ಒಂಬತ್ತು ವರ್ಷಗಳ ಹಿಂದೆ 2004
ರಲ್ಲಿ ಲಂಡನ್ನಿನ ಬಿ.ಬಿ.ಸಿ. ಛಾನಲ್, ಭಾರತದ ದೆಹಲಿ, ಮುಂಬೈ, ಚೆನ್ನೈ ಮತ್ತು ಬೆಂಗಳೂರು
ನಗರಗಳನ್ನು ಗುರಿಯಾಗಿರಿಸಿಕೊಂಡು, ಈ ನಗರಗಳಲ್ಲಿ ಉತ್ಪತ್ತಿಯಾಗುತ್ತಿರುವ ಎಲೆಕ್ಟ್ರಾನಿಕ್
ತ್ಯಾಜ್ಯ ಮತ್ತು ಅದರ ಮರುಬಳಕೆಯ ಕ್ರಮ ಕುರಿತು ವಿಶೇಷ ಸಾಕ್ಷ್ಯ ಚಿತ್ರವೊಂದನ್ನು ನಿರ್ಮಾಣ
ಮಾಡಿತ್ತು. ಸುಮಾರು 27 ನಿಮಿಷಗಳ ಆ ಸಾಕ್ಷ್ಯ ಚಿತ್ರವನ್ನು ನೋಡುವಾಗ , ಆ ದಿನ ನನ್ನ ಗಮನವೆಲ್ಲಾ
ಇಡೀ ದೃಶ್ಯಗಳನ್ನು ಸಹಜವಾಗಿ, ವಿವಿಧ ಕೋನಗಳಿಂದ ಕ್ಯಾಮರಾ ಮೂಲಕ ಸೆರೆಹಿಡಿದ ಕ್ರಮದತ್ತ
ಕೇಂದ್ರೀಕೃತವಾಗಿದ್ದ ಕಾರಣ, ಭವಿಷ್ಯದ ಅಪಾಯದ ಕುರಿತ ನೀಡಿದ ಮಾಹಿತಿ ಬಗ್ಗೆ ನಾನು ಗಮನ
ಹರಿಸಲಿಲ್ಲ. ಮೂರು ದಿನದ ಹಿಂದೆ ಇದೇ ಭೂಮಿಗೀತ ಬ್ಲಾಗ್ ನಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆ
ಬರೆದ ನಾನು ಇದೀಗ, ದೆಹಲಿ ರಾಜ್ಯ ಸಭೆಯ ಸಚಿವಾಲಯ 2011 ರಲ್ಲಿ ಪ್ರಧಾನ ಕಾರ್ಯದರ್ಶಿ ಡಾ.ವಿ.ಕೆ.
ಅಗ್ನಿಹೋತ್ರಿ ಅವರ ನೇತೃತ್ವದಲ್ಲಿ ಭಾರತದ ಇ-ತ್ಯಾಜ್ಯ ಕುರಿತಂತೆ ಸಿದ್ಧ ಪಡಿಸಿರುವ 106 ಪುಟಗಳ
ವರದಿಯನ್ನು ಮುಂದಿಟ್ಟುಕೊಂಡು ಓದುತ್ತಾ, ದಿಕ್ಕೆಟ್ಟವನಂತೆ ಕುಳಿತ್ತಿದ್ದೇನೆ.
ಹದಿನೆಂಟನೆಯ
ಶತಮಾನದಲ್ಲಿ, ಜಗತ್ತಿನಲ್ಲಿ ಉಂಟಾದ ಕೈಗಾರಿಕಾ
ಕ್ರಾಂತಿಯಿಂದಾಗಿ, ನಾಗರೀಕತೆಯ ಕ್ರಮ ಬದಲಾಯಿತು. ನಂತರ ಇಪ್ಪತ್ತನೆಯ ಶತಮಾನದಲ್ಲಿ ಮಾಹಿತಿ
ತಂತ್ರಜ್ಙಾನ ಮತ್ತು ದೂರ ಸಂಪರ್ಕ ಕ್ಷೇತ್ರದಲ್ಲಿ ಉಂಟಾದ ಕ್ಷಿಪ್ರ ಕ್ರಾಂತಿಯ ಫಲವಾಗಿ ಮನುಷ್ಯನ
ಬದುಕಿನ ಕ್ರಮಗಳು ಮತ್ತು ಆಲೋಚನಾ ವಿಧಾನಗಳು ಬದಲಾದವು. ನಿಸರ್ಗ ಮತ್ತು ಅದರ ಫಲಗಳು ಇರುವುದು
ನಮ್ಮಗಳ ಅಪರಿಮಿತ ಉಪಭೋಗಕ್ಕಾಗಿ ಎಂಬ ನಿರ್ಧಾರವೊಂದು ನಮ್ಮಗಳ ತಲೆಯಲ್ಲಿ ಸ್ಥಿರವಾಗತೊಡಗಿತು.
ಯಾವುದೇ ಒಂದು ವಿಜ್ಙಾನದ ಅವಿಷ್ಕಾರ ಮನುಷ್ಯನಿಗೆ ನೆರವಾಗುವ ಹಾಗೆ, ನಿಸರ್ಗಕ್ಕೂ ಎರವಾಗದಂತೆ
ಇರಬೇಕು. ಆದರೆ, ನಾವು ಅವಿಷ್ಕಾರದ ನೆಪದಲ್ಲಿ ಈ ಭೂಮಿಯ ಮೇಲೆ ನರಕವೊಂದನ್ನು ಸೃಷ್ಟಿ
ಮಾಡುತ್ತಿದ್ದೇವೆ ಎಂಬ ಪ್ರಜ್ಙೆಯನ್ನು ಎದೆಗೆ ತಾಕಿಸಿಕೊಳ್ಳಲಾರದಷ್ಟೂ ಮುಂದುವರಿದು, ಆಧುನಿಕ
ಮೋಹಿನಿ ಭಸ್ಮಾಸುರನ ಅವತಾರ ತಾಳುತ್ತಿದ್ದೇವೆ. ಇದರ ಫಲವನ್ನು ನಾವೀಗ ಹಲವು ರೂಪದಲ್ಲಿ
ಅನುಭವಿಸುತ್ತಿದ್ದೇವೆ. ಅಂತಹ ರೂಪಗಳಲ್ಲಿ ಈಗ ಜಾಗತಿಕ ಸಮಸ್ಯೆಯಾಗಿರುವ ಎಲೆಕ್ಟ್ರಾನಿಕ್
ತ್ಯಾಜ್ಯವೂ ಒಂದು.
ನಾವು ಈ ಜಗತ್ತಿನಲ್ಲಿ
ಏನನ್ನಾದರು ಸೃಷ್ಟಿಸಬಲ್ಲ ಕಲೆಯನ್ನು ಅರಿತಿದ್ದೇವೆ ಆದರೆ,ಅದು ಕೈ ಮೀರಿದಾಗ ಅಷ್ಟೇ
ಅಸಹಾಯಕತೆಯಿಂದ ಕೂರುವುದನ್ನು ಸಹ ಕಲಿತಿದ್ದೇವೆ. ಕಳೆದ ಮೂರು ದಶಕಗಳ ಹಿಂದೆ ಜಗತ್ತಿನಾದ್ಯಂತ ವಿದ್ಯುತ್ ಉತ್ಪಾದನೆಗಾಗಿ ಆರಂಭಿಸಲಾದ ಅಣು ವಿದ್ಯುತ್
ಘಟಕಗಳಿಂದ ಹೊರಬೀಳುತ್ತಿರುವ, ಹಾಗೂ ಅಣುವಿಕಿರಣವನ್ನು ಹೊರಸೂಸುತ್ತಿರುವ ಯುರೇನಿಯಂ ತ್ಯಾಜ್ಯ
ವಿಲೇವಾರಿಗೆ ಹೇಗೆ ಮುಕ್ತಿ ಕಾಣಿಸಬೇಕೆಂದು ಗೊತ್ತಿಲ್ಲದೆ, ಉಕ್ಕಿನ ಕವಚಗಳ ಪಿಪಾಯಿಗಳಲ್ಲಿ
ತುಂಬಿ ಅದನ್ನು ಭೂಮಿಯಲ್ಲಿ ಹೂಳುತ್ತಿದ್ದೇವೆ. ಸಾವಿರ ವರ್ಷ ಕಳೆದರೂ ಈ ಅಣು ತ್ಯಾಜ್ಯದಿಂದ
ಹೊರಸೂಸುವ ವಿಕಿರಣಗಳಿಗೆ ಅಂತ್ಯವೆಂಬುದು ಇಲ್ಲವಾಗಿದೆ. ಸೃಷ್ಟಿಯ ಜೊತೆಗೆ ಎದುರಾಗುವ
ಸವಾಲುಗಳಿಗೆ ಪರಿಹಾರಗಳಿಲ್ಲದಿದ್ದರೆ ಆಗಬಹುದಾದ ಅಪಾಯಗಳಿಗೆ ಇದು ಒಂದು ಸಣ್ಣ ಉದಾಹರಣೆ.
ಕಳೆದ ಒಂದು ಶತಮಾನದಿಂದ
ಅತ್ಯಂತ ವೇಗದಲ್ಲಿ ಬೆಳೆಯುತ್ತಿದ್ದ ನಗರೀಕರಣಕ್ಕೆ, 1980 ರ ದಶಕದಲ್ಲಿ ಜಾರಿಗೆ ಬಂದ ಜಾಗತೀಕರಣ
ಪ್ರಕ್ರಿಯೆಯಿಂದಾಗಿ ಮತ್ತಷ್ಟು ವೇಗ ದೊರೆಯಿತು. ಪ್ರತಿ ದಿನ ನಗರಗಳು ಮತ್ತು ಅಲ್ಲಿನ ಜೀವಿಗಳು
ಹೊರಹಾಕುವ ಕಸ ವಿಲೇವಾರಿ ಒಂದು ಸಮಸ್ಯೆಯಾದರೆ, ಈ ಕಸಗಳಲ್ಲಿ ಅತ್ಯಂತ ಅಪಾಯಕಾರಿಯಾದ ಪ್ಲಾಸ್ಟಿಕ್
ಮತ್ತು ಎಲೆಕ್ಟ್ರಾನಿಕ್ ತ್ಯಾಜ್ಯಗಳು ಸೃಷ್ಟಿಸುತ್ತಿರುವ ಸಮಸ್ಯೆಗಳು ಆಳುವ ಸರ್ಕಾರಗಳಿಗೆ ಮತ್ತು
ಸ್ಥಳೀಯ ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿವೆ.
ಇಂದು
ಪ್ರತಿ ವರ್ಷ 5 ಕೋಟಿ ಟನ್ ನಷ್ಟು ಇ-ತ್ಯಾಜ್ಯ ಜಾಗತಿಕ ಮಟ್ಟದಲ್ಲಿ
ಉತ್ಪಾದನೆಯಾಗುತ್ತಿದೆ. ಇದರಲ್ಲಿ ಚೀನಾ ಪ್ರತಿ ವರ್ಷ 25 ಲಕ್ಷ ಟನ್, ಭಾರತ 8 ಲಕ್ಷ ಟನ್, ಮತ್ತು
ಐರೋಪ್ಯ ಒಕ್ಕೂಟದ ರಾಷ್ಟ್ರಗಳಲ್ಲಿ 7 ಲಕ್ಷ ಟನ್ ಉತ್ಪಾದನೆಯಾಗುತ್ತಿದೆ, ಜಗತ್ತಿನ ಹಿರಿಯಣ್ಣ
ಅಮೇರಿಕಾ ಕೇವಲ ಒಂದು ಲಕ್ಷ, ನಲವತ್ತು ಸಾವಿರ ಟನ್ ಎಲೆಕ್ಟ್ರಾನಿಕ್ ಕಸವನ್ನು
ಸೃಷ್ಟಿಮಾಡುತ್ತಿದ್ದಾನೆ. ಅಮೇರಿಕಾದ ಈ ಅಂಕಿ ಅಂಶದ ಹಿಂದೆ ಒಂದು ಸ್ವಾರಸ್ಯಕರ ಸಂಗತಿ ಅಡಗಿದೆ.
ಪ್ರತಿ ಅಮೇರಿಕನ್ ಪ್ರಜೆ, ಪ್ರತಿ ಐದು ತಿಂಗಳಿಗೆ ಮೊಬೈಲ್ ಹಾಗೂ ಪ್ರತಿ ಒಂದು ಅಥವಾ ಎರಡು
ವರ್ಷಕ್ಕೆ ಕಾರು, ಲ್ಯಾಪ್ ಟಾಪ್ ಮತ್ತು ಕಂಪ್ಯೂಟರ್ ಬದಲಾವಣೆ ಮಾಡುತ್ತಾನೆ. ಅವನು ಬಳಸಿ
ಬಿಸಾಡಿದ ಈ ವಸ್ತುಗಳು ಗುಜರಿಗೆ ಹೋಗುವ ಬದಲು ತೃತಿಯ ಜಗತ್ತಿನ ರಾಷ್ಟ್ರಗಳಲ್ಲಿ ಎರಡನೇಯ ದರ್ಜೆಯ
ವಸ್ತುಗಳಾಗಿ ಮಾರಲ್ಪಡುತ್ತವೆ. ಹಾಗಾಗಿ ಅಲ್ಲಿ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಇ ತ್ಯಾಜ್ಯ
ಕಡಿಮೆ ಎಂದು ಹೇಳಬಹುದು.
ಜಗತ್ತು ಬಳಸಿ ಬಿಸಾಡಿದ
ಎಲೆಕ್ಟ್ರಾನಿಕ್ ಉಪಕರಣಗಳನ್ನು ಆಮದು ಮಾಡಿಕೊಳ್ಳುವಲ್ಲಿ ಭಾರತವೂ ಮುಂಚೂಣಿಯಲ್ಲಿದೆ. ಭಾರತದಲ್ಲಿ
ಈಗ ಮಾರಲ್ಪಡುತ್ತಿರುವ ಮೊಬೈಲ್ ಗಳ ಶೇಕಡ ತೊಂಬತ್ತರ ಬಿಡಿಭಾಗಗಳು ವಿದೇಶಗಳಿಂದ ಆಮದು
ಮಾಡಿಕೊಂಡಂತಹವು. ಅತ್ಯಂತ ಹೆಚ್ಚು ಇ-ತ್ಯಾಜ್ಯ ಉತ್ಪಾದನೆಯಾಗುತ್ತಿರುವುದು, ಮೊಬೈಲ್, ಚಾರ್ಜರ್,
ಬ್ಯಾಟರಿ, ಕಂಪ್ಯೂಟರ್, ಮಾನಿಟರ್, ಕೀಬೋರ್ಡ್, ಮೌಸ್, ಟಿ.ವಿ. ಮತ್ತು ರಿಮೂಟ್, ಹವಾನಿಯಂತ್ರಣ
ಸಾಧನಗಳು, ರೆಪ್ರಿಜೆಟರ್, ಕಂಪ್ಯೂಟರ್ ನಲ್ಲಿ ಬಳಸಲ್ಪಡುವ ಸಿ.ಡಿ, ಹೆಡ್ ಫೋನ್ ಇತ್ಯಾದಿಗಳಿಂದ.
ಇವುಗಳಲ್ಲಿ ದೊರೆಯುವ ಅಲ್ಪ ಪ್ರಮಾಣದ ಅಲ್ಯೂಮಿನಿಯಂ, ತಾಮ್ರ, ಬೆಳ್ಳಿ, ಚಿನ್ನ, ಲೋಹಗಳಿಗಾಗಿ ಈ
ತ್ಯಾಜ್ಯವನ್ನು ಅವೈಜ್ಙಾನಿಕವಾಗಿ, ಗುಜರಿ ಅಂಗಡಿಗಳಲ್ಲಿ ಮತ್ತು ನಗರಗಳ ಹೊರವಲಯದ ಸಣ್ಣ ಪುಟ್ಟ
ಕೈಗಾರಿಕೆಗಳಲ್ಲಿ ಸಂಸ್ಕರಿಸಲಾಗುತ್ತಿದೆ. ಇಂತಹುಗಳನ್ನು ಸಂಸ್ಕರಿಸುವಾಗ ತೆಗೆದು ಕೊಳ್ಳಬೇಕಾದ
ಮುನ್ನೆಚ್ಚರಿಕೆಯ ಬಗ್ಗೆ ಯಾವುದೇ ಕಾಳಜಿಗಳಿಲ್ಲದ ಕಾರಣ, ಅಶಿಕ್ಷಿತ ಕೂಲಿಕಾರ್ಮಿಕರು ಅನೇಕ
ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕಂಪ್ಯೂಟರ್ ಬಿಡಿಭಾಗಗಳಲ್ಲಿ ಮತ್ತು ಮೊಬೈಲ್ ನ ಪ್ರಮುಖ
ಅಂಗವಾದ ಮದರ್ ಬೋರ್ಡ್, ಅಥವಾ ಸರ್ಕ್ಯೂಟ್
ಬೋರ್ಡ್ ಗಳನ್ನು ಸುಡುವಾಗ, ಇವುಗಳಲ್ಲಿ ತಾಮ್ರದ ತಂತಿಗಳನ್ನು ಜೋಡಿಸಲು ಬಳಸಿರುವ ಪಾದರಸದಿಂದ
ವಿಷಕಾರಿ ಹೊಗೆ ಹೊರಬರುತ್ತದೆ. ಇದನ್ನು ಗಾಳಿಯ ಮೂಲಕ ಸೇವಿಸಿದ ವ್ಯಕ್ತಿಗಳಿಗೆ ಮೆದುಳಿನ
ಪಾರ್ಶ್ವವಾಯು ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇದಲ್ಲದೆ ಇ-ತ್ಯಾಜ್ಯ ಸಂಸ್ಕರಣೆಯಲ್ಲಿ ಸೀಸ,
ಪಾದರಸ, ಅರ್ಸನಿಕ್, ಕ್ಲಾಡಿಯಂ, ಸೆಲೆನಿಯಂ ನಂತಹ ವಿಷಕಾರಿ ಅನಿಲಗಳು ಹೊರಹೊಮ್ಮುತ್ತವೆ.
ಭಾರತದಲ್ಲಿ ಇತ್ತೀಚೆಗೆ ದಿನವೊಂದಕ್ಕೆ
ಒಂದು ಲಕ್ಷ, ಮುವತ್ತು ಸಾವಿರ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಗಳು ಗುಜರಿ ಸೇರಿದರೆ,
ವರ್ಷವೊಂದಕ್ಕೆ ಮುವತ್ತು ಕೋಟಿ ಮೊಬೈಲ್ ಗಳು ಕಸದರಾಶಿಗೆ ಜಮೆಯಾಗುತ್ತಿವೆ. ದೆಹಲಿ, ಮುಂಬೈ,
ಅಹಮದಾಬಾದ್, ಚೆನ್ನೈ, ಹೈದರಾಬಾದ್, ಬೆಂಗಳೂರು ಈ ಮಹಾನಗರಗಳಿಂದ ಶೇಕಡ ಅರವತ್ತರಷ್ಟು ಇ-ತ್ಯಾಜ್ಯ
ಸಂಗ್ರಹಣೆಯಾಗುತ್ತಿದೆ. ಈ ಕಸದ ಪ್ರಮಾಣದಲ್ಲಿ ಪ್ರತಿ ವರ್ಷ ಶೇಕಡ 8.ರಷ್ಟು ಬೆಳವಣಿಗೆಯಾಗುತ್ತಿದೆ
ಎಂದು ಅಧ್ಯಯನದಿಂದ ಧೃಡಪಟ್ಟಿದೆ. 2007 ರಲ್ಲಿ ಉತ್ತರ ಕಾಂಡದ ರೂರ್ಕಿಯ ಬಳಿ ವೈಜ್ಞಾನಿಕವಾಗಿ
ಇ-ತ್ಯಾಜ್ಯವನ್ನು ಸಂಸ್ಕರಿಸುವ ಘಟಕವನ್ನು ಸ್ಥಾಪಿಸಲಾಗಿದೆ. ಆನಂತರ ದೇಶದ ವಿವಿಧ ಭಾಗಗಳಲ್ಲಿ 23
ಘಟಕಗಳು ತಲೆ ಎತ್ತಿವೆ. ಆದರೂ ಸಹ ಅಸಂಘಟಿತ ವಲಯದಲ್ಲಿ ಇ-ತ್ಯಾಜ್ಯದ ಶೇಕರಣೆ ಮತ್ತು ಸಂಸ್ಕರಣೆ
ಶೇಕಡ 80 ರಷ್ಟು ನಡೆಯುತ್ತಿದೆ. ಭಾರತ ಮತ್ತು ಚೀನಾ ಸೇರಿದಂತೆ ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ
ಇ-ತ್ಯಾಜ್ಯದ ಬಗ್ಗೆ ಅರಿವು ಮೂಡಿಸಲು ವಿಶ್ವ ಬ್ಯಾಂಕ್ 2008 ಮತ್ತು 2009 ರಲ್ಲಿ ಅಪಾರ
ಪ್ರಮಾಣದಲ್ಲಿ ಧನಸಹಾಯ ಮಾಡಿದೆ. ಇವುಗಳಲ್ಲಿ ಇ-ತ್ಯಾಜ್ಯದಂತಹ ಅಪಾಯಕಾರಿ ವಸ್ತುಗಳನ್ನು ಶೇಖರಿಸುವಾಗ, ಅಥವಾ ಸಂಸ್ಕರಿಸುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆ
ಮುಂತಾದ ವಿಷಯಗಳ ಕುರಿತು, ಗುಜರಿ ಅಂಗಡಿ ಮಾಲಿಕರಿಗೆ ಮತ್ತು ಕಾರ್ಮಿಕರಿಗೆ ಶಿಬಿರಗಳನ್ನು
ಏರ್ಪಡಿಸಿ, ಅವರಿಗೆ ಉಪನ್ಯಾಸ ಮತ್ತು ಸಾಕ್ಷ್ಯ ಚಿತ್ರಗಳ ಪ್ರದರ್ಶನಗಳ ಮೂಲಕ ಜಾಗೃತಿ
ಮೂಡಿಸಬೇಕೆಂದು ವಿಶ್ವ ಸಂಸ್ಥೆ ತಿಳಿಸಿದೆ. ಆದರೆ, ನಾನು ಗಮನಿಸಿದ ಹಾಗೆ ಇಂತಹ ಜಾಗೃತಿ
ಕಾರ್ಯಕ್ರಮಗಳು ನಡೆಯುತ್ತಿರುವುದು ಕಾಣುತ್ತಿಲ್ಲ.
(ಮುಂದುವರಿಯುವುದು)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ