯಕಿ ನೆಲಕ್ಕುರುಳಿದಳು /ನನ್ನ ಸೇನಾನಿ ನೆಲಕ್ಕುರುಳಿದಳು /ನನ್ನ ಶಿಷ್ಯೆ  ಮರೆಯಾದಳು /ನನ್ನ ಗುರು ಮರೆಯಾದಳು /ನನ್ನ ಸಾಕಿದವಳು ಇಲ್ಲವಾದಳು /ನಾನು ಸಾಕಿದವಳು ಇಲ್ಲವಾದಳು.
ಇಂತಹ ಸಂಗಾತಿಯ ನೋವಿನ ನೆನಪಿನ ನಡುವೆಯೂ ಅಮೇರಿಕಾದಲ್ಲಿ  ಬ್ರೆಕ್ಟ್ ರಂಗಭೂಮಿ ಮತ್ತು ಅಲ್ಲಿನ ಹಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯನಾಗಿದ್ದ. ಆದರೆ, ಒಂದಿಷ್ಟು ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ಬರೆದ ನಂತರ ನಂತರ ನನ್ನ ವೃತ್ತಿ ಮತ್ತು ಹವ್ಯಾಸಕ್ಕೆ ಇದು ತಕ್ಕದಲ್ಲ ಎಂದು ನಿರ್ಧರಿಸಿ, ರಂಗಭೂಮಿ ಚಟುವಟಿಕೆಯಲ್ಲಿ ತೀವ್ರವಾಗಿ ತೊಡಗಿಸಿಕೊಂಡನು.
ಬ್ರೆಕ್ಟ್ ಅಮೇರಿಕಾದಲ್ಲಿ ವಾಸವಾಗಿದ್ದ ಅವಧಿಯಲ್ಲಿ ಅವನಿಂದ ಅನೇಕ ಶ್ರೇಷ್ಠ ನಾಟಕಗಳು, ಕವಿತೆಗಳು ರಚಿನೆಯಾದವು. ಸ್ವತಃ ಒಬ್ಬ ಕಮ್ಯೂನಿಷ್ಟ್ ವಿಚಾರಧಾರೆಯಲ್ಲಿ ನಂಬಿಕೆಯುಳ್ಳವನಾಗಿದ್ದ ಬ್ರೆಕ್ಟ್ ಕಾಲಕ್ರಮೇಣ ಅದರಿಂದ  ಭ್ರಮ ನಿರಸನಗೊಳ್ಳುವುದರ ಜೊತೆಗೆ ರಷ್ಯಾದಲ್ಲಿ ಸ್ಟಾಲಿನ್ ಆಳ್ವಿಕೆಯ ಅತಿರೇಕವನ್ನು ಕಂಡು ಜಿಗುಪ್ಸೆಗೊಂಡನು. ತಾನು ಜೀವ ಭಯದಿಂದ ದೇಶದಿಂದ ದೇಶಕ್ಕೆ ಪಲಾಯಗೈದು ಬದುಕುತ್ತಿದ್ದಾಗ, ತನ್ನ ಗೆಳೆಯರು ಜರ್ಮನಿಯಲ್ಲಿ ಹಿಟ್ಲರನ ಹಿಂಸೆಯಲ್ಲಿ ನರಳಿ ಸಾವನ್ನಪ್ಪುವಾಗ ಒಳಗೊಳಗೆ ನರಳಿ ಕೊರಗಿದನು.
ನಾನು ಚೆನ್ನಾಗಿ ಬಲ್ಲೆ; ಅನೇಕ ಸ್ನಹಿತರು ಸತ್ತೂ ನಾನು ಬದುಕಿ ಉಳಿದದ್ದು /ಬರಿಯ ಅದೃಷ್ಟ ಅಷ್ಟೇ. ಆದರೆ ರಾತ್ರಿಯ ಕನಸಿನಲ್ಲಿ / ಸ್ನೇಹಿತರು ನನ್ನನ್ನು ಕುರಿತಾಡಿದರು, ಗಟ್ಟಿಗರಷ್ಟೇ ಬದುಕಿ ಉಳಿಯುತ್ತಾರೆ/ಇದನು ಕೇಳಿ, ನನ್ನ ಬಗ್ಗೆ ನನಗೆ ದ್ವೇಷ ಹುಟ್ಟಿತು.
ಇಂತಹ ಪಾಪ ಪ್ರಜ್ಞೆಯ ಕವಿತೆಯನ್ನು ಬರೆದು ಅಮೇರಿಕಾದಲ್ಲಿ ಉತ್ತುಂಗ ಸ್ಥಿತಿಯಲ್ಲಿದ್ದಾಗ, ಅಲ್ಲಿಯೂ ಕೂಡ ಅವನು ತನ್ನ ನಾಟಕಗಳು ಮತ್ತು ಕವಿತೆಗಳ ಕುರಿತಂತೆ ಸರ್ಕಾರದಿಂದ 1947 ರಲ್ಲಿ  ವಿಚಾರಣೆ ಎದುರಿಸಬೇಕಾಯಿತು. ಎರಡನೆಯ ಮಹಾಯುದ್ಧ ಮುಗಿದು ಜರ್ಮನಿಯು ಪೂರ್ವ ಮತ್ತು ಪಶ್ಚಿಮ ಎಂದು ಎರಡು ಹೋಳಾದ ನಂತರ, ಬ್ರೆಕ್ಟ್ 1949 ರಲ್ಲಿ ತನ್ನ ತಾಯ್ನಾಡಿಗೆ ಹಿಂತಿರುಗಿದ. ಪೂರ್ವ ಜರ್ಮನಿಯಲ್ಲಿ ವಾಸವಾಗಿದ್ದರೂ ಸಹ ಅಲ್ಲಿನ ಸರ್ಕಾರದ ವಿರುದ್ಧ ಆತನ ಪ್ರತಿಭಟನೆಗಳು ನಾಟಕ ಮತ್ತು ಕಾವ್ಯದ ಮೂಲಕ ಮುಂದುವರಿದಿದ್ದವು. ಅಲ್ಲಿನ ಸರ್ಕಾರ ಅವನಿಗೆ ಅನೇಕ ರೀತಿಯ ಸೌಲಭ್ಯವನ್ನು ಒದಗಿಸಿತ್ತು. ರಷ್ಯಾ ಸರ್ಕಾರದ ನೀತಿಯನ್ನು ಅವನು ವಿರೋಧಿಸಿತ್ತಿದ್ದರೂ ಸಹ 1955 ರಲ್ಲಿ ಅಲ್ಲಿನ ಸಕಾರ ಅವನಿಗೆ ಅಲ್ಲಿನ ಪ್ರತಿಷ್ಟಿತ ಸ್ಟಾಲಿನ್ ಪ್ರಶಸ್ತಿಚಿುನ್ನು ನೀಡಿದಾಗ ಮುಜುಗರದ ನಡೆವೆಯೂ ಅದನ್ನು ಸ್ವೀಕರಿಸಿದ. ಜರ್ಮನಿಯಲ್ಲಿದ್ದುಕೊಂಡು, ಆಸ್ಟ್ರೀಯಾ ದೇಶದ ಪೌರತ್ವವನ್ನು ಅಭದ್ರತೆಯ ಕಾರಣ ಉಳಿಸಿಕೊಂಡು ಬಂದಿದ್ದ ಬಂದಿದ್ದ ಬ್ರೆಕ್ಟ್ 1956 ಆಗಸ್ಟ್ 14 ರಂದು ನಿಧನ ಹೊಂದಿದನು. ತಾನು ಇಲ್ಲವಾಗಿ ಆರು ದಶಕಗಳು ಕಳೆದರೂ ಸಹ ಜಗತ್ತಿನ ಎಲ್ಲಾ ಪ್ರಗತಿಪರರ ಎದೆಯೊಳಗೆ ಜೀವಂತವಾಗಿದ್ದಾನೆ.

( ವಿ.ಸೂ. ಇಲ್ಲಿ ಬಳಸಲಾಗಿರುವ ಕವಿತೆಗಳು ಶಾ.ಬಾಲುರಾವ್, ಯು.ಆರ್.ಅನಂತಮೂರ್ತಿ , ಕೆ,ಫಣಿರಾಜ್ ಮತ್ತು ಡಾ.ಹೆಚ್..ಎಸ್. ಅನುಪಮಾ ಇವರು ಅನುವಾದಿಸಿದ ಕವಿತೆಗಳಾಗಿದ್ದು, ಲೇಖಕ ಇವರಿಗೆ ಋಣಿಯಾಗಿದ್ದಾನೆ)

( ಶಿವಮೊಗ್ಗ ವಿಶ್ವ ವಿದ್ಯಾನಿಲಯದಲ್ಲಿ ಬ್ರೆಕ್ಟ್ ಕಾವ್ಯ ಕುರಿತು ನೀಡಿದ ಉಪನ್ಯಾಸದ ಲಿಖಿತ ರೂಪ)


ಶುಕ್ರವಾರ, ಸೆಪ್ಟೆಂಬರ್ 15, 2017

ಗಾಂಧಿವಾದಿ ಪ್ರಸನ್ನ ತೆರೆದಿಟ್ಟ ಸರಕು ಮತ್ತು ಸೇವಾ ತೆರಿಗೆಯ ನ್ಯೂನ್ಯತೆಗಳು

ಈ ದೇಶದ ಯಾವುದೇ ಒಬ್ಬ ಜನನಾಯಕ ಎನಿಸಿಕೊಂಡ ವ್ಯಕ್ತಿ;  ಅವನು ಪ್ರಧಾನಿಯಾಗಿರಲಿ ಅಥವಾ ಮುಖ್ಯ ಮಂತ್ರಿಯಾಗಿಲಿ, ಅವನು ರಾಜಕೀಯನೀತಿಯ ತಜ್ಞನಾಗಿರಬೇಕು ಇಲ್ಲವೆ, ಆರ್ಥಿಕ ತಜ್ಞನಾಗಿರಬೇಕು ಎಂದು ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಭಾರತದಂತಹ ದೇಶದಲ್ಲಿ ನಿರೀಕ್ಷಿಸುವುದು ಕಷ್ಟ. ಜೊತೆಗೆ ಅಂತಹ ನಿರೀಕ್ಷೆಗಳಿರಬಾರದು. ಆದರೆ, ಅಧಿಕಾರದ ಗದ್ದುಗೆಗೆ ಏರಿದ ಸಂದರ್ಭದಲ್ಲಿ ತನ್ನ ಬಳಿ ಕನಿಷ್ಟ ಒಂದಿಷ್ಟು ಒಳ್ಳೆಯ ಮಂದಿ ತಜ್ಞರನ್ನು ತನ್ನ ಇಟ್ಟುಕೊಳ್ಳಬೇಕಾಗಿರುವುದು ನೈತಿಕ ಕರ್ತವ್ಯ.
ಭಾರತದ ಸಂದರ್ಭದಲ್ಲಿ 2014 ರಿಂದ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ನಂತರ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಘೋಷಿಸಲಾದ ಬಹುತೇಕ ಯೋಜನೆಗಳುಅದು ನಮಾಮಿ ಗಂಗಾ ಯೋಜನೆ ಇರಬಹುದು, ಸ್ವಚ್ಛ ಭಾರತ್, ಜನಧನ್, ಸ್ಮಾರ್ಟ್ಸಿಟಿ ಹೀಗೆ ಹಲವು ಯೋಜನೆಗಳು ಮಕಾಡೆ ಮಲಗಿದ ಪರಿ ಇವುಗಳನ್ನು ಅವಲೋಕಿಸಿದರೆ, ದೇಶದ ಪ್ರಧಾನಿಗೆ ಯಾವ ರಂಗÀ ತಜ್ಞರೂ ಬೇಕಾಗಿಲ್ಲ ಎನಿಸುತ್ತಿದೆ. ವಿಶೇಷವಾಗಿ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ರಂಗಗಳ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಬಹುತೇಕ ವಿದ್ವಾಂಸರುಗಳು ದೇಶ,ಕಾಲ, ಜಾತಿ ಮತ್ತು ಧರ್ಮದ ಎಲ್ಲೆಯನ್ನು ಮೀರಿ ತಮ್ಮ ಅಧ್ಯಯನದ ಕ್ಷೇತ್ರದ ವಿಷಯಗಳಿಗೆ ಬದ್ಧರಾಗಿರುವುದನ್ನು ನಾವು ಜಗತ್ತಿನೆಲ್ಲೆಡೆ ಕಾಣುತ್ತಿದ್ದೇವೆ. ಇಂತಹ ವ್ಯಕ್ತಿಗಳನ್ನು ಅನೇಕ ರಾಜಕೀಯ ಪಕ್ಷಗಳು, ನಾಯಕರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸಲಹೆಗಾರರನ್ನಾಗಿ ಮಾಡಿಕೊಳ್ಳುವುದು ಸಂಪ್ರದಾಯ. ಆದರೆ, ಈಗನ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರಿಗೆ ಇಂತಹ ವಿದ್ವಾಂಸರ ಬದಲಾಗಿ ತಮ್ಮ ಮೂಗಿನ ನೇರಕ್ಕೆ ಸಲಹೆ ಪಡೆಯುವ ಭಟ್ಟಂಗಿ ಮಾತ್ರ ಬೇಕಾಗಿದ್ದಾರೆ. ಆದರೆ, ಅವರ ದುರಾದೃಷ್ಟಕ್ಕೆ ಯಾವೊಬ್ಬ ತಜ್ಞನೂ ಭಟ್ಟಂಗಿಯಾಗಿ ಕಾರ್ಯ ನಿರ್ವಹಿಸಲು ಅವರಿಗೆ ದೊರೆಯುತ್ತಿಲ್ಲ. ಹಾಗಾಗಿ ಇಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪಕ್ಷದ ಅಧ್ಯಕ್ಷನೊಬ್ಬ ದೇಶದ ಆರ್ಥಿಕ ಅಭಿವೃದ್ಧಿ ಬೆಳವಣಿಗೆ ದರದ ಮಾನದಂಡವಾದ ಜಿ.ಡಿ.ಪಿ. ಅರ್ಥಾತ್  ರಾಷ್ಟ್ರದ ಒಟ್ಟು ಆಂತರೀಕ ಉತ್ಪನ್ನದ ದರದ ಕುಸಿತವನ್ನು ಟೆಕ್ನಿಕಲ್ ಎರರ್ ಅಂದರೆ ತಾಂತ್ರಿಕ ದೋಷ ಎಂದು ಹೇಳುವುದರ ಮೂಲಕ ತನ್ನ ಮೂರ್ಖತನವನ್ನು ಪ್ರದರ್ಶಿಸಿ ಜಾಗತಿಕ ಮಟ್ಟದಲ್ಲಿ ನೆಗೆಪಾಟಲಿಗೆ ಈಡಾಗಿದ್ದಾನೆ. ಜಿ.ಡಿ.ಪಿ. ಅಭಿವೃದ್ಧಿಯ ದರವೆಂದರೆ, ಗುಜರಾತಿ ಮಾರ್ವಾಡಿ ಅಂಗಡಿಯ ಲೆಕ್ಕದ ಪುಸ್ತಕದೊಳಗಿನ  ಅಂಕಿ ಅಂಶ ಎಂದು ಅಮೀತ್ ಷಾ ಭಾವಿಸಿದಂತಿದೆ.
ಭಾರತದ ಆರ್ಥಿಕ ಬೆಳವಣಿಗೆ ದರವನ್ನು 1951 ರಿಂದ 2017 ರವರೆಗೆ ಗಮನಿಸಿದಾಗ, ಸರಾಸರಿ ಬೆಳವಣಿಗೆ ದರವು ಶೇಕಡ 6.12 ರಷ್ಟು ಇದೆ. 1979 ರಲ್ಲಿ ಮತ್ತು 2010 ರಲ್ಲಿ ಶೇಕಡ 5.20 ರಷ್ಟು ಇದ್ದುದನ್ನು ಹೊರತು ಪಡಿಸಿದರೆ, 2017 ಮೊದಲ ಅರ್ಧವಾರ್ಷಿಕದಲ್ಲಿ ಶೇಕಡ 6.6 ರಷ್ಟು ಇದ್ದ ಬೆಳವಣಿಗೆ ದರವು ಎರಡನೇ ಅರ್ಧವಾಷಿಕದಲ್ಲಿ ಅಂದರೆ ಜುಲೈ ತಿಂಗಳ ನಂತರ ಶೇಕಡ 5.70 ಕ್ಕೆ ಕುಸಿಯುವುದರ ಮೂಲಕ ಭಾರತದ ಆರ್ಥಿಕತೆಯ ಬುನಾದಿಯು ಭದ್ರವಾಗಿಲ್ಲ ಎಂಬುದನ್ನು ಸಾಬೀತು ಪಡಿಸಿದೆ. 2016 ರಲ್ಲಿ ಗೋಹತ್ಯೆ ನಿಷೇದ ಕಾಯ್ದೆಯನ್ನು ಜಾರಿಗೆ ತರಲು ಹೊರಟಾಗ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್ ಸುಬ್ರವ್ಮಣ್ಯಂ ಇದು ವಾಸ್ತವವಾಗಿ ದೇಶದ ಆರ್ಥಿಕತೆ ಪರೋಕ್ಷವಾಗಿ ಹೊಡೆತ ಬೀಳುವ ಕಾಯ್ದೆ ಎಂದು ಎಚ್ಚರಿಸಿದ್ದರು. ಅವರ ಮಾತನ್ನು ಮೀರಿ ಗೋಹತ್ಯೆ ನಿಷೇದ ಕಾಯ್ದೆಯನ್ನು ಜಾರಿಗೆ ತಂದ ಕೇಂದ್ರ ಸರ್ಕಾರಕೆ ಸುಪ್ರೀಂ ಕೋರ್ಟ್ ತಪರಾಕಿ ಬಿದ್ದ ಮೇಲೆ ಸುಮ್ಮನಾಗಬೇಕಾಯಿತು. ನೋಟು ನಿಷೇಧ ವಿಷಯದಲ್ಲಿ ಇದೊಂದು ಮೂರ್ಖತನದ ಕ್ರಮ ಎಂದು ಎಚ್ಚರಿಸಿದ್ದ ರಿಸರ್ವ್ ಬ್ಯಾಂಕ್ ಗೌರ್ನರ್ ರಘುರಾಂ ರಾಜನ್ ಅವರನ್ನು ಅಪಮಾನಿಸಿ ಹುದ್ದೆ ತೊರೆಯುವಂತೆ  ಮಾಡಲಾಯಿತು. ದೇಶದ ಆರ್ಥಿಕತೆಗೆ ಸರಿಸುಮಾರು ಎಂಟು ಕೋಟಿ ಲಕ್ಷ ನಷ್ಟವನ್ಮ್ನಂಟು ಮಾಡಿದ ಕ್ರಮವನ್ನು ಸಮರ್ಥಿಸಿಕೊಂಡಿದ್ದ ನರೇಂದ್ರ ಮೋದಿಯವರು ಇದರಲ್ಲಿ ತಪ್ಪಿದ್ದರೆ ನನ್ನ ಸುಟ್ಟು ಹಾಕಿ ಎಂದು ಘಂಟಾಘೋಷವಾಗಿ ಹೇಳಿಕೊಂಡಿದ್ದರು. ಇವತ್ತಿನ ಆರ್ಥಿಕತೆಯ ಹಿಂಜರಿತಕ್ಕೆ  ನೋಟು ನಿಷೇಧದ ಯೋಜನೆ ಪ್ರಮುಖ ಕಾರಣ ಎಂದು ಎಲ್ಲಾ ಆರ್ಥಿಕ ಅಧ್ಯಯನ ವರದಿಗಳು ಮತ್ತು ಸಮೀಕ್ಷೆಗಳು ಹೇಳುತ್ತಿವೆ. ಇಂತಹ ತೊಘಲಕ್ ದರ್ಬಾರಿಗೆ ಬೇಸತ್ತು ದೇಶದ ಪ್ರಥಮ ನೀತಿ ಆಯೋಗ ( ಹಿಂದಿನ ಯೋಜನಾ ಆಯೋಗದ ಹೆಸರು) ಅಧ್ಯಕ್ಷ ಹಾಗೂ ಹೆಸರಾಂತ ಆರ್ಥಿಕ ತಜ್ಞ ಅವರಿಂದ್ ಪನಾಗ್ರಿಯ ತಮ್ಮ ಹುದ್ದೆ ತೊರೆದು ವಾಪಸ್ ಅಮೇರಿಕಾಕ್ಕೆ ತೆರಳಿದರು. ಜಾಗತಿಕ ಮಟ್ಟದಲ್ಲಿ ಅತಿಶ್ರೇಷ್ಠ ಅರ್ಥ ಶಾಸ್ತ್ರಜ್ಞರು ಎನಿಸಿಕೊಂಡ, ಅಮಾರ್ಥ್ಯ ಸೇನ್ ರಿಂದ ಹಿಡಿದು, ರಘುರಾಂ ರಾಜನ್, ಅರವಿಂದ ಪನಾಗ್ರಿಯ ಇಂತಹ ಭಾರತೀಯರ ಸೇವೆಯನ್ನು ಪಡೆಯಲಾದ ಮೋದಿ ಸರ್ಕಾರ ಇಂದು ಊರ್ಜಿತ್ ಪಟೇಲ್ ಎಂಬ ಭಟ್ಟಂಗಿ ಒಬ್ಬನನ್ನು ರಿಸರ್ವ್ ಗೌರ್ನರ್ ಸ್ಥಾನಕ್ಕೆ ತಂದು ಕೂರಿಸಿದೆ. ಈತ ಎಂತಹ ಎಡವಟ್ಟು ಗಿರಾಕಿಯೆಂದರೆ, ನೋಟು ನಿಷೇಧ ಯೋಜನೆಯಿಂದ ಬ್ಯಾಂಕಿಗೆ ವಾಪಸ್ ಬಂದ ಸಾವಿರ ಮತ್ತು ಐನೂರು ರೂಪಾಯಿ ಮೌಲ್ಯದ ನೋಟುಗಳ ಎಣಿಕೆ ಕಾರ್ಯ ನಡೆಯುತ್ತಿದೆ ಎಂಬ ಹೇಳಿಕೆಯನ್ನು ನೀಡುವುದರ ಮೂಲಕ ತಾನೊಬ್ಬ ಅಸಮರ್ಥ ಮತ್ತು ಅಯೋಗ್ಯ ಎಂಬುದನ್ನು ತೋರಿಸಿಕೊಂಡಿದ್ದಾನೆ. ರಿಸರ್ವ್ ಬ್ಯಾಂಕ್ ತಿರುಪತಿ ತಿಮ್ಮಪ್ಪನ ಹುಂಡಿ ಎಂದು ಈತ ಭಾವಿಸಿದಂತಿದೆ. ಹಾಗಾದರೆ ದೇಶದ ಜನತೆ ಹಳೆಯ ನೋಟುಗಳ ಬದಲಾಗಿ ಹೊಸನೊಟುಗಳನ್ನು ವಿನಿಮಯ ಮಾಡಿಕೊಂಡ ಅಂಕಿ ಅಂಶ ರಿಸರ್ವ್ಬ್ಯಾಂಕಿನ ಬಳಿ ಇಲ್ಲ ಎಂದರ್ಥ. ಹಾಗಾದರೆ, ಬ್ಯಾಂಕ್ ಸಾರ್ವಜನಿರ್ಕರಿಗೆ ಬಿಡುಗಡೆ ಮಾಡಿದ ಎರಡು ಸಾವಿರ ಮತ್ತು ಐನೂರು ಹೊಸ ನೋಟುಗಳ ಒಟ್ಟು ಮೌಲ್ಯವೆಷ್ಟು? ಇಂತಹ  ಪ್ರಹಸನಗಳನ್ನು ನೋಡುತ್ತಿದ್ದರೆ, ಇವರೆಲ್ಲರೂ ದೇಶವನ್ನು ದಿವಾಳಿ ಎಬ್ಬಿಸಲು ಪಣತೊಟ್ಟವರಂತೆ ಕಾಣುತ್ತಾರೆ.
ಇತ್ತೀಚೆಗೆ ಜಾರಿಗೆ ಬಂದ ಏಕರೂಪದ ತೆರಿಗೆ ಪದ್ಧತಿಯಲ್ಲಿ ಅಂದರೆ ಜಿ.ಎಸ್.ಟಿ. ಪದ್ದತಿಯಲ್ಲಿ ಇರುವ ನ್ಯೂನ್ಯತೆಗಳನ್ನು ಗಮನಿಸಿದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದ ಗುಡಿ ಕೈಗಾರಿಕೆಗಳ ಮೇಲೆ ಮತ್ತು ಅಸಂಖ್ಯಾತ ಕುಶಲ ಕರ್ಮಿಗಳ ತಲೆಯ ಮೇಲೆ ಶಾಶ್ವತವಾಗಿ ಚಪ್ಪಡಿ ಕಲ್ಲು ಎಳೆಯಲು ನಿರ್ಧರಿಸಿದಂತೆ ಕಾಣುತ್ತಿದೆ. ವಾಸ್ತವವಾಗಿ ಸಮಾಜದಲ್ಲಿನ ಅಸಮಾನತೆಯನ್ನು  ಹೋಗಲಾಡಿಸುವ ನಿಟ್ಟಿನಲ್ಲಿ ಜಾರಿಗೆ ಬಂದ ತೆರಿಗೆ ನಿಯಮದ ಆಯುಧವು ಈಗ  ಸರಕು ಮತ್ತು ಸೇವಾ ತೆರಿಗೆ ಹೆಸರಿನಲ್ಲಿ ರೂಪಾಂತರಗೊಂಡು ಬಡವ ಮತ್ತು ಬಲ್ಲಿದ ಎಂಬ ಭೇದ ಭಾವವಿಲ್ಲದೆ ಇಬ್ಬರಿಗೂ ಸಮಾನವಾಗಿ ಬಳಕೆಯಾಗುತ್ತಿದೆ. ರಸ್ತೆಯ ಬದಿಯ ಮರದ ನೆರಳಿನಲ್ಲಿ ಕುಳಿತು ಚರ್ಮದ ಚಪ್ಪಲಿ ತಯಾರಿಸುವ ಚಮ್ಮಾರನಿಗೆ ವಿಧಿಸುವ ತೆರಿಗೆಯನ್ನುಅತ್ಯಾಧುನಿಕ ತಂತ್ರಜ್ಞಾನ ಬಳಸಿ ಚರ್ಮದ ಚಪ್ಪಲಿ ತಯಾರಿಸು ಬಾಟಾ ದಂತಹ ಬೃಹತ್ ಕಂಪನಿಗೂ ವಿಧಿಸಲಾಗುತ್ತಿದೆ. ಉತ್ಪಾದನಾ ವೆಚ್ಚದಲ್ಲಿ ಕಡಿಮೆಯಾಗುವ ಕಂಪನಿಯ ಜೊತೆ ಬಡ ಚಮ್ಮಾರನು ತನ್ನ ಉತ್ಪನ್ನಗಳ ಜೊತೆ ಸ್ಪರ್ಧಿಸುವ ಬಗೆ ಹೇಗೆ? ಕೈ ಉತ್ಪನ್ನಗಳಿಗೆ ಮತ್ತು ಗುಡಿ ಕೈಗಾರಿಕೆಗಳಿಗೂ ಹಾಗೂ ಬಹು ರಾಷ್ಟ್ರೀಯ ಕಂಪನಿಗಳ ಉತ್ಪಾದನೆಗಳಿಗೂ ಸಮಾನ ರೀತಿಯಲ್ಲಿ ತೆರಿಗೆ ವಿಧಿಸುವುದಾದರೆ, ಬಡವರು ಬದುಕು ಮಾರ್ಗ ಯಾವುದು?
ಕಳೆದ ಮಂಗಳ ವಾರ ಧಾರವಾಡಕ್ಕೆ ಆಗಮಿಸಿದ್ದ ಪ್ರಸನ್ನರವರು ನೂತನ ತೆರಿಗೆ ಪದ್ಧತಿಯಲ್ಲಿ ಬಡವರನ್ನು ಮತ್ತು ಕುಶಲ ಕರ್ಮಿಗಳನ್ನು ಹಾಗೂ ಅವರ ಕೈ ಉತ್ಪನ್ನಗಳನ್ನು ಕೇಂದ್ರ ಸರ್ಕಾರ ಹೇಗೆ ಜಾಣ್ಮೆಯಿಂದ ದೂರವಿಟ್ಟಿದೆ ಎಂಬುದನ್ನು ಸಮಾನ ಮನಸ್ಕ ಗೆಳೆಯರೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ಸಣ್ಣ ಮಟ್ಟದ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ 20 ಲಕ್ಷದ ರೂಪಾಯಿನ ವಹಿವಾಟಿನವರೆಗೆ ವಿನಾಯಿತಿ ಘೋಷಿಸಿದೆ. ಮೇಲ್ನೋಟಕ್ಕೆ ಇದೊಂದು ಒಳ್ಳೆಯ ಕ್ರಮ ಎನಿಸಿದರೂ, ಅದರೊಳಗೆ ಗುಡಿಕೈಗಾರಿಕೆಗಳನ್ನು ನಾಶಗೊಳಿಸುವ ಹುನ್ನಾರ ಅಡಗಿದೆ. ತಾನಿರುವ ಸ್ಥಳದಲ್ಲಿ ಚಪ್ಪಲಿ, ಅಗರಬತ್ತಿ, ಸಾಬೂನು, ಅಥವಾ ಕೃಷಿ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವ ಉತ್ಪಾದಕ 20 ಲಕ್ಷ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಅವನು ಅವುಗಳನ್ನು ನೆರೆಯ ಜಿಲ್ಲೆಗಳಿಗೆ ಅಥವಾ ರಾಜ್ಯಗಳಿಗೆ ತೆರಳಿ ಮಾರಾಟ ಮಾಡಬೇಕು. ಆದರೆ, ನೂತನ ತೆರಿಗೆ ನಿಯಮದ ಪ್ರಕಾರ ಜಿ.ಎಸ್.ಟಿ. ತೆರಿಗೆ ನೊಂದಣಿ ಸಂಖ್ಯೆಯಿಲ್ಲದೆ, ಯಾವುದೇ ರೀತಿಯ  ವಸ್ತುಗಳನ್ನು ರೈಲು ಅಥವಾ ಲಾರಿಗಳಲ್ಲಿ ಪಾರ್ಸಲ್ ಮೂಲಕ ಕಳಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಸರಕು ಸಾಗಾಣಿಕೆ ಸಂಸ್ಥೆಗಳು ಇಂತಹ ವಸ್ತುಗಳನ್ನು ಸ್ವೀಕರಿಸುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಸಣ್ಣ ಉತ್ಪಾದಕ ತನ್ನ ವಸ್ತುಗಳನ್ನು ಮಾರಾಟ ಮಾಡುವ ಬಗೆ ಹೇಗೆ?

ಮಹಾತ್ಮ ಗಾಂಧೀಜಿಯವರ ಆಶಯಕ್ಕೆ ತಕ್ಕಂತೆ ಭಾರತದ ಗುಡಿ ಕೈಗಾರಿಕೆಗಳ ಅಭಿವೃದ್ಧಿಗಾಗಿ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಸಂವಿಧಾನ ಬದ್ಧವಾಗಿ ದೇಶದ ವಿವಿಧೆಡೆ ಖಾದಿ ಗ್ರಾಮೋದ್ಯೋಗ ಕೇಂದ್ರಗಳನ್ನು ತೆರಲಾಯಿತು. ಇವುಗಳ ಮೂಲಕ ತರಭೇತಿ, ಆರ್ಥಿಕ ಸಹಾಯ ನೀಡುವುದರ ಮೂಲಕ ಕೋಟ್ಯಾಂತರ ಸಾಮಾನ್ಯ ಜನರಿಗೆ ಖಾದಿ ಹಾಗೂ ಇತರೆ ಸಣ್ಣ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲಾಯಿತು. ಇದೀಗ  ಜಿ.ಎಸ್.ಟಿ. ತೆರಿಗೆಯಲ್ಲಿ ಖಾದಿಯನ್ನು ಹೊರತು ಪಡಿಸಿ, ಇತರೆ ಉತ್ಪನ್ನಗಳಿಗೆ ಜೇನುತುಪ್ಪ, ಹಪ್ಪಳ, ಉಪ್ಪಿನಕಾಯಿ, ಅಗರಬತ್ತಿ, ಸೋಪು, ಚರ್ಮ ಮತ್ತು ಸೆಣಬು, ತೆಂಗಿನ ನಾರು ಇಂತಹ ವಸ್ತುಗಳಿಂದ ತಯಾರಿಸಿದ ಗೃಹ ಉತ್ಪನ್ನಗಳಿಗೆ ತೆರಿಗೆ ವಿಧಿಸಲಾಗಿದೆ. ಈವರೆಗೆ ಚರಕದ ಹಿಂದೆ ಕುಳಿತು ನೂಲು ನೇಯುವ ಗಾಂಧಿಯ ಚಿತ್ರವನ್ನು ನೋಡಿಕೊಂಡು ಬಂದಿದ್ದ ಭಾರತೀಯರಿಗೆ, ವರ್ಷ ಇದೇ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಕ್ಯಾಲೆಂಡರ್ ಮತ್ತು ದಿನಚರಿ ಪುಸ್ತಕಗಳಲ್ಲಿ ಚರಕದ ಜೊತೆ ಮೋದಿಯ ಚಿತ್ರವನ್ನು ನೋಡುವಂತಾಯಿತು. ದೇಶದ ಪ್ರಧಾನಿಗೆ  ಚರಕದ ಜೊತೆ ಕುಳಿತು ಚಿತ್ರ ತೆಗೆಸಿಕೊಳ್ಳುವಾಗ ಇರುವ ಕಾಳಜಿ, ಅದರ ಉತ್ನನ್ನಗಳ ಕುರಿತು ಏಕಿಲ್ಲ? ಚರಕ ಎನ್ನುವುದು  ಕೇವಲ ಒಂದು ಒಂದು ಕಟ್ಟಿಗೆಯ ಸಾಧನ ಮಾತ್ರವಲ್ಲ, ಅದು ದೇಶದ ಶ್ರಮಿಕರ ಮತ್ತು ಅವರ ಕಾಯಕ ಹಾಗೂ ಅವರ ಬೆವರ ಹನಿಗಳ ಪ್ರತಿಮೆ ಕೂಡ ಹೌದು ಜೊತೆಗೆ ಸ್ವಾಭಿಮನ ಮತ್ತು ಸ್ವತಂತ್ರದ ಸಂಕೇತವೂ ಕೂಡ ಹೌದು.
( ಕರಾವಳಿ ಮುಂಜಾವು ಪತ್ರಿಕೆಯ " ಜಗದಗಲ" ಅಂಕಣ ಬರಹ)