ಶುಕ್ರವಾರ, ಮೇ 22, 2015

ಪಶ್ಚಿಮದ ಜಗತ್ತು ಕಂಡ ಗಾಂಧಿ



ಕಳೆದ ಐದು ದಿನಗಳಿಂದ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದ ಲಾ ಟ್ರೋಬ್ ವಿಶ್ವ ವಿದ್ಯಾಲಯದ ಪ್ರೊಫೆಸರ್ ಥಾಮಸ್ ವೆಬರ್ ಬರೆದ “ ಗಾಂಧಿ ಅಟ್ ಫಸ್ಟ್ ಸೈಟ್) ಮೊದಲ ನೋಟದಲ್ಲಿ ಗಾಂಧಿ ಎಂಬ ಅಪರೂಪದ ಕೃತಿಯನ್ನು ಓದುತ್ತಿದ್ದೆ. ಭಾರತೀಯರು ಅರ್ಧ ಶತಮಾನದಿಂದ ಗಾಂಧೀಜಿಯನ್ನು ಅರ್ಥ ಮಾಡಿಕೊಳ್ಳಲು ತಿಣುಕಾಡುತ್ತಿರುವಾಗ, ಅಥವಾ ಕುರುಡರು ಆನೆಯನ್ನು ಮುಟ್ಟಿ ಬಣ್ಣಿಸುವ ಹಾಗೆ  ವಿಮರ್ಶಿಸುತ್ತಿರುವವಾಗ, ಪಶ್ಚಿಮದ ಜಗತ್ತು ಗಾಂಧೀಜಿಯನ್ನು ವಿವಿಧ ಆಯಾಮಗಳಲ್ಲಿ  ಗ್ರಹಿಸುತ್ತಿರುವ ಬಗೆಯನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಥಾಮಸ್ ವೆಬರ್ ರವರು ಕಳೆದ ನಲವತ್ತು ವರ್ಷಗಳಿಂದ ಗಾಂಧೀಜಿ ಚಿಂತನೆಗಳಿಗೆ ತಮ್ಮ ಬದುಕನ್ನು ಮುಡಿಪಾಗಿಟ್ಟು, ಗಾಂಧಿ ಕುರಿತು ಎಂಟು ಕೃತಿಗಳನ್ನು ರಚಿಸಿದ್ದಾರೆ. ಆದರೆ ಈ ಕೃತಿ ಅವರ ಇನ್ನಿತರೆ ಕೃತಿಗಳಿಗಿಂತ ಭಿನ್ನವಾಗಿದೆ.


ಮೊದಲ ನೋಟದಲ್ಲಿ ಗಾಂಧೀಜಿಯವರ ಆಕರ್ಷಣೆಗೆ ಒಳಗಾಗಿ ಅವರಿಂದ ಪ್ರಭಾವಿರಾದ ಜಾಗತಿಕ ಮಟ್ಟದ 49 ಪ್ರಭಾವಿ ವ್ಯಕ್ತಿಗಳ ಅಭಿಪ್ರಾಯವನ್ನು ಲೇಖಕರು ಈ ಕೃತಿಯಲ್ಲಿ ದಾಖಿಸಿದ್ದಾರೆ. ಈ ಕೃತಿ ಬರೆಯಲು ಕಾರಣವಾದ ಘಟನೆಯನ್ನು ಥಾಮಸ್ ವೆಬರ್ ಹೀಗೆ ಬಣ್ಣಿಸಿದ್ದಾರೆ. “ 1976 ರಲ್ಲಿ ಲಂಡನ್ ನಗರದ ಮೇಣದ ಪ್ರತಿಮೆಗಳ ಮ್ಯೂಸಿಯಂ ನಲ್ಲಿ ಗಾಂಧೀಜಿಯವರ ಪ್ರತಿಮೆಯನ್ನು ನೋಡಿದೆ.  ಬ್ರಿಟೀಷ್ ಸಾಮಾಜ್ಯಕ್ಕೆ ಸೆಡ್ಡು ಹೊಡೆದು ಅದನ್ನು ಮಣಿಸಿದ ವ್ಯಕ್ತಿ ಇವರಾ?  ಎಂದು ಅನಿಸಿದ್ದಲ್ಲದೆ, ಬಡಕಲು  ಶರೀರದ,  ಕಂದು ಬಣ್ಣದ ಈ ವ್ಯಕ್ತಿ ನಿಜಕ್ಕೂ ಅಷ್ಟೊಂದು ಪ್ರಭಾವಶಾಲಿಯಾಗಿದ್ದರಾ? ಎಂದು ಆಶ್ಚರ್ಯವಾಯಿತು.  ಆದರೆ ಇತಿಹಾಸ ನನ್ನ ಮುಂದಿತ್ತು. 1930 ರಲ್ಲಿ ಉಪ್ಪಿನ ಸತ್ಯಾಗ್ರಹದ ಮೂಲಕ ಬ್ರಿಟನ್ ಸಾಮ್ರಾಜ್ಯಕ್ಕೆ ಕೊಡಲಿ ಪೆಟ್ಟು ನಿಡುವುದರ ಮೂಲಕ, ಪ್ರಥಮವಾಗಿ ಅದರ ಬುಡದ ಬೇರುಗಳನ್ನು ಅಲುಗಾಡಿಸಿದವರು ಇವರಾಗಿದ್ದರು. 1931 ರಲ್ಲಿ ಟೈಮ್ಸ್ ಪತ್ರಿಕೆಯ ವ್ಯಕ್ತಿಯಾಗಿ ಆಯ್ಕೆಯಾಗಿದ್ದ ಗಾಂಧೀಜಿ, ಇಪ್ಪತ್ತನೆಯ ಶತಮಾನದ  ಅಂತ್ಯದಲ್ಲಿ   ಅದೇ ಟೈಮ್ಸ್ ಪತ್ರಿಕೆಯಲ್ಲಿ ಶತಮಾನದ ವ್ಯಕ್ತಿಗಳ ಕುರಿತಾದ ಸಮೀಕ್ಷೆಯಲ್ಲಿ ಎರಡನೆಯವರಾಗಿದ್ದರು.( ಮೊದಲ ಸ್ಥಾನ ಆಲ್ಬರ್ಟ್ ಐನ್ ಸ್ಟೀನ್) ಗಾಂಧಿ ನಿಧನರಾಗಿ ಅರ್ಧ ಶತಮಾನ ಕಳೆದರೂ ತಮ್ಮ ಮನುಕುಲದ ಪರವಾಗಿರುವ ಗಾಢ ಚಿಂತನೆಗಳಿಂದ ನನ್ನಂತಹವರನ್ನು ಪ್ರಭಾವಿಸುತ್ತಿದ್ದಾರೆ. ಇನ್ನು  ಬದುಕಿದ್ದಾಗ, ಅವರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು  ಹೇಗೆ ಪ್ರಭಾವಿಸಿರಬಹುದು? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳವ ನಿಟ್ಟಿನಲ್ಲಿ ಅಧ್ಯಯನ ಮಾಡಿ ಈ ಕೃತಿ ರಚನೆ ಮಾಡಿದೆ.”
ಈ ಕೃತಿಯಲ್ಲಿ  ಭಾರತದ ಕೊನೆಯ ಗೌರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ಅವರ ಒಂದು ಅಧ್ಯಾಯವಿದೆ. ಅದರಲ್ಲಿ ಮೌಂಟ್ ಬ್ಯಾಟನ್ ಅವರ ಬಂಗಲೆಯ ಬಾಣಸಿಗ ( ಅಡುಗೆ ಭಟ್ಟ) ದಾಖಲಿಸಿರುವ  ಈ ಮಾತುಗಳನ್ನು  ಓದುಗರು ಮರೆಯಲು ಸಾಧ್ಯವಿಲ್ಲ ಆತನ ಮಾತುಗಳು ಕೃತಿಯಲ್ಲಿ  ಹೀಗೆ ದಾಖಲಾಗಿವೆ.



“ಇಂಗ್ಲೇಂಡ್ ಪ್ರಧಾನಿ ಚರ್ಚಿಲ್ ಅವರಿಂದ ಅರಬೆತ್ತಲೆಯ ಫಕೀರ ಎಂದು ಬಣ್ಣಿಸಿಕೊಂಡಿದ್ದ ಗಾಂಧೀಜಿ ಯವರು 1947 ರ ಸ್ವಾಂತ್ಂತ್ರ್ಯಕ್ಕೆ ಮುನ್ನ ಒಂದು ದಿನ ಮಧ್ಯಾಹ್ನ ನಮ್ಮ ಬಂಗಲೆಗೆ ಬಂದರು. ಗವರ್ನರ್ ಜನರಲ್ ಅವರ ಆದೇಶದಂತೆ  ಗಾಂಧೀಜಿಯವರಿಗಾಗಿ ನಾನು ವಿಶೇಷವಾದ ಕೇಕ್ ಮತ್ತು ಸ್ಯಾಂಡ್ ವಿಚ್ ಹಾಗೂ ಚಹಾ ಸಿದ್ಧ ಪಡಿಸಿದೆ. ನಿವಾಸ ಉದ್ಯಾನವನದಲ್ಲಿ  ಗಾಂಧೀಜಿಯವರಿಗಾಗಿ ಚಹಾ ಕೂಟ ಏರ್ಪಡಿಸಲಾಗಿತ್ತು. ಜೊತೆಗೆ ಅವರಿಗೆ ಸೇವೆ ಸಲ್ಲಿಸಲು ಭಾರತೀಯ ಮೂಲದ ನೌಕರರನ್ನು ನಿಯೋಜಿಸಲಾಗಿತ್ತು. ಆದರೆ, ಗಾಂಧೀಜಿಯವರು ಚಹಾ ಕೂಟದಲ್ಲಿ  ಏನನ್ನೂ ಮುಟ್ಟದೆ ತಮ್ಮೊಡನೆ  ತಂದಿದ್ದ ಮೇಕೆಯ ಮೊಸರನ್ನು ಉಪಯೋಗಿಸಿದರು. ಅದನ್ನು ಕುಡಿಯುವ ಮುನ್ನ ಸ್ವಲ್ಪ ರುಚಿ ನೋಡಿ ಎಂದು ಒಂದು ಚಮಚೆಯಷ್ಟು ಮೊಸರನ್ನು ಮೌಟ್ ಬ್ಯಾಟನ್ ರಿಗೆ ನೀಡಿದರು. ಅವರು ಹಿಂದು ಮುಂದು ನೋಡದೆ ಅದನ್ನು ಕುಡಿದರು. ನಮ್ಮ ಸಾಹೇಬರ  ಆ ಕ್ಷಣದ ವರ್ತನೆ  ನಿಜಕ್ಕೂ ನಮಗೆಲ್ಲಾ  ಆಶ್ಚರ್ಯ ತಂದಿತು. ಗಾಂಧೀಜಿ ನಮ್ಮ ಬಂಗಲೆಯಿಂದ ತೆರಳಿದ ನಂತರ, ಕೊಠಡಿಗೆ ಬಂದ ಗೌರ್ನರ್ ಜನರಲ್ ರು  ಆಡಿದ ಮಾತುಗಳು ಹೀಗಿದ್ದವು. ನಾನು ಅದನ್ನು ನಿರಾಕರಿಸ ಬಹುದಿತ್ತು. ಅಥವಾ ಗಾಂಧೀಜಿ ನೀಡಿದ ಮೊಸರನ್ನು ರುಚಿ ನೋಡುವ ಮುನ್ನ ಆಲೋಚಿಸ ಬಹುದಿತ್ತು. ಹಾಗೆ ಮಾಡಲಿಲ್ಲ   ಅವರು ನೀಡಿದ ಮೊಸರು ಕುಡಿಯುವುದು ನನ್ನ ಪಾಲಿಗೆ ಗೌರವದ ವಿಷಯವಾಗಿತ್ತು. ಏಕೆಂದರೆ,  ನಾನು ಬದುಕಿನಲ್ಲಿ ಬೇಟಿ ಮಾಡಿದ  ಅತ್ಯಂತ ಶ್ರೇಷ್ಟ ವ್ಯಕ್ತಿ ಅವರು. ಗಾಂಧಿಯನ್ನು ಈ ಜಗತ್ತಿನಲ್ಲಿ ಯಾರಿಗೂ ಹೋಲಿಸಲು ಸಾದ್ಯವಿಲ್ಲ. ಅವರೊಳಗಿರುವ ಸತ್ಯ ಮತ್ತು ಪ್ರಾಮಾಣಿಕತೆಯನ್ನು ಬೇರೆ ಯಾರಲ್ಲೂ ಕಾಣಲು ಸಾಧ್ಯವಿಲ್ಲ” ಎನ್ನುತ್ತಾ ಮೌನಕ್ಕೆ ಜಾರಿದರು.

ಗಾಂಧೀಜಿ ಕುರಿತು  ಒಬ್ಬ ಬಾಣಸಿಗನ ಈ ನೆನಪುಗಳನ್ನು ಓದುತ್ತಿದ್ದರೆ, ಗ್ರಾಂಧೀಜಿಯನ್ನು ಗ್ರಹಿಸಲು ನಮಗಿರುವ ಬೌದ್ಧಿಕ ಸಾಮರ್ಥ್ಯ ಸಾಲದು ಎಂದು ಅನಿಸತೊಡಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ