ಸೋಮವಾರ, ಜುಲೈ 18, 2022

ಕೋಮುವಾದ ಮಾಧ್ಯಮದ ತಗಡಿನ ತುತ್ತೂರಿಗಳಿಗೆ ಮಾರ್ಕ್ ಟುಲಿಯ ಪಾಠಗಳು

 

 



ಕನ್ನಡ ಪತ್ರಿಕೋದ್ಯಮದಲ್ಲಿ ಸಂಪೂರ್ಣವಾಗಿ ಅಲ್ಲದಿದ್ದರೂ ಬಹುತೇಕ ಭಾಗ ದೃಶ್ಯಮಾಧ್ಯಮಗಳು ಮತ್ತು ಮುದ್ರಣ ಮಾಧ್ಯಮಗಳು ಕಳೆದ ಎರಡು ತಿಂಗಳ ಅವಧಿಯಲ್ಲಿ ತಲುಪಿರುವ ಅಧೋಗತಿ ಮತ್ತು ಮುಸ್ಲಿಮರ ವಿರುದ್ಧ ವಿಷ ಕಕ್ಕುತ್ತಿರುವ ವೈಖರಿಯನ್ನು ಗಮನಿಸಿದರೆ ನಿಜಕ್ಕೂ ಆತಂಕವಾಗುತ್ತದೆ. ಜಾತಿ, ಧರ್ಮದ ಹಂಗಿಲ್ಲದೆ ಸಾಮಾನ್ಯ ಜನರ ಧ್ವನಿಯಾಗಿ ನಿಲ್ಲಬೇಕಾದ ಮಾಧ್ಯಮಗಳು ಆಳುವವರ ಹಾಗೂ ಹಿಂದೂ ಧರ್ಮದ ತಗಡಿನ ತುತ್ತೂರಿಗಳಂತೆ ಗೋಚರವಾದರೆ, ಪತ್ರಕರ್ತರು ಅಕ್ಷರದ ವ್ಯಭಿಚಾರಿಗಳಂತೆ ಕಾಣಿಸುತ್ತಾರೆ.

ಇಲ್ಲಿ ನಾನು ಎತ್ತುತ್ತಿರುವ ಪ್ರಶ್ನೆಗಳು ಕೇವಲ  ನನ್ನವು ಮಾತ್ರವಲ್ಲದೆ ಕನ್ನಡ ನೆಲದ ಪ್ರತಿಯೊಬ್ಬ ಪ್ರಜ್ಞಾವಂತನ ಪ್ರಶ್ನೆಗಳಾಗಿವೆ.

ಪ್ರಶ್ನೆ ಒಂದು- ಉಡುಪಿಯ ಕಾಲೇಜಿನಲ್ಲಿ ಸ್ಥಳಿಯ ಶಾಸಕನೊಬ್ಬ ಎತ್ತಿದ ಹಿಜಾಬ್ ಪ್ರಶ್ನೆ ನಿಜಕ್ಕೂ ಈ ಸಮಾಜದ ಸಮಸ್ಯೆಯಾಗಿತ್ತಾ? ಹರೆಯದ ಹೆಣ್ಣು ಮಕ್ಕಳು ಅವರು ಯಾವ ಧರ್ಮಕ್ಕೆ ಸೇರಿರಲಿ. ಸಾರ್ವಜನಿಕವಾಗಿ ತಲೆಯ ಮೇಲೆ ಸರಗಿನ ರೀತಿ ವಸ್ತ್ರ ಹಾಕಿಕೊಂಡು ಬಂದು ತರಗತಿಯಲ್ಲಿ ಕುಳಿತು ಮುಸುಕು ತೆಗೆದು ಪಾಠ ಕೇಳುವುದು ತಪ್ಪಾ? ಎಂದು ನೀವು ಕೇಳುವುದರ ಬದಲು  ಈ ವಿವಾದವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿರಿ. ವಿಷ ಕಕ್ಕುವ ಅನಾಮಧೇಯ ನರಿ ನಾಯಿಗಳಿಗೆ ಇಲ್ಲದ ಪ್ರಚಾರವನ್ನು ನೀಡಿದಿರಿ. ಇದು ಪರೋಕ್ಷವಾಗಿ ಈಗ ತಾನೆ ಶಿಕ್ಷಣಕ್ಕೆ ತೆರೆದುಕೊಂಡು ಧರ್ಮದೊಳಗಿನ ಕಂದಾಚಾರಗಳಿಗೆ ಧ್ವನಿ ಎತ್ತಬೇಕಾಗಿದ್ದ ಹೆಣ್ಣುಮಕ್ಕಳ ಭವಿಷ್ಯವನ್ನು ಕಸಿದುಕೊಂಡಿರಿ. ಇದು ಮಾಧ್ಯಮದ ನಿಜವಾದ ನೈತಿಕ ಕ್ರಿಯೆ ಅಥವಾ ಕರ್ತವ್ಯವೆ? ದಯವಿಟ್ಟು ಇದಕ್ಕೆ ಉತ್ತರಬೇಡ. ನಿಮ್ಮ ಆತ್ಮಸಾಕ್ಷಿಯನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ. ಯಾವನೋ ಒಬ್ಬ ಅವಿವೇಕಿಯೊಬ್ಬ ಹೇಳಿದ ಅಂಬೇಡ್ಕರ್  ಬುರ್ಖಾವನ್ನು ವಿರೋಧಿಸಿದ್ದರು ಮಾತನ್ನು ಮಾಧ್ಯಮದಲ್ಲಿ ದೊಡ್ಡದಾಗಿ ಪ್ರತಿಬಿಂಬಿಸುವ ನಿಮಗೆ ಬುರ್ಖಾ ಮತ್ತು ಹಿಜಾಬ್ ನಡುವಿನ ವೆತ್ಯಾಸ ತಿಳಿಯಲಿಲ್ಲವೆ?

ಪ್ರಶ್ನೆ ಎರಡು-  ಮೂರು ಬಾರಿ ಶಾಸಕನಾಗಿ ಈಗ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿರುವ ರೇಣುಕಾಚಾರ್ಯ ಎಂಬ ವೀರಶೈವ ಜನಾಂಗದ ವ್ಯಕ್ತಿ ತನ್ನ ಮಕ್ಕಳಿಗೆ ಬೇಡ ಜಂಗಮದ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿರುವುದು ಮತ್ತು ಇದನ್ನು ಶಾಸನ ಸಭೆಯಲ್ಲಿ ಒಪ್ಪಿಕೊಂಡ ಸಂಗತಿಯನ್ನು ವರದಿ ಮಾಡಿದರೆ ನಿಮ್ಮ ಕರ್ತವ್ಯ ಮುಗಿಯಿತು ಎಂದು ಏಕೆ ಭಾವಿಸಿದಿರಿ? ಇದೊಂದು ಕ್ರಿಮಿನಲ್ ಅಪರಾಧವಲ್ಲವೆ? ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ ಸಚಿವ ಸಂಪುಟದ ೆಲ್ಲಾ ಸವಲತ್ತುಗಳನ್ನು ಈ ವ್ಯಕ್ತಿ ಹೇಗೆ ಪಡೆಯಲು ಸಾಧ್ಯ? ಜನಪ್ರತಿಯಾಗಿ ಹುದ್ದೆ ಹೊಂದಲು ಅನರ್ಹನಾಗಿರುವ  ಈ ವ್ಯಕ್ತಿ ಅಥವಾ ಈ ಘಟನೆ ಬಗ್ಗೆ ಏಕೆ ಮೌನವಾಗಿದ್ದೀರಿ? ಈ ಸರ್ಕಾರದ ಮುಖ್ಯಮಂತ್ರಿಯಿಂದ ಹಿಡಿದು, ಸಚಿವ, ಶಾಸಕ ಹಾಗೂ ಎಲ್ಲಾ ಬಗೆಯ ಸರ್ಕಾರಿ ನೌಕರರು ಪಡೆಯುವ ಸವಲತ್ತು ಮತ್ತು ಸಂಬಳದಲ್ಲಿ ಬಡಕೂಲಿಕಾರರಿಂದ ಹಿಡಿದು ಜನಸಾಮಾನ್ಯರು ಧರ್ಮ, ಜಾತಿಯ ಬೇಧವಿಲ್ಲದೆ ಪಾವತಿಸಿದ ತೆರಿಗೆ ಹಣದ ಋಣವಿದೆ. ಈ ಬಗ್ಗೆ ಸರ್ಕಾರವನ್ನು ಪ್ರಶ್ನಿಸಬೇಕಾದ ನಿಮ್ಮ ಬದ್ಧತೆ ಮತ್ತು ನೈತಿಕತೆ ಎಲ್ಲಿ ಅಡಗಿ ಹೋಯಿತು?

ಪ್ರಶ್ನೆ ಮೂರು ಕಲ್ಬುರ್ಗಿ ನಗರದ ದಿವ್ಯಾ ಹಾಗರಗಿ ಎಂಬ ಬಿ.ಜೆ.ಪಿ.ಯ ಬೊಗಳು ನಾಯಿಯೊಂದು ಇತ್ತೀಚೆಗಿನ ವರ್ಷಗಳಲ್ಲಿ ಸ್ಥಾಪಿಸಿದ ಇಂಗ್ಲೀಷ್ ಶಾಲೆಯಲ್ಲಿ ಪೊಲೀಸ್ ಸಬ್ ಇನ್ಸೆಪೆಕ್ಟರ್ ಹೆದ್ದೆಗೆ ನಡೆದ ಲಿಖಿತ ಪರೀಕ್ಷೆಯಲ್ಲಿ ಪ್ರಮುಖ ಆರೋಪಿಯಾಗಿರುವ ಆಕೆ ಈವರೆಗೆ ಹೇಗೆ ತಲೆ ತಪ್ಪಿಸಿಕೊಂಡು ಇರಲು ಸಾಧ್ಯ? ಆಕೆ ನಮ್ಮ ಕಾರ್ಯಕರ್ತಳಲ್ಲ ಎಂದು ಹೇಳುವ ಬಿ.ಜೆ.ಪಿ. ನಾಯಕರ ಹೇಳಿಕೆಯನ್ನು ಅತ್ಯಂತ ಶ್ರದ್ಧೆಯಿಂದ ಪ್ರಕಟಿಸುವ ಮುನ್ನ ಕಳೆದ  ಎರಡು ಮೂರು ವರ್ಷಗಳಲ್ಲಿ ಒನಕೆ ಓಬವ್ವನ ವೇಷತೊಟ್ಟು ಮುಸ್ಲಿಮರ ವಿರುದ್ಧ ಆಡಿದ್ದ ಮಾತುಗಳನ್ನು ಪ್ರಕಟಿಸಿದ್ದ ನಿಮಗೆ ಆಕೆಯ ಇತಿಹಾಸ ಏಕೆ ಮರೆತು ಹೋಯಿತು? ಸರ್ಕಾರದ ಪರೀಕ್ಷೆಗಳನ್ನು ನಡೆಸುವಾಗ ಆಯ್ಕೆ ಮಾಡಿಕೊಳ್ಳುವ ವಿದ್ಯಾ ಸಂಸ್ಥೆಗಳ ಇತಿಹಾಸ ಮತ್ತು ಅನುಭವಗಳ ಕುರಿತು ಎಂದಾದರೂ ನೀವು ಪ್ರಶ್ನಿಸಿದ್ದೀರಾ? ಕಳೆದ ಅಕ್ಟೋಬರ್  ತಿಂಗಳಿನಲ್ಲಿ ಆಕೆಯ ವಿದ್ಯಾ ಸಂಸ್ಥೆಗೆ ಅವಕಾಶ ಹೇಗೆ ದೊರೆಯಿತು? ಇದಕ್ಕೆ ಶಿಫಾರಸ್ಸು ಮಾಡಿದವರು ಯಾರು? ಎಂದು ಈವರೆಗೆ ನೀವು ಪ್ರಶ್ನಿಸಿದ್ದೀರಾ? ನೀವು ಯಾರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದೀರಿ? ಈಗಲಾದರೂ ಸ್ಪಷ್ಟಪಡಿಸಿ.

ಪ್ರಶ್ನೆ ನಾಲ್ಕು- ತಮ್ಮ ಜೀವಮಾನದಲ್ಲಿ ಎಂದೂ ಕುರಿ, ಕೋಳಿ ಮೇಕೆ ತಿನ್ನದ ಹಿಂದೂ ಧರ್ಮದ ಮೇಲ್ಜಾತಿಯ ಹಲಾಲುಕೋರರಿಗೆ ಶೂದ್ರ, ದಲಿತ ಮತ್ತು ಮುಸ್ಲಿಂರ ಆಹಾರ ಸಂಸ್ಕೃತಿಯ ಬಗ್ಗೆ ಮಾತನಾಡಲು ಹಕ್ಕು ನೀಡಿದವರು ಯಾರು? ಹಲಾಲ್ ಮತ್ತು ಜಟ್ಕಾ ಎಂದೆಲ್ಲಾ ಬಡಬಡಿಸುತ್ತಿರುವ ಇವರು ಬೇಳೆ ತೊವ್ವೆಯಲ್ಲಿ ಅನ್ನು ಉಂಡು, ಹೆಸರು ಬೇಳೆ ಪಾಯಸ ಕುಡಿದು ಢರ್ ಎಂದು ತೇಗಿ, ಪುರ್ ಎಂದು ಹೂಸು ಬಿಡುವಾಗ,  ಈ ನಾಡಿನ ಶೂದ್ರರು, ದಲಿತರು ಇವರ  ಆಹಾರ ಸಂಸ್ಕೃತಿಯನ್ನು ಪ್ರಶ್ನಿಸಿದ ಉದಾಹರಣೆಗಳುಂಟಾ? ಇದು ಈ ದೇಶದ ನಾಗರೀಕರಿಗೆ ಸಂವಿಧಾನ ನೀಡಿರುವ ಹಕ್ಕಿನ ಉಲ್ಲಂಘನೆ ಎಂದು ನಿಮಗೆ ಏಕೆ ಅನಿಸಲಿಲ್ಲ? ಇದು ಪತ್ರಿಕೋದ್ಯಮವೇ?

ನಾನು ಮತ್ತು ನನ್ನ ತಲೆಮಾರಿನ ನೂರಾರು ಮಂದಿ ಗೆಳೆಯರು  ಪತ್ರಿಕೋದ್ಯಮದ ವೃತ್ತಿಯಲ್ಲಿ ಬದುಕು ಕಟ್ಟಿಕೊಂಡು ಘನತೆಯ ನಿವೃತ್ತಿ ಜೀವನ ನಡೆಸುತ್ತಿದ್ದೇವೆ. ನಾವ್ಯಾರೂ ನಿಮ್ಮ ಹಾಗೆ ಪತ್ರಿಕೋದ್ಯಮದ ಪದವಿ ಪಡೆದವರಲ್ಲ. ಸಾಮಾನ್ಯ ಪದವಿ ಪಡೆದು ಹಿರಿಯ ಪತ್ರಕರ್ತರ ವರದಿಗಳನ್ನು ಅವರ ಕಾರ್ಯ ವೈಖರಿ ಮತ್ತು ಜೀವನ ವಿಧಾನವನ್ನು ಪತ್ರಿಕೋಧ್ಯಮದ ಪಠ್ಯವನ್ನಾಗಿ ಮಾಡಿಕೊಂಡವರು. ನಮ್ಮ ಮುಂದೆ ಪಿ.ಲಂಕೇಶ್ ಇದ್ದರು, ಖಾದ್ರಿ ಶಾಮಣ್ಣನವರ ಸಂಪಾದಕಿಯ ಬರಹಗಳಿದ್ದವು, ವಡ್ಡರ್ಸೆ ರಘುರಾಮಶೆಟ್ಟರಿದ್ದರು. ಪ್ರಜಾವಾಣಿ, ಡೆಕ್ಕನ್ ಹೆರಾಲ್ಟ್ ನಲ್ಲಿ ಕೆ.ಎನ್. ಹರಿಕುಮಾರ್ ಎಂಬ ಸಂಪಾದಕರಿದ್ದರು ಹೀಗೆ ಕರ್ನಾಟಕದಲ್ಲಿ ಕನಿಷ್ಟ ಐವತ್ತು ಮಂದಿ ಹಿರಿಯ ಪತ್ರಕರ್ತರು ನಮಗೆ ಮಾರ್ಗದರ್ಶಿಗಳಾಗಿದ್ದರು.

ರಾಷ್ಟ್ರೀಯ ಮಟ್ಟದಲ್ಲಿ ನಮಗೆ ಕುಲದೀಪ್ ನಯ್ಯಾರ್, ವಿನೋದ್ ಮೆಹತಾ, ಖಶ್ವಂತ್ ಸಿಂಗ್ ಮತ್ತು ಮಾರ್ಕ್ ಟುಲಿ ಎಂಬ ಬಿ.ಬಿ.ಸಿ. ವರದಿಗಾರರ ಬರಹಗಳಿದ್ದವು. ಇಂತಹ ಮಹನೀಯರಿಂದ ನಾವು ಕಲಿತ ಪಾಠಗಳು ಜೀವನ ಪೂರ್ತಿ ನಮ್ಮನ್ನು ಮಾನಸಿಕವಾಗಿ ಭ್ರಷ್ಟರನ್ನಾಗಿಸದೆ ಜನಸಾಮಾನ್ಯರ ಪ್ರತಿನಿಧಿಯಾಗಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಲು ಸಹಾಕಾರಿಯಾದವು. ನೀವು ಮಾನವೀಯ ಮುಖವುಳ್ಳ ಪತ್ರಕರ್ತನಾಗಲು ಕನ್ನಡದಲ್ಲಿ ಪಿ.ಲಂಕೇಶರ ಟೀಕೆ ಟಿಪ್ಪಣಿ ಭಾಗ 1 ಮತ್ತು 2 ರ ಸಂಪುಟಗಳು ಮತ್ತು ಭಾರತದಲ್ಲಿ ನಾಲ್ಕು  ದಶಕಗಳ ಕಾಲ ಬಿ.ಬಿ.ಸಿ. ವರದಿಗಾರರಾಗಿದ್ದ ಮಾರ್ಕ್ ಟುಲಿ. ಅವರ   ಇಂಡಿಯಾಸ್  ಅನ್ ಎಂಡಿಂಗ್ ಜರ್ನಿ, ಮೋ ಪುಲ್ ಸ್ಟಾಪ್ ಇನ್ ಇಂಡಿಯಾ, ಹಾರ್ಟ್ ಆಫ್ ಇಂಡಿಯಾ, ಇಂಡಿಯಾ ಆನ್ ಮೂವ್ ಮುಂತಾದ ಕೃತಿಗಳನ್ನು ಓದಿದರೆ ಸಾಕು ಬಹುಮುಖಿ ಭಾರತವನ್ನು ಹೇಗೆ ಗ್ರಹಿಸಬೇಕು ಎಂಬುದು  ನಿಮಗೆ ಮನದಟ್ಟಾಗುತ್ತದೆ.


ಭಾರತದಲ್ಲಿ ಪ್ರಥಮವಾಗಿ ಪದ್ಮಶ್ರೀ ಗೌರವಕ್ಕೆ ಪಾತ್ರರಾದ  ಬ್ರಿಟನ್ ಮೂಲದ ಟುಲಿಯವರು ಈಗ ಕೊಲ್ಕತ್ತ ನಗರದಲ್ಲಿ ವಾಸಿಸುತ್ತಿದ್ದಾರೆ. ಅವರ ಪ್ರತಿಯೊಂದು ಪ್ರಬಂಧ ರೂಪದ ಲೇಖನವು ಮುವತ್ತು ಪುಟಗಳಿಂದ ಅರವತ್ತು ಪುಟಗಳವರೆಗೆ ವ್ಯಾಪಿಸಿರುತ್ತದೆ. ಒಂದು ಘಟನೆಯನ್ನು ಅತ್ಯಂತ ಸೂಕ್ಷ್ಮವಾಗಿ ಹೀಗೂ ನೋಡಬಹುದೆ? ಎಂದು ಅವರ ಕೃತಿಗಳನ್ನು ಓದುವಾಗ ಆಶ್ಚರ್ಯವಾಗುತ್ತದೆ. ಈ ಕಾರಣಕ್ಕಾಗಿ  ಜಗತ್ ಪ್ರಸಿದ್ಧ ಟೈಮ್ಸ್ ವಾರಪತ್ರಿಕೆಯು ಮಾರ್ಕ್ ಟುಲಿ ಅವರನ್ನು ‘ ಬಹುಮುಖಿ ಸಂಸ್ಕೃತಿಯ  ಭಾರತವನ್ನು ಅಪ್ಪಟ ದೇಶಿ ಹೃದಯದಿಂದ ನೋಡಿದ ಮಹಾನ್ ಪತ್ರಕರ್ತ’ ಎಂದು ಬಣ್ಣಿಸಿದೆ. 1992 ರ ಡಿಸಂಬರ್ 6 ರಂದು ಸಂಜೆ ಐದು ಗಂಟೆಯ ವೇಳೆಗೆ ಸಂಘಪರಿವಾರದ ಭಕ್ತರು ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕೆಡವಿ ಹಾಕಿದರು. ಆಗ ಇದ್ದುದ್ದು  ಆಕಾಶವಾಣಿ ಮತ್ತು ದೂರದರ್ಶನ ಮಾತ್ರ. ಪ್ರಧಾನಿ ಪಿ.ವಿ.ನರಸಿಂಹರಾವ್ ದೆಹಲಿಯಲ್ಲಿ ಮಹಾ ಮೌನಕ್ಕೆ ಶರಣಾಗಿದ್ದರು. ಸರ್ಕಾರದ ಮಾಧ್ಯಮಗಳು ಘಟನೆ ಬಗ್ಗೆ ಏನನ್ನೂ ಹೇಳದೆ, ಪರಿಸ್ಥಿತಿ ಬಿಗುವಿನಿಂದ ಕೂಡಿದೆ ಎಂಬ ಮಾತನ್ನು ಪದೇ ಪದೇ ಬಿತ್ತರಿಸುತ್ತಿದ್ದವು. ಸಂಜೆ ಆರು ಗಂಟೆಯ ಬಿ.ಬಿ.ಸಿ. ವಾರ್ತೆಯಲ್ಲಿ ಬಾಬರಿ ಮಸೀದಿ ಧ್ವಂಸವಾದ ಘಟನೆಯನ್ನು ಬಿತ್ತರಿಸುತ್ತಿದ್ದಂತೆ  ಕೇಂದ್ರ ಸರ್ಕಾರ ವಸ್ತು ಸ್ಥಿತಿಯನ್ನು ಪ್ರಸಾರಮಾಡುವುದು ಅನಿವಾರ್ಯವಾಯಿತು. ಇದು ಮಾರ್ಕ್ ಟುಲಿಯವರ ಪತ್ರಿಕೋದ್ಯಮದ ಬದ್ದತೆಗೆ ಇರುವ ಪ್ರಮುಖ ಸಾಕ್ಷಿ. ಇಂತಹ ಮಹನೀಯರಿಂದ ನಮ್ಮ ಮಾಧ್ಯಮದ ವಿಷಜಂತುಗಳು ಕಲಿಯುವುದು ಅಪಾರವಿದೆ.

 

ಪ್ರತಿಯೊಬ್ಬ ಪತ್ರಕರ್ತ ಓದಲೇಬೇಕಾಗಿರುವ ಕೃತಿ

 


ನಾನು ಕಳೆದ ಎರಡು ವರ್ಷಗಳಿಂದ ಎಲ್ಲಿಯೂ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುತ್ತಿಲ್ಲ. ಕಳೆದ ತಿಂಗಳು ಹುಬ್ಬಳ್ಳಿಯಲ್ಲಿ ನಾಲ್ವಡಿಯವರ ಕುರಿತು ಉಪನ್ಯಾಸ ಹೊರತು ಪಡಿಸಿದರೆ, ನಿನ್ನೆ ಬೆಂಗಳೂರಿನಲ್ಲಿ ವಡ್ಡರ್ಸೆ ಅವರ ಕೃತಿ ಕುರಿತು ಮಾತನಾಡಲು ಭಾಗವಹಿಸಿದ್ದೆ. ಈ ಇಬ್ಬರು ಮಹನೀಯರ ಮೇಲಿದ್ದ ಗೌರವ ಇದಕ್ಕೆ ಪ್ರಮುಖ ಕಾರಣ.
ವಡ್ಡರ್ಸೆಯವರು ಒಂದು ರೀತಿಯಲ್ಲಿ ನನ್ನ ಪಾಲಿಗೆ ಗುರುಗಳು. ಪ್ರಜಾವಾಣಿಯಲ್ಲಿ ಇದ್ದಾಗ ನಂತರ ಮುಂಗಾರು ಪತ್ರಿಕೆ ಆರಂಭಿಸಿ ಅನಂತರ ಅವರು ತ್ಯೆಜಿಸಿ ಬಂದ ಮೇಲೆ ಅವರ ಕಷ್ಟದ ನೋವಿನ ಸಂಧರ್ಭದಲ್ಲಿ ನಿರಂತರವಾಗಿ ಒಡನಾಟ ಇರಿಸಿಕೊಂಡಿದ್ದೆ. ಅವರ ನಿಲುವುಗಳು, ಎಂತಹ ಸಂಧರ್ಭದಲ್ಲಿಯೂ ಸಹ ತಮಗೆ ನೋವುಂಟು ಮಾಡಿದವರ ಬಗ್ಗೆ ಒಂದು ಕೆಟ್ಟ ಶಬ್ದ ಮಾತನಾಡದ ಅವರ ಸಂತನಂತಹ ವ್ಯಕ್ತಿತ್ವ ಹಾಗೂ ಅಗಾಧವಾದ ನೆನಪಿನ ಶಕ್ತಿ ಈಗಲೂ ನನ್ನ ಮೇಲೆ ಪರಿಣಾಮ ಬೀರಿವೆ.
ಅವರು ಮುಂಗಾರು ಪತ್ರಿಕೆಗೆ ಬರೆದ ವ್ಯಕ್ತಿಚಿತ್ರಗಳು ಮತ್ತು ಸಂಪಾದಕೀಯ ಬರಹಗಳನ್ನು ನಾನು ಓದಿರಲಿಲ್ಲ. ಮಿತ್ರರಾದ ದಿನೇಶ್ ಅವುಗಳನ್ನು ಕಾಯ್ದಿಟ್ಟುಕೊಂಡಿದ್ದ ಕಾರಣ ಈಗ ಬೇರೇಯ ಮಾತು ಹೆಸರಿನಲ್ಲಿ ಪ್ರಕಟವಾಗುವುದರೊಂದಿಗೆ ಕನ್ನಡ ಪತ್ರಿಕೋದ್ಯಮಕ್ಕೆ ಒಂದು ಅಮೂಲ್ಯ ಪಠ್ಯ ದೊರೆತಂತಾಗಿದೆ.
ಪಿ.ಲಂಕೇಶರ ಟೀಕೆ ಟಿಪ್ಪಣಿಯ ಮೊದಲ ಸಂಪುಟ ಕೂಡ ಇದೇ ಮಾದರಿಯ ಅಮೂಲ್ಯ ಕೃತಿ. ಈ ಎರಡು ಕೃತಿಗಳು ಒಬ್ಬ ಪ್ರಾಮಾಣಿಕ‌ ಹಾಗೂ ಪಾರದರ್ಶಕತೆಯ ಗುಣವುಳ್ಳ ಹಾಗೂ ರಾಗ ದ್ವೇಷಗಳಿಲ್ಲದ ಪತ್ರಕರ್ತ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿವೆ.
ವಡ್ಡರ್ಸೆಯವರು ಕಟ್ಟಿಕೊಟ್ಟಿರುವ ರಾಜಕೀಯ ವ್ಯಕ್ತಿಗಳ ಚಿತ್ರಣ ನಿಜವಾಗಿಯೂ ವಿಸ್ಮಯ ಮೂಡಿಸುವಂತಹದ್ದು. ಅದೇ ರೀತಿ ಸಾಮಾಜಿಕ ವಿಷಯಗಳ ಕುರಿತಂತೆ ಅವರು ತಾಳಿದ್ದ ನಿಲುವು ಇಂದಿಗೂ ಪ್ರಸ್ತುತವಾಗಿವೆ.
ಅವರು ತೊಂಬತ್ತರ ದಶಕದಲ್ಲಿ ಜಾಫರ್ ಷರೀಪರ ಕುರಿತಾಗಿ ‌ಸಾಧಕನ ಬದುಕು ಎಂಬ ಕೃತಿ ರಚಿಸಿದ್ದರು.
ಬೆಂಗಳೂರು ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಬಳಿಯ ಅತಿಥಿ ಗೃಹದಲ್ಲಿ ಮೂರು ತಿಂಗಳಕಾಲ ಉಳಿದು ಶೆಟ್ಟರು ಸಾಧಕನ ಬದುಕು ರಚಿಸಿದ್ದರು.
ಕೃತಿ ಬಿಡುಗಡೆಯಾದ ಮೂರು ನಾಲ್ಕು ದಿನಗಳ ನಂತರ ಎ.ಕೆ. ಸುಬ್ಬಯ್ಯನವರು ಕೃತಿಯ ಹೆಸರು ಮೀರ್ ಸಾಧಕನ ಬದುಕು ಎಂದು ಇರಬೇಕಾಗಿತ್ತು ಎನ್ನುವುದರ ಮೂಲಕ ಲೇವಡಿ ಮಾಡಿಬಿಟ್ಟರು. ಇದು ರಾಜ್ಯಾದ್ಯಂತ ಸುದ್ದಿಯಾಯಿತು. ಅದಕ್ಕೆ ಕಾರಣ ಕೂಡ ಇತ್ತು.
ವಾಸ್ತವವಾಗಿ ಚಿತ್ರದುರ್ಗ ಮೂಲದ ಜಾಫರ್ ಷರೀಪರು‌ಎಸ್.ನಿಜಲಿಂಗಪಗಪನವರ ಕಾರಿನ ಚಾಲಕರಾಗಿದ್ದರು. ನಿಜಲಿಂಗಪ್ಪ ಮತ್ತು ಇಂದಿರಾಗಾಂಧಿ ನಡುವೆ ನಡೆಯುತ್ತಿದ್ದ‌ ಶೀತಲ ಸಮರದಲ್ಲಿ ನಿಜಲಿಂಗಪ್ಪನವರ ರಾಜಕೀಯ ಚಟುವಟಿಕೆಗಳನ್ನು ಇಂದಿರಾ ಗಾಂಧಿಗೆ ತಲುಪಿಸುತ್ತಿದ್ದ ಜಾಫರ್ ಷರೀಪ್‌1969 ರಲ್ಲಿ ಬೆಂಗಳೂರು ಲಾಲ್ ಬಾಗಿನ‌ ಗಾಜಿನ‌ಮನೆಯಲ್ಲಿ ಕಾಂಗ್ರೇಸ್ ಇಬ್ಭಾಗವಾದಾಗ ಇಂದಿರಾ ಬಳಗ ಸೇರಿ ರಾಜಕೀಯದಲ್ಲಿ ಮೇಲೆ ಬಂದಿದ್ದರು.
ಈ ಕುರಿತು ಪ್ರೆಸ್ ಕ್ಲಬ್ ನಲ್ಲಿ ರಾತ್ರಿ ಊಟ ಮಾಡುವಾಗ ವಡ್ಡರ್ಸೆಯವರ ಜೊತೆ ವಿಷಯ ಪ್ರಸ್ತಾಪ ಮಾಡಿದೆ. ಅವರ ಉತ್ತರ ಹೀಗಿತ್ತು.
ತಮ್ಮಾ, ಸುಬ್ಬಯ್ಯನವರ ಹೇಳಿಕೆ ತೀಕ್ಷ್ಙವಾಗಿದ್ದರೂ ಸತ್ಯವಾಗಿದೆ. ನಾನು ಕೃತಿ ರಚನೆಯ ಸಂಧರ್ಭದಲ್ಲಿ ನಗಣ್ಯ ಎಂದು ಪರಿಗಣಿದ್ದ ವಿಷಯವನ್ನು ‌ಅವರು‌ ಮುನ್ನೆಲೆಗೆ ತಂದಿದ್ದಾರೆ. ಅವರ ಬಗ್ಗೆ ಬೇಸರ ಪಡುವ ಅಗತ್ಯವಿಲ್ಲ. ಈ ಕೃತಿಯಲ್ಲಿ ಎ.ಕೆ. ಸುಬ್ಬಯ್ಯನವರ ಕುರಿತಾಗಿ ಶೆಟ್ಟರು ಅದ್ಭುತವಾದ ವ್ಯಕ್ತಿ ಚಿತ್ರವನ್ನು ದಾಖಲಿಸಿದ್ದಾರೆ. ಅದನ್ನು ಓದುವಾಗ ಈ ಘಟನೆ ನೆನಪಾಯಿತು.
ವಡ್ಡರ್ಸೆಯವರ ಇಂತಹ ಮನೋಭಾವ, ಆಲೋಚನೆಗಳು, ಜನಸಾಮಾನ್ಯರ ಬಗ್ಗೆ‌ ವಿಶೇಷವಾಗಿ ಹಿಂದುಳಿದವರ ಬಗ್ಗೆ ಅವರಿಗಿದ್ದ ಕಾಳಜಿಯಿಂದಾಗ‌ ನನ್ನ ತಲೆಮಾರಿನ ಪತ್ರಕರ್ತರ ಮೇಲೆ ಗಾಢ ಪ್ರಭಾವ ಬೀರಿದ್ದಾರೆ. ಇಂದು ಕೇವಲ ಐದು ವರ್ಷಗಳ ಕಾಲ ಪತ್ರಿಕೆ ಅಥವಾ ಛಾನಲ್ ಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದವರು ( ಎಲ್ಲರೂ ಅಲ್ಲ) ಕೋಟ್ಯಾಧೀಶರಾಗಿ‌ ಹೊರ ಬರುತ್ತಿದ್ದಾರೆ. ಭಿಕ್ಷಾಧೀಶರಾಗಿ ಹೊರಬಂದ ನನ್ನ ಕಾಲದ ಪತ್ರಕರ್ತರು ಹಣವಿಲ್ಲದಿದ್ದರೂ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಇದಕ್ಕೆ ಮುಖ್ಯ ಕಾರಣ ವಡ್ಡರ್ಸೆ ಅವರಂತಹ ಪತ್ರಕರ್ತರು ನಮ್ಮ ನಡುವೆ ಇದ್ದರು.
ಎರಡು ತಿಂಗಳ ಹಿಂದೆ ಪ್ರಮುಖ ದಿನಪತ್ರಿಕೆಯ ಸಂಪಾದಕನಿಗೆ ತಾನು ಹುದ್ದೆ ತ್ಯೆಜಿಸುವ ಹಿಂದಿನ ದಿನ ರಾಜ್ಯ ಸರ್ಕಾರ ಉತ್ತರ ಕನ್ನಡ ಜೆಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಐದು ಎಕರೆ ಭೂಮಿಯನ್ನು ಉಚಿತವಾಗಿ ‌ನೀಡಿದ‌ ಮಾಹಿತಿ ನನಗೆ ಇತ್ತೀಚೆಗಷ್ಟೇ ಗೊತ್ತಾಯಿತು.
ಇದು ಈಗಿನ ಪತ್ರಕರ್ತರಿಗೂ ಹಾಗೂ ವಡ್ಡರ್ಸೆ ರಘುರಾಮ ಶೆಟ್ಟರ ಕಾಲದ ಪತ್ರಕರ್ತರಿಗೂ ಇರುವ ವೆತ್ಯಾಸ.
ವಡ್ಡರ್ಸೆಯವರ ಈ ಕೃತಿ ಇದೀಗ ಎರಡನೇ ಮುದ್ರಣ ಕಂಡಿದೆ. ನೀವು ಓದಲೇಬೇಕಾದ ಕೃತಿ ಇದಾಗಿದೆ.

ಭಾನುವಾರ, ಆಗಸ್ಟ್ 2, 2020

ರಾಮ ಮತ್ತು ರಹೀಮ ಇಬ್ಬರೂ ಇಲ್ಲದ ಅಯೋದ್ಯೆಯ ನೆಲದಲ್ಲಿ ನಿಂತು




ಕಳೆದ ವರ್ಷ ಜನವರಿಯ ಎರಡನೇ ವಾರದಲ್ಲಿ ಒಂದು ದಿನ ಅಯೋಧ್ಯೆ ನಗರದಲ್ಲಿದ್ದೆ. ಲಕ್ನೋ, ವಾರಣಾಸಿ ನಗರಗಳಿಗೆ  ಒಂದು ವಾರದ ಭೇಟಿ ನೀಡುವ ಮುನ್ನ ಎರಡು ದಿನ ಮುಂಚಿತವಾಗಿ ದೆಹಲಿಯಿಂದ  ನೇರವಾಗಿ ಫೈಜಾಭಾದ್ ಮತ್ತು ಅಯೋಧ್ಯಾ ನಗರಗಳಿಗೆ ತೆರಳಿದ್ದೆ.. ಕಳೆದ 28 ವರ್ಷಳಿಂದ ನಾನು ನೋಡಲು ಹಂಬಲಿಸುತ್ತಿದ್ದ ನಗರ ಇದೆನಾ? ಎನ್ನುವಷ್ಟು ಆಶ್ಚರ್ಯಕರ ರೀರಿತಿಯಲ್ಲಿ ಪುರಾತನ ನಗರವಾದ ಅಯೋಧ್ಯೆ ತಣ್ಣಗೆ ಮಲಗಿತ್ತು. ಪಕ್ಕದ ಸರಯೂ ನದಿ ಕೂಡ ಜಗತ್ತಿನ ಗೊಡವೆಗಳಿಗೂ ನನಗೂ ಏನು ಸಂಬಂಧವಿಲ್ಲ ಎಂಬಂತೆ ತಣ್ಣಗೆ ಹರಿಯುತ್ತಿತ್ತು.
ಜಗತ್ತಿನಾದ್ಯಂತ ಸುದ್ದಿಯಲ್ಲಿರುವ ನಗರವೆಂದು ಕುಖ್ಯಾತಿ ಪಡೆದು, ಹಲವು ಕಾರಣಕ್ಕಾಗಿ ಸದಾ ಉದ್ವಿಗ್ನಗೊಳ್ಳುವ ಅಯೋಧ್ಯೆ ಎಂಬ ಪುರಾತನ ನಗರ ನಾನು ಊಹಿಸಿಕೊಂಡಿದ್ದಕ್ಕಿಂತ ಭಿನ್ನವಾಗಿತ್ತು. ಕಿರಿದಾದ ರಸ್ತೆಗಳ ಎರಡು ಬದಿಯಲ್ಲಿ ಗತ ಇತಿಹಾಸದ ಕಥೆಗಳನ್ನು ಹೇಳುವ ಪುರಾತನ ಕಟ್ಟಡಗಳು, ಪ್ರತಿ ಹೆಜ್ಜೆ ಹೆಜ್ಜೆಗೂ ಎರದೆಗೆ ಬಿಲ್ಲನ್ನು ಏರಿಸಿ ನಿಂತ ರಾಮನ ಭಾವಚಿತ್ರಗಳು, ಭಕ್ತಿಗೆ ಪರಾಕಾಷ್ಟೆಯಂತಿದ್ದ ಹನುಮ ಈಗ ಉಗ್ರ ನರಸಿಂಹನಾಗಿ ಪರಿವರ್ತನೆ ಹೊಂದಿರುವ ಚಿತ್ರಗಳನ್ನು ನೋಡುತ್ತಾ ಆಧುನಿಕ ರಾಮ ಭಕ್ತರು ಕೃಷ್ಣನ ಕೈಯಲ್ಲಿರುವ ಕೊಳಲನ್ನು ಕಿತ್ತು, ಖಡ್ಗ ಕೊಡುವ ದಿನ ದೂರವಿಲ್ಲ ೆನಿಸಿತು.
ಅಲ್ಲಿನ ಮುಖ್ಯ ರಸ್ತೆಗಳಲ್ಲಿ ಹಾಗೂ  ರೈಲ್ವೆ ನಿಲ್ದಾಣಗಳಲ್ಲಿ ಜನಗಳಿಗಿಂತ ಹೆಚ್ಚಾಗಿ ತುಂಬಿ ತುಳುಕಾಡುವ ಬಿಡಾಡಿ ದನಗಳು, ಹಾಗೂ  ರಾಮ ಮಂದಿರಕ್ಕಾಗಿ ಶೇಖರಿಸಿದ ಇಟ್ಟಿಗೆಗಳು ಮತ್ತು ಕೆತ್ತಿದ ಕಲ್ಲಿನ ಕಂಬಗಳಿಗೆ ಅರಿಶಿನ ಕುಂಕುಮ ಬಳಿದು ನಮಸ್ಕರಿಸುವ ಜನರು, ಮತ್ತು ಈ ನಗರಕ್ಕೆ ಬರುವ ಪ್ರವಾಸಿಗರು ನೀಡುವ ಭಿಕ್ಷೆಯಿಂದ ಬದುಕು ನೂಕುತ್ತಿರುವ ಹಾಗೂ ಜಗದ ಎಲ್ಲಾ ಜಂಜಡಗಳಿಂದ ಬಿಡುಗಡೆಗೊಂಡಿಂತಿರುವ ಸನ್ಯಾಸಿಗಳು, ಅಲ್ಲಿನ ಸಿಹಿತಿಂಡಿ, ಹಾಗೂ ಇತರೆ ಅಂಗಡಿಯ ಮಾಲೀಕರನ್ನು ನೋಡುವಾಗ ನಗರಕ್ಕೆ ಏನೂ ಆಗಿಲ್ಲವೆಂಬಂತೆ ಬದುಕುತ್ತಿರುವ ಪರಿಯನ್ನು ನೋಡಿ ಆಶ್ಚರ್ಯವಾಯಿತು.
ಜಿಲ್ಲಾ ಕೇಂದ್ರವಾದ ಫೈಜಾಬಾದ್ ನಗರದಿಂದ  ಸುಮಾರು ಎಂಟರಿಂದ ಹತ್ತು ಕಿ.ಮಿ. ದೂರವಿರುವ ಅಯೋಧ್ಯಾ ನಗರಕ್ಕೆ  ಪ್ರತಿ ಐದು ನಿಮಿಷಕ್ಕೆ ಎಂಟು ಮಂದಿ ಕೂರುವ ಆಟೋಗಳು  ಪ್ರವಾಸಿಗರನ್ನು ಕೊಂಡೊಯ್ಯುತ್ತವೆ. ಇಲ್ಲಿನ ಬಹುತೇಕ ಆಟೋ ಚಾಲಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನಾನು ಪ್ರಯಾಣಿಸುತ್ತಿದ್ದ ಆಟೋದಲ್ಲಿ ಪ್ರಯಾಣಿಕರು ತುಂಬಿದ್ದರಿಂದ ಆಟೊ ಚಾಲಕ ತನ್ನ ಸೀಟಿನ ಪಕ್ಕದಲ್ಲಿ ನನ್ನನ್ನು ಕೂರಿಸಿಕೊಂಡು ಪ್ರಯಾಣ ಆರಂಭಿಸಿದ. ಮಾರ್ಗ ಮಧ್ಯೆ  ನಾನು ಅವನ್ನು ಮಾತಿಗೆ ಎಳೆದು. “ವಿವಾದದಿಂದ ನಿಮ್ಮ ಸಮುದಾಯಕ್ಕೆ ತೊಂದರೆಯಾಗಿದೆಯಾ?’ ಎಂದು ಪ್ರಶ್ನಿಸಿದೆ. ತಣ್ಣಗೆ ಉತ್ತರಿಸಿದ.ಇಲ್ಲ ಸಾಹೇಬ್, ಪ್ರವಾಸಿಗರು ಜಾಸ್ತಿಯಾಗಿದ್ದಾರೆ, ನಮ್ಮ ಅನ್ನದ ಬಟ್ಟಲಿಗೆ ಯಾವ ತೊಂದರೆಯಾಗಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ಬರುವುದಾದರೆ, ಪ್ರವಾಸಿಗರನ್ನು ನಂಬಿಕೊಂಡು ಬದುಕುವ ನಮ್ಮಂತಹವರಿಗೆ ಸಂತೋಷದ ಸಂಗತಿಎಂದು. ಅತ್ಯಂತ ನಿರ್ಲಿಪ್ತೆಯಿಂದ ಕೂಡಿದ ಆತನ ಮಾತುಗಳಲ್ಲಿ ನಮಗೆ ರಾಮ ರಹೀಮರಿಗಿಂತ ಮುಖ್ಯವಾಗಿ ಕೂಡಿ ಬಾಳುವುದು ಹಾಗೂ ನೆಮ್ಮದಿಯಿಂದ ಇರುವುದು ಮುಖ್ಯವಾಗಿತ್ತು.
ಅಯೋಧ್ಯಾ ರಸ್ತೆಗಳಲ್ಲಿ ಓಡಾಡುತ್ತಿರುವಾಗ ಅಲ್ಲಿ ಶರ್ಮಾ ಎಂದು ಕರೆಸಿಕೊಳ್ಳುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಒಂದು ಹುಡುಗ  ನನ್ನ ಬಳಿ ಬಂದು “ಸರ್  ನಾನು ಎಸ್.ಎಸ್.ಎಲ್.ಸಿ. ಓದುತ್ತಿದ್ದೇನೆ. ನಿಮಗೆ ಮಾರ್ಗದರ್ಶಿಯಾಗಿ ನಗರವನ್ನು ಸುತ್ತಾಡಿಸುತ್ತೇನೆ” ಎಂದ. ನಿನ್ನ ಶುಲ್ಕ ಎಷ್ಟು? ಎಂದು ಕೇಳಿದಾಗ ಕೇವಲ ಐವತ್ತು ರೂಪಾಯಿ ಎಂದು ನುಡಿದ. ನನಗೆ ಆಶ್ಚರ್ಯವಾಯಿತು.  ರಜೆಯ ದಿನಗಳಲ್ಲಿ ಮಾತ್ರ ಕೆಲಸ ಮಾಡುತ್ತೇನೆ ಸರ್. ಶಿಕ್ಷಣಕ್ಕೆ ತಂದೆ ತಾಯಿಗೆ ಹೊರೆಯಾಗಿಲ್ಲ ಎಂದು ಆತ ನುಡಿದಾಗ ನನಗೆ ಖುಷಿಯಾಯಿತು.  ನಾನುಬಾಬರಿ ಮಸೀದಿ ಕೆಡವಿದ ಜಾಗಕ್ಕೆ ಕರೆದೊಯ್ದರೆ ಸಾಕುನಿನಗೆ ಐವತ್ತು ರೂ ಕೊಡುತ್ತೇನೆ ಎಂದು ಹುಡುಗನ  ಹೆಗಲ ಮೇಲೆ ಕೈ ಹಾಕಿ, ನನಗೆ ಮೊದಲು ಒಳ್ಳೆಯ ಚಹಾ ಅಂಗಡಿಗೆ ಕರೆದುಕೊಂಡು ಹೋಗು ಎಂದು ನುಡಿದೆ. 

ಅಯೋಧ್ಯೆಯ ನಗರವು ನಮ್ಮ ಧಾರವಾಡದ ಪೇಡಾ ರೀತಿಯಲ್ಲಿ ಸಿಹಿ ತಿಂಡಿಗೆ ಪ್ರಸಿದ್ಧಿಯಾಗಿದೆ. ತನ್ನ ಗೆಳೆಯನ ಅಂಗಡಿಗೆ ಕರೆದೊಯ್ಯವ ಮಾರ್ಗದಲ್ಲಿ ಹುಡುಗ ನನ್ನ ವಿವರಗಳನ್ನು ಕೇಳುತ್ತಾ ಹೋದ. ತಕ್ಷಣ ನೆನಪಾದವನಂತೆಸರ್ ಒಬ್ಬ ಯುವಕ ನಿಮ್ಮ ಕರ್ನಾಟಕದವನು ನಮಗೆಲ್ಲಾ ತೀರಾ ಪರಿಚಿತ ಗೆಳೆಯನಾಗಿದ್ದಾನೆ. ಕಳೆದ ಆರು ತಿಂಗಳಿನಿಂದ ಇಲ್ಲಿನ ಹನುಮಾನ್ ಮಂದಿರದಲ್ಲಿ ನೀಡುವ ಪ್ರಸಾದ ತಿಂದು ಬದುಕುತ್ತಿದ್ದಾನೆ ಎಂದು ಹೇಳುತ್ತಾ, ನನ್ನನ್ನು ಸಿಹಿ ಮತ್ತು  ಚಹಾ ಮಾರಾಟದ  ಅಂಗಡಿಯಲ್ಲಿ ಕೂರಿಸಿ ಆತನನ್ನು ಕರೆತರಲು ಹೋದ. ನಾನು ಚಹಾ ಕುಡಿಯುತ್ತಿದ್ದಂತೆ ಯುವಕನನ್ನು ಕರೆತಂದು ನನ್ನ ಮುಂದೆ ನಿಲ್ಲಿಸಿದ. ಬಾಗಲಕೋಟೆಯ ಸುಮಾರು ಮುವತ್ತೈದು ವಯಸ್ಸಿನ ಬ್ರಾಹ್ಮಣ ಯುವಕ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಚಿಕ್ಕಪ್ಪನ ಜೊತೆ ಹೊಡೆದಾಡಿಕೊಂಡಿದ್ದ. ಪೋಲಿಸ್ ಠಾಣೆಯಲ್ಲಿ ಆತನ ವಿರುದ್ಧ ಮೊಕದ್ದಮೆ ದಾಖಲಾದ ಹಿನ್ನಲೆಯಲ್ಲಿ  ಪೊಲೀಸರಿಗೆ ಹೆದರಿಕೊಂಡು ಊರು ಬಿಟ್ಟಿದ್ದ. ನಂತರ ಪತ್ನಿಯು ಈತನನ್ನು ತ್ಯೆಜಿಸಿ, ತನ್ನ ಮಗುವಿನೊಂದಿಗೆ ತಮ್ಮನ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಬದುಕುತ್ತಿದ್ದಾಳೆ.  ಸಾಪ್ಟ್ ವೇರ್ ಇಂಜಿನಿಯರ್ ಆಗಿರುವ ಆಕೆಯ ಸಹೋದರ ಈತನನ್ನು ತನ್ನ ಮನೆಗೆ ಸೇರಿಸುತ್ತಿಲ್ಲ. ಮಗವನ್ನು ನೋಡಲು ಬಿಡುತ್ತಿಲ್ಲ. ಕಥೆಯನ್ನೆಲ್ಲಾ ನನ್ನ ಬಳಿ ಕನ್ನಡದಲ್ಲಿ ಹೆಳಿಕೊಂಡು ತಾನು ಹೊದ್ದಿದ್ದ ಕಾವಿ ವಸ್ತ್ರದಲ್ಲಿ ಮುಖ ಮುಚ್ಚಿಕೊಂಡು ಅಳತೊಡಗಿದ. “ ಸಾರ್ ನನ್ನ ಆರು ವರ್ಷದ ಮಗಳು ನೋಡಬೇಕು ಅಂತಾ ಆಸೆಯಾಗ್ತಿದೆ. ಜೀವನದಲ್ಲಿ ಇದು ಬಿಟ್ಟರೆ ನನಗೆ ಬೇರೆ ಆಸೆಯಿಲ್ಲಎಂದು ಆತ ಬಿಕ್ಕಳಿಸುವಾಗ  ಅಂಗಡಿಯಲ್ಲಿ ನಾವು ಮೌನವಾಗಿ ಅವನ ದುರಂತ ಕಥೆಗೆ ಸಾಕ್ಷಿಯಾದೆವು. ನನಗೆ ಗೈಡ್ ಆಗಿದ್ದ ಶರ್ಮ ಮತ್ತು ಆತನ ಅಂಗಡಿಯ ಗೆಳಯನಿಗೆ ಕನ್ನಡ ಅರ್ಥವಾಗದಿದ್ದರೂ ಇದೊಂದು ಕೌಟುಂಬಿಕ ದುರಂತ ಎಂಬುದು ಅವರಿಗೆ ಅರ್ಥವಾಗಿತ್ತು. ನಾಲ್ಕು ತಿಂಗಳ ಕಾಲ ಮಂತ್ರಾಲಯದಲ್ಲಿದ್ದ ಯುವಕ, ನಂತರ ಎರಡು ತಿಂಗಳು ಕಾಲ ಕಾಶಿಯಲ್ಲಿದ್ದು ಅಂತಿಮವಾಗಿ ಅಯೋಧ್ಯೆಯನ್ನು ತಲುಪಿದ್ದ. ತಲೆ ಕೂದಲು, ಗಡ್ಡವನ್ನು ಬೆಳೆಸಿಕೊಂಡು ಸಂಪೂರ್ಣವಾಗಿ ಸನ್ಯಾಸಿಯಾಗಿ ರೂಪಾಂತರಗೊಂಡಿದ್ದ.
“ತಮ್ಮಾ ನೀನು ಬಾಗಲಕೋಟೆಗೆ ಬರುವುದಾದರೆ, ನಿನ್ನ ಕೇಸ್ ಪರಿಹರಿಸಿಕೊಡುತ್ತೇನೆ ಎಂದು ಆತನಿಗೆ ಸಮಾಧಾನ ಹೇಳಿ, ಚಹಾ ಕುಡಿಸಿ, ಕೈಗೆ ಐನೂರು ರೂಪಾಯಿ ಕೊಡಲು ಹೋದಾಗ ಆತ ನೀರಾಕರಿಸಿದ. “”ನನಗೆ ಹಣದ ಅವಶ್ಯಕತೆ ಇಲ್ಲ ಸರ್ಎನ್ನುತ್ತಾ ಕೈ ಮುಗಿದು ನಿರಾಕರಿಸಿದ. ಕೊನೆಗೆ ನಾನೇ ಒತ್ತಾಯ ಮಾಡಿ ಆತನ ಖಾವಿ ಜುಬ್ಬಾದ ಜೇಬಿಗೆ ಇಟ್ಟು, ನನ್ನ ದೂರವಾಣಿ ನಂಬರ್ ನೀಡಿ ಸಮಾಧಾನ ಹೇಳಿದೆ. ನಂತರ ರಾಮ ಜನ್ಮ ಭೂಮಿ ವಿವಾದಿತ ಸ್ಥಳಕ್ಕೆ ನನ್ನ ಜೊತೆ ಬಂದ. ಅಲ್ಲಿನ ಪೋಲಿಸ್ ಸರ್ಪಗಾವಲು, ಹಾಗೂ ರಾಮ ಭಕ್ತರ ಉದ್ದನೆಯ ಸಾಲು ನೋಡಿ, ನನಗೆ ಒಳಗೆ ಹೋಗಿ ಅಲ್ಲಿ ಇಟ್ಟಿರುವ ರಾಮಲಲ್ಲಾ ಎಂಬ ಪ್ರತಿಮೆಗಳನ್ನು ನೋಡಲು ಆಸಕ್ತಿ ಬರಲಿಲ್ಲ. ನನಗೆ ಕ್ಷಣದಲ್ಲಿ ಈ ಅಯೋಧ್ಯಾ ನಗರವು ನನಗೆ ದೇವರ ಅಂದರೆ, ರಾಮ ಅಥವಾ ರಹಿಮರ ಪವಿತ್ರ ಕ್ಷೇತ್ರ ಎನಿಸುವುದಕ್ಕೆ ಬದಲಾಗಿ, ಜಗತ್ತಿನಿಂದ, ಸಮಾಜದಿಂದ ಮತ್ತು ಕುಟುಂಬದಿಂದ ತ್ಯೆಜಿಸಲ್ಪಟ್ಟವರ ಹಾಗೂ ಪ್ರೀತಿ ವಂಚಿತರ ಪಾಲಿಗೆ ತಾಯಿಯ ಮಡಿಲು ಎನಿಸಿತು.

ನಾನು ಸರಯೂ ನದಿ ತೀರಕ್ಕೆ ಹೋಗಿ, ಅಲ್ಲಿಂದ ಪೈಜಾಬಾದ್ ಗೆ ಬಸ್ ಅಥವಾ ಆಟೊ ಹಿಡಿಯಬೇಕಿತ್ತು. ಮತ್ತೊಮ್ಮೆ ಅಯೋಧ್ಯೆಗೆ ಬರುತ್ತೇನೆ ಎಂದು ಹೇಳುತ್ತಾ, ಅವರಿಗೆ ವಿದಾಯ ಹೇಳಿದಾಗ ಸಂಜೆ ಆರು ಗಂಟೆಯಾಗಿತ್ತು. ಚಳಿ ಆರಂಭವಾಗತೊಡಗಿತು. ಸರಯೂ ನದಿ ತೀರಕ್ಕೆ ಬಂದಾಗ, ಮುಂಖ್ಯ ಮಂತ್ರಿ ಆದಿತ್ಯನಾಥ ಯೋಗಿ  ಇಡೀ ಅಯೋಧ್ಯೆ ನಗರಿಗೆ ಹೊಸ ರೂಪು ಕೊಡಲು ತಯಾರಿ ನಡೆಸಿದ ಕಾರ್ಯಕ್ರಮಗಳು ಎದ್ದು ಕಾಣುತ್ತಿದ್ದವು. ನದಿಗೆ ಬ್ಯಾರೆಜ್ ಮಾದರಿಯಲ್ಲಿ ಅಡ್ಡಕಟ್ಟೆಯನ್ನು ಕಟ್ಟಿ ನದಿಯ ನೀರನ್ನು ಪುರಾತನ ಕಟ್ಟದ ಸುತ್ತಮುತ್ತಲಿನ ಸರೋವರಗಳಿಗೆ ತುಂಬಿಸುವ ಕಾಮಗಾರಿ ನಡೆಯುತ್ತಿತ್ತು. ದಡೆಯಲ್ಲಿ ಕುಳಿತು ಅಯೋಧ್ಯೆಯ ಪುರಾತನ ಕಟ್ಟಡಗಳನ್ನು ನೋಡುತ್ತಾ, ಅಲಿನ ನೂರೆಂಟು ಧರ್ಮಛತ್ರಗಳನ್ನು ವೀಕ್ಷಿಸುತ್ತಿದ್ದಾಗ ನಗರದ ಧರ್ಮಗಳಾಚೆಗಿನ ನೆಲೆಯಲ್ಲಿ ನಿಂತು ಎಲ್ಲಾ ತಬ್ಬಲಿಗಳನ್ನು ಪೋಷಿಸುತ್ತಿದೆ ಎನಿಸಿತು.
ನಾಡಿದ್ದು ಅಂದರೆ, ಆಗಸ್ಟ್ ಐದರಂದು ಅಯೋಧ್ಯೆ ನಗರದಲ್ಲಿ ರಾಮ ಮಂದಿರ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಲಿದೆ.  ಇದು ದೇಶಭಕ್ತರ ಪಾಲಿಗೆ ಇದು ದಿಗ್ವಿಜಯ. ಆದರೆ, ಪ್ರಜ್ಞಾವಂತ ನಾಗರೀಕರ ಪಾಲಿಗೆ ಇದು ಕೇವಲ ಧರ್ಮದ ಉನ್ಮಾದ. ಏಕೆಂದರೆ, ಧರ್ಮದ ಹೆಸರಿನಲ್ಲಿ ರಕ್ತಸಿಕ್ತವಾಗಿರುವ ಭಾರತಕ್ಕೆ  ಈಗ  ಬೇಕಾಗಿರುವುದು ಮಂದಿರ ಮಸೀದಿಗಳಲ್ಲ, ಇಂತಹ ನಿರ್ಮಾಣಕ್ಕಿಂತ ಮುಖ್ಯವಾಗಿ ಮುರಿದು ಬಿದ್ದ ಮನಸ್ಸುಗಳನ್ನು ಕಟ್ಟಬೇಕಿದೆ.

ಜಗದೀಶ್ ಕೊಪ್ಪ

ಭಾನುವಾರ, ಜುಲೈ 12, 2020

ಇಸ್ವ ಗುರುವಿನ ಆತ್ಮ ನಿರ್ಭರತೆ ಮತ್ತು ಜೆ.ಸಿ. ಕುಮಾರಪ್ಪನವರ ಗ್ರಾಮಭಾರತ




ಅದು 1954  ಒಂದು ದಿನ. ಗಾಂಧೀಜಿಯವರ ಶಿಷ್ಯರಲ್ಲಿ ಒಬ್ಬರಾದ ವಿನೋಭಾ ಭಾವೆಯವರು ಭೂದಾನ ಚಳುವಳಿಯ ಅಂಗವಾಗಿ ಇದೇ ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತುತ್ತಾ, ಶ್ರೀಮಂತರಿಂದ ಜಮೀನುಗಳನ್ನು ಪಡೆದು, ಬಡವರಿಗೆ ಹಂಚುತ್ತಾ ಬರಿಗೈ ಫಕೀರನಂತೆ ತಿರುಗುತ್ತಿದ್ದರು. ತಮಿಳುನಾಡಿಗೆ ಬಂದ ಅವರು ತಮ್ಮ ಮಿತ್ರ ಹಾಗೂ ಗಾಂಧಿವಾದಿ ಜೆ.ಸಿ ಕುಮಾರಪ್ಪನವರನ್ನು ನೆನಪು ಮಾಡಿಕೊಂಡು ಮಧ್ಯರೈಯತ್ತ ಪ್ರಯಾಣ ಬೆಳೆಸಿದರು.
ಗಾಂಧಿ ನಿಧನಾನಂತರ 1952 ರಲ್ಲಿ ವಾರ್ಧಾ ಆಶ್ರಮವನ್ನು ತೊರೆದ ಜೆ.ಸಿ. ಕುಮಾರಪ್ಪನವರು ಮಧುರೈ ಸಮೀಪದ ಕಳ್ಳುಪಟ್ಟಿ ಎಂಬ ಗ್ರಾಮದಲ್ಲಿ ಗಾಂಧಿವಾದಿ ಹಾಗೂ ತಮಿಳುನಾಡಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವೆಂಕಟಾಚಲಪತಿ ನಡೆಸುತ್ತಿದ್ದ ಗಾಂಧಿ ಸೇವಾಶ್ರಮ ಸೇರಿಕೊಂಡು, ವಾರ್ಧಾ ಆಶ್ರಮದಲ್ಲಿ ಬಿಟ್ಟು ಬಂದ ಗುಡಿ ಕೈಗಾರಿಕೆಗಳ ಪ್ರಯೋಗವನ್ನು ಮುಂದುವರಿಸಿದ್ದರು. ಕಳ್ಳುಪಟ್ಟಿಗೆ ಬಂದ ವಿನೋಭಾ ಅವರನ್ನು ಪ್ರೀತಿ ಮತ್ತು ಗೌರವಗಳೊಂದಿಗೆ ಆಶ್ರಮಕ್ಕೆ ಕರೆದೊಯ್ದ ಕುಮಾರಪ್ಪ  ನಂತರ ಅವರನ್ನು ತಾವು ವಾಸಿಸುತ್ತಿದ್ದ ಕೊಠಡಿಯೊಳಕ್ಕೆ ಕರೆದೊಯ್ದರು.
ನೆಲದ ಮೇಲೆ ಖಾದಿ ಜಮಖಾನವನ್ನು ಹಾಸಿ,  ಅದರ ಕುಳಿತು ಬರೆಯಲು ಸಣ್ಣ ಮೇಜನ್ನು ಇಟ್ಟುಕೊಂಡಿದ್ದ ಕುಮಾರಪ್ಪ, ತಾವು ಕೂರುವ ಹಿಂಬದಿಯ ಗೋಡೆಯ ಮೇಲೆ ಎರಡು ಭಾವ ಚಿತ್ರಗಳನ್ನು ನೇತು ಹಾಕಿದ್ದರು. ಒಂದು ಗಾಂಧೀಜಿಯ ಚಿತ್ರ, ಇನ್ನೊಂದು  ಗಾಂಧೀಜಿಯ ಹಾಗೆ ಅರೆಬೆತ್ತಲೆಯಲ್ಲಿದ್ದ ತಮಿಳುನಾಡಿನ ಒಬ್ಬ ರೈತನ ಚಿತ್ರವನ್ನು ಹಾಕಿದ್ದರು. ತನ್ನ ಗುರುವಾದ ಗಾಂಧಿಯವರ ಭಾವಚಿತ್ರಕ್ಕೆ ನಮಿಸಿದ ವಿನೊಭಾರವರು, ರೈತನ ಚಿತ್ರ ನೋಡಿ, ಪ್ರಶ್ನಾರ್ಥಕವಾಗಿ ಕುಮಾರಪ್ಪನವರ ಕಡೆ ತಿರುಗಿದರು. ವಿನಾಭಾ ಅವರ ಪ್ರಶ್ನೆಗೆ ಜೆ.ಸಿ. ಕುಮಾರಪ್ಪನವರು ನೀಡಿದ  ಉತ್ತರ ಹೀಗಿತ್ತು.
ಗಾಂಧಿಯ ಚಿತ್ರವನ್ನು ತೋರಿಸಿ, ಇವರು ನನ್ನ ಗುರು ಎಂದು ನುಡಿದು ನಂತರ  ರೈತನ ಚಿತ್ರವನ್ನು ತೋರಿಸಿ ಇವನು ನನ್ನ ಗುರುವಿನ ಗುರು ಎಂದರು. ಕುಮಾರಪ್ಪನವರ ಉತ್ತರ ಕೇಳಿ ವಿನೊಭಾ ಅವರ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ಕುಮಾರಪ್ಪನವರಿಗಿಂತ ಹಿರಿಯವರಾದ ವಿನೋಭಾರವರು ಒದ್ದೆ ಕಣ್ಣುಗಳಲ್ಲಿ ತಮ್ಮ ಎರಡು ಹಸ್ತಗಳನ್ನು ಕೊಡಿಸಿ, ಅವುಗಳನ್ನು ತಮ್ಮ ಹಣೆಗೆ ಒತ್ತಿಕೊಂಡು ತಲೆಬಾಗಿ  ಕುಮಾರಪ್ಪನವರಿಗೆ ನಮಸ್ಕರಿಸಿದರು.
ಗಾಂಧೀಜಿಯವರ ಗ್ರಾಮಭಾರತ ಹಾಗೂ ಸ್ವಾಬಲಂಬನೆಯ ಭಾರತದ ಕನಸುಗಳನ್ನು ಸ್ಪಷ್ಟವಾಗಿ ಗ್ರಹಿಸಿ ಅವುಗಳನ್ನು ಸಾಕಾರಗೊಳಿಸಲು ತಮ್ಮ ಜೀವವನ್ನು ಮೀಸಲಾಗಿಟ್ಟ ಕುಮಾರಪ್ಪನವರು ಕ್ಷಣದಲ್ಲಿ ಆಚಾರ್ಯ ವಿನೋಭಾ ಅವರ ದೃಷ್ಟಿಯಲ್ಲಿ ದೊಡ್ಡ ಮನುಷ್ಯನಾಗಿ ಕಂಡರು. ಇದು ಗಾಂಧಿ ಶಿಷ್ಯರಿಬ್ಬರ ದೊಡ್ಡ ಗುಣ ಮತ್ತು ತ್ಯಾಗಕ್ಕೆ ಒಂದು ದೊಡ್ಡ ಉದಾಹರಣೆ.  ಇಡೀ ದೇಶದಲ್ಲಿ ಅಂದರೆ,  ಅಂದಿನ ಗ್ರಾಮ ಭಾರತದಲ್ಲಿ ರೈತನ ಶಕ್ತಿ, ದುಡಿಮೆ ಮತ್ತು ಆತನ ಕಾಯಕದ ಮೇಲೆ ನಂಬಿಕೆ ಇಟ್ಟುಕೊಂಡಿದ್ದ ಮಹನೀಯರೆಂದರೆ, ಗಾಂಧಿ, ಕುಮಾರಪ್ಪ ಮತ್ತು ನಮ್ಮ ಕುವೆಂಪು ಮಾತ್ರ. ಕುವೆಂಪುರವರು ರೈತನನ್ನು ಮಾತು ಅಥವಾ ಶಬ್ದದಲ್ಲಿ ಪರಕಾಷ್ಟೆ ಎನ್ನಬಹುದಾದನೇಗಿಲ ಯೋಗಿಎಂದು ಕರೆದರು.
ಲೇಖನದ ಜೊತೆ ಇರುವ ಚಿತ್ರವನ್ನು ಗಮನಿಸಿ. ಇದು 1934 ಅವಧಿಯಲ್ಲಿ ವಾರ್ಧಾ ಬಳಿಯ ಸೇವಾಗ್ರಾಮದಲ್ಲಿ ತೆಗೆದಿರುವ ಚಿತ್ರ. ಗುರು ಶಿಷ್ಯ ಇಬ್ಬರೂ ಅರೆ ಬೆತ್ತಲೆಯ ಫಕೀರರಾಗಿ ನಿಂತಿರುವ ಚಿತ್ರ. ಸುಮ್ಮನೆ ಒಂದು ಕ್ಷಣ ಯೋಚಿಸಿ. ಗಾಂಧೀಜಿ ಗುಜರಾತಿನ ವ್ಯಾಪಾರಿ ಸಮುದಾಯದಿಂದ ಬಂದವರು. ಇಪ್ಪತ್ತನೇ ಶತಮಾನಕ್ಕೆ ಮುಂಚೆ ಕಾಲದ ಅತ್ಯುನ್ನತ ಪದವಿಯಾದ ಬ್ಯಾರಿಸ್ಟರ್ ಪದವಿಯನ್ನು ಇಂಗ್ಲೆಂಡ್ ನಲ್ಲಿ ಪಡೆದವರು. ಜೆ.ಸಿ. ಕುಮಾರಪ್ಪ ತಮಿಳುನಾಡಿನ ತಂಜಾವೂರಿನಲ್ಲಿ ಹಿಂದೂಧರ್ಮದಿಂದ ಪರಿವರ್ತನೆಗೊಂಡ  ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದವರು. ಅಮೇರಿಕಾದ ಕೊಲಂಬಿಯಾ ವಿಶ್ವ ವಿದ್ಯಾಯದಲ್ಲಿ  ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಬಂದು ಮುಂಬೈನಲ್ಲಿ ದೇವರ್ ಅಂಡ್ ಕಂಪನಿ ಎಂಬ ಲೆಕ್ಕ ಪರಿಶೋಧನಾ ಸಂಸ್ಥೆಯನ್ನು ಸ್ಥಾಪಿಸಿಕೊಂಡು ಚಾರ್ಟಡ್ ಅಕೌಟೆಂಟ್ ಆಗಿ ಕೈ ತುಂಬಾ ಹಣ ಸಮಪಾದಿಸುತ್ತಿದ್ದವರು. ಇಬ್ಬರೂ  ಈ ಜಗದ ಗೊಡವೆ ನಮಗೇಕೆ ಎಂದು ಸುಮ್ಮನಾಗಿಬಿಟ್ಟಿದ್ದರೆ, ಗಾಂಧೀಜಿ ವ್ಯಾಪಾರ ಸಂಸ್ಥೆಗಳಿಗೆ ಕಾನೂನು ಸಲಹೆಗಾರರಾಗಿ, ಜೆ.ಸಿ. ಕುಮಾರಪ್ಪ ಅಂತಹವೇ ಸಂಸ್ಥೆಗಳಿಗೆ ತೆರಿಗೆ ಸಲಹೆಗಾರರಾಗಿ ಕೈ ತುಂಬಾ ಸಂಪಾದಿಸಿಕೊಂಡು ತಮ್ಮ ತಮ್ಮ ಕುಟುಂಬವನ್ನು ಶ್ರೀಮಂತಿಕೆಯತ್ತ ಕೊಂಡೊಯ್ಯಬಹುದಿತ್ತು. ತನ್ನ ಕಣ್ಣ ಮುಂದಿನ ಸಮುದಾಯದ ನೋವನ್ನು ತನ್ನ ವೈಯಕ್ತಿಕ ನೋವೆಂದು ಭಾವಿಸಿದ ಗಾಂಧಿ ಸ್ವಾತಂತ್ರ್ಯ ಹೋರಾಟಕ್ಕೆ ಇಳಿದರೆ, ಸ್ವಾತಂತ್ರ್ಯದ ಜೊತೆಗೆ ಭಾರತದ ಜನತೆಯನ್ನು ಬಡತನದಿಂದ  ಮುಕ್ತಗೊಳಿಸಬೇಕೆಂದು ಕುಮಾರಪ್ಪ ಗಾಂಧೀಜಿಯವರೊಂದಿಗೆ ಕೈ ಜೋಡಿಸಿದರು. ಸದಾ ದುಬಾರಿ ಬೆಲೆಯ ಸೂಟು, ಬೂಟು ಧರಿಸುತ್ತಿದ್ದ ಕುಮಾರಪ್ಪ, ಗಾಂಧೀಜಿಯವರನ್ನು ಸಬರಮತಿ ಆಶ್ರಮದಲ್ಲಿ ಭೇಟಿಯಾದ ಮರುದಿನವೆ, ಅವೆಲ್ಲವಕ್ಕೂ ತಿಲಾಚಿಜಲಿ ಇತ್ತು ಖಾದಿ ಜುಬ್ಬಾ, ಟೋಪಿ ಮತ್ತು ಪ್ಶೆಜಾಮ ಇವುಗಳನ್ನು ಧರಿಸತೊಡಗಿದರು. ನಂತರ  ವಾರ್ಧಾ ಆಶ್ರಮದಲ್ಲಿ ಕೇವಲ ಅಂಗಿ, ಚಡ್ಡಿ ಧರಿಸುವ ಸ್ಥಿತಿ ತಲುಪಿದರು. ( ಜೆ.ಸಿ. ಕುಮಾರಪಪ್ಪನವರ ಪೂರ್ಣ ಮಾಹಿತಿಯ ಲೇಖನಕ್ಕಾಗಿಗಾಂಧಿ ಅರ್ಥಶಾಸ್ತ್ರದ ರೂವಾರಿ ಜೆ.ಸಿಕುಮಾರಪ್ಪಎಂದು ಕನ್ನಡದಲ್ಲಿ ಟೈಪಿಸಿ ಗೂಗಲ್ ಸರ್ದ್ಗೆ ಹಾಕಿದರೆ ನನ್ನ ಲೇಖನವನ್ನು ಓದಬಹುದು)

ತಮ್ಮ ಶಿಷ್ಯ ಕುಮಾರಪ್ಪನವರ ವಿದ್ವತ್ ಮತ್ತು ಬದ್ಧತೆಯ ಬಗ್ಗೆ ಅರಿವಿದ್ದ ಗಾಂಧೀಜಿಯವರು 1938 ರಲ್ಲಿ ವಾರ್ಧಾ ಆಶ್ರಮದಲ್ಲಿ  ಅಖಿಲ ಭಾರತ ಗುಡಿ ಕೈಗಾರಿಕೆಗಳ ಒಕ್ಕೂಟಎಂಬ ಸಂಸ್ಥೆಯನ್ನು ಸ್ಥಾಪಿಸಿ ಅವರನ್ನು ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದರು. ಗಾಂಧೀಜಿಯವರು ಸಮರ್ಥವಾದ ಸ್ವಾವಲಂಬನೆಯ ಗ್ರಾಮಭಾರತ ಕುರಿತಾಗಿ ಕಂಡಿದ್ದ ಯೋಜನೆಗಳನ್ನು ಕುಮಾರಪ್ಪ ಸಾಕಾರಗೊಳಿಸ ತೊಡಗಿದರು. ಮೊದಲಿಗೆ ಮಾನವ ಶ್ರಮವನ್ನು ಕಡಿಮೆ ಮಾಡಿ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಳೆಯದಾದ ಚರಕಗಳಿಗೆ ಆಧುನಿಕತೆಯ ಸ್ಪರ್ಶ ನೀಡಿದರು. ಐವತ್ತಕ್ಕೂ ಹೆಚ್ಚು ಬಗೆಯ ಚರಕಗಳನ್ನು ನಾವಿಂದು  ವಾರ್ಧಾ ನಗರದ ಮಗನ್ ಸಂಗ್ರಹಾಲಯದಲ್ಲಿ ನೊಡಬಹುದು. ರೈತರ ನೇಗಿಲುಗಳನ್ನು ಸುಧಾರಿಸಿದರು. ರಸಾಯನಿಕ ಗೊಬ್ಬರಕಕ್ಕೆ ಬದಲಾಗಿ ಹಸಿರೆಲೆ ಗೊಬ್ಬರವನ್ನು ಭೂಮಿಗೆ ಬಳಸುವಂತೆ ಒತ್ತಾಯಿಸಿದರು. ಬೇಸಾಯಕ್ಕೆ ಟ್ರಾಕ್ಟರ್ ಮತ್ತು ಟಿಲ್ಲರ್ ಗಳನ್ನು ಬಳಕೆ ಮಾಡುವುದನ್ನು ವಿರೋಧಿಸಿದರು. ಭೂಮಿಯಿಂದ ತೆಗೆಯುವ ಕಲ್ಲಿದ್ದಲು, ತೈಲಗಳ ಅತಿಯಾದ ಬಕೆಯನ್ನು ದುರ್ಬಳಕೆ ಎಂದು ಕರೆದರು. ದೀಪ ಮತ್ತು ಲಾಂಟಿನ್ ಗಳಿಗೆ  ಸೀಮೆ ಎಣ್ಣೆ ಬದಲಾಗಿ ಹೊಂಗೆ ಎಣ್ಣೆ, ಹಿಪ್ಪೆ ಎಣ್ಣೆಗಳ ಬಳಕೆಗೆ ಕರೆ ನೀಡಿ, ಎಣ್ಣೆ ಗಾಣಗಳನ್ನು  ಎತ್ತುಗಳ  ಸಹಾಯವಿಲ್ಲದೆ. ಮನೆಯಲ್ಲಿ ುಪಯೋಗಿಸುವ ರೀತಿಯಲ್ಲಿ ಸಣ್ಣ ಮಟ್ಟದಲ್ಲಿ ತಯಾರಿಸಿದರು. ಕಾಗದದ ಮರು ಬಳಕೆಗೆ ಉತ್ತೇಜನ ನೀಡಿದರು. ಬೇಸಾಯದ ಉಪಕರಣಗಳು, ಕೈಮಗ್ಗ, ದುಡಿಯುವ ವರ್ಗಕ್ಕೆ  ಸೈಕಲ್ ರಿಕ್ಷಾ,  ಕಬ್ಬಿನ ಹಾಲು ತೆಗೆಯುವ ಪುಟ್ಟ ಗಾಣ, ಅಕ್ಕಿ, ರಾಗಿ, ಬೇಳೆ ಕಾಳುಗಳ ಗಿರಿಣಿ ಹೀಗೆ ಗ್ರಾಮಗಳ ಗುಡಿ ಕೈಗಾರಿಕೆಗೆ ಬೇಕಾಗುವ ಎಲ್ಲಾ ವಿಧವಾದ ಯಂತ್ರೋಪಕರಣಗಳನ್ನು ಸುಧಾರಿಸಿದರು. ಸೂರ್ಯನ ಶಾಖವನ್ನು ವಿದ್ಯುತ್ ಆಗಿ ಪರಿವರ್ತಿಸಿಕೊಳ್ಳಲು ಸದಾ ಒತ್ತಾಯಿಸುತ್ತಿದ್ದ ಕುಮಾರಪ್ಪನವರು ಹಳ್ಳಿಗಳು ಸ್ವಾವಲಂಬನೆಯಾದರೆ ಮಾತ್ರ ಸದೃಢ ಭಾರತ ಸಾಧ್ಯ ಎಂಬ ಗಾಂಧಿಯವರ ನಂಬಿಕೆಯಲ್ಲಿ ಅಚಲ ವಿಶ್ವಾಸವನ್ನು ಇಟ್ಟುಕೊಂಡಿದ್ದರು. ಅವರ ಒಟ್ಟು ಚಿಂತನೆಯನ್ನು ಕುಮಾರಪ್ಪನವರು Econamy of Prmanenae  ಎಂಬ ಹೆಸರಿನಲ್ಲಿಕರತಿ ಬರೆದರು. ಸ್ಥಿರತೆಯ ಅರ್ಥಶಾಸ್ತ್ರ ಎನ್ನಬಹುದಾದ ಕೃತಿಯು ಈಗ ಗಾಂಧಿ ಅರ್ಥಶಾಸ್ತ್ರ ಎಂದು ಪ್ರಸಿದ್ಧ ಪಡೆದಿದೆ. ಕೃತಿಗೆ ಗಾಂಧೀಜಿಯವರು ಮುನ್ನಡಿ ಬರೆದಿದ್ದಾರೆ. ( ಕೃತಿ ಬೇಕಿದ್ದರೆ, ಆಸಕ್ತರು -ಮೈಲ್ ವಿಳಾಸ ಕಳಿಸಿಕೊಟ್ಟರೆ, ಅದರ ಪಿ.ಡಿ.ಎಫ್. ಕಾಪಿಯನ್ನು ಕಳಿಸಿಕೊಡಬಲ್ಲೆ) 1948 ರಲ್ಲಿ ಗಾಂಧೀಜಿ ಹತ್ಯೆಯಾದ ನಂತರ, ಪ್ರಧಾನಿಯಾಗಿದ್ದ ನೆಹರೂ ಕುಮಾರಪ್ಪನವರನ್ನು ವಿಶ್ವಾಸಕ್ಕೆ ತೆಗೆದುಕೊಂಡು  ಯೋಜನಾ ಆಯೋಗದ ಸಲಹೆಗಾರರಾಗಿ ನೇಮಕ ಮಾಡಿದರು. ಗ್ರಾಮಭಾರತದ ಅಭಿವೃದ್ಧಿ ಕುರಿತಂತೆ ಕಾಂಗ್ರೇಸ್ ಪಕ್ಷಕ್ಕೆ ರೂಪು ರೇಷೆಗಳನ್ನು ಸಿದ್ಧಪಡಿಸಿಕೊಡಲು ಕುಮಾರಪ್ಪನವರ ಅದ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಕ ಮಾಡಿದರು. ಜೊತೆಗೆ ಚೀನಾ, ಜಪಾನ್ ಹಾಗೂ ಯುರೋಪ್ ದೇಶಗಳಲ್ಲಿ ಅಧ್ಯಯನ ಮಾಡಲು ಕಳಿಸಿಕೊಟ್ಟರು. ಆದರೆ, ಗಾಂಧೀಜಿಯ ಗ್ರಾಮಾಭಿದ್ಧಿ ಕನಸುಗಳಿಗೆ ತಿಲಾಚಂಜಲಿ ಇತ್ತ ನೆಹರೂ ಬೃಹತ್ ಯಂತ್ರನಾಗರೀಕತೆ, ಬೃಹತ್ ಅಣೆಕಟ್ಟು, ಬೃಹತ್ ಕೈಗಾರಿಕೆ ಬೃಹತ್ ನಗರಗಳು ಎಂದು ಕನಸಿತೊಡಗಿದಾಗ, ತಮ್ಮೆಲ್ಲಾ ಹುದ್ದೆಗಳಿಗೆ 1952 ರಲ್ಲಿ ರಾಜಿನಾಮೆ ನೀಡಿದ ಕುಮಾರಪ್ಪನವರು  ಮಧುರೆ ಬಳಿಯ ಕಲ್ಲುಪಟ್ಟಿ ಗ್ರಾಮಕ್ಕೆ ಬಂದು ನೆಲೆಸಿದರು. ವಾರ್ಧಾ ಆಶ್ರಮದಲ್ಲಿ ತಾವು ನಿಲ್ಲಿಸಿದ ಚಟುªಟಿಕೆಯನ್ನು ಮುಂದುವರಿದರು
.
ಈಗ ವಾರ್ಧಾನಗರದಲ್ಲಿ ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಗುಡಿಕೈಗಾರಿಗಳ ಯಂತ್ರೋಪಕರಣ ತಯಾರಿಕೆ ಮತ್ತು ತರಬೇತಿ ಕಾರ್ಯಕ್ರಮಗಳು ನಡೆಯುತ್ತಿವೆ. ಕಳೆದ ಎಂಟು ತಿಂಗಳ ಹಿಂದೆ ವಾರ್ಧಾ ನಗರದಲ್ಲಿದ್ದ  ಸಂರ್ಭದಲ್ಲಿ ನಾನು ಕುಮಾರಪ್ಪನವರ ಸಂಸ್ಥೆಯಲ್ಲಿ ಎರಡ ದಿನ ಹಾಗೂ ವಾರ್ಧಾ ನಗರದಿಂದ ಎಂಟು ಕಿ.ಮಿ. ದೂರವಿರುವ ಸೇವಾಗ್ರಾಮದ ಬಾಪು ಕುಟಿಯಲ್ಲಿ ಒಂದು ದಿನ ಇದ್ದೆ. ವಾರ್ಧಾ ನಗರದಲ್ಲಿರುವ ಖಾದಿ ತಯಾರಿಕಾ ಘಟಕದ ಸಮೀಪ ಕುಮಾರಪ್ಪ ನೆಲೆಸಿದ್ದ ಕುಟಿರವನ್ನು ಈಗಲೂ ಕಾಪಾಡಿಕೊಂಡು ಬರಲಾಗಿದೆ.  1960 ಜನವರಿಯಲ್ಲಿ ಕುಮಾರಪ್ಪ ನಿಧನರಾದರು. ಅವರ ಸಾವಿಗೆ ಮುನ್ನ ಸ್ಮಾಲ್ ಹೀಸ್ ಬ್ಯೂಟಿಪುಲ್ ( ಸಣ್ಣದು ಸುಂದರ) ಎಂಬ ಗಾಂಧಿ ಅರ್ಥಶಾಸ್ತ್ರದ ತಳಹದಿಯ ಮೇಲೆ ಜಗದ್ವಿಖ್ಯಾತ ಕೃತಿ ಬರೆದ ಶೂ ಮಾಕರ್ ಹಾಗೂ ಗಾಂಧಿಯವರಿಂದ ಪ್ರಭಾವಿತಗೊಂಡು ಅಮೇರಿಕಾದಲ್ಲಿ ಕರಿಯರ ಪರವಾಗಿ ಹೋರಾಟ ನಡೆಸಿದ ಮಾಟಿನ್ ಲೂಥರ್ ಕಿಂಗ್ ಮುಂತಾದವರು ಮಧುರೈ ನಗರಕ್ಕೆ ಆಗಮಿಸಿ ಕುಮಾರಪ್ಪನವರ ಸಲಹೆ ಸೂಚನೆ ಪಡೆದಿದ್ದರು.
ಹದಿನೈದು ದಿನಗಳ ಹಿಂದೆ ಆತ್ಮ ನಿರ್ಭರತೆ ಕುರಿತು ಭಯಂಕರ ಭಾಷಣ ಬಿಗಿದ ನಮ್ಮ ಇಸ್ವ ಗುರು ಪ್ರಧಾನಿಯವರು  ಮೊನ್ನೆ ಅಂದರೆ, ಜಲೈ ಹತ್ತರ ಭಾನುವಾರದಂದುಕೆಂಪು ಕಂಬಳಿಯನ್ನು ಹಾಸಿ ನಾನು ವಿದೇಶಿ ಬೃಹತ್ ಕಂಪನಿಗಳನ್ನು ಭಾರತಕ್ಕೆ ಸ್ವಾಗತಿಸುತ್ತೇನೆಎಂಬ ಹೇಳಿಕೆ ಕೊಟ್ಟಿದ್ದಾರೆ. ಹಿಂದೂ ದಿನಪತ್ರಿಕೆಯ ಮುಖಪುಟದಲ್ಲಿ ವರದಿ ಪ್ರಕಟವಾಗಿದೆ.  ಆಡುವ ಮಾತಿಗೆ ಒಂದು ಖಚಿತತೆ ಅಥವಾ ಬದ್ಧತೆ ಇಲ್ಲದ ನಾಯಕರಿಂದ ದೇಶ ಮತ್ತು ಅದರ ಆರ್ಥಿಕತೆ ಹೇಗೆ ಹಳ್ಳ ಹಿಡಿಯಬಹುದು ಎಂಬುದಕಕ್ಕೆ ಇದಕ್ಕಿಂತ ಉದಾಹರಣೆ ಮತ್ತೊಂದಿಲ್ಲ.